Thursday, March 22, 2018

ಇಂದಿನ ಇತಿಹಾಸ History Today ಮಾರ್ಚ್ 21

ಇಂದಿನ ಇತಿಹಾಸ History Today  ಮಾರ್ಚ್ 21
 2018: ನವದೆಹಲಿ:  ಫೇಸ್ ಬುಕ್ ನಿಂದ ಮಾಹಿತಿ ದುರುಪಯೋಗ ಮಾಡಿದ್ದಕ್ಕಾಗಿ ಕೆಂಗಣ್ಣಿಗೆ ಗುರಿಯಾಗಿರುವ ಕೇಂಬ್ರಿಜ್ ಅನಾಲಿಟಿಕಾ ಕಂಪೆನಿ ಜೊತೆಗೆ ಕಾಂಗ್ರೆಸ್ ಪಕ್ಷವು ಸಂಪರ್ಕ ಹೊಂದಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಅವರು ಆಪಾದಿಸಿದರು. ‘ಯಾರಾದರೂ ಭಾರತೀಯರ ಮಾಹಿತಿ ದುರುಪಯೋಗ ಪತ್ತೆಯಾದರೆ ನಿಮ್ಮ ಕಂಪೆನಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಸಾದ್ ಅವರು ಫೇಸ್ ಬುಕ್ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಎಚ್ಚರಿಕೆ ನೀಡಿದರು.  ’ಸಹಯೋಗ ವಿಧಾನಗಳ ಮೂಲಕ ಯಾರಾದರೂ ಭಾರತೀಯರ ಮಾಹಿತಿ ಬಹಿರಂಗಗೊಂಡರೆ ಬಿಜೆಪಿಯು ಅದನ್ನು ಗಂಭೀರವಾಗಿ ಪರಿಗಣಿಸುವುದು ಎಂದು ಪ್ರಸಾದ್ ಹೇಳಿದರು.   ದೆಹಲಿಯಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದರು. ’ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷವು ಮಾಹಿತಿ ಕೈಚಳಕ ಮತ್ತು ಮಾಹಿತಿ ಕಳ್ಳತನವನ್ನು ಅವಲಂಬಿಸಿದೆಯೇ? ಕೇಂಬ್ರಿಜ್ ಅನಾಲಿಟಿಕಾ ಕಂಪೆನಿಯ ಸೆಕ್ಸ್, ಲಂಪಟತನ ಮತ್ತು ಸುಳ್ಳು ಸುದ್ದಿ ಹರಡುವ ವಿಧಾನಗಳನ್ನು ಕಾಂಗ್ರೆಸ್ ಅನುಮೋದಿಸುತ್ತದೆಯೇ? ರಾಹುಲ್ ಗಾಂಧಿ ಅವರ ಸೋಶಿಯಲ್ ಮೀಡಿಯಾ ಪ್ರೊಫೈಲ್ ನಲ್ಲಿ ಕೇಂಬ್ರಿಜ್ ಅನಾಲಿಟಿಕಾದ ಪಾತ್ರ ಏನು?’ ಎಂದು ಪ್ರಸಾದ್ ಪ್ರಶ್ನಿಸಿದರು. ರಾಷ್ಟ್ರದಲ್ಲಿ ಚುನಾವಣೆಗಳಿಗೆ ಮುಂಚಿತವಾಗಿ ಸಾಮಾಜಿಕ ಮಾಧ್ಯಮ ನೀತಿ ರೂಪಿಸುವ ಸಲುವಾಗಿ ಸದರಿ ಬ್ರಿಟಿಷ್ ಕಂಪೆನಿಯು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಸಿದೆ ಎಂಬ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಈ ಪ್ರಶ್ನೆಗಳನ್ನು ಮಾಡಿದರು.  ಮಾಹಿತಿ ಭದ್ರತೆಯ ಜೊತೆಗೆ ರಾಜಿ ಮಾಡಿಕೊಂಡಿರುವ ಸಂಸ್ಥೆಯ ಸಹಕಾರ ಪಡೆಯುವ ಮೂಲಕ ಸಾಮಾಜಿಕ ಮಾಧ್ಯಮದ ದುರುಪಯೋಗ ನಡೆಸುವುದು ಗಂಭೀರವಾದ ವಿಷಯ ಎಂದು ಪ್ರಸಾದ್ ಹೇಳಿದರು.  ಏನಿದು ವಿಷಯ?  ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಅಗೆಯುವ ಮತ್ತು ವಿಶ್ಲೇಷನೆ ನಡೆಸುವ ಕಂಪೆನಿಯಾಗಿದ್ದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅದು ಡೊನಾಲ್ಟ್ ಟ್ರಂಪ್ ಅವರಿಗೆ ಚುನಾವಣೆ ಗೆಲ್ಲಲು ನೆರವಾಗಿತ್ತು. ನಿರ್ದಿಷ್ಟ ಗುರಿಯ ಸಂಪರ್ಕ ಅಭಿಯಾನದ ಮೂಲಕ ಕಂಪೆನಿಯು ಟ್ರಂಪ್ ಅವರಿಗೆ ನೆರವಾಗಿತ್ತು. ಈ ಕಂಪೆನಿಯ ಭಾರತದಲ್ಲಿನ ಪ್ರಮುಖ ವಿರೋಧ ಪಕ್ಷವನ್ನು ಮುಂಬರುವ ೨೦೧೯ರ ಮಹಾ ಚುನಾವಣೆಯಲ್ಲಿ ಚುನಾವಣೆ ಗೆಲ್ಲಲು ಹೆಣೆಯಬೇಕಾದ ತಂತ್ರಗಳ ಬಗ್ಗೆ ನೆರವು ನೀಡುವ ಸಲುವಾಗಿ ಸಂಪರ್ಕಿಸಿದೆ ಎಂದು ವರದಿಗಳು ತಿಳಿಸಿದವು. ಆಗಸ್ಟ್ ತಿಂಗಳಲ್ಲಿ ಸದರಿ ಪಕ್ಷಕ್ಕೆ ಸಾಮಾಜಿಕ ಮಾಧ್ಯಮದ ಮೂಲಕ ಮತದಾರರನ್ನು ಸೆಳೆಯುವ ಮಾಹಿತಿ ಆಧಾರಿತ ತಂತ್ರ ರೂಪಿಸುವ ಬಗ್ಗೆ ಕೇಂಬ್ರಿಜ್ ಅನಾಲಿಟಿಕಾ ಕಂಪೆನಿಯು ಪ್ರಸ್ತಾವ ನೀಡಿದ್ದು, ವಿವಿಧ ನಾಗರಿಕ ಮಾಹಿತಿ ನೆಲೆಗಳನ್ನು ಆಧರಿಸಿ, ಆನ್ ಲೈನ್ ಬಳಕೆದಾರರ ವರ್ತನೆಯ ವಿಶ್ಲೇಷಣೆ ಮಾಡುವ ಬಗ್ಗೆ ಪ್ರಸ್ತಾವ ನೀಡಿದೆ ಎಂದು ವರದಿಗಳು ಹೇಳಿದವು.  ಮಾತುಕತೆಗಳ ಬಗ್ಗೆ ಅರಿವು ಹೊಂದಿರುವ ಇಬ್ಬರು ವ್ಯಕ್ತಿಗಳ ಪ್ರಕಾರ ಬೃಹತ್ ಮಾಹಿತಿ ವಿಶ್ಲೇಷಣೆ ಕಂಪೆನಿಯು ಮಾಹಿತಿ ಅಭಿಯಾನದ ಮೂಲಕ ಭಾರತದ ರಾಜಕೀಯ ಪಕ್ಷಕ್ಕೆ ಸಮಗ್ರ ಯೋಜನೆ ರೂಪಿಸಿಕೊಡುವುದಾಗಿ ಹೇಳಿದೆ ಎನ್ನಲಾಯಿತು. ಯೋಜನಾ ಸಮನ್ವಯ, ನೀತಿ ನಿರೂಪಣಾ ತಂಡಕ್ಕೆ ರಾಷ್ಟ್ರೀಯ ಮಾಹಿತಿ ಮೂಲಸವಲತ್ತು ಯೋಜನೆ ರೂಪಿಸಿಕೊಡುವ ಮತ್ತು ನಿಗದಿತ ಗುರಿಯ ಸಂದೇಶಗಳನ್ನು ಒದಗಿಸಿಕೊಡವುದು ಕಂಪೆನಿ ಮುಂದಿಟ್ಟಿರುವ ಪ್ರಸ್ತಾವಗಳಲ್ಲಿ ಸೇರಿವೆ ಎಂದು ಹೇಳಲಾಗಿದೆ. ವಿವಿಧ ಮಾಹಿತಿ ನೆಲೆಗಳಲ್ಲಿನ ಹಾಲಿ ಅಂತರಗಳನ್ನು ಗುರುತಿಸುವುದು, ಆಂತರಿಕ ಮತ್ತು ಬಾಹ್ಯ ಮೂಲಗಳನ್ನು ಬಳಸಿ ಸಂಪರ್ಕ ಸಾಧನೆ ಮತ್ತು ಅರ್ಥಪೂರ್ಣ ಒಳನೋಟವನ್ನು ಒದಗಿಸುವ ಕೆಲಸವನ್ನು ಡಾಟಾ ಅನಾಲಿಟಿಕ್ಸ್ ಮಾಡುವುದು ಎಂದು ಪರಿಚಯ ಬಹಿರಂಗ ಪಡಿಸಲು ಇಚ್ಛಿಸದ ಸುದ್ದಿ ಮೂಲ ತಿಳಿಸಿತು.  ಪಕ್ಷವನ್ನು ಗುರುತಿಸಲು ಸುದ್ದಿ ಮೂಲದ ವ್ಯಕ್ತಿ ನಿರಾಕರಿಸಿದರು. ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಗೆ ಪತ್ರಿಕಾ ಸಂಸ್ಥೆ ಕಳುಹಿಸಿದ ಮಿಂಚಂಚೆಗೆ ತತ್ ಕ್ಷಣ ಯಾವುದೇ ಉತ್ತರ ಬಂದಿಲ್ಲ ಎಂದು ವರದಿ ಹೇಳಿತು.  ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸಾಮಾಜಿಕ ಮಾಧ್ಯಮವನ್ನು ವಿಜಯಗಳಿಸಲು ಪ್ರಮುಖ ತಂತ್ರವಾಗಿ ಬಳಸಿತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ೨೦೧೯ರ ಚುನಾವಣೆ ಗೆಲ್ಲಲು ವಿರೋಧ ಪಕ್ಷವು ಮಾಹಿತಿ ಆಧಾರಿತ ಸಮಗ್ರ ತಂತ್ರವನ್ನು ರೂಪಿಸಬೇಕು, ಕರ್ನಾಟಕ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಚುನಾವಣೆಗಳೊಂದಿಗೆ ಇದನ್ನು ಆರಂಭಿಸಬೇಕು ಎಂದು ಡಾಟಾ ಅನಾಲಿಟಿಕಾ ಸಲಹೆ ಮಾಡಿದೆ ಎಂದು ವರದಿ ತಿಳಿಸಿದೆ. ಇದಕ್ಕಾಗಿ ಪಕ್ಷಕ್ಕಾಗಿಯೇ ಮೊಬೈಲ್ ಆಪ್ ರೂಪಿಸುವಂತೆಯೂ ಕಂಪೆನಿ ಸೂಚಿಸಿದೆ ಎನ್ನಲಾಯಿತು.


2018: ನವದೆಹಲಿ: ಫೇಸ್ ಬುಕ್ ಮಾಹಿತಿ ದುರುಪಯೋಗಕ್ಕಾಗಿ ವಿವಾದದ ಸುಳಿಯಲ್ಲಿ ಸಿಲುಕಿರುವ ಅಂತಾರಾಷ್ಟ್ರೀಯ ಮಾಹಿತಿ ವಿಶ್ಲೇಷಣೆ ಕಂಪೆನಿ ’ಕೇಂಬ್ರಿಜ್ ಅನಾಲಿಟಿಕಾ ಜೊತೆಗೆ ಬಿಜೆಪಿ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಆರೋಪಕ್ಕೆ ಎದಿರೇಟು ನೀಡಿತು. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಈ ಕಂಪೆನಿಯ ಸೇವೆಯನ್ನು ಬಳಸಿಕೊಂಡಿದ್ದು, ಈ ಕಂಪೆನಿಯು ಬಿಜೆಪಿ ಮಿತ್ರ ಪಕ್ಷದ ಸದಸ್ಯರ ಪುತ್ರನೊಬ್ಬನ ಒಬಿಐ ಕಂಪೆನಿಯ ಪಾಲುದಾರನಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜಿವಾಲ ಆಪಾದಿಸಿದರು.  ಇದೇ ವೇಳೆಗೆ ರವಿ ಶಂಕರ ಪ್ರಸಾದ್ ಆರೋಪನ್ನು ತಳ್ಳಿಹಾಕಿರುವ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ದಿವ್ಯ ಸ್ಪಂದನ ಯಾನೆ ರಮ್ಯಾ ಅವರು, ’ಕಾಂಗ್ರೆಸ್ ಪಕ್ಷವು ಎಂದೂ ಕೇಂಬ್ರಿಜ್ ಅನಾಲಿಟಿಕಾ ಸೇವೆ ಬಳಸಿಲ್ಲ, ಬಳಸುತ್ತಲೂ ಇಲ್ಲ. ಈ ಕಂಪೆನಿ ಬಲಪಂಥೀಯ ಪಕ್ಷಗಳ ಜೊತೆಗೆ ಕೆಲಸ ಮಾಡುತ್ತದೆ ಹೊರತು ಉದಾರವಾದಿಗಳ ಜೊತೆಗಲ್ಲ. ಸ್ವತಃ ಅವರ ವೆಬ್ ಸೈಟ್ ಅವರು ಬಿಜೆಪಿ ಜೊತೆಗೆ ಕೆಲಸ ಮಾಡಿದ್ದನ್ನು ಹೇಳುತ್ತದೆ ಎಂದು ರಮ್ಯಾ ತಿಳಿಸಿದರು.  ಕಂಪೆನಿಯ ವೆಬ್ ಸೈಟನ್ನು ಪರಿಶೀಲಿಸಿದಾಗ ಅದರಲ್ಲಿ ಕಂಪೆನಿಯು ತಾನು ೨೦೧೦ರ ಬಿಹಾರ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ತಾನು ಭಾರತದಲ್ಲಿ ಕೆಲಸ ಮಾಡಿದ್ದುದಾಗಿ ಪ್ರತಿಪಾದಿಸಿದ ಮಾಹಿತಿ ಲಭಿಸಿತು ಎಂದು ಸುದ್ದಿ ಮಾಧ್ಯಮದ ವರದಿಯೊಂದು ಹೇಳಿತು. ’ನಮ್ಮ ಗಿರಾಕಿಯು ಒಟ್ಟು ಸ್ಥಾನಗಳ ಪೈಕಿ ಸಿಎ ಗುರಿ ಇಟ್ಟಿದ್ದ ಶೇಕಡಾ ೯೦ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪ್ರಚಂಡ ವಿಜಯ ಸಾಧಿಸಿದರು ಎಂದು ವೆಬ್ ಸೈಟ್ ಪ್ರತಿಪಾದಿಸಿದೆ ಎಂದು ವರದಿ ಹೇಳಿತು. ಈ ಚುನಾವಣೆಯಲ್ಲಿ ಜೆಡಿಯು- ಬಿಜೆಪಿ ಮೈತ್ರಿಕೂಟ ಜಯಗಳಿಸಿತ್ತು.  ಕೇಂಬ್ರಿಜ್ ಅನಾಲಿಟಿಕಾ ಕಂಪೆನಿಯಿಂದ ಅಮೆರಿಕ, ಇಂಗ್ಲೆಂಡಿನಲ್ಲಿ ಮಾಹಿತಿ ಕಳವು ನಡೆದಿದೆ ಎಂಬ ಗಂಭೀರ ಆಪಾದನೆಗಳಿದ್ದು, ಕಂಪೆನಿಯು ತಾನು ನೈಜೀರಿಯಾ, ಕೀನ್ಯಾ, ಬ್ರೆಜಿಲ್ ಮತ್ತು ಭಾರತದಲ್ಲಿ ಕೂಡಾ ಚುನಾವಣೆಗಳ ಮೇಲೆ ಪ್ರಭಾವ ಬೀರಿರುವುದಾಗಿ ಹೇಳಿಕೊಂಡಿದೆ.  ಕೇಂಬ್ರಿಜ್ ಅನಾಲಿಟಿಕಾ ಕಂಪೆನಿಯ ಸಿಇಒ ಜೊತೆ ಎಷ್ಟು ಭಾರತೀಯರ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು  ಕಾಂಗ್ರೆಸ್ ಪ್ರಕಟಿಸಬೇಕು ಎಂದು ರವಿಶಂಕರ ಪ್ರಸಾದ್ ಇದಕ್ಕೆ ಮುನ್ನ ಆಗ್ರಹಿಸಿದ್ದರು.  ಕಂಪೆನಿಯ ಸಿಇಒ ಅಲೆಗ್ಸಾಂಡರ್ ನಿಕ್ಸ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣೆಯಲ್ಲಿ ಕಂಪೆನಿಯು ಮಹತ್ವದ ಪಾತ್ರ ವಹಿಸಿದೆ ಎಂಬುದಾಗಿ ಮಾಡಿದ ಪ್ರತಿಪಾದನೆ ಭಾರಿ ವಿವಾದ ಎಬ್ಬಿಸಿದ ಹಿನ್ನೆಲೆಯಲ್ಲಿ ಕಂಪೆನಿಯು ನಿಕ್ಸ್ ಅವರನ್ನು ಅಮಾನತುಗೊಳಿಸಿತು.  ಸುಮಾರು ೫೦ ಮಿಲಿಯ ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮತದಾರರನ್ನು ಸೆಳೆಯುವ ಸಲುವಾಗಿ ಕೇಂಬ್ರಿಜ್ ಅನಾಲಿಟಿಕಾ ಬಳಸಿತ್ತು ಎಂಬುದಾಗಿ ನಿಕ್ಸ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದು, ಇದರಿಂದ ಫೇಸ್ ಬುಕ್ ಗಂಭೀರ ತೊಂದರೆಯಲ್ಲಿ ಸಿಲುಕುವ ಸಾಧ್ಯತೆಗಳಿವೆ ಎನ್ನಲಾಯಿತು.

2018: ನವದೆಹಲಿ: ಫೇಸ್ ಬುಕ್ ಮಾಹಿತಿಯ ದುರ್ಬಳಕೆಗಾಗಿ ವಿಶ್ವಾದ್ಯಂತ ಕೆಂಗಣ್ಣಿಗೆ ಗುರಿಯಾಗಿರುವ ಕೇಂಬ್ರಿಜ್ ಅನಾಲಿಟಿಕಾ ಮಾಹಿತಿ ವಿಶ್ಲೇಷಕ ಕಂಪೆನಿಯ ಪಾಲುದಾರ ಸಂಸ್ಥೆಯಾಗಿರುವ ಒವೆಲೆನೊ ಬಿಸಿನೆಸ್ ಇಂಟಲಿಜೆನ್ಸ್ (ಒಬಿಐ) ಕಂಪೆನಿಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾದಳ ಮೂರೂ ಪಕ್ಷಗಳೂ ಗಿರಾಕಿಗಳಾಗಿವೆ ಎಂಬದು ಬೆಳಕಿಗೆ ಬಂದಿತು.  ಒಬಿಐ ವೆಬ್ ಸೈಟಿನಲ್ಲಿ ಈ ಮೂರು ಪಕ್ಷಗಳು ತನ್ನ ಗಿರಾಕಿಗಳು ಎಂಬುದಾಗಿ ಕಂಪೆನಿಯು ಪ್ರತಿಪಾದಿಸಿದ್ದು, ಕೇಂಬ್ರಿಜ್ ಅನಾಲಿಟಿಕಾ ವಿವಾದದ ಬೆನ್ನಲ್ಲೇ ಈ ಪ್ರತಿಪಾದನೆಯ ಭಾಗವನ್ನು ಒಬಿಐ ವೆಬ್ ಸೈಟಿನಿಂದ ಕಿತ್ತು ಹಾಕಲಾಯಿತು! .  ಒಬಿಐ ಇದನ್ನು ಕಿತ್ತು ಹಾಕುವ ಮುನ್ನವೇ ಅದರ ಸ್ಕ್ರೀನ್ ಶಾಟ್ ಗಳನ್ನು ಸಂಗ್ರಹಿಸಿಕೊಂಡಿದ್ದ ನ್ಯೂಸ್ ೧೮.ಕಾಮ್ ಅದನ್ನು ಪ್ರಕಟಿಸಿತು.  ಒಬಿಐ ಎಸ್ ಸಿಎಲ್ (ಸ್ಟ್ರಾಟಜಿಕ್ ಕಮ್ಯೂನಿಕೇಶನ್ಸ್ ಲ್ಯಾಬೋರೇಟರೀಸ್) ಇಂಡಿಯಾದ ಭಾಗವಾಗಿದ್ದು, ಎಸ್ ಸಿಎಲ್ ಕೇಂಬ್ರಿಜ್ ಅನಾಲಿಟಿಕಾದ ಪೇರೆಂಟ್ ಕಂಪೆನಿ. ಒಬಿಐ ಕಂಪೆನಿಯ ವೆಬ್ ಸೈಟ್ ಬಿಜೆಪಿ, ಕಾಂಗ್ರೆಸ್, ಜನತಾದಳ (ಯು) ತನ್ನ ಗಿರಾಕಿಗಳು ಎಂದು ಪ್ರತಿಪಾದಿಸಿತ್ತು. ಈ ಪಕ್ಷಗಳಲ್ಲದೆ ಐಸಿಐಸಿಐ ಬ್ಯಾಂಕ್ ಮತ್ತು ಏರ್ ಟೆಲ್ ಕೂಡಾ ತನ್ನ ಗಿರಾಕಿಗಳೇ ಎಂದು ಒಬಿಐ ವೆಬ್ ಸೈಟ್ ಹೇಳಿತ್ತು. ತಾನು ರಾಜಕೀಯ ಪ್ರಚಾರ ನಿರ್ವಹಣೆ ಬಗ್ಗೆ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ ಒಬಿಐ ವೆಬ್ ಸೈಟ್ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಚಿತ್ರಗಳನ್ನು ತನ್ನ ಹೋಮ್ ಪೇಜ್ ನಲ್ಲಿ ಹಾಕಿಕೊಂಡಿತ್ತು. ಆದರೆ ಆಮ್ ಆದ್ಮಿ ಪಕ್ಷವನ್ನು ತನ್ನ ಗಿರಾಕಿ ಪಟ್ಟಿಗೆ ಅದು ಸೇರಿಸಿರಲಿಲ್ಲ.  ಒಬಿಐ ಸೇವೆಗಳನ್ನು ಗೃಹ ಸಚಿವ ರಾಜನಾಥ ಸಿಂಗ್ ಅವರು ೨೦೦೯ರಲ್ಲಿ ಬಳಸಿಕೊಂಡಿದ್ದರು, ಈ ಸಂಸ್ಥೆಯು ಬಿಜೆಪಿಯ ಮಿತ್ರ ಪಕ್ಷವೊಂದರ ಸಂಸತ್ ಸದಸ್ಯರ ಪುತ್ರನೊಬ್ಬನ ಮಾಲೀಕತ್ವಕ್ಕೆ ಒಳಪಟ್ಟಿದೆ ಎಂದು ಕಾಂಗ್ರೆಸ್ ಆಪಾದಿಸಿತ್ತು.  ಒಬಿಐ ಕಂಪೆನಿಯು ಬಿಜೆಪಿಗಾಗಿ ೪ ಚುನಾವಣೆಗಳನ್ನು ನಿರ್ವಹಿಸಿದೆ, ಅದರಲ್ಲಿ ಬಿಜೆಪಿಯ ಮಿಷನ್ ೨೭೨ ಪ್ಲಸ್ ಕೂಡಾ ಸೇರಿತ್ತು ಎಂದು ಕಂಪೆನಿಯ ನಿರ್ದೇಶಕರ ಲಿಂಕ್ಡ್ ಇನ್ ಪ್ರೊಫೈಲ್ ಹೇಳಿದೆ. ಮಿಷನ್ ೨೭೨ ಪ್ಲಸ್ ಎಂಬುದು ಬಿಜೆಪಿಯ ೨೦೧೪ರ ಲೋಕಸಭಾ ಚುನಾವಣೆಯ ಸ್ಲೋಗನ್ ಆಗಿತ್ತು. ನಿರ್ದೇಶಕರಿಗೆ ಈ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನ್ಯೂಸ್ ೧೮ ವರದಿ ತಿಳಿಸಿತು. ಫೇಸ್ ಬುಕ್ ಮಾಹಿತಿಯನ್ನು ಅಗೆದು ತೆಗೆದು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಬಳಸುತ್ತಿತ್ತು ಎಂಬ ಆರೋಪಕ್ಕೆ  ಕೇಂಬ್ರಿಜ್ ಅನಾಲಿಟಿಕಾ ಗುರಿಯಾಗಿದ್ದು, ಅದರ ವೆಬ್ ಸೈಟ್ ಭಾರತದಲಿ ೨೦೧೦ರ ವಿಧಾನಸಭಾ ಚುನಾವಣೆ ಕಾಲದಲ್ಲಿ ತನ್ನ ಗಿರಾಕಿ ಪಕ್ಷಕ್ಕಾಗಿ ಕೆಲಸ ಮಾಡಿದ್ದುದಾಗಿ ಹೇಳಿಕೊಂಡಿದೆ. ಈ ಚುನಾವಣೆಯಲ್ಲಿ ತನ್ನ ಗಿರಾಕಿಯು ಪ್ರಚಂಡ ಬಹುಮತದೊಂದಿಗೆ ಗೆದ್ದಿತು ಎಂದು ಅದು ಹೇಳಿಕೊಂಡಿತ್ತು.  ಈ ಚುನಾವಣೆಯಲಿ ಬಿಜೆಪಿ-ಜನತಾದಳ (ಯು) ಮೈತ್ರಿಕೂಟ ಗೆಲುವು ಸಾಧಿಸಿತ್ತು. ಕಂಪೆನಿಯು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರವಾಗಿ ಕೆಲಸ ಮಾಡಿತ್ತು.

2018: ಕಾಬೂಲ್: ಆಫ್ಘನ್ನರು ಕಾಬೂಲಿನ ಶಿಯಾ ಪ್ರಾರ್ಥನಾ ಮಂದಿರದ ಬಳಿಯ ರಸ್ತೆಯಲ್ಲಿ ಪರ್ಶಿಯನ್ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದಾಗ ನಡೆದ ಮಾನವ ಬಾಂಬ್ ದಾಳಿಗೆ ಕನಿಷ್ಠ ೨೬ ಮಂದಿ ಬಲಿಯಾದರು. ಇದೇ ದಿನ ನಡೆದ ಇನ್ನೊಂದು ಭಯೋತ್ಪಾದಕ ದಾಳಿಯಲ್ಲಿ ೧೮ ಜನ ಗಾಯಗೊಂಡಿದ್ದಾರೆ ಎಂದು ಒಳಾಡಳಿತ ಸಚಿವಾಲಯದ  ಉಪ ವಕ್ತಾರ ನಸ್ರತ್ ರಹಿಮಿ ಹೇಳಿದರು. ದಾಳಿಕೋರ ನಡೆದುಕೊಂಡು ಬಂದು ದಾಳಿ ನಡೆಸಿದ್ದಾನೆ ಎಂದು ಅವರು ನುಡಿದರು.  ಕಾಬೂಲ್ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಆಸ್ಪತ್ರೆಗೆ ಸಮೀಪದ ಶಿಯಾ ಪ್ರಾರ್ಥನಾ ಮಂದಿರದ ಬಳಿ ಹೊಸ ವರ್ಷಾಚರಣೆಗಾಗಿ ಜನ ಸೇರಿದ್ದಾಗ ಮಾನವ ಬಾಂಬ್ ದಾಳಿ ನಡೆಯಿತು ಎಂದು ಕಾಬೂಲ್ ಪೊಲೀಸ್ ಮುಖ್ಯಸ್ಥ ಜನರಲ್ ಡೌಡ್ ಅಮೀನ್ ಹೇಳಿದರು.  ಆಫ್ಘಾನಿಸ್ತಾನದಲ್ಲಿ ’ನೌರುಜ್ ಎಂದೇ ಪರಿಚಿತವಾಗಿರುವ ಪರ್ಶಿಯನ್ ಹೊಸ ವರ್ಷದ ದಿನದಂದು ರಾಷ್ಟ್ರೀಯ ರಜಾ ಘೋಷಿಸಲಾಗಿದ್ದು, ಅಲ್ಪಸಂಖ್ಯಾತ ಶಿಯಾಗಳು ಮಂದಿರಗಳಿಗೆ ಭೇಟಿ ನೀಡುವ ಮೂಲಕ ಹೊಸ ವರ್ಷವನ್ನು ಆಚರಿಸುತ್ತಾರೆ. ಈವರೆಗೆ ದಾಳಿಯ ಹೊಣೆಗಾರಿಕೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ ಐಸಿಸ್‌ಗೆ (ಇಸ್ಲಾಮಿಕ್ ಸ್ಟೇಟ್) ಸೇರಿದ ಸುನ್ನಿ ಉಗ್ರಗಾಮಿಗಳು ಈ ದಾಳಿ ನಡೆಸಿರಬಹುದು ಎಂದು ಭಾವಿಸಲಾಯಿತು.  ಭದ್ರತಾ ಪಡೆಗಳು, ಆಫ್ಘನ್ ಅಧಿಕಾರಿಗಳು ಮತ್ತು ವಿದೇಶೀಯರನ್ನೇ ಗುರಿ ಇಟ್ಟು ದಾಳಿ ನಡೆಸುವ ತಾಲಿಬಾನ್ ದಾಳಿಯಲ್ಲಿ ತನ್ನ ಶಾಮೀಲನ್ನು ನಿರಾಕರಿಸಿತು.

2018: ನವದೆಹಲಿ:  ಭಾರತದ ದೇಶೀ ನಿರ್ಮಿತ ಪರಮಾಣು ಚಾಲಿತ ಸಮರ ಜಲಾಂತರ್ಗಾಮಿ ಐಎನ್ ಎಸ್ ಅರಿಹಂತ್ ಕಳೆದ ವರ್ಷ ಸಂಭವಿಸಿದ ಅಪಘಾತ ಒಂದರ ಬಳಿಕ ಹಾನಿಗೊಂಡು ಮೂಲೆಪಾಲಾಗಿದೆಯೇ?   ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಹಿನ್ನೆಲೆಯಲ್ಲಿ ಈ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸಲಾಗದು ಎಂದು ರಕ್ಷಣಾ ಸಚಿವಾಲಯವು ಲೋಕಸಭೆಗೆ ತಿಳಿಸಿತು.  ಆಂಧ್ರಪ್ರದೇಶದ ರಾಜಂಪೇಟ್ ಕ್ಷೇತ್ರದ ಸಂಸದ ವೈಎಸ್ ಆರ್ ಕಾಂಗ್ರೆಸ್ಸಿನ ಪಿವಿ ಮಿಧುನ್ ರೆಡ್ಡಿ ಅವರು ’ಐಎನ್ ಎಸ್ ಅರಿಹಂತ್ ಗಂಭೀರವಾಗಿ ಹಾನಿಗೊಂಡಿದೆಯೇ? ಹಾನಿಗೊಂಡಿದ್ದರೆ ಅದಕ್ಕೆ ಸಂಬಂಧಿಸಿದ ವಿವರ ಕೊಡಿ, ದೇಶೀ ನಿರ್ಮಿತ ಪರಮಾಣು ಚಾಲಿತ ಜಲಾಂತರ್ಗಾಮಿ ಕಳೆದ ಹಲವಾರು ತಿಂಗಳುಗಳಿಂದ ಕಾರ್ಯ ನಿರ್ವಹಿಸಲಾಗದೆ ಮೂಲೆಪಾಲಾಗಿದೆಯೇ? ಆಗಿದ್ದರೆ ವಿವರ ಕೊಡಿ ಎಂದು ಕೇಳಿದ್ದರು.   ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ದೃಷ್ಟಿಯಿಂದ ಸದನದಲ್ಲಿ ಮಾಹಿತಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಶ್ ಭಮ್ರೆ ತಮ್ಮ ಉತ್ತರದಲಿ ತಿಳಿಸಿದರು.  ಐಎನ್ ಎಸ್ ಅರಿಹಂತ್ ೨೦೧೭ರಲ್ಲಿ ಯಾವಾಗಲೋ ಸಂಭವಿಸಿದ ಅಪಘಾತದಲ್ಲಿ ಹಾನಿಗೊಂಡಿದ್ದು ಕಾರ್ಯ ನಿರ್ವಹಿಸಲಾಗದ ಸ್ಥಿತಿಯಲ್ಲಿದೆ ಎಂಬ ವರದಿಗಳ ಮಧ್ಯೆ ಸರ್ಕಾರದಿಂದ ಈ ಉತ್ತರ ಬಂದಿದೆ. ವರದಿಗಳ ಪ್ರಕಾರ ಕಳೆದ ೧೦ ತಿಂಗಳುಗಳಿಂದ ಜಲಾಂತರ್ಗಾಮಿಯು ಪಯಣಿಸಲಾಗದ ಸ್ಥಿತಿಯಲ್ಲಿದೆ ಎನ್ನಲಾಗಿತ್ತು. ಜಲಾಂತರ್ಗಾಮಿಯ ಪ್ರೊಪಲ್ಶನ್ ವಿಭಾಗಕ್ಕೆ ನೀರು ನುಗ್ಗಿ ಈ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ. ಅಪಘಾತದ ಬಳಿಕ ಜಲಾಂತರ್ಗಾಮಿ ಕಾರ್ಯಾಚರಣೆಗೆ ಇಳಿದಿಲ್ಲ. ಮಾನವ ತಪ್ಪಿನಿಂದ ಈ ಅಪಘಾತ ಸಂಭವಿಸಿತು ಎಂದು ಕೆಲವು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿತ್ತು. ಐಎನ್ ಎಸ್ ಅರಿಹಂತ್ ಜಲಾಂತರ್ಗಾಮಿಯನ್ನು ಸಮುದ್ರ ಪರೀಕ್ಷೆಗಳಿಗಾಗಿ ೨೦೦೯ರಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಉದ್ಘಾಟಿಸಿದ್ದರು.  ೨೦೧೬ರ ಆಗಸ್ಟ್ ತಿಂಗಳಲ್ಲಿ ಅದನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿತ್ತು. ಆಕಾಶ, ಭೂಮಿ ಮತ್ತು ಸಮುದ್ರದಿಂದ ಪರಮಾಣು ಸಿಡಿತಲೆಗಳನ್ನು ಉಡಾವಣೆ ಮಾಡುವಂತಹ ತ್ರಿವಳಿ ಶಕ್ತಿಯ ಪರೀಕ್ಷೆಯನ್ನು ಐಎನ್ ಎಸ್ ಅರಿಹಂತ್ ಪೂರ್ಣಗೊಳಿಸಿತ್ತು.  ಜಲಾಂತರ್ಗಾಮಿಯು ಭಾರತದ ದ್ವಿತೀಯ ದಾಳಿ ಶಕ್ತಿಗೂ ಒತ್ತು ನೀಡಿತ್ತು. ನೌಕಾಪಡೆಗೆ ಸೇರ್ಪಡೆಗೊಂಡ  ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಅದು ಅಪಘಾತಕ್ಕೆ ಈಡಾಗಿತ್ತು.  ವರದಿಗಳೇನಾದರೂ ಸತ್ಯವೇ ಅಗಿದ್ದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಪರಮಾಣು ಚಾಲಿತ ಸಮರ ಕ್ಷಿಪಣಿ ಜಲಾಂತರ್ಗಾಮಿ ದಳ ರಚನೆಯ ಯೋಜನೆಗೆ ಪ್ರಮುಖ ಹಿನ್ನಡೆಯಾಗುತ್ತದೆ. 

2018: ನವದೆಹಲಿ: ಚಾಂದ್ರವಾಸಕ್ಕೆ ಅನುಕೂಲವಾಗುವತಹ ಸೂಕ್ತ ರಚನೆ ತಯಾರಿ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಯೋಗಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿತು.  ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ’ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಇಸ್ರೋ ಚಾಂದ್ರವಾಸಕ್ಕೆ ಯೋಗ್ಯವಾದ ರಚನೆಗಳ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ಹೇಳಿದರು.  ಮುಂದಿನ ಯಾನಗಳಿಗೆ ಅನುಕೂಲವಾಗುವಂತೆ ಚಾಂದ್ರ ಮೇಲ್ಮೈಯಲ್ಲಿ ವಾಸಕ್ಕೆ ಅನುಕೂಲವಾಗುವಂತಹ  ’ಇಗ್ಲೂಮಾದರಿಯ ಕಟ್ಟಡಗಳ ನಿರ್ಮಾಣ ಬಗ್ಗೆ ಇಸ್ರೋ ಕಾರ್ಯಾರಂಭ ಮಾಡಿದೆಯೇ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.  ’ಇಗ್ಲೂ ಜನರಿಗೆ ಬೆಚ್ಚಗೆ ತಂಗಲು ಅನುಕೂಲವಾಗುವಂತಹ ಶೆಲ್ಟರ್ ಮಾದರಿಯ ರಚನೆ.  ಅಗತ್ಯ ಮತ್ತು ಚಾಂದ್ರವಾಸದ ಸಂಕೀರ್ಣತೆಗಳಿಗೆ ಅನುಗುಣವಾಗಿ ಎಂತಹ ರಚನೆಯ ಅಗತ್ಯವಿದೆ ಎಂಬ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಭವಿಷ್ಯದ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಅಧ್ಯಯನ ನಡೆಯುತ್ತಿದೆ ಎಂದು ಸಿಂಗ್ ಹೇಳಿದರು.  ಇಸ್ರೋ ೨೦೦೮ರಲ್ಲಿ ತನ್ನ ಚೊಚ್ಚಲ ಚಂದ್ರಯಾನವನ್ನು ಮಾಡಿತ್ತು. ತನ್ನ ಎರಡನೆಯ ಸಾಹಸ ಚಂದ್ರಯಾನ ೨ರಲ್ಲಿ ಚಂದ್ರನ ಮೇಲ್ಮೈ ಮೇಲೆ ರೋವರ್ ಒಂದನ್ನು ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸಲು ಉದ್ದೇಶಿಸಲಾಗಿದೆ. ರೋವರ್ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ರವಾನಿಸಲಿದ್ದು, ಅವುಗಳು ಚಂದ್ರನ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಉಪಯುಕ್ತವಾಗಲಿವೆ.

2018: ನವದೆಹಲಿ:  ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನದಲ್ಲಿ ಸಿಖ್ ಯುವಕರಿಗೆ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್ ಐ) ತರಬೇತಿ ನೀಡುತ್ತಿದೆ ಎಂದು ಗೃಹ ಸಚಿವಾಲಯವು ಸಂಸದೀಯ ಸಮಿತಿ ಒಂದಕ್ಕೆ ತಿಳಿಸಿತು.  ಕೆನಡಾ ಮತ್ತಿತರ ಪ್ರದೇಶಗಳಲ್ಲಿ ವಾಸವಾಗಿರುವ ಸಿಖ್ ಸಮುದಾಯದ ಯುವಕರನ್ನು ತಪ್ಪು ಮಾಹಿತಿ ಮತ್ತು ದುರುದ್ದೇಶಪೂರಿತ ಪ್ರಚಾರದ ಮೂಲಕ ರಾಷ್ಟ್ರದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನೂ ಅದು ಮಾಡುತ್ತಿದೆ ಎಂದೂ ಸಚಿವಾಲಯ ಸಮಿತಿಗೆ ಮಾಹಿತಿ ನೀಡಿತು.  ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗ ಮೂಲಕ ಭಯೋತ್ಪಾದಕ ಗುಂಪುಗಳು ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯುತ್ತಿವೆ ಎಂದೂ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ನೇತೃತ್ವದ ಅಂದಾಜು ಸಮಿತಿಗೆ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿ, ಇದು ದೊಡ್ಡ ಸವಾಲಾಗಿ ಬೆಳೆದಿದೆ ಎಂದೂ ತಿಳಿಸಿದರು.  ಸಮಿತಿಯು ಮಾರ್ಚ್ ೧೯ರಂದು ’ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಆಂತರಿಕ ಭದ್ರತಾ ಸವಾಲುಗಳು ಮೌಲ್ಯ ಮಾಪನ ಮತ್ತು ಪ್ರತಿಕಿಯೆ ಶೀರ್ಷಿಕೆಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು ಇದರಲ್ಲಿ ಸಿಖ್ ಉಗ್ರವಾದಕ್ಕೆ ಸಂಬಂಧಿಸಿದ ಕೆಲವು ವಿದ್ಯಮಾನಗಳ ವಿವರ ಇದೆ.  ಪಾಕಿಸ್ತಾನದಲ್ಲಿನ ಭಯೋತ್ಪಾದಕ ಗುಂಪುಗಳ ಕಮಾಂಡರ್ ಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಪಂಜಾಬ್ ಮಾತ್ರವೇ ಅಲ್ಲ ದೇಶದ ಇತರ ಭಾಗಗಳಲ್ಲೂ ಭಯೋತ್ಪಾದನೆ ಹರಡುವ ತನ್ನ ಉದ್ದೇಶಿತ ಯೋಜನೆಗಳ ಮೂಲಕ ಒತ್ತಡ ಹಾಕುತ್ತಿದೆ ಎಂದು ವರದಿ ಹೇಳಿತು. ಪಾಕಿಸ್ತಾನದಲ್ಲಿನ ಐಎಸ್ ಐ ಕೇಂದ್ರಗಳಲ್ಲಿ ಸಿಖ್ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಬಂಧಿತರು, ನಿರುದ್ಯೋಗಿ ಯುವಕರು, ಕ್ರಿಮಿನಲ್ ಗಳು ಮತ್ತು ಕಳ್ಳಸಾಗಣೆದಾರರನ್ನು ಬಳಸಿಕೊಂಡು ಪಾಕಿಸ್ತಾನ ಮೂಲದ ಸಿಖ್ ಭಯೋತ್ಪಾದಕ ಗುಂಪುಗಳಿಗೆ ಭಯೋತ್ಪಾದಕ ದಾಳಿಗಳ ತರಬೇತಿಯನ್ನು ನೀಡಲಾಗುತ್ತಿದೆ ಎಂದು ವರದಿ ತಿಳಿಸಿತು.  ಯುರೋಪ್, ಅಮೆರಿಕ ಮತ್ತು ಕೆನಡಾದಲ್ಲಿ ವಾಸವಾಗಿರುವ ಸಿಖ್ ಯುವಕರನ್ನು ತಪ್ಪು ಮತ್ತು ದುರುದ್ದೇಶಪೂರಿತ ಪ್ರಚಾರದ ಮೂಲಕ ಭಾರತದ ವಿರುದ್ಧ ಪ್ರಚೋದಿಸಲಾಗುತ್ತಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಅಗತ್ಯ ಬಿದ್ದಾಗಲೆಲ್ಲ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಗೃಹ ಸಚಿವಾಲಯ ಹೇಳಿತು.  ಆಂತರಿಕ ಭದ್ರತೆಗೆ ಬೆದರಿಕೆ: ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗ ಮೂಲಕ ಭಯೋತ್ಪಾದಕ ಗುಂಪುಗಳು ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಚಿವಾಲಯ ಆಂತರಿಕ ಭದ್ರತೆಗೆ ಇದು ಹೊಸ ಸವಾಲಾಗಿದೆ ಎಂದು ಸಮಿತಿಗೆ ನೀಡಿದ ಟಿಪ್ಪಣಿಯಲ್ಲಿ ತಿಳಿಸಿತು.  ಗುಪ್ತಚರ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ಕಣ್ಣು ತಪ್ಪಿಸುವ ಸಲುವಾಗಿ ಭಯೋತ್ಪಾದಕ ಗುಂಪುಗಳು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮತ್ತು ಪ್ರಾಕ್ಸಿ ಸರ್ವರ್ ಇತ್ಯಾದಿಗಳ ಬಳಕೆಯನ್ನು ಆರಂಭಿಸಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಘರ್ಷಣೆ ಪ್ರದೇಶಗಳಿಂದ ಹಿಂದಿರುಗಿದ ಉಗ್ರವಾದ ತರಬೇತಿ ಪಡೆದ ವ್ಯಕ್ತಿಗಳ ಚಟುವಟಿಕೆಗಳು ಮತ್ತು ಒಂಟಿತೋಳ ದಾಳಿಯ ಬೆದರಿಕೆ ಕೂಡಾ ಸವಾಲೇ ಆಗಿದೆ ಎಂದು ವರದಿ ಹೇಳಿತು.  ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ (ಎಲ್ ಇಟಿ), ಜೈಶ್-ಇ- ಮೊಹಮ್ಮದ್ (ಜೆಇಎಂ) ಮತ್ತು ಇಂಡಿಯನ್ ಮುಜಾಹಿದೀನಿನ್ನ ಒಂದು ಬಣ ಹಾಗೂ ಸಿಮಿ ಮತ್ತು ಅಲ್ -ಉಮ್ಮಾಹ್ ನಂತಹ ಸಂಘಟನೆಗಳ ಕಣ್ಣು ಈಗಲೂ ಭಾರತದತ್ತಲೇ ಇದೆ ಎಂದು ಸಚಿವಾಲಯ ಸಮಿತಿಗೆ ತಿಳಿಸಿತು.  ಪಾಕಿಸ್ತಾನದಲ್ಲಿ ಜೆಇಎಂ ಗೆ ಮರುಜೀವ ನೀಡುವ ಸೂಚನೆಗಳಿವೆ ಮತ್ತು ಮರುಜೀವಗೊಂಡ ಈ ಸಂಘಟನೆ ಭಾರತಕ್ಕೆ ಹಾನಿ ಮಾಡುವ ಸಾಧ್ಯತೆಗಳಿವೆ. ಇದಲ್ಲದೆ ಭಾರತ ಉಪಖಂಡದಲ್ಲಿರುವ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಮತ್ತು ಅಲ್ ಖೈದಾ ಕೂಡಾ ಭಾರತದ ಹಾಲಿ ಭದ್ರತಾ ಪರಿಸರಕ್ಕೆ ಹೊಸ ಸವಾಲುಗಳನ್ನು ಎಸೆಯುತ್ತಿವೆ ಎಂದು ಸಚಿವಾಲಯ ಹೇಳಿತು.  ಎಡಪಂಥೀಯ ಉಗ್ರವಾದಿ ಸಂಘಟನೆಗಳ ಹಿಂಸಾಚಾರವೂ ಆಂತರಿಕ ಭದ್ರತೆಗೆ ಬೆದರಿಕೆ ಒಡ್ಡುತ್ತಿವೆ ಎಂದು ವರದಿ ಹೇಳಿತು.


2017: ನವದೆಹಲಿ: ಮಾತುಕತೆಯ ಮೂಲಕ ರಾಮ ಮಂದಿರ ನಿರ್ಮಾಣ ವಿವಾದವನ್ನು ಬಗೆಹರಿಸಿಕೊಳ್ಳಲು ಮುಂದಾಗುವಂತೆ ಸುಪ್ರೀಂಕೋರ್ಟ್ ಸಲಹೆ ನೀಡಿತು.  ಧಾರ್ವಿುಕ ವಿಚಾರಗಳನ್ನು ಸಂಧಾನ ಮತ್ತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ. ಎರಡೂ ಕಡೆಯವರು ಒಟ್ಟಿಗೆ ಕುಳಿತು ಸೌಹಾರ್ದವಾಗಿ ಮಾತನಾಡುವ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಮುಂದಾಗಿ ಎಂದು  ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ನ್ಯಾ. ಡಿ.ವೈ. ಚಂದ್ರಚೂಡ್ವುತ್ತು ನ್ಯಾ.ಎಸ್.ಕೆ. ಕೌಲ್ ಅವರಿದ್ದ ತ್ರಿಸದಸ್ಯ ಪೀಠ ಸಲಹೆ ನೀಡಿತು.  ಪ್ರಕರಣದ ವಿಚಾರಣೆ ಆರಂಭವಾಗಿ ಆರು ವರ್ಷ ಪೂರ್ಣಗೊಂಡಿದ್ದು, ಶೀಘ್ರ ವಿವಾದ ಬಗೆಹರಿಸಬೇಕು. ಸಂಬಂಧ ಮುಸ್ಲಿಂ ಸಮುದಾಯದ ಪ್ರಮುಖರ ಜೊತೆಯೂ ಮಾತನಾಡಿದ್ದು, ಅವರು ನ್ಯಾಯಾಲಯದ ಮಧ್ಯಸ್ಥಿಕೆ ಅಗತ್ಯ ಎಂದಿದ್ದಾರೆಎಂದು ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಅವರು ಕೋರ್ಟ್ ಗಮನಕ್ಕೆ ತಂದರು. ‘ಎರಡೂ ಕಡೆಯವರು ಒಪ್ಪಿದ ಮಧ್ಯಸ್ಥಿಕೆದಾರರ ಜೊತೆ ಕುಳಿತು ಸಮಸ್ಯೆ ಬಗೆಹರಿಸಲು ನಾನು ಸಿದ್ಧವಿದ್ದೇನೆ. ಇದಕ್ಕಾಗಿ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳ ಸೇವೆ ಬಳಸಿಕೊಳ್ಳಲಾಗುವುದುಎಂದು ನ್ಯಾ. ಖೇಹರ್ ಭರವಸೆ ನೀಡಿದರುಎರಡೂ ಕಡೆಯವರು ಒಪ್ಪಿದರೆ ವಿವಾದ ಬಗೆಹರಿಸಲು ಪ್ರಮುಖ ಸಂಧಾನಕಾರರನ್ನು ನೇಮಿಸಲು ಸಿದ್ಧವಿರುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತು. ಸಂಬಂಧ ಮಾ.31 ಒಳಗೆ ತನಗೆ ನಿರ್ಧಾರ ತಿಳಿಸುವಂತೆ ಅರ್ಜಿದಾರರಾದ ಸುಬ್ರಹ್ಮಣ್ಯ ಸ್ವಾಮಿ ಅವರಿಗೆ ನ್ಯಾಯಾಲಯವು ಸೂಚನೆ ನೀಡಿತು. ಅಯೋಧ್ಯೆ ರಾಮಮಂದಿರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳು ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಇದುಸೂಕ್ಷ್ಮಹಾಗೂಭಾವನಾತ್ಮಕವಿಷಯವಾಗಿದೆ ಎಂದು ಕೋರ್ಟ್ಅಭಿಪ್ರಾಯಪಟ್ಟಿತು.. ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರ್ಟ್ಗೆ ಸ್ವಾಮಿ ಮನವಿ ಮಾಡಿದ್ದರು
2017: ನ್ಯೂಯಾರ್ಕ್ವಿಶ್ವದ ಶ್ರೀಮಂತರ ಪಟ್ಟಿಯನ್ನು ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿತು.  ಜಗತ್ತಿನ ನಾಲ್ಕನೇ ಅತಿ ಹೆಚ್ಚು ಕೋಟ್ಯಧೀಶರು (ಬಿಲೇನಿಯರ್ಗಳು)  ಭಾರತದಲ್ಲಿದ್ದಾರೆ ಎಂದು ವರದಿ ಹೇಳಿತು. 100 ಭಾರತೀಯ ಕೋಟ್ಯಧೀಶರ  ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. 59 ವರ್ಷದ ಅಂಬಾನಿಗೆ 33ನೇ ಸ್ಥಾನ ಪ್ರಾಪ್ತವಾಗಿದೆ.  ಒಟ್ಟಾರೆ 7.67 ಟ್ರಿಲಿಯನ್ ಅಮೆರಿಕನ್ ಡಾಲರ್ ಸಂಪತ್ತನ್ನು ಪಟ್ಟಿಯಲ್ಲಿ ಸ್ಥಾನ ಪಡೆದಿರುವ 2,043 ಶ್ರೀಮಂತರು ಹೊಂದಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 18ರಷ್ಟು ಏರಿಕೆಯಾಗಿದೆ. ಸತತ ನಾಲ್ಕನೇ ವರ್ಷವೂ ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ನಂ.1 ಬಿಲೇನಿಯರ್ ಪಟ್ಟ ಉಳಿಸಿಕೊಂಡಿದ್ದಾರೆ. ಕಳೆದ 23 ವರ್ಷಗಳಲ್ಲಿ 18 ಬಾರಿ ಗೇಟ್ಸ್ ಅಗ್ರಸ್ಥಾನ ಪಡೆದಿದ್ದರು.  ಕಳೆದ ವರ್ಷ 75 ಬಿಲಿಯನ್ ಅಮೆರಿಕನ್ ಡಾಲರ್ ಸಂಪತ್ತು ಹೊಂದಿದ್ದ ಗೇಟ್ಸ್, ಪ್ರಸಕ್ತ ವರ್ಷ 86 ಅಮೆರಿಕನ್ ಡಾಲರುಗಳಿಗೆ ತಮ್ಮ ಸಂಪತ್ತು ವೃದ್ಧಿಸಿಕೊಂಡಿದ್ದಾರೆ. ಉದ್ಯಮಿ ವಾರನ್ ಬಫೆಟ್ ಎರಡನೇ ಸ್ಥಾನದಲ್ಲಿದ್ದು, ಅಮೆಜಾನ್ ಜೆಫ್ ಬೆಜೋಸ್ ಮೂರನೇ ಸ್ಥಾನದಲ್ಲಿದ್ದಾರೆ. 3.5 ಬಿಲಿಯನ್ ಯುಎಸ್ಡಿ ಸಂಪತ್ತು ಹೊಂದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 544ನೇ ಸ್ಥಾನ ಪಡೆದಿದ್ದಾರೆಭಾರತದ 101 ಆಗರ್ಭ ಶ್ರೀಮಂತರು ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇದೇ ಮೊದಲ ಬಾರಿಗೆ ಭಾರತ ಸಾಧನೆ ಮಾಡಿದೆ. ಕಳೆದ ವರ್ಷ 540 ಶ್ರೀಮಂತರಿಗೆ ನೆಲೆಯಾಗಿದ್ದ ಅಮೆರಿಕಾ ಬಾರಿ 565 ಮಂದಿಯನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಚೀನಾ (319) ಹಾಗೂ ಜರ್ಮನಿ (114) ನಂತರದ ಸ್ಥಾನದಲ್ಲಿವೆಜಗತ್ತಿನ ವಿವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತ 20 ಉದ್ಯಮಿಗಳು ಫೋರ್ಬ್ಸ್ ಪ್ರಕಟಿಸಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಬ್ರಿಟನ್ ಮೂಲದ ಹಿಂದುಜಾ ಸಹೋದರರು 64ನೇ ಸ್ಥಾನ ಪಡೆಯುವ ಮೂಲಕ ಮುಂಚೂಣಿಯಲ್ಲಿದ್ದಾರೆ. ಶಪೂರ್ಜಿ ಪಲ್ಲೊಂಜಿ ಸಮೂಹದ ಮುಖ್ಯಸ್ಥ ಪಲ್ಲೊಂಜಿ ಮಿಸ್ತ್ರಿ 77 ಹಾಗೂ ಪ್ರಕಾಶ ಲೋಹಿಯಾ 288ನೇ ಸ್ಥಾನ ಪಡೆದಿದ್ದಾರೆ ಎಂದು ವರದಿ ತಿಳಿಸಿತು.
2017: ದಾವಣಗೆರೆಮುರುಘಾ ಮಠದಿಂದ ನೀಡಲಾಗುವ ಜಯದೇವಶ್ರೀ ಪ್ರಶಸ್ತಿಯನ್ನು ಬಾರಿ ಜೆಡಿಎಸ್ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರಿಗೆ ಪ್ರಕಟಿಸಲಾಯಿತು.  ನಗರದ ಶಿವಯೋಗಾಶ್ರಮದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಜಯದೇವ ಮತ್ತು ಶೂನ್ಯಪೀಠ ಪ್ರಶಸ್ತಿ ಪ್ರಕಟಿಸಿದರು. ಶೂನ್ಯಪೀಠ ಚನ್ನಬಸವ ಪ್ರಶಸ್ತಿಯನ್ನು ‘ಪ್ರಜಾವಾಣಿ’ ಸಂಪಾದಕ ಕೆ.ಎನ್‌.ಶಾಂತಕುಮಾರ್ ಅವರಿಗೆ, ಶೂನ್ಯಪೀಠ ಅಲ್ಲಮ ಪ್ರಶಸ್ತಿಯನ್ನು ಗ್ರಂಥಾಲಯ ವಿಜ್ಞಾನಿ ಡಾ.ಎಸ್‌.ಆರ್‌.ಗುಂಜಾಳ ಅವರಿಗೆ ಮತ್ತು ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ಅರುಂಧತಿ ನಾಗ್ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಇಂದು ವಿಶ್ವ ಜಲದಿನ.

2009: ಜಮ್ಮು ಮತ್ತು ಕಾಶ್ಮೀರದ ಭಾರತೀಯ ಗಡಿ ಪ್ರದೇಶದ ವ್ಯಾಪ್ತಿಯಲ್ಲಿನ ಊರಿ ವಲಯದಲ್ಲಿ ಭಾರತೀಯ ಸೈನಿಕರ ಪಡೆಗಳ ಮೇಲೆ ರಾತ್ರಿಯಿಡೀ ಪಾಕ್ ಸೈನಿಕರು ಯದ್ವಾತದ್ವಾ ಗುಂಡಿನ ದಾಳಿ ನಡೆಸಿದರು. ಕಳೆದ ಕೆಲವು ತಿಂಗಳಿನಿಂದ ಪಾಲಿಸಿಕೊಂಡು ಬರಲಾಗುತ್ತಿದ್ದ ಗಡಿಯಲ್ಲಿನ ಕದನವಿರಾಮಕ್ಕೆ ಪಾಕಿಸ್ಥಾನ ಸೇನಾ ಪಡೆಗಳು ಮತ್ತೊಮ್ಮೆ ಎಳ್ಳುನೀರು ಬಿಟ್ಟವು.

2009: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂತನ ಮುಖ್ಯಸ್ಥರಾಗಿ (ಸರಸಂಘ ಚಾಲಕ) ಮೋಹನ್ ಭಾಗವತ್ ಆಯ್ಕೆಯಾದರು. ಈವರೆಗೆ ಮುಖ್ಯಸ್ಥರಾಗಿದ್ದ ಕೆ.ಎಸ್.ಸುದರ್ಶನ್ ಅವರು ನಾಗಪುರದಲ್ಲಿ ನಡೆದ ಆರ್‌ಎಸ್‌ಎಸ್ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತಿ ಘೋಷಿಸಿದ ನಂತರ ಭಾಗವತ್ ಅವರ ಹೆಸರನ್ನು ಸೂಚಿಸಲಾಗಿದೆ ಎಂದು ಸಂಘದ ವಕ್ತಾರ ರಾಂ ಮಾಧವ್ ತಿಳಿಸಿದರು. ಮಹಾರಾಷ್ಟ್ರದ ಚಂದ್ರಪುರದ ಐವತ್ತೊಂಬತ್ತು ವರ್ಷದ ಭಾಗವತ್ ಪಶುವೈದ್ಯರು. ತಮ್ಮ ಎಳೆಯ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ನ ಪ್ರಚಾರಕರಾಗಿ ಸೇರಿಕೊಂಡಿದ್ದರು.

2009: ಗುಜರಾತಿನಲ್ಲಿ ಆಕರ ಕೋಶಗಳ ಸಂಶೋಧನಾ ಸಂಸ್ಥೆ ಸ್ಥಾಪನೆಯ ಯೋಜನೆಯನ್ನು ಅಪೊಲೊ ಆಸ್ಪತ್ರೆ ಸಮೂಹ ಗಾಂಧಿನಗರದಲ್ಲಿ ಘೋಷಿಸಿತು. ರೂ 60 ಕೋಟಿ ಮೌಲ್ಯದ ಯೋಜನೆಯು ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆಗಾಗಿ ಆರೋಗ್ಯ ಕಾಳಜಿಯ ಉದ್ದೇಶದ ಅಪೊಲೊ ಸಮೂಹವು ಆಕರ ಕೋಶ ಚಿಕಿತ್ಸೆಯಲ್ಲಿ ಪರಿಣತಿ ಪಡೆದ ಅಮೆರಿಕ ಮೂಲದ 'ಸ್ಟೆಮ್‌ಸೈಟ್' ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದೆ. ಅಹಮದಾಬಾದಿನ ಹೊರವಲಯದಲ್ಲಿ ಕೆಡಿಲಾ ಫಾರ್ಮಾಸ್ಯೂಟಿಕಲ್ಸ್ ಫ್ಯಾಕ್ಟರಿಯ ಬಳಿ 12 ಎಕರೆಗಳಷ್ಟು ಜಾಗದಲ್ಲಿ ಸಂಶೋಧನಾ ಸೌಲಭ್ಯ ತಲೆ ಎತ್ತಲಿದೆ ಎಂದು ಅಪೊಲೊ ಆಸ್ಪತ್ರೆ ಸಮೂಹದ ಅಧ್ಯಕ್ಷ ಪ್ರತಾಪ್ ಸಿ.ರೆಡ್ಡಿ ತಿಳಿಸಿದರು.

2008: ಕರ್ನಾಟಕ ರಾಜ್ಯದಲ್ಲಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮುಂದುವರೆದ ಅಕಾಲಿಕ ಮಳೆಗೆ ಮೂವರು ಬಲಿಯಾಗಿ, ಕೆಲವೆಡೆ ಬೆಳೆ ಹಾನಿ ಸಂಭವಿಸಿತು. ಬಂಗಾಳಕೊಲ್ಲಿಯಲ್ಲಿ ಸಮುದ್ರ ಮಟ್ಟದಿಂದ ಕೇವಲ 3.6 ಕಿ.ಮೀ. ಎತ್ತರದಲ್ಲಿ ವಾಯುಭಾರ ಕುಸಿತ ಉಂಟಾಗಿ ಕರ್ನಾಟಕದ ವಿವಿಧೆಡೆ ವ್ಯಾಪಕವಾಗಿ ಮಳೆಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಅತಿ ಹೆಚ್ಚು 6 ಸೆಂಟಿಮೀಟರ್ ಮಳೆ ಬಿದ್ದಿತು. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಯಿತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾರಮಡು ಗ್ರಾಮದಲ್ಲಿ ಮನೆ ಮಾಳಿಗೆ ಕುಸಿದು ಒಬ್ಬರು ಮೃತರಾದರು. ಗುಲ್ಬರ್ಗ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ದನ ಕಾಯಲು ಹೋಗಿದ್ದ ಬಾಲಕನೊಬ್ಬ ಸಿಡಿಲಿಗೆ ಬಲಿಯಾದ. ಕಾಸರಗೋಡು ಜಿಲ್ಲೆ ಕುಂಬಳೆಯ ಕೋಟೆಕಾರಿನಲ್ಲಿ ಸಿಡಿಲು ಬಡಿದು ಅಧ್ಯಾಪಕರೊಬ್ಬರು ಮೃತರಾದರು.

2008: ಟಿಬೆಟ್ ಸ್ವಾತಂತ್ರ್ಯಕ್ಕಾಗಿನ ದಲೈಲಾಮ ಅನುಯಾಯಿಗಳ ಹೋರಾಟವನ್ನು ಬೆಂಬಲಿಸಿ ಅನೇಕ ಟಿಬೆಟನ್ನರು ನವದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಮತ್ತು ತಡೆಗೋಡೆಗಳನ್ನು ಭೇದಿಸಿ, ಚೀನಾ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದರು.

2008: ಚೀನಾದ ವಾಯವ್ಯ ಭಾಗದ ಕ್ಸಿಜಿಯಾಂಗಿನಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 7.3ರಷ್ಟಿದ್ದ ಕಂಪನವು ಇಡೀ ಪಟ್ಟಣವನ್ನು ನಾಲ್ಕು ಬಾರಿ ನಡುಗಿಸಿತು.

2008: ಇಬ್ಬರು ಮೀನುಗಾರರ ಸಾವಿಗೆ ಕಾರಣವಾದ ನೌಕಾ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪಾನ್ ರಕ್ಷಣಾ ಸಚಿವರು ನೌಕಾದಳದ ಮುಖ್ಯಸ್ಥರನ್ನು ಸೇವೆಯಿಂದ ವಜಾ ಮಾಡಿದರು. ಹಾಗೂ ನೌಕಾಪಡೆಯ ಇತರ 90 ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಿದರು. ಟೋಕಿಯೊ ಕೊಲ್ಲಿ ಪ್ರದೇಶದಲ್ಲಿ ಕಳೆದ ತಿಂಗಳು ಜಪಾನಿನ ಅತ್ಯಾಧುನಿಕ ಜಲಫಿರಂಗಿಯು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ ಒಬ್ಬ ಮೀನುಗಾರ ಹಾಗೂ ಆತನ ಮಗ ಸಾವಿಗೀಡಾಗಿ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ರಕ್ಷಣಾ ಸಚಿವಾಲಯವು ನೌಕಾ ಮುಖ್ಯಸ್ಥ ಅಡ್ಮಿರಲ್ ಕೈಜಿ ಅಕಹೋಶಿ ಅವರನ್ನು ಸೇವೆಯಿಂದ ವಜಾ ಮಾಡಿತು. ರಕ್ಷಣಾ ಸಚಿವರು ಈ ಬಗ್ಗೆ ಸಾರ್ವಜನಿಕರ ಕ್ಷಮೆ ಕೋರಿದರು.

2008: ಸಂಸತ್ತಿನ ಅಧ್ಯಕ್ಷರ ಭ್ರಷ್ಟಾಚಾರವನ್ನು ವಿರೋಧಿಸಿ 44 ವರ್ಷದ ವ್ಯಕ್ತಿಯೊಬ್ಬ ಬ್ಯಾಂಕಾಕಿನಲ್ಲಿ ಸಂಸತ್ ಭವನದ ಎದುರು ಗ್ಯಾಸೋಲಿನ್ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆಯಿತು. ಸಂಸತ್ತಿನ ಅಧ್ಯಕ್ಷ ಯೋಂಗ್ಯುಟ್ ಟೈಪರೈಟ್ ಅವರು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡಲು ಉತ್ತರ ಥೈಲ್ಯಾಂಡಿನಲ್ಲಿ ಅಧಿಕಾರಿಗಳಿಗೆ ಲಂಚ ನೀಡಿದ್ದರಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಆತ್ಮಾಹುತಿಗೆ ಯತ್ನಿಸಿದ ಟ್ರುತ್ಮಾಂಕಾನ ದೇಹದ ಶೇಕಡಾ 90ರಷ್ಟು ಭಾಗಗಳು ಸುಟ್ಟುಹೋಯಿತು ಎಂದು ಪೊಲೀಸ್ ಮೂಲಗಳು ತಿಳಿಸಿದವು.

2008: ಖ್ಯಾತ ಕಲಾವಿದ ಎಂ. ಎಫ್. ಹುಸೇನ್ ಅವರು ರಚಿಸಿದ ಸಮಕಾಲೀನ ಭಾರತದ ಕಲಾಕೃತಿ ನ್ಯೂಯಾರ್ಕಿನಲ್ಲಿ 1.6 ದಶಲಕ್ಷ ಅಮೆರಿಕ ಡಾಲರಿಗೆ ಹರಾಜಾಗುವುದರೊಂದಿಗೆ ದಾಖಲೆ ಬೆಲೆ ಕಂಡಿತು. ಹುಸೇನ್ ಅವರ ವಿವಾದಾತ್ಮಕ ಕೃತಿಗಳ ಬಗ್ಗೆ ಹರಾಜು ನಡೆದ ಕಟ್ಟಡದ ಹೊರ ಭಾಗದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಆದರೂ ಅನಾಮಧೇಯ ವ್ಯಕ್ತಿಯೊಬ್ಬರು `ಬ್ಯಾಟಲ್ ಆಫ್ ಗಂಗಾ ಆಂಡ್ ಜಮುನಾ; ಮಹಾಭಾರತ 12' ಕೃತಿಯನ್ನು 1.6 ದಶಲಕ್ಷ ಡಾಲರಿಗೆ ಖರೀದಿಸಿದರು.

2008: ಟಿಬೆಟ್ ಜನ ನೆಲೆಸಿರುವ ನೈಋತ್ಯದ ಸಿಚುವಾನ್ ಪ್ರಾಂತ್ಯದಲ್ಲಿ ಗುಂಡು ಹಾರಿಸಿ 4 ಜನ ಪ್ರತಿಭಟನಾಕಾರರನ್ನು ಗಾಯಗೊಳಿಸಿರುವುದಾಗಿ ಚೀನಾ ಒಪ್ಪಿಕೊಂಡಿತು. ಲ್ಹಾಸಾದಲ್ಲಿ ಹಿಂದಿನವಾರ ಚೀನಾ ವಿರೋಧಿ ಪ್ರತಿಭಟನೆ ಭುಗಿಲೆದ್ದಾಗ ಸಿಚುವಾನಿನಲ್ಲಿಯೂ ಇದು ಪ್ರತಿಧ್ವನಿಸಿತ್ತು.

2008: ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಪೊಲೀಸರಿಗಾಗಿ ವಿಶ್ವವಿದ್ಯಾಲಯವನ್ನು ಜಲಂಧರಿನ ಫಿಲ್ಲೂರಿನಲ್ಲಿಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪ್ರಕಟಿಸಿದರು.

2008: ಶ್ರವಣ ಬೆಳಗೊಳದ ಶ್ರುತ ಕೇವಲಿ ಟ್ರಸ್ಟ್ ಹಾಗೂ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥಾನದ ವತಿಯಿಂದ ನೀಡಲಾಗುವ `ಪ್ರಾಕೃತ ಜ್ಞಾನಭಾರತಿ' ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಜರ್ಮನಿಯ ಪ್ರಾಕೃತ ವಿದ್ವಾಂಸರಾದ ಪ್ರೊ. ವಿಲ್ಲೆಂ ಬೊಲ್ಲಿ ಮತ್ತು ಪ್ರೊ. ಕ್ಲಾಸ್ ಬ್ರೂನ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಈ ಪುರಸ್ಕಾರವನ್ನು 2004 ರಲ್ಲಿ ಆರಂಭಿಸಲಾಗಿತ್ತು. ಬೊಲ್ಲಿ ಅವರನ್ನು 2005ನೇ ಸಾಲಿನ ಹಾಗೂ ಬ್ರೂನ್ ಅವರನ್ನು 2006ನೇ ಸಾಲಿನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಬೊಲ್ಲಿ ಅವರು ಜಗತ್ತಿನ ಹಿರಿಯ ಪ್ರಾಕೃತ ವಿದ್ವಾಂಸರಲ್ಲಿ ಒಬ್ಬರಾಗಿದ್ದು, ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಒಂದೂವರೆ ಸಾವಿರ ವರ್ಷಗಳಷ್ಟು ಹಳೆಯದಾದ `ಪಯೇಸಿಯ ಕಥೆ' ಎಂಬ ಕೃತಿಯನ್ನು ಸಂಪಾದಿಸಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿ. ಮತ್ತೊಬ್ಬ ಹಿರಿಯ ವಿದ್ವಾಂಸರಾದ ಬ್ರೂನ್ ಮಧ್ಯಪ್ರದೇಶದ ದೇವಗಢದಲ್ಲಿ ಸಂಶೋಧನೆ ಕೈಗೊಂಡು ಕೃತಿಗಳನ್ನು ಪ್ರಕಟಿಸಿದ್ದರು.

2007: ವೃದ್ಧರು ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಪಾಲಕರ ರಕ್ಷಣೆಗಾಗಿ ಲೋಕಸಭೆಯಲ್ಲಿ ನಿರ್ವಹಣೆ ಮತ್ತು ಪಾಲಕರ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಮಸೂದೆ- 2007ನ್ನು ಲೋಕಸಭೆಯಲ್ಲಿ ಸರ್ಕಾರ ಮಂಡಿಸಿತು. ಇದರ ಪ್ರಕಾರ 60 ವರ್ಷಕ್ಕೂ ಮೇಲ್ಪಟ್ಟ ತಂದೆ- ತಾಯಿಯನ್ನು ಕಡೆಗಣಿಸುವವರಿಗೆ 5000 ರೂಪಾಯಿ ದಂಡ ಅಥವಾ ಮೂರು ತಿಂಗಳು ಸೆರೆಮನೆವಾಸ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

2007: ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಪ್ರೊ. ಎನ್. ಬಾಲಸುಬ್ರಹ್ಮಣ್ಯ ಸೇರಿದಂತೆ ಐವರು ಹಿರಿಯ ಅನುವಾದಕರಿಗೆ 2006-07ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಿತು. ಹಿರಿಯ ಅನುವಾದಕರಾದ ಎಂ.ಬಿ. ಅಬ್ದುಲ್ ಘನಿ, ಲವ್ಲೀನ್ ಜೋಲಿ, ಸಿ. ರಾಘವನ್ ಮತ್ತು ಡಾ. ತಿಪ್ಪೇಸ್ವಾಮಿ ಅವರನ್ನೂ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತ ಪ್ರಕಟಿಸಿದರು.

2007: ಹೊಸನಗರದಲ್ಲಿ ಏಪ್ರಿಲ್ 21ರಿಂದ 29ರವರೆಗೆ ನಡೆಯುವ ವಿಶ್ವ ಗೋ ಸಮ್ಮೇಳನದ ಬಳಿಕ ರಾಜ್ಯದಲ್ಲಿ ಕಾಮಧೇನು ವಿಶ್ವ ವಿದ್ಯಾಲಯ ಸ್ಥಾಪಿಸುವ ಗುರಿ ಇಟ್ಟುಕೊಂಡಿರುವುದಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು.

2007: ಕೈಗಾರಿಕಾ ಉದ್ದೇಶ ಹಾಗೂ ವಿಶೇಷ ಆರ್ಥಿಕ ವಲಯಗಳಿಗೆ (ಎಸ್ ಇ ಜೆಡ್) ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಎದ್ದ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಸ್ ಇ ಜೆಡ್ ನಿಯಮಾವಳಿಗಳಿಗೆ ಬದಲಾವಣೆ ತಂದಿತು. ಈ ನಿಯಮಾವಳಿಗಳಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಉದ್ಯಮಿಗಳ ಮೇಲೆ ಹೊರಿಸಲಾಯಿತು.

2006: ಪೊಲೀಸರಿಗೆ ಬೇಕಾಗಿದ್ದ 191 ಕ್ರಿಮಿನಲ್ ಅಪರಾಧಿಗಳ ಭಾರಿ ದೊಡ್ಡ ಗುಂಪೊಂದು ಉತ್ತರ ಬಿಹಾರದ ಸುಪೌಲ್ ಮತ್ತು ಮಾಧೇಪುರದಲ್ಲಿ ನಡೆದ ಎರಡು ಪ್ರತ್ಯೇಕ ಶರಣಾಗತಿ ಸಮಾರಂಭಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಂದೆ ಶರಣಾಗತವಾಯಿತು. ಎನ್ ಡಿ ಎ ಸರ್ಕಾರವು ಅಪರಾಧಗಳನ್ನು ನಿಯಂತ್ರಿಸಲು ಹೊಸದಾಗಿ ಪ್ರಕಟಿಸಿರುವ `ಶರಣಾಗತಿ ಮತ್ತು ಪುನರ್ ವಸತಿ ನೀತಿ' ಫಲನೀಡಿದ ಪರಿಣಾಮವಾಗಿ 131 ಮಂದಿ ಅಪರಾಧಿಗಳು ಸುಪೌಲ್ನಲ್ಲಿ ಮುಖ್ಯಮಂತ್ರಿಯ ಎದುರಲ್ಲಿ ಹಾಗೂ 60 ಮಂದಿ ಅಪರಾಧಿಗಳು ಮಾಧೇಪುರ ಜಿಲ್ಲೆಯ ಸಿಂಘೇಶ್ವರದಲ್ಲಿ ಶರಣಾಗತರಾದರು. ಇವರೆಲ್ಲ ಕೊಲೆ, ಸುಲಿಗೆ , ದರೋಡೆ ಇತ್ಯಾದಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು.

1990: ನಮೀಬಿಯಾ ಸ್ವತಂತ್ರ ರಾಷ್ಟ್ರವಾಯಿತು. ಈ ರಾಷ್ಟ್ರದ ಮೇಲಿನ ಬಿಳಿಯರ 75 ವರ್ಷಗಳ ಆಳ್ವಿಕೆ ಕೊನೆಗೊಂಡಿತು.

1988: ಜಗತ್ತಿನ ಮೊತ್ತ ಮೊದಲ `ಪ್ರನಾಳ ಶಿಶು' (ಟೆಸ್ಟ್ ಟ್ಯೂಬ್ ಬೇಬಿ) ಲೂಯಿ ಬ್ರೌನ್ ಹುಟ್ಟಿಗೆ ಕಾರಣವಾದ `ಇನ್ ವಿಟ್ರೋ ಫರ್ಟಿಲೈಸೇಷನ್' ವಿಧಾನದ ಸಂಶೋಧಕ ಬ್ರಿಟನ್ನಿನ ಪ್ಯಾಟ್ರಿಕ್ ಸ್ಟೆಪ್ ಟೋ (1913-1988) ತನ್ನ 74ನೇ ವಯಸ್ಸಿನಲ್ಲಿ ಮೃತನಾದ.

1985: ಇಂಗ್ಲಿಷ್ ರಂಗಭೂಮಿ ಹಾಗೂ ಸಿನಿಮಾ ನಟ ಮೈಕೆಲ್ ರೆಡ್ ಗ್ರೇವ್ ತನ್ನ 77ನೇ ಹುಟ್ಟುಹಬ್ಬದ ಒಂದು ದಿನದ ಬಳಿಕ ಈದಿನ ಮೃತರಾದರು.

1938: ಕಲಾವಿದರಾದ ಕೃಷ್ಣಾ ಬಾಳಾಶೇಟ್ ಕರ್ಡೇಕರ ಜನನ.

1931: ಕಲಾವಿದೆ ಬಿ.ಎಸ್. ಚಂದ್ರಕಲಾ ಜನನ.

1924: ಖ್ಯಾತ ವಾಗ್ಗೇಯಕಾರ, ಗಾಯಕ, ಸಂಗೀತ ಶಿಕ್ಷಕ, ಪ್ರಸಾರಕ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿ (21-3-1924ರಿಂದ 19-3-2003) ಅವರು ರಾಜಾಪುರ ವೆಂಕಟಸುಬ್ಬರಾವ್- ತಿಮ್ಮಮ್ಮ ದಂಪತಿಯ ಮಗನಾಗಿ ದಾವಣಗೆರೆಯಲ್ಲಿ ಜನಿಸಿದರು. `ಗಾಯನ ಗಂಗಾ' ಸಂಗೀತ ಮಾಸಪತ್ರಿಕೆ, `ಉರುಗಾಚಲ' ಅಂಕಿತದಲ್ಲಿ ಕೃತಿಗಳ ರಚನೆ, 500ಕ್ಕೂ ಹೆಚ್ಚು ಭಕ್ತಿಗೀತೆಗಳಿಗೆ ಸ್ವರ ಸಂಯೋಜನೆ ಇತ್ಯಾದಿ ಇವರ ಜೀವನದ ಸಾಧನೆಗಳು. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಭಾರತೀಯ ಗಾಂಧರ್ವ ಮಹಾವಿದ್ಯಾಲಯದ ಸಂಗೀತ ಮಹೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರ ಸೇವೆಗೆ ಸಂದಿವೆ.

1916: ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ (1916) ಜನ್ಮದಿನ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಹಾಗೂ 1997ರಲ್ಲಿ 50ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೆ ಪ್ರದರ್ಶನ ನೀಡಿದ ವಿಶಿಷ್ಟ ಕಲಾವಿದರು ಇವರು.

1791: ಲಾರ್ಡ್ ಕಾರ್ನವಾಲಿಸ್ ಬೆಂಗಳೂರನ್ನು ವಶಪಡಿಸಿಕೊಂಡ. ಮೂರನೇ ಮೈಸೂರು ಯುದ್ಧದ ಸಮಯದಲ್ಲಿ ಈ ಘಟನೆ ಸಂಭವಿಸಿತು.

No comments:

Post a Comment