Saturday, March 17, 2018

ಇಂದಿನ ಇತಿಹಾಸ History Today ಮಾರ್ಚ್ 16

ಇಂದಿನ ಇತಿಹಾಸ History Today ಮಾರ್ಚ್ 16
2018: ನವದೆಹಲಿ: ಸೇತುಸಮುದ್ರಂ ಹಡಗು ಕಾಲುವೆ ಮಾರ್ಗ ಯೋಜನೆ ಸಲುವಾಗಿ ಪೌರಾಣಿಕ ರಾಮ ಸೇತುವೆಗೆ ಯಾವುದೇ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಿತು.  ರಾಷ್ಟ್ರದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ರಾಮಸೇತುವೆಯನ್ನು ಧ್ವಂಸ ಮಾಡುವ ಉದ್ದೇಶದಿಂದ ಹಿಂದೆ ಸರಿದಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತು.  ಕೇಂದ್ರ ನೌಕಾ ಸಾರಿಗೆ ಸಚಿವಾಲಯವು ಸುಪ್ರೀಂಕೋರ್ಟಿಗೆ ಈ ಪ್ರಮಾಣಪತ್ರವನ್ನು ಸಲ್ಲಿಸಿತು.  ರಾಮಸೇತು ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ, ಈ ಹಿನ್ನೆಲೆಯಲ್ಲಿ  ಸೇತುಸಮುದ್ರಂ ಯೋಜನೆ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟ್ ಪೀಠಕ್ಕೆ ಮನವಿ ಮಾಡಿತು. ‘ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಆಡಮ್ಸ್ ಬ್ರಿಜ್ / ರಾಮಸೇತುವಿಗೆ ಹಾನಿಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕಂಡು ಹಿಡಿಯಲು ಭಾರತ ಸರ್ಕಾರ ಉದ್ದೇಶಿಸಿದೆ ಎಂದು ಸಚಿವಾಲಯದ ಪ್ರಮಾಣ ಪತ್ರ ಹೇಳಿತು. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು, ’ನ್ಯಾಯಾಲಯದ ಹಿಂದಿನ ನಿರ್ದೇಶನಕ್ಕೆ ಅನುಗುಣವಾಗಿ ಕೇಂದ್ರವು ಈ ಪ್ರಮಾಣಪತ್ರವನ್ನು ಸಲ್ಲಿಸಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈಗ ಇತ್ಯರ್ಥ ಪಡಿಸಬಹುದು ಎಂದು ಹೇಳಿದರು.   ಸೇತುಸಮುದ್ರಂ ಯೋಜನೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಯೋಜನೆ ಸಲುವಾಗಿ ರಾಮಸೇತುವಿಗೆ ಹಾನಿ ಮಾಡದಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.  ಈ ಹಿಂದೆ ಕೇಂದ್ರ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕಾಲುವೆ ಯೋಜನೆ ನಿರ್ಮಾಣಕ್ಕಾಗಿ ಯಾವುದೇ ಕಾರಣಕ್ಕೂ ರಾಮಸೇತುವೆನ್ನು ಒಡೆದು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

2018: ಪಟಿಯಾಲ: ಮಾನವ ಕಳ್ಳಸಾಗಾಣಿಕೆ ಆರೋಪದಡಿಯಲ್ಲಿ ಪಂಜಾಬಿನ ಪಾಪ್ ಸ್ಟಾರ್ ಗಾಯಕ ದಲೇರ್ ಮೆಹಂದಿ ತಪ್ಪಿತಸ್ಥ ಎಂದು ಪಂಜಾಬಿನ ಪಟಿಯಾಲಾ ಕೋರ್ಟ್ ತೀರ್ಪು ನೀಡಿ, ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿತು.  ತಪ್ಪಿತಸ್ಥ ಎಂಬ ತೀರ್ಪು ಹೊರಬೀಳುತ್ತಿದ್ದಂತೆಯೇ ಪಂಜಾಬ್ ಪೊಲೀಸರು ದಲೇರ್ ಮೆಹಂದಿಯನ್ನು ವಶಕ್ಕೆ ಪಡೆದುಕೊಂಡರು. ಆದರೆ ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು. ೨೦೦೩ರಲ್ಲಿ ಪಂಜಾಬಿನ ಬಲ್ ಬೆಹ್ರಾ ಗ್ರಾಮದ ಬಕ್ಷೀಷ್ ಸಿಂಗ್ ಎಂಬವರು ದಲೇರ್ ಮೆಹಂದಿ, ಸಹೋದರ ಶಂಶೇರ್ ಸಿಂಗ್ ಹಾಗೂ ತಂಡದ ಕೆಲವು ಸದಸ್ಯರ ವಿರುದ್ಧ ಮಾನವ ಕಳ್ಳಸಾಗಾಣಿಕೆ ಮಾಡಿರುವುದಾಗಿ  ಪಟಿಯಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ಸಂಗೀತ ಕಾರ್ಯಕ್ರಮ ನಡೆಸಿಕೊಡಲು ವಿದೇಶಕ್ಕೆ ಹೋಗುವಾಗ ತಮ್ಮ ತಂಡವರೆಂದು ಹೇಳಿ ಮಾವನ ಕಳ್ಳ ಸಾಗಣೆ ಮಾಡುತ್ತಿದ್ದರು. ಇದಕ್ಕಾಗಿ ತಮ್ಮ ಬಳಿ ಒಂದು ಕೋಟಿ ಪಡೆದಿದ್ದು, ಆ ಹಣವನ್ನು ಹಿಂತಿರುಗಿಸಿಲ್ಲ ಎಂದು ದೂರುದಾರರು ಮೆಹಂದಿ ವಿರುದ್ಧ ಆರೋಪಿಸಿದ್ದರು.  ಪ್ರಕರಣದಲ್ಲಿ ಆರೋಪಿಯಾಗಿದ್ದ ದಲೇರ್ ಸಹೋದರ ಶಂಶೇರ್ ೨೦೧೭ರಲ್ಲಿ ಜಾಂಡೀಸ್ ಖಾಯಿಲೆಯಿಂದ ಸಾವನ್ನಪ್ಪಿದ್ದ. ಗಾಯಕ ಮತ್ತು ಅವರ ಸಹೋದರ ಶಂಶೇರ್ ಸಿಂಗ್ ೧೯೯೮ ಮತ್ತು ೧೯೯೯ರಲ್ಲಿ ಎರಡು ತಂಡಗಳನ್ನು ಅಮೆರಿಕಕ್ಕೆ ಒಯ್ದಿದ್ದರು. ಪ್ರತಿಯೊಂದು ತಂಡದಲ್ಲೂ ತಮ್ಮ ತಂಡದ ಸದಸ್ಯರು ಎಂಬುದಾಗಿ ಹೇಳಿ ೧೦ ಮಂದಿಯನ್ನು ಕರೆದೊಯ್ಯಲಾಗಿತ್ತು. ಬಳಿಕ ಅಕ್ರಮವಾಗಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು.  ಚಿತ್ರ ನಟಿಯೊಬ್ಬರ ಜೊತೆಗೆ ಅಮೆರಿಕಕ್ಕೆ ಪ್ರವಾಸ ಹೋಗಿದ್ದ ದಲೇರ್, ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಮೂವರು ಹುಡುಗಿಯರನ್ನು ತಂಡದಿಂದ ಕೈಬಿಟ್ಟಿದ್ದರು ಎಂದು ಆಪಾದಿಸಲಾಗಿತ್ತು. ಸಹೋದರರು ೧೯೯೯ರ ಅಕ್ಟೋಬರ್ ತಿಂಗಳಲ್ಲಿ ಇತರ ನಟರ ಜೊತೆಗೆ ಇನ್ನೊಂದು ಪ್ರವಾಸಿ ತಂಡವನ್ನು ಅಮೆರಿಕಕ್ಕೆ ಒಯ್ದಿದ್ದರು. ಈ ತಂಡದ ಮೂವರು ಹುಡುಗರನ್ನು ನ್ಯೂಜೆರ್ಸಿಯಲ್ಲಿ ಕೈಬಿಟ್ಟಿದ್ದರು ಎನ್ನಲಾಗಿತ್ತು.  ಪಟಿಯಾಲ ಪೊಲೀಸರು ದಲೇರ್ ಮತ್ತು ಶಂಶೇರ್ ವಿರುದ್ಧ ಬಕ್ಷೀಶ್ ಸಿಂಗ್ ಎಂಬವರ ದೂರನ್ನು ಆಧರಿಸಿ ದೂರನ್ನು ದಾಖಲಿಸಿದ್ದರು. ಬಳಿಕ ಸಹೋದರರ ವಿರುದ್ಧ ಕನಿಷ್ಠ ಇನ್ನೂ ೩೫ ವಂಚನೆ ದೂರುಗಳು ದಾಖಲಾಗಿದ್ದವು.  ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗಲು ನೆರವಾಗುವುದಕ್ಕಾಗಿ ತಮ್ಮಿಂದ ಉಭಯ ಸಹೋದರರು ಹಣ ಪಡೆದುಕೊಳ್ಳುತ್ತಿದ್ದರು, ಆದರೆ ಬಳಿಕ ಹಾಗೆ ಮಾಡುವಲ್ಲಿ ವಿಫಲರಾಗುತ್ತಿದ್ದರು ಎಂಬುದು ದೂರುಗಳಲ್ಲಿ ಇದ್ದ ಸಾಮಾನ್ಯ ಅಂಶಗಳಾಗಿದ್ದವು.  ಪಟಿಯಾಲ ಪೊಲೀಸರು ನವದೆಹಲಿಯ ಕನ್ಹಾಟ್ ಪ್ಲೇಸ್ ನಲ್ಲಿನ ದಲೇರ್ ಮೆಹೆಂದಿ ಅವರ ಕಚೇರಿಗಳ ಮೇಲೂ ದಾಳಿ ನಡೆಸಿದ್ದರು ಮತ್ತು ಮೆಹೆಂದಿ ಸಹೋದರರಿಗೆ ಹಣ ಪಾವತಿ ಮಾಡಿದ್ದವರ ಪ್ರಕರಣ ಕಡತ ಸೇರಿದಂತೆ ಹಲವಾರು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು.  ೨೦೦೬ ರಲ್ಲಿ, ಪಟಿಯಾಲ ಪೊಲೀಸರು ದಲೇರ್ ಮೆಹಂದಿ ಅವರು ಮುಗ್ಧ ಎಂದು ಹೇಳಿ ಅವರನ್ನು ದೋಷಮುಕ್ತರನ್ನಾಗಿ ಮಾಡುವಂತೆ ಕೋರಿ ಎರಡು ಅರ್ಜಿಗಳನ್ನೂ ಸಲ್ಲಿಸಿದ್ದರು. ಆದರೆ ಅವರ ವಿರುದ್ಧ ನ್ಯಾಯಾಂಗ ಕಡತದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಮತ್ತು ಇನ್ನಷ್ಟು ತನಿಖೆಗೆ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿತ್ತು.

2018: ನವದೆಹಲಿ: ರಾಜಕೀಯ ಪಕ್ಷಗಳ ದೇಣಿಗೆಯನ್ನು ಪಾರದರ್ಶಕಗೊಳಿಸುವ ಗುರಿಯೊಂದಿಗೆ ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಜಾರಿಗೆ ತರಲಾಗಿರುವ ಚುನಾವಣಾ ಬಾಂಡ್ ಗಳ ಮೊದಲ ಕಂತಿನ ಮಾರಾಟದಲ್ಲಿ ೨೨೨ ಕೋಟಿ ರೂಪಾಯಿಗಳ ಬಾಂಡ್ ಗಳು ಮಾರಾಟವಾಗಿವೆ ಎಂದು ಕೇಂದ್ರ ಸರ್ಕಾರ  ಲೋಕಸಭೆಗೆ ತಿಳಿಸಿತು.  ಮಾರ್ಚ್ ೧ರಿಂದ ೧೦ರವರೆಗಿನ ಅವಧಿಯಲ್ಲಿ ಚುನಾವಣಾ ಬಾಂಡ್ ಗಳ ಮೊದಲ ಕಂತಿನ ಮಾರಾಟ ನಡೆದಿತ್ತು.  ಆದರೆ ದಾನಿಗಳು ಯಾವ ರಾಜಕೀಯ ಪಕ್ಷಗಳ ಸಲುವಾಗಿ ಈ ಬಾಂಡ್ ಗಳನ್ನು ಖರೀದಿಸಿದ್ದಾರೆ ಎಂದು ಸರ್ಕಾರ ಬಹಿರಂಗ ಪಡಿಸಲಿಲ್ಲ.  ಮಾರ್ಚ್ ೧ರಿಂದ ಮಾರ್ಚ್ ೯ರವರೆಗಿನ ಬಾಂಡ್ ಮಾರಾಟದ  ಲೆಕ್ಕ ಹಾಕಲಾಗಿತ್ತು. ಈ ಅವಧಿಯಲ್ಲಿ ೨೨೨ ಕೋಟಿ ರೂಪಾಯಿಗಳು ಸಂಗ್ರಹವಾಗಿವೆ ಎಂದು ಕೇಂದ್ರ ವಿತ್ತ ಖಾತೆ ಸಹಾಯಕ ಸಚಿವ ವಿ. ರಾಧಾಕೃಷ್ಣನ್ ಲೋಕಸಭೆಗೆ ನೀಡಿದ ಲಿಖಿತ ಉತ್ತರ ಒಂದರಲ್ಲಿ ಮಾಹಿತಿ ನೀಡಿದರು.  ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆ ಪದ್ಧತಿಯನ್ನು ಶುದ್ಧಗೊಳಿಸುವ ಸಲುವಾಗಿ ೨೦೧೭-೧೮ರ ಸಾಲಿನ ಮುಂಗಡಪತ್ರದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಚುನಾವಣೆ ಬಾಂಡ್ ಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದರು.  ಈ ಬಾಂಡ್ ಗಳು ಪ್ರಾಮಿಸರಿ ನೋಟುಗಳ ರೂಪದಲ್ಲಿವೆ. ದಾನಿಗಳು ರಾಜಕೀಯ ಪಕ್ಷಗಳಿಗೆ ಬ್ಯಾಂಕುಗಳ ಮೂಲಕ ಬಾಂಡ್ ರೂಪದಲ್ಲಿ ದೇಣಿಗೆ ಸಲ್ಲಿಸಬಹುದು. ಭಾರತೀಯ ಸ್ಟೇಟ್ (ಎಸ್ ಬಿಐ) ಬ್ಯಾಂಕಿನ ನಿಗದಿತ ಶಾಖೆಗಳಲ್ಲಿ ಮಾತ್ರ ಬಾಂಡ್ ಗಳು ಲಭ್ಯ. ಎಸ್ ಬಿಐ ಗೆ ಮಾತ್ರ ಚುನಾವಣೆ ಬಾಂಡ್ ಗಳನ್ನು ಮಾರಾಟ ಮಾಡಲು ಅಧಿಕಾರ ನೀಡಲಾಗಿದೆ ಎಂದು ಸಚಿವರು ಹೇಳಿದರು. ಚುನಾವಣೆ ಬಾಂಡ್ ಯೋಜನೆ ಬಗ್ಗೆ ಜನವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮಾರ್ಚ್ ೧ರಿಂದ ೧೦ರವರೆಗೆ ಬಾಂಡ್ ಮಾರಾಟಕ್ಕೆ ಅವಧಿ ನಿಗದಿಗೊಳಿಸಲಾಗಿತ್ತು.  ಈ ಬಾಂಡ್ ಗಳನ್ನು ಭಾರತದ ಯಾರೇ ಪ್ರಜೆ ಅಥವಾ ಕಾರ್ಪೋರೇಟ್ ಸಂಸ್ಥೆ ಖರೀದಿಸಬಹುದು. ಇವುಗಳಿಗೆ ಬಡ್ಡಿ ಲಭಿಸುವುದಿಲ್ಲ ಎಂದು ಸಚಿವರು ನುಡಿದರು.  ಚುನಾವಣೆ ಬಾಂಡ್ ಗಳ ಅವಧಿ ೧೫ ದಿನಗಳು ಮಾತ್ರ. ನೋಂದಾಯಿತ ಪಕ್ಷಗಳಿಗೆ ದೇಣಿಗೆ ನೀಡಲು ದಾನಿಗಳು ಈ ಬಾಂಡ್ ಗಳನ್ನು ಬಳಸಬಹುದು. ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಶೇಕಡಾ ೧ರಷ್ಟಾದರೂ ಮತ ಗಳಿಸಿದ ಪಕ್ಷಗಳಿಗೆ ಮಾತ್ರ ಈ ಮೂಲಕ ದೇಣಿಗೆ ಸ್ವೀಕರಿಸಲು ಅವಕಾಶ ಒದಗಿಸಲಾಗಿದೆ.  ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳ ಮೊದಲ ೧೦ ದಿನಗಳ ಕಾಲ ಈ ಬಾಂಡ್ ಗಳು ಖರೀದಿಗೆ ಲಭ್ಯವಿರುತ್ತವೆ ಎಂದು ಸಚಿವರು ಹೇಳಿದರು. ದಾನಿಯು ತನ್ನ ಕೆವೈಸಿ (ನಿಮ್ಮ ಗ್ರಾಹಕನನ್ನು ತಿಳಿಯಿರಿ) ಮಾಹಿತಿಯನ್ನು ಒದಗಿಸಿದ ಬಳಿಕ ಬ್ಯಾಂಕಿಗೆ ಹಣ ಪಾವತಿ ಮಾಡಿ ೧೦೦೦, ೧೦,೦೦೦, ೧ ಲಕ್ಷ, ೧೦ ಲಕ್ಷ, ೧ ಕೋಟಿ ರೂಪಾಯಿಗಳ ಗುಣಕಗಳಲ್ಲಿ ಚುನಾವಣಾ ಬಾಂಡ್ ಗಳನ್ನು ಪಡೆಯಬಹುದು. ಬಾಂಡ್ ಗಳಲ್ಲಿ  ಹಣ ಸ್ವೀಕರಿಸುವವರ ಹೆಸರು ಇರುವುದಿಲ್ಲ.  ಯಾವುದೇ ಅರ್ಹ ರಾಜಕೀಯ ಪಕ್ಷ ಬಾಂಡ್ ಠೇವಣಿ ಇಟ್ಟ ದಿನವೇ ಹಣ ಆ ಪಕ್ಷದ ಖಾತೆಗೆ ಜಮೆಯಾಗುತ್ತದೆ. ಆದರೆ ಬಾಂಡ್ ಅವಧಿ ಮುಗಿದ ಬಳಿಕ ಯಾವುದೇ ರಾಜಕೀಯ ಪಕ್ಷಕ್ಕೆ ಬಾಂಡ್ ಹಣವನ್ನು ಪಾವತಿ ಮಾಡಲಾಗುವುದಿಲ್ಲ. ಚುನಾವಣೆಗೆ ನಿಧಿ ಒದಗಿಸಲು ಬಾಂಡ್ ಜಾರಿಗೊಳಿಸಿರುವ ವಿಶ್ವದ ಪ್ರಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ.

2018: ನವದೆಹಲಿ: ಹಲವಾರು ದಿನಗಳ ಊಹಾಪೋಹಗಳ ಬಳಿಕ, ಬಾಲಿವುಡ್‌ನ ಪ್ರತಿಭಾವಂತ ನಟ, ಐವತ್ತೊಂದರ ಹರೆಯದ ಇರ್ಫಾನ್ ಖಾನ್ ಅವರು ತಮ್ಮನ್ನು ಕಾಡುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಕೊನೆಗೂ ಬಹಿರಂಗ ಪಡಿಸಿದರು. ತಾನು ನ್ಯೂರೋ ಎಂಡೋಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದರು.  ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಬೀರಬಲ್ಲಂತಹ ’ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನನ್ನನ್ನು ಬಾಧಿಸುತ್ತಿದೆ ಎಂದು ಗೊತ್ತಾಗಿದೆ.  ಆದರೆ ನನ್ನ ಸುತ್ತಮುತ್ತಣ ಜನರ ಪ್ರೀತಿ ನನ್ನಲ್ಲಿ ಭರವಸೆಯನ್ನು ಮೂಡಿಸಿದೆ ಎಂದು ಖಾನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಕೆಲ ದಿನಗಳ ಹಿಂದೆ ಇರ್ಫಾನ್ ಖಾನ್ ಅವರು ಟ್ವಿಟರ್‌ನಲ್ಲಿ ತಾವು ಒಂದು ಅತ್ಯಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿಯೂ ಅದೇನೆಂಬುದನ್ನು ಸದ್ಯವೇ ಬಹಿರಂಗಪಡಿಸುವುದಾಗಿಯೂ ಹೇಳಿದ್ದರು. ಆದರೆ ಯಾರೂ ತನ್ನ ಕಾಯಿಲೆ ಬಗ್ಗೆ ಅಲ್ಲಸಲ್ಲದ ಊಹೆಗಳನ್ನು ಮಾಡದಂತೆ ವಿನಂತಿಸಿದ್ದರು.  ಇರ್ಫಾನ್ ಅವರ ಈ ಮಾತಿನಿಂದಾಗಿ ಅನೇಕರು ಅವರಿಗೆ ಕ್ಯಾನ್ಸರ್ ಕಾಯಿಲೆ ಇದ್ದಿರಬಹುದೆಂದು ಭಾವಿಸಿದ್ದರು. ತನ್ನ ನಿಗೂಢ ಕಾಯಿಲೆಯ ಬಗ್ಗೆ ಇರ್ಫಾನ್ "ಕೆಲವೊಮ್ಮೆ ನೀವು ನಿಮ್ಮ ಬದುಕನ್ನೇ ಅಲ್ಲಾಡಿಸುವ ಸ್ಥಿತಿಯಲ್ಲಿ ಹಾಸಿಗೆಯಿಂದ ಏಳುತ್ತೀರಿ. ಕಳೆದ ೧೫ ದಿನಗಳಿಂದ ನನ್ನ ಬದುಕು ಒಂದು ಸಸ್ಪೆನ್ಸ್ ಸ್ಟೋರಿ ಎಂಬಂತಾಗಿದೆ. ಅತ್ಯಪರೂಪದ ಕಥೆಗಳಿಗಾಗಿರುವ ನನ್ನ ಹುಡುಕಾಟವು ಒಂದು ಇಂತಹ ಅತ್ಯಪರೂದ ಕಾಯಿಲೆ ನನ್ನಗೊಳಗೇ ಇದೆ ಎಂದು ಗೊತ್ತುಪಡೀಸಿತೆಂದು ನಾನು ಊಹಿಸಿಯೇ ಇರಲಿಲ್ಲ ಎಂದು ಇರ್ಫಾನ್ ಕಳೆದ ಮಾರ್ಚ್ ೫ರಂದು ಟ್ವಿಟರ್‌ನಲ್ಲಿ ಬರೆದಿದ್ದರು.  ದೇಹದಲ್ಲಿ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಅಂಗಾಂಗಗಳಲ್ಲಿ ಎಂಡೋಕ್ರೈನ್ ಟ್ಯೂಮರ್  ಮೊದಲಿಗೆ ಆರಂಭವಾಗುತ್ತದೆ. ಹಾರ್ಮೋನು ಸ್ರವಿಸುವ ಕೋಶಗಳಲ್ಲೇ ಎಂಡೋಕ್ರೈನ್ ಟ್ಯೂಮರ್ ಬೆಳೆಯುವುದರಿಂದ ಈ ಟ್ಯೂಮರ್ ಅಥವಾ ಗಡ್ಡೆ ಕೂಡಾ ಹಾರ್ಮೋನು ಸ್ರವಿಸುವ ಶಕ್ತಿಯನ್ನು ಪಡೆದಿರುತ್ತದೆ. ಇದು ಗಂಭೀರ ಅಸ್ವಸ್ಥತೆಗೆ ಕಾರಣವಾಗುತ್ತದೆ.  ‘ನನ್ನ ಕುಟುಂಬ ಮತ್ತು ಗೆಳೆಯರು ನನ್ನೊಂದಿಗೆ ಇದ್ದಾರೆ ಮತ್ತು ನನಗಾಗಿ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಅನಗತ್ಯ ಊಹಾಪೋಹ ಮಾಡಬೇಡಿ. ವಾರ-೧೦ ದಿನಗಳಲ್ಲಿ ಇನ್ನಷ್ಟು ತಪಾಸಣೆಗಳು ಮುಗಿದ ಬಳಿಕ ನನ್ನ ಕಥೆ ಏನೆಂಬುದನ್ನು ನಾನೇ ಹೇಳುವೆ. ಅಲ್ಲಿಯವರೆಗೆ ನನಗೆ ಶುಭಾಶಯ ಕೋರಿ ಎಂದು ಇರ್ಫಾನ್ ಮನವಿ ಮಾಡಿದ್ದರು.  ಫೆಬ್ರುವರಿ ಕೊನೆಯ ವಾರ, ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರು ಇರ್ಫಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ ತಮ್ಮ ಮುಂದಿನ ಚಿತ್ರದ ಚಿತ್ರೀಕರಣವನ್ನು ಪ್ರಮುಖ ನಟನೊಬ್ಬನ ಅಸ್ವಾಸ್ಥ್ಯದ ಹಿನ್ನೆಲೆಯಲ್ಲಿ ಮುಂದೂಡಿದಾಗ ಇರ್ಫಾನ್ ಖಾನ್ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಆರಂಭವಾಗಿದ್ದವು.  ಇರ್ಫಾನ್ ಅವರ ಮುಂದಿನ ಚಿತ್ರ ’ಬ್ಲಾಕ್ ಮೇಲ್ ಏಪ್ರಿಲ್ ೬ರಂದು ಬಿಡುಗಡೆಯಾಗಲಿದೆ. ಹಂಸಲ್ ಮೆಹ್ತರಿಂದ ಹಿಡಿದು ದೀಪಿಕಾ ಪಡುಕೋಣೆಯವರ ವರೆಗೆ ಚಿತ್ರೋದ್ಯಮದ ಎಲ್ಲ ಸಹನಟ, ನಟಿಯರು ಖಾನ್ ಮನವಿಗೆ ಸ್ಪಂದಿಸಿ ಮಾಧ್ಯಮ ಮತ್ತು ಹಿತೈಷಿಗಳಿಗೆ ಪುಕಾರುಗಳನ್ನು ಹರಡದಂತೆ ಕೋರಿದ್ದರು.

2018: ಚಂಡೀಗಢ: ಮಾದಕ ದ್ರವ್ಯ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರೋಮಣಿ ಅಕಾಲಿದಳ ನಾಯಕ ಬಿಕ್ರಮ್ ಸಿಂಗ್ ಮಜೀಥಿಯ ಅವರ ಬಳಿ ಕ್ಷಮೆ ಯಾಚಿಸಿರುವ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ವರ್ತನೆಯು ಕೇಜ್ರಿವಾಲ್ ಅವರ ಮಾನಸಿಕ ದೌರ್ಬಲ್ಯ ಮತ್ತು ಶರಣಾಗತಿಯ ಸಂಕೇತವಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಆಪ್) ಪಂಜಾಬ್ ಘಟಕದ ಹಿರಿಯ ಧುರೀಣ ಸುಖ್ ಪಾಲ್ ಸಿಂಗ್ ಖೈರಾ ಹೇಳಿದರು.  ಕೇಜ್ರಿವಾಲ್ ಅವರ ಕ್ಷಮಾಯಾಚನೆ ಪಂಜಾಬಿನ ಪಕ್ಷ ಶಾಸಕರಿಗೆ ಸ್ವೀಕಾರಾರ್ಹ ಅಲ್ಲ ಎಂದು ಅವರು ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದರು.  ‘ಕೇಜ್ರಿವಾಲ್ ಅವರು ಕ್ಷಮೆ ಯಾಚಿಸಬಾರದಾಗಿತ್ತು ಎಂಬುದು ನಮ್ಮ ಭಾವನೆ. ರಾಜ್ಯಾದ್ಯಂತ ಪಕ್ಷ ಕಾರ್ಯಕರ್ತರಿಗೆ ಇದರಿಂದ ಭ್ರಮನಿರಸನವಾಗಿದೆ ಎಂದು ಅವರು ನುಡಿದರು.  ‘ನಮಗೆ ಯಾವುದೂ ಪಂಬಾಬಿಗಿಂತ ಹೆಚ್ಚಲ್ಲ. ಈದಿನದ ಸಭೆಯಲ್ಲಿ ನಾವು ಪಂಜಾಬಿನ ಜನರು ಮತ್ತು ಕಾರ್ಯಕರ್ತರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು. ಆಪ್ ರಾಜ್ಯ ಅಧ್ಯಕ್ಷ ಭಗವಂತ್ ಮಾನ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗುವುದೇ ಎಂಬ ಬಗ್ಗೆ ’ನಾವು ಪರಿಶೀಲಿಸುತ್ತೇವೆ ಎಂದು ಖೈರಾ ಉತ್ತರಿಸಿದರು.  ಇದಕ್ಕೆ ಮುನ್ನ ಭಗವಂತ್ ಮಾನ್ ಅವರು ತಾವು ಪಕ್ಷದ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿಯೂ ಪಂಜಾಬಿನಲ್ಲಿ ಮಾದಕ ದ್ರವ್ಯ ಮಾಫಿಯಾ ಮತ್ತು ಭ್ರಷ್ಟಾಚಾರದ ವಿರುದ್ಧ ’ಆಮ್ ಆದ್ಮಿ (ಜನ ಸಾಮಾನ್ಯ) ಆಗಿ ಹೋರಾಡುವೆ ಎಂದೂ  ಟ್ವೀಟ್ ಮಾಡಿದ್ದರು.  ಮಾನ್ ರಾಜೀನಾಮೆಯನ್ನು ಅನುಸರಿಸಿ ಸಹ ಅಧ್ಯಕ್ಷ ಅಮಾನ್ ಅವರೂ ರಾಜೀನಾಮೆ ನೀಡಿದ್ದರು.  ‘ನಿನ್ನೆಯ ನೋವಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದಯವಿಟ್ಟು ಪಕ್ಷದ ರಾಜ್ಯ ಘಟಕದ ಸಹ ಅಧ್ಯಕ್ಷ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಅಮಾನ್ ಅವರು ಮನಿಶ್ ಸಿಸೋಡಿಯಾ ಅವರಿಗೆ ಟ್ವೀಟ್ ಮಾಡಿ ತಿಳಿಸಿದ್ದರು. ಸಿಸೋಡಿಯಾ ಅವರು ಪಕ್ಷದ ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹೊಣೆ ಹೊತ್ತಿದ್ದಾರೆ.

2018: ಮಾಸ್ಕೋ : ರಶ್ಯದ ಯಾಕುತ್ಸ್ಕ್ ವಿಮಾನ ನಿಲ್ದಾಣ ಮತ್ತು ಅದರ ಆಸುಪಾಸಿನ ಪ್ರದೇಶದಲ್ಲಿ ಈದಿನ ದಿಢೀರನೆ ಆಕಾಶದಿಂದ ಚಿನ್ನ ಮತ್ತು ವಜ್ರದ ಸುರಿಮಳೆಯಾಯಿತು. ಹೌದು, ದಿಢೀರನೆ ಆಕಾಶದಿಂದ ಈ ರೀತಿ ಚಿನ್ನ ಮತ್ತು ವಜ್ರ ಉದುರಲು ಕಾರಣವಾದದ್ದು ಸರಕು ಸಾಗಣೆ ವಿಮಾನವೊಂದರ  ಬಾಗಿಲು ಅದು ಬಾನಿಗೇರಿದ ಸ್ವಲ್ಪ ಹೊತ್ತಿನಲ್ಲೇ ತೆರೆದುಕೊಂಡದ್ದು. ಬಾಗಿಲು ತೆರೆದುಕೊಂಡದ್ದೇ ತಡ, ವಿಮಾನದೊಳಗಿದ್ದ ಸುಮಾರು ೧೦ ಟನ್ನಿನಷ್ಟು ಚಿನ್ನ, ಪ್ಲಾಟಿನಂ ಮತ್ತು ವಜ್ರ ವಿಮಾನ ನಿಲ್ದಾಣದ ರನ್ ವೇ ಮತ್ತು ಆಸುಪಾಸಿನ ೨೬ ಕಿಮೀ ಪ್ರದೇಶದಲ್ಲಿ ಮಳೆಯಂತೆ ಸುರಿಯಿತು.  ವಿಮಾನದಿಂದ ಉದುರಿದ ಚಿನ್ನ, ವಜ್ರ ಇತ್ಯಾದಿಗಳ ಮೌಲ್ಯ ಅಂದಾಜು ೨೬,೩೬೯ ಕೋಟಿ ರೂಪಾಯಿಗಳು ಎಂದು (೩೬೫ ದಶಲಕ್ಷ ಡಾಲರ್) ಎಂದು ಅಂದಾಜು ಮಾಡಲಾಯಿತು.  ನಿಂಬಸ್ ಏರ್ ಲೈನ್ಸ್ ಎಎನ್ -೧೨ ಸರಕು ಸಾಗಣೆ ವಿಮಾನ ಬಾನಿಗೆ ಏರಿದ ಆದ ಸ್ವಲ್ಪ ಹೊತ್ತಿನಲ್ಲೇ ಅದರಲ್ಲಿ ತಾಂತ್ರಿಕ ದೋಷ ಕಾಣಿಸಿತು. ಪರಿಣಾಮವಾಗಿ ಅದರ ಬಾಗಿಲು ತೆರೆದುಕೊಂಡು ಅದರೊಳಗಿದ್ದ  ೧೦ ಟನ್ ಚಿನ್ನ, ಪ್ಲಾಟಿನಂ, ವಜ್ರದ ಸರಕುಗಳು ಆಗಸದಿಂದ ಉದುರಿದವು. ಈ ದೃಶ್ಯವು ಚಿನ್ನ, ವಜ್ರಗಳ ಸುರಿ ಮಳೆ ಆಗುತ್ತಿರುವಂತೆ ಕಾಣಿಸಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.  ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕೂಡಲೇ ಅದನ್ನು ಸುರಕ್ಷಿತವಾಗಿ ಸಮೀಪದ ಮಗಾನ್ ವಿಮಾನ ನಿಲ್ದಾಣದಲ್ಲಿ  ಇಳಿಸಲು ವಿಮಾನದ ಪೈಲಟ್ ನಿರ್ಧರಿಸಿದ. ಅಷ್ಟರಲ್ಲೇ ವಿಮಾನದ ಬಾಗಿಲು ತೆರೆದುಕೊಂಡು ಒಳಗಿದ್ದ ಚಿನ್ನ, ವಜ್ರ, ಪ್ಲಾಟಿನಂ ವಿಮಾನ ನಿಲ್ದಾಣದ ರನ್ ವೇ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಸುರಿಯಿತು ಎಂದು ವರದಿಗಳು ಹೇಳಿದವು.  ಘಟನೆಯನ್ನು ಅನುಸರಿಸಿ ರನ್ ವೇಯನ್ನು ಮುಚ್ಚಲಾಯಿತು. ಪೊಲೀಸರು ಮತ್ತು ರಹಸ್ಯ ಸೇವಾ ದಳದ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದರು.  ವಿಮಾನದಲ್ಲಿದ್ದ ವಜ್ರ, ಚಿನ್ನ, ಪ್ಲಾಟಿನಂ ಸರಕು ಚುಕೋತಾ ಮೈನಿಂಗ್ ಆಂಡ್ ಜಿಯೋಲಾಜಿಕಲ್ ಕಂಪೆನಿಗೆ ಸೇರಿದ್ದು ಎಂದು ಹೇಳಲಾಯಿತು.  ಈ ಕಂಪೆನಿಯಲ್ಲಿ ಕೆನಡದ ಕಿನ್ರೋಸ್ ಗೋಲ್ಡ್ ಕಂಪೆನಿಗೆ ದೊಡ್ಡ ಮಟ್ಟದ ಹಿತಾಸಕ್ತಿ ಇದೆ ಎನ್ನಲಾಯಿತು.  ವಿಮಾನವು ಕ್ರಾಸ್ನೋಯಾರ್ಸ್ಕ್ ಮಾರ್ಗವಾಗಿ ಕುಪೋಲ್ (ಡೋಮ್) ಗಣಿ ಪ್ರದೇಶದತ್ತ ಹೊರಟಿತ್ತು.. ರಶ್ಯದ ಯಾಕುತ್ಸ್ಕ್ ಪ್ರಾಂತ್ಯ ಅತ್ಯಂತ ಶೀತಲ ಪ್ರದೇಶವಾಗಿದ್ದು ಇದು ವಜ್ರ ಉತ್ಪಾದನೆಯ ಪ್ರಮುಖ ಕೇಂದ್ರ. ಘಟನೆಯ ಹಿನ್ನೆಲೆಯಲ್ಲಿ ವಿಮಾನದ ಹಾರಾಟವನ್ನು ಸಜ್ಜುಗೊಳಿಸಿದ ತಾಂತ್ರಿಕ ಇಂಜಿನಿಯರುಗಳನ್ನು ಪೊಲೀಸರು ಬಂಧಿಸಿದರು.

2009: ಜಪಾನ್ ರಾಜಧಾನಿ ಟೋಕಿಯೊ ಸಮೀಪ ಸುಕುಬಾ ಎಂಬಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಯುವತಿ ರೂಪದ ರೊಬೋಟ್ ಗಮನ ಸೆಳೆಯಿತು.

2009: ಶರತ್ ಸಭರ್‌ವಾಲ್ ಅವರು ಪಾಕಿಸ್ಥಾನಕ್ಕೆ ಭಾರತದ ನೂತನ ರಾಯಭಾರಿಯಾಗಿ ನೇಮಕಗೊಂಡರು.

2009: ಪಾಕಿಸ್ಥಾನದಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿತು. ಮುಷರಫ್ ಸರ್ಕಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ಕಿತ್ತು ಹಾಕಿದ್ದ ಇಫ್ತಿಕಾರ್ ಮಹಮದ್ ಚೌಧರಿ ಅವರ ಪುನರ್ ನೇಮಕ ಮಾಡಬೇಕೆಂಬ ಷರೀಫ್ ಬೇಡಿಕೆಗೆ ಪಾಕಿಸ್ಥಾನ ಸರ್ಕಾರ ಒಪ್ಪಿ ಕೊಂಡಿತು. ಈ ಹಿನ್ನೆಲೆಯಲ್ಲಿ ಸಂಸತ್ ಭವನದ ಎದುರು ನಡೆಸಬೇಕಾಗಿದ್ದ ಧರಣಿಯನ್ನು ನವಾಜ್ ಷರೀಫ್ ಹಿಂತೆಗೆದುಕೊಂಡರು. 2007ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಇಫ್ತಿಕಾರ್ ಚೌಧರಿ ಸೇರಿದಂತೆ ಒಂಬತ್ತು ಮಂದಿ ನ್ಯಾಯಮೂರ್ತಿಗಳನ್ನು ಸೇವೆಯಿಂದ ಕಿತ್ತುಹಾಕಿದ್ದರು. ಆ ಆದೇಶವನ್ನು ಜರ್ದಾರಿ ಸರ್ಕಾರ ಹಿಂದಕ್ಕೆ ಪಡೆಯಿತು. ಹಾಲಿ ನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗಾರ್ ಮಾರ್ಚ್ 21ರಂದು ನಿವೃತ್ತಿಯಾದಾಗ ಚೌಧರಿ ಅಧಿಕಾರ ಸ್ವಿಕರಿಸುವರು ಎಂದು ತಿಳಿಸಲಾಯಿತು.

'ಲಾಂಗ್‌ ಮಾರ್ಚ್' ಘಟನಾವಳಿ...
ಪಾಕಿಸ್ಥಾನದಲ್ಲಿ 25ದಿನಗಳಿಂದ ನಡೆಯುತ್ತಿದ್ದ ಜರ್ದಾರಿ ಸರ್ಕಾರದ ವಿರುದ್ಧದ ಪ್ರತಿಪಕ್ಷದ ಭಾರಿ ಪ್ರತಿಭಟನೆ ಅಂತ್ಯಗೊಂಡಿತು. ಮಾಜಿ ಪ್ರಧಾನಿ ಹಾಗೂ ಪಿಎಂಎಲ್‌ಎನ್ ಮುಖಂಡ ನವಾಜ್ ಷರೀಫ್ ಅವರ 'ಲಾಂಗ್‌ಮಾರ್ಚ್' ಪ್ರತಿಭಟನೆ ಹಾಗೂ ಸಂಸತ್ ಭವನದ ಮುಂದೆ ಧರಣಿ ಬೆದರಿಕೆಯ ಬಿಸಿ ತಟ್ಟಿದ ಕಾರಣ ಸರ್ಕಾರ ಬೇಡಿಕೆಗಳನ್ನೆಲ್ಲಾ ಈಡೇರಿಸಿತು. ವಜಾಗೊಂಡ ಪಂಜಾಬ್ ಸರ್ಕಾರವನ್ನು ಮರು ಸ್ಥಾಪಿಸಲಾಯಿತು. ಪದಚ್ಯುತ ನ್ಯಾಯಮೂರ್ತಿಗಳನ್ನು ಮರುನೇಮಿಸಲಾಯಿತು.

ಪಾಕ್‌ನಲ್ಲಿ ನಡೆದ ಪ್ರಮುಖ ಘಟನಾವಳಿಗಳು:

ಫೆಬ್ರುವರಿ 25: ಪಾಕಿಸ್ಥಾನದ ಸುಪ್ರೀಂಕೋರ್ಟ್ ತೀರ್ಪು- ನವಾಜ್ ಷರೀಫ್ ಮತ್ತವರ ಸೋದರ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಷಹಬಾಜ್‌ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ. ಪಂಜಾಬಿನಲ್ಲಿ ಷಹಬಾಜ್ ಸರ್ಕಾರ ಕಿತ್ತುಹಾಕಿ ರಾಜ್ಯಪಾಲರ ಆಡಳಿತ ಹೇರಿದ ಅಧ್ಯಕ್ಷ ಆಸೀಫ್ ಆಲಿ ಜರ್ದಾರಿ. ದೇಶದಾದ್ಯಂತ ಪ್ರತಿಭಟನೆ.

ಫೆಬ್ರುವರಿ 26: 'ತೀರ್ಪು ವಿಷಾದನೀಯ. ಪ್ರತಿಪಕ್ಷಗಳೊಂದಿಗೆ ರಾಜಿಸಂಧಾನ ಮಾತುಕತೆಗೆ ಸಿದ್ಧ'- ಪ್ರಧಾನಿ ಯೂಸುಫ್ ರಜಾ ಗಿಲಾನಿ ಹೇಳಿಕೆ.

ಮಾರ್ಚ್ 2: ಅಧ್ಯಕ್ಷ ಜರ್ದಾರಿ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಮಧ್ಯೆ ಸಂಬಂಧ ಸುಧಾರಣೆಗೆ ಪ್ರಾದೇಶಿಕ ಮತ್ತು ಸಣ್ಣಪಕ್ಷಗಳ ಪ್ರಯತ್ನ.ಸಂಧಾನಕ್ಕೆ ಒಪ್ಪದ ಷರೀಫ್, ಸರ್ಕಾರದ ವಿರುದ್ಧ ಬಂಡಾಯಕ್ಕೆ ಕರೆ.

ಮಾರ್ಚ್ 3: ಸರ್ಕಾರದ ಜತೆ ಮಾತುಕತೆಗೆ ಪಿಎಂಎಲ್‌ಎನ್ ಸಿದ್ಧತೆ. ನ್ಯಾಯಾಧೀಶರ ಮರುನೇಮಕ ಮತ್ತು ಷಹಬಾಜ್‌ ಸರ್ಕಾರ ಸ್ಥಾಪನೆಗೆ ಬೇಡಿಕೆ.

ಮಾರ್ಚ್ 4: 'ಅವಕಾಶವಾದಿ ನ್ಯಾಯಮೂರ್ತಿಗಳು, ಸೇನಾಧಿಪತಿಗಳು ಪಾಕ್ ಆಳುತ್ತಿದ್ದಾರೆ' ನವಾಜ್ ಹೇಳಿಕೆ. ಜರ್ದಾರಿ ವಿರುದ್ಧ ತೀವ್ರಗೊಂಡ ಪ್ರತಿಭಟನೆ.

ಮಾರ್ಚ್ 9: ಸರ್ಕಾರದ ವಿರುದ್ಧ ಪ್ರತಿಭಟಿಸಲು ಜನತೆಗೆ ನವಾಜ್ ಕರೆ. 'ಪ್ರಚೋದನಕಾರಿ ಭಾಷಣ, ದೇಶದ್ರೋಹಿ ಚಟುವಟಿಕೆ ಬೇಡ' ನವಾಜ್‌ಗೆ ಸರ್ಕಾರದ ಎಚ್ಚರಿಕೆ.

ಮಾರ್ಚ್ 10: ಆಡಳಿತಾರೂಢ ಪಾಕಿಸ್ಥಾನ್ ಪೀಪಲ್ಸ್‌ ಪಾರ್ಟಿ(ಪಿಪಿಪಿ)ಯಿಂದ ಪಿಎಂಎಲ್‌ಎನ್‌ಗೆ ಮಾತುಕತೆಯ ಆಹ್ವಾನ. ನವಾಜ್ ನಿರಾಕರಣೆ. ಬೇಡಿಕೆಗಳ ಜಾರಿಗಾಗಿ ಪ್ರತಿಭಟನೆ ಮತ್ತಷ್ಟು ತೀವ್ರ. ನವಾಜ್ ಷರೀಫ್ ಮೇಲೆ ನಿರ್ಬಂಧ ಹೇರಿದ ಸರ್ಕಾರ.

ಮಾರ್ಚ್ 11: ಸರ್ಕಾರಿ ಆದೇಶ ಉಲ್ಲಂಘಿಸಿದ ನವಾಜ್. ಸರ್ಕಾರದ ವಿರುದ್ಧ ಲಾಹೋರಿನಿಂದ ರಾಜಧಾನಿ ಇಸ್ಲಾಮಾಬಾದಿಗೆ 'ಲಾಂಗ್ ಮಾರ್ಚ್' ಜಾಥಾ, ಭಾರಿ ಜನಬೆಂಬಲ.

ಮಾರ್ಚ್ 12: ತುರ್ತುಸ್ಥಿತಿ ಘೋಷಣೆ. ಲಾಂಗ್‌ ಮಾರ್ಚ್ ದಮನಕ್ಕೆ ಸರ್ಕಾರದ ಇನ್ನೊಂದು ತಂತ್ರ. ತನ್ನ ಹತ್ಯೆಗೆ ಸಂಚು - ನವಾಜ್ ಆರೋಪ. ಶಾಂತಿ ಪಾಲಿಸಲು ಪಾಕ್‌ನ ಉಭಯ ನಾಯಕರಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಮನವಿ. ಮಾತುಕತೆಗೆ ಸರ್ಕಾರದಿಂದ ಮತ್ತೊಮ್ಮೆ ಆಹ್ವಾನ. ನಿರಾಕರಿಸಿದ ನವಾಜ್. ನಾಯಕರು, ವಕೀಲರು ಸೇರಿದಂತೆ ನೂರಾರು ಮಂದಿ ಸೆರೆ. ತಗ್ಗದ ಪ್ರತಿಭಟನೆ.

ಮಾರ್ಚ್ 13: ಮೆತ್ತಗಾದ ಸರ್ಕಾರ. ಪಂಜಾಬಿನಲ್ಲಿ ರಾಜ್ಯಪಾಲರ ಆಳ್ವಿಕೆ ವಾಪಸ್. ಅಧ್ಯಕ್ಷ ಜರ್ದಾರಿ ಆಪ್ತರಾದ ವಾರ್ತಾ ಸಚಿವೆ ಶೆರಿ ರೆಹ್ಮಾನ್ ರಾಜೀನಾಮೆ. ಸರ್ಕಾರಕ್ಕೆ ಬಿಸಿ. ಸಜ್ಜಾಗಿರಲು ಸೇನೆಗೆ ಆದೇಶ.

ಮಾರ್ಚ್ 14: ಬಿಕ್ಕಟ್ಟು ತಣಿಸಲು ಸರ್ಕಾರ ಯತ್ನ. ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ, ನವಾಜ್ ಮತ್ತು ಸೋದರ ಷಾಹ್‌ಬಾಜ್ ಚುನಾವಣಾ ಅನರ್ಹತೆ ವಾಪಸಾತಿ- ಜರ್ದಾರಿ ಸರ್ಕಾರದ ಭರವಸೆ. ತಲೆಬಾಗದ ನವಾಜ್ ಷರೀಫ್.

ಮಾರ್ಚ್ 15: ನವಾಜ್ ಷರೀಫ್‌ಗೆ 3 ದಿನಗಳ ಗೃಹಬಂಧನ. ಲಾಂಗ್ ಮಾರ್ಚ್ ನಿಯಂತ್ರಿಸಲು ಸರ್ಕಾರ ಸಂಚು. ಆದೇಶ ಉಲ್ಲಂಘನೆ. ರಾಜಧಾನಿ ಇಸ್ಲಾಮಾಬಾದಿಗೆ ತೆರಳಿ ಸಂಸತ್‌ ಭವನದ ಮುಂದೆ ಜನಸ್ತೋಮದೊಂದಿಗೆ ಧರಣಿ ನಡೆಸಲು ಲಾಹೋರಿನಿಂದ ಪ್ರತಿಭಟನೆ ಮುನ್ನಡೆಸಿದ ನವಾಜ್‌ ಷರೀಫ್. ಪ್ರತಿಭಟನೆ ಬೆಂಬಲಿಸಿ ಹಿರಿಯ ಪೊಲೀಸ್- ಇತರ ಅಧಿಕಾರಿಗಳ ರಾಜೀನಾಮೆ. ಕಂಗೆಟ್ಟ ಜರ್ದಾರಿ ಸರ್ಕಾರ.

ಮಾರ್ಚ್ 16: ಪ್ರಧಾನಿ ಯೂಸುಫ್ ರಜಾ ಗಿಲಾನಿ ಆದೇಶ- ವಜಾ ಆಗಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮಹಮ್ಮದ್, ಇತರ ನ್ಯಾಯಾಧೀಶರ ಮರುನೇಮಕ. ತೃಪ್ತರಾದ ನವಾಜ್ ಷರೀಫ್. ಕೈಬಿಟ್ಟ ಲಾಂಗ್ ಮಾರ್ಚ್, ದೇಶವ್ಯಾಪಿ ಪ್ರತಿಭಟನೆ ಅಂತ್ಯ. ಎಲ್ಲೆಲ್ಲೂ ಸಂಭ್ರಮಾಚರಣೆ.

2008: ಬಾಹ್ಯಾಕಾಶ ನಿಲ್ದಾಣದಲ್ಲಿನ `ಡೆಕ್ಸಟರ್' ಹೆಸರಿನ ದೈತ್ಯ ಗಾತ್ರದ ಯಂತ್ರಮಾನವನ (ರೊಬೊಟ್) ವಿದ್ಯುತ್ ಸಮಸ್ಯೆಯನ್ನು ನಿವಾರಿಸಿದ ವ್ಯೋಮಯಾನಿಗಳು, ಅದರ 3.5 ಮೀಟರ್ ಉದ್ದದ ಕೈಗಳನ್ನು ಜೋಡಿಸುವ ಸಾಹಸದಲ್ಲೂ ಯಶಸ್ವಿಯಾದರು. ಈ ಕೆನಡಾ ನಿರ್ಮಿತ ರೊಬೊಟ್ 4 ಮೀಟರ್ ಎತ್ತರವಿದ್ದು, ಪೂರ್ಣವಾಗಿ ಸಜ್ಜುಗೊಂಡಾಗ ಒಟ್ಟು 1,500 ಕೆ.ಜಿ. ತೂಗುವುದು. ಭವಿಷ್ಯದ ದಿನಗಳಲ್ಲಿ ಅದು ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡುವ ಗಗನಯಾತ್ರಿಗಳಿಗೆ ಹಲವು ಪ್ರಯೋಗಗಳು ಮತ್ತು ರಿಪೇರಿ ಕಾರ್ಯಗಳಲ್ಲಿ ನೆರವಾಗುವುದು. ಎಂಡೇವರ್ ಗಗನನೌಕೆಯ ಮೊದಲ ಬಾಹ್ಯಾಕಾಶ ಯಾನದ ಸಂದರ್ಭದಲ್ಲಿ ರೊಬೊಟ್ನ 11 ಅಡಿ ಉದ್ದದ ತೋಳುಗಳಿಗೆ ಕೈಗಳನ್ನು ಜೋಡಿಸುವ ಕೆಲಸ ನಡೆದಿತ್ತು. ಈ ಬಾರಿ ವಿಜ್ಞಾನಿಗಳು ಈ ತೋಳುಗಳನ್ನು ಭುಜಗಳಿಗೆ ಸೇರಿಸುವ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾದರು. ರಿಚರ್ಡ್ ಲಿನ್ನೆಹನ್ ಮತ್ತು ಮೆಕೆಲ್ ಫೋರ್ಮನ್ ಅವರು ಏಳು ಗಂಟೆ ಕಾಲ ಸತತ ಬಾಹ್ಯಾಕಾಶ ನಡಿಗೆ ನಡೆಸಿ ಸಾರಿಗೆ ವೇದಿಕೆಯಿಂದ ರೊಬೊಟ್ನ ಕೈಗಳನ್ನು ಬೇರ್ಪಡಿಸುವ ಪ್ರಯತ್ನ ಮಾಡಿ ಅದರಲ್ಲಿ ಸಫಲರಾದರು. ಹಿಂದಿನ ದಿನ ಬಾಹ್ಯಾಕಾಶ ನಡಿಗೆ ಮಾಡಿದ ವ್ಯೋಮಯಾನಿಗಳು ರೊಬೊಟನ್ನು ಬಾಹ್ಯಾಕಾಶ ನಿಲ್ದಾಣದ ತಾಂತ್ರಿಕ ಸಂಪರ್ಕಕ್ಕೆ ತರಲು ಸಫಲರಾದುದರಿಂದ ರೊಬೊಟ್ಗೆ ಅಗತ್ಯವಾದ ವಿದ್ಯುತ್ ಪೂರೈಕೆ ಸಾಧ್ಯವಾಗಿತ್ತು.

2008: ಚೀನಾದ ಪ್ರಧಾನಿಯಾಗಿ ವೆನ್ ಜಿಯಾಬೊ (65) ಎರಡನೇ ಬಾರಿಗೆ ಪುನರಾಯ್ಕೆಯಾದರು. ಚೀನಾ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಸಿ) ಮೂರನೇ ಶ್ರೇಯಾಂಕದ ನಾಯಕರಾದ ವೆನ್ ಅವರು ಪ್ರಧಾನಿ ಸ್ಥಾನದ ಏಕೈಕ ಅಭ್ಯರ್ಥಿಯಾಗಿದ್ದರು.

2008: ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ನೂತನ `ಷರಿಯತ್ ನಿಕಾಹನಾಮಾ' (ವಿವಾಹ ಷರತ್ತುಗಳು) ಪ್ರಕಟಿಸಿತು. ಈ ನೂತನ ನಿಕಾಹನಾಮಾದಿಂದ ಮಹಿಳೆಯರಿಗೆ ಸಮಾನತೆಯ ಅವಕಾಶಗಳು ಹೆಚ್ಚುತ್ತವೆ. ಇದು ಮೂರು ಸಾರಿ ತಲಾಖ್ (ವಿಚ್ಛೇದನಕ್ಕೆ ಬಳಸುವ ಪದ) ಎಂದು ಹೇಳುವ ತಲಾಖ್ ನಾಮಾಗಿಂತ ತುಂಬ ಭಿನ್ನವಾಗಿದೆ. ಹಳೆಯ ಪದ್ಧತಿಯಿಂದ ಕುರಾನಿನ ಸಮಾನತೆ ಪ್ರತಿಪಾದನೆಗೆ ಸೂಕ್ತ ನ್ಯಾಯ ದಕ್ಕುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ವಾದಿಸಿತು. ವಿಚ್ಛೇದನಕ್ಕೆ ಕನಿಷ್ಠ ಮೂರು ತಿಂಗಳ ಅವಧಿಯನ್ನು ಗಂಡು ಮತ್ತು ಹೆಣ್ಣಿಗೆ ನೀಡುವುದು ಹೊಸ ನಿಕಾಹನಾಮಾದ ಸುಧಾರಣಾ ಕ್ರಮಗಳಲ್ಲಿ ಒಂದು. ಎಸ್ ಎಂ ಎಸ್, ಇ-ಮೇಲ್, ದೂರವಾಣಿ ಅಥವಾ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ತಲಾಖ್ ನೀಡುವುದನ್ನು ಮಂಡಳಿಯ ಹೊಸ ನಿಕಾಹನಾಮಾ ತಿರಸ್ಕರಿಸಿತು. ತಲಾಖ್ಗೆ ಪ್ರಚೋದನೆಯನ್ನೂ ಅದು ವಿರೋಧಿಸಿತು. ಇದೇ ಮೊದಲ ಬಾರಿಗೆ ವಿವಾಹ ಸಂದರ್ಭದಲ್ಲಿ ಮೂರು ಫಾರಂಗಳನ್ನು ಭರ್ತಿ ಮಾಡಿಸಿಕೊಳ್ಳುವ ವಿಧಾನವನ್ನು ನಿಕಾಹನಾಮಾ ಅನುಸರಿಸುವುದು.

2008: ಟಿಬೆಟಿನಲ್ಲಿ ತನ್ನ ಆಡಳಿತ ವಿರುದ್ಧ ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಆರಂಭವಾದ ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದ ಚೀನಾವು ದಲೈಲಾಮ ಬೆಂಬಲಿಗರ ಮೇಲೆ `ಪ್ರಜಾ ಸಮರ' ಘೋಷಿಸಿತು.

2008: ಪಾಕಿಸ್ಥಾನದಲ್ಲಿ 1990ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಏಪ್ರಿಲ್ 1 ರಂದು ಲಾಹೋರಿನ ಕಾರಾಗೃಹದಲ್ಲಿ ನೇಣುಗಂಬಕ್ಕೆ ಏರಿಸಲಾಗುವುದು, 17 ವರ್ಷಗಳಿಂದ ಲಾಹೋರಿನ ಕೊಟ್ಲಖ್ ಪತ್ ಜೈಲುವಾಸಿಯಾದ ಸರಬ್ಜಿತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ಸಂಬಂಧ ಕಾರಾಗೃಹ ಅಧಿಕಾರಿಗಳಿಗೆ ಸೂಚನೆ ಬಂದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತು.

2007: ಒರಿಸ್ಸಾದ ದಕ್ಷಿಣ ಗಂಜಾಮ್ ಜ್ಲಿಲೆಯ ಬೆರ್ಹಾಮ್ ಪುರದ ಫಾರ್ಮೆಸಿ ವಿದ್ಯಾರ್ಥಿ ಪಿಂಟು ಮಹಾಕುಲ್ ಅವರು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ 141 ಮೀಟರ್ ಉದ್ದ, 24 ಕಿಲೋ ಗ್ರಾಂ ತೂಕದ ಪತ್ರವೊಂದನ್ನು ಕಳುಹಿಸಿದರು. `ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಇನ್ನೊಂದು ಅವಧಿಗೆ ರಾಷ್ಟ್ರಪತಿಯಾಗಿ ಮುಂದುವರೆಯಬೇಕು ಎಂಬುದು ನಮ್ಮ ಆಗ್ರಹ' ಎಂಬುದು ಈ ಪತ್ರದ ಸಾರಾಂಶವಾಗಿತ್ತು.

2007: ಐಸಿಸಿ ವಿಶ್ವಕಪ್ನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರು ಎಸೆತಗಳಲ್ಲಿ ಆರು ಸಿಕ್ಸರ್, ಒಂದೇ ಓವರಿನಲ್ಲಿ 36 ರನ್ ಗಳಿಸುವ ಮೂಲಕ ಸೇಂಟ್ ಕಿಟ್ಸ್ ನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ವಿಶ್ವದಾಖಲೆ ಸ್ಥಾಪಿಸಿದರು. ಹಾಲೆಂಡ್ ಮತ್ತು ದಕ್ಷಿಣ ಆಫ್ರಿಕದ ಮಧ್ಯೆ ನಡೆದ ವಿಶ್ವ ಕಪ್ ಎ ಬಣದ ಪಂದ್ಯದಲ್ಲಿ ಗಿಬ್ಸ್ ಈ ದಾಖಲೆ ಮಾಡಿದರು.

2007: ಹಿಂಸಾತ್ಮಕ ಪ್ರತಿಭಟನೆಗೆ ಬೆಚ್ಚಿ ಬಿದ್ದ ಪಶ್ಚಿಮ ಬಂಗಾಳ ಸರ್ಕಾರವು ರಾಷ್ಟ್ರಮಟ್ಟದಲ್ಲಿ `ಸಾಮಾಜಿಕ ಸಮನ್ವಯ ನೀತಿ' ರೂಪುಗೊಳ್ಳುವವರೆಗೆ ರಾಜ್ಯದಲ್ಲಿ ಎಲ್ಲ ವಿಶೇಷ ವಿತ್ತ ವಲಯಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತು.

2007: ತಮಿಳು ಚಿತ್ರರಂಗದ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿದ್ದ ಸರಿತಾ ಅವರು ತಮ್ಮ ಪತಿ ಮಲಯಾಳಿ ಚಿತ್ರನಟ ಮುಖೇಶ ಅವರ ವಿರುದ್ಧ ಕ್ರೂರ ನಡವಳಿಕೆಯ ಆರೋಪ ಮಾಡಿ ತಮಗೆ ವಿಚ್ಛೇದನ ಕೊಡಿಸುವಂತೆ ಚೆನ್ನೈಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

2006: ಅಲ್ ಖೈದಾ ಉಗ್ರಗಾಮಿಗಳ ಹಿಡಿತದ ಉತ್ತರ ಇರಾಕಿನ ಸಮರ್ರಾ ಪ್ರದೇಶದ ಮೇಲೆ ಅಮೆರಿಕ ಮತ್ತು ಇರಾಕಿ ಸಂಯುಕ್ತ ಪಡೆ ಭಾರಿ ಪ್ರಮಾಣದ ವಾಯುದಾಳಿ ಆರಂಭಿಸಿತು.

2006: ಮೆಲ್ಬೋರ್ನಿನಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಿರಿಯ ವೇಟ್ ಲಿಫ್ಟಿಂಗ್ ಪಟು ಕುಂಜುರಾಣಿ ದೇವಿ ಭಾರತಕ್ಕೆ ಮೊದಲ ಸ್ವರ್ಣಪದಕ ತಂದುಕೊಟ್ಟರು. ಮಹಿಳೆಯರ 48 ಕಿಲೋ ವಿಭಾಗದಲ್ಲಿ 166 ಕಿಲೋ ತೂಕ ಎತ್ತುವ ಮೂಲಕ ಕುಂಜುರಾಣಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದರು.

2006: ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ ಕನ್ನಡದಿಂದ ಹಿಂದಿಗೆ ಅನುವಾದಿಸಿದ ಕುವೆಂಪು ರಾಮಾಯಣ ಕೃತಿಯು 2006ನೇ ಸಾಲಿನ ಪಿತಾಶ್ರೀ ಗೋಪಿರಾಂ ಗೋಯೆಂಕಾ ಕನ್ನಡ- ಹಿಂದಿ ಅನುವಾದ ಪುರಸ್ಕಾರಕ್ಕೆ ಆಯ್ಕೆಯಾಯಿತು. ಬೆಂಗಳೂರು ಯಲಹಂಕ ಉಪನಗರದ ಕಮಲ ಗೋಯೆಂಕಾ ಪ್ರತಿಷ್ಠಾನವು ಪ್ರತಿವರ್ಷ ಉತ್ತಮ ಅನುವಾದಿತ ಕೃತಿಗೆ ಈ ಪ್ರಶಸ್ತಿ ನೀಡುತ್ತದೆ.

2002: ನ್ಯೂಜಿಲ್ಯಾಂಡಿನ ನೇಥನ್ ಅಸ್ಟ್ಲೆ ಅವರು 218 ನಿಮಿಷಗಳಲ್ಲಿ 153 ಚೆಂಡುಗಳಿಗೆ (ಬಾಲ್ಗಳಿಗೆ) 200 ರನ್ ಗಳಿಸಿ ಅತಿ ಕಡಿಮೆ ಅವಧಿಯಲ್ಲಿ ದ್ವಿಶತಕ ಬಾರಿಸಿದ ಆಟಗಾರನೆನಿಸಿದರು. ಇಂಗ್ಲೆಂಡಿನ ಕ್ರೈಸ್ಟ್ ಚರ್ಚಿನಲ್ಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅಸ್ಟ್ಲೆ ಅವರು ಈ ಸಾಧನೆ ಮಾಡಿದರು.

1960: ಕಲಾವಿದ ಬಿ. ರಘುರಾಮ್ ಜನನ.

1952: ಕಲಾವಿದೆ ಎಂ.ಎಸ್. ಶೀಲಾ ಜನನ.

1935: ಖ್ಯಾತ ರಂಗಕರ್ಮಿ ಜಿ.ವಿ. ಶಿವಾನಂದ (16-3-1935ರಿಂದ 25-3-2002) ಅವರು ವೃತ್ತಿ ರಂಗಭೂಮಿಯ ನಾಟಕ ರತ್ನ ಡಾ. ಗುಬ್ಬಿ ವೀರಣ್ಣ- ಜಿ. ಸುಂದರಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1927: ಬಾಹ್ಯಾಕಾಶ ಯಾನದಲ್ಲಿದ್ದಾಗ ಮೃತನಾದ ಪ್ರಪ್ರಥಮ ಸೋವಿಯತ್ ಗಗನಯಾನಿ ವ್ಲಾದಿಮೀರ್ ಕೊಮಾರೋವ್ ಹುಟ್ಟಿದ್ದು ಇದೇ ದಿನ.

1926: ದ್ರವ ಇಂಧನ ಶಕ್ತಿಯ ಜಗತ್ತಿನ ಪ್ರಪ್ರಥಮ ರಾಕೆಟನ್ನು ರಾಬರ್ಟ್ ಎಚ್ ಗೊಡ್ಡಾರ್ಡ್ ಅಮೆರಿಕದ ಮೆಸಾಚ್ಯುಸೆಟ್ಸಿನಲ್ಲಿ ಹಾರಿಸಿದ. ರಾಕೆಟಿಗೆ ಪೆಟ್ರೋಲ್ ಹಾಗೂ ದ್ರವ ಆಮ್ಲಜನಕ ಬಳಸಲಾಯಿತು.

1918: ಕಲಾವಿದ ವಿ. ನಾರಾಯಣಸ್ವಾಮಿ ಜನನ.

1910: ಇಫ್ತಿಕರ್ ಅಲಿ ಖಾನ್ (1910-1952) ಹುಟ್ಟಿದ ದಿನ. ಪಟೌಡಿಯ ನವಾಬರಾದ ಇವರು ಭಾರತದ ಟೆಸ್ಟ್ ಕ್ಯಾಪ್ಟನ್ ಆಗಿದ್ದರು. ಮನ್ಸೂರ್ ಅಲಿಖಾನ್ ಪಟೌಡಿ ಇವರ ಪುತ್ರ.

1836: ಬ್ರಿಟಿಷ್ - ಅಮೆರಿಕನ್ ಸಂಶೋಧಕ ಆ್ಯಂಡ್ರ್ಯೂ ಸ್ಮಿತ್ ಹಲ್ಲಿಡೀ (1836-1900) ಜನ್ಮದಿನ. ಕೇಬಲ್ ರೈಲ್ವೆ ಸಂಶೋಧಕ ಈತ.

1527: ಮೊಘಲ್ ಚಕ್ರವರ್ತಿ ಬಾಬರ್ ಆಗ್ರಾ ಸಮೀಪದ ಖಾನ್ವಾದಲ್ಲಿ ಮೇವಾಡದ ರಾಣಾ ಸಂಘ ನೇತೃತ್ವದ ರಜಪೂತ ಪಡೆಗಳನ್ನು ಸೋಲಿಸಿದನು. ಪಾಣಿಪತ್ ಯುದ್ಧಕ್ಕಿಂತಲೂ ಭೀಕರವಾಗಿ ನಡೆದ ಈ ಕದನದಲ್ಲಿ ಉಭಯ ಕಡೆಗಳಲ್ಲೂ ಸಾಕಷ್ಟು ಸಾವು ನೋವು ಸಂಭವಿಸಿತು. ಈ ಸಮರವು ಬಾಬರನನ್ನು ಹಿಂದುಸ್ಥಾನದ ಚಕ್ರವರ್ತಿಯನ್ನಾಗಿ ಮಾಡಿತು.

No comments:

Post a Comment