ಇಂದಿನ ಇತಿಹಾಸ History Today ಮಾರ್ಚ್ 17
2018: ನವದೆಹಲಿ:
ರೈತರ ಬೆಳೆಗಳಿಗೆ ಒದಗಿಸಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಕನಿಷ್ಠ ಒಂದೂವರೆ ಪಟ್ಟಿನಷ್ಟು ಏರಿಸಿ ನಿಗದಿ ಪಡಿಸುವ ಮುಂಗಡಪತ್ರ ನಿರ್ಣಯ ಬಗ್ಗೆ ಅನಗತ್ಯ ಗೊಂದಲ ಹರಡಲಾಗುತ್ತಿದೆ ಎಂದು ಇಲ್ಲಿ ಆಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಬೆಂಬಲ ಬೆಲೆ ಘೋಷಿಸುವಾಗ ಪ್ರಮುಖ ವೆಚ್ಚಗಳೆಲ್ಲವನ್ನೂ ಸೇರ್ಪಡೆ ಮಾಡಲಾಗುವುದು’ ಎಂದು ರೈತರಿಗೆ ಭರವಸೆ ನೀಡಿದರು. ಘೋಷಿತ ಕನಿಷ್ಠ ಬೆಂಬಲ ಬೆಲೆಯ ಲಾಭ ರೈತರಿಗೆ ಲಭಿಸುವಂತೆ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯ ಸರ್ಕಾರಗಳ ಜೊತೆ ಕೆಲಸ ಆರಂಭಿಸಿದೆ ಎಂದು ಅವರು ನುಡಿದರು. ನವದೆಹಲಿಯಲ್ಲಿ ಸಂಘಟಿಸಲಾದ ೨೦೧೮ರ ಮೂರು ದಿನಗಳ ಕೃಷಿ ಉನ್ನತಿ ಮೇಳವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಾಲಿನ್ಯ ನಿಯಂತ್ರಣಕ್ಕೆ ಅನುಕೂಲವಾವಂತೆ ನೋಡಿಕೊಳ್ಳುವ ಸಲುವಾಗಿ ಬೆಳೆ ತ್ಯಾಜ್ಯಗಳನ್ನು ಸುಡಬೇಡಿ ಎಂದೂ ರೈತರಿಗೆ ಮನವಿ ಮಾಡಿದರು. ಬದಲಿಗೆ ಹೆಚ್ಚು ತೈಲಬೀಜಗಳನ್ನು ಬೆಳೆಯುವಂತೆ ರೈತರಿಗೆ ಸೂಚಿಸಿದ ಮೋದಿ, ಇದರಿಂದ ದೇಶವು ಅಡುಗೆ ಅನಿಲಕ್ಕಾಗಿ ಆಮದು ಮಾಡುವ ಸ್ಥಿತಿ ತಪ್ಪುತ್ತದೆ ಎಂದು ಹೇಳಿದರು. ೨೦೨೨ರ ವೇಳೆಗೆ ಕನಿಷ್ಠ ಅರ್ಧದಷ್ಟಾದರೂ ಯೂರಿಯಾ ಬಳಕೆಯನ್ನು ಕಡಿತಗೊಳಿಸುವಂತೆಯೂ ಪ್ರಧಾನಿ ರೈತರಿಗೆ ಮನವಿ ಮಾಡಿದರು. ಕೇಂದ್ರ ಸರ್ಕಾರವು ೨೦೧೮-೧೯ರ ಸಾಲಿನ ಮುಂಗಡಪತ್ರದಲ್ಲಿ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಲಭಿಸುವುದನ್ನು ಖಾತ್ರಿಗೊಳಿಸುವ ನಿರ್ಣಯವನ್ನು ಕೈಗೊಂಡಿದೆ. ಎಲ್ಲ ಘೋಷಿತ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯು ವೆಚ್ಚದ ಕನಿಷ್ಠ ಒಂದೂವರೆ ಪಟ್ಟಿನಷ್ಟು ಇರಬೇಕು ಎಂದು ಅದು ತೀರ್ಮಾನಿಸಿದೆ ಎಂದು ಪ್ರಧಾನಿ ಹೇಳಿದರು. ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಕುರಿತ ನಿರ್ಧಾರ ಬಗ್ಗೆ ಹಲವರು ಗೊಂದಲ ಹರಡುತ್ತಿದ್ದಾರೆ ಮತ್ತು ಭ್ರಮ ನಿರಸನವಾಗುವಂತಹ ಪರಿಸರವನ್ನು ಸೃಷ್ಟಿಸುತ್ತಿದ್ದಾರೆ ಎಂದು ನುಡಿದ ಪ್ರಧಾನಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಪಡಿಸುವಾಗ ಉತ್ಪಾದನೆಯ ಪ್ರಮುಖ ವೆಚ್ಚಗಳನ್ನು ಪರಿಗಣಿಸಲಾಗುತ್ತದೆ. ಎಂದು ನುಡಿದರು. ‘ಉತ್ಪಾದನಾ ವೆಚ್ಚದಲ್ಲಿ ಕಾರ್ಮಿಕರಿಗೆ ಕೊಟ್ಟ ಹಣ, ಸ್ವಂತ ಅಥವಾ ಬಾಡಿಗೆಗೆ ಪಡೆದ ಯಂತ್ರೋಪಕರಣ ಅಥವಾ ಜಾನುವಾರು ವೆಚ್ಚ, ಬೀಜ ಮತ್ತು ಗೊಬ್ಬರಗಳ ವೆಚ್ಚ, ನೀರಾವರಿ ವೆಚ್ಚ, ರಾಜ್ಯ ಸರ್ಕಾರಕ್ಕೆ ನೀಡುವ ಕಂದಾಯ, ಕಾರ್ಯ ನಿರ್ವಹಣಾ ಬಂಡವಾಳದ ಮೇಲಿನ ಬಡ್ಡಿ ಮತ್ತು ಗುತ್ತಿಗೆಗೆ ಪಡೆದ ಭೂಮಿಯ ಮೇಲಿನ ಬಾಡಿಗೆ ಮತ್ತಿತರ ವೆಚ್ಚಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದು ಪ್ರಧಾನಿ ಮೋದಿ ವಿವರಿಸಿದರು. ‘ಕಷ್ಟ ಪಟ್ಟು ದುಡಿಯುವ ರೈತರ ಆದಾಯಕ್ಕೆ ಸಂಬಂಧಿಸಿದಂತೆ ಇದು ಅತ್ಯಂತ ಮಹತ್ವದ ನಿರ್ಧಾರ’ ಎಂದು ಅವರು ಬಣ್ಣಿಸಿದರು. ಸರ್ಕಾರವು ಎ೨ ಪ್ಲಸ್ ಎಫ್ ಎಲ್ (ಎಲ್ಲ ಪಾವತಿ ಮಾಡಿದ ವೆಚ್ಚಗಳು ಮತ್ತು ಕುಟುಂಬ ಶ್ರಮ)ಗಳನ್ನು ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಾಗ ಪರಿಗಣನೆಗೆ ತೆಗೆದು ಕೊಳ್ಳಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಆದರೆ ರೈತ ಸಂಘಟನೆಗಳ ಒಂದು ವರ್ಗವು ಸಮಗ್ರ ವೆಚ್ಚ (ಸಿ೨) ವನ್ನು ಪರಿಗಣಿಸಬೇಕು ಎಂದು ಆಗ್ರಹಿಸಿವೆ. ಎ೨ ಪ್ಲಸ್ ಎಫ್ ಎಲ್ ಜೊತೆಗೆ ಸ್ವಂತ ಭೂಮಿ ಮತ್ತು ಬಂಡವಾಳದ ಮೇಲಿನ ಬಾಡಿಗೆ ಮತ್ತು ಬಡ್ಡಿ ಕೂಡಾ ಸೇರಬೇಕು ಎಂಬುದು ಅವುಗಳ ಆಗ್ರಹ. ಪ್ರಧಾನಿಯವರ ಭಾಷಣದ ಬಳಿಕ ನೀತಿ ಆಯೋಗದ ಸದಸ್ಯ ರಮೇಶ ಚಂದ್ ಅವರನ್ನು ಸಂಪರ್ಕಿಸಿದಾಗ, ‘ಪ್ರಧಾನಿಯವರು ಮಾತನಾಡಿದ್ದು ಎ೨ ಪ್ಲಸ್ ಎಫ್ ಎಲ್ ಬಗ್ಗೆ. ಅವರು ವೆಚ್ಚದಲ್ಲಿ ಯಾವುದೆಲ್ಲ ಸೇರುತ್ತವೆ ಎಂಬ ಬಗ್ಗೆ ಹೇಳಿದ್ದಾರೆ. ಇದು ಸಮಗ್ರ ವಿಷಯ. ಬಹಳ ಮಂದಿಗೆ ಇದರ ಬಗ್ಗೆ ಗೊತ್ತಿಲ್ಲ. ಪ್ರಧಾನಿಯವರು ವಿಸ್ತೃತವಾಗಿ ವಿವರಿಸಲು ಯತ್ನಿಸಿದ್ದಾರೆ’ ಎಂದು ಹೇಳಿದರು. ಕೃಷಿ ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ಬಲಪಡಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ನುಡಿದ ಪ್ರಧಾನಿ, ಗ್ರಾಮೀಣ ಮಂಡಿಗಳನ್ನು ಎಪಿಎಂಸಿ ಸಗಟು ಮಾರುಕಟ್ಟೆ ಮತ್ತು ಜಾಗತಿಕ ಮಾರುಕಟ್ಟೆಗಳ ಜೊತೆ ಜೋಡಣೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಯತ್ನಿಸಲಾಗುತ್ತಿದೆ. ಇತ್ತೀಚಿನ ಮುಂಗಡಪತ್ರದಲ್ಲಿ ೨೨,೦೦೦ ಗ್ರಾಮೀಣ ಹಾತ್ ಗಳನ್ನು ಅಗತ್ಯ ಮೂಲಸವಲತ್ತು ಒದಗಿಸಿ ಮೇಲ್ದರ್ಜೆಗೆ ಏರಿಸುವುದರ ಜೊತೆಗೆ ಎಪಿಎಂಸಿ ಮತ್ತು ಇ-ಎನ್ ಎಎಂ ವೇದಿಕೆ ಜೊತೆಗೆ ಜೋಡಿಸಲಾಗುವುದು ಮತ್ತು ತನ್ಮೂಲಕ ಗ್ರಾಮೀಣ ಚಿಲ್ಲರೆ ಕೃಷಿ ಮಾರುಕಟ್ಟೆಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಜೋಡಿಲಾಗುವುದು ಎಂದು ತಿಳಿಸಲಾಗಿದೆ ಎಂದು ಮೋದಿ ಹೇಳಿದರು. ರೈತರು ತಮ್ಮ ಉತ್ಪನ್ನಗಳನ್ನು ರೈತರ ಉತ್ಪಾದನಾ ಸಂಘಟನೆಗಳು (ಫಾರ್ಮರ್ಸ್ ಪ್ರೊಡ್ಯುಸರ್ ಆರ್ಗನೈಸೇಷನ್ಸ್ -ಎಫ್ ಪಿಒ) ಮೂಲಕ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಈ ವಹಿವಾಟನ್ನು ಸಹಕಾರ ಸಂಘಗಳ ಮಾದರಿಯಲ್ಲಿ ಆದಾಯ ತೆರಿಗೆಯಿಂದ ಮುಕ್ತಗೊಳಿಸಲಾಗಿದೆ ಎಂದು ಅವರು ನುಡಿದರು. ಇ-ಮಾರ್ಕೆಟಿಂಗ್ ಪೋರ್ಟಲ್ ನ್ನು ಉದ್ಘಾಟಿಸಿದ ಮೋದಿ ’ಈ ವೇದಿಕೆಯು ಕೃಷಿ ಮಾರುಕಟ್ಟೆ ಸುಧಾರಣೆಯಲ್ಲಿ ಹೊಸ ಅಧ್ಯಾಯವನ್ನು ತೆರೆಯುವುದು. ಇದು ರೈತರಿಗೆ ದೊಡ್ಡ ಪ್ರಮಾಣದಲ್ಲಿ ಲಾಭದಾಯಕವಾಗಲಿದೆ’ ಎಂದು ಹೇಳಿದರು. ಒಳಸುರಿ ವೆಚ್ಚಗಳನ್ನು ಇಳಿಸಲು ಸರ್ಕಾರವು ಮಣ್ಣಿನ ಆರೋಗ್ಯ ಕಾರ್ಡ್ ಮತ್ತು ಬೇವು ಲೇಪಿತ ಯೂರಿಯಾ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ೮೦,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನನೆಗುದಿಯಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಕೃಷಿಕ್ಷೇತ್ರವು ಎದುರಿಸುತ್ತಿರುವ ಸವಾಲುಗಳಿಂದಾಗಿ ರೈತರ ಆದಾಯದ ಮೇಲೆ ಪ್ರತಿಕೂಲ ಪರಿಣಾಮಗಳಾಗಿವೆ. ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಮಗ್ರ ಕ್ರಮಗಳನ್ನು ಕೈಗೊಂಡು ೨೦೨೨ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಮತ್ತು ಅವರ ಬದುಕನ್ನು ಸಹ್ಯವಾಗಿಸಲು ಸರ್ಕಾರ ಬದ್ಧವಾಗಿದೆ. ಜೇನು ಸಾಕಣೆ, ಸೌರ ಬೇಸಾಯ, ಜೈವಿಕ ಕೃಷಿ, ಬಿದಿರು ಕೃಷಿ ಮತ್ತು ಜೈವಿಕ ತ್ಯಾಜ್ಯ ನಿರ್ವಹಣೆ ಮೂಲ ಆದಾಯ ವೃದ್ಧಿಗೆ ಕರೆ ನೀಡಿದ ಪ್ರಧಾನಿ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಕೃಷಿ ತ್ಯಾಜ್ಯವನ್ನು ಕಡಿಮೆ ಮಾಡಿ ಎಂದು ಸಲಹೆ ಮಾಡಿದರು.
2018: ಕ್ವಾಲಾಲಂಪುರ: ’ಸರ್ಪ ಸ್ನೇಹಿ’ ಎಂದೇ ಖ್ಯಾತರಾಗಿದ್ದ ಮಲೇಶ್ಯಾದ ಅಗ್ನಿಶಾಮಕ ಅಧಿಕಾರಿ ಅಬು ಝರೀನ್ ಹುಸೈನ್ ಅವರು ನಾಗರ ಹಾವಿನ ಕಡಿತಕ್ಕೆ ಒಳಗಾದ ನಾಲ್ಕು ದಿನಗಳ ಬಳಿಕ ಅಸು ನೀಗಿದ್ದಾರೆ ಎಂದು ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದರು. ಸಿಟ್ಟಿನಿಂದ ಭುಸುಗುಡುತ್ತಿದ್ದ ನಾಗರ ಹಾವನ್ನು ಹಿಡಿಯುವಂತೆ ಮಾರ್ಚ್ ೧೨ರ ಸೋಮವಾರ ಬಂದಿದ್ದ ಕರೆಗೆ ಸ್ಪಂದಿಸಿದ್ದ ಅಬು ಝರೀನ್ ಅವರು ಅದನ್ನು ಹಿಡಿಯುವ ಯತ್ನದಲ್ಲಿದ್ದಾಗ ಅದರ ಕಡಿತಕ್ಕೆ ಒಳಗಾಗಿದ್ದರು. ಮಲೇಶ್ಯಾದ ಕೇಂದ್ರ ಭಾಗವಾದ ಪಹಂಗ್ ನಲ್ಲಿ ಸರ್ಪ ಕಡಿತಕ್ಕೆ ಒಳಗಾದ ಅಬು, ಜೀವನ್ಮರಣ ಹೋರಾಟದ ಬಳಿಕ ಶುಕ್ರವಾರ ಹಾವಿನ ವಿಷದ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಭಯಂಕರ ವಿಷದ ಹಾವುಗಳನ್ನು ಹಿಡಿಯುವ ಕಲೆಯನ್ನು ಕರತಲಾಮಕ ಮಾಡಿಕೊಂಡಿದ್ದ ಅಬು, ಈ ಸಾಮರ್ಥ್ಯದ ಕಾರಣವೇ ಮಲೇಶ್ವಾದಲ್ಲಿ ತಾರಾ ವರ್ಚಸ್ಸನ್ನು ಗಳಿಸಿದ್ದರು. ನಾಗರ ಹಾವಿಗೆ ಮುತ್ತು ಕೊಡುವುದು, ಬಾಯಿಯಲ್ಲಿ ಅವುಗಳನ್ನು ಇಟ್ಟುಕೊಳ್ಳುವುದೇ ಮುಂತಾದ ಅಬು ಝರೀನ್ ಅವರ ’ಸರ್ಪದ ಜೊತೆಗಿನ ಆಟಗಳ’ ಫೋಟೋ ಹಾಗೂ ವಿಡಿಯೋಗಳು ಅಂತರ್ಜಾಲ ಮತ್ತು ಟಿವಿಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಪರಿಣಾಮವಾಗಿ ಅವರು ಎಲ್ಲೆಡೆ ಖ್ಯಾತಿ ಗಳಿಸಿದ್ದರು. ಕಳೆದ ವರ್ಷ ಪ್ರತಿಭಾವಂತರನ್ನು ಪರಿಚಯಿಸುವ ’ಗಾಟ್ ಟ್ಯಾಲೆಂಟ್’ ಟಿವಿ ಶೋದಲ್ಲಿ ಹಾವಿನ ಹೆಡೆಗೆ ತಮ್ಮ ಮೂಗನ್ನು ಉಜ್ಜುವ ಪ್ರದರ್ಶನ ನೀಡುವ ಮೂಲಕ ಅವರು ವ್ಯಾಪಕ ಪ್ರಸಿದ್ಧಿ ಪಡೆದಿದ್ದರು. ಕ್ವಾಲಾಲಂಪುರದ ಅಗ್ನಿ ಶಾಮಕ ಇಲಾಖೆಯ ನಿರ್ದೇಶಕ ಖಿರುದ್ದೀನ್ ಡ್ರಹ್ಮಾನ್ ಅವರು ’ಅಗ್ನಿಶಾಮಕ ದಳದ ಕೆಲಸದ ಬಳಿಕ ಸಾರ್ವಜನಿಕರಿಂದ ಹಾವು ಹಿಡಿಯಲು ಕರೆ ಬಂದರೆ ಸಾಕು ಅಬು ಅವರು ತಮ್ಮ ಪತ್ನಿಯ ಜೊತೆಗೇ ಧಾವಿಸುತ್ತಿದ್ದರು’ ಎಂದು ಹೇಳಿದರು. ‘ಅವರು ಹಿಡಿದದ್ದು ವಿಷ ಉಗುಳುವ ನಾಗರವಾಗಿತ್ತು. ಈ ನಾಗರ ಹಾವಿನ ಏಕೈಕ ಕಡಿತಕ್ಕೆ ಆನೆಯನ್ನೇ ಕೊಲ್ಲುವ ಶಕ್ತಿ ಇದೆ’ ಎಂದು ಅವರು ನುಡಿದರು. ‘ನಾವು ಪ್ರತಿಭಾವಂತ ಅಧಿಕಾರಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಇದೊಂದು ದುರಂತ ಘಟನೆ’ ಎಂದು ಅವರು ಹೇಳಿದರು. ಮಲೇಶ್ಯಾದಲ್ಲಿ ವಿಷಪೂರಿತ ಹಾವುಗಳಿರುವ ಪ್ರದೇಶದದಲ್ಲಿ ಆಗಾಗ ಕಾಣಿಸಿಕೊಳ್ಳುವ ಸರ್ಪಗಳನ್ನು ಹಿಡಿಯಲು ಅಗ್ನಿಶಾಮಕ ಸಿಬ್ಬಂದಿಯನ್ನು ಕಳುಹಿಸಿವುದು ಸಾಮಾನ್ಯ. ಅಬು ಝರೀನ್ ಅವರು ಕಿರಿಯ ಅಧಿಕಾರಿಗಳಿಗೆ ಹಾವು ಹಿಡಿಯುವ ವಿದ್ಯೆಯನ್ನು ಹೇಳಿಕೊಡುವ ಮೂಲಕವೂ ಪರಿಚಿತರಾಗಿದ್ದರು. ಹಾವು ಹಿಡಿಯುವ ಕಲೆಯನ್ನು ಝರೀನ್ ತಮ್ಮ ತಂದೆಯಿಂದ ಕಲಿತಿದ್ದರು. ತಮ್ಮ ತಂದೆಯನ್ನು ’ಹಾವಾಡಿಗ’ ಎಂದೇ ಕರೆಯುತ್ತಿದ್ದ ಅಬು ೨೦೦೭ರಲ್ಲಿ ವಿಷಜಂತುಗಳನ್ನು ಪಳಗಿಸುವ ಬಗ್ಗೆ ತರಬೇತಿ ನೀಡಲು ಆರಂಭಿಸಿದ್ದರು. ಕೆಲವು ವರ್ಷಗಳ ಹಿಂದೊಮ್ಮೆ ಅವರು ನಾಗರ ಹಾವಿನ ಕಡಿತಕ್ಕೆ ಒಳಗಾಗಿ ಎರಡು ದಿನ ಪ್ರಜ್ಞಾಹೀನರಾಗಿದ್ದರು. ಎರಡು ವರ್ಷಗಳ ಹಿಂದೆ ಅಂತರ್ಜಾಲವೊಂದು ಅಬು ಝರೀನ್ ಅವರು ತಮ್ಮ ಪೂರ್ವ ಜನ್ಮದ ಗೆಳತಿ ಹಾವಾಗಿ ಜನಿಸಿದೆ ಎಂಬ ನಂಬಿಕೆಯಿಂದ ಸರ್ಪವನ್ನು ಮದುವೆಯಗಿದ್ದಾರೆ ಎಂದು ತಪ್ಪಾಗಿ ಮಾಡಿದ ವರದಿಯಿಂದಾಗಿ ಅವರು ಅಂತರ್ಜಾಲ ತಾರೆಯಾಗಿ ಬಿಟ್ಟಿದ್ದರು. ಝರೀನ್ ಅವರ ಪಾರ್ಥಿವ ಶರೀರವನ್ನು ಪೂರ್ವ ಕೆಲಾಂಟನ್ ರಾಜ್ಯದಲ್ಲಿನ ಅವರ ಹುಟ್ಟೂರಿನಲ್ಲಿ ದಫನ ಮಾಡಲಾಯಿತು ಎಂದು ವರದಿ ತಿಳಿಸಿದೆ.
2018: ನವದೆಹಲಿ:
ನಲವತ್ತು ವರ್ಷಗಳ ಹಿಂದೆ ಎಲ್ಲರನ್ನೂ ದಂಗುಬಡಿಯುವಂತೆ ಮಾಡಿದ ಇಂದಿರಾಜಿ (ಇಂದಿರಾ ಗಾಂದಿ) ಅವರ ಚಿಕ್ಕಮಗಳೂರಿನ ವಿಜಯ ಭಾರತದ ರಾಜಕೀಯವನ್ನೇ ಬದಲಾಯಿಸಿತು. ನಮ್ಮ ಪಕ್ಷವು ಮತ್ತೊಮ್ಮೆ ಇಂತಹುದೇ ಸಾಧನೆಯನ್ನು ಮಾಡಬೇಕು ಎಂದು ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಮಹಾಧಿವೇಶನವನ್ನು (ಎಐಸಿಸಿ ಅಧಿವೇಶನ) ಉದ್ದೇಶಿಸಿ ಮಾತನಾಡಿದ ಅವರು ’ಕಾಂಗ್ರೆಸ್ ವಿಜಯ ರಾಷ್ಟ್ರದ ವಿಜಯವಾಗುತ್ತದೆ. ಅದು ನಮ್ಮಲ್ಲಿನ ಪ್ರತಿಯೊಬ್ಬರ ವಿಜಯವಾಗುತ್ತದೆ. ಕಾಂಗ್ರೆಸ್ ಎಂಬುದು ರಾಜಕೀಯ ಪದವಲ್ಲ, ಅದೊಂದು ಚಳವಳಿ’ ಎಂದು ಹೇಳಿದರು. ಅತ್ಯಂತ ಸವಾಲಿನ ಸಮಯದಲ್ಲಿ ಪಕ್ಷದ ಅಧ್ಯಕ್ಷರಾಗಿ ಹೊಣೆಗಾರಿಕೆ ಹೊತ್ತುಕೊಂಡದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಅಭಿನಂದಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದ ಸೋನಿಯಾ ಗಾಂಧಿ, ತಾವು ರಾಜಕೀಯಕ್ಕೆ ಬಂದ ಸನ್ನಿವೇಶವನ್ನು ನೆನಪಿಸಿದರು. ‘ನಿಮಗೆಲ್ಲರಿಗೂ ನಾನು ಹೇಗೆ ಮತ್ತು ಎಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಕ್ಷೇತ್ರಕ್ಕೆ ಬಂದೆ ಎಂಬುದು ಗೊತ್ತು. ಪಕ್ಷವು ದುರ್ಬಲವಾಗುತ್ತಿದೆ ಎಂಬ ದುಗುಡ ಕಾಂಗ್ರೆಸ್ಸಿಗರ ಮನಸ್ಸನ್ನು ಆವರಿಸಿದ್ದುದನ್ನು ಗಮನದಲ್ಲಿ ಇಟ್ಟುಕೊಂಡೇ ನಾನು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದೆ’ ಎಂದು ಕಾಂಗ್ರೆಸ್ ನಾಯಕಿ ನುಡಿದರು. ಮೋದಿ ಸರ್ಕಾರವು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಯೋಜನೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಟೀಕಿಸಿದರು. ‘ಇಂದು ಮೋದಿ ಸರ್ಕಾರವು (ಯುಪಿಎ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ) ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ದುರ್ಬಲಗೊಳಿಸುತ್ತಿರುವುದನ್ನು ಕಂಡು ನನಗೆ ಅತೀವ ದುಃಖವಾಗುತ್ತಿದೆ’ ಎಂದು ಯುಪಿಎ ಅಧ್ಯಕ್ಷೆ ನುಡಿದರು. ‘ಈ ಸೊಕ್ಕಿನ ಸರ್ಕಾರ ಕಳೆದ ೪ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಶಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಬಗ್ಗು ಬಡಿಯಲು ಸಾಧ್ಯವಿಲ್ಲ. ಅದಕ್ಕೆ ಈ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲ’ ಎಂದು ಸೋನಿಯಾ ಗಾಂಧಿ ಹೇಳಿದರು. ಹಾಲಿ ಸರ್ಕಾರದ ಕುರಿತ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಪ್ರಸ್ತಾಪಿಸಿದ ಸೋನಿಯಾ ’ನಾವು ಪ್ರಧಾನಿ ಮತ್ತು ಅವರ ಜೊತೆಗಿನ ವ್ಯಕ್ತಿಗಳ ವಂಚನೆ ಮತ್ತು ಭ್ರಷ್ಟಾಚಾರವನ್ನು ಸಾಕ್ಷ್ಯಾಧಾರಗಳೊಂದಿಗೆ ಬಯಲು ಮಾಡುತ್ತಿದ್ದೇವೆ’ ಎಂದು ಸೋನಿಯಾ ಗಾಂಧಿ ನುಡಿದರು. ಎಲ್ಲೆಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳು ಇವೆಯೋ ಅಲ್ಲಿ ನಮ್ಮ ಗೆಳೆಯರು ಅರಾಜಕತೆ ಮತ್ತು ಹಿಂಸಾಚಾರ ವಿರೋಧಿ ನಿಲುವು ತಳೆದಿದ್ದಾರೆ. ಕಾಂಗ್ರೆಸ್ ಅನ್ಯಾಯದ ವಿರುದ್ಧದ ನಿಲುವನ್ನು ತಳೆಯುತ್ತದೆ ಮತ್ತು ಅನ್ಯಾಯದ ವಿರುದ್ಧ ದನಿ ಎತ್ತುತ್ತದೆ ಎಂದು ಅವರು ಹೇಳಿದರು. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮತ್ತು ’ನ ಖಾವೋಂಗ, ನ ಖಾನೇ ದೂಂಗಾ’
(ಎಲ್ಲರ ಸಹಯೋಗ, ಎಲ್ಲರ ವಿಕಾಸ, ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ) ಎಂಬ ಹಾಲಿ ಸರ್ಕಾರದ ಭರವಸೆಗಳು ’ನಾಟಕ’ ಮತ್ತು ಮತಗಳಿಸುವ ’ಗಿಮಿಕ್’ಗಳು ಹೊರತು ಬೇರೇನೂ ಅಲ್ಲ’ ಎಂದು ಹೇಳುವುದರೊಂದಿಗೆ ಸೋನಿಯಾ ಗಾಂಧಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು. ಭಾಷಣ ಮುಕ್ತಾಯಗೊಳಿಸುತ್ತಿದ್ದಂತೆಯೇ ಸೋನಿಯಾ ಗಾಂಧಿ ಅವರನ್ನು ಅಲಂಗಿಸಿ ಅಭಿನಂದಿಸಿದ ರಾಹುಲ್ ಗಾಂಧಿ ಅವರು ಮಾಜಿ ಅಧ್ಯಕ್ಷೆಯನ್ನು ಅವರ ಆಸನಕ್ಕೆ ಕರೆದೊಯ್ದರು. ಸೋನಿಯಾ ಗಾಂಧಿ ಅವರಿಗಿಂತ ಮೊದಲು ಶಶಿ ತರೂರ್, ಸಚಿನ್ ಪೈಲಟ್ ಮತ್ತಿತರರು ಭಾಷಣ ಮಾಡಿದರು. ರಾಹುಲ್ ಗಾಂಧಿ ನೇತೃತ್ವದಲಿ ನಾವೀಗ ಉಪ ಚುನಾವಣೆಗಳನ್ನು ಗೆಲ್ಲುತ್ತಿದ್ದೇವೆ. ಶೀಘ್ರದಲ್ಲೇ ನಾವು ರಾಜ್ಯಗಳನ್ನೂ ಗೆಲ್ಲಲಿದ್ದೇವೆ ಎಂದು ಸಚಿನ್ ಪೈಲಟ್ ನುಡಿದರು. ‘ನಮಗೆ ಸವಾಲು ಎಸೆಯುವವರಿಗೆ ನಾನು ಹೇಳುತ್ತೇನೆ ॒ನಾವೀಗ ರಾಹುಲ್ ಗಾಂಧಿ ನಾಯಕತ್ವದಲ್ಲಿ ಉಪಚುನಾವಣೆಗಳನ್ನು ಗೆದ್ದಿದ್ದೇವೆ. ಶೀಘ್ರದಲ್ಲೇ ನಾವು ರಾಜ್ಯಗಳನ್ನು ಗೆಲ್ಲಲಿದ್ದೇವೆ ಮತ್ತು ೨೦೧೯ರ ಮಹಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಲಿದೆ’ ಎಂದು ಸಚಿನ್ ಪೈಲಟ್ ಹೇಳಿದರು. ‘ಕಾಂಗ್ರೆಸ್ ಮುಕ್ತ ಭಾರತದ ಮಂತ್ರ ಜಪಿಸುವವರನ್ನು ರಾಷ್ಟ್ರದ ಜನತೆ ಪರಾಭವಗೊಳಿಸಲಿದ್ದಾರೆ. ಕಾಂಗ್ರೆಸಿನ ಹಾಲಿ ಯುವಕರು ಪಕ್ಷದ ನಾಯಕರಾಗಿ ಭವಿಷ್ಯಕ್ಕೆ ಹೊಣೆಗಾರರಾಗುವರು’ ಎಂದು ಅವರು ಹೇಳಿದರು. ಹಳೆಯ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಆಗ್ರಹ:
ವಿದ್ಯುನ್ಮಾನ
ಮತಯಂತ್ರಗಳನ್ನು (ಇವಿಎಂ) ಜನರ ತೀರ್ಪಿಗೆ ವಿರುದ್ಧವಾಗಿ ದುರುಪಯೋಗಿಸಲಾಗುತ್ತಿದೆ ಎಂಬ ಭೀತಿ ರಾಜಕೀಯ ಪಕ್ಷಗಳು ಮತ್ತು ಜನರಲ್ಲಿ ಇದೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಖಚಿತ ಪಡಿಸಲು ಚುನಾವಣಾ ಆಯೋಗವು ಬಹುತೇಕ ದೊಡ್ಡ ಪ್ರಜಾಸತ್ತೆಗಳು ಅನುಸರಿಸುತ್ತಿರುವಂತೆ ಹಳೆಯ ಪೇಪರ್ ಬ್ಯಾಲೆಟ್ ಪದ್ಧತಿಯನ್ನೇ ಮತ್ತೆ ಜಾರಿಗೆ ತರಬೇಕು ಎಂಬ ರಾಜಕೀಯ ನಿರ್ಣಯವನ್ನೂ ಅಧಿವೇಶನವು ಅಂಗೀಕರಿಸಿತು.
2018: ಮಾಸ್ಕೋ:
ಬ್ರಿಟಿನ್ನಿನಲ್ಲಿನ ರಷ್ಯಾದ ಮಾಜಿ ಗುಪ್ತಚರನ ವಿರುದ್ಧ ನರ ವಿಷ ದಾಳಿ ಹಿನ್ನೆಲೆಯಲ್ಲಿ ರಷ್ಯದ ೨೩ ರಾಜತಾಂತ್ರಿಕರ ಉಚ್ಚಾಟನೆ ಕ್ರಮದ ಸೇಡು ತೀರಿಸಲು ರಷ್ಯಾ ಶನಿವಾರ ೨೩ ಮಂದಿ ಬ್ರಿಟಿಷ್ ರಾಜತಾಂತ್ರಿಕರನ್ನು ಉಚ್ಚಾಟಿಸಿತು. ೨೩ ಮಂದಿ ಬ್ರಿಟಿಷ್ ರಾಜತಾಂತ್ರಿಕರನ್ನು ಉಚ್ಚಾಟಿಸುತ್ತಿರುವುದಾಗಿ ಪ್ರಕಟಿಸಿದ ರಷ್ಯಾದ ವಿದೇಶಾಂಗ ಸಚಿವಾಲಯವು, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಸಹಕಾರದ ಸರ್ಕಾರಿ ಸಂಸ್ಥೆಯಾದ ಬ್ರಿಟಿಷ್ ಕೌನ್ಸಿಲ್ ಕಚೇರಿ ಮುಚ್ಚಲೂ ಆಜ್ಞಾಪಿಸಲಾಗಿದೆ ಜೊತೆಗೆ ಸೈಂಟ್ ಪೀಟರ್ಸ್ ಬರ್ಗ್ನಲ್ಲಿ ಬ್ರಿಟಿಷ್ ಕಾನ್ಸುಲೇಟ್ ಪುನಾರಂಭಿಸಲು ಮಾಡಿಕೊಳ್ಳಲಾದ ಒಪ್ಪಂದವನ್ನೂ ರದ್ದು ಪಡಿಸಲಾಗಿದೆ ಎಂದೂ ಹೇಳಿತು. ರಾಜತಾಂತ್ರಿಕರು ಒಂದು ವಾರದ ಒಳಗಾಗಿ ರಾಷ್ಟ್ರ ಬಿಟ್ಟು ತೆರಳಬೇಕು ಎಂದೂ ಅದು ಆಜ್ಞಾಪಿಸಿತು. ರಷ್ಯಾಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಿತ್ರ ವಿರೋಧಿ ಕ್ರಮಗಳನ್ನು ಬ್ರಿಟನ್ ಕೈಗೊಂಡರೆ ರಷ್ಯಾ ಕೂಡಾ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿಕೆ ಎಚ್ಚರಿಸಿತು. ಬ್ರ್ರಿಟಿಷ್ ರಾಯಭಾರಿ ಲಾರೀ ಬ್ರಿಸ್ಟೋವ್ ಅವರನ್ನು ಶನಿವಾರ ಬೆಳಗ್ಗೆ ಕರೆಸಿಕೊಂಡ ವಿದೇಶಾಂಗ ಸಚಿವಾಲಯವು ಬ್ರಿಟನ್ ವಿರುದ್ಧ ರಷ್ಯಾ ಕೈಗೊಂಡಿರುವ ಕ್ರಮಗಳನ್ನು ತಿಳಿಸಿತು. ರಷ್ಯಾದ ೨೩ ಮಂದಿ ರಾಜತಾಂತ್ರಿಕರನ್ನು ಉಚ್ಚಾಟಿಸಿರುವುದಾಗಿಯೂ, ರಷ್ಯಾ ಜೊತೆಗಿನ ಉನ್ನತ ಮಟ್ಟದ ದ್ವಿಪಕ್ಷೀಯ ಬಾಂಧವ್ಯಗಳನ್ನು ಕಡಿತಗೊಳಿಸಿರುವುದಾಗಿಯೂ ಬ್ರಿಟಿಷ್ ಪ್ರಧಾನಿ ಥೆರೇಸಾ ಮೇ ಈ ವಾರ ಪ್ರಕಟಿಸಿದ್ದರು. ಮಾರ್ಚ್ ೪ರಂದು ಬ್ರಿಟನ್ನಿನಲ್ಲಿ ಇರುವ ರಷ್ಯಾದ ಮಾಜಿ ಗುಪ್ತಚರ ಸೆರ್ಗೀ ಸ್ಕಿಪಾಲ್ ಮತ್ತು ಅವರ ಪುತ್ರಿಯ ಮೇಲೆ ನಡೆದ ನರವಿಷ ದಾಳಿ ಘಟನೆಯ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ರಷ್ಯಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದೆ. ಆಸ್ಪತ್ರೆಯಲ್ಲಿರುವ ಸ್ಕಿಪಾಲ್ ಮತ್ತು ಅವರ ಪುತ್ರಿ ಸ್ಥಿತಿ ಗಂಭೀರವಾಗಿದೆ. ಈ ಮಧ್ಯೆ ಸ್ಕ್ರಿಪಾಲ್ ಮೇಲಿನ ದಾಳಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರೇ ಸ್ವತಃ ಆದೇಶ ನೀಡಿದ್ದಾರೆ ಎಂದು ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಆಪಾದಿಸಿದ್ದು, ಪುಟಿನ್ ವಕ್ತಾರರು ಆರೋಪವನ್ನು ಅಲ್ಲಗಳೆದಿದ್ದಾರೆ. ಇನ್ನೊಂದು ಬೆಳವಣಿಗೆಯಲ್ಲಿ ಲಂಡನ್ ಮೂಲದ ರಷ್ಯಾದ ವಾಣಿಜ್ಯೋದ್ಯಮಿ ನಿಕೋಲಾಯಿ ಗ್ಲುಶ್ಕೋವ್ ಅವರು ಈ ವಾರ ಸಾವನ್ನಪ್ಪಿರುವ ಬಗ್ಗೆ ರಷ್ಯಾ ಸಂಶಯ ವ್ಯಕ್ತ ಪಡಿಸಿದ್ದು ತನ್ನದೇ ತನಿಖೆಗೆ ಆಜ್ಞಾಪಿಸಿದೆ. ಬ್ರಿಟಿಷ್ ಪೊಲೀಸರೂ ಕತ್ತು ಬಿಗಿಯಲ್ಪಟ್ಟ ಕಾರಣ ನಿಕೋಲಾಯಿ ಅವರು ಸತ್ತಿದ್ದಾರೆ ಎಂದು ಹೇಳಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಇದರ ಜೊತೆಗೆ ಐರೋಪ್ಯ ಒಕ್ಕೂಟದ ರಾಜತಾಂತ್ರಿಕರು ಕೂಡಾ ಸ್ಕ್ರಿಪಾಲ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪುಟಿನ್ ಕೈವಾಡದ ಬಗ್ಗೆ ಶಂಕಿಸಿದ್ದು, ಸೋಮವಾರ ಸಭೆ ಸೇರಿ ರಷ್ಯಾದಲ್ಲಿ ನಡೆಯಲಿರುವ ವಿಶ್ವ ಕಪ್ ಕ್ರೀಟಾಕೂಟವನ್ನು ಬಹಿಷ್ಕರಿಸಲು ಕರೆ ನೀಡುವ ಬಗ್ಗೆ ಚರ್ಚಿಸಲಿದ್ದಾರೆ. ಬ್ರಿಟಷ್ ಪ್ರಧಾನಿ ಥೆರೇಸಾ ಮೇ ಅವರು ರಷ್ಯಾವನ್ನು ಶಿಕ್ಷಿಸುವುದಕ್ಕಾಗಿ ಜಾಗತಿಕ ಮೈತ್ರಿಕೂಟ ರಚಿಸುವ ಯತ್ನವನ್ನೂ ನಡೆಸಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿದವು.
2018: ನವದೆಹಲಿ: ೨೦೧೯ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸಿ, ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗುವುದು ಖಚಿತ, ಅವರು ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಗುಡುಗಿದರು. ೨೦೧೯ರಲ್ಲಿ ಬಿಜೆಪಿ - ಆರೆಸ್ಸಸ್ಸನ್ನು ಸೋಲಿಸಲು ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಸಹಕರಿಸುವ ಪ್ರಗತಿಪರ ತಂತ್ರ ರೂಪಿಸುವ ನಿರ್ಧಾರವನ್ನು ಕಾಂಗ್ರೆಸ್ ಪೂರ್ಣಾಧಿವೇಶನದಲ್ಲಿ ಕೈಗೊಳ್ಳಲಾಯಿತು. ಜೊತೆಗೇ ವಿದ್ಯುನ್ಮಾನ ಮತ ಯಂತ್ರಗಳ ಬದಲಿಗೆ ಹಿಂದಿದ್ದ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಮರಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು. ೨೦೧೯ರ ಮಹಾ ಚುನಾವಣೆಗೆ ಮುನ್ನವೇ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಸಾಧಿಸುವ ಸಾಧ್ಯತೆಯ ಬಗ್ಗೆಯೂ ಅಧಿವೇಶನದಲ್ಲಿ ಚಿಂತನೆ ನಡೆಸಿತು. ರಾಷ್ಟ್ರ ನಿರ್ಮಾತೃಗಳ ದೂರದರ್ಶಿತ್ವವನ್ನು ಸಾಕಾರಗೊಳಿಸಲು ಪುನರುಜ್ಜೀವನ ಪಡೆದ ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಸಾಧ್ಯ ಎಂಬ ಕರಡು ನಿರ್ಣಯವನ್ನು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಂಡಿಸಿದರು. ಮೂರು ದಿನಗಳ ಕಾಂಗ್ರೆಸ್ ಮಹಾಧಿವೇಶನದಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಮುಂದಿರುವ ಸವಾಲುಗಳನ್ನು ಹಾಗೂ ಸಾಧಿಸಬೇಕಾದ ಗುರಿಗಳನ್ನು ಪಟ್ಟಿ ಮಾಡಿದರು. ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಉಜ್ವಲಗೊಳಿಸುವ ಪ್ರಯತ್ನದಲ್ಲಿ ಎಲ್ಲ ಕಾರ್ಯಕರ್ತರು ನಿಷ್ಠೆಯಿಂದ ಕೈಜೋಡಿಸಿ ಪರಿಶ್ರಮಿಸಬೇಕು ಎಂದು ರಾಹುಲ್ ಕರೆ ನೀಡಿದರು. ಕೇಂದ್ರದಲ್ಲಿನ ದುರಾಡಳಿತಕ್ಕಾಗಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ರಾಹುಲ್ ಗಾಂಧಿ ಅವರು ಕಟು ವಾಕ್ ಪ್ರಹಾರ ನಡೆಸಿದರು. ಬಿಜೆಪಿಯು ವಿಭಜನೆಯ ರಾಜಕೀಯ ಮಾಡುತ್ತಿದ್ದು, ದೇಶವನ್ನು ಒಡೆಯಲು ಕೋಪ ತಾಪವನ್ನು ಬಿತ್ತುತ್ತಿದೆ. ಆದರೆ ಆ ರೀತಿ ಕಾಂಗ್ರೆಸ್ ಎಂದಿಗೂ ಮಾಡುವುದಿಲ್ಲ. ಕಾಂಗ್ರೆಸ್ ಪ್ರೀತಿಯಿಂದ ಕೆಲಸ ಮಾಡುತ್ತದೆ ಎಂದು ಅವರು ನುಡಿದರು. ಬಿಜೆಪಿ ವಿಭಜನೆ ರಾಜಕೀಯಕ್ಕೆ ಮಹತ್ವ ನೀಡುತ್ತಿದೆ. ನಿರುದ್ಯೋಗ, ರೈತರ ಸಂಕಟದಂತಹ ಪ್ರಮುಖ ವಿಚಾರಗಳನ್ನು ನಿರ್ಲಕ್ಷಿಸಿದೆ. ಯಾವುದೇ ಜಾತಿ, ಧರ್ಮವನ್ನು ನೋಡದೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ರಾಹುಲ್ ಹೇಳಿದರು. ದೇಶದಲ್ಲಿ ಜನ ಅಸಂತೃಪ್ತಿ, ಆಕ್ರೋಶದಿಂದ ಇದ್ದಾರೆ. ಹೊಸ ದಾರಿಗಾಗಿ ಎದುರು ನೋಡುತ್ತಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಹೊಸ ಮಾರ್ಗ ತೋರಲಿದೆ. ಕಾಂಗ್ರೆಸ್ ಮತ್ತು ಪ್ರತಿಪಕ್ಷ (ಬಿಜೆಪಿ)ಕ್ಕೆ ಇರುವ ವ್ಯತ್ಯಾಸ ಎಂದರೆ, ಅವರು ಕೋಪ ಬಳಸಿದರೆ, ನಾವು ಸಂಗಡಿಗರ ಮೇಲೆ ಪ್ರೀತಿ ತೋರುತ್ತೇವೆ. ನಾವು ಪ್ರೀತಿಯಿಂದ ಕೆಲಸ ಮಾಡುತ್ತಿದ್ದೇವೆ. ದೇಶವನ್ನು ಒಗ್ಗೂಡಿಸಿ ಮುಂದಕ್ಕೆ ನಡೆಸುವುದು ಹಸ್ತದ ಕೆಲಸ ಎಂದು ರಾಹುಲ್ ಗಾಂಧಿ ನುಡಿದರು. ಶುಕ್ರವಾರ ಆರಂಭವಾಗಿರುವ ಮೂರು ದಿನಗಳ ಅಧಿವೇಶನದಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ನೇತಾರದು, ಪಕ್ಷದ ಮುಖಂಡರು ಪಾಲ್ಗೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಮಹಾಧಿವೇಶನ ಇದು.
2009: ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣ ಮಾಡಿದ್ದಕ್ಕಾಗಿ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಹಾಗೂ ಜನಪ್ರತಿನಿಧಿಗಳ ಕಾಯ್ದೆ (ಆರ್‌ಪಿಎ) ಅಡಿ ಬರ್ಕೆರಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ವರುಣ್ ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡರು.
2009: ನಾಸಾದ ಸ್ಪಿಜರ್ ಖಗೋಳ ದೂರದರ್ಶಕ ರವಾನಿಸಿದ ಗ್ಯಾಲೆಕ್ಸಿ (ನಕ್ಷತ್ರಪುಂಜ) 'ಎನ್‌ಜಿಸಿ 6240'ಗಳ ಅಪೂರ್ವ ಸಮ್ಮಿಲನ ದೃಶ್ಯವನ್ನು ಎಪಿ ಪ್ರಕಟಿಸಿತು.
2009: ಎಲ್. ಕೆ. ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ, ಲೋಕಸಭಾ ಚುನಾವಣೆಯಲ್ಲಿ ಯುಪಿಎಗೆ ತೀವ್ರ ಪೈಪೋಟಿ ನೀಡಲು ಹೊರಟ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿತು. ಅರುಣ್ ಜೇಟ್ಲಿ -ರಾಜನಾಥ್ ಸಿಂಗ್ ವಿರಸ ಹಾಗೂ ವರುಣ್ ಗಾಂಧಿ ಅವರ ಮುಸ್ಲಿಮ್ ವಿರೋಧಿ ಪ್ರಚೋದನಾತ್ಮಕ ಭಾಷಣಗಳು ಪಕ್ಷವನ್ನು ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿಸಿದವು. ಕೇಂದ್ರೀಯ ಚುನಾವಣಾ ಸಮಿತಿಯ (ಸಿಇಸಿ) ಸಭೆಗೆ ಸತತ ಎರಡನೇ ಬಾರಿಗೆ ಗೈರು ಹಾಜರಾದ ಜೇಟ್ಲಿ ಪಕ್ಷದ ಹಿರಿಯ ನಾಯಕರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದರು.
2009: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಾಗೂ ಕೊಲೆ ಮಾಡಿದ ಆರೋಪಿಗಳೂ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತರಾಗಿದ್ದ ಒಟ್ಟು 46 ಆರೋಪಿಗಳಿಗೆ 22 ನಿಮಿಷಗಳಲ್ಲಿ ಜಾಮೀನು ನೀಡಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ದಾಖಲೆ ಸೃಷ್ಟಿಸಿದರು. ಜಾಮೀನು ಪ್ರಕರಣಗಳನ್ನು ಶೀಘ್ರದಲ್ಲಿ ವಿಲೇ ಮಾಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಆರು ಮಂದಿ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಅದರಲ್ಲಿ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರದ್ದೇ ಈ ದಾಖಲೆ.
2009: ಮೇಘಾಲಯ ವಿಧಾನಸಭೆಯಲ್ಲಿ ಸ್ಪೀಕರ್ ಬಿ.ಎಂ. ಲಾನೊಂಗ್ ಸರ್ಕಾರದ ಪರವಾಗಿ ಮತ ಚಲಾಯಿಸಿದರು. ಪರಿಣಾಮವಾಗಿ ಮುಖ್ಯಮಂತ್ರಿ ಡೊಂಕುಪರ್ ರಾಯ್ ವಿಶ್ವಾಸಮತ ಗೆದ್ದರು. ಇದರಿಂದಾಗಿ ಮೇಘಾಲಯದಲ್ಲಿ ಉದ್ಭವಿಸಿದ್ದ ರಾಜಕೀಯ ಬಿಕ್ಕಟ್ಟು ತಾತ್ಕಾಲಿಕವಾಗಿ ಕೊನೆಗೊಂಡಿತು.
2008: ಕರಡಿ ಕೈ ಹಿಡಿತಕ್ಕೆ ಸಿಲುಕಿದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು, ಮತ್ತೆ 951 ಅಂಶಗಳ ಭಾರಿ ಕುಸಿತವನ್ನು ಕಂಡಿತು. ಜಾಗತಿಕ ಅರ್ಥ ವ್ಯವಸ್ಥೆಗೆ ಸ್ಪಂದಿಸಿದ ದೇಶದ ಷೇರು ಸೂಚ್ಯಂಕವು, ಹೂಡಿಕೆದಾರರಲ್ಲಿ ಭೀತಿ ಮೂಡಿಸಿತು. 15060 ಅಂಶಗಳಿಂದ ಆರಂಭವಾದ ವಹಿವಾಟು, ಶೇ 6.03 ರಷ್ಟು ಅಂದರೆ 951 ಅಂಶಗಳನ್ನು ಕಳೆದುಕೊಂಡು ದಿನದ ಅಂತ್ಯದ ವಹಿವಾಟನ್ನು 14809 ಅಂಶಗಳಿಗೆ ಕೊನೆಗೊಳಿಸಿತು.
2008: ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಯ (ಸಂಸತ್) ಕೆಳಮನೆಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಒಟ್ಟು 342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 328 ಸದಸ್ಯರಿಗೆ ನಿರ್ಗಮನ ಸ್ಪೀಕರ್ ಚೌಧುರಿ ಅಮೀರ್ ಹುಸೇನ್ ಪ್ರಮಾಣ ವಚನ ಬೋಧಿಸಿದರು. ಆನಂತರ ಮೃತ ನಾಯಕಿ ಬೆನಜೀರ್ ಭುಟ್ಟೋ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
2008: ವಿಜಯವಾಡ ಜಿಲ್ಲೆಯ ಮುರಗಲ್ಲು ಗ್ರಾಮದಲ್ಲಿ ಹತ್ತು ಅಡಿ ಉದ್ದದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಗೋಪಿ ಎಂಬ ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕೈಗೊಂಡ ಕ್ರಮದಿಂದಾಗಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಬಾವಿಯೊಳಗಿದ್ದ ಬಾಲಕನನ್ನು ಯಾವುದೇ ಅಪಾಯವಿಲ್ಲದೇ ಮೇಲಕ್ಕೆತ್ತಲು ಸಾಧ್ಯವಾಯಿತು.
2008: ಹದಿನೆಂಟು ವರ್ಷಗಳ ಹಿಂದೆ ಪಾಕಿಸ್ಥಾನದಲ್ಲಿ ನಾಲ್ಕು ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಭಾರತದ ಸರಬ್ಜಿತ್ ಸಿಂಗ್ ಗೆ ಕ್ಷಮಾದಾನ ನೀಡಬೇಕೆಂದು ಪಾಕಿಸ್ಥಾನ ಸರ್ಕಾರಕ್ಕೆ ಭಾರತ ಮನವಿ ಮಾಡಿತು. ಸರಬ್ಜಿತ್ ಸಿಂಗ್ ನನ್ನು ಭೇಟಿ ಮಾಡಲು ಭಾರತದ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಅವಕಾಶ ನೀಡಬೇಕೆಂದೂ ಭಾರತ ಸರ್ಕಾರ ಕೋರಿತು. 17 ವರ್ಷಗಳಿಂದ ಲಾಹೋರಿನ ಕೋಟ್ಲಖ್ ಪತ್ ಜೈಲಿನಲ್ಲಿರುವ ಸರಬ್ಜಿತ್ ಸಿಂಗ್ ನನ್ನು ಏಪ್ರಿಲ್ 1ರಂದು ಲಾಹೋರ್ ಜೈಲಿನಲ್ಲಿ ಮರಣದಂಡನೆಗೆ ಗುರಿಪಡಿಸಲು ಆದೇಶ ನೀಡಲಾಗಿತ್ತು.
2008: 1996ರ ಅಪಘಾತ ಪ್ರಕರಣವೊಂದರಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಚಿತ್ರನಟಿ ಮಾಲಾಶ್ರಿ ಅವರು ಪರಿಹಾರ ಕೋರಿ 2002ನೇ ಸಾಲಿನಲ್ಲಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತು.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು (ಎಂಎಸಿಟಿ) ನೀಡಿರುವ ಕಡಿಮೆ ಪರಿಹಾರದ ಮೊತ್ತವನ್ನು ಪ್ರಶ್ನಿಸಿ ಮಾಲಾಶ್ರಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. 1996ರ ಜುಲೈ 29ರಂದು ಮಾಲಾಶ್ರಿಯವರು ನಟ ಸುನಿಲ್ ಹಾಗೂ ಇತರರ ಜೊತೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಆಗಮಿಸುತ್ತಿದ್ದಾಗ, ಚಿತ್ರದುರ್ಗದ ಬಳಿ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸುನಿಲ್ ಅವರು ಸಾವನ್ನಪ್ಪಿ, ಮಾಲಾಶ್ರಿ ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಎಂಎಸಿಟಿಗೆ ನ್ಯಾಷನಲ್ ಇನ್ಶ್ಯೂರೆನ್ಸ್ ಕಂಪೆನಿ ವಿರುದ್ಧ ಅರ್ಜಿ ಸಲ್ಲಿಸಿ, 5 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೋರಿದ್ದರು. 2002ರ ಮಾರ್ಚ್ 6ರಂದು ಎಂಎಸಿಟಿಯು 59,670 ರೂಪಾಯಿ ಪರಿಹಾರಕ್ಕೆ ಆದೇಶ ನೀಡಿತು. ಈ ಆದೇಶವನ್ನು ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.
2008: ಮುಂಬೈ ಚಿನಿವಾರ ಪೇಟೆಯಲ್ಲಿ ಪ್ರತಿ ಕಿಲೋ ಬೆಳ್ಳಿ ರೂ 25650ಕ್ಕೆ ಹಾಗೂ ಸ್ಟ್ಯಾಂಡರ್ಡ್ ಚಿನ್ನ ಪ್ರತಿ 10 ಗ್ರಾಮಿಗೆ ರೂ 13495ಕ್ಕೆ ಜಿಗಿದು ಸಾರ್ವಕಾಲಿಕ ದಾಖಲೆ ನಿರ್ಮಿಸಿತು.
2007: ಮಿತ್ರ ಪಕ್ಷಗಳ ಒತ್ತಡಕ್ಕೆ ಮಣಿದು ಪಶ್ಚಿಮ ಬಂಗಾಳದ ಎಡರಂಗ ಸರ್ಕಾರವು ನಂದಿಗ್ರಾಮದಲ್ಲಿ ಭೂಸ್ವಾಧೀನವನ್ನು ತತ್ ಕ್ಷಣ ಸ್ಥಗಿತಗೊಳಿಸಿ, ಪೊಲೀಸ್ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತು.
2007: ನಾಗಾರ್ಜುನ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಯಶಸ್ವಿ ಹೆದ್ದಾರಿ ಬಂದ್ ನಡೆಯಿತು. ಪಡುಬಿದ್ರಿ, ನಂದಿಕೂರು, ಎರ್ಮಾಳು, ಎಲ್ಲೂರು ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇದ್ದರೂ ಪುರುಷರು, ಮಹಿಳೆಯರಾದಿಯಾಗಿ ನೂರಾರು ಮಂದಿ ರಸ್ತೆ ತಡೆಯಲ್ಲಿ ಪಾಲ್ಗೊಂಡರು.
2007: ಶ್ರವಣ ಬೆಳಗೊಳದ ಗೊಮ್ಮಟನ ದರ್ಶನದಿಂದ ಪುಳಕಿತರಾಗಿ ಭಾವ ಪರಾಕಾಷ್ಠೆ ತಲುಪಿದ ಜಿನಮುನಿ ಆಚಾರ್ಯ ಕೇಶವ ನಂದಿ ಮಹಾರಾಜ್ (85) ವೈರಾಗ್ಯಮೂರ್ತಿಯ ಸಮ್ಮುಖದಲ್ಲಿಯೇ ಇಹಯಾತ್ರೆ ಮುಗಿಸಿದರು. ಮುನಿದೀಕ್ಷೆ ಪಡೆದು ಕಳೆದ ಇಪ್ಪತ್ತೈದು ವರ್ಷಗಳಿಂದ ಕಠಿಣ ವ್ರತಾಧಾರಣೆ ಕೈಗೊಂಡಿದ್ದ ಆಚಾರ್ಯ ಕೇಶವ ನಂದಿ ಮಹಾರಾಜರು ಹುಬ್ಬಳ್ಳಿಯ ವರೂರಿನಲ್ಲಿ ನವಗ್ರಹ ಪೀಠ ಆರಾಧನಾ ಉತ್ಸವ ಮುಗಿಸಿ ಶ್ರೀಕ್ಷೇತ್ರ ಶ್ರವಣ ಬೆಳಗೊಳಕ್ಕೆ ಆಗಮಿಸಿದ್ದರು.
2007: ಸೆಲೆಬ್ರಿಟಿ ಬಿಗ್ ಬ್ರದರ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ವಿರುದ್ಧ ನಡೆದ ವರ್ಣನಿಂದನೆಯನ್ನು ಬ್ರಿಟನ್ ಸಂಸತ್ ಒಕ್ಕೊರಲಿನಿಂದ ಖಂಡಿಸಿತು.
2007: ಹಿರಿಯ ವಿಜ್ಞಾನಿ ಆರ್. ಎ. ಮಶೇಲ್ಕರ್ ಅವರು ತಮ್ಮ ಪ್ರಾಮಾಣಿಕತೆ, ದಕ್ಷತೆ ಬಗ್ಗೆ ಅನುಮಾನ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಪೇಟೆಂಟ್ ತಜ್ಞರ ಸಮಿತಿಗೆ ರಾಜೀನಾಮೆ ಸಲ್ಲಿಸಿದರು.
2007: ಅಮಾನತುಗೊಂಡ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧುರಿ ಅವರ ಸ್ಥಾನಕ್ಕೆ ರಾಣಾ ಭಗವಾನ್ ದಾಸ್ ಅವರನ್ನು ಹಂಗಾಮಿಯಾಗಿ ನೇಮಿಸುವುದಾಗಿ ಪಾಕಿಸ್ಥಾನ ಸರ್ಕಾರ ಪ್ರಕಟಿಸಿತು. ರಾಣಾ ಭಗವಾನ್ ದಾಸ್ ಅವರು ಪಾಕ್ ಸುಪ್ರೀಂಕೋರ್ಟಿನ ಏಕೈಕ ಹಿಂದೂ ನ್ಯಾಯಾಧೀಶ.
2006: ಕರ್ನಾಟಕದ ಬಿಜೆಪಿಯ ನೂತನ ಅಧ್ಯಕ್ಷರಾಗಿ ಮಂಗಳೂರು ಲೋಕಸಭಾ ಸದಸ್ಯ ಡಿ.ವಿ. ಸದಾನಂದಗೌಡ ನೇಮಕಗೊಂಡರು. ಹೊಸ ಅಧ್ಯಕ್ಷರ ನೇಮಕವನ್ನು ಪಕ್ಷದ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ನವದೆಹಲಿಯ ಪಕ್ಷ ಕಚೇರಿಯಲ್ಲಿ ಪ್ರಕಟಿಸಿದರು.
2006: ಲಾಭದಾಯಕ ಹುದ್ದೆ ಹೊಂದಿರುವ ನೆಲೆಯಲ್ಲಿ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಅವರನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದರು. ಈ ಪ್ರಕಟಣೆಗೆ ಕಲಾಂ ಅವರು ಒಂದು ದಿನ ಮೊದಲೇ (ಮಾರ್ಚ್ 16) ಸಹಿ ಹಾಕಿದ್ದಾರೆ ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಮೂಲಗಳು ತಿಳಿಸಿದವು. ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ 2004ರ ಜುಲೈ 14ರ ದಿನದಿಂದಲೇ ಜಾರಿಗೊಳಿಸುವಂತೆ ಚುನಾವಣಾ ಆಯೋಗವು ಸಂವಿಧಾನದ 102ನೇ ವಿಧಿಯನ್ವಯ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು. ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಗೆ 2004ರಲ್ಲಿ ಆಯ್ಕೆಯಾಗಿದ್ದರು. ಈ ಪ್ರಕರಣ ದೇಶದಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿತು.
2006: ದೀಪಾ ಮೆಹ್ತಾ ಅವರ `ವಾಟರ್' ಚಿತ್ರದಲ್ಲಿ ಮಾಡಿದ ನಟನೆಗಾಗಿ ಖ್ಯಾತ ನಟಿ ಸೀಮಾ ಬಿಸ್ವಾಸ್ ಅವರಿಗೆ ಕೆನಡಾದಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ `ಅತ್ಯುತ್ತಮ ನಟಿ' (`ಬೆಸ್ಟ್ ಅ್ಯಕ್ಟ್ರೆಸ್ ಜೆನೀ') ಪ್ರಶಸ್ತಿ ಲಭಿಸಿತು. ಬೇರೊಂದು ರಾಷ್ಟ್ರದಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯಳೊಬ್ಬಳು `ಅತ್ಯುತ್ತಮ ನಟಿ ಪ್ರಶಸ್ತಿ' ಪಡೆದಿರುವುದು ಬಹುಶಃ ಇದೇ ಪ್ರಥಮ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ ಸೇರಿದಂತೆ ಎಂಟು ವರ್ಗಗಳಲ್ಲಿ ಪ್ರಶಸ್ತಿಗಾಗಿ `ವಾಟರ್' ಚಿತ್ರವನ್ನು ಹೆಸರಿಸಲಾಗಿತ್ತು. ಆದರೆ ಅತ್ಯುತ್ತಮ ನಟಿ ಪ್ರಶಸ್ತಿ ಮಾತ್ರವೇ `ವಾಟರ್'ಗೆ ಸಿಕ್ಕಿತು. ಸೀಮಾ ಬಿಸ್ವಾಸ್ ಪರವಾಗಿ `ವಾಟರ್'ನಲ್ಲಿ ಮುಖ್ಯಪಾತ್ರ ವಹಿಸಿರುವ ಲೀಸಾರಾಯ್ ಪ್ರಶಸ್ತಿ ಸ್ವೀಕರಿದರು. ಸೀಮಾ ಈ ಸಂದರ್ಭದಲ್ಲಿ ಚೆನ್ನೈಯಲ್ಲಿ ಬಾಲಾಜಿ ನಿರ್ದೇಶನದ `ತಲೈಮಗನ್' ಚಿತ್ರೀಕರಣದಲ್ಲಿ ಇದ್ದರು.
2006: ಶಾಸಕರ ಭವನದ 4ನೇ ಹಂತದ 2ನೇ ಘಟ್ಟದ ಪ್ಲಾಟುಗಳನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಉದ್ಘಾಟಿಸಿದರು. 5 ಕೋಟಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪ್ಲಾಟುಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ 38 ಸಾಂಸಾರಿಕ ಪ್ಲಾಟುಗಳಿವೆ. 2 ವಿಐಪಿ, 5 ಅತಿಥಿ ಗೃಹಗಳನ್ನು ಇದು ಒಳಗೊಂಡಿದೆ.
1969: ಗೋಲ್ಡಾ ಮೀರ್ ಅವರು ತಮ್ಮ 70ನೇ ವಯಸ್ಸಿನಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಈ ಹುದ್ದೆಗೆ ಏರಿದ ಪ್ರಪ್ರಥಮ ಮಹಿಳೆ ಈಕೆ.
1963: ಭಾರತದ ಪ್ರಪ್ರಥಮ ರುದ್ರ ವೀಣಾ ವಾದಕಿ ಜ್ಯೋತಿ ಹೆಗಡೆ ಅವರು ಸತ್ಯನಾರಾಯಣ ದೇವಗುಡಿ- ಶಾಂತಾ ದೇವಗುಡಿ ದಂಪತಿಯ ಮಗಳಾಗಿ ಧಾರವಾಡದಲ್ಲಿ ಜನಿಸಿದರು. ಕರ್ನಾಟಕ ರುದ್ರವೀಣಾ ವಾದನದ ನಾಲ್ವರಲ್ಲಿ ಅಗ್ರಗಣ್ಯರೆಂಬ ಹೆಗ್ಗಳಿಕೆ ಇವರದು.
1959: ದಲೈ ಲಾಮಾ ಅವರು ಟಿಬೆಟ್ ತ್ಯಜಿಸಿ ಭಾರತಕ್ಕೆ ಬಂದರು. 1959ರ ಮಾರ್ಚ್ 31ರಂದು ಅವರಿಗೆ ಭಾರತದಲ್ಲಿ ರಾಜಕೀಯ ಆಶ್ರಯ ನೀಡಲಾಯಿತು.
1950: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಾವು ಹೊಸ `ರೇಡಿಯಾಕ್ಟಿವ್' ಕಂಡು ಹಿಡಿದಿರುವುದಾಗಿ ಬರ್ಕೆಲಿಯಲ್ಲಿ ಪ್ರಕಟಿಸಿದರು. ಇದಕ್ಕೆ ಅವರು `ಕ್ಯಾಲಿಫೋರ್ನಿಯಂ' ಎಂದು ಹೆಸರಿಟ್ಟರು.
1942: ಜನರಲ್ ಡೊಗ್ಲಾಸ್ ಮ್ಯಾಕ್ ಅರ್ಥರ್ ಅವರು ಎರಡನೇ ವಿಶ್ವ ಸಮರ ಸಂದರ್ಭದಲ್ಲಿ ನೈಋತ್ಯ ಫೆಸಿಫಿಕ್ ಭಾಗದಲ್ಲಿದ್ದ ಮಿತ್ರ ಪಡೆಗಳ ಸುಪ್ರೀಂ ಕಮಾಂಡರ್ ಹುದ್ದೆ ವಹಿಸಿಕೊಳ್ಳಲು ಆಸ್ಟ್ರೇಲಿಯಕ್ಕೆ ಆಗಮಿಸಿದರು.
1920: ಷೇಖ್ ಮುಜಿಬುರ್ ರಹಮಾನ್ (1920-75) ಜನ್ಮದಿನ. ಬಂಗಾಳಿ ನಾಯಕ ಹಾಗೂ ಬಾಂಗ್ಲಾದೇಶದ ಪ್ರಥಮ ಪ್ರಧಾನಿ ಹಾಗೂ ನಂತರ ಅಧ್ಯಕ್ಷರಾದ ಇವರನ್ನು 1975ರಲ್ಲಿ ಕೊಲೆಗೈಯಲಾಯಿತು.
1834: ಗೋಟ್ಲಬ್ (ವಿಲ್ಹೆಮ್) ಡೈಂಬ್ಲರ್ (1834-1900) ಹುಟ್ಟಿದ ದಿನ.ಜರ್ಮನ್ ಮೆಕ್ಯಾನಿಕಲ್ ಎಂಜಿನಿಯರ್ ಆದ ಈತ ಪ್ರಪ್ರಥಮ ಮರ್ಸಿಡಿಸ್ ಕಾರನ್ನು ನಿರ್ಮಿಸಿದ.
No comments:
Post a Comment