ನಾನು ಮೆಚ್ಚಿದ ವಾಟ್ಸಪ್

Friday, March 30, 2018

ಇಂದಿನ ಇತಿಹಾಸ History Today ಮಾರ್ಚ್ 29

ಇಂದಿನ ಇತಿಹಾಸ History Today  ಮಾರ್ಚ್ 29

2018: ಲಕ್ನೋ: ಭಾರತದ ಸಂವಿಧಾನ ಶಿಲ್ಪಿ ಭೀಮರಾವ್ ಅಂಬೇಡ್ಕರ್ ಅವರ ಹೆಸರಿನ ಮಧ್ಯೆ ಇನ್ನು ಮುಂದೆ ಉತ್ತರ ಪ್ರದೇಶದಲ್ಲಿರಾಮಜಿ ಪದ ಸೇರ್ಪಡೆಯಾಗಲಿದೆ. ರಾಜ್ಯ ಸರ್ಕಾರವು ಹೊಸ ಮತ್ತು ಹಳೆಯ ಎಲ್ಲ ದಾಖಲೆಗಳಲ್ಲಿ ಅಂಬೇಡ್ಕರ್ ಅವರನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂಬುದಾಗಿಯೇ ಉಲ್ಲೇಖಿಸಬೇಕು ಎಂದು ಆದೇಶ ನೀಡಿತು.  ಹೆಸರಿನ ಬದಲಾವಣೆಯ ಸಲಹೆಯನ್ನು ಉತ್ತರ ಪ್ರದೇಶದ ರಾಜ್ಯಪಾಲ ರಾಮ ನಾಯ್ಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಅಧಿಕೃತವಾಗಿ ಬಳಸಲಾಗುವರಾಮಜಿ ಪದವು ಬಿ.ಆರ್. ಅಂಬೇಡ್ಕರ್ ಅವರ ತಂದೆಯ ಹೆಸರು. ಅಂಬೇಡ್ಕರ್ ಅವರ ಹೆಸರಿನ ತಪ್ಪನ್ನು ಸರಿಪಡಿಸುವಂತೆ ಕಳೆದ ಒಂದು ವರ್ಷದಿಂದ ಪ್ರಚಾರ ಅಭಿಯಾನ ನಿರತರಾಗಿರುವ ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಡಾ. ಅಂಬೇಡ್ಕರ್ ಅವರು ಸ್ವತಃ ತಮ್ಮ ಪೂರ್ಣ ಹೆಸರನ್ನು ಸಹಿಯಾಗಿ ಬಳಸುತ್ತಿದ್ದರು ಎಂದು ತಿಳಿಸಿದ್ದರು ಎನ್ನಲಾಗಿತ್ತು.  ಹಿಂದಿಯಲ್ಲಿ ಬಳಸಲಾಗುತ್ತಿರುವ ಅಂಬೇಡ್ಕರ್ ಅವರ ಹೆಸರಿನ ಉಚ್ಚಾರವನ್ನು (ಕಾಗುಣಿತವನ್ನು) ತಿದ್ದಬೇಕು ಎಂದು ಅವರು ಸಲಹೆ ಮಾಡಿದ್ದರು.  ಉತ್ತರ ಪ್ರದೇಶ ಸರ್ಕಾರವು ತನ್ನ ಆದೇಶದಲ್ಲಿ ಅಂಬೇಡ್ಕರ್ ಅವರು ಸಂವಿಧಾನದ ಪುಟಗಳಲ್ಲಿ ತಮ್ಮ ಸಹಿಯನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂಬುದಾಗಿಯೇ ನಮೂದಿಸಿರುವುದಾಗಿ ರಾಮ ನಾಯ್ಕ್ ಅವರು ಮಾಡಿರುವ ವಾದವನ್ನು ಕೂಡಾ ಉಲ್ಲೇಖಿಸಿತು.  ‘ನಾನು ಒಬ್ಬ ಮರಾಠಿ, ಹಾಗೆಯೇ ಅವರು ಕೂಡಾ. ಹಿಂದಿ ಮಾತನಾಡುವ ರಾಜ್ಯಗಳು ಅವರ ಹೆಸರನ್ನು ತಪ್ಪಾಗಿ ಬರೆಯುತ್ತಿವೆ. ಅತ್ಯಂತ ಮುಖ್ಯವಾಗಿ ಅವರ ಹೆಸರನ್ನು ಭೀಮ ಮತ್ತು ರಾವ್ ಎಂದು ಒಡೆದು ಎರಡು ಪದಗಳಾಗಿ ಬರೆಯುತ್ತಿವೆ. ಏನಿದ್ದರೂ ಸರಿಯಾಗಿ ಬರೆಯುವ ವಿಧಾನಭೀಮರಾವ್ ಎಂದು ರಾಮ ನಾಯ್ಕ್ ಹೇಳಿದ್ದರು.  ಕೇವಲ ತಾನು ದಲಿತಪರ ಎಂಬುದಾಗಿ ತೋರಿಸಿಕೊಳ್ಳುವ ಸಲುವಾಗಿ ಆದರ್ಶ ವ್ಯಕ್ತಿಯ ಹೆಸರನ್ನು ಎಳೆದು ತರಲಾಗಿದೆ ಎಂದು ವಿರೋಧಿ ಸಮಾಜವಾದಿ ಪಕ್ಷವು ಯೋಗಿ ಸರ್ಕಾರವನ್ನು ಇದಕ್ಕಾಗಿ ಟೀಕಿಸಿತು.   ‘ಬಿಜೆಪಿ ಮತ್ತು ಯೋಗಿ ಸರ್ಕಾರಕ್ಕೆ ಸಮಾಜವಾದಿ-ಮಾಯಾವತಿ ಮೈತ್ರಿಕೂಟದ ಬಗ್ಗೆ ಹೆದರಿಕೆ ಹುಟ್ಟಿದೆ. ತಮ್ಮ ನೈಜ ವೈಫಲ್ಯದ ಅರಿವಾಗುತ್ತಿದ್ದಂತೆಯೇ ಯಾವಾಗಲೂ ಬಿಜೆಪಿ ಹೊಸ ವಿಷಯಗಳನ್ನು ಮುಂಚೂಣಿಗೆ ತರುತ್ತದೆ ಎಂದು ಪಕ್ಷದ ಸುನಿಲ್ ಸಜನ್ ಹೇಳಿದರು.  ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಇಲ್ಲ. ಇದರ ಹಿಂದೆ ಯಾವುದೇ ಕೀಳು ಉದ್ದೇಶವನ್ನು ಕಾಣಬಾರದು ಎಂದು ಉತ್ತರಪ್ರದೇಶ ಸಂಪುಟ ಸಚಿವ ಸ್ವಾಮಿ ಪ್ರಸಾದ್ ಮೌರ್ ಹೇಳಿದರು.

2018: ಶ್ರೀಹರಿಕೋಟ: ಸಶಸ್ತ್ರ ಪಡೆಗಳು ಮತ್ತು ಚಂದ್ರಯಾನ ಸಾಹಸಕ್ಕೆ ಭೀಮ ಬಲ ನೀಡಲಿರುವ ಭಾರತದ ಜಿಸ್ಯಾಟ್- ಸಂಪರ್ಕ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಈದಿನ  ಸಂಜೆ ಶ್ರೀಹರಿಕೋಟಾದ ಸತೀಶ ಧವನ್ ವ್ಯೋಮ ನಿಲ್ದಾಣದಿಂದ ಯಶಸ್ವಿಯಾಗಿ ಉಡಾಯಿಸಿತು.  ಉಪಗ್ರಹವನ್ನು ಭೂ ಸ್ಥಿರ ಉಪಗ್ರಹ ಉಡಾವಣಾ ವಾಹನವು (ಜಿಎಸ್ ಎಲ್ ವಿ-ಎಫ್ ) ಅಂದಾಜು ೩೫,೯೦೦ ಕಿ.ಮೀ. ಎತ್ತರದಲ್ಲಿನ ಭೂ ಸ್ಥಿರ ವರ್ಗಾವಣೆ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ ಎಂದು ಇಸ್ರೋ ತಿಳಿಸಿತು.  ೨,೧೪೦ ಕಿ,ಗ್ರಾಂ ತೂಕದ, ಸುಮಾರು ೨೭೦ ಕೋಟಿ ರೂಪಾಯಿ ವೆಚ್ಚದ ಉಪಗ್ರಹವು ನಿರ್ದಿಷ್ಟವಾಗಿ ರಾಷ್ಟ್ರದ ಮೂಲೆ ಮೂಲೆಗಳಲ್ಲಿ ಇರುವ ಭದ್ರತಾ ಪಡೆಗಳಿಗೆ ಕೈಗಳಲ್ಲೇ ಹಿಡಿಯಬಲ್ಲ ಸಾಧನಗಳಿಗೆ ಸಂಕೇತಗಳನ್ನ ಕಳುಹಿಸಲು ಅತ್ಯಂತ ಹೆಚ್ಚು ಉಪಯುಕ್ತವಾಗಲಿವೆ. ರಾಕೆಟ್ ಹೊಸ ಎಂಜಿನನ್ನು ಕೂಡಾ ಹೊಂದಿದ್ದು ಇದನ್ನು ತನ್ನ ಚಂದ್ರಯಾನ ಯೋಜನೆಯಲ್ಲಿ ಬಳಸಬಹುದು ಎಂದು ಇಸ್ರೋ ಹಾರೈಸಿತು. ಜಿಸ್ಯಾಟ್ -೬ಎ ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ -ಎಫ್೦೮ ರಾಕೆಟ್ ಸಂಜೆ .೫೬ ಗಂಟೆಗೆ ಸರಿಯಾಗಿ ಎರಡನೇ ಲಾಂಚ್ ಪ್ಯಾಡಿನಿಂದ ಬೆಂಕಿ ಉಗುಳುತ್ತಾ ಗಗನಕ್ಕೆ ಏರಿತು. ಧೂಮಬಾಲವನ್ನು ಹಿಂದಕ್ಕೆ ಬಿಡುತ್ತಾ ಭಾರಿ ಘರ್ಜನೆಯೊಂದಿಗೆ ೪೯. ಮೀಟರ್ ಎತ್ತರದ ರಾಕೆಟ್ ನಭಕ್ಕೆ ಚಿಮ್ಮಿತು.  ಜಿಸ್ಯಾಟ್-೬ಎ ಉಪಗ್ರಹವು ೨೦೧೫ರಲ್ಲಿ ಉಡಾವಣೆ ಮಾಡಲಾಗಿದ್ದ ಜಿಸ್ಯಾಟ್ - ರಂತಹುದೇ ಉಪಗ್ರಹವಾಗಿದ್ದು ಅತ್ಯುನ್ನತ ಶಕ್ತಿಯ ಎಸ್ ಬ್ಯಾಂಡ್ ಸಂಪರ್ಕ ಉಪಗ್ರಹವನ್ನು ದೇಶೀಯವಾಗಿಯೇ ನಿರ್ಮಿಸಲಾಗಿದೆ. ಇದರ ಆಯುಸು (ಕಾರ್ಯ ನಿರ್ವಹಣಾ ಸಾಮರ್ಥ್ಯ) ಅಂದಾಜು ೧೦ ವರ್ಷ ಎಂದು ನಂಬಲಾಗಿದೆ. ಎರಡು ಉಪಗ್ರಹಗಳು ಎಷ್ಟೇ ದೂರದ ಸಂಪರ್ಕ ರಹಿತ ಸ್ಥಳಗಳಿಗೂ ಪರಸ್ಪರ ಮಾಹಿತಿ ವಿನಿಮಯಕ್ಕೆ ನೆರವಾಗಲಿವೆ.  ಉಪಗ್ರಹವು ಮೀಟರ್ ಅಗಲದ ಆಂಟೆನಾವನ್ನು ಹೊಂದಿದ್ದು, ಇದು ಇಸ್ರೋ ಸಾಮಾನ್ಯವಾಗಿ ಬಳಸುವ ಆಂಟೆನಾಗಳ ಮೂರು ಪಟ್ಟಿನದ್ದು ದೊಡ್ಡ ಗಾತ್ರದ್ದಾಗಿದೆ. ಇದು ಯಾವುದೇ ಮೂಲೆಯಿಂದಾದರೂ ಕೈಯಲ್ಲೇ ಹಿಡಿದ ಟರ್ಮಿನಲ್ಗಳ ಮೂಲಕ ಮೊಬೈಲ್ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವುದು. ಭಾರತದ ರಕ್ಷಣಾ ಪಡೆಗಳಿಗೆ ಇದು ವರದಾನವಾಗಲಿದೆ. ಮಾವೋವಾದಿ ನಕ್ಸಲೀಯ ಹಾವಳಿ ಪ್ರದೇಶಗಳಿಗೆ ಸಾಧನ ದೊಡ್ಡ ಪ್ರಮಾಣದಲ್ಲಿ ಉಪಯುಕ್ತವಾಗಬಲ್ಲುದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾರೈಸಿತು.  ಜಿಎಸ್ ಎಲ್ ವಿ-ಎಫ್೦೮ ಅತ್ಯುನ್ನತ ಶಕ್ತಿಯ ಸುಧಾರಿತ ವಿಕಾಸ್ ಎಂಜಿನನ್ನು ಹೊಂದಿದ್ದು ಇದು ವರ್ಷ ಅಕ್ಟೋಬರ್ ತಿಂಗಳಲ್ಲಿ ಭಾರತ ನಡೆಸಲು ಉದ್ದೇಶಿಸಿರುವ ಚಂದ್ರಯಾನ ಯೋಜನೆಗೂ ಅನುಕೂಲಕರವಾಗಲಿದೆ ಎಂದು ಇಸ್ರೋ ಹಾರೈಸಿತು.

2018: ಚೆನ್ನೈ: ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೆರಿ ಮಧ್ಯೆ ಕಾವೇರಿ ನೀರು ಹಂಚಿಕೆ ಸಲುವಾಗಿ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸದೇ ಇರುವುದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾರ್ಚ್ 31ರ ಶನಿವಾರ ಸುಪ್ರೀಂಕೋರ್ಟಿನಲ್ಲಿ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿತು. ೨೦೧೮ರ ಫೆಬ್ರುವರಿ ತಿಂಗಳಲ್ಲಿ ನೀಡಿದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನ ಜಾರಿಗಾಗಿ ಯೋಜನೆ ರೂಪಿಸಲು ಕೇಂದ್ರ ಸರ್ಕಾರಕ್ಕೆ ಆರು ವಾರಗಳ ಗಡುವು ನೀಡಿತ್ತು. ಗಡುವು ಮಾರ್ಚ್ ೨೯ಕ್ಕೆ ಮುಗಿಯಿತು.  ತಮಿಳುನಾಡು ಮಂಡಳಿ ರಚನೆಗೆ ಒತ್ತಾಯಿಸುತ್ತಾ ಬಂದಿದ್ದರೆ, ಮೇ ೧೨ರಂದು ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕವು  ಕೇಂದ್ರ ಜಲ ಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಕಾವೇರಿ ತೀರ್ಪು ಜಾರಿಗಾಗಿ ಸದಸ್ಯರ ಸಮಿತಿ ಮತ್ತು ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ನೇತೃತ್ವದಲ್ಲಿ ೧೧ ಸದಸ್ಯರ ನಿಗಾ ಸಂಸ್ಥೆ ರಚನೆ - ಹೀಗೆ ದ್ವಿವಿಧ ಯೋಜನೆ ರೂಪಿಸುವಂತೆ ಪ್ರಸ್ತಾಪಿಸಿತ್ತು. ‘ಅಂತರರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್ ಅಡಿಯಲ್ಲಿಯೋಜನೆ ರೂಪಿಸುವುದು (ಫ್ರೇಮಿಂಗ್ ಸ್ಕೀಮ್) ಎಂದು ತೀರ್ಪು ಹೇಳಿರುವುದರ ಅರ್ಥ ಏನು ಎಂದು ಸುಪ್ರೀಂಕೋರ್ಟಿನಿಂದ ಸ್ಪಷ್ಟನೆ ಪಡೆಯಲೂ ಕೇಂದ್ರ ಸರ್ಕಾರ ಬಯಸಿತ್ತು.  ಸಚಿವರ ಜೊತೆ ಸಿಎಂ ಚರ್ಚೆ: ಇದಕ್ಕೆ ಮುನ್ನ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಉಪ ಮುಖ್ಯಮಂತ್ರಿ . ಪನ್ನೀರಸೆಲ್ವಮ್ ಸೇರಿದಂತೆ ತಮ್ಮ ಸಂಪುಟದ ಹಿರಿಯ ಸದಸ್ಯರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು.  ಈ ಮಧ್ಯೆ ರಾಜ್ಯದ ವಿವಿಧ ಕಡೆಗಳಲ್ಲಿ ಕಾವೇರಿ ನಿರ್ವಹಣೆ ಮಂಡಳಿಯನ್ನು ರಚಿಸುವಂತೆ ಒತ್ತಾಯಿಸಿ ಈದಿನ ಪ್ರತಿಭಟನಾ ಪ್ರದರ್ಶನಗಳು ನಡೆದವು.  ಕಾವೇರಿ ಜಲ ವಿವಾದ ಮಂಡಳಿಯು ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಕರ್ನಾಟಕದ ನೀರಿನ ಪಾಲನ್ನು ೧೪.೭೫ ಟಿಎಂಸಿ ಅಡಿಗಳಷ್ಟು ಹೆಚ್ಚಿನ ತಮಿಳುನಾಡಿನ ಪಾಲನ್ನು ಅಷ್ಟು ಟಿಎಂಸಿ ಅಡಿಗಳಷ್ಟು ಕಡಿಮೆಗೊಳಿಸಿತ್ತು. ಇದಕ್ಕೆ ಪರಿಹಾರವಾಗಿ ನದಿ ಜಲಾನಯನ ಪ್ರದೇಶದಲ್ಲಿ ೧೦ ಟಿಎಂಸಿ ಅಡಿಗಳಷ್ಟು ಅಂತರ್ಜಲ ಪಡೆಯಲು ತಮಿಳುನಾಡಿಗೆ ಕೋರ್ಟ್ ಅವಕಾಶ ಕಲ್ಪಿಸಿತ್ತು.  ತೀರ್ಪು ಬಂದಂದಿನಿಂದಲೂ ತಮಿಳುನಾಡು ನೀರು ನಿರ್ವಹಣಾ ಮಂಡಳಿ ಮತ್ತು ಕೇಂದ್ರೀಯ ಜಲ ನಿಯಂತ್ರಣ ಸಮಿತಿಯನ್ನು ರಚಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಾ ಬಂದಿತ್ತು.  ಸೆಲ್ ಫೋನ್ ಟವರ್ ಏರಿ ಪ್ರತಿಭಟನೆ: ಕಾವೇರಿ ನಿರ್ವಹಣಾ ಮಂಡಳಿಯನ್ನು ತತ್ ಕ್ಷಣ ರಚಿಸುವಂತೆ ಒತ್ತಾಯಿಸಿ ತಂಜಾವೂರು, ತಿರುನಲ್ವೇಲಿ ಮತ್ತು ಡಿಂಡಿಗಲ್ ಸೇರಿದಂತೆ ರಾಜ್ಯದ ಕೆಲವೆಡೆಗಳಲ್ಲಿ ಈದಿನ ರೈತ ಸಂಘಟನೆಗಳು ಮತ್ತು ಇತರ ಸಂಘಟನೆಗಳು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದವು.  ತಿರುನಲ್ವೇಲಿಮತ್ತು ಡಿಂಡಿಗಲ್ ನಲ್ಲಿ ಕೆಲವು ಚಳವಳಿಕಾರರು ಸೆಲ್ ಫೋನ್ ಗೋಪುರಗಳನ್ನು ಏರಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಆದರೆ ಪೊಲೀಸರು ಅವರನ್ನು ಕೆಳಗಿಳಿಯುವಂತೆ ಮನವೊಲಿಸಿ, ಬಳಿಕ ತಮ್ಮ ವಶಕ್ಕೆ ತೆಗೆದುಕೊಂಡರು.

2018: ನವದೆಹಲಿ:  ಪ್ರಖ್ಯಾತ ಸಮಾಜ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಲೋಕಪಾಲ ನೇಮಕಾತಿ ಮತ್ತು ಇತರ ಕೆಲವು ಬೇಡಿಕೆಗಳನ್ನು ಒತ್ತಾಯಿಸಿ ಕಳೆದ ಆರು ದಿನಗಳಿಂದ ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಈದಿನ  ಕೊನೆಗೊಳಿಸಿದರು.  ಇನ್ನು ಆರು ತಿಂಗಳ ಒಳಗೆ ಲೋಕಪಾಲರನ್ನು ನೇಮಿಸುವಂತೆ ಅವರು ಕೇಂದ್ರ ಸರಕಾರಕ್ಕೆ ಗಡುವು ನೀಡಿದರು.  ಆರು ತಿಂಗಳ ಒಳಗೆ ಲೋಕಪಾಲರನ್ನು ನೇಮಿಸದಿದ್ದರೆ ಮತ್ತು ರೈತರಿಗೆ ಅವರ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನೀಡದಿದ್ದರೆ ತಾನು ಮತ್ತೆ ದೇಶಾದ್ಯಂತ ಚಳವಳಿ ನಡೆಸುವುದಾಗಿ ಅಣ್ಣಾ ಎಚ್ಚರಿಕೆ ನೀಡಿದರು.  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ಅವರ ಭೇಟಿಯೊಂದಿಗೆ. ಅಣ್ಣಾ ತಮ್ಮ ನಿರಶನ ಸತ್ಯಾಗ್ರಹವನ್ನು ಕೊನೆಗೊಳಿಸಿದರುಅಣ್ಣಾ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ತಾಣಕ್ಕೆ ಕೇಂದ್ರ ಕೃಷಿ ಸಚಿವ ಗಜೇಂದ್ರ ಸಿಂಗ್ಶೇಖಾವತ್ಅವರು ಕೂಡ ಭೇಟಿ ನೀಡಿದರು. ಅಣ್ಣಾ ಅವರ ಆರೋಗ್ಯ ಹದಗೆಡುತ್ತಿರುವ ಮಾಹಿತಿಯನ್ನು ಪಡೆದುಕೊಂಡು ಸಿಂಗ್‌, ಡ್ನವೀಸ್ಸ್ಥಳಕ್ಕೆ ಭೇಟಿ ನೀಡಿದ್ದರುನಿರಶನ ನಿರತ ಅಣ್ಣಾ ಅವರ ರಕ್ತದ ಒತ್ತಡ ಏರಿದ್ದು  ರಕ್ತದಲ್ಲಿನ ಸಕ್ಕರೆ ಅಂಶ ಗಮನಾರ್ಹವಾಗಿ ಇಳಿದಿರುವ ಕಾರಣ ಅಣ್ಣಾಗೆ ತೀವ್ರ ಬಸವಳಿಕೆ ಉಂಟಾಗಿತ್ತು. ಮಾತ್ರವಲ್ಲದೆ ಅಣ್ಣಾ ಅವರ ದೇಹ ತೂಕ ಕೂಡ ಕಡಿಮೆಯಾಗಿತ್ತು. ಅಣ್ಣಾ ಉಪವಾಸ ಸತ್ಯಾಗ್ರಹ ಮುಂದುವರಿಸುವುದರಿಂದ ಅದರ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದರು.
2018: ನವದೆಹಲಿ: ಅನೌಪಚಾರಿಕ ರಂಗದ ನೂತನ ನೌಕರರ ಶೇಕಡಾ ೧೨ರಷ್ಟು ಇಪಿಎಫ್ (ನೌಕರರ ಭವಿಷ್ಯನಿಧಿ) ವಂತಿಗೆಯನ್ನು ಪೂರ್ತಿಯಾಗಿ ಕೇಂದ್ರ ಸರ್ಕಾರವೇ ಇನ್ನು ಮುಂದೆ ಪಾವತಿ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಈದಿನ ನಡೆದ ಕೇಂದ್ರ ಸಚಿವ ಸಂಪುಟವು ಕುರಿತ ನಿರ್ಧಾರವನ್ನು ಕೈಗೊಂಡಿತು.   ಸರ್ಕಾರದ ನಿರ್ಧಾರದಿಂದ ಅನೌಪಚಾರಿಕ ರಂಗದ ಸುಮಾರು ಕೋಟಿ ನೌಕರರಿಗೆ ಅನುಕೂಲವಾಗಲಿದೆ. ಸರ್ಕಾರಿ ಬೊಕ್ಕಸಕ್ಕೆ ಇದರಿಂದ ಸುಮಾರು ೬೫೦೦ ಕೋಟಿ ರೂಪಾಯಿಗಳಿಂದ ೧೦,೦೦೦ ಕೋಟಿ ರೂಪಾಯಿಗಳಷ್ಟು ಹೊರೆ ಬೀಳಲಿದೆ.  ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಸಂತೋಷ ಕುಮಾರ್ ಗಂಗ್ವಾರ್ ಅವರು ಸಚಿವ ಸಂಪುಟದ ನಿರ್ಧಾರವನ್ನು ಪ್ರಕಟಿಸಿದರು.  ಸಂದರ್ಭದಲ್ಲಿ ಮಾತನಾಡಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.  ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಕಡಿಮೆ ಅಥವಾ ಉಚಿತ ಶಿಕ್ಷಣ ಇರುತ್ತದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಅತ್ಯಂತ ದುಬಾರಿ. ಹೀಗಾಗಿ ಶಿಕ್ಷಣ ಸಾಲಗಳ ಮೇಲಿನ ಬಡ್ಡಿಪಾವತಿಗಾಗಿ ,೬೦೦ ಕೋಟಿ ರೂಪಾಯಿಗಳನ್ನು ತೆಗೆದಿರಿಸಲು ಸಂಪುಟ ನಿರ್ಧರಿಸಿತು. ೨೦೦೯ರಿಂದಲೇ ಇದು ಆರಂಭವಾಗಿದ್ದರೂ ೨೦೦೯ರಿಂದ ೨೦೧೪ರವರೆಗೆ ಬಡ್ಡಿ ಪಾವತಿಗಾಗಿ ಮಾಡಿದ ವಾರ್ಷಿಕ ವೆಚ್ಚ ಕೇವಲ ೮೦೦ ಕೋಟಿ ರೂ. ಮಾತ್ರ. ೨೦೧೪ರಿಂದ ಮೊತ್ತವನ್ನು ವರ್ಷಕ್ಕೆ ,೮೦೦ ರೂಪಾಯಿಗಳಿಗೆ ಏರಿಸಲಾಗಿತ್ತು ಎಂದು ಜಾವಡೇಕರ್ ವಿವರಿಸಿದರು.  ೨೦೧೭-೨೦ರ ಸಾಲಿನಲ್ಲಿ ವಾರ್ಷಿಕ ,೨೦೦ ಕೋಟಿ ರೂಪಾಯಿಗಳನ್ನು ವಿದ್ಯಾರ್ಥಿಗಳ ಶಿಕ್ಷಣಸಾಲದ ಬಡ್ಡಿಗಾಗಿ ಸರ್ಕಾರ ನೀಡಲಿದೆ. ಇದರಿಂದ ಮೂರು ವರ್ಷಗಳ ಅವಧಿಯಲ್ಲಿ ೧೦ ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕುಟುಂಬದ ಆದಾಯ ವಾರ್ಷಿಕ . ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವ ಎಲ್ಲ ವಿದ್ಯಾರ್ಥಿಗಳಿಗೆ ಇದರ ಲಾಭ ಸಿಗಲಿದೆ.  ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನೀಡಿದ ಮಾಹಿತಿಯನ್ನು ಸಚಿವಾಲಯವು ಪರಿಶೀಲಿಸಿದೆ ಎಂದು ಸಚಿವರು ನುಡಿದರು.  ರಾಜ್ಯಗಳ ಜೊತೆ ಸಮಾಲೋಚಿಸಿದ ಬಳಿಕ ಸರ್ಕಾರಿ ಶಿಕ್ಷಣವನ್ನು ಸುಧಾರಿಸುವ ಸಲುವಾಗಿ ಈಗ ಇರುವ ಸರ್ವ ಶಿಕ್ಷಾ ಅಭಿಯಾನ (ಎಸ್ ಎಸ್ ), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (ಆರ್ ಎಂ ಎಸ್ ) ಮತ್ತು ಶಿಕ್ಷಕರ ಶಿಕ್ಷಣ (ಟಿಇ) ಮೂರು ಯೋಜನೆಗಳನ್ನು ವಿಲೀನಗೊಳಿಸಲು ನಿರ್ಧರಿಸಲಾಯಿತು ಎಂದು ಜಾವಡೇಕರ್ ಹೇಳಿದರು.  ಕರಿಹಲಗೆಯ ಬದಲಿಗೆ, ಇನ್ನು ಮುಂದೆ ಡಿಜಿಟಲ್ ಬೋರ್ಡ್ಗಳನ್ನು ಅಳವಡಿಸಲಾಗುವುದು. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯು ಒಂದು ತಿಂಗಳ ಒಳಗೆ ತನ್ನ ವರದಿ ಸಲ್ಲಿಸಲಿದೆ ಎಂದು ಅವರು ನುಡಿದರು.  ಮುಂದಿನ ವರ್ಷದಿಂದ ಎನ್ ಸಿ ಇಆರ್ ಟಿ ಪ್ರಕಟಿಸುವ ಪಠ್ಯ ಪುಸ್ತಕಗಳು ಕ್ಯೂ ಆರ್ ಕೋಡ್ ಗಳಲ್ಲಿ ಇರುತ್ತವೆ. ಇವುಗಳ ಮೂಲಕ ಲ್ಯಾಪ್ ಟ್ಯಾಪ್ ನಲ್ಲಿ ಹೆಚ್ಚುವರಿ ಮಾಹಿತಿಯನ್ನು ನೋಡಬಹುದು ಎಂದು ಸಚಿವರು ವಿವರಿಸಿದರು.  ಸಿಬಿಎಸ್ ಪ್ರಶ್ನೆಪತ್ರಿಕೆ ಸೋರಿಕೆದುರದೃಷ್ಟಕರ ಘಟನೆ ಎಂದು ಬಣ್ಣಿಸಿದ ಜಾವಡೇಕರ್ತೊಂದರೆಗೆ ಈಡಾದ ವಿದ್ಯಾರ್ಥಿಗಳು ಮತ್ತು ಹೆತ್ತವರ ನೋವಿನ ಬಗ್ಗೆ ನನಗೆ ಅನುಕಂಪ ಇದೆ. ತಪ್ಪಿತಸ್ಥರನ್ನು ಹಿಡಿಯಲು ತನಿಖೆ ಚುರುಕುಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.  ಉತ್ತಮ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಸಿಬಿಎಸ್ ಒಳ್ಳೆಯ ಹೆಸರನ್ನು ಗಳಿಸಿದೆ. ವೈದ್ಯಕೀಯ ನೀಟ್ ಪರೀಕ್ಷೆಗಳನ್ನು ನಡೆಸಲೂ ಅದನ್ನೇ ಆಯ್ಕೆ ಮಾಡಲಾಗಿದೆ. ಆದರೆ ಬಾರಿ ಇದಕ್ಕೆ ಭಂಗ ಬಂದಿದೆ. ಮುಂದಿನ ಕ್ರಮದ ಬಗ್ಗೆ ಸಿಬಿಎಸ್ ಸೋಮವಾರ ಅಥವಾ ಮಂಗಳವಾರ ಘೋಷಿಸಬಹುದು. ಆದರೆ ನಾವು ವ್ಯವಸ್ಥೆಯನ್ನು ತಪ್ಪು ಮಾಡಲು ಆಸ್ಪದವಿಲ್ಲದಂತೆ (ಫೂಲ್ ಫ್ರೂಫ್) ಮಾಡಲಿದ್ದೇವೆ ಎಂದು ಅವರು ನುಡಿದರು.  ಈಶಾನ್ಯ ರಾಜ್ಯಗಳ ಅಭಿವೃದ್ಧಿ ಬಗ್ಗೆ ಕೈಗೊಳ್ಳಲಾದ ನಿರ್ಣಯಗಳ ಬಗ್ಗೆ ಸಚಿವ ಜಿತೇಂದ್ರ ಪ್ರಸಾದ್ ತಿಳಿಸಿದರು.

2018: ಚೆನ್ನೈ: ತಮಿಳುನಾಡು ಮತ್ತು ಕರ್ನಾಟಕ ನಡುವಣ ಕಾವೇರಿ ನದಿ ನೀರಿನ ಅಂತಾರಾಜ್ಯ ವಿಚಾರದಲ್ಲಿನಮಗೆ ಏಕೈಕ ಸ್ವೀಕಾರಾರ್ಹ ಪರಿಹಾರ ಎಂದರೆ ಕಾವೇರಿ ನಿರ್ವಹಣಾ ಮಂಡಳಿಯ ರಚನೆ ಮಾತ್ರ ಎಂದು ಹೇಳುವ ಮೂಲಕ ಚಿತ್ರ ನಟ ರಜನಿಕಾಂತ್  ಕಾವೇರಿ ನಿರ್ವಹಣಾ ಮಂಡಳಿ ಬೇಡಿಕೆಗೆ ಒತ್ತು ನೀಡಿದರು.  ಕಾವೇರಿ ವಿಷಯದಲ್ಲಿ ಸಿಎಂಬಿ (ಕಾವೇರಿ ನಿರ್ವಹಣಾ ಮಂಡಳಿ) ರಚನೆ ಮಾತ್ರವೇ ಏಕೈಕ ಸ್ವೀಕಾರಾರ್ಹ ಪರಿಹಾರ. ನ್ಯಾಯ ಗೆಲ್ಲುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಹಾರೈಸುವೆ ಎಂದು ಅವರು ಟ್ವೀಟ್ ಮಾಡಿದರು. ಸುಪ್ರೀಂಕೋರ್ಟ್ ತೀರ್ಪು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಫೆಬ್ರುವರಿ ೧೬ರಂದು ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿತ್ತು.  ಕೆಳ ನದೀ ತೀರದ ರಾಜ್ಯವಾದ ತಮಿಳುನಾಡು ಮೊದಲಿನಿಂದಲೇ ಕಾವೇರಿ ಜಲ ನಿಯಂತ್ರಣ ಸಮಿತಿ ರಚಿಸುವ ಮೂಲಕ ತಮಗೆ ಬರಬೇಕಾದ ನೀರಿನ ಪಾಲು ಲಭಿಸುವ ಖಾತರಿ ನೀಡಬೇಕು ಎಂದು ಕೇಂದ್ರವನ್ನು ಆಗ್ರಹಿಸುತ್ತಲೇ ಬಂದಿತ್ತು. ಕೇಂದ್ರವು ಕಾವೇರಿ ನಿರ್ವಹಣಾ ಮಂಡಳಿಯನ್ನು ಮತ್ತು ಸಮಿತಿಯನ್ನು ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ದಿನಾಂಕದಿಂದ ಆರು ವಾರಗಳ ಒಳಗಾಗಿ ರಚಿಸಬೇಕು ಎಂಬುದು ತಮಿಳುನಾಡಿದ ನಿಲುವು ಆಗಿದ್ದು, ಆರು ವಾರಗಳ ಗಡುವು ಮಾರ್ಚ್ ೨೯ಕ್ಕೆ ಮುಗಿಯುತ್ತದೆ.  ಕೇಂದ್ರವು ಮಂಡಳಿ ಮತ್ತು ಸಮಿತಿ ರಚಿಸುವ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂದು ತಾವು ಹಾರೈಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಸ್ವಾಮಿ ಮಾ.28ರ ಬುಧವಾರ ಹೇಳಿದ್ದರು. ’ಕೇಂದ್ರವು ತಮಿಳುನಾಡಿನ ಜನತೆ ಮತ್ತು ನದಿ ಮುಖಜಭೂಮಿಯ ರೈತರ ಆಶೋತ್ತರಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದರು.


2009: ಆಸ್ಟ್ರೇಲಿಯಾದ ಕೈರ್ನ್ಸ್‌ನಲ್ಲಿ ಸಾವಿರಾರು ವಿಷಪೂರಿತ ನೆಲಗಪ್ಪೆಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಇವುಗಳ ಕಳೇಬರಗಳ ಗೊಬ್ಬರವನ್ನು ಕೃಷಿಗೆ ಬಳಸುವ ಪದ್ಧತಿ ಇಲ್ಲಿ ಪ್ರತಿ ವರ್ಷ ಬಳಕೆಯಲ್ಲಿ ಇದೆ.
2009: ಕೋಮು ಪ್ರಚೋದನೆ ಆರೋಪದ ಮೇಲೆ ಬಂಧಿತರಾದ ಬಿಜೆಪಿ ಯುವ ನಾಯಕ ವರುಣ್ ಗಾಂಧಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಮೊಕದ್ದಮೆ ಹೂಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿತು. 1980ರ ರಾಷ್ಟ್ರೀಯ ಭದ್ರತಾ ಕಾಯ್ದೆಯ 3(2)ನೇ ಪರಿಚ್ಛೇದದಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು, ಕಾಯ್ದೆ ಪ್ರಕಾರ ಆರೋಪಿಗೆ ಕನಿಷ್ಟ ಒಂದು ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಬಹುದು.

2009: ವರುಣ್ ಗಾಂಧಿ ಅವರ ಮುಸ್ಲಿಮ್ ವಿರೋಧಿ ಭಾಷಣದ ಬಗ್ಗೆ ಇದುವರೆಗೂ ಮೌನದಿಂದಲೇ ಇದ್ದ ಹಿರಿಯ ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ತಮ್ಮ ಮೌನ ಮುರಿದು, ವರುಣ್‌ಗೆ ಟಿಕೆಟ್ ನೀಡಬೇಡಿ ಎಂದು ಹೇಳಿರುವ ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

2009: ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸಿಹಿ ಸುದ್ದಿ. ಖಾತೆ ತೆರೆದಿರುವ ಬ್ಯಾಂಕಿನ ಎಟಿಎಂ ಕೇಂದ್ರಕ್ಕಾಗಿಯೇ ಅಲೆದಾಡುವ ಕಷ್ಟ ಏಪ್ರಿಲ್ 1ರಿಂದ ಪರಿಹಾರವಾಗುವುದು. ಏಕೆಂದರೆ, ಯಾವುದೇ ಎಟಿಎಂ ಕೇಂದ್ರದಲ್ಲಿ ಹಣ ಪಡೆದುಕೊಂಡರೂ ಇನ್ನುಮುಂದೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ! ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ನಿರ್ದೇಶನವೊಂದರಿಂದ ಇದು ಸಾಧ್ಯವಾಗುವುದು. ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಈ ನಿರ್ದೇಶನದ ಪ್ರಕಾರ, ಡೆಬಿಟ್ ಕಾರ್ಡ್ ಹೊಂದಿರುವ ಯಾವುದೇ ಬ್ಯಾಂಕ್ ಗ್ರಾಹಕರು ಯಾವುದೇ ಬ್ಯಾಂಕಿನ ಎಟಿಎಂ ಮೂಲಕ ಹಣ ಪಡೆದುಕೊಳ್ಳಬಹುದು. ಇದಕ್ಕಾಗಿ ಶುಲ್ಕ ವಿಧಿಸುವುದನ್ನು ಇದೇ ಏಪ್ರಿಲ್ 1ರಿಂದ ಹಿಂದಕ್ಕೆ ಪಡೆಯಲಾಗುವುದು.

2009: ತನ್ನ ವಶದಲ್ಲಿ ಇಟ್ಟುಕೊಂಡ ತಮಿಳರನ್ನು ಸರ್ಕಾರಿ ನಿಯಂತ್ರಿತ ಪ್ರದೇಶಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರೆ ಮಾತ್ರ ಎಲ್‌ಟಿಟಿಇಯೊಂದಿಗೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಬಹುದು ಎಂದು ಶ್ರೀಲಂಕಾ ಸ್ಪಷ್ಟಪಡಿಸಿತು. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಾರ್ಯಾಲಯದಲ್ಲಿ ಸುದ್ದಿಗಾರರಿಗೆ ಈ ವಿಷಯ ಸ್ಪಷ್ಪಪಡಿಸಿದ ವಿಶ್ವಸಂಸ್ಥೆಗೆ ಶ್ರೀಲಂಕಾದ ಶಾಶ್ವತ ಪ್ರತಿನಿಧಿಯಾದ ಎಚ್.ಎಂ.ಜಿ.ಸಿ ಪಲಿಹಕ್ಕರ, ಜನವರಿ 30 ರಂದು ಅಧ್ಯಕ್ಷ ಮಹಿಂದ ರಾಜಪಕ್ಸ ಅವರು ವನ್ನಿಯಲ್ಲಿ ಎಲ್‌ಟಿಟಿಇಯೊಂದಿಗಿನ ಕಾರ್ಯಾಚರಣೆಗೆ ಎರಡು ದಿನಗಳ ವಿರಾಮ ಘೋಷಿಸಿದ್ದನ್ನು ಉದಾಹರಿಸಿದರು.

2009: ಇಂಡೋನೇಷ್ಯಾದ ತಂಗೆರಂಗನ್ ಜಿಲ್ಲೆಯಲ್ಲಿ ಸಂಭವಿಸಿದ್ದ ಗಿಂಟಂಗ್ ಅಣೆಕಟ್ಟು ಕುಸಿತ ದುರಂತದ ಸಾವಿನ ಸಂಖ್ಯೆ 93ಕ್ಕೆ ಏರಿತು. ಕಾಣೆಯಾದ ನೂರಾರು ಮಂದಿ ಇನ್ನೂ ಪತ್ತೆಯಾಗಿಲ್ಲ. ಶೋಧನಾ ಕಾರ್ಯ ಮುಂದುವರಿದಿದೆ ಎಂದು ಸರ್ಕಾರಿ ಮೂಲಗಳು ಹೇಳಿದವು.

2009: ದುಬೈ ಕೋರ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ಕಂಡುಬಂದಿತು. ಮೊದಲ ಮಹಿಳಾ ನ್ಯಾಯಾಧೀಶರಾಗಿ ದಿನದ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ ಎಬ್ಟಿಸಂ ಅಲಿ ರಷೀದ್ ಬಿದ್ವಾಯಿ (27) ಅವರು, ಯುಎಇ ( ಸಂಯುಕ್ತ ಅರಬ್ ರಾಷ್ಟ್ರಗಳ ಒಕ್ಕೂಟ) ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.

2009: ಉದ್ಯೋಗಿ ಸಹ ಒಬ್ಬ ಗ್ರಾಹಕ; ತನಗಿರುವ ಸೌಲಭ್ಯ ಪಡೆಯುವ ಎಲ್ಲಾ ಹಕ್ಕೂ ಆತನಿಗೂ ಇದೆ ಎಂದು ದಕ್ಷಿಣ ಮುಂಬೈನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ತೀರ್ಪು ನೀಡಿತು. ನಿವೃತ್ತ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿದ ವೇದಿಕೆ, ತಮ್ಮ ಸಂಘಟನೆಯಿಂದ ಎಲ್ಲಾ ಸೌಲಭ್ಯಗಳನ್ನೂ ಪಡೆಯುವ ಹಕ್ಕು ಗ್ರಾಹಕರಾದ ಉದ್ಯೋಗಿಗಳಿಗೆ ಇದೆ. ಈ ವಿಷಯದಲ್ಲಿ ಅಸಂತುಷ್ಟರಾದಾಗ ಅವರು ನ್ಯಾಯಕ್ಕಾಗಿ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿತು. ಭವಿಷ್ಯ ನಿಧಿ ಇಲಾಖೆಯ ಉದ್ಯೋಗಿ ಹಸ್‌ಮುಖ್ ಪಾರೇಖ್ ಎಂಬವರು, ನಿವೃತ್ತರಾದ ಬಳಿಕ ಭವಿಷ್ಯ ನಿಧಿಗೆ ಸಂಬಂಧಿಸಿದ ಹಣ ಸಕಾಲದಲ್ಲಿ ತಮಗೆ ಬಾರದ ಬಗ್ಗೆ ವೇದಿಕೆಗೆ ದೂರು ನೀಡಿದ್ದರು. 20 ದಿನ ತಡವಾಗಿ ಬಂದದ್ದಕ್ಕೆ ಪ್ರತಿಯಾಗಿ ಪರಿಹಾರವನ್ನೂ ಕೋರಿದ್ದರು. ಪ್ರತಿವಾದಿಯಾಗಿದ್ದ ಭವಿಷ್ಯ ನಿಧಿ ಇಲಾಖೆ, ಒಬ್ಬ ಉದ್ಯೋಗಿ ಗ್ರಾಹಕರ ವೇದಿಕೆಗೆ ಹೋಗುವಂತಿಲ್ಲ ಎಂದು ವಾದಿಸಿತ್ತು. ಉದ್ಯೋಗಿಗಳ ಭವಿಷ್ಯನಿಧಿ ವಿಚಾರದಲ್ಲಿ ಯಾವುದೇ ತಕರಾರು ಇದ್ದರೆ ಅಂತಹವರು ಭವಿಷ್ಯ ನಿಧಿ ಆಯುಕ್ತರನ್ನು ಸಂಪರ್ಕಿಸಬೇಕೇ ಹೊರತು ಗ್ರಾಹಕರ ವೇದಿಕೆಯನ್ನಲ್ಲ ಎಂದು ಪ್ರತಿಪಾದಿಸಿತ್ತು.

2008: ಕನ್ನಡ ಚಲನಚಿತ್ರ ನಿರ್ಮಾಪಕ ಎ.ಜೆ.ನಾಯ್ಡು (38) ನಿಧನರಾದರು. `ಸೈಲೆನ್ಸ್' ಸಿನೆಮಾದ ರಿರೆಕಾರ್ಡಿಂಗಿಗಾಗಿ ಚೆನ್ನೈಗೆ ಹೊರಟಿದ್ದ ಅವರು ನಗರದ ಬಸ್ ನಿಲ್ದಾಣದಲ್ಲೇ ಹೃದಯಾಘಾತದಿಂದ ಅಸುನೀಗಿದರು. ಕೆಲಸಮಯದ ಹಿಂದೆ ತೆರೆಕಂಡಿದ್ದ ಚಲನಚಿತ್ರ `ವಿದ್ಯಾರ್ಥಿ' ಸಹ ನಾಯ್ಡು ಅವರ ನಿರ್ಮಾಣವೇ ಆಗಿತ್ತು. ಅಂತ್ಯಕ್ರಿಯೆ ಮರುದಿನ ನಡೆಯಿತು.

2008: ಹಸಿರು ಅನಿಲದ ಪರಿಣಾಮ ತಗ್ಗಿಸಲು ವಿಶ್ವದ ದೊಡ್ಡ ದೇಶಗಳ ರಾಜಧಾನಿಗಳಲ್ಲಿ ಈದಿನ (ಮಾರ್ಚ್ 29) ರಾತ್ರಿ `ಅರ್ಥ್ ಅವರ್' ಆಚರಿಸಲಾಗುವುದು. ಈದಿನ ರಾತ್ರಿ ಒಂದು ಗಂಟೆ ಕಾಲ ವಿಶ್ವದ ದೊಡ್ಡ ನಗರಗಳಲ್ಲಿ ಎಲ್ಲಾ ದೀಪಗಳನ್ನೂ ದೀಪಗಳನ್ನು ಆರಿಸಲಾಗುವುದು. ತನ್ಮೂಲಕ ವಿದ್ಯುಚ್ಛಕ್ತಿ ಉಳಿಸುವುದು ಈ ಆಂದೋಲನದ ಉದ್ದೇಶ.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಕ್ರಿಕೆಟಿನ ನಾಲ್ಕನೇ ದಿನ ರಾಹುಲ್ ದ್ರಾವಿಡ್ ಅವರು ಹತ್ತು ಸಾವಿರ ರನ್ ಪೂರೈಸಿ, 25ನೇ ಶತಕ ದಾಖಲಿಸಿದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸಿನಲ್ಲಿ 627 ರನ್ ಗಳಿಸಿ ಆಲೌಟಾಯಿತು.

2008: ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಪಟ್ಟ ಹಳ್ಳಿಯಲ್ಲಿ ನಡೆಸಿದ ಉತ್ಖನನದಲ್ಲಿ 20 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ನಾಗರಿಕತೆಯ ಪಳೆಯುಳಿಕೆಗಳನ್ನು ಪತ್ತೆ ಮಾಡಿತು.
ಉತ್ಖನನದ ವೇಳೆ ಕಲ್ಲಿನಿಂದ ತಯಾರಿಸಿದ 200 ಸಣ್ಣಪುಟ್ಟ ಆಯುಧಗಳು ದೊರಕಿದವು. ಇದರಿಂದಾಗಿ ಅತಿ ಪ್ರಾಚೀನ ನಾಗರಿಕತೆಯ ಅಸ್ತಿತ್ವದ ಬಗ್ಗೆ ಮಹತ್ವದ ಸುಳಿವು ದೊರಕಿತು ಎಂದು ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಅಧೀಕ್ಷಕ ಅಮಲ್ ರಾಯ್ ತಿಳಿಸಿದರು. ಸಂತಲಪಾರಾ ಹಳ್ಳಿಯಲ್ಲಿ ಒಂದು ಸಾವಿರ ಮೀಟರ್ ಕೃಷಿ ಭೂಮಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಉತ್ಖನನ ನಡೆಯುತ್ತಿದ್ದು, 2-3 ಮೀಟರ್ ಆಳದವರೆಗೆ ಅಗೆದಾಗ ಕಲ್ಲಿನ ಆಯುಧಗಳು ಹಾಗೂ ಇತರ ಬಳಕೆಯ ವಸ್ತುಗಳ ಪಳೆಯುಳಿಕೆಗಳು ಪತ್ತೆಯಾದವು. ಪುಣೆಯ ಡೆಕ್ಕನ್ ಕಾಲೇಜಿನ ಭೂಗರ್ಭ -ಪ್ರಾಚ್ಯವಸ್ತು ತಜ್ಞರಾದ ಎಸ್. ಎನ್. ರಾಜಗುರು ಮತ್ತು ಬಿ. ಸಿ. ದೇವಧರ್ ಅವರ ಮಾರ್ಗದರ್ಶನದಲ್ಲಿ ಉತ್ಖನನ ನಡೆಯಿತು.

2008: ಬೆಂಗಳೂರು, ಪುಣೆ ಹಾಗೂ ಮುಂಬೈ ಸೇರಿದಂತೆ ಮೂರು ಆಯ್ದ ನಗರಗಳಲ್ಲಿ ಜೂನ್ ಅಂತ್ಯದಿಂದ ಆಕರ್ಷಕ ಫೈಬರ್ ಗ್ಲಾಸ್ ಗ್ಯಾಸ್ ಸಿಲಿಂಡರ್ ಒದಗಿಸುವ ಮುಂಚೂಣಿ ಯೋಜನೆಗೆ ಪೆಟ್ರೋಲಿಯಂ ಸಚಿವಾಲಯ ಅನುಮತಿ ನೀಡಿತು. ಫೈಬರ್ ಸಿಲಿಂಡರ್ ಪರಿಚಯಿಸುವ ಮೂಲಕ ರಾಜ್ಯ ಒಡೆತನದ ತೈಲ ಮಾರಾಟ ಕಂಪೆನಿಗಳಿಗೆ (ಒಎಂಸಿ) ತಮ್ಮ ಉದ್ಯಮ ವಿಸ್ತರಿಸಲು ಪೆಟ್ರೋಲಿಯಂ ಸಚಿವಾಲಯ ತಾತ್ವಿಕ ಅನುಮತಿ ನೀಡಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ದಿನ್ಸಾ ಪಟೇಲ್ ಹೇಳಿದರು.

2008: ಲಿಂಗ ಸಂವೇದನಾಶೀಲ ವಿಷಯಕ್ಕೆ ಸಂಬಂಧಿಸಿದ ಬರಹಗಳನ್ನು ಆಧರಿಸಿ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕಿ ಸಿ.ಜಿ.ಮಂಜುಳಾ ಅವರಿಗೆ ಪಾಪುಲೇಷನ್ ಫಸ್ಟ್ ಸಂಸ್ಥೆಯು `ಯು ಎನ್ ಎಫ್ ಪಿ ಎ-ಲಾಡ್ಲಿ ಮಾಧ್ಯಮ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತು. ಚೆನ್ನೈಯ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ ಸಮಾಜ ಕಲ್ಯಾಣ ಸಚಿವೆ ಡಾ.ಪೂಂಗೊದಾಲ್ ಅವರು ಮಂಜುಳಾ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಲಿಂಗ ಸಂವೇದನಾಶೀಲ ಲೇಖನಗಳ ಮೂಲಕ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಿದ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಒಟ್ಟು 18 ಮಂದಿ ಮಾಧ್ಯಮ ವ್ಯಕ್ತಿಗಳನ್ನು ಪಾಪುಲೇಷನ್ ಸಂಸ್ಥೆಯು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಇದರಲ್ಲಿ ಕರ್ನಾಟಕದಿಂದ ಮಂಜುಳಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದರು.. ಸಮಾರಂಭದಲ್ಲಿ ಲೇಖಕಿ ಅಮ್ಮು ಜೋಸೆಫ್ ಅವರಿಗೆ `ವಿಶೇಷ ಮಾಧ್ಯಮ ಪ್ರಶಸ್ತಿ' ನೀಡಲಾಯಿತು.

2008: ರೂಪದರ್ಶಿ ಜೆಸ್ಸಿಕಾಲಾಲ್ ಅವರ ಅತ್ತಿಗೆ ಮೌಸಮಿ (ಸಹೋದರ ರಣಜಿತ್ ಲಾಲ್ ಅವರ ಪತ್ನಿ) ಅವರು ಪತಿಯಿಂದ ಜೀವನಾಂಶ ಕೋರಿ ಹೈಕೋರ್ಟ್ ಮೊರೆ ಹೋದರು. ಪತಿಯಿಂದ ವಂಚನೆಗೆ ಒಳಗಾಗಿ ಪ್ರತ್ಯೇಕವಾದ ತಮಗೆ ನ್ಯಾಯ ದೊರಕಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ತಮ್ಮ ಕೋರಿಕೆಯನ್ನು ಅನೂರ್ಜಿತಗೊಳಿಸಿದ್ದ ಸೆಷನ್ಸ್ ಕೋರ್ಟ್ ಆದೇಶವನ್ನು ರದ್ದುಪಡಿಸುವಂತೆ ಅವರು ಮನವಿ ಮಾಡಿದರು.

2008: ಇಪ್ಪತ್ತೆಂಟು ವರ್ಷಗಳ ಕಾಲ ಜಿಂಬಾಬ್ವೆಯನ್ನು ಮುನ್ನಡೆಸಿದ ಅಧ್ಯಕ್ಷ ರಾಬರ್ಟ್ ಮುಗಾಬೆ (84) ಅವರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಚುನಾವಣೆ ದೇಶದಲ್ಲಿ ನಡೆಯಿತು.

2008: ಪಾಕಿಸ್ಥಾನದ ಪ್ರಧಾನಿ ಯೂಸುಫ್ ರಝಾ ಜಿಲಾನಿ ಅವರಿಗೆ ಸಂಸತ್ತಿನಲ್ಲಿ ನಿರೀಕ್ಷೆಗೂ ಮೀರಿ `ಸರ್ವಾನುಮತದಿಂದ ವಿಶ್ವಾಸ ಮತ' ದೊರೆಯಿತು.

2007: ಕಡಲ ತಡಿಯಲ್ಲಿರುವ ಬಾಲಸೋರ್ ಜಿಲ್ಲೆಯ ಚಂಡಿಪುರ ಬಳಿ ಅತ್ಯಾಧುನಿಕ `ಅಸ್ತ್ರ' ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗಿಸಲಾಯಿತು. ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ದೇಶಿ ತಂತ್ರಜ್ಞಾನ ಬಳಸಿಕೊಂಡು ರಕ್ಷಣಾಪಡೆಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವು (ಡಿ ಆರ್ ಡಿ ಎಲ್) ನಿರ್ಮಿಸಿದ್ದು, 80.ಕಿಮಿ ದೂರದವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

2007: ಐಐಟಿ ಮತ್ತು ಐಐಎಂ ಸೇರಿದಂತೆ ಕೇಂದ್ರಾಡಳಿತದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಪ್ರವೇಶದಲ್ಲಿ ಮೀಸಲಾತಿ) ಕಾಯಿದೆ 2006'ರ ಅನುಷ್ಠಾನವನ್ನು ಮುಂದಿನ ಆದೇಶದ ವರೆಗೆ ಸುಪ್ರೀಂಕೋರ್ಟ್ ತಡೆಹಿಡಿಯಿತು. ಮೀಸಲಾತಿಯ ಫಲಾನುಭವಿಗಳಾದ ಹಿಂದುಳಿದ ಜಾತಿಗಳನ್ನು ಗುರುತಿಸಿದ ವಿಧಾನದ ಬಗ್ಗೆ ಪ್ರಮುಖವಾಗಿ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಮತ್ತು ಎಲ್. ಎಸ್. ಪಂಟಾ, `ಮೀಸಲಾತಿ ನಿರ್ಧರಿಸಲು 1931ರ ಜಾತಿ ಆಧಾರಿತ ಜನಗಣತಿಯೊಂದೇ ಸೂಕ್ತ ಆಧಾರವಾಗಲಾರದು. ಆದ್ದರಿಂದ ಮುಂದಿನ ಆದೇಶದವರೆಗೆ ಈ ಕಾನೂನನ್ನು ಅನುಷ್ಠಾನಗೊಳಿಸಬಾರದು ಎಂದು 36 ಪುಟಗಳ ತೀರ್ಪಿನಲ್ಲಿ ಹೇಳಿದರು.

2007: 1984ರ ಸಿಖ್ ವಿರೋಧಿ ಗಲಭೆಗಳ ಕಾಲದಲ್ಲಿ ಹೆಡ್ ಕಾನ್ಸ್ಟೇಬಲ್ ನಿರಂಜನ ಸಿಂಗ್ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಹಲ್ಲೆ ನಡೆಸಿ ಕೊಂದು ನಂತರ ಅವರ ಶವಗಳಿಗೆ ಕಿಚ್ಚಿಟ್ಟು ನಾಶಪಡಿಸಿದ ಅಪರಾಧಕ್ಕಾಗಿ ದೆಹಲಿಯ ನ್ಯಾಯಾಲಯವೊಂದು ಮೂವರು ಅಪರಾಧಿಗಳಾದ ಹರಪ್ರಸಾದ ಭಾರಧ್ವಾಜ್, ಆರ್.ಪಿ. ತಿವಾರಿ, ಮತ್ತು ಜಗದೀಶ ಗಿರಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5000 ರೂಪಾಯಿಗಳ ದಂಡ ವಿಧಿಸಿತು.

2006: ಕರ್ನಾಟಕ ಮಾಧ್ಯಮ ಅಕಾಡೆುಯು ವೀಕ್ ಪತ್ರಿಕೆಯ ಸಚ್ಚಿದಾನಂದ ಮೂರ್ತಿ ಅವರಿಗೆ 2005-06ನೇ ಸಾಲಿನ ವಿಶೇಷ ಪ್ರಶಸ್ತಿಯನ್ನೂ ಇತರ 18 ಮಂದಿ ಪತ್ರಕರ್ತರಿಗೆ ವಾರ್ಷಿಕ ಅಕಾಡೆಮಿ ಪ್ರಶಸ್ತಿಯನ್ನೂ ಪ್ರಕಟಿಸಿತು.

2006: ಇಂಟೆಲ್ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯು ಗ್ರಾಮೀಣ ಪ್ರದೇಶಗಳಿಗೆ ಹೊಂದಿಕೊಳ್ಳುವ ನೂತನ ಮಾದರಿಯ ಕಂಪ್ಯೂಟರುಗಳನ್ನು ಬಿಡುಗಡೆ ಮಾಡಿತು. ಗ್ರಾಮೀಣ ಪ್ರದೇಶದ ಮುಖ್ಯ ಸಮಸ್ಯೆಗಳಾದ ಧೂಳು, ವಿದ್ಯುತ್ ವ್ಯತ್ಯಯ ಮತ್ತಿತರ ತೊಂದರೆಗಳಿಗೆ ಈ ಕಂಪ್ಯೂಟರ್ ಪರಿಹಾರವಾಗಬಲ್ಲುದು. ವಿದ್ಯುತ್ ವ್ಯತ್ಯಯವಾದರೂ ಕನಿಷ್ಠ 8ರಿಂದ 10 ಗಂಟೆ ಬಳಸಬಹುದಾದ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ಧೂಳು ಕಂಪ್ಯೂಟರ್ ಒಳ ಸೇರದಂತೆ ಫಿಲ್ಟರ್ ಅಳವಡಿಸಲಾಗಿದೆ. ದರವೂ ಆಕರ್ಷಕವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಬಿಲ್ ಸ್ಯೂ ದೆಹಲಿಯಲ್ಲಿ ಪ್ರಕಟಿಸಿದರು.

2006: ದೇಶದಲ್ಲಿ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ಮತ್ತು ತರುಣ್ ಚಟರ್ಜಿ ಅವರನ್ನು ಒಳಗೊಂಡ ಪೀಠವು ನಿರಾಕರಿಸಿತು.

2006: ಉತ್ತರ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ಅಮರಸಿಂಗ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಉಳಿಸುವ ಸಲುವಾಗಿ ಮುಲಾಯಂ ಸಿಂಗ್ ಸರ್ಕಾರವು ಮಸೂದೆಯೊಂದನ್ನು ತರಾತುರಿಯಲ್ಲಿ ಅಂಗೀಕರಿಸಿ 2003ರ ಅಕ್ಟೋಬರ್ 15ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲು ನಿರ್ಧರಿಸಿತು. `ಉತ್ತರ ಪ್ರದೇಶ ಅಭಿವೃದ್ಧಿ ಮಂಡಲಿ ಕಾಯ್ದೆ -2006'ರಲ್ಲಿ ಇಡೀ ಮಂಡಳಿಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಾಂತರಿಸಿ ಅದಕ್ಕೆ ಸ್ಥಳೀಯ ಸಂಸ್ಥೆಗಳ ಮಟ್ಟದ ಅಧಿಕಾರ ನೀಡಲಾಯಿತು.

2006: ಮನುಕುಲದ ಒಳಿತು, ಶಾಂತಿ, ಸಂತಸಕ್ಕಾಗಿ ನಡೆಸಲಾಗುವ ಶತಮಾನದ ಮೊದಲ `ಅಥೀರತ್ರಮ್' ಯಾಗವು ಕೇರಳದ ಪುಟ್ಟ ಗ್ರಾಮ ಮೂಲಂಕೋಡ್ನಲ್ಲಿ ಆರಂಭವಾಯಿತು. ಯಾಗದ ವಿಧಿಗಳನ್ನು ನಡೆಸುವ `ಯಜಮಾನನ್' ಕಾವೇರಪ್ರ ಮಾರತ್ ಶಂಕರನಾರಾಯಣನ್ ಸೋಮಯಾಜಿಪ್ಪಾಡ್ ಆಗಮನದೊಂದಿಗೆ ಶ್ರೀಕುರುಂಬ ಭಗವತಿ ದೇವಾಲಯದಲ್ಲಿ 12 ದಿನಗಳ ಯಾಗ ಚಾಲನೆಗೊಂಡಿತು. 72 ಮಂದಿ ವೈದಿಕ ತಜ್ಞರಿಂದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದಗಳ ಮಂತ್ರಪಠಣ ನಡೆಯಿತು. ಕೇರಳದಲ್ಲಿ `ಅಗ್ನೀದಾನಮ್', `ಸೋಮಯಾಗಮ್' ಮತ್ತು `ಅಥೀರತ್ರಮ್' ಎಂಬ ಮೂರು ವಿಧದ ಯಾಗಗಳನ್ನು ನಡೆಸಲಾಗುತ್ತದೆ. ಇಡೀ ಯಾಗಶಾಲೆಯನ್ನು ಅಗ್ನಿಗೆ ಆಹುತಿ ನೀಡುವುದರೊಂದಿಗೆ `ಅಥೀರತ್ರಮ್' ಯಾಗ ಕೊನೆಗೊಳ್ಳುತ್ತದೆ.

1982: ತೆಲುಗು ಚಲನಚಿತ್ರ ನಟ ಎನ್.ಟಿ. ರಾಮರಾವ್ ಅವರ ಪ್ರಾದೇಶಿಕ ಪಕ್ಷ `ತೆಲುಗುದೇಶಂ' ಹೈದರಾಬಾದಿನಲ್ಲಿ ಉದಯವಾಯಿತು.

1965: ಸಂಗೀತ ಹಾಗೂ ಮೃದಂಗದಲ್ಲಿ ಖ್ಯಾತರಾದ ಆನೂರು ಅನಂತಕೃಷ್ಣ ಶರ್ಮ ಅವರು ಖ್ಯಾತ ಸಂಗೀತ ಮನೆತನದ ಆನೂರು ರಾಮಕೃಷ್ಣ- ಶ್ರೀಲಕ್ಷ್ಮಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1957: ನೂತನ ಸಂಸತ್ತಿನ ಕಾಂಗ್ರೆಸ್ ಪಕ್ಷದ ನಾಯರಾಗಿ ಪ್ರಧಾನಿ ಜವಾಹರಲಾಲ್ ನೆಹರೂ ಸರ್ವಾನುಮತದಿಂದ ಆಯ್ಕೆಯಾದರು.

1953: ಕಲಾವಿದ ಉದಯಶಂಕರ ಜನನ.

1949: ಕಲಾವಿದ ಎಂ.ಎಸ್. ಗೋವಿಂದಸ್ವಾಮಿ ಜನನ.

1939: ಕಲಾವಿದ ನಾರಾಯಣ ಢಗೆ ಜನನ.

1929: ಭಾರತದ ಚಿತ್ರನಟ ಉತ್ಪಲ್ ದತ್ (1929-1993) ಹುಟ್ಟಿದ ದಿನ.

1914: ಮದರ್ ಆಫ್ ಅರೋವಿಲ್ ಎಂದೇ ಖ್ಯಾತಳಾಗಿರುವ ಮಿರ್ರಾ ಅಲ್ಫಾಸಾ ಅವರು ಪಾಂಡಿಚೆರಿಯಲ್ಲಿ (ಈಗಿನ ಪುದುಚೆರಿ) ಅರವಿಂದ ಘೋಷ್ ಅವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿ ಮಾಡಿದರು.

1912: ಜರ್ಮನಿಯ ಖ್ಯಾತ ವಿಮಾನ ಹಾರಾಟಗಾರ್ತಿ ಹನ್ನಾ ರೀಟ್ಸ್ಷ್ ಹುಟ್ಟಿದ ದಿನ. ಆಲ್ಫ್ ಪರ್ವತ ಶ್ರೇಣಿಯ ಮೇಲಿನಿಂದ ಗ್ಲೈಡರ್ ಹಾರಿಸಿದ ಪ್ರಥಮ ವ್ಯಕ್ತಿ ಈಕೆ. ಬರ್ಲಿನ್ನಿನ ಭೂಗತ ಬಂಕರಿನಲ್ಲಿ ಹಿಟ್ಲರನನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಗಳ್ಲಲಿ ಈಕೆ ಕೂಡ ಒಬ್ಬಳು.

1869: ಇಂಗ್ಲಿಷ್ ಶಿಲ್ಪಿ ಎಡ್ವಿನ್ ಲ್ಯೂಟಿನ್ಸ್ (1869-1944) ಜನ್ಮದಿನ. ನವದೆಹಲಿಯ ಯೋಜನೆ ಹಾಗೂ `ವೈಸ್ರಾಯ್ಸ್ ಹೌಸ್'ನ ವಿನ್ಯಾಸ ರೂಪಿಸಿದ ವ್ಯಕ್ತಿ ಈತ. ಈತ ರೂಪಿಸಿದ `ವೈಸ್ರಾಯ್ಸ್ ಹೌಸ್' ಈಗ ರಾಷ್ಟ್ರಪತಿ ಭವನ.

1849: ಲಾರ್ಡ್ ಡಾಲ್ ಹೌಸಿಯು ಪಂಜಾಬ್ನ್ನು ವಶಪಡಿಸಿಕೊಂಡ.

1857: ಯುವ ಸೈನಿಕ ಮಂಗಲಪಾಂಡೆ ಬ್ಯಾರಕ್ ಪುರದಲ್ಲಿ ತನ್ನ ತುಕಡಿಯ ಸಾರ್ಜೆಂಟ್ ಮೇಜರನತ್ತ ಗುಂಡು ಹಾರಿಸಿದ. ಪಾಂಡೆಯನ್ನು ನಿರಾಯುಧನನ್ನಾಗಿ ಮಾಡಿ ನಂತರ ಗಲ್ಲಿಗೇರಿಸಲಾಯಿತು. ಈ ಘಟನೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ (ಸಿಪಾಯಿ ದಂಗ) ಮೂಲವಾಯಿತು.

1815: ಸರ್ ಹೆನ್ರಿ ಬಾರ್ಟಲ್ ಫ್ರೇರ್ (1815-1884) ಹುಟ್ಟಿದ ದಿನ. ಭಾರತದಲ್ಲಿ ಬ್ರಿಟಿಷ್ ವಸಾಹತಿನ ಆಡಳಿತಗಾರನಾಗಿದ್ದ ಈತ ಐದು ವರ್ಷಗಳ ಕಾಲ ಬಾಂಬೆಯ (ಈಗಿನ ಮುಂಬೈ) ಗವರ್ನರ್ ಆಗಿದ್ದ.

No comments:

Post a Comment