ಇಂದಿನ ಇತಿಹಾಸ History Today ಮೇ 28
2019: ನವದೆಹಲಿ: ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿ ೨೦೧೪ರಲ್ಲಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದಾಗ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ (ಸಾರ್ಕ್) ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು, ಆದರೆ ಈ ಬಾರಿ ಮೋದಿಯವರು ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವಾಗ, ಸಾರ್ಕ್ ರಾಷ್ಟ್ರಗಳನ್ನು ಬಿಟ್ಟು, ಬಿಮ್ಸ್ಟೆಕ್ (ಬಂಗಾಳ ಕೊಲ್ಲಿ ಬಹುರಂಗ ತಾಂತ್ರಿಕ ಮತ್ತು ಆರ್ಥಿಕ ಸಹಕಾರ -ಬಿಐಎಂಎಸ್ಟಿಇಸಿ (ಬಿಮ್ಸ್ಟೆಕ್) ರಾಷ್ಟ್ರಗಳ ನಾಯಕರನ್ನು ಆಹ್ವಾನಿಸುವ ಮೂಲಕ ಪಾಕಿಸ್ತಾನ ಮತ್ತು ಚೀನಾಕ್ಕೆ ಖಡಕ್ ಸಂದೇಶವನ್ನು ಭಾರತ ರವಾನಿಸಿತು. ೨೦೧೪ರಲ್ಲಿ ಸಾರ್ಕ್ ರಾಷ್ಟ್ರಗಳಲ್ಲಿ ಒಂದಾದ ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್ ಶರೀಫ್ ಅವರು ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜಕೀಯ ನಾಯಕರ ಜೊತೆಗೆ ಮಿಂಚಿದ್ದರು. ಇದು ಉಭಯ ರಾಷ್ಟ್ರಗಳ ಜೊತೆ ಹೊಸ ಮಾತುಕತೆಗೆ ನಾಂದಿ ಹಾಡಲಿದೆ ಎಂಬ ಭಾವನೆಯನ್ನು ಜಾಗತಿಕ ವಲಯಗಳಲ್ಲಿ ಹುಟ್ಟು ಹಾಕಿತ್ತು. ಈ ಬಾರಿ ಎರಡನೇ ಅವಧಿಗೆ ಪ್ರಧಾನಿ ಪದಕ್ಕೇರಲು ಸಜ್ಜಾಗಿರುವ ಮೋದಿಯವರು ಸಾರ್ಕ್ ರಾಷ್ಟ್ರಗಳನ್ನು ಸಮಾರಂಭದಿಂದ ಹೊರಗಿಟ್ಟರು. ಬದಲಿಗೆ ಆಡಳಿತವು ಬಿಮ್ಸ್ಟೆಕ್ (ಬೇ ಆಫ್ ಬೆಂಗಾಲ್ ಇನಿಷಿಯೇಟಿವ್ ಫಾರ್ ಮಲ್ಟಿ ಸೆಕ್ಟೋರಲ್ ಟೆಕ್ನಿಕಲ್ ಅಂಡ ಇಕನಾಮಿಕ್ ಕೋ ಆಪರೇಷನ್) ರಾಷ್ಟ್ರಗಳಾದ ನೇಪಾಳ, ಭೂತಾನ್, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥಾಯ್ಲೆಂಡ್ ಈ ದೇಶಗಳ ನಾಯಕರನ್ನು ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿತು. ಪಾಕಿಸ್ತಾನವನ್ನು ರಾಷ್ಟ್ರಮಟ್ಟದ ವ್ಯವಹಾರಗಳಲ್ಲಿ ತನ್ನ ಭಾಗವನ್ನಾಗಿ ಮಾಡಿಕೊಳ್ಳುವ ಇರಾದೆ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತ ಈ ಮೂಲಕ ರವಾನಿಸಿತು. ತಮ್ಮ ಮೊದಲ ಅವಧಿಯ ಕೊನೆಯ ಮೂರು ವರ್ಷಗಳಲ್ಲಿ ಭಾರತವು ಪಾಕಿಸ್ತಾನದ ಜೊತೆಗೆ ಯಾವುದೇ ವ್ಯವಹಾರಗಳಲ್ಲೂ ಸಂವಹನ ನಡೆಸುವುದಿಲ್ಲ ಎಂಬುದಾಗಿ ಮೋದಿಯವರು ಸ್ಪಷ್ಟ ಪಡಿಸಿದ್ದಾರೆ. ೨೦೧೬ರಲ್ಲಿ ಉರಿ ದಾಳಿಯ ಬಳಿಕ ಭಾರತವು ಸಾರ್ಕ್ ಶೃಂಗಸಭೆಯನ್ನು ಬಹಿಷ್ಕರಿಸಿತ್ತು ಮತ್ತು ಸಾರ್ಕ್ಗೆ ಬದಲಾಗಿ ಬಿಮ್ಸ್ಟೆಕ್ ಬಲ ಪಡಿಸುವ ನಿಟ್ಟಿನಲ್ಲಿ ತನ್ನ ಬೆಂಬಲ ನೀಡಿತ್ತು. ಬಿಮ್ಸ್ಟೆಕ್ ಸಂಘಟನೆಯು ಕಳೆದ ಸುಮಾರು ೨೦ಕ್ಕೂ ಹೆಚ್ಚು ವರ್ಷಗಳಿಂದ ಬಹುತೇಕ ನಿಷ್ಕ್ರಿಯವಾಗಿದ್ದ
ಹಿನ್ನೆಲೆಯಲ್ಲಿ ಭಾರತದ ಕ್ರಮ ಕುತೂಹಲ ಮೂಡಿಸಿದೆ. ೧೯೯೭ರಲ್ಲಿ ಬಿಮ್ಸ್ಟೆಕ್ನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಶೃಂಗಸಭೆ ನಡೆಸಬೇಕು ಎಂದು ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಸ್ಥಾಪಿಸಲಾಗಿತ್ತು.
ಏನಿದ್ದರೂ ೨೦೧೮ರವರೆಗೆ ಬಿಮ್ಸ್ಟೆಕ್ನ ಮೂರೇ ಮೂರು ಶೃಂಗಸಭೆಗಳು ನಡೆದಿದ್ದವು. ವಾಸ್ತವವಾಗಿ ಸಾರ್ಕ್ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್, ಅಫ್ಘಾನಿಸ್ತಾನ ಮತು ಶ್ರೀಲಂಕಾ ಪಾಕಿಸ್ತಾನವನ್ನು
ಏಕಾಂಗಿಯನ್ನಾಗಿ ಮಾಡುವ ಯತ್ನದಲ್ಲಿ ಜೊತೆಗೂಡಿರುವುದರಿಂದ
ಬಿಮ್ಸ್ಟೆಕ್ಗೆ ಮಹತ್ವ ನೀಡುವ ಭಾರತದ ಯತ್ನಕ್ಕೆ ಬಲ ಲಭಿಸಿದೆ. ಬಿಮ್ಸ್ಟೆಕ್ಗೆ ಮಹತ್ವ ನೀಡಿ, ಸಾರ್ಕ್ನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೋದಿ ಕಾರ್ಯತಂತ್ರ ಅಚ್ಚರಿದಾಯಕವಾದದ್ದಲ್ಲ, ಏಕೆಂದರೆ ಪಾಕಿಸ್ತಾನವನ್ನು ಹೊರತು ಪಡಿಸಿ ಬಹುತೇಕ ಇದೇ ದೇಶಗಳು ಸ್ವಯಂ ಅಭಿವೃದ್ಧಿಯ ವಿಚಾರ ಬಂದಾಗ ಭಾರತದ ಪಾಲಿಗೆ ಬಿಮ್ಸ್ಟೆಕ್ ಅತ್ಯುತ್ತಮ ಆಯ್ಕೆ ಎಂಬ ಸಂದೇಶವನ್ನು ನೀಡಿವೆ ಎಂದು ಹೆಸರು ಹೇಳಲು ಇಚ್ಛಿಸದ ಮಾಜಿ ರಾಜತಾಂತ್ರಿಕರೊಬ್ಬರು ನುಡಿದರು. ಸಾರ್ಕ್ ಮೂಲಕ ಮತ್ತು ಸಂಭಾಷಣೆ ಆರಂಭಿಸುವ ವಿಚಾರದಲ್ಲಿ ಈಗ ಯಾರಿಗೂ ಆಸಕ್ತಿ ಇಲ್ಲ ಎಂದು ಅವರು ಹೇಳಿದರು. ಬಿಮ್ಸ್ಟೆಕ್ನಿಂದ ಹೊರಗಿರುವ ಸಾರ್ಕ್ ರಾಷ್ಟ್ರಗಳು ಎಂದರೆ ಪಾಕಿಸ್ತಾನ, ಮಾಲ್ದೀವ್ಸ್ ಮತ್ತು ಆಫ್ಘಾನಿಸ್ತಾನ. ಈ ಮೂರರ ಪೈಕಿ ಆಫ್ಘಾನಿಸ್ಥಾನದ ಜೊತೆಗೆ ಭಾರತಕ್ಕೆ ಪ್ರಬಲ ಬಾಂಧವ್ಯ ಇದೆ. ಪಾಕಿಸ್ತಾನದ ಪರೋಕ್ಷ ಭಯೋತ್ಪಾದಕ ಯುದ್ಧವನ್ನು ಆಫ್ಘಾನಿಸ್ಥಾನ ಕಟುವಾಗಿ ಟೀಕಿಸಿತ್ತು. ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಮೋದಿಯವರು ಮಾಲ್ದೀವ್ಸ್ ಗೆ ಮೊದಲ ಭೇಟಿ ನೀಡುವ ಸಾಧ್ಯತೆಗಳಿವೆ. ಮಾಲ್ದೀವ್ಸ್ ನ ಹಾಲಿ ಅಧ್ಯಕ್ಷ ಇಬ್ರಾಹಿಂ ಸೊಲಿಹ್ ಅವರು ಭಾರತದ ಜೊತೆ ಬಾಂಧವ್ಯ ಬಲಪಡಿಸುವ ಸ್ಪಷ್ಟ ಸಂದೇಶವನ್ನು ಈಗಾಗಲೇ ನೀಡಿದ್ದಾರೆ. ಇದು
ಬಿಮ್ಸ್ಟೆಕ್ ಸಂಪೂರ್ಣವಾಗಿ ಸಾರ್ಕ್ನ್ನು ಮೂಲೆಗುಂಪು ಮಾಡಲಿದೆ ಎಂಬುದನ್ನು ಸೂಚಿಸಿತು. ಮೋದಿ ಆಡಳಿತದ ಅಡಿಯಲ್ಲಿ ಭಾರತವು ಪಾಕಿಸ್ತಾನವನ್ನು ಏಕಾಂಗಿಯನ್ನಾಗಿ ಮಾಡಲು ಪಣತೊಟ್ಟಿದೆ. ೨೦೧೮ರಲ್ಲಿ ಮೋದಿಯವರು ಕಠ್ಮಂಡುವಿನಲ್ಲಿ
ಬಿಮ್ಸ್ಟೆಕ್ ಮಹಾಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ’ಭಾರತದ ಆಕ್ಟ್ ಈಸ್ಟ್ ನೀತಿ ಮತ್ತು ನೇಬರ ಹುಡ್ ಫಸ್ಟ್ ನೀತಿಗಳನ್ನು ಒಗ್ಗೂಡಿಸಲಾಗಿದೆ ಎಂದು ಹೇಳಿ, ಪರಸ್ಪರ ಸಂಪರ್ಕ ಹೆಚ್ಚಬೇಕಾದ ಅಗತ್ಯ ಇದೆ ಎಂದಿದ್ದರು. ಪ್ರಬಲ ಸಂಪರ್ಕದ ಸಲುವಾಗಿ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಕೈಗೆತ್ತಿಕೊಂಡಿರುವ ಚೀನಾ ಬಿಮ್ ಸ್ಟೆಕ್ ಕೂಟದಲ್ಲಿ ಭಾರತ ಮತ್ತು ಭೂತಾನ್ ಹೊರತು ಪಡಿಸಿ ಇತರ ಎಲ್ಲ ರಾಷ್ಟ್ರಗಳ ಜೊತೆಗೆ ಇದನ್ನು ಜಾರಿಗೊಳಿಸುವ ಆಸಕ್ತಿಯನ್ನು ವ್ಯಕ್ತ ಪಡಿಸಿದೆ. ಬಂಗಾಳ ಕೊಲ್ಲಿಯ ಮೂಲಕ ವಿಶ್ವದ ಬಹುತೇಕ ವಸ್ತುಗಳ ವ್ಯಾಪಾರ ನಡೆಯುವ ಹಿನ್ನೆಲೆಯಲ್ಲಿ ಬಿಮ್ಸ್ಟೆಕ್ ಅಭಿವೃದ್ಧಿಗೆ ಬಹಳಷ್ಟು ರಾಷ್ಟ್ರಗಳು ಆಸಕ್ತಿ ವಹಿಸಿವೆ. ಚೀನಾಕ್ಕೆ ಹಿಂದೂ ಮಹಾಸಾಗರ ಜೊತೆ ಸಂಪರ್ಕ ಹೊಂದಲು ಬಂಗಾಳ ಕೊಲ್ಲೆ ಪ್ರವೇಶದ್ವಾರವಾಗಿದೆ. ಆದರೆ ಭಾರತ ಈ ವಿಚಾರದಲ್ಲಿ ತೀವ್ರ ನಿಗಾ ಇಟ್ಟಿದೆ. ಆಯಕಟ್ಟಿನ ದೃಷ್ಟಿಯಿಂದಲೂ ಬಿಮ್ಸ್ಟೆಕ್ ಅಭಿವೃದ್ಧಿ ಭಾರತದ ಪಾಲಿಗೆ ಗೆಲುವಿನ ಸ್ಥಿತಿ. ಅಭಿವೃದ್ಧಿಯ ಹಾದಿ ಒಮ್ಮೆ ತೆರೆದರೆ ಸಾಕು ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ನಂತಹ ರಾಷ್ಟ್ರಗಳ ಜೊತೆ ನೇರ ಸಂಪರ್ಕ ಸಾಧ್ಯವಾಗಲಿದೆ.
2019: ನವದೆಹಲಿ: ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ’ಪದತ್ಯಾಗ ಪಟ್ಟು’ ಮುಂದುವರೆಸಿದ್ದು
ಪಕ್ಷವು ಇಕ್ಕಟ್ಟಿನಲ್ಲಿ ಸಿಲುಕಿತು. ರಾಹುಲ್ ಅವರು ತಮ್ಮ ಪಟ್ಟು ಮುಂದುವರೆಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪುನಃ ಸಭೆ ಸೇರಬಹುದು ಎಂದು ಮೂಲಗಳು ಹೇಳಿವೆ. ಪಕ್ಷದ ಹಲವಾರು ಹಿರಿಯ ನಾಯಕರು ತಂತಮ್ಮ ಮಕ್ಕಳನ್ನು ಮೇಲೆತ್ತುವ ಕಾರ್ಯದಲ್ಲಿ ಮಗ್ನರಾಗಿದ್ದದ್ದೇ ಪಕ್ಷವು ಅಧೋಗತಿಗೆ ಇಳಿಯಲು ಕಾರಣ ಎಂಬುದಾಗಿ ಸಿಡಿಮಿಡಿ ಗೊಂಡಿರುವ ರಾಹುಲ್ ಗಾಂಧಿಯವರು ೧೯೯೮ರಲ್ಲಿ ತಾಯಿ ಸೋನಿಯಾಗಾಂಧಿಯವರು
ಮಾಡಿದ ರೀತಿಯಲ್ಲಿಯೇ ಪಕ್ಷದ ನಾಯಕರಿಗೆ ಪಾಠ ಕಲಿಸಲು ಇಚ್ಛಿಸಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿದವು. ಪಕ್ಷದ ಪ್ರಧಾನ ಕಾರ್ಯದರ್ಶಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಕಾಂಗ್ರೆಸ್ ಸಂಪರ್ಕ ಪ್ರಮುಖ ರಣದೀಪ್ ಸುರ್ಜೆವಾಲ ಜೊತೆಗೆ ರಾಹುಲ್ ಗಾಂಧಿಯವರು ಮಾತುಕತೆ ನಡೆಸಿದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಜೊತೆಗೂ ರಾಹುಲ್ ಗಾಂಧಿಯವರು ತಮ್ಮ ೧೨, ತುಘ್ಲಕ್ ಲೇನ್ ನಿವಾಸದಲ್ಲಿ ಪ್ರತ್ಯೇಕವಾಗಿ ಬೇಟಿ ಮಾಡಿದ್ದು, ಇನ್ನಷ್ಟು ನಾಯಕರ ಜೊತೆಗೆ ಅವರು ಸಮಾಲೋಚನೆಗಳನ್ನು
ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು. ಯಾರೊಬ್ಬ ನಾಯಕರೂ ಮಾಧ್ಯಮಗಳ ಜೊತೆಗೆ ಮಾತನಾಡದೇ ಇದ್ದರೂ ರಾಜಸ್ಥಾನದ ಉಭಯ ನಾಯಕರ ಉಪಸ್ಥಿತಿಯು ಕೇವಲ ಐದು ತಿಂಗಳ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ವಿಜಯಗಳಿಸಿದ್ದ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕೂಡಾ ಪಡೆಯಲು ವಿಫಲವಾದದ್ದು ಏಕೆ ಎಂಬುದಾಗಿ ಕಾಂಗ್ರೆಸ್ಸಿನ ವರಿಷ್ಠ ನಾಯಕತ್ವ ಪರಿಶೀಲಿಸುತ್ತಿದೆ ಎಂಬುದರ ಸೂಚನೆ ಎಂಬುದಾಗಿ ಮೂಲಗಳು ಹೇಳಿದವು. ಪಕ್ಷದ
ಸಾಧನೆ ಬಗ್ಗೆ ಭ್ರಮನಿರಸನಗೊಂಡಿರುವ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷಾಧ್ಯಕ್ಷ ಪದ ತ್ಯಾಗ ಮಾಡುವ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು.
ಅಪರೂಪದ ಸಿಟ್ಟು ಪ್ರದರ್ಶಿಸಿದ ರಾಹುಲ್ ಗಾಂಧಿಯವರು ಪಕ್ಷದ ಹಿರಿಯ ನಾಯಕರು ಈ ರಾಜ್ಯಗಳಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪಕ್ಷಕ್ಕಿಂತಲೂ ಮೇಲೆ ಇಡುತ್ತಿದ್ದಾರೆ.
ತಮ್ಮ ಮಕ್ಕಳನ್ನು ಗೆಲ್ಲಿಸುವ ವಿಷಯ ಬಿಟ್ಟು ಅದರಿಂದಾಚೆಗೆ ಆಚೆಗೆ ಅವರು ಎಂದೂ ಗಮನ ಹರಿಸಲಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಮೂಲಗಳು ಹೇಳಿದವು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಜೋಧಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ಪುತ್ರ ನಕುಲ್ ಛಿಂದ್ವಾರ ಕ್ಷೇತ್ರದಲ್ಲೂ, ಮಾಜಿ ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿ ಶಿವಗಂಗಾ ಕ್ಷೇತ್ರದಲ್ಲೂ ಗೆದ್ದಿದ್ದಾರೆ. ಹಿಂದಿ ಹೃದಯ ಸ್ಥಾನ ಎಂಬುದಾಗಿ ಪರಿಗಣಿಸಲಾಗಿರುವ ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿನ ಸೋಲಿನ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ವಿಶೇಷ ಗಮನ ಹರಿಸಿದೆ. ಪಕ್ಷದ ಅತ್ಯುನ್ನತ ನಿರ್ಣಾಯಕ ಸಭೆಯಲ್ಲಿ ರಾಹುಲ್ ಗಾಂಧಿಯವರು ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ತಾವು ಪದತ್ಯಾಗ ಮಾಡುವುದಾಗಿಯೂ, ಬದಲಿ ನಾಯಕನನ್ನು ಪಕ್ಷವು ಆಯ್ಕೆ ಮಾಡಿಕೊಳ್ಳಬೇಕು ಎಂಬುದಾಗಿಯೂ ಪ್ರಕಟಿಸಿದ ಮೂರು ದಿನಗಳ ಬಳಿಕ ರಾಹುಲ್ ಗಾಂಧಿಯವರು ಪಕ್ಷದ ಪ್ರಮುಖರ ಜೊತೆಗೆ ಮಂಗಳವಾರ ಮಾತುಕತೆಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಹುಲ್ ಗಾಂಧಿಯವರ ರಾಜೀನಾಮೆ ಕೊಡುಗೆಯನ್ನು ಸರ್ವಾನುಮತದಿಂದ ತಿರಸ್ಕರಿಸಿ ಸಂಘಟನೆಯು ಸಮಗ್ರವಾಗಿ ಪುನಾರಚನೆ ಮಾಡಲು ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿತ್ತು.
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಪಕ್ಷ ಕೇವಲ ೫೨ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದದ್ದು ಪಕ್ಷ ಮತ್ತು ಅದರ ಮುಖ್ಯಸ್ಥ ರಾಹುಲ್ ಗಾಂಧಿಯವರಿಗೆ ಆಘಾತವನ್ನು ಉಂಟು ಮಾಡಿತ್ತು. ಪಕ್ಷದ ಸೋಲಿನ ಹೊಣೆಯನ್ನು ಹೊತ್ತುಕೊಂಡ ರಾಹುಲ್, ದೆಹಲಿ ಮತ್ತು ರಾಜ್ಯಗಳಲ್ಲಿನ ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಹಾಗೂ ಪಕ್ಷದ ಕೈಬಿಟ್ಟರು ಎಂದು ಟೀಕಿಸಿದ್ದರು. ಈ ಅಂಶ ಪ್ರಿಯಾಂಕಾ ಗಾಂಧಿ ವಾದ್ರ ಅವರ ಮಾತುಗಳಲ್ಲಿಯೂ ಪ್ರತಿಧ್ವನಿಸಿತ್ತು.
ಸಹೋದರಿ ಪ್ರಿಯಾಂಕಾ ಅವರ ಜೊತೆಗೆ ಸಭೆಯಿಂದ ಹೊರನಡೆದಿದ್ದ ರಾಹುಲ್ ಗಾಂಧಿಯವರು ಎರಡು ದಿನಗಳ ಕಾಲ ತಮ್ಮ ಎಲ್ಲ ಕಾರ್ಯಕ್ರಮಗಳನ್ನು, ಭೇಟಿಗಳನ್ನು ರದ್ದು ಪಡಿಸಿದ್ದರು. ಅವರು ಪಕ್ಷದ ಖಜಾಂಚಿ ಅಹ್ಮದ್ ಪಟೇಲ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜೊತೆ ಮಾತ್ರವೇ ಮಾತನಾಡಿದ್ದರು. ನಿಲುವು ಬದಲು: ಈ ಮಧ್ಯೆ, ರಾಹುಲ್ ಗಾಂಧಿಯವರು ಮಂಗಳವಾರ ನಡೆಸಿರುವ ಮಾತುಕತೆಗಳು ಅವರ ನಿಲುವಿನಲ್ಲಿ ಆಗಿರುವ ಬದಲಾವಣೆಯ ಸೂಚನೆ ಎಂಬುದಾಗಿ ಕಾಂಗ್ರೆಸ್ ನಾಯಕರೊಬ್ಬರು ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಸೋಮವಾರ ಕೆ.ಸಿ.ವೇಣುಗೋಪಾಲ್ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಬಳಿಕ ಪಕ್ಷದ ಬಗೆಗಿನ ಊಹಾಪೋಹಗಳು ’ಅನಗತ್ಯವಾದವುಗಳು’ ಎಂದು ಹೇಳಿಕೆ ನೀಡಿತ್ತು. ರಾಜಸ್ಥಾನದ ೨೫ ಲೋಕಸಭಾ ಸ್ಥಾನಗಳ ಪೈಕಿ ೨೪ ಸ್ಥಾನಗಳನ್ನು ಬಿಜೆಪಿ ಗೆದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯನ್ನು ಕರೆಸಿಕೊಂಡಿದ್ದರು
ಎಂದು ಜೈಪುರದ ವರದಿಗಳು ಹೇಳಿದವು. ೬ ತಿಂಗಳ ಹಿಂದೆ ರಾಜ್ಯ ಸರ್ಕಾರದ ರಚನೆ ಮಾಡಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಶಕ್ತವಾಗಲಿಲ್ಲ. ಈ ಪರಾಭವದ ಹೊಣೆಗಾರಿಕೆ ನಿಗದಿ ಸಲುವಾಗಿಯೇ ರಾಜ್ಯದ ಉಭಯ ನಾಯಕರನ್ನು ರಾಹುಲ್ ಗಾಂಧಿ ಕರೆಸಿಕೊಂಡಿದ್ದರು
ಎಂದು ವರದಿಗಳು ಹೇಳಿವೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಪುತ್ರ ವೈಭವ್ ಸಲುವಾಗಿ ಅತ್ಯಂತ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ವ್ಯಯಿಸಿದ್ದರು ಎಂಬ ಹಿನ್ನೆಲೆಯಲ್ಲಿ ರಾಹುಲ್ ಈ ಕ್ರಮ ಕೈಗೊಂಡರು ಎನ್ನಲಾಗಿದೆ. ಬಿಜೆಪಿಯು ಕಾಂಗ್ರೆಸ್ ಸರ್ಕಾರವನ್ನು ಬೀಳುವಂತೆ ಮಾಡಿ ಚುನಾವಣೆ ಅನಿವಾರ್ಯವಾಗುವಂತೆ ಮಾಡಬಹುದು ಎಂಬ ಭೀತಿಯೂ ಇದೆ. ಮಂಗಳವಾರ ಬಿಜೆಪಿ ಶಾಸನಕರ್ತ ಭವಾನಿಸಿಂಗ್ ರಜಾವತ್ ಅವರು ಕಾಂಗ್ರೆಸ್ ನಾಯಕರು ಸರ್ಕಾರವನ್ನು ಉರುಳಿಸಲು ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ’ರಾಜ್ಯದಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ ಹೇಗಿದೆ ಎಂದರೆ, ನಾವು ಹೆಚ್ಚು ಕೆಲಸ ಮಾಡಬೇಕಾದ ಅಗತ್ಯವಿಲ್ಲ’ ಎಂದು ಅವರು ಹೇಳಿರುವುದಾಗಿಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಪದತ್ಯಾಗಕ್ಕೆ ರಾಹುಲ್ ಗಾಂಧಿಯವರು ಪಟ್ಟು ಹಿಡಿದಿರುವುದರಿಂದ ಕಾಂಗ್ರೆಸಿಗೆ ಹಾನಿಯಾಗಬಹುದು ಎಂಬ ವಾದವನ್ನು ತಿರಸ್ಕರಿಸಿದ ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಪಕ್ಷವು ವಂಶಾಡಳಿತಕ್ಕೆ ಒಳಪಟ್ಟಿದೆ ಎಂಬ ಬಿಜೆಪಿ ಆಪಾದನೆಗೆ ಇದು ಉತ್ತರ ಎಂದು ಹೇಳಿದರು. ರಾಹುಲ್ ಗಾಂಧಿಯವರು ಇನ್ನೂ ಪದತ್ಯಾಗದ ಪಟ್ಟು ಮುಂದುವರೆಸಿದ್ದಾರೆ ಎಂಬುದು ’ರಾಜೀನಾಮೆ ಇಂಗಿತ ಕುರಿತ ಮೊದಲ ವರದಿ ಕಪೋಲ ಕಲ್ಪಿತವಾದದ್ದಲ್ಲ’ ಎಂಬುದನ್ನು ಸೂಚಿಸಿದೆ ಎಂದು ಕಾಂಗ್ರೆಸ್ ನಾಯಕ ನುಡಿದರು. ‘ಇದು ರಾಹುಲ್ ಗಾಂಧಿಯವರಿಗೆ ಪಕ್ಷದಲ್ಲಿ ಇನ್ನಷ್ಟು ಪ್ರಬಲ ನಾಯಕನಾಗಿ ಬೆಳೆಯಲು ಮತ್ತು ಅರ್ಹತೆಯನ್ನು ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳಲು ಅನುವು ಮಾಡಿಕೊಡಲಿದೆ. ಪಕ್ಷದೊಳಗಿನ ಒತ್ತಡ ತಂತ್ರಗಳಿಂದ ಅವರು ಮುಕ್ತರಾಗಬಲ್ಲರು’ ಎಂದು ಕಾಂಗ್ರೆಸ್ ನಾಯಕ ನುಡಿದರು. ತರೂರ್, ಲಾಲು
ಪ್ರತಿಕ್ರಿಯೆ: ಈ ಮಧ್ಯೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ರಾಹುಲ್ ಗಾಂಧಿಯವರೇ ಸಮರ್ಥ ನಾಯಕ ಎಂಬುದಾಗಿ ಪ್ರತಿಪಾದಿಸಿದರೆ,
ರಾಹುಲ್ ಅವರ ರಾಜೀನಾಮೆ ನಿರ್ಧಾರ ’ಆತ್ಮಹತ್ಯಾಕಾರಿ ನಿರ್ಧಾರ’ ಎಂದು
ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪ್ರತಿಕ್ರಿಯಿಸಿದರು.
2019: ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿದ್ದಿರುವ ಭಾರೀ ಹೊಡೆತ ಒಂದರಲ್ಲಿ ಮುಕುಲ್ ರಾಯ್ ಅವರ ಪುತ್ರ ಸುಭ್ರಾಂಗ್ಶು ಅವರು ಪಶ್ಚಿಮ ಬಂಗಾಳದ ಇಬ್ಬರು ಶಾಸಕರು ಮತ್ತು ೫೦ ಮಂದಿ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ಗಳ ಜೊತೆಗೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು. ಬಿಜ್ಪುರ್ ಟಿಎಂಸಿ ಶಾಸಕ ಸುಭ್ರಾಂಗ್ಶು ರಾಯ್, ಬಿಷ್ಣುಪುರ ಕಾಂಗ್ರೆಸ್ ಶಾಸಕ ತುಷಾರ್ ಕಾಂತಿ ಭಟ್ಟಾಚಾರ್ಯ ಮತ್ತು ಹೇಮ್ತಾಬಾದಿನ ಸಿಪಿಐ(ಎಂ) ಶಾಸಕ ದೇಬೇಂದ್ರನಾಥ ರಾಯ್ ಅವರು ೫೦ ಮಂದಿ ಕೌನ್ಸಿಲರ್ಗಳ ಜೊತೆಗೆ ಕೇಸರಿ ಪಕ್ಷ ಸೇರಿದ್ದಾರೆ ಎಂದು ಮುಕುಲ್ ರಾಯ್ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೈಲಾಶ್ ವಿಜಯವರ್ಗೀಯ ಹೇಳಿದರು. ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ನೀಡಿದ್ದ ಎಚ್ಚರಿಕೆಯನ್ನು ನೆನಪಿಸಿದ ವಿಜಯವರ್ಗೀಯ ಅವರು ’ಇನ್ನಷ್ಟು ಟಿಎಂಸಿ ಸದಸ್ಯರು ಶೀಘ್ರದಲ್ಲೇ ’ಏಳು ಹಂತಗಳಲ್ಲಿ’ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ’ ಎಂದು ಹೇಳಿದರು.
ಚುನಾವಣಾ ಫಲಿತಾಂಶ ಬಂದ ಬಳಿಕ ನಿಮ್ಮ ಶಾಸಕರು ನಿಮ್ಮನ್ನು ತೊರೆಯಲಿದ್ದಾರೆ.
ಅವರ ಪೈಕಿ ೪೦ ಮಂದಿ ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣೆಗೆ ಮುನ್ನ ಬ್ಯಾನರ್ಜಿ ಅವರಿಗೆ ಎಚ್ಚರಿಸಿದ್ದರು. ‘ಮೇ ೨೩ರ ಬಳಿಕ ಬಂಗಾಳದಾದ್ಯಂತ ಕಮಲಗಳು ಅರಳಿದಾಗ, ದೀದಿ (ಬ್ಯಾನರ್ಜಿ) ನೀವೇ ನೋಡುತ್ತೀರಿ- ನಿಮ್ಮ ಶಾಸಕರು ಕೂಡಾ ನಿಮ್ಮನ್ನು ತೊರೆಯಲಿದ್ದಾರೆ ಮತ್ತು ನೀವು ಓಡಿ ಹೋಗಲಿದ್ದೀರಿ. ನಿಮ್ಮ ಸುಮಾರು ೪೦ ಮಂದಿ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ’ ಎಂದು ಮೋದಿಯವರು ಹೂಗ್ಲಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಪಕ್ಷ ವಿರೋಧಿ ಹೇಳಿಕೆಗಾಗಿ ಬಿಜ್ಪುರ ಶಾಸಕ ಸುಭ್ರಾಂಗ್ಶು ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್ ೬ ವರ್ಷಗಳ ಅವಧಿಗೆ ಅಮಾನತುಗೊಳಿಸಿತ್ತು. ಇದನ್ನು ಅನುಸರಿಸಿ ಅವರು ಟಿಎಂಸಿ ಶಾಸಕ ಶಿಭದ್ರ ದತ್ತ ಮತ್ತು ಸುನಿಲ್ ಸಿಂಗ್ ಜೊತೆಗೆ ಸೋಮವಾರ ದೆಹಲಿಗೆ ಹೊರಟಿದ್ದರು.
’ನಾನು
ಈಗ ನಿರಾಳವಾಗಿ ಉಸಿರಾಡುತ್ತಿದ್ದೇನೆ. ಟಿಎಂಸಿಯಲ್ಲಿ ಇತರ ಹಲವರು ಉಸಿರು ಕಟ್ಟಿದ ಪರಿಸ್ಥಿತಿಯಲ್ಲಿ ಇದ್ದಾರೆ’ ಎಂದು
ರಾಯ್ ನುಡಿದರು. ಅವರೆಲ್ಲರೂ ತಮ್ಮ ಹಾದಿಯಲ್ಲಿ ಬರಲಿದ್ದಾರೆ ಎಂದು ಸುಭಾಂಗ್ಶು ಹೇಳಿದ್ದರು.
2019: ನವದೆಹಲಿ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯತೀತ) ಮೈತ್ರಿಕೂಟದಲ್ಲಿ
ಬಿರುಕು ಮೂಡಿರುವ ವರದಿಗಳನ್ನು ಅನುಸರಿಸಿ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಏಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಹೊಣೆ ಹೊತ್ತಿರುವ ಕೆ.ಸಿ. ವೇಣುಗೋಪಾಲ್ ಅವರು ಬಿಕ್ಕಟ್ಟು ಶಮನಗೊಳಿಸುವ ಸಲುವಾಗಿ ಬೆಂಗಳೂರಿನತ್ತ ದೌಡಾಯಿಸಿದರು. ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಬೆಂಗಳೂರಿನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ಕೊಡುವುದರೊಂದಿಗೆ
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನ ಧ್ವನಿಗಳು ಹೆಚ್ಚುತ್ತಿರುವುದನ್ನು ಅನುಸರಿಸಿ ಉಭಯ ನಾಯಕರು ಕರ್ನಾಟಕದತ್ತ ಹೊರಟಿದ್ದಾರೆ.
ದಕ್ಷಿಣ ಭಾರತದಲ್ಲಿನ ಮೈತ್ರಿ ಸರ್ಕಾರವು ಅದು ಆಡಳಿತಕ್ಕೆ ಬಂದಂದಿನಿಂದಲೂ, ಆಗಾಗ ಪತನದ ವರದಿಗಳೊಂದಿಗೆ ಅಸ್ಥಿರ ಸ್ಥಿತಿಯಲ್ಲೇ ಮುಂದುವರೆದವು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲಿ ಕಾಂಗ್ರೆಸ್- ಜೆಡಿ(ಎಸ್) ಮೈತ್ರಿಕೂಟವು ಹೀನಾಯ ಸೋಲು ಅನುಭವಿಸಿದೆ. ರಾಜ್ಯದ ೨೮ ಲೋಕಸಭಾ ಸ್ಥಾನಗಳ ಪೈಕಿ ಮೈತ್ರಿಕೂಟದ ಉಭಯ ಪಕ್ಷಗಳು ತಲಾ ಒಂದೊಂದು ಸ್ಥಾನವನ್ನು ಮಾತ್ರವೇ ಪಡೆಯಲು ಶಕ್ತವಾಗಿವೆ. ಬಿಜೆಪಿ ೨೫ ಸ್ಥಾನಗಳನ್ನು ತನ್ನ ಬಗಲಿಗೆ ಹಾಕಕೊಂಡಿದ್ದರೆ,
ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಮಂಡ್ಯ ಕ್ಷೇತ್ರವನ್ನು ಗೆದ್ದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ರಾಜ್ಯ ಸರ್ಕಾರವು ಜೂನ್ ೧೦ರ ಬಳಿಕ ಪತನಗೊಳ್ಳಲಿದೆ ಎಂದು ಹೇಳಿದರು. ಕಾಂಗೆಸ್ಸಿನ ಇಬ್ಬರು ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಸುಧಾಕರ್ ಅವರು ಎಸ್.ಎಂ. ಕೃಷ್ಣ ಅವರ ಮನೆಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ. ಏನಿದ್ದರೂ, ಈ ಭೇಟಿ ರಾಜಕೀಯ ಉದ್ದೇಶದ್ದಲ್ಲ ಎಂದು ಇಬ್ಬರೂ ಶಾಸಕರು ಹೇಳಿದರು. ಕಾಂಗ್ರೆಸ್ಸಿನ ವರಿಷ್ಠ ನಾಯಕರಾದ ಆಜಾದ್ ಮತ್ತು ವೇಣುಗೋಪಾಲ್ ಅವರ ಭೇಟಿಯ ವೇಳೆಯಲ್ಲೇ ಮೇ ೨೯ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಮೂಲಗಳು ಹೇಳಿದವು. ವರಿಷ್ಠ
ನಾಯಕರು ರಾಜ್ಯದಲ್ಲಿನ ಪಕ್ಷ ನಾಯಕರ ಜೊತೆ ಮಾತುಕತೆ ನಡೆಸಿ ಬಿಕ್ಕಟ್ಟು ಬಗೆ ಹರಿಸಲು ಯತ್ನಿಸುವರು ಎಂದು ಮೂಲಗಳು ಹೇಳಿದವು. ರಾಜ್ಯ
ವಿಧಾನಸಭೆಯಲ್ಲಿ ಬಿಜೆಪಿ ೧೦೫ ಸದಸ್ಯರನ್ನು ಹೊಂದಿ ಏಕೈಕ ದೊಡ್ಡ ಪಕ್ಷವಾಗಿದೆ. ಆಡಳಿತಾರೂಢ ಕಾಂಗ್ರೆಸ್- ಜನತಾದಳ ಮೈತ್ರಿ ಕೂಟವು ೧೧೭ ಸದಸ್ಯರನ್ನು ಹೊಂದಿವೆ. ಈಪೈಕಿ ೭೯ ಮಂದಿ ಕಾಂಗ್ರೆಸ್ ಪಕ್ಷದವರಾಗಿದ್ದರೆ, ೩೭ ಮಂದಿ ಜೆಡಿ(ಎಸ್) ಮತ್ತು ಒಬ್ಬರು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶಾಸಕರಾಗಿದ್ದಾರೆ.
2018: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ
ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಅವರ ಜೊತೆಗೆ ವಿದೇಶಕ್ಕೆ ತೆರಳಿದ ಬೆನ್ನಲ್ಲೇ ಕರ್ನಾಟಕದ
ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಮೇ ೨೩ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ
ಸ್ವೀಕರಿಸಿ ಕಾಂಗ್ರೆಸ್ ಪಕ್ಷದ ಜೊತೆಗಿನ ಮೈತ್ರಿಯೊಂದಿಗೆ ಸರ್ಕಾರ ರಚಿಸಿದ ಕುಮಾರ ಸ್ವಾಮಿ ಅವರು
ಪ್ರಧಾನಿ ಅವರ ಜೊತೆಗೆ ನಡೆಸಿದ ಮೊದಲ ಭೇಟಿ ಇದು.
‘ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯದ ಹೊಸ ಮುಖ್ಯಮಂತ್ರಿಯು ಅಧಿಕಾರ ವಹಿಸಿಕೊಂಡ ಬಳಿಕ
ಪ್ರಧಾನಿಯವರನ್ನು ಭೇಟಿ ಮಾಡುವುದು ಸಂಪ್ರದಾಯ’ ಎಂದು ಕುಮಾರ ಸ್ವಾಮಿ
ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು. ಈ
ಸೋನಿಯಾ ಗಾಂಧಿ ಅವರ ಆರೋಗ್ಯ ತಪಾಸಣೆ ಸಲುವಾಗಿ ಮಧ್ಯೆ ರಾಹುಲ್ ಗಾಂಧಿ ಅವರು ತಾಯಿ ಜೊತೆಗೆ ಈದಿನ
ವಿದೇಶಕ್ಕೆ ತೆರಳಿದರು. ಕಾಂಗ್ರೆಸ್ ನಾಯಕರಿಬ್ಬರೂ ವಿದೇಶಕ್ಕೆ ತೆರಳಿದ ಪರಿಣಾಮವಾಗಿ ಕರ್ನಾಟಕ ಸಚಿವ
ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಇನ್ನಷ್ಟು ವಿಳಂಬಗೊಂಡಿತು. ಉಭಯ ಪಕ್ಷಗಳೂ ಪ್ರಮುಖ ಖಾತೆಗಳಿಗಾಗಿ
ಪಟ್ಟು ಹಿಡಿದಿರುವುದರಿಂದ ಖಾತೆ ಹಂಚಿಕೆ ಕಗ್ಗಂಟಾಗಿ ಉಳಿಯಿತು. ರಾಹುಲ್ ಗಾಂಧಿ ಅವರು ಒಂದು ವಾರದಲ್ಲಿ ವಾಪಸ್ ಬರಲಿದ್ದರೂ,
ಸೋನಿಯಾಗಾಂಧಿ ಅವರು ದೀರ್ಘಕಾಲ ವಿದೇಶದಲ್ಲಿ ಉಳಿಯಬಹುದು ಎಂದು ಮೂಲಗಳು ತಿಳಿಸಿವೆ. ಖಾತೆ ಹಂಚಿಕೆಯು
ಮೂರು-ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಪಕ್ಷ ನಾಯಕರ
ಜೊತೆಗೆ ಭಾನುವಾರ ಸುದೀರ್ಘ ಮಾತುಕತೆ ನಡೆಸಿದರೂ, ಸಭೆ ಅಪೂರ್ಣವಾಗಿತ್ತು . ಕೊಟ್ಟಿದ್ದ ಭರವಸೆಯಂತೆ ರೈತ ಸಾಲಮನ್ನಾ ಮಾಡುವ ಬಗ್ಗೆ ಕೇಳಲಾದ
ಪ್ರಶ್ನೆಗಳಿಗೆ ಕುಮಾರ ಸ್ವಾಮಿ ಅವರು ತಾವು ರಾಜ್ಯದ ಆರೂವರೆ ಕೋಟಿ ಜನರ ಮುಲಾಜಿನಲ್ಲಿ ಅಲ್ಲ, ಕಾಂಗ್ರೆಸ್ಸಿನ
ಮುಲಾಜಿನಲ್ಲಿ ಇದ್ದೇನೆ ಎಂದು ಹೇಳಿದ್ದರು. ‘ನನ್ನದು
ಸ್ವತಂತ್ರ ಸರ್ಕಾರವಲ್ಲ. ರಾಜ್ಯದ ಜನರು ನನ್ನನ್ನು
ಮತ್ತು ನಮ್ಮ ಪಕ್ಷವನ್ನು ತಿರಸ್ಕರಿಸಿದ್ದಾರೆ. ನಾನು ಪ್ರಚಂಡ ಬಹುಮತ ಕೋರಿದ್ದೆ. ರೈತ ನಾಯಕರು ನೀಡುತ್ತಿರುವ
ಹೇಳಿಕೆಗಳನ್ನು ನಾನು ಕೇಳಿದ್ದೇನೆ. ಅವರು ನನಗೆ ಎಷ್ಟು ಬೆಂಬಲ ಕೊಟ್ಟಿದ್ದಾರೆ ಎಂಬುದೂ ಗೊತ್ತು’ ಎಂದೂ ಕುಮಾರ ಸ್ವಾಮಿ ಹೇಳಿದ್ದರು.
ಪ್ರಧಾನಿಯವರನ್ನು
ಭೇಟಿ ಮಾಡುವ ಮುನ್ನ ಕುಮಾರ ಸ್ವಾಮಿ ಅವರು ರಾಷ್ಟ್ರದ ರಾಜಧಾನಿಯಲ್ಲಿ ಉನ್ನತ ಕಾಂಗ್ರೆಸ್ ನಾಯಕರನ್ನು
ಭೇಟಿ ಮಾಡಿ ಅಧಿಕಾರಿ ಹಂಚಿಕೆ ವ್ಯವಸ್ಥೆ ಬಗ್ಗೆ ಮಾತನಾಡಿದ್ದರು. ದೇವೇಗೌಡರ ಸ್ಪಷ್ಟನೆ: ಈ ಮಧ್ಯೆ ಬೆಂಗಳೂರಿನಲ್ಲಿ ಜನತಾದಳ
ಮುಖ್ಯಸ್ಥ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು
ಎಂದು ಒತ್ತಾಯಿಸಿದ್ದು ಕಾಂಗ್ರೆಸ್, ನಾವಲ್ಲ ಎಂದು ಸ್ಪಷ್ಟ ಪಡಿಸಿದರು. ರೈತ ಸಾಲ ಮನ್ನಾ ಭರವಸೆ ಈಡೇರಿಸುವುದು
ಕಷ್ಟಕರ ಎಂಬ ಸುಳಿವನ್ನೂ ಅವರು ನೀಡಿದರು. ಕರ್ನಾಟಕದಲ್ಲಿ ಅಸ್ಥಿರ ವಿಧಾನಸಭೆ ರಚನೆಯ ಬಳಿಕ ಕಾಂಗ್ರೆಸ್
ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ನಾನು ಹೇಳಿದ್ದೆ, ಆದರೆ ಕುಮಾರ ಸ್ವಾಮಿಯವರೇ ಮುಖ್ಯಮಂತ್ರಿಯಾಗಬೇಕು
ಎಂದು ಕಾಂಗ್ರೆಸ್ ಒತ್ತಾಯಿಸಿತು ಎಂದು ದೇವೇಗೌಡ ಹೇಳಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಪುತ್ರ ಕುಮಾರ
ಸ್ವಾಮಿ ಅವರನ್ನು ಬೆಂಬಲಿಸಬೇಕು ಎಂಬ ನಿರ್ಧಾರವನ್ನು ಕಾಂಗ್ರೆಸ್ ವರಿಷ್ಠ ಮಂಡಳಿ ತೆಗೆದುಕೊಂಡಿದೆ
ಎಂದು ಹಿರಿಯ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಅಶೋಕ ಗೆಹ್ಲೋಟ್ ಮತ್ತಿತರರ ಜೊತೆಗಿನ ಒಂದು
ಗಂಟೆಗೂ ಹೆಚ್ಚು ಅವಧಿಯ ಮಾತುಕತೆ ವೇಳೆಯಲ್ಲಿ ತಮಗೆ ತಿಳಿಸಲಾಗಿತ್ತು ಎಂದು ಗೌಡರು ನುಡಿದರು. ‘ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಅಶೋಕ ಗೆಹ್ಲೋಟ್
ಮತ್ತು ನನ್ನ ಮಧ್ಯೆ ಮಾತುಕತೆ ನಡೆದಿತ್ತು. ನೀವೇ ಸರ್ಕಾರ ರಚಿಸಿ, ನನಗೇನೂ ಸಮಸ್ಯೆ ಇಲ್ಲ ಎಂದು ನಾನು
ಹೇಳಿದೆ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಬೇಕು. ಇದು ಹೈಕಮಾಂಡ್ ನಿರ್ಧಾರ ಎಂದು ಅವರು ಒತ್ತಾಯಿಸಿದರು’ ಎಂದು ಮಾಜಿ ಪ್ರಧಾನಿ ಹೇಳಿದರು. ಖಾತೆ ಹಂಚಿಕೆ ಮತ್ತು ರೈತ ಸಾಲ ಮನ್ನಾ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು
ಮುಂದುವರೆದಿರುವ ಹಾಗೂ ಸಂಪುಟ ವಿಸ್ತರಣೆ ವಿಳಂಬಗೊಂಡಿರುವ ವರದಿಗಳ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡ,
ರೈತರಿಗೆ ಪರಿಹಾರ ನೀಡುವುದಾಗಿ ನೀಡಿದ ಭರವಸೆ ಈಡೇರಿಕೆ ಕಷ್ಟ ಎಂದು ಹೇಳಿದರು. ‘೩೭ ಸದಸ್ಯರನ್ನು (ಜೆಡಿಎಸ್ ಶಾಸಕರು) ಇಟ್ಟುಕೊಂಡು ಹೇಗೆ
ಸಾಧ್ಯ? ನಾವು ಇನ್ನೊಂದು ಪಕ್ಷದ ಬೆಂಬಲದೊಂದಿಗೆ ಸರ್ಕಾರ ನಡೆಸಬೇಕು. ನಾವು ಅವರ ಕಾರ್ಯಕ್ರಮಗಳನ್ನೂ
ಮುಂದುವರೆಸಬೇಕು. ಅವರ ಬೆಂಬಲ ಇಲ್ಲದೆ ಮುಂದುವರೆಯುವುದು ಕಷ್ಟ. ಹೀಗಾಗಿಯೇ ಅವರು (ಕುಮಾರ ಸ್ವಾಮಿ)
ಅಗತ್ಯ ಬಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿರುವುದು. ಅವರು ಕಾಂಗ್ರೆಸ್ಸಿನ ಆಶ್ರಯದಲ್ಲಿದ್ದಾರೆ,
ರಾಜ್ಯದ ೬.೫ ಕೋಟಿ ಜನರ ಅಡಿಯಲ್ಲಿ ಅಲ್ಲ. ಅವರು ಸ್ವತಃ ತಮ್ಮನ್ನು ಸಾಂದರ್ಭಿಕ ಶಿಶು ಎಂದು ಕರೆದುಕೊಂಡಿದ್ದಾರೆ
ಎಂದು ದಳ ಮುಖ್ಯಸ್ಥ ಹೇಳಿದರು.
2018: ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿನ
ಸ್ಟೆರ್ ಲೈಟ್ ತಾಮ್ರ ಕರಗಿಸುವ ಘಟಕವನ್ನು ಕಾಯಂ ಆಗಿ ಮುಚ್ಚುವಂತೆ ತಮಿಳುನಾಡು ಸರ್ಕಾರ ಸೋಮವಾರ ಸರ್ಕಾರಿ
ಆದೇಶವನ್ನು ಹೊರಡಿಸಿತು. ಸ್ಟೆರ್ ಲೈಟ್ ಘಟಕ ವಿರೋಧಿ ಪ್ರತಿಭಟನಕಾರರ ಮೇಲೆ ಕಳೆದವಾರ ಪೊಲೀಸರು ಗುಂಡು
ಹಾರಿಸಿದಾಗ ೧೩ ಮಂದಿ ಸಾವನ್ನಪ್ಪಿದ್ದರು. ಪ್ರತಿಭಟನಕಾರರು ಮಾಲಿನ್ಯ ಕಾರಕ ಘಟಕವನ್ನು ಮುಚ್ಚುವಂತೆ
ಒತ್ತಾಯಿಸಲು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ
ಹೊರಟಿದ್ದರು. ಫೆ.29ರ ಮಂಗಳವಾರ ಆರಂಭವಾಗಲಿರುವ ವಿಧಾನಸಭಾ
ಅಧಿವೇಶನದ ಮುನ್ನಾದಿನ ಸರ್ಕಾರಿ ಆದೇಶವನ್ನು ಹೊರಡಿಲಾಗಿದ್ದು, ಗಾಯಾಳುಗಳು ಕಾರ್ಖಾನೆ ಮುಚ್ಚುವ ಕುರಿತ
ಬದ್ಧತೆಯನ್ನು ಈಡೇರಿಸುವಂತೆ ಎಐಎಡಿಎಂಕೆ ಸಚಿವರನ್ನು
ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತು. ಪರಿಸರ ಮತ್ತು ಅರಣ್ಯ
ಇಲಾಖೆಯು ಸರ್ಕಾರಿ ಆದೇಶವನ್ನು ಹೊರಡಿಸಿದೆ. ಜಲ ಕಾಯ್ದೆ ೧೯೭೪ರ ಸೆಕ್ಷನ್ ೧೮(೧)(ಬಿ) ಅಡಿಯಲ್ಲಿ
ವಿಶಾಲ ಸಾರ್ವಜನಿಕ ಹಿತಾಸಕ್ತಿ ಸಲುವಾಗಿ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ. ತಮಿಳುನಾಡು ಮಾಲಿನ್ಯ
ನಿಯಂತ್ರಣ ಮಂಡಳಿಯು ಘಟಕವನ್ನು ಬೀಗಮುದ್ರೆ ಮಾಡಿ ಕಾಯಂ ಆಗಿ ಮುಚ್ಚುವಂತೆ ನೀಡಿದ ನಿರ್ದೇಶನಕ್ಕೆ
ಅನುಗುಣವಾಗಿ ಘಟಕವನ್ನು ಮುಚ್ಚುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ
ಮತ್ತು ಇತರ ಅಧಿಕಾರಿಗಳನ್ನು ರಾಜ್ಯ ಸಚಿವಾಲಯದಲ್ಲಿ ಫೆ.28ರ ಸೋಮವಾರ ಭೇಟಿ ಮಾಡಿದ ಘಟಕದ ಕಾರ್ಯನಿರ್ವಹಣೆಯನ್ನು
ವಿರೋಧಿಸುತ್ತಿದ್ದ ಜನ ಸಮೂಹಗಳು ಘಟಕವನ್ನು ಕಾಯಂ ಆಗಿ ಮುಚ್ಚಬೇಕು ಎಂದು ಆಗ್ರಹಿಸಿದ ಬಳಿಕ ಸರ್ಕಾರಿ
ಆದೇಶ ಹೊರಡಿಸಲಾಯಿತು ಎಂದು ಪ್ರತ್ಯೇಕ ಅಧಿಕೃತ ಪ್ರಕಟಣೆ ಹೇಳಿತು. ವೇದಾಂತ ಲಿಮಿಟೆಡ್ ನ ತಾಮ್ರ ಕರಗಿಸುವ ಘಟಕದ ಕಾರ್‍ಯ ನಿರ್ವಹಣೆಗೆ
ಅನುಮತಿ ನವೀಕರಿಸಲು ಟಿಎನ್ ಪಿಸಿಬಿ ಒಪ್ಪಿಗೆ ನೀಡಿಲ್ಲ ಎಂದು ೨೦೧೮ರ ಏಪ್ರಿಲ್ ೯ರ ದಿನಾಂಕದ ತನ್ನ
ಆದೇಶದಲ್ಲಿ ಸರ್ಕಾರ ತಿಳಿಸಿತು. ಬಳಿಕ ಮೇ ೨೩ರಂದು ಘಟಕಕ್ಕೆ ವಿದ್ಯುತ್ ಸರಬರಾಜು ಕಡಿತಗೊಳಿಸುಂತೆ
ಮತ್ತು ಕಾಯಂ ಆಗಿ ಸ್ಥಗಿತಗೊಳಿಸುವಂತೆ ಕೂಡಾ ಟಿಎನ್ ಪಿಸಿಬಿ ನಿರ್ದೇಶನ ನೀಡಿದೆ. ಮೇ ೨೪ರಂದು ವಿದ್ಯುತ್
ಸರಬರಾಜನ್ನು ಸ್ಥಗಿತಗೊಳಿಸಲಾಯಿತು ಎಂದು ಸರ್ಕಾರ ಹೇಳಿತು. ಘಟಕವು ಪರಿಸರಕ್ಕೆ ಸಂಬಂಧಿಸಿದ ಷರತ್ತುಗಳನ್ನು ಮತ್ತು ರಾಷ್ಟ್ರೀಯ
ಹಸಿರುಪೀಠ ಮತ್ತು ಟಿಎನ್ ಪಿಸಿಬಿ ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿದ ಕಾರಣ ಘಟಕವನ್ನು ಕಾಯಂ
ಆಗಿ ಮುಚ್ಚಬೇಕು ಎಂದು ಘಟಕವನ್ನು ವಿರೋಧಿಸುತ್ತಿದ್ದ ತೂತುಕುಡಿಯ ನಾಗರಿಕರು ಆಗ್ರಹಿಸಿದ್ದಾರೆ ಎಂದು
ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೂ ಪ್ರತ್ಯೇಕ ಹೇಳಿಕೆಯೊಂದರಲ್ಲಿ ತಿಳಿಸಿದರು. ವಿವಿಧ
ಗುಂಪುಗಳೂ ಘಟಕದ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸುವಂತೆ ಮಾಡಿದ ಮನವಿಗಳನ್ನು ಆಧರಿಸಿ ಘಟಕವನ್ನು
ಸಂಪೂರ್ಣವಾಗಿ ಮುಚ್ಚುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಯಿತು ಎಂದೂ ಪಳನಿಸ್ವಾಮಿ ಹೇಳಿದರು. ತಮಿಳುನಾಡು ಸರ್ಕಾರವು ದಿವಂಗತ ಜಯಲಲಿತಾ ಅವರ ಹಾದಿಯಲ್ಲಿ
ನಡೆಯುತ್ತಿದೆ. ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಘಟಕವನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ
ಎಂದು ಅವರು ಹೇಳಿದರು. ಫೆ.27ರ ಭಾನುವಾರ ಮಾಹಿತಿ ತಂತ್ರಜ್ಞಾನ ಸಚಿವ ಕಡಂಬೂರ್ ರಾಜು ಅವರು
ಆಸ್ಪತ್ರೆಯಲ್ಲಿ ಗಾಯಾಳುಗಳು ಮತ್ತು ಅವರ ಬಂಧುಗಳ ಆಕ್ರೋಶಕ್ಕೆ ತುತಾಗಿದ್ದರು.
2018: ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯ
ಉದ್ದೇಶಗಳಿಗಾಗಿ ’ರಾಷ್ಟ್ರೀಯ ಪಕ್ಷಗಳನ್ನು ಸಾರ್ವಜನಿಕ ಅಧಿಕಾರಿಗಳು’ ಎಂಬುದಾಗಿ ಕೇಂದ್ರೀಯ ಮಾಹಿತಿ ಆಯೋಗವು ೨೦೧೩ರ
ಜೂನ್ ತಿಂಗಳಲ್ಲಿ ನೀಡಿದ ಆದೇಶಕ್ಕೆ ತಾನು ಬದ್ಧ ಎಂದು ಚುನಾವಣಾ ಆಯೋಗವು ಸ್ಪಷ್ಟ ಪಡಿಸಿತು. ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಮಾಹಿತಿ ಹಕ್ಕು ಕಾಯ್ದೆಯಡಿ
ನೀಡಬೇಕಾಗಿದ್ದ ಮಾಹಿತಿ ಕುರಿತು ನಿರ್ಧರಿಸುವಾಗ ಚುನಾವಣಾ ಆಯೋಗದ ಮೇಲ್ಮನವಿ ಪ್ರಾಧಿಕಾರಿಯವರು ನೀಡಿದ
ವಿವಾದಾತ್ಮಕ ಆದೇಶ ಕುರಿತ ಪತ್ರಿಕಾ ವರದಿಗಳಿಗೆ ಪ್ರತಿಕ್ರಿಯೆಯಾಗಿ ನೀಡಿದ ಪತ್ರಿಕಾ ಹೇಳಿಕೆಯಲ್ಲಿ
ಚುನಾವಣಾ ಆಯೋಗ ಈ ವಿಚಾರವನ್ನು ತಿಳಿಸಿತು. ‘ಕೇಂದ್ರೀಯ
ಮಾಹಿತಿ ಆಯೋಗದ ನಿರ್ದೇಶನಕ್ಕೆ ಅನುಗುಣವಾಗಿ ರಾಷ್ಟ್ರೀಯ ಪಕ್ಷಗಳು ಪಡೆಯುವ ದೇಣಿಗೆ ಮತ್ತು ಅಡಿಟ್
ಮಾಡಿದ ಲೆಕ್ಕಪತ್ರಗಳನ್ನು ಭಾರತದ ಚುನಾಣಾ ಆಯೋಗಕ್ಕೆ ಸಲ್ಲಿಸಿ ವಾರ್ಷಿಕ ಲೆಕ್ಕ ಪತ್ರ ಸಹಿತವಾದ ಎಲ್ಲ
ಮಾಹಿತಿಯನ್ನೂ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿತು. ಚುನಾವಣಾ
ಬಾಂಡ್ ಗಳಿಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಜೊತೆಗೆ ಚರ್ಚಿಸಿದ ಆಯೋಗ, ಅದು ವಿತ್ತ
ಸಚಿವಾಲಯಕ್ಕೆ ಸಂಬಂಧಪಡುವ ಕಾರಣಕ್ಕಾಗಿ ವಿಷಯವನ್ನು ಅಲ್ಲಿಗೆ ರವಾನಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿತು.
ಪಾರದರ್ಶಕ ಕಾನೂನು ಆಗಿರುವ ಮಾಹಿತಿ ಹಕ್ಕು (ಆರ್ ಟಿಐ) ಕಾಯ್ದೆಯ ವ್ಯಾಪ್ತಿಗೆ ಆರು ರಾಜಕೀಯ ಪಕ್ಷಗಳನ್ನು
ತಂದ ಕೇಂದ್ರೀಯ ಮಾಹಿತಿ ಆಯೋಗದ ನಿರ್ದೇಶನಕ್ಕೆ ವ್ಯತಿರಿಕ್ತವಾದ ನಿಲುವು ತಳೆದಿದ್ದ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆ
ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತ್ತು. ೨೦೧೩ರ
ಜೂನ್ ತಿಂಗಳಲ್ಲಿ ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ತನ್ನ ಆದೇಶದ ಮೂಲಕ ಪಾರದರ್ಶಕ ಕಾಯ್ದೆಯ ವ್ಯಾಪ್ತಿಗೆ
ತಂದಿದ್ದ ಆರು ರಾಜಕೀಯ ಪಕ್ಷಗಳು ಸಂಗ್ರಹಿಸಿದ ದೇಣಿಗೆ ಬಗ್ಗೆ ಆರ್ ಟಿಐ ಅರ್ಜಿದಾರರೊಬ್ಬರು ಮಾಡಿದ
ಮನವಿ ಬಗ್ಗೆ ವಿವಾದಾತ್ಮಕ ಆದೇಶವನ್ನು ಚುನಾವಣಾ ಆಯೋಗ ನೀಡಿತ್ತು. ‘ಕೋರಲಾದ
ಮಾಹಿತಿ ಆಯೋಗದಲ್ಲಿ ಲಭ್ಯವಿಲ್ಲ. ಇದು ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟದ್ದಾಗಿದ್ದು, ಅವರು ಆರ್ ಟಿಐ
ವ್ಯಾಪ್ತಿಯಿಂದ ಹೊರಗಿವೆ. ಅವುಗಳು ೨೦೧೭-೧೮ರ ವಿತ್ತ ವರ್ಷದಲ್ಲಿ ಚುನಾವಣಾ ಬಾಂಡ್ ಗಳ ಮೂಲಕ ಸಂಗ್ರಹಿಸಿದ
ದೇಣಿಗೆಯ ವಿವರಗಳನ್ನು ಸಲ್ಲಿಸಬಹುದಾಗಿದ್ದು ಅದಕ್ಕೆ ೨೦೧೮ರ ಸೆಪ್ಟೆಂಬರ್ ೩೦ರ ವರೆಗೆ ಗಡುವು ಇದೆ’ ಎಂದು ಚುನಾವಣಾ ಆಯೋಗದ ಮೇಲ್ಮನವಿ ಪ್ರಾಧಿಕಾರಿಯು ಆರ್‌ಟಿಐ ಅರ್ಜಿದಾರನ ಅರ್ಜಿಯನ್ನು ಇತ್ಯರ್ಥ
ಪಡಿಸಿದ ತನ್ನ ಆದೇಶದಲ್ಲಿ ತಿಳಿಸಿತ್ತು. ಪುಣೆ ಮೂಲದ
ವಿಹಾರ್ ಧ್ರುವ ಅವರು ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎನ್ ಸಿಪಿ, ಸಿಪಿಐ ಮತ್ತು ಸಿಪಿಐ(ಎಂ) ಈ
ಆರು ರಾಷ್ಟ್ರೀಯ ಪಕ್ಷಗಳು ಮತ್ತು ನೂತನ ಚುನಾವಣಾ ಬಾಂಡ್ ಮೂಲಕ ರಾಷ್ಟ್ರೀಯ ಪಕ್ಷಗಳ ಪಟ್ಟಿಗೆ ಸೇರ್ಪಡೆಯಾಗಿರುವ
ಸಮಾಜವಾದಿ ಪಕ್ಷ ಸಂಗ್ರಹಿಸಿದ ದೇಣಿಗೆಯ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೋರಿದ್ದರು. ಚುನಾವಣಾ
ಆಯೋಗದಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರಿಯಾಗಿರುವ ಹಿರಿಯ ಪ್ರಿನ್ಸಿಪಲ್ ಕಾರ್‍ಯದರ್ಶಿ ಕೆ.ಎಫ್.
ವಿಲ್ಫ್ರೆಡ್ ಅವರು ತಮ್ಮ ಆದೇಶದಲ್ಲಿ ತಾವು ಸಿಪಿಐಒ ಅವರು ತಳೆದ ಅಭಿಪ್ರಾಯವನ್ನು ಒಪ್ಪುವುದಾಗಿ ಆದೇಶದಲ್ಲಿ
ಬರೆದಿದ್ದರು. ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎನ್
ಸಿಪಿ, ಸಿಪಿಐ ಮತ್ತು ಸಿಪಿಐ(ಎಂ) ಈ ಆರು ರಾಷ್ಟ್ರೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ
ಬರುತ್ತವೆ ಎಂದು ಕೇಂದ್ರೀಯ ಮಾಹಿತಿ ಆಯೋಗದ ಪೂರ್ಣ ಪೀಠವು ಈ ಪಕ್ಷಗಳಿಗೆ ಸಂಬಂಧಿಸಿದಂತೆ ಮಾಹಿತಿ
ಕೋರಿದ್ದ ಅರ್ಜಿದಾರರ ಅರ್ಜಿಯನ್ನು ಇತ್ಯರ್ಥ ಪಡಿಸುತ್ತಾ ೨೦೧೩ರ ಜೂನ್ ೩ರಂದು ತೀರ್ಪು ನೀಡಿತ್ತು.
೨೦೧೬ರ ಸೆಪ್ಟೆಂಬರ್ ತಿಂಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನೂ ರಾಷ್ಟ್ರೀಯ ಪಕ್ಷವಾಗಿ ಮಾನ್ಯ ಮಾಡಲಾಗಿದೆ.
ಕೇಂದ್ರೀಯ ಮಾಹಿತಿ ಆಯೋಗದ ಪೂರ್ಣಪೀಠದ ಈ ಆದೇಶವನ್ನು ಯಾವುದೇ ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿಲ್ಲ.
ಆದರೆ ರಾಜಕೀಯ ಪಕ್ಷಗಳು ಕೇಂದ್ರೀಯ ಮಾಹಿತಿ ಆಯೋಗದ ನಿರ್ದೇಶನದ ಪ್ರಕಾರ ಮಾಹಿತಿ ಹಕ್ಕು ಕಾಯ್ದೆಯ
ಅಡಿ ಬಂದ ಅರ್ಜಿಗಳಿಗೆ ಉತ್ತರ ನೀಡಲು ನಿರಾಕರಿಸಿವೆ. ಹಲವಾರು ಮಂದಿ ಮಾಹಿತಿ ಹಕ್ಕು ಕಾರ್‍ಯಕರ್ತರು
ಸಿಐಸಿ ಆದೇಶವನ್ನು ರಾಜಕೀಯ ಪಕ್ಷಗಳು ಪಾಲಿಸುತ್ತಿಲ್ಲ ಎಂಬ ನೆಲೆಯಲ್ಲಿ ಸುಪ್ರೀಂಕೋರ್ಟಿಗೆ ಅರ್ಜಿ
ಸಲ್ಲಿಸಿದ್ದು, ವಿಷಯ ವಿಚಾರಣೆಗೆ ಬಾಕಿ ಉಳಿದಿದೆ.
ಮಾಹಿತಿ
ಹಕ್ಕು ಕಾಯ್ದೆಯ ಪ್ರಕಾರ ಕೇಂದ್ರೀಯ ಮಾಹಿತಿ ಆಯೋಗವು ಏಕೈಕ ಅಂತಿಮ ಮೇಲ್ಮನವಿ ಪ್ರಾಧಿಕಾರಿಯಾಗಿದ್ದು
ಯಾವುದಾದರೂ ಸಂಘಟನೆಯು ಮಾಹಿತಿ ಹಕ್ಕು ಕಾಯ್ದೆಯ ಮಾನದಂಡಗಳ ಪ್ರಕಾರ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆಯೇ
ಎಂದು ನಿರ್ಧರಿಸುವ ಮತ್ತು ಘೋಷಿಸುವ ಅಧಿಕಾರವನ್ನು ಹೊಂದಿದೆ. ಆರು ರಾಜಕೀಯ ಪಕ್ಷಗಳು ಸಾರ್ವಜನಿಕ ಅಧಿಕಾರಿಗಳು ಎಂಬುದಾಗಿ
ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಘೋಷಿಸಿರುವಾಗ,
ಈ ಸಿಐಸಿ ಆದೇಶವನ್ನು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ಗಳು ರದ್ದುಪಡಿಸದ ವಿನಃ ಚುನಾವಣಾ ಆಯೋಗವು
ಅದಕ್ಕೆ ವ್ಯತಿರಿಕ್ತವಾದ ನಿಲುವು ತಳೆಯುವಂತಿಲ್ಲ, ಹೀಗಾಗಿ ಚುನಾವಣಾ ಆಯೋಗದ ಈ ಆದೇಶಕ್ಕೆ ಯಾವುದೇ
ಮಾನ್ಯತೆಯೂ ಇಲ್ಲ ಎಂದು ಮಾಜಿ ಮುಖ್ಯ ಮಾಹಿತಿ ಆಯುಕ್ತ ಎ.ಎನ್. ತಿವಾರಿ ಹೇಳಿದ್ದರು. ಚುನಾವಣಾ
ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿಯು ಈ ಆದೇಶ ನೀಡುವಾಗ ತನ್ನ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು
ಖ್ಯಾತ ಆರ್ ಟಿಐ ಕಾರ್‍ಯಕರ್ತ ವೆಂಕಟೇಶ ನಾಯಕ್ ಹೇಳಿದ್ದರು. ರಾಜಕೀಯ ಪಕ್ಷಗಳು ಪಾಲಿಸದೇ ಇದ್ದರೂ, ಆರು ರಾಷ್ಟ್ರೀಯ ಪಕ್ಷಗಳನ್ನು
ಆರ್ ಟಿಐ ವ್ಯಾಪ್ತಿಗೆ ತಂದ ೨೦೧೩ರ ಜೂನ್ ತಿಂಗಳ ಸಿಐಸಿ ಆದೇಶವು ಊರ್ಜಿತದಲ್ಲೇ ಇದೆ. ಅದನ್ನು ಯಾವುದೇ
ನ್ಯಾಯಾಲಯ ರದ್ದು ಪಡಿಸಿಲ್ಲ ಅಥವಾ ಅದಕ್ಕೆ ತಡೆಯಾಜ್ಞೆಯನ್ನೂ ನೀಡಿಲ್ಲ. ಆದ್ದರಿಂದ ರಾಷ್ಟ್ರೀಯ ರಾಜಕೀಯ
ಪಕ್ಷಗಳಿಗೆ ಸಂಬಂಧ ಪಟ್ಟಂತೆ ಅವು ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುತ್ತವೆ’ ಎಂದು ನಾಯಕ್ ಹೇಳಿದ್ದರು. ಭಾರತದ ಚುನಾವಣಾ ಆಯೋಗದ ಬಳಿ ಇರುವ ರಾಜ್ಯ ಹಾಗೂ ರಾಷ್ಟ್ರೀಯ
ಪಕ್ಷಗಳ ಎಲ್ಲ ಮಾಹಿತಿ ಕೂಡಾ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ. ಚುನಾವಣಾ ಆಯೋಗದ
ಸಿಪಿಐಒ ಅವರು ರಾಜಕೀಯ ಪಕ್ಷಗಳು ಆರ್ ಟಿಐ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ನಿಲುವು ತಳೆದು
ಮಾಹಿತಿ ನಿರಾಕರಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದರು. ಆದೇಶದಲ್ಲಿನ ವಿವಾದಾತ್ಮಕ ಹೇಳಿಕೆ
ಬಗ್ಗೆ ದೂರವಾಣಿ ಮೂಲಕ ವಿಚಾರಿಸಿದಾಗ ವಿಲ್ಫ್ರೆಡ್ ಅವರು, ಎಲ್ಲ ರಾಜಕೀಯ ಪಕ್ಷಗಳು ಆರ್ ಟಿಐ ಅಡಿ
ಬರುವುದಿಲ್ಲ ಎಂಬುದು ತಮ್ಮ ಅರ್ಥವಾಗಿತ್ತು ಎಂದು ಹೇಳಿದ್ದರು. ಆದರೆ ಆರ್ ಟಿಐ ಅರ್ಜಿಯು ಆರ್ ಟಿಐ
ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಆರು ರಾಜಕೀಯ ಪಕ್ಷಗಳಿಗೆ ಸಂಬಂಧ ಪಟ್ಟದ್ದಾಗಿತ್ತು ಎಂದಾಗ ಅವರು ಯಾವುದೇ
ವಿವರಣೆಯನ್ನೂ ನೀಡಿರಲಿಲ್ಲ.
2018: ನವದೆಹಲಿ: ಕಾಂಗ್ರೆಸ್ ನಾಯಕ
ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿಗೆ ಸಂಬಂಧಿಸಿದಂತೆ ಶಶಿ ತರೂರ್ ವಿರುದ್ಧ ಸಲ್ಲಿಸಲಾಗಿರುವ
ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಪರಿಗಣಿಸುವ
ಕುರಿತ ತನ್ನ ತೀರ್ಪನ್ನು ದೆಹಲಿ ನ್ಯಾಯಾಲಯವು ಕಾಯ್ದಿರಿಸಿತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್
ವಿಶಾಲ್ ಅವರು ಪ್ರಕರಣದಲ್ಲಿ ಪ್ರಾಸೆಕ್ಯೂಟರ್ ಅವರು ಸಂಕ್ಷಿಪ್ತ ವಾದಮಂಡನೆ ಮಾಡಿದ ಬಳಿಕ ತೀರ್ಪನ್ನು
ಜೂನ್ ೫ಕ್ಕೆ ಕಾಯ್ದಿರಿಸಿದರು. ಸುನಂದಾ ಪುಷ್ಕರ್
ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿ, ಹಿಂಸೆ ನೀಡಿದ ಆರೋಪವನ್ನು ಸಾಬೀತು ಪಡಿಸುವಂತಹ ಸಾಕಷ್ಟು
ಸಾಕ್ಷ್ಯಾಧಾರಗಳಿವೆ ಎಂದು ಪ್ರಾಸೆಕ್ಯೂಟರ್ ಅವರು ವಾದಿಸಿದರು. ಸಾವಿಗೆ
ಕಾರಣವೇನು ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ವಿಷ ಪ್ರಾಷನ ಎಂದು ನುಡಿದ ಪ್ರಾಸೆಕ್ಯೂಟರ್ ’ಈ ವಿಚಾರ
ಇನ್ನೂ ತನಿಖೆಯಲ್ಲಿದೆ’ ಎಂದು ಹೇಳಿದರು. ಪ್ರಕರಣದ ವಿಚಾರಣೆ ವೇಳೆಯಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್
ಸ್ವಾಮಿ ಅವರೂ ನ್ಯಾಯಾಲಯದಲ್ಲಿ ಹಾಜರಿದ್ದರು. ಆದರೆ ವಿಷಯಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ವಿಚಾರವನ್ನೂ
ಮಂಡಿಸಲಿಲ್ಲ. ದೆಹಲಿ ಪೊಲೀಸರು ತರೂರ್ ಅವರ ವಿರುದ್ಧ
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೪೯೮ಎ (ಪತಿ ಅಥವಾ ಅವರ ಬಂಧುವು ಮಹಿಳೆಯನ್ನು ಕ್ರೌರ್‍ಯಕ್ಕೆ
ಒಳಪಡಿಸುವುದು) ಮತ್ತು ಸೆಕ್ಷನ್ ೩೦೬ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ದೋಷಾರೋಪ ಹೊರಿಸಿದರು. ಸುನಂದಾ ಪುಷ್ಕರ್ ಅವರು ೨೦೧೪ರ ಜನವರಿ ೧೭ರಂದು ರಾಜಧಾನಿಯ
ಪಂಚತಾರಾ ಹೋಟೆಲ್ ಒಂದರಲ್ಲಿ ತಮ್ಮ ಕೊಠಡಿಯಲ್ಲಿ ಸತ್ತು ಬಿದ್ದಿದ್ದುದು ಪತ್ತೆಯಾಗಿತ್ತು. ಪೊಲೀಸರು
೨೦೧೫ರ ಜನವರಿ ೧ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೨ರ ಅಡಿಯಲ್ಲಿ
ಎಫ್ ಐಆರ್ ದಾಖಲಿಸಿದ್ದರು.
2018: ನವದೆಹಲಿ: ತಮಗೆ ಉತ್ತರ ಪ್ರದೇಶ
ಸರ್ಕಾರದಿಂದ ಮಂಜೂರಾದ ಅಧಿಕೃತ ನಿವಾಸಗಳನ್ನು ತೆರವುಗೊಳಿಸಲು ಸೂಕ್ತ ಕಾಲಾವಕಾಶ ನೀಡುವಂತೆ ಕೋರಿ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್
ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಮುಖ್ಯಮಂತ್ರಿ
ಹುದ್ದೆಯಿಂದ ಕೆಳಗಿಳಿದ ಬಳಿಕ ಸರ್ಕಾರಿ ಬಂಗಲೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಅಧಿಕಾರ
ಮುಗಿದ ಬಳಿಕ ಮುಖ್ಯಮಂತ್ರಿ ಜನ ಸಾಮಾನ್ಯನಿಗೆ ಸಮಾನ ಎಂದು ಸುಪ್ರೀಂಕೋರ್ಟ್ ಮೇ ೭ರಂದು ತೀರ್ಪು ನೀಡಿತ್ತು. ಇಬ್ಬರೂ
ಮಾಜಿ ಮುಖ್ಯಮಂತ್ರಿಗಳು ಈ ಮುನ್ನ ಲಕ್ನೋದಲ್ಲಿನ ತಮ್ಮ ಅಧಿಕೃತ ನಿವಾಸಗಳನ್ನು ತೆರವುಗೊಳಿಸಿ ಖಾಸಗಿ
ವಸತಿಗಳಿಗೆ ಸ್ಥಳಾಂತರಿಸಲು ಕನಿಷ್ಠ ೨ ವರ್ಷಗಳ ಕಾಲಾವಕಾಶ ನೀಡುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರದ
ಎಸ್ಟೇಟ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ತಮ್ಮ ವಕೀಲ ಗರೀಮಾ ಬಜಾಜ್ ಅವರ ಮೂಲಕ ಸುಪ್ರೀಂಕೋರ್ಟಿಗೆ
ಮನವಿ ಸಲ್ಲಿಸಿದ ಉಭಯ ನಾಯಕರೂ ವಿವಿಧ ಕಾರಣಗಳನ್ನು ನೀಡಿ ತಮಗೆ ಅಧಿಕೃತ ಬಂಗಲೆ ತೆರವುಗೊಳಿಸಲು ಸೂಕ್ತ
ಕಾಲಾವಕಾಶ ಕೊಡುವಂತೆ ಕೋರಿದರು. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ತಮಗೆ ಸಾಕಷ್ಟು ಕಾಲಾಕಾಶ ನೀಡುವಂತೆ
ಮುಲಾಯಂ ಸಿಂಗ್ ಅವರು ಮನವಿ ಮಾಡಿದ್ದರೆ, ತಮ್ಮ ಕುಟುಂಬದ ಭದ್ರತೆಯ ವಿಚಾರವನ್ನು ಪರಿಗಣಿಸುವಂತೆ ಅಖಿಲೇಶ್
ಯಾದವ್ ಕೋರಿದರು. ಅರ್ಜಿದಾರರು ಮತ್ತು ಕುಟುಂಬ ಸದಸ್ಯರ ಭದ್ರತೆಯನ್ನು ಪರಿಗಣಿಸಿ ಪರ್ಯಾಯ ವಸತಿ ವ್ಯವಸ್ಥೆ
ಮಾಡಿಕೊಳ್ಳಲು ಸೂಕ್ತ ಕಾಲಾವಕಾಶ ಕೊಡುವಂತೆ ನಾವು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದೇವೆ ಎಂದು ಅಖಿಲೇಶ್
ಅವರು ತಮ್ಮ ಮನವಿಯಲ್ಲಿ ಕೋರಿದರು. ಅರ್ಜಿದಾರರ ವಯಸ್ಸು, ಅನಾರೋಗ್ಯ ಮತ್ತು ಭದ್ರತೆಯನ್ನು ಪರಿಗಣಿಸಿ ಪರ್‍ಯಾಯ ವ್ಯವಸ್ಥೆ ಮಾಡಿಕೊಳ್ಳಲು
ಸೂಕ್ತ ಕಾಲವಕಾಶ ಮಂಜೂರು ಮಾಡುವಂತೆ ಮುಲಾಯಂ ಸಿಂಗ್ ಅವರ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಹುದ್ದೆ
ತೆರವುಗೊಳಿಸಿದ ಬಳಿಕವೂ ಅಧಿಕೃತ ನಿವಾಸಗಳನ್ನು ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿಗಳಿಗೆ ಅವಕಾಶ
ಕಲ್ಪಿಸಿ ಅಖಿಲೇಶ್ ಯಾದವ್ ಸರ್ಕಾರವು ಶಾಸನಕ್ಕೆ ತಂದಿದ್ದ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಮೇ
೭ರ ತನ್ನ ತೀರ್ಪಿನಲ್ಲಿ ರದ್ದು ಪಡಿಸಿದ ಹಿನ್ನೆಲೆಯಲ್ಲಿ ತಂದೆ-ಮಗನ ಜೋಡಿ ಈ ಮನವಿಗಳನ್ನು ಮಾಡಿತು. ಸುಪ್ರೀಂಕೋರ್ಟ್ ತೀರ್ಪು ಬಂದ ಬೆನ್ನಲ್ಲೇ ಹಿಂದೆ ರಾಜ್ಯದ
ಮುಖ್ಯಮಂತ್ರಿಗಳಾಗಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮತ್ತು ರಾಜಸ್ಥಾನ ರಾಜ್ಯಪಾಲ ಕಲ್ಯಾಣ
ಸಿಂಗ್ ಅವರು ಎಸ್ಟೇಟ್ ಇಲಾಖೆಗೆ ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸುವ ಇಂಗಿತವನ್ನು ನೀಡಿದ್ದರು.
ರಾಜನಾಥ್ ಸಿಂಗ್ ಮತ್ತು ಕಲ್ಯಾಣಸಿಂಗ್ ಸೇರಿದಂತೆ
ರಾಜ್ಯದ ೬ ಮಂದಿ ಮಾಜಿ ಮುಖ್ಯಮಂತ್ರಿಗಳಿಗೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ೧೫ ದಿನಗಳ ಒಳಗಾಗಿ
ತಮ್ಮ ಅಧಿಕೃತ ಬಂಗಲೆಗಳನ್ನು ತೆರವುಗೊಳಿಸುವಂತೆ ಎಸ್ಟೇಟ್ ಇಲಾಖೆ ಸೂಚಿಸಿತ್ತು. ಏನಿದ್ದರೂ ಮಾಜಿ
ಮುಖ್ಯಮಂತ್ರಿ ಮಾಯವತಿ ಅವರು ಇತ್ತೀಚೆಗೆ ಲಕ್ನೋದಲ್ಲಿನ ತಮ್ಮ ಅಧಿಕೃತ ನಿವಾಸದ ಹೊರಗೆ ಪಕ್ಷದ ಸ್ಥಾಪಕ
’ಕಾನ್ಶಿರಾಮ್ ಸ್ಮಾರಕ’ ಎಂಬ ಫಲಕವನ್ನು ಹಾಕಿದ್ದಾರೆ.
ನಾರಾಯಣ ದತ್ತ ತಿವಾರಿ ಅವರ ಪತ್ನಿ ತಿವಾರಿ ಅವರ ಅಸ್ವಸ್ಥತೆಯನ್ನು ಪರಿಗಣಿಸಿ ಕನಿಷ್ಠ ಒಂದು ವರ್ಷದ
ಕಾಲಾವಕಾಶ ಕೋರಿದ್ದರು. ಲೋಕ ಪ್ರಹರಿ ಸರ್ಕಾರೇತರ
ಸಂಘಟನೆ ಅಖಿಲೇಶ ಯಾದವ್ ಸರ್ಕಾರವು ಉತ್ತರ ಪ್ರದೇಶ ಸಚಿವರು (ವೇತನ, ಭತ್ಯೆ ಮತ್ತು ಇತರ ಅವಕಾಶಗಳು)
ಕಾಯ್ದೆ ೧೯೮೧ಕ್ಕೆ ತಂದ ತಿದ್ದುಪಡಿಗಳನ್ನು ಸುಪ್ರೀಂರ್ಟಿನಲ್ಲಿ ಪ್ರಶ್ನಿಸಿತ್ತು. ಅರ್ಜಿಯನ್ನು ಸುಪ್ರೀಂಕೋರ್ಟ್
ಪುರಸ್ಕರಿಸಿತ್ತು. ತನ್ನ ೨೯ ಪುಟಗಳ ತೀರ್ಪಿನಲ್ಲಿ ಸುಪ್ರಿಂಕೋರ್ಟ್ ರಾಷ್ಟ್ರದ ಜನರಿಗೆ ಸೇರಿದ ಸರ್ಕಾರಿ
ಬಂಗಲೆಗಳಂತಹ ಆಸ್ತಿಯನ್ನು ಮುಖ್ಯಮಂತ್ರಿಯು ನಿರಂತರವಾಗಿ ಇಟ್ಟುಕೊಳ್ಳುವಂತಿಲ್ಲ. ಹುದ್ದೆಯಿಂದ ಕೆಳಗಿಳಿದ
ಬಳಿಕ ಆತನೂ ಇತರ ಶ್ರೀಸಾಮಾನ್ಯನಿಗೆ ಸಮಾನವಾಗುತ್ತಾನೆ ಎಂದು ಹೇಳಿ, ತಿದ್ದುಪಡಿಗಳನ್ನು ರದ್ದು ಪಡಿಸಿತ್ತು.
2018: ಬೆಂಗಳೂರು: ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ (56)
ಅವರು ಈದಿನ ಮುಂಜಾನೆ
ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಹಲವಾರು ಪ್ರಶಸ್ತಿ ಪುರಸ್ಕೃತರಾದ
ಕೇಶವ ವಿಟ್ಲ ಅವರು ಕೆಲ ಸಮಯದಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು. ಅವರ
ಸ್ಥಿತಿ ಸುಧಾರಿಸಿತ್ತು. ಆದರೆ ಈ ದಿನ ನಸುಕಿನಲ್ಲಿ ಹೃದಯಾಘಾತ ಸಂಭವಿಸಿ ಅವರು
ನಿಧನರಾದರು. ಕಳೆದ ವರ್ಷ ಅವರು ಶ್ರಮವಹಿಸಿ ಸಿದ್ದಪಡಿಸಿದ್ದ ಕರ್ನಾಟಕದ ನೈಸರ್ಗಿಕ ಸಂಪತ್ತಿನ ಕಾಫಿ ಟೇಬಲ್ ಪುಸ್ತಕ "ಫೆಸೆಟ್ಸ್ ಆಫ್ ಕರ್ನಾಟಕ " ಛಾಯಾಚಿತ್ರ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು. ಈ ಪುಸ್ತಕ ರಾಜ್ಯದಾದ್ಯಂತ ಭಾರೀ ಜನಮನ್ನಣೆ ಪಡೆದಿತ್ತು. ಗ್ರಾಮೀಣ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ
1961ರಲ್ಲಿ ಜನಿಸಿದ್ದ ಕೇಶವ ವಿಟ್ಲ 1984ರಲ್ಲಿ ಮುಂಗಾರು ಪತ್ರಿಕೆಯ ಮೂಲಕ ಪತ್ರಿಕಾ ಛಾಯಾಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. 1996ರಲ್ಲಿ ಕೇಶವ ವಿಟ್ಲ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಬಳಗವನ್ನು
ಸೇರಿ ಹಲವು ವರ್ಷಗಳ ಕಾಲ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿ, ತದನಂತರ ಪ್ರೀಲಾನ್ಸ್ ಪತ್ರಿಕಾ ಛಾಯಾಗ್ರಾಹಕರಾಗಿ ದಿ ಟೆಲಿಗ್ರಾಫ್ , ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಿಗೆ ಛಾಯಾಚಿತ್ರಗಳನ್ನು ಪೂರೈಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಠ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್ನ ಜೀವಮಾನ ಸಾಧನೆಗಾಗಿ ಪ್ರಶಸ್ತಿ , ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಬಲಿಯೇಂದ್ರ ಪುರಸ್ಕಾರ , ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರಾಗಿರುವ ಕೇಶವ ವಿಟ್ಲ ಅವರು ಹಲವು ಏಕವ್ಯಕ್ತಿ ಛಾಯಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದರು
2016: ಬೆಂಗಳೂರು: ಇತ್ತೀಚೆಗಷ್ಟೇ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಪರೀಕ್ಷಿಸಿರುವ ಇಸ್ರೋ ಈಗ ಮತ್ತೊಂದು ಸಾಧನೆ ಮಾಡಲು ಸಿದ್ಧತೆ ನಡೆಸಿದೆ. ಜೂನ್ ತಿಂಗಳ ಕೊನೆಯಲ್ಲಿ ಒಂದೇ ಸಲಕ್ಕೆ 22 ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸುತ್ತಿದೆ. ಜೂನ್ ತಿಂಗಳ ಕೊನೆಯಲ್ಲಿ ಉಡಾವಣೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು
ಇಸ್ರೋ ತಿಳಿಸಿತು.
ಒಂದೇ ಸಲಕ್ಕೆ 22 ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು. ಭಾರತದ 3 ಮತ್ತು ಅಮೆರಿಕ, ಕೆನಡಾ, ಇಂಡೋನೇಷ್ಯಾ, ಜರ್ಮನಿ ಹಾಗೂ ಇತರ ರಾಷ್ಟ್ರಗಳ 19 ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಪಿಎಸ್ಎಲ್ ಸಿ-34 ರಾಕೆಟ್ ಅನ್ನು ಸಿದ್ಧ ಪಡಿಸಲಾಗುತ್ತಿದೆ ಎಂದು ಇಸ್ರೋದ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದರು. ಇದಕ್ಕೂ ಮುನ್ನ 2008ರಲ್ಲಿ ಇಸ್ರೋ ಒಂದೇ ಸಲಕ್ಕೆ 10 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.
2016: ಬರೇಲಿ: ಭಾರತದಲ್ಲಿ ಬುಲೆಟ್ ಟ್ರೈನ್ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಅಂಗವಾಗಿ ಭಾರತೀಯ ರೈಲ್ವೆಯು ಸ್ಪಾನಿಶ್ನ ಟಾಲ್ಗಾ ಕೋಚ್ಗಳನ್ನು ಬಳಸಿ ಇಝಾತ್ ನಗರ್ ಮತ್ತು ಭೋಜ್ಪುರ ನಡುವೆ ನಡೆಸಿದ ಬುಲೆಟ್ ಟ್ರೈನಿನ ಪರೀಕ್ಷಾ ಓಡಾಟ ಯಶಸ್ವಿಯಾಯಿತು. ಸ್ಪಾನಿಶ್ನ ಟಾಲ್ಗಾ ಕೋಚ್ಗಳನ್ನು ಭಾರತೀಯ ರೈಲ್ವೆ ಇಂಜಿನ್ ಉಪಯೋಗಿಸಿ ಓಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಮೇ 29ರಿಂದ ಜೂನ್12ರ ವರೆಗೆ ಬರೇಲಿ ಹಾಗೂ ಮೊರಾದಾಬಾದ್ ನಡುವೆ ಕೋಚ್ಗಳ ವೇಗ ಪರೀಕ್ಷೆ ನಡೆಯಲಿದ್ದು ಗಂಟೆಗೆ ಕನಿಷ್ಠ 115ಕಿ.ಮೀ ವೇಗವನ್ನು ನಿರೀಕ್ಷಿಸಲಾಗಿದೆ. ಇದೇ ರೀತಿ ಮಥುರಾ- ಪಾಲ್ವಾಲ್ ಹಾಗೂ ದೆಹಲಿ- ಮುಂಬೈ ನಡುವೆ ಓಡಾಟ ನಡೆಸಲಿದ್ದು, ಗಂಟೆಗೆ ಕ್ರಮವಾಗಿ 180 ಕಿ.ಮೀ ಹಾಗೂ 200-220 ಕಿ.ಮೀ ವೇಗವನ್ನು ನಿರೀಕ್ಷಿಸಲಾಗಿದೆ.
2016: ಜಿನೇವಾ (ಸ್ವಿಜರ್ಲೆಂಡ್): ಝಿಕಾ ಮಾರಕ ರೋಗದ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ನಡೆಯಬೇಕಾಗಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಕ್ಕೆ ಹಾಕಲು ಅಥವಾ ಬೇರೆಡೆಗೆ ಸ್ಥಳಾಂತರಿಸಲು ನೀಡಲಾದ ಕರೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತಿರಸ್ಕರಿಸಿತು. ‘ರಿಯೋ ಒಲಿಂಪಕ್ಸ್ ಕ್ರೀಡಾಕೂಟವನ್ನು ಮುಂದೂಡುವುದರಿಂದ ಅಥವಾ ಬೇರೆ ಕಡೆಗೆ ಸ್ಥಳಾಂತರಿಸುವುದರಿಂದ ಝಿಕಾ ಸೋಂಕು ಹರಡುವಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರತಿಪಾದಿಸಿತು. ಝಿಕಾ ಸೋಂಕು ಬ್ರೆಜಿಲ್ನಲ್ಲಿ ವ್ಯಾಪಕವಾಗಿದ್ದು ಹುಟ್ಟುವ ಮಕ್ಕಳು ಅಂಗ ವಿಕಲವಾಗಿ ಹುಟ್ಟುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆಗೆ ಬಹಿರಂಗ ಪತ್ರವೊಂದನ್ನು ಬರೆದ ಸುಮಾರು 100ಕ್ಕೂ ಹೆಚ್ಚು ವಿಜ್ಞಾನಿಗಳು ಝಿಕಾ ಬ್ರೆಜಿಲ್ನಲ್ಲೇ ವ್ಯಾಪಕವಾಗಿ ಹರಡುತ್ತಿರುವುದರಿಂದ ಕ್ರೀಡಾಕೂಟ ನಡೆಸಿ ಸಂಭ್ರಮಿಸುವುದು ನೈತಿಕವಲ್ಲ ಎಂದು ಹೇಳಿದ್ದರು. ಸೊಳ್ಳೆಯಿಂದ ಹರಡುವ ಝಿಕಾ ಸೋಂಕಿನ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಮುಂದಕ್ಕೆ ಹಾಕಬೇಕು ಅಥವಾ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬುದಕ್ಕೆ ಯಾವುದೇ ಸ್ಪಷ್ಟ ಕಾರಣ ಇಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಕೂಡಾ ಹೇಳಿತು.
2016: ಪುದುಚೆರಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರದ ಮಾಜಿ ರಾಜ್ಯ ಸಚಿವ ವಿ. ನಾರಾಯನ ಸ್ವಾಮಿ ಅವರು ಇಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗುವರು.
ಚುನಾಯಿತ ಶಾಸಕರ ಜೊತೆ ಸಮಾಲೋಚನೆ ಸಲುವಾಗಿ ವೀಕ್ಷಕರಾಗಿ ವರಿಷ್ಠ ಮಂಡಳಿಯಿಂದ ನೇಮಕಗೊಂಡಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಶಾಸಕಾಂಗ ಪಕ್ಷದ ಸಭೆಯ ಬಳಿಕ ಈ ವಿಚಾರವನ್ನು ಪ್ರಕಟಿಸಿದರು. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ. ನಮಸ್ಸಿವಾಯಮ್ ಅವರ ಸೂಚನೆಯನ್ನು ಮಾಜಿ ಮುಖ್ಯಮಂತ್ರಿ ವಿ. ವೈದ್ಯಲಿಂಗಮ್ ಅನುಮೋದಿಸಿದರು. ಎಲ್ಲಾ ಶಾಸಕರೂ ಇದನ್ನು ಅನುಮೋದಿಸಿದರು ಎಂದು ದೀಕ್ಷಿತ್ ಹೇಳಿದರು.
2016: ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹನ್ ವಾನಿಯ ಪ್ರಮುಖ ಸಹಚರ ತಾರಿಖ್ ಪಂಡಿತ್ ಈದಿನ ಸೇನೆಗೆ ಶರಣಾದ. ತಾರಿಖ್ ಪಂಡಿತ್ ಹಿಜ್ಬುಲ್ ಮುಜಾಹಿದೀನ್ನಲ್ಲಿ ಪ್ರಮುಖ ಉಗ್ರನಾಗಿದ್ದು, ಆತ ಬರ್ಹನ್ ವಾನಿಯ ಪ್ರಮುಖ ಸಹಚರ. ಈತ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ 50ನೇ ರಾಷ್ಟ್ರೀಯ ರೈಫಲ್ಸ್ ಮುಂದೆ ಶರಣಾಗಿದ್ದಾನೆ ಎಂದು ಉಧಮ್ುರದಲ್ಲಿರುವ ಸೇನೆಯ ಉತ್ತರ ಕಮಾಂಡ್ನ ವಕ್ತಾರರು ತಿಳಿಸಿದರು. ಬುರ್ಹನ್ ವಾನಿ (21) ಹಿಜ್ಬುಲ್ ಸಾಮಾಜಿಕ ಜಾಲತಾಣಗಳ ಮೂಲಕ ಯುವಜನತೆಯನ್ನು ಮುಜಾಹಿದೀನ್ ಸಂಘಟನೆಗೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಾನಿಯನ್ನು ಬಂಧಿಸಲು ಭದ್ರತಾ ಪಡೆಗಳು ಸಾಕಷ್ಟು ಪ್ರಯತ್ನಿಸುತ್ತಿವೆ. ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಸಹ ಘೋಷಿಸಿವೆ. ಕಳೆದ ವರ್ಷ ಏಪ್ರಿಲ್ನಲ್ಲಿ ವಾನಿಯ ಪ್ರಮುಖ ಸಹಚರರಲ್ಲಿ ಒಬ್ಬನಾಗಿದ್ದ ನಸೀರ್ ಅಹಮದ್ ಪಂಡಿತ್ ಶೋಪಿಯಾನ್ ಜಿಲ್ಲೆಯಲ್ಲಿ ಶರಣಾಗಿದ್ದ.
2016: ವಾಷಿಂಗ್ಟನ್: ಭೂಮಿಯಿಂದ 1200 ಬೆಳಕಿನ ವರ್ಷಗಳಷ್ಟು ದೂರದಲ್ಲಿ ಇರುವ ಗ್ರಹ ಒಂದರಲ್ಲಿ ಮೇಲ್ಮೈಯಲ್ಲಿಯೇ ನೀರು ಇರುವ ಸಾಧ್ಯತೆಗಳು ಕಂಡು ಬಂದಿದ್ದು, ಇಲ್ಲಿ ಸಕ್ರಿಯ ಜೀವಿಗಳು ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟರು. ಗಾತ್ರದಲ್ಲಿ ಭೂಮಿಗಿಂತ ಶೇಕಡಾ 40ರಷ್ಟು ವಿಶಾಲವಾಗಿರುವ ಈ ಗ್ರಹ ವಾಸಯೋಗ್ಯ ಗ್ರಹವಾಗಿರುವಂತೆ ಕಂಡು ಬಂದಿದ್ದು ಇದಕ್ಕೆ ಕೆಪ್ಲರ್-62ಎಫ್ ಎಂಬುದಾಗಿ ಹೆಸರು ಇಡಲಾಗಿದೆ ಎಂದು ಲೈರಾ ನಕ್ಷತ್ರಪುಂಜದ ಕಡೆಯಲ್ಲಿ ಈ ಗ್ರಹ ಇದೆ ಎಂದು ಲಾಸ್ ಏಂಜೆಲಿಸ್ನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಸಂಶೋಧಕರು ತಿಳಿಸಿದರು. ವಾಸ್ತವವಾಗಿ ನಾಸಾದ ಕೆಪ್ಲರ್ ವೀಕ್ಷಣಾಲಯವು 2013ರಲ್ಲಿಯೇ ಈ ಗ್ರಹವನ್ನು ಗುರುತಿಸಿತ್ತು. ಆದರೆ ಅಧ್ಯಯನ ಬಳಿಕವಷ್ಟೇ ಈ ಗ್ರಹ ವಾಸಯೋಗ್ಯವಾಗಿರುವಂತೆ ಕಂಡು ಬರುತ್ತಿದೆ ಎಂದು ವಿಜ್ಞಾನಿಗಳು ಪ್ರಕಟಿಸಿದರು. ಭೂಮಿಯ ಪರಿಸರದಲ್ಲಿ ಶೇಕಡಾ 0.04ರಷ್ಟು ಕಾರ್ಬನ್ ಡೈ ಆಕ್ಸೈಡ್ ಇದೆ. ಕೆಪ್ಲರ್-62 ಎಫ್ ಗ್ರಹದಲ್ಲೂ ಬೃಹತ್ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಇದೆ. ಹೀಗಾಗಿ ಇಲ್ಲಿ ಮೇಲ್ಮೈಯಲ್ಲೇ ನೀರು ಇರುವ ಸಾಧ್ಯತೆ ಇದ್ದು, ಸಕ್ರಿಯ ಜೀವಿಗಳೂ ಇರಬಹುದು ಎಂದು ಸಂಶೋಧಕರು ಹೇಳಿದರು.
2009: ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿದಂತೆ 59 ಸಚಿವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಕೇಂದ್ರ ಸರ್ಕಾರದ ಚೊಚ್ಚಲ ಸಂಪುಟ ವಿಸ್ತರಣಾ ಸಮಾರಂಭ ಯಶಸ್ವಿಯಾಗಿ ನಡೆಯಿತು. ಈ ಮೂಲಕ ಯುಪಿಎ ವೇದಿಕೆಯಡಿ ಒಗ್ಗೂಡಿದ ಮನಮೋಹನ ಸಿಂಗ್ ನೇತೃತ್ವದ 79 ಸದಸ್ಯರ ಸಮ್ಮಿಶ್ರ ಪಡೆ, ದೇಶವನ್ನು ಮುನ್ನಡೆಸಲು ಸನ್ನದ್ಧವಾಯಿತು.
ಯಾರಿಗೆ ಯಾವ ಖಾತೆ
ಪ್ರಧಾನ ಮಂತ್ರಿ
ಡಾ. ಮನಮೋಹನ್ ಸಿಂಗ್ - ಹಂಚಿಕೆಯಾಗದೇ ಉಳಿದ ಎಲ್ಲಾ ಖಾತೆಗಳು
ಸಂಪುಟ ದರ್ಜೆ ಸಚಿವರು
ಪ್ರಣವ್ ಮುಖರ್ಜಿ - ಹಣಕಾಸು
ಎ.ಕೆ.ಆಂಟನಿ - ರಕ್ಷಣೆ
ಪಿ.ಚಿದಂಬರಂ - ಗೃಹ
ಶರದ್ ಪವಾರ್ - ಕೃಷಿ, ಆಹಾರ-ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ
ಮಮತಾ ಬ್ಯಾನರ್ಜಿ - ರೈಲ್ವೆ
ಎಸ್.ಎಂ.ಕೃಷ್ಣ - ವಿದೇಶಾಂಗ ವ್ಯವಹಾರ
ಗುಲಾಂ ನಬಿ ಆಜಾದ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸುಶೀಲ್ ಕುಮಾರ್ ಶಿಂಧೆ - ಇಂಧನ
ಎಂ.ವೀರಪ್ಪ ಮೊಯಿಲಿ - ಕಾನೂನು
ಎಸ್.ಜೈಪಾಲ್ ರೆಡ್ಡಿ - ನಗರಾಭಿವೃದ್ಧಿ
ಕಮಲನಾಥ್ - ಭೂ ಸಾರಿಗೆ ಮತ್ತು ಹೆದ್ದಾರಿ
ವಯಲಾರ್ ರವಿ - ಸಾಗರೋತ್ತರ ಭಾರತೀಯ ವ್ಯವಹಾರ
ಮೀರಾ ಕುಮಾರ್ - ಜಲ ಸಂಪನ್ಮೂಲ
ಮುರಳಿ ದೇವ್ರಾ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಕಪಿಲ್ ಸಿಬಲ್ - ಮಾನವ ಸಂಪನ್ಮೂಲ ಅಭಿವೃದ್ಧಿ
ಅಂಬಿಕಾ ಸೋನಿ - ವಾರ್ತಾ ಮತ್ತು ಪ್ರಸಾರ
ಬಿ.ಕೆ.ಹಂಡಿಕ್ - ಗಣಿ, ಈಶಾನ್ಯ ಪ್ರದೇಶ ಅಭಿವೃದ್ಧಿ
ಆನಂದ ಶರ್ಮ - ವಾಣಿಜ್ಯ ಮತ್ತು ಕೈಗಾರಿಕೆ
ಸಿ.ಪಿ.ಜೋಷಿ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ವೀರಭದ್ರ ಸಿಂಗ್ - ಉಕ್ಕು
ವಿಲಾಸರಾವ್ ದೇಶಮುಖ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಡಾ. ಫಾರೂಕ್ ಅಬ್ದುಲ್ಲ - ಹೊಸ ಮತ್ತು ಪುನರ್‌ಬಳಕೆ ಇಂಧನ
ಎಂ.ಕೆ.ಅಳಗಿರಿ - ರಾಸಾಯನಿಕ ಮತ್ತು ರಸಗೊಬ್ಬರ
ದಯಾನಿಧಿ ಮಾರನ್ - ಜವಳಿ
ಎ.ರಾಜಾ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಮಲ್ಲಿಕಾರ್ಜುನ ಖರ್ಗೆ - ಕಾರ್ಮಿಕ ಮತ್ತು ಉದ್ಯೋಗ
ಕುಮಾರಿ ಸೆಲ್ಜಾ - ವಸತಿ, ನಗರ ಬಡತನ ನಿರ್ಮೂಲನೆ, ಪ್ರವಾಸೋದ್ಯಮ
ಸುಬೋಧ್ ಕಾಂತ್ ಸಹಾಯ್ - ಆಹಾರ ಸಂಸ್ಕರಣಾ ಕೈಗಾರಿಕೆ
ಡಾ. ಎಂ.ಎಸ್.ಗಿಲ್ - ಯುವಜನ ಸೇವಾ ಮತ್ತು ಕ್ರೀಡೆ
ಜಿ.ಕೆ.ವಾಸನ್ - ನೌಕೆ
ಪವನ್ ಕುಮಾರ್ ಬನ್ಸಾಲ್ - ಸಂಸದೀಯ ವ್ಯವಹಾರ
ಮುಕುಲ್ ವಾಸ್ನಿಕ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಕಾಂತಿಲಾಲ್ ಭುರಿಯ - ಬುಡಕಟ್ಟು ವ್ಯವಹಾರ
ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವರು
ಪ್ರಫುಲ್ ಪಟೇಲ್ - ನಾಗರಿಕ ವಿಮಾನಯಾನ
ಪೃಥ್ವಿರಾಜ್ ಚೌಹಾಣ್ - ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪ್ರಧಾನಿ
ಕಚೇರಿ, ಸಿಬ್ಬಂದಿ, ಸಾರ್ವಜನಿಕ ದೂರು, ಪಿಂಚಣಿ,
ಸಂಸದೀಯ ವ್ಯವಹಾರ
ಶ್ರೀಪ್ರಕಾಶ್ ಜೈಸ್ವಾಲ್ - ಕಲ್ಲಿದ್ದಲು, ಅಂಕಿ ಅಂಶ, ಯೋಜನೆ ಜಾರಿ
ಸಲ್ಮಾನ್ ಖುರ್ಷಿದ್ - ಕಂಪನಿ ವ್ಯವಹಾರ, ಅಲ್ಪಸಂಖ್ಯಾತರು
ಜೈರಾಮ್ ರಮೇಶ್ - ಪರಿಸರ ಮತ್ತು ಅರಣ್ಯ
ಕೃಷ್ಣಾ ತೀರ್ಥ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ದಿನ್ಷ ಪಟೇಲ್ - ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ
ರಾಜ್ಯ ಸಚಿವರು
ಇ.ಅಹಮದ್ - ರೈಲ್ವೆ
ವಿ.ನಾರಾಯಣ ಸ್ವಾಮಿ - ಯೋಜನಾ ಮತ್ತು ಸಂಸದೀಯ ವ್ಯವಹಾರ
ಶ್ರೀಕಾಂತ್ ಜೇನಾ - ರಾಸಾಯನಿಕ ಮತ್ತು ರಸಗೊಬ್ಬರ
ಮುಲ್ಲಪಲ್ಲಿ ರಾಮಚಂದ್ರನ್ - ಗೃಹ ವ್ಯವಹಾರ
ಜ್ಯೋತಿರಾದಿತ್ಯ ಸಿಂಧಿಯ - ವಾಣಿಜ್ಯ ಮತ್ತು ಕೈಗಾರಿಕೆ
ಡಿ.ಪುರಂದೇಶ್ವರಿ - ಮಾನವ ಸಂಪನ್ಮೂಲ ಅಭಿವೃದ್ಧಿ
ಕೆ.ಎಚ್.ಮುನಿಯಪ್ಪ - ರೈಲ್ವೆ
ಪನಬಾಕ ಲಕ್ಷ್ಮಿ - ಜವಳಿ
ಅಜಯ್ ಮಾಕನ್ - ಗೃಹ ವ್ಯವಹಾರ
ನಮೋ ನಾರಾಯಣ ಮೀನಾ - ಹಣಕಾಸು
ಎಂ.ಎಂ.ಪಲ್ಲಂ ರಾಜು - ರಕ್ಷಣೆ
ಸೌಗತ ರೇ - ನಗರಾಭಿವೃದ್ಧಿ
ಎಸ್.ಎಸ್.ಪಳನಿ ಮಾಣಿಕ್ಯಂ - ಹಣಕಾಸು
ಜಿತಿನ್ ಪ್ರಸಾದ್ - ಪೆಟ್ರೋಲಿಯಂ, ನೈಸರ್ಗಿಕ ಅನಿಲ
ಎ.ಸಾಯಿ ಪ್ರತಾಪ್ - ಉಕ್ಕು
ಪ್ರಿಣೀತ್ ಕೌರ್ - ವಿದೇಶಾಂಗ ವ್ಯವಹಾರ
ಗುರುದಾಸ್ ಕಾಮತ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಹರೀಶ್ ರಾವತ್ - ಕಾರ್ಮಿಕ ಮತ್ತು ಉದ್ಯೋಗ
ಕೆ.ವಿ.ಥಾಮಸ್ - ಕೃಷಿ, ಗ್ರಾಹಕ ವ್ಯವಹಾರ, ಆಹಾರ-ನಾಗರಿಕ ಸರಬರಾಜು
ಭರತ್ ಸಿನ್ಹ ಸೋಲಂಕಿ - ಇಂಧನ
ಮಹಾದೇವ್ ಎಸ್. ಖಂಡೇಲ - ಭೂ ಸಾರಿಗೆ ಮತ್ತು ಹೆದ್ದಾರಿ
ದಿನೇಶ್ ತ್ರಿವೇದಿ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಿಸಿರ್ ಅಧಿಕಾರಿ - ಗ್ರಾಮೀಣಾಭಿವೃದ್ಧಿ
ಸುಲ್ತಾನ್ ಅಹಮದ್ - ಪ್ರವಾಸೋದ್ಯಮ
ಮುಕುಲ್ ರಾಯ್ - ನೌಕೆ
ಮೋಹನ್ ಜತುವಾ - ವಾರ್ತಾ ಮತ್ತು ಪ್ರಸಾರ
ಡಿ.ನೆಪೋಲಿಯನ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಡಾ. ಎಸ್.ಜಗತ್‌ರಕ್ಷಕನ್ - ವಾರ್ತಾ ಮತ್ತು ಪ್ರಸಾರ
ಎಸ್.ಗಾಂಧಿ ಸೆಲ್ವನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ತುಷಾರ್‌ಭಾಯಿ ಚೌಧರಿ - ಬುಡಕಟ್ಟು ವ್ಯವಹಾರ
ಸಚಿನ್ ಪೈಲಟ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಅರುಣ್ ಯಾದವ್ - ಯುವಜನ ಸೇವೆ ಮತ್ತು ಕ್ರೀಡೆ
ಪ್ರತೀಕ್ ಪ್ರಕಾಶ್‌ಬಾಪು ಪಾಟೀಲ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
ಆರ್.ಪಿ.ಎನ್.ಸಿಂಗ್ - ಭೂ ಸಾರಿಗೆ ಮತ್ತು ಹೆದ್ದಾರಿ
ಶಶಿ ತರೂರ್ - ವಿದೇಶಾಂಗ ವ್ಯವಹಾರ
ವಿನ್ಸೆಂಟ್ ಪಾಲ - ಜಲ ಸಂಪನ್ಮೂಲ
ಪ್ರದೀಪ್ ಜೈನ್ - ಗ್ರಾಮೀಣಾಭಿವೃದ್ಧಿ
ಅಗಾಥಾ ಸಂಗ್ಮಾ - ಗ್ರಾಮೀಣಾಭಿವೃದ್ಧಿ
2009: ಕೆನಡಾದ ಖ್ಯಾತ ಕಥೆಗಾರ್ತಿ ಅಲಿಸ್ ಮನ್ರೊ ಈ ವರ್ಷದ 'ಮ್ಯಾನ್ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆಯಾದರು. ಜ್ಞಾನಪೀಠ ಪುರಸ್ಕೃತ ಭಾರತದ ಮಹಾಶ್ವೇತಾ ದೇವಿ ಹಾಗೂ ಭಾರತ ಮೂಲದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ. ಎಸ್. ನೈಪಾಲ್ ಅವರನ್ನು ಹಿಂದಕ್ಕೆ ತಳ್ಳಿ ಮನ್ರೊ ಈ ಪ್ರಶಸ್ತಿ ಗೆದ್ದುಕೊಂಡರು. 77 ವರ್ಷದ ಮನ್ರೊ, ಈ ಪ್ರಶಸ್ತಿ ಪಡೆದ ಮೂರನೇ ಸಾಹಿತಿ. ಪ್ರಶಸ್ತಿ 60,000 ಪೌಂಡ್‌ಗಳಷ್ಟು ನಗದು ಹಣ ಒಳಗೊಂಡಿದೆ.
2009: ಅಕಾಲಕ್ಕೆ ತಲೆಗೂದಲು ಉದುರುವುದು (ಬೊಕ್ಕತಲೆ) ಗಂಡಸರನ್ನು ಕಾಡುವ ಒಂದು ಸಮಸ್ಯೆ. ಅದರಲ್ಲೂ ಯೌವನದಲ್ಲೇ ಇದು ಕಾಣಿಸಿಕೊಂಡರೆ ಚಿಂತೆಯ ಗೆರೆಗಳು ಹೆಚ್ಚಾಗುತ್ತವೆ. ಇದಕ್ಕೆ ಕಾರಣವಾಗುವ ವಂಶವಾಹಿನಿ ಪತ್ತೆಹಚ್ಚಿರುವ ವಿಜ್ಞಾನಿಗಳು ಈ ಸಮಸ್ಯೆ ನಿವಾರಿಸಲು ಪರಿಣಾಮಕಾರಿ ಅಸ್ತ್ರ ಸಿಕ್ಕಿದೆ ಎಂದು ಪ್ರಕಟಿಸಿದರು. ಟೋಕಿಯೊದ ರಾಷ್ಟ್ರೀಯ ತಳಿ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡ ಈ ಸಾಧನೆ ಮಾಡಿದ್ದು, 'ಎಸ್‌ಒಎಕ್ಸ್ 21' ಎಂಬ ವಂಶವಾಹಿನಿಯೇ ವ್ಯಕ್ತಿಯ ತಲೆ ಮೇಲೆ ಕೂದಲು ಇರಬೇಕೋ, ಬೇಡವೋ ಎಂಬುದನ್ನು ತೀರ್ಮಾನಿಸುತ್ತದೆ ಎಂದು ಹೇಳಿದರು. ಈ ವಂಶವಾಹಿನಿಯ ಇರುವಿಕೆ ಮುಂಚೆಯೇ ಗೊತ್ತಿತ್ತಾದರೂ ಈವರೆಗೆ ಅದು ನರಕೋಶಗಳ ರೂಪುಗೊಳ್ಳುವಿಕೆಯಲ್ಲಿ ಪಾತ್ರ ವಹಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಈ ವಂಶವಾಹಿನಿ ಕೂದಲು ಪೋಷಕ ಎಂದು ಅಧ್ಯಯನಗಳು ದೃಢಪಡಿಸಿದವು. ಇದೇ ವಂಶವಾಹಿನಿ ಹೊಂದಿರುವ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಇದು ದೃಢಪಟ್ಟಿದೆ. ಆಗತಾನೇ ಹುಟ್ಟಿದ ಇಲಿಮರಿಗಳಲ್ಲಿ 'ಎಸ್‌ಒಎಕ್ಸ್ 21'ವಂಶವಾಹಿನಿಯ ಚಟುವಟಿಕೆ ಸ್ಥಗಿತಗೊಳಿಸಿದಾಗ 15 ದಿನಗಳಲ್ಲೇ ಅವುಗಳ ಕೂದಲು ಉದುರಲು ಶುರುವಾಗಿ ನಂತರದ ಒಂದೇ ವಾರದಲ್ಲಿ ಪೂರ್ತಿ ಬೋಳಾಗಿದ್ದುದು ಕಂಡುಬಂತು. ಹೀಗಾಗಿ ಮನುಷ್ಯರಲ್ಲೂ ಬೊಕ್ಕತಲೆ ಸಮಸ್ಯೆಗೆ ಇದೇ ಕಾರಣವೆಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ವಿಜ್ಞಾನಿಗಳ ತಂಡದ ನೇತೃತ್ವ ವಹಿಸಿದ್ದ ಪ್ರೊ.ಯುಮಿಕೊ ಪ್ರತಿಪಾದಿಸಿದರು.
2009: ಖ್ಯಾತ ವಿದ್ವಾಂಸ, ಡೆಮಾಕ್ರಟಿಕ್ ಪಕ್ಷದ ಮಾಜಿ ಸಂಸದ ತಿಮೋಥಿ ರೋಮರ್ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯನ್ನಾಗಿ ಹೆಸರಿಸಿದರು.
2008: ವಾಯುಮಾಲಿನ್ಯ ವಿಷಯದಲ್ಲಿ ದೇಶದ ರಾಜಧಾನಿ ದೆಹಲಿಯನ್ನೂ ಕೋಲ್ಕತ ಮೀರಿಸಿ ಪರಿಸರ ಮಾಲಿನ್ಯದಲ್ಲಿ ಮುಂಚೂಣಿಯಲ್ಲಿದೆ!. ದೆಹಲಿಗಿಂತಲೂ ಅತಿ ಹೆಚ್ಚು ಶ್ವಾಸಕೋಶ ಕ್ಯಾನ್ಸರ್ ಮತ್ತು ಹೃದಯಾಘಾತ ಸಂಭವಿಸುವುದು ಕೂಡಾ ಕೋಲ್ಕತದಲ್ಲೇ! ವರ್ಷವೊಂದರಲ್ಲಿ ಕೋಲ್ಕತದಲ್ಲಿ ಪ್ರತಿ ಲಕ್ಷ ಜನರಲ್ಲಿ 18ಕ್ಕೂ ಹೆಚ್ಚು ಮಂದಿ ಶ್ವಾಸಕೋಶ ಕ್ಯಾನ್ಸರ್ ಇಲ್ಲವೇ ಹೃದಯಾಘಾತಕ್ಕೆ ಬಲಿಯಾದರೆ ಅದೇ ದೆಹಲಿಯಲ್ಲಿ ಲಕ್ಷ ಜನರ್ಲಲಿ 13 ಮಂದಿ ಈ ಖಾಯಿಲೆಗಳಿಗೆ ಬಲಿಯಾಗುತ್ತಾರೆ ಎಂದು ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಸಿಎನ್ಸಿಐ)ನ ಪರಿಸರ ವಿಜ್ಞಾನಿ ತ್ವಿಷಾ ಲಹಿರಿ ಬಹಿರಂಗ ಪಡಿಸಿದರು. ಕ್ಯಾನ್ಸರಿಗಿಂತಲೂ ಹೆಚ್ಚಾಗಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಕೋಲ್ಕತದಲ್ಲಿ ಹೆಚ್ಚಾಗಿದೆ ಎಂದು ಸಿಎನ್ಸಿಐನ ವರದಿ ತಿಳಿಸಿತು.
2008: ದೇಶದ ಹಲವಾರು ಕಡೆಗಳಲ್ಲಿ ಹಾಗೂ ಇತ್ತೀಚೆಗೆ ಜೈಪುರದಲ್ಲಿ ಸೈಕಲುಗಳನ್ನು ಬಳಸಿ ಉಗ್ರರು ಬಾಂಬ್ ಸ್ಫೋಟ ಕೃತ್ಯದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ತಾಜ್ ಮಹಲ್ ಬಳಿ ಸೈಕಲ್ ನಿಲುಗಡೆಯನ್ನು ನಿಷೇಧಿಸಲಾಯಿತು. ವಿಶ್ವದ ಪ್ರಸಿದ್ಧ ತಾಜ್ ಮಹಲ್ ಭಯೋತ್ಪಾದಕ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ತಾಜ್ ಮಹಲ್ಗೆ ವಿವಿಧ ಏಜೆನ್ಸಿಗಳ ಭದ್ರತಾ ಪಡೆಗಳನ್ನು ಹಾಕಲಾಯಿತು.
2008: ಕನ್ನಡ ನೆಲದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಅಂಪೈರ್ ಎ.ವಿ.ಜಯಪ್ರಕಾಶ್ ಮಟ್ಟಿಗೆ ಈದಿನ ತಮ್ಮೂರು ಬೆಂಗಳೂರಿನಲ್ಲಿಯೇ ಕೊನೆಯ ಬಾರಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದರು. ಕ್ರಿಕೆಟ್ ವೃತ್ತಿಪರ ಅಂಪೈರ್ ಜೀವನದಿಂದ ನಿವೃತ್ತಿ ಹೊಂದುವ ನಿರ್ಧಾರ ಪ್ರಕಟಿಸಿದ ಜಯಪ್ರಕಾಶ್ ಕೊನೆಯ ಬಾರಿಗೆ ಕ್ಷೇತ್ರದ ಅಂಪೈರ್ ಆಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಅವರು ತಮ್ಮ ಹೊಣೆಯನ್ನು ಕೊನೆಯ ಬಾರಿಗೆ ನಿಭಾಯಿಸಿದರು. 58 ವರ್ಷ ವಯಸ್ಸಿನ ಜಯಪ್ರಕಾಶ್ ದೀರ್ಘ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂಪೈರ್ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರು ಕ್ಷೇತ್ರದ ಅಂಪೈರ್ ಆಗಿದ್ದಾಗಲೇ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಾಕಿಸ್ಥಾನದ ವಿರುದ್ಧ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಒಂದೇ ಇನಿಂಗ್ಸಿನಲ್ಲಿ ಹತ್ತು ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.
2008: ಬಾಲಿವುಡ್ ನಟ ಸಂಜಯ್ ದತ್ ಹಾಗೂ ಮಾನ್ಯತಾರ ವಿವಾಹಕ್ಕೆ ಕಡೆಗೂ ನ್ಯಾಯಾಲಯ ಒಪ್ಪಿಗೆಯ ಮುದ್ರೆ ಒತ್ತಿತು. ಇವರಿಬ್ಬರ ವಿವಾಹ ಕಾನೂನು ಬದ್ಧವಾಗಿದೆ ಎಂದು ಮುಂಬೈನ ಸೆಷನ್ಸ್ ಕೋರ್ಟ್ ಹೇಳಿತು. ವಿಚಾರಣಾಧೀನ ಕೈದಿ ಮೆಹ್ರಾಜ್ ಶೇಕ್ ಎಂಬುವವನು, `ಮಾನ್ಯತಾ ನನ್ನ ಹೆಂಡತಿ. ಆಕೆ ನನ್ನಿಂದ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿಲ್ಲ. ಹೀಗಾಗಿ ಆಕೆ ಸಂಜಯ ದತ್ ಅವರನ್ನು ಮದುವೆಯಾಗಿರುವುದು ಕಾನೂನು ಬದ್ಧವಲ್ಲ. ಆದ್ದರಿಂದ ಆಕೆಯ ವಿರುದ್ಧ ಬಹುಪತಿತ್ವ ಕಾನೂನಿನಡಿ ಕ್ರಮ ಜರುಗಿಸಬೇಕು ಎಂದು ಮುಂಬೈ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಸುಪ್ರೀಂ ಕೋರ್ಟಿನಿಂದ ಜಾಮೀನು ದೊರೆತ ನಂತರ ಸಂಜಯ್ ಮಾನ್ಯತಾರನ್ನು ಪ್ರಸಕ್ತ ವರ್ಷದ ಫೆಬ್ರುವರಿ ತಿಂಗಳ ಮೊದಲ ವಾರ ಗೋವಾದಲ್ಲಿ ಮದುವೆಯಾಗಿದ್ದರು. ತದನಂತರ ಫೆ.11ರಂದು ಅವರು ಮಾಧ್ಯಮದವರಿಗೆ ತಮ್ಮ ಮದುವೆ ವಿಷಯವನ್ನು ಬಹಿರಂಗಗೊಳಿಸಿ ಶಾಸ್ತ್ರೋಕ್ತವಾಗಿ ಮುಂಬೈಯಲ್ಲಿ ಮತ್ತೆ ಮದುವೆಯಾದರು.
2008: ಮಂಗಳೂರಿನಲ್ಲಿ ಬಹುಕೋಟಿ ರೂಪಾಯಿ ಬಂಡವಾಳದ ಪೆಟ್ರೋಲಿಯಂ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಹೂಡಿಕೆ ವಲಯವನ್ನು (ಪಿಸಿಪಿಐಆರ್) ಸ್ಥಾಪಿಸುವ ಕರ್ನಾಟಕದ ಪ್ರಸ್ತಾವಕ್ಕೆ ಕೇಂದ್ರ ಅನುಮೋದನೆ ನೀಡಿದೆ ಎಂದು ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಇಲಾಖೆ ಕಾರ್ಯದರ್ಶಿ ವಿ.ಎಸ್.ಸಂಪತ್ ಬಹಿರಂಗ ಪಡಿಸಿದರು. ರಾಜ್ಯ ಸರ್ಕಾರವು ಬಹಳ ಹಿಂದೆಯೇ ಈ ಕುರಿತ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಕೇಂದ್ರವು ಭೂಮಿಯ ಲಭ್ಯತೆ ಹಾಗೂ ಇತರ ಮೂಲಸೌಕರ್ಯಗಳ ಬಗ್ಗೆ ಇನ್ನಷ್ಟು ವಿವರಣೆ ಕೋರಿ ಪ್ರಸ್ತಾವವನ್ನು ಹಿಂದಕ್ಕೆ ಕಳುಹಿಸಿತ್ತು.
2008: ಕರ್ನಾಟಕದ ವಿವಿಧೆಡೆ ಗುಡುಗು, ಸಿಡಿಲು, ಗಾಳಿಯಿಂದ ಕೂಡಿದ ಮಳೆ ಸುರಿದು ಆಸ್ತಿಪಾಸ್ತಿ ಹಾಗೂ ಜೀವಹಾನಿ ಸಂಭವಿಸಿತು. ಸಿಡಿಲು ಬಡಿದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ನಾಲ್ವರು ಹಾಗೂ ಶಿವಮೊಗ್ಗ ಜಿಲ್ಲೆಯ ಗೋಂದಿಚಟ್ನಹಳ್ಳಿಯಲ್ಲಿ, ಉಡುಪಿ ಜಿಲ್ಲೆಯ ಹೆಜಮಾಡಿಕೋಡಿ ಎಂಬಲ್ಲಿ ತಲಾ ಒಬ್ಬರು ಮೃತರಾದರು.
2008: ಆರು ವರ್ಷಗಳ ಹಿಂದೆ ನಡೆದ ನಿತೀಶ್ ಕಟಾರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಿಕಾಸ್ ಮತ್ತು ಆತನ ಸಹೋದರ ಸಂಬಂಧಿ ವಿಶಾಲ್ ಯಾದವ್ ಅಪರಾಧಿಗಳು ಎಂದು ಘೋಷಿಸಿತು. ಉತ್ತರಪ್ರದೇಶದ ರಾಜಕಾರಣಿ ಡಿ. ಪಿ.ಯಾದವ್ ಅವರ ಪುತ್ರನಾದ ವಿಕಾಸ್ ಮತ್ತು ಆತನ ಸಹೋದರ ಸಂಬಂಧಿ ವಿಶಾಲ್ ವಿರುದ್ಧದ ಕೊಲೆ, ಅಪಹರಣ ಮತ್ತು ಸಾಕ್ಷಿಗಳ ನಾಶ ಆಪಾದನೆಗಳು ಸಾಬಿತಾಗಿವೆ ಎಂದು ನ್ಯಾಯಾಧೀಶ ರವೀಂದ್ರ ಕೌರ್ ಪ್ರಕಟಿಸಿದರು.
2008: ವೀರರಾಣಿ ಕಿತ್ತೂರ ಚನ್ನಮ್ಮಾಜಿ ವಂಶಸ್ಥ ಹಾಗೂ ಸ್ವಾತಂತ್ರ್ಯ ಹೋರಾಟಗಾರ ತಾತ್ಯಾ ಸಾಹೇಬ ಬಾಪುಸಾಹೇಬ ದೇಸಾಯಿ (ಕಿತ್ತೂರಕರ) (89) ಈದಿನ ರಾತ್ರಿ ಚನ್ನಮ್ಮನ ಕಿತ್ತೂರಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ, ರಾಣಿ ಚನ್ನಮ್ಮಾಜಿಯ 5 ನೇ ವಂಶಸ್ಥರಾದ ಅವರು ಪಾಂಡಿಚೇರಿಯ ಅರವಿಂದ ಆಶ್ರಮದಲ್ಲಿ 25 ವರ್ಷಕಾಲ ಇದ್ದು ಕಿತ್ತೂರಿಗೆ ಆಗಮಿಸಿದ್ದರು. ಇಲ್ಲಿನ ಪ್ರತಿಷ್ಠಿತ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
2007: ಎರಡನೇ ಮಹಾಯುದ್ಧ ಕಾಲದಲ್ಲಿ ಜಪಾನ್ ಸೈನಿಕ ಹಾರಿಸಿದ್ದ ಗುಂಡು ಹೊಕ್ಕು 64 ವರ್ಷಗಳಿಂದ ತಲೆನೋವಿನಿಂದ ನರಳುತ್ತಿದ್ದ ಚೀನೀ ಮಹಿಳೆಯ ತಲೆಯಿಂದ ಗುಂಡನ್ನು ವೈದ್ಯರು ಕೊನೆಗೂ ಹೊರತೆಗೆದರು. 1943ರಲ್ಲಿ ತನ್ನ ತಾತನನ್ನು ನೋಡಲು ಹೊಗ್ಲು ಪ್ರಾಂತ್ಯಕ್ಕೆ ತೆರಳಿದ ಸಂದರ್ಭದಲ್ಲಿ ಜಪಾನಿ ಸೇನಾಪಡೆಯವನೊಬ್ಬ ಹಾರಿಸಿದ ಗುಂಡು ಜಿನ್ ಗುಂಜಿಂಗ್ (77) ತಲೆಗೆ ಹೊಕ್ಕು ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಬಳಿಕ ಅಸಭ್ಯ ಮಾತುಗಳೊಂದಿಗೆ ನಿರಂತರ ತಲೆ ನೋವು ಅನುಭವಿಸುತ್ತಿದ್ದಳು. ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು.
2007: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಜಪಾನಿನ ಕೃಷಿ ಸಚಿವ ತೊಷಿಕಾತ್ಸು ಮಾತ್ಸುಕಾ (62) ಆತ್ಮಹತ್ಯೆ ಮಾಡಿಕೊಂಡರು. ನೇಣು ಹಾಕಿಕೊಳ್ಳಲು ಯತ್ನಿಸಿ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಮಾತ್ಸುಕಾ ಅವರನ್ನು ಟೋಕಿಯೋದ ಕಿಯೋ ವಿವಿ ಆಸ್ಪತ್ರೆಗೆ ತಂದಾಗ ಪ್ರಾಣ ಹಾರಿಹೋಗಿತ್ತು.
2007: ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಆರೋಪ ಹೊತ್ತಿರುವ ಮಾಜಿ ಸಿಕ್ಕಿಂ ಮುಖ್ಯಮಂತ್ರಿ ಎನ್. ಬಿ. ಭಂಡಾರಿ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯವು ಒಂದು ತಿಂಗಳ ಕಾರಾಗೃಹ ಶಿಕ್ಷೆ ಮತ್ತು 5000 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿತು. ಸಿಕ್ಕಿಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಂಡಾರಿ ಅವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಆದಾಯ ಮೀರಿ 15.22 ಲಕ್ಷ ರೂಪಾಯಿಗಳಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದನ್ನು ಸಿಬಿಐ ಪತ್ತೆ ಹಚ್ಚಿತ್ತು.
2007: ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಶೋಧನ ಸಂಸ್ಥೆಯ ನಿಯೋಜಿತ ನಿರ್ದೇಶಕ ಡಾ. ಪ್ರೇಮ ಸುಮನ್ ಜೈನ್ ಅವರು 35 ವರ್ಷಗಳಿಂದ ಪಾಲಿ, ಪ್ರಾಕೃತ ಭಾಷೆಯ ಶೈಕ್ಷಣಿಕ ಮತ್ತು ಸಂಶೋಧನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ರಾಷ್ಟ್ರೀಯ ಗೌರವ ಪುರಸ್ಕಾರ ಪಡೆದರು.
2007: ಸ್ತನ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ವಂಶವಾಹಿಗಳನ್ನು (ಜೀನ್ಸ್) ಪತ್ತೆ ಹಚ್ಚುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಕ್ಯಾನ್ಸರ್ ತಜ್ಞ ಕರೋಲ್ ಸಿಕೋರ ನೇತೃತ್ವದ ವಿಜ್ಞಾನಿಗಳ ತಂಡವೊಂದು ಲಂಡನ್ನಿನಲ್ಲಿ ಪ್ರಕಟಿಸಿತು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರಿಗೆ ಕಾರಣವಾಗುವ ಕನಿಷ್ಠ ನಾಲ್ಕು ವಂಶವಾಹಿಗಳನ್ನು ತಾವು ಪತ್ತೆ ಹಚ್ಚಿರುವುದಾಗಿ ಈ ವಿಜ್ಞಾನಿಗಳು `ನೇಚರ್ ಅಂಡ್ ನೇಚರ್ ಜೆನೆಟಿಕ್ಸ್' ಪತ್ರಿಕೆಯ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಿದರು. ವಂಶವಾಹಿ ವಿಜ್ಞಾನದಲ್ಲಿ ಇದೊಂದು ಮಹತ್ವದ ಮುನ್ನಡೆ.
2007: ಎಂಜಿನಿಯರಿಂಗ್ ಶಿಕ್ಷಣದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಶ್ವ ವಿದ್ಯಾಲಯವು (ವಿಟಿಯು) ತನ್ನ ವಾಪ್ತಿಗೆ ಒಳಪಟ್ಟ ಕಾಲೇಜುಗಳ ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆಯ ಆವಶ್ಯಕತೆ ಇಲ್ಲದೆ 4 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲು ನಿರ್ಧರಿಸಿತು. ವಿಟಿಯು ಕುಲಪತಿ ಡಾ. ಕೆ. ಬಾಲವೀರರೆಡ್ಡಿ ಈ ವಿಚಾರ ಪ್ರಕಟಿಸಿದರು.
2007: ಉಡುಪಿ ಜಿಲ್ಲೆಯ ಮೂಳೂರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದುವೆಗೆ ಹೊರಟಿದ್ದ ವ್ಯಾನೊಂದು ಅಪಘಾತಕ್ಕೆ ಈಡಾದ ಪರಿಣಾಮವಾಗಿ 7 ಮಕ್ಕಳು, 9 ಮಹಿಳೆಯರು ಸೇರಿ ಒಟ್ಟು 17 ಜನ ಮೃತರಾದರು.
2007: ಸುಂದರಗಢ ಜಿಲ್ಲೆಯ ಖಂದಧರ್ ಬೆಟ್ಟಗಳಲ್ಲಿ ಸಮೀಕ್ಷೆ ಕಾಲದಲ್ಲಿ ಅವಯವ ರಹಿತ ಹಲ್ಲಿಗಳನ್ನು ಪತ್ತೆ ಹಚ್ಚಿದುದಾಗಿ ಒರಿಸ್ಸಾ ಪ್ರಾಣಿಶಾಸ್ತ್ರಜ್ಞರ ತಂಡ ಪ್ರಕಟಿಸಿತು.
2006: ಫಿಲಿಪ್ಪೀನ್ಸಿನ ರಾಜಧಾನಿ ಮನಿಲಾ ಸಮೀಪದ ಫೆಸಿಗ್ ನಗರದಲ್ಲಿ ಈದಿನ ಮುಕ್ತಾಯಗೊಂಡ ನಾಲ್ಕು ಸ್ಟಾರ್ ಫಿಲಿಪ್ಪೀನ್ಸ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ಪಿನ ಫೈನಲ್ಲಿನಲ್ಲಿ ಪ್ರಶಸ್ತಿ ಗೆದ್ದ ನೈನಾ ನೆಹ್ವಾಲ್ ರಾಷ್ಟ್ರದ ಬ್ಯಾಡ್ಮಿಂಟನ್ ರಂಗದ ದಾಖಲೆಯ ಪುಟದಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿದರು.
1998: ಭಾರತದ ಅಣ್ವಸ್ತ್ರ ಪರೀಕ್ಷೆಗಳಿಗೆ ಪ್ರತಿಯಾಗಿ ಪಾಕಿಸ್ಥಾನ ಐದು ಅಣ್ವಸ್ತ್ರಗಳನ್ನು ಸ್ಫೋಟಿಸಿತು. ಇದನ್ನು ಅನುಸರಿಸಿ ಅಮೆರಿಕ, ಜಪಾನ್ ಮತ್ತು ಇತರ ರಾಷ್ಟ್ರಗಳು ಪಾಕಿಸ್ಥಾನದ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಿದವು.
1997: ಮಾಜಿ ಕೇಂದ್ರ ಸಚಿವರಾದ ಅರ್ಜುನ್ ಸಿಂಗ್, ಎನ್.ಡಿ. ತಿವಾರಿ, ಆರ್.ಕೆ. ಧವನ್ ಮತ್ತು ಮಾಧವರಾವ್ ಸಿಂಧಿಯಾ ಅವರನ್ನು ವಿ.ಬಿ. ಗುಪ್ತ ನೇತೃತ್ವದ ವಿಶೇಷ ನ್ಯಾಯಾಲಯವು ಜೈನ್ ಹವಾಲಾ ಹಗರಣದಿಂದ ಮುಕ್ತಗೊಳಿಸಿತು.
1964: ಪ್ಯಾಲಸ್ಥೈನ್ ಲಿಬರೇಶನ್ ಆರ್ಗನೈಸೇಷನ್ (ಪಿಎಲ್ಒ) ಸ್ಥಾಪನೆಗೊಂಡಿತು.
1961: ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಜನಾಭಿಪ್ರಾಯ ರೂಪಿಸಲು ಮತ್ತು ರಾಜಕೀಯ ಕೈದಿಗಳ ಬಿಡುಗಡೆಗೆ ಒತ್ತಾಯಿಸಲು ಬ್ರಿಟಿಷ್ ವಕೀಲ ಪೀಟರ್ ಬೆನೆನ್ಸನ್ ಲಂಡನ್ನಿನಲ್ಲಿ `ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸಂಘಟನೆಯನ್ನು ಸ್ಥಾಪಿಸಿದರು. ಶಾಂತಿ, ನ್ಯಾಯ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ನೆಲೆಗಟ್ಟು ಒದಗಿಸಲು ಸಲ್ಲಿಸಿದ ಸೇವೆಗಾಗಿ ಈ ಸಂಘಟನೆಗೆ 1977ರ ನೊಬೆಲ್ ಪ್ರಶಸ್ತಿ ಲಭಿಸಿತು.
1930: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗವತಿ ಚರಣ ವೋಹ್ರಾ ನಿಧನರಾದರು.
1906: ಸಾಹಿತಿ, ಕಾದಂಬರಿಕಾರ, ನಾಟಕಕಾರ ಕೆ. ವೆಂಕಟರಾಮಪ್ಪ (28-5-1906 ರಿಂದ 2-9-1991) ಅವರು ಸುಬ್ಬಾಶಾಸ್ತ್ರಿ- ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ವೆಂಕಟರಾಮಪ್ಪ ಅವರ ವಿದ್ವತ್ತನ್ನು ಗುರುತಿಸಿ 1986ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.
1923: ತೆಲುಗು ಚಿತ್ರನಟ, ತೆಲುಗುದೇಶಂ ಪಕ್ಷದ ಸ್ಥಾಪಕ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ (1923-96) ಜನ್ಮದಿನ.
1883: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ (1883-1966) ಜನ್ಮದಿನ.
1865: `ಬ್ರೋಚೆವಾರೆವರುರಾ' ಕೃತಿ ರಚಿಸಿದ ಖ್ಯಾತ ಸಂಗೀತಗಾರ ಮೈಸೂರು ವಾಸುದೇವಾಚಾರ್ಯ (28-5-1865ರಿಂದ 17-5-1961) ಅವರು ಸುಬ್ರಹ್ಮಣ್ಯಾಚಾರ್ಯ- ಕೃಷ್ಣಾಬಾಯಿ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.
1759: ವಿಲಿಯಂ ಪಿಟ್ ಜನ್ಮದಿನ (1759-1806). ಈತ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿ. 1783ರಲ್ಲಿ ಪ್ರಧಾನಿಯಾದಾಗ ಈತನಿಗೆ 24 ವರ್ಷ ವಯಸ್ಸು. ಈತ ಪ್ರಧಾನಿ ಸ್ಥಾನಕ್ಕೆ ತಂದೆಯ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಮೊತ್ತ ಮೊದಲ ವ್ಯಕ್ತಿ ಕೂಡಾ.
1738: ಜೋಸೆಫ್ ಗಿಲೋಟಿನ್ (1738-1814) ಹುಟ್ಟಿದ ದಿನ. ಫ್ರಾನ್ಸಿನ `ತಲೆ ಕಡಿಯುವ ಯಂತ್ರ'ಕ್ಕೆ ಈ ವ್ಯಕ್ತಿಯ ಹೆಸರನ್ನೇ ಇಡಲಾಯಿತು. ಇಂತಹ ಯಂತ್ರದ ಬಗ್ಗೆ ಬೋಧಿಸುತ್ತಿದ್ದ ಹಿನ್ನೆಲೆಯಲ್ಲಿ ಈತನ ಹೆಸರನ್ನು ಅದಕ್ಕೆ ನೀಡಲಾಯಿತು. ಆದರೆ ಈ ಯಂತ್ರ ಆತನ ಸಂಶೋಧನೆಯಲ್ಲ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment