ನಾನು ಮೆಚ್ಚಿದ ವಾಟ್ಸಪ್

Monday, May 7, 2018

ಇಂದಿನ ಇತಿಹಾಸ History Today ಮೇ 06

ಇಂದಿನ ಇತಿಹಾಸ History Today ಮೇ 06

2018: ಶ್ರಿನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗೆ ನಡೆದ ಗುಂಡಿನ ಘರ್ಷಣೆಯಲ್ಲಿ ಕೇವಲ ೩೬ ಗಂಟೆಗಳ ಅವಧಿಗೆ ’ಭಯೋತ್ಪಾದಕ ಎಂಬ ಕಳಂಕವನ್ನು ಅಂಟಿಸಿಕೊಂಡ ಕಾಶ್ಮೀರ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಮುಹಮ್ಮದ್ ರಫಿ ಭಟ್ ಸಹಿತ ೫ ಉಗ್ರಗಾಮಿಗಳು ಹತರಾದರು. ಉಗ್ರಗಾಮಿಗಳ ಜೊತೆಗಿನ ಭಟ್ ಒಡನಾಟ ಮೇ 5ರ ಶುಕ್ರವಾರ ಮಧ್ಯಾಹ್ನವಷ್ಟೇ ಆರಂಭವಾಗಿತ್ತು. ಆದರೆ ಶೋಪಿಯಾನ್ ಜಿಲ್ಲೆಯ ಬಡಿಗಮ್ ನಲ್ಲಿ ಕಳೆದ ರಾತ್ರಿ ಭದ್ರತಾ ಪಡೆಗಳ ಮುತ್ತಿಗೆಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ಆತ ಭಯೋತ್ಪಾದಕನಾಗಿ ಅತ್ಯಂತ ಕಡಿಮೆ ಅವಧಿಯ ಸಕ್ರಿಯ ಭಯೋತ್ಪಾದಕ ಎನಿಸಬೇಕಾಗಿ ಬಂತು. ಕೇಂದ್ರ ಕಾಶ್ಮೀರದ ಗಂದೇರಬಲ್ ಜಿಲ್ಲೆಯ ಚುಂಡಿನ ಪ್ರದೇಶದ ನಿವಾಸಿಯಾದ ಭಟ್, ಶ್ರೀನಗರ ವಿಶ್ವ ವಿದ್ಯಾಲಯದ ಸೋಶಿಯಾಲಜಿ ವಿಭಾಗದಲ್ಲಿ ಗುತ್ತಿಗೆ ಆಧಾರದ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ. ಮೇ 5ರ ಶುಕ್ರವಾರ ಮಧ್ಯಾಹ್ನ ೩.೩೦ರ ವೇಳೆಗೆ ಈತ ಕಣ್ಮರೆಯಾದ. ಆದಿನ ತನ್ನ ತಾಯಿಯ ಜೊತೆಗೆ ಕೊನೆಯ ಬಾರಿಗೆ ಮಾತನಾಡಿದ್ದ ಆತ ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಯಾವುದೇ ಸುಳಿವನ್ನೂ ನೀಡಲಿಲ್ಲ.  ೨೦೧೬ರಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್‍ಹಾನ್ ವನಿಯ ಹತೆಯ ಬಳಿಕ ಭುಗಿಲೆದ್ದ ಭಯೋತ್ಪಾದಕರ ಪ್ರಚಾರದ ಅಲೆಯಲ್ಲಿ ಸಿಲುಕಿ ಉಗ್ರಗಾಮಿ ಸಂಘಟನೆಗಳನ್ನು ಸೇರಿದ ಹಲವಾರು ಯುವಕರು ೧೫ ದಿನಗಳ ಒಳಗಾಗಿ ಭದ್ರತಾ ಪಡೆಗಳ ದಾಳಿಗೆ ಬಲಿಯಾಗಿದ್ದರು.  ಭಟ್ ಕಣ್ಮರೆ ಬಗ್ಗೆ ಕುಟುಂಬವು ಶನಿವಾರ ಬೆಳಗ್ಗೆ ವಿಶ್ವವಿದ್ಯಾಲಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿತ್ತು. ಪರಿಣಾಮವಾಗಿ ವಿಶ್ವ ವಿದ್ಯಾಲಯ ಆವರಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ವಿಶ್ವ ವಿದ್ಯಾಲಯದ ಕುಲಪತಿ ಪ್ರತಿಭಟನಕಾರ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಕಣ್ಮರೆಯಾದ ಪ್ರೊಫೆಸರ್ ಪತ್ತೆಗೆ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು.  ಭಟ್ ಬಗ್ಗೆ ತನಿಖೆ ನಡೆಸುವಂತೆ ಕೋರಿ ಕುಲಪತಿ ಅವರು ಪೊಲೀಸ್ ಮಹಾನಿರ್ದೇಶಕರಿಗೂ ಪತ್ರ ಬರೆದಿದ್ದರು. ಆದರೆ, ಈದಿನ ದಕ್ಷಿಣಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಜೈನಾಪೋರ ಪ್ರದೇಶದ ಬಡಿಗಮ್ ಗ್ರಾಮದಲ್ಲಿ ಭದ್ರತಾ ಪಡೆಗಳ ಮುತ್ತಿಗೆಗೆ ಸಿಲುಕಿದ ಭಯೋತ್ಪಾದಕರ ಗುಂಪಿನಲ್ಲಿ ಭಟ್ ಇರುವ ವಿಚಾರ ಬೆಳಕಿಗೆ ಬಂತು.  ಪ್ರದೇಶದಲ್ಲಿ ಉಗ್ರಗಾಮಿಗಳು ಅವಿತಿರುವ ಬಗ್ಗೆ ಲಭಿಸಿದ ನಿರ್ದಿಷ್ಟ ಸುಳಿವನ್ನು ಅನುಸರಿಸಿ ಭದ್ರತಾ ಪಡೆಗಳು ಗ್ರಾಮಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್‍ಯಾಚರಣೆ ಆರಂಭಿಸಿದ್ದವು. ಭಯೋತ್ಪಾದಕರ ಗುಂಪಿನಲ್ಲಿ ಭಟ್ ಇರುವ ವಿಚಾರ ಗೊತ್ತಾಗಿ ಪೊಲೀಸರು ಭಟ್ ಕುಟುಂಬವನ್ನು ಗಂದೇರ್ ಬಲ್ ನಿಂದ ಕರೆತಂದು ಶರಣಾಗುವಂತೆ ಆತನ ಮನ ಒಲಿಸಲು ಯತ್ನಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಐಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪನಿ ಹೇಳಿದರು.  ಗುಂಡಿನ ಘರ್ಷಣೆಯಲ್ಲಿ ಇತರ ನಾಲ್ವರು ಉಗ್ರಗಾಮಿಗಳ ಜೊತೆಗೆ ಭಟ್ ಕೂಡಾ ಹತನಾದ.  ಶೋಪಿಯಾನ್ ಜಿಲ್ಲೆಯ ಬಡಿಗಮ್ -ಜೈನಾಪೋರದಲ್ಲಿ ಘರ್ಷಣೆ ಮುಕ್ತಾಯಗೊಂಡಿದ್ದು, ಐವರು ಭಯೋತ್ಪಾದಕರ ಶವಗಳು ಪತ್ತೆಯಾಗಿವೆ ಎಂದು ಡಿಜಿಪಿ ಎಸ್.ಪಿ. ವೈದ್ ಹೇಳಿದರು. ಭದ್ರತಾ ಪಡೆಗಳ ಶೋಧ ತಂಡದ ಮೇಲೆ ಅಡಗಿ ಕುಳಿತಿದ್ದ ಉಗ್ರಗಾಮಿಗಳು ನಸುಕಿನ ೫.೩೦ ಗಂಟೆಗೆ ಗುಂಡು ಹಾರಿಸಿದಾಗ ಘರ್ಷಣೆ ಆರಂಭವಾಗಿತ್ತು. ಪೊಲೀಸರು ಮೈಕ್ ಬಳಸಿ ಶರಣಾಗತರಾಗುವಂತೆ ಉಗ್ರಗಾಮಿಗಳ ಮನವೊಲಿಸಲು ಯತ್ನಿಸಿದರು. ಆದರೆ ಉಗ್ರಗಾಮಿಗಳು ನಿರಾಕರಿಸಿದರು.  ಹತ ಬುರ್‍ಹಾನ್ ವನಿಯ ನಿಕಟವರ್ತಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸದ್ದಾಮ್ ಪದ್ದೆರ್ ಮತ್ತು ಕಾಶ್ಮೀರ ವಿಶ್ವ ವಿದ್ಯಾಲಯದ ಕಣ್ಮರೆಯಾಗಿದ್ದ ಪ್ರೊಫೆಸರ್ ಡಾ. ಮುಹಮ್ಮದ್ ರಫಿ ಅವರನ್ನು ಹತ ಭಯೋತ್ಪಾದಕರ ಶವಗಳಲ್ಲಿ ಗುರುತಿಸಲಾಯಿತು. ಗುಂಡಿನ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಕಾನ್ ಸ್ಟೇಬಲ್ ಮತ್ತು ಸೇನಾ ಯೋಧ ಕೂಡಾ ಗಾಯಗೊಂಡಿದ್ದಾರೆ. ಶೋಪಿಯಾನ್ ಜಿಲೆಯಲ್ಲಿ ಭದ್ರತಾ ಪಡೆಗಳು ಮತ್ತು ಸ್ಥಳೀಯರ ಮರ್ಧಯೆ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿ ಇರುವ ಆತನನ್ನು ಶ್ರೀನಗರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

2018: ಕಾಬೂಲ್: ಆಫ್ಘಾನಿಸ್ಥಾನದ ಉತ್ತರ ಬಘ್ಲನ್ ಪ್ರಾಂತ್ಯದ ವಿದ್ಯುತ್ ಸ್ಥಾವರ ಒಂದಕ್ಕಾಗಿ ಕೆಲಸ ಮಾಡುತ್ತಿದ್ದ ಏಳು ಭಾರತೀಯ ಎಂಜಿನಿಯರುಗಳು ಮತ್ತು ಒಬ್ಬ ಅಫ್ಘಾನಿ ಪ್ರಜೆಯನ್ನು ಈದಿನ ಅಪಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮಿನಿ ಬಸ್ ಒಂದರಲ್ಲಿ ಸರ್ಕಾರಿ ಸ್ವಾಮ್ಯದ ವಿದ್ಯುತ್ ಸ್ಟೇಷನಿನತ್ತ ಪಯಣ ಹೊರಟಿದ್ದಾಗ ಅಪರಿಚಿತ ಶಸ್ತ್ರಧಾರಿಗಳು ಈ ಎಂಜಿನಿಯರುಗಳು ಮತ್ತು ಬಸ್ಸನ್ನು ಚಲಾಯಿಸುತ್ತಿದ್ದ ಆಫ್ಘನ್ ಚಾಲಕನ ಸಹಿತವಾಗಿ ಅಪಹರಿಸಿದರು ಎಂದು ಬಘ್ಲನ್ ಪೊಲೀಸ್ ವಕ್ತಾರ ಜಬೀವುಲ್ಲಾ ಶೂಜ ಹೇಳಿದರು. ಎಂಜಿನಿಯರುಗಳ ಅಪಹರಣವನ್ನು  ಕಾಬೂಲಿನ ರಾಜತಾಂತ್ರಿಕ ಕಚೇರಿಯ ಇಬ್ಬರು ಅಧಿಕಾರಿಗಳು ದೃಢ ಪಡಿಸಿದರು. ಈ ಎಲ್ಲ ಎಂಜಿನಿಯರುಗಳೂ ಡ ಆಫ್ಘಾನಿಸ್ಥಾನ ಬ್ರೆಶ್ನಾ ಶೆರ್ಕತ್ (ಡಿಎಬಿಎಸ್) ಘಟಕದಲ್ಲಿ ಕೆಲಸ ಮಾಡುತ್ತಿದ್ದರು.  ಆಫ್ಘಾನಿಸ್ಥಾನದ ಬೃಹತ್ ಮೂಲ ಸವಲತ್ತು ಯೋಜನೆಗಳಲ್ಲಿ ಪ್ರಸ್ತುತ ಅಂದಾಜು ೧೫೦ ಭಾರತೀಯ ಎಂಜಿನಿಯರುಗಳು ಮತ್ತು ತಾಂತ್ರಿಕ ತಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದರು.  ಎಂಜಿನಿಯರುಗಳ ಬಿಡುಗಡೆಯನ್ನು ಖಚಿತಗೊಳಿಸುವ ಮಾರ್ಗಗಳನ್ನು ನಾವು ಹುಡುಕುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.  ಅಪಹರಣಕ್ಕೆ ಕಾರಣರಾರು ಅಥವಾ ಅವರ ಬಿಡುಗಡೆಗಾಗಿ ಹಣ ಕೇಳಲಾಗಿದೆಯೇ ಎಂಬುದು ಗೊತ್ತಾಗಲಿಲ್ಲ. ತಾಲಿಬಾನ್ ಉಗ್ರಗಾಮಿಗಳ ಕೃತ್ಯ ಇರಬಹುದೇ ಎಂಬ ಶಂಕೆಯೂ ವ್ಯಕ್ತವಾಯಿತು.  ಹಣ ಸುಲಿಯವ ಸಲುವಾಗಿ ಸ್ಥಳೀಯರನ್ನು ಅಪಹರಿಸುವುದೂ ಆಫ್ಘಾನಿಸ್ಥಾನದಲ್ಲಿ ಮಾಮೂಲಿ ವಿದ್ಯಮಾನ. ಅತೀವ ಬಡತನ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.  ೨೦೧೬ರಲ್ಲಿ ಭಾರತದ ನೆರವು ಕಾರ್ಮಿಕನೊಬ್ಬರನ್ನು ಕಾಬೂಲಿನಲ್ಲಿ ಅಪಹರಿಸಲಾಗಿತ್ತು. ೪೦ ದಿನಗಳ ಬಳಿಕ ಆಕೆಯನ್ನು ಬಿಡುಗಡೆ ಮಾಡಲಾಗಿತ್ತು. ಸಮರಗ್ರಸ್ತ ಅಫ್ಘಾನಿಸ್ಥಾನಕ್ಕೆ ಪ್ರಯಾಣಿಸುವ ಬಗ್ಗೆ ಮತ್ತು ಆಫ್ಘಾನಿಸ್ಥಾನದಲ್ಲಿ  ವಾಸಿಸುವ ಭಾರತೀಯರಿಗೆ ಭಾರತ ಸರ್ಕಾರ ನಿಯಮಿತವಾಗಿಭದ್ರತಾ ಎಚ್ಚರಿಕೆಗಳನ್ನು ನೀಡುತ್ತಿರುತ್ತದೆ.

2018: ನವದೆಹಲಿ: ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಶಾಸಕಿಯನ್ನು ಮದುವೆಯಾಗಿದ್ದಾರೆ  ಎಂಬ ಸುಳ್ಳು ಸುದ್ದಿಯೊಂದು ಫೋಟೋಗಳ ಸಮೇತ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಸುದ್ದಿಯನ್ನು ಶಾಸಕಿ ನಿರಾಕರಿಸಿದರು. ರಾಯ್ ಬರೇಲಿಯ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅವರೊಂದಿಗೆ ರಾಹುಲ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅದಿತಿ ಸಿಂಗ್ ಅವರು ಇದು ನನಗೆ ಬಹಳ ನೋವು ತಂದಿದೆ. ಅವರು ನನ್ನ ಹಿರಿಯಣ್ಣನ ಸಮಾನ ಎಂದು ಟ್ವೀಟ್ ಮಾಡಿದರು. ೨೯ ರ ಹರೆಯದ ಅದಿತಿ ಸಿಂಗ್ ಅವರು ಅಮೆರಿಕದ ಡ್ನೂಕ್ ವಿವಿಯಲ್ಲಿ ಮ್ಯಾನೇಜ್ಮೆಂಟ್ ಶಿಕ್ಷಣ ಪಡೆದಿದ್ದು, ರಾಯ್ ಬರೇಲಿಯಲ್ಲಿ ೫ ಬಾರಿ ಗೆದ್ದ ಶಾಸಕ ಅಖೀಲೇಶ್ ಸಿಂಗ್ ಅವರ ಪುತ್ರಿ . ಕಳೆದ ಚುನಾವಣೆಯಲ್ಲಿ ೯೦ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.  ರಾಹುಲ್ ಗಾಂಧಿ ಅವರ ಜೊತೆಗೆ ತಮ್ಮ ಮದುವೆಯಾಗಿದೆಎಂಬ ಪುಕಾರುಗಳ ಬಗ್ಗೆ ಈದಿನ ಅದಿತಿ ಸಿಂಗ್ ಅವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.  ‘ಇಂತಹ ಬುಡರಹಿತ ಪುಕಾರುಗಳನ್ನು ಹರಡುತ್ತಿರುವದಕ್ಕೆ ನನಗೆ ನಿಜವಾಗಿಯೂ ಬೇಸರವಾಗಿದೆ. ರಾಹುಲ್ ಜಿ ನನಗೆ ಹಿರಿಯಣ್ಣನಿದ್ದಂತೆ. ನಾನು ಧಾರ್ಮಿಕ ಆಚಾರದಂತೆ ಅವರ ಕೈಗಳಿಗೆ ರಾಖಿ ಕಟ್ಟಿದ್ದೇನೆ. ಸಂಬಂಧದ ಕತೆ ಕಟ್ಟಿರುವವರು ಸಂಪೂರ್ಣವಾಗಿ ತಪ್ಪು ಭಾವಿಸಿದ್ದಾರೆ ಮತ್ತು ನನ್ನ ಹಾಗೂ ರಾಹುಲ್ ಅವರ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶ ಹೊಂದಿದ್ದಾರೆ ಎಂದು ಟ್ವಿಟ್ಟರಿನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ ಬಳಿಕ ಪತ್ರಿಕೆಯೊಂದರ ಜೊತೆಗೆ ಮಾತನಾಡುತ್ತಾ ಸಿಂಗ್ ಪ್ರತಿಕ್ರಿಯಿಸಿದರು.  ಕರ್ನಾಟಕದ ಚುನಾವಣೆಯ ಹಿನ್ನೆಲೆಯಲ್ಲಿ ಈ ಅಪಪ್ರಚಾರ ಮಾಡಲಾಗಿದೆ ಎಂದೂ ಅವರು ಹೇಳಿದರು.

2018: ಅಗರ್ತಲ: ವಿಲಕ್ಷಣ ಘಟನೆಯೊಂದರಲ್ಲಿ ಉದ್ರಿಕ್ತ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಸೈನಿಕನೊಬ್ಬ ಉತ್ತರ ತ್ರಿಪುರಾದಲ್ಲಿ ತನ್ನ ಮೂವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಉತ್ತರ ತ್ರಿಪುರಾದ ಉನಕೋಟಿ ಜಿಲ್ಲೆಯ ಕೈಲಾಶಹರದ ಮಗುರೂಲಿಯಲ್ಲಿನ ೫೫ನೇ ಬಿಎಸ್ ಎಫ್ ಬೆಟಾಲಿಯನ್ನಿನ ಗಡಿ ಹೊರಠಾಣೆಯಲ್ಲಿ (ಬಿಒಪಿ) ಈ ಘಟನೆ ಘಟಿಸಿತು. ಕಾನ್ ಸ್ಟೇಬಲ್ ಸಿಶುಪಾಲ್ (೨೮) ತನ್ನ ಸಹೋದ್ಯೋಗಿಗಳ ಜೊತೆಗೆ ಸಂಭವಿಸಿದ ಮಾತಿನ ಚಕಮಕಿಯ ಬಳಿಕ ತನ್ನ ಸ್ವಯಂಚಾಲಿತ ಶಸ್ತ್ರದಿಂದ ಅವರ ಮೇಲೆ ಗುಂಡುಗಳನ್ನು ಹಾರಿಸಿದ ಎಂದು ಘಟನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ತಿಳಿಸಿದರು.  ಸಿಶುಪಾಲ್ ಗುಂಡೇಟಿಗೆ ಹೆಡ್ ಕಾನ್ ಸ್ಟೇಬಲ್ ವಿಜಯ್ ಕುಮಾರ್ (೪೫) ಮೊದಲು ನೆಲಕ್ಕೆ ಉರುಳಿದರು. ಸಿಸುಪಾಲ್ ಬಳಿಕ ಬಿಒಪಿಯ ಸೆಂಟ್ರಿ ಮತ್ತು ಇತರರ ಮೇಲೂ ಗುಂಡು ಹಾರಿಸಿದ. ಸೆಂಟ್ರಿ ಅದೃಷ್ಟವಶಾತ್ ಪಾರಾದ. ಆದರೆ ಕಾನಸ್ಟೇಬಲ್ ಚಾಲಕ ರಾಕೇಶ್ ಕುಮಾರ ಯಾದವ್ (೨೨) ಮತ್ತು ಕಾನ್‌ಸ್ಟೇಬಲ್ ರಿಂಕು ಕುಮಾರ್ (೩೦) ತೀವ್ರವಾಗಿ ಗಾಯಗೊಂಡರು. ಸೈನಿಕ ಬಳಿಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಇಬ್ಬರೂ ಬಿಎಸ್ ಎಫ್ ಯೋಧರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ನಾಲ್ಕೂ ಮಂದಿ ಮೃತ ಬಿಎಸ್ ಎಫ್ ಸಿಬ್ಬಂದಿಯ ಪಾರ್ಥಿವ ಶರೀರಗಳನ್ನು ಅವರವರ ಹುಟ್ಟೂರುಗಳಿಗೆ ಕಳುಹಿಸಲಾಗಿದೆ ಎಂದು ತ್ರಿಪುರಾ ಫ್ರಾಂಟಿಯರ್ ಕೇಂದ್ರ ಕಚೇರಿ ಹೇಳಿಕೆಯಲ್ಲಿ ತಿಳಿಸಿತು. ಸಿಶುಪಾಲ್ ಜಮ್ಮು ನಿವಾಸಿಯಾಗಿದ್ದಾನೆ. ಇನ್ ಸ್ಪೆಕ್ಟರ್ ಜನರಲ್ ಸೇರಿದಂತೆ ಹಿರಿಯ ಬಿಎಸ್ ಎಫ್ ಅಧಿಕಾರಿಗಳು ಘಟನಾ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ ಎಂದು ಹೇಳಿಕೆ ತಿಳಿಸಿತು. ೨೦೧೧ರ ಮಾರ್ಚ್ ೩ರಂದು ಸಂಭವಿಸಿದ್ದ ಇಂತಹುದೇ ಘಟನೆಯಲ್ಲಿ, ಗಡಿ ಭದ್ರತಾ ಪಡೆಯ ಸೈನಿಕನೊಬ್ಬ ಧಲಾಯಿ ಜಿಲ್ಲೆಯ ರೈಸಿಬಾರಿ ಪ್ರದೇಶದಲ್ಲಿ ತನ್ನ ಮೂವರು ಸಹೋದ್ಯೋಗಿಗಳನ್ನು ಗುಂಡು ಹಾರಿಸಿ ಕೊಂದಿದ್ದ.  ೨೦೧೩ರ ಜನವರಿ ೨೯ರಂದು ಘಟಿಸಿದ್ದ ಇನ್ನೊಂದು ಘಟನೆಯಲ್ಲಿ ತ್ರಿಪುರಾ ರಾಜ್ಯ ರೈಫಲ್ಸ್ (ಟಿಎಸ್ ಆರ್) ಅರೆಸೇನಾ ಪಡೆಯ ಕಾನ್ ಸ್ಟೇಬಲ್ ಒಬ್ಬ ಧಲಾಯಿಯ ಚೌಮನು ಭದ್ರತಾ ಶಿಬಿರದಲ್ಲಿ ಮೂವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದಿದ್ದ.

2018: ಚಿತ್ರದುರ್ಗ: ಕಾಂಗ್ರೆಸ್ ಪಕ್ಷವು ರಾಷ್ಟ್ರವನ್ನು ’ವಿಭಜಿಸುವುದಕ್ಕಾಗಿ ಇತಿಹಾಸವನ್ನು ತಿರುಚುತ್ತಿದೆ ಎಂದು ಇಲ್ಲಿ ಆಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರವು ’ಸುಲ್ತಾನರ ಜಯಂತಿಗಳನ್ನು ಆಚರಿಸುತ್ತಿದೆ ಎಂದು ಟೀಕಿಸಿದರು.  ಪ್ರತಿವರ್ಷ ನವೆಂಬರ್ ೧೦ರಂದು ೧೮ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲು ಸಿದ್ದರಾಮಯ್ಯ ಸರ್ಕಾರ ಕೈಗೊಂಡಿದ್ದ ವಿವಾದಾತ್ಮಕ ನಿರ್ಧಾರವನ್ನು ಪ್ರಧಾನಿ ಪರೋಕ್ಷವಾಗಿ ಪ್ರಸ್ತಾಪಿಸಿದರು.  ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ’ಕಾಂಗ್ರೆಸ್ಸಿನ ನಡತೆಯನ್ನು ನೋಡಿ. ಯಾರಿಂದ ನಾವು ತಲೆ-ತಲೆಮಾರುಗಳ ಕಾಲ ಸ್ಫೂರ್ತಿಯನ್ನು ಪಡೆಯಬೇಕಾಗಿತ್ತೋ ಅಂತಹ ನಾಯಕರ ಜಯಂತಿಯನ್ನು ಆಚರಿಸುವ ಅಗತ್ಯ ಇದೆ ಎಂದು ಅವರು ಯೋಚಿಸುವುದಿಲ್ಲ ಎಂದು ಮೋದಿ ನುಡಿದರು. ‘ವೀರ ಮದಕರಿ ನಾಯಕ ಮತ್ತು ಒನಕೆ ಓಬವ್ವರನ್ನು ಮರೆಯಲಾಗಿದೆ, ಆದರೆ ಕೇವಲ ವೋಟು ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಸುಲ್ತಾನರ ಜಯಂತಿಗಳನ್ನು ಆಚರಿಸುತ್ತಾರೆ ಎಂದು ಪ್ರಧಾನಿ ಹೇಳಿದರು.  ದಂತಕಥೆಯಾಗಿರುವ ದಲಿತ ಮಹಿಳೆ ಒನಕೆ ಓಬವ್ವ ಚಿತ್ರದುರ್ಗದ ಕೊನೆಯ ದೊರೆ ಮದಕರಿ ನಾಯಕನ ಸೇನೆಯ ಒಬ್ಬ ಯೋಧನ ಪತ್ನಿ. ತನ್ನ ಗಂಡ ಕಾವಲುಗಾರನಾಗಿದ್ದ ಕೋಟೆಯ ಗೋಪುರದಲ್ಲಿ ಆಕೆ ಕೋಟೆಯ ಒಳಕ್ಕೆ ನುಗ್ಗಲು ಯತ್ನಿಸುತ್ತಿದ್ದ ಟಿಪ್ಪು ಸುಲ್ತಾನ್ ತಂದೆ ಹೈದರಾಲಿಯ ಸೇನೆಯ ಸೈನಿಕರನ್ನು ಏಕಾಂಗಿಯಾಗಿ ಒನಕೆಯಿಂದ ಹೊಡೆದು ಸಾಯಿಸಿ ಕೋಟೆಯನ್ನು ರಕ್ಷಿಸಲು ಯತ್ನಿಸಿದ್ದಳು.  ‘ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸಿತ್ತು.  ಟಿಪ್ಪು ಜಯಂತಿ ಆಚರಣೆಯು ಸಮಾಜವನ್ನು ಎರಡಾಗಿ ಹೋಳು ಮಾಡಿತ್ತು. ಕೆಲವರು ಬ್ರಿಟಿಷರ ಜೊತೆ ಹೋರಾಡುತ್ತಾ ಮಡಿದ ಟಿಪ್ಪು ಸುಲ್ತಾನನ್ನು ’ಹೀರೋ ಎಂಬುದಾಗಿ ಪ್ರತಿಪಾದಿಸಿದರೆ, ಇತರರು ’ಮತಾಂಧ ದೊರೆ ಎಂದು ಟೀಕಿಸಿದ್ದರು.  ‘ಈ ಜಯಂತಿ ಆಚರಣೆ ಮೂಲಕ ಕಾಂಗ್ರೆಸ್ ಸರ್ಕಾರವು ಕರ್ನಾಟಕ ಮತ್ತು ಚಿತ್ರದುರ್ಗದ ಜನರನ್ನು ಅವಮಾನಿಸಿದೆ. ಅವರು ಚಿತ್ರದುರ್ಗದ ಜನರ ಭಾವನೆಗಳ ಜೊತೆಗೆ ಆಟವಾಡಿದ್ದಾರೆ ಎಂದು ಮೋದಿ ನುಡಿದರು.

2018: ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ’ಸೀದಾ ರೂಪಯ್ಯ ಸರ್ಕಾರ ಎಂಬುದಾಗಿ ಹೇಳುತ್ತಾ ಟೀಕಾ ಪ್ರಹಾರ ನಡೆಸುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಅವರನ್ನು ವೈಯಕ್ತಿಕ ದಾಳಿ ಮತ್ತು ಮತ್ತು ಕೀಳುಭಾಷೆ ಪ್ರಯೋಗಿಸುತ್ತಿರುವುದಕ್ಕಾಗಿ ತರಾಟೆಗೆ ತೆಗೆದುಕೊಂಡರು.  ಪ್ರಧಾನಿಯವರು ತಮ್ಮ ಹುದ್ದೆಗೆ ಒಪ್ಪುವಂತಹ ಭಾಷೆಯಲ್ಲಿ ಮಾತನಾಡುತ್ತಿಲ್ಲ ಎಂದು ಹೇಳಿದ ಕಾಂಗ್ರೆಸ್ ನಾಯಕ, ತಮ್ಮ ಆಡಳಿತವನ್ನು ’೧೦ ಪರ್ಸೆಂಟ್ ಸರ್ಕಾರ ಮತ್ತು ’ಸೀದಾ ರೂಪಯ್ಯ ಸರ್ಕಾರ ಎಂಬುದಾಗಿ ಬಣ್ಣಿಸುತ್ತಿರುವುದಕ್ಕಾಗಿ ಆಕ್ಷೇಪ ವ್ಯಕ್ತ ಪಡಿಸಿದರು.  ಸಿದ್ದರಾಮಯ್ಯ ಅವರು ಕರ್ನಾಟಕ ಬಿಜೆಪಿಯು ಮೇ ೧೨ರ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಸಂಪೂರ್ಣವಾಗಿ ಪ್ರಧಾನಿಯನ್ನು ಅವಲಂಬಿಸಿದೆ. ಪಕ್ಷದಲ್ಲಿ ’ಮುಖಬೆಲೆ ಇರುವಂತಹ ಒಬ್ಬ ನಾಯಕನೂ ಇಲ್ಲ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿಯನ್ನೂ ಅವರು ಗೇಲಿ ಮಾಡಿದರು. ‘ನಾವು ಅವರಿಂದ (ಮೋದಿ) ಗೌರವಾನ್ವಿತ ಭಾಷೆಯನ್ನು ನಿರೀಕ್ಷಿಸಿದ್ದೆವು. ಆದರೆ ಅವರು ಮಾತನಾಡುತ್ತಿರುವುದು ಬಿಜೆಪಿ ಭಾಷೆಯನ್ನು ಹೊರತು ಸಭ್ಯ  ನಾಗರಿಕರು ಆಡುವ ಭಾಷೆಯನ್ನಲ್ಲ. ಅವರು ಅತ್ಯಂತ ಕೀಳುಮಟ್ಟದಲ್ಲಿ ಮಾತನಾಡುತ್ತಾರೆ. ಇದು ಪ್ರಧಾನ ಮಂತ್ರಿಯ ಭಾಷೆಯಲ್ಲ ಎಂದು ವರದಿಗಾರರ ಜೊತೆ ಮಾತನಾಡುತ್ತಾ ಮುಖ್ಯಮಂತ್ರಿ ನುಡಿದರು. ಮೋದಿಯವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುವರು ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವರು ಎಂಬುದು ನಿರೀಕ್ಷಿತವೇ ಆಗಿತ್ತು ಎಂದು ಸಿದ್ದರಾಮಯ್ಯ ನುಡಿದರು. ತಾವು ವೈಯಕ್ತಿಕ ಟೀಕೆಗಳನ್ನಾಗಲೀ, ಅಸಾಂಸದೀಯ ಪದಗಳನ್ನಾಗಲೀ ಎಂದೂ ಬಳಸಿಲ್ಲ ಎಂದು ಸಮರ್ಥಿಸಿದ ಸಿದ್ದರಾಮಯ್ಯ ಅವರು (ಮೋದಿ) ಅನಾಗರಿಕವಾಗಿ ಮಾತನಾಡಿದಾಗ ಮೊದಲಿಗೆ ನಾನು ಪ್ರತಿಕ್ರಿಯಿಸಬಾರದು ಎಂದು ಯೋಚಿಸಿದ್ದೆ. ಆದರೆ, ಬಳಿಕ ನಾನು ಅವರ ವಿರುದ್ಧ ದಾಳಿ ಮಾಡಲೇಬೇಕಾಯಿತು. ಇಲ್ಲದೇ ಇದ್ದರೆ ಜನರು ಅವರ ಮಾತುಗಳನ್ನೇ ಸತ್ಯವೆಂದು ನಂಬುವ ಸಾಧ್ಯತೆ ಇತ್ತು ಎಂದು ಹೇಳಿದರು.  ಕರ್ನಾಟಕದ ತಮ್ಮ ಎಲ್ಲ ಚುನಾವಣಾ ರಾಲಿಗಳಲ್ಲೂ ಮೋದಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಟು ಟೀಕಾ ಪ್ರಹಾರ ಮಾಡುತ್ತಿದ್ದು, ಅದು ಭ್ರಷ್ಟಾಚಾರದಲ್ಲಿ ’ಚಿನ್ನದ ಪದಕವನ್ನು ಪಡೆದಿದೆ ಎಂದೂ, ಅದು ’ಸೀದಾ ರೂಪಯ್ಯ ಸರ್ಕಾರ ಎಂದೂ ಮುಖ್ಯಮಂತ್ರಿಯ ಹೆಸರಿನ ಜೊತೆಗೆ ಪನ್ ಮಾಡಿ ಟೀಕಿಸುತ್ತಿದ್ದಾರೆ.  ತಮ್ಮ ಸರ್ಕಾರವನ್ನು ೧೦ ಪರ್ಸೆಂಟ್ ಸರ್ಕಾರ ಎಂಬುದಾಗಿ ಟೀಕಿಸುತ್ತಿರುವುದನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ತಮ್ಮ ಆಪಾದನೆಯನ್ನು ಸಾಬೀತುಪಡಿಸುವ ಯಾವುದಾದರೂ ಸಾಕ್ಷ್ಯಾಧಾರ ಪ್ರಧಾನಿ ಬಳಿ ಇದೆಯೇ ಎಂದು ಪ್ರಶ್ನಿಸಿದರು.  ‘ಅವರ ಬಳಿ ಎಲ್ಲ ಕೇಂದ್ರೀಯ ಸಂಸ್ಥೆಗಳಿವೆ. ಅವರ ಬಳಿ ಏನಾದರೂ ಸಾಕ್ಷ್ಯಾಧಾರ ಇದ್ದರೆ ಅದನ್ನು ಬಹಿರಂಗ ಪಡಿಸಲಿ. ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ಮೋದಿಯವರು ತಮ್ಮ ಕ್ಷುಲ್ಲಕತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.  ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ಯಾವ ಭರವಸೆಗಳನ್ನೂ ಮೋದಿ ಅವರು ಈಡೇರಿಸಿಲ್ಲ ಎಂದು ನುಡಿದ ಸಿದ್ದರಾಮಯ್ಯ ’ಅವರು ಸಂಪೂರ್ಣ ವಿಫಲರಾಗಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ನುಡಿದರು. ಕರ್ನಾಟಕ ಬಿಜೆಪಿ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ, ಮುಂಬರುವ ವಿಧಾನಸಭಾ ಚುನಾವಣೆಗಾಗಿ ಅದು ಸಂಪೂರ್ಣವಾಗಿ ಮೋದಿಯನ್ನು ಅವಲಂಬಿಸಿದೆ ಎಂದು ಹೇಳಿದರು.  ‘ಬಿಜೆಪಿ ಸಂಪೂರ್ಣವಾಗಿ ಈ ಚುನಾವಣೆಯಲ್ಲಿ ಮೋದಿ ಅವರನ್ನು ಅವಲಂಬಿಸಿದೆ. ಯಡಿಯೂರಪ್ಪ, ಈಶ್ವರಪ್ಪ, ಅನಂತ ಕುಮಾರ್, ಅನಂತ ಕುಮಾರ್ ಹೆಗಡೆ ಅಥವಾ ಜಗದೀಶ ಶೆಟ್ಟರ್ ಯಾರೇ ಇರಲಿ, ಅವರು ’ಮುಖಬೆಲೆ ಇರುವಂತಹ ಜನರನ್ನು ಹೊಂದಿಲ್ಲ. ತಾವು ಸಂಪೂರ್ಣವಾಗಿ ಮೋದಿ ಅವರನ್ನೇ ಅವಲಂಬಿಸಿದ್ದೇವೆ ಎಂಬುದಾಗಿ ಬಿಜೆಪಿ ಶಾಸಕರೊಬ್ಬರು ನನ್ನ ಬಳಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.


2017: ಲಂಡನ್‌: ಇಂಗ್ಲೆಂಡಿನ ಬ್ರಿಟಿಷ್‌ ಮೆನ್ಸಾ ಸಂಸ್ಥೆ ನಡೆಸುವ ಬುದ್ಧಿಮತ್ತೆ ಪರೀಕ್ಷೆಯಲ್ಲಿ 162 ಅಂಕ ಪಡೆಯುವ ಮೂಲಕ ಭಾರತ ಮೂಲದ 12ವರ್ಷದ ಬಾಲಕಿ ರಾಜ್‌ಗೌರಿ ಪವಾರ್‌ ಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್‌ ಐನ್‌ಸ್ಟೀನ್‌ ಹಾಗೂ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ರನ್ನು ಹಿಂದಿಕ್ಕಿದ ಸಾಧನೆ ಮಾಡಿದರು. ಸಾಧನೆಯ ಬಳಿಕ ಪವಾರ್‌ಗೆ ಬ್ರಿಟಿಷ್‌ ಮೆನ್ಸಾ ಬುದ್ಧಿಮತ್ತೆ ಸಂಸ್ಥೆಯಲ್ಲಿ ಗಣ್ಯ ಸದಸ್ಯತ್ವ ಸ್ಥಾನಮಾನ ಕಲ್ಪಿಸಲಾಯಿತು. ಏಪ್ರಿಲ್ ತಿಂಗಳು ನಡೆದಿದ್ದ ಪರೀಕ್ಷೆಯಲ್ಲಿ ಪವಾರ್‌ 162 ಅಂಕಗಳನ್ನು ಪಡೆದಿದ್ದರು. ಇದು 18 ವರ್ಷಕ್ಕಿಂತ ಕೆಳವಯಸ್ಸಿನವರಲ್ಲಿ ಕಂಡು ಬರಬಹುದಾದ ಗರಿಷ್ಠ ಬುದ್ಧಿಮತ್ತೆಗೆ ಸಮಾನ. ಗರಿಷ್ಠ ಬುದ್ದಿಮತ್ತೆಯ ಮಾನದಂಡವನ್ನು 140 ಪಾಯಿಂಟ್ ಎಂಬುದಾಗಿ ನಿಗದಿ ಪಡಿಸಲಾಗಿತ್ತು. ಇದು ಐನ್ ಸ್ಟೀನ್ ಮತ್ತು ಹಾಕಿಂಗ್ ಅವರ ಬುದ್ದಿಮತ್ತೆಯ ಮಟ್ಟಕ್ಕಿಂತ 2 ಅಂಕ ಹೆಚ್ಚು ಅಂದರೆ 162 ಅಂಕ ಗಳಿಸಿ ಅವರನ್ನು ಪವಾರ್ ಮೀರಿಸಿದರು. ಸದ್ಯ ಬಾಲಕಿ ಅಲ್ಟ್ರಿಂಚಮ್‌ ಬಾಲಕಿಯರ ವ್ಯಾಕರಣ ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲೆಯ ಶಿಕ್ಷಕ ವರ್ಗದಿಂದಲೂ ಪವಾರ್‌ ಸಾಧನೆಗೆ ಹರ್ಷ ವ್ಯಕ್ತವಾಯಿತು. ‘ಎಲ್ಲರಿಗೂ ಸಂತಸವಾಗಿದೆ. ಪವಾರ್‌ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದು ನಾವು ಆಕೆಯಿಂದ ಇನ್ನಷ್ಟು ಶ್ರೇಷ್ಟ ಸಾಧನೆಗಳನ್ನು ಬಯಸುತ್ತೇವೆ’ ಎಂದು ಶಾಲೆಯ ಗಣಿತ ಶಿಕ್ಷಕ ಆ್ಯಂಡ್ರೋ ಬ್ಯಾರ್ರಿ ಸಂತಸ ವ್ಯಕ್ತಪಡಿಸಿದರು.
2017: ನವದೆಹಲಿ: ಭಾರತದಲ್ಲಿ ರಾಜ್ಯ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ
ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರ­ರಾಗಿದ್ದ ನ್ಯಾ.ಲೀಲಾ ಸೇಠ್(86) ಅವರು ಶುಕ್ರವಾರ, ಮೇ 5ರ ರಾತ್ರಿ ನಿಧನರಾದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಲೀಲಾ ಸೇಠ್‌ ಹೃದಯಾಘಾತದಿಂದ ನೋಯಿಡಾದಲ್ಲಿನ ತನ್ನ ನಿವಾಸದಲ್ಲಿ ನಿಧರಾದರು. ಲೇಖಕ ವಿಕ್ರಮ್‌ ಸೇಠ್‌ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದರು. ಸೊಂಟದ ಭಾಗದಲ್ಲಿ ಮೂಳೆ ಮುರಿತವಾಗಿ ಮೂರು ವಾರಗಳ ಹಿಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಲಂಡನ್‌ ಬಾರ್‌ ಎಗ್ಸಾಮ್‌ನಲ್ಲಿ ಟಾಪರ್‌ ಆದ ಮೊದಲ ಮಹಿಳೆ, ದೆಹಲಿ ಹೈಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಹಾಗೂ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ (ಹಿಮಾಚಲ ಪ್ರದೇಶ ರಾಜ್ಯ ಹೈಕೋರ್ಟ್) ಎಂಬ ಹೆಗ್ಗಳಿಕೆ ಲೀಲಾ ಅವರದು. 1992ರಲ್ಲಿ ಹಿಮಾಚಲಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಅವರು ನಿವೃತ್ತ­ರಾಗಿದ್ದರು.  ಅದಕ್ಕೂ ಮುಂಚೆ ದೆಹಲಿ ಹೈಕೋರ್ಟ್‌ನ ಮೊದಲ ಮಹಿಳಾ ನ್ಯಾಯ­ಮೂರ್ತಿ­ಗಳಾಗಿ ಕಾರ್ಯ ನಿರ್ವಹಿಸಿದವರು ಅವರು. 1978ರ ಜುಲೈ 25ರಂದು ದೆಹಲಿ ಹೈಕೋರ್ಟ್ ನ ಮೊದಲ ಮಹಿಳಾ ನ್ಯಾಯಮೂರ್ತಿಗಳಾಗಿ  ಲೀಲಾ ಸೇಠ್ ಪ್ರಮಾಣ ವಚನ ಸ್ವೀಕರಿಸಿದ್ದರು. ಆನ್ ಬ್ಯಾಲೆನ್ಸ್ ಹೆಸರಿನ ಆತ್ಮಚರಿತ್ರೆಯನ್ನು ಅವರು ಬರೆದಿದ್ದರು.

2017: ನವದೆಹಲಿ: ದೆಹಲಿ ಸರ್ಕಾರದ ನೀರಾವರಿ ಮತ್ತು ಪ್ರವಾಸೋದ್ಯಮ ಸಚಿವ ಕಪಿಲ್‌ ಮಿಶ್ರಾ
ಅವರನ್ನು ಸಂಪುಟದಿಂದ ಕೈಬಿಟ್ಟ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಅವರ ಸ್ಥಾನಕ್ಕೆ ಕೈಲಾಶ್‌ ಗೆಹ್ಲೋಟ್‌ ಅವರನ್ನು ನೇಮಿಸಲು ನಿರ್ಧರಿಸಿದರು. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಹೇಳಲಾಯಿತು. ‘ಭ್ರಷ್ಟಾಚಾರ ಆರೋಪವಿಲ್ಲದ, ಸಿಬಿಐ ವಿಚಾರಣೆ ಎದುರಿಸದ ಏಕೈಕ ಸಚಿವ ನಾನು. ನನಗೆ ಮಾಹಿತಿಯನ್ನೂ ನೀಡದೆ ನನ್ನನ್ನು ಸಂಪುಟದಿಂದ ಹೊರಹಾಕಲಾಗಿದೆ. ಇದು ಕೇಜ್ರಿವಾಲ್‌ ಅವರ ಏಕಪಕ್ಷೀಯ ನಿರ್ಧಾರ’ ಎಂದು ಮಿಶ್ರಾ ಟ್ವೀಟ್‌ ಮಾಡಿದರು. ಕೈಲಾಶ್‌ ಗೆಹ್ಲೋಟ್‌ ಅವರ ಜತೆಗೆ ಸೀಮಾಪುರಿ ಕ್ಷೇತ್ರದ ಶಾಸಕ ರಾಜೇಂದ್ರ ಗೌತಮ್‌ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು. ಇದರಿಂದ ಕೇಜ್ರಿವಾಲ್‌ ಸಂಪುಟದ ಒಟ್ಟು ಸದಸ್ಯರ ಸಂಖ್ಯೆ ಏಳಕ್ಕೆ ಏರಲಿದೆ. ಮಿಶ್ರಾ ಅವರು, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಭಾಗಿಯಾಗಿದ್ದಾರೆ ಎನ್ನಲಾದ ಟ್ಯಾಂಕರ್‌ ಹಗರಣದ ಬಗ್ಗೆ ಭಾನುವಾರ ಸ್ಫೋಟಕ ಮಾಹಿತಿಗಳನ್ನು ನೀಡುವುದಾಗಿ ಟ್ವೀಟ್‌ ಮಾಡಿದ  ಕೆಲವೇ ಗಂಟೆಗಳಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಯಿತು.

2016: ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ನಾಗರಿಕರು
ಮತ್ತು ಇಬ್ಬರು ಪೊಲೀಸರು ಮೃತರಾದರು. ಶ್ರೀನಗರ – ಜಮ್ಮು ಹೆದ್ದಾರಿಯ ಮಿರ್‌ ಬಜಾರ್ ಪ್ರದೇಶದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುತ್ತಿದ್ದ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ ಮೂವರು ಪೊಲೀಸ್‌ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡರು.  ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗಾಗಿ ತೀವ್ರ ಶೋಧ ಮುಂದುವರಿದಿದ್ದು, ಕಾರ್ಯಾಚರಣೆ ವೇಳೆ ಯೋಧರು ಮಹತ್ವದ ಮಾಹಿತಿ ಕಲೆ ಹಾಕಿದರು. ಕಳೆದ ನಾಲ್ಕು ದಿನಗಳ ಹಿಂದೆ ಉಗ್ರರು ಅಡಗಿಕುಳಿತಿರುವ ಬಗ್ಗೆ ಮಾಹಿತಿ ಪಡೆದ ಭಾರತೀಯ ಯೋಧರು ಸುಮಾರು 20 ಹಳ್ಳಿಗಳಲ್ಲಿ ಪತ್ತೆ ಕಾರ್ಯ ಆರಂಭಿಸಿದರು.  ಶೋಧ ಕಾರ್ಯಾಚರಣೆ ವೇಳೆ ಉಗ್ರರ ಬಳಿಯಿದ್ದ ಡೈರಿ ಪತ್ತೆಯಾಯಿತು. ಇದರಲ್ಲಿ ಉಗ್ರರ ಕುರಿತಾದ ಹಲವಾರು ಮಾಹಿತಿಗಳು ಲಭ್ಯವಾಗಿದೆ. ಸ್ಥಳೀಯರ ಜೊತೆ ಉಗ್ರರು ಸಂಪರ್ಕ ಹೊಂದಿರುವ ಬಗೆಗಿನ ಆಘಾತಕಾರಿ ವಿಷಯ ತಿಳಿದುಬಂದಿತು. ಡೈರಿಯಲ್ಲಿ ಸ್ಥಳೀಯರ ದೂರವಾಣಿ ಸಂಖ್ಯೆ ಕೂಡ ಪತ್ತೆಯಾಯಿತು. ಈ ಮೂಲಕ ಉಗ್ರರಿಗೆ  ಸ್ಥಳೀಯರ ಕೆಲುವು ಗುಂಪು ಸಹಾಯ ಮಾಡುತ್ತಿದೆ ಎಂಬ ಶಂಕೆ ನಿಜವಾಯಿತು. ಇಂತಹವರನ್ನು ವಶಕ್ಕೆ ಪಡೆದು ಹೆಡೆಮುರಿಕಟ್ಟಲು ಭಾರತೀಯ ಸೇನೆ ಸಜ್ಜುಗೊಂಡಿತು.  ಮತ್ತೊಂದೆಡೆ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಐಸಿಸ್ ಏಜೆಂಟ್ ಶಂಕಿತ ಉಗ್ರ ಮಹತ್ವದ ಮಾಹಿತಿಯನ್ನು ಹೊರಹಾಕಿದ. ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನದ ಹೈಕಮೀಷನ್​ನಿಂದ ಹಣ ಸಂದಾಯ ಆಗುತ್ತಿತ್ತು. ಅವರ ಅಣತಿಯಂತೆ ನಾವು ಕಾರ್ಯ ನಿರ್ವಹಿಸಬೇಕಿತ್ತು ಎಂದು ಹೇಳಿಕೆ ನೀಡಿದ.
2016: ನವದೆಹಲಿ: ರಾಜ್ಯಸಭೆಯಲ್ಲಿ ಅಗಸ್ತಾ ವೆಸ್ಟ್ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಉಲ್ಲೇಖಿಸಿದ್ದ ಎಲ್ಲಾ ದಾಖಲೆಗಳನ್ನೂ ಮೇ 6ರ ಸಂಜೆ 6 ಗಂಟೆಯ ಒಳಗಾಗಿ ಪ್ರಮಾಣೀಕರಿಸುವಂತೆ ರಾಜ್ಯಸಭಾ ಉಪಸಭಾಪತಿ ಪಿ.ಜೆ. ಕುರಿಯನ್ ನೀಡಿದ್ದ ಗಡುವಿನ ಒಳಗಾಗಿ ಸ್ವಾಮಿಯವರು ಎಲ್ಲಾ ದಾಖಲೆಗಳನ್ನೂ ಪ್ರಮಾಣೀಕರಿಸಿದರು. ಸಂಜೆ 6 ಗಂಟೆ ಒಳಗಾಗಿ ಎಲ್ಲಾ ದಾಖಲೆಗಳನ್ನು ಪ್ರಮಾಣೀಕರಿಸದಿದ್ದಲ್ಲಿ ಅವರು ಚರ್ಚೆ ವೇಳೆ ಮಾಡಿದ್ದ ದಾಖಲೆಗಳ ಉಲ್ಲೇಖವನ್ನು ಕಡತದಿಂದ ಕಿತ್ತು ಹಾಕುವುದಾಗಿ ಕುರಿಯನ್ ಅವರು ಹೇಳಿದ್ದರು. ಸಂಸದೀಯ ವ್ಯವಹಾರಗಳ ರಾಜ್ಯಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಈದಿನ ಸಂಜೆ ರಾಜ್ಯಸಭೆಯಲ್ಲಿ ವಿಷಯವನ್ನು ಪ್ರಕಟಿಸಿ, ಸ್ವಾಮಿಯವರು ಈಗ ತಾವು ಉಲ್ಲೇಖಿಸಿದ ಎಲ್ಲಾ ದಾಖಲೆಗಳನ್ನೂ ಪ್ರಮಾಣೀಕರಿಸಿದ್ದಾರೆ ಎಂದು ಹೇಳಿದರು.

2016: ಮುಂಬೈ: ಮಹಾರಾಷ್ಟ್ರದಲ್ಲಿ ಗೋವಧೆ ನಿಷೇಧವನ್ನು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್, ಮಹಾರಾಷ್ಟ್ರದ ಹೊರಗಿನಿಂದ ಗೋಮಾಂಸವನ್ನು ತಂದು ದಾಸ್ತಾನು ಇಡುವುದು ಮತ್ತು ತಿನ್ನುವುದು ಅಕ್ರಮವಲ್ಲ ಎಂದು ತೀರ್ಪು ನೀಡಿತು. ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ 1976 ಕಾಯ್ದೆಯಲ್ಲಿ ಗೋಮಾಂಸ ಆಮದು ಮತ್ತು ಗೋಮಾಂಸ ದಾಸ್ತಾನನ್ನು ಕ್ರಿಮಿನಲ್ ಅಪರಾಧ ಎಂಬುದಾಗಿ ಹೇಳಿರುವ ಎರಡು ವಿಧಿಗಳನ್ನು ಕೋರ್ಟ್ ರದ್ದು ಪಡಿಸಿತು.  ಬೇರೆ ರಾಜ್ಯಗಳಿಂದ ಗೋಮಾಂಸ ಆಮದು ಮತ್ತು ದಾಸ್ತಾನು ನಿಷೇಧಿಸುವ ಕಾಯ್ದೆಯ 5 (ಡಿ) ವಿಧಿಯು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಒದಗಿಸಲಾಗಿರುವ ಆಹಾರದ ಹಕ್ಕು ಮತ್ತು ಆಯ್ಕೆ ಹಾಗೂ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಎಸ್ಸಿ ಗುಪ್ತ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಹೇಳಿತು. ಗೋಮಾಂಸ ದಾಸ್ತಾನು ಅಪರಾಧಕ್ಕೆ ಒಂದು ವರ್ಷದವರೆಗೆ ಸೆರೆಮನೆ ಮತ್ತು 2000 ರೂ.ಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದ್ದ ಕಾಯ್ದೆಯ 9(ಬಿ) ವಿಧಿಯನ್ನು ಕೂಡಾ ನ್ಯಾಯಾಲಯ ಸಂವಿಧಾನಬಾಹಿರ ಎಂದು ಹೇಳಿತು. ಕಾಯ್ದೆಗೆ 1995ರಲ್ಲಿ ಅಳವಡಿಸಲಾದ ಮತ್ತು 2015 ಮಾರ್ಚ್ನಲ್ಲಿ 20 ವರ್ಷಗಳ ಬಳಿಕ ಜಾರಿಗೆ ತರಲಾದ ತಿದ್ದು ಪಡಿಗಳ ವಿರುದ್ಧ ಹಲವಾರು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು.

2016: ನವದೆಹಲಿ: ತನ್ನ ನಿಲುವು ಬದಲಿಸಿದ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸಲಹೆಯಂತೆ ಉತ್ತರಾಖಂಡ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಗೆ ಒಪ್ಪಿಕೊಂಡಿತು. ಇದರನ್ವಯ. ಮೇ 10ರಂದು ಬೆಳಗ್ಗೆ 11 ಗಂಟೆಯಿಂದ 1ಗಂಟೆವರೆಗಿನ ಅವಧಿಯಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಆಜ್ಞಾಪಿಸಿತು.. ವಿಧಾನಸಭೆಯಿಂದ ಅನರ್ಹಗೊಂಡಿರುವ 9 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರು ಮತದಾನ ಮಾಡುವಂತಿಲ್ ಎಂದು ಕೋರ್ಟ್ ಹೇಳಿತು. ಕೇಂದ್ರ  ಸರ್ಕಾರ ತನ್ನ ಒಪ್ಪಿಗೆ ನೀಡಿದ ಬಳಿಕ ಕುರಿತು ತೀರ್ಪು ನೀಡಿದ ಸುಪ್ರೀಂಕೋರ್ಟ್,  ಹರೀಶ್ ರಾವತ್ ಅವರಿಗೆ ಬಹುಮತ ಸಾಬೀತಿಗೆ ಅವಕಾಶ ನೀಡಬೇಕು ಎಂದು ಹೇಳಿತು. ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ 2 ಗಂಟೆಗಳ ಅವಧಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗುವುದು ಎಂದು ಕೋರ್ಟ್ ಹೇಳಿತು. ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಮೇಲೆ ನಿಗಾ ಇಡಲು ವೀಕ್ಷಕರನ್ನು ನೇಮಕ ಮಾಡುವಂತೆ ಕೇಂದ್ರವು ಸುಪ್ರೀಂಕೋರ್ಟಿಗೆ ಮನವಿ ಮಾಡಿತು. ನಿವೃತ್ತ ಮುಖ್ಯ ಚುನಾವಣಾ ಆಯುಕ್ತರೊಬ್ಬರ ಉಪಸ್ಥಿತಿಯಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಮತ್ತು ವಿಶ್ವಾಸ ಮತ ಯಾಚನೆಯ ಏಕೈಕ ಕಲಾಪವು ಸದನದ ಕಾರ್ಯಕಲಾಪ ಪಟ್ಟಿಯಲ್ಲಿ ಇರಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತು. ಮತದಾನದ ವೇಳೆಯಲ್ಲಿ ಪರ ಮತ್ತು ವಿರೋಧಿ ಸದಸ್ಯರು ಪ್ರತ್ಯೇಕ ಗುಂಪುಗಳಲ್ಲಿ ಕೂರಬೇಕು. ಒಬ್ಬರಾದ ಬಳಿಕ ಒಬ್ಬರು ಕೈ ಎತ್ತಿ ತಮ್ಮ ಮತ ದಾಖಲಿಸಬೇಕು. ಮೇ 11ರಂದು ವಿಧಾನಸಭೆಯ ಮುಖ್ಯ ಕಾರ್ಯದರ್ಶಿಯವರು ಸುಪ್ರೀಂಕೋರ್ಟಿಗೆ ಹಾಜರಾಗಿ ವಿಡಿಯೋ ಸೇರಿದಂತೆ ವಿಧಾನಸಭೆಯ ವಿಶ್ವಾಸ ಮತಯಾಚನೆ ಕಲಾಪದ ವಿಡಿಯೋ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ಮೊಹರಾದ ಲಕೋಟೆಯಲ್ಲಿ ಸುಪ್ರೀಂಕೋರ್ಟಿಗೆ ಸಲ್ಲಿಸ ಬೇಕು ಎಂದು ಬಲಾಬಲಾ ಪರೀಕ್ಷೆಗೆ ವಿಧಿ ವಿಧಾನಗಳನ್ನು ಪ್ರಕಟಿಸಿತ್ತಾ ಸುಪ್ರೀಂಕೋರ್ಟ್ ನಿರ್ದೇಶಿಸಿತು. ಬಲಾಬಲ ಪರೀಕ್ಷೆಯೊಂದಿಗೆ ಉತ್ತರಾಖಂಡದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆಗಳಿವೆ. 9 ಮಂದಿ ಕಾಂಗ್ರೆಸ್ ಶಾಸಕರ ಬಂಡಾಯದ ಬಳಿಕ ರಾಜ್ಯದಲ್ಲಿ ಸಾಂವಿಧಾನಿಕ ಆಡಳಿತ ಕುಸಿದು ಬಿದ್ದಿದೆ ಎಂಬ ಕಾರಣಕ್ಕಾಗಿ ಮಾರ್ಚ್ 27ರಂದು ಕೇಂದ್ರವು ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿತ್ತು.
2016: ಇಸ್ಲಾಮಾಬಾದ್: ಸೂರ್ಯನ ಕಿರಣಗಳು ಮೈ ಮೇಲೆ ಬೀಳುತ್ತಿದ್ದಂತೆ ಸಕ್ರಿಯರಾಗುವ ಸಹೋದರರು, ಸೂರ್ಯ ಮರೆಯಾಗುತ್ತಿದ್ದಂತೆ ತಟಸ್ಥರಾಗುವ ವಿಚಿತ್ರ ರೀತಿಯ ಕಾಯಿಲೆಯೊಂದಕ್ಕೆ ತುತ್ತಾಗಿರುವುದು ಪಾಕಿಸ್ತಾನದಲ್ಲಿ ಬೆಳಕಿಗೆ ಬಂತು. ಹೌದು, ಒಂಬತ್ತು ಹಾಗೂ ಹದಿಮೂರು ವರ್ಷದ ಪಾಕಿಸ್ತಾನದ ಸಹೋದರರಿಗೆ ಗೌಪ್ಯವಾದ ಕಾಯಿಲೆಯೊಂದು ಅಂಟಿಕೊಂಡಿದೆ. ಇವರಿಗೆ ಸೋಲಾರ್ ಮಕ್ಕಳೆಂದೇ ಕರೆಯಲಾಗುತ್ತಿದ್ದು, ಸೂರ್ಯನ ಕಿರಣ ಮೈ ಮೇಲೆ ಬೀಳದಿದ್ದರೆ ಮಾತು ಹಾಗೂ ಚಲನವಲನ ಸಂಪೂರ್ಣವಾಗಿ ಸ್ಥಬ್ದವಾಗುತ್ತದೆ. ವಿಚಿತ್ರ ಕಾಯಿಲೆ ಕುರಿತು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಪರೀಕ್ಷೆ ನಡೆಸಿದ್ದು, ರೋಗದ ವಿವರ ಪತ್ತೆಹಚ್ಚಲು ವಿಫಲವಾಗಿದೆ ಸಂಸ್ಥೆಯ ಪ್ರಾಧ್ಯಾಪಕರಾದ ಜಾವೇದ್ ಅಕ್ರಮ್ ಅವರು, ಪ್ರಕರಣ ವೈದ್ಯಲೋಕಕ್ಕೆ ಪರೀಕ್ಷೆಯಾಗಿದೆ. ಬಾಲಕರ ವೈದ್ಯಕೀಯ ಖರ್ಚನ್ನು ಸರ್ಕಾರವೇ ಉಚಿತವಾಗಿ ಭರಿಸಲಿದೆ. ಅಷ್ಟೇ ಅಲ್ಲ ಇವರ ರಕ್ತದ ಮಾದರಿಯನ್ನು ಅಮೆರಿಕಾ ಸೇರದಂತೆ ವಿವಿಧ ದೇಶಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಬಾಲಕರ ತಂದೆ ಬಲೂಚಿಸ್ತಾನದ ಕ್ವೆಟ್ಟಾ ಸಮೀಪದ ಹಳ್ಳಿಯೊಂದರ ನಿವಾಸಿಯಾಗಿರುವ ಮೊಹಮ್ಮದ್ ಹಾಶಿಮ್ ನನ್ನ ಮಕ್ಕಳಿಗೆ ಬಹುಶಃ ಸೂರ್ಯನಿಂದ ಚೈತನ್ಯ ಬರುತ್ತಿದೆ ಎಂದು ಹೇಳಿದರು.
2016: ನ್ಯೂಯಾರ್ಕ್: ಸೂರ್ಯನಿಗಿಂತ ಬರೋಬ್ಬರಿ 660 ಮಿಲಿಯನ್ ದೊಡ್ಡದಾದ ಕಪ್ಪು ರಂಧ್ರ (Black hole) ಪತ್ತೆಯಾಗಿದೆಅಬ್ಬಾ…! ಊಹೆಗೂ ನಿಲುಕದ ಗಾತ್ರ ಕಪ್ಪು ರಂಧ್ರದ್ದು. ಹೌದು. ಬಾಹ್ಯಾಕಾಶ ವಿಜ್ಞಾನಿಗಳ ತಂಡ ಭಾರಿ ಗಾತ್ರದ ಕಪ್ಪು ರಂಧ್ರವನ್ನು ಪತ್ತೆ ಮಾಡಿದೆ. ಅವರ ಲೆಕ್ಕಾಚಾರದ ಪ್ರಕಾರ ಪತ್ತೆಯಾದ ಕಪ್ಪುರಂಧ್ರ ಸೂರ್ಯನಿಗಿಂತ 660 ಮಿಲಿಯನ್ ಅಂದರೆ 66 ಕೋಟಿ ಪಟ್ಟು ದೊಡ್ಡದಾಗಿದೆ. ಚಿಲಿಯ ಅಟಕ್ಯಾಮಾ ಮರುಭೂಮಿ ಪ್ರದೇಶದಲ್ಲಿರುವ ಬೃಹಧಾಕಾರದ, ಅತ್ಯುತ್ತಮ ಗುಣಮಟ್ಟದ ಕ್ಯಾಮರಾ ಅಳವಡಿಕೆಯ ಮಿಲಿಮೀಟರ್/ಸಬ್ವಿುಲಿಮೀಟರ್ ಬಾಹ್ಯಾಕಾಶ ಶೋಧನಾ ಸಾಧನ ರೇಡಿಯೊ ಟೆಲಿಸ್ಕೋಪ್ (ಎಎಲ್ಎಂಎ) ಮೂಲಕ ಪತ್ತೆ ಮಾಡಲಾಗಿದೆ. ಅಂಡಾಕಾರವಾಗಿ ಕಾಣಿಸಿಕೊಂಡಿರುವಎನ್ಜಿಸಿ 1332’ ಹೆಸರಿನ ಕಪ್ಪು ರಂಧ್ರದ ಹೃದಯ ಭಾಗದಲ್ಲಿನ ದೃಶ್ಯಾವಳಿಗಳನ್ನು ಅತ್ಯಾಧುನಿಕ ಟೆಲಿಸ್ಕೋಪ್ನಲ್ಲಿ ನೋಡುವ ಮೂಲಕ ಅದರ ಸುತ್ತ ಸುತ್ತುವ ಶೀತ ಅನಿಲ ಹಾಗೂ ಧೂಳಿನ ಕಣಗಳಲ್ಲಿನ ವೇಗವನ್ನು ಹತ್ತಿರದಿಂದ ನಿರ್ಧರಿಸುವ ಪ್ರಯತ್ನ ನಡೆಸಿದ್ದಾಗಿ ಹೇಳಿದರು. ಕಪ್ಪು ರಂಧ್ರದ ಹೃದಯ ಭಾಗದಲ್ಲಿನ ಶೀತ ಅನಿಲ ಹಾಗೂ ಧೂಳಿನ ಕಣಗಳಲ್ಲಿನ ಚಲನೆಯ ಅಧ್ಯಯನ ನಡೆಸಿ, ಸಾಕಷ್ಟು ಮಹತ್ವದ ಅಂಶಗಳ ತನಿಖೆ ನಡೆದಿರುವುದು ಇದೇ ಮೊದಲು. ಎಎಲ್ಎಂಎ ಇತಿಹಾಸದದಲ್ಲಿ ಇದೊಂದು ಮರೆಯಲಾಗದ ಸಾಧನೆ ಎಂದು ಕ್ಯಾಲಿಫೋರ್ನಿಯಇರ್ವಿನ್ ವಿಶ್ವವಿದ್ಯಾಲಯದ ಭೌತ ಮತ್ತು ಖಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ, ಸಂಶೋಧಕ ಆರಾನ್ ಬರ್ಥ್ ನುಡಿದರು.

2016: ವಾಷಿಂಗ್ಟನ್: ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿಲ್ಲದ ಕಾರಣ ಪಾಕಿಸ್ತಾನಕ್ಕೆ ನೀಡುವ 450 ಮಿಲಿಯನ್ ಡಾಲರ್ ನೆರವನ್ನು ಅಮೆರಿಕ ಕಾಂಗ್ರೆಸ್ ತಡೆ ಹಿಡಿಯುವ ಸಾಧ್ಯತೆ ಇದೆ ವರದಿ ತಿಳಿಸಿತು. ಭಯೋತ್ಪಾದಕರ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ 450 ಮಿಲಿಯನ್ ಡಾಲರ್ ನೆರವು ನೀಡಲು ಹಿಂದೆ ಅಮೆರಿಕ ಕಾಂಗ್ರೆಸ್ ಒಪ್ಪಿಗೆ ಕೊಟ್ಟಿತ್ತು. ಆದರೆ ಪಾಕಿಸ್ತಾನ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿಲ್ಲ ಎನ್ನುವ ಕಾರಣಕ್ಕೆ ಅಮೆರಿಕ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು, ನೆರವು ತಡೆಹಿಡಿಯುವ ಬಗ್ಗೆ ಯೋಚಿಸುತ್ತಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಹಕ್ಕಾನಿ ಭಯೋತ್ಪಾಕ ನೆಟ್ವರ್ಕ್ ನಾಶ ಪಡಿಸಲು ಅಮೆರಿಕವು ನೆರವು ನೀಡುತ್ತಿದೆ. ಆದರೆ ಪಾಕ್ ಸಮರ್ಪಕವಾಗಿ ತನ್ನ ಕೆಲಸ ನಿರ್ವಹಿಸದೇ ಇರುವುದು, ಭಯೋತ್ಪಾಕದರನ್ನು ಮಟ್ಟ ಹಾಕಲು ವಿಫಲವಾಗಿರುವುದು ಬೆಳವಣಿಗೆಗೆ ಕಾರಣವಾಯಿತು. ಭಯೋತ್ಪಾದನೆಯನ್ನು ಸಮರ್ಥವಾಗಿ ನಿಯಂತ್ರಿಸಲಾಗಿದೆ ಎಂದು ಪ್ರಮಾಣ ಪತ್ರ ನೀಡುವವರೆಗೆ ಹೆಚ್ಚಿನ ನೆರವು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಮೆರಿಕದ ಹೌಸ್ ಆರ್ಮಡ್ ಸರ್ವೀಸಸ್ ಕಮಿಟಿ ನಿರ್ಣಯ ತೆಗೆದುಕೊಂಡಿತು. ಕಮಿಟಿಯ ನಿರ್ಣಯಕ್ಕೆ ವಿರುದ್ಧವಾಗಿ ಅಮೆರಿಕ ಸರ್ಕಾರ ಪಾಕ್ಗೆ ನೆರವು ನೀಡಲು ಸಾಧ್ಯವಿಲ್ಲ. ಹಾಗಾಗಿ 2016 ಅಕ್ಟೋಬರ್ 1 ರಿಂದ 2017 ಡಿಸೆಂಬರ್ 31 ಅವಧಿಯಲ್ಲಿ ಬಿಡುಗಡೆಯಾಗಬೇಕಿದ್ದ 450 ಮಿಲಿಯನ್ ಡಾಲರ್ ನೆರವು ಪಾಕ್ಗೆ ಲಭಿಸುವುದು ಕಷ್ಟಕರ ಎಂದು ವರದಿ ತಿಳಿಸಿತು.

2016: ನಾಗಪುರ: ಇಲ್ಲಿಗೆ 60 ಕಿ.ಮೀ. ದೂರದ ಖರಾಂಡ್ಲಾ ಅಭಯಾರಣ್ಯ ಪ್ರದೇಶದಲ್ಲಿರುವ ಪೆಂಚ್ ಹುಲಿಧಾಮದಲ್ಲಿ ವಿದೇಶದಿಂದ ಹಾರಿಬಂದಅಪರೂಪದ ಬಾನಾಡಿ ಅತಿಥಿಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.ಎಲ್ಲಿಂದ ಬಂತು ಅತಿಥಿ ಎಂಬ ಅಚ್ಚರಿಗೂ ಉತ್ತರವಿದೆ. ಆಗ್ನೇಯ ಸೈಬೀರಿಯಾ ಮತ್ತು ಈಶಾನ್ಯ ಚೈನಾ ಭಾಗದ ಕಾಡುಗಳಲ್ಲಿ ವಾಸವಿರುವ ಪಕ್ಷಿ ಸಾವಿರಾರು ಕಿ.ಮೀ. ದೂರದಿಂದ ವಲಸೆ ಬಂದಿದೆ. ಬಾನಾಡಿಯ ಹೆಸರು ಅಮೂರ್ ಗಿಡುಗ.ಪಾರಿವಾಳದ ದೇಹಾಕೃತಿ ಹೋಲುವ, ಅತಿ ಹೆಚ್ಚು ದೂರ ವಲಸೆ ಬರುವ ಪಕ್ಷಿ ಲೋಕದದ ವಿಶೇಷ ಹಕ್ಕಿ ಎಂದೇ ಖ್ಯಾತವಾದ ಗಿಡುಗ 22 ಸಾವಿರ ಕಿ.ಮೀ. ದೂರ ಕ್ರಮಿಸಿ ಬಂದಿರುವುದು ವಿಶೇಷ. ದಕ್ಷಿಣ ಆಫ್ರಿಕಾ, ಮಂಗೋಲಿಯಾ ದೇಶಗಳನ್ನು ಕ್ರಮಿಸಿ ಬಂದಿರುವ ಗಿಡುಗ ನಾಗಾಲ್ಯಾಂಡಿಗೆ ಹೋಗುವ ಇರಾದೆ ಹೊಂದಿದೆ. ಛಳಿಗಾಲ ಮುಗಿಯುವ ತನಕ ಅಲ್ಲಿದ್ದು, ಸಂತಾನೋತ್ಪತ್ತಿ ಮಾಡಿ ನಂತರ ಮೂಲ ಸ್ಥಾನಕ್ಕೆ ತೆರಳಲಿದೆ ಎಂದು ಪಕ್ಷಿ ವೀಕ್ಷಣಾ ತಜ್ಞರು ಹೇಳಿದರು. ಮೂರುವರೆ ದಿನಗಳ ಕಾಲ ಅರೇಬಿಯನ್ ಸಮುದ್ರ ಪ್ರದೇಶವನ್ನು ದಾಟಿ ಬಂದ ಖಗ ಕೆಲ ಸಮಯದ ವಿಶ್ರಾಂತಿಗಾಗಿ ಇಲ್ಲಿ ಕುಳಿತಿತ್ತು. ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದ ನನ್ನ ಕ್ಯಾಮರಾದಲ್ಲಿ ಸೆರೆ ಸಿಕ್ಕ ಕ್ಷಣಾರ್ಧದಲ್ಲಿ ತನ್ನ ಪಯಣವನ್ನು ಮುಂದುವರಿಸಿತು ಎಂದು ಸಂಭ್ರಮದಿಂದ ಹೇಳುತ್ತಾರೆ ಮುಂಬೈ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಶೋಧಕಿ ಪ್ರಫುಲ್ಲಾ ಸಾವರ್ಕರ್.

2009: 23 ದೇಶಗಳಿಗೆ ಹಂದಿಜ್ವರದ ಸೋಂಕು ವ್ಯಾಪಿಸಿ 31 ಜನರು ಸಾವನ್ನಪ್ಪಿದರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತು. ಪ್ರಯೋಗಾಲಯಕ್ಕೆ ಕಳುಹಿಸಿರುವ ರಕ್ತದ ಮಾದರಿಯಲ್ಲಿ ವಿವಿಧ ದೇಶಗಳ 1,893 ಜನರಿಗೆ ಎಚ್1ಎನ್1 ಸೋಂಕು ಇರುವುದು ಪತ್ತೆಯಾಯಿತು. ಮೆಕ್ಸಿಕೋದಲ್ಲಿ 942 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಯಿತು. ಇವರಲ್ಲಿ 29 ಜನರು ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿತು.

2009: ಅಮೆರಿಕದ ಟೆಕ್ಸಾಸ್ ನಿವಾಸಿ 33 ವರ್ಷದ ಶಿಕ್ಷಕಿ ಜೂಡಿ ಟ್ರುನೆಲ್ ವಿಶ್ವದಾದ್ಯಂತ ಹರಡಿದ ಹಾಗೂ ಭಾರಿ ಭೀತಿ ಹುಟ್ಟಿಸಿದ ಹಂದಿಜ್ವರಕ್ಕೆ ಬಲಿಯಾದ ಮೊದಲ ಅಮೆರಿಕದ ಮಹಿಳೆ ಎನ್ನಲಾಯಿತು. ಟೆಕ್ಸಾಸ್‌ನ ಆರೋಗ್ಯ ಅಧಿಕಾರಿಗಳು ಈದಿನ ಈ ವಿಷಯವನ್ನು ದೃಢಪಡಿಸಿದರು.

2009: ಈಸ್ಟ್ರೋ ಜೆನ್ ಒಂದು ಲೈಂಗಿಕ ಚೋದಕ (ಹಾರ್ಮೋನ್) ಅಷ್ಟೇ ಅಲ್ಲ; ಶ್ರವಣ ನಿಯಂತ್ರಣ ಸೇರಿದಂತೆ ಹಲವು ಇನ್ನಿತರ ಕಾರ್ಯಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ವಾಷಿಂಗ್ಟನ್‌ನಲ್ಲಿ ಪ್ರತಿಪಾದಿಸಿದರು. ಈಸ್ಟ್ರೋಜೆನ್ ವಹಿಸುವ ಪಾತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಶ್ರವಣ ದೋಷ ಸೇರಿದಂತೆ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಹೊಸ ಮಾರ್ಗಗಳೇ ತೆರೆದುಕೊಳ್ಳಲಿವೆ ಎಂದೂ ವಿಜ್ಞಾನಿಗಳು ಹೇಳಿದರು. 'ಮಿದುಳು ಶ್ರವಣ ಮಾಹಿತಿಯನ್ನು ಸ್ವೀಕರಿಸಿ- ಸಂಸ್ಕರಿಸುವಲ್ಲಿ ಈಸ್ಟ್ರೋ ಜೆನ್ ಮಹತ್ವದ ಪಾತ್ರ ವಹಿಸುತ್ತದೆಂಬುದನ್ನು ನಾವು ಸಾಬೀತು ಮಾಡುತ್ತೇವೆ. ಈವರೆಗಿನ ಯಾವ ಅಧ್ಯಯನವೂ ಈ ಅಂಶವನ್ನು ಗುರುತಿಸಿರಲಿಲ್ಲ' ಎಂದು ರೊಚೆಸ್ಟರ್ ವಿ.ವಿ.ಯ ಸಹಾಯಕ ಪ್ರೊಫೆಸರ್ ರ್ಯಾಫೆಲ್ ಪಿನಾಡ್ ಹೇಳಿದರು. ಮಿಲಿ ಸೆಕೆಂಡಿನೊಳಗೆ ಶ್ರವಣ ಸಂಕೇತಗಳನ್ನು ಸಂಸ್ಕರಿಸಲು ನೆರವಾಗುವ ಈಸ್ಟ್ರೋಜೆನ್ ಹೊಸ ವಿಷಯಗಳ ಕಲಿಕೆ ಮತ್ತು ನೆನಪು ರೂಪುಗೊಳ್ಳುವಲ್ಲೂ ಮುಖ್ಯಪಾತ್ರ ವಹಿಸುತ್ತದೆ. ಪುರುಷರು ಮತ್ತು ಮಹಿಳೆಯರ ಸಂವೇದನಾ ವ್ಯವಸ್ಥೆ ಚುರುಕಾಗಿರಲು ಈ ಚೋದಕ ಸೂಕ್ತ ಪ್ರಮಾಣದಲ್ಲಿರಬೇಕು' ಎಂದು ರಾಫೆಲ್ ಹೇಳಿದರು. ನರ ವಿಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕದಲ್ಲಿ ಈ ಸಂಶೋಧನೆ ಕುರಿತು ಸವಿಸ್ತಾರವಾಗಿ ಲೇಖನ ಪ್ರಕಟಗೊಂಡಿತು.

2009: ಸ್ವಾತ್ ಕಣಿವೆಯಲ್ಲಿ ಪಾಕಿಸ್ಥಾನ ಸೇನಾಪಡೆಗಳು ತಾಲಿಬಾನ್ ಉಗ್ರರನ್ನು ಗುರಿಯಾಗಿಸಿ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 100 ಜನರು ಬಲಿಯಾದರು. ಇವರಲ್ಲಿ 60 ತಾಲಿಬಾನ್ ಉಗ್ರರು ಹಾಗೂ 35 ನಾಗರಿಕರು ಎಂದು ಸೇನಾ ಅಧಿಕಾರಿಗಳು ತಿಳಿಸಿದರು. ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾವಿರಾರು ನಾಗರಿಕರು ಸ್ವಾತ್ ಜಿಲ್ಲೆಯಿಂದ ಪಲಾಯನಗೈದರು.

2009: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ತಂದೆ ವೈ.ಎಸ್. ರಾಜರೆಡ್ಡಿ ಅವರ ಹತ್ಯೆಯ ಸಂಬಂಧ ರಾಜ್ಯದ ಹೈಕೋರ್ಟ್ ಹನ್ನೊಂದು ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಈ ಎಲ್ಲ ಆರೋಪಿಗಳು ಪ್ರಮುಖ ವಿರೋಧ ಪಕ್ಷ ತೆಲಗು ದೇಶಂ ಕಾರ್ಯಕರ್ತರು. 2006ರ ಸೆ.29ರಂದು ಹೈಕೋರ್ಟ್ ಇವರಿಗೆ ಶಿಕ್ಷೆ ವಿಧಿಸಿತ್ತು. ಪರ್ಲಾ ಸೋಮಶೇಖರ ರೆಡ್ಡಿ, ಪರ್ಲಾ ಶೇಷ ರೆಡ್ಡಿ, ಪರ್ಲಾ ರಾಮಾಂಜನೇಯ ರೆಡ್ಡಿ, ಪರ್ಲಾ ರಾಮಕೃಷ್ಣ ರೆಡ್ಡಿ, ಅಣ್ಣಾ ರೆಡ್ಡಿ ಸಾಂಬಶಿವ ರೆಡ್ಡಿ, ಅಣ್ಣಾ ರೆಡ್ಡಿ ಶ್ರೀನಿವಾಸ ರೆಡ್ಡಿ, ಅಣ್ಣಾ ರೆಡ್ಡಿ ದಾಸಿರೆಡ್ಡಿಗಾರಿ ಲಕ್ಷ್ಮಿರೆಡ್ಡಿ, ಪಲ್ಲೆ ವೆಂಕಟರಾಮಿ ರೆಡ್ಡಿ, ವಡ್ಡರಪು ಓಬಯ್ಯ, ರಾಗಿಪಿಂಡಿ ಸುಧಾಕರ ರೆಡ್ಡಿ ಮತ್ತು ಪೋರೆಡ್ಡಿ ವಿಶ್ವನಾಥ ರೆಡ್ಡಿ ಆರೋಪಿಗಳು. 1998ರ ಮೇ 23ರಲ್ಲಿ ತಮ್ಮ ತೋಟದ ಮನೆಯಿಂದ ಕಾರಿನಲ್ಲಿ ಪುಲಿವೆಂದುಲಕ್ಕೆ ಹಿಂತಿರುಗುತ್ತಿದ್ದಾಗ 75 ವರ್ಷದ ರಾಜ ರೆಡ್ಡಿ ಅವರನ್ನು ಬಾಂಬ್ ದಾಳಿಯಲ್ಲಿ ತವರೂರಾದ ಕಡಪ ಜಿಲ್ಲೆಯಲ್ಲಿ ಕೊಲ್ಲಲಾಗಿತ್ತು.

2009: 'ಪ್ರಜಾವಾಣಿ'ಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಜಿ.ಎನ್.ರಂಗನಾಥ್ ರಾವ್ ಅವರನ್ನು 2009ನೇ ಸಾಲಿನ ಖಾದ್ರಿ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2008: ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ನಾಟಕೀಯ ದೃಶ್ಯಗಳು ಮತ್ತು ಸಮಾಜವಾದಿ ಪಕ್ಷ ಸದಸ್ಯರ ಭಾರಿ ಪ್ರತಿಭಟನೆಯ ಮಧ್ಯೆ ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಮಸೂದೆಯು ಸಂಸತ್ತು ಹಾಗೂ ರಾಜ್ಯ ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿಯನ್ನು ಕಲ್ಪಿಸಿದೆ. ಸಚಿವ ಸಂಪುಟವು ಹಿಂದಿನ ದಿನ ರಾತ್ರಿ ಒಪ್ಪಿಗೆ ಸಂವಿಧಾನ (108ನೇ ತಿದ್ದುಪಡಿ) ಮಸೂದೆ 2008ಕ್ಕೆ ಒಪ್ಪಿಗೆ ನೀಡಿತ್ತು. ಮಹಿಳಾ ಮೀಸಲು ಮಸೂದೆ ಮಂಡಿಸಿದ್ದನ್ನು ಕಾಂಗ್ರೆಸ್, ಎಡಪಕ್ಷಗಳು ಹಾಗೂ ವಿರೋಧ ಪಕ್ಷವಾದ ಬಿಜೆಪಿ ಸ್ವಾಗತಿಸಿದವು. ಆದರೆ, ಸಮಾಜವಾದಿ ಪಕ್ಷ (ಎಸ್ಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹಾಗೂ ಯುಪಿಎ ಸರ್ಕಾರದ ಭಾಗವಾಗಿರುವ ಆರ್ಜೆಡಿ ಮಸೂದೆಯನ್ನು ಈಗಿರುವ ಸ್ವರೂಪದಲ್ಲೇ ಅಂಗೀಕರಿಸುವುದನ್ನು ವಿರೋಧಿಸಿದವು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಕಲ್ಪಿಸುವ ಮಹಿಳಾ ಮೀಸಲು ಮಸೂದೆಯ ಹಾದಿ ಬಹು ಏಳುಬೀಳಿನದ್ದು. 12 ವರ್ಷಗಳ ಹಿಂದೆಯೇ ಮಸೂದೆಯ ಕರಡು ಸಿದ್ಧವಾಗಿದ್ದರೂ, ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಅಂಗೀಕಾರ ಪಡೆಯಲು ಈ ಹಿಂದೆ ಮೂರು ಸರ್ಕಾರಗಳು ನಡೆಸಿದ್ದ ಯತ್ನಗಳು ವಿಫಲವಾಗಿದ್ದವು. ಮಸೂದೆ ಕುರಿತಾಗಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡಿಸಲು ಈ ಸರ್ಕಾರಗಳು ನಡೆಸಿದ ಕಸರತ್ತುಗಳು ವ್ಯರ್ಥವಾದವು. 12 ವರ್ಷಗಳ ಹಿಂದೆ 1996ರ ಸೆಪ್ಟೆಂಬರಿನಲ್ಲಿ ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದಾಗ 81ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆನಂತರ ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಮುಂದೆ ಇಡಲಾಯಿತು. 11ನೇ ಲೋಕಸಭೆ ವಿಸರ್ಜನೆಯಾದ ಕಾರಣ ಮಸೂದೆ ರದ್ದಾಯಿತು. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಕಲ್ಪಿಸಲು 84ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. 12ನೇ ಲೋಕಸಭೆ ವಿಸರ್ಜನೆಯಾದುದುರಿಂದ ಆ ಬಾರಿಯೂ ಮಸೂದೆ ರದ್ದಾಯಿತು. 1999ರ ಡಿಸೆಂಬರ್ 23ರಂದು ಮತ್ತೊಮ್ಮೆ ಲೋಕಸಭೆಯಲ್ಲಿ ಮಸೂದೆ ಮಂಡಿಸಲಾಯಿತು. ಆದರೆ, ವಿವಿಧ ಪಕ್ಷಗಳ ನಡುವೆ ಒಮ್ಮತಾಭಿಪ್ರಾಯ ಮೂಡದೇ ಮಸೂದೆ ಅಂಗೀಕಾರವಾಗಲಿಲ್ಲ. ಆದರೆ, ಮಸೂದೆ ರದ್ದಾಗದಂತೆ ಇದೇ ಮೊದಲ ಬಾರಿ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.

2008: ರಾಹುಲ್ ಗಾಂಧಿ ಸುತ್ತ `ದುಷ್ಟಕೂಟ' ಸುತ್ತುವರೆದಿದೆ ಎಂದು ಆಪಾದಿಸಿ ಹಿರಿಯ ಕಾಂಗ್ರೆಸ್ ನಾಯಕ ಅಖಿಲೇಶ್ ದಾಸ್ ಅವರು ಪಕ್ಷ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಭಾರಿ ಹೊಡೆತವೊಂದನ್ನು ಅನುಭವಿಸಿತು. ಅಖಿಲೇಶ್ ದಾಸ್ ಅವರನ್ನು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ರಾಜ್ಯಸಭೆಯಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ದಾಸ್ ಅವರು ರಾಜ್ಯಸಭೆಯಲ್ಲಿ ಸದನ ಸಮಾವೇಶಗೊಳ್ಳುತಿದ್ದಂತೆಯೇ ನಾಟಕೀಯವಾಗಿ ಸಭಾಪತಿ ಹಮೀದ್ ಅನ್ಸಾರಿ ಅವರತ್ತ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ, `ನನಗೆ ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಾಸ ಇಲ್ಲ' ಎಂದು ಸದನದಲ್ಲಿ ಹೇಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು.

2008: ಬಾಂಬೆ ಹೈಕೋರ್ಟಿನಲ್ಲಿ ಈದಿನ ಅಪರೂಪದ ಅತಿಥಿ `ಕೋತಿ' ಪ್ರತ್ಯಕ್ಷವಾಗಿ ನ್ಯಾಯಮೂರ್ತಿಗಳಿಂದ ಹಿಡಿದು ಸಿಬ್ಬಂದಿವರೆಗೆ ಎಲ್ಲರೂ ಬೇಸ್ತು ಬಿದ್ದರು. ಮಧ್ಯಾಹ್ನ 1.20ರ ವೇಳೆಯಲ್ಲಿ ಈ ಕೋತಿ ನ್ಯಾಯಾಲಯದ ಅತ್ಯಂತ ಮೇಲಿನ ಮಹಡಿಯ ಛಾವಣಿಯ ಒಳಭಾಗದಲ್ಲಿ ತುತ್ತ ತುದಿಯಲ್ಲಿ ಆರಾಮವಾಗಿ ಆಸೀನವಾಗಿತ್ತು. ಈ ಮಹಡಿಯಲ್ಲಿ ನ್ಯಾಯಮೂರ್ತಿಗಳ ಕೊಠಡಿಗಳಿದ್ದವು. ಸಿಬ್ಬಂದಿಗೆ ಈ ಕೋತಿಯನ್ನು ಅಲ್ಲಿಂದ ಎಬ್ಬಿಸಿ ಓಡಿಸಲು ಸಾಧ್ಯವಾಗದೇ ಹೋದಾಗ, ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತು. ಎರಡು ಗಂಟೆಗಳ ಸತತ ಯತ್ನದ ಬಳಿಕ ಮಂಗವನ್ನು ಹಿಡಿದು ದೂರಕ್ಕೆ ಒಯ್ಯಲು ಸಾಧ್ಯವಾಯಿತು. ಕೋತಿ ಹೇಗೆ ಕಟ್ಟಡದ ಒಳಭಾಗ ಪ್ರವೇಶಿಸಿತು ಎಂದು ಪತ್ತೆ ಹಚ್ಚಲು ಅಗ್ನಿಶಾಮಕ ಅಧಿಕಾರಿಗಳಿಗೂ ಸಾಧ್ಯವಾಗಲಿಲ್ಲ. ಹೈಕೋರ್ಟಿನ ಸುತ್ತ ದೊಡ್ಡ ಮರಗಳಿದ್ದರೂ ಯಾವುದೇ ಮರದ ಕೊಂಬೆ ಕಟ್ಟಡದ ಬಳಿಗೆ ಚಾಚಿಲ್ಲ, ಹಾಗಿರುವಾಗ ಕೋತಿ ಹೇಗೆ ಒಳಗೆ ಬಂತು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯಿತು.

2008: ಭಾರತೀಯ ಮಧ್ಯಮ ವರ್ಗದ ಅತ್ಯುತ್ತಮ ಆಹಾರ ಸೇವನೆಯೂ ಜಾಗತಿಕ ಆಹಾರ ಸಮಸ್ಯೆಯ ಕಾರಣಗಳಲ್ಲಿ ಒಂದು ಎಂದು ಜಾರ್ಜ್ ಬುಷ್ ನೀಡಿದ ಹೇಳಿಕೆಯ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಆಘಾತಕಾರಿ ಹೇಳಿಕೆಯೊಂದನ್ನು ನೀಡಿ, `ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ದಿನಗಳಲ್ಲಿ ಭಾರತವು ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ' ಎಂದು ಹೇಳಿತು. ಹವಾಮಾನ ವೈಪರೀತ್ಯವು ಆಹಾರ ಬೆಳೆಗಳ ಉತ್ಪಾದನೆಯ ಮೇಲೆ ತೀವ್ರವಾದ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿರುವ ಡಬ್ಲ್ಯು ಎಚ್ ಒ ವರದಿಯು `ಇದರಿಂದಾಗಿ ಭಾರತದಲ್ಲಿ ಪೌಷ್ಠಿಕಾಂಶ ಭರಿತ ಆಹಾರದ ಕೊರತೆ ಹೆಚ್ಚಾಗಲಿದೆ' ಎಂದು ಹೇಳಿತು. ಇದೇ ಕಾರಣದಿಂದ ಗಂಗಾನದಿಯಲ್ಲಿ ನೀರಿನ ಕೊರತೆಯೂ ಉಂಟಾಗಲಿದೆ. ಇದರಿಂದಾಗಿ ಗಂಗಾ ತಪ್ಪಲು ಪ್ರದೇಶದಲ್ಲಿ ತೇವಾಂಶ ಕಡಿಮೆಯಾಗಿ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದೂ ಈ ವರದಿ ಹೇಳಿತು.

2008: ವಿನಾಶಕಾರಿ `ನರ್ಗಿಸ್' ಚಂಡಮಾರುತದಿಂದ ತತ್ತರಿಸಿದ ಮ್ಯಾನ್ಮಾರಿನಲ್ಲಿ (ಬರ್ಮಾ) ಈದಿನ ಸಂಜೆ ಹೊತ್ತಿಗೆ ಸಾವಿನ ಸಂಖ್ಯೆ 25 ಸಾವಿರ ಮೀರಿತು. ಸುನಾಮಿ ನಂತರ ದಕ್ಷಿಣ ಏಷ್ಯಾ ಭಾಗ ಕಂಡ ಅತ್ಯಂತ ಭೀಕರ ಪ್ರಕೃತಿ ವಿಕೋಪ ಇದು. ಸುನಾಮಿಯ ಸಂದರ್ಭದಲ್ಲೂ ವಿದೇಶಿ ಸಹಾಯಕ್ಕೆ ಕೈಚಾಚದ ದೇಶದ ಸೇನಾ ಆಡಳಿತ ಈ ಬಾರಿ ಅಂತಾರಾಷ್ಟ್ರೀಯ ಸಹಾಯ ಯಾಚಿಸಿತು. ಭಾರತ ಸಹಿತ ಹಲವು ದೇಶಗಳಿಂದ ಪರಿಹಾರ ಸಾಮಗ್ರಿಗಳು ಹರಿದುಬರತೊಡಗಿದವು. ಮ್ಯಾನ್ಮಾರಿನಲ್ಲಿ ಜನಸಂಖ್ಯೆ ಹೆಚ್ಚಿ ಕಾಂಡ್ಲಾ ಕಾಡುಗಳನ್ನು ಕಡಿದು ಅಲ್ಲಿ ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿ ತಲೆ ಎತ್ತಿದ್ದು, ಚಂಡಮಾರುತದಿಂದ ಸಂರಕ್ಷಣೆ ನೀಡುವ ನೈಸರ್ಗಿಕ ಕಾಂಡ್ಲಾ ಕಾಡುಗಳ ನಾಶದ ಪರಿಣಾಮವಾಗಿ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ ಎಂದು 'ಆಸಿಯಾನ್' ಪ್ರಾದೇಶಿಕ ವಿಭಾಗವು ಸಿಂಗಪುರದಲ್ಲಿ ಅಭಿಪ್ರಾಯಪಟ್ಟಿತು.

2008: ಪೌರಾಣಿಕ ಮಹತ್ವದ ರಾಮಸೇತುವಿಗೆ ಸಂವಿಧಾನದ 25ನೇ ವಿಧಿ ಅಡಿ ರಕ್ಷಣೆ ದೊರಕುತ್ತದೆ ಎಂದು ಸಂವಿಧಾನ ತಜ್ಞ ಹಾಗೂ ಹಿರಿಯ ವಕೀಲ ಸೋಲಿ ಸೊರಾಬ್ಜಿ ಅವರು ಸುಪ್ರೀಂಕೋರ್ಟ್ ಮುಂದೆ ಹೇಳಿದರು. ಲಕ್ಷಾಂತರ ಜನರಿಂದ ಪೂಜಿಸಲ್ಪಡುವ ನಿರ್ಮಾಣಗಳಿಗೆ ಸಂವಿಧಾನದ 25ನೇ ವಿಧಿ ಅಡಿ ರಕ್ಷಣೆ ಕಲ್ಪಿಸಲಾಗಿದೆ. ರಾಮನಿಂದ ನಿರ್ಮಾಣವಾಗಿದೆ ಎಂದು ನಂಬಲಾದ ಈ ಸೇತುವೆಯನ್ನು ಪೂಜಿಸುವ ಸುದೀರ್ಘ ಪರಂಪರೆ ದೇಶದಲ್ಲಿ ಇದೆ ಎಂದು ಸೊರಾಬ್ಜಿ ಅವರು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿ ಆರ್. ವಿ. ರವೀಂದ್ರನ್ ಹಾಗೂ ಜೆ. ಎಂ. ಪಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ಪ್ರತಿಪಾದಿಸಿದರು. ರಾಮಸೇತುವಿಗೆ ಹಾನಿ ಮಾಡಿದಲ್ಲಿ ನಿರ್ದಿಷ್ಟ ಧರ್ಮದ ಜನರ ಭಾವನೆಗೆ ಸರ್ಕಾರ ಘಾಸಿ ಮಾಡಿದಂತೆ ಆಗುತ್ತದೆ. ಹಾಗಾಗಿ 2,087 ಕೋಟಿ ರೂಪಾಯಿ ವೆಚ್ಚದ ಸೇತುಸಮುದ್ರಂ ಯೋಜನೆಯನ್ನು ನಿಲ್ಲಿಸಲು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಸೊರಾಬ್ಜಿ ಮನವಿ ಮಾಡಿದರು. ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ರಾಮಸೇತು ಧ್ವಂಸಗೊಳಿಸುವುದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದ ಕೆಲವರ ಪರವಾಗಿ ಸೊರಾಬ್ಜಿ ವಾದಿಸಿದರು.

2007: ಜಗತ್ತಿನ ಅತಿದೊಡ್ಡ ಉಕ್ಕಿನ ಹಕ್ಕಿ ಸೂಪರ್ ಜಂಬೋ ಎ-380 ನವದೆಹಲಿಯಲ್ಲಿ ಭಾರತದ ನೆಲವನ್ನು ಸ್ಪರ್ಶಿಸಿತು. ಕಿಂಗ್ ಫಿಶರ್ ಏರ್ ಲೈನ್ಸಿನ ಎರಡನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಜಂಬೋ ಭಾರತದ ನೆಲಕ್ಕೆ ಬಂದಿಳಿಯಿತು. 80 ಅಡಿ ಉದ್ದದ ಈ ವಿಮಾನದಲ್ಲಿ 850 ಜನಕ್ಕೆ ಕೂರಲು ಸೌಲಭ್ಯಗಳಿವೆ. ಆದರೆ ಮೂರು ವರ್ಗಗಳಲ್ಲಿ 550 ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿರಂತರವಾಗಿ 15,000 ಕಿ.ಮೀ. ದೂರವನ್ನು ಒಂದೇ ಸಲಕ್ಕೆ ಕ್ರಮಿಸಬಲ್ಲುದು. 300 ದಶಲಕ್ಷ ಡಾಲರ್ ಬೆಲೆಯ ಈ ಸೂಪರ್ ಜಂಬೋ ವಿಮಾನಕ್ಕೆ ರೋಲ್ಸ್ ರಾಯ್ಸ್ ಕಂಪೆನಿ ಎಂಜಿನ್ ಸಿದ್ಧ ಪಡಿಸಿದೆ. ಕಿಂಗ್ ಫಿಶರ್ ಸಂಸ್ಥೆಯು ಇಂತಹ ಐದು ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ.

2007: ಭಾರತದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ದುಬೈಯ ದೋಹಾದಲ್ಲಿ ತನ್ನ ಮೊತ್ತ ಮೊದಲ ಶಾಖೆಯನ್ನು ಆರಂಭಿಸಿತು.

2007: ಸೊಹ್ರಾಬ್ದುದೀನ್ ಷೇಕ್ ನನ್ನು ನಕಲಿ ಎನ್ಕೌಂಟರಿನಲ್ಲಿ ಕೊಂದ ಆರೋಪಕ್ಕೆ ಒಳಗಾಗಿ ಬಂಧಿತರಾದ 12 ದಿನಗಳ ಬಳಿಕ ಗುಜರಾತ್ ಸರ್ಕಾರವು ತನ್ನ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತು.

2007: ಸಂಗೀತ ವಿದುಷಿ, ಸಮಾಜ ಸೇವಕಿ ಚೊಕ್ಕಮ್ಮ ಎನ್. ಎನ್. ಅಯ್ಯಂಗಾರ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಪಿಟೀಲು ಚೌಡಯ್ಯ ಮತ್ತು ವಿದ್ವಾನ್ ದೇವೇಂದ್ರಪ್ಪ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದ ಚೊಕ್ಕಮ್ಮ ಅನೇಕ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಚೊಕ್ಕಮ್ಮ ಅವರು ಹಿರಿಯ ಅಧಿಕಾರಿ ದಿವಂಗತ ಎನ್. ನರಸಿಂಹ ಅಯ್ಯಂಗಾರ್ ಅವರ ಪತ್ನಿ.

2007: ಬಲಪಂಥೀಯ ಧುರೀಣ ನಿಕೋಲಸ್ ಸರ್ಕೋಜಿ ಅವರು ಪ್ರಾನ್ಸಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
2007: ಹರಿದ್ವಾರದ ನ್ಯಾಯಾಲಯವೊಂದರ ಆದೇಶದ ಅನುಸಾರ ಮುಂಬೈ ಪೊಲೀಸರು ವಿವಾದಾತ್ಮಕ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಅವರ ಆಸ್ತಿಪಾಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿದರು. ತಮ್ಮ ಕಲಾಕೃತಿಯಲ್ಲಿ ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆ ಎಂದು ದೂರಿ ಸಲ್ಲಿಸಲಾಗಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ಮೇಲಿಂದಮೇಲೆ ಸಮನ್ಸ್ ಕಳುಹಿಸಿದ್ದರೂ ಹುಸೇನ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು.

2007: ಚೀನಾದ ಉತ್ತರ ಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿ 20 ಮಂದಿ ಮೃತರಾದರು. ಜಗತ್ತಿನಲ್ಲೇ ಅತಿದೊಡ್ಡ ಗಣಿಗಾರಿಕೆ ಸಂಸ್ಥೆಯ ಪುಡೆಂಗ್ ಮೈನ್ ನಲ್ಲಿ ಈ ಸ್ಫೋಟ ಸಂಭವಿಸಿತು. ಈ ಸಂದರ್ಭದಲ್ಲಿ 125 ಕಾರ್ಮಿಕರಿದ್ದು, 95 ಮಂದಿ ಅಪಾಯದಿಂದ ಪಾರಾದರು.

2006: ಕನ್ನಡ ಚಲನಚಿತ್ರ ರಂಗಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ತಂದುಕೊಟ್ಟಿದ್ದ `ಸಂಸ್ಕಾರ' ಚಿತ್ರದ ನಿರ್ದೇಶಕ ಟಿ. ಪಟ್ಟಾಭಿರಾಮರೆಡ್ಡಿ (87) ಅವರು ದೀರ್ಘಕಾಲದ ಅನಾರೋಗ್ಯದಿಂದ ಈದಿನ ಬೆಳಗಿನ ಜಾವ 3.30ರ ವೇಳೆಗೆ ಮಲ್ಯ ಆಸ್ಪತೆಯಲ್ಲಿ ನಿಧನರಾದರು. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1919ರ ಫೆಬ್ರುವರಿ 2ರಂದು ಜನಿಸಿದ ಪಟ್ಟಾಭಿ `ಸಂಸ್ಕಾರ'ದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಸಮಾನಾಂತರ ಚಿತ್ರಗಳ ಹೊಸ ಯುಗಕ್ಕೆ ನಾಂದಿ ಹಾಡಿದವರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಅವರಿಗೆ ರಾಜ್ಯಸರ್ಕಾರ 2005ರಲ್ಲಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ `ಸಂಸ್ಕಾರ' ಗಿರೀಶ ಕಾರ್ನಾಡ್, ಪಿ. ಲಂಕೇಶ್ ಮತ್ತಿತರರಿಗೆ ಚಿತ್ರರಂಗ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ರೆಡ್ಡಿ ಅವರ ಪತ್ನಿ ಸ್ನೇಹಲತಾ ರೆಡ್ಡಿ ಅವರು `ಸಂಸ್ಕಾರ' ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದರು. `ಚಂಡಮಾರುತ', `ಶೃಂಗಾರಮಾಸ', `ದೇವರ ಕಾಡು' ಪಟ್ಟಾಭಿರಾಮರೆಡ್ಡಿ ನಿರ್ದೇಶಿಸಿದ ಇತರ ಕನ್ನಡ ಚಿತ್ರಗಳು.

2006: ಸಿಡಿಸಿದರೆ ದಾಳಿಕೋರನನ್ನು 40 ನಿಮಿಷ ಕಾಲ ನಿಶ್ಚೇತನಗೊಳಿಸುವ `ಒಲೆವೋ ಝ್ಯಾಪ್' ಎಂಬ ಸ್ವಯಂರಕ್ಷಣಾ ಸ್ಪ್ರೇಯನ್ನು ಸಂಸತ್ ಸದಸ್ಯ ಎಚ್.ಟಿ. ಸಾಂಗ್ಲಿಯಾನ ಬಿಡುಗಡೆ ಮಾಡಿದರು. ಕ್ಲಿಯರಾಕ್ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಈ ಸಾಧನವನ್ನು ತಯಾರಿಸಿದೆ.

2006: ಹನ್ನೆರಡು ವರ್ಷಗಳ ಬಳಿಕ ಹಾಸನ- ಮಂಗಳೂರು ರೈಲ್ವೇ ಮಾರ್ಗವನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಯಿತು. ರೈಲ್ವೆ ಹಳಿಯನ್ನು ಮೀಟರ್ ಗೇಜ್ ನಿಂದ ನ್ಯಾರೋ ಗೇಜಿಗೆ ಪರಿವರ್ತಿಸುವ ಸಲುವಾಗಿ 1994ರಲ್ಲಿ ಈ ರೈಲುಮಾರ್ಗದ ಸೇವೆಯನ್ನು ನಿಲ್ಲಿಸಲಾಗಿತ್ತು.

2006: ಸಿಂಗಪುರದ ನಿರ್ಣಾಯಕ ಸಂಸದೀಯ ಚುನಾವಣೆಯಲ್ಲಿ ಆಳುವ ಪೀಪಲ್ಸ್ ಆಕ್ಷನ್ ಪಾರ್ಟಿ(ಪಿಎಪಿ) 82 ಸ್ಥಾನಗಳನ್ನು ಗೆದ್ದು ಭಾರಿ ಬಹುಮತ ಗಳಿಸಿತು. ವಿರೋಧ ಪಕ್ಷಕ್ಕೆ 2 ಸ್ಥಾನಗಳು ಮಾತ್ರ ಲಭಿಸಿದವು.

1947: ಕಲಾವಿದ ಮಹಾದೇವ ಪಾಂಚಾಲ್ ಜನನ.

1946: ಖ್ಯಾತ ಭಾರತೀಯ ವಕೀಲ ಭುಲಾಭಾಯಿ ದೇಸಾಯಿ (1877-1946) ತಮ್ಮ 68ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ಮೃತರಾದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಭಾರತ ರಾಷ್ಟ್ರೀಯ ಸೇನೆಯ (ಐ ಎನ್ ಎ) ಅಧಿಕಾರಿಗಳನ್ನು ಬ್ರಿಟಿಷ್ ಸರ್ಕಾರ 1945ರಲ್ಲಿ ವಿಚಾರಣೆಗೆ ಗುರಿಪಡಿಸಿದಾಗ ಐ ಎನ್ ಎ ಅಧಿಕಾರಿಗಳ ಪರವಾಗಿ ವಾದಿಸುವ ಮೂಲಕ ದೇಸಾಯಿ ವ್ಯಾಪಕ ಪ್ರಸಿದ್ಧಿ ಪಡೆದರು.

1935: ಕಲಾವಿದ ರಾಮಚಂದ್ರಮೂರ್ತಿ ನವರತ್ನ ಜನನ.

1928: ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ಕೆ. ನಾಡಿಗ್ ಅವರು ಕೃಷ್ಣಸ್ವಾಮಿ ರಾವ್- ರಾಧಮ್ಮ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.

1923: ಕಲಾವಿದ ಚೆನ್ನಬಸವಯ್ಯ ಗುಬ್ಬಿ ಜನನ.

1861: ಮೋತಿಲಾಲ್ ನೆಹರೂ (1861-1931) ಜನ್ಮದಿನ. ಭಾರತದ ರಾಷ್ಟ್ರೀಯ ನಾಯಕ, ಸ್ವರಾಜ್ ಪಕ್ಷದ ಸಹ ಸಂಸ್ಥಾಪಕರಾದ ಇವರು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಂದೆ.

1856: ರಾಬರ್ಟ್ ಎಡ್ವಿನ್ ಪಿಯರೆ (1856-1920) ಹುಟ್ಟಿದ ದಿನ. ಅಮೆರಿಕದ ಸಂಶೋಧಕನಾದ ಈ ಭೂ ಶೋಧಕ 1909ರಲ್ಲಿ ಪ್ರಪ್ರಥಮ ಬಾರಿಗೆ ಉತ್ತರ ಧ್ರುವವನ್ನು ತಲುಪಿದ.

1542: ಫ್ರಾನ್ಸಿಸ್ ಝೇವಿಯರ್ ಮೊತ್ತ ಮೊದಲ ಕ್ರೈಸ್ತ ಪ್ರಚಾರಕನಾಗಿ ಗೋವಾಕ್ಕೆ ಆಗಮಿಸಿದ. ಆಧುನಿಕ ಕಾಲದ ಮಹಾನ್ ರೋಮನ್ ಕ್ಯಾಥೋಲಿಕ್ ಪ್ರಚಾರಕ ಎಂಬ ಹೆಗ್ಗಳಿಕೆ ಗಳಿಸಿರುವ ಈತ ಭಾರತ, ಮಲಯ ಹಾಗೂ ಜಪಾನಿನಲ್ಲಿ ಕ್ರೈಸಮತವನ್ನು ಪಸರಿಸಿದವರಲ್ಲಿ ಪ್ರಮುಖ ವ್ಯಕ್ತಿ.

No comments:

Post a Comment