Monday, March 5, 2018

ಇಂದಿನ ಇತಿಹಾಸ History Today ಮಾರ್ಚ್ 04

ಇಂದಿನ ಇತಿಹಾಸ History Today ಮಾರ್ಚ್  04
2018: ಲಾಹೋರ್: ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಸಂಸತ್ ಸದಸ್ಯರಾಗಿ ಆಯ್ಕೆಯಾದರು.. ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಕುಮಾರಿ ಕೊಲ್ಹಿ ಅವರು ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ಈದಿನ ವರದಿ ಮಾಡಿದವು. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು (ಪಿಪಿಪಿ) ಕೃಷ್ಣಕುಮಾರಿ ಕೊಲ್ಹಿ ಅವರನ್ನು ಸೆನೆಟ್ ಗೆ ಆಯ್ಕೆ ಮಾಡಿ ಕಳುಹಿಸಿತು.  ಅವರ ನೇಮಕ ಪಾಕಿಸ್ತಾನ ಇತಿಹಾಸದಲ್ಲಿ ನಿರ್ಮಿಸಿದತು. ಸಿಂಧ್ ಪ್ರಾಂತ್ಯದ ಥಾರ್ ಪ್ರದೇಶಕ್ಕೆ ಸೇರಿದ ೩೯ ವರ್ಷದ ಕೊಲ್ಹಿ ಅವರು ಮಾರ್ಚ್ ೩ರಂದು ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ವರದಿಗಳು ತಿಳಿಸಿದವು.  ‘ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವುದು ಇದೇ ಮೊದಲು. ೨೦೦೯ರಲ್ಲಿ ಡಾ. ಖತುಮಾಲ್ ಜೀವನ್ ಹಾಗೂ ೨೦೧೫ರಲ್ಲಿ ಗಯಾನ್‌ಚಾಂದ್ ಅವರನ್ನು ಸಂಸತ್ ಸದಸ್ಯರನ್ನಾಗಿ ಪಿಪಿಪಿ ಆಯ್ಕೆ ಮಾಡಿತ್ತು. ಕೃಷ್ಣ ಕುಮಾರಿ ಅವರು ಸಿಂಧ್ ಪ್ರಾಂತ್ಯದ ಥಾರ್ ನಿವಾಸಿಯಾಗಿದ್ದು, ನಗರಪಾರ್ಕರ್ ಜಿಲ್ಲೆಯಿಂದ ಜಯಗಳಿಸಿದ್ದಾರೆ. ಮುಸ್ಲಿಂ ಬಾಹುಳ್ಯವಿರುವ ಸೆನೆಟ್‌ನಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೃಷ್ಣಾ ಕುಮಾರಿ ಅವರಿಗೆ ಮತದಾನ ಮಾಡವಂತೆ ಪಿಪಿಪಿ ತನ್ನ ಎಲ್ಲ ಸದಸ್ಯರಿಗೂ ಸೂಚನೆ ನೀಡಿತ್ತು. ಕೃಷ್ಣಾ ಕುಮಾರಿ ಅವರು ಸ್ವಾತಂತ್ರ್ಯ ಯೋಧ ರೂಪ್ಲೊ ಕೊಲ್ಹಿ ಅವರ ಕುಟುಂಬಕ್ಕೆ ಸೇರಿದವರಾಗಿದ್ದು, ರೂಪ್ಲೊ ಕೊಲ್ಹಿ ಅವರು ೧೮೫೭ರಲ್ಲಿ ಸಿಂಧ್ ಪ್ರಾಂತ್ಯದ ಮೇಲೆ ದಾಳಿ ನಡೆಸಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿ ಪಡೆಗಳ ವಿರುದ್ಧ ಸಮರ ಸಾರಿದ್ದರು. ತಮ್ಮ ಸಹೋದರನ ಜೊತೆಗೆ ಪಿಪಿಪಿಯ ಸಾಮಾಜಿಕ ಕಾರ್ಯಕರ್ತೆಯಾಗಿ ಸೇರಿದ್ದ ಕೃಷ್ಣಕುಮಾರಿ ಬಳಿಕ ಯೂನಿಯನ್ ಕೌನ್ಸಿಲ್ ಬೆರನೋದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.  ೧೯೭೯ರಲ್ಲಿ ಬಡ ರೈತ ಜುಗ್ನೊ ಕೊಲ್ಹಿ ಪುತ್ರಿಯಾಗಿ ಜನಿಸಿದ್ದ ಕೃಷ್ಣ ಕುಮಾರಿ ಮತ್ತು ಅವರ ಕುಟುಂಬ ಸದಸ್ಯರು ಭೂಮಾಲೀಕನ ಒಡೆತನಕ್ಕೆ ಒಳಪಟ್ಟ ಖಾಸಗಿ ಸೆರೆಮನೆಯಲ್ಲಿ ಮೂರು ವರ್ಷ ಕೈದಿಗಳಾಗಿದ್ದರು.  ೧೬ನೇ ವಯಸ್ಸಿನಲ್ಲಿ ೯ನೇ ತರಗತಿಯಲ್ಲಿ ಓದುತ್ತಿದ್ದಾಗ ಲಾಲ್ ಚಂದ್ ಜೊತೆಗೆ ಕೃಷ್ಣಕುಮಾರಿ ವಿವಾಹವಾಗಿತ್ತು. ಮದುವೆಯ ಬಳಿಕ ಓದು ಮುಂದುವರೆಸಿದ ಕೃಷ್ಣ ಕುಮಾರಿ ೨೦೧೩ರಲ್ಲಿ ಸಿಂಧ್  ವಿಶ್ವವಿದ್ಯಾಲಯದ ಮೂಲಕ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಥಾರ್ ಮತ್ತು ಇತರ ಪ್ರದೇಶಗಳ ಮೂಲೆಗುಂಪಾದ ಸಮುದಾಯಗಳ ತುಳಿತಕ್ಕೆ ಒಳಗಾದ ಜನರ ಹಕ್ಕುಗಳಿಗಾಗಿ ಶ್ರಮಿಸುವಲ್ಲಿ ಕೃಷ್ಣಕುಮಾರಿ ಸಕ್ರಿಯರಾಗಿದ್ದರು. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು ದೇಶದ ಪ್ರಥಮ ಮಹಿಳಾ  ಪ್ರಧಾನಿ ಬೆನಜೀರ್ ಭುಟ್ಟೋ, ಮೊದಲ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್, ಪಾಕ್ ನ್ಯಾಷನಲ್ ಅಸೆಂಬ್ಲಿಯ ಮೊದಲ ಮಹಿಳಾ ಸಭಾಧ್ಯಕ್ಷೆ ಫೆಹ್ಮೀದಾ ಮಿರ್ಜಾ ಅವರಂತಹ ಹಲವಾರು ಮಹಿಳಾ ನಾಯಕರನ್ನು ಒದಗಿಸಿದೆ.

2018: ವಾಷಿಂಗ್ಟನ್: ಅಮೆರಿಕವು ಆಜೀವ ಅಧ್ಯಕ್ಷನನ್ನು ಹೊಂದಲಿದೆಯೇ? ಈ ಪ್ರಶ್ನೆ ವಿಚಿತ್ರ ಎನ್ನಿಸಬಹುದು. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೌದೆನ್ನುತ್ತಾರೆ. ಚೀನಾದ ಅಧ್ಯಕ್ಷರು ಈಗ ಆಜೀವ ಅವಧಿಗೆ ಅಧ್ಯಕ್ಷ ಸ್ಥಾನ ಹೊಂದುತ್ತಿರುವುದು ನಿಜಕ್ಕೂ ಮಹಾನ್ ಎಂದು ಅವರು ಹೊಗಳಿದ್ದಾರೆ, ಅಷ್ಟೇ ಅಲ್ಲ, ಬಹುಶಃ ಎಂದೋ ಒಂದು ದಿನ ಅಮೆರಿಕವೂ ಆಜೀವ ಅಧ್ಯಕ್ಷನನ್ನು ಹೊಂದಬಹುದು ಎಂದು ಅವರು ಹೇಳಿದ್ದಾರೆ. ಟ್ರಂಪ್ ಅವರು ತಮ್ಮ ದಕ್ಷಿಣ ಫ್ಲಾರಿಡಾ ಎಸ್ಟೇಟ್‌ನಲ್ಲಿ ಮಾರ್ಚ್ 3ರ ಶನಿವಾರ ರಿಪಬ್ಲಿಕನ್ ದಾನಿಗಳ ಭೋಜನಕೂಟದ ಸಂದರ್ಭದಲ್ಲಿ ಈ ಅಭಿಪ್ರಾಯವನ್ನು ಹೊರಗೆಡವಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿತು.  ‘ಅವರು ಈಗ ಆಜೀವ ಅಧ್ಯಕ್ಷ, ಆಜೀವ ಅಧ್ಯಕ್ಷ! ಮತ್ತು ಅವರು ಗ್ರೇಟ್ (ಮಹಾನ್)’ ಎಂದು ಟ್ರಂಪ್ ಅವರು ಫ್ಲಾರಿಡಾದಲ್ಲಿ ನಡೆದ ರಹಸ್ಯ ನಿಧಿ ಸಂಗ್ರಹ ಸಭೆಯಲ್ಲಿ ಹೇಳಿರುವುದು ಧ್ವನಿ ಮುದ್ರಿಕೆಯಲ್ಲಿ ದಾಖಲಾಗಿದ್ದು,  ಈ ಧ್ವನಿ ಮುದ್ರಿಕೆಯನ್ನು ಸಿಎನ್ ಎನ್ ಪ್ರಸಾರ ಮಾಡಿತು. ‘ನೋಡಿ, ಅವರು ಅದನ್ನು ಮಾಡಲು ಸಮರ್ಥರು. ಅವರು ಮಹಾನ್ ಎಂದು ನಾನು ಯೋಚಿಸುತ್ತೇನೆ. ಬಹುಶಃ ಯಾವುದೋ ಒಂದು ದಿನ ನಾವೂ ಅದನ್ನು ಮಾಡಬೇಕಾಗಬಹುದು ಎಂದು ಟ್ರಂಪ್ ಅವರು ಬೆಂಬಲಿಗರ ಹರ್ಷೋದ್ಘಾರ ಮತ್ತು ಚಪ್ಪಾಳೆಗಳ ನಡುವೆ ಹೇಳಿದ್ದರು.  ಪರಂಪರಾಗತವಾಗಿ ಅಮೆರಿಕದ ಅಧ್ಯಕ್ಷರು ಗರಿಷ್ಠ ಎರಡು ಅವಧಿಗೆ ಮಾತ್ರ ಅಧ್ಯಕ್ಷರಾಗಿ ಸೇವೆ ಮಾಡಬಹುದು. ಅಂದರೆ ೪ ವರ್ಷಗಳ ಪ್ರಕಾರ ಒಟ್ಟು ಎಂಟು ವರ್ಷ. ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್ ಅವರು ಮಾತ್ರ ೧೯೩೨ರಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಇದೊಂದು ದಾಖಲೆಯಾಗಿತ್ತು. ೧೯೫೧ರಲ್ಲಿ ಎರಡು ಅವಧಿಗಳಿಗೆ ಮಾತ್ರ ಅಧ್ಯಕ್ಷರ ಅವಧಿಯನ್ನು ಮಿತಿಗೊಳಿಸುವ ಅಮೆರಿಕದ ಸಂವಿಧಾನ ತಿದ್ದು ಪಡಿಗೆ  ಅನುಮೋದನೆ ಲಭಿಸಿತ್ತು. ಚೀನಾದ ವಾರ್ಷಿಕ ಸಂಸದೀಯ ಸಭೆಯು ಸೋಮವಾರ ಅಧ್ಯಕ್ಷರ ಅವಧಿಯನ್ನು ಬದಲಾಯಿಸುವ ಪ್ರಸ್ತಾಪವನ್ನು ಮಾಡಿದೆ. ಚೀನಾದ ಕಮ್ಯೂನಿಸ್ಟ್ ಪಕ್ಷವು ಫೆಬ್ರುವರಿ ೨೫ರಂದು ಅಧ್ಯಕ್ಷರ ಅಧಿಕಾರಾವಧಿಯನ್ನು ಎರಡು ಅವಧಿಗಳಿಗೆ ಮಿತಿಗೊಳಿಸುವ ನಿಯಮಕ್ಕೆ ಕೊನೆ ಹಾಡುವುದಾಗಿ ಪ್ರಕಟಿಸಿತ್ತು. ಸಂಸತ್ತು ಇದಕ್ಕೆ ಅನುಮೋದನೆ ನೀಡುವ ನಿರೀಕ್ಷೆ ಇದೆ.  ಚೀನಾದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ರಂಪ್ ಅವರು ’ಕ್ಷಿ ಅವರು ಮಹಾನ್ ಸಜ್ಜನ. ಅವರು ೧೦೦ ವರ್ಷಗಳಲ್ಲಿ ಅತ್ಯಂತ ಶಕ್ತಿಶಾಲಿ ಚೀನೀ ಅಧ್ಯಕ್ಷರಾಗಿದ್ದಾರೆ ಎಂದು ಟ್ರಂಪ್ ಹೊಗಳಿದರು. ಕ್ಷಿ ಅವರು ನವೆಂಬರ್ ತಿಂಗಳಲ್ಲಿ ತಾವು ಭೇಟಿ ನೀಡಿದ್ದಾಗ ತಮ್ಮನ್ನು ಅತ್ಯಂತ ಉತ್ತಮವಾಗಿ ನಡೆಸಿಕೊಂಡಿದ್ದಾರೆ ಎಂದು ಟ್ರಂಪ್ ನುಡಿದರು. ಟ್ರಂಪ್ ಹೇಳಿಕೆ ಕುರಿತು ಕೇಳಲಾದ ಪ್ರತಿಕ್ರಿಯೆಗೆ ಮಾರ್ಚ್ 3ರ ಶನಿವಾರ ತಡರಾತ್ರಿಯಲ್ಲಿ ಶ್ವೇತಭವನ ತತ್ ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಟ್ರಂಪ್ ಅವರು ಈ ಮುನ್ನವೂ ಕ್ಷಿ ಅವರನ್ನು ಹೊಗಳಿದ್ದರು, ಆದರೆ ಕಳೆದ ಜನವರಿ ತಿಂಗಳಲ್ಲಿ ಚೀನಾದಿಂದ ನಡೆಯುತ್ತಿರುವ ಬೌದ್ಧಿಕ ಆಸ್ತಿ ಕಳವು ಆಪಾದನೆ ತನಿಖೆಯ ಭಾಗವಾಗಿ ಬೃಹತ್ ದಂಡ ವಿಧಿಸುವ ಬಗ್ಗೆ ಅಮೆರಿಕ ಪರಿಶೀಲಿಸುತ್ತಿದೆ ಎಂದು ಹೇಳಿದ್ದರು. ಚೀನಾದ ವಾಣಿಜ್ಯ ನೀತಿಗಳ ಬಗೆಗೂ ಟ್ರಂಪ್ ಟೀಕಿಸಿದ್ದರು.  ಡಿಸೆಂಬರ್ ತಿಂಗಳಲ್ಲಿ ಟ್ರಂಪ್ ಅವರು ಉತ್ತರ ಕೊರಿಯಾದ ಕಾರಣಕ್ಕಾಗಿ ತಾವು ಚೀನಾದ ಜೊತೆಗೆ ಮೃದು ಧೋರಣೆ ತಾಳಿರುವುದಾಗಿ ಹೇಳಿದ್ದರು. ತಮಗೆ ವ್ಯಾಪಾರಕ್ಕಿಂತಲೂ ಯುದ್ಧ ಅತ್ಯಂತ ಮಹತ್ವದ ವಿಚಾರವಾದ ಕಾರಣ ತಾವು ಈ ನೀತಿ ಅನುಸರಿಸುತ್ತಿರುವುದಾಗಿಯೂ ಅವರ ಹೇಳಿದ್ದರು.  ತಮ್ಮ ಡೆಮಾಕ್ರಟಿಕ್ ಅಧ್ಯಕ್ಷೀಯ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಅಭಿಪ್ರಾಯಗಳನ್ನೂ ತರಾಟೆಗೆ ತೆಗೆದುಕೊಂಡಿದ್ದ ಟ್ರಂಪ್, ’ಇರಾಕ್ ಮೇಲಿನ ದಾಳಿ ಅತ್ಯಂತ ಕೆಟ್ಟ ನಿರ್ಧಾರಗಳಲ್ಲಿ ಒಂದು ಎಂದು ಹೇಳಿದ್ದರು. ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರು ’ಇನ್ನೊಬ್ಬ ನಿಜವಾದ ಪ್ರತಿಭೆ ಎಂದು ಟ್ರಂಪ್ ಹೇಳಿದ್ದರು. ಚೀನಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರಾವಧಿಗೆ ವಿಧಿಸಲಾಗಿರುವ ಎರಡು ಅವಧಿಗಳ ಮಿತಿಯನ್ನು ಕೊನೆಗೊಳಿಸುವ ಪ್ರಸ್ತಾಪವನ್ನು ಕಮ್ಯೂನಿಸ್ಟ್ ಪಾರ್ಟಿ ಆಫ್ ಚೈನಾ (ಸಿಪಿಸಿ) ಫೆಬ್ರುವರಿ ೨೫ರಂದು ಮುಂದಿಟ್ಟಿದೆ. ಈ ಪ್ರಸ್ತಾವಕ್ಕೆ ದೇಶ ವಿದೇಶಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾತ್ವಿಕವಾಗಿ ಇದರ ಅರ್ಥ ಚೀನಾದ ಉನ್ನತ ನಾಯಕ ಕ್ಷಿ ಜಿನ್ ಪಿಂಗ್ ಅವರು ತಮ್ಮ ಜೀವಮಾನದ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯುವರು. ಈ ಪ್ರಯತ್ನವು ಮಾರ್ಚ್ ೫ರಂದು ನಡೆಯಲಿರುವ ಚೀನಾದ ಸಂಸತ್ತು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್ ಪಿಸಿ) ಅಧಿವೇಶನದಲ್ಲಿ ಔಪಚಾರಿಕವಾಗಿ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.  ಚೀನಾದ ಪಿತಾಮಹ ಮಾವೋ ಝೆಡೊಂಗ್ ಅವರ ಮರಣದ ಬಳಿಕ ಏಕ ವ್ಯಕ್ತಿ ಸ್ವಾಮ್ಯಕ್ಕೆ ಅಂತ್ಯ ಹಾಡುವ ಸಲುವಾಗಿ ಮತ್ತು ಸಾಮೂಹಿಕ ನಾಯಕತ್ವ ವ್ಯವಸ್ಥೆಯನ್ನು ಜಾರಿಗೆ ತರುವ ಸಲುವಾಗಿ ಡೆಂಗ್ ಕ್ಷಿಯಾವೊಪಿಂಗ್ ಕಾಲದಲ್ಲಿ ಅಧ್ಯಕ್ಷರ ಅವಧಿಗೆ ಮಿತಿ ವಿಧಿಸುವ ವ್ಯವಸ್ಥೆ ಜಾರಿಗೆ ಬಂದಿತ್ತು. ಇದು ಮತ್ತೆ ಕೊನೆಗೊಳ್ಳುವ ಸಾಧ್ಯತೆಗಳಿವೆ ಎಂದು ಇದೀಗ ರಾಜಕೀಯ ವಲಯಗಳಲ್ಲಿ ಭಾವಿಸಲಾಗಿದೆ.

2018: ಅಗರ್ತಲ: ಚುನಾವಣಾ ಆಯೋಗವು ತೆನ್ನಿಂಗ್ ವಿಧಾನಸಭಾ ಕ್ಷೇತ್ರದ ಫಲತಾಂಶವನ್ನು ಉಲ್ಟಾ ಮಾಡಿದ ಬಳಿಕ ಬಿಜೆಪಿಯ ಜೊತೆಗೆ ಮೈತ್ರಿಕೂಟ ರಚಿಸಿರುವ ನ್ಯಾಷನಲಿಸ್ಟ್ ಡೆಮಾಕ್ರ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ ಡಿಪಿಪಿ)ಯು ನಾಗಾಲ್ಯಾಂಡಿನಲ್ಲಿ ಭಾನುವಾರ ಇನ್ನೊಂದು ಸ್ಥಾನವನ್ನು ಗಳಿಸಿತು. ಇದರೊಂದಿಗೆ ಮೈತ್ರಿಕೂಟದ ಒಟ್ಟು ಸ್ಥಾನಬಲ ೩೨ಕ್ಕೆ ಏರಿತು. ಇದರಿಂದಾಗಿ ೬೦ ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಗಳಿಸಲು ಬೇಕಾದ ೩೧ಕ್ಕಿಂತ ಒಂದು ಹೆಚ್ಚಿನ ಸ್ಥಾನ ಇದೀಗ ಮೈತ್ರಿಕೂಟಕ್ಕೆ ಲಭಿಸಿದಂತಾಯಿತು. ತೆನ್ನಿಂಗ್ ಕ್ಷೇತ್ರದಲ್ಲಿ ಮತ ಎಣಿಕೆ ನಡೆದಾಗ ತಪ್ಪಾಗಿ ಲೆಕ್ಕ ಹಾಕಿದ ಪರಿಣಾಮವಾಗಿ ಎನ್ ಡಿ ಪಿಪಿಯ ಅಭ್ಯರ್ಥಿ ನಮ್ರಿ ನ್ಚಂಗ್ ಅವರ ಬದಲಿಗೆ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್ ) ಅಭ್ಯರ್ಥಿ ಎನ್.ಆರ್. ಝೆಲಿಯಾಂಗ್ ಅವರನ್ನು ವಿಜೇತರೆಂದು ಘೋಷಿಸಲಾಗಿತ್ತು ಎಂದು ಚುನಾವಣಾ ಆಯೋಗವು ಭಾನುವಾರ ಲಿಖಿತ ಆದೇಶದಲ್ಲಿ ತಿಳಿಸಿತು.  ಮಾರ್ಚ್ 3ರ ಶನಿವಾರ ಎನ್ ಪಿಎಫ್ ಮತ್ತು ಮಿತ್ರ ಪಕ್ಷಗಳು ೩೦ ಸ್ಥಾನಗಳನ್ನು ಗೆದ್ದಿದ್ದವು ಮತ್ತು ಬಿಜೆಪಿ ಹಾಗೂ ಎನ್ ಡಿಪಿಪಿ ಒಳಗೊಂಡ ಪೀಪಲ್ಸ್ ಡೆಮಾಕ್ರಟಿಕ್ ಅಲಯನ್ಸ್ (ಪಿಡಿಎ) ೨೯ ಸ್ಥಾನಗಳನ್ನು ಪಡೆದಿದ್ದವು. ತಪ್ಪು ಲೆಕ್ಕಾಚಾರದ ಹಿನ್ನೆಲೆಯಲ್ಲಿ ಒಂದು ಸ್ಥಾನದ ಫಲಿತಾಂಶವನ್ನು ಚುನಾವಣಾ ಆಯೋಗ ಬದಲಾಯಿಸಿ ಪ್ರಕಟಿಸಿದ ಪರಿಣಾಮ ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಮತ್ತು ಜನತಾದಳ (ಯು) ಅಭ್ಯರ್ಥಿ ಬೆಂಬಲ ನೀಡಿದ ಪರಿಣಾಮವಾಗಿ ಪಿಡಿಎ ಇದೀಗ ಎನ್ ಪಿಎಫ್ ಗಿಂತ ಮೇಲ್ಗೈ ಸಾಧಿಸಿತು.  ತಪ್ಪು ಲೆಕ್ಕಾಚಾರ: ಎನ್.ಆರ್. ಝೆಲಿಯಾಂಗ್ ಅವರು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್. ಝೆಲಿಯಾಂಗ್ ಅವರ ಸಹೋದರ.  ಟಿ. ಆರ್. ಝೆಲಿಯಾಂಗ್ ಅವರು ನೆರೆಯ ಪೆರೆನ್ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಮತಗಳ ಎಣಿಕೆ ನಡೆದಾಗ ೭,೦೧೮ ಮತಗಳನ್ನು ಪಡೆದ ನಮ್ರಿ ನ್ಚಂಗ್  ಅವರ ಬದಲಿಗೆ ೬,೮೫೦ ಮತಗಳನ್ನು ಪಡೆದಿದ್ದ ಎನ್.ಆರ್. ಝೆಲಿಯಾಂಗ್ ಅವರನ್ನು ತಪ್ಪಾಗಿ ವಿಜೇತರೆಂದು ಘೋಷಿಸಲಾಗಿತ್ತು. ಸಂವಿಧಾನದ ೩೨೪ನೇ ವಿಧಿಯನ್ನು ಉಲ್ಲೇಖಿಸಿದ ಚುನಾವಣಾ ಆಯೋಗದ ಆದೇಶವು ಝೆಲಿಯಾಂಗ್ ಅವರನ್ನು ವಿಜೇತರಾಗಿ ಘೋಷಿಸಿದ ಫಲಿತಾಂಶವನ್ನು ರದ್ದು ಪಡಿಸಿ ಮತ್ತು ನಮ್ರಿ ನ್ಚಂಗ್ ಅವರನ್ನು ವಿಜೇತರೆಂದು ಘೋಷಿಸಲಾಗಿದೆ ಎಂದು ತಿಳಿಸಿತು.  ಶನಿವಾರ ನಾಲ್ಕನೇ ಸುತ್ತಿನ ಮತಗಳ ಎಣಿಕೆಯ ಬಳಿಕ ಲೆಕ್ಕಾಚಾರದ ಹಾಳೆಯಲ್ಲಿ ೬೨೪ ಮತಗ ಬದಲಿಗೆ ೮೨೪ ಮತಗಳು ಎಂಬುದಾಗಿ ನಮೂದಿಸಿದ್ದರಿಂದ ಲೆಕ್ಕಾಚಾರದಲ್ಲಿ ದೋಷ ಉಂಟಾಗಿತ್ತು. ಆದರೆ ಈ ತಪ್ಪು ಪತ್ತೆಯಾಗುವ ವೇಳೆಗೆ ಫಲಿತಾಂಶವನ್ನು ಘೋಷಿಸಿ ಆಗಿತ್ತು.

2018: ಕೋಹಿಮಾ: ನೀಫಿಯು ರಿಯೋ ಅವರಿಗೆ ಬಹುಮತವಿದೆ ಮತ್ತು ಅವರು ಸರ್ಕಾರ ರಚಿಸಬೇಕು ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರು ಈದಿನ  ಇಲ್ಲಿ ಸೂಚಿಸಿದರು.  ೬೦ ಸದಸ್ಯ ಬಲದ ವಿಧಾನಸಭೆಯಲ್ಲಿ ತಮಗೆ ೩೨ ಶಾಸಕರ ಬೆಂಬಲ ಇದೆ ಎಂಬುದಾಗಿ ಹೇಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಎನ್ ಡಿ ಪಿಪಿ ನಾಯಕರನ ಜೊತೆಗೆ ಮಾತುಕತೆ ನಡೆಸಿದ ಬಳಿಕ ರಾಜ್ಯಪಾಲರು ಈ ಸೂಚನೆ ನೀಡಿದರು.  ತಮ್ಮನ್ನು ಬೆಂಬಲಿಸುವ ಎಲ್ಲ ೩೨ ಶಾಸಕರ ಸಹಿಗಳನ್ನು ಮಾರ್ಚ್ 5ರ ಸೋಮವಾರದ ಒಳಗೆ ಸಲ್ಲಿಸುವಂತೆ ತಾವು ರಿಯೋ ಅವರಿಗೆ ಸೂಚಿಸಿರುವುದಾಗಿ ಆಚಾರ್ಯ ನುಡಿದರು. ರಿಯೋ ಅವರು ರಾಜ್ಯಪಾಲರ ಬಳಿ ತಮಗೆ ೩೨ ಶಾಸಕರ ಬೆಂಬಲ ಇರುವುದಾಗಿ ತಿಳಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು ಎಂದು ಬಿಜೆಪಿಯ ಮಿತ್ರ ಪಕ್ಷವಾದ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿಯ (ಎನ್ ಡಿಪಿಪಿ) ಹಿರಿಯ ನಾಯಕರೊಬ್ಬರು ತಿಳಿಸಿದರು. ಎನ್ ಡಿ ಪಿಪಿ ಮತ್ತು ಬಿಜೆಪಿ ಕ್ರಮವಾಗಿ ೧೮ ಮತ್ತು ೧೨ ಸ್ಥಾನಗಳನ್ನು ಗೆದ್ದಿದ್ದು, ಜೆಡಿ(ಯು) ಪಕ್ಷದ  ಏಕೈಕ ಶಾಸಕ ಜಿ.ಕೈಟೊ ಅಯೆ ಮತ್ತು ಪಕ್ಷೇತರ ಶಾಸಕ ತೊಂಗ್ ಪಂಗ್ ಒಝುಕುಂ ಅವರು ಮೈತ್ರಿಕೂಟವನ್ನು ಬೆಂಬಲಿಸುತ್ತಿದ್ದಾರೆ ಎಂದು ಎನ್ ಡಿಪಿಪಿ ಪ್ರಧಾನ ಕಾರ್ಯದರ್ಶಿ ಅಬು ಮೆಥ ಹೇಳಿದರು.  ರಿಯೋ ಅವರು ಎನ್ ಡಿಪಿಪಿ ಅಧ್ಯಕ್ಷ ಚಿಂಗ್ವಾಂಗ್ ಕೊನ್ಯಕ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ವಿಸಾಸೋಲೀ ಲ್ಹೌಂಗು, ಜೆಡಿ (ಯು) ಶಾಸಕ ಮತ್ತು ಪಕ್ಷೇತರ ಶಾಸಕರ ಸಹಿತವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರು ಎಂದು ಅವರು ನುಡಿದರು. ರಿಯೋ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

2018: ಶಿಲ್ಲಾಂಗ್: ಮೇಘಾಲಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಕಾಂಗ್ರೆಸ್ ಪಕ್ಷವನ್ನು ಹಿಂದಕ್ಕೆ ತಳ್ಳಿದ ಬಿಜೆಪಿ ಮತ್ತು ಮಿತ್ರಪಕ್ಷಗಳ ಮೈತ್ರಿಕೂಟ ಸರ್ಕಾರ ಮಾರ್ಚ್ ೬ರ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದೆ.  ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಮುಖ್ಯಸ್ಥ ಕೊನ್ರಾಡ್ ಸಂಗ್ಮಾ ನೇತೃತ್ವದ ಮೈತ್ರಿಕೂಟವು ಮೇಘಾಲಯದಲ್ಲಿ ಮುಂದಿನ ಸರ್ಕಾರ ರಚನೆಗೆ ಸಜ್ಜಾಗಿದ್ದು, ಮಾರ್ಚ್ ೬ರ ಮಂಗಳವಾರ ಬೆಳಗ್ಗೆ ೧೦.೩೦ ಗಂಟೆಗೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಐದು ಪಕ್ಷಗಳ ಮೈತ್ರಿಕೂಟ ಸದಸ್ಯರ ಜೊತೆಗೆ ಭಾನುವಾರ ರಾಜ್ಯಪಾಲರನ್ನು ಭೇಟಿ ಮಾಡಿ, ತಮಗೆ ೩೪ ಶಾಸಕರ ಬೆಂಬಲ ಇದೆ ಎಂಬುದಾಗಿ ತಿಳಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಎನ್ ಪಿಪಿ ಮುಖ್ಯಸ್ಥ ಕೊನ್ರಾಡ್ ಸಂಗ್ಮಾ ಅವರು ರಾಜ್ಯಪಾಲರ ಭೇಟಿ ಬಳಿಕ ಈ ವಿಚಾರವನ್ನು ಬಹಿರಂಗ ಪಡಿಸಿದರು.  ವಿಧಾನಸಭೆಯ ಅವಧಿ ಮಾರ್ಚ್ ೭ರಂದು ಮುಕ್ತಾಯವಾಗಲಿರುವುದರಿಂದ ಮುಂದಿನ ೨-೩ ದಿನಗಳು ನಿರ್ಣಾಯಕವಾಗಿವೆ. ನಾಳೆ ಸಂಜೆಯವೇಳೆಗೆ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅವರು ನುಡಿದರು. ಎನ್ ಪಿಪಿ (೧೯), ಯುಡಿಪಿ (೬), ಬಿಜೆಪಿ (೨), ಎಚ್ ಎಸ್ ಪಿಡಿಪಿ (೨) ಮತ್ತು ಪಕ್ಷೇತರ (೧) ಸೇರಿ ಒಟ್ಟು ೩೪ ಮಂದಿ ಎನ್ ಡಿಎ ಶಾಸಕರು ಈದಿನ ಸಂಜೆ ರಾಜಭವನಕ್ಕೆ ತೆರಳಿದರು.  ೬೦ ಸದಸ್ಯ ಬಲದ ವಿಧಾನಸಭೆಯಲ್ಲಿ ಪಂಚ ಪಕ್ಷ ಮೈತ್ರಿಕೂಟದ ಸದಸ್ಯ ಬಲ ಈಗ ಅರ್ಧದಷ್ಟು ಸಂಖ್ಯೆಯನ್ನು ಮೀರಿದೆ ಎಂದು ಅವರು ಪ್ರತಿಪಾದಿಸಿದರು.  ಗೋವಾದಲ್ಲಿ ಉದ್ಭವಿಸಿದಂತಹ ಪರಿಸ್ಥಿತಿ ಉದ್ಭವಿಸಬಾರದು ಎಂಬುದಾಗಿ ಎಚ್ಚರಿಕೆ ವಹಿಸಿದ ಕಾಂಗ್ರೆಸ್ ಪಕ್ಷವು ಮಾರ್ಚ್ 3ರ ಶನಿವಾರ ರಾತ್ರಿಯೇ ರಾಜ್ಯಪಾಲರನ್ನು ಬೇಟಿ ಮಾಡಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿತ್ತು. ಆದರೆ ಪಕ್ಷದ ಪರವಾಗಿ ಈದಿನ ಹೆಚ್ಚಿನ ಶಾಸಕರು ಪಕ್ಷದ ನಾಯಕ, ಹೊರಹೋಗುತ್ತಿರುವ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರ ಜೊತೆ ಕಾಣಿಸಲಿಲ್ಲ. ಮುಕುಲ್ ಸಂಗ್ಮಾ ಅವರು ಈದಿನವೂ ಸಮಾನ ಮನಸ್ಕರ ಜೊತೆಗೆ ಮಾತುಕತೆ ನಡೆಯುತ್ತಿದೆ ಎಂದು ಪ್ರತಿಪಾದಿಸಿದರು. ಆದರೆ ಕಾಂಗ್ರೆಸ್ಸಿನ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ ಕಾಂಗ್ರೆಸ್ಸೇತರ ಪಕ್ಷಗಳು ಈದಿನ ಸಂಜೆಯ ವೇಳೆಗೆ ಒಟ್ಟಾಗಿ ರಾಜ್ಯಪಾಲರ ಬಳಿಗೆ ತೆರಳಿದವು. ಇದಕ್ಕೆ ಮುನ್ನ ಬಿಜೆಪಿ ನಾಯಕ ಮತ್ತು ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಸ್ ಸಮಾ ಅವರು ನ್ಯಾಷನಲ್ ಪೀಪಲ್ಸ್ ಪಾರ್ಟಿ, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ, ಭಾರತೀಯ ಜನತಾ ಪಾರ್ಟಿ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ನಿಯೋಗ ಭಾನುವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡಲಿದೆ ಎಂದು ಪ್ರಕಟಿಸಿದ್ದರು. ೫೯ ಸದಸ್ಯ ಬಲದ ಸದನದ ೨೯ ಶಾಸಕರ ಬೆಂಬಲ ನಮಗಿದೆ. ಸಂಜೆ ವೇಳೆಗೆ ಈ ಸಂಖ್ಯೆ ಇನ್ನಷ್ಟು ಏರಲಿದೆ ಎಂದು ಅವರು ಹೇಳಿದ್ದರು.  ಎನ್ ಪಿಪಿಯ ೧೯ ಶಾಸಕರು, ಯುಡಿಪಿಯ ೬ ಶಾಸಕರು, ಬಿಜೆಪಿ ಮತ್ತು ಎಚ್ ಎಸ್ ಪಿಡಿಪಿಯ ತಲಾ ಇಬ್ಬರು ಸದಸ್ಯರು ಜೊತೆಗೂಡಿದ್ದಾರೆ. ಮಾಜಿ ಲೋಕಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರ ಪುತ್ರ ಎನ್ ಪಿಪಿ ಸಂಸದ ಕಾನ್ರಾಡ್ ಸಂಗ್ಮಾ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಶರತ್ತಿನೊಂದಿಗೆ ನಾವು ಬೆಂಬಲ ನೀಡಿದ್ದೇವೆ ಎಂದು ಯುಡಿಪಿ ಅಧ್ಯಕ್ಷ ಡೊಂಕುಪರ್ ರಾಯ್ ಹೇಳಿದ್ದರು. ಮೂವರು ಪಕ್ಷೇತರ ಶಾಸಕರು ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟಿನ ನಾಲ್ವರು ಶಾಸಕರು ಬೆಂಬಲದ ನಿರೀಕ್ಷೆಯನ್ನೂ ಅವರು ವ್ಯಕ್ತ ಪಡಿಸಿದ್ದರು.  ಕಾಂಗ್ರೆಸ್ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಬೆಂಬಲ ಕೋರಿ ಸಂಪರ್ಕಿಸಿದ್ದರು. ಆದರೆ ಸ್ಥಿರತೆಯ ಸಲುವಾಗಿ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಪಕ್ಷವು ನಿರ್ಧರಿಸಿತು ಎಂದು ಯುಡಿಪಿ ಅಧ್ಯಕ್ಷ ಡೊಂಕುಪರ್ ರಾಯ್ ನುಡಿದರು. ನಾನು ಕೆಲವು ಪಿಡಿಎಫ್ ಶಾಸಕರ ಜೊತೆಗೂ ಮಾತನಾಡಿದೆ.  ಅವರೆಲ್ಲರೂ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಒಲವು ವ್ಯಕ್ತ ಪಡಿಸಿದರು ಎಂದು ರಾಯ್ ಹೇಳಿದರು. ಮತ್ತೆ ಮುಗ್ಗರಿಸಿದ ಕಾಂಗ್ರೆಸ್: ೫೯ ಸದಸ್ಯ ಬಲದ ವಿಧಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ್ದ ಕಾಂಗ್ರೆಸ್ ಸರ್ಕಾರ ರಚಿಸಲು ಬೇಕಾಗಿದ್ದ ೯ ಸದಸ್ಯರನ್ನು ಸೆಳೆಯುವಲ್ಲಿ ಮತ್ತೆ ಮುಗ್ಗರಿಸಿತು. ಆರು ಮಂದಿ ಸದಸ್ಯರೊಂದಿಗೆ ’ಕಿಂಗ್ ಮೇಕರ್ ಆಟವಾಡುತ್ತಿದ್ದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯನ್ನು ಬೆಂಬಲ ಕ್ರೋಡೀಕರಿಸುವ ಸಲುವಾಗಿ ಕಾಂಗ್ರೆಸ್ ಸಂಪರ್ಕಿಸಿತು. ಆದರೆ ಅದನ್ನು ತನ್ನತ್ತ ಸೆಳೆಯುವಲ್ಲಿ ವಿಫಲವಾಯಿತು.  ಮುಕುಲ್ ಸಂಗ್ಮಾ ಅವರು ತಮ್ಮನ್ನು ಭೇಟಿ ಮಾಡಿ ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನದ ಕೊಡುಗೆ ಮುಂದಿಟ್ಟರು. ಆದರೆ ನಾವು ಈ ಪ್ರಸ್ತಾಪವನ್ನು ತಿರಸ್ಕರಿಸಿದೆವು ಮತ್ತು ಬದಲಾಗಿ ಕಾಂಗ್ರೆಸ್ಸೇತರ ಸಕಾರ ರಚನೆಗೆ ನಿರ್ಧರಿಸಿದೆವು ಎಂದು ಡೊಂಕುಪರ್ ರಾಯ್ ವಿವರಿಸಿದರು. ಕಾಂಗ್ರೆಸ್ ಪಾಲಿಗೆ ಈಶಾನ್ಯ ಭಾರತದಲ್ಲಿ ಇದು ಇನ್ನೊಂದು ಹಿನ್ನಡೆಯಾಯಿತು. ಮೇಘಾಲಯದಲ್ಲಿ ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಸಾಧನೆ, ತ್ರಿಪುರಾ ಮತ್ತು ನಾಗಾಲ್ಯಾಂಡಿನ ಶೂನ್ಯ ಸಂಪಾದನೆಯ ಮುಂದೆ ಆಶಾಕಿರಣವಾಗಿತ್ತು. ಆದರೆ ಸರ್ಕಾರ ರಚನೆಗೆ ಅಗತ್ಯವಾದ ಮೈತ್ರಿ ಹೆಣೆಯುವಲ್ಲಿನ ಅದರ ವೈಫಲ್ಯವು ಅದು ಹೇಗೆ ಬಿಜೆಪಿಯಿಂದ ಸಾಕಷ್ಟು ಹಿಂದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು. ಈ ಮುನ್ನ ಮಣಿಪುರ ಮತ್ತು ಗೋವಾದಲ್ಲಿ ಇದೇ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಮುಗ್ಗರಿಸಿತ್ತು. ರಾಹುಲ್ ಗಾಂಧಿ ಅವರು ಪಕ್ಷದ ನಾಲ್ವರು ಹಿರಿಯ ನಾಯಕರನ್ನು ಸರ್ಕಾರ ರಚನೆಯ ಯಾವುದೇ ಲೆಕ್ಕಾಚಾರಗಳೂ ಇಲ್ಲದೆ ಶಿಲ್ಲಾಂಗ್ ಗೆ ಕಳುಹಿಸಿದರು. ಅವರಲ್ಲಿ ಒಂದಿಷ್ಟೂ ಪ್ರಬುದ್ಧತೆ ಇದ್ದಂತೆ ನನಗೆ ಅನಿಸುತ್ತಿಲ್ಲ ಎಂದು ಹಿಮಂತ ಬಿಸ್ವಾ ಸರ್ಮಾ ನುಡಿದರು.

2018: ಅಗರ್ತಲ: ಮಣಿಕ್ ಸರ್ಕಾರ್ ಅವರು ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಈದಿನ  ಮಧ್ಯಾಹ್ನ ರಾಜೀನಾಮೆ ನೀಡಿದ್ದು, ಭಾರತೀಯ ಜನತಾ ಪಕ್ಷ ನೇತೃತ್ವದ ಹೊಸ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ ಸರ್ಕಾರವಾಗಿ ಮುಂದುವರೆಯುವಂತೆ ಅವರಿಗೆ ರಾಜ್ಯಪಾಲ ತಥಾಗತ ರಾಯ್ ಸೂಚಿಸಿದರು. ಮುಖ್ಯಮಂತ್ರಿ ಸ್ಥಾನದ ಓಟದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿಪ್ಲಬ್ ಕುಮಾರ್ ದೇಬ್ ಅವರು ಮಾರ್ಚ್ ೮ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಿದರು. ಮಾರ್ಚ್ ೬ರಂದು ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಸಾರಿಗೆ ಸಚಿವ ನಿತಿನ್ ಗಡ್ಕರಿ ಸಭೆಗೆ ಆಗಮಿಸಲಿದ್ದಾರೆ.  ಸಭೆಯಲ್ಲಿ ನಾಯಕನ ಆಯ್ಕೆ ನಡೆಯಲಿದ್ದು, ಒಂದೆರಡು ದಿನಗಳ ಬಳಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಎಂದು ಅವರು ನುಡಿದರು.
ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭದಲ್ಲಿ ಹಾಜರು ಇರುವರೆಂದು ಹಾರೈಸಲಾಗಿದೆ ಎಂದು ಬಿಜೆಪಿ ನಾಯಕರು ನುಡಿದರು. ಫೆಬ್ರುವರಿ ೧೮ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ೫೯ ಸ್ಥಾನಗಳ ಪೈಕಿ ೩೫ ಸ್ಥಾನಗಳಲ್ಲಿ ಜಯ ಗಳಿಸಿದೆ. ಅದರ ಮಿತ್ರ ಪಕ್ಷ ಇಂಡಿಜೀನಸ್ ಪೀಪಲ್ಸ್ ಫ್ರಂಟ್ ಆಫ್ ಟ್ವೈಪ್ರ (ಐಪಿಎಫ್ ಟಿ) ೮ ಸ್ಥಾನಗಳಲ್ಲಿ ಗೆದ್ದಿದ್ದು, ಮೈತ್ರಿಕೂಟದ ಬಲವನ್ನು ೪೩ಕ್ಕೆ ಏರಿಸಿದೆ. ೨೦೧೩ರಲ್ಲಿ ೪೯ ಸ್ಥಾನಗಳನ್ನು ಗೆದ್ದಿದ್ದ ಸಿಪಿಎಂ ೧೬ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಸರ್ಕಾರ್ ರಾಜೀನಾಮೆಯೊಂದಿಗೆ ತ್ರಿಪುರಾದಲ್ಲಿ ೧೯೯೩ರಿಂದ ಇದ್ದ ಸಿಪಿಎಂ ಆಡಳಿತಕ್ಕೆ ತೆರೆ ಬಿದ್ದಿತು.

2017: ವಾಷಿಂಗ್ಟನ್‌: ಭೂಮಿಯ ದಟ್ಟ ವಾತಾವರಣದ ಹೊರಗೆ ಕೃತಕ ಉಪಗ್ರಹದಂತೆ ಧರೆಯನ್ನು ಪರಿಭ್ರಮಿಸುತ್ತ ವ್ಯೋಮವೀಕ್ಷಣೆ ನಡೆಸುತ್ತಿರುವ ಹಬಲ್ಬಾಹ್ಯಾಕಾಶ ದೂರದರ್ಶಕ ದಟ್ಟವಾದ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ  ಎಂದು ನಾಸಾ ಪ್ರಕಟಿಸಿತು. ಯುಜಿಸಿ 12591’ ಎಂದು ಹೆಸರಿಸಲಾಗಿರುವ ಗ್ಯಾಲಕ್ಸಿ ಮತ್ತು ಅದರ ಪ್ರಭಾವಲಯವು ಸೂರ್ಯನಿಗಿಂತ ನೂರಾರು ಕೋಟಿ ಪಟ್ಟು ಅಧಿಕ ರಾಶಿ ಹೊಂದಿದೆ. ಇದು ನಮ್ಮ ನಕ್ಷತ್ರ ಪುಂಜಕ್ಷೀರ ಪಥಕ್ಕಿಂತ ನಾಲ್ಕು  ಪಟ್ಟು  ದಟ್ಟವಾಗಿದೆ ಎಂದು ನಾಸಾ ತಿಳಿಸಿತು.   ಗ್ಯಾಲಕ್ಸಿ ಭೂಮಿಯಿಂದ 400 ದಶಲಕ್ಷ ಜ್ಯೋತಿರ್ವರ್ಷ ದೂರದಲ್ಲಿದ್ದು, ಗಂಟೆಗೆ 1.8 ದಶಲಕ್ಷ ಕಿ.ಮೀ. ವೇಗದಲ್ಲಿ ತಿರುಗುತ್ತಿದೆ. ನಾಸಾ ಮತ್ತು ಯುರೋಪಿಯನ್ಸ್ಪೇಸ್ಏಜೆನ್ಸಿ(ಇಎಸ್) ಸಹಯೋಗದ ಹಬಲ್ಬಾಹ್ಯಾಕಾಶ ದೂರದರ್ಶಕವು ಸೆರೆ ಹಿಡಿದಿರುವ ಚಿತ್ರದಿಂದ ಹೆಚ್ಚಿನ ಅಧ್ಯಯನ ಸಾಧ್ಯವಾಗಲಿದೆ. ಗ್ಯಾಲಕ್ಸಿ ರೂಪಗೊಂಡಿರುವ ಬಗೆಗಿನ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಾಗಲಿದೆ. ಹಬಲ್ಬಗೆಗೆ ಒಂದಿಷ್ಟು ಮಾಹಿತಿ: * ಪ್ರತಿ ಸಕೆಂಡ್ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ.  * ಹನ್ನೆರಡು ಟನ್ತೂಕ, ಹನ್ನೆರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಬಾಹ್ಯಾಕಾಶ ದೂರದರ್ಶಕ.  * ಖಗೋಳ ವಿಜ್ಞಾನಿಎಡ್ವಿನ್ಹಬಲ್‌’ (1889–1953) ಅವರ ಗೌರವಾರ್ಥ ಸಾಧನಕ್ಕೆ ಹೆಸರು * 1990 ಏಪ್ರಿಲ್‌ 24 ರಂದು ಸ್ಪೇಸ್ಶಟಲ್‌ ‘ಡಿಸ್ಕವರಿಮೂಲಕ ನೆಲದಿಂದ 560 ಕಿ.ಮೀ. ಎತ್ತರದಲ್ಲಿ ಭೂ ಸುತ್ತಲಿನ ಕಕ್ಷೆಗೆ.
2017: ಲಾಸ್ಏಂಜಲೀಸ್‌: ಪಾಂಡಾಗಳ ಕಪ್ಪುಬಿಳುಪು ಮೈ ಬಣ್ಣದ ಪ್ರಾಮುಖ್ಯತೆಯನ್ನು ವಿಜ್ಞಾನಿಗಳು ತೆರೆದಿಟ್ಟಿದ್ದಾರೆ. ಮತ್ತೊಂದು ಜೀವಿಯೊಂದಿಗೆ ಸಂವಹನ ನಡೆಸಲು ಹಾಗೂ ರಕ್ಷಣೆಗಾಗಿ ಮರೆಮಾಡಿಕೊಳ್ಳಲು ಪಾಂಡಾಗಳ ತುಪ್ಪಳದ ಬಣ್ಣ ಸಹಕಾರಿ ಎಂದು ಅಧ್ಯಯನದಿಂದ ತಿಳಿದು ಬಂದಿತು.  ಕಣ್ಣಿನ ಸುತ್ತ ಕಪ್ಪು, ಬಿಳಿಯ ಮುಖ, ಕಪ್ಪು ಕಿವಿ,..ಹೀಗೆ ಕಪ್ಪು ಮತ್ತು ಬಿಳಿ ಎರಡೂ ಬಣ್ಣವನ್ನು ಹೊಂದಿರುವ ಪಾಂಡಾಗಳ ಕುರಿತು ವಿಜ್ಞಾನಿಗಳು  ಸಂಶೋಧನೆ ನಡೆಸಿದ್ದರು.  ಆಹಾರಕ್ಕಾಗಿ ಬಿದಿರು ಸಸ್ಯವನ್ನು ಅವಲಂಬಿಸಿದ್ದು, ಇತರೆ ಜಾತಿಯ ಸಸ್ಯಗಳನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿಲ್ಲ. 195 ಮಾಂಸಾಹಾರಿ ಪ್ರಭೇದಗಳು ಹಾಗೂ 39 ಕರಡಿ ಪ್ರಭೇದಗಳಲ್ಲಿ ತುಪ್ಪಳದ ಬಣ್ಣದ ಕುರಿತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ನಡೆಸಿದ್ದರು. ಹಿಮಾವೃತ ಪರ್ವತಗಳಿಂದ ಹಿಡಿದು ದಟ್ಟ ಕಾಡಿನ ಪ್ರದೇಶಗಳವರೆಗೂ ಸಂಚರಿಸುವ ಪಾಂಡಾಗಳು, ಚಳಿಗಾಲಕ್ಕಾಗಿ ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ ಶೇಖರಿಸಿಕೊಳ್ಳುವುದಿಲ್ಲ.  ಅಪಾಯದ ಸಂದರ್ಭದಲ್ಲಿ ಎದುರುಗೊಳ್ಳುವ ಪ್ರಾಣಿಗಳಿಗೆ ಕಿವಿಯ ಕಪ್ಪು ಬಣ್ಣದ ಮೂಲಕ ಎಚ್ಚರಿಕೆ ಸಂದೇಶ ರವಾನಿಸುತ್ತವೆ. ಕಣ್ಣಿನ ಸುತ್ತಲಿನ ಕಪ್ಪು ಬಣ್ಣದಿಂದ ಒಂದಕ್ಕೊಂದು ಗುರುತಿಸಿಕೊಳ್ಳುತ್ತವೆ. ಇನ್ನೂ ಮೈಮೇಲಿನ ಬಿಳಿಯ ಬಣ್ಣವು ಹಿಮಾವೃತ ಪ್ರದೇಶಗಳಲ್ಲಿ ಉಪಯುಕ್ತ ಎನ್ನಲಾಯಿತು.

2017: ಲಂಕಾಸ್ಟರ್ಅಮೆರಿಕದ ಕನ್ಸಾಸಿನಲ್ಲಿ ಹೈದರಾಬಾದಿನ ಎಂಜಿನಿಯರ್ ಶ್ರೀನಿವಾಸ ಕೂಚಿಬೊಟ್ಲಾ ಹತ್ಯೆಗೀಡಾದ ಬೆನ್ನಲ್ಲೇ ದಕ್ಷಿಣ ಕರೊಲಿನಾದಲ್ಲಿ ಭಾರತ ಮೂಲದ ಉದ್ಯಮಿಯೊಬ್ಬರು ಗುಂಡಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿತು.  ಹರ್ನೀಶ್ ಪಟೇಲ್ (43) ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ದುರ್ದೈವಿ. ಪಟೇಲ್ ಅವರು ಗುರುವಾರ, ಮಾರ್ಚ್ 2ರ ರಾತ್ರಿ 11.24ಕ್ಕೆ ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ್ದರು. ಅಂಗಡಿಯಿಂದ ಹೊರಟು 10 ನಿಮಿಷದಲ್ಲಿ ಲಂಕಾಸ್ಟರರಿನಲ್ಲರುವ ಮನೆ ಬಳಿಯಲ್ಲೇ ಅವರ ಹತ್ಯೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದವು. ಪಟೇಲ್ ಮನೆಯ ನೆರೆಮನೆಯವರಿಗೆ ಗುಂಡಿನ ಸದ್ದು ಮತ್ತು ಆರ್ತನಾದ ಕೇಳಿಸಿ ಅವರು 11.33 ವೇಳೆಗೆ 911 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಾರದ ಹಿಂದೆಯಷ್ಟೇ ಅಮೆರಿಕದ ಕನ್ಸಾಸ್ನಗರದ ಆಸ್ಟಿನ್ಬಾರಿನಲ್ಲಿ ಹೈದರಾಬಾದಿನ ಎಂಜಿನಿಯರ್ ಶ್ರೀನಿವಾಸ ಕೂಚಿಬೊಟ್ಲಾ ಅವರು ಹತ್ಯೆಗೀಡಾಗಿದ್ದರು.
2009: ಲಾಹೋರಿನಲ್ಲಿ ನಡೆದ ಕ್ರಿಕೆಟಿಗರ ಮೇಲಣ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಲಾಹೋರ್‌ ಕಮಿಷನರ್ ಖುಸ್ರೊ ಪರ್ವೇಜ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗೃಹ ಸಚಿವ ಪಿ.ಚಿದಂಬರಮ್ ಅವರು 'ಭಾರತ ಭಯೋತ್ಪಾದನೆಯನ್ನು ಸಹಿಸುವುದೂ ಇಲ್ಲ, ಅದನ್ನು 'ರಫ್ತು' ಮಾಡುವುದೂ ಇಲ್ಲ' ಎಂದು ಹೇಳಿದರು. 'ಇವೆಲ್ಲಾ ನಿರಾಧಾರ ಆರೋಪಗಳು. ಮುಂಬೈ ದಾಳಿ ಸಂದರ್ಭದಲ್ಲಿ ಕೂಡಾ ಪಾಕಿಸ್ಥಾನದವರು ಇದೇ ತೆರನಾದ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾ ದಿನ ತಳ್ಳುತ್ತಿದ್ದುದನ್ನು ನಾವಿನ್ನೂ ಮರೆತಿಲ್ಲ' ಎಂದು ಅವರು ನುಡಿದರು.

2009: ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಐದು ವಾರಗಳ ಬಳಿಕ ಪ್ರಧಾನಿ ಮನಮೋಹನ ಸಿಂಗ್ ಮೊದಲ ಬಾರಿಗೆ ಅಧಿಕೃತವಾಗಿ ತಮ್ಮ ಕೆಲಸಕ್ಕೆ ಹಾಜರಾದರು. ಉಲ್ಲಸಿತರಾಗಿದ್ದ ಅವರು ಆಫ್ರಿಕಾ ಖಂಡದ ದೇಶ ಬೆನಿನ್‌ ಅಧ್ಯಕ್ಷ ಬೋನಿ ಯಾಯಿ ಅವರೊಂದಿಗೆ 90 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

2009: ಹಿಂದಿನ ಪರೀಕ್ಷೆಯಲ್ಲಿ ಗುರಿ ತಲುಪಲು ವಿಫಲವಾಗಿದ್ದ ಬ್ರಹ್ಮೋಸ್ ಕ್ಷಿಪಣಿಯ ಹೊಸ ಮಾದರಿಯ ಪರೀಕ್ಷಾರ್ಥ ಪ್ರಯೋಗ ರಾಜಸ್ಥಾನದ ಮರುಭೂಮಿಯಲ್ಲಿರುವ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಯಿತು. 'ಬೆಳಗ್ಗೆ 10.30 ಸುಮಾರಿಗೆ ಎರಡನೇ ಮಾದರಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾಯಿಸಲಾಯಿತು. ಎರಡೂವರೆ ನಿಮಿಷದಲ್ಲಿ ಅದು ಗುರಿ ತಲುಪಿತು' ಎಂದು ರಷ್ಯಾದ ವಿಜ್ಞಾನಿಗಳೊಂದಿಗೆ ಸೇರಿ ಅದನ್ನು ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಓ) ಅಧಿಕಾರಿಗಳು ಮಾಹಿತಿ ನೀಡಿದರು.

2009: ಚುನಾವಣಾ ಆಯುಕ್ತ ನವೀನ್ ಚಾವ್ಲಾ ಏಪ್ರಿಲ್ 20ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುವರು. ಅದೇ ದಿನ ಹಾಲಿಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ನಿವೃತ್ತರಾಗುವರು. ಏ. 20ರಿಂದ ಜಾರಿಯಾಗುವಂತೆ ಚಾವ್ಲಾ ಅವರನ್ನು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಿಸಲು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಒಪ್ಪಿಗೆ ನೀಡಿರುವುದಾಗಿ ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.

2009: ಶನಿಗ್ರಹದ ಹೊರ ಕಕ್ಷೆಯಲ್ಲಿ ಇರುವ ಬಳೆಗಳಲ್ಲಿ ಮಂಕಾದ ಉಪಗ್ರಹವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ, ಇದನ್ನು ಬಾಹ್ಯಾಕಾಶ ನೌಕೆ ಕ್ಯಾಸಿನಿ ಗುರುತಿಸಿದೆ ಎಂದು ಎಂದು ಅಂತರ ರಾಷ್ಟ್ರೀಯ ಖಗೋಳ ಸಂಸ್ಥೆ ಅಮೆರಿಕದ ಪಸಾಡೆನಾದಲ್ಲಿ ಘೋಷಿಸಿತು. ಇದು ಗ್ರಾತದಲ್ಲಿ ಅರ್ಧ ಕಿ.ಮೀ. ಅಗಲವಾಗಿದೆ. ಶನಿಗ್ರಹ ಈಗಾಗಲೇ 60 ಉಪಗ್ರಹಗಳನ್ನು ಹೊಂದಿದೆ.

2008: ಹಲವು ವರ್ಷಗಳಿಂದ ವಿಶ್ವ ಕ್ರಿಕೆಟ್ಟನ್ನು ಆಳುತ್ತಿದ್ದ ಆಸ್ಟ್ರೇಲಿಯಾದ ಪ್ರಭುತ್ವಕ್ಕೆ ವಿರಾಮ ನೀಡಿದ ಭಾರತ ತಂಡವು ಬ್ರಿಸ್ಬೇನಿನಲ್ಲಿ ನಡೆದ ಕಾಮನ್ ವೆಲ್ತ್ ಬ್ಯಾಂಕ್ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗಿದ ಎರಡನೇ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ 9 ರನ್ನುಗಳ ರೋಚಕ ಗೆಲುವು ಸಾಧಿಸಿ ರಿಕಿ ಪಾಂಟಿಂಗ್ ಬಳಗದ ಸೊಕ್ಕು ಮುರಿದು ಗೆಲುವನ್ನು ತನ್ನದಾಗಿಸಿಕೊಂಡಿತು. 

2008:  ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರಪಾಲಿಕೆಯ ಕನ್ನಡ ಭಾಷಿಕ ಮೊದಲ ಮಹಿಳಾ ಮೇಯರ್ ಆಗಿ ಪ್ರಶಾಂತಾ ಬುಡವಿ, ಉಪಮೇಯರ್ ಆಗಿ ಯೂನುಸ್ ಮೋಮಿನ್ ಆಯ್ಕೆಯದರು. ಇದರೊಂದಿಗೆ  ಎಂ.ಇ.ಎಸ್. ತೀವ್ರ ಮುಖಭಂಗ ಅನುಭವಿಸಿತು. ಹದಿನಾರು ವರ್ಷಗಳ ನಂತರ ಕನ್ನಡ ಭಾಷಿಕ ಅಭ್ಯರ್ಥಿಯೊಬ್ಬರಿಗೆ ಮೇಯರ್ ಪಟ್ಟ ಲಭಿಸಿತು. ಈ ಮೊದಲು 1991ರಲ್ಲಿ ಸಿದ್ಧನಗೌಡ ಪಾಟೀಲ ಅವರು ಕನ್ನಡದ ಪ್ರಥಮ ಮೇಯರ್ ಆಗಿ ಆಯ್ಕೆಯಾಗಿದ್ದರು.

2008: ಪಶ್ಚಿಮ ನೇಪಾಳದ ರಾಮೆಚಹಾಪ್ ಜಿಲ್ಲೆಯಲ್ಲಿ ಈದಿನ ಸಂಜೆ ವಿಶ್ವಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾಗಿ, ಅದರಲ್ಲಿದ್ದ ಏಳು ವಿದೇಶೀಯರು ಹಾಗೂ ಐವರು ನೇಪಾಳಿಯರು ಸೇರಿ 12 ಮಂದಿ ಮೃತರಾದರು. ಮೃತರಲ್ಲಿ ಐವರು ನೇಪಾಳಿಯರು ಕಠ್ಮಂಡುವಿನಲ್ಲಿರುವ ವಿಶ್ವಸಂಸ್ಥೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಏಳು ಮಂದಿ ವಿದೇಶೀಯರ ಪೈಕಿ ನಾಲ್ವರು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರಗಳ ಉಸ್ತುವಾರಿ ಕಚೇರಿಯಲ್ಲಿ ಹಾಗೂ ಉಳಿದ ಮೂವರು ವಿಮಾನ ತಯಾರಿಕಾ ಸಂಸ್ಥೆಯಲ್ಲಿ ಕಾರ್ಯನಿರ್ವಸುತ್ತಿದ್ದರು.

2008: ಹತ್ಯೆಗೀಡಾದ ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಜೀವನ ಕುರಿತು ಚಲನಚಿತ್ರ ಮಾಡುವ ಬಗ್ಗೆ ಬಾಲಿವುಡ್ ಪ್ರಸ್ತಾವವನ್ನು ಅವರ ಪತಿ ಆಸಿಫ್ ಆಲಿ ಜರ್ದಾರಿ ತಿರಸ್ಕರಿಸಿದರು. ಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ಕರಾಚಿ ಮೂಲದ ಸ್ಕೈಸ್ ಅನ್ ಲಿಮಿಟೆಡ್ ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಿಸಲು ಯೋಜಿಸಿದ್ದು ಖ್ಯಾತ ತಾರೆ ಶಬಾನಾ ಆಜ್ಮಿ ಭುಟ್ಟೋ ಪಾತ್ರ ನಿರ್ವಹಿಸಲಿದ್ದರು. ಚಿತ್ರ ನಿರ್ಮಿಸಲು ಭುಟ್ಟೋ ಅವರ ಕುಟುಂಬದ ಸಮ್ಮತಿಗಾಗಿ ಕಾಯುತ್ತಿದ್ದ ಭಟ್ ಅವರು ಈ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯಲು ಮಾಜಿ ಪ್ರಧಾನಿ ಅವರ ನಿಕಟವರ್ತಿ ನಹೀದ್ ಖಾನ್ ಅವರ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದ್ದರು.

2008: ಲಾಹೊರಿನ ಪ್ರತಿಷ್ಠಿತ ಪಾಕಿಸ್ಥಾನಿ ನೌಕಾ ಸಮರಾಭ್ಯಾಸ ಕಾಲೇಜಿನ ವಾಹನ ನಿಲುಗಡೆ ಪ್ರದೇಶದಲ್ಲಿ  ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ಸ್ಫೋಟಗೊಳಿಸಿಕೊಂಡ ಪರಿನಾಮವಾಗಿ  ಕನಿಷ್ಠ 7 ಮಂದಿ ಸತ್ತು 15ಕ್ಕೂ ಅಧಿಕ ಮಂದಿ ಗಾಯಗೊಂಡರು ಮೊದಲು ಎರಡು ಸ್ಫೋಟಗಳು ಕೇಳಿಸಿದವು. ಬಳಿಕ ಇನ್ನೆರಡು ಸ್ಫೋಟಗಳ ಸದ್ದು ಕೇಳಿಸಿತು ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದರು.

2008: `ಜೋಧಾ ಅಕ್ಬರ್' ಚಿತ್ರ ಪ್ರದರ್ಶನಕ್ಕೆ ಉತ್ತರಪ್ರದೇಶದ ಹೈಕೋರ್ಟ್ ನಿಷೇಧ ಹೇರಿರುವ ಆದೇಶಕ್ಕೆ  ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು.

2008: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಲ್ಲಿ ವಿಳಂಬವಾಗುತ್ತಿದೆ ಎಂದು ಪ್ರತಿಭಟಿಸಿ  ತೆಲಂಗಾಣ ರಾಷ್ಟ್ರ ಸಮಿತಿಯ (ಟಿ ಆರ್ ಎಸ್) ನಾಲ್ವರು ಸಂಸದರು ರಾಜೀನಾಮೆ ನೀಡಿದ ಬೆನ್ನಲ್ಲೇ ಟಿ ಆರ್ ಎಸ್ ನ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೇಲೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಪಕ್ಷದ ತಂತ್ರದಂತೆ ಒತ್ತಡ ತರುವ ಸಲುವಾಗಿ ಟಿ ಆರ್ ಎಸ್ ನ  16 ಮಂದಿ ವಿಧಾನಸಭಾ ಸದಸ್ಯರು  ಮತ್ತು ಮೂವರು ವಿಧಾನ ಪರಿಷತ್ ಸದಸ್ಯರು  ರಾಜೀನಾಮೆ ಸಲ್ಲಿಸಿದರು.

2008: ಮೂವತ್ತೈದು ವರ್ಷಗಳಷ್ಟು ಸುದೀರ್ಘ ಕಾಲ ಪಾಕಿಸ್ಥಾನ ಜೈಲಿನಲ್ಲಿ ಬಂಧಿಯಾಗಿದ್ದ ಕಾಶ್ಮೀರ ಸಿಂಗ್ ಬಿಡುಗಡೆ ಹೊಂದಿ ವಾಘಾ ಗಡಿ ದಾಟಿ ಪತ್ನಿಯನ್ನು ಸಂಧಿಸಿದರು. 67 ವರ್ಷದ ಸಿಂಗ್  1973ರಲ್ಲಿ ಗೂಢಚರ್ಯೆ ಆಪಾದನೆಗಾಗಿ ಪಾಕಿಸ್ಥಾನ ಸರ್ಕಾರದಿಂದ ಬಂಧನಕ್ಕೆ ಒಳಗಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು, ಆದರೆ ಈ ತೀರ್ಪು ಜಾರಿಯಾಗಿರಲಿಲ್ಲ.  ಕಳೆದ ಫೆಬ್ರುವರಿಯಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಿಂಗ್ ಗೆ  ಕ್ಷಮಾದಾನ ನೀಡಿದ್ದರು.

2008: ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಮಲ್ಲೇಶ್ವರ 9ನೇ ಅಡ್ಡರಸ್ತೆ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ 1.2 ಲಕ್ಷ ಅಕ್ಕಿ ಕಾಳಿನಿಂದ ರಚಿಸಿದ ಬೃಹತ್ ಶಿವಲಿಂಗದ ಅಪರೂಪದ ಪ್ರದರ್ಶನ ಏರ್ಪಡಿಸಲಾಯಿತು.
ಈ ಲಿಂಗದಲ್ಲಿ ಬಳಸಲಾದ ಪ್ರತಿಯೊಂದು ಅಕ್ಕಿ ಕಾಳಿನ ಮೇಲೂ ಸೂಕ್ಷ್ಮವಾಗಿ ಶಿವಲಿಂಗ ಚಿತ್ರಿಸಲಾಗಿತ್ತು. ಹೀಗೆ ಚಿತ್ರಿಸಿದ ಸೂಕ್ಷ್ಮ ಚಿತ್ರ ಕಲಾವಿದ ಎನ್. ಎಸ್. ಅನಂತಕುಮಾರ್ ಅವರೇ ಅವೇ ಅಕ್ಕಿಕಾಳುಗಳನ್ನು ಶಿವಲಿಂಗದ ಆಕಾರದಲ್ಲಿ ಜೋಡಿಸಿದವರು. ಇವರು ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್. ಒಂದೊಂದು ಕಾಗದದ ಹಾಳೆಗಳ ಮೇಲೆ 1200 ಅಕ್ಕಿಕಾಳಿನ ಲಿಂಗಗಳಿದ್ದವು. ಈ ಎಲ್ಲಾ ಹಾಳೆಗಳನ್ನು ಬೆಂಡಿಗೆ ಅಂಟಿಸಿ, ಬೃಹದಾಕಾರದ ಶಿವಲಿಂಗವನ್ನು ನಿರ್ಮಿಸಲಾಯಿತು. ಇದರ ಎತ್ತರ ಎರಡೂವರೆ ಮೀಟರ್. ಅಗಲ ಮೂರು ಮೀಟರ್. ಈ  ಎಲ್ಲಾ ಅಕ್ಕಿಕಾಳುಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿದರೆ 1.2 ಕಿ.ಮೀ  ಉದ್ದವಾಗುವುದು. ಈ ಅಕ್ಕಿಕಾಳುಗಳ ತೂಕ 4.8 ಕೆ.ಜಿ. ದಿನಕ್ಕೆ 250 ಲಿಂಗದಂತೆ ಒಟ್ಟು 480 ದಿವಸ ಲಿಂಗಗಳನ್ನು ಬರಿಗಣ್ಣಿಂದಲೇ ಬರೆದು ಮುಗಿಸಿದ್ದರು ಅನಂತಕುಮಾರ್.

2007: ಮೂರು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾರ್ಚ್ 3ರ ರಾತ್ರಿ/ ಮಾರ್ಚ್ 4ರ  ಮುಂಜಾನೆ ಸಂಭವಿಸಿದ ಸಂಪೂರ್ಣ ಚಂದ್ರಗ್ರಹಣ ಕಾಲದಲ್ಲಿ ಕಡು ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರನನ್ನು ಕಂಡು ಜಗತ್ತಿನಾದ್ಯಂತ ಖಗೋಳ ವೀಕ್ಷಕರು ಮತ್ತು ಖಗೋಳವಿಜ್ಞಾನಿಗಳು ಸಂಭ್ರಮಿಸಿದರು. ಭಾರತೀಯ ಕಾಲಮಾನ ನಸುಕಿನ 1.48 ಗಂಟೆಗೆ (ಜಿಎಂಟಿ ಕಾಲಮಾನ ಶನಿವಾರ 20.18 ಗಂಟೆ) ಆರಂಭವಾದ ಚಂದ್ರಗ್ರಹಣ ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಅಮೆರಿಕ ಹಾಗೂ ಕೆನಡಾದ ಪೂರ್ವ ಭಾಗಗಳಲ್ಲಿ ಕಾಣಿಸಿತು. ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಈ ಚಂದ್ರಗ್ರಹಣ ಕಾಣಿಸಿತು.

2007: ಜಾರ್ಖಂಡಿನ ಜೆಮ್ಶೆಡ್ಪುರ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆ ಎಂ ಎಂ) ಪ್ರಧಾನ ಕಾರ್ಯದರ್ಶಿಯಾಗಿದ್ದ ಸುನೀಲ್ ಮಹತೋ (38) ಅವರನ್ನು ಪೂರ್ವ ಸಿಂಗಭೂಮ್ ಜಿಲ್ಲೆಯ ಬಕುರಿಯಾದಲ್ಲಿ ಇಬ್ಬರು ಅಂಗರಕ್ಷಕರು ಹಾಗೂ ಇಬ್ಬರು ಕಾರ್ಯಕರ್ತರ ಸಹಿತ ಕೊಲೆಗೈಯಲಾಯಿತು.

2007: ತಿರುವನಂತಪುರ ಸಮೀಪದ ಕರಾವಳಿ ತೀರದಲ್ಲಿ ಪಿ.ಎಸ್. ವಿನೋದ ಅವರು ನೆಲ ಮತ್ತು ನೀರು ಎರಡೂ ಕಡೆ ಚಲಿಸಬಲ್ಲಂತಹ `ಅಂಪಿಬಿಯಸ್' ಕಾರನ್ನು ಸಮುದ್ರ ನೀರಿನ ಮೇಲೆ 5 ಕಿ.ಮೀ. ಓಡಿಸಿ ಜನರನ್ನು ಅಚ್ಚರಿಯಲ್ಲಿ ಕೆಡವಿದರು. ಈ ಕಾರನ್ನು ಸ್ವತಃ ವಿನೋದ್ ಅವರೇ ವಿವಿಧ ಕಂಪೆನಿಗಳ ಕಾರುಗಳ ಬಿಡಿಭಾಗ ಸೇರಿಸಿ ನಿರ್ಮಿಸಿದ್ದರು.

2006: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರ ವಿಶೇಷ ಸಲಹೆಗಾರರಾಗಿ ಭಾರತೀಯ ರಾಜತಂತ್ರಜ್ಞ ಮತ್ತು ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ವಿಜಯ ನಂಬಿಯಾರ್ ನೇಮಕಗೊಂಡರು.

1968: ಟೆನಿಸ್ ಅಧಿಕಾರಿಗಳು ವಿಂಬಲ್ಡನ್ನಿನಲ್ಲಿ ವೃತ್ತಿಪರ ಆಟಗಾರರಿಗೆ ಪ್ರವೇಶ ಕಲ್ಪಿಸಿದರು. ಇದಕ್ಕೆ ಮೊದಲು ವಿಂಬಲ್ಡನ್ನಿಗೆ ಹವ್ಯಾಸಿ ಆಟಗಾರರಿಗೆ ಮಾತ್ರ ಪ್ರವೇಶವಿತ್ತು.

1967: ಕಲಾವಿದ ಲೋಕಯ್ಯ ಕೆ.ಎಂ. ಜನನ.

1963: ಕಲಾವಿದ ಸುಬ್ರಹ್ಮಣ್ಯ ಕೆ.ಆರ್. ಜನನ.

1961: ಭಾರತದ ಮೊದಲ ವಿಮಾನ ವಾಹಕ ನೌಕೆ ಐ ಎನ್ ಎಸ್ ವಿಕ್ರಾಂತನ್ನು ಬೆಲ್ ಫಾಸ್ಟ್ನಲ್ಲಿ ಇಂಗ್ಲೆಂಡಿನ ಭಾರತದ ಹೈಕಮೀಷನರ್ ವಿಜಯಲಕ್ಷ್ಮಿ ಪಂಡಿತ್ ಔಪಚಾರಿಕವಾಗಿ ಚಾಲನೆ ನೀಡಿ ನೌಕೆಗೆ `ವಿಕ್ರಾಂತ್' ಹೆಸರನ್ನು ಇಟ್ಟರು ಮತ್ತು ಭಾರತ ಸರ್ಕಾರದ ಪರವಾಗಿ ನೌಕೆಯನ್ನು ಸ್ವೀಕರಿಸಿದರು. (ಮೊದಲ ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಪ್ರೀತಮ್ ಸಿಂಗ್ ಮಹೀಂದ್ರೂ ಅವರು ನೌಕೆಗೆ ಫೆಬ್ರುವರಿ 16ರಂದು ಸರಳ ಸಮಾರಂಭದಲ್ಲಿ ಅನೌಪಚಾರಿಕವಾಗಿ ಚಾಲನೆ ನೀಡಿದ್ದರು.) 1997ರ ಜನವರಿಯಲ್ಲಿ ನೌಕೆಗೆ ವಿಶ್ರಾಂತಿ ನೀಡಿ ಅದನ್ನು `ನೌಕಾ ವಸ್ತುಸಂಗ್ರಹಾಲಯ' (ಮೆರಿಟೈಮ್ ಮ್ಯೂಸಿಯಂ) ಆಗಿ ಪರಿವರ್ತಿಸಲಾಯಿತು.

1951: ನವದೆಹಲಿಯಲ್ಲಿ ಮೊದಲ ಏಷ್ಯನ್ ಗೇಮ್ಸ್ ಆರಂಭವಾಯಿತು. 11 ರಾಷ್ಟ್ರಗಳ 489 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

1950: ಕಲಾವಿದೆ ಜಿ.ಆರ್. ಜಾಹ್ನವಿ ಜನನ.

1940: ಕಲಾವಿದ ಶೇಷಗಿರಿ ದಂಡಾಪುರ ಜನನ.

1939: ಭಾರತೀಯ ಕ್ರಾಂತಿಕಾರಿ ನಾಯಕ, ವಿದ್ವಾಂಸ ಲಾಲಾ ಹರದಯಾಳ್ (1884-1939) ತಮ್ಮ 54ನೇ ವಯಸ್ಸಿನಲ್ಲಿ ನಿಧನರಾದರು. 1884ರಲ್ಲಿ ಜನಿಸಿದ್ದ ಹರದಯಾಳ್ ಬ್ರಿಟಿಷರನ್ನು ಭಾರತದಿಂದ ಕಿತ್ತೊಗೆಯಲು ತೀವ್ರ ಹೋರಾಟ ನಡೆಸಿದ್ದರು.
1911ರಲ್ಲಿ ಅಮೆರಿಕಕ್ಕೆ ತೆರಳಿ ಸ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ಅವರು ಈ ಸಮಯದಲ್ಲೇ `ಘದರ್' ಪಕ್ಷವನ್ನು ಸ್ಥಾಪಿಸಿ ಆರು ಭಾಷೆಗಳಲ್ಲಿ ಗದ್ದಾರ್ ಪತ್ರಿಕೆಯನ್ನು ಪ್ರಕಟಿಸಿದ್ದರು. (ಘದರ್ ಅಂದರೆ `ದಂಗೆ' ಎಂದು ಅರ್ಥ. ಸ್ವಾತಂತ್ರಾನಂತರ ಈ ಪಕ್ಷಕ್ಕೆ ಗೌರವ ನೀಡಲು ನಕ್ಸಲೀಯ ಧುರೀಣ ಗುಮ್ಮಡಿ ವಿಠಲರಾವ್ ತಮಗೆ `ಗದ್ದಾರ' ಎಂಬ ಹೆಸರು ಇಟ್ಟುಕೊಂಡರು.)  1987ರಲ್ಲಿ ಭಾರತ ಸರ್ಕಾರ ಹರದಯಾಳ್ ನೆನಪಿಗಾಗಿ ಇವರ ಭಾವಚಿತ್ರದೊಂದಿಗೆ ಅಂಚೆ ಚೀಟಿಯನ್ನು ಪ್ರಕಟಿಸಿತು.

1903: ಪ್ರಖ್ಯಾತ ವೈಣಿಕ ವಿದ್ವಾಂಸ ಕೇಶವಮೂರ್ತಿ ಅವರು ಸಂಗೀತದ ತವರೂರು ರುದ್ರಪಟ್ಟಣ ಸುಬ್ಬರಾಯರು- ಪುಟ್ಟಕ್ಕಯ್ಯ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. 

1858: ಜೆ.ಪಿ. ವಾಕರ್ 200 ಮಂದಿ ಕೈದಿಗಳೊಂದಿಗೆ ಅಂಡಮಾನ್ ದ್ವೀಪಗಳಿಗೆ ಹೊಸ ವಸತಿ ವ್ಯವಸ್ಥೆ ಆರಂಭಿಸುವ ಸಲುವಾಗಿ ಹೊರಟ. ಆತನ ಜೊತೆಗೆ ಇದ್ದ ಕೈದಿಗಳಲ್ಲಿ ಹೆಚ್ಚಿನ ಮಂದಿ ಹಿಂದಿನ ವರ್ಷ ನಡೆದ `ಸಿಪಾಯಿ ದಂಗೆ'ಯ ಕೈದಿಗಳು. ಜೊತೆಗೆ ಇಬ್ಬರು ವೈದ್ಯರೂ ಆತನ ಜೊತೆಗಿದ್ದರು. 

1854: ಸರ್ (ವಿಲಿಯಂ) ನೇಪಿಯರ್ ಶಾ (1854-1945) ಹುಟ್ಟಿದ ದಿನ. ಇಂಗ್ಲಿಷ್ ಹವಾಮಾನ ತಜ್ಞನಾದ ಈತ ಗಾಳಿಯ ಒತ್ತಡ ಕಂಡು ಹಿಡಿಯಲು `ಮಿಲಿಬಾರ್' ಸಂಶೋಧಿಸಿದ. ಇದೇ ಮುಂದೆ ಆಧುನಿಕ ಹವಾಮಾನ ವಿಜ್ಞಾನದ ಅಭಿವೃದ್ಧಿಗೆ ಅಪಾರ ಕಾಣಿಕೆ ನೀಡಿತು.

1811: ಜಾನ್ ಲೈರ್ಡ್ ಮೈರ್ ಲಾರೆನ್ಸ್ (1811-1879) ಹುಟ್ಟಿದ ದಿನ. ಬ್ರಿಟಿಷ್ ವೈಸ್ ರಾಯ್ ಹಾಗೂ ಭಾರತದ ಗವರ್ನರ್ ಜನರಲ್ ಆದ ಈತ ಪಂಜಾಬಿನಲ್ಲಿ ವ್ಯಾಪಕ ಸುಧಾರಣೆಗಳನ್ನು ಜಾರಿಗೊಳಿಸಿದ.

1681: ಉತ್ತರ ಅಮೆರಿಕಾದಲ್ಲಿ ವಸಾಹತು ಸ್ಥಾಪನೆಗೆ ಅವಕಾಶ ನೀಡುವ `ರಾಜಪತ್ರ'ವನ್ನು (ರಾಯಲ್ ಚಾರ್ಟರ್) ದೊರೆ 2ನೇ  ಚಾರ್ಲ್ಸ್ ವಿಲಿಯಂ ಪೆನ್ ಗೆ ನೀಡಿದ.

No comments:

Post a Comment