ನಾನು ಮೆಚ್ಚಿದ ವಾಟ್ಸಪ್

Sunday, May 26, 2019

ಇಂದಿನ ಇತಿಹಾಸ History Today ಮೇ 26

ಇಂದಿನ ಇತಿಹಾಸ History Today ಮೇ 26
2019: ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ರಾಷ್ಟ್ರಪತಿ ಭವನದಲ್ಲಿ ಮೇ ೩೦ರ ಗುರುವಾರ ಸಂಜೆ ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ  ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದರು. ಈ ಮಧ್ಯೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಪ್ರಚಂಡ ವಿಜಯಕ್ಕಾಗಿ ಅಭಿನಂದನೆ ವ್ಯಕ್ತ ಪಡಿಸಿದರು. ಪ್ರಧಾನಿ ಮೋದಿ ಅವರು ಹಿಂದಿನ  ರಾತ್ರಿ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಗೆ ಔಪಚಾರಿಕ ಹಕ್ಕು ಮಂಡನೆ ಮಾಡಿದ್ದರು. ರಾಷ್ಟ್ರಪತಿಯವರು ಅದನ್ನು ಅಂಗೀಕರಿಸಿ ನೂತನ ಪ್ರಧಾನಿಯಾಗಿ ಅವರನ್ನು ನಿಯೋಜಿಸಿದ್ದರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ) ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ ಲೋಕಸಭಾ ಚುನಾವಣೆಯಲ್ಲಿ ೩೫೨ ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಗಳಿಸಿತ್ತು. ಏನಿದ್ದರೂ ನೂತನ ಸಚಿವರ ಹೆಸರುಗಳನ್ನು ಪ್ರಕಟಿಸಲಾಗಿಲ್ಲ. ಪ್ರಧಾನಿ ಮೋದಿ ಮತ್ತು ಅವರ ನಿಕಟವರ್ತಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಂಪುಟಕ್ಕೆ ಹೊಸ ಮುಖಗಳನ್ನು ಸೇರ್ಪಡೆ ಮಾಡಲು ಆಸಕ್ತರಾಗಿದ್ದಾರೆ ಎನ್ನಲಾಯಿತು.  ಬಿಜೆಪಿಯ ಸ್ಥಾನಗಳನ್ನು ಎರಡರಿಂದ ೧೮ ಸ್ಥಾನಗಳಿಗೆ ಏರಿಸುವ ಮೂಲಕ ಅಪೂರ್ವ ಸಾಧನೆ ಮೆರೆದಿರುವ ಪಶ್ಚಿಮ ಬಂಗಾಳ ಮಹತ್ವದ ಪ್ರಾತಿನಿಧ್ಯ ಪಡೆಯುವ ನಿರೀಕ್ಷೆ ಇದೆಬಿಗ್ ಎಂಬುದಾಗಿ ಪರಿಗಣಿಸಲಾಗಿರುವ ಗೃಹ, ವಿತ್ತ, ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಖಾತೆಗಳ ಕುರಿತ ನಿರ್ಣಯದ ಬಗ್ಗೆ ಪ್ರಧಾನಿ ಅಥವಾ ಶಾ ಅವರು ಯಾವುದೇ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಅಸ್ವಸ್ಥತೆಯಿಂದ ಬಳಲುತ್ತಿರುವುದರ ಹೊರತಾಗಿಯೂ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅವರಿಗೆ ವಿತ್ತ ಖಾತೆಯನ್ನು ನೀಡಲಾಗುವುದೇ ಅಥವಾ ಏಷ್ಯಾದ ಮೂರನೇ ದೊಡ್ಡ ಆರ್ಥಿಕತೆಯನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ರೈಲ್ವೇ ಮತ್ತು ಇಂಧನ ಸಚಿವ ಪೀಯೂಶ್  ಗೋಯಲ್ ಅವರಿಗೆ ವಹಿಸಲಾಗುವುದೇ ಎಂಬ ಕುತೂಹಲ ಮೂಡಿದೆ. ೫೪ರ ಹರೆಯದ ಗೋಯಲ್ ಅವರು ಜೇಟ್ಲಿಯವರು ಅಸ್ವಸ್ಥರಾಗಿದ್ದಾಗ ಎರಡು ಬಾರಿ ವಿತ್ತ ಖಾತೆಯ ಹೊಣೆ ನಿಭಾಯಿಸಿದ್ದರು. ಗೋಯಲ್ ಅವರು ಚುನಾವಣೆಗೆ ಮುನ್ನ ಮಧ್ಯಂತರ ಮುಂಗಡಪತ್ರವನ್ನು ಮಂಡಿಸಿದ್ದರು ಮತ್ತು ಹೊಸ ಸರ್ಕಾರ ರಚನೆಯ ಬಳಿಕ ಪೂರ್ಣ ಪ್ರಮಾಣದ ಮುಂಗಡಪತ್ರವನ್ನು ನೂತನ ವಿತ್ತ ಸಚಿವರು ಮಂಡಿಸಬೇಕಾಗಿದೆ. ಜವುಳಿ ಸಚಿವರಾಗಿದ್ದ ಸ್ಮೃತಿ ಇರಾನಿ ಅವರು, ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಅಮೇಥಿ ಕ್ಷೇತ್ರದಲ್ಲಿ ಪರಾಭವಗೊಳಿಸಿ, ಕ್ಷೇತ್ರವನ್ನು ಕುಟುಂಬದ ದಶಕಗಳ ಕಾಲದ ವಶದಿಂದ ಹೊರಕ್ಕೆ ತಂದಿರುವುದರಿಂದ ತೂಕದ ಖಾತೆಯ ಪ್ರತಿಫಲ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಸ್ವತಃ ರಾಹುಲ್ ಗಾಂಧಿಯವರೇ ಕ್ಷೇತ್ರದಲ್ಲಿ ಮೂರು ಬಾರಿ ಜಯ ಗಳಿಸಿದ್ದರು. ೨೦೧೪ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸ್ಮೃತಿ ಇರಾನಿ ಅವರು ಕೇವಲ ವರ್ಷಗಳ ಅವಧಿಯಲ್ಲಿ ಪರಿಸ್ಥಿತಿಯನ್ನು ತಿರುವು ಮುರುವು ಮಾಡಿ ರಾಹುಲ್ ಗಾಂಧಿಯವರನ್ನು ಅಮೇಥಿ ಕ್ಷೇತ್ರದಿಂದ ಹೊರಹಾಕುವಲ್ಲಿ ಯಶಸ್ವಿಯಾಗಿದ್ದರುಇಮ್ರಾನ್ ಖಾನ್ ಫೋನ್, ಅಭಿನಂದನೆ: ಮಧ್ಯೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ್ದಕ್ಕಾಗಿ ಅಭಿನಂದಿಸಿದರು. ದೂರವಾಣಿ ಕರೆ ಮತ್ತು ಅಭಿನಂದನೆಗಾಗಿ ಪ್ರಧಾನಿ ಮೋದಿಯವರು ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಅರ್ಪಿಸಿದರು ಎಂದು ವಿದೇಶಾಂಗ ಸಚಿವಾಲಯವು ತಿಳಿಸಿತು.  ತಮ್ಮ ಸರ್ಕಾರದ ನೆರೆಹೊರೆ ಪ್ರಥಮ ನೀತಿಗೆ ಅನುಗುಣವಾಗಿ ಕೈಗೊಂಡ ಉಪ್ರಕಮಗಳನ್ನು ನೆನಪಿಸಿದ ಪ್ರಧಾನಿ ಮೋದಿಯವರು ಪಾಕ್ ಪ್ರಧಾನಿಗೆ ಬಡತನದ ವಿರುದ್ಧ ಜಂಟಿ ಹೋರಾಟ ಮಾಡುವ ತಮ್ಮ ಹಿಂದಿನ ಸಲಹೆಯನ್ನು ಉಲ್ಲೇಖಿಸಿದರು. ನಮ್ಮ ಪ್ರದೇಶದಲ್ಲಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಸಹಕರಿಸಲು ಹಿಂಸೆ ಮತ್ತು ಭಯೋತ್ಪಾದನೆ ಮುಕ್ತವಾದ ಪರಿಸರ ಮತ್ತು ವಿಶ್ವಾಸವನ್ನು ಸೃಷ್ಟಿಸಬೇಕು ಎಂದು ಮೋದಿ ಅವರು ಒತ್ತಿ ಹೇಳಿದರು ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿತು. ಮೇ ೨೩ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಇಮ್ರಾನ್ ಖಾನ್ ಅವರು ಪ್ರಧಾನಿ ಮೋದಿ ಅವರನ್ನು ಪ್ರಚಂಡ ವಿಜಯಕ್ಕಾಗಿ ಅಭಿನಂದಿಸಿ ಟ್ವೀಟ್ ಮಾಡಿದ್ದರು.  ‘ಬಿಜೆಪಿ ಮತ್ತು ಮಿತ್ರ ಪಕ್ಷಗಳ ಚುನಾವಣಾ ವಿಜಯಕ್ಕಾಗಿ ನಾನು ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಜೊತೆಯಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಖಾನ್ ಟ್ವೀಟ್ ಮಾಡಿದ್ದರು. ಅದಕ್ಕೆ ಸ್ಪಂದಿಸಿ ಧನ್ಯವಾದ ಅರ್ಪಿಸಿದ್ದ ಪ್ರಧಾನಿ ಮೋದಿ, ’ನಿಮ್ಮ ಸದಾಶಯಗಳಿಗಾಗಿ ನನ್ನ  ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ನಮ್ಮ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ನಾನು ಯಾವಾಗಲೂ ಆದ್ಯತೆ ನೀಡಿದ್ದೇನೆ ಎಂದು ಉತ್ತರಿಸಿದ್ದರು. ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್ ಖುರೇಶಿ ಅವರು ಭಾರತದ ನೂತನ ಸರ್ಕಾರದ ಜೊತೆಗೆ ಮಾತುಕತೆಗಳನ್ನು ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.  ಹಿಂದಿನ ಕೆಲವು ವರ್ಷಗಳಿಂದ ಗಡಿಯಾಚೆಯ ಭಯೋತ್ಪಾದನೆ ನಿಲ್ಲುವವರೆಗೆ ಯಾವುದೇ ಮಾತುಕತೆ ಆರಂಭಿಸಲು ಸಾಧ್ಯವಿಲ್ಲ ಎಂದು ಹೇಳಿ ಭಾರತವು ಅಂತಹ ಪ್ರಸ್ತಾಪಗಳನ್ನು ನಿರಾಕರಿಸಿತ್ತು. ೨೦೧೬ರಲ್ಲಿ ಉರಿ ಭಯೋತ್ಪಾದಕ ದಾಳಿ ನಡೆದಂದಿನಿಂದ ಪಾಕಿಸ್ತಾನದ ಜೊತೆಗಿನ ಭಾರತದ ಬಾಂಧವ್ಯ ಹದಗೆಟ್ಟಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜೈಶ್--ಮೊಹಮ್ಮದ್ ಸಂಘಟನೆ ಫೆಬ್ರುವರಿ ೧೪ರಂದು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಭಾರತದ ೪೦ ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಫೆಬ್ರುವರಿ ೨೬ರಂದು ಪಾಕಿಸ್ತಾನದ ಬಾಲಾಕೋಟ್ನಲ್ಲಿನ ಜೈಶ್--ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ಭಾರತ ವಾಯುದಾಳಿ ನಡೆಸಿತ್ತುಇದಕ್ಕೆ ಉತ್ತರವಾಗಿ ಪಾಕಿಸ್ತಾನ ಭಾರತದ ನಾಗರಿಕ ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿ, ಸಂದರ್ಭದಲ್ಲಿ ಪಾಕ್ ನೆಲದಲ್ಲಿ ಇಳಿದಿದ್ದ ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದಿತ್ತು. ಅಭಿನಂದನ್ ಅವರನ್ನು ಮೋದಿ ಸರ್ಕಾರ ಯಶಸ್ವಿಯಾಗಿ ಬಿಡಿಸಿಕೊಂಡಿತ್ತು. ಏಪ್ರಿಲ್ ತಿಂಗಳಲ್ಲಿ ಇಮ್ರಾನ್ ಖಾನ್ ಅವರನ್ನು ಉಲ್ಲೇಖಿಸಿದ ವರದಿಯೊಂದು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಚುನಾವಣೆಗಳಲ್ಲಿ ಗೆದ್ದರೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಇರುತ್ತದೆ ಎಂಬುದಾಗಿ ಹೇಳಿತ್ತುಭಾರತದಲ್ಲಿ ಕಾಂಗ್ರೆಸ್ ಪಕ್ಷವೇನಾದರೂ ಮುಂದಿನ ಸರ್ಕಾರ ರಚಿಸಿದರೆ ಕಾಶ್ಮೀರದ ವಿಚಾರದಲ್ಲಿ ಇತ್ಯರ್ಥಕ್ಕೆ ಬರಲು ಅದುಅಂಜಬಹುದು ಎಂದೂ ಇಮ್ರಾನ್ ಖಾನ್ ಹೇಳಿದ್ದರು.  ‘ಬಹುಶಃ ಬಲಪಂಥೀಯ ಪಕ್ಷವಾದ ಬಿಜೆಪಿ ಗೆದ್ದರೆ ಕಾಶ್ಮೀರ ವಿಚಾರದಲ್ಲಿ ಏನಾದರೂ ಒಂದು ಇತ್ಯರ್ಥ ಸಾಧ್ಯವಾಗಬಹುದು ಎಂದು ಖಾನ್ ಹೇಳಿದುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಭಾರತದ ನಿರ್ಣಾಯಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ೩೦೩ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಪ್ರಚಂಡ ಜಯಗಳಿಸಿ, ಕಾಂಗ್ರೆಸ್ ಪಕ್ಷವನ್ನು ವಸ್ತುಶಃ ಮೂಲೆಗುಂಪು ಮಾಡಿದೆ. ಬಿಜೆಪಿಯು ೨೦೧೪ರಲ್ಲಿ ತಾನು ಗಳಿಸಿದ್ದ ೨೮೨ ಸ್ಥಾನಗಳನ್ನೂ ಮೀರಿಸಿ ೩೦೩ ಸ್ಥಾನಗಳಿಸಿದೆ. ಮಿತ್ರ ಪಕ್ಷಗಳ ಸ್ಥಾನಗಳು ಸೇರಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ಡಿಎ) ಗಳಿಸಿದ ಸ್ಥಾನಗಳ ಸಂಖ್ಯೆ ೩೫೨ಕ್ಕೆ ತಲುಪಿದ್ದು, ಚುನಾವಣೆಯು ನರೇಂದ್ರ ಮೋದಿ ಅವರಿಗೆ ಎರಡನೇ ಅವಧಿಗೆ ಪ್ರಧಾನಿಯಾಗಲು ದಾರಿ ಸುಗಮಗೊಳಿಸಿತ್ತು.

2019: ನವದೆಹಲಿ: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ, ದೇಶ ತ್ಯಜಿಸದಂತೆ ತಡೆಯುವ ಸಲುವಾಗಿ ಕೋಲ್ಕತದ ಮಾಜಿ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಲುಕ್ ಔಟ್ ನೋಟಿಸ್ ಜಾರಿ ಮಾಡಿತು. ಎಲ್ಲ ವಿಮಾನ ನಿಲ್ದಾಣಗಳು ಮತ್ತು ವಲಸೆ ಅಧಿಕಾರಿಗಳನ್ನು ಸಿಬಿಐ ವಿಚಾರವಾಗಿ ಜಾಗೃತಗೊಳಿಸಿತು  ಮತ್ತು ರಾಜೀವ್ ಕುಮಾರ್ ಅವರು ದೇಶದಿಂದ ಹೊರಹೋಗುವ ಯತ್ನ ನಡೆಸಿದಲ್ಲಿ ತನಗೆ ತಿಳಿಸುವಂತೆ  ಸೂಚನೆ ನೀಡಿದೆ. ಬಂಧನದಿಂದ ರಕ್ಷಣೆ ಕೋರಿ ರಾಜೀವ್ ಕುಮಾರ್ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ  ಅರ್ಜಿಯನ್ವಯ ನ್ಯಾಯಾಲಯ ಒದಗಿಸಿದ್ದ ರಕ್ಷಣೆ ಮುಕ್ತಾಯಗೊಂಡಿದ್ದು, ಅದನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಕೇಂದ್ರೀಯ ತನಿಖಾ ಸಂಸ್ಥೆಯು ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ೧೯೮೯ರ ತಂಡದ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲು ಬಯಸಿದೆ. ರಾಜೀವ್ ಕುಮಾರ್ ಅವರು ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವ ಮುನ್ನ ಅದರ ತನಿಖೆ ನಡೆಸಿದ್ದ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು. ರಾಜೀವ್ ಕುಮಾರ್ ಅವರು ತನಿಖೆಯಲ್ಲಿ ಸಹಕರಿಸುತ್ತಿಲ್ಲವಾದ ಕಾರಣ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಸಿಬಿಐ ಸುಪ್ರೀಂಕೋರ್ಟಿಗೆ ತಿಳಿಸಿತ್ತು. ಕುಮಾರ್ ಅವರು ಮುಖ್ಯ ಆರೋಪಿ ಮತ್ತು ಸಂಭವನೀಯ ಆರೋಪಿಯ ಕರೆ ವಿವರಗಳ ದಾಖಲೆಗಳ (ಸಿಡಿಆರ್ಗಳು) ವಸ್ತುಸ್ವರೂಪದ ದಾಖಲೆಗಳನ್ನು ನಾಶ ಪಡಿಸಿದ್ದಾರೆ ಮತ್ತು ಕೈಯಾಡಿಸಿದ್ದಾರೆ ಎಂದೂ ಸಿಬಿಐ ಸುಪ್ರೀಂಕೋರ್ಟಿಗೆ ತಿಳಿಸಿತ್ತು. ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರಾಗಿದ್ದ ರಾಜೀವ್ ಕುಮಾರ್ ಅವರು ಹಗರಣದಲ್ಲಿ ರಾಜಕೀಯ ಕಾರ್ಯಕರ್ತರು ಶಾಮೀಲಾಗಿದ್ದುದಕ್ಕೆ ಸಂಬಂಧಿಸಿದ ಹಲವಾರು ನಿರ್ಣಾಯಕ ಸಾಕ್ಷ್ಯಗಳಿದ್ದ ಮೊಬೈಲ್ ಫೋನುಗಳು ಮತ್ತು ಲ್ಯಾಪ್ ಟ್ಯಾಪ್ಗಳನ್ನು ತನಿಖಾ ಸಂಸ್ಥೆಯಿಂದ ಬಿಡುಗಡೆ ಮಾಡಿಸಿಕೊಂಡು ಹೋಗಲು ಅವಕಾಶ ನೀಡಿದ್ದರು ಎಂದೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ಸಿಬಿಐ ಪರವಾಗಿ ವಾದಿಸುತ್ತಾ ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ದಾಖಲೆಗಳನ್ನು ಆರೋಪಿಗಳಿಂದ ವಶ ಪಡಿಸಿಕೊಳ್ಳಲಾಗಿತ್ತು ಎಂದೂ ಅವರು ತಿಳಿಸಿದ್ದರು.
ವಶಪಡಿಸಿಕೊಳ್ಳಲಾದ ಮೊಬೈಲ್ ಫೋನುಗಳು ಮತ್ತು ಲ್ಯಾಪ್ ಟ್ಯಾಪ್ಗಳನ್ನು ವಿಧಿವಿಜ್ಞಾನ ಪರೀಕ್ಷೆಗೂ ಕಳುಹಿಸಲಾಗಿರಲಿಲ್ಲ ಮತ್ತು  ವಸ್ತುಸ್ವರೂಪದ ಸಾಕ್ಷ್ಯಾಧಾರಗಳನ್ನು ನಾಶ ಪಡಿಸಲಾಗಿತ್ತು ಎಂದೂ ಮೆಹ್ತ ಅವರು ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಪಶ್ಚಿಮ ಬಂಗಾಳ ಪೊಲೀಸ್ ನಡುವಣ ಘರ್ಷಣೆ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದ ಸುಪ್ರೀಂಕೋರ್ಟ್, ಸಣ್ಣ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಮಂದಿ ಹೂಡಿಕೆದಾರರು ಮೌನವಾಗಿ ಕಾಯುತ್ತಿದ್ದಾರೆ ಎಂದು ಹೇಳಿತ್ತು. ’ರಾಜಕೀಯ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕುಮಾರ್ ಅವರು ಆಪಾದಿಸಿದ್ದನ್ನು ಮತ್ತು ಸಿಬಿಐಯ ಮಾಜಿ ಹಂಗಾಮೀ ನಿರ್ದೇಶಕ ಎಂ. ನಾಗೇಶ್ವರ ರಾವ್ ವಿರುದ್ಧ ಅವರು ಮಾಡಿದ ಆಪಾದನೆಗಳನ್ನೂ ಸುಪ್ರೀಂಕೋರ್ಟ್ ಪರಿಗಣಿಸಿತ್ತುಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಕುಮಾರ್ ಅವರು ಚಿಟ್ ಫಂಡ್ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ಗುರಿಮಾಡಿಕೊಂಡಿದೆ ಮತ್ತು ನೋಟು ಅಮಾನ್ಯೀಕರಣದ ಬಳಿಕ ತಮ್ಮಕುಟುಂಬ ಸದಸ್ಯರ ಮೇಲೆ ಕಣ್ಣಿಡಲಾಗಿದ್ದು ರಾವ್ ಅವರು ದುರುದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದರು. ಸಿಬಿಐ ೨೦೧೪ರಲ್ಲಿ ಶಾರದಾ ಚಿಟ್ ಫಂಡ್ ಹಗರಣದ ತನಿಖೆ ಆರಂಭಿಸಿತ್ತು. ಕನಿಷ್ಠ ೧೭ ಲಕ್ಷ ಠೇವಣಿದಾರರು ಸುಮಾರು ,೫೦೦ ಕೋಟಿ ರೂಪಾಯಿಗಳನ್ನು ಶಾರದಾ ಚಿಟ್ ಫಂಡ್ ಸಂಸ್ಥೆಯಲ್ಲಿ ತೊಡಗಿಸಿದ್ದರು. ಶಾರದಾ ಸಂಸ್ಥಾಪಕ ಸುದೀಪ್ತ ಸೆನ್ ಅವರು ೨೦೧೩ರಲ್ಲಿ ಸಿಬಿಐಗೆ ತಪ್ಪೊಪ್ಪಿಗೆ ಪತ್ರ ಬರೆದಿದ್ದು ಅದರಲ್ಲಿ ತಾನು ದೊಡ್ಡ ಮೊತ್ತದ ಹಣವನ್ನು ಹಲವಾರು ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು ಮತ್ತು ಇತರರಿಗೆ ಪಾವತಿ ಮಾಡಿರುವುದಾಗಿ ತಿಳಿಸಿದ್ದರುಅಪಾರ ಪ್ರಮಾಣದಲ್ಲಿ ಹಣ ವಾಪಸ್ ಬರುತ್ತದೆ ಎಂಬ ಭರವಸೆ ನೀಡಿ ತಮ್ಮ ಹಣವನ್ನು ಕಂಪೆನಿಯಲ್ಲಿ ಠೇವಣಿ ಇಡುವಂತೆ ಮನ ಒಲಿಸುವುದು ಕಂಪೆನಿಯ ಕಾರ್ಯ ವಿಧಾನವಾಗಿತ್ತು. ಶಾರದಾ ಪ್ರಕರಣದಲ್ಲಿ ರಾಜೀವ್ ಕುಮಾರ್ ಅವರನ್ನು ವಶಕ್ಕೆ ಪಡೆದೇ ತನಿಖೆ ನಡೆಸುವ ಅಗತ್ಯವನ್ನು ಸಾಬೀತು ಪಡಿಸುವಂತಹ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸುವಂತೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಸಿಬಿಐಗೆ ಸೂಚಿಸಿತ್ತು. ಸಂಸ್ಥೆಯ ಮನವಿ ಪ್ರಾಮಾಣಿಕವಾದದ್ದು ಮತ್ತು ರಾಜಕೀಯ ಉದ್ದೇಶಗಳಿಂದ ಹೊರತಾದದ್ದು ಎಂಬುದಾಗಿ ಸಂಸ್ಥೆ ಸಾಬೀತು ಪಡಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಮೇ ೧೭ರಂದು ಯಾವುದೇ ಬಂಧನದಿಂದ ರಕ್ಷಣೆ ಒದಗಿಸಿ ನೀಡಿದ್ದ ತನ್ನ ಆದೇಶವನ್ನು ಸುಪ್ರೀಂಕೋರ್ಟ್ ಹಿಂತೆಗೆದುಕೊಂಡಿತ್ತು ಮತ್ತು ಕಾನೂನು ಪ್ರಕಾರ ಮುಂದುವರೆಯುವಂತೆ ಸಿಬಿಐಗೆ ನಿರ್ದೇಶಿಸಿತ್ತು. ಫೆಬ್ರುವರಿ ೫ರ ದಿನಾಂಕದ ಆದೇಶದ ಪ್ರಕಾರ ರಾಜೀವ್ ಕುಮಾರ್ ಅವರಿಗೆ ಒದಗಿಸಲಾಗಿದ್ದ ರಕ್ಷಣೆಯನ್ನು ನಾವು ಹಿಂಪಡೆದಿದ್ದೇವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠ ಹೇಳಿತ್ತು ಮತ್ತು ನಿರೀಕ್ಷಣಾ ಜಾಮೀನು ಪಡೆಯಲು ಸೂಕ್ತ ನ್ಯಾಯಾಲಯಕ್ಕೆ ತೆರಳಲು ಕುಮಾರ್ ಅವರಿಗೆ ಒಂದು ವಾರದ ಕಾಲಾವಕಾಶ ನೀಡಿತ್ತು. ಮೇ ೨೦ರಂದು, ಪಶ್ಚಿಮ ಬಂಗಾಳದ ನ್ಯಾಯಾಲಯಗಳು ವಕೀಲರ ಮುಷ್ಕರದ ಕಾರಣ ಕಾರ್ ನಿರ್ವಹಿಸುತ್ತಿಲ್ಲ ಎಂಬ ನೆಲೆಯಲ್ಲಿ ಕುಮಾರ್ ಅವರು ಮತ್ತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಕುಮಾರ ಅವರು ಕೋಲ್ಕತಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜನವರಿ ಕೊನೆಯ ವಾರದಲ್ಲಿ ಸಿಬಿಐ ತಂಡವು ಆಗ ಕೋಲ್ಕತ ಪೊಲೀಸ್ ಕಮೀಷನರ್ ಆಗಿದ್ದ ರಾಜೀವ್ ಕುಮಾರ್ ನಿವಾಸಕ್ಕೆ ಪ್ರಶ್ನಿಸುವ ಸಲುವಾಗಿ ಬಂದಾಗ ಕೇಂದ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಘರ್ಷಣೆ ಸಂಭವಿಸಿತ್ತು. ಸ್ಥಳೀಯ ಪೊಲೀಸರು ಸಿಬಿಐ ಸಿಬ್ಬಂದಿಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ್ದಲ್ಲದೆ ಅದರ ಅಧಿಕಾರಿಗಳನ್ನು ಬಂಧಿಸಿದ್ದರು. ಕುಮಾರ್ ರಕ್ಷಣೆಗಾಗಿ ಸ್ವತಃ ಮುಂದಾದ ಮುಖ್ಯಮಂತ್ರಿ ಮಮತಾ ಬಾನರ್ಜಿ ಕೇಂದ್ರದ ಕ್ರಮದ ವಿರುದ್ಧ ಧರಣಿಯನ್ನೂ ಆರಂಭಿಸಿದ್ದರು.

2019: ನವದೆಹಲಿ: ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ‘ಇಂದಿನದ್ದು ಪ್ರಧಾನಿಯವರ ಜೊತೆಗಿನ ಮೊದಲ ಸಭೆ. ದೇವರು ಇಚ್ಛಿಸಿದರೆ ಬಹುಶಃ ಮುಂದಿನ ಐದು ವರ್ಷಗಳ ಅವಧಿಯಲ್ಲಿ ನಾನು ೩೦, ೪೦, ೫೦ ಬಾರಿಯಾದರೂ ಸರಿ ಭೇಟಿ ಮಾಡುತ್ತೇನೆ. ಪ್ರತಿಬಾರಿ ಭೇಟಿ ಮಾಡಿದಾಗಲೂ ಅವರಿಗೆ ವಿಶೇಷ ಸ್ಥಾನಮಾನ ಬಗ್ಗೆ ನೆನಪಿಸುತ್ತೇನೆ. ನಾವು ನೆನಪಿಸದ ವಿನಃ ಪರಿಸ್ಥಿತಿ ಬದಲಾಗುವುದಿಲ್ಲ ಎಂದು ಜಗನ್ ರೆಡ್ಡಿ ಭೇಟಿಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರುಆಂಧ್ರಪ್ರದೇಶದ ೧೭೫ ಸದಸ್ಯ ಬಲದ ವಿಧಾನಸಭೆಯ ೧೫೨ ಸ್ಥಾನಗಳನ್ನು ಮತ್ತು ರಾಜ್ಯದ ೨೫ ಲೋಕಸಭಾ ಸ್ಥಾನಗಳ ಪೈಕಿ ೨೨ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರಿರುವ ಜಗನ್ ರೆಡ್ಡಿ ಅವರ ವೈಎಸ್ ಆರ್ ಕಾಂಗ್ರೆಸ್ ಪಕ್ಷವು ಚುನಾವಣೆ ವೇಳೆಯಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಬಿಜೆಪಿಯು ಕೇಂದ್ರದಲ್ಲಿ ಸ್ಪಷ್ಟ ಬಹುಮತ ಪಡೆಯದೇ ಇದ್ದಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು ಎಂದು ವೈಎಸ್ಆರ್ಸಿಪಿ ಮುಖ್ಯಸ್ಥ ಹೇಳಿದರು. ’ಬಿಜೆಪಿಯು ೨೫೦ ಸ್ಥಾನಗಳ ಒಳಗೆ ಬಂದಿದ್ದರೆ, ನಾವು ಕೇಂದ್ರ ಸರ್ಕಾರವನ್ನು ಅಷ್ಟೊಂದು ಅವಲಂಬಿಸಬೇಕಾದ ಅಗತ್ಯ ಇರಲಿಲ್ಲ. ಆದರೆ ಈಗ ಅವರಿಗೆ ನಮ್ಮ ಅಗತ್ಯ ಇಲ್ಲ. ನಾವು ಏನು ಮಾಡಲು ಸಾಧ್ಯವೋ ಅದನ್ನು ಮಾಡಿದ್ದೇವೆ ಮತ್ತು ಅವರಿಗೆ (ಪ್ರಧಾನಿ) ನಮ್ಮ ಪರಿಸ್ಥಿತಿ ಬಗ್ಗೆ ಹೇಳಿದ್ದೇವೆ ಎಂದು ಜಗನ್ ರೆಡ್ಡಿ ನುಡಿದರು.
ತಮ್ಮ , ಲೋಕಕಲ್ಯಾಣ ಮಾರ್ಗ ನಿವಾಸದಲ್ಲಿ ಜಗನ್ ರೆಡ್ಡಿ ಜೊತೆಗೆ ನಡೆದ ಭೇಟಿ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿಯವರುಇದೊಂದು ಫಲಪ್ರದ ಸಂವಹನವಾಗಿತ್ತು ಎಂದು  ಬಣ್ಣಿಸಿದರು. ಉಭಯ ನಾಯಕರು ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಚರ್ಚಿಸಿದರು ಎಂದು ಸುದ್ದಿ ಸಂಸ್ಥೆಯು ಜಗನ್ ರೆಡ್ಡಿ ಅವರನ್ನು ಉಲ್ಲೇಖಿಸಿ ವರದಿ ಮಾಡಿತು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರವು ಅತ್ಯಂತ ವಿವಾದಾತ್ಮಕ ವಿಷಯವಾಗಿದ್ದು, ತೆಲುಗು ದೇಶಂ ಪಕ್ಷವು (ಟಿಡಿಪಿ) ೨೦೧೮ರ ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಿಂದ (ಎನ್ಡಿಎ) ಹೊರಬರಲು ಕಾರಣವಾಗಿತ್ತು. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಚನದಿಂದ ಬಿಜೆಪಿ ಹಿಂದೆ ಸರಿಯಿತು ಎಂದು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಎನ್ಡಿಎಯಿಂದ ಹೊರಬರುತ್ತಾ ಆಪಾದಿಸಿದ್ದರು. ಬಿಜೆಪಿ ೧೪ನೇ ಹಣಕಾಸು ಆಯೋಗದ ವರದಿಯನ್ನು ಉಲ್ಲೇಖಿಸಿ ಆಂಧ್ರಪ್ರದೇಶದಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಮೋದಿ ಭೇಟಿ ಬಳಿಕ ಜಗನ್ ರೆಡ್ಡಿ ಅವರು ಆಂಧ್ರ ಭವನದಲ್ಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವರು ಮತ್ತು ಮೇ ೩೦ರಂದು ವಿಜಯವಾಡದಲ್ಲಿ ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ. ಅವರು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಆಂಧ್ರಪ್ರದೇಶದಲ್ಲಿ ಏಪ್ರಿಲ್ ೧೧ರಂದು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಜಂಟಿಯಾಗಿ ನಡೆದಿತ್ತು. 

2018: ನವದೆಹಲಿ: ತಮ್ಮ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಖ್ಯ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ’ಕಳೆದ ನಾಲ್ಕು ವರ್ಷಳಲ್ಲಿ ಅಭಿವೃದ್ಧಿ ಪ್ರಬಲ ಜನತಾ ಚಳವಳಿಯಾಗಿದೆ ಎಂದು ಪ್ರತಿಪಾದಿಸಿದರು. ‘೨೦೧೪ರಲ್ಲಿ ಈದಿನ ನಾವು ಭಾರತದ ಪರಿವರ್ತನೆಯತ್ತ ಶ್ರಮಿಸುವ ನಮ್ಮ ಯಾತ್ರೆಯನ್ನು ಆರಂಭಿಸಿದೆವು ಎಂದು ಅವರು ಟ್ವಿಟ್ಟರಿನಲ್ಲಿ ಬರೆದರು. ‘ಕಳೆದ ನಾಲ್ಕು ವರ್ಷಗಳಲ್ಲಿ, ಅಭಿವೃದ್ಧಿಯು ಪ್ರಬಲ ಜನತಾ ಚಳವಳಿಯಾಗಿದೆ. ಭಾರತದಲ್ಲಿನ ಪ್ರತಿಯೊಬ್ಬ ಪ್ರಜೆಗೂ ತಾನು ಭಾರತದ ಪ್ರಗತಿಯ ಪಥದಲ್ಲಿ ತಾನೂ ಸೇರಿದ್ದೇನೆ ಎಂಬ ಭಾವನೆ ಮೂಡಿದೆ. ೧೨೫ ಕೋಟಿ ಭಾರತೀಯರು ಈಗ ಭಾರತವನ್ನು ಉನ್ನತ ಸ್ಥಾನದತ್ತ ಒಯ್ಯುತ್ತಿದ್ದಾರೆ ಎಂದು ಅವರು ಹೇಳಿದರು. ‘ಸಾಫ್ ನಿಯತ್, ಸಹೀ ವಿಕಾಸ್ ಹ್ಯಾಷ್‌ಟ್ಯಾಗಿನೊಂದಿಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆಗಳನ್ನು ತಿಳಿಸುವ ಚಾರ್ಟ್‌ಗಳು, ಗ್ರಾಫಿಕ್ ಗಳು ಮತ್ತು ವಿಡಿಯೋವನ್ನು ಪೋಸ್ಟ್ ಮಾಡಿದರು.  ‘ನಮ್ಮ ಸರ್ಕಾರದ ಮೇಲೆ ಅಚಲ ವಿಶ್ವಾಸ ಇಟ್ಟಿರುವುದಕ್ಕಾಗಿ ನಾನು ನನ್ನ ಸಹ ಪ್ರಜೆಗಳಿಗೆ ತಲೆಬಾಗುತ್ತೇನೆ. ಈ ಬೆಂಬಲ ಮತ್ತು ಪ್ರೀತಿಯು ಇಡೀ ಸರ್ಕಾರಕ್ಕೆ ಶಕ್ತಿ ಮತ್ತು ಸ್ಫೂರ್ತಿಯ ಆಕರವಾಗಿದೆ ಎಂದು ಅವರು ಟ್ವೀಟ್ ಮಾಡಿದರು. ಇದೇ ಹುರುಪು ಮತ್ತು ಸರ್ಮಪಣೆಯ ಭಾವದೊಂದಿಗೆ ತಮ್ಮ ಸರ್ಕಾರವು ಜನರ ಸೇವೆಯನ್ನು ಮುಂದುವರೆಸಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ‘ನಮಗೆ ಯಾವಾಗಲೂ ಭಾರತವೇ ಮೊದಲು ಎಂದು ಅವರು ಬರೆದರು.  ಸಂಪೂರ್ಣ ಸಮಗ್ರತೆ ಮತ್ತು ಅತ್ಯುತ್ತಮ ಉದ್ದೇಶದೊಂದಿಗೆ ತಮ್ಮ ಸರ್ಕಾರವು ನವಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಸಲುವಾಗಿ ’ಭವಿಷ್ಯಕ್ಕೆ ಅನುಕೂಲವಾಗುವಂತಹ ಮತ್ತು ಜನ ಮಿತ್ರ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಮೋದಿ ಹೇಳಿದರು.

2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಯೇತರ ರಂಗ ಕಟ್ಟುವ ಕಲ್ಪನೆಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ’ಕಾಲ್ಪನಿಕ ಪರ್ಯಾಯ ಎಂದು ಬಣ್ಣಿಸಿ, ’ಮಹತ್ವಾಕಾಂಕ್ಷೆಯ ಭಾರತವು ಭ್ರಮನಿರಸನಗೊಂಡ ರಾಜಕೀಯ ಪಕ್ಷಗಳ ’ಅರಾಜಕ ಮೈತ್ರಿಕೂಟವನ್ನು ತಿರಸ್ಕರಿಸುವುದು ಎಂದು ಹೇಳಿದರು.  ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಫೇಸ್ ಬುಕ್‌ನಲ್ಲಿ ಪುಟ್ಟ ಲೇಖನ ಪೋಸ್ಟ್ ಮಾಡಿದ ಜೇಟ್ಲಿ ’ಚರ್ಚೆಯ ರಾಜಕೀಯ ಅಜೆಂಡಾ ಮೋದಿ ವರ್ಸಸ್ ಇಂತಹ ಪಕ್ಷಗಳ  ಅರಾಜಕ ಮೈತ್ರಿಕೂಟ ಆಗಿದೆ ಎಂದು ನುಡಿದರು. ‘ಭ್ರಮ ನಿರಸನಗೊಂಡಿರುವ ರಾಜಕೀಯ ಪಕ್ಷಗಳ ಗುಂಪೊಂದು ಒಟ್ಟಾಗುವ ಭರವಸೆ ನೀಡುತ್ತಿದೆ. ಅವುಗಳ ಕೆಲವು ನಾಯಕರು ಉದ್ವಿಗ್ನ ಪ್ರವೃತ್ತಿಯವರು ಮತ್ತು ಇತರರು ಆಗಾಗ ರಾಜಕೀಯ ಸಿದ್ಧಾಂತಗಳನ್ನು ಬದಲಾಯಿಸುವವರು. ಟಿಎಂಸಿ, ಡಿಎಂಕೆ, ಟಿಡಿಪಿ, ಬಿಎಸ್ಪಿ, ಮತ್ತು ಜೆಡಿ(ಎಸ್) ನಂತಹ ಹಲವು ಪಕ್ಷಗಳು ಬಿಜೆಪಿ ಜೊತೆಗೆ ಅಧಿಕಾರ ಹಂಚಿಕೊಂಡಂತಹವುಗಳು. ಅವರು ತಮ್ಮ ರಾಜಕೀಯ ನಿಲುವುಗಳನ್ನು ಮನಬಂದಂತೆ ಬದಲಾಯಿಸುತ್ತಾರೆ ಎಂದು ಜೇಟ್ಲಿ ಹೇಳಿದರು.  ‘ಪ್ರಬಲ ಪ್ರಜಾಪ್ರಭುತ್ವವನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಸಮಾಜಗಳು ಅರಾಜಕತೆಯನ್ನು ಆಹ್ವಾನಿಸುವುದಿಲ್ಲ ಎಂದು ನುಡಿದ ಜೇಟ್ಲಿ, ’ಪ್ರಬಲ ರಾಷ್ಟ್ರ ಮತ್ತು ಉತ್ತಮ ಆಡಳಿತದ ಅಗತ್ಯಗಳು ಅರಾಜಕತೆಯೆಂದರೆ ಅಸಹ್ಯ ಪಡುತ್ತವೆ ಎಂದು ಹೇಳಿದರು.  ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮೈತ್ರಿಕೂಟ ರಚಿಸಲು ಪ್ರಯತ್ನಿಸುತ್ತಿವೆ. ಪ್ರಧಾನಿ ಮೋದಿಯವರು ’ಹಗರಣ ಮುಕ್ತ ಸರ್ಕಾರವನ್ನು ನೀಡಿದ್ದಾರೆ ಮತ್ತು ತಮ್ಮ ಐದನೇ ವಷದಲ್ಲಿ ನೀತಿಗಳು ಮತ್ತು ಕಾರ್‍ಯಕ್ರಮಗಳನ್ನು ಕ್ರೋಡೀಕರಿಸಿ ಗಟ್ಟಿಗೊಳಿಸುವತ್ತ ಬೆಳಕು ಚೆಲ್ಲುವರು ಎಂದು ಜೇಟ್ಲಿ ಬರೆದರು. ಈ ತಿಂಗಳ ಆದಿಯಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿದ್ದ ಜೇಟ್ಲಿ ಅವರನ್ನು ಐಸಿಯುವಿನಿಂದ ಹೊರ ತರಲಾಗಿತ್ತು. ’ರಾಷ್ಟ್ರದ ಚಿತ್ತವು ಕಳೆದ ನಾಲ್ಕು ವರ್ಷಗಳಲ್ಲಿ ಹತಾಶೆಯಿಂದ ಭರವಸೆ ಮತ್ತು ಮಹತ್ವಾಕಾಂಕ್ಷೆಯತ್ತ ಹೊರಳಿದೆ ಎಂದು ಅವರು ಹೇಳಿದರು. ಉತ್ತಮ ಆಡಳಿತ ಮತ್ತು ಉತ್ತಮ ಆರ್ಥಿಕತೆಯು ಉತ್ತಮ ರಾಜಕೀಯದ ಜೊತೆಗೆ ಹಾಸುಹೊಕ್ಕಾಗಿದೆ. ಈ ಕಾರಣದಿಂದಾಗಿಯೇ ಬಿಜೆಪಿಯು ತನ್ನ ಭೌಗೋಳಿಕ ನೆಲೆ ಮತ್ತು ಸಾಮಾಜಿಕ ನೆಲೆ ವಿಸ್ತರಣೆಗೊಂಡಿರುವ ಬಗ್ಗೆ ಆತ್ಮವಿಶ್ವಾಸದಿಂದ ಇದ್ದು, ವಿಜಯದ ಸಾಧ್ಯತೆ ಅಗಾಧವಾಗಿ ವೃದ್ಧಿಸಿದೆ ಎಂದು ಜೇಟ್ಲಿ ಹೇಳಿದರು.  ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಜೇಟ್ಲಿ ’ಅದು ಅಧಿಕಾರವಿಲ್ಲದೆ ಭ್ರಮನಿರಸನದಿಂದ ಚಡಪಡಿಸುತ್ತಿದೆ ಎಂದು ಟೀಕಿಸಿದರು.
ಭಾರತದ ರಾಜಕೀಯದಲ್ಲಿ ಅಗ್ರಗಣ್ಯ ಪಕ್ಷವಾಗಿದ್ದ ಕಾಂಗ್ರೆಸ್ ಗೌಣದತ್ತ ಸಾಗುತ್ತಿದೆ. ಅದರ ರಾಜಕೀಯ ಸ್ಥಾನ ಮುಖ್ಯ ಪ್ರವಾಹದ ಪಕ್ಷವಾಗುವ ಬದಲಿಗೆ ಗೌಣ ಸಂಘಟನೆಗಳು ಸಾಮಾನ್ಯವಾಗಿ ಅಂಗೀಕರಿಸುವಂತಹ ಸ್ಥಾನಗಳಾಗಿ ಬದಲಾಗುತ್ತಿವೆ. ಗೌಣ ಸಂಘಟನೆಗಳು ಎಂದಿಗೂ ಅಧಿಕಾರಕ್ಕೆ ಬರುವ ಆಶಯ ಇಟ್ಟುಕೊಳ್ಳಲಾರವು ಎಂದು ಸಚಿವರು ಫೇಸ್ ಬುಕ್ ಪೋಸ್ಟಿನಲ್ಲಿ ಬರೆದರು. ಕಾಂಗ್ರೆಸ್ಸಿನ ಅತ್ಯುತ್ತಮ ಭರವಸೆ ಪ್ರಾದೇಶಿಕ ರಾಜಕೀಯ ಪಕ್ಷಗಳ ಬೆಂಬಲಿಗನಾಗುವುದರಲ್ಲಿ ನಿಂತಿದೆ. ರಾಜ್ಯ ಮಟ್ಟದ ರಾಜಕೀಯ ಪಕ್ಷಗಳು ಇದನ್ನು ಅರ್ಥಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿವೆ. ಹೆಚ್ಚೆಂದರೆ ಅದನ್ನು ಕಿರಿಯ ಪಾಲುದಾರನನ್ನಾಗಿ ಇಲ್ಲವೇ ಕೇವಲ ಬೆಂಬಲಿಗನನ್ನಾಗಿ ಪರಿಗಣಿಸುತ್ತಿವೆ ಎಂದು ಜೇಟ್ಲಿ ಹೇಳಿದರು.

2018: ನವದೆಹಲಿ: ಭಾರತೀಯ ಜನತಾ ಪಕ್ಷ ಈ ದೇಶಕ್ಕೆ ಅತ್ಯಂತ ಕಠಿಣ ಪರಿಶ್ರಮಿ (ಹಾರ್ಡ್ ವರ್ಕಿಂಗ್) ಪ್ರಧಾನಿಯನ್ನು ಹಾಗೂ ವಿಶ್ವದ ಅತ್ಯಂತ ಜನಪ್ರಿಯ ನಾಯಕನನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ೧೫ರಿಂದ ೧೮ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಬಿಜೆಪಿಯ ನಾಯಕರು ಎಂಬುದೇ ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲಿ ಶ್ಲಾಘಿಸಿದರು.  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷ ಪೂರೈಸಿ ಐದನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಧಿಕಾರದ ಗದ್ದುಗೆ ಏರಿ ನಾಲ್ಕು ವರ್ಷ ಪೂರೈಸಿದ್ದಕ್ಕೆ ಎನ್ ಡಿಎ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಬಿಜೆಪಿ ಅಧ್ಯಕ್ಷ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ಕಠಿಣ ಪರಿಶ್ರಮ ಹಾಗೂ ಜನಪ್ರಿಯತೆಯನ್ನು ಹೊಗಳಿದರು. ದೇಶದ ಲಕ್ಷಾಂತರ ಜನರ ಉತ್ತಮ ಜೀವನಕ್ಕಾಗಿ ಮತ್ತು ಅವರನ್ನು ಆರ್ಥಿಕವಾಗಿ ಮೇಲೆತ್ತುವ ಸಲುವಾಗಿ ಮೋದಿ ನೇತೃತ್ವದ ಸರ್ಕಾರ ಹಲವಾರು ಸಾಮಾಜಿಕ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಪ್ರಧಾನಿ ಮೋದಿಜೀ ಅವರು ವಿಶೇಷ ಶ್ಲಾಘನೆಗೆ ಅರ್ಹರು ಎಂದು ಶಾ ಹೇಳಿದರು.
ವಿಪಕ್ಷಗಳ ಒಗ್ಗಟ್ಟಿಗೆ ಹೆದರಿಕೆ ಇಲ್ಲ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ವಿಪಕ್ಷಗಳ ಒಂದಂಶದ ಅಜೆಂಡಾವನ್ನು ಸಾರಾಸಗಟಾಗಿ ತಿರಸ್ಕರಿಸಿದ ಅಮಿತ್ ಶಾ, ನಮ್ಮದು ಭ್ರಷ್ಟಾಚಾರ ಹಾಗೂ ಹಸಿವು ಮುಕ್ತ ಭಾರತದ ಅಜೆಂಡಾ ಎಂದು ಎದಿಗೇಟು ನೀಡಿದರು.  ವಿರೋಧ ಪಕ್ಷಗಳ ಒಗ್ಗಟ್ಟಿಗೆ ನಾವು ಹೆದರುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ನಮ್ಮ ವಿರುದ್ಧ ಹೋರಾಟ ನಡೆಸಿದ್ದವು. ಆದರೆ ಅದರ ಫಲಿತಾಂಶ ಏನಾಯಿತು? ನಮಗೆ ಜನ ಬೆಂಬಲ ಇದೆ, ಅದಕ್ಕಿಂತ ಹೊರತಾಗಿ ಬೇರೇನೂ ಇಲ್ಲಿ ನಡೆಯುವುದಿಲ್ಲ ಎಂದು ಅವರು ನುಡಿದರು. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ(ತೆಲುಗು ದೇಶಂ ಪಾರ್ಟಿ) ನಮ್ಮ ಮೈತ್ರಿಕೂಟದಿಂದ ಹೊರ ನಡೆದಿದೆ. ಆದರೆ ನಿತೀಶ್ ಕುಮಾರ್ ಜೀ ನಮ್ಮ ಜತೆ ಸೇರಿಕೊಂಡಿದ್ದಾರೆ. ಅಲ್ಲದೇ ೨೦೧೪ರ ನಂತರ ಎನ್ ಡಿಎ ಜೊತೆ ೧೧ಕ್ಕೂ ಅಧಿಕ ಪಕ್ಷಗಳು ಕೈಜೋಡಿಸಿವೆ. ನಮ್ಮ ಎನ್ ಡಿಎ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಕಡಿಮೆಯಾಗಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದರು.

2018: ನವದೆಹಲಿ: ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಗೆ ಸ್ವಯಂ ಸಿದ್ಧಪಡಿಸಿದ ’ರಿಪೋರ್ಟ್ ಕಾರ್ಡ್ ನಲ್ಲಿ ಎಫ್ ಗ್ರೇಡ್ ನೀಡಿದರು. ಇದೇ ವೇಳೆಗೆ ಹೊಸ ಹೊಸ ಘೋಷಣೆಗಳ ಸೃಷ್ಟಿ ಮತ್ತು ಸ್ವಪ್ರಚಾರದ ಶೈಲಿಗಾಗಿ ಎ+ ಗ್ರೇಡ್ ಕೂಡ ಕೊಟ್ಟರು. ರಾಹುಲ್ ಗಾಂಧಿ ಅವರು ನೀಡಿರುವ ೪ ವರ್ಷಗಳ ರಿಪೋರ್ಟ್ ಕಾರ್ಡ್ ಹೀಗಿತ್ತು:  ಕೃಷಿ: ಎಫ್, ವಿದೇಶ ನೀತಿ : ಎಫ್, ಇಂಧನ ದರ: ಎಫ್, ಉದ್ಯೋಗ ಸೃಷ್ಟಿ : ಎಫ್, ಘೋಷಣೆ ಸೃಷ್ಟಿ : ಎ+, ಸ್ವಪ್ರಚಾರ : ಎ+, ಯೋಗ : ಬಿ.  ಟಿಪ್ಪಣಿ: ಮಾಸ್ಟರ್ ಕಮ್ಯುನಿಕೇಟರ್, ಸಂಕೀರ್ಣ ವಿಷಯಗಳಲ್ಲಿ ಕಷ್ಟಪಡುವವರು, ಕಿರು ಅವಧಿಯ ಗಮನ.  ಮೋದಿ ಸರ್ಕಾರ ನಾಲ್ಕು ವರ್ಷ ಪೂರೈಸಿದ ದಿನವನ್ನು ಕಾಂಗ್ರೆಸ್ ಪಕ್ಷವು ’ದ್ರೋಹದ ದಿನ ಆಗಿ ಆಚರಿಸಿತು.  ದೇಶದ ಜನರಿಗೆ ಕೊಟ್ಟ ಭರವಸೆಗಳನ್ನು ಪೂರೈಸಿಲ್ಲ; ಬದಲಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದೇಶಕ್ಕೆ ಭಾರಿ ಹಾನಿ ಉಂಟು ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿತು.  ಎನ್‌ಡಿಎ ವೈಫಲ್ಯಗಳನ್ನು ಬಯಲು ಮಾಡುವ ಮತ್ತು ದೇಶಾದ್ಯಂತ ಪ್ರತಿಭಟನೆ ನಡೆಸುವ ಭರವಸೆಯನ್ನು ಕಾಂಗ್ರೆಸ್ ಈ ಸಂದರ್ಭದಲ್ಲಿ ನೀಡಿತು. ಅಖಿಲೇಶ್ ಟೀಕೆ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ನಾಲ್ಕು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ದಾಳಿ ನಡೆಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ದಲಿತರು, ಬಡವರು ಮತ್ತು ಮಹಿಳೆಯರು ಸಾಕಷ್ಟು ಬವಣೆ ಪಟ್ಟಿದ್ದಾರೆ ಎಂದು ಅವರು ದೂರಿದರು.  ನಾಲ್ಕು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ನಡೆಸುವುದಕ್ಕೆ ಮತ್ತು  ಬ್ಯಾಂಕ್ ವಂಚಕರು ವಿದೇಶಕ್ಕೆ ಪಲಾಯನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅಖೀಲೇಶ್ ಟೀಕಿಸಿದರು. ಮೋದಿ ಸರ್ಕಾರದ ಜಿಎಸ್‌ಟಿ, ನೋಟು ಅಮಾನ್ಯೀಕರಣ ಮುಂತಾದ ನಿರ್ಧಾರಗಳಿಂದ ರೈತರು, ವರ್ತಕರು, ನಿರುದ್ಯೋಗಿ ಯುವಕರು ಬಹುವಾಗಿ ಪರಿತಪಿಸುವಂತಾಯಿತು ಎಂದು ಅಖೀಲೇಶ್ ಹೇಳಿದರು. ಚಾಂಡಿ ಪ್ರಶ್ನೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಾಲ್ಕು ವರ್ಷ ಪೂರೈಸಿರುವ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಟ್ವಿಟರ್ ಮೂಲಕ ಪ್ರಶ್ನೆಗಳ ಸರಮಾಲೆಯನ್ನು ಪ್ರಧಾನಿ ಮೋದಿ ಅವರ ಉತ್ತರಕ್ಕಾಗಿ ಎಸೆದರು. ‘ಪ್ರಧಾನಿ ಮೋದಿಯವರೇ, ಈ ದೇಶದ ಜನರಿಗೆ ನೀವು ಕೊಟ್ಟ ಭರವಸೆಯಂತೆ ಲೀಟರಿಗೆ ೪೦ ರೂ. ದರದಲ್ಲಿ ಪೆಟ್ರೋಲ್ ಸಿಗುವುದು ಯಾವಾಗ?’ ಎಂದು ಚಾಂಡಿ ಪ್ರಶ್ನಿಸಿದರು. ‘ಹಾಗೆಯೇ, ವಿದೇಶದಲ್ಲಿ ಕಪ್ಪು ಹಣ ಕೂಡಿ ಹಾಕಿರುವವರ ಪಟ್ಟಿ ಬಿಡುಗಡೆಯಾಗುವುದು ಯಾವಾಗ ? ನಿಮ್ಮ ಸರ್ಕಾರದ ಅತೀ ಮುಖ್ಯ ಯೋಜನೆಗಳಾಗಿರುವ ಮೇಕ್ ಇನ್ ಇಂಡಿಯಾ, ಸ್ವಚ್ಚ ಭಾರತ ಅಭಿಯಾನ, ಲೋಕಪಾಲ ಮಸೂದೆ, ಭ್ರಷ್ಟಾಚಾರ ವಿರೋಧಿ ಚಳವಳಿಯ ಗತಿ ಈಗೇನಾಗಿದೆ ? ಎಂದು ದಯವಿಟ್ಟು ತಿಳಿಸಿ ಎಂದು ಚಾಂಡಿ ಪ್ರಧಾನಿಯವರನ್ನು ಕೇಳಿದರು.  ‘ನಿಮ್ಮ ಸಂಸದೀಯ ಕ್ಷೇತ್ರವಾಗಿರುವ ವಾರಾಣಸಿ ದೇಶದ ಎರಡನೇ ಅತ್ಯಂತ ಮಾಲಿನ್ಯ ಪೀಡಿತ ನಗರವೆಂದು ಇತ್ತೀಚಿನ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಏನು ಹೇಳುತ್ತೀರಿ? ಎಂದೂ ಪ್ರಶ್ನಿಸಿದ ಚಾಂಡಿ, ’ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಏನಾದರೂ ಪ್ರಯೋಜನವಾಗಿದೆಯೇ ಎಂಬುದನ್ನು ತಿಳಿಸಿ ಎಂದೂ
ಆಗ್ರಹಿಸಿದರು. ಆಧಾರ್ ಮಾಹಿತಿ ಮೂಲದಿಂದ ಮಾಹಿತಿ ಸೋರಿಕೆಯಾಗಿರುವುದು ಹೇಗೆ ಎಂದೂ ಉತ್ತರಿಸುವಂತೆ ಚಾಂಡಿ ಒತ್ತಾಯಿಸಿದರು.

2018: ನವದೆಹಲಿ: ನರೇಂದ್ರ ಮೋದಿ -ಅಮಿತ್ ಶಾ ಜೋಡಿ ರಾಷ್ಟ್ರಕ್ಕೆ ಹಾನಿಕರ ಎಂಬುದು ೪ ವರ್ಷಗಳ ಎನ್ ಡಿಎ ಆಡಳಿತದ ಬಳಿಕ ಈಗ ಜನರಿಗೆ ಗೊತ್ತಾಗಿದೆ ಎಂದು ಕಾಂಗ್ರೆಸ್ ಇಲ್ಲಿ ಹೇಳಿತು. ಎನ್ ಡಿಎ ಆಡಳಿತದ ಅವಧಿಯನ್ನು ’ದ್ರೋಹ, ಮೋಸಗಾರಿಕೆ, ಸೇಡು ಮತ್ತು ಸುಳ್ಳುಗಳ ಅವಧಿ ಎಂದು ಅದು ಬಣ್ಣಿಸಿತು.  ‘ಇಂಡಿಯಾ ಬಿಟ್ರೇಯಿಡ್ (ವಂಚಿತ ಭಾರತ) ಶೀರ್ಷಿಕೆಯ ಪುಸ್ತಿಕೆಯೊಂದನ್ನು ಮೋದಿ ಸರ್ಕಾರದ ೪ನೇ ವರ್ಷಾಚರಣೆ ಅಂಗವಾಗಿ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್ ಮತ್ತು ರಣದೀಪ್ ಸುರ್ಜಿವಾಲ ಅವರು ’ಎನ್‌ಡಿಎ ಆಡಳಿತದಲ್ಲಿ ಭೀತಿ ಮತ್ತು ದ್ವೇಷದ ಪರಿಸರ ಸೃಷ್ಟಿಯಾಗಿದೆ ಎಂದು ದೂರಿದರು. ‘ಮೋದಿ-ಅಮಿತ್ ಶಾ ಜೋಡಿ ರಾಷ್ಟ್ರಕ್ಕೆ ಹಾನಿಕರ ಎಂಬುದು ಜನರಿಗೆ ಈಗ ಗೊತ್ತಾಗಿದೆ. ನಾಲ್ಕು ವರ್ಷಗಳ ಮೋದಿ ಸರ್ಕಾರವನ್ನು ದ್ರೋಹ, ಮೋಸಗಾರಿಕೆ, ಸೇಡು ಮತ್ತು ಸುಳ್ಳುಗಳು ಈ ನಾಲ್ಕು ಶಬ್ದಗಳಲ್ಲಿ ಬಣ್ಣಿಸಬಹುದು ಎಂದು ಏಐಸಿಸಿ ಸಂಪರ್ಕ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುರ್ಜಿವಾಲ ಹೇಳಿದರು. ದಲಿತರು, ಬುಡಕಟ್ಟು ಜನರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಆಪಾದನೆಗಳನ್ನು ಉಲ್ಲೇಖಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ’ಬಿಜೆಪಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಯಾರೂ ಸುರಕ್ಷಿತರಾಗಿಲ್ಲ. ಪ್ರತಿಯೊಬ್ಬರೂ ನಿದ್ರೆ ರಹಿತ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಎಂದು ಹೇಳಿದರು.  ‘ಭೀತಿ, ದ್ವೇಷ ಮತ್ತು ಹಿಂಸೆಯ ಪರಿಸರವನ್ನು ಮೋದಿ ಸರ್ಕಾರದ ಕಳೆದ ನಾಲ್ಕು ವರ್ಷಗಳಲ್ಲಿ ಸೃಷ್ಟಿಸಲಾಗಿದೆ ಎಂದು ಏಐಸಿಸಿ ಪ್ರಧಾನ ಕಾರ್‍ಯದರ್ಶಿ ಗೆಹ್ಲೋಟ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  ನಾಲ್ಕು ವರ್ಷಗಳ ಬಿಜೆಪಿ ದುರಾಡಳಿತ ಕುರಿತ ಪುಸ್ತಿಕೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಿದ ಕಾಂಗ್ರೆಸ್, ಪ್ರಧಾನಿ ಮೋದಿ ಅವರಿಗೆ ೪೦ ಪ್ರಶ್ನೆಗಳನ್ನು ಕೇಳಿತು. ಪಕ್ಷವು ರಾಷ್ಟ್ರದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವ ಕಿರುಚಿತ್ರವೊಂದನ್ನೂ ಬಿಡುಗಡೆ ಮಾಡಿತು.  ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಶ್ಮಿತಾ ದೇವ್ ಅವರು ಮೋದಿ ಆಡಳಿತದಲ್ಲಿ ಮಹಿಳೆಯರು ರಾಷ್ಟ್ರದಲ್ಲಿ ಸುರಕ್ಷಿತರು ಎಂಬ ಭಾವನೆ ಇಟ್ಟುಕೊಳ್ಳುವಂತಿಲ್ಲ ಎಂದು ಹೇಳಿದರು.  ಯುವ ಕಾಂಗ್ರೆಸ್ ಮುಖ್ಯಸ್ಥ ಕೇಶವ ಯಾದವ್ ಅವರು ಯುವಕರು ಭವಿಷ್ಯವನ್ನೇ ಕಾಣದೆ ಮಂಕಾಗುತ್ತಿದ್ದಾರೆ. ಅವರಿಗೆ ಉದ್ಯೋಗಾವಕಾಶಗಳ ಅಭಾವ ಕಾಡಿದೆ ಎಂದು ನುಡಿದರು.

 2018: ಕಟಕ್ (ಒಡಿಶಾ): ತಮ್ಮ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವ ಆಚರಣೆ ಸಲುವಾಗಿ ನವೀನ್ ಪಟ್ನಾಯಕ್ ಅವರ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ಸರ್ಕಾರ ಮತ್ತು ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ಕ್ರಮಗಳಿಗೆ ಹೆದರಿರುವ ವಿರೋಧ ಪಕ್ಷಗಳು ಮತ್ತು ವಿರೋಧ ಪಕ್ಷಗಳಲ್ಲಿನ ಎಲ್ಲ ವೈರಿಗಳು ಈಗ ಒಂದಾಗಿದ್ದಾರೆ ಎಂದು ಅವರು ಚುಚ್ಚಿದರು. ಕಟಕ್ ನಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ’ಇಂದು  ರಾಷ್ಟ್ರವು ’ಕಾಳಧನದಿಂದ ’ಜನ ಧನ್ ಕಡೆಗೆ ಚಲಿಸಿದೆ. ನಾವು ಅರಾಜಕತೆಯಿಂದ ಆಡಳಿತದತ್ತ ಸಾಗುತ್ತಿದ್ದೇವೆ ಎಂದು ಹೇಳಿದರು.  ನಮ್ಮ ಸರ್ಕಾರವು ’ಜನಮತದ ಕಾರಣ ನಡೆಯುತ್ತಿದೆ, ಜನಪಥದ ಮೂಲಕ ಅಲ್ಲ ಎಂದೂ ಅವರು ನುಡಿದರು. ಸರ್ಜಿಕಲ್ ದಾಳಿಗಳಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ನಾವು ಅಂಜುವುದಿಲ್ಲ. ಇದು ಬದ್ಧತೆಯನ್ನು ನಂಬುವ ಸರ್ಕಾರ, ಗೊಂದಲಗಳ ಸರ್ಕಾರವಲ್ಲ ಎಂದು ಮೋದಿ ಹೇಳಿದರು.  ರಾಜ್ಯದ ಆಡಳಿತಾರೂಢ ಬಿಜು ಜನತಾದಳ ಮತ್ತು ಪಟ್ನಾಯಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ’ರಾಜ್ಯದ ಹಲವಾರು ಕಡೆಗಳಲ್ಲಿ ಸೂಕ್ತ ಆರೋಗ್ಯ ಸವಲತ್ತುಗಳಿಲ್ಲ. ಒಡಿಶಾದಲ್ಲಂತೂ ಪರಿಸ್ಥಿತಿ ಚಿಂತಾಜನಕ. ರಾಜ್ಯ ಸರ್ಕಾರ ಈ ಎಲ್ಲಾ ವೇಳೆಯಲ್ಲಿ ಏನು ಮಾಡುತ್ತಿತ್ತು ಎಂದು ನನಗೆ ಅಚ್ಚರಿಯಾಗುತ್ತಿದೆ ಎಂದು ನುಡಿದರು. ’ಮಹಾನದಿ ಜಲ ವಿವಾದದ ಪರಿಣಾಮವಾಗಿ ಒಡಿಶಾ ರೈತರು ತೊಂದರೆಗೆ ಒಳಗಾಗಿದ್ದಾರೆ. ಈ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ನಾವು ಬದ್ಧರಾಗಿದ್ದೇವೆ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಮೋದಿ ಜನ ಸಮೂಹದ ಭಾರಿ ಹರ್ಷೋದ್ಘಾರ, ಕರತಾಡನದ ಮಧ್ಯೆ ನುಡಿದರು.   ೨೦೧೪ರ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಒಡಿಶಾದಲ್ಲಿ ಬಿಜು ಜನತಾದಳದ ಕೋಟೆಗೆ ಲಗ್ಗೆ ಹಾಕುವಲ್ಲಿ ವಿಫಲವಾಗಿತ್ತು.  ೨೦೧೯ರ ಚುನಾವಣೆಯಲ್ಲಿ ಪರಿಸ್ಥಿತಿ ಬದಲಾಗುವುದು ಎಂಬ ವಿಶ್ವಾಸವನ್ನು ಈಗ ಪಕ್ಷವು ತಳೆದಿದೆ.

2018: ನವದೆಹಲಿ: ತನ್ನ ಬಳಕೆದಾರರ ಮಾಹಿತಿಯನ್ನು ಯಾರೇ ಮೂರನೇ ವ್ಯಕ್ತಿಗಳು ಅಥವಾ ಸರ್ಕಾರದ ಜೊತೆ ತಾನು ಹಂಚಿಕೊಳ್ಳುವುದಿಲ್ಲ ಎಂದು ಡಿಜಿಟಲ್ ಪಾವತಿಗಳ ಕಂಪೆನಿ ಪೇಟಿಎಂ ಸ್ಪಷ್ಟ ಪಡಿಸಿತು. ‘ನಾವು ಎಂದೂ ನಿಮ್ಮ (ಬಳಕೆದಾರರ) ಮಾಹಿತಿಯನ್ನು ಯಾರ ಜೊತೆಗೂ, ಯಾವುದೇ ಕಂಪೆನಿ ಅಥವಾ ಯಾವುದೇ ಸರ್ಕಾರದ ಇಲ್ಲವೇ ಯಾವುದೇ ರಾಷ್ಟ್ರದ ಜೊತೆಗೂ ಹಂಚಿಕೊಳ್ಳುವುದಿಲ್ಲ. ಪೇಟಿಎಂನಲ್ಲಿ ನಿಮ್ಮ ಮಾಹಿತಿ ನಿಮ್ಮದು. ನಮ್ಮದಲ್ಲ, ಅಥವಾ ಯಾರೇ ಮೂರನೇ ವ್ಯಕ್ತಿಯದ್ದಲ್ಲ ಅಥವಾ ಸರ್ಕಾರದ್ದಲ್ಲ ಎಂದು ಪೇಟಿಎಂ ಈದಿನ (ಮೇ ೨೬) ತನ್ನ ಬ್ಲಾಗಿನಲ್ಲಿ ತಿಳಿಸಿತು.  ನಾಡಿನ ಕಾನೂನುಬದ್ಧ ಸಂಸ್ಥೆಗಳಿಂದ ಅಗತ್ಯ ತನಿಖೆಗಳ ಸಲುವಾಗಿ ಶಾಸನಬದ್ಧ ಬೇಡಿಕೆ ಬಂದಲ್ಲಿ ಮಾತ್ರವೇ ಮಾಹಿತಿ ನೀಡಲು ಪೇಟಿಎಂ ನಿಯಮಾವಳಿ ಅನುಮತಿ ನೀಡುತ್ತದೆ ಎಂದು ಪೇಟಿಎಂ ವಿವರಿಸಿತು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದನ್ನು ಉಲ್ಲೇಖಿಸಿದ ಪೇಟಿಎಂ. ’ಕೆಲವು ಮಾಹಿತಿಗಳನ್ನು ಪೇಟಿಎಂ ತೃತೀಯ ವ್ಯಕ್ತಿಗಳ ಜೊತೆ ಹಂಚಿಕೊಂಡಿದೆ ಎಂಬ ವಿಡಿಯೋ ಪ್ರತಿಪಾದನೆ ತಪ್ಪು ಎಂದು ಸ್ಪಷ್ಟ ಪಡಿಸಿತು.  ಇದು ಸತ್ಯದೂರ ವಿಚಾರ. ಮಾಹಿತಿಗಾಗಿ ತನಗೆ ಯಾವುದೇ ಮನವಿಗಳು ಬಂದಿಲ್ಲ ಅಥವಾ ಕಾನೂನುಬದ್ಧ ಸಂಸೆಯ ಮನವಿ ಮೇರೆಗೆ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ ಎಂದು ಪೇಟಿಎಂ ಹೇಳಿತು.  ‘ನೀವು ಒಪ್ಪಿಗೆ ಕೊಡದ ಯಾರೇ ಮೂರನೇ ವ್ಯಕ್ತಿಯ ಜೊತೆಗೆ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ ಎಂಬ ಬಗ್ಗೆ ನೀವು ಖಚಿತವಾಗಿರಬಹುದು. ಇದು ನಮ್ಮ ನಡುವಣ ಪವಿತ್ರ ಒಪ್ಪಂದ ಎಂದು ಪೇಟಿಎಂ ತಿಳಿಸಿತು. ಕಂಪೆನಿಯ ನೀತಿಯ ಅರಿವು ಇಲ್ಲದ ಬೇರೆ ಯಾರೇ ವ್ಯಕ್ತಿಗೆ ಕಂಪೆನಿಯ ಪರವಾಗಿ ಮಾತನಾಡುವ ಅಧಿಕಾರವನ್ನೂ ಕೊಟ್ಟಿಲ್ಲ ಎಂದೂ ಪೇಟಿಎಂ ದೃಢಪಡಿಸಿತು. ಮೊಬೈಲ್ ವಾಲೆಟ್ ಹೊರತಾಗಿ ಬ್ಯಾಂಕ್ ಪಾವತಿ, ಇ-ಕಾಮರ್ಸ್ ನಂತಹ ಸೇವೆಗಳನ್ನೂ ಪೇಟಿಎಂ ಒದಗಿಸುತ್ತಿದೆ.

2009: ಲೋಕಸಭಾ ಚುನಾವಣೆಯ ಬಿಡುವಿನ ಬಳಿಕ ನಡೆದ ಮೊದಲ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸರು ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದರು. ರಾಜ್ಯದ ವಿವಿಧೆಡೆ ಏಕಕಾಲಕ್ಕೆ ನಡೆದ ದಾಳಿಯಲ್ಲಿ ಏಳು ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದರು. ಬೀದರಿನ ಅಬಕಾರಿ ಉಪ ಆಯುಕ್ತ ಆಸಾದ್ ಅಲಿ, ಹಿರಿಯ ಮೋಟಾರು ವಾಹನ ನಿರೀಕ್ಷಕ ಕೆ.ಎಲ್.ನಾಗರಾಜ್, ಮೈಸೂರಿನ ಸಹಾಯಕ ಕಾರ್ಮಿಕ ಆಯುಕ್ತ ಶೇಖ್ ಸಮೀವುಲ್ಲಾ ಷರೀಫ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಬಸವರಾಜು, ಕಿತ್ತೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಬಸವರೆಡ್ಡಿ ವಿ. ಲಿಂಗದಾಳ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಶಿವರಾಂ ಮತ್ತು ಗುಲ್ಬರ್ಗದ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಾಜಿ ಕಾವಲೆ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿತು.

2009: ಶರಣ ಸಾಹಿತ್ಯದ ವಿಷಯವಾಗಿ ಅಪಾರ ಕೆಲಸ ಮಾಡಿದ ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ವೀರಣ್ಣ ರಾಜೂರ ಅವರಿಗೆ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 'ಡಾ.ಮೂಜಗಂ' ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂರುಸಾವಿರ ಮಠದ ಹಿಂದಿನ ಪೀಠಾಧಿಪತಿ ಡಾ.ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

2009: ಪಶ್ಚಿಮ ಬಂಗಾಳದಲ್ಲಿ ಎದ್ದ 'ಐಲಾ' ಚಂಡಮಾರುತದಿಂದ ಸುಮಾರು 67ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.

2009: ಪ್ರಸಾರ ಭಾರತಿಯ ಅಧ್ಯಕ್ಷ ಅರುಣ್ ಭಟ್ನಾಗರ್ ಅವರು ಮಂಡಳಿಯ ಆಡಳಿತ ವೈಖರಿಯಿಂದ ಅಸಮಾಧಾನಗೊಂಡು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

2009: ಪಶ್ಚಿಮ ಬಂಗಾಳದ ಪರ್ವತಮಯ ಡಾರ್ಜಿಲಿಂಗ್ ಜಿಲ್ಲೆಯ ಹಲವೆಡೆ ಸಂಭವಿಸಿದ ಭೂಕುಸಿತದಲ್ಲಿ 23 ಮಂದಿ ಮೃತರಾಗಿ 6 ಮಂದಿ ನಾಪತ್ತೆಯಾದರು.

2009: ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವದಾದ್ಯಂತ ಕಳವಳ ಹುಟ್ಟಿಸಿದ ಬೆನ್ನಲ್ಲಿಯೇ ಉತ್ತರ ಕೊರಿಯಾ, ತನ್ನ ಪೂರ್ವ ತೀರದಿಂದ ಮತ್ತೆರಡು ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಭೂಮಿಯಿಂದ ನೀರಿನೊಳಗೆ ಹಾಗೂ ಆಕಾಶಕ್ಕೆ ನೆಗೆಯುವ 130 ಕಿ.ಮೀ ದೂರ ಸಾಮರ್ಥ್ಯದ ಎರಡು 'ಸಮೀಪ-ದೂರ' ಕ್ಷಿಪಣಿಗಳನ್ನು ಉತ್ತರ ಕೊರಿಯಾ ಉಡಾವಣೆ ಮಾಡಿದೆ ಎಂದು ಯೋನಾಪ್ ಸುದ್ದಿ ಸಂಸ್ಥೆ ವರದಿ ಮಾಡಿತು.

2009: ಶ್ರೀಲಂಕಾದಲ್ಲಿ ನಡೆದ ಯುದ್ಧದಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್‌ನ ಪತ್ನಿ, ಪುತ್ರಿ ಮತ್ತು ಸಂಘಟನೆಯ ಉನ್ನತ ಕಮಾಂಡರ್ ಪೊಟ್ಟು ಅಮ್ಮಾನ್ ಕೂಡ ಹತರಾಗಿದ್ದಾರೆ ಎಂಬುದನ್ನು ಪ್ರಭಾಕರನ್ ಮಾಜಿ ಬಂಟ ಹಾಗೂ ಸರ್ಕಾರದಲ್ಲಿ ಫೆಡರಲ್ ಸಚಿವರಾದ ಕರುಣಾ ಅಮ್ಮನ್ ಖಚಿತಪಡಿಸಿದರು. ಎಲ್‌ಟಿಟಿಇ ಅಂತಾರಾಷ್ಟ್ರೀಯ ಸಂಪರ್ಕ ವ್ಯವಹಾರಗಳ ಮುಖ್ಯಸ್ಥ ಪದ್ಮನಾಭನ್ ಇದನ್ನು ದೃಢಪಡಿಸಿದ್ದಾರೆ ಎಂದು 2004ರವರೆಗೆ ಎಲ್‌ಟಿಟಿಇ ಪೂರ್ವ ಪ್ರಾಂತ್ಯದ ಕಮಾಂಡರ್ ಆಗಿದ್ದು ನಂತರ ಸಂಘಟನೆಯಿಂದ ಸಿಡಿದುಬಂದು ರಾಜಕೀಯ ವಾಹಿನಿ ಪ್ರವೇಶಿಸಿದ ಕರ್ನಲ್ ಕರುಣಾ ಹೇಳಿದರು.

2009: ಪಾಕಿಸ್ಥಾನದ ಮಾಜಿ ಪ್ರಧಾನಿ, ಪಿಎಂಎಲ್-ಎನ್ ಪಕ್ಷದ ಮುಖಂಡ ನವಾಜ್ ಷರೀಫ್ ಹಾಗೂ ಅವರ ಸೋದರ ಶಹಬಾಜ್ ಷರೀಫ್, ಚುನಾವಣೆಗೆ ಸ್ಪರ್ಧಿಸಲು ಅರ್ಹರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿ ತಸ್ಸಕ್ ಹುಸೇನ್ ಗಿಲಾನಿ ನೇತೃತ್ವದ ಐವರು ಸದಸ್ಯರ ಪೀಠವು, ಈ ಸಂಬಂಧ ಲಾಹೋರ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿತು. ಪ್ರತ್ಯೇಕ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಪಟ್ಟ ಷರೀಫ್ ಸೋದರರು ಚುನಾವಣಾ ರಾಜಕೀಯಕ್ಕೆ ಅನರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ನವಾಜ್ ಹಾಗೂ ಶಹಬಾಜ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈದಿನ ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಷರೀಫ್ ಸೋದರರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿತು.

2008: ಹಿಂದೂಗಳ ಪವಿತ್ರ ನಗರ ವಾರಣಾಸಿಯಲ್ಲಿ ಸದಾ ಮೈತುಂಬಿಕೊಂಡು ಜುಳುಜುಳು ಎಂದು ಹರಿಯುತ್ತಿದ್ದ ಗಂಗಾ ನದಿ ಈಗ ಬಡಕಲಾಗಿರುವುದು ಬೆಳಕಿಗೆ ಬಂತು. ಈ ವರ್ಷದ ಬೇಸಿಗೆಯಲ್ಲಿ ಹಿಂದೆಂದೂ ಕಡಿಮೆಯಾಗದಷ್ಟು ನೀರು ಕಡಿಮೆಯಾಗಿ ಮರಳ ದಂಡೆಗಳು ಎದ್ದು ಕಾಣಿಸತೊಡಗಿದವು. ನದಿಯಲ್ಲಿ ನೀರು ಕಡಿಮೆಯಾಗಲು ಅನೇಕ ಅಂಶಗಳು ಕಾರಣ ಎಂಬುದು ತಜ್ಞರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ. ಕಳೆದ ಎರಡು ದಶಕಗಳಲ್ಲಿ ವಾರಣಾಸಿಯಲ್ಲಿ ಗಂಗಾನದಿಯ ನೀರಿನ ಪ್ರಮಾಣ 1.5 ಮೀಟರಿನಿಂದ 2 ಮೀಟರಿನವರೆಗೆ ಕಡಿಮೆಯಾಗಿದೆ ಎಂಬುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗಂಗಾ ಸಂಶೋಧನಾ ಪ್ರಯೋಗಾಲಯದ ಪ್ರೊ. ಉದಯಕಾಂತ್ ಚೌಧರಿ ಹೇಳಿಕೆ. 1988ರಲ್ಲಿ 340ರಿಂದ 355 ಮೀಟರ್ ಅಗಲದಲ್ಲಿ ಹರಿಯುತ್ತಿದ್ದ ಗಂಗೆ ಈ ವರ್ಷ 250 ಮೀಟರಿಗೆ ಇಳಿದಳು. ಇದೊಂದು ಆತಂಕಕಾರಿ ಬೆಳವಣಿಗೆಯಾದ್ದರಿಂದ ಸಾರ್ವಜನಿಕರು ಮತ್ತು ಸರ್ಕಾರ ಪವಿತ್ರವಾದ ಗಂಗಾ ನದಿಯನ್ನು ಉಳಿಸಿಕೊಳ್ಳಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂಬುದು ಚೌಧರಿ ಸಲಹೆ. 1988ರಲ್ಲಿ ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಎಂಟು ಸಾವಿರದಿಂದ ಒಂಭತ್ತು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿತ್ತು. ಈಗ ಈ ಪ್ರಮಾಣ ಐದರಿಂದ ಆರು ಸಾವಿರಕ್ಕೆ ಇಳಿದಿದೆ. ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯಗಳು ಗಂಗಾ ನದಿಗೆ ಸೇರುತ್ತಿರುವುದರಿಂದ ನೀರಿನ ಮಾಲಿನ್ಯ ಪ್ರಮಾಣವೂ ಹೆಚ್ಚಳವಾಗಿದೆ. ತೆಹರಿ ಅಣೆಕಟ್ಟು ಸೇರಿದಂತೆ ಅನೇಕ ಅಣೆಕಟ್ಟುಗಳ ನಿರ್ಮಾಣ, ನೀರಾವರಿ ಕಾಲುವೆಗಳ ನಿರ್ಮಾಣದಿಂದಾಗಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಹಾಗೂ ವಾರಣಾಸಿಯಲ್ಲಿ ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿದಿದೆ ಎಂಬುದು ತಜ್ಞರ ಅಭಿಪ್ರಾಯ.

2008: ಪಕ್ಷೇತರ ಶಾಸಕರ ಒಲವು ಸಂಪಾದಿಸುವ ಪ್ರಯತ್ನದಲ್ಲಿ ಸಫಲವಾದ ಭಾರತೀಯ ಜನತಾ ಪಕ್ಷವು, ನೂತನ ಸರ್ಕಾರ ರಚನೆಗೆ ಈದಿನ ರಾತ್ರಿ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿತು. ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಜೇಟ್ಲಿ, ಅನಂತಕುಮಾರ್, ಜಗದೀಶ್ ಶೆಟ್ಟರ್, ಶ್ರೀರಾಮುಲು ಮೊದಲಾದವರು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿ 115 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಮನವಿ ಮಾಡಿದರು. ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರವಣಪ್ಪ, ಡಿ.ಸುಧಾಕರ್ ಅವರು ರಾಜ್ಯಪಾಲರ ಮುಂದೆ ಹಾಜರಾಗಿ ಬಿಜೆಪಿಗೆ ಬೆಂಬಲ ಘೋಷಿಸಿದರು. ಇದರೊಂದಿಗೆ ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ (113) ಎರಡು ಹೆಚ್ಚು ಸ್ಥಾನಗಳನ್ನು ಬಿಜೆಪಿ ಹೊಂದಿದಂತಾಯಿತು.

2008: ಅಮೆರಿಕದ ಪುಟ್ಟ ಬಾಹ್ಯಾಕಾಶ ನೌಕೆ `ಫೀನಿಕ್ಸ್' ಮಂಗಳ ಗ್ರಹವನ್ನು ತಲುಪಿ, ಉತ್ತರ ಧ್ರುವದಲ್ಲಿ ಇಳಿದ ಎರಡೇ ತಾಸುಗಳಲ್ಲಿ ಅಲ್ಲಿನ ಮಂಜುಗಟ್ಟಿದ ಪರಿಸರದ ಚಿತ್ರಗಳನ್ನು ಕಳುಹಿಸಿತು. ಮೂರು ತಿಂಗಳ ಕಾಲ ಮಂಗಳ ಗ್ರಹದಲ್ಲಿ ಇರಲಿರುವ `ಫೀನಿಕ್ಸ್' ನೌಕೆ, ಅಲ್ಲಿ ನೀರಿನ ಲಭ್ಯತೆ ಮತ್ತು ಜೀವೋತ್ಪತಿಗೆ ಕಾರಣವಾಗುವ ಅಂಶಗಳ ಬಗ್ಗೆ ಹುಡುಕಾಟ ನಡೆಸುವುದು. ಕಳೆದ 10 ತಿಂಗಳ ಅವಧಿಯಲ್ಲಿ 423 ದಶಲಕ್ಷ ಮೈಲು ದೂರ ಕ್ರಮಿಸಿದ ಬಳಿಕ ಈ ನೌಕೆ ಹಿಂದಿನ ದಿನ ರಾತ್ರಿ ಮಂಗಳ ಗ್ರಹವನ್ನು ತಲುಪಿದ್ದು ಅದು ಈಗ ಕಳುಹಿಸಿದ ಚಿತ್ರಗಳಿಂದ ದೃಢಪಟ್ಟದ್ದು ನಾಸಾ ವಿಜ್ಞಾನಿಗಳಿಗೆ ಸಂತಸ ತಂದಿತು. ಸೌರ ಶಕ್ತಿಯನ್ನು ಬಳಸಿ ಮಂಗಳನ ಅಂಗಳಕ್ಕೆ ಇಳಿಯುವ ನೌಕೆಯನ್ನು ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ಭಾರತ ಮೂಲದ ಎಂಜಿನಿಯರ್ ಪ್ರಸನ್ನ ದೇಸಾಯಿ, `ಎಲ್ಲವೂ ಅದ್ಭುತವಾಗಿ ನಡೆಯುತ್ತಿದೆ` ಎಂದರು. ಮಂಗಳನ ಅಂಗಳದಲ್ಲಿ ನೌಕೆಯನ್ನು ಇಳಿಸುವುದು ಸವಾಲಿನ ಕಾರ್ಯವಾಗಿತ್ತು. ಗಂಟೆಗೆ 12 ಸಾವಿರ ಮೈಲು ವೇಗದಲ್ಲಿ ಸಂಚರಿಸುತ್ತಿದ್ದ `ಫೀನಿಕ್ಸ್'ನ್ನು ಮೆತ್ತನೆಯ ಹಾಸಿಗೆಯ ಮೇಲೆ ಬೀಳಿಸುವ ಬದಲು ಮೂರು ಕಾಲುಗಳ ಮೇಲೆಯೇ ನಿಲ್ಲಿಸುವ ತಂತ್ರ ಹೆಣೆಯಲಾಗಿತ್ತು. ಮಂಗಳನ ವಾತಾವರಣವನ್ನು ನೌಕೆ ಪ್ರವೇಶಿಸುತ್ತಿದ್ದಂತೆಯೇ ನೌಕೆಯ ಪ್ಯಾರಾಚೂಟ್ ಬಿಚ್ಚಿಕೊಂಡು ಅದರ ವೇಗವನ್ನು ತಗ್ಗಿಸಿತು. ನೌಕೆಯ ಉಷ್ಣ ತಡೆ ಗುರಾಣಿಯೂ ಚಾಚಿಕೊಂಡಿತು. ಜೆಟ್ ರಾಕೆಟ್ ಎಂಜಿನ್ ಉರಿಸಿ ವೇಗವನ್ನು ಕಡಿತಗೊಳಿಸಲಾಯಿತು. ಕೊನೆಗೆ ಮಂಗಳನ ಅಂಗಳಕ್ಕೆ ಇಳಿಯುವ ಹೊತ್ತಿಗೆ `ಫೀನಿಕ್ಸ್'ನ ವೇಗ ಗಂಟೆಗೆ 5 ಮೈಲುಗಳಿಗೆ ಇಳಿಯಿತು. ನೌಕೆ ನೆಲದಲ್ಲಿ ತಳ ಊರುತ್ತಿದ್ದಂತೆಯೇ ದೂಳು ಎದ್ದಿತು. ವಿಜ್ಞಾನಿಗಳ ಪಾಲಿಗೆ ಇದು `ಏಳು ನಿಮಿಷಗಳ ಆತಂಕದ ಕ್ಷಣ'ವಾಗಿತ್ತು. ದೂಳು ಚದುರಿದ ತತ್ ಕ್ಷಣ ನೌಕೆ ತನ್ನ ಸೌರ ಫಲಕವನ್ನು ಬಿಚ್ಚಿಕೊಂಡಿತು. ಕಳೆದ ವರ್ಷ ಆಗಸ್ಟ್ 4ರಂದು `ಫೀನಿಕ್ಸ್'ನ್ನು ಉಡಾಯಿಸಲಾಗಿತ್ತು. 420 ದಶಲಕ್ಷ ಡಾಲರ್ ವೆಚ್ಚದಲ್ಲಿ ಲಾಕ್ ಹೀಡ್ ಮಾರ್ಟಿನ್ ಕಂಪೆನಿಯು ಈ ನೌಕೆಯನ್ನು ನಿರ್ಮಿಸಿತ್ತು. ಮಂಗಳನ ಅಂಗಳಕ್ಕೆ ಇಳಿದು ಸಂಶೋಧನೆ ನಡೆಸುವ ಈ ಮೊದಲಿನ ಹಲವು ಯತ್ನಗಳು ವಿಫಲವಾಗಿದ್ದವು.

2008: ಮಣಿಪುರದ ಕೇಂದ್ರ ಸ್ಥಳ ರಾಜಧಾನಿ ಇಂಫಾಲದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ(ರಿಮ್ಷ್) ಉಗ್ರರು ಶಕ್ತಿಶಾಲಿ ಬಾಂಬ್ ಸ್ಫೋಟಿಸಿದರು.

2008: 66 ಜನರನ್ನು ಬಲಿ ತೆಗೆದುಕೊಂಡಿದ್ದ ಜೈಪುರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಭರತ್ ಪುರ ಜಾಮಾ ಮಸೀದಿಯ ಇಮಾಮ್ ಮೊಹಮ್ಮದ್ ಇಲಯಾಸ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.

2008: ವಿವಿಧ ರಾಜ್ಯಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಬಹುತೇಕ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೇ ಗೆಲುವು ಸಾಧಿಸಿದರು. ಕಾಂಗ್ರೆಸ್ ಪಕ್ಷ ನೆಲ ಕಚ್ಚಿತು. ಥಾಣೆ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಸೇನೆ ಜಯಭೇರಿ ಭಾರಿಸಿತು. ಹಿಮಾಚಲ ಪ್ರದೇಶದ ಹಮಿರ್ ಪುರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಲ್ಲಿನ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಪುತ್ರ ಅನುರಾಗ್ ಠಾಕೂರ್, ಮೇಘಾಲಯದ ಟುರಾ ಲೋಕಸಭಾ ಕ್ಷೇತ್ರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿ ಪಿ) ಅಭ್ಯರ್ಥಿ ಲೋಕಸಭೆಯ ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ, ಹರಿಯಾಣದ ಗೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಜಗಬೀರ್ ಸಿಂಗ್ ಮಲಿಕ್, ಆದಂಪುರ ಕ್ಷೇತ್ರದಲ್ಲಿ ಹರಿಯಾಣ ಜನಹಿತ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್, ಅಮೃತಸರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿ ದಳ- ಬಿಜೆಪಿ ಅಭ್ಯರ್ಥಿ ಇಂದೇರ್ಬಿರ್ ಸಿಂಗ್ ಬೊಲಾರಿಯಾ ಜಯಗಳಿಸಿದರು.

2008: ಚಂಡಮಾರುತದಿಂದ ತತ್ತರಿಸಿದ ಮ್ಯಾನ್ಮಾರಿನ ಜನರು ಸೇನೆ ರೂಪಿಸಿರುವ ನೂತನ ಸಂವಿಧಾನವನ್ನು ಸ್ವಾಗತಿಸಿದ್ದು, ಜನಮತಗಣನೆಯಲ್ಲಿ ಶೇ 93 ಮಂದಿ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿತು. ನರ್ಗಿಸ್ ಚಂಡಮಾರುತದಿಂದ ತತ್ತರಿಸಿದ ಪ್ರದೇಶದಲ್ಲಿ ಜನಮತಗಣೆ ನಡೆದಿತ್ತು.

2008: ಪತ್ರಿಕೋದ್ಯಮ, ಕಲೆ, ಶಿಕ್ಷಣ ಹಾಗೂ ಹಣಕಾಸು ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತೀಯ ಮೂಲದ ಮಹಿಳೆಯರಿಗೆ ಈ ಸಾಲಿನ `ಏಷ್ಯನ್ ವುಮೆನ್ ಆಫ್ ಅಚೀವ್ಮೆಂಟ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿಲ್ಟನ್ನಿನಲ್ಲಿ ನಡೆದ 9 ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಐಟಿಎನ್ ಸುದ್ದಿ ಸಂಪಾದಕಿ ಆರತಿ ಲುಖಾ, ನೃತ್ಯ ನಿರ್ದೇಶಕಿ ಶೋಭನಾ ಜಯಸಿಂಗ್ ಹಾಗೂ ವೆಸ್ಟ್ ನಟ್ಟಿಂಗ್ ಹ್ಯಾಮ್ ಶೈರ್ ಕಾಲೇಜಿನ ಆಶಾ ಖೇಮ್ಕಾ ಮತ್ತು ಬಾಲಾ ಠಾಕ್ರಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತಾರಾಷ್ಟ್ರೀಯ ಹಾಗೂ ಸಮುದಾಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ ಭಾರತೀಯ ಮೂಲದ ಸ್ವಯಂಸೇವಕ ಗೋಪಾಲ್ ದಾಸ್ ಪೋಪಟ್ (85) ಅವರಿಗೆ ಅಂತಾರಾಷ್ಟ್ರೀಯ ಸ್ವಯಂಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2008: ಬಹ್ರೇನ್ ಏರ್ ಸಂಸ್ಥೆಯು ಕೊಚ್ಚಿಗೆ ನೇರ ವಿಮಾನಯಾನ ಸೇವೆ ಆರಂಭಿಸಿತು.

2008: ಇರಾಕ್ ಫುಟ್ಬಾಲ್ ತಂಡ ಒಂದು ವರ್ಷದ ಅವಧಿಗೆ ಯಾವುದೇ ರೀತಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳುವುದರ ಮೇಲೆ ಫಿಫಾ ನಿಷೇಧ ಹೇರಿತು.ಇರಾಕ್ ತಂಡವನ್ನು 12 ತಿಂಗಳುಗಳ ಅವಧಿಗೆ ಅಮಾನತು ಮಾಡಿರುವ ನಿರ್ಧಾರವನ್ನು ಫಿಫಾ ಆಡಳಿತ ಮಂಡಳಿ ಈದಿನ ಪ್ರಕಟಿಸಿತು.
2008: ಕೊಯಮತ್ತೂರಿನ ಉದುಮಲ್ಪೇಟೆ ಸಮೀಪದ ತಿರುಮೂರ್ತಿ ಅಣೆಕಟ್ಟಿನ ಪಂಚಲಿಂಗ ಜಲಪಾತದ ಕ್ಷಿಪ್ರ ಪ್ರವಾಹಕ್ಕೆ ಸಿಲುಕಿ 13 ಮಂದಿ ಪ್ರವಾಸಿಗರು ಅಸು ನೀಗಿದ ಘಟನೆ ಹಿಂದಿನ ದಿನ ನಡೆಯಿತು. ಕೇರಳದ ಮರೈಯೂರಿನಲ್ಲಿ ಬಿದ್ದ ಭಾರಿ ಮಳೆಯೇ ಈ ಪ್ರವಾಹಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದರು.

2008: ಚನ್ನರಾಯಪಟ್ಟಣ ತಾಲ್ಲೂಕಿನ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಗಿರಿಕ್ಷೇತ್ರದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇಗುಲದ ಉದ್ಘಾಟನೆ ವಿಜೃಂಭಣೆಯಿಂದ ನೆರವೇರಿತು.

2007: ಕೇಂದ್ರದ ಮಾಜಿ ಸಚಿವ, ರಾಷ್ಟ್ರೀಯ ನ್ಯಾಯಮಂಡಳಿಯ ಅಧ್ಯಕ್ಷ ಚಂದ್ರಜಿತ್ ಯಾದವ್ ನವದೆಹಲಿಯಲ್ಲಿ ನಿಧನರಾದರು. ಅವರು ಇಂದಿರಾಗಾಂಧಿ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2007: ರಾಷ್ಟ್ರದ ಭದ್ರತಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರವು ವಿವಿಧೋದ್ದೇಶ ರಾಷ್ಟ್ರೀಯ ಗುರುತು ಚೀಟಿ ಯೋಜನೆಗೆ ಚಾಲನೆ ನೀಡಿತು. ರಾಜಧಾನಿಯ ನರೇಲಾದಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ದೇವೇಂದರ್ ಕುಮಾರ್ ಸಿಕ್ರಿ ಅವರು ವಾಯವ್ಯ ದೆಹಲಿಯ ನರೇಲಾದ ಮಹಿಳೆಯೊಬ್ಬರಿಗೆ ಮೊತ್ತ ಮೊದಲ ರಾಷ್ಟ್ರೀಯ ಗುರುತು ಚೀಟಿ ವಿತರಿಸಿದರು.

2007: ಪಕ್ಷದ ನಿಯಮ ಉಲ್ಲಂಘಿಸಿ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಕೇರಳದ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಮತ್ತು ಸಿಪಿ ಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರನ್ನು ಸಿಪಿಎಂನ ಉನ್ನತ ನೀತಿ ನಿರೂಪಕ ಸಮಿತಿಯಾದ ಪಾಲಿಟ್ ಬ್ಯೂರೋದಿಂದ ಅಮಾನತುಗೊಳಿಸಲಾಯಿತು.

2007: ಭಾರತೀಯ ಕ್ರಿಕೆಟ್ ತಂಡದ ಅಗ್ರಶ್ರೇಯಾಂಕದ ನಾಲ್ವರು ಆಟಗಾರರು ಢಾಕಾದ ಮೀರ್ ಪುರ ಬೆಂಗಾಲ್ ಜೈತಿಯಾ ಕ್ರೀಡಾಂಗಣದಲ್ಲಿ ಮೊತ್ತ ಮೊದಲ ಬಾರಿಗೆ ಶತಕ ಗಳಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದರು. ವಾಸಿಂ ಜಾಫರ್ (ಗಾಯಗೊಂಡು ನಿವೃತ್ತಿ 138), ದಿನೇಶ್ ಕಾರ್ತಿಕ್ (129), ರಾಹುಲ್ ದ್ರಾವಿಡ್ (129) ಹಾಗೂ ಸಚಿನ್ ತೆಂಡೂಲ್ಕರ್ (ಔಟಾಗದೇ 122) ಅವರು ಇತಿಹಾಸ ನಿರ್ಮಿಸಿದ ಆಟಗಾರರು.

2007: ಜರ್ಮನಿಯಿಂದ ಅಟ್ಲಾಂಟಾಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನದಲ್ಲಿ ಡಾ. ರಾಬರ್ಟ್ ವಿನ್ಸೆಂಟ್ ಮತ್ತು ಡಾ. ಡಿಯೇಟರ್ ಕೆ. ಗುಣ್ ಕಲ್ ಅವರು ಹಾರುತ್ತಿದ್ದ ವಿಮಾನದಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸೂಕ್ತ ವೈದ್ಯೋಪಚಾರ ಮಾಡಿ ಹೆರಿಗೆ ಮಾಡಿಸಿದರು. ಹುಟ್ಟಿದ ಗಂಡು ಮಗು ಉಸಿರಾಡದೇ ಇದ್ದಾಗ ಬಾಯಿಯ ಮೂಲಕ ಉಸಿರೆಳೆದು ಕೃತಕ ಉಸಿರಾಟ ನಡೆಸಿ ಮಗುವನ್ನು ಬದುಕಿಸಿದರು.

2006: ರಷ್ಯದ ಸೆವೆರ್ ಸ್ಟಾಲ್ ಉಕ್ಕು ಕಂಪೆನಿಯನ್ನು ಖರೀದಿಸಲು ಆರ್ಸೆಲರ್ ಸಂಸ್ಥೆ ನಿರ್ಧರಿಸಿತು. ಇದರಿಂದ ಆರ್ಸೆಲರ್ ಸಂಸ್ಥೆಯನ್ನು ಖರೀದಿಸುವ ಮಿತ್ತಲ್ ಉಕ್ಕು ಸಂಸ್ಥೆಯ ಯತ್ನಕ್ಕೆ ಅಡ್ಡಗಾಲು ಬಿದ್ದಂತಾಯಿತು.

2006: ಮಾವೋವಾದಿ ಹಿಂಸಾಚಾರವನ್ನು ಕೊನೆಗಾಣಿಸಲು ಮುಂದಡಿ ಇಟ್ಟ ನೇಪಾಳ ಸರ್ಕಾರವು ಶಾಂತಿ ಮಾತುಕತೆ ಆರಂಭಿಸುವ ದ್ಯೋತಕವಾಗಿ 467 ಮಾವೋವಾದಿ ಉಗ್ರಗಾಮಿಗಳನ್ನು ಬಿಡುಗಡೆ ಮಾಡಿತು.

2002: `ಒಡಿಸ್ಸಿ' ಹೆಸರಿನ ನೌಕೆಯು ಮಂಗಳ ಗ್ರಹದಲ್ಲಿ ಹೆಪ್ಪುಗಟ್ಟಿದ ನೀರಿನ ನಿಕ್ಷೇಪವನ್ನು ಪತ್ತೆ ಮಾಡಿತು.

1999: ಬಟಾಲಿಕ್ನಿಂದ ಲಡಾಖ್ ನ ಡ್ರಾಸ್ ವರೆಗಿನ ಗಡಿ ನಿಯಂತ್ರಣ ರೇಖೆಯನ್ನು ಅತಿಕ್ರಮಿಸಿದ್ದ ಪಾಕಿಸ್ಥಾನಿ ಬೆಂಬಲಿತ ಉಗ್ರಗಾಮಿಗಳ ವಿರುದ್ಧ ಭಾರತ `ಆಪರೇಷನ್ ವಿಜಯ್' ಆರಂಭಿಸಿತು. ಅತಿಕ್ರಮಿಗಳನ್ನು ತೆರವುಗೊಳಿಸುವ ಈ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜುಲೈ 14ರಂದು ಘೋಷಿಸಿದರು.

1976: ಕಲಾವಿದ ವೇಣುಗೋಪಾಲ್ ವಿ.ಜಿ. ಜನನ.

1972: ಯುದ್ಧ ಕ್ಷಿಪಣಿಗಳನ್ನು ನಿಯಂತ್ರಿಸುವ `ಆಯಕಟ್ಟಿನ ಶಸ್ತ್ರಾಸ್ತ್ರ ಮಿತಿ ಒಪ್ಪಂದ'ಕ್ಕೆ (ಸಾಲ್ಟ್ 1) ಅಮೆರಿಕ ಮತ್ತು ಯುಎಸ್ಸೆಸ್ಸಾರ್ ಸಹಿ ಹಾಕಿದವು.

1966: ಬ್ರಿಟಿಷ್ ಗಯಾನಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅದು ಈ ದಿನದಿಂದ `ಗಯಾನಾ' ಅಷ್ಟೆ.

1951: ಅಮೆರಿಕದ ಮಹಿಳಾ ಗಗನಯಾನಿ ಸ್ಯಾಲ್ಲಿ ರೈಡ್ ಜನ್ಮದಿನ. ಈಕೆ 1983ರಲ್ಲಿ ಬಾಹ್ಯಾಕಾಶ ಷಟ್ಲ್ ನೌಕೆ ಚಾಲೆಂಜರ್ ಮೂಲಕ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊತ್ತ ಮೊದಲ ಮಹಿಳೆ.

1948: ಜಾನಪದ ಕಲಾವಿದರ ಕುಟುಂಬದಿಂದ ಬಂದ ಕಲಾವಿದ ಗುರುರಾಜ ಹೊಸಕೋಟೆ ಅವರು ರುದ್ರಪ್ಪ ಹೊಸಕೋಟೆ ಹಾಗೂ ಹಾಡುಗಾರ್ತಿ ಗೌರಮ್ಮ ದಂಪತಿಯ ಮಗನಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು.

1940: ಕಲಾವಿದ ಚನ್ನವೀರೇಶ ಸಂಪಗಿ ಜನನ.

1926: ಉಜ್ವಲ ರಾಷ್ಟ್ರಪ್ರೇಮಿ, ಚಿಂತಕ, ಬಹುಭಾಷಾ ಕೋವಿದ ಖ್ಯಾತ ಲೇಖಕ ಹೊ.ವೆ. ಶೇಷಾದ್ರಿ (26-5-1926ರಿಂದ 14-8-2005) ಅವರು ಹೊಂಗಸಂದ್ರದಲ್ಲಿ ವೆಂಕಟರಾಮಯ್ಯ- ಪಾರ್ವತಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ 9 ವರ್ಷ ಸೇವೆ ಸಲ್ಲಿಸಿದ ಇವರ ಲೇಖನಿಯಿಂದ ಬಂದ ಗ್ರಂಥಗಳು ಅಸಂಖ್ಯಾತ. ಇವರ ಲಲಿತ ಪ್ರಬಂಧಗಳ ಸಂಕಲನ ತೋರ್ ಬೆರಳುಗೆ 1982ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment