ಇಂದಿನ ಇತಿಹಾಸ History Today ಮಾರ್ಚ್ 24
2018: ಪಾಟ್ನಾ: ಮೇವು ಹಗರಣದ ನಾಲ್ಕನೇ
ಪ್ರಕರಣದಲ್ಲಿ ರಾಷ್ಟ್ರೀಯ ಜನತಾದಳದ (ಆರ್ ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಭಾರತೀಯ
ದಂಡ ಸಂಹಿತೆಯ ಅಡಿಯಲ್ಲಿ ೭ ವರ್ಷ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ೭ ವರ್ಷ ಒಟ್ಟು
೧೪ ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಲಾಲು
ಪ್ರಸಾದ್ ಅವರು ಶಿಕ್ಷೆಯನ್ನು ಸತತವಾಗಿ ಒಂದರ ಬಳಿಕ ಒಂದರಂತೆ ಅನುಭವಿಸಬೇಕು ಎಂದು ರಾಂಚಿಯಲ್ಲಿನ
ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಶಿವಪಾಲ್ ಸಿಂಗ್ ಅವರು ತೀರ್ಪು ನೀಡಿದರು. ಸೆರೆವಾಸದ ಜೊತೆಗೆ
೬೦ ಲಕ್ಷ ರೂಪಾಯಿಗಳ ದಂಡವನ್ನೂ ಕೋರ್ಟ್ ಲಾಲು ಪ್ರಸಾದ್ ಅವರಿಗೆ ವಿಧಿಸಿತು. ಮೇವು ಹಗರಣಕ್ಕೆ ಸಂಬಂಧಿಸಿದ ಈವರೆಗಿನ ನಾಲ್ಕು ಪ್ರಕರಣಗಳ
ಪೈಕಿ ಈ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯೇ ಅತ್ಯಂತ ಗರಿಷ್ಠ ಪ್ರಮಾಣದ್ದಾಗಿದೆ. ಮೇವು ಹಗರಣಕ್ಕೆ
ಸಂಬಂಧಿಸಿದ ಇನ್ನೂ ಎರಡು ಪ್ರಕರಣಗಳ ತೀರ್ಪು ಬರಲು ಬಾಕಿ ಇದೆ. ಮೇಲ್ಮನವಿ:
ಲಾಲು ಪ್ರಸಾದ್ ಅವರ ವಕೀಲ ಪ್ರಭಾತ್ ಕುಮಾರ್ ಅವರು ತೀರ್ಪಿನ ವಿರುದ್ಧ ತಾವು ಮೇಲಿನ ನ್ಯಾಯಾಲಯದಲ್ಲಿ
ಮೇಲ್ಮನವಿ ಸಲ್ಲಿಸುವುದಾಗಿ ಪತ್ರಕರ್ತರ ಜೊತೆ ಮಾತನಾಡುತ್ತಾ ತಿಳಿಸಿದರು. ಮಾ.19ರ ಸೋಮವಾರ ಪ್ರಸ್ತುತ ಜಾರ್ಖಂಡಿನಲ್ಲಿ ಇರುವ ಡುಮ್ಕಾದಲ್ಲಿನ
ನ್ಯಾಯಾಲಯ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಅವರಿಗೆ ಶಿಕ್ಷೆ ವಿಧಿಸಿತ್ತು. ಡುಮ್ಕಾ
ಬೊಕ್ಕಸದಿಂದ ೩.೧೩ ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಂಡದ್ದಕ್ಕೆ ಸಂಬಂಧಿಸಿದ ಪ್ರಕರಣ
ಇದಾಗಿತ್ತು. ಬಿಹಾರದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ
ಜಗನ್ನಾಥ ಮಿಶ್ರ ಅವರನ್ನು ನ್ಯಾಯಾಲಯವು ಈ ಪ್ರಕರಣದಲ್ಲಿ (೪ನೇ ಪ್ರಕರಣ) ಖುಲಾಸೆ ಮಾಡಿತು. ಮೊದಲ
ಪ್ರಕರಣ: ಚೈಬಾಸಾ ಬೊಕ್ಕಸದಿಂದ ೩೭.೭ ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಮೊತ್ತ ಮೊದಲ
ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ೨೦೧೩ರಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ
ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತ್ತು. ನ್ಯಾಯಾಲಯವು ಲಾಲು ಪ್ರಸಾದ್ ಅವರನ್ನು ತತ್
ಕ್ಷಣವೇ ಸಂಸತ್ತಿನಿಂದ ಅನರ್ಹಗೊಳಿಸಿ, ೧೧ ವರ್ಷಗಳ ಕಾಲ ಚುನಾವಣೆಗಳಲ್ಲಿ ಸ್ಪರ್ಧಿಸದಂತೆಯೂ ನಿಷೇಧಿಸಿತ್ತು.
ಏನಿದ್ದರೂ ಡಿಸೆಂಬರ್ ೧೩ರಂದು ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವ ಮೂಲಕ ಅಲ್ಪ
ಪರಿಹಾರ ಒದಗಿಸಿತ್ತು. ೨೦೧೮ರ ಜನವರಿ ೬ರಂದು ವಿಶೇಷ
ಸಿಬಿಐ ನ್ಯಾಯಾಲಯವು ಪ್ರಸಾದ್ ಅವರಿಗೆ ೨೧ ವರ್ಷಗಳ ಹಿಂದೆ ದೇವಘಡ ಬೊಕ್ಕಸದಿಂದ ೮೯.೨೭ ಲಕ್ಷ ರೂಪಾಯಿಗಳನ್ನು
ಅಕ್ರಮವಾಗಿ ಹಿಂತೆಗೆದುಕೊಂಡದ್ದಕ್ಕೆ ಸಂಬಂಧಿಸಿದ ಮೇವು ಹಗರಣದ ಎರಡನೇ ಪ್ರಕರಣದಲ್ಲಿ ಮೂರೂವರೆ ವರ್ಷಗಳ
ಸೆರೆವಾಸ ಮತ್ತು ೧೦ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿತ್ತು. ೨೦೧೮ರ ಜನವರಿ ೨೪ರಂದು ವಿಶೇಷ ಸಿಬಿಐ ನ್ಯಾಯಾಲಯವು, ಚೈಬಾಸಾ
ಬೊಕ್ಕಸದಿಂದ ೩೭.೬೨ ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಮೂರನೇ ಪ್ರಕರಣದಲ್ಲಿ ಲಾಲು
ಪ್ರಸಾದ್ ಮತ್ತು ಜಗನ್ನಾಥ ಮಿಶ್ರ ಅವರಿಗೆ ತಲಾ ಐದು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಎರಡನೇ ಪ್ರಕರಣದಲ್ಲಿ ಸೆರೆವಾಸದ ಶಿಕ್ಷೆ ವಿಧಿಸಿದ ಬಳಿಕ
ಲಾಲು ಪ್ರಸಾದ್ ಅವರನ್ನು ೨೦೧೭ರ ಡಿಸೆಂಬರ್ ೨೩ರಿಂದ ರಾಂಚಿಯ ಬಿರ್ಸಾ ಮುಂಡಾ ಸೆರೆಮನೆಯಲ್ಲಿ ಇರಿಸಲಾಗಿದೆ. ಐದನೇ
ಪ್ರಕರಣವು ರಾಂಚಿಯಲ್ಲಿನ ದೊರಾಂಡ ಬೊಕ್ಕಸದಿಂದ ೧೩೯ ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಳ್ಳಲಾಗಿದೆ
ಎಂದು ಆಪಾದಿಸಲಾದ ಪ್ರಕರಣವಾಗಿದ್ದು ಇನ್ನೂ ತೀರ್ಪು ಹೊರಬಂದಿಲ್ಲ. ಪ್ರಸಾದ್ ಅವರನ್ನು ಇತ್ತೀಚೆಗೆ
ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಮತ್ತು ರಾಂಚಿಯಲ್ಲಿ ಕೆಲವು ವೈದ್ಯಕೀಯ ನೆರವನ್ನು ಒದಗಿಸಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ತೆರಳುವಂತೆ ಅವರಿಗೆ ಸಲಹೆ ಮಾಡಲಾಗಿತ್ತು. ೯೦೦
ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಮೇವು ಹಗರಣದ ಪ್ರಕರಣಗಳು ಅವಿಭಜಿತ ಬಿಹಾರಿನ ವಿವಿಧ ಜಿಲ್ಲೆಗಳಲ್ಲಿ
೧೯೯೦ರ ಅವಧಿಯಲ್ಲಿ ರಾಜ್ಯದಲ್ಲಿ ರಾಷ್ಟೀಯ ಜನತಾದಳ (ಆರ್ ಜೆಡಿ) ಅಧಿಕಾರದಲ್ಲಿದ್ದಾಗ ಪಶು ಸಂಗೋಪನಾ
ಇಲಾಖೆಯ ಸರ್ಕಾರಿ ಬೊಕ್ಕಸದಿಂದ ಅಕ್ರಮವಾಗಿ ಹಣ ಹಿಂಪಡೆದ ಪ್ರಕರಣಗಳಾಗಿದ್ದವು.
2018: ಕೋಚಿ: ಕೇರಳ ಐಸಿಸ್ ನೇಮಕಾತಿ ಪ್ರಕರಣದಲ್ಲಿ ಬಿಹಾರದ ನಿವಾಸಿ
ಯಾಸ್ಮೀನ್ ಮೊಹಮ್ಮದ್ ಜಹೀದ್ ಎಂಬ ಮಹಿಳೆಗೆ ಕೋಚಿಯ ಎನ್ ಐಎ ವಿಶೇಷ ನ್ಯಾಯಾಲಯವು ೭ ವರ್ಷಗಳ ಸೆರೆವಾಸದ
ಶಿಕ್ಷೆ ವಿಧಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ
ತನ್ನ ತೀರ್ಪು ನೀಡಿದ ನ್ಯಾಯಾಲಯ ಆಕೆಗೆ ೨೫,೦೦೦ ರೂಪಾಯಿಗಳ ದಂಡವನ್ನೂ ಸೆರೆವಾಸದ ಶಿಕ್ಷೆಯ ಜೊತೆಗೆ
ವಿಧಿಸಿತು. ೨೦೧೬ರಲ್ಲಿ ನಿಷೇಧಿತ ಐಸಿಸ್ (ಇಸ್ಲಾಮಿಕ್
ಸ್ಟೇಟ್) ಸಂಘಟನೆಗೆ ಸೇರಿಸುವ ಸಲುವಾಗಿ ಕೇರಳದ ಕಾಸರಗೋಡಿನಿಂದ ೧೫ ಜನರನ್ನು ಆಫ್ಘಾನಿಸ್ಥಾನಕ್ಕೆ
ಅಕ್ರಮವಾಗಿ ರವಾನಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದು.
೨೦೧೬ರ ಜುಲೈ ೩೦ರಂದು ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಮಗುವಿನೊಂದಿಗೆ
ಕಾಬೂಲ್ ಗೆ ತೆರಳಲು ಸಿದ್ಧಳಾಗಿದ್ದಾಗ ಯಾಸ್ಮೀನಳನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಕಳೆದ ವರ್ಷ ಜನವರಿಯಲ್ಲಿ ದೋಷಾರೋಪ ಪಟ್ಟಿ
(ಚಾರ್ಜ್‌ಶೀಟ್) ಸಲ್ಲಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಮಹಿಳೆಯನ್ನು ೨ನೇ ಆರೋಪಿಯನ್ನಾಗಿ
ಹೆಸರಿಸಿತ್ತು. ಪ್ರಕರಣದ ಮೊದಲ ಆರೋಪಿ ಅಬ್ದುಲ್ ರಶೀದ್ ಅಬ್ದುಲ್ಲ ಪ್ರಸ್ತುತ ಆಫ್ಘಾನಿಸ್ಥಾನದ ನಗರಹಾರ್
ಪ್ರಾಂತ್ಯದಲ್ಲಿ ಇದ್ದಾನೆಂದು ನಂಬಲಾಗಿದೆ. ಎನ್ ಐಎ
ತನಿಖೆಯಿಂದ ಅಬ್ದುಲ್ಲ ಕಾಸರಗೋಡಿನ ಹಲವಾರು ಯುವಕರನ್ನು ಐಸಿಸ್ ಸೇರುವ ಸಲುವಾಗಿ ಕುಟುಂಬ ಸದಸ್ಯರ
ಸಹಿತವಾಗಿ ಭಾರತ ತೊರೆಯಲು ಪ್ರಚೋದಿಸಿದ್ದ ಎಂಬುದು ಸಾಬೀತಾಗಿದೆ. ಆತ ಕಾಸರಗೋಡು ಮತ್ತು ಇತರ ಸ್ಥಳಗಳಲ್ಲಿ
ಭಯೋತ್ಪಾದಕ ಸಂಘಟನೆಗೆ ಬೆಂಬಲವಾಗಿ ಅನುಗೊಳಿಸುವಿಕೆ ತರಗತಿಗಳನ್ನು ಸಂಘಟಿಸಿದ್ದ. ಎನ್ ಐಎ ಪ್ರಕಾರ,
ಅಬ್ದುಲ್ಲ ಹಣ ಸಂಗ್ರಹಿಸಿ ಅದನ್ನು ಯಾಸ್ಮೀನಳಿಗೆ ವರ್ಗಾವಣೆ ಮಾಡುತ್ತಿದ್ದ. ಯಾಸ್ಮೀನ್ ಅದನ್ನು ಭಯೋತ್ಪಾದಕ
ಸಂಘಟನೆಗೆ ಬೆಂಬಲವಾಗಿ ನಡೆಸುವ ಚಟುವಟಿಕೆಗಳಿಗೆ ಬಳಸುತ್ತಿದ್ದಳು. ೨೦೧೬ರ ಆಗಸ್ಟ್ ೨೪ರಂದು ಕೋಚಿಯ
ಎನ್ ಐಎ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮೊದಲಿಗೆ ಕೇರಳ ಪೊಲೀಸರು ತನಿಖೆ ನಡೆಸಿದ್ದರು.
ಪ್ರಕರಣದ ವಿಚಾರಣೆ ಮಾರ್ಚ್ ೨೦ರಂದು ಮುಕ್ತಾಯಗೊಂಡಿತ್ತು. ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ
ಪ್ರಾಸೆಕ್ಯೂಷನ್ ಹಾಜರು ಪಡಿಸಿದ ಸುಮಾರು ೫೨ ಸಾಕ್ಷಿಗಳನ್ನು, ಒಬ್ಬ ಆರೋಪಿ ಪರ ಸಾಕ್ಷಿಯನ್ನು ಮತ್ತು
೫೦ಕ್ಕೂ ಹೆಚ್ಚು ವಸ್ತು ವಿಷಯಗಳನ್ನು ಪರಿಶೀಲಿಸಿತ್ತು.
2018: ಅಮರಾವತಿ: ನೂತನ ರಾಜಧಾನಿಯಲ್ಲಿ
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಕಚೇರಿ ಎಲ್ಲಿರುತ್ತದೆ ಎಂಬ ಹಲವಾರು ತಿಂಗಳುಗಳ ಊಹಾಪೋಹಕ್ಕೆ
ತೆರೆ ಎಳೆಯಲಾಯಿತು. ಬೃಹತ್ ಗೋಪುರದ ಅತ್ಯಂತ ತುತ್ತ
ತುದಿಯ ೪೬ನೇ ಮಹಡಿಯಲ್ಲಿ ಐಷಾರಾಮೀ ಮುಖ್ಯಮಂತ್ರಿ ಕಚೇರಿ ಇರಲಿದ್ದು ಮುಖ್ಯಮಂತ್ರಿಯವರಿಗೆ ಅಲ್ಲಿಂದಲೇ
ಇಡೀ ರಾಜಧಾನಿ ನಗರದ ವಿಹಂಗಮ ನೋಟ ಕಾಣಲಿದೆ. ನಗರಾಡಳಿತ
ಸಚಿವ ಪಿ. ನಾರಾಯಣ ಅವರು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದರು. ನೇರವಾಗಿ ೪೬ ಅಂತಸ್ತುಗಳ ಗೋಪುರದ ತುತ್ತ ತುದಿಯಲ್ಲಿನ ಕಚೇರಿಯಿಂದ ಮುಖ್ಯಮಂತ್ರಿಯವರು ನೇರವಾಗಿ ಅಲ್ಲಿಯೇ ಇರುವ ಹೆಲಿಪ್ಯಾಡಿಗೆ
ತೆರಳಬಹುದು. ಅತಿ ಗಣ್ಯ ವ್ಯಕ್ತಿಗಳು ಮತ್ತು ವಿದೇಶೀ ಗಣ್ಯರು ಮುಖ್ಯಮಂತ್ರಿ ಕಚೇರಿಯನ್ನು ನೇರವಾಗಿ
ಹೆಲಿಪ್ಯಾಡ್ ಮೂಲಕವೇ ತಲುಪಬಹುದು. ರಾಜಧಾನಿಯಲ್ಲಿ
ನಿರ್ಮಿಸಲಾಗುವ ಐದು ಆಡಳಿತಾತ್ಮಕ ಮಹಾಗೋಪುರಗಳಲ್ಲಿ ಮುಖ್ಯಮಂತ್ರಿ ಕಚೇರಿ ಇರುವ ಗೋಪುರ ಅತ್ಯಂತ ಎತ್ತರದ
ಗೋಪುರವಾಗಿರಲಿದೆ. ಫೋಸ್ಟರ್ ಪ್ಲಸ್ ಪಾರ್ಟ್ನರ್ಸ್ ನಗರ ವಾಸ್ತುಶಿಲ್ಪ ವಿನ್ಯಾಸ ಸಲಹಾ ಸಂಸ್ಥೆಯು
ರೂಪಿಸಿರುವ ಮಾಸ್ಟರ್ ಪ್ಯಾನಿನಲ್ಲಿ ಈ ಗೋಪುರಗಳನ್ನು ವಿನ್ಯಾಸ ಗೊಳಿಸಲಾಗಿದೆ. ವಿಶ್ವ ವಿಖ್ಯಾತ ವಾಸುಶಿಲ್ಪಿ
ಸರ್ ನೋರ್ಮನ್ ಫೋಸ್ಟರ್ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇತರ ನಾಲ್ಕು ಗೋಪುರಗಳು ತಲಾ ೪೦ ಅಡಿ
ಎತ್ತರ ಇರಲಿವೆ. ಐದು ಗೋಪುರಗಳ ಆವೃತ ವಲಯದ (ಎನ್ ಕ್ಲೇವ್) ಮಾದರಿಗಳನ್ನು ವಿಧಾನಸಭಾ ಸಮುಚ್ಚಯದಲ್ಲಿ
ಈದಿನ ಶಾಸಕರಿಗೆ ವೀಕ್ಷಣೆ ಸಲುವಾಗಿ ಪ್ರದರ್ಶಿಸಲಾಯಿತು. ರಚನೆಗಳ
ಅಂತಿಮ ವಿನ್ಯಾಸಗಳನ್ನು ಫೋಸ್ಟರ್ ಪ್ಲಸ್ ಪಾರ್ಟ್ನರ್ಸ್ ಸಲ್ಲಿಸಿದ್ದು ಕಟ್ಟಡಗಳ ನಿರ್ಮಾಣಕ್ಕಾಗಿ
ಟೆಂಡರ್ ಪ್ರಕ್ರಿಯೆ ಏಪ್ರಿಲ್ ಕೊನೆಗೆ ಆರಂಭವಾಗಲಿದೆ. ಈ ಆಡಳಿತಾತ್ಮಕ ಎನ್ ಕ್ಲೇವ್ ೨೧೭ ಚದರ ಕಿಲೋಮೀಟರ್
ವ್ಯಾಪ್ತಿಯ ರಾಜಧಾನಿ ನಗರದ ಕೇಂದ್ರ ಸ್ಥಾನವಾಗಿರಲಿದ್ದು, ಅಸೆಂಬ್ಲಿ ಮತ್ತು ಹೈಕೋರ್ಟ್ ಕಟ್ಟಡಗಳೂ
ಇಲ್ಲೇ ಇರುತ್ತವೆ. ಅಸೆಂಬ್ಲಿ ಕಟ್ಟಡವನ್ನು ೮.೫ ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗುವುದು
ಮತ್ತು ಹೈಕೋರ್ಟಿಗಾಗಿ ೨ ಲಕ್ಷ ಚದರ ಅಡಿಗಳ ಜಾಗದಲ್ಲಿ ಕಟ್ಟಡ ಬರಲಿದೆ. ಆಡಳಿತಾತ್ಮಕ ’ನಗರ’ವು ರಾಜಧಾನಿಯ ಸುತ್ತಣ
೯ ನಗರಗಳ ಮಧ್ಯೆ ಇರಲಿದ್ದು, ಈ ೯ ನಗರಗಳಲ್ಲಿ ಪ್ರತಿ ನಗರವೂ ನಿರ್ದಿಷ್ಟ ಉದ್ದೇಶಕ್ಕಾಗಿ ನಿರ್ಮಾಣಗೊಳ್ಳಲಿದೆ.
ಉದಾಹರಣೆಗೆ ಹೈಕೋರ್ಟ್ ’ನ್ಯಾಯ ನಗರಿ’ಯಲ್ಲಿ (ಜಸ್ಟೀಸ್ ಸಿಟಿ)
ಇರಲಿದೆ. ಈ ೯ ನಗರಗಳಲ್ಲದೆ, ೨೭ ಟೌನ್ ಶಿಪ್ ಗಳೂ
ಬರಲಿದ್ದು, ಪ್ರತಿಯೊಂದು ಟೌನ್ ಶಿಪ್ ಕೂಡಾ ೧೦ ನೆರೆಹೊರೆಗಳನ್ನು ಹೊಂದಿರಲಿವೆ. ಒಟ್ಟಾರೆಯಾಗಿ ಐಎಎಸ್
ಅಧಿಕಾರಿಗಳಿಗಾಗಿ ತಲಾ ೩೫೦೦ ಚದರ ಅಡಿಗಳ ೧೪೪ ಅಪಾರ್ಟ್ ಮೆಂಟುಗಳು ಸೇರಿ ೩೮೪೦ ಅಪಾರ್ಟ್‌ಮೆಂಟುಗಳು
ನಿರ್ಮಾಣಗೊಳ್ಳಲಿವೆ. ೧೮೬ ಕಿಮೀ ಉದ್ದದ ಎರಡು ವರ್ತುಲ ರಸ್ತೆಗಳನ್ನು ಮತ್ತು ೯೭.೫ ಕಿಮೀ ಉದ್ದದ ೮
ಮಾರ್ಗಗಳ ಒಳ ವರ್ತುಲ ರಸ್ತೆಗಳನ್ನು ನಿರ್ಮಿಸಲಾಗುವುದು. ೩೮೦ ಎಕರೆ ಪ್ರದೇಶದಲ್ಲಿ ಬೃಹತ್ ಉದ್ಯಾನವನ್ನು
ಅಭಿವೃದ್ಧಿ ಪಡಿಸಲಾಗುವುದು. ೧೬೦೦ ಕಿಮೀಗಳ ರಸ್ತೆ
ಜಾಲ ಮತ್ತು ಐದು ಐಕಾನಿಕ್ ಸೇತುವೆಗಳನ್ನೂ ಯೋಜಿಸಲಾಗಿದೆ. ಕೊಂಡವೀತಿವಗು ಮತ್ತು ಪಲವಗು ಪ್ರದೇಶಗಳಲ್ಲಿ
ಪ್ರವಾಹಗಳನ್ನು ತಡೆಯಲು ಐದು ಜಲಾಶಯಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಸಚಿವರು ವಿವರಿಸಿದರು.
ರಾಜಧಾನಿ ಅಭಿವೃದ್ಧಿಯ ಅಂಗವಾಗಿ ೧೧,೬೦೦ ಕೋಟಿ ರೂಪಾಯಿಗಳ ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ
ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸಲಾಗಿದೆ, ಆದರೆ ಕೇಂದ್ರ ಸರ್ಕಾರವು ೧೫೦೦ ಕೋಟಿ ರೂಪಾಯಿಗಳನ್ನು
ಮಾತ್ರ ಬಿಡುಗಡೆ ಮಾಡಿದೆ ಎಂದು ಸಚಿವರು ಹೇಳಿದರು.
2018: ಚಾಮರಾಜನಗರ: ಕಾಂಗ್ರೆಸ್ ಸರ್ಕಾರವು
ಕರ್ನಾಟಕದಲ್ಲಿ ಜನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಣ ಹೂಡುತ್ತಿದ್ದರೆ ಇದಕ್ಕೆ ವಿರುದ್ಧವಾಗಿ ಕೇಂದ್ರ
ಸರ್ಕಾರವು ರಾಷ್ಟ್ರದ ಸಂಪತ್ತನ್ನು ಲೂಟಿ ಮಾಡಲು ಅವಕಾಶ ನೀಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ
ರಾಹುಲ್ ಗಾಂಧಿ ಅವರು ಇಲ್ಲಿ ಗುಡುಗಿದರು. ಜನಾಶೀರ್ವಾದ ಯಾತ್ರೆಯ ಅಂಗವಾಗಿ ನಗರದಲ್ಲಿ ಜಾಥಾವನ್ನು
ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂದಿ ಅವರು, ನೀರವ್ ಮೋದಿ ಮತ್ತು ವಿಜಯ್ ಮಲ್ಯರಂತಹವರು ಲೂಟಿ ಮಾಡಿದ
ಹಣ ರಾಷ್ಟ್ರದ ಜನರಿಗೆ ಸೇರಿದ್ದು. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಜನರಿಗಾಗಿ ಮೋದಿ ಸರ್ಕಾರ ವೆಚ್ಚ
ಮಾಡಿದ ಹಣವನ್ನು ಸಿದ್ದರಾಮಯ್ಯ ಸರ್ಕಾರ ಕೇವಲ ಕರ್ನಾಟಕ ಒಂದೇ ರಾಜ್ಯದಲ್ಲಿ ವೆಚ್ಚ ಮಾಡಿದೆ. ರಾಜ್ಯ
ಸರ್ಕಾರ ೫ ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ೬೧ ಲಕ್ಷ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದೆ
ಎಂದು ಹೇಳಿದರು. ಹಿಡಿಯಷ್ಟು ಕಾಪೋರೇಟ್ ಗಳಿಗೆ ೨.೫ ಲಕ್ಷ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿರುವ
ಮೋದಿ ಸರ್ಕಾರ ಇಂತಹುದೇ ಕೊಡುಗೆಯನ್ನು ರೈತರಿಗೆ ನೀಡಲು ನಿರಾಕರಿಸಿದೆ. ರೈತ ಸಾಲಗಳನ್ನು ಮನ್ನಾ ಮಾಡುವಂತೆ
ನಾನು ಪ್ರಧಾನಿಯವರಿಗೆ ಮನವಿ ಮಾಡಿದ್ದರೂ, ಅವರು ಉತ್ತರಿಸುವ ಗೋಜಿಗೂ ಹೋಗಿಲ್ಲ ಎಂದು ರಾಹುಲ್ ನುಡಿದರು.
ಇದಕ್ಕೆ ವ್ಯತಿರಿಕ್ತವಾಗಿ ನಾನು ಮನವಿ ಮಾಡಿದ ೧೦ ದಿನಗಳ ಒಳಗಾಗಿ ಸಿದ್ದರಾಮಯ್ಯ ಅವರ ಕೃಷಿಸಾಲಗಳ
ಮನ್ನಾ ಘೋಷಿಸಿದರು ಎಂದು ರಾಹುಲ್ ನುಡಿದರು. ನೋಟು
ಅಮಾನ್ಯೀಕರಣ: ನೋಟು ಅಮಾನ್ಯೀಕರಣ ಕ್ರಮಕ್ಕಾಗಿ ಮೋದಿ ಅವರನ್ನು ತೀವ್ರವಾಗಿ ಟೀಕಿಸಿದ ರಾಹುಲ್
ಗಾಂಧಿ, ಪ್ರಧಾನಿಯವರು ಶ್ರೀಮಂತರಿಗೆ ತಮ್ಮ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾರ್ಪಡಿಸಲು ಅವಕಾಶ
ನೀಡುತ್ತಿದ್ದಾರೆ ಎಂದು ಹೇಳಿದರು. ’ಕೋಟ್ಯಧಿಪತಿಗಳು ಬ್ಯಾಂಕುಗಳ ಮುಂದೆ (ಅಮಾನ್ಯಗೊಳಿಸಿದ ಹಣವನ್ನು
ಬ್ಯಾಂಕಿನಲ್ಲಿ ಸಲ್ಲಿಸಲು) ಸರತಿ ಸಾಲಿನಲ್ಲಿ ನಿಂತದ್ದನ್ನು ನೀವೆಲ್ಲಾದರೂ ಕಂಡಿದ್ದಿರಾ?’ ಎಂದು
ರಾಹುಲ್ ಪ್ರಶ್ನಿಸಿದರು. ಇದಕ್ಕೆ ಮುನ್ನ ಮಹಾರಾಣಿ
ಕಾಲೇಜಿನ ವಿದ್ಯಾರ್ಥಿನಿಯರ ಜೊತೆಗಿನ ತಮ್ಮ ಸಂವಾದವನ್ನು ನೆನಪಿಸಿದ ಅವರು ವಿದ್ಯಾರ್ಥಿನಿಯೊಬ್ಬರು
ನನ್ನ ಬಳಿ ನೋಟು ಅಮಾನ್ಯೀಕರಣದಿಂದ ರಾಷ್ಟ್ರದಲ್ಲಿ ಯಾವುದೇ ಬದಲಾವಣೆಯೂ ಆಗಿಲ್ಲ ಅಥವಾ ರಾಷ್ಟ್ರಕ್ಕೆ
ಅನುಕೂಲವೂ ಆಗಿಲ್ಲ ಎಂದು ಹೇಳಿದರು ಎಂದು ನುಡಿದರು. ರಾಷ್ಟ್ರದ ಜಿಡಿಪಿ ಚೆನ್ನಾಗಿದ್ದಾಗ, ಜಿ ಎಸ್
ಟಿಯಲ್ಲಿ ಹಲವಾರು ಹಂತಗಳನ್ನು ಏಕೆ ಮಾಡಬೇಕಾಗಿತ್ತು ಎಂದು ಒಬ್ಬ ವಿದ್ಯಾರ್ಥಿನಿ ಅಚ್ಚರಿ ಪಟ್ಟರು
ಎಂದೂ ರಾಹುಲ್ ನುಡಿದರು. ‘೧೮-೨೦ ವರ್ಷದ ವಿದ್ಯಾರ್ಥಿನಿಯರು
ಅರ್ಥಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವಾಗ, ಪ್ರಧಾನಿಯವರಿಗೆ ಏಕೆ ಅದು ಅರ್ಥವಾಗುವುದಿಲ್ಲ?’ ಎಂದು
ಕಾಂಗ್ರೆಸ್ ಅಧ್ಯಕ್ಷ ಪ್ರಶ್ನಿಸಿದರು. ಇದಕ್ಕೆ ಮುನ್ನ
ಮಾತನಾಡಿದ ಸಿದ್ದರಾಮಯ್ಯ ಅವರು ’ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಮತ್ತು
ಇತರ ಬಿಜೆಪಿ ಸಚಿವರು ಭ್ರಷ್ಟಾಚಾರದ ಆಪಾದನೆಯಲ್ಲಿ ಜೈಲಿಗೆ ಹೋಗಿರುವಾಗ, ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರ
ಮಾಡಿದೆ ಎಂಬುದಾಗಿ ಆಪಾದಿಸುವ ನೈತಿಕ ಹಕ್ಕು ಆ ಪಕ್ಷಕ್ಕೆ ಇಲ್ಲ ಎಂದು ಹೇಳಿದರು.
2018: ನವದೆಹಲಿ: ಮುಂದಿನ ಎಪ್ರಿಲ್ ತಿಂಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದ
ಚಂದ್ರಯಾನ ೨ ಬಾಹ್ಯಾಕಾಶ ಯಾನವನ್ನು ಅಕ್ಟೋಬರ್ ತಿಂಗಳಿಗೆ ಮುಂದೂಡಲಾಯಿತು. ಚಂದ್ರಯಾನ
೨ ಯಾನದ ತಜ್ಞರು ಕೆಲವೊಂದು ಪೂರ್ವಭಾವಿ ಪರೀಕ್ಷೆಗಳನ್ನು ಸೂಚಿಸಿದ್ದಾರೆ. ಹೀಗಾಗಿ ಅಕ್ಟೋಬರಿನಲ್ಲಿ
ಚಂದ್ರಯಾನ ೨ ನಡೆಸಲು ನಿರ್ಧರಿಸಲಾಯಿತು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದರು. ‘ಚಂದ್ರಯಾನ ೨ ಎಪ್ರಿಲ್ ತಿಂಗಳಲ್ಲಿ ಅಲ್ಲ; ಅಕ್ಟೋಬರ್ ತಿಂಗಳಲ್ಲಿ
ಆರಂಭಗೊಳ್ಳಲಿದೆ’ ಎಂದು ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರ
ಜೊತೆ ಮಾತನಾಡುತ್ತಾ ಅವರು ನುಡಿದರು. ೮೦೦ ಕೋಟಿ ರೂ.
ವೆಚ್ಚದ ಚಂದ್ರಯಾನ ೨ ಬಾಹ್ಯಾಕಾಶ ಯಾನವು ೨೦೧೮ರ ಎಪ್ರಿಲ್ - ನವೆಂಬರ್ ನಡುವೆ ಆರಂಭಗೊಳ್ಳಲಿದೆ ಎಂದು
ಇಸ್ರೋ ಅಧ್ಯಕ್ಷ ಶಿವನ್ ಈ ಹಿಂದೆ ಹೇಳಿದ್ದರು.
2018: ನವದೆಹಲಿ: ’ಕೇಂದ್ರ ಲೋಕಪಾಲ
ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕಾತಿಯನ್ನು ಆಗ್ರಹಿಸಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ
ಕಳೆದ ನಾಲ್ಕು ವರ್ಷಗಳಲ್ಲಿ ೪೩ ಪತ್ರಗಳನ್ನು ಬರೆದಿದ್ದೇನೆ; ಆದರೆ ಅವರಿಂದ ಒಂದಕ್ಕೂ ಉತ್ತರ ಬಂದಿಲ್ಲ;
ಹಾಗಾಗಿ ಈಗ ಲೋಕಪಾಲರ ನೇಮಕಾತಿಯನ್ನು ಆಗ್ರಹಿಸಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದು ನನಗೆ ಅನಿವಾರ್ಯವಾಯಿತು’ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರ
ವಿರೋಧಿ ಆಂದೋಲನದ ಹರಿಕಾರ, ಅಣ್ಣಾ ಹಜಾರೆ ಹೇಳಿದರು. ಅಣ್ಣಾ ಹಜಾರೆ ಅವರು ಮಾರ್ಚ್ ೨೩ರ ಶುಕ್ರವಾರ ದೆಹಲಿಯ ರಾಮಲೀಲಾ
ಮೈದಾನದಲ್ಲಿ ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಮೊದಲ ದಿನ ಅವರ ಜೊತೆಗೆ ಉತ್ತರ ಪ್ರದೇಶ,
ಹರಿಯಾಣ, ಪಂಜಾಬ್, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಂದ ಬಂದ ಸುಮಾರು ೫ರಿಂದ ೬
ಸಾವಿರ ಜನರು ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಲೋಕಪಾಲ, ಲೋಕಾಯುಕ್ತ ನೇಮಕದ ಜೊತೆಗೆ, ಹೊಸ ಚುನಾವಣಾ ಸುಧಾರಣೆ
ಮತ್ತು ದೇಶದಲ್ಲಿನ ಕೃಷಿ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಡಾ. ಎಂ.ಎಸ್. ಸ್ವಾಮಿನಾಥನ್
ವರದಿಯ ಅನುಷ್ಠಾನವನ್ನೂ ಅಣ್ಣಾ ಆಗ್ರಹಿಸಿದರು. ‘ಸತ್ಯಾಗ್ರಹ
ಆರಂಭಿಸುವ ಮುನ್ನಾ ದಿನವಾದ ಗುರುವಾರ, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಮಹಾರಾಷ್ಟ್ರದ
ಕೆಲವು ಸಚಿವರು ಬಂದು ನನ್ನನ್ನು ಭೇಟಿ ಮಾಡಿದರು. ಕೆಲವೊಂದು ಭರವಸೆಗಳನ್ನು ಅವರು ನನಗೆ ಕೊಟ್ಟರು.
ಆದರೆ ನನಗೆ ಅವರ ಭರವಸೆಗಳಲ್ಲಿ ವಿಶ್ವಾಸವಿಲ್ಲ” ಎಂದು ಅಣ್ಣಾ ಹಜಾರೆ
ಹೇಳಿದರು. ‘ಸರ್ಕಾರದ ಜೊತೆ ನಾನು ಚರ್ಚೆ ನಡೆಸುತ್ತೇನೆ;
ಆದರೆ ಸರ್ಕಾರ ತನ್ನ ಸ್ಪಷ್ಟ ಯೋಜನೆಯೊಂದಿಗೆ ಬರುವವರೆಗೆ ನನ್ನ ಆಮರಣ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತೇನೆ’ ಎಂದು ಹಜಾರೆ ನುಡಿದರು. ಕೇಂದ್ರದಿಂದ ಭ್ರಷ್ಟಾಚಾರ
ನಿಗ್ರಹ ಸಂಸ್ಥೆ ಬಗ್ಗೆ ಕರಡು: ಪ್ರಬಲ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ರಚನೆ ಮತ್ತು ಸಂಕಷ್ಟದಲ್ಲಿರುವ
ರೈತರಿಗೆ ಪರಿಹಾರ ಒದಗಿಸುವ ಬಗೆಗಿನ ತಮ್ಮ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರವು ಕರಡು ಪ್ರಸ್ತಾವವೊಂದನ್ನು
ಕಳುಹಿಸಲಿದೆ. ತಾವು ಅದನ್ನು ಪ್ರತಿಭಟನಕಾರರ ಕೋರ್ ಕಮಿಟಿಯಲ್ಲಿ ಚರ್ಚಿಸುವುದಾಗಿ ಅಣ್ಣಾ ಹಜಾರೆ ಇಲ್ಲಿ
ಹೇಳಿದರು. ‘ಸರ್ಕಾರವು ಕರಡು ಒಂದನ್ನು ಕಳುಹಿಸಲಿದೆ
ಎಂದು ನನಗೆ ತಿಳಿಸಲಾಗಿದೆ. ನಾನು ಅದರ ಬಗ್ಗೆ ಕೋರ್ ಕಮಿಟಿಯಲ್ಲಿ ಮಾತನಾಡುವೆ’ ಎಂದು ಹಜಾರೆ ಸುದ್ದಿಗಾರರ ಜೊತೆ ಮಾತನಾಡುತ್ತಾ
ನುಡಿದರು. ಶುಕ್ರವಾರ
ಸತ್ಯಾಗ್ರಹದಲಿ ಸುಮಾರು ೧೦,೦೦೦ ಜನರು ಪಾಲ್ಗೊಂಡಿದ್ದರು. ಈದಿನ ಸುಮಾರು ೩೦೦೦ ಮಂದಿ ಇದ್ದರು ಎಂದು
ಪೊಲೀಸರು ಹೇಳಿದರು.
2018: ಗುವಾಹಟಿ: ಇಬ್ಬರು ಅಪ್ರಾಪ್ತ
ವಯಸ್ಕರನ್ನು ಒಳಗೊಂಡ ಮೂವರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಬೆಂಕಿ ಹಚ್ಚಿದ ಪರಿಣಾಮವಾಗಿ
ಅಸ್ಸಾಮಿನ ನಾಗಾಂವ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಮಾರ್ಚ್ 23ರ ಶುಕ್ರವಾರ ದಾರುಣವಾಗಿ
ಸಾವನ್ನಪ್ಪಿದಳು. ಗುವಾಹಟಿಯಿಂದ ೧೨೫ ಕಿಮೀ ದೂರದ ಬಟಡ್ರಾಬ ಪೊಲೀಸ್ ಠಾಣೆ ವ್ಯ್ಯಾಪ್ತಿಯ ಲಲುಂಗ್ಗಾಂವ್
ನಲ್ಲಿ ಈ ಭೀಕರ ಘಟನೆ ಶುಕ್ರವಾರ ಸಂಜೆ ಘಟಿಸಿತು. ೫ನೇ ತರಗತಿಯ ವಿದ್ಯಾರ್ಥಿನಿ ಶೇಕಡಾ ೯೫ಕ್ಕೂ ಹೆಚ್ಚು
ಸುಟ್ಟ ಗಾಯಗಳ ಪರಿಣಾಮವಾಗಿ ಅಸು ನೀಗಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸ್ಥಳೀಯ ನಿವಾಸಿಗಳು
ನಾಗಾಂವ್ ಸಿವಿಲ್ ಆಸ್ಪತ್ರೆಗೆ ಸೇರಿಸಿದರು. ಅಲ್ಲಿಂದ ಆಕೆಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ
ಸ್ಥಳಾಂತರಿಸಲಾಯಿತು. ೨೧ರ
ಹರೆಯದ ಆರೋಪಿ ಜಾಕೀರ್ ಹುಸೇನ್ ಮತ್ತು ಅದೇ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕರು ಬಾಲಕಿ ಮನೆಯಲ್ಲಿ
ಏಕಾಂಗಿಯಾಗಿದ್ದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು
ಎಂದು ಪೊಲೀಸರು ತಿಳಿಸಿದರು. ‘ನಾವು ಹದಿ ಹರೆಯದ ಇಬ್ಬರನ್ನು
ಬಂಧಿಸಿದ್ದು, ಮೂರನೇಯವನಿಗಾಗಿ ಶೋಧ ನಡೆಸುತ್ತಿದ್ದೇವೆ’ ಎಂದು ನಾಗಾಂವ್ ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಶಂಕರ ಬ್ರತ ರೈಮೇಧಿ ಸುದ್ದಿಗಾರರಿಗೆ ತಿಳಿಸಿದರು. ತಲೆಮರೆಸಿಕೊಂಡವನ ಮನೆ ನಾಶ: ಲಲುಗ್ಗಾಂವ್ ಜನರು ತಲೆತಪ್ಪಿಸಿಕೊಂಡಿರುವ
ಜಾಕೀರ್ ಹುಸೇನನ ಮನೆಯನ್ನು ಈದಿನ ನಾಶ ಪಡಿಸಿದರು. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಮತ್ತಿತರ
ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನಾ ಪ್ರದರ್ಶನ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ‘ಇಂತಹ ನೀಚ ಅಪರಾಧಗಳಲ್ಲಿ ತಪ್ಪಿತಸ್ಥರ ವಯಸ್ಸು ಶಿಕ್ಷೆ
ವಿಧಿಸಲು ಅಡ್ಡಿಯಾಗಬಾರದು’ ಎಂದು ಸ್ಥಳೀಯ ಸಂಸತ್
ಸದಸ್ಯ ಮತ್ತು ಕಿರಿಯ ರೈಲ್ವೇ ಸಚಿವ ರಾಜೆನ್ ಗೊಹೈನ್ ಹೇಳಿದರು. ಮಹಿಳೆಯರ
ವಿರುದ್ಧದ ಅಪರಾಧಗಳ ಜೊತೆ ವ್ಯವಹರಿಸಲು ನಿರ್ದಿಷ್ಟ ಕಾನೂನು ರಚಿಸಬೇಕು ಎಂದು ಹಲವಾರು ಶಾಸಕರು ಆಗ್ರಹಿಸಿದರು.
’ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು’ ಎಂದು ಬಿಜೆಪಿ ಶಾಸಕಿ
ಸುಮನ್ ಹರಿಪ್ರಿಯ ಹೇಳಿದರು. ನಾಗಾಂವ್ ಜಿಲ್ಲೆಯಲ್ಲಿ
ಕೇವಲ ೮ ದಿನಗಳ ಅಂತರದಲ್ಲಿ ಸಂಭವಿಸಿದ ಎರಡನೇ ಪ್ರಕರಣ ಇದು. ಮಾರ್ಚ್ ೧೬ರಂದು ಎಂಟು ಮಂದಿ ಪುರುಷರ
ತಂಡವೊಂದು ಮಹಿಳೆಯೊಬ್ಬಳನ್ನು ನಿಶ್ಯಬ್ಧವಾಗಿ ಹಿಂಬಾಲಿಸಿಕೊಂಡು ಹೋಗಿ ಕಾಮಪುರ ಕಾಡಿನ ಮಧ್ಯೆ ರೈಲಿನಲ್ಲಿ
ಅತ್ಯಾಚಾರ ಎಸಗಿತ್ತು. ಎಲ್ಲ ಎಂಟೂ ಮಂದಿಯನ್ನು ಮರುದಿನ ಬಂಧಿಸಲಾಗಿತ್ತು.
2017: ನವದೆಹಲಿ: ಮದ್ಯ ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸಲ್ಲಿಸಿರುವ ಮನವಿಯನ್ನು ಇಂಗ್ಲೆಂಡ್ ಸರ್ಕಾರವು ಸಂಬಂಧಪಟ್ಟ ನ್ಯಾಯಾಲಯಕ್ಕೆ ರವಾನಿಸಿದ್ದು, ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮನವಿಯ ಪರಿಶೀಲನೆ ನಡೆಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತು. ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿದ್ದ ವಿಜಯ ಮಲ್ಯ ಅವರು ‘ಕೇಂದ್ರ ಸರ್ಕಾರವು ನ್ಯಾಯೋಚಿತ ವಿಚಾರಣೆ ಇಲ್ಲದೆಯೇ ನನ್ನನ್ನು ಅಪರಾಧಿಯನ್ನಾಗಿ ಮಾಡಲು ಪಣತೊಟ್ಟಿದೆ’ ಎಂದು ಹೇಳಿದ್ದರು. ‘ಸುಪ್ರೀಂಕೋರ್ಟ್ನಲ್ಲಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಮಾಡಿರುವ ಆಪಾದನೆಗಳು ನನ್ನ ವಿರುದ್ಧದ ಸರ್ಕಾರಿ ಧೋರಣೆಯನ್ನು ಬಿಂಬಿಸಿವೆ’ ಎಂದೂ ಮಲ್ಯ ದೂರಿದ್ದರು. ಭಾರತ ಕಳೆದ ವರ್ಷ ತಲೆಮರೆಸಿಕೊಂಡಿರುವ ಉದ್ಯಮಿಯನ್ನು ವಶಕ್ಕೆ ನೀಡುವಂತೆ ಕೋರುವ ಮನವಿ ಪತ್ರವನ್ನು ಇಂಗ್ಲೆಂಡಿಗೆ ಸಲ್ಲಿಸಿತ್ತು.
2009: ಪದಚ್ಯುತಗೊಂಡಿದ್ದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಆರಂಭಿಸಿದಂತೆಯೇ, ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ನಡೆದ ರಾಜದ್ರೋಹದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಯಿತು. ಜಾಹಿದ್ ಹುಸೇನ್ ಎಂಬವರು ಸುಪ್ರೀಂ ಕೋರ್ಟಿನ ಲಾಹೋರ್ ನೋಂದಣಿ ಕಚೇರಿಯಲ್ಲಿ ಈ ಅರ್ಜಿ ಸಲ್ಲಿಸಿದರು. ಮುಷರಫ್ ಅವರು 1999-2008 ನಡುವಿನ ತಮ್ಮ ಅಧ್ಯಕ್ಷ ಅಧಿಕಾರ ಅವಧಿಯಲ್ಲಿ 'ಸಂವಿಧಾನವನ್ನು ಉಲ್ಲಂಘಿಸಿದ್ದಾರೆ' ಎಂದು ಅವರು ದೂರಿದರು.
2009: ಶಬ್ದಗ್ರಹಣಕ್ಕೆ ಅಗತ್ಯವಾದ ಒಳಧ್ವನಿಗೆ ಕಾರಣವಾಗುವ ಆಕರ ಕೋಶ (ಸ್ಟೆಮ್ ಸೆಲ್) ಪ್ರತ್ಯೇಕಿಸುವಲ್ಲಿ ಸಂಶೋಧಕರು ಸಫಲರಾಗಿದ್ದು, ಭ್ರೂಣದಿಂದ ಇಂತಹ ಕೋಶಗಳನ್ನು ಕಸಿ ಮಾಡುವುದರಿಂದ ಕೋಟ್ಯಂತರ ಕಿವುಡರನ್ನು ಶಬ್ದಲೋಕಕ್ಕೆ ಮರಳಿ ತರಿಸುವ ಸಾಧ್ಯತೆಗೆ ರೆಕ್ಕೆ ಪುಕ್ಕ ಮೂಡಿತು. ಮನುಷ್ಯನ ಶ್ರವಣೇಂದ್ರಿಯದಿಂದ ಪಡೆಯಲಾದ ವಿಟ್ರೊ ರಿನಿವೆಬಲ್ ಆಕರ ಕೋಶ ಪದ್ಧತಿಯಂತೆ ನಡೆಸಿದ ಪ್ರಯೋಗದಲ್ಲಿ ಕಂಡುಬಂದ ಪ್ರಥಮ ಫಲಿತಾಂಶ ಇದು. ಇದರಿಂದ ಭವಿಷ್ಯದಲ್ಲಿ ಕಿವುಡುತನ ನಿವಾರಣೆಗಾಗಿ ಆಕರ ಕೋಶ ಆಧಾರಿತ ವಿವಿಧ ಬಗೆಯ ಚಿಕಿತ್ಸೆ ನೀಡುವುದು ಸಾಧ್ಯವಿದೆ ಎಂದು ಸಂಶೋಧನೆಯ ನೇತೃತ್ವ ವಹಿಸಿದ ಶಫೀಲ್ಡ್ ವಿಶ್ವವಿದ್ಯಾಲಯದ ಮಾರ್ಸೆಲೊ ಎನ್. ರಿವೋಲ್ಟಾ ಪ್ರಕಟಿಸಿದರು. ಜಗತ್ತಿನಲ್ಲಿ ಇಂದು 25 ಕೋಟಿಗೂ ಅಧಿಕ ಕಿವುಡರಿದ್ದಾರೆ. ಅವರಿಗೆ ಇದು ವರದಾನವಾಗಬಲ್ಲುದು.
2008: ಫ್ರಾನ್ಸಿನ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮಾಜಿ ಪತ್ನಿ ಸಿಸಿಲಿಯಾ ಸಿಗ್ನರ್ - ಅಲ್ ಬೆನಿಝ್ ಅವರು ಮೊರಾಕ್ಕೊ ಮೂಲದ ತಮ್ಮ ಪ್ರಿಯಕರ ರಿಚರ್ಡ್ ಅತ್ತಿಯಾಸ್ ಅವರನ್ನು ನ್ಯೂಯಾರ್ಕಿನ ಹೆಸರಾಂತ `ರೇನ್ ಬೊ ರೂಂ'ನಲ್ಲಿ ವರಿಸಿದರು. ಸುಮಾರು 150 ಅತಿಥಿಗಳು ಇವರಿಬ್ಬರ ವಿವಾಹಕ್ಕೆ ಸಾಕ್ಷಿಯಾದರು. ಈ ಮದುವೆ ಅದೆಷ್ಟು ಗೌಪ್ಯವಾಗಿ ನಡೆಯಿತೆಂದರೆ ಆಹ್ವಾನಿತ ಅತಿಥಿಗಳು ಈ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ.
2008: 2005ರಲ್ಲಿ ಕಾರ್ಯಾರಂಭ ಮಾಡಿದ ತುಮಕೂರು ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವ ಈದಿನ ನಡೆಯಿತು. ಮಂಗಳೂರು ಮತ್ತು ಗೋವಾ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ. ಶೇಖ್ ಅಲಿ, ಕನ್ನಡದ ಹೆಸರಾಂತ ಹಿರಿಯ ಚಿತ್ರನಟ ಕೆ.ಎಸ್. ಅಶ್ವಥ್ ಅವರಿಗೆ ಗೌರವ ಡಾಕ್ಟರೇಟ್ ಮತ್ತು ಶಿಕ್ಷಣ ಪ್ರೇಮಿಗಳಾದ ಎಚ್.ಎಂ. ಗಂಗಾಧರಯ್ಯ ಮತ್ತು ಎಂ.ಎಸ್. ರಾಮಯ್ಯ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಯಿತು. 21 ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಚಿನ್ನದ ಪದಕ ಪಡೆದರು. ತುಮಕೂರು ವಿವಿಯ ಮೊದಲ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರು ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು. ಮೊದಲೇ ಡಾಕ್ಟರೇಟ್ ಸಿಕ್ಕಿರುವುದರಿಂದ ಮತ್ತೊಮ್ಮೆ ಅದರ ಅಗತ್ಯವಿಲ್ಲ, ಆದ್ದರಿಂದ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂದು ಶ್ರೀಗಳು ಮೊದಲೇ ವಿವಿ ಆಡಳಿತದ ಗಮನಕ್ಕೆ ತಂದಿದ್ದರು.
2008: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದ ಆರೋಪಿಗಳಾದ ಅಮಾನತುಗೊಂಡ ಐಪಿಎಸ್ ಅಧಿಕಾರಿ ಆರ್. ಕೆ. ಶರ್ಮಾ ಮತ್ತು ಇತರ ಮೂವರಿಗೆ ನಗರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಶರ್ಮಾ ಮತ್ತು ಇತರರು ಕೊಲೆ ಹಾಗೂ ಕ್ರಿಮಿನಲ್ ಒಳಸಂಚಿಗಾಗಿ ಶಿಕ್ಷೆಗೆ ಒಳಗಾದರು. ಶಿವಾನಿ ಬಳಿ ಶರ್ಮಾಗೆ ವಿರುದ್ಧವಾದ ಕೆಲವು `ದಾಖಲೆಗಳು' ಇದ್ದ ಕಾರಣಕ್ಕಾಗಿ ಶಿವಾನಿಯನ್ನು ಕೊಲೆಗೈಯಲಾಯಿತು ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು.
2008: ಬೀಜಿಂಗ್ ಒಲಿಂಪಿಕ್ ಕೂಟದ ಕ್ರೀಡಾಜ್ಯೋತಿಯನ್ನು ಗ್ರೀಕಿನ ಪ್ರಾಚೀನ ನಗರಿ ಒಲಿಂಪಿಯಾದಲ್ಲಿ ಬೆಳಗಿಸಲಾಯಿತು. ಇದರೊಂದಿಗೆ 2008ರ ಒಲಿಂಪಿಕ್ ಕ್ಷಣಗಣನೆ ಆರಂಭವಾಯಿತು.
2008: ಮೊಟ್ಟಮೊದಲ ಸಂಸದೀಯ ಚುನಾವಣೆಯನ್ನು ಕಾಣುತ್ತಿರುವ ಭೂತಾನಿನಲ್ಲಿ ಜನರು ಈದಿನ ತಮ್ಮ ಮತದಾನದ ಹಕ್ಕನ್ನು ಸಂಭ್ರಮೋತ್ಸಾಹದೊಂದಿಗೆ ಚಲಾಯಿಸಿದರು. ವಿಶ್ವದ ವಿವಿಧ ಕಡೆಗಳಲ್ಲಿ ಅಧಿಕಾರದಿಂದ ಕೆಳಗಿಳಿಯದೇ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದರೆ, ಭೂತಾನಿನಲ್ಲಿ ಮಾತ್ರ ಇದಕ್ಕೆ ವಿರುದ್ಧ. ಭೂತಾನ್ ದೊರೆ ಜಿಗ್ಮೆ ವಾಂಗ್ಚುಕ್ ಅವರೇ ಪ್ರಜಾಪ್ರಭುತ್ವ ಸ್ಥಾಪನೆಗೆ ಮುಂದಾದದ್ದು ಒಂದು ವಿಶೇಷ.
2008: 65 ವರ್ಷದ ಭೂತಾನೀ ಮಹಿಳೆಯೊಬ್ಬರು (ಅಜ್ಜಿ) ತನ್ನ ಮತ ಚಲಾಯಿಸಲು ರಬ್ಬರ್ ಚಪ್ಪಲಿಗಳನ್ನು ಧರಿಸಿ, ಕೈಯಲ್ಲಿ ಊರುಗೋಲು ಹಿಡಿದುಕೊಂಡು 600 ಕಿ.ಮೀ. ದೂರ ಪಾದಯಾತ್ರೆ ಮಾಡಿದರು. ಈಕೆಯ ಹೆಸರು ತ್ಸೆವಾಂಗ್ ಡೇಮಾ. ಪೂರ್ವದ ಟ್ರಶಿಯಾಂಗ್ ಸ್ತೆ ಜಿಲ್ಲೆಯಲ್ಲಿನ ಮತಗಟ್ಟೆ ತಲುಪಲು ಈಕೆ ಥಿಂಪುವಿನಿಂದ 14 ದಿನಗಳ ಪಾದಯಾತ್ರೆ ಮಾಡಿದರು. ಚಳಿಯಲ್ಲಿ ಗಢಗಢ ನಡುಗುತ್ತಾ, ಬೆಟ್ಟಗುಡ್ಡಗಳ ಕಡಿದಾದ ದಾರಿಯನ್ನು ಹತ್ತಿ ಇಳಿದರು.
2008: ಪ್ರಧಾನಿ ಮನಮೋಹನ್ ಸಿಂಗ್ ಅವರು 5000 ಕೋಟಿ ರೂಪಾಯಿ ವೆಚ್ಚದ ಅನಿಲ ಆಧಾರಿತ ವಿದ್ಯುತ್ ಯೋಜನೆಗೆ ನವದೆಹಲಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
2008: ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ನೇತೃತ್ವದ ಆರನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ಶಿಫಾರಸು ಸಲ್ಲಿಸಿತು. ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವಿವಿಧ ಭತ್ಯೆಗಳನ್ನು ದುಪ್ಪಟ್ಟುಗೊಳಿಸಲು ಆಯೋಗ ಶಿಫಾರಸು ಮಾಡಿತು. ವೇತನ ಆಯೋಗ ಮಾಡಿದ ಶಿಫಾರಸಿನಿಂದ ಸರ್ಕಾರದ ಬೊಕ್ಕಸಕ್ಕೆ 2008-2009ನೇ ಸಾಲಿನಲ್ಲಿ 12,561 ಕೋಟಿ ರೂಪಾಯಿಗಳಷ್ಟು ಹೊರೆಯಾಗುವುದು.
2008: ಕೆಲವು ಯುವಕರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾದರೆಂಬ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಜನರ ಗುಂಪೊಂದು ಆಗ್ರಾ ಜಿಲ್ಲೆಯ ಖೇರಗಢ ಪಟ್ಟಣದ ಪೊಲೀಸ್ ಠಾಣೆಗೆ ಕಿಚ್ಚಿಟ್ಟು ಆವರಣದಲ್ಲಿದ್ದ ಕೆಲವು ವಾಹನಗಳಿಗೂ ಬೆಂಕಿ ಹಚ್ಚಿದ ಘಟನೆ ನಡೆಯಿತು. ನಗರ ಪಂಚಾಯತ್ ಅಧ್ಯಕ್ಷ ಅನಿಲ್ ಗಾರ್ಗ್ ಅವರು ಕುಡಿದ ಮತ್ತಿನಲ್ಲಿ ಹಿಂಸಾಚಾರ ನಿರತರಾಗಿದ್ದ ನಾಲ್ವರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಇದಕ್ಕೆ ಕಾರಣವಾಯಿತು. ಪೊಲೀಸರು ಈ ಯುವಕರನ್ನು ಹಾಗೆಯೇ ಬಿಟ್ಟು ಬಿಟ್ಟಾಗ ಸಿಟ್ಟಿಗೆದ್ದ ಗಾರ್ಗ್ ಬೆಂಬಲಿಗರು ಗಲಭೆಯಲ್ಲಿ ತೊಡಗಿದರು ಎಂಬುದು ಪೊಲೀಸರ ಹೇಳಿಕೆ.
2008: ವಿಶ್ವವಿಖ್ಯಾತ ಕಾಶ್ಮೀರದ ದಲ್ ಸರೋವರಕ್ಕೆ ಮುಖಮಾಡಿ ತಲೆ ಎತ್ತಿರುವ ಐದು ಎಕರೆ ಪ್ರದೇಶದಲ್ಲಿ ಹರಡಿಕೊಂಡ ಏಷ್ಯಾದ ಅತಿ ದೊಡ್ಡ ಟ್ಯುಲಿಪ್ ಹೂವಿನ ಉದ್ಯಾನ 2008ರ ಏಪ್ರಿಲ್ ತಿಂಗಳಿನಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪುಷ್ಪೋದ್ಯಮ ಇಲಾಖೆಯ ನಿರ್ದೇಶಕ ಸರ್ವರ್ ನಾಗೇಶ್ ತಿಳಿಸಿದರು.
2007: ಪಾಕಿಸ್ಥಾನದ ಮುಖ್ಯ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಪ್ರಮಾಣ ವಚನ ಸ್ವೀಕರಿಸಿದರು ಪಾಕಿಸ್ಥಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದ ಪ್ರಥಮ ಹಿಂದೂ ಎಂಬ ಹೆಗ್ಗಳಿಕೆ ಅವರದಾಯಿತು.
2007: ಭಾರತೀಯ ಸಂಜಾತರಿಗೆ ನೀಡುವ ಇಂಡಿಯನ್ ಅಬ್ರಾಡ್ ಪ್ರಶಸ್ತಿಯನ್ನು ಪೆಪ್ಸಿಕೊ ಕಂಪೆನಿಯ ಅಧ್ಯಕ್ಷೆ ಇಂದಿರಾ ನೂಯಿ, ಗಗನಯಾತ್ರಿ ಸುನೀತಾ ವಿಲಿಯಮ್ಸ್, ಸಾಹಿತಿ ಸಲ್ಮಾನ್ ರಷ್ದಿ ಹಾಗೂ ಸಮುದಾಯ ನಾಯಕ ಸ್ವದೇಶ್ ಚಟರ್ಜಿ ಅವರಿಗೆ ನ್ಯೂಯಾರ್ಕಿನಲ್ಲಿ ನೀಡಲಾಯಿತು.
2007: ಸೋಮಾಲಿಯಾದ ಮೊಗದಿಶು ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ಅಪಘಾತದಲ್ಲಿ ಹನ್ನೊಂದು ಮಂದಿ ಮೃತರಾದರು. ಕ್ಷಿಪಣಿ ದಾಳಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಬೈಲೋರಷ್ಯ ಪ್ರಕಟಿಸಿತು.
2007: ಬಹುಕೋಟಿ ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಪೂರೈಸಿದ ಬೆಂಗಳೂರು ನಗರದ ವಿಶೇಷ ಸಿಬಿಐ ನ್ಯಾಯಾಲಯ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನ ನಾಲ್ವರು ಸಹಚರರಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ತಲಾ 6.75 ಲಕ್ಷ ರೂಪಾಯಿಗಳ ದಂಡ ವಿಧಿಸಿತು. ತೆಲಗಿಗೆ ರಾಜ್ಯದಲ್ಲಿ ವಿಧಿಸಲಾದ ಮೊದಲ ಶಿಕ್ಷೆ ಇದಾಯಿತು.
2007: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಂಟು ಮಂದಿ ಕ್ರಿಯಾಶೀಲರಿಗೆ `ನಾಡಚೇತನ' ಪ್ರಶಸ್ತಿ ಸೇರಿದಂತೆ ಹೆಸರಾಂತ ನಿರ್ದೇಶಕರಾಗಿದ್ದ ದಿವಂಗತ ಸಿ.ಜಿ. ಕೃಷ್ಣಸ್ವಾಮಿ ಅವರ ಹೆಸರಿನ ಸಿಜಿಕೆ ಪ್ರಶಸ್ತಿಯನ್ನು ಸಾಹಿತಿ ಕೋಟಗಾನಹಳ್ಳ ರಾಮಯ್ಯ ಅವರಿಗೆ ರಂಗಚೇತನ ಸಂಸ್ಥೆ ಬೆಂಗಳೂರಿನಲ್ಲಿ ಪ್ರಕಟಿಸಿತು.
2007: ಆವಶ್ಯಕತೆಗೆ ತಕ್ಕಂತೆ ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಭೂ ಸಾರಿಗೆ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸಿತು.
2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 50 ಮೀ. ರೈಫಲ್ ಮೂರು ಭಂಗಿ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಮತ್ತು ಅಭಿನವ್ ಬಿಂದ್ರಾಗೆ ಮೊದಲ ಎರಡು ಸ್ಥಾನಗಳು ಲಭಿಸಿದವು.
2006: ದಕ್ಷಿಣ ಕೊರಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಹ್ಯಾನ್ ಮೈಂಗ್ ಸೂಕ್ ಆಯ್ಕೆಯಾದರು.
2006: ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಸೇರಿದಂತೆ ಲಾಭದ ಹುದ್ದೆ ಹೊಂದಿದ ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 18 ಸದಸ್ಯರ ವಿರುದ್ಧ ಬಂದ ದೂರುಗಳನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದರು. ಲಾಭದ ಹುದ್ದೆ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ನಾಮಕರಣಗೊಂಡಿದ್ದ ಕಪಿಲಾ ವಾತ್ಸಾಯನ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
2006: ಲಾಭದ ಹುದ್ದೆ ಹೊಂದಿರುವ ಜಾರ್ಖಂಡಿನ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ರಾಜ್ಯಪಾಲ ಸೈಯದ್ ಸಿಬ್ತೆ ರಜಿ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದರು. ಇದರಿಂದಾಗಿ ಬಿಜೆಪಿ ನೇತೃತ್ವದ ಅರ್ಜುನ್ ಮುಂಡಾ ಅವರ ಎನ್ ಡಿ ಎ ಸರ್ಕಾರ ಪತನದ ಅಂಚಿಗೆ ಬಂದು ನಿಂತಿತು.
1983: ಕಲಾವಿದೆ ಶ್ವೇತಾ ರತ್ನಾಕರ ಭಟ್ಟ ಜನನ.
1977: ಮೊರಾರ್ಜಿ ದೇಸಾಯಿ ಅವರು ಭಾರತದ ನಾಲ್ಕನೆಯ ಪ್ರಧಾನ ಮಂತ್ರಿಯಾದರು. ಕೇಂದ್ರದಲ್ಲಿ ಪ್ರಪ್ರಥಮ ಕಾಂಗ್ರೆಸ್ಸೇತರ ಸರ್ಕಾರವನ್ನು ಅವರು ಸ್ಥಾಪಿಸಿದರು. 81 ವರ್ಷ ವಯಸ್ಸಾಗಿದ್ದ ಅವರು ಅತ್ಯಂತ ಹಿರಿಯ ಪ್ರಧಾನಿ ಎನ್ನಿಸಿಕೊಂಡರು.
1943: ಸುಳಾದಿ ನೃತ್ಯ ಪ್ರಕಾರದಲ್ಲಿ ಪರಿಣತಿ ಪಡೆದ ನರ್ತಕಿ ಲಲಿತಾ ಶ್ರೀನಿವಾಸನ್ ಅವರು ಶಿವನ ಸಮುದ್ರದಲ್ಲಿ ಜನಿಸಿದರು. ಕೇಂದ್ರ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಸುಲಲಿತ ನೃತ್ಯ ಸಂಶೋಧನೆಗಾಗಿ ಶ್ರಮಿಸಿದ ಅವರು ಅನೇಕ ಪ್ರಾತ್ಯಕ್ಷಿಕೆ, ನೃತ್ಯ ಕಾರ್ಯಾಗಾರಗಳನ್ನು ಸಂಘಟಿಸಿದರು. ದೇಶ- ವಿದೇಶಗಳಲ್ಲಿ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳನ್ನು ನಡೆಸಿದರು.
1932: ಜಗತ್ತಿನ ಮುಂಚೂಣಿಯ ಕ್ರಿಕೆಟ್ ಪ್ರಚಾರಕ ಲಾರ್ಡ್ ಹ್ಯಾರಿಸ್ ತಮ್ಮ 81ನೇ ವಯಸ್ಸಿನಲ್ಲಿ ಮೃತರಾದರು. ಮುಂಬೈಯ ಗವರ್ನರ್ ಆಗಿದ್ದ ಕಾಲದಲ್ಲಿ ಅವರು ಭಾರತದಲ್ಲಿ ಕ್ರಿಕೆಟನ್ನು ಬೆಳೆಸಲು ಪ್ರೋತ್ಸಾಹ ನೀಡಿದರು. ಐರೋಪ್ಯರು ಮತ್ತು ಪಾರ್ಸಿಗಳ ನಡುವೆ ವಾರ್ಷಿಕ ದೇಶೀ ಕ್ರಿಕೆಟ್ ಪಂದ್ಯಗಳನ್ನು ಅವರು ಆರಂಭಿಸಿದರು.
1882: ಜರ್ಮನ್ ವಿಜ್ಞಾನಿ ರಾಬರ್ಟ್ ಕೋಚ್ ಅವರು ಬರ್ಲಿನ್ನಿನ ಫಿಸಿಯೊಲಾಜಿಕಲ್ ಸೊಸೈಟಿಯಲ್ಲಿ ಎಲ್ಲ ರೂಪದ ಕ್ಷಯ (ಟ್ಯೂಬರ್ ಕ್ಯುಲೋಸಿಸ್) ರೋಗಕ್ಕೆ ಕಾರಣವಾದ ಟ್ಯೂಬರ್ ಕುಲ್ ಬ್ಯಾಸಿಲಸ್ಸನ್ನು ತಾನು ಪ್ರತ್ಯೇಕಿಸಿ ಅಭಿವೃದ್ಧಿ ಪಡಿಸಿರುವುದಾಗಿ ಪ್ರಕಟಿಸಿದ. (ಈತ ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎಂಬುದನ್ನೂ ಹೆಚ್ಚು ಕಡಿಮೆ ಕಂಡುಕೊಂಡಿದ್ದ, ಆದರೆ ಬ್ರಿಟಿಷ್ ಬ್ಯಾಕ್ಟೀರಿಯಾ ತಜ್ಞ ರೊನಾಲ್ಡ್ ರಾಸ್ ತಾನು ಕಂಡುಕೊಂಡ ಇದೇ ನಿರ್ಣಯವನ್ನು ಕೋಚ್ ಗಿಂತ ಮೊದಲೇ ಪ್ರಕಟಿಸಿ ಈತನನ್ನು ಹಿಂದೆ ಹಾಕಿದ ಎಂಬುದು ಬಹುಜನಕ್ಕೆ ಗೊತ್ತಿಲ್ಲದ ಸಂಗತಿ).
1874: `ಹ್ಯಾರಿ ಹೌಡಿನಿ' ಎಂದೇ ಖ್ಯಾತನಾಗಿದ್ದ ಅಮೆರಿಕದ ಖ್ಯಾತ ಐಂದ್ರಜಾಲಿಕ ಎರಿಕ್ ವೀಸ್ (1874-1926) ಹುಟ್ಟಿದ ದಿನ.
1834: ಇಂಗ್ಲಿಷ್ ವಿನ್ಯಾಸಕಾರ, ಕುಶಲಕರ್ಮಿ ವಿಲಿಯಂ ಮೋರಿಸ್ ಜನ್ಮದಿನ. ಈತ ನಿರ್ಮಿಸಿದ ಪೀಠೋಪಕರಣ, ಬಟ್ಟೆಗಳು, ವಾಲ್ ಪೇಪರ್ ಇನ್ನಿತರ ಅಲಂಕಾರಿಕ ವಸ್ತುಗಳು ಇಂಗ್ಲೆಂಡಿನಲ್ಲಿ ಕಲೆ ಮತ್ತು ಕುಶಲಕಲೆಗಳ ಚಳವಳಿಯನ್ನೇ ಹುಟ್ಟುಹಾಕಿತು.
No comments:
Post a Comment