Wednesday, March 21, 2018

ಇಂದಿನ ಇತಿಹಾಸ History Today ಮಾರ್ಚ್ 20

ಇಂದಿನ ಇತಿಹಾಸ History Today  ಮಾರ್ಚ್ 20
2018: ನವದೆಹಲಿ: ೨೦೧೪ರಲ್ಲಿ ಸಮರಗ್ರಸ್ತ ಇರಾಕಿನ ಮೊಸುಲ್ ನಗರದಲ್ಲಿ ಕಣ್ಮರೆಯಾಗಿದ್ದ (ಐಸಿಸ್ ಉಗ್ರಗಾಮಿ ಸಂಘಟನೆಯವರು ಒತ್ತೆ ಸೆರೆ ಇಟ್ಟುಕೊಂಡಿದ್ದ) ಭಾರತದ ಎಲ್ಲ ೩೯ ಮಂದಿ ನಾಗರಿಕರೂ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜ್ಯಸಭೆಗೆ ತಿಳಿಸಿದರು. ಹಿಂದಿಯಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ಸ್ವರಾಜ್ ಅವರು ಭಾರತ ಮತ್ತು ಇರಾಕಿನ ಅಧಿಕಾರಿಗಳನ್ನು ಒಳಗೊಂಡ ತಂಡವೊಂದಕ್ಕೆ ಬಾದುಶ್‌ನ ಸ್ಮಶಾನ ಒಂದರಲ್ಲಿ ಸಾಮೂಹಿಕವಾಗಿ ದಹಿಸಲ್ಪಟ್ಟ ಶವಗಳು ಲಭಿಸಿದ್ದು, ಡಿಎನ್ ಎ ಪರೀಕ್ಷೆಗಳು ಅವು ಕಣ್ಮರೆಯಾಗಿದ್ದ ಭಾರತೀಯರ ಶವಗಳು ಎಂಬುದನ್ನು ದೃಢ ಪಡಿಸಿವೆ ಎಂದು ಹೇಳಿದರು. ಪಂಜಾಬ್, ಹಿಮಾಚಲ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ೪೦ ಭಾರತೀಯರು ೨೦೧೪ರ ಜೂನ್ ತಿಂಗಳಲ್ಲಿ ಮೊಸುಲ್ ನಗರವನ್ನು ಉಗ್ರಗಾಮಿ ಸಂಘಟನೆ ಐಸಿಸ್ (ಇಸ್ಲಾಮಿಕ್ ಸ್ಟೇಟ್) ವಶಕ್ಕೆ ತೆಗೆದುಕೊಂಡ ಬಳಿಕ ಕಣ್ಮರೆಯಾಗಿದ್ದರು. ೨೦೧೫ರಲ್ಲಿ ಅವರ ಒಬ್ಬನಾದ ಹರ್ಜಿತ್ ಮಾಶಿಹ್ ಐಸಿಸ್ ಕಪಿಮುಷ್ಠ್ಟಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಎಲ್ಲ ಭಾರತೀಯರನ್ನೂ ಹತ್ಯೆಗೈಯಲಾಗಿದೆ ಎಂದು ತಿಳಿಸಿದ್ದ. ಆದರೆ ವಿದೇಶಾಂಗ ವ್ಯವಹಾರಗಳ ಇಲಾಖೆ ಆಗ ಇದನ್ನು ಒಪ್ಪಲು ಸಿದ್ಧವಿರಲಿಲ್ಲ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸ್ವರಾಜ್ ಅವರು ’ಸ್ಪಷ್ಟ ದಾಖಲೆಗಳು ಲಭಿಸದ ವಿನಃ ಕಣ್ಮರೆಯಾಗಿರುವ ವ್ಯಕ್ತಿಗಳನ್ನು ಸಾವನ್ನಪಿದ್ದಾರೆ  ಎಂದು ಘೋಷಿಸಲಾರೆ ಎಂದು ಹೇಳಿದ್ದರು.  ಇರಾಕಿನಲ್ಲಿ ಕಣ್ಮರೆಯಾಗಿದ್ದ ಭಾರತೀಯರಿಗಾಗಿ ಶೋಧ ಕಾರ್‍ಯಾಚರಣೆಯನ್ನು ಕೈಬಿಡದೆ ಮುಂದುವರೆಸಲಾಗಿದ್ದು, ಈ ತಂಡದಲ್ಲಿ ಒಂದು ರಾಜ್ಯದ ಒಬ್ಬ ಮುಖ್ಯಸ್ಥ ಮತ್ತು ಇನ್ನೊಂದು ರಾಜ್ಯದ ವಿದೇಶಾಂಗ ಸಚಿವರೂ ಇದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಸುಷ್ಮಾ ಸ್ವರಾಜ್ ಕಳೆದ ವರ್ಷ ಸಂಸತ್ತಿಗೆ ತಿಳಿಸಿದ್ದರು. ‘ರಾಜತಾಂತ್ರಿಕ ರಹಸ್ಯದ ಕಾರಣಕ್ಕಾಗಿ ಮೂಲಗಳ ಗುರುತನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಸಚಿವೆ ಆಗ ಹೇಳಿದ್ದರು. ಮಸಿಹ್ ಸುಳ್ಳು ಹೇಳಿದ್ದ ಎಂಬುದಾಗಿ ಈದಿನ ಪುನರುಚ್ಚರಿಸಿದ ಸ್ವರಾಜ್, ನಾನು ಆತನ (ಮಸಿಹ್) ಜೊತೆ ಪಂಜಾಬಿಯಲ್ಲಿ ಮಾತನಾಡಿದ್ದೇನೆ. ಆತ ಪದೇಪದೇ ನನ್ನನ್ನು ಹಿಂದಕ್ಕೆ ಕರೆಸಿ ಎಂದು ನನ್ನ ಬಳಿ ಹೇಳಿದ. ಆತ ಇತರ ಬಂಧಿತರ ವಿವರ ನೀಡಲು ಬಯಸಲಿಲ್ಲ ಎಂದು ಸ್ವರಾಜ್ ನುಡಿದರು. ತಾವು ಮಸಿಹ್ ನ ಉದ್ಯೋಗದಾತನನ್ನೂ ಸಂಪರ್ಕಸಿದ್ದುದಾಗಿ ಹೇಳಿದ ಸಚಿವೆ, ಮಸಿಹ್ ಕೆಲವು ಬಾಂಗ್ಲಾದೇಶೀಯರ ಜೊತೆಗೆ  ಇರಾಕಿನಿಂದ ತಪ್ಪಿಸಿಕೊಂಡಿದ್ದು, ಆತನ ಹೆಸರು ಅಲಿ ಎಂಬುದಾಗಿ ತಿಳಿಯಿತು. ಒಬ್ಬ ಕ್ಯಾಟರರ್ ಮಸಿಹ್ ಗೆ ಪರಾರಿಯಾಗಲು ನೆರವಾಗಿದ್ದ ಎಂದು ಸುಷ್ಮಾ ಹೇಳಿದರು.   ರಾಜ್ಯ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಸೇರಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂವರು ಅಧಿಕಾರಿಗಳ ಒಂದು ತಂಡ ಇರಾಕಿನ ಬಾದುಶ್‌ನಲ್ಲಿ ಭಾರತೀಯರಿಗಾಗಿ ಶೋಧ ಮುಂದುವರೆಸಿತ್ತು. ಈ ಅಧಿಕಾರಿಗಳು ಇರಾಕ್ ಅಧಿಕಾರಿಗಳ ನೆರವಿನೊಂದಿಗೆ ರಾಡಾರ್ ಗಳನ್ನು ಬಳಸಿ ಬಾದುಶ್ ನಲ್ಲಿ ಸುಟ್ಟು ಹಾಕಲಾಗಿದ್ದ ಶವಗಳ ಅವಶೇಷಗಳನ್ನು ಪತ್ತೆ ಹಚ್ಚಿ ಹೊರತೆಗೆದು ಬಾಗ್ದಾದಿಗೆ ಕಳುಹಿಸಿದರು. ನಿರ್ದಿಷ್ಟ ಸ್ಥಳದಲ್ಲಿ ಒಟ್ಟು ೩೯ ಶವಗಳು ಪತ್ತೆಯಾಗಿದ್ದವು. ’ನಾವು ಭಾರತದಿಂದ ಡಿಎನ್ ಎ ಮಾಧರಿಗಳನ್ನು ಇರಾಕಿಗೆ ಕಳುಹಿಸಿಕೊಟ್ಟೆವು. ಬಾಗ್ದಾದಿನಲ್ಲಿ ನಡೆಸಿದ ಪರೀಕ್ಷೆಗಳಿಂದ ಈ ಮಾದರಿಗಳು ೩೮ ಪ್ರಕರಣಗಳಲ್ಲಿ ಹೊಂದಿಕೆಯಾದವು ಎಂದು ಸುಷ್ಮಾ ಸ್ವರಾಜ್ ವಿವರಿಸಿದರು. ಕಣ್ಮರೆಯಾಗಿದ್ದ ಭಾರತೀಯರ ಪತ್ತೆ ನಿಟ್ಟಿನಲ್ಲಿ ಸಹಕರಿಸಿದ್ದಕ್ಕಾಗಿ ಇರಾಕಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಸ್ವರಾಜ್, ಮೃತರ ಅವಶೇಷಗಳನ್ನು ತರುವ ಸಲುವಾಗಿ ಸಿಂಗ್ ಅವರು ಪುನಃ ಶೀಘ್ರದಲ್ಲೇ ವಿಶೇಷ ವಿಮಾನದಲ್ಲಿ ಇರಾಕಿಗೆ ತೆರಳಲಿದ್ದಾರೆ ಎಂದೂ ಸುಷ್ಮಾ ನುಡಿದರು.  ಕಣ್ಮರೆಯಾದ ಭಾರತೀಯರ ಪತ್ತೆ ಕಾರ್‍ಯದಲ್ಲಿ ವಿಶೇಷ ಶ್ರಮಹಿಸಿದ್ದಕ್ಕಾಗಿ ಸಚಿವ ಸಿಂಗ್ ಅವರನ್ನು ಸುಷ್ಮಾ ಶ್ಲಾಘಿಸಿದರು.  ‘ಕಣ್ಮರೆಯಾದ ವ್ಯಕ್ತಿಗಳು ಜೀವಂತವಾಗಿ ಸ್ವದೇಶಕ್ಕೆ ಮರಳಿ ಬರಲಾಗಲಿಲ್ಲ ಎಂಬುದು ದುರದೃಷ್ಟಕರವಾದರೂ, ಕನಿಷ್ಠ ಪಕ್ಷ ಮೂರು ವರ್ಷಗಳನ್ನು ಹಳೆಯದಾದ ಪ್ರಕರಣಕ್ಕೆ ತೆರೆ ಬಿದ್ದಿದೆ ಎಂದು ಸಚಿವೆ ಸದನಕ್ಕೆ ತಿಳಿಸಿದರು.

2018: ಚೆನ್ನೈ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಿತಿ ಮೀರಿದ ಆಸ್ತಿ ಪ್ರಕರಣದಲ್ಲಿ ಸೆರೆವಾಸದ ಶಿಕ್ಷೆ ಅನುಭವಿಸುತ್ತಿರುವ ವಿ.ಕೆ. ಶಶಿಕಲಾ ನಟರಾಜನ್ ಅವರ ಪತಿ, ಜಯಲಲಿತಾ ಅವರನ್ನು ರಾಜಕೀಯದಲ್ಲಿ ಗಟ್ಟಿಗೊಳ್ಳುವಂತೆ ಮಾಡಿದ್ದ. ಮಾರುತಪ್ಪ ನಟರಾಜನ್ (೭೫)  ಮಾರ್ಚ್  19ರ ಸೋಮವಾರ ತಡರಾತ್ರಿ ಚೆನ್ನೈಯ ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ನಿಧನರಾದರು.  ಪತಿಯ ನಿಧನದ ಹಿನ್ನೆಲೆಯಲ್ಲಿ ಶಶಿಕಲಾ ಅವರಿಗೆ ೧೫ ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.
ಹೃದಯ ಸಂಬಂಧಿ ಸೋಂಕಿಗೆ ಒಳಗಾಗಿದ್ದ ನಟರಾಜನ್ ಅವರನ್ನು ಕಳೆದ ವಾರ ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ವೈದ್ಯಕೀಯ ಪ್ರಮಾಣ ಪತ್ರದ ಪ್ರಕಾರ ಮಾರುತಪ್ಪ ನಟರಾಜನ್ ಅವರು ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು ಎಂದು ಹೇಳಲಾಯಿತು. ನಟರಾಜನ್ ಅವರನ್ನು ಉಳಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸಿದೆವು. ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎಂದು ಗ್ಲೆನೇಗಲ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಾಕಾರ ಷಣ್ಮುಖ ಪ್ರಿಯನ್ ಹೇಳಿದರು.  ನಟರಾಜನ್ ಅವರ ಹುಟ್ಟುರಾದ ತಂಜವೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿದವು. ಪೆರೋಲ್ ಪಡೆದ ಶಶಿಕಲಾ ನಟರಾಜನ್ ಅವರು ತಂಜಾವೂರಿಗೆ ತೆರಳಿ ಪತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ಹೇಳಿದವು.  ಕಳೆದ ವರ್ಷ ನಟರಾಜನ್ ಅವರು ಕಿಡ್ನಿ ಹಾಗೂ ಯಕೃತ್ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಜಯಲಲಿತಾರನ್ನು ರಾಜಕೀಯದಲ್ಲಿ ಉಳಿಸಿದ್ದ ವ್ಯಕ್ತಿ: ನಟರಾಜನ್ ಅವರು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರನ್ನು ರಾಜಕೀಯದಲ್ಲಿ ಉಳಿಸಿದ್ದ ವ್ಯಕಿ ಎಂದರೆ ಅತಿಶಯವಲ್ಲ . ೧೯೮೯ರ ಮಾರ್ಚ್ ತಿಂಗಳಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಜಯಲಲಿತಾ ಅವರು ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ, ರಾಜಕೀಯಕ್ಕೆ ತಿಲಾಂಜಲಿ ನೀಡುವುದಾಗಿಯೂ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದರು. ಆದರೆ ಈ ಪತ್ರ ವಿಧಾನಸಭಾಧ್ಯಕ್ಷರಿಗೆ ತಲುಪದಂತೆ ಮಾಡುವಲ್ಲಿ ನಟರಾಜನ್ ಪ್ರಮುಖ ಪಾತ್ರ ವಹಿಸಿದ್ದರು.  ಆಗ ರಾಜಕೀಯ ವಲಯಗಳಲ್ಲಿ ’ಎಂಎನ್ ಎಂದೇ ಗುರುತಿಸಲ್ಪಟ್ಟಿದ್ದ ನಟರಾಜನ್ ಅವರಿಗೆ ಪೋಯೆಸ್ ಗಾರ್ಡನ್ನಿನ ತಮ್ಮ ಬೆಂಬಲಿಗರ ಮೂಲಕ  ಜಯಲಲಿತಾ ಅವರು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದ ವಿಚಾರ ಗೊತ್ತಾಗಿತ್ತು. ಆ ಪತ್ರವನ್ನು ತಾವೇ ಸಂಗ್ರಹಿಸಿದ್ದ ನಟರಾಜನ್ ವಿಧಾನಸಭಾಧ್ಯಕ್ಷರಿಗೆ ತಲುಪಿಸುವ ಬದಲು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಥೇಣಿ ಈಶ್ವರನ್ ಮತ್ತು ಇತರರ ದೂರನ್ನು ಅನುಸರಿಸಿ ಡಿಎಂಕೆ ಸರ್ಕಾರ ನಟರಾಜನ್ ಮನೆಯಲ್ಲಿ ಶೋಧ ನಡೆಸಿ ಈ ಪತ್ರವನ್ನು ವಶಕ್ಕೆ ತೆಗೆದುಕೊಂಡಿತ್ತು. ಬಳಿಕ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು. ಆ ಬಳಿಕ ನಡೆದ ವಿದ್ಯಮಾನಗಳು ಜಯಲಲಿತಾ ಅವರನ್ನು ರಾಜಕೀಯದಿಂದ ನಿರ್ಗಮಿಸುವಂತೆ ಮಾಡುವ ಬದಲು ತಮಿಳುನಾಡು ರಾಜಕೀಯದಲ್ಲಿ ಅವರ ಸ್ಥಾನವನ್ನು ಇನ್ನಷ್ಟು ಭದ್ರ ಪಡಿಸಿದವು.  ತಂಜಾವೂರಿನ ವಿಲಾರ್ ನಿವಾಸಿಯಾದ ನಟರಾಜನ್ ಹಿಂದಿ ವಿರೋಧಿ ಚಳವಳಿ ಕಾಲದಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದ್ದರು. ತಂಜಾವೂರಿನ ಸೆರ್‍ಫೋಜಿ ಕಾಲೇಜು ಮತ್ತು ಬಳಿಕ ಅಣ್ಣಾಮಲೈ ವಿಶ್ವ ವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಅವರು ಸಾಮಾಜಿಕ ಕ್ಷೇತ್ರಕ್ಕೆ ಧುಮುಕಿದ್ದರು. ತಮ್ಮ ಜೀವನಚರಿತ್ರೆಯಲ್ಲಿ ಎಲ್ಲವನ್ನೂ ದಾಖಲಿಸಿದ್ದ ನಟರಾಜನ್ ಈಗ ನಿಂತು ಹೋಗಿರುವ ’ತಮಿಳರಸಿ ನಿಯತಕಾಲಿಕದಲ್ಲಿ ಅದನ್ನು ಸರಣಿ ಲೇಖನಗಳ ಮೂಲಕ ಪ್ರಕಟಿಸಿದ್ದರು. ’ಪುತಿಯ ಪರವೈ ನಿಯತಕಾಲಿಕದ ಸಂಪಾದಕರಾಗಿಯೂ ನಟರಾಜನ್ ಕೆಲಸ ಮಾಡಿದ್ದರು.  ಡಿಎಂಕೆ ಸ್ಥಾಪಕ ಸಿ.ಎನ್. ಅಣ್ಣಾದುರೈ ಮತ್ತು ಎಂ. ಕರುಣಾನಿಧಿ ಅವರ ನಡುವೆ ಭಿನ್ನಮತ ಉಂಟಾದಾಗ, ತಂಜಾವೂರಿನ ಬಹಿರಂಗ ಸಭೆಯೊಂದರಲ್ಲಿ ನಟರಾಜನ್ ಈ ಧುರೀಣರಿಬ್ಬರನ್ನೂ ಒಂದುಗೂಡಿಸಿದ್ದರು. ಶಶಿಕಲಾ ಅವರನ್ನು ನಟರಾಜನ್ ಮದುವೆಯಾದಾಗ ಮುಖ್ಯಮಂತ್ರಿ ಕರುಣಾನಿಧಿ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು.  ಡಿಎಂಕೆ ನಾಯಕ ಎಲ್. ಗಣೇಶನ್ ಅವರ ಜೊತೆಗೆ ದೀರ್ಘ ಕಾಲ ದುಡಿದ ನಟರಾಜನ್ ೧೯೬೭ರ ಚುನಾವಣೆಯಲ್ಲಿ ಗಣೇಶನ್ ಪರ ಕೆಲಸ ಮಾಡಿದ್ದರು. ೧೯೭೧ರ ಚುನಾವಣೆಯಲ್ಲಿ ನಟರಾಜನ್ ತಮಗೇ ಟಿಕೆಟ್ ನೀಡುವಂತೆ ಕೋರಿದಾಗ, ಗಣೇಶನ್ ಅವರನ್ನು ರಾಜಕೀಯಕ್ಕೆ ಬರದಂತೆ ಮನವೊಲಿಸಿ ತಮಿಳು ನಾಡು ಸರ್ಕಾರಕ್ಕೆ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗುವಂತೆ ಪ್ರೇರೇಪಿಸಿ ಆ ಕೆಲಸ ದೊರಕಿಸಿಕೊಟ್ಟರು. ಕಡಲೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಜಯಲಲಿತಾ ಅವರ ಜೊತೆ ನಿಕಟವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು.  ಎಐಎಡಿಎಂಕೆ ಸ್ಥಾಪಕ ಮತ್ತು ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಸಲಹೆ ಮೇರೆಗೆ ಐಎಎಸ್ ಅಧಿಕಾರಿ ಚಂದ್ರಲೇಖಾ ಅವರು ಕಡಲೂರಿನಲ್ಲಿ ಜಯಲಲಿತಾ ಅವರ ಸಾರ್ವಜನಿಕ ಸಭೆಗೆ ವ್ಯವಸ್ಥೆ ಮಾಡಿದಾಗ, ವಿಡಿಯೋ ರೆಕಾರ್ಡಿಂಗ್ ಅಂಗಡಿ ಹೊಂದಿದ್ದ ಶಶಿಕಲಾ ಅವರಿಗೆ ಸಭೆಯ ವಿಡಿಯೋ ಟೇಪ್ ಮಾಡುವ ಹೊಣೆಗಾರಿಕೆ ನೀಡಲಾಗಿತ್ತು. ಈ ಸಮಯದಲ್ಲಿ ಶಶಿಕಲಾ ಮತ್ತು ನಟರಾಜನ್ ಅವರಿಗೆ ಜಯಲಲಿತಾ ಅವರ ಪರಿಚಯವಾಗಿ ಅದು ಗಾಢ ಮೈತ್ರಿಯಾಗಿ ಪರಿವರ್ತನೆಗೊಂಡಿತು. ಹೀಗಾಗಿ ಜಯಲಲಿತಾ ಜೊತೆ ಇವರಿಬ್ಬರೂ ಪ್ರಬಲವಾಗಿ ಬೆಳೆದರು.  ಜಯಲಲಿತಾ ಜೊತೆ ವಿವಾದಗಳಾಗಿ ಪೋಯೆಸ್ ಗಾರ್ಡನ್ನಿನಿಂದ ಹೊರಹಾಕಲ್ಪಟ್ಟರೂ ಬಳಿಕ ಪುನಃ ಜಯಲಲಿತಾ ಅವರಿಗೆ ನಿಕಟವಾಗಿದ್ದ ನಟರಾಜನ್ ಮತ್ತು ಶಶಿಕಲಾ ಜಯಲಲಲಿತಾ ಅಂತ್ಯದವರೆಗೂ ಅವರಿಗೆ ನಿಕಟವಾಗಿಯೇ ಉಳಿದಿದ್ದರು. ವಿವಿಧ ಪಕ್ಷಗಳ ನಾಯಕರ ಜೊತೆ ನಿಕಟ ಬಾಂಧವ್ಯವನ್ನು ನಟರಾಜನ್ ಇಟ್ಟುಕೊಂಡಿದ್ದರು.

2018:  ನವದೆಹಲಿ: ಇರಾಕಿನ ಮೊಸುಲ್ ನಗರದಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರಗಾಮಿ ಸಂಘಟನೆ ತನ್ನ ವಶದಲ್ಲಿ ಇಟ್ಟುಕೊಂಡಿದ್ದ ೩೯ ಮಂದಿ ಭಾರತೀಯರ ಸಾವಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ವಿಷಯವನ್ನೂ ಮುಚ್ಚಿಟ್ಟಿಲ್ಲ. ವಿಷಯ ಖಚಿತವಾಗುವವರೆಗೆ ಅಧಿಕೃತ ಹೇಳಿಕೆ ನೀಡಲು ಕಾಯಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್  ರಾಜ್ಯಸಭೆಯಲ್ಲಿ ಹೇಳಿದರು.  ಐಸಿಸ್ ನಿಂದ ಹತರಾದ ಭಾರತೀಯರ ಕೆಲವು ಕುಟುಂಬ ಸದಸ್ಯರು ತಮಗೆ ಈ ಸುದ್ದಿ ಈದಿನ ಟಿವಿ ಮೂಲಕವಷ್ಟೇ ಗೊತ್ತಾಗಿದ್ದು, ಸರ್ಕಾರ ಎಂದೂ ಮಾಹಿತಿ ನೀಡಿರಲಿಲ್ಲ ಎಂಬುದಾಗಿ ಹೇಳಿದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಈ ಸ್ಪಷ್ಟನೆ ನೀಡಿದರು.  ೨೦೧೪ರಲ್ಲಿ ಮೊಸುಲ್ ನಗರವನ್ನು ವಶಪಡಿಸಿಕೊಂಡ ಐಸಿಸ್ ಉಗ್ರಗಾಮಿಗಳು  ಸೆರೆ ಹಿಡಿದಿದ್ದ ಎಲ್ಲ ೩೯ ಮಂದಿ ಭಾರತೀಯರೂ ನಿಧನರಾಗಿದ್ದಾರೆ. ಮೃತರ ಅವಶೇಷಗಳ ಡಿಎನ್ ಎ ಪರೀಕ್ಷೆಯಿಂದ ಅವರ ಗುರುತು ದೃಢ ಪಟ್ಟಿದೆ ಎಂದು ಸುಷ್ಮಾ ಸ್ವರಾಜ್ ರಾಜ್ಯಸಭೆಗೆ ತಿಳಿಸಿದ್ದರು. ೩೮ ಶವಗಳ ಡಿಎನ್ ಎ ಹೊಂದಾಣಿಕೆಯಾಗಿದ್ದು, ೩೯ನೇ ಶವದ ಡಿಎನ್ ಎ ಕೂಡಾ ಶೇಕಡಾ ೭೦ರಷ್ಟು ಹೊಂದಾಣಿಕೆಯಾಗಿದೆ ಎಂದು ಸಚಿವರು ಹೇಳಿದ್ದರು.  ಕುಟುಂಬ ಸದಸ್ಯರಿಗೆ ಮಾಹಿತಿ ನೀಡದೇ ಇದ್ದುದಕ್ಕಾಗಿ ವಿರೋಧ ಪಕ್ಷಗಳ ತೀವ್ರ ದಾಳಿಗೆ ಗುರಿಯಾದ ಸುಷ್ಮಾ ಸ್ವರಾಜ್ ಅವರು ’ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಕಾರಣ ಸಂಸತ್ತಿಗೆ ವಿಷಯವನ್ನು ಮೊದಲು ತಿಳಿಸಬೇಕು ಎಂಬುದಾಗಿ ಬಯಸಿದ್ದೆ. ಸಾವಿನ ಬಗ್ಗೆ ಖಚಿತ ಸಾಕ್ಷ್ಯಧಾರಗಳಿಗಾಗಿ ಸರ್ಕಾರ ಕಾದಿತ್ತು. ಶವಗಳ ಗುರುತು ಪರೀಕ್ಷೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಪಟ್ಟಿ ಮಾಡಿತ್ತು ಎಂದು ಅವರು ನುಡಿದರು.  ಅಪಹೃತ ವ್ಯಕ್ತಿಗಳು ಜೀವಂತವಾಗಿದ್ದಾರೆ ಎಂದು ಸರ್ಕಾರ ಇದಕ್ಕೆ ಮುನ್ನ ಪ್ರತಿಪಾದಿಸಿತ್ತು.  ಅಪಹೃತ ಭಾರತೀಯರ ಕುಟುಂಬ ಸದಸ್ಯರನ್ನು ಹಲವಾರು ಭೇಟಿ ಮಾಡಿದ್ದ ಸುಷ್ಮಾ ಅವರು ಅಪಹೃತರ ಬಿಡುಗಡೆಗಾಗಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದರು.  ‘ಕುಟುಂಬ ಸದಸ್ಯರಲ್ಲಿ ತಪ್ಪು ಆಶಯ ಬಿತ್ತಿದ್ದೇಕೆ?’ ಎಂದು ಸರ್ಕಾರವನ್ನು ವಿರೋಧಿ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತು.  ‘ಇರಾಕಿನಲ್ಲಿ ೩೯ ಭಾರತೀಯರು ಸಾವನ್ನಪ್ಪಿದ್ದಾರೆ ಎಂಬುದು ದೃಢ ಪಟ್ಟಿರುವುದು ಬೇಸರದ ಸುದ್ದಿ. ಅವರಿಗಾಗಿ ಕುಟುಂಬದ ಸದಸ್ಯರ ಜೊತೆ ನಾವೂ ಪ್ರಾರ್ಥಿಸುತ್ತೇವೆ. ಆದರೆ ಸರ್ಕಾರ ಕಳೆದ ಮೂರೂವರೆ ವರ್ಷಗಳಿಂದ ಅವರು ಜೀವಂತ ಇದ್ದಾರೆ ಎಂಬ ತಪ್ಪು ಆಶಯವನ್ನು ಮೂಡಿಸಿದ್ದು ಏಕೆ? ಇದು ಭ್ರಮ ನಿರಸನ ಹುಟ್ಟಿಸುವಂತಹ ನಡವಳಿಕೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದರು.  ಈ ಪ್ರಶ್ನೆಗಳಿಗೆ ಉತ್ತರ ನೀಡುವುದು ಅಕಾಲಿಕವಾಗುತ್ತದೆ. ನಾವು ರಾಜ್ಯ ಸರ್ಕಾರಗಳ ಜೊತೆ ಕೂಡಾ ಮಾತನಾಡಬೇಕಾಗಿದೆ. ಮೊದಲು ಶವಗಳನ್ನು ಒಪ್ಪಿಸೋಣ ಎಂದು ಸದನದಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದ ಸದಸ್ಯರಿಗೆ ಸುಷ್ಮಾ ಉತ್ತರಿಸಿದರು.  ‘ಹರ್ಜಿತ್ ಮಾಸಿಹ್ ಒಬ್ಬ ವ್ಯಕ್ತಿ ಮಾತ್ರ. ಆತ ಇತರ ಎಲ್ಲ ೩೯ ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಆದರೆ ನಾವು ಸರ್ಕಾರ. ನಾವು ಅಷ್ಟೊಂದು ಸುಲಭವಾಗಿ ಇದನ್ನು ಹೇಳಲಾಗುವುದಿಲ್ಲ. ನಾವು ಜವಾಬ್ದಾರಿಯುತರಾಗಿ ಇರಬೇಕಾಗುತ್ತದೆ. ಹರ್ಜಿತ್ ಮಾಸಿಹ್ ಅವರಿಗೆ ಕಿರುಕುಳ ನೀಡಲಾಗಿದೆ ಎಂಬುದು ಆಧಾರ ರಹಿತ. ಅವರನ್ನು ರಕ್ಷಣಾತ್ಮಕ ಭದ್ರತೆಯಲ್ಲಿ ಇಡಲಾಗಿದೆ. ನಾನು ಇದನ್ನು ಹಿಂದೆಯೂ ಸಂಸತ್ತಿನಲ್ಲಿ ಹೇಳಿದ್ದೇನೆ ಎಂದು ಸುಷ್ಮಾ ನುಡಿದರು.  ಕೊಲೆಯಾದ ಬಳಿಕ ಇರಾಕಿನಿಂದ ಎಲ್ಲ ಶವಗಳನ್ನೂ ಹಿಂದಕ್ಕೆ ಪಡೆಯುತ್ತಿರುವ ಮೊದಲ ರಾಷ್ಟ ಬಹುಶಃ ಭಾರತ ಎಂದು ಸಚಿವೆ ಹೇಳಿದರು.  ೩೯ ಮಂದಿಯನ್ನು ಕೊಲ್ಲಲಾಗಿದೆ ಎಂದು ಹೇಳಿದಾಗ ನಾನು ತತ್ ಕ್ಷಣ ಆ ನಿರ್ಧಾರಕ್ಕೆ ಬರಲಾಗುವುದಿಲ್ಲ. ಅವರನ್ನು ಹೇಗೆ ಕೊಲ್ಲಲಾಯಿತು ಎಂದು ತಿಳಿಯಲು ನಾವು ಹುತಾತ್ಮರ ಪ್ರತಿಷ್ಠಾನದ ವರದಿಗಾಗಿ ಕಾಯಬೇಕಾಗಿದೆ ಎಂದು ಸುಷ್ಮಾ ಮಾಧ್ಯಮಗಳ ಜೊತೆ ಮಾತನಾಡುತ್ತಾ ನುಡಿದರು.  ಮೃತರಲ್ಲಿ ೨೭ ಮಂದಿ ಪಂಜಾಬಿನವರು, ೬ ಮಂದಿ ಬಿಹಾರಿನವರು, ೪ ಮಂದಿ ಹಿಮಾಚಲ ಪ್ರದೇಶದವರು ಮತ್ತು ಇಬ್ಬರು ಪಶ್ಚಿಮ ಬಂಗಾಳದವರು. ಒಬ್ಬ ವ್ಯಕ್ತಿ ಎಲ್ಲಿಯವರೆಂದು ಇನ್ನೂ ಗುರುತಿಸಬೇಕಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.  ೩೮ ಜನರ ಶವಗಳನ್ನು ಗುರುತಿಸಲಾಗಿದೆ. ಒಂದು ಶವದ ಗುರುತುಪತ್ತೆ ಕಾರ್ಯ ಪ್ರಗತಿಯಲ್ಲಿದೆ. ನಾವು ಯಾರನ್ನೂ ಅಂಧಕಾರದಲ್ಲಿ ಇಟ್ಟಿಲ್ಲ. ಈ ಶವಗಳು ಸಾಮೂಹಿಕ ಗೋರಿಗಳಲ್ಲಿ ಪತ್ತೆಯಾಗಿವೆ. ಬಾದುಶ ಸಮೀಪದ ದಿಬ್ಬ ಒಂದರಲ್ಲಿ ಈ ಶವಗಳು ಪತ್ತೆಯಾಗಿವೆ ಎಂದು ಕೇಂದ್ರ ಸಚಿವೆ ಹೇಳಿದರು.  ಅಪಹೃತರು ಜೀವಂತವಾಗಿದ್ದಾರೆಯೇ ಅಥವಾ ಮೃತರಾಗಿದ್ದಾರೆಯೇ ಎಂಬ ಬಗ್ಗೆ ನಮಗೆ ಯಾವುದೇ ಸಾಕ್ಷ್ಯಧಾರ ಲಭಿಸಿಲ್ಲ ಎಂಬುದಾಗಿ ನಾವು ಹೇಳುತ್ತಲೇ ಬಂದಿದ್ದೇವೆ. ನಾವು ೨೦೧೪ ಮತ್ತು ೨೦೧೭ರಲ್ಲೂ  ಇದನ್ನೇ ಪ್ರತಿಪಾದಿಸಿದ್ದೇವೆ. ನಾವು ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ. ನಾವು ಯಾರಲ್ಲೂ ತಪ್ಪು ಆಶಯವನ್ನು ಮೂಡಿಸಿಲ್ಲ ಎಂದು ಸ್ವರಾಜ್ ನುಡಿದರು.  ‘ಕೇವಲ ಕಡತ ಕೊನೆಗೊಳಿಸುವುದಕ್ಕಾಗಿ ಯಾರದ್ದೋ ಶವವನ್ನು ನಮ್ಮ ಜನರ ಶವ ಎಂದು ಪ್ರತಿಪಾದಿಸಿ ಹಸ್ತಾಂತರ ಮಾಡುವುದು ತಪ್ಪಾಗುತ್ತಿತ್ತು ಎಂದು ಅವರು ಹೇಳಿದರು.  ಸಂಸತ್ತಿನಲ್ಲಿ ಪ್ರಕಟಿಸುವುದಕ್ಕಿಂತ ಮುಂಚೆ ತಮಗೆ ಸಾವಿನ ಬಗ್ಗೆ ಏಕೆ ತಿಳಿಸಲಿಲ್ಲ ಎಂದು ಮೃತರ ಕೆಲವು ವಾರಸುದಾರರು ಪ್ರಶ್ನಿಸಿದ್ದಾರೆ. ಸದನಕ್ಕೆ ಮೊದಲು ಮಾಹಿತಿ ನೀಡಬೇಕಾದ್ದು ಸಂಸದೀಯ ನಿಯಮ. ಆದ್ದರಿಂದ ಅದು ನನ್ನ ಕರ್ತವ್ಯ ಎಂದು ಸುಷ್ಮಾ ಸ್ವರಾಜ್ ನುಡಿದರು.

2018:  ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ಮೀನುಗಾರಿಕಾ ಸಚಿವಾಲಯ ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈದಿನ ಇಲ್ಲಿ ಭರವಸೆ ನೀಡಿದರು. ತಮ್ಮ ’ಜನಾಶೀರ್ವಾದ ಯಾತ್ರೆಯ ಅಂಗವಾಗಿ ಕರಾವಳಿ ಜಿಲ್ಲೆಗಳಿಗೆ ಬಂದ ಅವರು ಮಂಗಳೂರು ನಗರದ ಸುರತ್ಕಲ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ‘ನಿಕ್ಷೆಗ್ ಮಾತ ಎನ್ನ ನಮಸ್ಕಾರ (ನಿಮಗೆಲ್ಲರಿಗೂ ನನ್ನ ನಮಸ್ಕಾರ) ಎಂದು ತುಳುವಿನಲ್ಲಿ ಭಾಷಣ ಆರಂಭಿಸಿದ ರಾಹುಲ್,  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರಕ್ಕೆ ಬಂದಾಗ ತಾನು ದೇಶದ ಪ್ರಧಾನ ಕಾವಲುಗಾರ ಎಂದು ಮೋದಿ ಹೇಳಿದ್ದರು. ಇದೀಗ ಉದ್ಯಮಿಗಳಾದ ನೀರವ್ ಮೋದಿ, ವಿಜಯ್ ಮಲ್ಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿರುವುದು ನೋಡಿದರೆ ಮೋದಿಯೇ ಅನುವು ಮಾಡಿಕೊಟ್ಟರೋ ಎಂಬ ಅನುಮಾನ ಮೂಡುತ್ತಿದೆ ಎಂದು ರಾಹುಲ್ ಹೇಳಿದರು. ೧೫ ಉದ್ಯಮಿಗಳ ೨.೫ ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಆದರೆ, ರೈತರ ಸಾಲ ಮನ್ನಾ ಮಾಡಿಲ್ಲ. ಈ ಕುರಿತು ಪ್ರಧಾನಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದೆ. ಆದರೂ ಪರಿಣಾಮವಾಗಿಲ್ಲ ಎಂದು ರಾಹುಲ್ ಹೇಳಿದರು.  ತಮ್ಮ ಭಾಷಣದಲ್ಲಿ ನಾರಾಯಣ ಗುರು, ಬಸವಣ್ಣ ಅವರನ್ನು ಪ್ರಸ್ತಾಪಿಸಿದ ರಾಹುಲ್, ಬಸವಣ್ಣ, ನಾರಾಯಣ ಗುರುಗಳ ಮಾತಿನಂತೆ ಬಿಜೆಪಿ ಸರ್ಕಾರ ನಡೆಯುತ್ತಿಲ್ಲ ಎಂದು ದೂರಿದರು.  ಬಸವಣ್ಣ ಅವರ ’ನುಡಿದಂತೆ ನಡೆ ಮಾತನ್ನು ಪುನರುಚ್ಚರಿಸಿದ ರಾಹುಲ್, ಹದಿನೈದು ಲಕ್ಷ ಕೊಡುವುದಾಗಿ ಭರವಸೆ ನೀಡಿ ಹತ್ತು ರೂಪಾಯಿಯನ್ನು ನೀಡಿಲ್ಲ ಎಂದು ಚುಚ್ಚಿದರು. ಬಸವಣ್ಣ, ನಾರಾಯಣಗುರುಗಳ ಮಾತಿನಂತೆ ನಾವು ನಡೆಯುತ್ತೇವೆ. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೀನುಗಾರರ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಚಿವಾಲಯ ರಚಿಸಲಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ  ಭರವಸೆ ನೀಡಿದರು.  ಅಮೆರಿಕದಲ್ಲಿ ಭಾರತದ ಮಾತೆಯರನ್ನು, ಕೃಷಿಕರನ್ನು ಮೋದಿ ಅಪಮಾನ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಅಪಮಾನವಲ್ಲ, ದೇಶದಲ್ಲಿರುವ ತಂದೆ ತಾಯಿಗಳಿಗೆ ಅಪಮಾನ ಎಂದು ರಾಹುಲ್ ನುಡಿದರು.  ಸುಷ್ಮಾ, ಅಡ್ವಾಣಿ, ಅರುಣ್ ಜೇಟ್ಲಿಯವರನ್ನು ಮರೆತು ಎಲ್ಲವನ್ನು ತಾನು ಮಾಡಿದೆ ಎನ್ನುತ್ತಾರೆ ಮೋದಿ. ಜಿಎಸ್ ಟಿ ಅನುಷ್ಠಾನದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಈಡಾದರು ಎಂದು ಕಾಂಗ್ರೆಸ್ ನಾಯಕ ಆಪಾದಿಸಿದರು.   ಅಮಿತ್ ಷಾ ಮಗನ ಆಸ್ತಿ, ರಫೇಲ್ ಹಗರಣದ ಬಗ್ಗೆ ಮೋದಿ ಮಾತನಾಡುವುದಿಲ್ಲ. ಫ್ರಾನ್ಸಿಗೆ ನೀಡಿದ ಹಣದ ಮಾಹಿತಿಯನ್ನು ಸರ್ಕಾರ ನೀಡುತ್ತಿಲ್ಲ ಎಂದು ಹೇಳಿದರು.  ಭಾರತದ ಜನರ ಹಣವನ್ನು ನೀರವ್ ಮೋದಿ ಲೂಟಿ ಮಾಡಿದ್ದಾರೆ. ಜಯ್ ಶಾ, ನೀರವ್ ಮೋದಿ ಲೂಟಿ ಮಾಡುತ್ತಿದ್ದರೆ ಚೌಕಿದಾರ ಮೌನ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.  ಮೀನುಗಾರರ ಮನೆಯಲ್ಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಡುಬಿದ್ರಿಯ ತೆಂಕ ಎರ್ಮಾಳಿನಲ್ಲಿ  ಮೀನುಗಾರರೊಬ್ಬರ ಮನೆಯಲ್ಲಿ ತಿಂಡಿ ಸೇವಿಸಿ ಮಾತುಕತೆ ನಡೆಸಿದರು. ಮೀನಿನ ಸಾಂಬಾರಿನೊಂದಿಗೆ ’ತೆಳ್ಳವು (ನೀರುದೋಸೆ) ಸವಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪ್ರಮೋದ್ ಮಧ್ವರಾಜ್, ಶಾಸಕ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ನಾಯಕರು ಹಾಜರಿದ್ದರು.  ತೆಂಕ ಎರ್ಮಾಳಿನಿಂದ ಪಡುಬಿದ್ರಿಯವರಗೆ  ರೋಡ್ ಶೋ ನಡೆಸಿದ ರಾಹುಲ್, ಪಡುಬಿದ್ರಿಯಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಮಂಗಳೂರಿನ ಹೆಜಮಾಡಿಯಲ್ಲಿ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿದರು.

2018: ನವದೆಹಲಿ: ರಾಜ್ಯಸಭೆಯ ಕಾರ್ಯಕಲಾಪಗಳಿಗೆ ನಿರಂತರ ಅಡ್ಡಿ ಉಂಟು ಮಾಡುತ್ತಿದ್ದ ಸದಸ್ಯರ ವರ್ತನೆಯಿಂದ ಸಿಟ್ಟಿಗೆದ್ದ ರಾಜ್ಯಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಬುಧವಾರ ಮೇಲ್ಮನೆಯ ಸದಸ್ಯರಿಗೆ ವ್ಯವಸ್ಥೆ ಮಾಡಿದ್ದ ತಮ್ಮ ಮಾ. 21 ಬುಧವಾರದ ಇರುಳೂಟವನ್ನು (ರಾತ್ರಿಯ ಭೋಜನ ಕೂಟ) ರದ್ದು ಪಡಿಸಿದರು.  ಮೂಲಗಳ ಪ್ರಕಾರ ರಾತ್ರಿಯ ಭೋಜನಕೂಟಕ್ಕೆ ಎಲ್ಲ ಸಿದ್ಧತೆಗಳೂ ಕಳೆದವಾರವೇ ಪೂರ್ಣಗೊಂಡಿದ್ದವು. ನಾಯ್ಡು ಅವರು ತಾವು ಆಹ್ವಾನಿಸಿದ್ದ ರಾಷ್ಟ್ರಪತಿ, ಪ್ರಧಾನಿ, ಸದನದ ನಾಯಕ, ವಿರೋಧ ಪಕ್ಷದ ನಾಯಕ ಮತ್ತು ವಿವಿಧ ಪಕ್ಷಗಳ ಸದನ ನಾಯಕರ ಜೊತೆಗೂ ಮಾತನಾಡಿದ್ದರು. ಆಹ್ವಾನ ಪತ್ರಿಕೆಗಳೂ ಸಿದ್ಧವಾಗಿದ್ದವು. ಮಂಗಳವಾರದ ಹೊತ್ತಿಗೆ ಸದನದ ಕಲಾಪಗಳು ಸುಗಮಗೊಳ್ಳುವುವು ಎಂದು ನಾಯ್ಡು ಅವರು ನಿರೀಕ್ಷಿಸಿದ್ದರು.  ಈದಿನ ತಮ್ಮ ಕೊಠಡಿಯಲ್ಲಿ ವಿವಿಧ ಪಕ್ಷಗಳ ಸದನದ ನಾಯಕರ ಜೊತೆಗೆ ಸಭೆ ನಡೆಸಿದ ರಾಜ್ಯಸಭಾಪತಿ, ಸದನದಲ್ಲಿ ಕಲಾಪಕ್ಕೆ ಆಗುತ್ತಿರುವ ನಿರಂತರ ಅಡ್ಡಿ ಬಗ್ಗೆ ತಮ್ಮ ಕೋಪವನ್ನು ವ್ಯಕ್ತ ಪಡಿಸಿದರು ಮತ್ತು ಭೋಜನ ಕೂಟ ರದ್ದು ಪಡಿಸಲು ತಾವು ಕೈಗೊಂಡ ತೀರ್ಮಾನವನ್ನು ಅವರಿಗೆ ತಿಳಿಸಿದರು. ಎರಡು ವಾರಕ್ಕೂ ಹೆಚ್ಚು ಕಾಲದಿಂದ ಸದನ ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವಾಗ ಭೋಜನಕೂಟ ನಡೆಸುವುದು ಸೂಕ್ತವಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ನಾಯ್ಡು ಹೇಳಿದರು ಎಂದು ಮೂಲಗಳು ತಿಳಿಸಿದವು.  ನಾಯ್ಡು ಅವರು ಆಂಧ್ರಪ್ರದೇಶದ ವಿಶೇಷ ಅಡುಗೆಯವರನ್ನು ಕರೆಸಿ ಆಂಧ್ರ ಪ್ರದೇಶದ ವಿಶೇಷ ಅಡುಗೆಯನ್ನು ಸಂಸದರಿಗೆ ಉಣಬಡಿಸಲು ಯೋಜಿಸಿದ್ದರು.  ಕಳೆದ ವಾರ ಸಂಸತ್ತಿನ ಸದಸ್ಯರಿಗಾಗಿ ಕಾನ್‌ಸ್ಟಿಟ್ಯೂಷನ್ ಕ್ಲಬ್ಬಿನಲ್ಲಿ ವ್ಯವಸ್ಥೆ ಮಾಡಲಾಗಿದ್ದ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಲೂ ನಾಯ್ಡು ಅವರು ನಿರಾಕರಿಸಿದ್ದರು.

2018: ನವದೆಹಲಿ:  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಯದ್ವಾತದ್ವ ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ ,  ’ಪರಿಶಿಷ್ಟರಿಗೆ ರಕ್ಷಣೆ ಒದಗಿಸಬೇಕಾದ ದೌರ್ಜನ್ಯ ನಿಗ್ರಹ ಕಾಯ್ದೆಯನ್ನು ಮುಗ್ದ ನಾಗರಿಕರು ಮತ್ತು ಸಾರ್ವಜನಿಕ ಸೇವಕರ (ಸರ್ಕಾರಿ ನೌಕರರ) ವಿರುದ್ಧ ’ಬ್ಲಾಕ್ ಮೇಲ್ ಸಾಧನವಾಗಿ ಬಳಸುವಂತಿಲ್ಲ ಎಂದು ತೀರ್ಪು ನೀಡಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಸರ್ಕಾರಿ ನೌಕರರ ವಿರುದ್ಧ ಯಾವುದೇ ದೂರು ದಾಖಲಾದ ಸಂದರ್ಭದಲ್ಲಿ ತತ್ ಕ್ಷಣವೇ ಬಂಧಿಸಬಾರದು ಎಂದು ಕೋರ್ಟ್ ಆಜ್ಞಾಪಿಸಿತು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯ ಅಡಿಯಲ್ಲಿ ಸರ್ಕಾರಿ ನೌಕರನನ್ನು ಬಂಧಿಸುವ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಿಂತ ಕಡಿಮೆಯಲ್ಲದ ಶ್ರೇಣಿಯ ಅಧಿಕಾರಿಯಿಂದ ಪ್ರಾಥಮಿಕ ತನಿಖೆ ನಡೆಸುವುದು ಕಡ್ಡಾಯ ಎಂದು ಕೋರ್ಟ್ ಹೇಳಿತು.  ನ್ಯಾಯಮೂರ್ತಿಗಳಾದ ಆದರ್ಶ ಗೋಯೆಲ್ ಮತ್ತು ಯುಯು ಲಲಿತ್ ಅವರನ್ನು ಒಳಗೊಂಡ ಪೀಠವು ಕಾಯ್ದೆಯ ಕಠಿಣ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾದ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ನಿರೀಕ್ಷಣಾ ಜಾಮೀನು ನೀಡಲು ಯಾವುದೇ ಅಡ್ಡಿಯೂ ಇರಬಾರದು ಎಂದೂ ಹೇಳಿತು.  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಕಾಯ್ದೆಯ ಅಡಿಯಲ್ಲಿ ಸರ್ಕಾರಿ ನೌಕರರನ್ನು ಬಂಧಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ನಿರ್ದೇಶನಗಳನ್ನು ನೀಡಿದ ಪೀಠ, ಸಮರ್ಥ ಪ್ರಾಧಿಕಾರಿಯಿಂದ ಪೂರ್ವಾನುಮತಿ ಪಡೆದ ಬಳಿಕವೇ ಸರ್ಕಾರಿ ನೌಕರರನ್ನು ಬಂಧಿಸಬಹುದು ಎಂದು ನಿರ್ದೇಶಿಸಿತು.  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರಿಗೆ ಜಾತಿ ನಿಂದನೆ ಮತ್ತು ತಾರತಮ್ಯಗಳಿಂದ ರಕ್ಷಣೆ ಒದಗಿಸುವಂತಹ ದೌರ್ಜನ್ಯ ವಿರೋಧಿ ಕಾಯ್ದೆಯು ’ಮುಗ್ಧ ನಾಗರಿಕರ ಮತ್ತು ಸರ್ಕಾರಿ ನೌಕರರನ್ನು ’ಬ್ಲಾಕ್ ಮೇಲ್ ಮಾಡುವ ಸಾಧನವಾಗಿ ಪರಿವರ್ತನೆಗೊಂಡಿದೆ ಎಂದು ಪೀಠ ತನ್ನ ತೀರ್ಪಿನಲ್ಲಿ ವಿಶ್ಲೇಷಿಸಿತು.  ಕಳೆದ ಮೂರು ದಶಕಗಳಲ್ಲಿ ೧೯೮೯ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ಸ್ಥಾಪಿತ ಹಿತಾಸಕ್ತಿಗಳನ್ನು ತೃಪ್ತಿಗೊಳಿಸಲು ’ಸೇಡು ತೀರಿಸುವ ಸಲುವಾಗಿ ಬಳಕೆಯಾಗಿರುವುದು ದಾಖಲಾದ ಹಲವಾರು ದೂರುಗಳಿಂದ ವ್ಯಕ್ತವಾಗಿದೆ ಎಂದು ಪೀಠ ಹೇಳಿತು.  ‘ಮುಗ್ಧ ನಾಗರಿಕರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಶಾಸನಸಭೆಯ ಉದ್ದೇಶ ಇದಾಗಿರಲಿಲ್ಲ. ಶಾಸನಸಭೆಯು ಎಂದೂ ದೌರ್ಜನ್ಯಗಳ ನಿಗ್ರಹ ಕಾಯ್ದೆಯನ್ನು ವೈಯಕ್ತಿಕ ಸೇಡು ತೀರಿಸುವ ಸಲುವಾಗಿ ಬ್ಲಾಕ್ ಮೇಲ್ ಮಾಡಲು ಬಳಸುವ ಉದ್ದೇಶ ಹೊಂದಿರಲಿಲ್ಲ ಎಂದು ಪೀಠ  ಹೇಳಿತು. ಜಾತಿಗೆರೆಗಳನ್ನು ಮಾಸುವಂತೆ ಮಾಡುವುದಕ್ಕೆ ಬದಲಾಗಿ ಜಾತಿದ್ವೇಷ  ಹೆಚ್ಚಿಸುವಂತೆ ಸುಳ್ಳುದೂರುಗಳನ್ನು ದಾಖಲಿಸಲು ಕಾಯ್ದೆಯನ್ನು ದುರುಪಯೋಗ ಮಾಡಲಾಗಿದೆ. ನಿಯಂತ್ರಿಸದೇ ಹೋದರೆ ದೌರ್ಜನ್ಯಗಳ ನಿಗ್ರಹದ ಹಾಲಿ ಕಾಯ್ದೆಯು ಜಾತೀಯತೆಯನ್ನು ಹೆಚ್ಚಿಸಬಹುದು. ಮುಗ್ಧ ನಾಗರಿಕರನ್ನು ಜಾತಿ ನೆಲೆಯಲ್ಲಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸದಂತೆ ತಡೆಯಲು ನ್ಯಾಯಾಲಯಗಳು ಮಧ್ಯ ಪ್ರವೇಶ ಮಾಡಬೇಕಾದ ಅಗತ್ಯ ಇದೆ ಎಂದು ಪೀಠ ಹೇಳಿತು.  ‘ಕಾಯ್ದೆಯನ್ನು ಇತರ ನಾಗರಿಕರ ವಿರುದ್ಧ ಬಾಹ್ಯ ಕಾರಣಗಳಿಗಾಗಿ ಶೋಷಣೆಯ ಅಧ್ಯಾಯವಾಗಿ ಪರಿವರ್ತಿಸುವಂತಿಲ್ಲ ಅಥವಾ ಯಾರೇ ನಿರ್ಲಜ್ಜ ವ್ಯಕ್ತಿಯ ಅಥವಾ ಪೊಲೀಸರ ದಬ್ಬಾಳಿಕೆಯ ಸಲುವಾಗಿ ಬಳಸುವಂತಿಲ್ಲ. ಯಾವುದೇ ಜಾತಿ ಅಥವಾ ಧರ್ಮದವರಾಗಿದ್ದರೂ ಮುಗ್ಧ ನಾಗರಿಕನಿಗೆ ಕಿರುಕುಳ ನೀಡುವುದು ಸಂವಿಧಾನ ಒದಗಿಸಿರುವ ಖಾತರಿಗೆ ವಿರುದ್ಧವಾಗುತ್ತದೆ. ಈ ನ್ಯಾಯಾಲಯವು ಇಂತಹ ಖಾತರಿಯನ್ನು ಜಾರಿಗೆ ತರಬೇಕು. ಕಾನೂನು ಜಾತಿ ದ್ವೇಷದಲ್ಲಿ ಪರ್‍ಯವಸಾನಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಹೇಳಿತು.  ೧೯೮೯ರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯು ಜಾತಿ ನಿಂದನೆಯನ್ನು ದಂಡನೆಗೆ ಒಳಪಡಿಸುತ್ತದೆ. ಶಂಕಿತ ಅಪರಾಧಿಗಳಿಗೆ ನಿರೀಕ್ಷಣಾ ಜಾಮೀನನ್ನೂ ನಿರಾಕರಿಸುತ್ತದೆ. ಆದ್ದರಿಂದ ದೂರಿನಲ್ಲಿ ಬಳಸಲಾಗುವ ಕೇವಲ ಏಕಪಕ್ಷೀಯ ಪದವನ್ನು ಆಧರಿಸಿ ಆಪಾದಿತನ ವೈಯಕ್ತಿಕ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲು ಕಾನೂನನ್ನು ಬಳಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿತು. ತನ್ನ ವಿರುದ್ಧದ ದೂರು ದುರುದ್ದೇಶದ್ದು ಎಂಬುದಾಗಿ ಮೇಲ್ನೋಟಕ್ಕೆ ಸಾಬೀತುಪಡಿಸಲು ಆರೋಪಿಯು ಸಮರ್ಥನಾದರೆ ಆತನಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ನ್ಯಾಯಮೂರ್ತಿ ಗೋಯಲ್ ತಮ್ಮ ತೀರ್ಪಿನಲ್ಲಿ ಬರೆದರು. ಈ ಕಾಯ್ದೆಯ ದುರ್ಬಳಕೆಯಿಂದ ಸಾರ್ವಜನಿಕ ಆಡಳಿತವನ್ನು ಹೇಗೆ ಬೆದರಿಸಲಾಗುತ್ತದೆ ಎಂಬುದನ್ನು ಕೋರ್ಟ್ ಉಲ್ಲೇಖಿಸಿತು. ಕಾಯ್ದೆಯನ್ನು ತಮ್ಮ ವಿರುದ್ಧ ಪ್ರಯೋಗಸಬಹುದು ಎಂಬ ಹೆದರಿಕೆಯಿಂದ ಸರ್ಕಾರಿ ಅಧಿಕಾರಿಗಳು ನೌಕರರ ವಿರುದ್ಧ ಪ್ರತಿಕೂಲಕ ಷರಾ ಬರೆಯುವುದೂ ಕಷ್ಟವಾಗುತ್ತದೆ.  ’ದೌರ್ಜನ್ಯ ನಿಗ್ರಹ ಕಾಯ್ದೆಯ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಅವರನ್ನು ಬ್ಲಾಕ್ ಮೇಲ್ ಮಾಡಬಹುದು. ಅಂತಹ ಸಂದರ್ಭದಲ್ಲಿ ಅವರಿಗೆ ಯಾವುದೇ ರಕ್ಷಣೆಯೂ ಲಭಿಸುವುದಿಲ್ಲ ಎಂದು ಕೋರ್ಟ್ ಹೇಳಿತು.  ‘ಇದು ನಾಗರಿಕ ಸಮಾಜದಲ್ಲಿ ಇರುಬೇಕಾದಂತಹ ಸನ್ನಿವೇಶವಲ್ಲ. ಸುಳ್ಳು ದೂರಿನಲ್ಲಿ ಸಿಲುಕಿಸುವುದರಿಂದ ಮತ್ತು ಅನಗತ್ಯ ಬಂಧನಗಳ ವಿರುದ್ಧ ಮುಗ್ಧ ನಾಗರಿಕರಿಗೆ ರಕ್ಷಣೆ ನೀಡಬೇಕಾದ ಅಗತ್ಯ ಇದೆ ಎಂದು ಕೋರ್ಟ್ ಹೇಳಿತು.

2017: ನವದೆಹಲಿ: ಕಳಂಕಿತ ಜನಪ್ರತಿನಿಧಿಗಳನ್ನು ಶಾಶ್ವತವಾಗಿ ಚುನಾವಣೆ ಸ್ಪರ್ಧೆಯಿಂದ ನಿಷೇಧಿ ಸಬೇಕೆಂಬ ದಶಕಗಳ ಹಿಂದಿನ ವಾದಕ್ಕೆ ಮರುಜೀವ ಸಿಕ್ಕಿತು.  ಜನಪ್ರತಿನಿಧಿಗಳ ವಿರುದ್ಧದ ಗಂಭೀರ ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾದಲ್ಲಿ ಅವರಿಗೆ ಜೀವನ ಪರ್ಯಂತ ಚುನಾವಣೆ ನಿಷೇಧ ಹೇರಬೇಕೆಂದು ಕೋರಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟಿಗೆ  ಪ್ರಮಾಣಪತ್ರ ಸಲ್ಲಿಸಿತು. ಕಳಂಕಿತ ಜನಪ್ರತಿನಿಧಿಗಳನ್ನು ಚುನಾವಣೆಯಿಂದ ದೂರವಿಡುವ ಪ್ರಸ್ತಾವನೆಗೆ ನಮ್ಮ ಸಹಮತವಿದೆ. ಅಪರಾಧ ಸಾಬೀತಾಗುವ ಜನಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಲು ಆಜೀವ ನಿಷೇಧ ಹೇರಬೇಕುಎಂದು ಆಯೋಗ ಪ್ರಮಾಣಪತ್ರದಲ್ಲಿ ಕೋರಿತು. ಜತೆಗೆ ಚುನಾವಣಾ ಅಕ್ರಮ ಸಂಬಂಧಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕೆಂದೂ ಆಯೋಗ ನ್ಯಾಯಾಲಯವನ್ನು ಕೋರಿಕೊಂಡಿತು. ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು, ಕಳಂಕಿತ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಪ್ರಮಾಣಪತ್ರ ಸಲ್ಲಿಸಿತು. ಸದ್ಯ ಅಪರಾಧ ಸಾಬೀತಾಗುವ ಅಭ್ಯರ್ಥಿಗೆ ಆರು ವರ್ಷಗಳ ಕಾಲ ಚುನಾವಣಾ ಸ್ಪರ್ಧೆಯಿಂದ ನಿಷೇಧ ಹೇರಲಾಗುತ್ತದೆ. ಜಾಮೀನು ಪಡೆದರೂ ನಿಷೇಧ ಅನ್ವಯ: ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4) ಅನುಸಾರ, ಶಿಕ್ಷೆಗೊಳಗಾದ ಜನಪ್ರತಿನಿಧಿಗಳು ಮೇಲ್ಮನವಿ ಸಲ್ಲಿಸಲು ಅವಕಾಶವಿರುವ ಮೂರು ತಿಂಗಳ ಅವಧಿಯವರೆಗೆ ತೀರ್ಪನ್ನು ತಡೆಹಿಡಿಯುವಂತೆ ನ್ಯಾಯಾಲಯವನ್ನು ಕೋರಿದಲ್ಲಿ ಇಲ್ಲವೇ, ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದಲ್ಲಿ ಅದು ಇತ್ಯರ್ಥವಾಗುವವರೆಗೆ ನಿಷೇಧ ಅನ್ವಯವಾಗದು ಎಂಬ ನಿಯಮ ಜಾರಿಯಲ್ಲಿತ್ತು. 2013ರಲ್ಲಿ ಸುಪ್ರೀಂಕೋರ್ಟ್ ಸೆಕ್ಷನ್ ಅನ್ನು ರದ್ದುಗೊಳಿಸಿದೆ. ಹಿನ್ನೆಲೆಯಲ್ಲಿ ಈಗ ಜಾಮೀನು ಪಡೆದರೂ ಅಪರಾಧಿಗಳಿಗೆ ನಿಷೇಧ ಅನ್ವಯವಾಗುತ್ತದೆ

2017: ಬೆಂಗಳೂರು: ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ವಿುಸಿಕೊಂಡಿರುವ ನಿವೇಶನಗಳನ್ನು ಸಕ್ರಮ ಮಾಡುವ ಪ್ರಮುಖ ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಈದಿನ  ವಿಧಾನಸಭೆಯಲ್ಲಿ ಮಂಡಿಸಲಾಯಿತು. ಇದರ ಪ್ರಕಾರ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಕಂದಾಯ ಜಮೀನಿನಲ್ಲಿ ನಿರ್ವಿುಸಲಾಗಿರುವ ಮನೆಯ ಜಾಗವನ್ನು ಸಕ್ರಮಗೊಳಿಸಬಹುದಾಗಿದೆ. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿಕರ್ನಾಟಕ ಭೂ ಕಂದಾಯ 1964’ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಂಡಿಸಿದರು. ಕಾಯ್ದೆ ಪ್ರಕಾರ ನಿಗದಿತ ಅಂತರದಲ್ಲಿನ 3040 ಅಡಿ ಅಕ್ರಮ ನಿವೇಶನಗಳನ್ನು ಮಂಜೂರು ಮಾಡಬಹುದಾಗಿದೆ. ಬಿಬಿಎಂಪಿ ವ್ಯಾಪ್ತಿಯ 18 ಕಿಮೀ ಹಾಗೂ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 10 ಕಿಮೀ, ನಗರಸಭೆಗಳ ವ್ಯಾಪ್ತಿ 5 ಕಿಮೀ, ಪೌರನಿಗಮಗಳ ವ್ಯಾಪ್ತಿ 10 ಕಿಮೀ ಹಾಗೂ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿ 3 ಕಿಮೀ ಪರಿಮಿತಿಯೊಳಗೆ ಇರುವ ನಿವೇಶನಗಳನ್ನು ಸಕ್ರಮ ಮಾಡಲು ಕಾಯ್ದೆಯಡಿ ಅವಕಾಶವಿದೆ.

2009: ರಾಜ್ಯದಲ್ಲಿ ಉಗ್ರರ ನಿಗ್ರಹಕ್ಕಾಗಿ ಸೇನೆಯ ವಿಶೇಷ ಪಡೆಗೆ ಉನ್ನತ ತರಬೇತಿ ಪಡೆದ 500 ಅಧಿಕಾರಿಗಳು ಮತ್ತು ಯೋಧರನ್ನು ಸೇರಿಸುವ ಮೂಲಕ ಪಡೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಭಯೋತ್ಪಾದಕರ ಯಾವುದೇ ದಾಳಿ ಎದುರಿಸಲು ರೀತಿಯಲ್ಲಿ ಪಡೆಗೆ ಶಕ್ತಿ ತುಂಬಲಾಗುವುದು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಮ್ ಬೆಂಗಳೂರಿನಲ್ಲಿ ಹೇಳಿದರು. ಕಬ್ಬನ್ ರಸ್ತೆಯಲ್ಲಿನ ಕರ್ನಾಟಕ ಮತ್ತು ಕೇರಳ ಉಪ ವಲಯ ಸೇನಾ ಮುಖ್ಯ ಕಚೇರಿಗೆ ಭೇಟಿ ನೀಡಿ ಹಿರಿಯ ರಕ್ಷಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ವರದಿಗಾರರೊಂದಿಗೆ ಮಾತನಾಡಿದರು.

2009: ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನಾಗಿ ವಾಯುಪಡೆಯ ಹಾಲಿ ವೈಸ್ ಚೀಫ್ ಪ್ರದೀಪ್ ವಸಂತ್ ನಾಯ್ಕಾ ಅವರನ್ನು ಸರ್ಕಾರ ನೇಮಕ ಮಾಡಿತು. ಹಾಲಿ ಏರ್ ಚೀಫ್ ಮಾರ್ಷಲ್ ಫಾಲಿ ಹೋಮಿ ಮೇಜರ್ ಅವರು ಮೇ 31ರಂದು ನಿವೃತ್ತಿ ಹೊಂದಿದಾಗ ನಾಯ್ಕಾ ಅಧಿಕಾರ ವಹಿಸಿಕೊಳ್ಳುವರು. 1969ರಲ್ಲಿ ಯುದ್ಧ ವಿಮಾನಗಳ ಪೈಲಟ್ ಆಗಿ ಸೇನೆಗೆ ಸೇರಿದ ನಾಯ್ಕಾ ಸೇನೆಯ ವಿವಿಧ ವಿಭಾಗಗಳಲ್ಲಿ 40 ವರ್ಷ ಸೇವೆ ಸಲ್ಲಿಸಿದವರು. 1971ರ ಭಾರತ-ಪಾಕ್ ಯುದ್ಧದಲ್ಲಿ ನಾಯ್ಕ ಪಾಲ್ಗೊಂಡಿದ್ದರು.

2009: ಸುಪ್ರೀಂಕೋರ್ಟಿನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿಗಳತ್ತ ಶೂ ಎಸೆದ ಪ್ರಮಾದಕ್ಕಾಗಿ ಮಹಿಳೆಯೊಬ್ಬರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಘಟನೆ ನವದೆಹಲಿಯಲ್ಲಿ ನಡೆಯಿತು. ಮುಂಬೈಯ 'ಬಾಸ್ ಸ್ಕೂಲ್ ಆಫ್ ಮ್ಯೂಸಿಕ್' ಸಂಗೀತ ಶಾಲೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಹಾಗೂ ಅಶೋಕ್ ಕುಮಾರ್ ಗಂಗೂಲಿ ಅವರಿದ್ದ ಪೀಠ ನಡೆಸುತ್ತಿದ್ದಾಗ ಈ ಘಟನೆ ನಡೆಯಿತು. ವಿಚಾರಣೆ ಎದುರಿಸುತ್ತಿದ್ದ ಶಾಲೆಯ ಐದು ಜನ ಆಡಳಿತ ಮಂಡಳಿ ಸದಸ್ಯರು ನ್ಯಾಯಮೂರ್ತಿಗಳನ್ನು ನಿಂದಿಸಿದರು. ತಮ್ಮ ವಿರುದ್ಧ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳನ್ನು ಜೈಲಿಗೆ ಕಳುಹಿಸಬೇಕೆಂದೂ ಒತ್ತಾಯಿಸಲು ಆರಂಭಿಸಿದರು. ಈ ಹಂತದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯೆ ತನ್ನ ಕಾಲಿನಲ್ಲಿದ್ದ ಬೂಟನ್ನು ತೆಗೆದು ನೇರವಾಗಿ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರನ್ನು ಗುರಿಯಾಗಿಸಿ ಎಸೆದರು. ಅದೃಷ್ಟವಶಾತ್ ಗುರಿ ತಪ್ಪಿತು. ಈ ಘಟನೆ ಕೆಲಕಾಲ ನ್ಯಾಯಾಲಯದ ಆವರಣದಲ್ಲಿ ಕೋಲಾಹಲ ಸೃಷ್ಟಿಸಿತು.

2009: ಕೋಮುದ್ವೇಷ ಕೆರಳಿಸುವ ಪ್ರಚೋದನಕಾರಿ ಭಾಷಣ ಮಾಡಿದ ಪಿಲಿಭಿಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರಿಗೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತು. ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ವಜಾಗೊಳಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟಿನಲ್ಲಿ ವರುಣ್ ಸಲ್ಲಿಸಿದ ಅರ್ಜಿ ಇತ್ಯರ್ಥವಾಗುವವರೆಗೆ ಈ ಜಾಮೀನು ಜಾರಿಯಲ್ಲಿರುತ್ತದೆ.

2009: ದೆಹಲಿ ಮೆಟ್ರೊ, ಸೌರ ಶಕ್ತಿ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಆಗಿದ್ದು, ಇದರಿಂದ ವಾತಾವರಣಕ್ಕೆ ಪ್ರತಿ ವರ್ಷ ಬಿಡುತ್ತಿದ್ದ 2.35 ಲಕ್ಷ ಟನ್ ಹಸಿರು ಮನೆ ತ್ಯಾಜ್ಯ ತಡೆಯುವಂತಾಯಿತು. ಕನ್ನಾಟ್ ಪ್ಲೇಸ್‌ನಲ್ಲಿಯ ಮೆಟ್ರೊ ಪ್ರಧಾನ ಕಚೇರಿಯಲ್ಲಿ ಐದು ಕಿ.ವಾ.ಸಾಮರ್ಥ್ಯದ ಸೌರಶಕ್ತಿ ಘಟಕವನ್ನು ಸ್ಥಾಪಿಸಲಾಗಿದ್ದು, ವಿಶ್ವದಲ್ಲಿಯೇ ಹಸಿರು ಮನೆ ತ್ಯಾಜ್ಯ ನಿಲ್ಲಿಸಿದ ಪ್ರಥಮ ಮೆಟ್ರೊ ಯೋಜನೆ ಎಂಬ ನೋಂದಣಿ ಪತ್ರವನ್ನು ಅಮೆರಿಕದಿಂದ ಪಡೆದಿದೆ ಎಂದು ಅನುಜ್ ದಯಾಳ್ ತಿಳಿಸಿದರು. ಸೌರಶಕ್ತಿ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್, ಮೆಟ್ರೊ ಭವನದ ವಿದ್ಯುತ್ ಅಗತ್ಯವನ್ನು ಪೂರೈಸುತ್ತದೆ.

2009: ರಾಗಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶ ಸರ್ಕಾರವು ಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೊಳಿಸಲು ನಿರ್ಧರಿಸಿತು. ಇದರನ್ವಯ ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಲಾಯಿತು. ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 'ಹಿಮಾಚಲ ಪ್ರದೇಶ ವಿದ್ಯಾಸಂಸ್ಥೆಗಳ (ರಾಗಿಂಗ್ ತಡೆಗಟ್ಟುವಿಕೆ) ಮಸೂದೆ-2009'ಕ್ಕೆ ಒಪ್ಪಿಗೆ ದೊರಕಿತು.

2008: ತೆಲುಗಿನ ಜನಪ್ರಿಯ ನಟ ಶೋಭನ್ ಬಾಬು (71) ಅವರು ಹೃದಯಾಘಾತದಿಂದ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು. ಶೋಭನ್ ಬಾಬು ಅವರು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿದ್ದು, ಎನ್.ಟಿ. ರಾಮರಾವ್, ಎ. ನಾಗೇಶ್ವರ ರಾವ್ ಅವರಂತೆ ಜನಪ್ರಿಯರಾಗಿದ್ದರು. ತಮ್ಮ ಎಂದಿನ ದಿನಚರಿಯಂತೆ ಶೋಭನ್ ಬಾಬು ಅವರು ಹಿಂದಿನ ದಿನ ಬೆಳಗ್ಗೆ ಯೋಗಾಸನ ಮಾಡುತ್ತಿದ್ದ ಸಮಯದಲ್ಲಿ ಕುಸಿದು ಬಿದ್ದಾಗ ಅವರ ಮೂಗಿನಲ್ಲಿ ತೀವ್ರ ರಕ್ತಸ್ರಾವ ಕಂಡು ಬಂದಿತ್ತು. ತತ್ ಕ್ಷಣವೇ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2008: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕರ್ನಾಟಕ ಮತ್ತು ಕೇರಳಕ್ಕೆ ಸಮೀಪದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಯಿತು. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸಿ. ನಂದಿಹಳ್ಳಿ ಗ್ರಾಮದ ಮರಾಠಿ ಪಾಳ್ಯದಲ್ಲಿ ಸಿಡಿಲು ಬಡಿದು ಮರಿಯಪ್ಪ (55) ಎಂಬವರು ಮೃತರಾದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಿತ್ರದುರ್ಗ, ಕೋಲಾರ, ಮಂಡ್ಯ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಸಾಧಾರಣ ಹಾಗೂ ಇನ್ನು ಕೆಲವೆಡೆ ರಭಸದ ಮಳೆಯಾಯಿತು.

2008: ಅಮೆರಿಕವು ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ಥಾನದಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಮಾಡಲು ಆರಂಭಿಕ ಪ್ರಯತ್ನಗಳನ್ನು ಬಿಟ್ಟರೆ ಹೆಚ್ಚಿನ ಆಸಕ್ತಿ ತೋರಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅಸಮಾಧಾನ ಸೂಚಿಸಿದರು. ಮಾಜಿ ಉಪಪ್ರಧಾನಿ ಮತ್ತು ಹಾಲಿ ಲೋಕಸಭೆಯ ಪ್ರತಿಪಕ್ಷ ನಾಯಕರಾದ ಅಡ್ವಾಣಿಯವರು ತಮ್ಮ ``ನನ್ನ ರಾಷ್ಟ್ರ, ನನ್ನ ಜೀವನ'' ಎಂಬ ಆತ್ಮಕಥನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

2008: ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ಘೋಷಿಸಬೇಕಾಗಿದ್ದ ತೀರ್ಪನ್ನು ದೆಹಲಿ ಸೆಷನ್ಸ್ ನ್ಯಾಯಾಲಯ ಮಾರ್ಚ್ 24ರವರೆಗೆ ಕಾಯ್ದಿರಿಸಿತು.

2008: ಉದ್ಯೋಗ ನೀಡುವ ಸಂಸ್ಥೆಯೊಂದು ತನ್ನ ಒಬ್ಬ ನೌಕರನ ಹೆಸರಲ್ಲಿ ಹಲವು ಎಚ್-1ಬಿ ವೀಸಾ ಅರ್ಜಿಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸುವ ನೂತನ ವೀಸಾ ನೀತಿಯನ್ನು ಅಮೆರಿಕ ಜಾರಿಗೆ ತಂದಿತು.

2007: ರಷ್ಯಾದ ಸೈಬೇರಿಯಾ ಕಲ್ಲಿದ್ದಲು ಗಣಿಯಲ್ಲಿ ದಶಕದ ಅವಧಿಯಲ್ಲಿ ಸಂಭವಿಸಿದ ಅತಿ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 106 ಮಂದಿ ಮೃತರಾದರು.

2007: ಭಾರತೀಯ ವಾಯುಪಡೆಯ ಮಿಗ್-23 ಯುದ್ಧ ವಿಮಾನಗಳು ಇತಿಹಾಸದ ಪುಟ ಸೇರಿದವು. ಪಾಕಿಸ್ಥಾನದ ಎಫ್-16 ಯುದ್ಧ ವಿಮಾನಗಳನ್ನು ಎದುರಿಸಲು ಕಳೆದ 25 ವರ್ಷಗಳಿಂದ ಸಮರ ಸನ್ನದ್ಧವಾಗಿದ್ದ ಮಿಗ್-23 ವಿಮಾನಗಳು ಜಾಮ್ ನಗರದಲ್ಲಿ ಸಾಂಪ್ರದಾಯಿಕ ಹಾರಾಟ ನಡೆಸುವ ಮೂಲಕ ತೆರೆಮರೆಗೆ ಸರಿದವು.

2006: ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಮೂರು ತಿಂಗಳ ನಂತರ ಮತ್ತೆ ಬಣ್ಣ ಹಚ್ಚಿ ಚಿತ್ರೀಕರಣದಲ್ಲಿ ಪಾಲ್ಗೊಂಡರು. ನವೆಂಬರ್ ತಿಂಗಳಲ್ಲಿ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಮಿತಾಭ್ ಈ ದಿನ ಕರಣ್ ಜೋಹರ್ ಅವರ ಕಬಿ ಅಲ್ವಿದ ನಾ ಕೆಹನಾ ಚಿತ್ರಕ್ಕಾಗಿ ಕೆಲವು ಸನ್ನಿವೇಶಗಳಲ್ಲಿ ನಟಿ ರಾಣಿ ಮುಖರ್ಜಿ ಜೊತೆಗೆ ಅಭಿನಯಿಸಿದರು.

2006: ಮೆಲ್ಬೋರ್ನಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸಿನಲ್ಲಿ ಪುರುಷರ ತಂಡಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನ, ಮಹಿಳೆಯರಿಗೆ ಕಂಚು ಲಭಿಸಿತು.

2006: ಕ್ಷೀರಕ್ರಾಂತಿಯ ನೇತೃತ್ವ ವಹಿಸಿ ಭಾರತೀಯ ಡೇರಿ ಉದ್ಯಮದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿದ್ದ ವರ್ಗೀಸ್ ಕುರಿಯನ್ ಅವರು 3600 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಗುಜರಾತ್ ಹಾಲು ಮಾರಾಟ ಸಹಕಾರ ಸಂಘದ (ಜಿಸಿಎಂಸಿಎಫ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 34 ವರ್ಷಗಳಿಂದ ಅಧ್ಯಕ್ಷರಾಗಿದ್ದ 85ರ ಹರೆಯದ ಕುರಿಯನ್ ವಿರುದ್ಧ ಇತ್ತೀಚೆಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಯಿಂದ ನೊಂದು ಅವರು ಈ ಕ್ರಮ ಕೈಗೊಂಡರು.

2006: ಖ್ಯಾತ ಚಿತ್ರ ನಿರ್ಮಾಪಕ ಅಡೂರು ಗೋಪಾಲಕೃಷ್ಣನ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಸಿಇಒ ನಂದನ್ ನೀಲೇಕಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 51 ಗಣ್ಯರಿಗೆ 2006ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.

2006: ಜನತಾದಳ (ಎಸ್) - ಬಿಜೆಪಿ ಮೈತ್ರಿ ಕೂಟದ ಕರ್ನಾಟಕ ಅಭಿವೃದ್ಧಿ ರಂಗದ ಚೊಚ್ಚಲ ಮುಂಗಡಪತ್ರವನ್ನು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದರು. ರೈತರು, ನೇಕಾರರು, ಮೀನುಗಾರರಿಗೆ ಶೇಕಡಾ 4ರ ಬಡ್ಡಿದರದಲ್ಲಿ ಸಾಲಸೌಲಭ್ಯ, ದೇಸೀ ಗೋ ತಳಿ ಸಂರಕ್ಷಣೆಗೆ ಕಾರ್ಯಕ್ರಮಗಳು ಮುಂಗಡ ಪತ್ರದ ವಿಶೇಷತೆಗಳಲ್ಲಿ ಪ್ರಮುಖವಾದವು. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹಮ್ಮಿಕೊಂಡ ದೇಸೀ ಗೋ ತಳಿ ಸಂರಕ್ಷಣೆ ಆಂದೋಲನದಿಂದ ಪ್ರೇರಣೆ ಪಡೆದು ದೇಸೀ ಗೋ ತಳಿ ಅಭಿವೃದ್ಧಿ ಪಡಿಸುವವರಿಗೆ ಪ್ರತಿ ಜಿಲ್ಲೆಯಲ್ಲಿ 20 ಎಕರೆ ಜಮೀನು ಗುತ್ತಿಗೆ ನೀಡಿಕೆ, ಅಲ್ಲಿ ಕನಿಷ್ಠ 100 ಹಸು ಸಾಕಣೆ ಮತ್ತು ಗೋಮೂತ್ರ ಸಂಗ್ರಹ ಕಡ್ಡಾಯಗೊಳಿಸಲು, ಗೋ ಮೂತ್ರ ಉಪಯುಕ್ತತೆ ಬಗ್ಗೆ ಸಂಶೋಧನೆಗೆ ಒತ್ತು ನೀಡಲು ನಿರ್ಧರಿಸಿದ್ದು ಮುಂಗಡಪತ್ರಗಳ ಇತಿಹಾಸದಲ್ಲೇ ಪ್ರಥಮ.

2003: ಅಮೆರಿಕವು ಬಾಗ್ದಾದ್ ಮೇಲೆ ವಿಮಾನದಾಳಿ ನಡೆಸಿ ಇರಾಕ್ ವಿರುದ್ಧ ಸಮರ ಆರಂಭಿಸಿತು

1999: ಬ್ರಿಟನ್ನಿನ ಬ್ರೈನ್ ಜೋನ್ಸ್ ಮತ್ತು ಸ್ವಿಟ್ಸರ್ಲೆಂಡಿನ ಬರ್ಟ್ರಂಡ್ ಪಿಕ್ಕಾರ್ಡ್ ಅವರು ಎಲ್ಲೂ ನಿಲ್ಲದೆ ಬಲೂನ್ ಮೂಲಕ ಜಗತ್ತಿಗೆ ಸುತ್ತು ಹಾಕಿದ ಮೊದಲ ಹಾರಾಟಗಾರರೆನಿಸಿದರು. ಮಾರ್ಚ್ 1ರಿಂದ 19 ದಿನಗಳ ಕಾಲ ನಡೆದ ಅವರ ಈ ಬಲೂನ್ ಹಾರಾಟ 19 ದಿನ 1 ಗಂಟೆ 49 ನಿಮಿಷಗಳ ಕಾಲ ನಡೆಯಿತು.

1962: ಭಾರತದ ಕ್ರಿಕೆಟ್ ಕ್ಯಾಪ್ಟನ್ ನಾರಿ ಕಾಂಟ್ರಾಕ್ಟರ್ ಅವರು ಬಾರ್ಬಡೋಸ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್ ಚಾರ್ಲಿ ಗ್ರಿಫಿತ್ ಚೆಂಡಿನ (ಬಾಲ್) ಏಟಿನಿಂದ ತೀವ್ರವಾಗಿ ಗಾಯಗೊಂಡರು. ತುರ್ತು ಶಸ್ತ್ರಚಿಕಿತ್ಸೆ ನಡೆದರೂ ನಂತರ ಅವರು ಪಂದ್ಯದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.

1856: ಫ್ರೆಡರಿಕ್ ವಿನ್ ಸ್ಲೋ ಟೇಲರ್ (1856-1915) ಹುಟ್ಟಿದ ದಿನ. ಅಮೆರಿಕನ್ ಸಂಶೋಧಕನಾದ ಈತ `ವೈಜ್ಞಾನಿಕ ಸಂಶೋಧನಾ ನಿರ್ವಹಣೆಯ ಜನಕ' ಎಂದೇ ಖ್ಯಾತನಾಗಿದ್ದಾನೆ.

1952: ಭಾರತದ ಮಾಜಿ ಟೆನಿಸ್ ಆಟಗಾರ ಆನಂದ್ ಅಮೃತರಾಜ್ ಹುಟ್ಟಿದ ದಿನ.

1951: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮದನ ಲಾಲ್ (ಶರ್ಮಾ) ಹುಟ್ಟಿದ ದಿನ.

1855: ಸಿಮೆಂಟ್ ಉದ್ಯಮವನ್ನು ಅಭಿವೃದ್ಧಿ ಪಡಿಸಿದ ಮುಂಚೂಣಿ ಬ್ರಿಟಿಷ್ ಸಿಮೆಂಟ್ ಉದ್ಯಮಿ ಜೋಸೆಫ್ ಆಸ್ಪ್ ಡಿನ್ ತನ್ನ 77ನೇ ವಯಸ್ಸಿನಲ್ಲಿ ಮೃತನಾದ. ಪೋರ್ಟ್ ಲ್ಯಾಂಡ್ ಸಿಮೆಂಟಿಗೆ ಈತ ಪೇಟೆಂಟ್ ಪಡೆದಿದ್ದ. ಸಿಮೆಂಟಿನ ಬಣ್ಣ ಪೋರ್ಟ್ ಲ್ಯಾಂಡಿನ ಕಲ್ಲಿನ ಬಣ್ಣವನ್ನೇ ಹೋಲುತ್ತಿದ್ದುದರಿಂದ ಅದಕ್ಕೆ ಆತ ಪೋರ್ಟ್ ಲ್ಯಾಂಡ್ ಸಿಮೆಂಟ್ ಎಂದು ಹೆಸರು ನೀಡಿದ್ದ.

1727: ಖ್ಯಾತ ಭೌತವಿಜ್ಞಾನಿ, ಗಣಿತಜ್ಞ ಹಾಗೂ ಖಗೋಳತಜ್ಞ ಐಸಾಕ್ ನ್ಯೂಟನ್ ಲಂಡನ್ನಿನಲ್ಲಿ ತನ್ನ 84ನೇ ವಯಸ್ಸಿನಲ್ಲಿ ಮೃತನಾದ.

1413: ದೊರೆ 4ನೇ ಹೆನ್ರಿ ವೆಸ್ಟ್ ಮಿನ್ ಸ್ಟರ್ ಅಬ್ಬೆಯ ಜೆರುಸಲೇಂ ಚೇಂಬರಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಮೃತನಾದ. ಆತನ ಹಿರಿಯ ಪುತ್ರ ಐದನೇ ಹೆನ್ರಿ ಸಿಂಹಾಸನ ಏರಿದ.

No comments:

Post a Comment