Thursday, March 1, 2018

ಇಂದಿನ ಇತಿಹಾಸ History Today ಮಾರ್ಚ್ 01

ಇಂದಿನ ಇತಿಹಾಸ History Today ಮಾರ್ಚ್  01
2018: ಬೆಂಗಳೂರುಕರ್ನಾಟಕ ಸಾಹಿತ್ಯ ಅಕಾಡೆಮಿಯ 2017 ಸಾಲಿನ ಗೌರವ ಪ್ರಶಸ್ತಿಯನ್ನು ಬನ್ನಂಜೆ ಗೋವಿಂದಾಚಾರ್ಯ, ಪ್ರೊ.ಸೋಮಶೇಖರ ಇಮ್ರಾಪುರ, ಪ್ರೊ.ಎಚ್.ಜೆ.ಲಕ್ಕಪ್ಪಗೌಡ, ಪ್ರೊ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಕಸ್ತೂರಿ ಬಾಯರಿ ಅವರಿಗೆ ನೀಡಲಾಯಿತು. ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ಐವರು ಸಾಹಿತಿಗಳಿಗೆ ನೀಡಲಾಗಿದೆ. ಪ್ರಶಸ್ತಿಯನ್ನು ರೂ.50 ಸಾವಿರ ನಗದು ಹಾಗೂ ಪ್ರಮಾಣಪತ್ರಗಳೊಂದಿಗೆ ನೀಡಿ ಗೌರವಿಸಲು ಅಕಾಡೆಮಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದರು. 10 ಸಾಹಿತಿಗಳಿಗೆಸಾಹಿತ್ಯಶ್ರೀಪ್ರಶಸ್ತಿ: * ಪ್ರೊ. ಧರಣೇಂದ್ರ ಕರಕುರಿ, * ಫಕೀರ್ ಮುಹಮ್ಮದ್ ಕಟ್ಪಾಡಿ, * ಡಾ. ವಿಜಯಶ್ರೀ ಸಬರದ, * ಡಾ. ವಿ. ಮುನಿವೆಂಕಟಪ್ಪ, * ಡಾ. ನಟರಾಜ ಹುಳಿಯಾರ್, * ಡಾ.ಕೆ. ಕೇಶವ ಶರ್ಮ, * ಡಾ. ಕರೀಗೌಡ ಬೀಚನಹಳ್ಳಿ, * ಪ್ರೊ. ತೇಜಸ್ವಿ ಕಟ್ಟೀಮನಿ, * ಡಾ. ಕಮಲಾ ಹೆಮ್ಮಿಗೆ, * ಶ್ರೀ ಕಂಚ್ಯಾಣಿ ಶರಣಪ್ಪ. ಪ್ರಶಸ್ತಿಯು ರೂ.25,000 ನಗದು, ಪ್ರಮಾಣಪತ್ರ, ಶಿಲಾಶಾಸನ ಬರೆಯುವ ಮಹಿಳೆಯ ಪುತ್ಥಳಿ ಜತೆಗೆ ಶಾಲು, ಹಾರದೊಂದಿಗೆ ಸನ್ಮಾನ ಒಳಗೊಂಡಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿತು.

2018: ನವದೆಹಲಿ: ಭಯೋತ್ಪಾದನೆ ವಿರುದ್ದದ ಹೋರಾಟ ಭೀತಿವಾದದ ವಿರುದ್ಧದ ಹೋರಾಟವೇ ಹೊರತು
ಇಸ್ಲಾಮ್ ವಿರುದ್ಧದ ಹೋರಾಟ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಜೋರ್ಡಾನ್ ದೊರೆ ಎರಡನೇ  ಅಬ್ದುಲ್ಲ ಅವರು ಇಲ್ಲಿ ಹೇಳಿದರು. ಭಾರತ ಭೇಟಿಯಲ್ಲಿರುವ ಜೋರ್ಡಾನ್ ದೊರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಇಲ್ಲಿ ಸುದೀರ್ಘ ಮಾತುಕತೆ ನಡೆಸಿ ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ ನಡೆಸುವ ದೃಢ ಸಂಕಲ್ಪವನ್ನು ತಳೆದರು. ಜಗತ್ತಿನಲ್ಲಿ  ಶಾಂತಿಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಭಾರತ ಮತ್ತು ಜೋರ್ಡಾನ್ ಜತೆಗೂಡಿ ಹೊಣೆಗಾರಿಕೆಯನ್ನು ವಹಿಸಲು ಉಭಯ ನಾಯಕರು ಒಪ್ಪಿದರು. ಬಳಿಕ ಇಸ್ಲಾಮಿಕ್ ಪರಂಪರೆ, ಆಧುನೀಕತೆಯ ಅರಿವು ಮತ್ತು ಬೆಳವಣಿಗೆ’ ಕುರಿತ ಸಮ್ಮೇಳನದಲ್ಲಿ  ಪಾಲ್ಗೊಂಡ ಮೋದಿ ’ಧರ್ಮದ ಹೆಸರಿನಲ್ಲಿ ಮಾನವತೆಯ ಮೇಲೆ ದಾಳಿ ನಡೆಸುವವರು ವಾಸ್ತವಾಗಿ ಧರ್ಮದ ಮೇಲೆಯೇ ದಾಳಿ ನಡೆಸುತ್ತಿದ್ದಾರೆ. ಅವರ ದಾಳಿಯ ಅತ್ಯಂತ ದೊಡ್ಡ ಬಲಿಪಶು ಧರ್ಮ ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದರು.  ಭಯೋತ್ಪಾದನೆಯ ವಿರುದ್ಧದ ಈ ಹೋರಾಟವು ಇಸ್ಲಾಮ್ ಅಥವಾ ಬೇರೆ ಯಾವುದೇ ಧರ್ಮದ ವಿರುದ್ಧದ ಹೋರಾಟ ಅಲ್ಲ, ಬದಲಿಗೆ ಅಮಾಯಕ ಯುವಕರನ್ನು ತಪ್ಪು ದಾರಿಗೆ ಎಳೆಯುವವರ ವಿರುದ್ಧದ ಹೋರಾಟ’ ಎಂದು ಪ್ರಧಾನಿ ಹೇಳಿದರು.  "ಯುವಕರು ಇಸ್ಲಾಮಿನ ಮಾನವೀಯ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಆಧುನಿಕ ವಿಜ್ಞಾನದ ಪರಿಣಾಮಕಾರಿ ಬಳಕೆಯ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು’ ಎಂದು ಮೋದಿ ಕರೆ ನೀಡಿದರು. ಭಾರತವು ವಿಶ್ವದ ಎಲ್ಲ ಪ್ರಮುಖ ಧರ್ಮಗಳ ತೊಟ್ಟಿಲು ಎಂದು ಮೋದಿ ಹೇಳಿದರು.  ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ "ಜಗತ್ತಿನ ಎಲ್ಲ ಮತಧರ್ಮಗಳು ಇಡಿಯ ಮನುಕುಲವನ್ನು ಒಗ್ಗೂಡಿಸುತ್ತವೆ’ ಎಂದು ಹೇಳಿದರು.  ’ನಮ್ಮ ಹೋರಾಟ ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆ ವಿರುದ್ಧವೇ ಹೊರತು ಇಸ್ಲಾಮ್ ಅಥವಾ ಮುಸಲ್ಮಾನರ ವಿರುದ್ಧ ಅಲ್ಲ ಎಂದು ಅವರು ನುಡಿದರು. ನಮ್ಮ ಹೋರಾಟ ಇಸ್ಲಾಮ್ ವಿರುದ್ಧ ಆಗಿರುವುದು ಬೇಡ, ಬದಲಾಗಿ ಉಗ್ರವಾದದ ವಿರುದ್ಧ ಇರಲಿ. ನಮ್ಮ ಮಕ್ಕಳಿಗೆ ಹಾಗೂ ಮುಂದಿನ ತಲೆಮಾರಿಗೆ ೧.೮ ಶತಕೋಟಿ ಮುಸಲ್ಮಾನರ ನಂಬಿಕೆ ಕುರಿತು ಹೇಳಿಕೊಡಲು ಇಚ್ಛಿಸುತ್ತೇನೆ. ಹೀಗಾಗಿ ನಾವು ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡುವುದು ಬೇಡ ಎಂದು ಅಬ್ದುಲ್ಲ ಹೇಳಿದರು. ಜಾಗತಿಕ ಮಟ್ಟದಲ್ಲಿ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡುವ ದುಷ್ಟ ಶಕ್ತಿಗಳನ್ನು ನಾವು ಕಾಣಬಹುದು. ಅಲ್ಲದೇ ಹಲವಾರು ಸಂದರ್ಭದಲ್ಲಿ ಭಯೋತ್ಪಾದಕರ ವಿರುದ್ಧ ನಡೆಯಬೇಕಿದ್ದ ಹೋರಾಟಗಳು ಮುಸ್ಲಿಮರ ವಿರುದ್ಧ ನಡೆಯುತಿವೆ. ಇಂತಹ ದುಷ್ಟ ಶಕ್ತಿಗಳನ್ನು ದಮನ ಮಾಡಲು ಪಣತೊಡಬೇಕಾಗಿದೆ ಎಂದು ಅವರು ನುಡಿದರು. ಪ್ರಪಂಚದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗುವಂತೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಶಾಂತಿಗೆ ಭಂಗ ತರುವ ಶಕ್ತಿಗಳ ವಿರುದ್ಧ ಹೋರಾಡೋಣ ಎಂದು ಅಬುಲ್ಲ ಆಗ್ರಹಿಸಿದರು.  ಹೈದರಾಬಾದ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೊರೆ ಅಬ್ದುಲ್ಲ ಮಾತುಕತೆ ನಡೆಯಿತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರು ಜೋರ್ಡಾನ್ ದೊರೆಯನ್ನು ಆರಂಭದಲ್ಲಿ ಆತ್ಮಿಯವಾಗಿ ಬರಮಾಡಿಕೊಂಡು ವಿಧ್ಯುಕ್ತ ಸ್ವಾಗತ ನೀಡಿದರು.

2018: ನವದೆಹಲಿ: ಲೋಕಪಾಲ ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಲೋಕಸಭೆಯ ಕಾಂಗ್ರೆಸ್ ಪಕ್ಷದ
ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಿರಾಕರಿಸಿದರು. ’ವಿಶೇಷ ಆಹ್ವಾನಿತರಾಗಿ’ ಪಾಲ್ಗೊಳ್ಳಲು ತಮಗೆ ನೀಡಲಾಗಿರುವ ನೀಡಲಾಗಿರುವ ಆಹ್ವಾನವು ಅತ್ಯಂತ ಪ್ರಮುಖ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಿಂದ ವಿರೋಧ ಪಕ್ಷದ ಸ್ವತಂತ್ರ ಧ್ವನಿಯನ್ನು ಹೊರಗಿಡುವ ವ್ಯವಸ್ಥಿತ ಯತ್ನ ಎಂದು ಅವರು ಬಣ್ಣಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಖರ್ಗೆಯವರು ತಾವು ಸಭೆಗೆ ಗೈರುಹಾಜರಾಗಲು ಕಾರಣವೇನು ಎಂಬುದಾಗಿ ವಿವರಿಸಿದರು.  ’ಲೋಕಪಾಲ ಕಾಯ್ದೆ ೨೦೧೩ರ ಉದ್ದೇಶ ಮತ್ತು ಗುರಿಯೇ ಹೇಳುವಂತೆ ’ವಿರೋಧ ಪಕ್ಷದ ನಾಯಕ’ನಿಗೆ, ’ವಿಶೇಷ ಆಹ್ವಾನಿತ’ ಬದಲಿಯಾಗುವುದಿಲ್ಲ. ಯಾವುದೇ ಅರ್ಥವತ್ತಾದ ಮತ್ತು ಧನಾತ್ಮಕ ಪಾಲ್ಗೊಳ್ಳುವಿಕೆಗೆ ಬದಲಾಗಿ ಕೇವಲ ಔಪಚಾರಿಕತೆಯ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಮಾರ್ಗವನ್ನು ಸರ್ಕಾರ ಅನುಸರಿಸಿರುವುದು ಅಚ್ಚರಿಯ ವಿಚಾರವಾಗಿದೆ’ ಎಂದು ಖರ್ಗೆ ಪತ್ರದಲ್ಲಿ ಬರೆದರು.  ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಕೂಡಾ ತಮ್ಮೊಂದಿಗೆ ಹಂಚಿಕೊಳ್ಳಲಾಗಿಲ್ಲ ಎಂದು ಖರ್ಗೆ ಹೇಳಿದರು. ಹಿಂದಿನ ಸಭೆಯಲ್ಲಿ ಕೂಡಾ  ಖರ್ಗೆಯವರು ಇಂತಹುದೇ ಅಂಶವನ್ನು ಪ್ರಸ್ತಾಪಿಸಿದ್ದರು. ಅಭ್ಯರ್ಥಿಗಳ ಪಟ್ಟಿ ಕುರಿತ ಪೂರ್ವ ಸೂಚನೆ ಇಲ್ಲದೇ ಪ್ರಸ್ತಾವಕ್ಕೆ ಯಾವುದೇ ಮೌಲ್ಯ ವರ್ಧನೆ ಮಾಡಲು ತಮಗೆ ಸಾಧ್ಯವಾಗುವುದಿಲ್ಲ ಎಂದು ಖರ್ಗೆ ಹೇಳಿದ್ದರು.  ವಿರೋಧ ಪಕ್ಷದ ನಾಯಕನ ಅನುಪಸ್ಥಿತಿಯಲ್ಲಿ ಲೋಕಸಭೆಯ ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕನನ್ನು ಮಾನ್ಯ ಮಾಡಿ ಲೋಕಪಾಲ ನೇಮಕಾತಿ ಸಮಿತಿಗೆ ಸೇರ್ಪಡೆ ಮಾಡಬೇಕು, ಈ ನಿಟ್ಟಿನಲ್ಲಿ ಲೋಕಪಾಲ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷವು ದೀರ್ಘ ಕಾಲದಿಂದ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿತ್ತು. ’ಭ್ರಷ್ಟಾಚಾರದ ವಿರುದ್ಧ ಕೇವಲ ವಾಕ್ಚಾತುರ್ಯದ ಹೋರಾಟ ನಡೆಸುತ್ತಾ ಬಂದಿರುವ ಬಿಜೆಪಿ ಸರ್ಕಾರ ಸುಮಾರು ನಾಲ್ಕು ವರ್ಷಗಳನ್ನು ಲೋಕಪಾಲರ ನೇಮಕಾತಿಯನ್ನು ಮಾಡದೆಯೇ ತಳ್ಳುತ್ತಾ ಬಂದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಲೋಕಪಾಲ ಕಾಯ್ದೆ ೨೦೧೩ನ್ನು ಅಂಗೀಕರಿಸಿತ್ತು. ೨೦೧೪ರ ಜನವರಿ ೧೬ರಂದು ಅದು ಜಾರಿಗೆ ಬಂದಿತ್ತು. ಗುಜರಾತಿನಲ್ಲಿ ಲೋಕಾಯುಕ್ತ ಕಚೇರಿಯನ್ನೇ ಸ್ಥಾಪಿಸದ ಬಿಜೆಪಿ ಸರ್ಕಾರದ ದಾಖಲೆಯ ಬಗ್ಗೆ ಅರಿವಿದ್ದವರಿಗೆ ಕೇಂದ್ರದ ಬಿಜೆಪಿ ಸರ್ಕಾರದ ಔದಾಸೀನ್ಯ ಅಚ್ಚರಿ ಉಂಟು ಮಾಡದು’ ಎಂದು ಖರ್ಗೆ ಪತ್ರದಲ್ಲಿ ಕಟುವಾಗಿ ಬರೆದರು. ’ಈದಿನದ ಸಭೆ ಕೇವಲ ಸುಪ್ರೀಂಕೋರ್ಟ್ ಆದೇಶವನ್ನು ತೃಪ್ತಿ ಪಡಿಸುವ ಉದ್ದೇಶದ್ದು ಹೊರತು ಬೇರೇನೂ ಅಲ್ಲ. ಸರ್ಕಾರದ ವರ್ತನೆಯು ಲೋಕಪಾಲರ ನೇಮಕವನ್ನು ಕಾಯ್ದೆಗೆ ಸ್ಫೂರ್ತಿಗೆ ಅನುಗುಣವಾಗಿ ಮಾಡುವ ಬದಲು ವಿರೋಧ ಪಕ್ಷದ ಧ್ವನಿ ಮತ್ತು ಅಭಿಪ್ರಾಯವನ್ನೇ ನಿರಾಕರಣೆ ಮಾಡುವ ಉದ್ದೇಶದ್ದು’ ಎಂದು ಖರ್ಗೆ ಟೀಕಿಸಿದರು. ನೇಮಕಾತಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪಕ್ಷವು ಆಗ್ರಹಿಸುತ್ತಾ ಬಂದಿರುವ ತಿದ್ದುಪಡಿಯನ್ನು ಸಂಸತ್ತಿನ ಮುಂಬರುವ ಅಧಿವೇಶನದಲ್ಲೇ ಅಂಗೀಕರಿಸಬೇಕು ಎಂದೂ ಕಾಂಗ್ರೆಸ್ ಆಗ್ರಹಿಸಿತು.

2018: ನವದೆಹಲಿ: ಭಾರತದ ಗ್ರಾಹಕರ, ವಿಶೇಷವಾಗಿ ಮನೆ ಖರೀದಿಗಾರರ ಪಾಲಿನ ಧನಾತ್ಮಕ
ಬೆಳವಣಿಗೆಯೊಂದರಲ್ಲಿ, ಸುಪ್ರೀಂಕೋರ್ಟ್ ’ಮಧ್ಯಸ್ಥಿಕೆ’ ಒಪ್ಪಂದಗಳು ಗ್ರಾಹಕ ನ್ಯಾಯಾಲಯಗಳ ವ್ಯಾಪ್ತಿಯನ್ನು ಕಿತ್ತುಹಾಕುವುದಿಲ್ಲ ಎಂಬುದಾಗಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು. ಸುಪ್ರೀಂಕೋರ್ಟಿನ ಈ ತೀರ್ಪು, ವಿಶೇಷವಾಗಿ ಮನೆ ಖರೀದಿದಾರರಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಕಂಪೆನಿಗಳು ಮನೆ ಮಾರಾಟ ವ್ಯವಹಾರಗಳಲ್ಲಿನ ಒಪ್ಪಂದಗಳಲ್ಲಿ ’ಮಧ್ಯಸ್ಥಿಕೆ’ ಷರತ್ತು ನಮೂದಿಸಿರುತ್ತವೆ. ವಿವಾದಗಳು ಉಂಟಾದ ಸಂದರ್ಭಗಳಲ್ಲಿ ತೊಂದರೆಗೆ ಒಳಗಾದ ಗ್ರಾಹಕರು ಮೊದಲು ’ಮಧ್ಯಸ್ಥಿಕೆ’ ಅವಕಾಶವನ್ನು ಬಳಸಿ, ಬಳಿಕ ಸಿವಿಲ್ ನ್ಯಾಯಾಲಯಕ್ಕೆ ಹೋಗಬಹುದು ಎಂಬುದಾಗಿ ಷರತ್ತು ಹಾಕಲಾಗಿರುತ್ತದೆ.  ಗ್ರಾಹಕ ನ್ಯಾಯಾಲಯಗಳು ವಿವಾದಗಳ ತ್ವರಿತ ವಿಲೇವಾರಿ ಮಾಡುವಾಗ ತಾಂತ್ರಿಕತೆಗಳು, ಮಧ್ಯಸ್ಥಿಕೆ ಮತ್ತು ಸಿವಿಲ್ ಕೋರ್ಟ್ ನಿಯಮಾವಳಿಗೆ ಹೆಚ್ಚಿನ ಒತ್ತು ನೀಡುವುದಿಲ್ಲ. ಇಂತಹವುಗಳಿಂದ ಗ್ರಾಹಕರು ತುಟ್ಟಿದಾಯಕವಾದ, ದೀರ್ಘಕಾಲೀನ, ಕ್ಲಿಷ್ಟಕರ ಪ್ರಕ್ರಿಯೆ ಮೂಲಕ ಹೋರಾಟ ಮಾಡಬೇಕಾಗಿ ಬರುವುದರಿಂದ ಭಾರತದಲ್ಲಿ ಗ್ರಾಹಕ ಹಕ್ಕುಗಳಿಗೆ ಪೆಟ್ಟು ಬೀಳುತ್ತಿತ್ತು. ಗ್ರಾಹಕ ಹಕ್ಕುಗಳಿಗೆ ಒತ್ತು ನೀಡಿದ ನ್ಯಾಯಮೂರ್ತಿಗಳಾದ ಆದರ್ಶ ಕೆ. ಗೋಯೆಲ್, ಉದಯ್ ಯು ಲಲಿತ್ ಅವರ ಪೀಠವು ತನ್ನ ಇತ್ತೀಚಿನ ತೀರ್ಪಿನಲ್ಲಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು. ಒಪ್ಪಂದಗಳಲ್ಲಿ ’ಮಧ್ಯಸ್ಥಿಕೆ’ ಷರತ್ತು ಇರುವುದರ ಹೊರತಾಗಿಯೂ, ಗ್ರಾಹಕರು ತ್ವರಿತ ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯಗಳ ಕದ ತಟ್ಟಬಹುದು ಎಂಬುದಾಗಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ಈ ತೀರ್ಪಿನಲ್ಲಿ ದೃಢ ಪಡಿಸಿತ್ತು. ’ಸಹಿ ಮಾಡಲಾಗಿರುವ ಈ ಆದೇಶದ ಮೂಲಕ ಬಾಕಿ ಉಳಿದಿರುವ ಎಲ್ಲ ಮೇಲ್ಮನವಿಗಳನ್ನೂ ವಜಾಗೊಳಿಸಲಾಗಿದೆ. ಇತ್ಯರ್ಥವಾಗದೆ ಯಾವುದಾದರೂ ಮೇಲ್ಮನವಿ ಬಾಕಿ ಉಳಿದ್ದಿದ್ದರೆ ಈ ಆದೇಶದೊಂದಗೆ ಅದೂ ಇತ್ಯರ್ಥಗೊಳ್ಳುತ್ತದೆ’ ಎಂದು ಎಮಾರ್ ಎಂಜಿಎಫ್ ಲ್ಯಾಂಡ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸುತ್ತಾ ಸುಪ್ರೀಂಕೋರ್ಟ್ ತಿಳಿಸಿತು. ರಾಷ್ಟೀಯ ಗ್ರಾಹಕ ನ್ಯಾಯಾಲಯವು ೨೦೧೭ರ ಜುಲೈ ತಿಂಗಳಲ್ಲಿ ನೀಡಿದ್ದ ತೀರ್ಪನ್ನು ಎಮಾರ್ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿತ್ತು.  ’ಮಧ್ಯಸ್ಥಿಕೆ’ ಷರತ್ತಿನ ಪರಿಣಾಮವಾಗಿ ಗ್ರಾಹಕ ನ್ಯಾಯಾಲಯದ ವ್ಯಾಪ್ತಿ ಮತ್ತು ಅಧಿಕಾರ ಮೊಟಕುಗೊಳ್ಳುವುದಿಲ್ಲ’ ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟ ಪಡಿಸಿತ್ತು. ಗ್ರಾಹಕ ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥ ಪಡಿಸಲು ಸಾಧ್ಯವಿಲ್ಲ ಮತ್ತು ಮಧ್ಯಸ್ಥಿಕೆಗೆ ವಹಿಸುವುದನ್ನು ಕಡ್ಡಾಯಗೊಳಿಸಿದ ೧೯೯೬ರ ಆರ್ಬಿಟ್ರೇಷನ್ ಅಂಡ್ ಕನ್ಸಿಲಿಯೇಷನ್ ಕಾಯ್ದೆಯ ಸೆಕ್ಷನ್ ೮ (ತಿದ್ದುಪಡಿಯಾದ ಪ್ರಕಾರ) ಗ್ರಾಹಕ ವಿವಾದಗಳನ್ನು ಇತ್ಯರ್ಥಗೊಳಿಸುವಲ್ಲಿ ಗ್ರಾಹಕ ನ್ಯಾಯಾಲಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ ಹೇಳಿತ್ತು. ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಸಲುವಾಗಿ ರೂಪಿಸಲಾದ ಗ್ರಾಹಕ ಸಂರಕ್ಷಣಾ ಕಾಯ್ದೆಯು ಸಾಮಾಜಿಕ ಕಲ್ಯಾಣ ಕಾಯ್ದೆಯಾಗಿಯೇ ಮುಂದುವರೆಯುತ್ತದೆ ಎಂದು ಒತ್ತಿಹೇಳಿದ್ದ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ, ಗ್ರಾಹಕರನ್ನು ಈ ಪರಿಹಾರದ ಸವಲತ್ತಿನಿಂದ ವಂಚಿಸಿದರೆ ಗ್ರಾಹಕ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಈ ಕಾಯ್ದೆಯ ಮೂಲೋದ್ದೇಶವೇ ನಿರರ್ಥಕಗೊಳ್ಳುತ್ತದೆ ಎಂದು ತಿಳಿಸಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಎಮಾರ್, ೧೯೯೬ರ ಆರ್ಬಿಟ್ರೇಷನ್ ಅಂಡ್ ಕನ್ಸಲಿಯೇಷನ್ ಕಾಯ್ದೆಯ ತಿದ್ದುಪಡಿಗೊಂಡ ಸೆಕ್ಷನ್ ೮ನ್ನು ಆಧರಿಸಿ ತನ್ನ ವಾದ ಮಂಡಿಸಿತ್ತು. ಈ ತಿದ್ದುಪಡಿ ಪ್ರಕಾರ ಕಕ್ಷಿದಾರರು ಮಧ್ಯಸ್ಥಿಕೆಗೆ ವಹಿಸುವುದು ಕಡ್ಡಾಯವಾಗಿತ್ತು.  ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಈ ಆದೇಶಕ್ಕೆ ೨೦೧೭ರ ಡಿಸೆಂಬರ್ ೧೫ರಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಇತ್ತೀಚೆಗೆ ಪ್ರಕರಣ ಅಂತಿಮ ವಿಚಾರಣೆಗೆ ಬಂದಾಗ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ತೀರ್ಪು ಗ್ರಾಹಕ ಸಂರಕ್ಷಣಾ ಕಾಯ್ದೆಯ ಉದ್ದೇಶಕ್ಕೆ ಅನುಗುಣವಾಗಿಯೇ ಇದೆ ಎಂದು ಮನವರಿಕೆ ಮಾಡಿಕೊಂಡಿತ್ತು. ರಿಯಲ್ ಎಸ್ಟೇಟ್ ಕಂಪೆನಿಗಳು ಮನೆಗಳನ್ನು ಮಾರಾಟ ಮಾಡುವ ಸಂದರ್ಭಗಳಲ್ಲಿ ವಿಧಿಸಲಾಗುವ ಸಾಮಾನ್ಯ ಮುದ್ರಿತ ಷರತ್ತುಗಳಲ್ಲಿ ’ಮಧ್ಯಸ್ಥಿಕೆಗೆ ವಹಿಸುವ’ ಷರತ್ತು ಕೂಡಾ ಒಂದಾಗಿದ್ದು, ತಕರಾರುಗಳು ಉಂಟಾದಾಗ ತ್ವರಿತ ನ್ಯಾಯ ಪಡೆಯುವಲ್ಲಿ ಇವು ಗ್ರಾಹಕರಿಗೆ ಅಡ್ಡಿಯನ್ನು ಉಂಟು ಮಾಡುವ ಸಾಧ್ಯತೆಗಳಿದ್ದವು.

2018: ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.
ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಮಾರ್ಚ್ ೬ರವರೆಗೆ ಐದು ದಿನಗಳ ಅವಧಿಗೆ ತನಿಖೆ ಸಲುವಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ಒಪ್ಪಿಸುವಂತೆ ದೆಹಲಿಯ ನ್ಯಾಯಾಲಯ ಆಜ್ಞಾಪಿಸಿತು. ೨೦೦೭ರಲ್ಲಿ ಎಫ್ ಐ ಪಿಬಿ ಶರತ್ತುಗಳನ್ನು ಉಲ್ಲಂಘಿಸಿದ್ದಕಾಗಿ ಐಎನ್ ಎಕ್ಸ್ ಮೀಡಿಯಾ ವಿರುದ್ಧ ಸಂಭಾವ್ಯ ವಿಚಾರಣೆಯನ್ನು ತಪ್ಪಿಸಲು ೧೦ ಲಕ್ಷ ಡಾಲರ್ ಪಡೆದ ಆರೋಪಕ್ಕೆ ಗುರಿಯಾಗಿರುವ ಕಾರ್ತಿ ಚಿದಂಬರಂ ಅವರನ್ನು ಪ್ರಶ್ನಿಸುವ ಸಲುವಾಗಿ ಮಾರ್ಚ್ ೬ರವರೆಗೆ ಸಿಬಿಐಗೆ ಒಪ್ಪಿಸಲು ನ್ಯಾಯಾಲಯ ಆದೇಶ ನೀಡಿತು. ೪೬ರ ಹರೆಯದ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ತಂಡವೊಂದು ಫೆ.28ರ ಬುಧವಾರ ಬೆಳಗ್ಗೆ ಲಂಡನ್ ನಿಂದ ಹಿಂತಿರುಗುತ್ತಿದ್ದಂತೆಯೇ ಬಂಧಿಸಿತ್ತು. ವಿದೇಶಕ್ಕೆ ಹೋಗಿದ್ದಾಗ ಅವರು ಏನು ಮಾಡಿದ್ದರು ಎಂಬುದಕ್ಕೆ ಆಘಾತಕಾರಿಯಾದ ಸಾಕ್ಷ್ಯಾಧಾರಗಳಿವೆ ಎಂದು ನ್ಯಾಯಾಲಯದಲ್ಲಿ  ಪ್ರತಿಪಾದಿಸಿದ ಸಿಬಿಐ, ’ವಿದೇಶಕ್ಕೆ ಹೋಗಿದ್ದಾಗ ಅವರು ಹಣ ಪಡೆದ ಬ್ಯಾಂಕಿನ ಖಾತೆಗಳನ್ನು ಮುಕ್ತಾಯಗೊಳಿಸಿದ್ದರು’ ಎಂದು ಆಪಾದಿಸಿದ ಬಳಿಕ ವಿಶೇಷ ನ್ಯಾಯಾಧೀಶ ಸುನಿಲ್ ರಆಣಾ ಅವರು ಕಾರ್ತಿ ಚಿದಂಬರಂ ಅವರ ಕಸ್ಟಡಿಯನ್ನು ಮಾರ್ಚ್ ೬ರವರೆಗೆ ವಿಸ್ತರಿಸಿದರು.  ಒಂದು ದಿನದ ಸಿಬಿಐ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಕಾರ್ತಿ ಚಿದಂಬರಂ ಅವರನ್ನು ಈದಿನ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಈವೇಳೆಯಲ್ಲಿ ಕಾರ್ತಿ ತಂದೆ ಪಿ. ಚಿದಂಬರಂ, ತಾಯಿ ನಳಿನಿ ಚಿದಂಬರಂ (ಇಬ್ಬರೂ ವಕೀಲರು) ಹಾಜರಿದ್ದು ಕಾರ್ತಿ ಜೊತೆಗೆ ಸಂಭಾಷಿಸುತ್ತಿದ್ದರು. ಸಿಬಿಐ ಪರ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ’ಇದು ರಾಜಕೀಯ ಸೇಡಿನ ಪ್ರಕರಣ ಅಲ್ಲ. ಸಂವಿಧಾನದ ೨೧ನೇ ಪರಿಚ್ಛೇದಕ್ಕೆ ಅನುಗುಣವಾಗಿ ತನಿಖೆ ನಡೆಯುತ್ತಿದೆ’ ಎಂದು ವಾದಿಸಿದರು.  ’ಕಾರ್ತಿ ಅವರು ವಿದೇಶದಲ್ಲಿದ್ದಾಗ ಏನು ಮಾಡಿದರು ಎಂಬುದಕ್ಕೆ ಆಘಾತಕಾರಿಯಾದ ಸಾಕ್ಷ್ಯಗಳು ಲಭಿಸಿವೆ. ವಿದೇಶಕ್ಕೆ ಹೋಗಿದ್ದಾಗ ಅವರು ಹಣ ಸ್ವೀಕರಿಸಿದ್ದ ಬ್ಯಾಂಕ್ ಖಾತೆಗಳನ್ನು ಮುಕ್ತಾಯಗೊಳಿಸಿದ್ದರು’ ಎಂದು ಮೆಹ್ತಾ ಹೇಳಿದರು.  ಕಾರ್ತಿ ಪರ ಹಾಜರಾಗಿದ್ದ ವಕೀಲರ ತಂಡದ ನೇತೃತ್ವ ವಹಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ’೨೦೧೭ರ ಮೇ ತಿಂಗಳಲ್ಲಿ ದಾಖಲಿಸಲಾಗಿದ್ದ ಎಫ್ ಐ ಆರ್ ಸಂಬಂಧ ಸಿಬಿಐ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುಮಾರು ೨೨ ಗಂಟೆಗಳ ಕಾಲ ಕಾರ್ತಿ ಅವರ ಜೊತೆ ಮಾತನಾಡಿತ್ತು. ೨೦೧೭ರ ಆಗಸ್ಟ್ ತಿಂಗಳಿನಿಂದ ಈ ದಿನಾಂಕದವರೆಗೆ ಯಾವುದೇ ಹೊಸ ಸಮನ್ಸ್ ಜಾರಿ ಮಾಡಿಲ್ಲ. ಇದು ಏಜೆನ್ಸಿಗೆ ಅವರನ್ನು ಪ್ರಶ್ನಿಸಲು ಯಾವುದೇ ವಿಷಯವೂ ಇಲ್ಲ ಎಂಬುದನ್ನು ತೋರಿಸಿದೆ’ ಎಂದು ಸಿಂಘ್ವಿ ವಾದಿಸಿದರು. ಸಿಬಿಐ ವಶದಲ್ಲಿ ವಿಚಾರಣೆ ನಡೆಸಲು ಯಾವುದೇ ನೆಲೆಯೂ ಇಲ್ಲ. ಸಮನ್ಸ್ ಜಾರಿ ಮಾಡದೆಯೇ ಸಿಬಿಐ ಅಸಹಕಾರದ ಪ್ರತಿಪಾದನೆಯನ್ನು ಹೇಗೆ ಮಾಡುತ್ತದೆ? ಎಲ್ಲ ದಾಖಲೆಗಳೂ ಅವರ ಬಳಿಯಲ್ಲೇ ಇವೆ’ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದರು.  ಕಾರ್ತಿಯವರು ವಿದೇಶದಲ್ಲಿದ್ದಾಗ ಏನಾದರೂ ಅಕ್ರಮ ಎಸಗಿದ್ದರೆ, ಕಾರ್ತಿ ಅವರಿಗೆ ವಿದೇಶಕ್ಕೆ ತೆರಳಲು ಅವಕಾಶ ನೀಡಿದ್ದ ನ್ಯಾಯಾಲಯದ  ಮುಂದೆ ಸಿಬಿಐ ನ್ಯಾಯಾಲಯ ನಿಂದನೆ ಅರ್ಜಿಯನ್ನು ಏಕೆ ಸಲ್ಲಿಸಲಿಲ್ಲ? ಎಂದೂ ಸಿಂಘ್ವಿ ಪ್ರಶ್ನಿಸಿದರು.  ೨೦೦೭ರಲ್ಲಿ ಪಿ. ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿದ್ದಾಗ ೩೦೫ ಕೋಟಿ ರೂಪಾಯಿಗಳ ನಿಧಿಯನ್ನು ಸಾಗರದಾಚೆಯಿಂದ ಸ್ವೀಕರಿಸಲು ಐ ಎನ್ ಎಕ್ಸ್ ಮೀಡಿಯಾಕ್ಕೆ ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯಿಂದ (ಎಫ್ ಐ ಪಿಬಿ) ಅನುಮತಿ ದೊರಕಿಸುವಲ್ಲಿ ಅಕ್ರಮಗಳು ನಡೆದಿವೆ ಎಂದು ಕಳೆದ ವರ್ಷ ಮೇ ೧೫ರಂದು ಸಿಬಿಐ ಸಲ್ಲಿಸಿದ್ದ ಎಫ್ ಐ ಆರ್ ಆಪಾದಿಸಿತ್ತು. ಐಎನ್ ಎಕ್ಸ್ ಮೀಡಿಯಾ ಲಿಮಿಟೆಡ್ ನಿರ್ದೇಶಕರಾದ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಅವರು ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಆಧರಿಸಿ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ ಎಂದು ಹೇಳಲಾಗಿತ್ತು. ತಾವು ೭ ಲಕ್ಷ ಡಾಲರ್ ಗಳನ್ನು ಚಿದಂಬರಂ ಸೂಚನೆ ಮೇರೆಗೆ ಎಫ್ ಐ ಪಿಬಿ ಅನುಮತಿ ಪಡೆಯುವ ಸಲುವಾಗಿ ಕಾರ್ತಿ ಚಿದಂಬರಂ ಅವರಿಗೆ ಪಾವತಿ ಮಾಡಿದ್ದುದಾಗಿ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಒಪ್ಪಿಕೊಂಡಿದ್ದರು ಎನ್ನಲಾಗಿತ್ತು.

2018: ಮುಂಬೈ: ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ಯಾಂಕುಗಳು ಬಡ್ಡಿ ದರಗಳನ್ನು ಏರಿಸಲು
ಆರಂಭಿಸಿದ್ದು, ದರಗಳನ್ನು ಬದಲಾಯಿಸುವ ಸೂಚನೆ ನೀಡಿದವು. ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ಒದಗಿಸುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಮತ್ತು ದೇಶದ ಖಾಸಗಿ ರಂಗದ ಬ್ಯಾಂಕುಗಳಲ್ಲಿ ಅತ್ಯಂತ ದೊಡ್ಡ ಬ್ಯಾಂಕ್ ಎಂಬುದಾಗಿ ಪರಿಗಣಿತವಾಗಿರುವ ಐಸಿಐಸಿಐ ಬ್ಯಾಂಕ್ ತಮ್ಮ ಸಾಲ ದರಗಳನ್ನು ೨೦ ಬಿಪಿಗಳಷ್ಟು (ಮೂಲ ಪಾಯಿಂಟ್/ ಬೇಸಿಸ್ ಪಾಯಿಂಟ್) ಏರಿಸಿವೆ. ಪರಿಣಾಮವಾಗಿ ಗ್ರಾಹಕರ ಗೃಹ, ಕಾರು ಸಾಲಗಳ ಮಾಸಿಕ ಬಡ್ಡಿ ದರಗಳು ಏರಿಕೆಯಾಗಲಿವೆ. ಎಸ್ ಬಿಐ ಒಂದು ವರ್ಷದ ಎಂಸಿ ಎಲ್ ಆರ್ ದರವನ್ನು ೨೦ ಬಿಪಿಗಳಷ್ಟು ಅಂದರೆ ಶೇಕಡಾ ೮.೧೫ಕ್ಕೆ ಏರಿಸಿದ್ದರೆ, ಐಸಿಐಸಿಐ ಬ್ಯಾಂಕ್ ೧೦ ಬಿಪಿಗಳಷ್ಟು ಅಂದರೆ ಶೇಕಡಾ ೮.೩ರಷ್ಟಕ್ಕೆ ಏರಿಸಿತು.  ಎಲ್ಲ ಬ್ಯಾಂಕ್ ಸಾಲ ದರಗಳಿಗೆ ಎಂಸಿಎಲ್ ಆರ್ ಮಾನದಂಡವಾಗಿದ್ದು, ಅದಕ್ಕೆ ಅನುಗುಣವಾಗಿ ಸಾಲದರಗಳು ಏರಿಕೆಯಾಗುತ್ತವೆ. ಎಂಸಿಎಲ್ ಆರ್ ನ ಇತರ ಎಲ್ಲ ಅವಧಿಗಳಿಗೂ ಇದಕ್ಕೆ ಅನುಗುಣವಾಗಿ ದರಗಳು ಏರಿಕೆಯಾಗುತ್ತವೆ. ಬಹುತೇಕ ಸಾಲಗಳು ಒಂದು ವರ್ಷದ ಎಂಸಿಎಲ್ ಆರ್ ಗೆ ಜೋಡಣೆಯಾಗಿವೆ. ೨೦೧೬ರ ಏಪ್ರಿಲ್ ನಲ್ಲಿ ಅನುಷ್ಠಾನಗೊಂಡ ಬಳಿಕ ಎಂಸಿಎಲ್ ಆರ್‌ನ್ನು ಬ್ಯಾಂಕುಗಳೂ ಇದೇ ಮೊದಲ ಬಾರಿಗೆ ಏರಿಸಿದವು. ಮಾರ್ಚ್ ೧ರಿಂದ ಜಾರಿಯಾಗಲಿರುವ ಹೊಸ ದರಗಳು ಹೊಸ ಗ್ರಾಹಕರಿಗೆ ಅನ್ವಯವಾಗುತ್ತದೆ. ಹಾಲಿ ಗ್ರಾಹಕರಿಗೆ ಹೊಸ ದರಗಳನ್ನು ಪರಿಷ್ಕರಿಸಿದಾಗಿನಿಂದ ಹೊಸ ದರಗಳು ಅನ್ವಯವಾಗುತ್ತವೆ.  ೨೦ ವರ್ಷಗಳ ಅವಧಿಗೆ ೧೦ ಲಕ್ಷ ರೂಪಾಯಿ ಸಾಲ ಪಡೆದಿದ್ದರೆ ೧೦ ಬಿಪಿ ಬಡ್ಡಿ ಹೆಚ್ಚಳದಿಂದ ಇಂಎಂಐಯಲ್ಲಿ ೬೩ ರೂಪಾಯಿ ಹೆಚ್ಚಳವಾಗಲಿದೆ. ಎಂಸಿಎಲ್ ಆರ್ ೨೦ ಬಿಪಿಯಷ್ಟು ಏರಿದಾಗ, ೩೦ ಲಕ್ಷ ರೂಪಾಯಿಗಳವರೆಗಿನ ಗೃಹ ಸಾಲಗಳ ದರಗಳ ಏರಿಕೆಯನ್ನು ೫ ಬಿಪಿಗಳಿಗೆ ಮಿತಿಗೊಳಿಸಲಾಗಿದೆ ಎಂದು ಎಸ್ ಬಿ ಐ ಆಡಳಿತ ನಿರ್ದೇಶಕ ಪಿ.ಕೆ. ಗುಪ್ತ ಸ್ಪಷ್ಟ ಪಡಿಸಿದರು.  ಎಸ್ ಬಿಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಠೇವಣಿ ದರವನ್ನೂ ವಿವಿಧ ಅವಧಿಗಳಿಗೆ ೫೦ ಬಿಪಿಗಳಷ್ಟು ಏರಿಕೆ ಮಾಡಿವೆ. ಎಸ್ ಬಿ ಐ ತನ್ನ ಠೇವಣಿದರವನ್ನು  ಒಂದು ವರ್ಷದಿಂದ ೪೫೬ ದಿನಗಳ ಅವಧಿಗೆ ಶೇಕಡಾ ೬.೨೫ರಿಂದ ಶೇಕಡಾ ೬.೪೦ಕ್ಕೆ ಏರಿಸಿದೆ. ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ ಹಿಂದಿನ ಶೇಕಡಾ ೬ರ ಬದಲಿಗೆ ಶೇಕಡಾ ೬.೫ ಬಡ್ಡಿ ದರವನ್ನು ನೀಡಲಿದೆ.  ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದು ವರ್ಷದ ಠೇವಣಿ ಬಡ್ಡಿ ದರವನ್ನು ಶೇಕಡಾ ೬.೫ರಿಂದ ಶೇಕಡಾ ೬.೭೫ಕ್ಕೆ ಏರಿಸಿದೆ.

2018: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಬಹುಕೋಟಿ ವಂಚನೆ ಎಸಗಿರುವ ಮುಖ್ಯ
ಆರೋಪಿಗಳಾದ ವಜ್ರಾಭರಣ ವ್ಯಾಪಾರೋದ್ಯಮಿ ನೀರವ್ ಮೋದಿ ಮತ್ತು ಗೀತಾಂಜಲಿ ಜೆಮ್ಸ್ ನ ಮಾಲೀಕ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ತೀವ್ರ ಪ್ರಯತ್ನಗಳನ್ನು ನಡೆಸುತ್ತಿರುವಾಗಲೇ ಕೇಂದ್ರ ಸಚಿವ ಸಂಪುಟವು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಗೆ (೨೦೧೮) ಅನುಮೋದನೆ ನೀಡಿದೆ. ಮಸೂದೆಯು ಇಂತಹ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುತ್ತದೆ. ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಮಂದಿಯೊಂದಿಗೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ’ಮಸೂದೆಯ ಅಡಿಯಲ್ಲಿ ಅಪರಾಧಿಗಳ ಅಪರಾಧಕ್ಕೆ ಸಂಬಂಧಪಟ್ಟ ಆಸ್ತಿಗಳನ್ನು ಮಾತ್ರವೇ ಅಲ್ಲ, ದೇಶದೊಳಗಿನ ಅವರ ಎಲ್ಲ ಆಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬಹುದು, ಬೇನಾಮಿ ಆಸ್ತಿಗಳಿದ್ದರೆ ಅವುಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬಹುದು’ ಎಂದು ಹೇಳಿದರು.  ಮಸೂದೆಯು ಅಪರಾಧಿಗಳ ವಿದೇಶೀ ಭೂಮಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಸರ್ಕಾರವು ವಿವಿಧ ರಾಷ್ಟ್ರಗಳ ಜೊತೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಸಚಿವರು ನುಡಿದರು. ಮಸೂದೆಯು ದೊಡ್ಡ ಸುಸ್ತಿದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಹೇಳಿದರು.  ಮಸೂದೆಯನ್ನು ಸಂಸತ್ತಿನ ಮುಂದಿನ ಮುಂಗಡಪತ್ರ ಅಧಿವೇಶನದಲ್ಲಿ ಮಂಡಿಸಲಾಗುವುದು.

2018: ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತ ವಾಗುತ್ತಿರುವಂತೆಯೇ ರಾಜ್ಯ ಸರಕಾರದ ಸಾಧನೆ, ಅಭಿವೃದ್ಧಿ ಯೋಜನೆಗಳು ಮುಂತಾಗಿ ಹಲವು ರೀತಿಯಲ್ಲಿ  ತಮ್ಮ ನೇತೃತ್ವದ ಕಾಂಗ್ರೆಸ್ಸರಕಾರದ ಬಗ್ಗೆ ಜನರಲ್ಲಿ ಸದ್ಭಾವನೆ ಉಂಟುಮಾಡುವ ಯತ್ನದಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏಷ್ಯಾ ಖಂಡದಲ್ಲೇ ಅತೀ ದೊಡ್ಡದೆಂಬುದಾಗಿ ಖ್ಯಾತಿವೆತ್ತ ಪಾವಗಡದ ಸೋಲಾರ್ಪಾರ್ಕ್ ಮೊದಲ ಹಂತದ ಯೋಜನೆಯನ್ನು ಉದ್ಘಾಟಿಸಿದರುರಾಜ್ಯದ ಹೆಮ್ಮೆಯ ಪಾವಗಡ ಸೋಲಾರ್ಪಾರ್ಕ್‌ 13 ಸಾವಿರ ಎಕರೆ ಜಾಗದಲ್ಲಿ ಮೈದಳೆಯುತ್ತಿದೆ. ಇದರ ಒಟ್ಟು ನಿರ್ಮಾಣ ವೆಚ್ಚ 10 ಸಾವಿರ ಕೋಟಿ ರೂ.ಗಳಾಗಲಿವೆ ಸೋಲಾರ್ಪಾರ್ಕ್ಮೊದಲ ಹಂತದ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು ಇದು 600 ಮೆಗಾ ವ್ಯಾಟ್ವಿದ್ಯುತ್ಉತ್ಪಾದಿಸಿ ರಾಜ್ಯಕ್ಕೆ ಪೂರೈಸಲು ಮುಂದಾಗಿದೆಪಾವಗಡ ಸೋಲಾರ್ಪಾರ್ಕ್ಪೂರ್ಣಗೊಂಡಾಗ ಅದು ಎರಡು ಸಾವಿರ ಮೆಗಾ ವ್ಯಾಟ್ವಿದ್ಯುತ್ಉತ್ಪಾದಿಸಿ ಕೊಡಲಿದೆಸೋಲಾರ್ಪಾರ್ಕ್ಮೈದಳೆಯು 13 ಸಾವಿರ ಎಕರೆಯ ಪೈಕಿ 12 ಸಾವಿರ ಎಕರೆಯನ್ನು ರಾಜ್ಯ ಸರಕಾರ ರೈತರಿಂದ ಪಡೆದು ಕಂಪೆನಿಗೆ ಹಸ್ತಾಂತರಿಸಿದೆ.  ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಇಂಧನ ಸಚಿವ ಡಿ ಕೆ ಶಿವಕುಮಾರ್‌, ಸಚಿವ ಟಿ ಬಿ ಜಯಚಂದ್ರ ಮುಂತಾಗಿ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.

2017: ವಿಜಯವಾಡ: ಆಂಧ್ರ ಪ್ರದೇಶ ಸರ್ಕಾರ 2012 ಮತ್ತು 2013ನೇ ಸಾಲಿನನಂದಿಸಿನಿಮಾ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕಿಚ್ಚ ಸುದೀಪ್ಅತ್ಯುತ್ತಮ ಖಳನಟನಾಗಿ ಹೊರ ಹೊಮ್ಮಿದರು. ಎಸ್‌.ಎಸ್‌.ರಾಜಮೌಳಿ ನಿರ್ದೇಶನದಈಗಚಿತ್ರದಲ್ಲಿನ ಅಭಿನಯಕ್ಕಾಗಿ ಸುದೀಪ್ಗೆ ಪ್ರಶಸ್ತಿ ಬಂದಿತು. 2012ರಲ್ಲಿ ತೆರೆಕಂಡಿದ್ದಈಗ’ ಚಿತ್ರದಲ್ಲಿ ಸುದೀಪ್ಖಳನಾಟಕನಾಗಿ ಕಾಣಿಸಿಕೊಂಡಿದ್ದರು. ಇದು ಸುದೀಪ್ಅಭಿನಯದ ಮೊದಲ ತೆಲುಗು ಸಿನಿಮಾ. ಆಂಧ್ರ ಪ್ರದೇಶ ಸರ್ಕಾರ ಸಿನಿಮಾ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ನಂದಿರಾಜ್ಯ ಪ್ರಶಸ್ತಿನೀಡುತ್ತದೆ. ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಛಾಯಾಗ್ರಹಣ ಸೇರಿದಂತೆ ಒಟ್ಟು ಎಂಟು ವಿಭಾಗಗಳಲ್ಲಿಈಗಸಿನಿಮಾ ನಂದಿ ಪ್ರಶಸ್ತಿಗೆ ಪಾತ್ರವಾಯಿತು.
2017: ಮಹಾರಾಜಗಂಜ್:  ಹಾರ್ವರ್ಡ್ಚಿಂತನೆಗಿಂತ ಹಾರ್ಡ್ವರ್ಕ್ (ಕಠಿಣ ಪರಿಶ್ರಮ) ಮುಖ್ಯ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೋಬೆಲ್  ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ವಿರುದ್ಧ ಕಿಡಿ ಕಾರಿದರು.
ಉತ್ತರಪ್ರದೇಶದ ಮಹಾರಾಜಗಂಜ್ನಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ನೋಟು ರದ್ದತಿಯಿಂದಾಗಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ ಕುಂಠಿತಗೊಂಡಿಲ್ಲ, ಏರಿಕೆಯಾಗಿದೆ ಎಂದು ಕೇಂದ್ರ ಅಂಕಿಅಂಶ ಸಂಸ್ಥೆ (ಸಿಎಸ್) ವರದಿಯನ್ನು ಉಲ್ಲೇಖಿಸಿದರು. ಒಂದು ಕಡೆ (ನೋಟುರದ್ದತಿಯನ್ನು ವಿರೋಧಿಸುವವರು) ಹಾರ್ವರ್ಡ್ ನಲ್ಲಿ ಬಗ್ಗೆ ಏನು ಹೇಳುತ್ತಾರೆ ಎಂದು ಮಾತನಾಡುತ್ತಾರೆ. ಇನ್ನೊಂದು ಕಡೆ ಬಡವನ ಮಗ ಕಠಿಣ ಪರಿಶ್ರಮದಿಂದ ಆರ್ಥಿಕ ಪ್ರಗತಿ ಸಾಧ್ಯ ಎಂದು ದುಡಿಯುತ್ತಾನೆ. ಹಾರ್ವರ್ಡ್ ಚಿಂತನೆಗಿಂತ ಹಾರ್ಡ್ ವರ್ಕ್ ಮುಖ್ಯ ಎಂದು ಮೋದಿ  ಸೇನ್ಗೆ ಟಾಂಗ್ ನೀಡಿದರು. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿಯುವಿಶ್ವಾಸದ ಆಧಾರದಲ್ಲಿ ನಿಂತಿರುವ ಅರ್ಥವ್ಯವಸ್ಥೆಯ ಮೂಲಕ್ಕೆ ನೀಡಿದ ನಿರಂಕುಶ ಏಟು’. ನೋಟುಗಳ ರದ್ದತಿಯಿಂದಾಗಿ ಜನರು ಹಾಗೂ ಸಣ್ಣ ವ್ಯಾಪಾರಸ್ಥರು ಬೀದಿಗೆ ಬೀಳುವಂತಾಗಿದೆ ಎಂದು ನೊಬೆಲ್ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರು ಕೇಂದ್ರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಕೂಡಾ ನೋಟು ರದ್ದತಿ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
2017: ಬೆಳಗಾವಿ: ಮಹಾನಗರ ಪಾಲಿಕೆ ಮೇಯರ್ ಆಗಿ ಎಂಇಎಸ್ ಬೆಂಬಲಿತ ಸಂಜೋತಾ ಬಾಂದೇಕರ ಆಯ್ಕೆಯಾದರು. ಕನ್ನಡ ಬಣದ ಜಯಶ್ರೀ ಮಾಳಗಿ ಹಾಗೂ ಪುಷ್ಪಾ ಅವರು ಸೋಲು ಅನುಭವಿಸಬೇಕಾಯಿತು. ಬೆಳಗಾವಿ ಮಹಾನಗರ ಪಾಲಿಕೆಗೆ ಕನ್ನಡಿಗರೊಬ್ಬರು ಮೇಯರ್ ಆಗಬೇಕು ಎನ್ನುವ ಇಲ್ಲಿನ ಕನ್ನಡಿಗರ ಕನಸು ನನಸಾಗಲಿಲ್ಲ. ಎಂಇಎಸ್ ಬೆಂಬಲಿತರಾದ ಸಂಜೋತಾ ಬಾಂದೇಕರ ಮೇಯರ್ ಹಾಗೂ ನಾಗೇಶ್ ಮಂಡೋಳ್ಕರ ಉಪಮೇಯರ್ಆಗಿ ಆಯ್ಕೆಯಾದರು. ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ನಿಗದಿತ ಕೋರಂ ಕೊರತೆ ಕಾಣಿಸಿಕೊಂಡಿದ್ದರಿಂದ ಸಭೆಯನ್ನು ಪ್ರಾದೇಶಿಕ ಆಯುಕ್ತ ಎನ್. ಜಯರಾಮ್ 10 ನಿಮಿಷ ಮುಂದೂಡಿದರು. ಬಳಿಕ ಹಾಜರಾತಿ ಪಡೆಯುವ ಪ್ರಕ್ರಿಯೆ ಆರಂಭಿಸಲಾಯಿತು. ಶಾಸಕರಾದ ಸತೀಶ ಜಾರಕಿಹೊಳಿ, ಫಿರೋಜ್ ಸೇಠ್, ಸಂಭಾಜಿ ಪಾಟೀಲ, ಸಂಸದ ಪ್ರಕಾಶ ಹುಕ್ಕೇರಿ ಭಾಗಿಯಾದರು.    
2017: ನವದೆಹಲಿ: ಚಲಾವಣೆಯಲ್ಲಿರದ ರೂ. 500 ಮತ್ತು  ರೂ.1000 ಮುಖಬೆಲೆಯ 10ಕ್ಕಿಂತ ಹೆಚ್ಚು ನೋಟುಗಳು ಕೈಯಲ್ಲಿದ್ದರೆ ಕನಿಷ್ಠ ರೂ.10,000 ದಂಡ ತೆರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತು. ಚಲಾವಣೆಯಿಂದ ಹಿಂದಕ್ಕೆ ಪಡೆಯಲಾದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳನ್ನು ಇರಿಸಿಕೊಳ್ಳುವುದು, ಬೇರೆಯವರಿಗೆ ನೀಡುವುದು ಮತ್ತು ಪಡೆದುಕೊಳ್ಳುವುದನ್ನು ಶಿಕ್ಷಾರ್ಹ ಅಪರಾಧವಾಗಿಸುವ ಮಸೂದೆಯನ್ನು ತಿಂಗಳ ಹಿಂದೆಯಷ್ಟೇ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಕಳೆದ ವರ್ಷ ನವೆಂಬರ್ನಲ್ಲಿ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾದ ನೋಟುಗಳಿಗೆ ಸಂಬಂಧಿಸಿ ಭಾರತೀಯ ರಿಸರ್ವ್ಬ್ಯಾಂಕ್‌ (ಆರ್ಬಿಐ) ಮತ್ತು ಸರ್ಕಾರದ ಹೊಣೆಗಾರಿಕೆಯನ್ನು ಕೊನೆಗೊಳಿಸುವುದಕ್ಕಾಗಿ ನಿರ್ದಿಷ್ಟ ಬ್ಯಾಂಕ್ನೋಟುಗಳ (ಹೊಣೆಗಾರಿಕೆ ಸ್ಥಗಿತ) ಮಸೂದೆಗೆ ಕಳೆದ ತಿಂಗಳು ಸಂಸತ್ನಲ್ಲಿ ಅಂಗೀಕಾರ ಲಭಿಸಿತ್ತು. ಚಲಾವಣೆಯಿಂದ ಹಿಂದಕ್ಕೆ ಪಡೆಯಲಾದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳನ್ನು  ಇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ ಕಾನೂನಿಗೆ ಫೆಬ್ರುವರಿ 27ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಂಕಿತ ಹಾಕಿದ್ದರು. ಅದೇ ವೇಳೆ ಚಲಾವಣೆಯಲ್ಲಿ ಇಲ್ಲದ ನೋಟುಗಳು ಇರಿಸಿಕೊಂಡಿದ್ದು ಯಾಕೆ? ಎಂಬ ಪ್ರಶ್ನೆಗೆ ನೋಟು ರದ್ದತಿಯ ಅವಧಿಯಲ್ಲಿ (ನವೆಂಬರ್ 9- ಡಿಸೆಂಬರ್ 30, 2016) ದೇಶದಿಂದ ಹೊರಗೆ ಇದ್ದೆ ಎಂದು ಯಾರಾದರೂ ಸುಳ್ಳು ಪ್ರಸ್ತಾವನೆ ನೀಡಿದರೆ ಅವರಿಗೆ ಕನಿಷ್ಠ ರೂ.50,000 ದಂಡ ವಿಧಿಸಲಾಗುವುದು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಚಲಾವಣೆಯಲ್ಲಿ ಇಲ್ಲದ ನೋಟುಗಳನ್ನು ಆರ್ಬಿಐನಲ್ಲಿ ಜಮೆ ಮಾಡಲು ಮಾರ್ಚ್ 31 ವರೆಗೆ ಕಾಲಾವಕಾಶ ನೀಡಲಾಗಿತ್ತು. ಕಾನೂನಿನಲ್ಲಿ ಏನಿದೆ?
ಕಾನೂನು ಪ್ರಕಾರ, ಯಾವುದೇ ವ್ಯಕ್ತಿಯ ಬಳಿ 10ಕ್ಕಿಂತ ಹೆಚ್ಚು ಚಲಾವಣೆಯಲ್ಲಿರದ ನೋಟುಗಳು ಇದ್ದರೆ ಅಥವಾ ಕಲಿಕೆ, ಸಂಶೋಧನೆ ಅಥವಾ ನಾಣ್ಯಶಾಸ್ತ್ರದ ಉದ್ದೇಶದಿಂದ 25ಕ್ಕಿಂತಲೂ ಹೆಚ್ಚು ನೋಟುಗಳನ್ನು ಇರಿಸಿಕೊಂಡಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಪರಾಧಕ್ಕೆ ಕನಿಷ್ಠ ರೂ.10 ಸಾವಿರ ದಂಡ ಅಥವಾ ಪತ್ತೆಯಾದ ನಗದಿಗಿಂತ 5 ಪಟ್ಟು ಹೆಚ್ಚು ಮೊತ್ತ ಅಥವಾ ಅದಕ್ಕಿಂತ ಹೆಚ್ಚು ದಂಡವಿಧಿಸಲಾಗುವುದು.
2017: ಬಾಲಸೋರ್ (ಒಡಿಶಾ): ವೈರಿ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಬಲ್ಲ ಸ್ವದೇಶಿ
ಆತ್ಯಾಧುನಿಕ ತಂತ್ರಜ್ಞಾನದ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕೇವಲ 20 ದಿನಗಳ ಅಂತರದಲ್ಲಿ 2 ಬಾರಿ ಯಶಸ್ವಿಯಾಗಿ ಕ್ಷಿಪಣಿ ಪರೀಕ್ಷೆ ನಡೆಸುವ ಮೂಲಕ ಡಿಆರ್ಡಿಒ ಮಹತ್ವದ ಯಶಸ್ಸನ್ನು ಸಾಧಿಸಿತು. ಒಡಿಶಾದ ಬಾಲಸೋರ್ ಬಳಿ ಇರುವ ಅಬ್ದುಲ್ ಕಲಾಂ ದ್ವೀಪದಲ್ಲಿ ವಾಯು ಗಡಿ ರಕ್ಷಣಾ ವ್ಯವಸ್ಥೆಯ ಭಾಗವಾದ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನು ಬುಧವಾರ ಬೆಳಗ್ಗೆ ಯಶಸ್ವಿಯಾಗಿ ನಡೆಸಲಾಯಿತು. ಮೊದಲು ಫೆಬ್ರವರಿ 11 ರಂದು ಪ್ರತಿಬಂಧಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಕ್ಷಿಪಣಿಯ ಹಲವು ಕಾರ್ಯಾಚರಣೆಯನ್ನು ಇಂದು ಪರೀಕ್ಷೆಗೆ ಒಳಪಡಿಸಲಾಯಿತು. ಚಾಂಡಿಪುರ ಉಡಾವಣಾ ಕೇಂದ್ರದಿಂದ ಉಡಾಯಿಸಲಾಗಿದ್ದ ಪೃಥ್ವಿ ಕ್ಷಿಪಣಿಯನ್ನು ಪ್ರತಿಬಂಧಕ ಕ್ಷಿಪಣಿ ಯಶಸ್ವಿಯಾಗಿ ಹೊಡೆದುರುಳಿಸಿತು. ಚಾಂಡಿಪುರ್ ಕೇಂದ್ರದಿಂದ ಪೃಥ್ವಿ ಉಡಾವಣೆಯಾದ 4 ನಿಮಿಷಗಳ ನಂತರ ಪ್ರತಿಬಂಧಕ ಕ್ಷಿಪಣಿಗೆ ರಡಾರ್ ಮೂಲಕ ಮಾಹಿತಿ ರವಾನೆಯಾಗಿತ್ತು. ನಂತರ ಪ್ರತಿಬಂಧಕ ಕ್ಷಿಪಣಿ ಪೃಥ್ವಿ ಕ್ಷಿಪಣಿಯನ್ನು ಆಕಾಶದಲ್ಲೇ ಹೊಡೆದುರುಳಿಸುವ ಮೂಲಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಪ್ರತಿಬಂಧಕ ಕ್ಷಿಪಣಿ ಅತ್ಯಾಧುನಿಕ ಕಂಪ್ಯೂಟರ್, ಎಲೆಕ್ಟ್ರೋ ಮ್ಯಾಗ್ನೆಟಿಕ್ ಆಕ್ಟಿವೇಟರ್, ಜಿಪಿಎಸ್ ಉಪಕರಣ ಒಳಗೊಂಡಿರುತ್ತದೆ. ಇದು 7.5 ಮೀಟರ್ ಉದ್ದ ಇದ್ದು, 30 ಕಿ.ಮೀ. ಎತ್ತರದಲ್ಲೇ ವೈರಿ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದರು. ಕಳೆದ ವರ್ಷ ನವೆಂಬರ್ 16 ರಂದು ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು, ಆದರೆ ಕಾರಣಾಂತರಗಳಿಂದ ಕ್ಷಿಪಣಿಯ ಪರೀಕ್ಷೆ ನಡೆದಿರಲಿಲ್ಲ. ಬದಲಾಗಿ ಡಿಆರ್ಡಿಒ ವಿಜ್ಞಾನಿಗಳು ಪೃಥ್ವಿ – 2 ಕ್ಷಿಪಣಿಯ ಪರೀಕ್ಷೆ ನಡೆಸಿದ್ದರು. ಭಾರತದ ಬಳಿ ಖಂಡಾಂತರ ಕ್ಷಿಪಣಿಯ ದಾಳಿಯನ್ನು ಗುರುತಿಸಲು 2 ಹಂತದ ರಕ್ಷಣಾ ವ್ಯವಸ್ಥೆ ಇದೆ. ಇದು ಭೂಮಿಯ ವಾತಾವರಣದ ಹೊರಭಾಗ ಮತ್ತು ಭೂಮಿಯ ವಾತಾವರಣದ ಒಳಭಾಗದಲ್ಲಿ ಆಗಮಿಸುವ ಕ್ಷಿಪಣಿಯನ್ನು ಗುರುತಿಸುತ್ತದೆ. ಸುಧಾರಿತ ವಾಯು ಗಡಿ ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷೆಯ ನಂತರ ವ್ಯವಸ್ಥೆ ಹೊಂದಿದ ಅಮೆರಿಕ, ರಷ್ಯಾ ಮತ್ತು ಇಸ್ರೇಲ್ ರಾಷ್ಟ್ರಗಳೊಂದಿಗೆ ಭಾರತ ಗುರುತಿಸಲಿಕೊಳ್ಳಲಿದೆ ಎಂದು ಡಿಆರ್ಡಿಒ ಅಧಿಕಾರಿಗಳು ತಿಳಿಸಿದರು.

2009: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಣಮುಖರಾಗಿ ಈದಿನ ನವದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಮನೆಗೆ ತೆರಳಿದರು. ನ್ಯುಮೋನಿಯಾದಿಂದ ನರಳುತ್ತಾ 26 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ ಅವರಿಗೆ ಕೃತಕ
ಉಸಿರಾಟದ ಸಾಧನ ಅಳವಡಿಸಲಾಗಿತ್ತು. 'ಈಗ ವಾಜಪೇಯಿ ಅವರ ಆರೋಗ್ಯ ಸುಧಾರಿಸಿದ್ದು ಮನೆಯಲ್ಲೇ ವೈದ್ಯರು ಅವರನ್ನು ನೋಡಿಕೊಳ್ಳುವರು' ಎಂದು ಆಸ್ಪತ್ರೆಯಲ್ಲಿದ್ದ ಬಿಜೆಪಿ ನಾಯಕ ವಿಜಯ್ ಗೋಯಲ್ ಸುದ್ದಿಗಾರರಿಗೆ ತಿಳಿಸಿದರು. ಮಾಜಿ ಪ್ರಧಾನಿ ಅವರ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಸಹ ಈ ಸಂದರ್ಭದಲ್ಲಿ ಇದ್ದರು. ವಾಜಪೇಯಿ ಆಸ್ಪತ್ರೆಯ ಹಾಸಿಗೆಯಿಂದಲೇ ಟಿವಿ ಮೂಲಕ ಪ್ರಚಲಿತ ವಿದ್ಯಮಾನ ನೋಡುತ್ತಿದ್ದರು. ತಮ್ಮ ನೆಚ್ಚಿನ ಹಿಂದಿ ಚಿತ್ರಗೀತೆಗಳನ್ನು ಕೇಳಿದರಲ್ಲದೆ, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಹ ವೀಕ್ಷಿಸಿದರು.

2009: ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಕೆಲವು ಉಡುಗೊರೆಗಳನ್ನು ಪ್ರಕಟಿಸಿತು. ರಾಜಧಾನಿಯಲ್ಲಿ ಅಮೃತ ಮಹೋತ್ಸವ ಭವನದ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿ ಹಾಗೂ ಸದಭಿರುಚಿಯ ಐವತ್ತು ಕನ್ನಡ ಚಲನಚಿತ್ರಗಳಿಗೆ ತಲಾ 10 ಲಕ್ಷ ರೂಪಾಯಿ ಸಹಾಯಧನ ನೀಡಲು ಎರಡು ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಒದಗಿಸಿರುವುದಾಗಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ 'ಕನ್ನಡ ವಾಕ್ಚಿತ್ರ ದ ಅಮೃತ ಮಹೋತ್ಸವ' ಕಾರ್ಯಕ್ರಮ ಸಂಘಟಿಸಿತ್ತು.

2009: ಕೇಂದ್ರ ಚುನಾವಣಾ ಆಯೋಗದಿಂದ ನವೀನ್ ಚಾವ್ಲಾ ಅವರನ್ನು ವಜಾ ಮಾಡಬೇಕೆಂಬ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರ ಶಿಫಾರಸನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಳ್ಳಿಹಾಕಿದರು. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯ ನೇತೃತ್ವವನ್ನು ವಹಿಸಿಕೊಳ್ಳಲು ಚಾವ್ಲಾ ಅವರ ಹಾದಿ ಸುಗಮಗೊಂಡಿತು. ಗೋಪಾಲಸ್ವಾಮಿ ಅವರು ಸಲ್ಲಿಸಿದ್ದ ವರದಿ, ಸರ್ಕಾರದ ಶಿಫಾರಸು, ಸಂವಿಧಾನದ ನಿಂದನೆ, ಸುಪ್ರೀಂಕೋರ್ಟ್ ತೀರ್ಪು ಎಲ್ಲವನ್ನೂ ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ, ಮುಖ್ಯ ಚುನಾವಣಾ ಆಯುಕ್ತರ ಸಲಹೆ ತಿರಸ್ಕರಿಸಬೇಕೆಂಬ ಸರ್ಕಾರದ ಶಿಫಾರಸನ್ನು ಒಪ್ಪಿಕೊಳ್ಳಲು ರಾಷ್ಟ್ರಪತಿ ನಿರ್ಧರಿಸಿದರು ಎಂದು ರಾಷ್ಟ್ರಪತಿ ಭವನದ ವಿಶೇಷ ಕರ್ತವ್ಯಾಧಿಕಾರಿ ಅರ್ಚನಾ ದತ್ತ ತಿಳಿಸಿದರು. ಪೂರ್ವಗ್ರಹ ಪೀಡಿತರಾಗಿರುವ ಚಾವ್ಲಾ ಅವರನ್ನು ವಜಾ ಮಾಡಬೇಕೆಂದು ಕೋರಿ ಜನವರಿಯಲ್ಲಿ ನಡೆದ ಅಪರೂಪದ ಬೆಳವಣಿಗೆಯಲ್ಲಿ ಗೋಪಾಲಸ್ವಾಮಿ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಇದು ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವೆ ತೀವ್ರ ವಾಗ್ದಾಳಿಗೆ ಕಾರಣವಾಗಿತ್ತು.

2009: ವಾರ್ತಾ ಇಲಾಖೆಯು ಬೆಂಗಳೂರಿನಲ್ಲಿ ಏರ್ಪಡಿಸ್ದಿದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಾಜಾ ಶೈಲೇಶಚಂದ್ರ ಗುಪ್ತ ಅವರಿಗೆ 'ಟಿಯೆಸ್ಸಾರ್ ಸ್ಮಾರಕ ಕನ್ನಡ ಪತ್ರಿಕೋದ್ಯಮ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸುಮಂಗಲಾ ಎಸ್.ಮುಮ್ಮಿಗಟ್ಟಿ ಅವರಿಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಶಿವರಾಮ ಅಸುಂಡಿ ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಶಿವಾನಂದ ಕಳವೆ ಅವರಿಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2009: 'ಮಂಗಳೂರಿನಿಂದ ತಮಿಳುನಾಡಿನ ವಿಲ್ಲುಪುರಂ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲಾಗಿದೆ. ಇದರಿಂದ ಪಶ್ಚಿಮ ಹಾಗೂ ಪೂರ್ವ ಕಡಲ ತೀರದ ಬಂದರುಗಳ ನಡುವಿನ ರಸ್ತೆ ಸಂಚಾರ ಸುಗಮವಾಗಲಿದೆ' ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

 2008: ಟೆಸ್ಟ್ ಕ್ರಿಕೆಟಿನಲ್ಲಿ ಐದು ದಶಕಗಳ ಹಿಂದೆ ಸ್ಥಾಪನೆಯಾಗಿದ್ದ ವಿಶ್ವದಾಖಲೆಯೊಂದು ಈದಿನ ಚಿತ್ತಗಾಂಗಿನ ಡಿವಿಷನಲ್ ಕ್ರೀಡಾಂಗಣದಲ್ಲಿ ಮುರಿದುಬಿತ್ತು. ಬಾಂಗ್ಲಾದೇಶ ತಂಡದ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ನೀಲ್ ಮೆಕೆಂಜಿ ನೂತನ ಇತಿಹಾಸ ನಿರ್ಮಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 415 ರನ್ನುಗಳನ್ನು ಸೇರಿಸಿದ ಇವರು 53 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿಹಾಕಿದರು. 1956 ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಪಂಕಜ್ ರಾಯ್ ಮತ್ತು ವಿನೂ ಮಂಕಡ್ ಮೊದಲ ವಿಕೆಟಿಗೆ 413 ರನ್ಗಳ ಜೊತೆಯಾಟ ನೀಡಿದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು. 

2008: ಪೊಲೀಸ್ ಸಿಬ್ಬಂದಿಯ ಅಂತ್ಯಸಂಸ್ಕಾರ ನಡೆಯುತ್ತಿದ್ದ ವೇಳೆಯಲ್ಲಿ ಸಂಭವಿಸಿದ ಆತ್ಮಹತ್ಯಾ ದಳ ಸ್ಫೋಟದಲ್ಲಿ 40 ಜನರು ಮೃತರಾಗಿ ಸ್ವಾತ್ ಜಿಲ್ಲೆಯಲ್ಲಿ ನಡೆಯಿತು. ಪಾಕಿಸ್ಥಾನದ ಸೇನೆ ತಾನು ಈ ಪ್ರದೇಶದಲ್ಲಿ ನಿಯಂತ್ರಣ ಸಾಧಿಸಿರುವುದಾಗಿ ಹೇಳಿದ ಕೆಲವೇ ದಿನಗಳಲ್ಲಿ ಈ ಕೃತ್ಯ ನಡೆಯಿತು.

2008: ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕವಯತ್ರಿ- ಲೇಖಕಿ ಶಶಿಕಲಾ ವೀರಯ್ಯಸ್ವಾಮಿ ಅವರ ಹೆಸರನ್ನು ಶಿಫಾರಸು ಮಾಡಲಾಯಿತು. ಪ್ರತಿವರ್ಷ ಒಬ್ಬರು ಲೇಖಕಿಯರಿಗೆ ರಾಜ್ಯ ಸರ್ಕಾರ ಕೊಡುವ ಈ ಪ್ರತಿಷ್ಠಿತ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಬಿ.ಟಿ.ಲಲಿತಾ ನಾಯ್ಕ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಹೆಸರನ್ನು ಶಿಫಾರಸು ಮಾಡಿತು.

2008: ಕಂದುಬಣ್ಣದ ಸ್ಯಾಂಟ್ರೊ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಅಂಧೇರಿಯಲ್ಲಿರುವ ಕಚೇರಿ ಮೇಲೆ ಬಿಯರ್ ಬಾಟಲಿ ಎಸೆದು ಪರಾರಿಯಾದರು. ಈ ಸಮಯದಲ್ಲಿ ಬಚ್ಚನ್ ಕುಟುಂಬದವರಾರೂ ಕಚೇರಿಯಲ್ಲಿ ಇರಲಿಲ್ಲ. ಇಂತಹುದೇ ಘಟನೆ ಕೆಲದಿನಗಳ ಹಿಂದೆಯೂ ನಡೆದಿತ್ತು. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಪ್ರಚೋದನಕಾರಿ ಭಾಷಣದ ಬೆನ್ನಲ್ಲೇ ಅಮಿತಾಭ್ ಅವರ ಕಚೇರಿ ಮೇಲೆ ಬಾಟಲಿ ಎಸೆಯಲಾಗಿತ್ತು.  

2008: 2008: ಮುಂಬೈ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿ 10 ಗ್ರಾಮುಗಳಿಗೆ 12,565 ರೂಪಾಯಿಗಳಿಗೆ ತಲುಪಿತು. ಆದರೆ ಬೆಳ್ಳಿಯ ಬೆಲೆ ಖರೀದಿದಾರರು ಆಸಕ್ತಿ ತೋರದ ಕಾರಣ ಕೆಳಕ್ಕೆ ಇಳಿಯಿತು.

2008: ಕನಿಷ್ಠ ಬೆಂಬಲ ಬೆಲೆಯ ಜತೆಗೆ ಕಬ್ಬಿನ ಇಳುವರಿ ಆಧರಿಸಿ ಟನ್ನಿಗೆ 160 ರೂಪಾಯಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ತಮ್ಮ ಧರಣಿಯನ್ನು ಕೈಬಿಟ್ಟರು.

2008: ನೆದರ್ ಲ್ಯಾಂಡ್ ದಂಪತಿ ದತ್ತು ಪುತ್ರಿಯಾಗಿ ಬೆಳೆದ ಭಾರತೀಯ ಮೂಲದ ಹುಡುಗಿಯೊಬ್ಬಳು ನಾಗಪುರದಲ್ಲಿ ಡಚ್ ಹುಡುಗನನ್ನು ಹಿಂದೂ ಸಂಪ್ರದಾಯದಂತೆ ವರಿಸಿದಳು. ಶಶಿಕಲಾ ಕೀರ್ಸ್ (34)  ಎಂಬ ಈ  ಹುಡುಗಿ ಕಳೆದ 3 ದಶಕಗಳ ಕಾಲ ನೆದರ್ ಲ್ಯಾಂಡ್ ದಂಪತಿಗಳ ಆಶ್ರಯದಲ್ಲೇ ಬೆಳೆದವಳು. ಜೊಸೆಫ್ ವೊಸ್(32) ಎನ್ನುವ ಡಚ್ ಹುಡುಗನನ್ನು ಈಗಾಗಲೇ ಕ್ರೈಸ್ತ ಸಂಪ್ರದಾಯದಂತೆ 2007ರಲ್ಲಿ ಮದುವೆಯಾಗಿದ್ದಳು. ತಾಯ್ನಾಡಿನ ಪ್ರೇಮ ಮತ್ತು ಮೂಲ ಬೇರುಗಳ ಸೆಳೆತ ಈ ಹುಡುಗಿಯನ್ನು ಮತ್ತೆ ಇಲ್ಲಿಗೆ ಎಳೆದು ತಂದಿತು. ಇಲ್ಲಿನ ಸಂಪ್ರದಾಯದಂತೆ ವಿವಾಹ ವಿಧಿ ವಿಧಾನಗಳನ್ನು ಪೂರೈಸಬೇಕು ಎನ್ನುವುದು ಶಶಿಕಲಾ ಅವರ ತುಡಿತ. ಅದಕ್ಕಾಗಿಯೇ ಈ ವಿವಾಹ ಸಮಾರಂಭ ನಡೆಯಿತು.  

2008: ಐದು ವರ್ಷದ ಬಾಲಿಕೆಯ ಮೇಲೆ ಅತ್ಯಾಚಾರ ನಡೆಸಿದ ಎನ್ನಲಾದ ವ್ಯಕ್ತಿಯೊಬ್ಬನನ್ನು ಜಹಾಂಗಿರಾಬಾದ್ ಪ್ರದೇಶದ ಗ್ರಾಮಸ್ಥರು ಇಂದು ಥಳಿಸಿ ಸಾಯಿಸಿದರು. ಸಗೀರ್ ಎಂಬ ಈ ವ್ಯಕ್ತಿ ಸಗೀರ್ ಭಾಯರಾ ಗ್ರಾಮದ ರಾಮನರೇಶ್ ಎಂಬವರ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಗ್ರಾಮಸ್ಥರೆಲ್ಲ ಸ್ಥಳಕ್ಕೆ ಧಾವಿಸಿ ಅತ್ಯಾಚಾರಿಯನ್ನು ಕಬ್ಬಿಣದ ಸಲಾಕೆಯಿಂದ ಹಿಗ್ಗಾಮುಗ್ಗಾ ಥಳಿಸಿದರು. ಆತ ಸ್ಥಳದಲ್ಲೇ ಮೃತನಾದ ಎಂದು ಪೊಲೀಸರು ತಿಳಿಸಿದರು.

2007: ವಿಶ್ವದಲ್ಲೇ ಮೊದಲ ಬಾರಿಗೆ ಏಕೈಕ ಚಿಪ್ ಅಳವಡಿಸಿದ ಮೊಬೈಲ್ ಹ್ಯಾಂಡ್ ಸೆಟ್ ಮೋಟೋಫೋನ್ ಎಫ್3ಸಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕ್ವಾಲ್ ಕಾಮ್ ಇಂಡಿಯಾ, ಟಾಟಾ ಟೆಲಿ ಸರ್ವೀಸಸ್ಸಿಗಾಗಿ ವಿನ್ಯಾಸಗೊಳಿಸಿದ ಈ ಸಿಂಗಲ್ ಚಿಪ್ ಹ್ಯಾಂಡ್ ಸೆಟ್ಟನ್ನು ಬಾಲಿವುಡ್ ನಟಿ ನೇಹಾ ದೂಷಿಯಾ ಬಿಡುಗಡೆ ಮಾಡಿದರು.

2007: ಖ್ಯಾತ ರಂಗನಿರ್ದೇಶಕ ಆರ್. ನಾಗೇಶ್, ಭರತನಾಟ್ಯ ಕಲಾವಿದೆ ಎಸ್. ನರ್ಮದಾ ಸೇರಿದಂತೆ  ವಿವಿಧ ಕ್ಷೇತ್ರಗಳ 33 ಗಣ್ಯರಿಗೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು, ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ನೃತ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.

2007: ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ಕಂಪೆನಿಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿತು. ವಾರದ ಹಿಂದೆ ಸಚಿವರ ತಂಡವು ಇವುಗಳ ವಿಲೀನಕ್ಕೆ ಶಿಫಾರಸು ಮಾಡಿತ್ತು. ಈ ಎರಡೂ ಕಂಪೆನಿಗಳು 15 ಸಾವಿರ ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದು, ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರವ ಇತರ ಯಾವುದೇ ಕಂಪೆನಿಗಿಂತ ಹೆಚ್ಚು ಮಾರ್ಗಗಳಲ್ಲಿ ವಿಮಾನ ಸಂಚಾರ ಕಲ್ಪಿಸಿವೆ. ಇನ್ನು ಮುಂದೆ ಈ ಎರಡೂ ದೈತ್ಯ ಕಂಪೆನಿಗಳು ಒಂದಾಗಿ ಕಾರ್ಯ ನಿರ್ವಹಿಸಲಿವೆ.

2007: ಕೇಂದ್ರದ ಮಾಜಿ ಸಚಿವ ಭುವನ್ಸ್ ಚಂದ್ರ ಖಂಡೂರಿ ಅವರು ಉತ್ತರಖಂಡ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು. ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸಬೇಕು ಎಂದು ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

2007: ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಯಂ ಸಿಂಗ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ ನೀಡಿತು.

2006: ಮುಂಬೈಯಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟಿಸಿದ ಕೆಲ ದಿನಗಳ ಮೊದಲು ನಟ ಸಂಜಯ್ ದತ್ ಗೆ ಅವರ ನಿವಾಸದಲ್ಲಿಯೇ ಮೂರು ಎಕೆ-56 ಬಂದೂಕು, ಕೆಲ ಕೈ ಬಾಂಬ್ ಹಾಗೂ ಮದ್ದು ಗುಂಡುಗಳನ್ನು ಹಸ್ತಾಂತರಿಸಿರುವುದಾಗಿ ಭೂಗತ ದೊರೆ ಅಬು ಸಲೇಂ, ಸಿಬಿಐ ಡಿಜಿಪಿ ಒ.ಪಿ. ಚತ್ವಾಲ್ ಅವರ ಎದುರು ಕಳೆದ ನವೆಂಬರ್ 20ರಂದು ನೀಡಿದ್ದ ತಪ್ಪೊಪ್ಪಿಗೆ ವಿವರವನ್ನು ಈ ದಿನ ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೊಡೆ ಬಹಿರಂಗಪಡಿಸಿದರು. 16 ಪುಟಗಳ ಈ ತಪ್ಪೊಪ್ಪಿಗೆ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗಿತ್ತು..

2006: ಮೂರು ದಿನಗಳ ಭೇಟಿಗಾಗಿ ಜಾರ್ಜ್ ಡಬ್ಲ್ಯು ಬುಷ್ ಹಾಗೂ ಅವರ ಪತ್ನಿ ಲಾರಾ ಮತ್ತು ಇತರ ಅಧಿಕಾರಿಗಳೊಂದಿಗೆ ನವದೆಹಲಿಗೆ ಆಗಮಿಸಿದರು. ಶಿಷ್ಟಾಚಾರವನ್ನು ಬದಿಗೊತ್ತಿ ಸ್ವತಃ ಪ್ರಧಾನಿ ಮನಮೋಹನ ಸಿಂಗ್ ಅವರೇ ಬುಷ್ ಪರಿವಾರವನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

2006: ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನಿರ್ಣಯ ಕೈಗೊಂಡಿರುವ ಬೆಳಗಾವಿ ತಾಲ್ಲೂಕು ಪಂಚಾಯಿತಿಗೆ ಪಂಚಾಯ್ತಿ ರಾಜ್ ಕಾಯ್ದೆಯ ನಿಯಮ 136ರ ಅನ್ವಯ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲು ಸರ್ಕಾರ ನಿರ್ಧರಿಸಿತು.

2006: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಮಹಿಳಾ ವೇಟ್ ಲಿಫ್ಟರ್ ಶೈಲಜಾ ಪೂಜಾರಿ ಅವರನ್ನು ಅಂತರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್ (ಐ.ಡಬ್ಲ್ಯು.ಎಫ್) ತಾತ್ಕಾಲಿಕವಾಗಿ ಅಮಾನತುಗೊಳಿಸಿತು.

2001: ಆಫ್ಘಾನಿಸ್ಥಾನದ ತಾಲಿಬಾನ್ 2000 ವರ್ಷಗಳಷ್ಟು ಪುರಾತನವಾದ ಬಾಮಿಯಾನಿನ ಬೌದ್ಧ ವಿಗ್ರಹಗಳ ನಾಶವನ್ನು ಆರಂಭಿಸಿತು. ಇದರಿಂದ ಅಂತಾರಾಷ್ಟ್ರೀಯ ಸಮುದಾಯ ರೊಚ್ಚಿಗೆದ್ದಿತು.

1998: ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಕರ್ನಾಟಕ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಭಾರತ ರತ್ನ' ನೀಡಿ ಗೌರವಿಸಲಾಯಿತು. ಎ.ಪಿ.ಜೆ. ಅಬ್ದುಲ್ ಕಲಾಂ ಮುಂದೆ ಭಾರತದ ರಾಷ್ಟ್ರಪತಿಯಾದರು. `ಭಾರತ ರತ್ನ' ಪಡೆದ ಮೊದಲ ಗಾಯಕಿ ಸುಬ್ಬುಲಕ್ಷ್ಮಿ 2004ರ ಡಿಸೆಂಬರ್ 11ರಂದು ನಿಧನರಾದರು.  

1994: ಭಾರತದ ಖ್ಯಾತ ಚಿತ್ರ ನಿರ್ದೇಶಕ ಮನಮೋಹನ್ ದೇಸಾಯಿ (1936-1994) ಮುಂಬೈಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.

1980: ಶಾಹಿದ್ ಆಫ್ರಿದಿ ಜನಿಸಿದರು. ಪಾಕಿಸ್ಥಾನಿ ಕ್ರಿಕೆಟ್ ಆಟಗಾರರಾದ ಇವರು ಏಕದಿನದ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಶತಮಾನದ ವೇಗದ ಸೆಂಚುರಿ ಸಿಡಿಸಿ ಖ್ಯಾತಿ ಪಡೆದರು.

1970: ಕಲಾವಿದ ನಿರುಪಮಾ ರಾಜೇಂದ್ರ ಜನನ.

1968 ಸಲೀಲ್ ಅಂಕೋಲಾ ಹುಟ್ಟಿದ ದಿನ. ಭಾರತದ ಮಾಜಿ ಕ್ರಿಕೆಟಿಗರಾದ ಇವರು ಚಿತ್ರ ನಟರಾಗಿ ಬದಲಾದರು.

1954: ಅಮೆರಿಕಾವು ಮೊತ್ತ ಮೊದಲ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಮಾರ್ಷಲ್ ಐಲ್ಯಾಂಡಿನ ಬಿಕಿನಿ ಅಟೊಲಿನಲ್ಲಿನಡೆಸಿತು. ಈ ಬಾಂಬ್ 1945ರಲ್ಲಿ ಹಿರೋಷಿಮಾವನ್ನು ಧ್ವಂಸಗೊಳಿಸಿದ ಬಾಂಬಿಗಿಂತ 500 ಪಟ್ಟು ಹೆಚ್ಚು ಶಕ್ತಿಶಾಲಿಯಾದುದಾಗಿತ್ತು.

1947: ಕಲಾವಿದ ಟಿ.ವಿ. ಕಬಾಡಿ ಜನನ.

1936: ತಮ್ಮ ನಿರಂತರ ಪ್ರಯೋಗಶೀಲತೆಯಿಂದ ಹಲವಾರು ಮಾಧ್ಯಮಗಳ ಮೂಲಕ ಚಿತ್ರಕಲೆಯನ್ನು ಅಭಿವ್ಯಕ್ತಿಸಿದ ಆರ್. ಎಂ. ಹಡಪದ್ ಅವರು ಮಲ್ಲಪ್ಪ- ಬಸಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬದಾಮಿಯಲ್ಲಿ ಜನಿಸಿದರು. ಹಡಪದ್ ಚಿತ್ರಕಲೆಗೆ ಬದಾಮಿಯೇ ಸ್ಫೂರ್ತಿ. 1961ರಲ್ಲಿ ಮಿಣಜಿಗಿ ಅವರು ಡ್ರಾಯಿಂಗ್ ಟೀಚರ್ಸ್ ಇನ್ ಸ್ಟಿಟ್ಯೂಟ್ ಆರಂಭಿಸಿದಾಗ ಬೆಂಗಳೂರಿಗೆ ಬಂದ ಹಡಪದ್, ಕಲಿಯುತ್ತಲೇ ಏಕವ್ಯಕ್ತಿ ಪ್ರದರ್ಶನಗಳನ್ನು ಮಾಡುತ್ತಾ ಬೆಳೆದವರು. 1966ರಲ್ಲಿ ವಿ.ಫೋರ್ ಸಂಸ್ಥೆ ಕಟ್ಟಿ ಬೆಂಗಳೂರಿನಲ್ಲಿ ಕಲಾ ಪ್ರದರ್ಶನ ಏರ್ಪಡಿಸಿದ್ದರು. ಮಿಣಜಿಗಿ ಅವರಿಗೆ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಬಂದಾಗ ಅದನ್ನು ವಹಿಸಿಕೊಂಡ ಹಡಪದ್ ಕೆನ್ ಕಲಾ ಶಾಲೆಯಾಗಿ ಪರಿವರ್ತಿಸಿ ನೂರಾರು ವಿದ್ಯಾರ್ಥಿಗಳಿಗೆ ಕಲಾ ಅಭ್ಯಾಸಕ್ಕೆ ಸ್ಥಳ ಒದಗಿಸಿದರು. (ಈ ಕೆನ್ ಕಲಾಶಾಲೆ ಈಗ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಜೊತೆಗೆ ಸಂಯೋಜನೆ ಹೊಂದಿದೆ) ಕೆಲ ಕಾಲ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಸೇವೆ, ಕಲಾ ಸಂಗ್ರಹಣ ಶಿಬಿರ, ಕಲಾ ಪುಸ್ತಕಗಳ ಪ್ರಕಟಣೆ, ಗ್ರಾಫಿಕ್ ಸ್ಟುಡಿಯೋ ಸ್ಥಾಪನೆ, ಅಂತರರಾಜ್ಯ ವಿನಿಮಯ ಕಲಾಕೇಂದ್ರ ಪ್ರದರ್ಶನ ಇತ್ಯಾದಿ ಅವರ ಸಾಧನೆಗಳ ಮೈಲಿಗಲ್ಲುಗಳು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಉತ್ತಮ ಕಲಾವಿದ ಮತ್ತು ಅಧ್ಯಾಪಕ ಪುರಸ್ಕಾರ, ಕರ್ನಾಟಕ ಲಲಿತಕಲಾ ಅಕಾಡೆಮಿ ಸೀನಿಯರ್ ಫೆಲೋಷಿಪ್ ಇತ್ಯಾದಿ ಅವರಿಗೆ ಲಭಿಸಿದ ಗೌರವಗಳು.

1933: ಕಲಾವಿದ ಭರಮಪ್ಪ ನಿಂಗಪ್ಪ ಬಾಳೂರು ಜನನ.

1922: ವಿಲಿಯಂ ಮ್ಯಾಕ್ಸ್ ವೆಲ್ ಗೇನ್ಸ್ (1922-92) ಹುಟ್ಟಿದರು. ಅಮೆರಿಕದ ಖ್ಯಾತ ಪ್ರಕಾಶಕರಾದ ಇವರು `ಮ್ಯಾಡ್' ಮ್ಯಾಗಜಿನ್ ನ ಪ್ರಕಾಶಕರು.

1922: ಯಿತ್ ಝಾಕ್ ರಾಬಿನ್ (1922-1995) ಹುಟ್ಟಿದ ದಿನ.

1882: ಅಮೆರಿಕನ್ ಕಾಂಗ್ರೆಸ್ ಯೆಲ್ಲೋಸ್ಟೋನ್ ಪಾರ್ಕನ್ನು ಸ್ಥಾಪಿಸಿತು. ಅತ್ಯಂತ ಹಳೆಯದಾದ ಈ ಪಾರ್ಕ್ ಅತ್ಯಂತ ವಿಶಾಲವೂ, ಅತ್ಯಂತ ಹೆಚ್ಚು ಜನಪ್ರಿಯವಾದ ಪಾರ್ಕ್ ಎಂದು ಹೆಸರು ಪಡೆದಿದೆ.

1858: ಜಾರ್ಜ್ ಸಿಮ್ಮೆಲ್ (1858-1918) ಹುಟ್ಟಿದ ದಿನ. ಜರ್ಮನ್ ಸಮಾಜ ವಿಜ್ಞಾನಿಯಾದ ಈತ ಜರ್ಮನಿಯಲ್ಲಿ ಸಮಾಜ ವಿಜ್ಞಾನವನ್ನು ಮೂಲ ಸಮಾಜ ವಿಜ್ಞಾನವಾಗಿ ರೂಪಿಸಲು ಶ್ರಮಿಸಿದ.

1845: ಟೆಕ್ಸಾಸ್ ಅಮೆರಿಕಾಕ್ಕೆ ಸೇರ್ಪಡೆಗೊಂಡಿತು.

1780: ಪೆನ್ಸಿಲ್ವೇನಿಯಾವು ಗುಲಾಮೀ ಪದ್ಧತಿಯನ್ನು ರದ್ದು ಪಡಿಸಿದ ಮೊತ್ತ ಮೊದಲ ಅಮೆರಿಕನ್ ರಾಜ್ಯವಾಯಿತು.

1776: ಮರಾಠರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಪುರಂದರ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು 1775ರ ಸೂರತ್ ಒಪ್ಪಂದವನ್ನು ಅನೂರ್ಜಿತಗೊಳಿಸಿತು.

No comments:

Post a Comment