Tuesday, June 11, 2019

ಇಂದಿನ ಇತಿಹಾಸ History Today ಜೂನ್ 11

ಇಂದಿನ ಇತಿಹಾಸ History Today ಜೂನ್ 11
2019: ಅಹ್ಮದಾಬಾದ್: ಜೆಟ್ ಏರ್ವೇಸ್ ವಿಮಾನದಲ್ಲಿ ೨೦೧೭ರ ಅಕ್ಟೋಬರ್ ತಿಂಗಳಲ್ಲಿ ಅಪಹರಣ ಬೆದರಿಕೆ ಪತ್ರ ಇರಿಸಿದ್ದಕ್ಕಾಗಿ ಮುಂಬೈ ಮೂಲದ ಉದ್ಯಮಿಗೆ ಇಲ್ಲಿನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿತು. ವಿಶೇಷ ಎನ್ಐಎ ನ್ಯಾಯಾಧೀಶ ಕೆ.ಎಂ. ದವೆ ಅವರು ಶಿಕ್ಷಿತ ಅಪರಾಧಿ ಉದ್ಯಮಿ ಬಿರ್ಜು ಸಲ್ಲಾ ಪಾವತಿ ಮಾಡುವ ದಂಡದ ಹಣವನ್ನು ವಿಮಾನದ ತೊಂದರೆಗೆ ಒಳಗಾದ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಹಂಚಬೇಕು ಎಂದು ಆಜ್ಞಾಪಿಸಿದರು. ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಬರೆದ ಬೆದರಿಕೆ ಪತ್ರವನ್ನು ೨೦೧೭ರ ಅಕ್ಟೋಬರ್ ೩೦ರಂದು ವಿಮಾನದ ಟಿಶ್ಯೂ ಪೇಪರ್ ಬಾಕ್ಸ್ನಲ್ಲಿ ಇಡುವ ಮೂಲಕ ವಿಮಾನ ಅಪಹರಣದ ಭೀತಿಯನ್ನು ಸೃಷ್ಟಿಸಿದ ಆರೋಪ ಉದ್ಯಮಿ ಬಿರ್ಜು ಸಲ್ಲಾ ಮೇಲಿತ್ತುಘಟನೆಯ ಬಳಿಕ ದೇಶೀಯ ವಿಮಾನ ಹಾರಾಟ ನಿಷೇಧ ಪಟ್ಟಿಗೆ ಸೇರಿದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಸಲ್ಲಾ ಪಾತ್ರನಾಗಿದ್ದ. ೧೯೮೨ರ ವಿಂಟೇಜ್ ಕಾನೂನಿನ ಬದಲಿಗೆ ತರಲಾದ ಕಠಿಣ ಅಪಹರಣ ನಿರೋಧಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾದ ಮೊತ್ತ ಮೊದಲ ವ್ಯಕ್ತಿ ಎಂಬ ಅಪಕೀರ್ತಿಗೂ ಸಲ್ಲಾ ಪಾತ್ರನಾಗಿದ್ದ. ಕಳೆದ ವರ್ಷ ಜನವರಿಯಲ್ಲಿ ಎನ್ಐಎ ಸಲ್ಲಾ ವಿರುದ್ಧ ಅಪಹರಣ ನಿರೋಧಿ ಕಾಯ್ದೆ ೨೦೧೬ರ ಸೆಕ್ಷನ್ (), () ಮತ್ತು (ಬಿ) ಅಡಿಯಲ್ಲಿ ಉದ್ಯಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ‘ಸಲ್ಲಾ ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಬೆದರಿಕೆ ಪತ್ರವನ್ನು ಸಿದ್ಧ ಪಡಿಸಿ ಉದ್ದೇಶಪೂರ್ವಕವಾಗಿಯೇ ಅದನ್ನು ಮುಂಬೈ-ದೆಹಲಿ ಜೆಟ್ ಎರ್ವೇಸ್ ವಿಮಾನದ (ಹಾರಾಟ ಸಂಖ್ಯೆ ೯ಡಬ್ಲ್ಯೂ೩೩೯) ಟಿಶ್ಯೂ ಪೇಪರ್ ಬಾಕ್ಸಿನಲ್ಲಿ ೨೦೧೭ರ ಅಕ್ಟೋಬರ್ ೩೦ರಂದು ಇರಿಸಿದ್ದ ಮತ್ತು ತನ್ಮೂಲಕ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಇಕ್ಕಟ್ಟಿಗೆ ತಳ್ಳಿದ್ದ ಎಂದು ಎನ್ಐಎ ದೋಷಾರೋಪ ಪಟ್ಟಿಯಲ್ಲಿ ಹೇಳಿತ್ತು.  ಸಲ್ಲಾನನ್ನು ೨೦೧೭ರ ಅಕ್ಟೋಬರ್ ತಿಂಗಳಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ವಿಮಾನವನ್ನು ಇಳಿಸಿದ ಬಳಿಕ ಬಂಧಿಸಲಾಗಿತ್ತು. ಉದ್ಯಮಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ ಮತ್ತು ಕೃತ್ಯದಿಂದ ಜೆಟ್ ಏರ್ ವೇಸ್ ಸಂಸ್ಥೆಯು ತನ್ನ ದೆಹಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿ, ಏರ್ಲೈನಿನ ದೆಹಲಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಗೆಳತಿಯನ್ನು ಮುಂಬೈಗೆ ಕಳುಹಿಸುವುದು ಎಂದು ನಾನು ಹಾರೈಸಿದ್ದೆ ಎಂದು ಪ್ರಕರಣದ ತನಿಖೆಗಾರರಿಗೆ ತಿಳಿಸಿದ್ದ.  ಪತ್ರದಲ್ಲಿ ವಿಮಾನವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹಾರಿಸಬೇಕು ಎಂದು ಆತ ಸೂಚಿಸಿದ್ದ. ’ಅಲ್ಲಾ ಮಹಾನ್ (ಅಲ್ಲಾ ಈಸ್ ಗ್ರೇಟ್) ಎಂಬ ಪದಗಳೊಂದಿಗೆ ಪತ್ರ ಕೊನೆಗೊಂಡಿತ್ತು.

2019: ನವದೆಹಲಿ: ಅಸ್ಸಾಮಿನ ಜೊರ್ಹಾಟ್ನಿಂದ ೧೩ ಜನರೊಂದಿಗೆ ಗಗನಕ್ಕೆ ಏರಿದ ಸ್ವಲ್ಪ ಹೊತ್ತಿನ ಬಳಿಕ ಕಣ್ಮರೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್-೩೨ ವಿಮಾನದ ಅವಶೇಷಗಳನ್ನು ಶೋಧ ತಂಡಗಳು ದಿನಗಳ ಬಳಿಕ ಅರುಣಾಚಲ ಪ್ರದೇಶದಲ್ಲಿ ಪತ್ತೆ ಹಚ್ಚಿವೆ ಎಂದು ಭಾರತೀಯ ವಾಯುಪಡೆ ತಿಳಿಸಿತು.  ‘ವಿಮಾನದ ಅವಶೇಷಗಳು  ಟಾಟೋದ ಈಶಾನ್ಯ ಭಾಗದಲ್ಲಿ ಲಿಪೋದಿಂದ ೧೬ ಕಿಮೀ ಉತ್ತರಕ್ಕೆ ಅಂದಾಜು ೧೨,೦೦೦ ಕಿಮೀ ಎತ್ತರ ಪ್ರದೇಶದಲ್ಲಿ ಪತ್ತೆಯಾಗಿವೆ. ಐಎಎಫ್ ಎಂಐ-೧೭ ಹೆಲಿಕಾಪ್ಟರ್ ವಿಸ್ತರಿತ ಶೋಧ ವಲಯದಲ್ಲಿ ಶೋಧಕಾರ್ಯದಲ್ಲಿ ನಿರತವಾಗಿದ್ದಾಗ ಅವಶೇಷಗಳನ್ನು ಪತ್ತೆ ಹಚ್ಚಿತು ಎಂದು ವಾಯುಪಡೆಯು ಹೇಳಿಕೆಯೊಂದರಲ್ಲಿ ತಿಳಿಸಿತು ಮಂದಿ ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ೧೩ ಮಂದಿಯ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ. ವಿಮಾನದಲ್ಲಿ ಇದ್ದವರು, ಬದುಕಿ ಉಳಿದವರ ಸ್ಥಿತಿಗತಿ ತಿಳಿಯಲು ಯತ್ನ ನಡೆಯುತ್ತಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಹೇಳಿತು. ಜೂನ್ ೩ರಂದು ಅಸ್ಸಾಮಿನಿಂದ ಹೊರಟ ವಿಮಾನ ಅರುಣಾಚಲ ಪ್ರದೇಶದ ಮೆಚುಕಾದಲ್ಲಿನ ಅಡ್ವಾನ್ಸಡ್ ಲ್ಯಾಂಡಿಂಗ್ ಮೈದಾನದಲ್ಲಿ ಗಂಟೆ ಸುಮಾರಿಗೆ ಇಳಿಯಬೇಕಾಗಿತ್ತು. ಆದರೆ ಜೊರ್ಹಾಟ್ ನಿಂದ ಗಗನಕ್ಕೆ ಏರಿದ ಸ್ವಲ್ಪ ಹೊತ್ತಿನ ಬಳಿಕ ವಿಮಾನ ರಾಡಾರ್ ಕಣ್ಣಿನಿಂದ ತಪ್ಪಿಸಿಕೊಂಡಿತ್ತು. ಸೋವಿಯತ್ ಮೂಲದ ವಿಮಾನ ಕಣ್ಮರೆಯಾಗುತ್ತಿದ್ದಂತೆಯೇ ಹೆಲಿಕಾಪ್ಟರುಗಳು, ಸುಖೋಯ್ಗಳು, ಸಿ ೧೩೦ಜೆ ಸೂಪರ್ ಹರ್ಕ್ಯುಲಿಸ್ ವಿಮಾನ ಮತ್ತು ಮಾನವ ರಹಿತ ವೈಮಾನಿಕ ವಾಹನಗಳು (ಯುಎವಿಗಳು), ಎಎನ್ -೩೨ ವಿಮಾನಗಳು, ಎಂಐ -೧೭ ಮತ್ತು ಎಎಲ್ ಎಚ್ ಹೆಲಿಕಾಪ್ಟರುಗಳು ಹಗಲು ಮತ್ತು ರಾತ್ರಿ ಶೋಧ ಕಾರ್ಯಾಚರಣೆ ನಡೆಸಿದ್ದವು. ೧೫೦೦ ಸೈನಿಕರು, ಭಾರತ-ಟಿಬೆಟ್ ಗಡಿ ಪೊಲಿಸರು, ರಾಜ್ಯ ಪೊಲೀಸರುಸ್ಥಳೀಯ ಗ್ರಾಮಸ್ಥರು ಮತ್ತು ಬೇಟೆಗಾರರು ನೆಲದ ಮೂಲಕವೂ ಶೋಧ ಕಾರ್ ಕೈಗೊಂಡಿದ್ದರು.  ಶೋಧ- ರಕ್ಷಣಾ ಕಾರ್ಯಾಚರಣೆ ಬಗ್ಗೆ ಭಾರತೀಯ ವಾಯುಪಡೆ ನಿಯಮಿತವಾಗಿ ವಿಮಾನದಲ್ಲಿದ್ದ ಎಲ್ಲ ವಾಯುಪಡೆ ಯೋಧರ ಕುಟುಂಬಗಳಿಗೆ ಮಾಹಿತಿ ನೀಡಿತ್ತು. ಭಾರತೀಯ ನೌಕಾಪಡೆಯ ಪಿ-೮೧ ವಿಮಾನವು ಶೋಧ ಕಾರ್ಯಕ್ಕೆ ಅನುಕೂಲಕರವಾದ ಎಲೆಕ್ಟ್ರೋ-ಆಪ್ಟಿಕಲ್ ಮತ್ತು ರೆಡ್ ಸೆನ್ಸರುಗಳನ್ನು ಹೊಂದಿದ್ದವು. ಇಸ್ರೋದ ಕಾರ್ಟೋಸ್ಯಾಟ್ ಮತ್ತು ರೀಸ್ಯಾಟು ಉಪಗ್ರಹಗಳು ಕೂಡಾ ಮುಚುಕಾ ಸುತ್ತಮುತ್ತಣ ಚಿತ್ರಗಳನ್ನು ತೆಗೆದು ವಿಮಾನ ಪತ್ತೆಗೆ ಅನಿಜೂಲ ಮಾಡಿಕೊಡಲು ಶೋಧ ತಂಡಕ್ಕೆ ರವಾನಿಸಿತ್ತು. ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಅವರು ಶೋಧ ಕಾರ್ಯಾಚರಣೆಯ ಮಾಹಿತಿ ಸಂಗ್ರಹ ಹಾಗೂ ಕಣ್ಮರೆಯಾದವರ ಕುಟುಂಬಗಳನ್ನೂ ಭೇಟಿ ಮಾಡುವ ಸಲುವಾಗಿ  ಜೊರ್ಹಾಟ್ಗೆ ಆಗಮಿಸಿದ್ದರು. ಎಎನ್ -೩೨ ಯುದ್ಧ ವಿಮಾನವು ಸುಮಾರು ೪೦ ಮಂದಿಯನ್ನು ಒಯ್ಯಬಲ್ಲುದು. ಭಾರತೀಯ ವಾಯುಪಡೆಯು ಸುಮಾರು ೧೦೦ ಎಎನ್-೩೨ ಯುದ್ಧ ವಿಮಾನಗಳನ್ನು ೧೯೮೦ರಷ್ಟು ಹಿಂದೆಯೇ ವಾಯುಪಡೆಗೆ ಸೇರ್ಪಡೆ ಮಾಡಿತ್ತು. ಎಎನ್-೩೨ ವಿಮಾನದ ಇತ್ತೀಚಿನ ಅಪಘಾತಕ್ಕೆ ಮುಂಚಿತವಾಗಿ ಕಳೆದ ದಶಕದಲ್ಲಿ ಎರಡು ಎಎನ್- ೩೨ ವಿಮಾನಗಳು ಮಾರಣಾಂತಿಕ ಅಪಘಾತಕ್ಕೆ ಒಳಗಾಗಿದ್ದವು. ೨೦೧೬ರ ಜುಲೈ ತಿಂಗಳಲ್ಲಿ ಎಎನ್-೩೨ ವಿಮಾನವು ೨೯ ಜನರೊಂದಿಗೆ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಪತನಗೊಂಡಿತ್ತು. ವಿಮಾನವಾಗಲೀ, ಅದರ ಅವಶೇಷವಾಗಲೀ ಪತ್ತೆಯಾಗಲಿಲ್ಲ. ದಶಕದ ಹಿಂದೆ ಇನ್ನೊಂದು ಎಎನ್-೩೨ ಯುದ್ಧ ವಿಮಾನವು ಅದರಲ್ಲಿದ್ದ ೧೩ ಮಂದಿಯ ಸಹಿತವಾಗಿ ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ನಲ್ಲಿ  ನೆಲಕ್ಕೆ ಅಪ್ಪಳಿಸಿತ್ತು. ಅಪಘಾತದಲ್ಲಿ ಎಲ್ಲ ೧೩ ಮಂದಿಯೂ ಸಾವನ್ನಪ್ಪಿದ್ದರು.   ವಿಮಾನದ ಅವಶೇಷಗಳು ವಿಮಾನ ದುರಂತಕ್ಕೆ ಈಡಾದ ೨೪ ಗಂಟೆಗಳ ಬಳಿಕ ಸಮುದ್ರ ಮಟ್ಟದಿಂದ ೧೨,೦೦೦ ಅಡಿಗಳಷ್ಟು ಎತ್ತರದಲ್ಲಿ ಪತ್ತೆಯಾಗಿದ್ದವು.

2019: ಕಠ್ಮಂಡು: ಭಾರತದ ೬೦ ಮಂದಿ ಯಾತ್ರಿಕರನ್ನು ಒಯ್ಯುತ್ತಿದ್ದ ಪ್ಯಾಸೆಂಜರ್ ಬಸ್ಸು ಒಂದಕ್ಕೆ ಟ್ರಕ್ ಒಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿ ಇತರ ೨೧ ಮಂದಿ ಗಾಯಗೊಂಡ ಘಟನೆ ನೇಪಾಳದ ರೌಟಾಹಟ್ ಜಿಲ್ಲೆಯಲ್ಲಿ ಘಟಿಸಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ಕಠ್ಮಂಡುವಿಗೆ ಹೊರಟಿದ್ದ ಬಸ್ಸು  ಹಿಂದಿನ ದಿನ ತಡರಾತ್ರಿಯಲ್ಲಿ ಚಂದ್ರನಿಗಾಪುರ ಮುನಿಸಿಪಾಲಿಟಿ ವ್ಯಾಪ್ತಿಯ ಪೌರಾಜ್ ಅರಣ್ಯ ಪ್ರದೇಶದಲ್ಲಿ ಪ್ರಯಾಣಿಕರಿಗೆ ಮೂತ್ರ ವಿಸರ್ಜನೆ ಸಲುವಾಗಿ ನಿಂತಿದ್ದಾಗ ಅಪಘಾತ ಸಂಭವಿಸಿತು ಎಂದು ರೌಟಾಹಟ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿನ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ನಬಿನ್ ಕರ್ಕಿ ತಿಳಿಸಿದರು. ನಿಂತಿದ್ದ ಬಸ್ಸಿಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸು ಸುಮಾರು ೨೦ ಮೀಟರಿನಷ್ಟು ದೂರ ಕಾಡಿನೊಳ್ಳಕ್ಕೆ ತಳ್ಳಲ್ಪಟ್ಟಿತು, ಆಗ ಬಸ್ಸಿನ ಒಳಗೆ ೬೦ ಮಂದಿ ಯಾತ್ರಿಕರೂ ಕುಳಿತೇ ಇದ್ದರು ಎಂದು ಅಧಿಕಾರಿ ನುಡಿದರು. ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರನ್ನು ಬಿಜಯ್ ಕುಮಾರ್ ಜೇನಾ (೫೨) ಮತ್ತು ಚರಣ್ ಬಿಶಾಲ್ (೫೪) ಎಂಬುದಾಗಿ ಗುರುತಿಸಲಾಗಿದೆ. ಇಬ್ಬರೂ ಒಡಿಶಾದ ಕರ್ಕಿಯವರು, ಇವರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿತು. ಮೃತರ ಶವಗಳನ್ನು ಚಂದ್ರನಿಗಾಪುರ ಮುನಿಸಿಪಾಲಿಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಸಲುವಾಗಿ ಇರಿಸಲಾಗಿದೆ ಎಂದು ವರದಿ ಹೇಳಿತು. ೨೧ ಮಂದಿ ಗಾಯಾಳಗಳ ಪೈಕಿ ಸರಬೇಶ್ವರ ಜೇನಾ (೫೫), ಶೇಷದೇವ್ ಜೇನಾ (೫೩) ಮತ್ತು ಕುರುಣಾ ಕರ್ಜುನ ಅವಸ್ಥಿ (೬೩) ಮೂವರು ಯಾತ್ರಿಕರ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಬಿರ್ಜುಂಗ್ ಮೂಲಕ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕರ್ಕಿ ಹೇಳಿದರು. ಉಳಿದ ಗಾಯಾಳುಗಳಿಗೆ ಚಂದ್ರನಿಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅವರನ್ನು ಕೆಲವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ವರದಿ ಹೇಳಿತುಅಪಘಾತದ ಬಳಿಕ ಸ್ಥಳದಿದ ಪರಾರಿಯಾದ ಟ್ರಕ್ ಚಾಲಕನಿಗಗಿಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿ ನುಡಿದರು. ಗಾಯಾಳುಗಳಿಗೆ ಅಗತ್ಯ ನೆರವು ನೀಡಿಲಾಗುತ್ತಿದೆ ಮತ್ತು ಬಿರ್ಗುಂಜ್ನಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಗೆ ಘಟನೆ ಬಗ್ಗೆ ಮಾಹಿತಿ ಒದಗಿಸಲಾಗಿದೆ ಎಂದು ಮುಖ್ಯ ಜಿಲಾ ಅಧಿಕಾರಿ ಕಿರಣ್ ಥಾಪಾ ನುಡಿದರು.

2019: ಕೋಲ್ಕತಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ಮಾಡಿರುವ ಸಲಹೆಯ ನಡುವೆಯೇ  ಮುಂದುವರೆದ ಹಿಂಸಾಚಾರಕ್ಕೆ ಇನ್ನೂ ಮಂದಿ ಬಲಿಯಾಗಿದ್ದು, ನಾಲ್ಕು ಮಂದಿ ಗಾಯಗೊಂಡರು. ಮಧ್ಯೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ಮಾಡಿರುವ ಸಲಹೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಂಡಾಮಂಡಲ ಕೋಪ ವ್ಯಕ್ತ ಪಡಿಸಿದರು. ಪಶ್ಚಿಮ ಬಂಗಾಲದ ಬರಾಕ್ಪೋರ್ ಭಾಟ್ಪಾರಾ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಎರಡು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆಯಲ್ಲಿ ಇಬ್ಬರು ಮೃತರಾಗಿ ಇತರ ನಾಲ್ವರು ಗಾಯಗೊಂಡರು. ಕೋಲ್ಕತದಿಂದ ೧೨೬ ಕಿಮೀ ದೂರದ ಗಲ್ಸಿಯಲ್ಲಿ ರೈಲಿನಿಂದ ಇಳಿದು ಮನೆಗೆ ಹೋಗುತ್ತಿದ್ದ ಜೈದೇಬ್ ರಾಯ್ ಎಂಬವರು ಹಲ್ಲೆಗೆ ಒಳಗಾಘಿ ಸಾವನ್ನಪ್ಪಿದರು. ಸಾವುಗಳ ಬಗ್ಗೆ ಬಿಜೆಪಿ ಮತ್ತು ಟಿಎಂಸಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿವೆ. ಇನ್ನೊಂದು ಬೆಳವಣಿಗೆಯಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ರಾಜ್ಯದ ಸರ್ಕಾರಿ ಕಾಲೇಜು, ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರು ಮುಷ್ಕರಕ್ಕೆ ಇಳಿದರು. ಈ ಮಧ್ಯೆ ರಾಜ್ಯದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರಿಗೆ ವರದಿ ಸಲ್ಲಿಸುತ್ತಾ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಸಲಹೆ ಮಾಡಿದ್ದಕ್ಕೆ ಮಮತಾ ಬ್ಯಾನರ್ಜಿ ಅವರು ಮಂಗಳವಾರ ತೀವ್ರ ಅಸಹನೆ, ಕೆಂಡಾಮಂಡಲ ಸಿಟ್ಟು ವ್ಯಕ್ತಪಡಿಸಿದರುಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರಗಳನ್ನು ಅನುಸರಿಸಿ ಪಶ್ಚಿಮ ಬಂಗಾಳದ ರಾಜ್ಯಪಾಲ ತ್ರಿಪಾಠಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು.  ‘ನಾನು ರಾಜ್ಯಪಾಲರ ಹುದ್ದೆಯನ್ನು ಗೌರವಿಸುತ್ತೇನೆ, ಆದರೆ ಬಂಗಾಳದಲ್ಲಿನ ಚುನಾವಣೋತ್ತರ ಸಾವುನೋವುಗಳ ಬಗ್ಗೆ ಅವರು ಏನು ಹೇಳುತ್ತಿದ್ದಾರೋ ಅದನ್ನು ಮನ್ನಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಕೋಲ್ಕತದ ಶಾಲೆಯೊಂದರಲ್ಲಿ ಬಂಗಾಳಿ ಸಮಾಜ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು. ಪಶ್ಚಿಮ ಬಂಗಾಳದ ಖ್ಯಾತಿಗೆ ಮಸಿ ಬಳಿಯಲಾಗುತ್ತಿದೆ ಎಂದು ದೂರಿದ ಮುಖ್ಯಮಂತ್ರಿ, ಬಂಗಾಳದ ಸಂಸ್ಕೃತಿ ರಕ್ಷಣೆಯ ಸಲುವಾಗಿ ಒಗ್ಗಟ್ಟಾಗುವಂತೆ ಜನರನ್ನು ಆಗ್ರಹಿಸಿದರು. ನಾನು ರಾಜ್ಯಪಾಲರನ್ನು ಗೌರವಿಸುತ್ತೇನೆ. ಆದರೆ ಪ್ರತಿಯೊಂದು ಹುದ್ದೆಗೂ ಸಾಂವಿಧಾನಿಕ ಮಿತಿಗಳಿವೆ. ಬಂಗಾಳದ ಹೆಸರಿಗೆ ಅಪಖ್ಯಾತಿ ತರಲಾಗುತ್ತಿದೆ. ಬಂಗಾಳ ಮತ್ತು ಅದರ ಸಂಸ್ಕೃತಿಯನ್ನು ಉಳಿಸಲು ನೀವು ಬಯಸುತ್ತೀರಾದರೆ ಒಗ್ಗಟ್ಟಾಗಿ. ಬಂಗಾಳವನ್ನು ಗುಜರಾತ್ ಆಗಿ ಮಾರ್ಪಡಿಸಲು ಸಂಚು ನಡೆಯುತ್ತಿದೆ. ಆದರೆ ಬಂಗಾಳವು ಗುಜರಾತ್ ಅಲ್ಲ ಎಂದು ಮಮತಾ ಗುಡುಗಿದರುಬಿಜೆಪಿಯು ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿಯನ್ನು ಹೇರಲು ಯತ್ನಿಸುತ್ತಿದೆ ಎಂದೂ ಮಮತಾ ಆಪಾದಿಸಿದರು. ’ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪರಂಪರೆ ಮತ್ತು ಭಾಷೆಯನ್ನು ಹೊಂದಿದೆ. ಇದು ನಮ್ಮ ಭಾರತ. ಆದರೆ ಬಿಜೆಪಿಯು ರಾಜ್ಯದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಮಮತಾ ಹೇಳಿದರುವಿದ್ಯಾಸಾಗರ ಅವರ ಪುತ್ಥಳಿಯತ್ತ ಸಾಗುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಅವರು ಪುನಃ ಶಾಲಾ ಆವರಣದಲ್ಲಿಜೈ ಶ್ರೀರಾಮ್ ಘೋಷಣೆಗಳನ್ನು ಎದುರಿಸಿದರು. ವಿಶೇಷ ಕಾರಿನಲ್ಲಿ ತರಲಾದ ವಿದ್ಯಾಸಾಗರ ಪುತ್ಥಳಿಯನ್ನು ಅನಾವರಣ ಮಾಡಬೇಕಾದ ಸ್ಥಳದತ್ತ ಬ್ಯಾನರ್ಜಿ ಅವರು ಸುಮಾರು ಒಂದು ಕಿಮಿ ದೂರವನ್ನು ತನ್ನ ಸಚಿವರು ಮತ್ತು ಬುದ್ಧಿ ಜೀವಿಗಳ ಜೊತೆಗೆ ನಡೆಯುತ್ತಾ ಕ್ರಮಿಸಿದರು. ೨೭ ದಿನಗಳ ಹಿಂದೆ, ಕೋಲ್ಕತದಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಸಾ ಅವರ ರೋಡ್ ಶೋ ಸಂದರ್ಭದಲ್ಲಿ ದುಷ್ಕರ್ಮಿಗಳು ವಿದ್ಯಾಸಾಗರ ಅವರ ಪುತ್ಥಳಿಯನ್ನು ಹಾಳುಗೆಡವಿದ್ದರು. ಇದಕ್ಕೆ ಮುನ್ನ ರಾಜ್ಯ ಪೊಲೀಸರು ವಿದ್ಯಾಸಂಸ್ಥೆಯ ಸುತ್ತಮುತ್ತಣ ಸುಮಾರು ಕಿಮೀ ಪ್ರದೇಶ ಮತ್ತು ಕಾಲೇಜು ಆವರಣಕ್ಕೂ ಮುತ್ತಿಗೆ ಹಾಕಿ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ತಡೆದರು.

ರಾಜ್ಯಪಾಲ ಕೆ.ಎನ್.ತ್ರಿಪಾಠಿ ಅವರು ಸೋಮವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂಗಾಳದಲ್ಲಿನ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಮಾಹಿತಿ ನೀಡಿದ್ದರು. ವಿಶೇಷವಾಗಿ ಇಬ್ಬರು ಬಿಜೆಪಿ ಸ್ಥಳೀಯ ನಾಯಕರು ಕೊಲೆಯಾದ ಮತ್ತು ಒಬ್ಬರು ಕಣ್ಮರೆಯಾಗಿರುವ ಉತ್ತರ ೨೪ ಪರಗಣ ಜಿಲ್ಲೆಯ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು ಕೇಂದ್ರವು ಪಶ್ಚಿಮ ಬಂಗಾಳದಲ್ಲಿ ಸಂವಿಧಾನದ ೩೫೬ನೇ ವಿಧಿ (ರಾಷ್ಟ್ರಪತಿ ಆಳ್ವಿಕೆ) ಜಾರಿ ಬಗ್ಗೆ ಚಿಂತಿಸುತ್ತಿದೆಯೇ ಎಂಬ ಪ್ರಶ್ನೆಗೆನಾವು ಬಳೆಗಳನ್ನು ಧರಿಸಿಕೊಂಡು ಸುಮ್ಮನೇ ಕೂತಿದ್ದೇವೆ ಎಂಬುದಾಗಿ ಭಾವಿಸುವುದು ತಪ್ಪಾಗುತ್ತದೆ ಎಂದು ಮಮತಾ ಗುಡುಗಿದರುಸೋಮವಾರ ಕೂಡಾ, ಮಮತಾ ಬ್ಯಾನರ್ಜಿ ಅವರು ರಾಜ್ಯದ ಟಿಎಂಸಿ ಸರ್ಕಾರವನ್ನು ಸುಲಭವಾಗಿ ಉರುಳಿಸಬಹುದು ಎಂದು ಯೋಚಿಸುವುದು ತಪ್ಪು ಎಂದು ಹೇಳಿದ್ದರು. ನಡುವೆ, ಬಿಜೆಪಿ ನಾಯಕ ಮುಕುಲ್ ರಾಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ’ಮಮತಾ ಬ್ಯಾನರ್ಜಿ ಅವರಿಗೆ ಹುತಾತ್ಮ ಪಾತ್ರ ವಹಿಸಲು ಮತ್ತು ಜನರ ಅನುಕಂಪ ಪಡೆಯಲು ಬಿಜೆಪಿ ಅವಕಾಶ ನೀಡುವುದಿಲ್ಲ. ಸರ್ಕಾರವು ತಾನಾಗಿಯೇ ಪತನಗೊಳ್ಳುವ ಹಂತಕ್ಕೆ ಪರಿಸ್ಥಿತಿ ತಲುಪಿದೆ ಎಂದು ಹೇಳಿದರು. ಬಾಂಬ್ ಎಸೆತ: ಮಧ್ಯೆ ಪಶ್ಚಿಮ ಬಂಗಾಲದ ಬರಾಕ್ಪೋರ್ ಭಾಟ್ಪಾರಾ ಪ್ರದೇಶದಲ್ಲಿ  ಅಪರಿಚಿತ ದುಷ್ಕರ್ಮಿಗಳು ಎರಡು ಕಚ್ಚಾ ಬಾಂಬ್ಗಳನ್ನು ಎಸೆದ ಘಟನೆಯಲ್ಲಿ ಇಬ್ಬರು ಮೃತರಾಗಿ, ಇತರ ನಾಲ್ವರು ಗಾಯಗೊಂಡರು.  ಬೆಳಗ್ಗೆ ೧೦.೩೦ರ ಸುಮಾರಿಗೆ ಘಟಿಸಿದ ಘಟನೆಯಲ್ಲಿ ದುಷ್ಕರ್ಮಿಗಳು ಮನೆಯೊಂದರ ಮೇಲೆ ಎರಡು ಕಚ್ಚಾ ಬಾಂಬ್ಗಳನ್ನು ಎಸೆದರು. ಆಗ ಮೊಹಮ್ಮದ್ ಹಲೀಮ್ (೫೭) ಮತ್ತು ಮೊಹಮ್ಮದ್ ಮುಷ್ತಾಕ್ (೬೦) ಮನೆಯ ಹೊರಗೆ ಕುಳಿತಿದ್ದರು. ಬಾಂಬ್ ಸ್ಫೋಟದಿಂದ ಹಲೀಮ್ ಸ್ಥಳದಲ್ಲೇ ಮೃತರಾದರು. ಮುಷ್ತಾಕ್ ಅವರನ್ನು ಕಲ್ಯಾಣಿಯ ಜೆಎನ್ಎಂ ಆಸ್ಪತ್ರೆಗೆ ತರುತ್ತಲೇ ಆತ ಸಾವನ್ನಪ್ಪಿರುವುದಾಗಿ ತಿಳಿಸಲಾಯಿತು. ಬಾಂಬ್ ದಾಳಿ ನಡೆದಾಗ ಮನೆಯಲ್ಲಿ ಹಲವು ಮಂದಿ ಇದ್ದರು. ಅವರ ಪೈಕಿ ರೂಬಿ ಪರ್ವೀನ್, ಪರ್ವೇಜ್ ಆಲಂ, ತಾವರೆಜ್ ಆಲಂ ಮತ್ತು ಪ್ರಿನ್ಸ್ ಪರ್ವೇಜ್ ಗಾಯಗೊಂಡರು.  ಬಾಂಬ್ ದಾಳಿಯನ್ನು ಅನುಸರಿಸಿ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಂಬ್ ದಾಳಿಯ ಹಿಂದಿನ ಉದ್ದೇಶ ಏನೆಂದು ಗೊತ್ತಾಗಿಲ್ಲ. ಭಾಟ್ಪಾರಾ ವಿಧಾನಸಭೆಗೆ ಉಪಚುನಾವಣೆ ನಡೆದ ಸಂದರ್ಭದಲ್ಲಿ ಇಲ್ಲಿ ಹಿಂಸಾತ್ಮಕ ಪ್ರಕರಣಗಳು ನಡೆದಿದ್ದವು. ಬಾಂಬ್ ಎಸೆತದ ಬಳಿಕ  ಸೆ.೧೪೪ ಅನ್ವಯ ನಿಷೇಧಾಜ್ಞೆ ಹೇರಲಾಯಿತು. ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಯಿತು. ಗಲ್ಸಿ ಹಲ್ಲೆ ಘಟನೆ: ಕೋಲ್ಕತದಿಂದ ೧೨೬ ಕಿಮೀ ದೂರದ ಗಲ್ಸಿಯಲ್ಲಿ ಜೈದೇಬ್ ರಾಯ್ ಅವರು ರೈಲಿನಿಂದ ಇಳಿದು ಮನೆಗೆ ಹೊರಟಿದ್ದಾಗ ಅವರ ಮೇಲೆ ಹಲ್ಲೆ ನಡೆಯಿತು. ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಅವರ ರಕ್ಷಣೆಗೆ ಧಾವಿಸಿದ ಇತರ ಇಬ್ಬರು ಟಿಎಂಸಿ ಕಾರ್ಯಕರ್ತರೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿದವು. ಉಭಯ ಘಟನೆಗಳಲ್ಲೂ ಮೃತರಾಗಿರುವವರು ಟಿಎಂಸಿ ಕಾರ್ಯಕರ್ತರು ಎಂದು ತೃಣಮೂಲ ಕಾಂಗ್ರೆಸ್ ಹೇಳಿತು. ವೈದ್ಯರ ಮುಷ್ಕರ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಲೆನೋವಾಗಿರುವ ಇನ್ನೊಂದು ಬೆಳವಣಿಗೆಯಲ್ಲಿ ಹಿಂದಿನ ರಾತ್ರಿ ನಿರ್ಲಕ್ಷ್ಯದ ಆಪಾದನೆಯಲ್ಲಿ ಕೋಲ್ಕತದ ಸರ್ಕಾರಿ ಆಸ್ಪತ್ರೆಯೊಂದರ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿನ ಕಿರಿಯ ವೈದ್ಯರು ಮುಷ್ಕರ ಆರಂಭಿಸಿದರು. ತಮ್ಮ ಸಹೋದ್ಯೋಗಿಯ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಲಾಯಿತು ಎಂದು ಎನ್ ಆರ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯರು ಆಪಾದಿಸಿದರು. ಘಟನೆ ನಡೆದಾಗ ಪೊಲೀಸರು ನಿಷ್ಕ್ರಿಯರಾಗಿದ್ದರು. ಹಲ್ಲೆಗೆ ಒಳಗಾದ ವೈದ್ಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕಿರಿಯ ವೈದ್ಯರು ಹೇಳಿದರು. ಕಿರಿಯ ವೈದ್ಯರು ಆಸ್ಪತ್ರೆಯ ಗೇಟುಗಳಿಗೆ ಬೀಗ ಜಡಿದು, ಹೊರರೋಗಿ ಚಿಕಿತ್ಸಾ ವಿಭಾಗದಲ್ಲಿ ಕೆಲಸ ಸ್ಥಗಿತಗೊಳಿಸಿದರು ಮತ್ತು ಹಲ್ಲೆಯನ್ನು ಪ್ರತಿಭಟಿಸಿ ಧರಣಿ ಆರಂಭಿಸಿದರು.  ’ವೈದ್ಯರನ್ನು ರಕ್ಷಿಸಿ, ರಾಷ್ಟ್ರವನ್ನು ರಕ್ಷಿಸಿ ಬರಹಗಳಿರುವ ಭಿತ್ತಿ ಚಿತ್ರಗಳನ್ನೂ ಅವರು ಆಸ್ಪತ್ರೆಯ ಗೇಟುಗಳಿಗೆ ಅಂಟಿಸಿದರು.  ತಮಗೆ ಸಂಪೂರ್ಣ ರಕ್ಷಣೆ ನೀಡುವವರೆಗೂ ರಾಜ್ಯದ ಯಾವುದೇ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ ಎಂದು ಎನ್ ಆರ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮುಷ್ಕರ ನಿರತ ಕಿರಿಯ ವೈದ್ಯರು ಹೇಳಿದರುಆದರೆ, ರೋಗಿಗಳು ಆಸ್ಪತ್ರೆ ಪ್ರವೇಶಿಸಲು ಗೇಟುಗಳಿಗೆ ಹಾಕಲಾಗಿದ್ದ ಬೀಗಗಳನ್ನು ಮುರಿದರು. ಆಸ್ಪತ್ರೆ ಆವರಣದಲ್ಲಿ ನೂರಾರು ಮಂದಿ ರೋಗಿಗಳು ಚಿಕಿತ್ಸೆಗಾಗಿ ಬೆಳಗ್ಗಿನಿಂದಲೇ ಕಾಯುತ್ತಾ ಕುಳಿತ ದೃಶ್ಯಗಳು ಕಂಡು ಬಂದವು. ವೈದ್ಯರನ್ನು ಸೇವೆ ಆರಂಭಿಸುವಂತೆ ಮನವೊಲಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ವೈದ್ಯಕೀಯ ಮಂಡಳಿ ಅಧ್ಯಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಶಾಸಕ ನಿರ್ಮಲ್ ಮಾಜಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಮುಷ್ಕರ ನಿರತ ವೈದ್ಯರ ಜೊತೆ ಮಾತನಾಡುವಂತೆ ಮುಖ್ಯಮಂತ್ರಿಯವರು ಆರೋಗ್ಯ ಖಾತೆ ರಾಜ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್, ಪೊಲೀಸ್ ಕಮೀಷನರ್ ಅನುಜ್ ಶರ್ಮ ಮತ್ತು ನನಗೆ ಹಾಗೂ ಇತರ ಅಧಿಕಾರಿಗಳಿಗೆ ಸೂಚಿಸಿದ್ದಾರೆನಾವು ಅವರ ಬೇಡಿಕೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಸಮಸ್ಯೆ ಶೀಘ್ರವಾಗಿ ಬಗೆಹರಿಯುವುದು ಎಂದು ಆಶಿಸಿದ್ದೇವೆ ಎಂದು ನಿರ್ಮಲ್ ಮಾಜಿ ನುಡಿದರು. ವೈದ್ಯರ ಮೇಲೆ ಹಲ್ಲೆ ನಡೆದ ಬಳಿಕ ಆಸ್ಪತ್ರೆಯ ಸುತ ಭಾರೀ ಪ್ರಮಾಣದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.


2019: ನವದೆಹಲಿ: ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ತಾವು ಭ್ರಷ್ಟಾಚಾರ ವನ್ನು ಸಹಿಸುವುದಿಲ್ಲ  ಎಂಬ ಖಡಕ್ ಸಂದೇಶವನ್ನು ನರೇಂದ್ರ ಮೋದಿ ನೀಡಿದರು. ಭಾರತೀಯ ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಮುಖ್ಯ ಕಮೀಷನರ್ ಸ್ಥಾನ ದಲ್ಲಿರುವ ಹಿರಿಯ ಅಧಿಕಾರಗಳು, ಹಣಕಾಸು ಸಚಿವಾಲಯದ ಪ್ರಧಾನ ಆಯುಕ್ತರು ಮತ್ತು ಆದಾಯ ತೆರಿಗೆ ಇಲಾಖೆಯ ಕಮೀಷನರ್ ಸೇರಿ ಒಟ್ಟು ೧೨ ಜನ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಲಾಯಿತು. ಈ ೧೨ ಅಧಿಕಾರಿಗಳ ಪೈಕಿ ಕೆಲವರ ಮೇಲೆ ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪವಿತ್ತು.. ಕೆಲವರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು. ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ ೫೬ (ಜೆ) ನಿಯಮದ ಅಡಿ ನಿವೃತ್ತಿ ಹೊಂದಬೇಕು ಎಂದು ಹಣಕಾಸು ಸಚಿವಾಲಯ ನಿರ್ದೇಶನ ನೀಡಿತು. ಈ ೧೨ ಜನ ಅಧಿಕಾರಿಗಳ ಪಟ್ಟಿಯಲ್ಲಿ ಜಂಟಿ ಆಯುಕ್ತ ಶ್ರೇಣಿಯ ಅಧಿಕಾರಿ ಅಶೋಕ್ ಅಗ ರ್ವಾಲ್ ಇದ್ದಾರೆ. ಸ್ವಯಂಘೋಷಿತ ದೇವ ಮಾನವ ಚಂದ್ರಸ್ವಾಮಿಗೆ ಸಹಾಯ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪ ಅಶೋಕ್ ಅಗರ್ವಾಲ್ ಮೇಲಿತ್ತು.  ಇಬ್ಬರು ಮಹಿಳಾ ಐಆರ್‌ಎಸ್ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಬಂದಿರುವ ಎಸ್. ಕೆ ಶ್ರೀವಾಸ್ತವ ಅವರಿಗೂ ನಿವೃತ್ತಿ ಪಡೆಯುವಂತೆ ಸೂಚಿಸಲಾಯಿತು.

2018: ನವದೆಹಲಿ:  ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (೯೩ವರ್ಷ) ಅವರನ್ನು ದೆಹಲಿಯ ಅಖಿಲ ಭಾರತ ವೈದ್ಕಕೀಯ ಸಂಸ್ಥೆ (ಏಮ್ಸ್) ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇದು ನಿಗದಿತ ಆರೋಗ್ಯ ತಪಾಸಣೆ ಮಾತ್ರ, ಆತಂಕದ ಅಗತ್ಯವಿಲ್ಲ ಎಂದು ವರದಿಗಳು ತಿಳಿಸಿದವು. ಕಿಡ್ನಿ ಸಮಸ್ಯೆಗಳ ಹಿನ್ನೆಲೆಯಲ್ಲಿ ಡಯಾಲಿಸಿಸ್ ಮಾಡಿದ ಬಳಿಕ  ವಾಜಪೇಯಿ ಅವರನ್ನು ಐಸಿಯುನಲ್ಲಿ ಇಡಲಾಯಿತು. ಪ್ರಧಾನಿ ನರೇಂದ್ರ ಮೋದಿ,  ಎಲ್. ಕೆ. ಅಡ್ವಾಣಿ, ಇತರ ಬಿಜೆಪಿ ನಾಯಕರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದರು. ದೆಹಲಿಯ ಏಮ್ಸ್ ನಿರ್ದೇಶಕ, , ಶ್ವಾಸಕೋಶ ತಜ್ಞ ಡಾ.ರಣ್ ದೀಪ್ ಗುಲೇರಿಯಾ ಅವರು ವಾಜಪೇಯಿಯ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿತು.   ವೈದ್ಯರ ಸಲಹೆಯಂತೆ ವಾಜಪೇಯಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.  ವಾಜಪೇಯಿ ಅವರ ಆರೋಗ್ಯ ತಪಾಸಣೆ ನಡೆಸುತ್ತಿರುವ ಗುಲೇರಿಯಾ ಅವರು ಮೂರು ದಶಕಗಳಿಂದ ವಾಜಪೇಯಿ ಅವರ ಖಾಸಗಿ ವೈದ್ಯರಾಗಿದ್ದಾರೆ.  ದೇಶದ ೧೦ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ಸೇತರ ಮೊದಲ ಪ್ರಧಾನಿಯಾಗಿ, ಐದು ವರ್ಷಗಳ ಪೂರ್ಣಾವಧಿ ಸರ್ಕಾರ ನಡೆಸಿದ್ದ ಹೆಗ್ಗಳಿಕೆ ಹೊಂದಿರುವವರು. ಅವರು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು.  ಪದ್ಮ ವಿಭೂಷಣ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ವಾಜಪೇಯಿ ಅವರಿಗೆ, ೨೦೧೫ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ, ಭಾರತ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.  ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವರೆಂಬ ಖ್ಯಾತಿ ಸಹ ವಾಜಪೇಯಿ ಅವರದ್ದು.  ವಾಜಪೇಯಿ ಅವರು ೧೯೯೮ರಿಂದ ೨೦೦೪ರವರೆಗೆ ಎನ್ ಡಿ ಎ ಮೈತ್ರಿಕೂಟದ ಸರ್ಕಾರವನ್ನು ಮುನ್ನಡೆಸಿದ್ದರು.

2018: ಬೆಂಗಳೂರು: ಭಾರೀ ಮಳೆಯಿಂದಾಗಿ ಹಾಸನ- ಮಂಗಳೂರು ನಡುವೆ ಎಡಕುಮೇರಿ ಸೇರಿದಂತೆ ಮೂರು ಕಡೆ ಭೂ ಕುಸಿತ ಸಂಭವಿಸಿದ ಪರಿಣಾಮವಾಗಿ ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿತು. ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ರೈಲನ್ನು ಹಾಸನದಲ್ಲೇ ನಿಲ್ಲಿಸಲಾಯಿತು. ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡಿ, ಹಾಸನ ರೈಲು ನಿಲ್ದಾಣದಿಂದ ಕೆಎಸ್ಸಾರ್ಟಿಸಿ ಬಸ್ಸುಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. ಭಾರೀ ಮಳೆಯಿಂದಾಗಿ ಎಡಕುಮೇರಿ ಮೈಲು ೨೧೮ ಸೇರಿದಂತೆ ಮೂರು ಸ್ಥಳಗಳಲ್ಲಿ ಭೂ ಕುಸಿತ ಸಂಭವಿಸಿತು.  ಯಶವಂತಪುರ-ಕಾರವಾರ  ಎಕ್ಸ್ ಪ್ರೆಸ್ (೧೬೫೧೫) ರೈಲಿನ ಸಂಚಾರವನ್ನು ಭಾಗಶಃ ರದ್ದುಪಡಿಸಲಾಯಿತು.

2018 ನಾಗಪುರ (ಮಹಾರಾಷ್ಟ್ರ): ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರನ್ನು ನಾಗಪುರದ ಆರಾಧನಾ ನಗರದಲ್ಲಿ ಹಿಂದಿನ ರಾತ್ರಿ ಕಗ್ಗೊಲೆಗೈದ ಘಟನೆ ಘಟಿಸಿತು.  ಕಮಲಾಕರ ಪೋಹನ್ಕರ್, ಅವರ ಪತ್ನಿ ಅರ್ಚನಾ, ಪುತ್ರಿ ವೇದಾಂತಿ, ಸೋದರಳಿಯ ಗಣೇಶ ಮತ್ತು ತಾಯಿ ಮೀರಾಬಾಯಿ ಅವರನ್ನು ಗಾಢ ನಿದ್ದೆಯಲ್ಲಿದ್ದಾಗ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆಗೈಯ್ಯಲಾಯಿತು. ಕಮಲಾಕರ ಅವರನ್ನು ನೆರೆಮನೆಯವರು ಈದಿನ ಬೆಳಗ್ಗೆ ಕರೆದಾಗ ಯಾವುದೇ ಪ್ರತಿಕ್ರಿಯೆ ಕಾಣದೇ ಹೋದ ಬಳಿಕ ಇಡೀ ಕುಟುಂಬದ ಕಗ್ಗೊಲೆ ಕೃತ್ಯ ಬೆಳಕಿಗೆ ಬಂದಿತು. ಅವರು ಬಿಜೆಪಿ ಕಾರ್ಯಕರ್ತರಾಗಿದ್ದರು. ಸಮಾಜದಲ್ಲಿ ಒಳ್ಳೆಯ ಗೌರವವನ್ನು ಗಳಿಸಿದ್ದರು. ಅವರಿಗೆ ಯಾರೊಂದಿಗಾದರೂ ಹಗೆತನ ಇದ್ದ ಬಗ್ಗೆ ನನಗೇನೂ ಅರಿವಿಲ್ಲ ಎಂದು ಕಮಲಾಕರ ಅವರ ಬಂಧುವೊಬ್ಬರು ಮಾಧ್ಯಮಕ್ಕೆ ತಿಳಿಸಿದರು. ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಈ ಕೊಲೆಗಳನ್ನು ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದರು. ನಸುಕಿನ ೧ ಗಂಟೆಯಿಂದ ೩ ಗಂಟೆ ನಡುವಣ ಅವಧಿಯಲ್ಲಿ ಕೊಲೆಗಳು ನಡೆದಿವೆ. ಕೊಲೆಗಾರರು ಒಳಗಿನವರೇ ಇರಬಹುದು ಎಂಬುದು ನಮ್ಮ ಶಂಕೆ. ಪ್ರಾಥಮಿಕ ತನಿಖೆಯು ಕೌಟುಂಬಿಕ ಜಗಳದತ್ತ ಬೊಟ್ಟು ಮಾಡಿದೆ ಎಂದು ಡಿಸಿಪಿ ಎಸ್ ಡಿ ದಿಘಾವ್ಕರ್ ನುಡಿದರು.  ಕುಟುಂಬದ ಜೊತೆಗೆ ವಾಸವಾಗಿದ್ದ ಬಂಧುವೊಬ್ಬರು ಘಟನೆಯ ಬಳಿಕ ತಲೆ ತಪ್ಪಿಸಿಕೊಂಡಿದ್ದಾರೆ. ಶಂಕಿತ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಶೋಧ ಆರಂಭಿಸಿದರು.

2018: ನಾಗಪುರ (ಮಹಾರಾಷ್ಟ್ರ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧದ ತಮ್ಮ ದಾಳಿಗಳನ್ನು ’ವೈಯಕ್ತಿಕ ದಾಳಿಗಳು ಎಂಬುದಾಗಿ ಪರಿಗಣಿಸಬೇಡಿ ಎಂಬುದಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಲ್ಲಿ ಮಾಧ್ಯಮಗಳಿಗೆ ಮನವಿ ಮಾಡಿದರು.   ಕಾಂಗ್ರೆಸ್ ಮುಕ್ತ ಭಾರತ ಎಂಬ ಪದವು ಭಾರತವನ್ನು ಕಾಂಗ್ರೆಸ್ ಪಕ್ಷದಿಂದ ಮುಕ್ತಗೊಳಿಸುವುದು ಎಂಬ ಅರ್ಥದ್ದಲ್ಲ, ’ಕಾಂಗ್ರೆಸ್ ಸಂಸ್ಕೃತಿಯಿಂದ ದೇಶವನ್ನು ಮುಕ್ತಗೊಳಿಸುವುದು ಎಂಬ ಅರ್ಥದ್ದು ಎಂದು ಅವರು ಸ್ಪಷ್ಟ ಪಡಿಸಿದರು.  ಅದನ್ನು ವೈಯಕ್ತಿಕ ದಾಳಿ ಎಂಬುದಾಗಿ ಪರಿಗಣಿಸಬೇಡಿ. ಅವರು (ರಾಹುಲ್ ಗಾಂಧಿ) ಅವರು ಕೆಲವು ವಿಷಯಗಳನ್ನು ಜನರ ಮುಂದೆ ಇಟ್ಟಿದ್ದಾರೆ ಮತ್ತು ನಾನು ಅದಕ್ಕೆ ಉತ್ತರಿಸಲು ಯತ್ನಿಸಿದ್ದೇನೆ ಅಷ್ಟೆ. ಪ್ರಜಾಪ್ರಭುತ್ವಕ್ಕೆ ಯಾರೂ ಅಪಾಯಕಾರಿಗಳಲ್ಲ. ನಮ್ಮ ಪಕ್ಷವು ಒಳ್ಳೆಯ ಕೆಲಸವನ್ನು ಮಾಡಿದೆ ಮತ್ತು ನಾವು ಮುಂದುವರಿಯುವಷ್ಟೂ ಕಾಲ ಜನರು ನಮ್ಮನ್ನು ಬೆಂಬಲಿಸುತ್ತಾರೆ ಎಂದು ಶಾ ಪ್ರಶ್ನೆಯೊಂದನ್ನು ಉತ್ತರಿಸುತ್ತಾ ಹೇಳಿದರು. ಉತ್ತರ ಛತ್ತೀಸ್ ಗಢದ ಅಂಬಿಕಾಪುರ ಪಟ್ಟಣದಲ್ಲಿ ಬೆಳಗ್ಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ  ’ರಾಹುಲ್ ಗಾಂಧಿ ಅವರನ್ನು ಅಪಾಯ ಎಂಬುದಾಗಿ ನೀವು ಪರಿಗಣಿಸುತ್ತೀರಾ?’ ಎಂದು ಅಮಿತ್ ಶಾ ಅವರನ್ನು ಪ್ರಶ್ನಿಸಲಾಗಿತ್ತು.  ನಾನು ಅವರಿಗೆ (ರಾಹುಲ್ ಗಾಂಧಿ) ನಾಲ್ಕು ತಲೆಮಾರುಗಳ (ಗಾಂಧಿ ಕುಟುಂಬದ ಆಳ್ವಿಕೆಯ) ಲೆಕ್ಕವನ್ನು ಕೇಳುತ್ತಿದ್ದೇನೆ. ಏಕೆಂದರೆ ಅವರು ಕಾಂಗ್ರೆಸ್ ಅಧ್ಯಕ್ಷರು ಮತ್ತು ಅವರ ಕುಟುಂಬ ೫೫ ವರ್ಷ ಕಾಲ ಈ ರಾಷ್ಟ್ರದ ಆಳ್ವಿಕೆ ನಡೆಸಿದೆ. ನಾನು ಬಿಜೆಪಿ ಅಧ್ಯಕ್ಷನಾಗಿ ಬಿಜೆಪಿ ಬಗ್ಗೆ ಉತ್ತರಿಸುತ್ತಿರುವಂತೆಯೇ, ನೀವು ಕಾಂಗ್ರೆಸ್ ಅಧ್ಯಕ್ಷರಾದಾಗ, ನೀವು ಕಾಂಗ್ರೆಸ್ ಪಕ್ಷದ ಕೊಡುಗೆಗಳ ಬಗ್ಗೆ ಉತ್ತರಿಸಬೇಕಾಗುತ್ತದೆ. ಇದನ್ನು ಆಕ್ಷೇಪಿಸುವಂತಿಲ್ಲ ಎಂದು ಶಾ ನುಡಿದರು.  ಛತ್ತೀಸ್ ಗಢಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಶಾ ಅವರು ಹಿಂದಿನ ದಿನ  ಉತ್ತರ ಛತ್ತೀಸ್ ಗಢದ ಸರ್ಗುಜಾ ಜಿಲ್ಲೆಯಲ್ಲಿ ಸಭೆಯೊಂದರಲ್ಲಿ ಒಂದರಲ್ಲಿ ’ಕಾಂಗ್ರೆಸ್ ಪಕ್ಷವು ಸುಳ್ಳುಗಳನ್ನು ಹರಡುತಿದೆ ಎಂದು ಆಪಾದಿಸಿ, ’ಗಾಂಧಿ ಕುಟುಂಬದ ೫೫ ವರ್ಷಗಳ ಆಳ್ವಿಕೆಯ ಲೆಕ್ಕ ಕೊಡಿ ಎಂದು ಆಗ್ರಹಿಸಿದ್ದರು.  ಕಾಂಗ್ರೆಸ್ ಮುಕ್ತ ಭಾರತದ ಮಾತನಾಡುತ್ತಿರುವ ನಿಮ್ಮ ಪಕ್ಷವು ರಾಷ್ಟ್ರದಲ್ಲಿ ಯಾವುದೇ ವಿರೋಧ ಪಕ್ಷ ಇರುವುದನ್ನು ಬಯಸುತ್ತಿಲ್ಲವೇ ಎಂಬ ಪ್ರಶ್ನೆಗೆ ’ನಾವು ಕಾಂಗ್ರೆಸ್ - ಮುಕ್ತ ಭಾರತದ ಮಾತನಾಡುವಾಗ, ಅದನ್ನು ಕಾಂಗ್ರೆಸ್ ಸಂಸ್ಕೃತಿಯನ್ನು ಮುಕ್ತಗೊಳಿಸುವುದು ಎಂಬ ಅರ್ಥದಲ್ಲಿ ಮಾತನಾಡುತ್ತೇವೆ, ವಿರೋಧ ಪಕ್ಷವನ್ನು ಕೊನೆಗೊಳಿಸುವುದು ಎಂಬ ಅರ್ಥದಲ್ಲಿ ಅಲ್ಲ. ವಿರೋಧ ಪಕ್ಷ ಇಲ್ಲದೇ ಪ್ರಜಾಪ್ರಭುತ್ವ ಇರಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಪಕ್ಷವನ್ನು ಜೀವಂತವಾಗಿ ಇರಿಸುವುದು ನನ್ನ ಹೊಣೆಗಾರಿಕೆಯಲ್ಲ. ಅದು ರಾಹುಲ್ ಗಾಂಧಿ ಅವರ ಹೊಣೆಗಾರಿಕೆ. ನಿಮ್ಮ ಪ್ರಶ್ನೆ ತಪ್ಪು ಗುರಿಯತ್ತ ಬಂದಿದೆ ಎಂದು ಎಂದು ಅಮಿತ್ ಶಾ ನುಡಿದರು.  ಮಧ್ಯಮ ವರ್ಗದ ಮಂದಿ ಬಿಜೆಪಿಯಿಂದ ದೂರ ಹೋಗುತ್ತಿದ್ದಾರೆ ಎಂಬುದನ್ನು ನಿರಾಕರಿಸಿದ ಶಾ ’ಸರ್ಕಾರವು ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಅಷ್ಟೇ ಕಾಳಜಿ ಹೊಂದಿದೆ ಎಂದು ಹೇಳಿದರು.  ಮಧ್ಯಮ ವರ್ಗವು ನಮ್ಮಿಂದ ದೂರ ಹೋಗುತ್ತಿದ್ದರೆ ನಾವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚುನಾವಣೆಗಳನ್ನು ಗೆಲ್ಲುತ್ತಿರಲಿಲ್ಲ. ಇದು ದಾರಿತಪ್ಪಿಸುವ ಪ್ರಚಾರ. ನಾವು ಮಧ್ಯಮ ವರ್ಗಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಬಹಳಷ್ಟು ಯೋಜನೆಗಳನ್ನು ನಿರ್ದಿಷ್ಟವಾಗಿ ಮಧ್ಯಮ ವರ್ಗಗಳ ಸಲುವಾಗಿಯೇ ಸಮರ್ಪಿಸಲಾಗಿದೆ. ಸಮಾಜದ ಎಲ್ಲ ವರ್ಗಗಳೂ ಬಿಜೆಪಿಯನ್ನು ಬೆಂಬಲಿಸಿವೆ. ಹೀಗಾಗಿಯೇ ನಮಗೆ, ಚುನಾಯಿತರಾಗಿ ೧೪ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿದೆ.  ಸರ್ಕಾರವು ಕಳೆದ ೧೨ ದಿನಗಳಿಂದ ನಿರಂತರವಾಗಿ ಇಂಧನ ಬೆಲೆಗಳ ವಿಷಯದ ಬಗ್ಗೆ ಚಿಂತಿಸುತ್ತಿದೆ ಮತ್ತು ಬೆಲೆಗಳು ಇಳಿದಿವೆ. ಸರ್ಕಾರವು ಅದರ ಮೇಲೆ ಕಣ್ಣಿಟ್ಟಿರುವುದಷ್ಟೇ ಅಲ್ಲ ಅದರ ಬಗ್ಗೆ ಯೋಚಿಸುತ್ತಿದೆ ಎಂದು ಶಾ ನುಡಿದರು.  ಮೋದಿ ಸರ್ಕಾರದ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಧರು ಗಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ಪ್ರಸ್ತಾಪಿಸಿದ ಬಿಜೆಪಿ ಅಧ್ಯಕ್ಷ, ’ಕಾಂಗ್ರೆಸ್ ಪಕ್ಷವು ಈ  ನಾಲ್ಕು ವರ್ಷಗಳ ಅವಧಿಯಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಸಂಖ್ಯೆಯನ್ನೂ ನೀಡಬೇಕು ಎಂದು ಎದಿರೇಟು ಕೊಟ್ಟರು.  ಈ ನಾಲ್ಕು ವರ್ಷಗಳಲ್ಲಿ ಅತ್ಯಂತ ಗರಿಷ್ಠ ಸಂಖ್ಯೆಯ ಭಯೋತ್ಪಾದಕರೂ ಕೊಲ್ಲಲ್ಪಟ್ಟಿದ್ದಾರೆ. ಭಾರತದ ಗಡಿಗಳು ಸುಭದ್ರವಾಗಿರುವ ಬಗ್ಗೆ ಜನರ ಮನಸ್ಸಿನಲ್ಲಿ ಈಗ ಯಾವುದೇ ಗೊಂದಲಗಳೂ ಇಲ್ಲ ಎಂದು ಅವರು ನುಡಿದರು.  ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದ ಬಿಜೆಪಿ ಅಧ್ಯಕ್ಷರು ಛತ್ತೀಸ್ ಗಢದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷವು ಹಮ್ಮಿಕೊಂಡಿರುವ  ’ಮಿಷನ್ ೬೫ನ್ನು ಪುನರುಚ್ಚರಿಸಿ, ಇದು ಯಶಸ್ವಿಯಾಗಲಿದೆ, ರಾಜ್ಯದ ಜನರು ನಾಲ್ಕನೇ ಬಾರಿಗೂ ಬಿಜೆಪಿ ಸರ್ಕಾರವನ್ನು ಚುನಾಯಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು. 

2018: ನವದೆಹಲಿ: ರಾಷ್ಟ್ರವು ಈಗ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಹಿಡಿಯಷ್ಟು ಮಂದಿಯ ಗುಲಾಮನಾಗಿದೆ ಎಂದು ಇಲ್ಲಿ ಆಪಾದಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ’ಸಂಯುಕ್ತ ವಿರೋಧ ಪಕ್ಷವು ಇದರ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವುದು ಎಂದು ದೃಢ ಪಡಿಸಿದರು.  ದೆಹಲಿಯ ತಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಕ್ಷದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೊತ್ತ ಮೊದಲ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.  ಒಂದು ರೀತಿಯಲ್ಲಿ, ಇಂದು ರಾಷ್ಟ್ರವು ಬಿಜೆಪಿ ಮತ್ತು ಆರೆಸ್ಸೆಸ್ಸಿನ ಮೂರು -ನಾಲ್ಕು ಉನ್ನತ ವ್ಯಕ್ತಿಗಳ ಗುಲಾಮನಾಗಿದೆ. ಹೀಗಾಗಿಯೇ ಇಡೀ ವಿರೋಧ ಪಕ್ಷಗಳು ಮುಂದಿನ ೬ರಿಂದ ೮ ತಿಂಗಳಿನಿಂದ ಒಂದು ವರ್ಷದ ಅವಧಿಯಲ್ಲಿ  ಒಟ್ಟಾಗಿ ಭಾರತದ ಶಕ್ತಿಯನ್ನು ತೋರಿಸಲಿವೆ ಎಂದು ಅವರು ನುಡಿದರು.   ‘ಇಬ್ಬರು ಅಥವಾ ಮೂರು ವ್ಯಕ್ತಿಗಳಿಂದ ಭಾರತವನ್ನು ನಡೆಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಾಗಲಿದೆ ಎಂದು ರಾಹುಲ್ ಹೇಳಿದರು.  ೯೦ರ ದಶಕದಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ಅವರಂತಹ ಪ್ರಾದೇಶಿಕ ನಾಯಕರು ಇತರ ಹಿಂದುಳಿದ ವರ್ಗಗಳನ್ನು ಬಳಸಿಕೊಂಡು ಸದೃಢ ವೋಟ್ ಬ್ಯಾಂಕ್ ನಿರ್ಮಿಸಿದ್ದರು. ಈಗ ಜನಸಂಖ್ಯೆಯ ಶೇಕಡಾ ೫೨ರಷ್ಟು ಇರುವ ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಓಲೈಸಿಕೊಳ್ಳಲು ಕಾಂಗ್ರೆಸ್ ಆಸಕ್ತಿ ತಾಳಿದೆ.  ಲೋಕಸಭೆ ಮತ್ತು ವಿಧಾನಸಭೆಗಳು ಸೇರಿದಂತೆ ಪಕ್ಷದ ಪ್ರತಿಯೊಂದು ಹಂತದಲ್ಲೂ ಇತರ ಹಿಂದುಳಿದ ವರ್ಗಗಳಿಗೆ ಉತ್ತಮ ಪ್ರಾತಿನಿಧ್ಯ ಕಲ್ಪಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷರು ಭರವಸೆ ನೀಡಿದರು.  ಕೈಗಾರಿಕೋದ್ಯಮಿಗಳಿಗೆ ಸಾಲ, ರೈತರ ನಿರ್ಲಕ್ಷ್ಯ: ಕೇಂದ್ರ ಸರ್ಕಾರವು ರೈತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿರುವುದಷ್ಟೇ ಅಲ್ಲ, ೨.೫ ಲಕ್ಷ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡುವ ಮೂಲಕ ಕೈಗಾರಿಕೋದ್ಯಮಿಗಳ ಸಣ್ಣ ಗುಂಪಿಗೆ ನೆರವು ನೀಡಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.  ಕೇವಲ ೧೫ ಮಂದಿ ಕೈಗಾರಿಕೋದ್ಯಮಿಗಳಿಗೆ ೨.೫ ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಆದರೆ ರೈತರಿಗೆ ಏನೂ ಸಿಗುತ್ತಿಲ್ಲ. ಸಾಲಮನ್ನಾ ೧೫ ಜನರಿಗೆ ಮಾತ್ರ, ಆದರೆ ರೈತರ ಆತ್ಮಹತ್ಯೆ ಮುಂದುವರೆದಿದೆ. ರೈತರ ಮಕ್ಕಳು ಅಳುತ್ತಿದ್ದಾರೆ ಎಂದು ರಾಹುಲ್ ನುಡಿದರು. ಬ್ಯಾಂಕುಗಳ ಮರುಪಾವತಿಯಾಗದ ಸಾಲದ ಮೊತ್ತ ೧೦೦೦ ಕೋಟಿ ರೂಪಾಯಿಗಳವರೆಗೆ ಏರಿದೆ ಎಂದೂ ಅವರು ಪ್ರತಿಪಾದಿಸಿದರು.  ಕೌಶಲಗಳನ್ನು ಹೊಂದಿರುವ ಜನರನ್ನು ಭಾರತದಲ್ಲಿ ಗುರುತಿಸಿ ಗೌರವಿಸಲಾಗುತ್ತಿಲ್ಲ. ರೈತರು ಕಷ್ಟಪಟ್ಟು ದುಡಿಯುತ್ತಾರೆ. ಆದರೆ ನೀವು ಮೋದಿ ಕಚೇರಿಯಲ್ಲಿ ಅವರನ್ನು ಕಾಣಲಾರಿರಿ ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದರು.
ಭಾರತದಲ್ಲಿ ಕೌಶಲ ಕಡಿಮೆಯಾಗಿದೆ ಎಂಬ ಸರ್ಕಾರದ ನಿಲುವಿಗೆ ರಾಹುಲ್ ಸವಾಲು ಹಾಕಿದರು. ’ಇದು ಸತ್ಯವಲ್ಲ. ವಾಸ್ತವವನ್ನು ಗುರುತಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರಾಹುಲ್ ಗಾಂಧಿ ನುಡಿದರು.

2018: ವಾಷಿಂಗ್ಟನ್: ಭಾರತವು ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಅತ್ಯಧಿಕ ಸುಂಕ ಹೇರುತ್ತಿದೆ.
ಇದನ್ನು ನಾವು ಸಹಿಸುವುದಿಲ್ಲ. ಇದು ಹೀಗೇ ಮುಂದುವರಿದರೆ ನಾವು ಭಾರತದೊಂದಿಗೆ ವಾಣಿಜ್ಯ ವ್ಯವಹಾರವನ್ನು ನಿಲ್ಲಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದರು.  ಇದು ಭಾರತ- ಅಮೆರಿಕದ ಮಧುರ ವಾಣಿಜ್ಯ ಬಾಂಧವ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿತು.  ಜಿ೭ ಶೃಂಗಸಭೆಯಲ್ಲಿ ಇತರ ದೇಶಗಳ ಜೊತೆಗೆ ಭಾರತವನ್ನೂ ಸೇರಿಸಿಕೊಂಡು ಗುಡುಗಿದ ಟ್ರಂಪ್ ’ಅಮೆರಿಕ ಎಂದರೆ ಎಲ್ಲರಿಗೂ ಪಿಗ್ಗಿ ಬ್ಯಾಂಕ್ ಆಗಿದೆ; ಎಲ್ಲ ದೇಶಗಳೂ ನಮ್ಮನ್ನು ಲೂಟಿ ಹೊಡೆಯುತ್ತಿವೆ ಎಂದು ಟ್ರಂಪ್ ಕೂಗಾಡಿದರು.  ಟ್ರಂಪ್ ಅವರು ತಮ್ಮ "ಅಮೆರಿಕ ಫಸ್ಟ್ ಎಂಬ ಘೋಷಣೆಗೆ ಮಹತ್ವ ಕೊಟ್ಟು ಕೆನಡಾದ ಕ್ಯುಬೆಕ್ ಸಿಟಿಯಲ್ಲಿ ಮಾಡಿದ ಭಾಷಣದಲ್ಲಿ ಭಾರತದ ವಿರುದ್ಧ ಈ ರೀತಿಯಾಗಿ ಗುಡುಗಿದರು.   "ನಮ್ಮ ಉತ್ಪನ್ನಗಳ ಮೇಲೆ ಅತ್ಯಧಿಕ ಆಮದು ಸುಂಕ ಹೇರುವ ಭಾರತ ಮತ್ತು ಇತರ ಅನೇಕ ದೇಶಗಳೊಂದಿಗಿನ ನಮ್ಮ ವಾಣಿಜ್ಯ ಸಂಬಂಧಗಳನ್ನು ನ್ಯಾಯೋಚಿತವಾಗಿ ನಡೆಸಲು ಅವಶ್ಯವಿರುವ ಎಲ್ಲವನ್ನೂ ನಾವು ಮಾಡುವೆವು ಎಂದು ಟ್ರಂಪ್ ಹೇಳಿದರು.   "ಭಾರತ ನಮ್ಮ ಕೆಲವು ಉತ್ಪನ್ನಗಳ ಮೇಲೆ ಶೇಕಡಾ ೧೦೦ ಆಮದು ಸುಂಕ ಹೇರುತ್ತಿದೆ; ನಾವು ಚಿಕ್ಕಾಸನ್ನೂ ಅವರ ಮೇಲೆ ವಿಧಿಸುತ್ತಿಲ್ಲ. ಆದರೆ ಅವರು ಶೇಕಡಾ ೧೦೦ರಷ್ಟು ಸುಂಕ ಹೇರುತ್ತಿದ್ದಾರೆ. ಶೇಕಡಾ ೧೦೦ರಷ್ಟು! ಇದನ್ನು ಹೀಗೆಯೇ ಮುಂದುವರೆಸಲಾಗದು ಎಂದು ಟ್ರಂಪ್ ನುಡಿದರು.   ನಾವು ಎಲ್ಲ ದೇಶಗಳೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದೇವೆ. ಏನೂ ಸಾಧ್ಯವಾಗದೇ ಹೋದರೆ ನಾವು ಭಾರತ ಸೇರಿದಂತೆ ಇಂತಹ ದೇಶಗಳೊಂದಿಗೆ ವ್ಯಾಪಾರ ವಹಿವಾಟನ್ನೇ ನಿಲ್ಲಿಸುತ್ತೇವೆ ಎಂದು ಟ್ರಂಪ್ ಹೇಳಿದರು.  ಅತಿಯಾದ ಸುಂಕ ಹೇರಿಕೆ ವಿಚಾರ ಕುರಿತ ತಮ್ಮ ಆಕ್ಷೇಪಗಳನ್ನು ಹೊರಹಾಕಿದ ಟ್ರಂಪ್ ಅವರು ’ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಷ್ಟೇ ಸೀಮಿತವಲ್ಲ. ಇದು ಕೇವಲ ಜಿ೭ ಅಷ್ಟೇ ಅಲ್ಲ. ಭಾರತ ಕೂಡಾ ನಮ್ಮ ಕೆಲವು ವಸ್ತುಗಳ ಮೇಲೆ ಶೇಕಡಾ ೧೦೦ರಷ್ಟು ಸುಂಕ ವಿಧಿಸುತ್ತಿದೆ. ಶೇಕಡಾ ನೂರು. ನಾವು ಮಾತ್ರ ಅವರ ಮೇಲೆ ಏನೂ ಶುಲ್ಕ ವಿಧಿಸುತ್ತಿಲ್ಲ ಎಂದು ನುಡಿದರು.  ಐಕಾನಿಕ್ ಹಾರ್ಲೆ-ಡೇವಿಡ್ಸನ್ ಮೋಟಾರ್ ಸೈಕಲ್ ಗಳ ಮೇಲೆ ದುಬಾರಿ ಆಮದು ಸುಂಕ ವಿಧಿಸುತ್ತಿರುವ ಬಗ್ಗೆ ಟ್ರಂಪ್ ಹಲವಾರು ಬಾರಿ ಭಾರತದ ಜೊತೆಗೆ ಪ್ರಸ್ತಾಪಿಸಿದ್ದರು ಮತ್ತು ಅಮೆರಿಕಕ್ಕೆ ಆಮದಾಗುವ ಭಾರತದ ಸಹಸ್ರಾರು ಮೋಟಾರು ಸೈಕಲ್‌ಗಳ ಮೇಲೆ ಆಮದು ಸುಂಕ ಏರಿಸುವ ಬೆದರಿಕೆ ಹಾಕಿದ್ದರು.  ನಾವು ಎಲ್ಲ ರಾಷ್ಟ್ರಗಳ ಜೊತೆಗೂ ಮಾತನಾಡುತ್ತಿದ್ದೇವೆ. ಇದು ನಿಲ್ಲಲಿದೆ. ಇಲ್ಲವೇ ನಾವು ಅವರ ಜೊತೆಗೆ ವಹಿವಾಟು ನಿಲ್ಲಸುತ್ತೇವೆ. ಇದನ್ನು ಮಾಡಲು ನಮಗೆ ಸಾಧ್ಯವಾದರೆ ಇದು ಅತ್ಯಂತ ಲಾಭದಾಯಕ ಉತ್ತರ ಎಂದು ಟ್ರಂಪ್, ಕೆನಡಾದಿಂದ ಸಿಂಗಾಪುರಕ್ಕೆ ಉತ್ತರ ಕೊರಿಯಾದ ಮುಖ್ಯಸ್ಥ ಕಿಮ್ ಜೊಂಗ್ ಉನ್ ಅವರ ಜೊತೆಗೆ ಮಂಗಳವಾರ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಹೊರಡುವ ಮುನ್ನ ಎಚ್ಚರಿಕೆ ನೀಡಿದ್ದರು.  ಭಾರತ ಮತ್ತು ಅಮೆರಿಕದ ಬಾಂಧವ್ಯ ಇತ್ತೀಚಿನ ವರ್ಷಗಳಲ್ಲಿ ಧನಾತ್ಮಕ ಹಾದಿಯಲ್ಲಿ ಸಾಗುತ್ತಿರುವ ವೇಳೆಯಲ್ಲೇ ಬಂದಿರುವ ಟ್ರಂಪ್ ಬೆದರಿಕೆ ಉಭಯ ರಾಷ್ಟ್ರಗಳ ಸುಮಧುರ ವಾಣಿಜ್ಯ ವಹಿವಾಟಿನ ಮೇಲೆ ಕಾರ್ಮೋಡ ಕವಿಯವಂತೆ ಮಾಡಿದೆ. ಕಳೆದ ವರ್ಷ ಉಭಯ ರಾಷ್ಟ್ರಗಳ ದ್ವೀಪಕ್ಷೀಯ ವಹಿವಾಟು ಕಳೆದ ವರ್ಷದ ೧೧ ಬಿಲಿಯನ್ (೧೧೦೦ ಕೋಟಿ) ಅಮೆರಿಕನ್ ಡಾಲರುಗಳಿಂದ ೧೨೫ ಬಿಲಿಯನ್ (೧೨೫೦೦ ಕೋಟಿ) ಅಮೆರಿಕನ್ ಡಾಲರುಗಳಷ್ಟು ಹಿಗ್ಗಿ ಹೊಸ ದಾಖಲೆಯನ್ನೇ ನಿರ್ಮಿಸಿದೆ.  ತಮ್ಮ ’ಅಮೆರಿಕ ಮೊದಲು ನೀತಿಗೆ ಆದ್ಯತೆ ನೀಡುತ್ತಿರುವ ಟ್ರಂಪ್, ಅಂತಿಮವಾಗಿ ಎಲ್ಲ ವಾಣಿಜ್ಯ ಸುಂಕಗಳನ್ನೂ ನಿವಾರಿಸುವ ಗುರಿ ಹೊಂದಿದ್ದಾರೆ.  ಅಂತಿಮವಾಗಿ ನಿಮಗೆ ಬೇಕಾದದ್ದು ಅದು. ಸುಂಕ ಮುಕ್ತ ವಹಿವಾಟನ್ನು ನೀವು ಬಯಸುತ್ತಿದ್ದೀರಿ. ಯಾವುದೇ ಅಡೆ ತಡೆ ಇರಬಾರದು ಎಂದು ನೀವು ಬಯಸುತ್ತಿದ್ದೀರಿ. ಯಾವುದೇ ಸಬ್ಸಿಡಿ ಇರಬಾರದು ಎಂದು ನೀವು ಬಯಸುತ್ತಿದ್ದೀರಿ. ಏಕೆಂದರೆ ಕೆಲವು ರಾಷ್ಟ್ರಗಳು ಕೈಗಾರಿಕೆಗಳಿಗೆ ಸಬ್ಸಿಡಿ ನೀಡುತ್ತಿರುವ ಪ್ರಕರಣಗಳು ಇವೆ. ಇದು ನ್ಯಾಯೋಚಿತವಲ್ಲ ಎಂದು ಟ್ರಂಪ್ ಹೇಳಿದ್ದಾರೆ.  ಅಮೆರಿಕ ಮತ್ತು ಚೀನಾ ಕಳೆದ ತಿಂಗಳು ಒಪ್ಪಂದವೊಂದಕ್ಕೆ ಸಹಿ ಹಾಕುವ ವಹಿವಾಟು ಸಮರವನ್ನು ತಪ್ಪಿಸಿವೆ. ಈ ಒಪ್ಪಂದದ ಮೂಲಕ ಅಮೆರಿಕದ ವಸ್ತುಗಳು ಮತ್ತು ಸೇವೆಗಳ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿ ಅಮೆರಿಕ ಜೊತೆಗಿನ ೩೭೫ ಬಿಲಿಯನ್ (೩೭೫೦೦ ಕೋಟಿ) ಅಮೆರಿಕನ್ ಡಾಲರ್ ವಹಿವಾಟು ಕೊರತೆಯನ್ನು ಕಡಿಮೆಗೊಳಿಸಲು ಚೀನಾ ಒಪ್ಪಿತ್ತು.   ಆಮದು ಉಕ್ಕಿನ ಮೇಲೆ ಶೇಕಡಾ ೨೫ರಷ್ಟು ಮತ್ತು ಅಲ್ಯೂಮಿನಿಯಂ ಮೇಲೆ ಶೇಕಡಾ ೧೫ರಷ್ಟು ಸುಂಕ ಹೇರಿಕೆಯಿಂದ ಅಮೆರಿಕದ ಉನ್ನತ ವಾಣಿಜ್ಯ ಪಾಲುದಾರರು ಭ್ರಮನಿರಸನಗೊಂಡಿದ್ದರು. ವಹಿವಾಟು ವಿವಾದಗಳನ್ನು ಪರಿಹರಿಸಲು ಇರುವ ಅತ್ಯುತ್ತಮ ಮಾರ್ಗವೆಂದರೆ ಸುಂಕ ಇಳಿಕೆ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬರಲು ಅವಕಾಶ ನೀಡುವುದು ಎಂದು ಅಮೆರಿಕ ಹೇಳಿತು. ಟ್ರಂಪ್ ಆಡಳಿತ ಬಂದ ಬಳಿಕ ಭಾರತ ಮತ್ತು ಅಮೆರಿಕ ನಡುವಣ ವಹಿವಾಟು ಜಗಳ ಹೆಚ್ಚಿದೆ. ಇದಕ್ಕೆ ಸುಂಕಗಳನ್ನು ಇಳಿಸಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ತನ್ನಿ ಎಂದು ಟ್ರಂಪ್ ಆಡಳಿತ ಭಾರತಕ್ಕೆ ಸೂಚಿಸುತ್ತಿರುವುದು ಮುಖ್ಯ ಕಾರಣ.


2009: ತಿರುಪತಿ ತಿಮ್ಮಪ್ಪನಿಗೆ ಬಳ್ಳಾರಿ ಗಣಿ ಧಣಿಗಳು 45 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸುವ ಮೂಲಕ ಅತ್ಯಂತ ದುಬಾರಿ ಹರಕೆಯನ್ನು ತೀರಿಸಿ ಕೊಂಡರು. ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲೆಯಲ್ಲಿ ಈದಿನ ಸಂಜೆ ಈ ಬೆಲೆ ಬಾಳುವ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಲಾಯಿತು. ಪ್ರವಾಸೋದ್ಯಮ  ಸಚಿವ ಜಿ. ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕ ಟಿ.ಎಚ್. ಸುರೇಶ ಬಾಬು ಮತ್ತು ಅವರ ಕುಟುಂಬ ವರ್ಗದವರು ಹಾಜರಿದ್ದರು. ವಜ್ರ ಖಚಿತ ಕಿರೀಟವವನ್ನು ಇಡಲಾದ ಪಲ್ಲಕ್ಕಿಗೆ ಹೆಗಲು ಕೊಟ್ಟು ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದ ಗಣಿ ಧಣಿಗಳು 1 ವರ್ಷದ ಹಿಂದಿನ ಹರಕೆಯನ್ನು ಈಡೇರಿಸಿಕೊಂಡರು. ಈ ವಿಶೇಷ ಕಿರೀಟವನ್ನು ಕೊಯಮತ್ತೂರಿನಲ್ಲಿ ತಯಾರಿಸಲಾಗಿದ್ದು ಅದನ್ನು ಸಿದ್ಧಪಡಿಸಲು 9 ತಿಂಗಳು ಬೇಕಾಯಿತು.

2009: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿ ಆಕೆಯ ಪತಿಯ ಸಾವಿಗೆ ಕಾರಣಕರ್ತರಾಗುವ ವ್ಯಕ್ತಿಗಳು ಶಿಕ್ಷಾರ್ಹರು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿ ಮುಕುಂದಕಮ್ ಶರ್ಮಾ ಮತ್ತು ನ್ಯಾಯಮೂರ್ತಿ ಬಿ.ಎಸ್.ಚವಾಣ್ ನೇತೃತ್ವದ ರಜಾಕಾಲದ ಪೀಠವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುವ ಮೂಲಕ ಅಕ್ರಮ ಸಂಬಂಧಗಳ ಮೂಲಕ ಅನಾಹುತಗಳ ಸೃಷ್ಟಿಗೆ ಕಾರಣವಾಗುವ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸುವುದು ಸರಿ ಎಂಬ ತೀರ್ಮಾನವನ್ನು ಪ್ರಕಟಿಸಿತು. ಗುಂಟೂರಿನ ನಿವಾಸಿ ದಮ್ಮು ಸ್ರೀನು ಎಂಬಾತ ತನ್ನ ನೆರೆಮನೆಯ ನಿವಾಸಿ ಬಿತ್ರಾ ನಾಗಾರ್ಜುನ ರಾವ್ ಎಂಬುವರ ಹೆಂಡತಿಯೊಂದಿಗೆ ಅಕ್ರಮ  ಸಂಬಂಧ ಹೊಂದಿದ್ದ. ಈ ಸಂಬಂಧದ ವಾಸನೆ ಬಡಿಯುತ್ತಿದ್ದಂತೆಯೇ ರಾವ್ ತಮ್ಮ ಪತ್ನಿಯನ್ನು ಪ್ರಶ್ನಿಸಿದರು. ಆಗ ದಂಪತಿ ನಡುವೆ ದೊಡ್ಡ ಜಗಳವೇ ನಡೆಯಿತು. ಕೂಡಲೇ ರಾವ್ ಆಕೆಯ ತಂದೆ (ಮಾವ)ಯನ್ನು ಕರೆಸಿ ಬುದ್ಧಿ ಹೇಳಿಸಿದರು. ಏತನ್ಮಧ್ಯೆ 1996ರ ಜನವರಿ 1ರಂದು ಸ್ರೀನು, ರಾವ್ ಮನೆಗೆ ಬಂದು ಅವರ ಪತ್ನಿಯೊಂದಿಗೆ ತಾನು ಅಕ್ರಮ ಸಂಬಂಧ ಹೊಂದಿರುವುದನ್ನು ಘಂಟಾಘೋಷವಾಗಿ ಸಾರಿದ. ನಿಮ್ಮ ಹೆಂಡತಿ ಸ್ವತಃ ನನ್ನನ್ನು ತೊರೆಯದ ಹೊರತು ನಾನು ಈ ಸಂಬಂಧವನ್ನು ಮುರಿಯುವುದಿಲ್ಲ ಎಂದೂ ದಾರ್ಷ್ಟ್ಯ ಮೆರೆದ. ತಮ್ಮ ಪತ್ನಿ ಅಕ್ರಮ ಸಂಬಂಧ ಹೊಂದಿರುವುದು ಖಾತ್ರಿಯಾದ ಬಳಿಕ ರಾವ್ ಅವಮಾನ, ತೊಳಲಾಟಗಳಲ್ಲಿ ಜೀವನ ಕಳೆಯುವುದಕ್ಕಿಂತಲೂ ಸಾಯುವುದೇ ಲೇಸು ಎಂಬ ತೀರ್ಮಾನಕ್ಕೆ ತಾವು ಬಂದಿರುವುದಾಗಿ ತಿಳಿಸಿ 1996 ಜನವರಿ 8ರಂದು ಆತ್ಮಹತ್ಯೆ ಮಾಡಿಕೊಂಡರು. ರಾವ್ ಆತ್ಮಹತ್ಯೆ ಸಂಬಂಧ ಪೊಲೀಸರು ರಾವ್ ಅವರ ಪತ್ನಿ ಮತ್ತು ಸ್ರೀನು ಇಬ್ಬರನ್ನೂ ಬಂಧಿಸಿದರು. ವಿಚಾರಣೆ ನಡೆಸಿದ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಇಬ್ಬರೂ ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಸೆಷನ್ಸ್ ಕೋರ್ಟ್‌ನಲ್ಲಿ ಈ ಶಿಕ್ಷೆ ಐದರಿಂದ ಮೂರು ವರ್ಷಕ್ಕೆ ಇಳಿಯಿತು. ನಂತರ ಪ್ರಕರಣವು ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿತು. ಅಲ್ಲಿ ರಾವ್ ಅವರ ಪತ್ನಿಯ ಶಿಕ್ಷೆಯನ್ನು ಒಂದು ವರ್ಷಕ್ಕೂ ಹಾಗೂ ಸ್ರೀನು ಶಿಕ್ಷೆಯನ್ನು ಮೂರು ವರ್ಷಕ್ಕೂ ಇಳಿಸಲಾಯಿತು. ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಹೈಕೋರ್ಟ್‌ನ ಈ ತೀರ್ಪನ್ನು ಎತ್ತಿಹಿಡಿಯಿತು.

2009: ಸಯನೈಡ್ ಧರಿಸುವಂತೆ ತನ್ನ ಸಹಚರರೆಲ್ಲರಿಗೂ ಕಟ್ಟಾಜ್ಞೆ ಮಾಡಿದ್ದ ಎಲ್‌ಟಿಟಿಇ ನಾಯಕ ಪ್ರಭಾಕರನ್, ತಾನು  ರಕ್ಷಣಾಪಡೆಯವರಿಗೆ ಸೆರೆಸಿಕ್ಕಾಗ ಸಯನೈಡ್ ಇರಿಸಿಕೊಂಡಿರಲಿಲ್ಲ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ತಿಳಿಸಿದವು. ಎಲ್‌ಟಿಟಿಇ-ಲಂಕಾಪಡೆಗಳ ನಡುವೆ ನಡೆದ ಅಂತಿಮ ಕಾಳಗದಲ್ಲಿ ಪ್ರಭಾಕರನ್ ಹಾಗೂ ಆತನ ಸಹಚರರನ್ನು ಕೊಂದ ನಂತರ ಬಹುತೇಕ ಉಗ್ರರಿಂದ ಸಯನೈಡ್ ವಶಪಡಿಸಿಕೊಳ್ಳಲಾಯಿತು. ಆದರೆ ಪ್ರಭಾಕರನ್ ಬಳಿ ಸಯನೈಡ್ ಇರಲಿಲ್ಲ ಎಂದು ಮೂಲಗಳ ಉನ್ನತ ಮೂಲಗಳು ಬಹಿರಂಗ ಪಡಿಸಿದವು. ಕುತೂಹಲದ ವಿಷಯವೆಂದರೆ ಪ್ರಭಾಕರನ್ ಜೇಬಿನಲ್ಲಿ ಐಡೆಂಟಿಟಿ ಕಾರ್ಟ್ ಮತ್ತು ಇನ್ನಿತರೆ ಗುರುತಿನ ವಸ್ತುಗಳು ಪತ್ತೆಯಾದವು., ರಕ್ಷಣಾ ಪಡೆಗಳು ಅವನ್ನು ವಶಕ್ಕೆ ತೆಗೆದುಕೊಂಡವು. ಪ್ರಭಾಕರನ್ ಸಾಮಾನ್ಯವಾಗಿ ತನ್ನ ಕುತ್ತಿಗೆಯ ದಾರಕ್ಕೆ ಸಯನೈಡ್ ಕ್ಯಾಪ್ಸೂಲ್ ಅನ್ನು ಸಿಕ್ಕಿಸಿಕೊಂಡಿರುತ್ತಿದ್ದ. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾಗ ಕೂಡ ಪ್ರಭಾಕರನ್ ಬಳಿ ಸಯನೈಡ್ ಇತ್ತು. ರಾಜೀವ್ ಭೇಟಿಗೆ ಮುನ್ನ ಸಯನೈಡ್ ತೆಗೆದಿಡುವಂತೆ ರಕ್ಷಣಾ ತಂಡದವರು ಒತ್ತಾಯಿಸಿದರೂ ಅವರು ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

2009: ನೀವು ತಡ ರಾತ್ರಿವರೆಗೂ ನಿದ್ದೆಗೆಟ್ಟು ಕೆಲಸ ಮಾಡುತ್ತೀರಾ ? ನಿಮಗೆ  'ನಿದ್ರಾದೇವಿ' ಆವರಿಸಿಕೊಳ್ಳುವುದಕ್ಕೆ ಮೀನಾ-ಮೇಷ ಎಣಿಸುತ್ತಿದ್ದಾಳೆಯೇ? ಹಾಸಿಗೆಯಲ್ಲಿ ಎಷ್ಟು ಹೊರಳಾಡಿದರೂ ನಿದ್ರೆ ಬರುವುದಿಲ್ಲವೇ ? ನೀವು ನಿದ್ರಿಸುವ ಸಮಯ ಕಡಿಮೆಯೇ ...? ಇದಕ್ಕೆಲ್ಲ ನೀವು 'ಹೌದಪ್ಪ ಹೌದು' ಅಂತ ಗೋಣು ಹಾಕುವುದಾದರೆ, ಖಂಡಿತವಾಗಿಯೂ ನೀವು ಸಾವಿನ ಅಪಾಯವನ್ನು ತಂದುಕೊಳ್ಳುತ್ತ್ದಿದೀರಿ ಎಂದು ಅರ್ಥ ! ನಿಜ, ಕಳೆದ ಎಂಟು ವರ್ಷಗಳಿಂದ ನಡೆಸಿರುವ ಅಧ್ಯಯನದ ಪ್ರಕಾರ ನಿದ್ರಾ ಹೀನತೆಯಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗಿದೆ. ಅಧ್ಯಯನದಲ್ಲಿ ಭಾಗವಹಿಸಿದ 5,614 ಮಂದಿಯಲ್ಲಿ 854 ಮಂದಿ ನಿದ್ರಾ ಸಮಸ್ಯೆಯಿಂದಲೇ ಮೃತಪಟ್ಟಿದ್ದಾರೆ. ಜೊತೆಗೆ ಹೃದಯ ಕಾಯಿಲೆಗಳು ವೃದ್ಧಿಸುತ್ತವೆ ಎಂಬ ವಿಚಾರವೂ ಬೆಳಕಿಗೆ ಬಂದಿತು. ಕ್ಯಾಲಿಫೋರ್ನಿಯಾ ಪೆಸಿಫಿಕ್ ಮೆಡಿಕಲ್ ಸೆಂಟರಿನ ಹಿರಿಯ ಲೇಖಕ ಅಲಿಸನ್ ಲಫಾನ್ ಪ್ರಕಾರ 'ನಿದ್ರಾ ಸಮಸ್ಯೆ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. ಅಲ್ಲದೇ ಸಾವಿನ ಅಪಾಯವನ್ನು ತಂದೊಡ್ಡುತ್ತದೆ ಎಂದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ.  ಹಾಗಾಗಿ ಜನರು  ಪ್ರತಿ ದಿನ ಒಂದೇ ಸಮಯದಲ್ಲಿ ಮಲಗಿ-ಏಳುವುದನ್ನು ಹಾಗೂ ನಿದ್ರಾ ಸಮಯವನ್ನು ಸ್ಥಿರಗೊಳಿಸಿಕೊಳ್ಳಬೇಕು. ನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು' ಎಂಬುದು ಲಫಾನ್ ಸಲಹೆ.

2009: ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಮ್ ಅವರನ್ನು ಉತ್ತರ ಐರ್ಲೆಂಡಿನ ಬೆಲ್‌ಪಾಸ್ಟ್‌ನಲ್ಲಿರುವ ಪ್ರತಿಷ್ಠಿತ ಕ್ವೀನ್ಸ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ವಿಶ್ವವಿದ್ಯಾನಿಲಯದ ಉಪಕುಲಪತಿ ಪೀಟರ್ ಗ್ರೆಗ್ಸನ್ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ 'ಕಲಾಮ್  ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಗುರುತಿಸಿ ಗೌರವಿಸಲಾಗುತ್ತಿದೆ' ಎಂದು ಹೇಳಿದರು.

2009: ಮಾನವನ ಉದ್ದೇಶಗಳನ್ನು ಗ್ರಹಿಸಿ ಅದನ್ನು ಕಾರ್ಯರೂಪಕ್ಕೆ ಇಳಿಸಬಲ್ಲ ರೋಬೋಟನ್ನು ಸೃಷ್ಟಿಸಿರುವುದಾಗಿ ಯೂರೋಪಿನ ವಿಜ್ಞಾನಿಗಳು ಪ್ರಕಟಿಸಿದರು. ಐರೋಪ್ಯ ಒಕ್ಕೂಟದಿಂದ ಹಣಕಾಸು ನೆರವು ಪಡೆದ ಈ ಯೋಜನೆ ಮನುಷ್ಯ ಮತ್ತು ರೋಬೋಟ್ ತಮ್ಮ ಕೆಲಸದಲ್ಲಿ ಪರಸ್ಪರ ಸಹಕರಿಸುವಂತೆ ಮಾಡುವುದು ಮತ್ತು ರೋಬೋಟ್ ಮುಂದೇನು ಮಾಡಬೇಕು ಎಂಬ ಆದೇಶಕ್ಕೆ ಕಾಯುತ್ತಾ ಕುಳಿತುಕೊಳ್ಳದೆ, ಮಾಲೀಕನ ನಡವಳಿಕೆಯನ್ನು ಗ್ರಹಿಸುವುದರಿಂದಲೇ ಆತನಿಗೆ ಅಗತ್ಯವಾದ ಕಾರ್ಯದಲ್ಲಿ ತನ್ನಷ್ಟಕ್ಕೆ ತಾನು ಮಗ್ನವಾಗುವಂತೆ ಮಾಡುವ ಗುರಿಯನ್ನು ಹೊಂದಿತ್ತು. ಜೊತೆಗೆ ಈ ರೋಬೋಟುಗಳನ್ನು ನೌಕರರಿಗಿಂತ ಹೆಚ್ಚಾಗಿ ಒಡನಾಡಿಯಂತೆ ರೂಪಿಸುವುದರತ್ತ ಸಂಶೋಧಕರು ಗಮನ ಕೇಂದ್ರೀಕರಿಸಿದ್ದರು. 'ನಮ್ಮ ರೋಬೋಟ್‌ಗಳು ಕೆಲಸವನ್ನು ಹೊಸದಾಗಿ ಕಲಿಯುವುದಿಲ್ಲ. ಅದಾಗಲೇ ಕೆಲಸ ಅರಿತಿರುವ ಅವು ಮನುಷ್ಯರ ನಡವಳಿಕೆಯನ್ನು ಪರಿಶೀಲಿಸುತ್ತವೆ. ಅವರ ಕ್ರಿಯೆಗಾಗಿ ಎದುರು ನೋಡುವುದನ್ನು ಶೀಘ್ರ ಕಲಿಯುತ್ತವೆ ಅಥವಾ ಆವರು ಸರಿಯಾದ ಕ್ರಮ ಪಾಲಿಸದಿದ್ದಾಗ ತಪ್ಪನ್ನು ಎತ್ತಿ ತೋರಿಸುತ್ತವೆ' ಎಂದು ಯೋಜನೆಯ ಸಂಶೋಧಕರಲ್ಲಿ ಒಬ್ಬರಾದ ಪೋರ್ಚುಗಲ್‌ನ ಮಿನ್ಹೊ ವಿಶ್ವವಿದ್ಯಾನಿಲಯದ ವೋಲ್‌ಫ್ರಾಮ್ ಅರ್ಲ್‌ಹೇಗನ್ ಮಾಹಿತಿ ನೀಡಿದರು. ಒಂದು ವೇಳೆ ತನ್ನ ಮಾಲೀಕನ ಉದ್ದೇಶಗಳನ್ನು ರೋಬೋಟ್ ತಪ್ಪಾಗಿ ಗ್ರಹಿಸಿರುವ ಶಂಕೆ ಬಂದರೆ ಆ ಬಗ್ಗೆ ಸ್ಪಷ್ಟನೆ ಕೇಳುವ ಯಂತ್ರವೊಂದನ್ನು ಸಹ ಇದೇ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

2009: ವೇಗದ ರಾಜ ಉಸೇನ್ ಬೋಲ್ಟ್ ಅವರು 2009ರ ಪ್ರತಿಷ್ಠಿತ ಲಾರೆಸ್ ವಿಶ್ವದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ಪಡೆದರು. 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ 22 ವರ್ಷ ವಯಸ್ಸಿನ ಬೋಲ್ಟ್ 100, 200 ಹಾಗೂ 4್ಡ100 ಮೀಟರ್ ರಿಲೆ ಓಟದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು. ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಜಮೈಕಾದ ಸ್ಪ್ರಿಂಟರ್ ಬೋಲ್ಟ್ ಅವರು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅಕಾಡೆಮಿಯ ಚೇರ್‌ಮನ್ ಎಡ್ವಿನ್ ಮೋಸಸ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

2009: ಕೇರಳದ ಮೂರು ಜಲವಿದ್ಯುತ್ ಯೋಜನೆಗಳ ನವೀಕರಣಕ್ಕಾಗಿ ಕೆನಡಾದ ಕಂಪೆನಿಯೊಂದಕ್ಕೆ 300 ಕೋಟಿ ರೂಪಾಯಿ ಕಾಮಗಾರಿಯ ಗುತ್ತಿಗೆಯನ್ನು ನೀಡುವಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಮತ್ತು ಇತರ ಎಂಟು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. 1998ರಲ್ಲಿ ವಿದ್ಯುತ್ ಸಚಿವರಾಗಿದ್ದ ವಿಜಯನ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ), ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 13 (1) ಮತ್ತು 13(2) ಸೆಕ್ಷನ್ ನಂತೆ ಆರೋಪಪಟ್ಟಿ ಸಲ್ಲಿಸಲಾಯಿತು.

2008: ಕೊಳದ ಮಠ ಸಂಸ್ಥಾನ ನೀಡುವ ಪ್ರತಿಷ್ಠಿತ `ಅಲ್ಲಮಶ್ರೀ' ಪ್ರಶಸ್ತಿಗೆ ಈ ಬಾರಿ ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಆಯ್ಕೆ ಆಗಿದ್ದಾರೆ ಎಂದು ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿ 77 ಮಂದಿ ಜೀವಂತ ಸಮಾಧಿಯಾದರು. ದೇಶಾದ್ಯಂತ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಈ ದುರಂತ ಸಂಭವಿಸಿತು. ಮೃತರಲ್ಲಿ 12 ಮಂದಿ ಬಾಲಕರು.

2007: ಅಮೆರಿಕದ ನಾಸಾ ಕಳುಹಿಸಿದ `ರೋವರ್' ಬಾಹ್ಯಾಕಾಶ ಶೋಧ ನೌಕೆಯು ತೆಗೆದಿರುವ ಮಂಗಳ ಗ್ರಹದ ಚಿತ್ರಗಳಲ್ಲಿ `ನೀರಿನ ಹೊಂಡಗಳು' ಪತ್ತೆಯಾಗಿರುವುದಾಗಿ ವಿಜ್ಞಾನಿಗಳು ಬಹಿರಂಗಪಡಿಸಿದರು. ಎರಡು ವರ್ಷಗಳ ಹಿಂದೆ ಈ ಹೊಂಡಗಳಲ್ಲಿ ನೀರು ಇತ್ತು ಎಂಬುದು ಅವರ ಹೇಳಿಕೆ.

2007: ಮಣಿಕಟ್ಟಿನ ಗಾಯಗಳು ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಾಗಿ ಮಾಡಿಕೊಂಡದ್ದಲ್ಲ ಎಂದು ಮಾಜಿ ಕ್ರಿಕೆಟಿಗ ಮಣಿಂದರ್ ಸಿಂಗ್ ಪೊಲೀಸರಿಗೆ ಸ್ಪಷ್ಟ ಪಡಿಸಿದರು.

2006: ನೇಪಾಳದ ದೊರೆ ಜ್ಞಾನೇಂದ್ರ ಅವರಿಗೆ ಇದ್ದ ವ್ಹೀಟೊ ಚಲಾವಣೆ ಅಧಿಕಾರ ಮೊಟಕುಗೊಳಿಸುವ ಕಾನೂನನ್ನು ನೇಪಾಳಿ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತು.

2005: ಮಾಜಿ ಪೋರ್ಚುಗೀಸ್ ಪ್ರಧಾನಿ ಜನರಲ್ ವಾಸ್ಕೊ ಗೋನ್ಸಾಲ್ವೆಸ್ (83) ನಿಧನರಾದರು. 1974ರಲ್ಲಿ ನಡೆದ ಎಡಪಂಥೀಯ ಕ್ರಾಂತಿಯ ಬಳಿಕ ನಾಲ್ಕು ಪ್ರಾಂತೀಯ ಸರ್ಕಾರಗಳ ನೇತೃತ್ವವನ್ನು ಅವರು ವಹಿಸಿದ್ದರು.

2001: ಓಕ್ಲಾಹಾಮಾ ಬಾಂಬರ್ ತಿಮೋತಿ ಮೆಕ್ ವೀಗ್ ನನ್ನು ವಿಷದ ಇಂಜೆಕ್ಷನ್ ನೀಡಿ ಮರಣದಂಡನೆಗೆ ಗುರಿಪಡಿಸಲಾಯಿತು. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಯುವವರೆಗೆ 168 ಜನರನ್ನು ಬಲಿ ತೆಗೆದುಕೊಂಡ ಓಕ್ಲಾಹಾಮಾ ಬಾಂಬ್ ದಾಳಿ ಘಟನೆಯನ್ನೇ ಅಮೆರಿಕ ನೆಲದಲ್ಲಿ ನಡೆದ ಅತಿ ಭೀಕರ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿತ್ತು.

2000: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ರಾಜೇಶ್ ಪೈಲಟ್ ನಿಧನರಾದರು.

1999: ಭಾರತೀಯ ಸೇನೆಯು ಕಾರ್ಗಿಲ್ ಪ್ರದೇಶದಲ್ಲಿ ಒಳನುಸುಳುತ್ತಿದ್ದ 23 ಜನರನ್ನು ಕೊಂದು ಹಾಕಿತು.

1996: ಜೆ.ಎಂ.ಎಂ. ಹಗರಣದ ಹೊಸ ತನಿಖಾ ವರದಿಯ ಪ್ರಕಾರ ನರಸಿಂಹರಾವ್ ಅವರ ಹೆಸರು ಪ್ರಕರಣದಲ್ಲಿ ಸೇರ್ಪಡೆಯಾಯಿತು.

1987: ಇಂಗ್ಲೆಂಡಿನ 160 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿಗೆ ಸತತವಾಗಿ ಗೆದ್ದ ಮೊದಲ ಬ್ರಿಟಿಷ್ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮಾರ್ಗರೆಟ್ ಥ್ಯಾಚರ್ ಪಾತ್ರರಾದರು.

1983: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿಯಾಗಿದ್ದ ಘನಶ್ಯಾಮದಾಸ್ ಬಿರ್ಲಾ ತಮ್ಮ 89ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಮೃತರಾದರು.

1970: ರಷ್ಯದ ರಾಜಕೀಯ ನಾಯಕ ಅಲೆಗ್ಸಾಂಡರ್ ಕೆರೆನ್ ಸ್ಕಿ ನ್ಯೂಯಾರ್ಕ್ ನಗರದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ಮೃತರಾದರು. 1917ರಲ್ಲಿ ಬೋಲ್ಷೆವಿಕ್ ಗಳು ಅವರನ್ನು ಧುರೀಣತ್ವದಿಂದ ಪದಚ್ಯುತಿಗೊಳಿಸಿದ್ದರು.

1964: ಪಂಡಿತ್ ಜವಾಹರಲಾಲ್ ನೆಹರೂ ಅವರ ಚಿತಾಭಸ್ಮವನ್ನು ಅವರ ಆಶಯದಂತೆ ದೇಶದಾದ್ಯಂತ ಚೆಲ್ಲಲಾಯಿತು.

1932: ಹಿಂದುಸ್ಥಾನಿ ಸಂಗೀತಗಾರ ಸುರೇಂದ್ರ ಸಾ ನಾಕೋಡ್ ಅವರು ವೆಂಕೂ ಸಾ ನಾಕೋಡ್- ನಾಗೂಬಾಯಿ ದಂಪತಿಯ ಮಗನಾಗಿ ಗದಗ ಬೆಟಗೇರಿಯಲ್ಲಿ ಜನಿಸಿದರು.

1907: ಖ್ಯಾತ ಹಿಂದಿ ಕವಿ ಶಾಂತಿಲಾಲ್ ಜೀವನಲಾಲ್ ಜನನ.

1903: ಸರ್ಬಿಯಾದ ದೊರೆ ಮೊದಲನೆಯ ಅಲೆಗ್ಸಾಂಡರ್ ಮತ್ತು ರಾಣಿ ಡ್ರ್ಯಾಗಾ ಅವರನು ದಂಗೆಯೊಂದರಲ್ಲಿ ಹತ್ಯೆಗೈಯಲಾಯಿತು.

1847: ಆರ್ಕ್ಟಿಕ್ ನ್ನು ಕಂಡು ಹಿಡಿದ ಸರ್ ಜಾನ್ ಫ್ರಾಂಕ್ಲಿನ್ ಅಮೆರಿಕ ಖಂಡದ ಉತ್ತರ ಭಾಗದಲ್ಲಿ ಪೂರ್ವದ ಕಡೆಗೆ ವಾಯುವ್ಯ ಕಣಿವೆ ಮಾರ್ಗ ಕಂಡು ಹಿಡಿಯುವ ಯತ್ನದಲ್ಲಿದ್ದಾಗ ಅಸುನೀಗಿದ.


(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment