Saturday, March 3, 2018

ಇಂದಿನ ಇತಿಹಾಸ History Today ಮಾರ್ಚ್ 02

ಇಂದಿನ ಇತಿಹಾಸ History Today  ಮಾರ್ಚ್ 02
2018: ಹೈದರಾಬಾದ್:  ಸಿಪಿಐ (ಮಾವೋವಾದಿಗಳು) ತೆಲಂಗಾಣ ಘಟಕಕ್ಕೆ ಸೇರಿದವರೆನ್ನಲಾದ ಕನಿಷ್ಠ ೧೨ ಮಂದಿ ನಕ್ಸಲೀಯರು ನಸುಕಿನ ವೇಳೆಯಲ್ಲಿ ತೆಲಂಗಾಣ- ಛತ್ತೀಸ್ ಗಢ ಗಡಿಯಲ್ಲಿ ಭದ್ರತಾ ಪಡೆಗಳ ಜೊತೆ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಸಾವನ್ನಪ್ಪಿದರು. ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದ ನಕ್ಸಲೀಯರಲ್ಲಿ ಸಿಪಿಐ (ಮಾವೋವಾದಿಗಳು) ತೆಲಂಗಾಣ ರಾಜ್ಯ ಸಮಿತಿಯ ಉನ್ನತ ನಾಯಕ ಕಮಾಂಡರ್ ಹರಿ ಭೂಷಣ್ ಯಾನೆ ಜಗನ್ ಕೂಡಾ ಸೇರಿದ್ದಾನೆ ಎಂದು ವರದಿಗಳು ತಿಳಿಸಿದವು. ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಚೆರ್‍ಲ ಮಂಡಲ್ ಪ್ರದೇಶದಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಸಾವನ್ನಪ್ಪಿದವರಲ್ಲಿ ಸಕ್ಸಲೀಯ ಸಂಘಟನೆಗೆ ಸೇರಿದ ೬ ಮಂದಿ ಮಹಿಳೆಯರೂ ಸೇರಿದ್ದರು. ಗ್ರೆಹೌಂಡ್ಸ್  ನಕ್ಸಲ್ ನಿಗ್ರಹ ಪಡೆಯ ಒಬ್ಬ ಕಾನ್‌ಸ್ಟೇಬಲ್ ಕೂಡಾ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದು ಅವರನ್ನು ವಿಮಾನ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಕ್ಸಲೀಯರು ಅಡಗಿರುವರೆಂಬ ಮಾಹಿತಿಯನ್ನು ಆಧರಿಸಿ ಗ್ರೇಹೌಂಡ್ಸ್ ಸಿಬ್ಬಂದಿ ಸೇರಿದಂತೆ ಪೊಲೀಸರು ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಈ ಘರ್ಷಣೆ ಸಂಭವಿಸಿತು. ಪೊಲೀಸರು ನಕ್ಸಲೀಯರನ್ನು ಸುತ್ತುವರಿದು ಶರಣಾಗತರಾಗುವಂತೆ ಸೂಚಿಸಿದರು. ಆದರೆ ನಕ್ಸಲೀಯರು ಗುಂಡು ಹಾರಿಸತೊಡಗಿದರು. ಪರಿಣಾಮವಾಗಿ ಪೊಲೀಸರೂ ಪ್ರತಿಗುಂಡು ಹಾರಿಸಿದ್ದರಿಂದ ತೀವ್ರ ಗುಂಡಿನ ಚಕಮಕಿ ನಡೆಯಿತು. ಗುಂಡಿನ ಘರ್ಷಣೆ ಬಳಿಕ ಎಕೆ-೪೭ ರೈಫಲ್ ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಘರ್ಷಣೆಯ ಸ್ಥಳದಲ್ಲಿ ಪತ್ತೆಯಾಯಿತು. ಹತ ನಕ್ಸಲೀಯರ ಶವಗಳನ್ನು ಸಮೀಪದ ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿದವು. ಹಳೆ ವಾರಂಗಲ್ ಮತ್ತು ಖಮ್ಮಮ್ ಜಿಲ್ಲೆಗಳಲ್ಲಿ ಮಾವೋವಾದಿಗಳು ಬೀಡು ಬಿಟ್ಟಿರುವ ಬಗ್ಗೆ ಕಳೆದ ಕೆಲವು ವಾರಗಳಿಂದ ವರದಿಗಳು ಬಂದಿದ್ದವು. ಹಲವು ನಕ್ಸಲೀಯರು ನೆರೆಯ ಛತ್ತೀಸ್ ಗಢದಿಂದ ಬಂದಿದ್ದು, ಇಲ್ಲಿ ಸುಲಿಗೆ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದರು.
ಕಳೆದ ವರ್ಷ ಡಿಸೆಂಬರಿನಲ್ಲಿ ಪೀಪಲ್ಸ್ ವಾರ್ ಗ್ರೂಪಿನಿಂದ ಸಿಡಿದ ಚಂದ್ರಪುಲ್ಲ ರೆಡ್ಡಿ ಪೊರು ಬಟಕ್ಕೆ ಸೇರಿದ ೮ ಮಾವೋವಾದಿಗಳು ಭದ್ರಾದ್ರಿ ಕೊತಗುಡೆಮ್ ಜಿಲ್ಲೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ೨೦೧೪ರಲ್ಲಿ ತೆಲಂಗಾಣ ರಾಜ್ಯ ರಚನೆಯಾದ ಬಳಿಕ ನಕ್ಸಲೀಯರ ವಿರುದ್ಧ ನಡೆದ ಪ್ರಮುಖ ಕಾರ್ಯಾಚರಣೆ ಇದಾಗಿತ್ತು. ೨೦೦೫ರಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿ, ನಕ್ಸಲೀಯರ ಹಲವಾರು ಉನ್ನತ ನಾಯಕರನ್ನು ಕೊಂದು ಹಾಕಿದ ಬಳಿಕ ಅವಿಭಜಿತ ಆಂಧ್ರ ಪ್ರದೇಶದಲ್ಲಿ ನಕ್ಸಲೀಯ ಚಳವಳಿ ಬಹುತೇಕ ದುರ್ಬಲಗೊಂಡಿತ್ತು. ಆಗಿನ ರಾಜ್ಯ ಸರ್ಕಾರದ ಜೊತೆ ನಕ್ಸಲೀಯರು ನಡೆಸಿದ ಮೊದಲ ಮಾತುಕತೆ ಮತ್ತು ಕದನ ವಿರಾಮ ಮುರಿದು ಬಿದ್ದ ಬಳಿಕ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. ಮಾವೋವಾದಿ ಪಕ್ಷದ ಹಿರಿಯ ಸದಸ್ಯ ಹರಿಭೂಷಣ್, ಜಗನ್ ಮತ್ತಿ ನಡೆ ಅಪ್ಪಾರಾವ್ ಅವರೂ ಘರ್ಷಣೆಯಲ್ಲಿ ಅಸು ನೀಗಿರುವುದಾಗಿ ವದಂತಿಗಳಿವೆ. ನಕ್ಸಲೀಯರು ಅರಣ್ಯ ಪ್ರದೇಶದಲ್ಲಿ ಮಹತ್ವದ ಸಭೆಯೊಂದನ್ನು ನಡೆಸುತ್ತಿದ್ದರು. ಸಭೆಯಲ್ಲಿ ಸುಮಾರು ೭೦ ಮಂದಿ ಇದ್ದರು ಎಂದು ಹೇಳಲಾಯಿತು.

2018: ಬೀದರ್: ಛತ್ತೀಸ್‌ಗಢ - ತೆಲಂಗಾಣ ಗಡಿಯ ಬಿಜಾಪುರ ಜಿಲ್ಲೆಯ ಪೂಜಾರಿ ಕಂಕರ್ ಬಳಿ  ಈದಿನ ನಸುಕಿನ ಜಾವ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಬೀದರಿನ ಯೋಧ ಸುಶೀಲ್ ಬೋಪನಪಲ್ಲಿ ಹುತಾತ್ಮರಾಗಿದ್ದಾರೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿದವು.  ತೆಲಂಗಾಣದ ಗ್ರೇ ಹೌಂಡ್ಸ್ (ನಕ್ಸಲ್ ನಿಗ್ರಹ ಪಡೆ) ಸೇವೆಯಲ್ಲಿದ್ದ ಸುಶೀಲ್ ಮಾವೋವಾದಿ ನಕ್ಸಲೀಯರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ವರದಿ ಹೇಳಿತು.ಬೆಳಗ್ಗೆ ನಡೆದ ಘರ್ಷಣೆಯಲ್ಲಿ ೧೨ ಮಾವೋವಾದಿ ನಕ್ಸಲೀಯರು ಹತರಾಗಿದ್ದಾರೆ. ಈ ವೇಳೆ ಕೆಲವು ಯೋಧರು ಹುತಾತ್ಮರಾಗಿದ್ದು, ಕರ್ನಾಟಕದ ಬೀದರ್‌ನ ಸುಶೀಲ್ ಕೂಡ ಅವರಲ್ಲಿ ಒಬ್ಬರು ಎಂದು ವರದಿ ತಿಳಿಸಿತು.  ಮಾರ್ಚ್ 3ರ ಶನಿವಾರ ಮಂಗಲಪೇಟ್ ನ ಮೆಥೋಡಿಸ್ಟ್ ಚರ್ಚ್ ಎದುರಿನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವರದಿ ಹೇಳಿತು.

2018: ಜಮ್ಮು / ಶ್ರೀನಗರ: ಅಮ್ಮನ ಮೊರೆಗೆ ಕರಗಿದ ಯುವಕನೊಬ್ಬ ಉಗ್ರವಾದಕ್ಕೆ ತಿಲಾಂಜಲಿ ನೀಡಿ
ಮನೆಗೆ ವಾಪಸಾದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಘಟಿಸಿದೆ ಎಂದು ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಎಸ್. ಪಿ. ವೈದ್ ಹೇಳಿದರು.  ಡಿಜಿಪಿ ಎಸ್ ಪಿ ವೈದ್ ಅವರು ಟ್ವೀಟ್ ಮೂಲಕ ಈ ವಿಚಾರವನ್ನು ಬಹಿರಂಗ ಪಡಿಸಿದರು. ಉಗ್ರವಾದಿಗಳ ಗುಂಪು ಸೇರಿದ್ದ ಕಣಿವೆಯ ಇನ್ನೊಬ್ಬ ಬಾಲಕ, ತನ್ನ ತಾಯಿ ಅಳುತ್ತಾ ಮಾಡಿದ ಮೊರೆಗೆ ಕರಗಿ, ಹಿಂಸಾಚಾರಕ್ಕೆ ಎಳ್ಳುನೀರು ನೀಡಿ ಕುಟುಂಬಕ್ಕೆ ವಾಪಸಾಗಿದ್ದಾನೆ ಎಂದು ಟ್ವೀಟ್ ಮಾಡಿದ ವೈದ್ ಪುನಃ ಒಂದಾದ ಕುಟುಂಬಕ್ಕೆ ಶುಭ ಹಾರೈಸಿದರು. ಏನಿದ್ದರೂ, ಶರಣಾಗತನಾದ ಯುವಕನ ವಿವರಗಳನ್ನು ಆತನ ಭದ್ರತೆ ಸಲುವಾಗಿ ರಹಸ್ಯವಾಗಿ ಇರಿಸಲಾಗಿದೆ ಎಂದು ಅವರು ನುಡಿದರು.  ಸುಮಾರು ಒಂದು ಡಜನ್ನಿಗೂ ಹೆಚ್ಚು ಉಗ್ರಗಾಮಿಗಳು ಕಳೆದ ವರ್ಷದಿಂದೀಚೆಗೆ ಕಾಶ್ಮೀರದಲ್ಲಿ ತಮ್ಮ ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ಉಗ್ರಗಾಮಿಗಳ ಜೊತೆ ನಡೆಯುತ್ತಿರುವ ಘರ್ಷಣೆಗಳ ಈ ಹೊತ್ತಿನಲ್ಲೂ ಸ್ಥಳೀಯ ಉಗ್ರಗಾಮಿಗಳ ಶರಣಾಗತಿ ಕೊಡುಗೆಯನ್ನು ಅಂಗೀಕರಿಸುವುದಾಗಿ ಪೊಲೀಸರು ಪ್ರಕಟಿಸಿದರು.  ಮುಖ್ಯಮಂತ್ರಿ ಮೆಹಬೂಬಾ ಉಪಕ್ರಮ: ಕಳೆದ ತಿಂಗಳು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಬಿಜೆಪಿ ವಿಧಾನಪರಿಷತ್ ಸದಸ್ಯ ವಿಕ್ರಮ್ ರಾಂಧವ ಅವರ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ’ದಾರಿ ತಪ್ಪಿದ ನಾಲ್ವರು ಯುವಕರು ಹಿಂಸೆಯ ಮಾರ್ಗ ತ್ಯಜಿಸಿ, ಮುಖ್ಯ ಪ್ರವಾಹಕ್ಕೆ ಮರಳಿದ್ದಾರೆ. ತಮ್ಮ ಮಕ್ಕಳು ಹಿಂಸಾಚಾರ ತ್ಯಜಿಸಿ ಮನೆಗೆ ಬರುವಂತೆ ಮನವೊಲಿಸುವಂತೆ ಮಾಡುವ ನಿಟ್ಟಿನಲ್ಲಿ ಉಗ್ರಗಾಮಿಗಳ ಕುಟುಂಬ ಸದಸ್ಯರಿಗೆ ಕೌನ್ಸೆಲಿಂಗ್ ನಡೆಸುವ ಯತ್ನಗಳನ್ನೂ ಮಾಡಲಾಗುತ್ತಿದೆ ಎಂದೂ ತಿಳಿಸಿದ್ದರು. ತೀವ್ರವಾದ ಮತ್ತು ಉಗ್ರವಾದವನ್ನು ನಿಗ್ರಹಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಯುವಕರನ್ನು ಕ್ರಿಕೆಟ್ ಪಂದ್ಯಾಟದಂತಹ ಚಟುವಟಿಕೆಗಳಲ್ಲಿ ತೊಡಗಿಸಲು ಕ್ರಮ ಕೈಗೊಳ್ಳುತ್ತಿದೆ. ಪೊಲೀಸ್ ಠಾಣೆ ಮಟ್ಟದಲ್ಲಿ ಯುತ್ ಕ್ಲಬ್‌ಗಳನ್ನು ಸ್ಥಾಪಿಸಿ ಯುವಕರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಒಳಾಂಗಣ ಕ್ರೀಡೆಗಳ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದರು. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು ಇರಿಸುವ ಬಗೆಗೂ ಪ್ರಸ್ತಾಪಿಸಿದ ಮೆಹಬೂಬಾ, ಯುವಕರನ್ನು ಉಗ್ರವಾದದತ್ತ ಸೆಳೆಯುವಲ್ಲಿ ಇಂಟರ್ ನೆಟ್ ಕ್ರೀಡೆಗಳು ಮುಖ್ಯ ಪಾತ್ರ ವಹಿಸುತ್ತಿವೆ ಎಂದು ನುಡಿದರು.

2018: ನವದೆಹಲಿ: ಅನುಷ್ಕಾ ಶರ್ಮ ನಟಿಸಿರುವ ಭಯಾನಕ ಚಿತ್ರ ’ಪರಿ ಚಿತ್ರವು ಇಸ್ಲಾಮಿಕ್ ಮೌಲ್ಯಗಳನ್ನು
ತಪ್ಪಾಗಿ ಬಿಂಬಿಸಿದೆ ಎಂಬ ಕಾರಣ ನೀಡಿ ಪಾಕಿಸ್ತಾನಿ ಸೆನ್ಸಾರ್ ಮಂಡಳಿ ಅದಕ್ಕೆ ನಿಷೇಧ ವಿಧಿಸಿತು. ಬಾಲಿವುಡ್ ಚಿತ್ರವು ಮಾಟಮಂತ್ರ ಹಾಗೂ ಮುಸ್ಲಿಮ್ ವಿರೋಧಿ ಭಾವನೆಯನ್ನು ಬೆಳೆಸುತ್ತದೆ ಎಂಬ ಕಾರಣವನ್ನು ನೀಡಿ ಪಾಕಿಸ್ತಾನದ ಸೆನ್ಸಾರ್ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸೆನ್ಸಾರ್ಸ್-- ಸಿಬಿಎಫ್ ಸಿ) ಚಿತ್ರ ಪ್ರದರ್ಶನಕ್ಕೆ ನಿಷೇಧ ವಿಧಿಸಿದೆ ಎಂಬುದಾಗಿ ಮಂಡಳಿಯ ಹಿರಿಯ ಸದಸ್ಯರೊಬ್ಬರನ್ನು ಉಲ್ಲೇಖಿಸಿ ಪಾಕಿಸ್ತಾನದ ಪತ್ರಿಕೆ ವರದಿ ಮಾಡಿತು. ‘ಪರಿ ಚಿತ್ರದ ಚಿತ್ರಕಥೆ, ಸಂಭಾಷಣೆ ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾಗಿದೆ. ಮ್ಯಾಜಿಕ್ ಬಗ್ಗೆ ಇಸ್ಲಾಮ್ ಬಿನ್ನ ಸಿದ್ಧಾಂತಗಳನ್ನು ಹೊಂದಿದೆ. ಚಿತ್ರವು ಮಾಟ ಮಂತ್ರದತ್ತ (ಬ್ಲಾಕ್ ಮ್ಯಾಜಿಕ್) ವೀಕ್ಷಕರನ್ನು ಎಳೆಯುತ್ತದೆ ಮತ್ತು ನಮ್ಮ ಧರ್ಮಕ್ಕೆ ವ್ಯತಿರಿಕ್ತವಾದ ವಿಚಾರಗಳನ್ನು ಬೆಳೆಸುತ್ತದೆ ಎಂದು ಸಿಬಿಎಪ್ ಸಿ ಸದಸ್ಯರೊಬ್ಬರು ಹೇಳಿದ್ದನ್ನು ಪತ್ರಿಕೆ ಉಲ್ಲೇಖಿಸಿತು. ಸೆನ್ಸಾರ್ ಮಂಡಳಿಯ ನಿರ್ಣಯವನ್ನು ಬೆಂಬಲಿಸಿದ ಪಾಕಿಸ್ತಾನ ಚಲನಚಿತ್ರ ವಿತರಕರ ಸಂಘದ ಅಧ್ಯಕ್ಷ ಚೌಧರಿ ಏಜಾಜ್ ಕಮ್ರಾನ್ ಅವರು ’ನಮ್ಮ ಸಂಸ್ಕೃತಿ ಮತ್ತು ಇಸ್ಲಾಮಿಕ್ ಚರಿತ್ರೆಗೆ ವಿರುದ್ಧವಾದ ಯಾವುದೇ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಬೇಕು ಎಂದು ಹೇಳಿದರು. ಇನ್ನೊಂದು ಮೂಲವನ್ನು ಉಲ್ಲೇಖಿಸಿದ ಇನ್ನೊಂದು ಪತ್ರಿಕೆ ಚಿತ್ರವು ಖುರಾನ್ ಪದ್ಯಗಳನ್ನು ಹಿಂದು ಮಂತ್ರಗಳ ಜೊತೆಗೆ ಬೆರಕೆ ಮಾಡಿದೆ. ಅಲ್ಲದೆ ಚಿತ್ರವು ಮುಸ್ಲಿಮರನ್ನು ನೇತ್ಯಾತ್ಮಕವಾಗಿ ಬಿಂಬಿಸಿದೆ. ಮಾಟ ಮಾಡಲು ಮುಸ್ಲಿಮರು ಖುರಾನ್ ಪದ್ಯಗಳನ್ನು ಬಳಸುತ್ತಿರುವಂತೆ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಮಂಡಳಿಯ ಇನ್ನೊಬ್ಬರು ಹೇಳಿದ್ದನ್ನು ಉಲ್ಲೇಖಿಸಿತು. ಪ್ರೊಸಿತ್ ರಾಯ್ ಅವರು ನಿರ್ದೇಶಿಸಿರುವ ಭಯಾನಕ ಚಿತ್ರವನ್ನು ಅನುಷ್ಕಾ ಅವರ ಕ್ಲೀನ್ ಸೇಟ್ ಫಿಲಂಸ್ ಮತ್ತು ಕ್ರಿಅರ್ಜ್ ಎಂಟರ್ ಟ್ರೇನ್ ಮೆಂಟ್ ಜಂಟಿಯಾಗಿ ನಿರ್ಮಿಸಿವೆ. ಇದು ಅನುಷ್ಠಾ ಅವರ ಮೂರನೇ ಯೋಜನೆ. ಎನ್ ಎಚ್ ೧೦ ಮತ್ತು ಫಿಲ್ಲಾವುರ್ರಿ ಅವರ ಇದಕ್ಕೆ ಮೊದಲಿನ ಯೋಜನೆಗಳಾಗಿದ್ದವು. ಪರಿ ಚಿತ್ರವು ಭಾರತದಲ್ಲಿ ಈದಿನ  ಬಿಡುಗಡೆಯಾಗಿದ್ದು ಬಂಗಾಳಿ ನಟ ಪ್ರರಂಬ್ರತ ಚಟರ್ಜಿ  ಅವರೂ ಚಿತ್ರದಲ್ಲಿ ನಟಿಸಿದ್ದರು.  ‘ಪರಿ ಪಾಕಿಸ್ತಾನದಲ್ಲಿ ಈ ವರ್ಷ ನಿಷೇಧಕ್ಕೆ ಒಳಗಾಗುತ್ತಿರುವ ಎರಡನೇ ಚಿತ್ರವಾಗಿದೆ. ಕಳೆದ ತಿಂಗಳು ದೇಶವು ’ಪದ್ಮನ್ ಚಿತ್ರವನ್ನು ನಿಷೇಧಿಸಿತ್ತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ರಾಧಿಕಾ ಆಪ್ಟೆ ನಟಿಸಿದ್ದರು.

2018: ಜೆರುಸಲೇಮ್: ರಾಷ್ಟ್ರದ ಬೃಹತ್ ಟೆಲಿಕಾಂ ಕಂಪೆನಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ ತನಿಖೆಯ ಅಂಗವಾಗಿ ಇಸ್ರೇಲ್ ಪೊಲೀಸರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಅವರನ್ನು ಪ್ರಶ್ನಿಸಿದರು. ಪೊಲೀಸ್ ತನಿಖೆಗಾರರು ನೆತನ್ಯಾಹು ಅವರ ನಿವಾಸ ಪ್ರವೇಶಿಸುತ್ತಿರುವ ದೃಶ್ಯಾವಳಿಗಳನ್ನು ಟೆಲಿವಿಷನ್ ಗಳು ಪ್ರಸಾರ ಮಾಡಿದವು. ಸಾರಾ ಅವರನ್ನು ಬೇರೊಂದು ಕಡೆಯಲ್ಲಿ ಪ್ರಶ್ನಿಸಲಾಯಿತು ಎಂದು ವರದಿಗಳು ತಿಳಿಸಿದವು. ಕಳೆದ ತಿಂಗಳು ಬೆಜೆಖ್ ಟೆಲಿಕಾಂ ಕಂಪೆನಿಗೆ ಲಕ್ಷಾಂತರ ಡಾಲರ್ ಮೌಲ್ಯದ ವಹಿವಾಟು ನಡೆಸಲು ಅನುಕೂಲವಾಗುವಂತಹ ನಿಯಮಾವಳಿಯನ್ನು ರೂಪಿಸುತ್ತಿರುವ ಸಂಶಯದಲ್ಲಿ ನೆತನ್ಯಾಹು ಅವರ ಇಬ್ಬರು ನಂಬಿಕಸ್ಥರನ್ನು ಬಂಧಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ, ಬೆಜೆಕ್ ಸುದ್ದಿ ಸೈಟ್ ’ವಲ್ಲಾ ನೆತನ್ಯಾಹು ಅವರಿಗೆ ಪೂರಕವಾದ  ಸುದ್ದಿಗಳನ್ನು ಪ್ರಸಾರ ಮಾಡುವ ವ್ಯವಸ್ಥೆ  ಮಾಡಲಾಗಿದೆ ಎಂದು ಆಪಾದಿಸಲಾಗಿತ್ತು. ಕಳೆದ ವರ್ಷದವರೆಗೂ ಸಂಪರ್ಕ ಖಾತೆಯನ್ನೂ ಹೊಂದಿದ್ದ ಪ್ರಧಾನಿ ನೆತನ್ಯಾಹು ಅವರನ್ನು ಪ್ರಕರಣ ೪೦೦೦ ಎಂದೇ ಪರಿಚಿತವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ್ದು ಇದೇ ಮೊದಲು.  ನೆತನ್ಯಾಹು ಅವರ ವಾಷಿಂಗ್ಟನ್ ಭೇಟಿಗಿಂತ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ. ವಾಷಿಂಗ್ಟನ್ ಭೇಟಿಯಲ್ಲಿ ನೆತನ್ಯಾಹು ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಮುಂದಿನವಾರ ಎಐಪಿಎಸಿ ಯಲ್ಲಿ ಇಸ್ರೇಲ್ ಪರ ಮಾತನಾಡುವ ಕಾರ್ಯಕ್ರಮ ಇತ್ತು. ಈ ಮಧ್ಯೆ, ಇತರ ಎರಡು ಪ್ರಕರಣಗಳಲ್ಲೂ ನೆತನ್ಯಾಹು ಅವರ ವಿರುದ್ಧ ಭ್ರಷ್ಟಾಚಾರ ಕುರಿತು ದೋಷಾರೋಪ ಹೊರಿಸಲು ಪೊಲೀಸರು ಶಿಫಾರಸು ಮಾಡಿದ್ದಾರೆ ಎಂದು ವರದಿಗಳು ತಿಳಿಸಿದವು. ನೆತನ್ಯಾಹು ಅವರು ಸುಮಾರು ೩,೦೦,೦೦೦ ಡಾಲರು ಮೌಲ್ಯದ ಐಷಾರಾಮಿ ಕೊಡುಗೆಗಳನ್ನು  ಹಾಲಿವುಡ್ ಮೊಘಲ್ ಅರ್ನೋನ್ ಮಿಲ್ಚನ್ ಮತ್ತು ಆಸ್ಟ್ರೇಲಿಯಾದ ಕೋಟ್ಯಧೀಶ ಜೇಮ್ಸ್ ಪ್ಯಾಕರ್ ಅವರಿಂದ ಸ್ವೀಕರಿಸಿದ ಆರೋಪವಿತ್ತು.  ಇದಕ್ಕೆ ಬದಲಿಯಾಗಿ ನೆತನ್ಯಾಹು ಅವರು ಅಮೆರಿಕದ ವೀಸಾ ವಿಚಾರಗಳಲ್ಲಿ ಮಿಲ್ಚನ್ ಪರವಾಗಿ ಕಾರ್ಯ ನಿರ್ವಹಿಸಿದರು, ಭಾರತೀಯ ವ್ಯವಹಾರೋದ್ಯಮಿಯೊಬ್ಬರ ಜೊತೆ ಅವರನ್ನು ಸಂಪರ್ಕಿಸುವಂತೆ ಮಾಡಿದ್ದಲ್ಲದೆ, ತೆರಿಗೆ ಅನುಕೂಲ ಆಗುವಂತಹ ಶಾಸನ ರಚಿಸಿದರು ಎಂಬದು ಪೊಲೀಸರ ಆರೋಪ. ಇನ್ನೊಂದು ಪ್ರಕರಣದಲ್ಲಿ ನೆತನ್ಯಾಹು ಅವರು ವೃತ್ತ ಪತ್ರಿಕಾ ಪ್ರಕಾಶಕರೊಬ್ಬರಿಗೆ ಅವರ ಪ್ರತಿಸ್ಪರ್ಧಿ ಪತ್ರಿಕೆಯನ್ನು ದುರ್ಬಲಗೊಳಿಸುವಂತಹ ಶಾಸನವೊಂದರನ್ನು ರಚಿಸಿದರು, ಇದಕ್ಕೆ ಬದಲಿಯಾಗಿ ತಮ್ಮ ಪರವಾದ ಪ್ರಚಾರವನ್ನು ಪತ್ರಿಕೆಯಲ್ಲಿ ಪಡೆದರು ಎಂಬ ಆರೋಪವಿತ್ತು. ‘ಇಸೇಲ್ ಹಯೋಮ್ ಪತ್ರಿಕೆಯನ್ನು ದುರ್ಬಲಗೊಳಿಸಲು ನೆರವಾಗುವುದಕ್ಕೆ ಪ್ರತಿಯಾಗಿ ತನ್ನ ಪರವಾದ ಧನಾತ್ಮಕ ಪ್ರಚಾರವನ್ನು ನೀಡುವಂತೆ ’ಯೆಡಿಯೊಟ್ ಅಹ್ರೊನೊಟ್ ಪ್ರಕಾಶಕ ಅರ್ನೋನ್ ಮೊಝೆಸ್ ಅವರಿಗೆ ನೆತನ್ಯಾಹು ಅವರು ಸೂಚಿಸಿದ್ದು ದಾಖಲಾಗಿದೆ ಎನ್ನಲಾಯಿತು.  ಏನಿದ್ದರೂ, ನೆತನ್ಯಾಹು ಅವರು ತಾವು ಯಾವುದೇ ತಪ್ಪು ಮಾಡಿರುವೆನೆಂಬ ಆರೋಪವನ್ನು ನಿರಾಕರಿಸಿದರು. ಎಲ್ಲವೂ ತಮ್ಮ ವಿರುದ್ಧ ನಿಂತಿರುವ ಮಾಧ್ಯಮಗಳು ಹುಯಿಲೆಬ್ಬಿಸುತ್ತಿರುವ ಮಾಟಬೇಟೆಯ ಆಪಾದನೆಗಳು ಎಂದು ಅವರು ಹೇಳಿದರು.

2018: ಶ್ರೀನಗರ: ೨೦೧೮ರ ಫೆಬ್ರುವರಿಯಲ್ಲಿ ಪೊಲೀಸ್ ವಶದಿಂದ ಪರಾರಿಯಾಗಿದ್ದ ಲಷ್ಕರ್ -ಇ-ತೊಯ್ಬಾ ಉಗ್ರಗಾಮಿ ನವೀದ್ ಜುಟ್ ಶ್ರಿನಗರದಲ್ಲಿ ಹೊಸ ವಿಡಿಯೋಗಳಲ್ಲಿ ಪ್ರತ್ಯಕ್ಷನಾದ.  ನವೀದ್ ಜುಟ್, ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉನ್ನತ ಉಗ್ರಗಾಮಿಗಳ ಜೊತೆಗೆ ಕಣಿವೆಯ ಅರಣ್ಯ ಪ್ರದೇಶದಲ್ಲಿ ಇರುವುದು ಎರಡು ಹೊಸ ವಿಡಿಯೋಗಳಲ್ಲಿ ಕಂಡು ಬಂದಿದೆ ಎಂದು ವರದಿಗಳು ತಿಳಿಸಿದವು. ಸ್ವಯಂ ಚಾಲಿತ ರೈಫಲ್ ಹಿಡಿದುಕೊಂಡಿರುವ ಜುಟ್, ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳನ್ನು ಆಲಂಗಿಸಿಕೊಳ್ಳುವ ದೃಶ್ಯಗಳು ವಿಡಿಯೋದಲ್ಲಿ ಇದ್ದವು.  ಏನಿದ್ದರೂ, ಪೊಲೀಸರು ವಿಡಿಯೋ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.  ವಿಡಿಯೋದ ಸಾಚಾತನ ಬಗ್ಗೆ ತಾವು ಪರಿಶೀಲಿಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದರು.  ೨೦೧೮ರ ಫೆಬ್ರುವರಿ ೬ ರಂದು ಎಸ್ ಎಂ ಎಚ್ ಎಸ್ ಆಸ್ಪತ್ರೆಯಿಂದ ಪೊಲೀಸ್ ವಶದಲ್ಲಿದ್ದಾಗ ಪರಾರಿಯಾಗಿದ್ದ ಜುಟ್ ಬಳಿಕ ಪುಲ್ವಾಮದಲ್ಲಿ ಸದ್ದಾಮ್ ಪದ್ದೇರ್ ಬಳಿ ಸೇರಿಕೊಂಡಿದ್ದ ಎಂಬ ವರದಿಗಳಿಗಳಿದ್ದುದರಿಂದ  ದಕ್ಷಿಣ ಕಾಶ್ಮೀರದ ಅರಣ್ಯ ಪ್ರದೇಶದ ಯಾವುದೋ ಭಾಗದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಿರಬಹುದು ಎಂದು ನಂಬಲಾಯಿತು. ೨೦೧೮ರ ಫೆಬ್ರುವರಿ ೬ರಂದು ಜುಟ್ ಪರಾರಿ ಕಾಲದಲ್ಲಿ ಆತನ ಕಾವಲು ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರನ್ನು ಉಗ್ರಗಾಮಿಗಳು ಮತ್ತು ಸಹಚರರು ಗುಂಡಿಟ್ಟು ಕೊಂದಿದ್ದರು. ತನ್ಮೂಲಕ ಜುಟ್ ಪರಾರಿಗೆ ಅನುಕೂಲ ಮಾಡಿಕೊಟ್ಟಿದ್ದರು.  ಜುಟ್ ಪರಾರಿಗೆ ಅನುಕೂಲ ಮಾಡಿಕೊಟ್ಟ ಕಾರಣಕ್ಕಾಗಿ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.

2018: ನವದೆಹಲಿ: ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಭಿನ್ನಮತದ ಹಿನ್ನೆಲೆಯಲ್ಲಿ ಪ್ರಸಾರ ಭಾರತಿಯ ನೌಕರರಿಗೆ ವೇತನ ನೀಡಲು ಒದಗಿಸಬೇಕಾದ ನಿಧಿಯನ್ನು ತಡೆ ಹಿಡಿದಿದೆ ಎಂಬ ವರದಿ ಮಾನಹಾನಿಕರ ಮತ್ತು ಕೆಟ್ಟ ಸ್ವರೂಪದ ವರದಿ ಎಂದು ಕೇಂದ್ರ ಸರ್ಕಾರ ಬಣ್ಣಿಸಿತು. ಪ್ರಸಾರ ಭಾರತಿಯು ದೂರದರ್ಶನ ಮತ್ತು ಆಲ್ ಇಂಡಿಯ ರೇಡಿಯೋವನ್ನು ನಿರ್ವಹಿಸಿಕೊಂಡು ಹೋಗುವ ಸ್ವಾಯತ್ತ ಸಂಸ್ಥೆ. ಆದರೆ ಅದು ವಾರ್ತೆ ಮತ್ತು ಪ್ರಸಾರ ಸಚಿವಾಲಯದಿಂದ ಅನುದಾನವನ್ನು ಪಡೆಯುತ್ತದೆ.  ‘ಅರೆಬೆಂದ ವಾಸ್ತವಾಂಶಗಳನ್ನು ಆಧರಿಸಿ ತಪ್ಪು ಸುದ್ದಿಯನ್ನು ಹರಡಲಾಗಿದೆ. ಇದು ಸಾರ್ವಜನಿಕರ ಕಣ್ಣಿನಲ್ಲಿ ಸರ್ಕಾರದ ಗೌರವಕ್ಕೆ ಚ್ಯುತಿ ಉಂಟು ಮಾಡುವಂತಹುದು. ಇದು ಮಾನಹಾನಿಕರ ಸ್ವರೂಪದ್ದು ಎಂದು ಸಚಿವಾಲಯ ’ದಿ ವೈರ್ ಸುದ್ದಿ ವೆಬ್ ಸೈಟ್ ಸೇರಿದಂತೆ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಪ್ರತಿಕ್ರಿಯೆಯಾಗಿ ನೀಡಿದ ಹೇಳಿಕೆಯಲ್ಲಿ ತಿಳಿಸಿತು. ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯ ಪ್ರಕಾಶ್ ಅವರನ್ನು ಉಲ್ಲೇಖಿಸಿದ ’ದಿ ವೈರ್ ವೆಬ್ ಸೈಟ್, ಸಚಿವಾಲಯವು ಹಣ ಬಿಡುಗಡೆ ಮಾಡದೇ ಇರುವುದರಿಂದ ಜನವರಿ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಸಿಬ್ಬಂದಿಯ ವೇತನವನ್ನು ನಿಗಮವು ತನ್ನ ಆಕಸ್ಮಿಕ ನಿಧಿಯಿಂದ ಪಾವತಿ ಮಾಡಬೇಕಾಗಿದೆ. ಬಿಕ್ಕಟ್ಟು ಮುಂದುವರೆದರೆ ನಿಗಮವು ಏಪ್ರಿಲ್ ವೇಳೆಗೆ ಹಣವೇ ಇಲ್ಲದಂತಹ ಸ್ಥಿತಿಗೆ ತಲುಪುತ್ತದೆ ಎಂದು ವರದಿ ಮಾಡಿತ್ತು.  ಸಚಿವೆ ಸ್ಮೃತಿ ಇರಾನಿ ಮತ್ತು ಪ್ರಸಾರ ಭಾರತಿ ನಡುವಣ ಭಿನ್ನಾಭಿಪ್ರಾಯಗಳ ಫಲವಾಗಿ ಬಿಕ್ಕಟ್ಟು ಉದ್ಭವಿಸಿದೆ ಎಂದು ವರದಿ ತಿಳಿಸಿತ್ತು. ಸರ್ಕಾರದಿಂದ ಅನುದಾನ ಪಡೆಯುವುದರಿಂದ ಭಾರತ ಸರ್ಕಾರದ ಸಾಮಾನ್ಯ ಹಣಕಾಸು ನಿಯಮಗಳಿಗೆ (ಜಿಎಫ್ ಆರ್) ಪ್ರಸಾರ ಭಾರತಿ ಬದ್ಧವಾಗಿರಬೇಕಾಗುತ್ತದೆ ಎಂದು ಸರ್ಕಾರ ಹೇಳಿತು. ಸರ್ಕಾರದಿಂದ ಅನುದಾನ ಪಡೆಯುವ ಯಾವುದೇ ಸ್ವಾಯತ್ತ ಸಂಸ್ಥೆಯು, ಈ ಹಣವನ್ನು ಬಳಸಿ ತಾನು ನಡೆಸುವ ಚಟುಟಿಕೆಗಳು, ಭೌತಿಕ ಮತ್ತು ಆರ್ಥಿಕ ಗುರಿಗಳು ಇತ್ಯಾದಿಗಳನ್ನು ವಿವರಿಸಿ ಸಚಿವಾಲಯದ ಜೊತೆ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಬೇಕು ಎಂದು ಸರ್ಕಾರ ತಿಳಿಸಿತು.  ಸಾಕಷ್ಟು ನೆನಪೋಲೆಗಳನ್ನು ಕಳುಹಿಸಿದರೂ, ಪ್ರಸಾರ ಭಾರತಿಯು ಸಚಿವಾಲಯದ ಜೊತೆಗೆ ಎಂಒಯುವಿಗೆ ಸಹಿ ಮಾಡಲಿಲ್ಲ ಎಂದು ಹೇಳಿಕೆ ತಿಳಿಸಿತು. ಸೂರ್ಯ ಪ್ರಕಾಶ್ ಅವರ ಆಪಾದನೆಯಂತೆ ಹಣ ತಡೆ ಹಿಡಿಯಲಾಗಿದೆ ಎಂಬುದನ್ನು ಅದು ನಿರ್ದಿಷ್ಟವಾಗಿ ನಿರಾಕರಿಸಲಿಲ್ಲ.  ಸೂರ್ಯ  ಪ್ರಕಾಶ್ ಅವರು ಪ್ರತಿಕ್ರಿಯೆಗೆ ಲಭಿಸಲಿಲ್ಲ. ಆದರೆ ಪ್ರಸಾರ ಭಾರತಿಯ ಇತರ ಅಧಿಕಾರಿಗಳು ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾದ ಘಟನೆಗಳು ಹಿಂದೆಯೂ ನಡೆದಿವೆ. ಈ ಬಾರಿ ವಿಳಂಬವಾಗಿರುವುದು ಅಸಾಮಾನ್ಯ ಏನಲ್ಲ ಎಂದು ಪ್ರತಿಪಾದಿಸಿದರು.  ಏನಿದ್ದರೂ ಸಮಸ್ಯೆ ಶೀಘ್ರ ಇತ್ಯರ್ಥವಾಗದೇ ಇದ್ದಲ್ಲಿ, ಪ್ರಸಾರ ಭಾರತಿಯಲ್ಲಿ ಆಂತರಿಕ ನಿಧಿ ಇಲ್ಲವಾದ್ದರಿಂದ ಸಮಸ್ಯೆಗಳಾಗಬಹುದು ಎಂದು ಅವರು ನುಡಿದರು.  ಗೋವಾದಲ್ಲಿ ನಡೆದಿದ್ದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ಪ್ರಸಾರಕ್ಕಾಗಿ ಸಚಿವಾಲಯವು ನಿಯೋಜಿಸಿದ ಖಾಸಗಿ ಕಂಪೆನಿಗೆ ೩ ಕೋಟಿ ರೂಪಾಯಿ ಪಾವತಿಗೆ ಪ್ರಸಾರ ಭಾರತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಚಿವಾಲಯ ಮತ್ತು ಪ್ರಸಾರ ಭಾರತಿ ಮಧ್ಯೆ ಘರ್ಷಣೆ ಹುಟ್ಟಿದೆ ಎಂದು ’ದಿ ವೈರ್ ವರದಿ ತಿಳಿಸಿತ್ತು. ತನ್ನ ಬಳಿಯಲ್ಲೇ ನುರಿತ ಸಿಬ್ಬಂದಿ, ಮಾನವ ಸಂಪನ್ಮೂಲ ಇರುವುದರಿಂದ ಹೊರಗಿನವರಿಗೆ ಈ ಕೆಲಸ ವಹಿಸಬೇಕಾದ ಅಗತ್ಯ ಇಲ್ಲ ಎಂದು ದೂರದರ್ಶನ ಭಾವಿಸಿತು ಮತ್ತು ಖಾಸಗಿ ಕಂಪೆನಿಗೆ ಕೊಡಬೇಕಾದ ಬಿಲ್ ನ್ನು ತಡೆ ಹಿಡಿಯಿತು ಎಂದು ವೆಬ್ ಸೈಟ್ ವರದಿ ಹೇಳಿತ್ತು. ಈ ವರದಿ ಮಾನಹಾನಿಕರ ಸ್ವರೂಪದ್ದು ಎಂದು ಹೇಳಿದ ಸಚಿವಾಲಯ, ಏನಿದ್ದರೂ ಪ್ರಸಾರ ಭಾರತಿ ನೌಕರರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತನ್ನ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿತು.

2017: ಬೆಂಗಳೂರುಭ್ರಷ್ಟಾಚಾರದ ಆರೋಪ ಎದುರಿಸುವುದು ಬೇಡ ಎಂದು ಉಕ್ಕಿನ ಸೇತುವೆ ನಿರ್ಮಾಣ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ಘೋಷಿಸಿದರು. ವಿಧಾನ ಸೌಧದಲ್ಲಿ ಬೆಂಗಳೂರಿನ ಶಾಸಕರ ಜತೆ ಉನ್ನತ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಕಟಿಸಿದ ಜಾರ್ಜ್ಅವರು, ಉಕ್ಕಿನ ಸೇತುವೆ ರದ್ದುಗೊಳಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಜತೆ ಚರ್ಚಿಸಿದ್ದು, ಅವರ ಒಪ್ಪಿಗೆಯ ಮೇರೆಗೆ ಸರ್ಕಾರದ ನಿರ್ಧಾರ ಪ್ರಕಟಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ನಿರ್ಧಾರದೊಂದಿಗೆ ಕೆಪಿಎಸ್ಸಿಯ ಬಳಿಕ ಸರ್ಕಾರ ಮತ್ತೊಂದು ಯೂಟರ್ನ್ ತೆಗೆದುಕೊಂಡಂತಾಯಿತು. ರಾಜೀವ್ ಚಂದ್ರಶೇಖರ್ ಬೆಂಗಳೂರು ಅಭಿವೃದ್ಧಿಗೆಮಾರಕ: ಯೋಜನೆಯನ್ನು ವಿರೋಧಿಸುತ್ತಿರುವ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರು ಅಭಿವೃದ್ಧಿಗೆಮಾರಕವಾಗಿದ್ದಾರೆ. ಬೇರೆ ರಾಜ್ಯಗಳ ಜತೆ ಶಾಮೀಲಾಗಿದ್ದು, ರಾಜ್ಯದ ಅಭಿವೃದ್ಧಿ ಸಹಿಸದೇ ಹೀಗೆ ಮಾಡುತ್ತಿದ್ದಾರೆ. ಉಕ್ಕಿನ ಸೇತುವೆಯಲ್ಲಿ ರೂ.400 ಕೋಟಿಕಿಕ್ ಬ್ಯಾಕ್ಪಡೆಯಲಾಗಿದೆ ಎಂದು ಆರೋಪ ಮಾಡಿದ್ದ ಅವರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ ಎಂದು ಜಾರ್ಜ್ ಅವರು ರಾಜೀವ್ಚಂದ್ರಶೇಖರ್ಅವರ ವಿರುದ್ಧ ಹರಿಹಾಯ್ದರು. ಬಡವರ ಮನೆ ಸಕ್ರಮದ ವಿರುದ್ಧ ರಾಜೀವ್ ಚಂದ್ರಶೇಖರ್ ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಕೆರೆಯ ಬಫರ್ ಝೊನ್ 75 ಮೀಟರ್ ಎಂದು ಎನ್ಜಿಟಿ ಆದೇಶ ಹೊರಡಿಸಲು ಅವರೇ ಕಾರಣ ಎಂದು ದೂರಿದರು. ಬಿಜೆಪಿಯವರಿಗೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ. ರಾಜೀವ್ ಅವರ ಹಿಂದೆ ಇರುವುದು ಬಿಜೆಪಿ ನಾಯಕರು ಎಂದು ಜಾರ್ಜ್ಆಪಾದಿಸಿದರು. ಮೂಲಕ ಬೆಂಗಳೂರಿನ ಜನರ ಒತ್ತಡಕ್ಕೆ ಕೊನೆಗೂ ಮಣಿದ ಸರ್ಕಾರ ಉಕ್ಕಿನಸೇತುವೆ ಯೋಜನೆಯನ್ನು ರದ್ದುಗೊಳಿಸಿದೆ..
2017: ಕೋಯಿಕ್ಕೋಡ್ ಕೋಯಿಕ್ಕೋಡಿನ ಕಲ್ಲಾಚಿ ಸಮೀಪದ ನಾದಪುರಂನಲ್ಲಿರುವ ಆರ್ಎಸ್ಎಸ್ಕಚೇರಿ ಬಳಿ ಬಾಂಬ್ಸ್ಫೋಟ ಸಂಭವಿಸಿ, ನಾಲ್ವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡರು. ರಾತ್ರಿ 9 ಗಂಟೆ ಸುಮಾರಿಗೆ   ಆರ್ಎಸ್ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕಚೇರಿ ಸಮೀಪ ಬಾಂಬ್ ಸ್ಫೋಟಿಸಿತು. ಘಟನೆಯಲ್ಲಿ ಬಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಾದ ಸುಧೀರ್, ವಿನೇಶ್‌ , ಬಾಬು, ಸುನೀಲ್ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು  ನಾದಪುರಂನಲ್ಲಿ ಬಂದೋ ಬಸ್ತ್ ಮಾಡಿದರು.
2017: ನವದೆಹಲಿಯೋಧರಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂಬ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಬಿಎಸ್ಎಫ್ಯೋಧ ತೇಜ್ಬಹಾದೂರ್ ಯಾದವ್‌ ,ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದರು. ಬಹಾದೂರ್ಅವರ ಎರಡನೇ ವಿಡಿಯೋ  ಸ್ವರಾಜ್ಸಮಾಚಾರ್ಎಂಬ ವಾಹಿನಿಯ ಫೇಸ್ಬುಕ್ಪೇಜಿನಲ್ಲಿ ಬಿತ್ತರಗೊಂಡಿದೆ. ‘ನನ್ನ ಫೋನನ್ನು ಜಪ್ತಿ ಮಾಡಲಾಗಿದೆ. ನನಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಭ್ರಷ್ಟಾಚಾರದ ವಿರುದ್ಧ  ಸಮರ ಸಾರಿರುವ ಪ್ರಧಾನಿ ಮೋದಿ ಅವರಿಗೆ ಸೇನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಂದೇಶ ರವಾನಿಸಲು ಕಳಪೆ ಆಹಾರದ ವಿಡಿಯೋ ಬಿಡುಗಡೆ ಮಾಡಿದ್ದೆ. ಅದರಿಂದ ನಾನೀಗ ಮಾನಸಿಕ ಕಿರುಕಳ ಅನುಭವಿಸುತ್ತಿದ್ದೇನೆ. ಫೋನಿನ ಮೂಲಕ ನಾನು ಪಾಕಿಸ್ತಾನದ ಜತೆ ನಂಟು ಹೊಂದಿದ್ದೇನೆ ಎಂದು ಸಾಧಿಸಲು ಸೇನಾಧಿಕಾರಿಗಳು ಯತ್ನಿಸುತ್ತಿದ್ದಾರೆಎಂದು ತೇಜ್ಬಹಾದೂರ್ಅಲವತ್ತುಕೊಂಡಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ತೇಜ್ಬಹಾದೂರ್ಎಂದು ದೆಹಲಿಯಲ್ಲಿರುವ ಬಿಎಸ್ಎಫ್ಮುಖ್ಯ ಕಚೇರಿಯ ಮೂಲಗಳು ದೃಢೀಕರಿಸಿದವು. ಬಿಎಸ್ಎಫ್ಪ್ರಕಾರ ತೇಜ್ಬಹಾದೂರ್ಅವರ ಫೇಸ್ಬುಕ್ಪೇಜ್ನಲ್ಲಿ ಕೆಲ ಪಾಕಿಸ್ತಾನಿ ಗೆಳೆಯರನ್ನು ಹೊಂದಿದ್ದಾರೆ. ಹನಿಟ್ರ್ಯಾಪ್ಮೂಲಕ ಯೋಧರನ್ನು ಸೆಳೆದು ಭಿನ್ನಾಭಿಪ್ರಾಯ ಮಂಡಿಸಲು ಪ್ರಚೋದಿಸುವವರ ಬಗ್ಗೆ ಶಂಕೆ ಹಾಗೂ ಕೆಲ ಆಂತರಿಕ ತನಿಖೆಗೆ ಬಹಾದೂರ್ಅವರ ಫೋನನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್ಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕಳಪೆ ಆಹಾರ ಪೂರೈಕೆ ಕುರಿತು ಜನವರಿ ತಿಂಗಳಲ್ಲಿ ತೇಜ್ಬಹಾದೂರ್ವಿಡಿಯೋ ಬಿಡುಗಡೆ ಮಾಡಿದ್ದರು. ವಿಡಿಯೋಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
2017: ಕೈರೊಪಶ್ಚಿಮ ಮೊಸುಲ್ನಗರವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಇರಾಕ್ಪಡೆಗಳು ಮುನ್ನಡೆ ಸಾಧಿಸುತ್ತಿದ್ದಂತೆ ಇಸ್ಲಾಮಿಕ್ಸ್ಟೇಟ್ಉಗ್ರ ಸಂಘಟನೆಯ (ಐಎಸ್‌) ಮುಖ್ಯಸ್ಥ ಅಬು ಬಕರ್ಅಲ್ಬಾಗ್ದಾದಿತನ್ನ ಸಂಘಟನೆಗೆ ಇರಾಕ್ನಲ್ಲಿ ಸೋಲಾಗಿದೆಎಂದು ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದವು. ವಿದಾಯ ಭಾಷಣಮಾಡಿರುವ ಬಾಗ್ದಾದಿ, ‘ನಿಮ್ಮ ರಾಷ್ಟ್ರಗಳಿಗೆ ನೀವು ತಕ್ಷಣ ಹಿಂದಿರುಗಿ, ಇಲ್ಲವೇ ನಿಮ್ಮನ್ನು ನೀವೇ ಸ್ಫೋಟಿಸಿಕೊಳ್ಳಿಎಂದು ತನ್ನ ಸಂಘಟನೆಯ ಅರೆತರಬೇತು ಹೋರಾಟಗಾರರಿಗೆ ಸಂದೇಶ ರವಾನಿಸಿದ. ಬಾಗ್ದಾದಿ ತಾನು ನೀಡಿರುವ ಸಂದೇಶಕ್ಕೆವಿದಾಯ ಭಾಷಣಎಂದು ಹೆಸರಿಸಿದ್ದು, ಸಂದೇಶವನ್ನು ಐಸಿಸ್ಸಂಘಟನೆಯ ಮೌಲ್ವಿಗಳು, ಪಂಡಿತರು ಹಾಗೂ ಪ್ರಚಾರಕರಿಗೆ ಹಂಚಿಕೆ ಮಾಡಲಾಗಿದೆ ಎಂದು ಇರಾಕ್ ಸುದ್ದಿವಾಹಿನಿ ಅಲ್ಸುಮಾರಿಯಾವನ್ನು ಪ್ರಸ್ತಾಪಿಸಿ ಅಲ್ಅರೇಬಿಯಾ ವರದಿ ಪ್ರಕಟಿಸಿತು. ನಿಮ್ಮ ರಾಷ್ಟ್ರಗಳಿಗೆ ತಕ್ಷಣ ಹಿಂದಿರುಗಿ. ಇಲ್ಲವೇ ನಿಮ್ಮನ್ನು ನೀವೇ ಸ್ಫೋಟಿಸಿಕೊಳ್ಳಿ. ಸ್ವರ್ಗದಲ್ಲಿ ನಿಮಗೆ ನಾನು 72 ಮಹಿಳೆಯರನ್ನು ಅನುಭೋಗಕ್ಕೆ ನೀಡುತ್ತೇನೆಎಂದು ಬಾಗ್ದಾದಿ ಹೇಳಿದ್ದಾಗಿ ವರದಿ ತಿಳಿಸಿತು. ಇರಾಕ್ಸೇನೆಯು ಐಸಿಸ್ಉಗ್ರರ ವಶದಲ್ಲಿರುವ ಮೊಸುಲ್ವಶಪಡಿಸಿಕೊಳ್ಳುವತ್ತ ಮುನ್ನಡೆ ಸಾಧಿಸಿದ್ದು, ಉಗ್ರರನ್ನು ಹತ್ತಿಕ್ಕುವ ಎಲ್ಲಾ ಯತ್ನ ಕೈಗೊಂಡಿತ್ತು.
2009: ಕರ್ನಾಟಕದ 28 ಕ್ಷೇತ್ರಗಳೂ ಸೇರಿದಂತೆ ಒಟ್ಟು 543 ಲೋಕಸಭಾ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಕೇಂದ್ರ ಚುನಾವಣಾ ಆಯೋಗ ಏಪ್ರಿಲ್ 16ರಿಂದ ಮೇ 13ರವರೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಿತು. ಬೀದರ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯೂ ಸೇರಿದಂತೆ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಮತ್ತು 30ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುವುದು ಎಂದು ಮೂವರು ಸದಸ್ಯರ ಪೂರ್ಣ ಆಯೋಗದ ಸಭೆ ನಡೆಸಿದ ನಂತರ ಕೇಂದ್ರ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಪ್ರಕಟಿಸಿದರು.
2009: ಜಗತ್ತಿನ ಪರಿಸರ ಸ್ನೇಹಿ ಕುಬೇರರ 100 ಮಂದಿಯ ಪಟ್ಟಿಯಲ್ಲಿ ಭಾರತೀಯ ಶತಕೋಟ್ಯಾಧೀಶ ಮುಖೇಶ್ ಅಂಬಾನಿ ಸೇರಿದಂತೆ ನಾಲ್ವರ ಹೆಸರು ಸೇರ್ಪಡೆಯಾಯಿತು. ಜಗತ್ತಿನ ಈ ಶ್ರೀಮಂತರು ಹಿಂದೆಂದೂ ಇದ್ದಿರದಿದ್ದ ಪ್ರಮಾಣದಲ್ಲಿ ವಿದ್ಯುತ್ ಕಾರ್, ಸೌರಶಕ್ತಿ ಸೇರಿದಂತೆ ವೈವಿಧ್ಯಮಯ ಹಸಿರು ತಂತ್ರಜ್ಞಾನದ ಉದ್ದಿಮೆಗಳಲ್ಲಿ ಹಣ ಹೂಡಿದ್ದಾರೆ. ಆ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ ಎಂದು 'ಹಸಿರು ಶ್ರೀಮಂತ'ರ ಪಟ್ಟಿಯನ್ನು ಇದೇ ಮೊತ್ತ ಮೊದಲ ಬಾರಿಗೆ ಸಂಗ್ರಹಿಸಿ ಪ್ರಕಟಸಿದ 'ಸಂಡೇ ಟೈಮ್ಸ್' ಪತ್ರಿಕೆ ಹೇಳಿತು. ಮುಖೇಶ್ ಅಂಬಾನಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು. ಗಾಳಿ ವಿದ್ಯುತ್ ಸಂಸ್ಥೆ 'ಸುಝಾನ್ಲ್ ಎನರ್ಜಿ'ಯ ತುಳಸಿ ತಂತಿ (49ನೇ ಸ್ಥಾನ), ಜಾಯ್‌ಪಿ ಗ್ರೂಪ್ ಸಂಸ್ಥಾಪಕ ಜೈಪ್ರಕಾಶ್ ಗೌರ್ (50), ಎಂಜಿನಿಯರಿಂಗ್ ಸಂಸ್ಥೆ  'ಥರ್ಮಾಕ್ಸ್'ನ ಅನು ಆಘಾ (78) ಹಾಗೂ ಭಾರತ ಮೂಲದ ಬಂಡವಾಳದಾರ ವಿನೋದ್ ಖೊಸ್ಲಾ (52ನೇ ಸ್ಥಾನ) ಈ ಪಟ್ಟಿಯಲ್ಲಿ ಸ್ಥಾನ ಪಡೆದರು. ಈ ಹಸಿರು ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದವರು ಗಾಳಿ ವಿದ್ಯುತ್ ಕ್ಷೇತ್ರದಲ್ಲಿ 27 ಶತಕೋಟಿ ಪೌಂಡ್ ಹಣ ತೊಡಗಿಸಿದ ವಾರೆನ್ ಬಫೆಟ್. ನಂತರದ ಸ್ಥಾನ ಸಾಫ್ಟ್‌ವೇರ್ ದಿಗ್ಗಜ ಬಿಲ್ ಗೇಟ್ಸ್‌ನದು.

2009: ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಪೆಟ್ರೋಲಿಯಂ ಲಿ.ನ ನಿರ್ದೇಶಕ ಮಂಡಳಿಯು ಎರಡೂ ಘಟಕಗಳ ವಿಲೀನಕ್ಕೆ ಅನುಮತಿ ನೀಡಿತು. ಇದರೊಂದಿಗೆ ರಿಲಯನ್ಸ್ ವಿಶ್ವದ ಅತಿ ದೊಡ್ಡ ಪೆಟ್ರೊಕೆಮಿಕಲ್ ಘಟಕಗಳಲ್ಲಿ ಒಂದಾಗಿ ಹೊರಹೊಮ್ಮಿತು. ಬೃಹತ್ ಜಾಗತಿಕ ಕಂಪೆನಿಯಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ನಡೆಯಾಗಿದೆ ಎಂದು ಆರ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯಪಟ್ಟರು.

2009: ಖ್ಯಾತ ಗಾಯಕ ಪಂಡಿತ್ ಜಸ್‌ರಾಜ್ ಅವರನ್ನು 2009ನೇ ಸಾಲಿನ ಎಸ್.ವಿ.ನಾರಾಯಣಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರಿನ ಶ್ರೀರಾಮಸೇವಾ ಮಂಡಳಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್.ರಾಮಪ್ರಸಾದ್ ತಿಳಿಸಿದರು.

2008: `ಮೆನ್ ಇನ್ ಬ್ಲೂ' ಪಡೆಗೆ ಈದಿನ ಸ್ಮರಣೀಯ ದಿನ. ಎಂ.ಎಸ್.ದೋನಿ ಬಳಗ ಸಿಡ್ನಿಯಲ್ಲಿ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲಿನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯಿತು. ಇತ್ತ ಕ್ವಾಲಾಲಂಪುರದಲ್ಲಿ ಭಾರತದ ಜೂನಿಯರ್ ಆಟಗಾರರು ವಿಶ್ವಕಪ್ ಕ್ರಿಕೆಟ್ ಫೈನಲಿನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆದರು. ಸಿಡ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಅಮೋಘ ಹಾಗೂ ಅವಿಸ್ಮರಣೀಯ ಶತಕದ ನೆರವಿನಿಂದ ಭಾರತ ತಂಡದವರು ಆಸ್ಟ್ರೇಲಿಯಾ ಎದುರಿನ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲಿನಲ್ಲಿ ಆರು ವಿಕೆಟ್ಗಳ ಗೆಲುವು ಸಾಧಿಸಿದರು. ಇದರಿಂದ `ಟೀಮ್ ಇಂಡಿಯಾ' ಮೂರು ಪಂದ್ಯಗಳ ಫೈನಲಿನಲ್ಲಿ 1-0 ಮುನ್ನಡೆ ಸಾಧಿಸಿತು. ಕ್ವಾಲಾಲಾಂಪುರದಲ್ಲಿ ನಡೆದ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕಿರಿಯರ ತಂಡವು (19 ವರ್ಷ ವಯಸ್ಸಿನೊಳಗಿನ ತಂಡ) ಎರಡನೇ ಬಾರಿಗೆ ವಿಶ್ವ ಕ್ರಿಕೆಟ್ ಚಾಂಪಿಯನ್ ಪಟ್ಟ ಧರಿಸಿತು. ಕ್ಷಣ ಕ್ಷಣಕ್ಕೂ ಕುತೂಹಲಕ್ಕೆ ಕಾರಣವಾದ  ಫೈನಲಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ತಂಡವು 12 ರನ್ನುಗಳಿಂದ ಮಣಿಸಿತು. 2000ದಲ್ಲಿ ಶ್ರೀಲಂಕಾದಲ್ಲಿನಡೆದ ವಿಶ್ವಕಪ್ನಲ್ಲಿ ಮೊಹಮ್ಮದ್ ಕೈಫ್ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು.

2008: ವಾಯವ್ಯ   ಪಾಕಿಸ್ಥಾನದಲ್ಲಿ ತಾಲಿಬಾನ್  ಪರ ಉಗ್ರರ ವಿರುದ್ಧ  ಸೈನ್ಯ  ಸೆಣಸುತ್ತಿದ್ದ  ಪ್ರದೇಶದ ದಾರಾ ಅಡಮ್  ಖೇಲ ಎಂಬ ಸ್ಥಳದಲ್ಲಿ ಆತ್ಮಹತ್ಯೆ ಬಾಂಬ್ ದಾಳಿಯಿಂದಾಗಿ ಕನಿಷ್ಠ  43 ಜನ  ಮೃತರಾಗಿ,  35 ಜನ ಗಾಯಗೊಂಡರು. ಈ ಪ್ರದೇಶದಲ್ಲಿ ಬುಡಕಟ್ಟು  ಜನಾಂಗದ ನೂರಾರು ಹಿರಿಯರು ಹಾಗೂ ಸ್ಥಳೀಯ  ಅಧಿಕಾರಿಗಳು  ಸಭೆ ಸೇರಿದ್ದ  ಸಾಂಪ್ರದಾಯಿಕ  ಮಂಡಳಿ  `ಜೀರ್ಗಾ'ಕ್ಕೆ 18  ವರ್ಷ ವಯಸ್ಸಿನ ಆತ್ಮಹತ್ಯಾ ದಳದ ಸದಸ್ಯ ಪ್ರವೇಶಿಸಿ,  ಜನರು  ಸಭೆಯ  ನಂತರ ಹೊರಹೊಹೋಗುವ  ಸಂದರ್ಬದಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡ.

2008: ಮಂಗಳ ಗ್ರಹದಲ್ಲಿ ನೀರಿದೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಸಂಶೋಧಕರು ಹೇಳಿದ್ದು ಇದರಿಂದಾಗಿ ಗ್ರಹದ ಹೊಳೆಯುವ ಜಾಗದಲ್ಲಿ ನೀರಿರಬಹುದು ಎಂಬ ಈ ಮೊದಲಿನ  ಅಂದಾಜು ಸುಳ್ಳಾಯಿತು. ಮಂಗಳ ಗ್ರಹದಲ್ಲಿ ನೀರಿದೆ ಎಂಬ ವಾದವನ್ನು ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಮುಖ್ಯಸ್ಥ ಜಾನ್ ಡಿ. ಪೆಲ್ಲೆಟಿಯರ್ ಅವರು ಅಲ್ಲಗಳೆದರು. ನಾಸಾದ ಅತ್ಯಾಧುನಿಕ ಕ್ಯಾಮರಾಗಳು ರವಾನಿಸಿದ ಮಂಗಳನ ಅಂಗಳದ ಚಿತ್ರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಸಂಶೋಧಕರ ತಂಡವು, ಅಲ್ಲಿ ನೀರಿಲ್ಲ ಎಂಬ ತೀರ್ಮಾನಕ್ಕೆ ಬಂದಿತು. ಹರಿಯುವ ನೀರು ಹೇಗೆ ಕಾಣುತ್ತದೆ ಹಾಗೂ ಮರಳಿನ ಅಂಗಳ ಹೇಗೆ ನೀರಿರುವ ಭ್ರಮೆಯನ್ನು ಉಂಟು ಮಾಡುತ್ತದೆ ಎಂಬುದನ್ನು ಭೌತಶಾಸ್ತ್ರದ ನಿಯಮಗಳ ಪ್ರಕಾರ ಅಧ್ಯಯನ ಮಾಡಲಾಯಿತು. ಮಂಗಳ ಗ್ರಹದಲ್ಲಿ ಮರಳಿನ ರಾಶಿ ಅಥವಾ ಕುದಿಯುವ ಲಾವಾರಸ ಉಕ್ಕಿ ಉಂಟಾದ ಮಣ್ಣಿನ ರಾಶಿ ಛಾಯಾಚಿತ್ರದಲ್ಲಿ ಹರಿಯುವ ನೀರಿನಂತೆ ಕಂಡಿರುವ ಸಾಧ್ಯತೆಗಳಿವೆ ಎಂದು ಸಂಶೋಧಕರು ಅಭಿಪ್ರಾಯ  ಪಟ್ಟರು.

2008: ರೋಗಿಯ ಮುರಿದ ಕೈ ಮೂಳೆ ಜೋಡಿಸುವಲ್ಲಿ ವೈದ್ಯರು ನಿರ್ಲಕ್ಷ್ಯ ತಳೆದ ಕಾರಣಕ್ಕೆ  8 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಗ್ರಾಹಕ ನ್ಯಾಯಾಲಯ ಆದೇಶಿಸಿತು.  ದೂರು ನೀಡಿದ ಮುಖೇಶ್ ರಾಥೋಡ್ ಅವರ ಮಗನ ಕೈಯ ಮೂಳೆಯ ಜೋಡಣೆಯಲ್ಲಿ ಆಸ್ಪತ್ರೆ ವೈದ್ಯರು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಮತ್ತು ಆತನು ಸಂಪೂರ್ಣ ಗುಣವಾಗದಿದ್ದರೂ ಸಹ ಆತನನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರು ಎಂದು ದಕ್ಷಿಣ ದೆಹಲಿಯ ಜಿಲ್ಲಾ ಗ್ರಾಹಕ ನ್ಯಾಯಾಲಯ ಅಧ್ಯಕ್ಷ ವಿ.ಕೆ.ಗುಪ್ತ ಹೇಳಿದರು.

 2008: ಕೇಂದ್ರ ಸರ್ಕಾರವು `ರಾಮ ಸೇತು' ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪರಿಸರ ಸಂಬಂಧಿ ತೊಡಕುಗಳಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸ್ಪಷ್ಟ ಪಡಿಸಿತು. ರಾಮಸೇತು ಯೋಜನೆಯು `ಧಾರ್ಮಿಕ' ಕಾರಣಗಳಿಂದಷ್ಟೇ ವಿವಾದಕ್ಕೆ ಸಿಲುಕಿರುವುದಲ್ಲ, ಪರಿಸರ ಸಂಬಂಧಿ ಕಾರಣಗಳು ಕೂಡಾ ಈ ಯೋಜನೆಗೆ ಅಡ್ಡಗಾಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯಿಂದ ಸುನಾಮಿಯಂತಹ ಅಪಾಯ ಸಂದರ್ಭಗಳಲ್ಲಿ ಹಾನಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯವನ್ನು ಪ್ರಮಾಣಪತ್ರದಲ್ಲಿ ಸೇರಿಸಲಾಯಿತು. ಈ ಬಗ್ಗೆ ವಿಶೇಷ ಅಧ್ಯಯನ ನಡೆಸಲು ಕೇಂದ್ರ ಸರ್ಕಾರವು 2007ರ ಅಕ್ಟೋಬರ್ 5ರಂದು ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಸುನಾಮಿಯಿಂದ  ಉಂಟಾಗುವ ಹಾನಿಯ ಪ್ರಮಾಣವನ್ನು ತಗ್ಗಿಸುವಲ್ಲಿ ಈ ಯೋಜನೆಯು ಪೂರಕವಾಗಿದೆ ಎಂದು ಈ ಸಮಿತಿಯು ತಿಳಿಸಿದೆ ಎಂದೂ ಪ್ರಮಾಣ ಪತ್ರದಲ್ಲಿ ತಿಳಿಸಲಾಯಿತು. ಇಂಡೋನೇಷ್ಯಾ, ಅಂಡಮಾನ್ ಮತ್ತು ನಿಕೋಬಾರ್ ವಲಯಗಳ ಕಡಲಾಳದಲ್ಲಿ ಹುಟ್ಟು ಪಡೆಯುವ ಸುನಾಮಿ ಅಲೆಗಳ ಶಕ್ತಿಯು `ರಾಮಸೇತು'ವಿನ ಬಳಿ ಬರುವಾಗ ಕುಂದುವಂತೆ ಮಾಡುವಲ್ಲಿ ಹೊಸ ಯೋಜನೆಯು ಸಹಕಾರಿಯಾಗಲಿದೆ ಎಂದೂ ತಜ್ಞರು ತಿಳಿಸಿದ್ದಾರೆಂದೂ ಪ್ರಮಾಣಪತ್ರದಲ್ಲಿ ತಿಳಿಸಲಾಯಿತು. ಕಳೆದ 25 ತಿಂಗಳ ಕಾಲ ರಾಮಸೇತು ಯೋಜನಾ ಪ್ರದೇಶದ ಆಸುಪಾಸಿನ ಹಲವು ಸ್ಥಳಗಳಲ್ಲಿ ನಿರಂತರವಾಗಿ ಹವಾಮಾನ ಮತ್ತು ಪರಿಸರಕ್ಕೆ ಸಂಬಂಧಿಸಿದ ಅಂಕಿಸಂಖ್ಯೆಗಳನ್ನು ಸಂಗ್ರಹಿಸಲಾಗಿದ್ದು, ಅದನ್ನೇ ಮೂಲವಾಗಿಟ್ಟುಕೊಂಡು ನಡೆಸಲಾದ ಅಧ್ಯಯನ ಕೂಡಾ ಉದ್ದೇಶಿತ ಯೋಜನೆಗೆ ಪೂರಕವಾಗಿದೆ ಎಂದೂ ಪ್ರಮಾಣಪತ್ರದಲ್ಲಿ ಹೇಳಲಾಯಿತು. ಒಟ್ಟು 60 ಪುಟಗಳ ಈ ಪ್ರಮಾಣ ಪತ್ರವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಅಧ್ಯಕ್ಷರಾಗಿರುವ ರಾಜಕೀಯ ವ್ಯವಹಾರಗಳ ಸಂಸದೀಯ ಸಮಿತಿಯು ಅಂತಿಮವಾಗಿ ಸಿದ್ಧಗೊಳಿಸಿತು. 

2008: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಮೈಸೂರು ನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. 2007ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಮುಂಬೈನ ಶಿಮುಂಜೆ ಪರಾರಿ (ಸೀತಾರಾಮ ಮುದ್ದಣ್ಣ ಶೆಟ್ಟಿ) ತುಳು ಸಾಹಿತ್ಯ, ಬಿ.ಎನ್.ರಾವ್ ಬೋಳೂರು (ತುಳು ನಾಟಕ ಚಲನಚಿತ್ರ), ಸಣ್ಣಕ್ಕ ಬಂಗ್ಲೆಗುಡ್ಡೆ (ತುಳು ಜಾನಪದ) ಅವರಿಗೆ ತುಳು ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರೂ ಆದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಎ.ವಿವೇಕ್ ರೈ ಪ್ರದಾನ ಮಾಡಿದರು. 2006ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಕದ್ರಿ ನವನೀತ ಶೆಟ್ಟಿ (ಮೈಮೆ), ನವೀನ್ ಕುಮಾರ್ ಮರಿಕೆ (ಕತ್ತಲಿನಿಂದ) ಅವರಿಗೆ ನಾಡೋಜ ಡಾ.ದೇ.ಜವರೇಗೌಡ ವಿತರಿಸಿದರು.

2008: `ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ವಾಹನ ಸವಾರರೇ ಅಪಘಾತಕ್ಕೀಡಾದರೆ ಅದಕ್ಕೆ ಅವರೇ  ಸಂಪೂರ್ಣ ಹೊಣೆ' ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಬೆಂಗಳೂರಿನ ರೇಣುಕಾದೇವಿ ಎಂಬವರು ನಿರ್ಲಕ್ಷ್ಯದಿಂದ  ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಸಮಯದಲ್ಲಿ ಅಪಘಾತಕ್ಕೀಡಾದ ಪ್ರಕರಣವನ್ನು ಆಲಿಸಿದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಎಚ್.ಎಸ್. ಬೇಡಿ ಅವರನ್ನೊಳಗೊಂಡ ಪೀಠವು ಈ ತೀರ್ಪನ್ನುನೀಡಿತು. `ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಆತ/ಆಕೆ ಅಪಘಾತಕ್ಕೀಡಾದರೆ ಖುದ್ದು ವಾಹನ ಸವಾರರೇ ಅಪಘಾತಕ್ಕೆ ಜವಾಬ್ದಾರರು' ಎಂದು ಕೋರ್ಟ್ ಸ್ಪಷ್ಟ ಪಡಿಸಿತು. ಸೆಪ್ಟೆಂಬರ್ 11, 2000ರಂದು ರೇಣುಕಾದೇವಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಜಯನಗರದ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಬಿಎಂಟಿಸಿಯ ಪುಪ್ಪಕ್ ಬಸ್ಸೊಂದು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ಗಂಭೀರವಾಗಿ ಗಾಯಗೊಂಡು ಡಿಸೆಂಬರ್ 14, 2000ರವರೆಗೆ ರೇಣುಕಾದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಿಎಂಟಿಸಿ ವಿರುದ್ಧ  `ವಾಹನ  ಅಪಘಾತ ಪರಿಹಾರ ನ್ಯಾಯಮಂಡಳಿ' (ಎಂಎಸಿಟಿ) ಗೆ ದೂರು ಸಲ್ಲಿಸಿ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಿದ್ದರು. ರೇಣುಕಾದೇವಿ ಅವರಿಗೆ ಅಪಘಾತದ ಪರಿಹಾರಾರ್ಥವಾಗಿ ಬಿಎಂಟಿಸಿ ರೂ. 12.32ಲಕ್ಷ ಗಳನ್ನು ನೀಡಬೇಕೆಂದು ಸೂಚಿಸಿತ್ತು. ಆದರೆ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಕರ್ನಾಟಕ ಹೈಕೋರ್ಟ್ ಪರಿಹಾರ ಹಣದಲ್ಲಿ ಕಡಿತ ಮಾಡಿ, ಅಪಘಾತಕ್ಕೆ ರೇಣುಕಾ ದೇವಿ ಅವರ ನಿರ್ಲಕ್ಷ್ಯದ  ಚಾಲನೆಯೂ ಕಾರಣ ಎಂದೂ ತೀರ್ಪು ನೀಡಿತ್ತು. ಅಪಘಾತಕ್ಕೀಡಾಗುವ ಸಂದರ್ಭದಲ್ಲಿ ರೇಣುಕಾದೇವಿ ಅವರ ಸ್ಕೂಟರಿಗೆ ಬಸ್ಸಿನ ಮುಂದಿನ ಚಕ್ರ ತಾಗಿರದೇ ಹಿಂದಿನ ಚಕ್ರ ತಾಗಿತ್ತು. ಆಗ ರೇಣುಕಾ ಅವರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದರು ಎಂದೂ ರಾಜ್ಯ ಹೈಕೋರ್ಟ್ ಸ್ಪಷ್ಟವಾಗಿ ವಿವರಿಸಿ, ಪರಿಹಾರ ಧನದಲ್ಲಿ ಶೇ 50ರಷ್ಟು ಹಣ  ಕಡಿತಗೊಳಿಸಿ ಈ ಮಹತ್ವದ ತೀರ್ಪನ್ನು ನೀಡಿತ್ತು. ಸುಪ್ರೀಂಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿಯಿತು.

2007: ಮೇಲಧಿಕಾರಿಯನ್ನು ಹತ್ಯೆ ಮಾಡಿದ್ಧ ಯೋಧನಿಗೆ ಸೇನಾ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಭಾರತೀಯ ಸೇನೆಯಲ್ಲಿ ಯೋಧನೊಬ್ಬನಿಗೆ ಮರಣದಂಡನೆ ವಿಧಿಸಿದ್ದು ಇದೇ ಪ್ರಥಮ. ಜಮ್ಮು ಮತ್ತು ಕಾಶ್ಮೀರದ ನಿಶಾತ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಷ್ಟ್ರೀಯ ರೈಫಲ್ಸಿನ ಸೈನಿಕ ಕೆ.ಸಿ. ಬೆಹ್ರಾ ಮರಣದಂಡನೆಗೆ ಗುರಿಯಾಗಿರುವ ಯೋಧ. ಕಳೆದ ಅಕ್ಟೋಬರಿನಲ್ಲಿ ತನ್ನ ಮೇಲಧಿಕಾರಿ ಹಾಗೂ ಕಂಪೆನಿ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಸಾಕೇತ್ ಸಕ್ಸೇನಾ ಅವರನ್ನು ಈ ಯೋಧ ಗುಂಡಿಟ್ಟು ಹತ್ಯೆ ಮಾಡಿದ್ದ. 

2007: ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಶಿರೋಮಣಿ ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್ ಮತ್ತು ಮಣಿಪುರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಇಬೋಬಿ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. ಅತಿ ದೀರ್ಘಕಾಲ ಆಳ್ವಿಕೆ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾದಲ್ ಮುಖ್ಯಮಂತ್ರಿ ಗದ್ದುಗೆ ಏರಿದ್ದು ಇದು ನಾಲ್ಕನೇ ಬಾರಿ.

2007: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎ.ಬಿ. ವೋಹ್ರಾ, ಜಲಪೈಗುರಿ ಜಿಲ್ಲಾಧಿಕಾರಿ ಆರ್. ರಂಜಿತ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ತ್ರಿಪುರಾರಿ ಹಾಗೂ ಕೇಂದ್ರದ ಮಾಜಿ ಸಚಿವ ದೇವಿಪ್ರಸಾದ್ ರಾಯ್ ಸೇರಿದಂತೆ 18 ಜನರಿಗೆ ಕೋಲ್ಕತ್ತ ಹೈಕೋರ್ಟ್ ಆರು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿತು. ಹಂಗಾಮೀ ಮುಖ್ಯನ್ಯಾಯಮೂರ್ತಿ ಭಾಸ್ಕರ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಕೆ.ಕೆ. ಪ್ರಸಾದ್ ಅವರ ಪೀಠ ನೀಡಿದ ಈ ತೀರ್ಪು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಅಪರೂಪದ ತೀರ್ಪಿನ ಸಾಲಿಗೆ ಸೇರ್ಪಡೆಯಾಯಿತು. ಜಲಪೈಗುರಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ನಡೆದ ಚಳವಳಿ ತಡೆಯಲು ವಿಫಲರಾಗಿದ್ದು, ಚಳವಳಿಯಿಂದಾಗಿ ಒಂದು ತಿಂಗಳು ಅಲ್ಲಿನ ಎಲ್ಲ ನ್ಯಾಯಾಲಯಗಳು ಬಂದಾಗಿದ್ದವು. ಪರಿಸ್ಥಿತಿಯ ಮೇಲೆ ನಿಗಾ ಇರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಡಿಜಿಪಿ ಹಗುರವಾಗಿ ಪರಿಗಣಿಸಿದ್ದರು. ಇತಿಹಾಸದಲ್ಲಿಯೇ ಯಾವುದೇ ಜಿಲ್ಲೆಯಲ್ಲಿ ಒಂದು ತಿಂಗಳು ನ್ಯಾಯಾಲಯಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇದ್ದುದು ಇದೇ ಮೊದಲು ಎಂದು ನ್ಯಾಯಾಲಯ ಹೇಳಿತು.

2007: ಸಿಪಿಐ ಎಂಎಲ್ ಕಾರ್ಯಕರ್ತನ ಮೇಲೆ ಹಲ್ಲೆ ಮತ್ತು ಅನುಚಿತ ವರ್ತನೆಗಾಗಿ ಸಿವಾನಿನ ಆರ್ ಜೆ ಡಿ ವಿವಾದಾಸ್ಪದ ಸಂಸದ ಮಹಮ್ಮದ್ ಶಹಾಬ್ದುದೀನ್ಗೆ ಬಿಹಾರಿನ ಸಿವಾನ್ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಸೆರೆವಾಸ ವಿಧಿಸಿತು.

2007: ಬೊಫೋರ್ಸ್ ಹಗರಣದ ಪ್ರಮುಖ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅರ್ಜೆಂಟೀನಾ ಸರ್ಕಾರಕ್ಕೆ ಔಪಚಾರಿಕ ಮನವಿ ಪತ್ರ ಸಲ್ಲಿಸಿತು. ಕ್ವಟ್ರೋಚಿಯನ್ನು ಫೆ.6ರಂದು ಬಂಧಿಸಿ ಫೆಬ್ರುವರಿ 23 ರಂದು  ಜಾಮೀನಿನಡಿ ಬಿಡುಗಡೆ ಮಾಡಲಾಗಿತ್ತು. ಆತನ ಹಸ್ತಾಂತರಕ್ಕಾಗಿ 350 ಪುಟಗಳ ದಾಖಲೆ ಪತ್ರಗಳನ್ನೂ ಸರ್ಕಾರ ಸಲ್ಲಿಸಿತು.

2006: ಭಾರತ ಮತ್ತು ಅಮೆರಿಕ ನಡುವಣ ತೀವ್ರ ವಿವಾದಿತ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಕೊನೆಗೂ ಅಂಗೀಕಾರ ದೊರಕಿತು. ನಾಗರಿಕ ಮತ್ತು ಸೇನಾ ಉದ್ದೇಶದ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸುವ ಮೂಲಕ ಉಭಯರಾಷ್ಟ್ರಗಳು ವಿವಾದದ ಕಗ್ಗಂಟು ಬಗೆಹರಿಸಿಕೊಂಡವು. ಭಾರತದ 22 ಪರಮಾಣು ಸ್ಥಾವರಗಳ ಪೈಕಿ ನಾಗರಿಕ ಬಳಕೆಯ 14  ಸ್ಥಾವರಗಳನ್ನು ಅಂತಾರಾಷ್ಟ್ರೀಯ ಸುರಕ್ಷತಾ ನಿಯಮಗಳಿಗೆ ಒಳಪಡಿಸಲು ಭಾರತ ಸಮ್ಮತಿಸಿತು. ಆದರೆ ಫಾಸ್ಟ್ ಬ್ರೀಡರ್ ರಿಯಾಕ್ಟರುಗಳು ಯಾವುದೇ ಜಾಗತಿಕ ನಿಯಮಕ್ಕೆ ಒಳಪಡುವುದಿಲ್ಲ ಎಂದು ಸ್ಪಷ್ಟ ಪಡಿಸಿತು. ಹೈದರಾಬಾದ್ ಹೌಸಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲು ಬುಷ್ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು.

2006: ಭಾರತದ ಮೊದಲ ಆನ್ ಲೈನ್ ಚಲನಚಿತ್ರ ಬಾಡಿಗೆ ಸೇವೆ `70 ಎಂ.ಎಂ.'ನ್ನು ನಟಿ ಹಾಗೂ ಗಾಯಕಿ ವಸುಂಧರಾ ದಾಸ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

2006: ತನ್ನ ಗಂಡನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕಾಡುಗಳ್ಳ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿತು. 2004ರ ಅಕ್ಟೋಬರಿನಲ್ಲಿ ಜಂಟಿ ವಿಶೇಷ ಕಾರ್ಯಪಡೆ (ಎಸ್ ಟಿ ಎಫ್) ಗುಂಡಿಗೆ ವೀರಪ್ಪನ್ ಬಲಿಯಾಗಿದ್ದ. ಆತನನ್ನು ಮೂರುದಿನ ಮೊದಲೇ ವಶಕ್ಕೆ ತೆಗೆದುಕೊಂಡು ಹಿಂಸೆ ಕೊಟ್ಟು ಕೊಲ್ಲಲಾಗಿದೆ ಎಂಬುದು ಮುತ್ತುಲಕ್ಷ್ಮಿಯ ವಾದವಾಗಿತ್ತು.

1920: ಖ್ಯಾತ ಸಾಹಿತಿ, ಕರ್ನಾಟಕ ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ `ಸತ್ಯಕಾಮ' ಎಂದೇ ಪ್ರಸಿದ್ಧರಾದ ಅನಂತ ಕೃಷ್ಣ ಶಹಾಪೂರ (2-3-1920ರಿಂದ 20-10-1998) ಹುಟ್ಟಿದ ದಿನ. ಸ್ವಾತಂತ್ರ್ಯ್ಯ ಸಂಗ್ರಾಮದಲ್ಲಿ ಸಕ್ರಿಯಪಾತ್ರ ವಹಿಸಿದ್ದ ಅವರು ನಾಟಕ, ಕಥೆ, ಕಾದಂಬರಿಗಳ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಂಡ ಅನುಭವಿ. ಜಮಖಂಡಿ ಸಮೀಪದ ಕಲ್ಲಹಳ್ಳಿಯ ಗುಡ್ಡಗಾಡನ್ನು ನಂದನವನವಾಗಿ ಪರಿವರ್ತಿಸಿದ್ದರು. 1998ರ ಅಕ್ಟೋಬರ್ 20ರಂದು ಅವರು ನಿಧನರಾದರು.

1998: `ಟೈಟಾನಿಕ್' ಚಲನಚಿತ್ರವು ಒಂದು ಶತಕೋಟಿ ಡಾಲರ್ ಸಂಪಾದಿಸಿದ ಮೊತ್ತ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1986: ಕ್ಯಾನ್ಬೆರಾದಲ್ಲಿ ರಾಣಿ ಎರಡನೇ ಎಲಿಜಬೆತ್ ಆಸ್ಟ್ರೇಲಿಯಾ ಮಸೂದೆಗೆ ಸಹಿ ಹಾಕಿದರು. ಈ ಮಸೂದೆ ಬ್ರಿಟನ್ ಜೊತೆಗಿನ ಆಸ್ಟ್ರೇಲಿಯಾದ ಕೊನೆಯ ಸಂವೈಧಾನಿಕ ಬಾಂಧವ್ಯವನ್ನು ಕಡಿದುಹಾಕಿತು.

1983: ಕರ್ನಾಟಕ ಕ್ರಾಂತಿರಂಗದ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬೆಂಗಳೂರಿನಲ್ಲಿ  ನಿರ್ಧರಿಸಿದ ಪಕ್ಷದ ಸರ್ವ ಸದಸ್ಯರ ಸಭೆ, ಮಾಜಿ ಸಚಿವ ಎಸ್. ಬಂಗಾರಪ್ಪ ಅವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು.

1982: ಫಿರಾಕ್ ಗೋರಖ್ ಪುರಿ ಎಂಬುದಾಗಿ ಖ್ಯಾತರಾದ ರಘುಪತಿ ಸಹಾಯ್ ನಿಧನರಾದರು.

1963: ಕಲಾವಿದೆ ವಿ. ನಳಿನಿ ಜನನ.

1950: ಕಲಾವಿದೆ ಆರ್.ಎ. ರಮಾಮಣಿ ಜನನ.

1949: ಸರೋಜಿನಿ ನಾಯ್ಡು ನಿಧನರಾದರು. ಅವರು `ಭಾರತದ ಕೋಗಿಲೆ' (ನೈಟಿಂಗೇಲ್) ಎಂಬುದಾಗಿ ಖ್ಯಾತರಾಗಿದ್ದರು.

1946: ಕಲಾವಿದ ತುಮಕೂರು ಲಕ್ಷ್ಮಣರಾವ್ ಜನನ.

1940: ವೃತ್ತಿ ರಂಗಭೂಮಿಯಿಂದ ಹಿಡಿದು ಆಧುನಿಕ ನಾಟಕಗಳವರೆಗೆ ಹತ್ತಾರು ವಿಭಿನ್ನ ಪಾತ್ರಗಳ ಮೂಲಕ ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿರುವ ಅ.ನ. ರಾಮಣ್ಣ ಅವರು ನರಸಯ್ಯ- ನರಸಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಹದಮಲೆ ಗ್ರಾಮದಲ್ಲಿ ಜನಿಸಿದರು.

1939: ಕಲಾವಿದ ಕೆ.ಜೆ. ವೆಂಕಟಾಚಾರ್ ಜನನ.

1916: ಕಲಾವಿದ ಮೇಲಗಿರಿ ನಿಂಗನಗೌಡ ಪಾಟೀಲ ಜನನ.

1887: ಕ್ಯಾಪ್ಟನ್ ಮತ್ತು ಶ್ರೀಮತಿ ಆರ್ಥರ್ ಎಚ್. ಕೆಲ್ಲರ್ ಅವರ ಅಂಧ, ಮೂಗ ಮತ್ತು ಕಿವುಡ ಪುತ್ರಿ 6 ವರ್ಷದ ಹೆಲೆನ್ ಳಿಗೆ ಶಿಕ್ಷಕಿಯಾಗಲು ಅನ್ನೆ ಮ್ಯಾನ್ಸ್ ಫೀಲ್ಡ್ ಸುಲ್ಲಿವನ್ ಅವರು ಅಲಬಾಮಾದ ಕೆಲ್ಲರ್ ಮನೆಗೆ ಬಂದರು. ಹೆಲೆನ್ಗೆ ಆಕೆ ನೀಡಿದ ಶಿಕ್ಷಣ, ಈ ಕೆಲಸದಲ್ಲಿ ಆಕೆಗೆ ಲಭಿಸಿದ ಯಶಸ್ಸು ಜಗತ್ತಿನ ಇತಿಹಾಸದ ಮಹಾನ್ ಸಾಧನೆಗಳಲ್ಲಿ ಒಂದು ಎಂಬುದಾಗಿ ದಾಖಲಾಯಿತು.

 1506: ರಜಪೂತ ದೊರೆ ರಾಣಾ ರತನ್ ಸಿಂಗ್ ಪುತ್ರಿ ಸಂತ ಕವಯಿತ್ರಿಯರಲ್ಲಿ ಪ್ರಮುಖಳಾದ ಮೀರಾಬಾಯಿ ಈ ದಿನ ನಿಧನಳಾದಳು.

No comments:

Post a Comment