ಇಂದಿನ ಇತಿಹಾಸ History Today ಜೂನ್ 29
2019: ನವದೆಹಲಿ: ಕೇಂದ್ರದ ವಿದೇಶಾಂಗ ವ್ಯವಹಾರಗಳ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ನೂತನ ಸರ್ಕಾರವು ಪ್ರಮಾಣ ವಚನ ಸ್ವೀಕರಿಸಿದ ಒಂದು ತಿಂಗಳಿಗೂ ಮುನ್ನ ತಮ್ಮ ಅಧಿಕೃತ ನಿವಾಸವನ್ನು ತೆರವುಗೊಳಿಸುವ ಮೂಲಕ ಅಂತರ್ಜಾಲದಲ್ಲಿ ಭಾರೀ ಶ್ಲಾಘನೆಗೆ ಪಾತ್ರರಾದರು. ಹಿರಿಯ ಬಿಜೆಪಿ ನಾಯಕಿ ಸ್ವರಾಜ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ
ಮತ್ತು ಎನ್ಡಿಎ ೨.೦ ಸರ್ಕಾರದಲ್ಲಿ ಸಚಿವೆಯಾಗಿಲ್ಲ. ಈದಿನ ಬೆಳಗ್ಗೆ ಟ್ವೀಟ್ ಮಾಡಿದ್ದ ಅವರು ಸರ್ಕಾರಿ ಬಂಗಲೆ ತೆರವುಗೊಳಿಸಿರುವುದರಿಂದ ತಾವು ಇನ್ನು ಮುಂದೆ ತಮ್ಮ ’ಅಧಿಕೃತ ನಿವಾಸ’ದಲ್ಲಿ
ಸಂಪರ್ಕಕ್ಕೆ ಸಿಗುವುದಿಲ್ಲ’ ಎಂಬುದಾಗಿ ತಿಳಿಸಿದ್ದರು. ‘ನಾನು ನನ್ನ ಅಧಿಕೃತ ನಿವಾಸ ೮, ಸಫ್ದರ್ಜಂಗ್ ರಸ್ತೆ, ನವದೆಹಲಿಯಿಂದ ಹೊರಕ್ಕೆ ಹೋಗಿದ್ದೇನೆ. ದಯವಿಟ್ಟು ಗಮನಿಸಿ- ಹಿಂದಿನ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳಲ್ಲಿ ನನ್ನನ್ನು ಇನ್ನು ಸಂಪರ್ಕಿಸಲು ಸಾಧ್ಯವಿಲ್ಲ’ ಎಂದು
ಸುಷ್ಮಾ ಟ್ವೀಟ್ ತಿಳಿಸಿತ್ತು. ಟ್ವಿಟ್ಟರಿನಲ್ಲಿ
ಸುಷ್ಮಾ ಅಭಿಮಾನಿಗಳು ಈ ಟ್ವೀಟಿಗಾಗಿ ಅವರನ್ನು ಅಭಿನಂದಿಸಿ, ಅಧಿಕೃತ ಬಂಗಲೆಗಳಿಂದ ಹೊರಹಾಕಲ್ಪಟ್ಟ ಇತರ ರಾಜಕಾರಣಿಗಳಿಗೆ ’ಮಾದರಿ ಹಾಕಿಕೊಟ್ಟಿದ್ದೀರಿ’ ಎಂದು ಶ್ಲಾಘಿಸಿದರು. ಇನ್ನೊಬ್ಬ ಅಭಿಮಾನಿ ’ರಾಷ್ಟ್ರದ ಅತ್ಯಂತ ಡೈನಮಿಕ್ ಮಹಿಳಾ ರಾಜಕಾರಣಿಯನ್ನು ದೇಶವು ಕಳೆದುಕೊಂಡಿದೆ’ ಎಂದು ಪ್ರತಿಕ್ರಿಯಿಸಿದರು.
‘ಸರ್ಕಾರದಲ್ಲಿನ ನಿಮ್ಮ ವರ್ಚಸ್ಸನ್ನು ನಾವು ಕಳೆದುಕೊಂಡಿದ್ದೇವೆ. ರಾಷ್ಟ್ರದ ಅತ್ಯಂತ ಡೈನಮಿಕ್ ಮಹಿಳಾ ರಾಜಕಾರಣಿಗೆ ಅತ್ಯುತ್ತಮ ಆರೋಗ್ಯ ಮತ್ತು ಅದೃಷ್ಟ ಲಭಿಸಲಿ’ ಎಂದ ಈ ಅಭಿಮಾನಿ ಟ್ವೀಟ್ ಮಾಡಿದರು. ಇನ್ನೊಂದು
ಕುತೂಹಲಕಾರಿ ಟ್ವೀಟಿನಲ್ಲಿ ’ಏಕ್ ಸೇನಾನಿ’ ಬಿ
ಎನ್ ಶರ್ಮ ಅವರು ’ಕೇವಲ ಆರೋಗ್ಯದ ಕಾರಣಕ್ಕಾಗಿ ಪ್ರಸ್ತುತ ಸಂಪುಟದಲ್ಲಿ ಸ್ವರಾಜ್ ಅವರು ಗೈರುಹಾಜರಾಗಿದ್ದಾರೆಯೇ?’ ಎಂಬುದಾಗಿ ಅಚ್ಚರಿ ವ್ಯಕ್ತ ಪಡಿಸಿದರು. ‘ದಕ್ಷ ಸಚಿವೆಯೊಬ್ಬರು ದಿಢೀರನೆ ಸಂಪುಟದಿಂದ ನಿರ್ಗಮಿಸಿರುವುದನ್ನು ನೋಡಲು ಸ್ವಲ್ಪ ಬೇಸರವಾಗುತ್ತದೆ. ಅರುಣ್ ಜೇಟ್ಲಿಜಿ ಅವರ ಜೊತೆ ಸಾಮ್ಯತೆ ಇರುವುದರಿಂದ ಇದು ಕೇವಲ ಆರೋಗ್ಯದ ಕಾರಣಕ್ಕಾಗಿ, ಯಾವುದೇ ರಾಜಕೀಯ ಮತ್ತು ಭಿನ್ನಾಭಿಪ್ರಾಯಗಳ
ಕಾರಣಕ್ಕಾಗಿ ಅಲ್ಲ ಎಂದು ಹಾರೈಸುವೆ. ಉಭಯರೂ ವಾಜಪೇಯಿಜಿ -ಅಡ್ವಾಣಿಜಿ ಯುಗದವರು ಎಂಬುದು ಮುಖ್ಯ ಮತ್ತು ಅವರಿಗೆ ಅತ್ಯಂತ ನಿಕಟವಾಗಿದ್ದವರು’ ಎಂದು ಶರ್ಮ ಟ್ವೀಟ್ ಮಾಡಿದರು. ನರೇಂದ್ರ
ಮೋದಿ ಸರ್ಕಾರವು ಕಳೆದ ತಿಂಗಳು ಎಲ್ಲ ಮಾಜಿ ಶಾಸನಕರ್ತರಿಗೆ ತಮ್ಮ ಅಧಿಕೃತ ನಿವಾಸಗಳನ್ನು ತೆರವುಗೊಳಿಸುವ ಮೂಲಕ ಮೊದಲ ಬಾರಿಗೆ ಸಂಸದರಾಗಿರುವ ೨೬೭ ಮಂದಿಗೆ ವಸತಿಗಳನ್ನು ಕಲ್ಪಿಸಲು ನೆರವಾಗುವಂತೆ ಮನವಿ ಮಾಡಿತ್ತು. ಕೇಂದ್ರ ಸಂಪುಟವು ಸಾರ್ವಜನಿಕ ಆವರಣಗಳ (ಅನಧಿಕೃತ ವಾಸಿಗಳನ್ನು ತೆರವುಗೊಳಿಸುವ) ತಿದ್ದುಪಡಿ ಮಸೂದೆ ೨೦೧೯ಕ್ಕೆ ಈ ತಿಂಗಳ ಜೂನ್ ೧೨ರಂದು ಒಪ್ಪಿಗೆ ನೀಡಿತ್ತು. ಸದರಿ ಮಸೂದೆಯು ನೋಟಿಸ್ ನೀಡುವಿಕೆ, ಶೋಕಾಸ್ ನೋಟಿಸ್, ತನಿಖೆ, ತೆರವುಗೊಳಿಸುವ ಸಲುವಾಗಿ ಎಸ್ಟೇಟ್ ಅಧಿಕಾರಿಯ ನೇಮಕ ಇತ್ಯಾದಿ ವೇಳೆ ತಿನ್ನುವ ಪ್ರಕ್ರಿಯೆಗಳನ್ನು
ನಿವಾರಿಸಲಿದೆ. ಐದು ತಿಂಗಳುಗಳಿಗಿಂತ ಹೆಚ್ಚು ಕಾಲ ಅನಧಿಕೃತ ವಾಸ ಮಾಡುವವರಿಗೆ ೧೦ ಲಕ್ಷ ರೂಪಾಯಿಗಳವರೆಗಿನ ಭಾರೀ ದಂಡ ವಿಧಿಸಲೂ ಈ ಕಾಯ್ದೆ ಅನುಮತಿ ಕೊಡುತ್ತದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಲಕ್ನೋದಲ್ಲಿ ತಾವು ವಾಸವಿದ್ದ ಅಧಿಕೃತ ಬಂಗಲೆ ತೆರವುಗೊಳಿಸಲು ೨ ವರ್ಷಗಳ ಕಾಲಾವಕಾಶ ಕೋರುವ ಮೂಲಕ ಕಳೆದ ವರ್ಷ ವೃತ್ತ ಪತ್ರಿಕೆಗಳಲ್ಲಿ ಭಾರೀ ಸುದ್ದಿಯಾಗಿದ್ದರು.
ಉತ್ತರ ಪ್ರದೇಶದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಅಧಿಕೃತ ನಿವಾಸವನ್ನು ತಮ್ಮ ಗುರು ಬಿಎಸ್ಪಿ ಸ್ಥಾಪಕ ಕಾನ್ಶಿರಾಮ್ ಅವರ ಸ್ಮಾರಕವನ್ನಾಗಿ ಪರಿವರ್ತಿಸುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು.
2019: ನವದೆಹಲಿ: ೨೦೧೮ರ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಪೆಹ್ಲು ಖಾನ್ ಹೆಸರಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಶನಿವಾರ ಸ್ಪಷ್ಟ ಪಡಿಸಿದರು. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಗುಂಪು ಹತ್ಯೆಯನ್ನು ಕಾಂಗ್ರೆಸ್ ಪಕ್ಷವು ಪ್ರಬಲವಾಗಿ ವಿರೋಧಿಸುತ್ತದೆ ಎಂದೂ ಅವರು ಹೇಳಿದರು. ‘ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿರುವ ವರದಿ ವಾಸ್ತವಿಕವಾಗಿ ಸರಿಯಲ್ಲ. ರಾಜಸ್ಥಾನ ಪೊಲೀಸರು ೨೦೧೮ರ ಡಿಸೆಂಬರಿನಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಪೆಹ್ಲು ಖಾನ್ ಹೆಸರು ಇಲ್ಲ’ ಎಂದು
ರಾಜಸ್ಥಾನದ ಮುಖ್ಯಮಂತ್ರಿ ಟ್ವೀಟ್ ಮಾಡಿದರು. ದೇಶದ ಯಾವುದೇ ಜಾಗದಲ್ಲಿ ನಡೆಯುವ ಗುಂಪುದಾಳಿ ಹಾಗೂ ಹತ್ಯೆಗೆ ಕಾಂಗ್ರೆಸ್ ಪಕ್ಷವು ಸೈದ್ಧಾಂತಿಕವಾಗಿಯೇ
ವಿರೋಧವಾಗಿದೆ. ಇಂತಹ ಘಟನೆ ಇನ್ನೊಮ್ಮೆ ಘಟಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಜಾಗೃತ ಸ್ಥಿತಿಯಲ್ಲಿದೆ’ ಎಂದು ಇನ್ನೊಂದು ಟ್ವೀಟಿನಲ್ಲಿ ಮುಖ್ಯಮಂತ್ರಿ ಬರೆದರು. ೨೦೧೭ರಲ್ಲಿ ಗೋ ಸಂರಕ್ಷಕರಿಂದ ನಡೆಯಿತೆಂದು ಆಪಾದಿಸಲಾದ ಗುಂಪುದಾಳಿಯಲ್ಲಿ
ಸಾವನ್ನಪ್ಪಿದ್ದ ಪೆಹ್ಲು ಖಾನ್ ಹೆಸರನ್ನು ಜಾನುವಾರು ಕಳ್ಳಸಾಗಣೆಯ ಆರೋಪ ಹೊರಿಸಿ ದೋಷಾರೋಪ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಾದ ಒಂದು ದಿನದ ಬಳಿಕ ಮುಖ್ಯಮಂತ್ರಿ ಗೆಹ್ಲೋಟ್ ಅವರು ಈ ಟ್ವೀಟ್ ಮಾಡಿದರು. ‘ಇದು ದಾಖಲಾಗಿರುವ ಪ್ರತ್ಯೇಕ ಪ್ರಕರಣವಾಗಿದ್ದು ೨೦೧೭-೧೮ರಲ್ಲಿ ಹಿಂದಿನ ಸರ್ಕಾರವು ಆರಿಫ್, ಇರ್ಶಾದ್ ಮತ್ತು ಸಾಗಣೆದಾರ ಖಾನ್ ಮೊಹಮ್ಮದ್ ವಿರುದ್ಧ ತನಿಖೆ ನಡೆಸಿದ್ದ ಪ್ರಕರಣವಾಗಿದೆ’ ಎಂದು ಗೆಹ್ಲೋಟ್ ಹೇಳಿದರು. ದೋಷಾರೋಪ ಪಟ್ಟಿಯಲ್ಲಿ ಪ್ರಸ್ತಾಪಗೊಂಡಿದ್ದ ಹೆಸರುಗಳು ಅದನ್ನು ಸಲ್ಲಿಸುವ ವೇಳೆಯಲ್ಲಿ ಇಲ್ಲದೇ ಇದ್ದುದರಿಂದ ೨೦೧೮ರ ಮೇ ೨೪ರಂದು ಜಿಲ್ಲಾ ನ್ಯಾಯಾಲಯವು ’ಚಲನ್’ ಸ್ವೀಕರಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ನುಡಿದರು. ಹಿಂದೆ
ನಡೆದ ತನಿಖೆಯಲ್ಲಿ ಏನಾದರೂ ಪೂರ್ವೋದ್ದೇಶ ಇದ್ದರೆ ತಮ್ಮ ಸರ್ಕಾರವು ತನಿಖೆ ನಡೆಸುವುದು ಎಂದು ಗೆಹ್ಲೋಟ್ ಹೇಳಿದರು. ಪೊಲೀಸರು ಈ ಹಿಂದೆ ಖಾನ್ ಅವರನ್ನು ಗುಂಪುದಾಳಿಯಲ್ಲಿ
ಕೊಂದ ಆರೋಪಕ್ಕೆ ಒಳಗಾಗಿದ್ದ ೬ ಮಂದಿಗೆ ಕ್ಲೀನ್ ಚಿಟ್ ನೀಡಿದ್ದರು. ಗೋ ಶಾಲೆಯ ಸಿಬ್ಬಂದಿಯ ಹೇಳಿಕೆ ಮತ್ತು ಮೊಬೈಲ್ ದಾಖಲೆಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ೫೫ರ ಹರೆಯದ ಹರಿಯಾಣದ ನುಹ್ನ ಡೈರಿ ರೈತ ಪೆಹ್ಲು ಖಾನ್ ಅವರ ಮೇಲೆ ರಾಜಸ್ಥಾನದ ಬೆಹ್ರೋರ್ನ ದೆಹಲಿ-ಆಳ್ವಾರ್ ಹೆದ್ದಾರಿಯಲ್ಲಿ ಏಪ್ರಿಲ್ ೧ರಂದು ಸ್ವಘೋಷಿತ ಗೋಸಂರಕ್ಷಕರು ಜಾನುವಾರು ಕಳ್ಳಸಾಗಣೆ ಮಾಡುತ್ತಿರುವುದಾಗಿ ಆಪಾದಿಸಿ ಗುಂಪು ದಾಳಿ ನಡೆಸಿದ್ದರು. ಖಾನ್ ಅವರು ಏಪ್ರಿಲ್ ೩ರಂದು ಗಾಯಗಳ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
2019: ಮುಂಬೈ/ ಪುಣೆ: ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಮುಂಗಾರು ಮಳೆ ಇನ್ನಷ್ಟು ತೀವ್ರಗೊಂಡು, ಮಹಾರಾಷ್ಟ್ರದ ಪುಣೆಯಲ್ಲಿ ಹೌಸಿಂಗ್ ಸೊಸೈಟಿ ಒಂದರ ಆವರಣ ಗೋಡೆ ಕುಸಿದು ಎಳೆಯ ಮಕ್ಕಳು ಸೇರಿದಂತೆ ಕನಿಷ್ಠ ೧೫
ಮಂದಿ ಸಾವನ್ನಪ್ಪಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗೋಡೆ ಕುಸಿತ ಘಟನೆ ಕುರಿತು ತನಿಖೆಗೆ ಆಜ್ಞಾಪಿಸಿದರು. ಪುಣೆಯ ಕೊಂಧ್ವಾದಲ್ಲಿ ಬೆಳಗ್ಗೆ ಭಾರೀ ಮಳೆಯ ಪರಿಣಾಮವಾಗಿ ಹೌಸಿಂಗ್ ಸೊಸೈಟಿ ಒಂದರ ಆವರಣ ಗೋಡೆ ಕುಸಿದು, ಗೋಡೆಯ ತಳದಲ್ಲಿದ್ದ ಗುಡಿಸಲುಗಳಲ್ಲಿ ಇದ್ದ ಮಕ್ಕಳು ಸೇರಿದಂತೆ ಹಲವಾರು ಮಂದಿ ಅದರ ಅವಶೇಷಗಳ ಅಡಿಯಲ್ಲಿ ಸಿಲುಕಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ದುರಂತದ ವಿಡಿಯೋ ದೃಶ್ಯಾವಳಿಗಳಲ್ಲಿ ಹಲವಾರು ಕಾರುಗಳು ಅವಶೇಷದ ಅಡಿಯಲ್ಲಿ ಸಿಲುಕಿಕೊಂಡದ್ದು
ಕಂಡು ಬಂದಿತು. ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ (ಎನ್ಡಿಆರ್ಎಫ್) ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕರೆಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಕಳೆದ ೨೪ ಗಂಟೆಗಳಲ್ಲಿ ಗುಜರಾತಿನ ವಲ್ಸದ್, ಸೂರತ್ ಮತ್ತು ಭಾವನಗರ ಸೇರಿದಂತೆ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಮುಂಗಾರು ತೀವ್ರಗೊಂಡಿದೆ. ವಲ್ಸದ್, ಭಾವನಗರ ಮತ್ತು ಸೂರತ್ನಲ್ಲಿ ಕ್ರಮವಾಗಿ ೧೩೦ ಎಂಎಂ, ೫೩ ಎಂಎಂ ಮತ್ತು ೨೪ ಎಂಎಂ ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ.
2019: ನವದೆಹಲಿ: ಆಳ್ವಾರಿನಲ್ಲಿ ಗೋ ರಕ್ಷಕರಿಂದ ನಡೆದ ಗುಂಪುದಾಳಿಯಲ್ಲಿ
ಸಾವನ್ನಪ್ಪಿದ ಎರಡು ವರ್ಷಗಳ ಬಳಿಕ ಮೃತ ಡೈರಿ ರೈತ ಪೆಹ್ಲುಖಾನ್ ವಿರುದ್ಧ ರಾಜಸ್ಥಾನ ಪೊಲೀಸರು ಗೋ ಕಳ್ಳಸಾಗಣೆಗಾಗಿ ದೋಷಾರೋಪ ಪಟ್ಟಿ ಸಲ್ಲಿಸಿದರು. ಕಳೆದ
ವರ್ಷ ಡಿಸೆಂಬರ್ ೩೦ರಂದು ಸಿದ್ಧ ಪಡಿಸಲಾದ ದೋಷಾರೋಪ ಪಟ್ಟಿಯಲ್ಲಿ ೨೦೧೭ರ ಏಪ್ರಿಲ್ ೧ರಂದು ಜಾನುವಾರು ಸಾಗಣೆಗಾಗಿ ಬಳಸಲಾಗಿದ್ದ ಪಿಕ್-ಅಪ್ ಟ್ರಕ್ ಮಾಲೀಕನ ಹೆಸರನ್ನೂ ನಮೂದಿಸಲಾಯಿತು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಹಲವಾರು ತಿಂಗಳುಗಳ ಬಳಿಕ ಈ ವರ್ಷ ಮೇ ೨೯ರಂದು ಬೆಹ್ರೋರ್ ಅಡಿಷನಲ್ ಚೀಫ್ ಜ್ಯುಡಿಷಿಯಲ್ಲ ಮ್ಯಾಜಿಸ್ಟ್ರೇಟ್
ಕೋರ್ಟಿಗೆ ಈ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ಪೆಹ್ಲು ಖಾನ್ ವಿರುದ್ಧ ಸಲ್ಲಿಸಲಾಗಿರುವ ಮರಣೋತ್ತರ ದೋಷಾರೋಪ ಪಟ್ಟಿಯಲ್ಲಿ ರಾಜಸ್ಥಾನ ಗೋ ಜಾತಿಯ ಪ್ರಾಣಿಗಳ (ಹತ್ಯೆ ನಿಷೇಧ ಮತ್ತು ತಾತ್ಕಾಲಿಕ ಸಾಗಣೆ ಅಥವಾ ರಫು ನಿಯಂತ್ರಣ) ಕಾಯ್ದೆ ೧೯೯೫ ಮತ್ತು ನಿಯಮಗಳು ೧೯೯೫ರ ಸೆಕ್ಷನ್ ೫, ೮ ಮತ್ತು ೯ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ. ದೋಷಾರೋಪ ಪಟ್ಟಿಯಲ್ಲಿ ಪೆಹ್ಲು ಖಾನ್ ಅವರ ಇಬ್ಬರು ಮಕ್ಕಳಾದ ಇರ್ಶಾದ್ ಮತ್ತು ಆರಿಫ್ ಅವರನ್ನು ಕೂಡಾ ಹೆಸರಿಸಲಾಯಿತು. ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಲ್ಲಿಸಲಾಗಿರುವ ಇತ್ತೀಚಿನ ಈ ದೋಷಾರೋಪ ಪಟ್ಟಿಯು ಪೆಹ್ಲು ಖಾನ್ ಕುಟುಂಬಕ್ಕೆ ಆಘಾತವನ್ನು ಉಂಟು ಮಾಡಿದೆ. ಖಾನ್ ಅವರ ಹಿರಿಯ ಪುತ್ರ ಇರ್ಶಾದ್ ಅವರು ಹೊಸ ಸರ್ಕಾರದ ಬಗೆಗಿನ ತಮ್ಮ ಆಶಯಗಳು ಈ ಬೆಳವಣಿಗೆಯ ಬಳಿಕ ನುಚ್ಚು ನೂರಾಗಿವೆ ಎಂಬುದಾಗಿ ಹೇಳಿದರು. ಕಳೆದ ವರ್ಷ ರಾಜಸ್ಥಾನದ ಹಿಂದಿನ ಬಿಜೆಪಿ ಸರ್ಕಾರವು ಖಾನ್ ಅವರ ಇಬ್ಬರು ಸಹಚರರ ವಿರುದ್ಧ ಇಂತಹುದೇ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಈ ಇಬ್ಬರು ಸಹಚರರೂ ಗುಂಪಿನಿಂದ ದಾಳಿಗೆ ಒಳಗಾಗಿದ್ದರು. ಮೃತ ಪೆಹ್ಲುಖಾನ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ
ಭುಗಿಲೆದ್ದಿರುವ ತೀವ್ರ ಪ್ರತಿಭಟನೆಯ ಮಧ್ಯೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪ್ರಕರಣದ ತನಿಖೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಡೆಸಲಾಗಿತ್ತು ಎಂದು ಹೇಳಿದ್ದಾರೆ. ’ತನಿಖೆಯಲ್ಲಿ ಏನಾದರೂ ಲೋಪದೋಷಗಳು ಇದ್ದಲ್ಲಿ ಪ್ರಕರಣದ ಮರುತನಿಖೆ ನಡೆಸಲಾಗುವುದು ’ ಎಂದು ಅವರು ನುಡಿದರು. ಕಾಂಗೆಸ್ ಇಂತಹ ಕ್ರಿಮಿನಲ್ ಚಟುವಟಿಕೆಗಳನ್ನು
ಯಾವಾಗಲೂ ಖಂಡಿಸುತ್ತದೆ ಮತ್ತು ಅವುಗಳನ್ನು ಬೆಂಬಲಿಸುವುದಿಲ್ಲ. ವಿಷಯವು ನ್ಯಾಯಾಲಯದಲ್ಲಿದೆ ಮತ್ತು ನ್ಯಾಯ ಒದಗಿಸಲಾಗುವುದು’ ಎಂದು ಗೆಹ್ಲೋಟ್ ಹೇಳಿದರು. ಖಾನ್ ಅವರು ಮೇವಾತ್ನ ನುಹ್ ಜಿಲ್ಲೆಯ ಜೈಸಿಂಗಪುರ ಗ್ರಾಮದ ೫೫ರ ಹರೆಯದ ನಿವಾಸಿಯಾಗಿದ್ದರು.
ರಂಜಾನ್ ಅವಧಿಯಲ್ಲಿ ತಮ್ಮ ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಜಾನುವಾರು ಖರೀದಿಗಾಗಿ ಅವರು ತಮ್ಮ ಗ್ರಾಮದಿಂದ ಆಳ್ವಾರ್ಗೆ ತೆರಳಿದ್ದರು. ಗೋಸಂರಕ್ಷಕರ ಗುಂಪಿನ ಮುತ್ತಿಗೆಗೆ ಒಳಗಾದ ಖಾನ್ ತಮ್ಮ ಖರೀದಿ ರಶೀತಿಗಳನ್ನು ತೋರಿಸಿ ರಕ್ಷಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಕಬ್ಬಿಣದ ಸಲಾಕೆ ಮತ್ತು ಬೆತ್ತಗಳ ಏಟಿಗೆ ಸಿಲುಕಿ ಗುಂಪು ದಾಳಿಯಲ್ಲಿ ಹತರಾಗಿದ್ದರು.
2018:
ಕೋಲ್ಕತ: ಮಾಜಿ ಲೋಕಸಭಾ ಸಭಾಧ್ಯಕ್ಷ ಸೋಮನಾಥ ಚಟರ್ಜಿ (೮೮) ಅವರನ್ನು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದನ್ನು
ಅನುಸರಿಸಿ ಕೋಲ್ಕತದ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ನಿಗಾ ಘಟಕಕ್ಕೆ ದಾಖಲು ಮಾಡಲಾಯಿತು. ಬೆಳ್ಳೆ
ವ್ಯೂ ಕ್ಲಿನಿಕ್ ಮೂಲಗಳ ಪ್ರಕಾರ ಅಧಿಕ ರಕ್ತಸ್ರಾವದ ಪರಿಣಾಮವಾಗಿ ಮೆದುಳಿನಲ್ಲಿ ಮಧ್ಯಮ ಗಾತ್ರದ ರಕ್ತ
ಹೆಪ್ಪುಗಟ್ಟುವಿಕೆ ಸಂಭವಿಸಿದೆ. ಅವರ ಪರಿಸ್ಥಿತಿ ಸ್ಥಿರವಾಗಿಲ್ಲ ಆದರೆ ಸುಧಾರಿಸುತ್ತಿದೆ. ಮಾತನಾಡಲು ಮತ್ತು ಮಲ ವಿಸರ್ಜನೆಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ
ಚಟರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಟಿ ಸ್ಕ್ಯಾನ್ ಗೆ ಸಮಯ ನಿಗದಿ ಪಡಿಸಲಾಗಿತ್ತು.
ಆದರೆ ಶ್ವಾಸಕೋಶ, ಯಕೃತ್ತು ಮತ್ತು ಮೂತ್ರನಾಳಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿದ ಹಿನ್ನೆಲೆಯಲ್ಲಿ
ಸಿಟಿ ಸ್ಕ್ಯಾನನ್ನು ಮುಂದೂಡಲಾಯಿತು. ಶಾಸಕ ಬಿಮನ್ ಬಂದೋಪಾಧ್ಯಾಯ ಮತ್ತು ಸಿಪಿಐ(ಎಂ) ಸದಸ್ಯರಾದ ಶ್ಯಾಮಲ್
ಚಕ್ರಬರ್ತಿ ಮತ್ತು ಸುಜನ್ ಚಕ್ರಬರ್ತಿ ಅವರು ಚಟರ್ಜಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಆಸ್ಪತ್ರೆಯ
ಸಿಇಒ ಪ್ರದೀಪ ಟಂಡನ್ ಹೇಳಿದರು.
ಅಮೆರಿಕ ಹೊಸ ಮಾನದಂಡ ನಿಗದಿಪಡಿಸಿತು. ಇದರಂತೆ, ಅಮೆರಿಕದ ಜತೆ ಆಪ್ತ ವಾಣಿಜ್ಯ ಸಂಬಂಧ ಮತ್ತು ಅಮೆರಿಕದಲ್ಲಿ ಆಪ್ತ ಸಂಬಂಧಿಕರನ್ನು ಹೊಂದಿರುವವರಿಗೆ ಮಾತ್ರ ವೀಸಾ ನೀಡಲಾಗುತ್ತದೆ. ಆರು ಮುಸ್ಲಿಂ ರಾಷ್ಟ್ರಗಳ ಜನರ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಡೊನಾಲ್ಡ್ ಟ್ರಂಪ್ ಆಡಳಿತ ಹೊರಡಿಸಿದ್ದ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಸುಪ್ರೀಂ ಕೋರ್ಟ್ ಇತ್ತೀಚೆಗೆ ತಡೆಯಾಜ್ಞೆ ನೀಡಿತ್ತು. ಹೀಗಾಗಿ ಹೊಸ ಮಾನದಂಡಗಳನ್ನು ಘೋಷಿಸಲಾಯಿತು. ಹೊಸ ಮಾನದಂಡದಲ್ಲಿರುವ ಅಂಶಗಳನ್ನು ಅಮೆರಿಕದ ರಾಯಭಾರ ಕಚೇರಿಗಳಿಗೆ ಕಳುಹಿಸಿಕೊಡಲಾಯಿತು. ಅಮೆರಿಕದ ವೀಸಾ ಬಯಸುವವರ ಪಾಲಕರು, ಸಂಗಾತಿ, ಮಕ್ಕಳು, ಮಗ ಅಥವಾ ಮಗಳು, ಅಳಿಯ, ಸೊಸೆ ಮತ್ತು ಸಹೋದರ ಇವರಲ್ಲಿ ಯಾರಾದರೂ ಒಬ್ಬರು ಅಮೆರಿಕದಲ್ಲಿರಬೇಕು. ಸೋದರಸಂಬಂಧಿ, ಅತ್ತೆ, ಮಾವ, ಚಿಕ್ಕಪ್ಪ ಇತ್ಯಾದಿ ಸಂಬಂಧಿಗಳಿದ್ದರೂ ಅಂಥವರಿಗೆ ವೀಸಾ ನೀಡಲಾಗುವುದಿಲ್ಲ.
2016: ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಹಾಗೂ ನಿವೃತ್ತ ನೌಕರರ ವೇತನ ಪರಿಷ್ಕರಣೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿತು. 7 ನೇ ವೇತನ ಆಯೋಗದ ಶಿಫಾರಸು ಪ್ರಕಾರ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಯಲ್ಲಿ ಶೇಕಡಾ 23.55ರಷ್ಟು ಏರಿಕೆಯಾಗಲಿದೆ. 7 ನೆ ವೇತನ ಆಯೋಗದ ಶಿಫಾರಸು ಜಾರಿಯಿಂದ ಕೇಂದ್ರ ಸರ್ಕಾರದ 4.4 ಕೋಟಿ ನೌಕರರು ಮತ್ತು 5.5 ಕೋಟಿ ನಿವೃತ್ತ ಸಿಬ್ಬಂದಿಗೆ ಅನುಕೂಲವಾಗಲಿದೆ. ಕೇಂದ್ರ ಬೊಕ್ಕಸದ ಮೇಲೆ 1.02 ಲಕ್ಷ ಕೋಟಿ ರೂಪಾಯಿ ಹೊರೆ ಬೀಳಲಿದೆ. 2016ರ ಜನವರಿ 1ರಿಂದ ಪೂರ್ವಾನ್ವಯಾಗಿ ವೇತನ ಪರಿಷ್ಕರಣೆಯಾಗಲಿದೆ. ನ್ಯಾಯಮೂರ್ತಿ ಎ.ಕೆ. ಮಾಥುರ್ ನೇತೃತ್ವದ 7 ನೇ ವೇತನ ಆಯೋಗವು 900 ಪುಟಗಳ ವರದಿಯನ್ನು 2015 ರ ನವೆಂಬರ್ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಸಲ್ಲಿಸಿತ್ತು. ವರದಿಯ ಪರಿಶೀಲನೆಗೆ ಸಂಪುಟ ಕಾರ್ಯದರ್ಶಿ ಪಿ ಕೆ ಸಿನ್ಹಾ ನೇತೃತ್ವದಲ್ಲಿ ಉನ್ನತಾಧಿಕಾರ ಸಲಹಾ ಸಮಿತಿ ರಚಿಸಲಾಗಿತ್ತು. ಸಿನ್ಹಾರ ವೇತನ ಸಲಹಾ ಸಮಿತಿ ಸಲ್ಲಿಸಿದ ವರದಿ ಆಧರಿಸಿ 7 ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ಕುರಿತು ಈದಿನ ಸಂಪುಟವು ಚರ್ಚಿಸಿ ಬಳಿಕ ಒಪ್ಪಿಗೆ ನೀಡಿತು. 6 ನೇ ವೇತನ ಆಯೋಗದ ಶಿಫಾರಸಿನಂತೆ ಶೇಕಡಾ 20% ದಷ್ಟು ವೇತನ ಹೆಚ್ಚಿಸಿದ್ದ ಸರ್ಕಾರ ಈ ಪರಿಷ್ಕರಣೆಯನ್ನು 2008ರಿಂದ ಜಾರಿಗೊಳಿಸಿತ್ತು.
2016: ವಡೋದರಾ: ದೇಶದ ಪ್ರಸಿದ್ಧ ಚಿತ್ರ ಕಲಾವಿದ ಹಾಗೂ ಸಾವಿರಾರು ಯುವ ಕಲಾವಿದರ ಸ್ಪೂರ್ತಿಯ ಸೆಲೆ ಕೆ.ಜಿ. ಸುಬ್ರಮಣ್ಯನ್ ಅವರು ಈದಿನ ನಿಧನರಾದರು. ಮೃತರಿಗೆ 91 ವರ್ಷ ವಯಸ್ಸಾಗಿತ್ತು. ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಕೆ.ಜಿ. ಸುಬ್ರಮಣ್ಯನ್ ಕುಟುಂಬ ಸದಸ್ಯರನ್ನು, ಸಾವಿರಾರು ಕಲಾವಿದರನ್ನು, ಕಲಾಪ್ರಿಯರನ್ನು, ಕಲಾಭಿಮಾನಿಗಳನ್ನು ಅಗಲಿದರು. ಭಾರತೀಯ ನವ್ಯ ಕಲಾಪ್ರಕಾರದಲ್ಲಿ ತಮ್ಮದೇ ವಿಭಿನ್ನ ಶೈಲಿಯ ಮೂಲಕ ಗುರುತಿಸಿಕೊಂಡಿದ್ದ ಅವರು ಭಾರತೀಯ ನವ್ಯ ಚಿತ್ರಕಲಾ ಪರಂಪರೆಯ ಹುಟ್ಟಿಗೂ ಕಾರಣೀಕರ್ತರಾದವರಲ್ಲಿ ಒಬ್ಬರಾಗಿದ್ದರು. ಅದರಲ್ಲೂ ಸಂದಭೋಚಿತ ಆಧುನಿಕ ನವ್ಯ ಕಲಾಕೃತಿಗಳ (Contextual Modernism) ರಚನೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸಿದ ಅಪರೂಪದ ಕಲಾಕಾರ ಎನಿಸಿಕೊಂಡಿದ್ದರು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕಾಳಿದಾಸ ಸಮ್ಮಾನ್ ಪುರಸ್ಕಾರಗಳು ಕೆ.ಜಿ.ಸುಬ್ರಮಣ್ಯನ್ ಅವರಿಗೆ ಸಂದಿದ್ದವು. 1924ರಲ್ಲಿ ಕೇರಳದಲ್ಲಿ ಜನಿಸಿದ ಕೆ.ಜಿ.ಸುಬ್ರಮಣ್ಯನ್ ಅವರು ಬಾಲ್ಯದಲ್ಲಿಯೇ ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದರು. ಬಳಿಕ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯನ್ನೇ ಅಧ್ಯಯನ ಮಾಡಿ ಪದವಿ ಪಡೆದರು. ನಂತರದ ದಿನಗಳಲ್ಲಿ ಬರೋಡಾ ಎಂ.ಎಸ್. ವಿಶ್ವವಿದ್ಯಾಲಯದ ಫೈನ್ ಆರ್ಟ್ ಕಾಲೇಜು, ಶಾಂತಿನಿಕೇತನ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕೆ.ಜಿ. ಸುಬ್ರಮಣ್ಯನ್ ಕಳೆದ ಕೆಲ ವರ್ಷಗಳಿಂದ ಬರೋಡದಲ್ಲಿ ತಮ್ಮ ಮಗಳು ಉಮಾ ಅವರ ಜತೆ ವಾಸವಿದ್ದರು. ಇತ್ತೀಚೆಗಷ್ಟೇ ಕೆ.ಜಿ. ಸುಬ್ರಮಣ್ಯನ್ ಅವರ ಇತ್ತೀಚೆಗಿನ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ರಾಷ್ಟ್ರೀಯ ನವ್ಯ ಕಲಾಗ್ಯಾಲರಿಯಲ್ಲಿ ಪ್ರದರ್ಶನಗೊಂಡಿತ್ತು.
2016: ಇಸ್ತಾನ್ಬುಲ್: ವಿಶ್ವದ ಅತಿ ಹೆಚ್ಚು ಜನದಟ್ಟಣೆ ಇರುವ ಟರ್ಕಿಯ ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಮೂರು ಆತ್ಮಾಹುತಿ ಬಾಂಬ್ ಸ್ಫೋಟಗಳಲ್ಲಿ 41 ಪ್ರಯಾಣಿಕರು ಮೃತರಾಗಿ, 350ಕ್ಕೂ ಹೆಚ್ಚು ಜನ ಗಾಯಗೊಂಡರು. ಸ್ಥಳೀಯ ಕಾಲಮಾನ ನಸುಕಿನ 3 ಗಂಟೆಗೆ ಟ್ಯಾಕ್ಸಿಯಲ್ಲಿ ಬಂದಿಳಿದ ಮೂವರು ಆತ್ಮಹತ್ಯಾ ಬಾಂಬರ್ಗಳು ಏಕಾಏಕಿ ಪ್ರಯಾಣಿಕರ ಮೇಲೆ ಗುಂಡಿನ ಮಳೆಗರೆದರು. ಕ್ಷಣಾರ್ಧಗಳಲ್ಲಿ ಈ ದುರಂತ ಸಂಭವಿಸಿತು. ದುರಂತದ ಬಗ್ಗೆ ತೀವ್ರ ದಿಗ್ ಭ್ರಮೆ ವ್ಯಕ್ತಪಡಿಸಿದ ಟರ್ಕಿಷ್ ಪ್ರಧಾನಿ ಬಿನಾಲಿ ಇಡಿರಿಮ್ ಇದು ಇಸ್ಲಾಮಿಕ್ ರಾಷ್ಟ್ರಗಳ ಕೈವಾಡದಿಂದ ಐಸಿಎಸ್ ಉಗ್ರರು ನಡೆಸಿದ ದಾಳಿ ಎಂಬ ಶಂಕೆ ಇದೆ ಎಂದು ಪ್ರತಿಕ್ರಿಯಿಸಿದರು.
2016: ಮುಂಬೈ: ಖ್ಯಾತ ಬಾಲಿಉಡ್ ನಟ ಹೃತಿಕ್ ರೋಷನ್ ಇಸ್ತಾನ್ಬುಲ್ ಬಾಂಬ್ ಸ್ಫೋಟ ದುರಂತದಿಂದ ಅದೃಷ್ಟವಶಾತ್ ಪಾರಾದರು. 36 ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ಉಗ್ರರ ಹಠಾತ್ ದಾಳಿಗೆ ಕೆಲವೇ ಗಂಟೆಗಳ ಮೊದಲು ಹೃತಿಕ್ ಇಸ್ತಾನ್ಬುಲ್ನ ಅಟಾಟರ್ಕ್ ವಿಮಾನ ನಿಲ್ದಾಣದಲ್ಲಿದ್ದರು. ರಜೆ ನಿಮಿತ್ತ ಮಕ್ಕಳೊಂದಿಗೆ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಹೃತಿಕ್, ಭಾರತಕ್ಕೆ ಮರಳುವ ಮುನ್ನ ಇಸ್ತಾನ್ಬುಲ್ನಲ್ಲಿ ಇಳಿದಿದ್ದರು. ಸದ್ಯ ಸಂಪರ್ಕ ವಿಮಾನ ದೊರಕುವುದಿಲ್ಲ. ಮುಂಬೈಗೆ ತೆರಳಲು ಮತ್ತೆ ವಿಮಾನ ಲಭ್ಯತೆಗೆ ಒಂದು ದಿನ ಕಾಯಲೇಬೇಕೆಂಬ ಸೂಚನೆ ಸಿಕ್ಕ ಕೂಡಲೇ ಅವರು ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ವಿಮಾನ ಮಿಸ್ ಆಗಿದ್ದೇ ಹೃತಿಕ್ ಅವರನ್ನು ದುರ್ಘಟನೆಯಿಂದ ಪಾರುಮಾಡಿತು. ಏರ್ಪೋಟ್ ಅಧಿಕಾರಿಗಳಿಗೆ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿದ ಹೃತಿಕ್, ಭಯೋತ್ಪಾದನೆ ವಿರುದ್ಧ ಎಲ್ಲರೂ ಒಟ್ಟಾಗಿ ಸೇರಿ ಹೋರಾಡೋಣ ಎಂದು ಕರೆ ಕೊಟ್ಟರು.
2016: ನವದೆಹಲಿ: ಟಿಕೆಟ್ಗಾಗಿ ಉದ್ದನೆಯ ಸಾಲು, ಅವ್ಯವಸ್ಥೆಯ ವಿಶ್ರಾಂತಿ ಕೊಠಡಿ, ಗಲೀಜು ಶೌಚಾಲಯಗಳಿಂದ ಕೂಡಿರುವ ಈಗಿನ ಅದೆಷ್ಟೋ ರೈಲ್ವೆ ನಿಲ್ದಾಣಗಳಿಗೂ ಭಿನ್ನವಾದ ಹೈಟೆಕ್ ನಿಲ್ದಾಣಗಳು ಭಾರತದಲ್ಲಿ ನಿರ್ಮಾಣಗೊಳ್ಳಲಿವೆ. ಶಾಪಿಂಗ್ವಾಲ್, ರೆಸ್ಟೋರೆಂಟ್ಗಳು, ಹ್ಯಾಲಿಪ್ಯಾಡ್ಗಳನ್ನೊಳಗೊಂಡ ವಿಶ್ವದರ್ಜೆಯ ರೈಲ್ವೆ ನಿಲ್ದಾಣಗಳು ಇವಾಗಿರಲಿವೆ. ವಿಮಾನ ನಿಲ್ದಾಣಗಳಿಗೆ ಏನೂ ಕಡಿಮೆ ಇಲ್ಲ ಎನ್ನುವಂತೆ ತಲೆ ಎತ್ತಲಿವೆ! . ಇದೀಗ ಕೇಂದ್ರ ಸರ್ಕಾರ ಇಂತಹದ್ದೇ ವಿಶ್ವದರ್ಜೆಯ ರೈಲ್ವೇ ನಿಲ್ದಾಣಗಳ ನಿರ್ಮಾಣಕ್ಕೆ ಕೈಹಾಕಿದೆ. ಶಾಪ್ಪಿಂಗ್ ಮಾಲ್, ಸ್ಟಾರ್ ಹೋಟೆಲುಗಳು, ಹೆಲಿಪ್ಯಾಡ್ಗಳನ್ನೊಳಗೊಂಡ ಹೊಸ ರೀತಿಯ ಈ ರೈಲ್ವೆ ನಿಲ್ದಾಣದ ಪುನರ್ನಿರ್ವಣ ಕಾರ್ಯಕ್ಕೆ ಸಚಿವಾಲಯ 100 ಕೋಟಿ ರೂ. ಹಾಗೂ 300 ಕೋಟಿ ರೂ. ವಾಣಿಜ್ಯ ಅಭಿವೃದ್ಧಿಗಾಗಿ ಮೀಸಲಿರಿಸಿದೆ. ಹಬೀಬ್ಗಂಜ್ನಲ್ಲಿ ಈಗಾಗಲೇ ನಿರ್ಮಾಣ ಕಾರ್ಯಗಳು ಆರಂಭಗೊಂಡಿದೆ. ಇದಲ್ಲದೆ ಗುಜರಾತ್ನ ಸೂರತ್ ಹಾಗೂ ಗಾಂಧಿನಗರ, ದೆಹಲಿಯ ಆನಂದ ವಿಲಾಸ್ ಹಾಗೂ ಬಿಜವಾಸನ್ ನಿಲ್ದಾಣಗಳು, ಪುಣೆಯ ಶಿವಾಜಿ ನಗರ, ಚಂಡೀಗಢ, ಮೊಹಾಲಿಯ ಸಾಸ್ ನಗರಗಳೂ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ನಿರ್ಮಾಣಕಾರ್ಯ ಕೈಗೊಂಡಿರುವ ಫ್ರೆಂಚ್ ರೈಲ್ವೆ ಸಂಸ್ಥೆ ಅಂಬಾಲ ಹಾಗೂ ಲುದಿಯಾನ ನಿಲ್ದಾಣಗಳಲ್ಲೂ ನಿರ್ಮಾಣಕಾರ್ಯ ಪ್ರಾರಂಭಿಸಿದೆ. ಉತ್ತರ ಪ್ರದೇಶದಲ್ಲಿ 12 ರೈಲ್ವೆ ನಿಲ್ದಾಣಗಳು ಈ ಪಟ್ಟಿಗೆ ತೇರ್ಗಡೆಯಾಗಿದ್ದು ಉಳಿದ ರಾಜ್ಯಗಳಿಗಿಂತ ಈ ರಾಜ್ಯದಲ್ಲಿ ಹೆಚ್ಚು ರೈಲ್ವೆ ನಿಲ್ದಾಣಗಳು ಪುನರ್ ನಿರ್ಮಾಣವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಭಾರತದ ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಯ ನಿಲ್ದಾಣವನ್ನಾಗಿ ಮಾಡಲು ದಕ್ಷಿಣ ಕೊರಿಯಾ, ಜಪಾನ್, ಬೆಲ್ಜಿಯಂ, ಸ್ವಿಜರ್ಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ನಿರ್ಮಾಣ ಸಂಸ್ಥೆಗಳು ಆಸಕ್ತಿ ತೋರಿಸಿದೆ ಎಂದು ಸಚಿವಾಲಯ ತಿಳಿಸಿದೆ.
2016: ನೊಯಿಡಾ: ವಿಶ್ವದ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್ ಕೇವಲ 251 ರೂಪಾಯಿ ಬೆಲೆಯ ‘ಫ್ರೀಡಮ್ 251’ ಸ್ಮಾರ್ಟ್ ಫೋನ್ ವಿತರಣೆ ವಿಳಂಬವಾಗಿದ್ದು, ಜೂನ್ 30ರ ಬದಲಿಗೆ ಜುಲೈ 6ರಂದು ಬಿಡುಗಡೆಯಾಗಲಿದೆ ಎಂದು ರಿಂಗಿಂಗ್ ಬೆಲ್ಸ್ ಕಂಪೆನಿ ಇಲ್ಲಿ ಪ್ರಕಟಿಸಿತು. ‘ಮೇಕ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಈ ಯೋಜನೆಗೆ ಬೆಂಬಲ ಪಡೆಯುವ ಯತ್ನವಾಗಿ ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಯತ್ನಿಸುತ್ತಿದ್ದೇವೆ ಎಂದು ರಿಂಗಿಂಗ್ ಬೆಲ್ಸ್ ಸ್ಥಾಪಕ ಮತ್ತು ಸಿಇಒ ಮೋಹಿತ್ ಗೋಯೆಲ್ ಇಲ್ಲಿ ತಿಳಿಸಿದರು. ಗೋಯೆಲ್ ಪ್ರಕಾರ ಸಾರ್ವಜನಿಕರಿಗೆ ವಿತರಣೆಗಾಗಿ 2 ಲಕ್ಷ ’ಫ್ರೀಡಮ್ 251’ ಸ್ಮಾರ್ಟ್ ಫೋನ್ ಹ್ಯಾಂಡ್ಸೆಟ್ಗಳು ಸಿದ್ಧವಾಗಿವೆ. ‘ಈಮಧ್ಯೆ ನಾವು ನಮ್ಮ ಪ್ರಕರಣವನ್ನು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಕೊಡುಗೆ ನೀಡಬಯಸಿರುವ ದೇಶೀ ಸ್ಮಾರ್ಟ್ಫೋನ್ ತಯಾರಕರು ಎಂಬುದಾಗಿ ಪರಿಗಣಿಸಿ ಬೆಂಬಲಿಸುವಂತೆ ಕೋರಲು ಪ್ರಧಾನಿಯವರ ಭೇಟಿ ಅವಕಾಶ ಕೋರಿ ಪತ್ರ ಸಿದ್ಧ ಪಡಿಸಿದ್ದೇವೆ. ಫೋನ್ ವಿತರಣೆ ಆರಂಭದ ಬಳಿಕ ಜುಲೈ 7ರಂದು ರಾಜಧಾನಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಘಾಟನಾ ಸಮಾರಂಭ ಸಂಘಟಿಸಲು ನಾವು ಯೋಜಿಸುತ್ತಿದ್ದೇವೆ’ ಎಂದು ಗೋಯೆಲ್ ಹೇಳಿದರು.
2016: ಹೈದರಾಬಾದ್: ಟಾಲಿವುಡ್ನ ಸ್ಟಾರ್ ನಟಿ ಸಮಂತಾ ಹಾಗೂ ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ವಿವಾಹವಾಗಲಿದ್ದು, ಜುಲೈ ಅಂತ್ಯ ಅಥವಾ ಅಗಸ್ಟ್ ಮೊದಲವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ನಾಗಾರ್ಜುನ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ತಿಳಿಸಿದರು. ದಕ್ಷಿಣ ಭಾರತದ ನಟಿಯರಲ್ಲಿ ಮುಂಚುಣಿಯಲ್ಲಿರುವ ನಟಿ ಸಮಂತಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸುದ್ದಿ ಸಮಂತ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಈ ವಿಚಾರವಾಗಿ ಹಲವು ದಿನಗಳಿಂದ ಹರಿದಾಡುತ್ತಿದ್ದ ಗಾಳಿ ಸುದ್ದಿಗೆ ಇದೀಗ ಬಲ ಬಂದಿದ್ದು, ನಾಗಾರ್ಜುನ ಕಿರಿಯ ಪುತ್ರ ಈ ಕುರಿತು ಸ್ಪಷ್ಟನೆ ನೀಡಿದರು. ಸಹೋದರ ನಾಗಚೈತನ್ಯ ಹಾಗೂ ಸಮಂತ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆ ಆಗಲು ನಿರ್ಧರಿಸಿದ್ದಾರೆ. ಇದಕ್ಕೆ ಎರಡು ಕುಟುಂಬಗಳು ಸಹಮತಿ ಸೂಚಿಸಿವೆ, ಮುಂದಿನ ವರ್ಷ ವಿವಾಹ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದರು. ಈ ಮಧ್ಯೆ ಅಖಿಲ್ ಅಕ್ಕಿನೇನಿ ಹೈದರಾಬಾದ್ ಮೂಲದ ವಿನ್ಯಾಸಗಾರ್ತಿ ಶ್ರೀಯಾ ಸೋಮ್ ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅಕ್ಕಿನೇನಿ ಇದನ್ನು ತಳ್ಳಿದ್ದು, ಶ್ರೀಯಾ ತಮ್ಮ ಕುಟುಂಬದ ಸ್ನೇಹಿತೆಯಾಗಿದ್ದಾಳೆ ಎಂದು ತಿಳಿಸಿದರು.
2016: ನವದೆಹಲಿ: ರಾಷ್ಟ್ರೀಯ ಖನಿಜ ಅನ್ವೇಷಣಾ ನೀತಿಗೆ (ಎನ್ಎಂಇಪಿ) ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತು. ಇದರಿಂದಾಗಿ ಈಗ ಅಂದಾಜು 100 ಖನಿಜ ನಿಕ್ಷೇಪಗಳ ಹರಾಜಿಗೆ ದಾರಿ ಸುಗಮವಾಗಿದ್ದು, ರಾಷ್ಟ್ರದ ಖನಿಜ ಸಂಪತ್ತಿನ ಬಳಕೆಗೆ ಒತ್ತು ಸಿಗಲಿದೆ. ‘ಸಚಿವ ಸಂಪುಟವು ಈದಿನ ಎನ್ಎಂಇಪಿಗೆ ಒಪ್ಪಿಗೆ ನೀಡಿದೆ. ನೀತಿಗೆ ಅನುಮೋದನೆ ನೀಡಿದ ಬಳಿಕ ಭಾರತೀಯ ಭೂಗರ್ಭ ಸಮೀಕ್ಷೆಯು (ಜಿಎಸ್ಐ) ಗುರುತಿಸಿದ 100 ಖನಿಜ ನಿಕ್ಷೇಪಗಳನ್ನು ಶೋಧನೆಗಾಗಿ ಹರಾಜು ಹಾಕಬಹುದು ಎಂದು ಸುದ್ದಿಮೂಲವೊಂದು ತಿಳಿಸಿತು.
ರಾಷ್ಟ್ರದಲ್ಲಿ ಖನಿಜ ಅನ್ವೇಷಣೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಗಣಿಗಾರಿಕೆ ಸಚಿವಾಲಯವು ರಾಷ್ಟ್ರೀಯ ಖನಿಜ ಸಂಶೋಧನಾ ಟ್ರಸ್ಟ್ನ್ನು (ಎನ್ಎಂಇಟಿ) ರಚಿಸಿದೆ. ಎನ್ಎಂಇಪಿ ಮೂಲಕ ಖನಿಜ ಅನ್ವೇಷಣೆಯಲ್ಲಿ ಖಾಸಗಿ ಪಾಲುದಾರಿಕೆಯನ್ನು ಸರ್ಕಾರ ಬಯಸಿದೆ. ಎನ್ಎಂಇಟಿ ಕೈಗೆತ್ತಿಕೊಳ್ಳುವ ಯೋಜನೆಗಳಲ್ಲಿ ರಾಜ್ಯಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು.
2016: ನವದೆಹಲಿ: ದೇಶದ ಭದ್ರತೆಯ ಹಿತದೃಷ್ಟಿಯಿಂದ ವಾಟ್ಸ್ಆಪ್ ಮೆಸೆಂಜರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಸಂದೇಶ ರವಾನೆ ವ್ಯವಸ್ಥೆಯ ಅಪ್ಲಿಕೇಷನ್ಗಳನ್ನೇ ನಿಷೇಧಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಭಯೋತ್ಪಾದಕ ಕರಿನೆರಳು ದೇಶದ ಮೇಲೆ ಬಿದ್ದಿದ್ದು, ಸದಾ ಆತಂಕದಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಕಾರಣ ಕ್ಷಣಾರ್ಧದಲ್ಲಿ ಸಂದೇಶ ರವಾನೆ ಮಾಡಿಕೊಳ್ಳುವ, ಮಾಹಿತಿ ವಿನಿಮಯ ಮಾಡಿಕೊಳ್ಳಲು ಅನುಕೂಲಕರವಾದ ವಾಟ್ಸ್ಆಪ್ನಂಥ ಅಪ್ಲಿಕೇಷನ್ಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಹರಿಯಾಣ ಮೂಲದ ಆರ್ಟಿಐ ಕಾರ್ಯಕರ್ತ ಸುಧೀರ್ ಯಾದವ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೇ ತಮ್ಮ ಅರ್ಜಿಯಲ್ಲಿ ‘ಇಬ್ಬರು ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆ ಅಥವಾ ಇನ್ನಾವುದೇ ಸಂದೇಶಗಳನ್ನು ಕಂಪನಿ ಸರ್ಕಾರಕ್ಕೆ ನೀಡುವಂತೆ ಇರಬೇಕು. ಆದರೆ ಸಾಧ್ಯವಾಗದು ಎಂದಾದರೆ ಅದರಿಂದ ಅಪಾಯ ತಪ್ಪಿದ್ದಲ್ಲ. ಭದ್ರತೆಯ ಹಿತದೃಷ್ಟಿಯಿಂದಾದರೂ ಇದು ಲಭ್ಯವಾಗುವಂತೆ ಇರಬೇಕು. ನಿಯಂತ್ರಣ ಸಾಧ್ಯವಾಗದೇ ಇದ್ದಲ್ಲಿ ನಿಷೇಧ ಹೇರುವ ಬಗ್ಗೆ ಪರಿಶೀಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.2008: ಫೆರ್ನಾಂಡೊ ಟೊರೆಸ್ ಅವರು ತಂದಿತ್ತ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ ಜರ್ಮನಿ ತಂಡವನ್ನು ಮಣಿಸಿ ಯೂರೊ 2008 ಫುಟ್ಬಾಲ್ ಚಾಂಪಿಯನ್ಶಿಪ್ನ ಕಿರೀಟ ಮುಡಿಗೇರಿಸಿಕೊಂಡಿತು. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿರುವ ಅರ್ನೆಸ್ಟ್ ಹಾಪೆಲ್ ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಫೆರ್ನಾಂಡೊ ಟೊರೆಸ್ ಅವರು ಮೊದಲಾರ್ಧದ 33ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಸ್ಪೇನ್ ತಂಡ 44 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿತು. ವಿಶ್ವಕಪ್ ಒಳಗೊಂಡಂತೆ ಪ್ರಮುಖ ಟೂರ್ನಿಗಳಲ್ಲಿ ಸ್ಪೇನ್ ತಂಡಕ್ಕೆ ಹಲವು ಬಾರಿ ಅದೃಷ್ಟ ಕೈಕೊಟ್ಟಿತ್ತು. ಆದರೆ ಈ ಬಾರಿ ಅವರು ಎಡವಲಿಲ್ಲ. ಮೈಕಲ್ ಬಲಾಕ್, ಲೂಕಾಸ್ ಪೊಡೊಲ್ಸ್ಕಿ ಮತ್ತು ಮಿರೊಸ್ಲಾವ್ ಕ್ಲೋಸ್ ಅವರಂತಹ ಘಟಾನುಘಟಿ ಆಟಗಾರರಿದ್ದ ಜರ್ಮನಿ ತಂಡವನ್ನು ಮಣಿಸುವ ಮೂಲಕ ಐಕರ್ ಕೆಸಿಲಾಸ್ ನೇತೃತ್ವದ ಸ್ಪೇನ್ ಜಗತ್ತನ್ನೇ ನಿಬ್ಬೆರಗಾಗಿಸಿತು. ಫೆರ್ನಾಂಡೊ ಟೊರೆಸ್ ಅವರು ತಂದಿತ್ತ ಏಕೈಕ ಗೋಲಿನ ನೆರವಿನಿಂದ ಸ್ಪೇನ್ ತಂಡ ಜರ್ಮನಿ ತಂಡವನ್ನು ಮಣಿಸಿ ಯೂರೊ
2008 ಫುಟ್ಬಾಲ್ ಚಾಂಪಿಯನ್ಶಿಪ್ನ ಕಿರೀಟ ಮುಡಿಗೇರಿಸಿಕೊಂಡಿತು.
2007: 1948ರ ಒಲಿಂಪಿಕ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಂತಾರಾಷ್ಟ್ರೀಯ ಫುಟ್ ಬಾಲ್ ಆಟಗಾರ ಬಿ.ಎನ್. ವಜ್ರವೇಲು (84) ಬೆಂಗಳೂರಿನಲ್ಲಿ ನಿಧನರಾದರು. 1948ರಲಲ್ಲಿ ಇಂಗ್ಲೆಂಡಿನಲ್ಲಿ ನಡೆದ ಒಲಿಂಪಿಕ್ನಲ್ಲಿ ಬರಿಗಾಲಿನಲ್ಲೇ ಆಡುವ ಮೂಲಕ ವಜ್ರವೇಲು ಜನರನ್ನು ನಿಬ್ಬೆರಗಾಗಿಸಿದ್ದರು. ಆಗ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು. ವಜ್ರವೇಲು ಅವರನ್ನು ಅಭಿಮಾನಿಗಳು ಭಾರತದ 'ಸ್ಟಾರ್ಲಿ ಮ್ಯಾಥ್ಯೂಸ್' ಎಂದೇ ಕರೆಯುತ್ತಿದ್ದರು. ಒಂದು ಕಾಲಿನ ತೊಂದರೆ ಕಾರಣ ಫುಟ್ ಬಾಲ್ ನಿಂದ ನಿವೃತ್ತರಾದ ಅವರು ಬೆಂಗಳೂರಿನಲ್ಲಿ ಸಣ್ಣ ಕೈಗಾರಿಕೆಯೊಂದನ್ನು ಆರಂಭಿಸಿದ್ದರು.
2007: ಬೆಲ್ ಫಾಸ್ಟಿನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 50 ರನ್ನುಗಳ ಗಡಿ ದಾಟಿದ ಕ್ಷಣದಲ್ಲಿ 15,000 ರನ್ನುಗಳನ್ನು ಸೇರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶ್ರೀಲಂಕೆಯ ಸನತ್ ಜಯಸೂರ್ಯ ಅವರು ಹೆಚ್ಚು ರನ್ನುಗಳನ್ನು ಪೇರಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದು ಅವರು ಸೇರಿಸಿರುವ ರನ್ನುಗಳ ಒಟ್ಟು ಮೊತ್ತ 12,063.
2007: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 'ನೃಪತುಂಗ' ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ದೇ. ಜವರೇಗೌಡ ಅವರನ್ನು ಆರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯ ಮೊತ್ತ ಐದು ಲಕ್ಷದ ಒಂದು ಸಾವಿರ ರೂಪಾಯಿಗಳು.
2006: ಗುಜರಾತಿನ ಕಾಂಡ್ಲಾ ಬಂದರಿನಲ್ಲಿ ಎರಡು ನೌಕೆಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಒಟ್ಟು 7 ಮಂದಿ ಅಸು ನೀಗಿದರು. ಕಾಲುವೆಯ ಹೊರಭಾಗದಲ್ಲಿ ಸಾಗುತ್ತಿದ್ದ ಜೆಶು ಶಿಪ್ಪಿಂಗ್ ಮಾಲಕತ್ವದ ಬಾರ್ಜ್ ಮತ್ತು ಬಂದರಿನಿಂದ ಹೊರಟಿದ್ದ ನೌಕೆ ಪರಸ್ಪರ ಡಿಕ್ಕಿಯಾಗಿ ಈ ದುರಂತ ಸಂಭವಿಸಿತು. ಬಾರ್ಜಿನಿಂದ ಸಮುದ್ರಕ್ಕೆ ಬಿದ್ದ 16 ಮಂದಿಯ ಪೈಕಿ 9 ಮಂದಿಯನ್ನು ರಕ್ಷಿಸಲಾಯಿತು, 7 ಮಂದಿ ನೀರಿನಲ್ಲಿ ಮುಳುಗಿದರು.
2006: ಜಮ್ಮು ಮತ್ತು ಕಾಶ್ಮೀರದ ಲಡಾಖ್ ನಿಂದ ಅರುಣಾಚಲ ಪ್ರದೇಶದ ದಿಫು ಲಾ ವರೆಗಿನ ಭಾರತ-ಚೀನಾ ಗಡಿಭಾಗದ ರಸ್ತೆ ಅಭಿವೃದ್ಧಿ ಪಡಿಸಲು ಭದ್ರತೆ ಮೇಲಿನ ಕೇಂದ್ರ ಸಂಪುಟ ಸಮಿತಿಯು ತೀರ್ಮಾನ ಕೈಗೊಂಡಿತು. 608 ಕಿ.ಮೀ ಹರಡಿಕೊಂಡಿರುವ ಭಾರತ-ಚೀನಾ ಗಡಿ ರಸ್ತೆಗಳ ಸುಧಾರಣೆ ಮತ್ತು ನಿರ್ಮಾಣಕ್ಕೆ ಒಟ್ಟು 912 ಕೋಟಿ ರೂ ಬೇಕಾಗುತ್ತದೆ. ಕಳೆದ 50 ವರ್ಷಗಳ ಹಿಂದೆ ಗಡಿ ರಸ್ತೆ ನಿರ್ಮಾಣ ಮಾಡಿದ್ದು, ಇಲ್ಲಿಯವರೆಗೆ ಯಾವುದೇ ಸುಧಾರಣೆ ಮಾಡದ್ದರಿಂದ ಇಂಡೋ-ಟಿಬೆಟ್ ಗಡಿ ಪೊಲೀಸರಿಗೆ ಹಾಗು ಸೇನೆಗೆ ಸಂಚರಿಸಲು ಸಾಕಷ್ಟು ತೊಂದರೆಯಾಗುತ್ತಿತ್ತು.
2006: ಪ್ರಖ್ಯಾತ ಶಿವನ ಯಾತ್ರಾಕ್ಷೇತ್ರ ಅಮರನಾಥದಲ್ಲಿ ಕೃತಕ ಹಿಮಲಿಂಗ ನಿರ್ಮಿಸಲಾಗಿದೆ ಎಂಬ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಲು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎಸ್.ಕೆ. ಸಿನ್ಹಾ ಆದೇಶ ನೀಡಿದರು. ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಅವರೊಂದಿಗೆ ಸಮಾಲೋಚಿಸಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಕೆ.ಗುಪ್ತಾ ಅವರನ್ನು ತನಿಖಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಅವರು ಆದೇಶ ಹೊರಡಿಸಿದರು.
2002: ದಕ್ಷಿಣ ಕೊರಿಯಾದ ವಿರುದ್ಧ ನಡೆದ ಪಂದ್ಯದಲ್ಲಿ ಟರ್ಕಿಯು ಹಕನ್ ಸುಕುರ್ ಅವರು ಫುಟ್ ಬಾಲ್ ವಿಶ್ವಕಪ್ ನಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ (11 ಸೆಕೆಂಡುಗಳಲ್ಲಿ) ಗೋಲ್ ಗಳಿಸಿ ಅತ್ಯಂತ ವೇಗದ ಗೋಲ್ ಪಡೆದರು.
1995: ಅಟ್ಲಾಂಟಿಸ್ ಷಟ್ಲ್ ನೌಕೆ ಮತ್ತು ರಷ್ಯದ ಮೀರ್ ಬಾಹ್ಯಾಕಾಶ ನಿಲ್ದಾಣ ಜೊತೆಗೂಡಿ ಭೂಮಿಗೆ ಸುತ್ತು ಹಾಕುವ ಅತ್ಯಂತ ದೊಡ್ಡದಾದ ಮಾನವ ನಿರ್ಮಿತ ಅಟ್ಟಣಿಗೆ ರೂಪಿಸಲು ಅಡಿಪಾಯ ಹಾಕಿದವು. ಕಮಾಂಡರ್ ರಾಬರ್ಟ್ ಗಿಬ್ಸನ್ ಮೀರ್ ನೊಳಕ್ಕೆ ತೇಲುತ್ತಾ ಸಾಗಿ ರಷ್ಯದ ಕಮಾಂಡರ್ ವ್ಲಾಡಿಮೀರ್ ಡೆಝ್ ರೊವ್ ಅವರ ಕೈ ಕುಲುಕಿದರು. 1975ರಲ್ಲಿ ಅಮೆರಿಕದ ಅಪೋಲ್ಲೋ ಮತ್ತು ಸೋವಿಯತ್ ಸೋಯುಜ್ ಸಿಬ್ಬಂದಿ ಕಕ್ಷೆಯಲ್ಲಿ ಜೊತೆಗೂಡಿದ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನೌಕೆಗಳಲ್ಲಿ ಪರಸ್ಪರ ಸಹಕರಿಸಿದ್ದು ಇದೇ ಪ್ರಥಮ.
1986: ರಿಚರ್ಡ್ ಬ್ರಾಂಡ್ಸನ್ ಅವರ ದೋಣಿ `ವರ್ಜಿನ್ ಅಟ್ಲಾಂಟಿಕ್ ಚಾಲೆಂಜರ್ 2' ಮೂರು ದಿನ ಎಂಟು ಗಂಟೆ 31 ನಿಮಿಷಗಳಲ್ಲಿ ಅಟ್ಲಾಂಟಿಕ್ ಸಾಗರವನ್ನು ದಾಟುವ ಮೂಲಕ ಅತಿ ವೇಗವಾಗಿ ಅಟ್ಲಾಂಟಿಕ್ ದಾಟಿದ ಹೆಗ್ಗಳಿಕೆಗೆ ಪಾತ್ರವಾಯಿತು.
1873: ಬಂಗಾಳಿ ಸಾಹಿತಿ ಮೈಕೆಲ್ ಮಧುಸೂದನ ದತ್ತ ಅವರು ತಮ್ಮ 49ನೇ ವಯಸ್ಸಿನಲ್ಲಿ ನಿಧನರಾದರು. ಕವಿ ಹಾಗೂ ನಾಟಕಕಾರರಾಗಿದ್ದ ಅವರು ಆಧುನಿಕ ಬಂಗಾಳಿ ಸಾಹಿತ್ಯದ ಮೊತ್ತ ಮೊದಲ ಮಹಾನ್ ಕವಿಯಾಗಿದ್ದರು.
1864: ಅಶುತೋಶ್ ಮುಖರ್ಜಿ (1864-1924) ಜನ್ಮದಿನ. ಭಾರತೀಯ ನ್ಯಾಯವಾದಿ ಹಾಗೂ ಶಿಕ್ಷಣ ತಜ್ಞರಾದ ಇವರು ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ತಂದೆ.