Wednesday, March 28, 2018

ಇಂದಿನ ಇತಿಹಾಸ History Today ಮಾರ್ಚ್ 27

ಇಂದಿನ ಇತಿಹಾಸ History Today  ಮಾರ್ಚ್ 27


2018: ನವದೆಹಲಿ: ಕರ್ನಾಟಕದ ರಾಜಕೀಯ ಮಹಾಸಮರಕ್ಕೆ ಕೊನೆಗೂ ಮುಹೂರ್ತ ನಿಗದಿಯಾಯಿತು.  ಮೇ ೧೨ರ ಶನಿವಾರ ರಾಜ್ಯಾದ್ಯಂತ ಒಂದೇ ಹಂತದ ಚುನಾವಣೆ ನಡೆಯಲಿದೆ. ಮೇ ೧೫ರ ಮಂಗಳವಾರ ಫಲಿತಾಂಶ ಹೊರಬೀಳಲಿದೆ.  ಮುಖ್ಯ ಚುನಾವಣಾ ಕಮೀಷನರ್ (ಸಿಇಸಿ) ಓಂ ಪ್ರಕಾಶ್ ರಾವತ್ ಅವರು  ಈದಿನ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಪ್ರಕಟಿಸಿದರು.  ಚುನಾವಣೆಯ ಅಧಿಸೂಚನೆಯನ್ನು (ಗೆಜೆಟ್ ಪ್ರಕಟಣೆ) ಏಪ್ರಿಲ್ ೧೭ರಂದು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೪ ಕೊನೆಯ ದಿನ. ಅಭ್ಯರ್ಥಿಳಿಂದ ನಾಮಪತ್ರ ವಾಪಸಿಗೆ ಏಪ್ರಿಲ್ ೨೭ ಕೊನೆಯ ದಿನ. ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮೇ ೧೮ರಂದು ಪೂರ್ಣಗೊಳ್ಳುವುದು ಎಂದು ರಾವತ್ ಅವರು ಹೇಳಿದರು.  ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಜೊತೆಗೆ ಈ ಬಾರಿ ಮತಖಾತರಿ ಯಂತ್ರ (ವೋಟರ್ ವೆರಿಫೈಡ್ ಪೇಪರ್ ಆಡಿಟ್ (ವಿವಿ ಪ್ಯಾಟ್)ಗಳನ್ನೂ ಬಳಸಲಾಗುವುದು. ಒಟ್ಟು ೨೨೪ ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರತಿಯೊಂದು ಕ್ಷೇತ್ರದಲ್ಲೂ ಯಾಧೃಚ್ಛಿಕವಾಗಿ ಆಯ್ದ ಒಂದು ಮತಗಟ್ಟೆಯಲ್ಲಿನ ಮತಖಾತರಿ ಯಂತ್ರದ ಚೀಟಿಗಳ ಜೊತೆ ಇವಿಎಂ ಫಲಿತಾಂಶವನ್ನು ತಾಳೆ ನೋಡಲಾಗುವುದು ಎಂದು ರಾವತ್ ನುಡಿದರು.  ಮತಯಾದಿಗಳ ಪ್ರಕಾರ ರಾಜ್ಯದಲ್ಲಿ ಈ ಬಾರಿ ಅಂದಾಜು ೪.೯೭ ಕೋಟಿ ಮತದಾರರಿದ್ದಾರೆ. ೨೦೧೩ರ ರಾಜ್ಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ೫೬,೬೯೬ ಮತಗಟ್ಟೆಗಳಿದ್ದು ಅವುಗಳ ಪ್ರಮಾಣ ಶೇಕಡಾ ೯ರಷ್ಟು ಏರಿದೆ. ಕಳೆದ ಬಾರಿಯೂ ರಾಜ್ಯದಲ್ಲಿ ಏಕಹಂತದ ಚುನಾವಣೆ ನಡೆದಿತ್ತು.  ಮತದಾರ ಮಾರ್ಗದರ್ಶಿ:  ಈಬಾರಿಯ ಚುನಾವಣೆಯಲ್ಲಿ ಕನ್ನತ ಮತ್ತು ಇಂಗ್ಲಿಷಿನಲ್ಲಿ ಮತದಾರ ಮಾರ್ಗದರ್ಶಿಯನ್ನು (ವೋಟರ್ ಗೈಡ್) ಚುನಾವಣೆಗೆ ಮುಂಚಿತವಾಗಿಯೇ ಪ್ರತಿ ಮನೆಗೂ ಒದಗಿಸಲಾಗುವುದು. ಇದರಲ್ಲಿ ಚುನಾವಣೆಯ ದಿನಾಂಕ, ಮತದಾನದ ಸಮಯ, ಬೂತ್  ಮಟ್ಟದ ಅಧಿಕಾರಿಗಳ ಸಂಪರ್ಕ ವಿವರ, ಮಹತ್ವದ ವೆಬ್ ಸೈಟ್ ಗಳು, ಸಹಾಯವಾಣಿ ನಂಬರುಗಳು ಇತ್ಯಾದಿ ಮಾಹಿತಿ ಒದಗಿಸಲಾಗುವುದು ಎಂದು ರಾವತ್ ಹೇಳಿದರು.  ಸರ್ವ ಮಹಿಳಾ ಮತಗಟ್ಟೆಗಳು:  ‘ಮತದಾನದ ರಹಸ್ಯ ಖಾತರಿಗಾಗಿ ಮತದಾನ ಮಾಡುವ ಕಂಪಾರ್ಟ್‌ಮೆಂಟಿನ ಎತ್ತರವನ್ನು ೨೦ ಅಂಗುಲದಷ್ಟು ಏರಿಸಲು ಆಯೋಗವು ಆದೇಶ ನೀಡಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ನಿರ್ವಹಣೆಯ ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗುವುದು. ಈ ಮತಗಟ್ಟೆಗಳಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಚುನಾವಣಾ ಸಿಬ್ಬಂದಿ ಮಹಿಳೆಯರೇ ಇರುತ್ತಾರೆ ಎಂದು ಮುಖ್ಯ ಚುನಾವಣಾ ಕಮೀಷನರ್ ನುಡಿದರು.  ನಿರ್ದಿಷ್ಟವಾಗಿ ದುರ್ಬಲ ವರ್ಗಗಳು ಮತ್ತು ಅಲ್ಪಸಂಖ್ಯಾತರು ಇರುವ ಪ್ರದೇಶಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರೀಯ ಸಶಶ್ತ್ರ ಪೊಲೀಸ್ ಪಡೆಗಳನ್ನು  ಮುಂಚಿತವಾಗಿಯೇ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.  ಚುನಾವಣಾ ವೆಚ್ಚದ ಮೇಲೆ ಕಣ್ಣು:  ಅಭ್ಯರ್ಥಿಗಳ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ಮೇಲೆ ಬಹು -ಸಂಸ್ಥೆಗಳ ನಿಗಾ ಘಟಕಗಳ ಮೂಲಕ ಕಣ್ಣಿಡಲಾಗುವುದು. ಪರಿಷ್ಕೃತ ಮಿತಿಯ ಪ್ರಕಾರ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚ ೨೮ ಲಕ್ಷ ರೂಪಾಯಿಗಳು ಎಂದು ಅವರು ನುಡಿದರು.  ಫಲಿತಾಂಶ ಘೋಷಣೆಯಾದ ೩೦ ದಿನಗಳ ಒಳಗಾಗಿ ಎಲ್ಲ ಅಭ್ಯರ್ಥಿಗಳೂ ತಮ್ಮ ಚುನಾವಣಾ ವೆಚ್ಚದ ಲೆಕ್ಕಪತ್ರಗಳನ್ನು ಸಲ್ಲಿಸಬೇಕು ಎಂದು ರಾವತ್ ಹೇಳಿದರು.  ಈಗಿರುವ ೨೨೪ ಸದಸ್ಯರ ಕರ್ನಾಟಕ ವಿಧಾನಸಭೆಯ ಕಾಲಾವಧಿ ಮೇ ೨೮ರಂದು ಅಂತ್ಯಗೊಳ್ಳಲಿದೆ. ಮೇ ತಿಂಗಳು ಮುಗಿಯುವುದರೊಳಗೆ ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆಗಳು ಪೂರ್ತಿಗೊಳ್ಳಬೇಕಿದೆ.  ಮತದಾರರು ಎಷ್ಟಿದ್ದಾರೆ?  ರಾಜ್ಯದ ಪ್ರತಿ ವಿಧಾನಸಭೆ ಕ್ಷೇತ್ರದ ಸರಾಸರಿ ಮತದಾರರ ಸಂಖ್ಯೆ ೨.೨೧ ಲಕ್ಷ. ಈ ಬಾರಿ ೭, ೭೨,೬೪೯ ಯುವ ಮತದಾರರು ಹೋಸದಾಗಿ ಸೇರ್ಪಡೆಯಾಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ೪ ಕೋಟಿ ೯೬ ಲಕ್ಷ ೩೫೭ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಇದು ೨೦೧೮ರ ಚುನಾವಣೆಗಿಂತ ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಶೇಕಡ ೯೯.೪೧ರಷ್ಟು ಎಪಿಕ್ ಕಾರ್ಡ್‌ಗಳನ್ನು ವಿತರಿಸಲಾಗಿದೆ.  ಈ ಬಾರಿ ೫೬,೬೯೬ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಚುನಾವಣೆ ಕೇಂದ್ರೀಯ ಮೀಸಲು ಪಡೆಯನ್ನು ಹೆಚ್ಚುವರಿ ಭದ್ರತೆಗಾಗಿ ನಿಯೋಜಿಸಲಾಗಿದೆ.  ಏನಿದು ವಿವಿ ಪ್ಯಾಟ್?  ಮತದಾರ ತಾನು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಸಾಕು ಮತಯಂತ್ರದ ಪಕ್ಕದಲ್ಲಿಯೇ ಇಡಲಾಗುವ ಮತ ಖಾತರಿಪಡಿಸುವ ವೋಟರ್ ವೆರಿಫೈಡ್ ಪೇಪರ್ ಆಡಿಟ್ (ವಿವಿ ಪ್ಯಾಟ್) ಯಂತ್ರದಲ್ಲಿ ನಾವು ಮತ ಹಾಕಿದ ಅಭ್ಯರ್ಥಿಯ ಹೆಸರಿನಲ್ಲಿ ಪ್ರಿಂಟ್ ಆದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಅದನ್ನು ಗಮನಿಸಿ ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು.  ಧೂಳೆಬ್ಬಿಸುತ್ತಿರುವ ಧುರೀಣರು:  ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಯೇರಲು ಬಿಜೆಪಿ ಶತಪ್ರಯತ್ನ ನಡೆಸಿದೆ. ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದರೆ, ಇತ್ತ ಕಾಂಗ್ರೆಸ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಣಕ್ಕಿಳಿದಿದೆ.  ಈ ಬಾರಿಯ ಚುನಾವಣೆಗಾಗಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾದಳ (ಎಸ್) ಧುರೀಣರು ಚುನಾವಣಾ ಪ್ರವಾಸ, ಪ್ರಚಾರಗಳನ್ನು ಆರಂಭಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ನಾಯಕರು ಈಗಾಗಲೇ ಕೆಲವು ರ್‍ಯಾಲಿಗಳಲ್ಲಿ ಕರ್ನಾಟಕದ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಜೊತೆಗೆ ಪಾಲ್ಗೊಂಡಿದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಜನಾಶೀರ್ವಾದ ಯಾತ್ರೆಗಳನ್ನು ರಾಜ್ಯದಲ್ಲಿ ನಡೆಸಿದ್ದಾರೆ. ಇನೊಂದೆಡೆಯಲ್ಲಿ ಜನತಾದಳ (ಎಸ್) ಧುರೀಣರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ತೀವ್ರ ಪ್ರವಾಸ- ಪ್ರಚಾರ ಕೈಗೊಂಡಿದ್ದಾರೆ.  ಕಳೆದ ಬಾರಿಯ (೨೦೧೩ರಲ್ಲಿ) ೨೨೪ ಸ್ಥಾನಗಳ ಪೈಕಿ ಕಾಂಗ್ರೆಸ್ ೧೨೨, ಬಿಜೆಪಿ ೪೦, ಜನತಾದಳ (ಎಸ್) ೪೦, ಕೆಜೆಪಿ ೬ ಮತ್ತು ಇತರರು ೧೬ ಸ್ಥಾನಗಳನ್ನು ಪಡೆದಿದ್ದರು.   ಹೀಗಿದೆ ಚುನಾವಣಾ ಶೆಡ್ಯೂಲ್:  ೨೦೧೮ರ ಎ.೧೭ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುತ್ತದೆ.  ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ೨೪ ಎಪ್ರಿಲ್ ೨೦೧೮ ಆಗಿರುತ್ತದೆ.  
ನಾಮಪತ್ರ ಪರಿಶೀಲನೆ ೨೫ ಎಪ್ರಿಲ್ ೨೦೧೮ರಂದು ನಡೆಯುತ್ತದೆ.  ನಾಮ ಪತ್ರ ಹಿಂದೆಗೆತಕ್ಕೆ ಕೊನೇ ದಿನ ೨೭ ಎಪ್ರಿಲ್ ೨೦೧೮. ಮತದಾನದ ದಿನ : ೧೨ ಮೇ ೨೦೧೮. ಮತ ಎಣಿಕೆ (ಫಲಿತಾಂಶ) ದಿನ : ೧೫ ಮೇ ೨೦೧೮.

2018: ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಬಾಯ್ತಪ್ಪಿ ಆಡಿದ ಮಾತೊಂದು ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ಎಸ್. ಯಡಿಯೂರಪ್ಪ ಅವರಿಗೆ ತೀವ್ರ ಇರುಸು ಮುರುಸು ಉಂಟು ಮಾಡುವುದರ ಜೊತೆಗೆ  ಕಾಂಗ್ರೆಸ್ಸಿಗೆ ’ವರಪ್ರಸಾದವಾದ ಘಟನೆ ಘಟಿಸಿತು. ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ಬಳಿಕ ಅಮಿತ್ ಶಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ’ಅತ್ಯಂತ ಭ್ರಷ್ಟ ಸರ್ಕಾರಕ್ಕಾಗಿ ಸ್ಪರ್ಧೆ ಏನಾದರೂ ನಡೆದರೆ ಆಗ (ಬಿಜೆಪಿಯ) ಯಡಿಯೂರಪ್ಪ ಸರ್ಕಾರ ಪ್ರಥಮ ಸ್ಥಾನ ಪಡೆಯುತ್ತದೆ ಎಂದು ಮಾತಿನ ಭರದಲ್ಲಿ ಅಮಿತ್ ಶಾ ಹೇಳಿದರು.  ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರು ಪಕ್ಕದಲ್ಲಿ ಕುಳಿತಿದ್ದಾಗಲೇ ಈ ’ಬಾಯ್ತಪ್ಪಿನ ಘಟನೆ ಘಟಿಸಿತು.  ಶಾ ಅವರ ಪಕ್ಕದಲ್ಲೇ ಕುಳಿತಿದ್ದ ಇನ್ನೊಬ್ಬ ಧುರೀಣ ತತ್ ಕ್ಷಣವೇ ಶಾ ಅವರಿಗೆ ಪ್ರಮಾದವನ್ನು ಗಮನಕ್ಕೆ ತಂದರು. ತತ್ ಕ್ಷಣವೇ ತಮ್ಮ ತಪ್ಪನ್ನು ತಿದ್ದಿಕೊಂಡ ಅಮಿತ್ ಶಾ ಅತ್ಯಂತ ಭ್ರಷ್ಟ ಸರ್ಕಾರದ ಸ್ಪರ್ಧೆಯಲ್ಲಿ ಸಿದ್ದರಾಮಯ್ಯ ಪ್ರಥಮ ಸ್ಥಾನ ಪಡೆಯುತ್ತಾರೆ ಎಂದು ಹೇಳಬಯಸಿದ್ದೆ ಎಂದು ಸ್ಪಷ್ಟ ಪಡಿಸಿದರು.  ಆದರೆ ಅಷ್ಟರಲ್ಲಾಗಲೇ ಹಾನಿ ಆಗಿಯೇ ಬಿಟ್ಟಿತ್ತು.   ಶಾ ಅವರ ಬಾಯ್ತಪ್ಪಿನ ಹೇಳಿಕೆಯ ವಿಡಿಯೋ ತುಣುಕು ಮೈಕ್ರೊ ಬ್ಲಾಗಿಂಗ್ ಸೈಟ್‌ನಲ್ಲಿ ’ಬಿಜೆಪಿ ಮುಖ್ಯಸ್ಥ ಕಡೆಗೂ ಸತ್ಯ ಹೇಳಿದರು ಎಂಬ ಕಾಂಗ್ರೆಸ್ ಷರಾದೊಂದಿಗೆ ಪ್ರಸಾರವಾಗಲಾರಂಭಿಸಿತ್ತು. ‘ಈಗ ಬಿಜೆಪಿ ಐಟಿ ಸೆಲ್ ಕರ್ನಾಟಕದ ಚುನಾವಣೆಗಳನ್ನು ಪ್ರಕಟಿಸಿದೆ, ನಮ್ಮ ಅತ್ಯಂತ ರಹಸ್ಯಮಯ ವಿಡಿಯೋ ಪೂರ್ವ ವೀಕ್ಷಣೆಗೆ ಇದು ಸಕಾಲ ಎಂಬ ಟಿಪ್ಪಣಿಯೊಂದಿಗೆ ಕಾಂಗ್ರೆಸ್ ವಿಡಿಯೋವನ್ನು ಪ್ರಕಟಿಸಿತ್ತು.   ’ಇದು ನಮಗೆ ಬಿಜೆಪಿ ಅಧ್ಯಕ್ಷರ ಕೊಡುಗೆ, ಕರ್ನಾಟಕದಲ್ಲಿ ನಮ್ಮ ಪ್ರಚಾರಕ್ಕೆ ಅದ್ಭುತ ಆರಂಭ. ಯಡಿಯೂರಪ್ಪ ಅತ್ಯಂತ ಭ್ರಷ್ಟ ಸರ್ಕಾರವನ್ನು ನಡೆಸಿದ್ದರು ಎಂದು ಅವರು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಟ್ವೀಟಿಗೆ ಪ್ರತಿಕ್ರಿಯಿಸಿದರು.  ‘ಸತ್ಯ ಗೆಲ್ಲುತ್ತದೆ. ಸತ್ಯಕ್ಕೆ ಹೊರಬರಲು ತನ್ನದೇ ಅದ ದಾರಿಗಳಿವೆ. ಅಮಿತ್ ಶಾ ಮಾತುಗಳನ್ನೇ ಆಲಿಸಿ. ಬಿಜೆಪಿಯ ಸಿಎಂ ಅಭ್ಯರ್ಥಿ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಮಾದರಿಯನ್ನು ಅಮಿತ್ ಶಾ ಅವರೇ ಅನಾವರಣಗೊಳಿಸಿದ್ದಾರೆ ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದರು.  ಸತ್ಯವನ್ನು ಎಂದೂ ದಮನಿಸಲಾಗದು. ಯಡಿಯೂರಪ್ಪ ನೇತೃತ್ವದ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿತ್ತು ಎಂದು ಅಮಿತ್ ಶಾ ಕೂಡಾ ಒಪ್ಪುತ್ತಾರೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿತು.  ‘ಆತ್ಮಾವಲೋಕನ ಮಾಡಿಕೊಳ್ಳುವಲ್ಲಿ, ಅಮಿತ್ ಶಾ ಜಿ ಬಗ್ಗೆ ನಾನು ಯಾವಾಗಲೂ ತಪ್ಪನ್ನೇ ಮಾಡುತ್ತೇನೆ. ಅವರು ಕೆಲವೊಮ್ಮೆ ಸತ್ಯ ಮಾತನಾಡುತ್ತಾರೆ ಎಂದು ಸಂಜಯ್ ಝಾ ಪ್ರತಿಕ್ರಿಯಿಸಿದರು. ‘ಯಾರಿಗೆ ಗೊತ್ತು? ಅಮಿತ್ ಶಾ ಅವರು ಸತ್ಯವನ್ನೂ ಮಾತನಾಡಬಲ್ಲರು- ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ ಅಮಿತ್ ಜಿ ಎಂದು ದಿವ್ಯ ಸ್ಪಂದನ/ ರಮ್ಯಾ ಪ್ರತಿಕ್ರಿಯೆ ನೀಡಿದರು.  ‘ವಿವೇಕದ ಪುಸ್ತಕದಲ್ಲಿ ಪ್ರಾಮಾಣಿಕತೆ ಮೊದಲ ಅಧ್ಯಾಯ. ಅಮಿತ್ ಶಾ ಜಿ ಅವರು ಆ ಮಾರ್ಗದಲ್ಲಿ ಹೋಗ ಬಯಸಿದ್ದಾರೆ ಎಂದು ಸಂತಸವಾಗಿದೆ. ಯಡಿಯೂರಪ್ಪ ಅವರ ಸರ್ಕಾರ ರಾಷ್ಟ್ರದಲ್ಲೇ ನಂ.೧ ಭ್ರಷ್ಟ ಸರ್ಕಾರವಾಗಿತ್ತು ಎಂದು ಅವರು ಈದಿನ ಸ್ಪಷ್ಟ ಪಡಿಸಿದ್ದಾರೆ ಎಂದು ಗೌರವ್ ಪಂಧಿ ಟ್ವೀಟಿಸಿದರು.  ಕಾಂಗ್ರೆಸ್ ನಾಯಕ ಮತ್ತು ಹಾಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಅಧ್ಯಕ್ಷ ’ಸುಳ್ಳುಗಳ ಶಾ ಅವರು ಕಡೆಗೂ ಸತ್ಯ ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಸುಳ್ಳುಗಳ ಶಾ ಕಡೆಗೂ ಸತ್ಯ ಹೇಳಿದ್ದಾರೆ. ನಿಮಗೆ ಧನ್ಯವಾದಗಳು ಅಮಿತ್ ಶಾ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದರು.

2018: ನವದೆಹಲಿ: ರಾಜಕೀಯ ಪಕ್ಷಗಳು ಮತ್ತು ಗಣ್ಯ ವ್ಯಕ್ತಿಗಳ ಮೊಬೈಲ್ ಆಪ್‌ಗಳ ಮೂಲಕ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಭಾರತದ ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮ ವಿಭಾಗವು ಪರಿಶೀಲಿಸಲಿದೆ ಎಂದು ಭಾರದ ಮುಖ್ಯ ಚುನಾವಣಾ ಕಮೀಷನರ್ ಓಂ ಪ್ರಕಾಶ್ ರಾವತ್ ಅವರು ಇಲ್ಲಿ ಹೇಳಿದರು.  ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ ಅವರು ಈ ವಿಷಯವನ್ನು ತಿಳಿಸಿದರು.   ಟ್ವಿಟರ್ ಬಳಕೆದಾರ ಮತ್ತು ಫ್ರೆಂಚ್ ಭದ್ರತಾ ಸಂಶೋಧಕ ಎಲಿಯಟ್ ಆಲ್ಡರ್‍ಸನ್ ಅವರು ಬಳಕೆದಾರನೊಬ್ಬ ನರೇಂದ್ರ ಮೋದಿ ಆಪ್ ಅಥವಾ ಕಾಂಗ್ರೆಸ್ ಆಪ್ ನ ಪ್ರೊಫೈಲ್ ಸೃಷ್ಟಿಸಿದಾಗ, ಬಳಕೆದಾರನ ಒಪ್ಪಿಗೆಯನ್ನು ಪಡೆಯದೆಯೇ ಆತನ ವೈಯಕ್ತಿಕ ಮಾಹಿತಿಯನ್ನು ಮೂರನೇ ವ್ಯಕ್ತಿಗಳಿಗೆ ಕಳುಹಿಸಲಾಗುತ್ತದೆ ಎಂದು ಆಪಾದಿಸಿದ್ದರು.  ನರೇಂದ್ರ ಮೋದಿ ಆಪ್ ತನ್ನ ಖಾಸಗಿ ನೀತಿಯನ್ನು ಬಳಕೆದಾರರಿಗೆ ತಿಳಿಸದೆಯೇ ಬದಲಾಯಿಸಿದೆ ಎಂದೂ ಆಲ್ಡರ್‍ಸನ್ ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ಆಪ್ ಆಂಡ್ರಾಯಿಡ್ ಪ್ಲೇ ಸ್ಟೋರ್‌ನ್ನು ಕೈಬಿಟ್ಟಿದೆ ಎಂದು ಅವರು ಹೇಳಿದ್ದಾರೆ.  ’ಆಂಡ್ರಾಯಿಡ್ ಪ್ಲೇ ಸ್ಟೋರ್ ಗೆ ಐಎನ್ ಸಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಯಲ್ಲಿನ ಸದಸ್ಯತ್ವದ ಯುಆರ್ ಎಲ್ ಸ್ವಲ್ಪ ಕಾಲ ಇರುವುದಿಲ್ಲ ನಮ್ಮ ಸದಸ್ಯತ್ವವನ್ನು ವೆಬ್ ಸೈಟ್ ಮೂಲಕ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆ ದಿವ್ಯ ಸ್ಪಂದನ/ ರಮ್ಯಾ ಟ್ವೀಟ್ ಮಾಡಿದ್ದರು.  ಈ ವಿಷಯ ಉಭಯ ಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿತ್ತು.  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ’ಮೋದಿ ಅವರ ನಮೋ ಆಪ್ ರಹಸ್ಯವಾಗಿ ಆಡಿಯೋ, ವಿಡಿಯೋ, ನಿಮ್ಮ ಗೆಳೆಯುರ, ಕುಟುಂಬದ ಸಂಪರ್ಕಗಳನ್ನು ದಾಖಲಿಸಿಕೊಳ್ಳುತ್ತದೆ.. ಜಿಪಿಎಸ್ ಮೂಲಕ ನೀವೆಲ್ಲಿದ್ದೀರಿ ಎಂಬುದನ್ನೂ ಪತ್ತೆ ಹಚ್ಚುತ್ತದೆ. ಭಾರತೀಯರ ಮೇಲೆ ಗೂಢಚಾರಿಕೆ ನಡೆಸ ಬಯಸುವ ಬಿಗ್ ಬಾಸ್‌ನಂತೆ ಈಗ ಅವರು ನಮ್ಮ ಮಕ್ಕಳ ಮಾಹಿತಿ ಬಯಸುತ್ತಿದ್ದಾರೆ. ೧೩ ಲಕ್ಷ ಎನ್ ಸಿಸಿ ಕೆಡೆಟ್ ಗಳನ್ನು ಆಪ್ ಡೌನ್ ಲೋಡ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಮಾಹಿತಿ ನೆಲೆಯನ್ನು ಬೆಳೆಸಲು ಪ್ರಧಾನಿಯವರು ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದೂ ರಾಹುಲ್ ಆಪಾದಿಸಿದ್ದರು.  ‘ಮೋದಿ ಅವರು ಸರ್ಕಾರ ಅಭಿವೃದ್ಧಿ ಪಡಿಸಿದ ನಮೊ ಆಪ್ ಮೂಲಕ ಲಕ್ಷಾಂತರ ಭಾರತೀಯರ ಮಾಹಿತಿ ಪಡೆದು ತಮ್ಮ ವೈಯಕ್ತಿಕ ಮಾಹಿತಿ ನೆಲೆಯನ್ನು ನಿರ್ಮಿಸುತ್ತಿದ್ದಾರೆ. ಪ್ರಧಾನಿಯವರು ತಂತ್ರಜ್ಞಾನವನ್ನು ಭಾರತದ ಜೊತೆ ಸಂವಹನ ನಡೆಸಲು ಬಳಸಿದರೆ ಸಮಸ್ಯೆ ಇಲ್ಲ. ಆದರೆ ಅವರು ಅಧಿಕೃತ ಪಿಎಂಒ ಆಪ್‌ನ್ನು ಅದಕ್ಕಾಗಿ ಬಳಸುತ್ತಿದ್ದಾರೆ. ಈ ಮಾಹಿತಿ ಭಾರತಕ್ಕೆ ಸೇರಿದ್ದು. ಮೋದಿಯವರದ್ದಲ್ಲ ಎಂದು ರಾಹುಲ್ ಗಾಂಧಿ ಮಂಗಳವಾರ ಟ್ವೀಟ್ ಮಾಡಿದ್ದರು.  ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ’ಹಿ ನನ್ನ ಹೆಸರು ರಾಹುಲ್ ಗಾಂಧಿ. ನಾನು ಅತ್ಯಂತ ಹಳೆಯ ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ನೀವು ನಮ್ಮ ಅಧಿಕೃತ ಆಪ್ ಗೆ ಸೈನ್ ಅಪ್ ಮಾಡಿದಾಗ, ನಾನು ನಿಮ್ಮ ಎಲ್ಲ ಮಾಹಿತಿಯನ್ನೂ ಸಿಂಗಾಪುರದಲ್ಲಿನ ನನ್ನ ಗೆಳೆಯರಿಗೆ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದರು.

2018: ನವದೆಹಲಿ:  ಮೂರು ಬಾರಿ ಶಾಸಕರಾಗಿ ಗೆದ್ದಿರುವ ಅಮಿತ್ ಚಾವ್ಡಾ ಅವರನ್ನು ಗುಜರಾತ್ ಕಾಂಗ್ರೆಸ್ಸಿನ ನೂತನ ಮುಖ್ಯಸ್ಥರಾಗಿ ಭರತ್ ಸಿನ್ಹ ಸೋಳಂಕಿ ಅವರ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಪಕ್ಷದ ಪ್ರಕಟಣೆಯೊಂದು ಇಲ್ಲಿ ತಿಳಿಸಿತು.  ೨೦೧೭ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು. ಆದರೆ ತನ್ನ ಸ್ಥಾನಗಳನ್ನು ೬೦ರಿಂದ ೭೭ಕ್ಕೆ ಏರಿಸಿಕೊಂಡಿತ್ತು.  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶಾಸಕ ಅಮಿತ್ ಚಾವ್ಡಾ ಅವರನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಭರತ್ ಸಿನ್ಹ ಸೋಳಂಕಿ ಅವರ ಸ್ಥಾನಕ್ಕೆ ನೇಮಕ ಮಾಡಿದ್ದಾರೆ ಎಂದು ಹೇಳಿಕೆ ತಿಳಿಸಿತು.  ‘ಜಿಪಿಸಿಸಿ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿರುವ ಶ್ರೀ ಭರತ್ ಸಿನ್ಹ ಸೋಳಂಕಿ ಅವರ ಸೇವೆ ಮತ್ತು ಕೊಡುವೆಯನ್ನು ಪಕ್ಷವು ಗುರುತಿಸುತ್ತದೆ ಎಂದು ಹೇಳಿಕೆ ತಿಳಿಸಿತು.  ಸೋಳಂಕಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು ’ಪಕ್ಷವು ನನಗೆ ವಹಿಸುವ ಯಾವುದೇ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದರು.  ‘೨೦೧೭ರ ಗುಜರಾತ್ ಚುನಾವಣೆಗಳಲ್ಲಿ ಪಕ್ಷದ ಪರಾಭವದ ಬಳಿಕ ರಾಜೀನಾಮೆ ನೀಡಲು ನಾನು ಮುಂದಾಗಿದ್ದೆ. ಆದರೆ ವರಿಷ್ಠ ಮಂಡಳಿಯು ಹುದ್ದೆಯಲ್ಲಿ ಮುಂದುವರಿಯುವಂತೆ ನನಗೆ ಸೂಚಿಸಿತ್ತು ಎಂದು ಅವರು ನುಡಿದರು. 

2018: ಲಂಡನ್: ತಾನು ಕೆಲಸ ಮಾಡುತ್ತಿದ್ದ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯು ’ಮಾಹಿತಿ ಕಳವು ಮಾಡುತ್ತಿದ್ದುದನ್ನು ಬಹಿರಂಗ ಪಡಿಸಿ ವಿಶ್ವವನ್ನೇ ದಂಗು ಬಡಿಸಿದ ಸಂಸ್ಥೆಯ ಮಾಜಿ ನೌಕರ ಕ್ರಿಸ್ಟೋಫರ್ ವೈಲೀ ’ಕಂಪೆನಿಯು ಭಾರತದಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದುದಷ್ಟೇ ಅಲ್ಲ, ಭಾರತದಲ್ಲಿ ಕಚೇರಿಯನ್ನೂ ಹೊಂದಿತ್ತು ಎಂದು  ಹೇಳಿದರು. ೨೮ರ ಹರೆಯದ ವೈಲೀ ಅವರು ಇಂಗ್ಲೆಂಡಿನ ಸಂಸತ್ತಿನಲ್ಲಿ ಸಾಕ್ಷ್ಯ ನುಡಿಯುತ್ತಾ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ವಿರುದ್ಧದ ತಮ್ಮ ಆರೋಪಗಳನ್ನು ಪುನರುಚ್ಚರಿಸುತ್ತಾ ಈ ಮಾತುಗಳನ್ನು ಹೇಳಿದರು. ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪೂರ್ವಾಧಿಕಾರಿ ಕೀನ್ಯಾ ಚುನಾವಣೆ ಪ್ರಚಾರ ಕಾಲದಲ್ಲಿ ವಿಷಪ್ರಾಶನಕ್ಕೆ ಈಡಾಗಿರುವ ಸಾಧ್ಯತೆಯೂ ಇದೆ ಎಂಬ ಆಘಾತಕಾರಿ ಮಾಹಿತಿಯನ್ನೂ ಅವರು ಬಹಿರಂಗ ಪಡಿಸಿದರು. ಆ ವ್ಯಕ್ತಿ ಅದಕ್ಕೆ ಮುನ್ನ ಯುರೋಪ್, ಆಫ್ರಿಕಾ ಮತ್ತು ಅಮೆರಿಕದ ಚುನಾವಣೆಗಳ ಕಾಲದಲ್ಲೂ ಕೆಲಸ ಮಾಡಿದ್ದು, ಕೀನ್ಯಾ ಚುನಾವಣಾ ಪ್ರಚಾರ ಕಾಲದಲ್ಲಿ ಅಸು ನೀಗಿದರು ಎಂದು ವೈಲೀ ಹೇಳಿದರು. ಫೇಸ್ ಬುಕ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ೫೦ ಮಿಲಿಯ (೫ ಕೋಟಿ) ಗೂ  ಹೆಚ್ಚಿನ ಬಳಕೆದಾರರ ಮಾಹಿತಿಯನ್ನು ಚುನಾವಣೆಗಳಲ್ಲಿ ಅವರ ಮೇಲೆ ಪ್ರಭಾವ ಬೀರುವ ಏಕೈಕ ಉದ್ದೇಶಕ್ಕಾಗಿ ಕಳವು ಮಾಡಿದೆ ಎಂಬ ಆರೋಪದ ಪರಿಣಾಮವಾಗಿ ಸ್ಫೋಟಗೊಂಡಿರುವ ಜಾಗತಿಕ ಹಗರಣದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮೂಲದ ಮಾಹಿತಿ ವಿಶ್ಲೇಷಕ ಸಂಸ್ಥೆಯು ಈಗ ವಿಶ್ವಾದ್ಯಂತ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ವಿಶ್ವವ್ಯಾಪಿ ’ಮಾಹಿತಿ ಕಳವು ಹಗರಣ ಭುಗಿಲೆದ್ದ ಬಳಿಕ ಭಾರತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯ ಸೇವೆ ಬಳಸಿಕೊಂಡಿರುವುದಾಗಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿವೆ.  ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯ ಭಾರತದ ಆಧೀನ ಸಂಸ್ಥೆಯಾಗಿರುವ ಓವೆಲೆನೊ ಬಿಸಿನೆಸ್ ಇಂಟಲಿಜೆನ್ಸ್ (ಒಬಿಐ) ಸಂಸ್ಥೆಯು ತನ್ನ ಗ್ರಾಹಕರ ಪಟ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿ(ಯು) ಹೆಸರುಗಳನ್ನು ಪ್ರಕಟಿಸಿದ್ದು, ಕಂಪೆನಿಯ ಉಪಾಧ್ಯಕ್ಷ ಹಿಮಾಂಶು ಶರ್ಮ ಅವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ೨೭೨ಪ್ಲಸ್ ಸ್ಥಾನಗಳನ್ನು ಯಶಸ್ವಿಯಾಗಿ ದೊರಕಿಸಿರುವುದಾಗಿ ಪ್ರತಿಪಾದಿಸಿಕೊಂಡಿದ್ದರು.  ಕಂಪೆನಿಯು ೫೦ ಮಿಲಿಯ (೫ ಕೋಟಿ) ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಪಡೆದುಕೊಂಡು ಬಳಿಕ ೨೦೧೬ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಮೇಲೆ ಪ್ರಭಾವ ಬೀರಲು ಬಳಸಿಕೊಂಡಿತು ಎಂಬ ಆಪಾದನೆಗೆ ಗುರಿಯಾಗಿದೆ. ಇದೇ ರೀತಿ ಬ್ರೆಕ್ಸಿಟ್ ಜನಮತಗಣನೆ ಮತ್ತು ೨೦೧೪ರ ಲೋಕಸಭಾ ಚುನಾವಣೆಯಲ್ಲೂ ಕಂಪೆನಿ ಇದೇ ರೀತಿ ವ್ಯವಹರಿಸಿತ್ತು ಎಂದು ಆಪಾದಿಸಲಾಗಿತ್ತು.  ಒಬಿಂಐ ಕೂಡಾ ತನ್ನ ವೆಬ್ ಸೈಟಿನಲ್ಲಿ ೨೦೧೦ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಾನು ಜೆಡಿ(ಯು) ಜೊತೆಗೆ ಕೆಲಸ ಮಾಡಿದ್ದುದಾಗಿ ಹೇಳಿಕೊಂಡಿತ್ತು. ಆ ವೇಳೆಗೆ ಭಾರತಿಯ ಜನತಾ ಪಕ್ಷವು (ಬಿಜೆಪಿ) ಜೆಡಿ(ಯು) ಮಿತ್ರ ಪಕ್ಷವಾಗಿತ್ತು.  ಕಳೆದ ವಾರ ಬಿಜೆಪಿಯು ಕಾಂಗ್ರೆಸ್ ಪಕ್ಷ ಮತ್ತು ಕೇಂಬ್ರಿಜ್ ಅನಾಲಿಟಿಕಾ ನಡುವಣ ಸಂಪರ್ಕಗಳನ್ನು ಪ್ರಶ್ನಿಸಿತ್ತು. ಕಂಪೆನಿಯು ಸಾಮಾಜಿಕ ಮಾಧ್ಯಮವಾದ ಫೇಸ್ ಬುಕ್‌ನಿಂದ ಮಾಹಿತಿ ಕಳವು ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಎತ್ತಿದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ’ಖಾಸಗಿತನದ ಉಲ್ಲಂಘನೆಯನ್ನು ಸಹಿತಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು.  ಕೇಂಬ್ರಿಜ್ ಅನಾಲಿಟಿಕಾ ಕಂಪೆನಿಯ ಕಾರ್ಯಶೈಲಿಯು ’ಆಧುನಿಕ ಕಾಲದ ವಸಾಹತುಶಾಹಿಯಂತೆ ಇದೆ ಎಂದು ಮಂಗಳವಾರ ಹೇಳಿದ ವೈಲೀ ಅವರು ಅದು ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳ ಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದರು.

2018: ನವದೆಹಲಿ:  ಸಿಖ್ ಧರ್ಮದ 10ನೇ ಗುರುವಾಗಿರುವ ಗುರು ಗೋವಿಂದ್ ಸಿಂಗ್ ಅವರ 350ನೇ ಜನ್ಮ ವಾರ್ಷಿಕೋತ್ಸವದ ಗೌರವ ಸೂಚಕವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) 350 ರೂ. ಮುಖಬೆಲೆಯ ವಿಶೇಷ ನಾಣ್ಯವನ್ನು ಹೊರತಂದಿತು.  ಇಲ್ಲಿ ಗಮನಾರ್ಹ ಸಂಗತಿಯೆಂದರೆ ನೂತನ 350 ರೂ.ಗಳ ನಾಣ್ಯವು ಸೀಮಿತ ಸಂಖ್ಯೆಯಲ್ಲಿ ಮಾತ್ರ ಚಲಾವಣೆಯಾಗಲಿದೆ.   ನಾಣ್ಯದ ಸುತ್ತಳತೆ 44 ಮಿಲ್ಲಿಮೀಟರ್ ಆಗಿದ್ದು, ಶೇಕಡಾ 50ರಷ್ಟು ಬೆಳ್ಳಿ, ಶೇ. 40ರಷ್ಟು ತಾಮ್ರ, ಶೇ. 05ರಷ್ಟು ನಿಕಲ್ ಹಾಗೂ ಶೇ.05ರಷ್ಟು ಸತು ಮಿಶ್ರಣವಾಗಿರಲಿದೆ.   34.65 ಗ್ರಾಂನಿಂದ 35.35 ಗ್ರಾಂ ಭಾರದ 350 ರೂ. ನಾಣ್ಯದ ಮುಂಭಾಗವು 'ಅಶೋಕ ಸ್ತಂಭ'ದಿಂದ ಕಂಗೊಳಿಸಲಿದೆ. ಇದರ ಕೆಳಗಡೆಯಾಗಿ 'ಸತ್ಯಮೇವ ಜಯತೇ' ಉಲ್ಲೇಖಿಸಿರುತ್ತದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿತು.  ನಾಣ್ಯದ ಮಗದೊಂದು ಬದಿಯಲ್ಲಿ 'ತಕ್ತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹೀಬ್' ಚಿತ್ರವು ಇರಲಿದೆ. ಇದರ ಮೇಲ್ಗಡೆ ಶ್ರೀ ಗುರು ಗೋವಿಂದ ಸಿಂಗ್ ಜೀ ಅವರ 350ನೇ ಜನ್ಮ ವಾರ್ಷಿಕೋತ್ಸವವನ್ನು  ದೇವನಾಗರಿ ಲಿಪಿಯಲ್ಲಿ ಹಾಗೂ ಕೆಳಗಡೆ ಆಂಗ್ಲ ಭಾಷೆಯಲ್ಲಿ ಉಲ್ಲೇಖಿಸಿಲಾಗುತ್ತದೆ.  ಸಿಖ್ ಧರ್ಮದ 10ನೇ ಗುರು ಗೋವಿಂದ ಸಿಂಗ್ ಅವರು 1666ನೇ ಇಸವಿಯಲ್ಲಿ ಜನಿಸಿದ್ದರು. ಅವರು ವೀರಯೋಧ, ಕವಿ ಹಾಗೂ ತತ್ವ ಜ್ಞಾನಿ ಮಾತ್ರವಲ್ಲದೆ ಸಿಖ್ ಧರ್ಮದ ನಾಯಕರಾಗಿದ್ದರು. ಅವರು ಮಾನವತ್ವಕ್ಕೆ ಪರಿಪೂರ್ಣ ಉದಾಹರಣೆ.   ಅಂದ ಹಾಗೆ 350 ರೂ. ಮುಖಬೆಲೆಯ ನಾಣ್ಯವನ್ನು ಎಷ್ಟು ಸಂಖ್ಯೆಯಲ್ಲಿ ಆರ್ಬಿಐ ಮುದ್ರಿಸಲಿದೆ ಎಂಬುದು ಗೊತ್ತಾಗಲಿಲ್ಲ.

2009: ವಾಯವ್ಯ ಪಾಕಿಸ್ಥಾನದ ಜಮ್ರುದ್ ಪಟ್ಟಣದ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಆತ್ಮಹತ್ಯಾ ದಾಳಿಕೋರ ತನ್ನನ್ನು ಸ್ಛೋಟಿಸಿಕೊಂಡ ಪರಿಣಾಮವಾಗಿ ಸುಮಾರು 70ಕ್ಕೂ ಹೆಚ್ಚು ಜನ ಮೃತರಾಗಿ 100ಕ್ಕೂ ಅಧಿಕ ಮಂದಿ ಗಾಯಗೊಂಡರು. ಸ್ಫೋಟದ ತೀವ್ರತೆಗೆ ಮಸೀದಿ ಪೂರ್ಣ ನೆಲಸಮವಾಯಿತು.

2009: ಇಂಡೋನೇಷ್ಯಾದ ತಂಗೆರಂಗ್ ಜಿಲ್ಲೆಯಲ್ಲಿ ಸಿತು ಗಿಂಟಂಗ್ ಅಣೆಕಟ್ಟೆ ಕುಸಿದು ಮೃತಪಟ್ಟವರ ಸಂಖ್ಯೆ 77ಕ್ಕೆ ಏರಿತು. 50 ಕ್ಕೂ ಅಧಿಕ ಮಂದಿ ಗಾಯಗೊಂಡರು. 100 ಕ್ಕೂ ಹೆಚ್ಚಿನ ಸಂಖ್ಯೆಯ ಜನಕಣ್ಮರೆಯಾದರು. ರಾಜಧಾನಿ ಜಕಾರ್ತದ ದಕ್ಷಿಣಕ್ಕಿರುವ ಈ ಅಣೆಕಟ್ಟೆ ಮಾರ್ಚ್ 26ರ ಬೆಳಗಿನ ಜಾವ ಕುಸಿದು ಬಿದ್ದು, ಪಕ್ಕದ ಜನವಸತಿ ಪ್ರದೇಶಗಳು ಜಲಾವೃತಗೊಂಡವು. ರಾತ್ರಿ ಭಾರಿ ಮಳೆ ಸುರಿದ ಕಾರಣ, 20 ದಶಲಕ್ಷ ಕ್ಯೂಬಿಕ್ ಮೀಟರ್ ಸಾಮರ್ಥ್ಯದ, 15 ಮೀಟರ್ ಎತ್ತರದ ಈ ಅಣೆಕಟ್ಟೆ ಕುಸಿಯಿತು. ಈ ಅಣೆಕಟ್ಟೆಯನ್ನು 1933 ರಲ್ಲಿ ನಿರ್ಮಿಸಲಾಗಿತ್ತು. ಆಗ ಇಂಡೋನೇಷ್ಯ ಡಚ್ ಆಳ್ವಿಕೆಯಲ್ಲಿತ್ತು. ನವೆಂಬರಿನಲ್ಲಿ ಕೂಡ ಈ ಅಣೆಕಟ್ಟೆ ಒಡೆದಿತ್ತು. ಆದರೆ ಯಾವುದೇ ಪ್ರಾಣಾಪಾಯ ಉಂಟಾಗಿರಲಿಲ್ಲ

2008: ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ, ನಾಲ್ವರು ಮೋಟಾರು ವಾಹನ ನಿರೀಕ್ಷಕರು ಮತ್ತು ಆಹಾರ ನಿರೀಕ್ಷಕರೊಬ್ಬರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಹಾಸನ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ಕೆ.ಪಿ. ಹೊನಕೇರಿ, ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಸದಾಶಿವ, ಮೋಟಾರು ವಾಹನ ನಿರೀಕ್ಷಕರಾದ ಎಚ್. ಸಿ. ಸತ್ಯನ್ (ಒಒಡಿ ಸಕಲೇಶಪುರ), ಶ್ರೀನಿವಾಸಪ್ಪ (ಒಒಡಿ ದೇವನ ಹಳ್ಳಿ), ಪ್ರಮಥೇಶ್ (ಚಿತ್ರದುರ್ಗ), ಎನ್. ಕರಿಯಪ್ಪ (ಒಒಡಿ ಹಾಸನ) ಮತ್ತು ಗುಲ್ಬರ್ಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಎಸ್. ಬಿ. ಫುಲಾರೆ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಿತು. ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಮತ್ತು ಡಿಐಜಿ ಚರಣ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪೊಲೀಸ್ ಅಧಿಕಾರಿಗಳು ಬೆಂಗಳೂರು, ಮಂಗಳೂರು, ಹಾಸನ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಮೈಸೂರು, ಗುಲ್ಬರ್ಗ ಮತ್ತಿತರ ಕಡೆಗಳಲ್ಲಿ ದಾಳಿ ನಡೆಸಿದರು.

2008: ಎರಡು ವಾರಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದು ದಾಖಲೆಯ ಪ್ರಯೋಗಗಳಿಗೆ ಸಾಕ್ಷಿಯಾದ `ಎಂಡೇವರ್' ಗಗನ ನೌಕೆ ಬೆಳಗ್ಗೆ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಫ್ಲಾರಿಡಾದ ಕೇಪ್ ಕೆನವರಲ್ನ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಏಳು ಮಂದಿ ಗಗನ ಯಾತ್ರಿಗಳನ್ನು ಹೊತ್ತಿದ್ದ `ಎಂಡೇವರ್' ಬೆಳಿಗ್ಗೆ 6.09 ಗಂಟೆಗೆ ಬಂದಿಳಿದಾಗ ಹೂಸ್ಟನ್ನಿನಲ್ಲಿನ `ನಾಸಾ' ನಿಯಂತ್ರಣ ಕೇಂದ್ರದ ಸಿಬ್ಬಂದಿ ಸಂತಸದಿಂದ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಬಾರಿಯ ಎಂಡೇವರ್ ಯಾನ ಅತ್ಯಂತ ಫಲಪ್ರದ ಎಂದು ವಿಜ್ಞಾನಿಗಳು ಬಣ್ಣಿಸಿದರು. ಒಟ್ಟು 16 ದಿನಗಳ ಈ ಯಾನದ ಅವಧಿಯಲ್ಲಿ ನೌಕೆಯು 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್ಎಸ್) ಅಡಗಿ ಕುಳಿತಿತ್ತು. ಈ ಸಂದರ್ಭದಲ್ಲಿ ವ್ಯೋಮಯಾನಿಗಳು 5 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿ ದಾಖಲೆ ಸೃಷ್ಟಿಸಿದ್ದರು. ಹಾಗೂ ಜಪಾನಿನ ಒಂದು ಪ್ರಯೋಗಾಲಯ ಮತ್ತು ಕೆನಡಾದ ರೊಬೊಟ್ ಒಂದನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2008: ಮಹಾರಾಷ್ಟ್ರ ನಿರ್ಮಾಣ ಸೇನೆಯು (ಎಂ ಎನ್ ಎಸ್) ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ವಿರುದ್ಧದ ದಾಳಿಯನ್ನು ಮುಂದುವರೆಸಿದ್ದು, ಈಗ ಭಿತ್ತಿಚಿತ್ರಗಳ ಮೂಲಕ ಅವರನ್ನು ಪರೋಕ್ಷವಾಗಿ ಟೀಕಿಸುವ ಕೆಲಸ ಮಾಡಿತು. ಪುಣೆ ಬಳಿಯ ಲೊಣಾವಾಲದಲ್ಲಿ ಖರೀದಿಸಿದ ಕೃಷಿ ಭೂಮಿಯನ್ನು ಮೂಲ ಮಾಲೀಕನಿಗೆ ವಾಪಸ್ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಅಮಿತಾಭ್ ಅವರ ನಿಲುವನ್ನು ಟೀಕಿಸಲು ಎಂ ಎನ್ ಎಸ್ ವ್ಯಂಗ್ಯ ಭಿತ್ತಿಚಿತ್ರವನ್ನು ಬಳಸಿತು. ಭಿತ್ತಿಚಿತ್ರದಲ್ಲಿ ರೇಖಾಚಿತ್ರದ ಕೆಳಗಡೆ ಮರಾಠಿಯಲ್ಲಿ `ಮಜೆ ದಾನ್ ಪರತ್ ಕರಾ' (ನಾನು ದಾನವಾಗಿ ನೀಡಿದ್ದನ್ನು ವಾಪಸ್ ಮಾಡು) ಎಂದು ಬರೆದು ನಂತರ `ಸೂಪರ್ ಶೇತ್ಕರಿ' (ಸೂಪರ್ ರೈತ) ಎಂದು ಬರೆಯಲಾಯಿತು.

2008: ಹಿಂದೂ ದೇವತೆ ದುರ್ಗಾದೇವಿಯ ಪ್ರತಿರೂಪದಂತೆ ಭಿತ್ತಿ ಚಿತ್ರಗಳಲ್ಲಿ ತಮ್ಮನ್ನು ಪ್ರತಿಬಿಂಬಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿಂದೂಗಳ ಭಾವನೆಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಆಪಾದಿಸಿ ಮುಜಾಫರಾಬಾದ್ ನ್ಯಾಯಾಲಯದಲ್ಲಿ ಸಲ್ಲಿಸಿದ ದೂರನ್ನು ವಿಚಾರಣೆಗೆ ಅಂಗೀಕರಿಸಲಾಯಿತು. ಸೋನಿಯಾ ಗಾಂಧಿ ಅವರು ಉತ್ತರಪ್ರದೇಶ ಮತ್ತು ಮುರದಾಬಾದ್ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಕೀಲ ಸುಧೀರ್ ಓಝಾ ಅವರು ಸಲ್ಲಿಸಿದ ದೂರನ್ನು ಸ್ವೀಕರಿಸಿದ ನ್ಯಾಯಾಧೀಶ ಎಚ್. ಕೆ. ಶ್ರೀವಾತ್ಸವ ಅವರು ಪ್ರಕರಣವನ್ನು ವಿಚಾರಣೆಗಾಗಿ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಕಳೆದ ಡಿಸೆಂಬರಿನಲ್ಲಿ ಮ್ಯಾಜಿಸ್ಟ್ರೇಟ್ ಅವರು ಈ ದೂರನ್ನು ವಜಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಓಝಾ ಅವರು ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದುರ್ಗಾದೇವಿಯಂತೆ ಕಾಣಿಸುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭಿತ್ತಿಚಿತ್ರವು ಟಿವಿ ಹಾಗೂ ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿತ್ತು.

2008: ಹೊಗೇನಕಲ್ ಸಮಗ್ರ ನೀರು ಸರಬರಾಜು ಯೋಜನೆಯನ್ನು ಜಾರಿ ಮಾಡಲು ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆಯು ಅಂಗೀಕರಿಸಿತು. 1,334 ಕೋಟಿ ರೂಪಾಯಿಗಳ ಜಪಾನ್ ಆರ್ಥಿಕ ನೆರವಿನ ಯೋಜನೆಯನ್ನು ಜಾರಿ ಮಾಡುವಾಗ ಕರ್ನಾಟಕವು ವಿರೋಧ ವ್ಯಕ್ತಪಡಿಸದಂತೆ ನೋಡಿಕೊಳ್ಳಬೇಕು ಎಂದು ಗೊತ್ತುವಳಿಯನ್ನು ಮಂಡಿಸಿದ ಸ್ಥಳೀಯಾಡಳಿತ ಸಚಿವ ಎಂ.ಕೆ. ಸ್ಟ್ಯಾಲಿನ್ ಅವರು ಕೇಂದ್ರವನ್ನು ಒತ್ತಾಯಿಸಿದರು. ಕರ್ನಾಟಕದ ಗಡಿಯಲ್ಲಿರುವ ಹೊಗೇನಕಲ್ಲಿನಲ್ಲಿ ನೀರು ಸರಬರಾಜು ಯೋಜನೆ ಜಾರಿ ಮಾಡುವುದಕ್ಕೆ ಬಿಜೆಪಿಯ ಕರ್ನಾಟಕ ಘಟಕ ಮತ್ತು ಇತರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹೊಗೇನಕಲ್ಲಿನಲ್ಲಿ ಧರಣಿ ನಡೆಸಿದ್ದರ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಈ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

2008: ಲೋಕಾಯುಕ್ತ ತನಿಖೆಗೆ ಒಳಗಾಗಿದ್ದ ಹತ್ತು ಅಧಿಕಾರಿಗಳ ಹೆಸರನ್ನು ಐಎಎಸ್ ಗೆ ಬಡ್ತಿ ನೀಡಲು ಶಿಫಾರಸು ಮಾಡಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ಅಧಿಕಾರಿಗಳ ಹೆಸರು ಶಿಫಾರಸು ಮಾಡಿರುವ ಕೃಷ್ಣ ಸರ್ಕಾರದ ಕ್ರಮ ಸಮರ್ಥನೀಯವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನ್ಯಾಯಮೂರ್ತಿ ಸಿ.ಕೆ. ಠಕ್ಕರ್ ಹಾಗೂ ಡಿ.ಕೆ. ಜೈನ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

2008: ಕೇಂದ್ರದ ಮಾಜಿ ಸಚಿವ ಹಾಗೂ ಬಿಹಾರದ ಬಿಜೆಪಿ ಮಾಜಿ ಮುಖಂಡ ಜೈ ನಾರಾಯಣ ಪ್ರಸಾದ್ ನಿಷಾದ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ನಿಷಾದ್, ತಮ್ಮ ಮಾತೃ ಪಕ್ಷ ಬಿಜೆಪಿ ತ್ಯಜಿಸಿದ್ದರಿಂದ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ ಎಂದು ರಾಜ್ಯಸಭಾ ಅಧ್ಯಕ್ಷ ಹಮಿದ್ ಅನ್ಸಾರಿ ತಿಳಿಸಿದರು. ನಿಷಾದ್, 2005ರ ಚುನಾವಣೆಯಲ್ಲಿ ಆರ್ ಜೆ ಡಿ ಪರ ಚುನಾವಣಾ ಪ್ರಚಾರ ಮಾಡಿದ್ದರಿಂದ ಸುಷ್ಮಾ ಸ್ವರಾಜ್ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.

2008: ಹಿರಿಯ ಧುರೀಣ ಎ. ಬಿ. ಬರ್ಧನ್ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ 4ನೇ ಬಾರಿಗೆ ಆಯ್ಕೆಯಾದರು. ಹೈದರಾಬಾದಿನಲ್ಲಿ ಪಕ್ಷದ 20ನೇ ರಾಷ್ಟ್ರೀಯ ಸಮ್ಮೇಳನದ ಮುಕ್ತಾಯ ದಿನ ನಡೆದ ಚುನಾವಣೆಯಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದರು. ಪಕ್ಷದ ನಲಗೊಂಡ ಕ್ಷೇತ್ರದ ಸಂಸದ ಎಸ್. ಸುಧಾಕರ್ ರೆಡ್ಡಿ ಅವರು ಉಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

2008: ವಾಯವ್ಯ ಚೀನಾದ ಜಿಯಾಂಗ್ ಉಗುರ್ ಪ್ರಾಂತ್ಯದಲ್ಲಿ ಪಟಾಕಿ ವಿಲೇವಾರಿ ಕೇಂದ್ರದಲ್ಲಿ ಪಟಾಕಿಗಳನ್ನು ನಾಶಪಡಿಸಲು ಯತ್ನಿಸಿದಾಗ ಸಂಭವಿಸಿದ ಸ್ಛೋಟದಿಂದ 25 ಮಂದಿ ಮೃತರಾಗಿ ಏಳು ಜನರಿಗೆ ಗಾಯಗಳಾದವು.

2008: ಗ್ರಂಥಾಲಯ ಇಲಾಖೆಯನ್ನು ದೇಶದಲ್ಲಿಯೇ ಮಾದರಿಯನ್ನಾಗಿ ರೂಪಿಸಿದ ಕೀರ್ತಿಗೆ ಭಾಜನರಾಗಿರುವ ಇಲಾಖೆಯ ನಿರ್ದೇಶಕ ಪಿ.ವೈ.ರಾಜೇಂದ್ರ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ `ರಂಗನಾಥನ್- ಕೌಲ ಪ್ರತಿಷ್ಠಾನ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಭಾರತೀಯ ಶೈಕ್ಷಣಿಕ ಗ್ರಂಥಾಲಯಗಳ ಸಂಘ, ಭಾರತೀಯ ಸಾರ್ವಜನಿಕ ಗ್ರಂಥಾಲಯಗಳ ಸಂಘ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನೌಕರರ ಸಂಘ, ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಹಾಗೂ ರಂಗನಾಥನ್- ಕೌಲ ಪ್ರತಿಷ್ಠಾನ ಜಂಟಿಯಾಗಿ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಬಗ್ಗೆ ತನ್ನ ಬಳಿ ಇರುವ ದಾಖಲೆಗಳಲ್ಲಿ ಯಾವ ಮಾಹಿತಿಯೂ ಇಲ್ಲ ಎಂಬ ಆಘಾತಕಾರಿ ವಿಚಾರವನ್ನು ಭಾರತ ಸರ್ಕಾರ ಬಹಿರಂಗಗೊಳಿಸಿತು. ದೆಹಲಿಯ ದೇವ್ ಅಶಿಷ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕುಗಳ ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವನ್ನು ಒಪ್ಪಿಕೊಂಡರು. ಸ್ವತಃ ಭಟ್ಟಾಚಾರ್ಯ ಅವರು ಈದಿನ ಈ ವಿಚಾರ ಬಹಿರಂಗ ಪಡಿಸಿದರು. ಭಟ್ಟಾಚಾರ್ಯ ಅವರು ಐದು ಪ್ರಶ್ನೆಗಳೊಂದಿಗೆ ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸಿ `ಸ್ವಾತಂತ್ರ್ಯ ಚಳವಳಿಯಲ್ಲಿ ಬೋಸ್ ಅವರು ಯಾವ ಪಾತ್ರ ವಹಿಸಿದ್ದರು.' ಎಂಬ ಬಗ್ಗೆ ಮಾಹಿತಿ ಬೇಕು ಎಂದು ಕೇಳಿದ್ದರು. ಬೋಸ್ ಅವರ ಬಗ್ಗೆ ಏನಾದರೂ ರಾಜತಾಂತ್ರಿಕ ಶಿಷ್ಟಾಚಾರವನ್ನು ಭಾರತ ಇಟ್ಟುಕೊಂಡಿದೆಯೇ? ಎಲ್ಲಾದರೂ ಅಂತಹ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ಬೋಸ್ ಯೋಗ್ಯರಾಗಿದ್ದಾರೆಯೇ ಎಂದೂ ಅರ್ಜಿದಾರರು ಮಾಹಿತಿ ಬಯಸಿದ್ದರು. `ನಿಮ್ಮ ಪತ್ರದಲ್ಲಿ ತಿಳಿಸಲಾಗಿರುವ ಅಂಶಗಳಿಗೆ ಸಂಬಂಧಿಸಿದ ಮಾಹಿತಿ ಲಭ್ಯವಿಲ್ಲ' ಎಂದು ಗೃಹ ಸಚಿವಾಲಯದ ಉಪ ಕಾರ್ಯದರ್ಶಿ ಎಸ್. ಕೆ. ಮಲ್ಹೋತ್ರ ಭಟ್ಟಾಚಾರ್ಯ ಅವರ ಅರ್ಜಿಗೆ ಉತ್ತರವಾಗಿ ಬರೆದ ಪತ್ರದಲ್ಲಿ ತಿಳಿಸಿದರು. `ಈ ಪ್ರತಿಕ್ರಿಯೆ ಕಂಡು ನನಗೆ ಆಘಾತವಾಯಿತು' ಎಂದು ಭಟ್ಟಾಚಾರ್ಯ ಇದಕ್ಕೆ ಪ್ರತಿಕ್ರಿಯಿಸಿದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತ ಮತ್ತು ಭಾರತದ ಜನತೆಗೆ ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ಜನರಿಗೆ ಇರುವ ಕೆಚ್ಚಿನ ಬಗ್ಗೆ ಜಾಗೃತಿ ಮೂಡಿಸಲು ಸಾಕಷ್ಟು ಕೆಲಸ ಮಾಡಿರಬಹುದು. ಆದರೆ ಇದನ್ನು ಸಮರ್ಥಿಸಲು ಬೇಕಾದ ಯಾವ ದಾಖಲೆಗಳೂ ಇಲ್ಲ' ಎಂದು ಸರ್ಕಾರ ಹೇಳುತ್ತದೆ ಎಂದು ಭಟ್ಟಾಚಾರ್ಯ ನುಡಿದರು. ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ್ದು ಮತ್ತು ಮಣಿಪುರದ ಮೋರೆಹ್ ನಲ್ಲಿ ಹಿಮ್ಮೆಟ್ಟುವ ಮುನ್ನ ಭಾರತದ ಮುಖ್ಯಭಾಗದ ಅತ್ಯಂತ ಸಮೀಪಕ್ಕೆ ಈ ಸೇನೆ ಬಂದಿತ್ತು ಎಂಬುದು ಐತಿಹಾಸಿಕ ವಾಸ್ತವಾಂಶ. ಆದರೆ ನನ್ನ ಅರ್ಜಿಗೆ ಸ್ಪಂದಿಸಿ ಈ ವಿಚಾರವನ್ನು ದಾಖಲೆಗೆ ಸೇರಿಸಲು ಸರ್ಕಾರ ನಿರಾಸಕ್ತವಾಗಿದೆ ಎಂದು ಭಟ್ಟಾಚಾರ್ಯ ಹೇಳಿದರು.

2007: ಕೇಂದ್ರೀಯ ಆಡಳಿತಾತ್ಮಕ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ ಮತ್ತು ಖ್ಯಾತ ಸಂಸ್ಕೃತ ವಿದ್ವಾಂಸ ವಾಸುದೇವ ಪೋದ್ದಾರ ಅವರನ್ನು ಸಂವಿಧಾನ ತಜ್ಞ ಮಾಜಿ ರಾಜ್ಯಸಭಾ ಸದಸ್ಯ ಎಲ್. ಎಂ. ಸಿಂಘ್ವಿ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ದಶರಥ ಮಲ್ ಸಿಂಘ್ವಿ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರಿಗೆ ಬ್ಯಾಂಕಾಕ್ ಮೂಲದ ಏಷ್ಯಾ ಮತ್ತು ಶಾಂತ ಸಾಗರ ವಲಯಕ್ಕಾಗಿ ರಚಿಸಲಾದ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಆಯೋಗವು (ಯುನೆಸ್ಕ್ಯಾಪ್) `ಯುನೆಸ್ಕ್ಯಾಪ್' ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿತು. ಆಯೋಗವು ತನ್ನ ಅರವತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬ್ಯಾಂಕಾಕಿನಲ್ಲಿ ನಡೆದ ಸಮಾರಂಭದಲ್ಲಿ ಅಮರ್ತ್ಯ ಸೇನ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿತು.

2006: ಧಾರವಾಡ, ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ 2006-07ನೇ ಸಾಲಿನಲ್ಲೂ 20 ಕೋಟಿ ರೂಪಾಯಿ ಮೀಸಲಿಟ್ಟಿರುವುದಾಗಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ಭಾರತದ ಗಗನ್ ನಾರಂಗ್ ಅವರು ಚೀನಾದ ಗುವಾಂಗ್ ಜೊನಲ್ಲಿ ಐ ಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವರ್ಣಪದಕ ಗೆದ್ದು 2008ರ ಬೀಜಿಂಗ್ ಒಲಿಂಪಿಕ್ ಕೂಟಕ್ಕೆ ನೇರ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಲಂಡನ್ನಿನಲ್ಲಿ ಈ ದಿನ ಜಸ್ಟಿನ್ ವಿಟ್ಟಿ ಎಂಬ ಮಹಿಳೆ ಹೆಣ್ಣು ಮಗು ಒಂದಕ್ಕೆ ಜನ್ಮನೀಡಿ ವಿಶಿಷ್ಠ ದಾಖಲೆ ನಿರ್ಮಾಣದ ಅಪರೂಪದ ಕೀರ್ತಿಗೆ ಪಾತ್ರಳಾದಳು. ಅಪರೂಪದ ಈ ದಾಖಲೆ ಏನೆಂದರೆ ಈ ಮಹಿಳೆ ಮತ್ತು ಆಕೆಯ ತಾಯಿ ಕೂಡಾ ಇದೇ ದಿನಾಂಕದಂದು ಹುಟ್ಟಿದ್ದು! ಇದರಿಂದಾಗಿ ಅಜ್ಜಿ, ತಾಯಿ ಮತ್ತು ಮೊಮ್ಮಗಳು ಈ ಮೂರು ತಲೆಮಾರಿನವರಿಗೆ ಒಂದೇ ದಿನ ಹುಟ್ಟುಹಬ್ಬ ಆಚರಿಸುವ ಯೋಗ ಲಭಿಸಿತು. ಪ್ರತಿ 1,33,225 ಜನರಲ್ಲಿ ಒಬ್ಬರು ಮಾತ್ರ ಈ ರೀತಿಯ ದಾಖಲೆಗೆ ಪಾತ್ರರಾಗುತ್ತಾರೆ.

2006: ಆಂಧ್ರ್ರಪ್ರದೇಶದ ಕರೀಂನಗರ ಜಿಲ್ಲೆಯ ಕಿಶನ್ ರಾವ್ ಪೇಟೆ ಗ್ರಾಮದಲ್ಲಿ ಜಿಲ್ಲಾ ಹೋಂಗಾರ್ಡ್ ಚಂದ್ರಲೀಲಾ (28) ಮತ್ತು ಕೈದಿ ಸ್ವಪ್ನಾ (25) ಎಂಬ ಇಬ್ಬರು ಮಹಿಳೆಯರು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸ್ವಪ್ನಾ ಜಿಲ್ಲಾ ಕಾರಾಗೃಹದಲ್ಲಿ ಇದ್ದಾಗ ಇವರಲ್ಲಿ ಸ್ನೇಹ ಅಂಕುರಿಸಿ ಅದು ಪ್ರೇಮವಾಗಿ ಬೆಳೆದು ವಿವಾಹದಲ್ಲಿ ಪರ್ಯವಸಾನಗೊಂಡಿತು. ಗ್ರಾಮಸ್ಥರೂ ಈ ಜೋಡಿಯನ್ನು ಮನತುಂಬಿ ಹರಸಿದರು.

2006: ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನವು 2005ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೆ ಕವಯಿತ್ರಿ ಪ್ರತಿಭಾ ನಂದಕುಮಾರ್ ಅವರನ್ನು ಆಯ್ಕೆ ಮಾಡಿತು.

2000: ಜಮೈಕಾದ ಕಿಂಗ್ ಸ್ಟನ್ನಿನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಟರ್ಿ್ನ ವಾಲ್ಷ್ ಅವರು ತಮ್ಮ 435ನೇ ವಿಕೆಟನ್ನು ಪಡೆದು ಕಪಿಲ್ ದೇವ್ ಅವರ 434 ಟೆಸ್ಟ್ ವಿಕೆಟ್ ದಾಖಲೆಯನ್ನು ಮುರಿದರು.

1979: ಭಾರತದ ಎಸ್. ವಿಜಯಲಕ್ಷ್ಮಿ ಹುಟ್ಟಿದ ದಿನ. ಈಕೆ ಚೆಸ್ ನಲ್ಲಿ ಭಾರತದ ಪ್ರಪ್ರಥಮ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆೆ ಪಾತ್ರರಾದರು.

1977: ಕ್ಯಾನರಿ ದ್ವೀಪದ ಲಾಸ್ ರ್ಹೋಡ್ಸ್ ವಿಮಾನ ನಿಲ್ದಾಣದ ರನ್ ವೇಯಲ್ಲಿ ಪಾನ್ ಅಮೆರಿಕನ್ ಮತ್ತು ಕೆ ಎಲ್ ಎಂ ಜಂಬೋ ವಿಮಾನಗಳು ಡಿಕ್ಕಿ ಹೊಡೆದು 574 ಮಂದಿ ಅಸು ನೀಗಿದರು. ಇದು ವಾಯುಯಾನ ಇತಿಹಾಸದ ಅತಿ ಭೀಕರ ದುರಂತ ಎನಿಸಿತು.

1968: ಬಾಹ್ಯಾಕಾಶಕ್ಕೆ ಮೊತ್ತ ಮೊದಲ ಬಾರಿಗೆ ಪಯಣಿಸಿದ ಗಗನಯಾನಿ ಯೂರಿ ಗಗಾರಿನ್ ಮಾಸ್ಕೊದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಮೃತರಾದರು. ಅವರು ಮೃತರಾದ ಗಾಸ್ತಸ್ಕ್ ಪಟ್ಟಣಕ್ಕೆ ಗಗಾರಿನ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

1961: ಇಂದು ವಿಶ್ವ ರಂಗಭೂಮಿ ದಿನ. ಇಂಟರ್ ನ್ಯಾಷನಲ್ ಥಿಯೇಟರ್ ಇನ್ ಸ್ಟಿಟ್ಯೂಟ್ 1961ರಲ್ಲಿ ವ್ಯವಸ್ಥೆಗೊಳಿಸಿದ ವಿಶ್ವ ರಂಗಭೂಮಿ ಸಮಾವೇಶದಲ್ಲಿ ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನ ಆಚರಿಸಲು ನಿರ್ಧರಿಸಲಾಯಿತು. 1962 ರಲ್ಲಿಪ್ಯಾರಿಸ್ಸಿನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯೊಂದಿಗೆ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.

1958: ನಿಖಿತ ಕ್ರುಶ್ಚೇವ್ ಅವರು ಸೋವಿಯತ್ ಕಮ್ಯೂನಿಸ್ಟ್ ಪಕ್ಷದ ಮೊದಲ ಕಾರ್ಯದರ್ಶಿ ಹುದ್ದೆಯ ಜೊತೆಗೆ ಸೋವಿಯತ್ ಪ್ರಧಾನಿಯಾದರು.

1863: ಲಕ್ಷುರಿ ಕಾರು ಮತ್ತು ವಿಮಾನ ಎಂಜಿನ್ ಗಳ ತಯಾರಕ ಸಂಸ್ಥೆ ರೋಲ್ಸ್- ರಾಯ್ಸ್ ಲಿಮಿಟೆಡ್ಡಿನ ಸ್ಥಾಪಕ ಸರ್ (ಫ್ರೆಡರಿಕ್) ಹೆನ್ರಿ ರಾಯ್ಸ್ (1863-1933) ಜನ್ಮದಿನ.

1845: ವಿಲ್ಹೆಮ್ ಕೊನ್ರಾಡ್ ರಾಂಟ್ ಜೆನ್ (1845-1923) ಹುಟ್ಟಿದ ದಿನ. ಜರ್ಮನ್ ಭೌತತಜ್ಞನಾದ ಈತ ಭೌತವಿಜ್ಞಾನಕ್ಕೆ ನೀಡಲಾಗುವ `ನೊಬೆಲ್' ಪ್ರಶಸ್ತಿಯನ್ನು 1901ರಲ್ಲಿ ಪಡೆಯುವ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ. ಪಾರದರ್ಶಕವಲ್ಲದ ವಸ್ತುಗಳ ಮುಖಾಂತರ ಹಾದುಹೋಗುವ ಕ್ಷ-ಕಿರಣಗಳ (ಎಕ್ಸ್-ರೇಸ್) ಪತ್ತೆಗಾಗಿ ಈತನಿಗೆ ಈ ಪ್ರಶಸ್ತಿ ಲಭಿಸಿತು.

1625: ಮೊದಲನೆಯ ಜೇಮ್ಸ್ ಸಾವಿನ ಬಳಿಕ ಮೊದಲನೆಯ ಚಾರ್ಲ್ಸ್ ಇಂಗ್ಲಿಷ್ ಸಿಂಹಾಸನವನ್ನು ಏರಿದ.

No comments:

Post a Comment