ಭಾರತದ ಮೊತ್ತ ಮೊದಲ ಆಲೋಪಥಿ ವೈದ್ಯೆ
ಮಹಿಳೆಯರು ಮನೆಬಿಟ್ಟು ಹೊರಗೆ ಹೋಗಬಾರದು ಎಂಬ ನಂಬಿಕೆ ಬಲವಾಗಿದ್ದ ಕಾಲದಲ್ಲಿ ಮಹಿಳೆಯೊಬ್ಬಳು ಮನೆಯಿಂದ ಹೊರಬಂದು ವಿದೇಶಕ್ಕೆ ತೆರಳಿ ಅಧ್ಯಯನ ಮಾಡಿ ಭಾರತದ ಮೊತ್ತ ಮೊದಲ `ಆಲೋಪಥಿ ವೈದ್ಯೆ' ಆದ ಕಥೆ ಇದು. ಆಕೆಯ ಈ ಸಾಧನೆಗೆ ಬೆಂಬಲವಾಗಿ ಇದ್ದದ್ದು ಆಕೆಯ ಪತಿ.... ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತನ್ನೇ ತಿರುವು ಮುರುವು ಮಾಡಿದ ಘಟನೆ ಇದು...! ಈ ಮಹಾನ್ ಮಹಿಳೆಗೆ ಗೂಗಲ್ ಈದಿನ ತನ್ನ ‘ಡೂಡಲ್’ ಗೌರವ ಸಲ್ಲಿಸಿದೆ. ನೆತ್ರಕೆರೆ ಉದಯಶಂಕರ
ನೂರ ಇಪ್ಪತ್ತೆರಡು ವರ್ಷಗಳ ಹಿಂದೆ- 1886ರ ಮಾರ್ಚ್ 11- ಭಾರತೀಯ ಮಹಿಳೆಯರ ಪಾಲಿಗೆ ಚಿರಸ್ಮರಣೀಯ ದಿನ. ಈದಿನ ಅಮೆರಿಕದ ಪೆನ್ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿನ ಘಟಿಕೋತ್ಸವ. ಪದವಿ ಪ್ರದಾನದ ದಿನ. ಅಮೆರಿಕನ್ನರಿಗೆ ಮಹಿಳಾ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯುವುದರಲ್ಲಿ ಅಂತಹ ವಿಶೇಷವೇನೂ ಇರಲಿಲ್ಲ. ಆದರೆ ಭಾರತೀಯರ ಮಟ್ಟಿಗೆ ಅದು ಸಂಭ್ರಮದ ಕ್ಷಣವಾಗಿತ್ತು.
ಈದಿನ ಪಾಶ್ಚಾತ್ಯ ವೈದ್ಯಕೀಯ ಶಿಕ್ಷಣ ಓದಿದ ಭಾರತದ ಮೊತ್ತ ಮೊದಲ ಮಹಿಳೆ `ವೈದ್ಯಕೀಯ ಪದವಿ' ಪಡೆದರು. ಅರ್ಥಾತ್ ಆಕೆ ಭಾರತದ ಮೊತ್ತ ಮೊದಲ ಮಹಿಳಾ ಆಲೋಪಥಿ ವೈದ್ಯೆ ಎನಿಸಿಕೊಂಡರು..! ಈ ಸಾಧನೆ ಮಾಡಿದ ಮಹಿಳೆಯ ಹೆಸರು ಆನಂದಿಬಾಯಿ ಜೋಶಿ.
ಆನಂದಿಬಾಯಿ ಜೋಶಿ ಬದುಕಿದ್ದುದು ಕೇವಲ 22 ವರ್ಷಗಳು. 1865ರಿಂದ 1887ರವರೆಗೆ ಅಷ್ಟೆ. ಆದರೆ ಈ ಚಿಕ್ಕ ವಯಸ್ಸಿನಲ್ಲಿ ಎಲ್ಲ ಸಾಂಪ್ರದಾಯಿಕ ಅಡ್ಡಿ, ಅಡಚಣೆ, ವಿರೋಧಗಳನ್ನು ಎದುರಿಸಿ ಆಕೆ ಮಾಡಿದ ಸಾಧನೆ ಮಾತ್ರ ಭಾರತದ ಮಹಿಳಾ ವೈದ್ಯಕೀಯ ಜಗತ್ತಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲುವಂತಹುದು.
ಅದು ಹತ್ತೊಂಬತ್ತನೆಯ ಶತಮಾನ. ಪರಂಪರಾಗತ ಕಟ್ಟುನಿಟ್ಟುಗಳಿಗೆ ಭಾರತೀಯರು, ಅದರಲ್ಲೂ ಭಾರತೀಯ ನಾರಿಯರು ಬಲವಾಗಿ ಅಂಟಿಕೊಂಡಿದ್ದ ಕಾಲ. ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಈಕೆ ಬೆಳೆದ ಪರಿಸರ, ಸ್ವತಂತ್ರ ವಿಚಾರ ಲಹರಿ ಮೊಳೆಯಲು ಆಸ್ಪದ ಕೊಡುವಂತಹುದಾಗಿರಲಿಲ್ಲ.
ಆದರೆ ಗೋಪಾಲರಾವ್ ಜೋಶಿ ಎಂಬ ಬ್ರಾಹ್ಮಣ ವಿಧುರನೊಬ್ಬ ಆಕೆಯ ಬದುಕನ್ನು ಪ್ರವೇಶಿಸಿದ್ದು ಆಕೆಯ ಬಾಳಿಗೆ ಒಂದು ದೊಡ್ಡ ತಿರುವನ್ನೇ ನೀಡಿತು. ವಾಸ್ತವವಾಗಿ ಆ ಕಾಲದ ಚಿಂತನೆಗಳಿಗೆ ಭಿನ್ನವಾಗಿ ಚಿಂತಿಸುತ್ತಿದ್ದ ಗೋಪಾಲರಾವ್ ವಿಧವೆಯೊಬ್ಬಳನ್ನು ಮದುವೆಯಾಗುವ ವಿಚಾರ ಹೊಂದಿದ್ದ ವ್ಯಕ್ತಿ. ಬಡ ಅಂಚೆ ಗುಮಾಸ್ತನಾಗಿದ್ದ ಆತನಿಗೆ ಮರುಮದುವೆಯಾಗಲು ವಿಧವೆ ಸಿಗಲಿಲ್ಲ.
ಕಡೆಗೆ ಆತ ಮದುವೆಯಾದದ್ದು 9 ವರ್ಷ ವಯಸ್ಸಿನ ಯಮುನಾಳನ್ನು. ಮದುವೆಯ ಬಳಿಕ ಆತ ತನ್ನ ಪತ್ನಿಯನ್ನು ವಿದ್ಯಾವಂತೆಯನ್ನಾಗಿ ಮಾಡಬೇಕು ಎಂಬ ಗುರಿ ಇಟ್ಟುಕೊಂಡ.
1965ರ ಮಾರ್ಚ್ 31ರಂದು ಮುಂಬೈ ಸಮೀಪದ ಕಲ್ಯಾಣದಲ್ಲಿ ಜನಿಸಿದ್ದ ಯಮುನಾಳಿಗೆ ಮದುವೆ ಬಳಿಕ ಗೋಪಾಲರಾವ್ ಜೋಶಿ ಇಟ್ಟ ಹೆಸರು ಆನಂದಿ. ಹುಟ್ಟಿದ ಮೊದಲ ಮಗು ವಾರದಲ್ಲೇ ಸತ್ತು ಹೋದಾಗ ಜೋಶಿ ಗಟ್ಟಿ ಮನಸ್ಸು ಮಾಡಿದ. ಪತ್ನಿಯನ್ನು ಕೇವಲ ವಿದ್ಯಾವಂತೆಯನ್ನಾಗಿ ಮಾಡುವುದಷ್ಟೇ ಅಲ್ಲ, ಆಕೆಯನ್ನು ವೈದ್ಯೆಯನ್ನಾಗಿ ಮಾಡಬೇಕೆಂಬ ಸಂಕಲ್ಪ ಮಾಡಿಕೊಂಡ.
ಇದಕ್ಕಾಗಿಯೇ ಗೋಪಾಲರಾವ್ ಮುಂಬೈಗೆ ವರ್ಗಾವಣೆ ಮಾಡಿಸಿಕೊಂಡ. ಅಲ್ಲಿನ ಮಿಷನ್ ಶಾಲೆಯಲ್ಲಿ ಆಕೆಗೆ ಶಿಕ್ಷಣ ಕೊಡಿಸಿದ.
ಅಮೆರಿಕಕ್ಕೆ ಹೋದರೆ ವೈದ್ಯಕೀಯ ಶಿಕ್ಷಣಕ್ಕೆ ವಿಪುಲ ಅವಕಾಶ ಇದೆ ಎಂದೂ ಅರಿತುಕೊಂಡ. ಆದರೆ ಅಮೆರಿಕಕ್ಕೆ ಹೋಗಲು ಬೇಕಾಗುವಷ್ಟು ಹಣ ಎಲ್ಲಿಂದ ಬರಬೇಕು? ಆದರೆ ಜೋಶಿ ಧೃತಿಗೆಡಲಿಲ್ಲ. ಅಮೆರಿಕದ ವಿವಿಧ ಸಂಸ್ಥೆಗಳಿಗೆ ನೆರವು ಕೋರಿ ಪತ್ರಗಳನ್ನು ಬರೆಯತೊಡಗಿದ.
ಗೋಪಾಲರಾವ್ ಜೋಶಿ ಮತ್ತು ಮಿಸ್ಟರ್ ವೈಲ್ಡರ್ ಎಂಬವರ ಮಧ್ಯೆ ಈ ವಿಚಾರವಾಗಿ ನಡೆದ ಪತ್ರ ವ್ಯವಹಾರ `ಅಮೆರಿಕನ್ ಕ್ರಿಶ್ಚಿಯನ್ ರಿವ್ಯೂ' ಪತ್ರಿಕೆಯಲ್ಲಿ ಬೆಳಕು ಕಂಡದ್ದು ಜೋಶಿಯ ಪ್ರಯತ್ನಗಳಿಗೆ ಹೊಸ ತಿರುವು ನೀಡಿತು. ಇದನ್ನು ಓದಿದ ಅಮೆರಿಕದ ಮಹಿಳೆ ಕಾರ್ಪೆಂಟರ್ ಎಂಬಾಕೆ ಆನಂದಿಬಾಯಿಗೆ ಪತ್ರ ಬರೆದಳು. ಇಬ್ಬರಲ್ಲಿ ಗೆಳೆತನ ಬೆಳೆಯಿತು.
ಅಂತೂ ಇಂತೂ ಹಣ ಹೊಂದಿಸಿಕೊಂಡು ಆನಂದಿಯನ್ನು ನ್ಯೂಯಾರ್ಕಿಗೆ ಕಳುಹಿಸಲು ಜೋಶಿ ಸಿದ್ಧತೆ ನಡೆಸಿದ.
ಸಂಪ್ರದಾಯಸ್ಥರಿಂದ ಇದಕ್ಕೂ ವಿರೋಧ ವ್ಯಕ್ತವಾಯಿತು. ಆದರೂ ಕೆಲವು ಆಸಕ್ತರು, ಸಮಾಜ ಸುಧಾರಕರು ಜೋಶಿ ದಂಪತಿಯ ನೆರವಿಗೆ ಬಂದರು. ಆಕೆಗೆ ಬೀಳ್ಕೊಡುಗೆ ಏರ್ಪಡಿಸಿದರು.
`ನಾನು ಸರಿಯಾದ ಕೆಲಸ ಮಾಡುತ್ತ್ತಿದ್ದೇನೆ ಎಂದು ನನಗೆ ಅನ್ನಿಸುತ್ತಿದೆ. ಮಹಿಳಾ ವೈದ್ಯಳಾಗಿ ಭಾರತೀಯ ಮಹಿಳೆಯರಿಗೆ ಹೆಚ್ಚು ನೆರವಾಗಲು ಸಾಧ್ಯವಾಗುತ್ತದೆ ಎಂಬುದು ನನ್ನ ನಂಬಿಕೆ' ಎಂದು ಈ ಸಂದರ್ಭದಲ್ಲಿ ಹೇಳಿದ ಆನಂದಿಬಾಯಿ `ನಾನು ಭಾರತೀಯ ಬ್ರಾಹ್ಮಣಳಾಗಿ ವಿದೇಶಕ್ಕೆ ಹೋಗುತ್ತಿದ್ದೇನೆ. ಹಾಗೆಯೇ ಹಿಂದಿರುಗುತ್ತೇನೆ' ಎಂದೂ ಘೋಷಿಸಿದಳು.
ಅಮೆರಿಕದಲ್ಲಿ ಕಾರ್ಪೆಂಟರ್ ಕುಟುಂಬ ಜೋಶಿ ದಂಪತಿಗೆ ಅಗತ್ಯ ಮಾರ್ಗದರ್ಷನಗಳನ್ನು ಮಾಡಿತು. ಮೆಡಿಕಲ್ ಕಾಲೇಜಿನಲ್ಲಿ ಸೀಟು ಹಾಗೂ ಶಿಷ್ಯವೇತನ ಪಡೆದ ಆನಂದಿ, ಹಣಕಾಸಿನ ಚಿಂತೆಗಳನ್ನು ಬದಿಗೊತ್ತಿ ಓದಿನಲ್ಲಿ ತನ್ಮಯಳಾದಳು.
ಇಷ್ಟ್ಲೆಲದರ ಮಧ್ಯೆ ಆಕೆ ತನ್ನ ಬದುಕಿನ ರೀತಿ, ನೀತಿ ಮಾತ್ರ ಬದಲಾಯಿಸಲಿಲ್ಲ. ಶುದ್ಧ ಸಸ್ಯಾಹಾರಿಯಾಗಿ, ಎಂಟು ಮೀಟರ್ ಉದ್ದದ ಮಹಾರಾಷ್ಟ್ರದ ಸೀರೆಯನ್ನೇ ಧರಿಸುತ್ತಾ ಭಾರತೀಯ ಬ್ರಾಹ್ಮಣ ಬದುಕನ್ನೇ ಬಾಳುತ್ತಾ ವೈದ್ಯಕೀಯ ಓದಿದಳು.
1886ರ ಮಾರ್ಚಿಯಲ್ಲಿ ಆಕೆ ಅಂತಿಮ ಪರೀಕ್ಷೆ ತೆಗೆದುಕೊಂಡು ಪದವಿ ಗಿಟ್ಟಿಸಿಕೊಂಡಳು. ಭಾರತಕ್ಕೆ ಹಿಂದಿರುಗುವ ಮುನ್ನವೇ ಕೊಲ್ಹಾಪುರದ ಎಡ್ವರ್ಡ್ ಆಸ್ಪತ್ರೆಯ ಮಹಿಳಾ ವಾರ್ಡನ್ ಉಸ್ತುವಾರಿ ಹೊಣೆಗಾರಿಕೆಯೂ ಆಕೆಯ ಪಾಲಿಗೆ ಲಭಿಸಿತು.
ಗೋಪಾಲರಾವ್ ಜೋಶಿಯ ಸಂಕಲ್ಪ ಸಿದ್ಧಿಸಿತು. ಪತ್ನಿಯನ್ನು ಭಾರತದ ಪ್ರಪ್ರಥಮ ಮಹಿಳಾ ವೈದ್ಯೆಯನ್ನಾಗಿ ರೂಪಿಸಿಕೊಂಡು 1886ರ ಅಕ್ಟೋಬರಿನಲ್ಲಿ ಗೋಪಾಲ ರಾವ್ ಆಕೆಯೊಂದಿಗೆ ಭಾರತಕ್ಕೆ ವಾಪಸಾದ. ಟೀಕೆ, ಬಹಿಷ್ಕಾರಗಳ ಬದಲಾಗಿ ಭಾರತದ ಮೊತ್ತ ಮೊದಲ ವೈದ್ಯೆಗೆ ಮೆಚ್ಚುಗೆ, ಅಭಿನಂದನೆಗಳ ಮಹಾಪೂರ ಹರಿಯಿತು. ಜೋಶಿ ದಂಪತಿಯ ಇಚ್ಛಾಶಕ್ತಿ ಕೊನೆಗೂ ಗೆದ್ದಿತ್ತು.
ಆದರೆ ವಿಧಿಯ ನಿರ್ಧಾರ ಬೇರೆಯೇ ಆಗಿತ್ತು. ವೈದ್ಯಳಾಗಿ ದೀರ್ಘಕಾಲ ಸೇವೆ ಸಲ್ಲಿಸುವ ಭಾಗ್ಯ ಆಕೆಗೆ ಇರಲಿಲ್ಲ.ವಿದೇಶದಲ್ಲಿ ಸರಳ, ಸಾತ್ವಿಕ, ಸಸ್ಯಾಹಾರವನ್ನು ಒಳಗೊಂಡ ಆಹಾರ ಪದ್ಧತಿ, ವೈದ್ಯಕೀಯ ಅಧ್ಯಯನ ಕಾಲದ ಸುಸ್ತು, ಸಮುದ್ರಯಾನದ ಬಳಲಿಕೆಯನ್ನು ಆಕೆಯ ಕೃಶ ಶರೀರ ಸಹಿಸಿಕೊಳ್ಳಲಿಲ್ಲವೇನೋ? ಆರೋಗ್ಯ ಹದಗೆಟ್ಟಿತು. 1887ರ ಫೆಬ್ರುವರಿ 26ರಂದು ತನ್ನ 22ನೇ ಹುಟ್ಟು ಹಬ್ಬಕ್ಕೆ ಒಂದು ತಿಂಗಳಿಗೂ ಮೊದಲು ಡಾ. ಆನಂದಿ ಬಾಯಿ ಇಹಲೋಕ ತ್ಯಜಿಸಿದಳು.
`ನಾನು ಮಾಡಬಹುದಾಗಿದ್ದ ಎಲ್ಲವನ್ನೂ ಮಾಡಿದ್ದೇನೆ' ಎಂಬ ಶಬ್ಧಗಳು ಆಕೆಯ ಕಟ್ಟ ಕಡೆಯ ಶಬ್ಧಗಳಾಗಿ ಉಳಿದುಬಿಟ್ಟವು. (ಸಾಧಾರ)
March 8th was celebrated as
International Woman’s Day all over the world including India. We praised and
recognized many women who contributed to various fields. But we forgot one
Anandi Bai who was the first woman allopathic doctor who got her medical degree
certificate on 11 March 1886 in America. PARYAYA
salutes this young lady doctor and her husband for their achievement. ಈ
ಲೇಖನವನ್ನು ಪರ್ಯಾಯ 10 ವರ್ಷಗಳ ಹಿಂದೆ ಇದೇ ದಿನ ಪ್ರಕಟಿಸಿತ್ತು. ಲಿಂಕ್ ಗೆ ಪಕ್ಕದ ಚಿತ್ರ ಕ್ಲಿಕ್ ಮಾಡಿ:
Posted 10th March 2008 by PARYAYA
Labels: Modala Sahasa/ First Feats
No comments:
Post a Comment