Thursday, June 27, 2019

ಇಂದಿನ ಇತಿಹಾಸ History Today ಜೂನ್ 27

ಇಂದಿನ ಇತಿಹಾಸ History Today  ಜೂನ್  27
2019: ಕೊಬೆ (ಜಪಾನ್): ಕಾರುಗಳ ನಿರ್ಮಾಣದಿಂದ ಹಿಡಿದು ಬುಲೆಟ್ ಟ್ರೇನುಗಳ ನಿರ್ಮಾಣದವರೆಗೂ ಭಾರತ ಮತ್ತು ಜಪಾನ್ ಈಗ ಪರಸ್ಪರ ಸಹಕರಿಸುತ್ತಿವೆ ಎಂದು ಇಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಜಪಾನ್ ದೇಶವು ದಶಕಗಳಿಂದ ಭಾರತದ ಅಭಿವೃದ್ಧಿಯ ಪಾಲುದಾರನಾಗಿದೆ ಎಂದು ನುಡಿದ ಅವರು ಭಾರತದ ಜೊತೆಗಿನ ಜಪಾನಿನ ಪ್ರಬಲ ಮೈತ್ರಿಯ ಎಳೆಗಳನ್ನು ನೆನಪಿಸಿಕೊಂಡರು. ಜಪಾನಿಗೆ ನೀಡಿದ ತಮ್ಮ ನಾಲ್ಕನೇ ಭೇಟಿಯ ಕಾಲದಲ್ಲಿ ರಾಷ್ಟ್ರವು ತಮ್ಮ ಮೇಲೆ ಮಳೆಗರೆದ ವಾತ್ಸಲ್ಯವನ್ನು ಕೊಬೆಯ ಹ್ಯೋಗೋ ಪ್ರಿಫೆಕ್ಚರ್ ಅತಿಥಿ ಗೃಹದಲ್ಲಿ ನೆನಪು ಮಾಡಿಕೊಂಡ ಪ್ರಧಾನಿ, ಜಪಾನ್ ಪ್ರಧಾನಿ ಶಿಂಝೋ ಅಬೆ ಅವರ ವಾರಾಣಸಿ ಭೇಟಿಯನ್ನು ಸ್ಮರಿಸಿದರು.  ಪ್ರಧಾನಿ ಮೋದಿ ಅವರು ಜಿ- ೨೦ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದಾರೆ. ಒಸಾಕದಲ್ಲಿ ಜೂನ್ ೨೮-೨೯ರಂದು ನಡೆಯಲಿರುವ ಎರಡು ದಿನಗಳ ಜಿ-೨೦ ಶೃಂಗಸಭೆಯು ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಲಿರುವ ೬ನೇ ಜಿ-೨೦ ಶೃಂಗಸಭೆಯಾಗಲಿದ್ದು, ಅವಧಿಯಲ್ಲಿ ಮೋದಿಯವರು ಮಹತ್ವದ ಬಹುರಾಷ್ಟ್ರೀಯ ಸಭೆಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ವಿವಿಧ ನಾಯಕರನ್ನು ಭೇಟಿ ಮಾಡಲಿದ್ದಾರೆ. ‘ದೆಹಲಿ ಮತ್ತು ಅಹ್ಮದಾಬಾದ್ ಹೊರತಾಗಿ, ಪ್ರಧಾನಿ ಅಬೆ ಅವರನ್ನು ವಾರಾಣಸಿಗೂ ಕರೆದೊಯ್ಯುವ ಅವಕಾಶ ನನಗೆ ಲಭಿಸಿತ್ತು. ಅವರು ನನ್ನ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಮತ್ತು ಅಲ್ಲಿ ಗಂಗಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನನ್ನ ಜೊತೆ ಮಾತನಾಡುವ ಅವಕಾಶ ಲಭಿಸಿದಾಗಲೆಲ್ಲ ಅವರು ದೈವಿಕ ಅನುಭವದ ಬಗ್ಗೆ ಮಾತನಾಡುತ್ತಾರೆ ಎಂದು ಮೋದಿ ಜಪಾನಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.  ‘೨೦೧೪ರಲ್ಲಿ ಪ್ರಧಾನಿಯಾದ ಬಳಿಕ, ನನಗೆ ಭಾರತ- ಜಪಾನ್ ಮೈತ್ರಿಯನ್ನು ಬಲಪಡಿಸುವ ಅವಕಾಶ ಲಭಿಸಿತು. ಇದರ ಜೊತೆಗೇ ಪ್ರಧಾನಿ ಶಿಂಝೋ ಅಬೆ ಅವರ ಗೆಳೆತನದ ಅವಕಾಶವೂ ದೊರಕಿತು. ನಾವು ನಮ್ಮ ರಾಜತಾಂತ್ರಿಕ ಬಾಂಧವ್ಯವಗಳನ್ನು ರಾಜಧಾನಿಗಳು ಮತ್ತು ರಾಯಭಾರಿಗಳ ವ್ಯಾಪ್ತಿಯಿಂದ ಆಚೆಗೆ ವಿಸ್ತಿರಿಸಿದೆವು ಮತ್ತು ಅವುಗಳನ್ನು ನೇರವಾಗಿ ಜನರ ಮಧ್ಯಕ್ಕೆ ಒಯ್ದೆವು ಎಂದು ಪ್ರಧಾನಿ ಹೇಳಿದರು.  ‘ನಾವು ಚಂದ್ರಯಾನ ಸಾಹಸಕ್ಕೆ ಸಜ್ಜಾಗಿದ್ದೇವೆ ಮತ್ತು ಚೊಚ್ಚಲ ಮಾನವ ಸಹಿತ ಗಗನಯಾನಕ್ಕೆ ಸಿದ್ಧರಾಗುತ್ತಿದ್ದೇವೆ. ಬಾಹ್ಯಾಕಾಶ ತಂತ್ರಜ್ಞಾನದ ಅನ್ವೇಷಣೆಯನ್ನು ಭಾರತ ಈಗ ಗಂಭೀರವಾಗಿ ಪರಿಗಣಿಸಿದೆ ಎಂದು ಮೋದಿ ನುಡಿದರು.  ‘ಸ್ವಾಮಿ ವಿವೇಕಾನಂದ, ಗುರುದೇವ ರವೀಂದ್ರನಾಥ ಟ್ಯಾಗೋರ್, ಮಹಾತ್ಮಾ ಗಾಂಧಿ, ನೇತಾಜಿ ಸುಭಾಶ್ ಚಂದ್ರ ಬೋಸ್, ನ್ಯಾಯಮೂರ್ತಿ ರಾಧಾ ಬಿನೋದ್ ಪಾಲ್ ಮತ್ತು ಹಲವಾರು ಭಾರತೀಯರು ಜಪಾನ್ ಜೊತೆಗಿನ ಭಾರತದ ಬಾಂಧವ್ಯವನ್ನು ಬಲ ಪಡಿಸಿದ್ದಾರೆ. ಕಾರಣದಿಂದಾಗಿಯೇ ದ್ವಿತೀಯ ಜಾಗತಿಕ ಸಮರದ ಕಾಲದಲ್ಲಿ ಉಭಯರ ನಡುವಣ ದ್ವಿಪಕ್ಷೀಯ ಬಾಂಧವ್ಯ ಹೆಚ್ಚು ಪ್ರಬಲವಾಗಿ ಬೆಳೆದಿತ್ತು ಎಂದು ಪ್ರಧಾನಿ ಹೇಳಿದರು. ಭಾರತದ ಆರ್ಥಿಕತೆಯು ಟ್ರಿಲಿಯನ್ (೫೦೦೦ ಕೋಟಿ) ಡಾಲರ್ ಮೊತ್ತದ ಗುರಿ ತಲುಪಲು ಜಪಾನ್ ನೆರವಾಗುತ್ತಿದೆ ಎಂದು ಪ್ರಧಾನಿ ಮೋದಿ ನುಡಿದರು.  ಭಾರತದ ಜನರು ನನ್ನ ಮೇಲೆ ಪುನಃ ವಿಶ್ವಾಸ ವ್ಯಕ್ತ ಪಡಿಸಿ ಇನ್ನಷ್ಟು ಜವಾಬ್ದಾರಿಯನ್ನು ಹೊರಿಸಿದ್ದಾರೆ ಎಂದು ನುಡಿದ ಪ್ರಧಾನಿ, ಒಡಿಶಾ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ ಬಗೆಯನ್ನು ಉಲ್ಲೇಖಿಸಿಫನಿ ಚಂಡಮಾರುತವನ್ನು ಭಾರತ ಎದುರಿಸಿದ ಬಗೆಯನ್ನು ಇಡೀ ವಿಶ್ವವೇ ಶ್ಲಾಘಿಸಿದೆ ಎಂದು ಹೇಳಿದರು.  ‘ನವಭಾರತದ ಕನಸು ಮತ್ತು ಆಶಯಗಳನ್ನು ಈಡೇರಿಸಲು ಜನತೆ ನೀಡಿರುವ ಆದೇಶವನ್ನು ಪಾಲಿಸಲು ಮತ್ತು ವಿದೇಶಗಳ ಜೊತೆಗಿನ ಸಂಬಂಧಗಳಿಗೆ ಹೊಸ ದಿಕ್ಕುಗಳನ್ನು ನೀಡುವ ನಿಟ್ಟಿನಲ್ಲಿ ನಾನು ಶ್ರಮಿಸುವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಂತ್ರದ ಮೂಲಕ ಭಾರತದ ಬಗ್ಗೆ ಇಡೀ ಜಗತ್ತಿನ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ ಎಂದು ಪ್ರಧಾನಿ ನುಡಿದರು. ೧೯೭೧ರ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರವು ಆಡಳಿತ ಪರ ಜನಾದೇಶವನ್ನು ಸರ್ಕಾರಕ್ಕೆ ಕೊಟ್ಟಿದೆ. ವಿಜಯಗಳು ಸತ್ಯದ ವಿಜಯಗಳಾಗಿವೆ, ಭಾರತದ ಪ್ರಜಾಪ್ರಭುತ್ವದ ವಿಜಯಗಳಾಗಿವೆ ಎಂದು ಮೋದಿ ಹೇಳಿದರು.
ಏಳು ತಿಂಗಳುಗಳ ಬಳಿಕ ಮತ್ತೊಮ್ಮೆ ಇಲ್ಲಿಗೆ ಬರುವ ಅದೃಷ್ಟ ನನಗೆ ಲಭಿಸಿದೆ. ಕಳೆದ ಬಾರಿ ನಾನು ಇಲ್ಲಿಗೆ ಬಂದಾಗ, ಇಲ್ಲಿನ ಚುನಾವಣಾ ಫಲಿತಾಂಶಗಳು ಬಂದಿದ್ದವು ಮತ್ತು ನೀವು ನನ್ನ ಆತ್ಮೀಯ ಗೆಳೆಯ ಶಿಂಝೋ ಅಬೆ ಅವರ ಮೇಲೆ ವಿಶ್ವಾಸ ವ್ಯಕ್ತ ಪಡಿಸಿದ್ದಿರಿ. ಈಗ ನಾನು ಇಲ್ಲಿಗೆ ಬಂದಿರುವಾಗ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವು ಪ್ರಧಾನ ಸೇವಕನ ಮೇಲೆ ಇನ್ನಷ್ಟು ದೊಡ್ಡ ವಿಶ್ವಾಸವನ್ನು ವ್ಯಕ್ತ ಪಡಿಸಿದೆ ಎಂದು ಮೋದಿ ನುಡಿದರು. ಕೊಬೆಯಲ್ಲಿ ಪ್ರಧಾನಿ ಮೋದಿಯವರು ಅಹ್ಮದಾಬಾದ್-ಕೊಬೆ ಸಹೋದರಿ ನಗರ ಪಾಲುದಾರಿಕೆ ಕುರಿತ ಪತ್ರ ವಿನಿಮಯಕ್ಕೂ ಸಾಕ್ಷಿಯಾದರು. ಒಸಾಕಕ್ಕೆ ಆಗಮಿಸುತ್ತಿದ್ದಂತೆಯೇಬೆಳ್ಳಂಬೆಳಗ್ಗೆಯೇ ಒಸಾಕಕ್ಕೆ ಆಗಮನ. ಜಿ-೨೦ ಶೃಂಗಸಭೆ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಂವಹನಗಳು ಕಾದಿವೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದರು

2019: ಮುಂಬೈ: ಮರಾಠಾ ಸಮುದಾಯಕ್ಕೆ ಸರ್ಕಾರಿ ಹುದ್ದೆಗಳು ಮತ್ತು ಶಿಕ್ಷಣದಲ್ಲಿ ನೀಡಲಾದ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿಯಿತು. ಆದರೆ ಶೇಕಡಾ ೧೬ ಮೀಸಲಾತಿ ಅಸಮರ್ಥನೀಯ ಎಂದು ಹೇಳಿ ಅದನ್ನು ಶೇಕಡಾ ೧೨-೧೩ಕ್ಕೆ ಇಳಿಸಿತು. ಮಹತ್ವದ ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ರಣ್ಜಿತ್ ಮೋರೆ ಮತ್ತು ಭಾರತಿ ಡಾಂಗ್ರೆ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ನಿರ್ಧಾರವನ್ನು ಎತ್ತಿ ಹಿಡಿದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಶಿಫಾರಸು ಮಾಡಿದಂತೆ ಮೀಸಲಾತಿ ಪ್ರಮಾಣವನ್ನು ಶೇಕಡಾ ೧೬ರಿಂದ ಶೇಕಡಾ ೧೨-೧೩ಕ್ಕೆ ಇಳಿಸಬೇಕು ಎಂದು ಹೇಳಿತು.  ‘ರಾಜ್ಯ ಸರ್ಕಾರ ಮತ್ತು ಶಾಸನಸಭೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ (ಎಸ್ಇಬಿಸಿ) ಪ್ರತ್ಯೇಕ ವರ್ಗವನ್ನು ಸೃಷ್ಟಿಸುವ ಮತ್ತು ಮೀಸಲಾತಿ ಮಂಜೂರು ಮಾಡುವ ಶಾಸನಬದ್ಧ ಅಧಿಕಾರವಿದೆ ಎಂದು ನಾವು ಘೋಷಿಸುತ್ತೇವೆ ಎಂದು ಪೀಠ ಹೇಳಿತು.  ‘ಏನಿದ್ದರೂ, ಶೇಕಡಾ ೧೬ರಷ್ಟು ಮೀಸಲಾತಿಯನ್ನು ಆಯೋಗವು ಶಿಫಾರಸು ಮಾಡಿರುವಂತೆ ಶೇಕಡಾ ೧೨ರಿಂದ ಶೇಕಡಾ ೧೩ರಷ್ಟಕ್ಕೆ ಇಳಿಸಬೇಕೆಂದು ನಾವು ಆದೇಶಿಸುತ್ತೇವೆ ಎಂದೂ ಪೀಠ ಹೇಳಿತು. ಮಹಾರಾಷ್ಟ್ರ ಸರ್ಕಾರವು ಮರಾಠಾ ಸಮುದಾಯಕ್ಕೆ ಸರ್ಕಾರಿ ಹುದ್ದೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ೧೬ರಷ್ಟು ಮೀಸಲಾತಿ ಮಂಜೂರು ಮಾಡಿದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು. ೨೦೧೮ರ ನವೆಂಬರ್ ೩೦ರಂದು ಮಹಾರಾಷ್ಟ್ರ ಶಾಸನಸಭೆಯು ಮರಾಠಾ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ಶೇಕಡ ೧೬ ಮೀಸಲಾತಿ ಮಂಜೂರು ಮಾಡಿ ನಿರ್ಣಯ ಅಂಗೀಕರಿಸಿತ್ತು ಮತ್ತು ಮರಾಠಾ ಸಮುದಾಯವನ್ನು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂಬುದಾಗಿ ರಾಜ್ಯ ಸರ್ಕಾರವು ಘೋಷಿಸಿತ್ತು. ರಾಜ್ಯದಲ್ಲಿ ಪ್ರಸ್ತುತ ಇರುವ ಒಟ್ಟಾರೆ ಶೇಕಡಾ ೫೨ರಷ್ಟು ಮೀಸಲಾತಿಗೆ ಮೀಸಲಾತಿಯು ಹೆಚ್ಚಳವಾಗಿ ಸೇರ್ಪಡೆಯಾಗುತ್ತದೆ. ಮರಾಠಾ ಸಮುದಾಯಕ್ಕೆ ಶೇಕಡಾ ೧೬ ಮೀಸಲಾತಿಯೊಂದಿಗೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇಕಡಾ ೬೮ಕ್ಕೆ ಹೆಚ್ಚಳವಾಗುವುದು ಎಂದು ನಿರೀಕ್ಷಿಸಲಾಗಿತ್ತು. ಮೀಸಲಾತಿಯನ್ನು ಪ್ರಶ್ನಿಸಿ, ಬಾಂಬೆ ಹೈಕೋರ್ಟಿನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇತರ ಕೆಲವು ಅರ್ಜಿಗಳನ್ನು ಮೀಸಲಾತಿಗೆ ಬೆಂಬಲವಾಗಿಯೂ ಸಲ್ಲಿಸಲಾಗಿತ್ತು. ಯಾವುದೇ ರಾಜ್ಯದ ಮೀಸಲಾತಿಯು ಶೇಕಡಾ ೫೦ನ್ನು ಮೀರುವಂತಿಲ್ಲ ಎಂಬುದಾಗಿ ವಿವಿಧ ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ಮೀಸಲಾತಿಯು ಉಲ್ಲಂಘಿಸುತ್ತದೆ ಎಂದು ಮರಾಠಾ ಮೀಸಲಾತಿ ಕೋಟಾ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಗಳು ಪ್ರತಿಪಾದಿಸಿದ್ದವು. ಸರ್ಕಾರವು ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಅವರಿಗೆ ಕಾಯಂ ಊರುಗೋಲು ನೀಡಿದಂತಾಗಿದೆ. ಇದನ್ನು ಸಮುದಾಯವು ಎಂದಿಗೂ ಬಿಟ್ಟು ಬಿಡಲು ಸಾಧ್ಯವಾಗುವುದಿಲ್ಲ ಎಂದೂ ಮೀಸಲಾತಿ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿದಾರರು ವಾದಿಸಿದ್ದರು. ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗ ಎಂಬ ವಿಶೇಷ ವರ್ಗವನ್ನು ಸೃಷ್ಟಿಸುವ ಮೂಲಕ ಸಮಾನತೆಯ ಪರಿಕಲ್ಪನೆಯನ್ನೇ ನಾಶ ಪಡಿಸಿದೆ ಎಂದೂ ಅರ್ಜಿದಾರರು ವಾದಿಸಿದ್ದರು.ಮಹಾರಾಷ್ಟ್ರ ರಾಜ್ಯ ಹಿಂದುಳಿದ ಆಯೋಗದ ವರದಿಯ ಪ್ರಕಾರ, ಮರಾಠರು ಮತ್ತು ಕುಣಬಿಗಳು ಒಂದೇ ಜಾತಿಯವರು, ಆದ್ದರಿಂದ ಅವರನ್ನು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿಸಬೇಕು ಎಂದೂ ಅರ್ಜಿದಾರರು ಪ್ರತಿಪಾದಿಸಿದ್ದರುತನ್ನ ನಿರ್ಧಾರವನ್ನು ಸಮರ್ಥಿಸಿದ್ದ ಸರ್ಕಾರ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಮರಾಠಾ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಕ್ರಮವು ಉಪಶಮನಗೊಳಿಸುತ್ತದೆ. ಇದು ದೀರ್ಘಕಾಲದಿಂದ ನಿರ್ಲಕ್ಷಿತವಾಗಿದ್ದ ಸಮಾಜವನ್ನು ಮೇಲಕ್ಕೆ ಎತ್ತುವ ಕ್ರಮ ಎಂದು ವಾದಿಸಿತ್ತು. ಫೆಬ್ರುವರಿ ೬ರಂದು, ನ್ಯಾಯಮೂರ್ತಿಗಳಾದ ರಣ್ಜಿತ್ ಮೋರೆ ಮತ್ತು ಭಾರತಿ ಡಾಂಗ್ರೆಸ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಎಲ್ಲ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿತ್ತು. ವರ್ಷ ಏಪ್ರಿಲ್ ತಿಂಗಳಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

2019: ಲಂಡನ್: ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ಪ್ರಯಾಣಿಕರ ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಲಂಡನ್ನಿನಲ್ಲಿ ತುರ್ತಾಗಿ ಇಳಿಸಿದ ಘಟನೆ ಘಟಿಸಿತು.
ಬಾಂಬ್ ಬೆದರಿಕೆಯ ಬಳಿಕ ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಬ್ರಿಟಿಷ್ ಯುದ್ಧ ವಿಮಾನಗಳ ಬೆಂಗಾವಲಿನೊಂದಿಗೆ ಲಂಡನ್ನಿನಲ್ಲಿ ಇಳಿಸಲಾಯಿತು ಎಂದು ಸುದ್ದಿ ಮೂಲಗಳು ತಿಳಿಸಿವೆ. ಏನಿದ್ದರೂ ಬಾಂಬ್ ಬೆದರಿಕೆಯು ಹುಸಿ ಬೆದರಿಕೆಯಾಗಿತ್ತು ಎಂದು ಏರ್ ಲೈನ್ ಅಧಿಕಾರಿಯೊಬ್ಬರು ಬಳಿಕ ತಿಳಿಸಿದರು. ಮುಂಬೈಯಿಂದ ಅಮೆರಿಕದ ನ್ಯೂಜೆರ್ಸಿಯ ನೆವರ್ಕ್ ನಗರಕ್ಕೆ ಹೊರಟಿದ್ದ ಏಐ ೧೯೧ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಹುಸಿ ದೂರವಾಣಿ ಕರೆ ಬಂದ ಬಳಿಕ ಮುಂಜಾಗರೂಕತಾ ಕ್ರಮವಾಗಿ ಲಂಡನ್ನಿನ ಸ್ಟಾನ್ಸ್ಟೆಡ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದರು. ವಿಮಾನಕ್ಕೆ ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಅಧಿಕಾರಿ ನುಡಿದರು. ಬಾಂಬ್ ಬೆದರಿಕೆಯ ಸುದ್ದಿ ಬರುತ್ತಿದ್ದಂತೆಯೇ ಬ್ರಿಟನ್ ತನ್ನ ಟೈಫೂನ್ ಯುದ್ಧ ವಿಮಾನಗಳನ್ನು ಸೂಪರ್ ಸಾನಿಕ್ ವೇಗದಲ್ಲಿ ಬೋಯಿಂಗ್ ೭೭೭-೩೩೭ಕ್ಕೆ ರಕ್ಷಣೆ ಒದಗಿಸಲು ಕಳುಹಿಸಿತು ಮತ್ತು ಯುದ್ಧ ವಿಮಾನಗಳ ಬೆಂಗಾವಲಿನಲ್ಲಿ ವಿಮಾನವನ್ನು ಸ್ಟಾನ್ಸ್ಟೆಡ್ ವಿಮಾನ ನಿಲ್ದಾಣದವರೆಗೂ ಒಯ್ದು ಕೆಳಕ್ಕೆ ಇಳಿಸಲಾಯಿತು.
ಏರ್ ಇಂಡಿಯಾ ವಿಮಾನವನ್ನು ಪೊಲೀಸ್ ಕಣ್ಗಾವಲಿನಲ್ಲಿ ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು. 
2018: ವಾಷಿಂಗ್ಟನ್:  ನವೆಂಬರ್ ೪ರ ಒಳಗಾಗಿ ಇರಾನಿನಿಂದ ತೈಲ ಆಮದು ಸ್ಥಗಿತಗೊಳಿಸಿ, ಇಲ್ಲವೇ
ದಿಗ್ಬಂಧನ ಎದುರಿಸಿ ಎಂದು ಭಾರತ, ಚೀನಾ ಮತ್ತು ಇತರ ದೇಶಗಳಿಗೆ ಅಮೆರಿಕ ಎಚ್ಚರಿಕೆ ನೀಡಿತು.  ಇನ್ನು ಯಾರಿಗೂ ಮನ್ನಾ ಸವಲತ್ತು ನೀಡಲಾಗುವುದಿಲ್ಲ ಎಂದೂ ಅದು ಸ್ಪಷ್ಟ ಪಡಿಸಿತು. ಇರಾಕ್ ಮತ್ತು ಸೌದಿ ಅರೇಬಿಯಾ ಬಳಿಕ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ತೈಲ ಸರಬರಾಜು ಮಾಡುತ್ತಿರುವ ರಾಷ್ಟ್ರ ಇರಾನ್ ಆಗಿದ್ದು, ಅದು ೨೦೧೭ರ ಏಪ್ರಿಲ್ ಮತ್ತು ೨೦೧೮ರ ಜನವರಿ ನಡುವಣ ಅವಧಿಯಲ್ಲಿ (೨೦೧೭-೧೮ರ ಹಣಕಾಸು ವರ್ಷದ ಮೊದಲ ೧೦ ತಿಂಗಳುಗಳಲ್ಲಿ)  ಭಾರತಕ್ಕೆ ೧೮.೪ ಮಿಲಿಯ (೧೮೪ ಲಕ್ಷ ) ಟನ್ ಕಚ್ಛಾ ತೈಲವನ್ನು ಸರಬರಾಜು ಮಾಡಿತ್ತು.  ಇರಾನ್ ಅಣ್ವಸ್ತ್ರ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದಾಗಿ ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಕಟಿಸಿದ್ದರು. ಟೆಹರಾನ್ ಅಣ್ವಸ್ತ್ರ ಕಾರ್‍ಯಕ್ರಮದ ಮೇಲೆ ವಿಧಿಸಿದ ನಿರ್ಬಂಧಗಳಿಗೆ ಪ್ರತಿಯಾಗಿ ತೆರವುಗೊಳಿಸಲಾಗಿದ್ದ ದಿಗ್ಬಂಧನಗಳನ್ನು ಮತ್ತೆ ಇರಾನ್ ಮೇಲೆ ಅವರು ಹೇರಿದ್ದರು.   ಆ ವೇಳೆಯಲ್ಲಿ ಇರಾನ್ ಜೊತೆಗಿನ ವ್ಯವಹಾರಗಳನ್ನು ಕೊನೆಗೊಳಿಸಲು ವಿದೇಶೀ ಕಂಪೆನಿಗಳಿಗೆ ೯೦ ಅಥವಾ ೧೮೦ ದಿನಗಳ ಕಾಲಾವಕಾಶವನ್ನು ಟ್ರಂಪ್ ಆಡಳಿತ ಘೋಷಿಸಿತ್ತು.  ಈಗ ಅಮೆರಿಕವು ಭಾರತ, ಚೀನಾ ಸೇರಿದಂತೆ ಎಲ್ಲ ರಾಷ್ಟ್ರಗಳ ಮೇಲೂ ಇರಾನ್ ನಿಂದ ತೈಲ ಖರೀದಿ ಸ್ಥಗಿತಗೊಳಿಸುವಂತೆ ಒತ್ತಡ ಹಾಕುತ್ತಿದೆ.  ಭಾರತ ಮತ್ತು ಚೀನಾ ದೇಶಗಳಿಗೂ ಈ ಗಡುವು ಅನ್ವಯವಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ’ಖಂಡಿತವಾಗಿ,  ಭಾರತ ಮತ್ತು ಚೀನಾ ಸೇರಿದಂತೆ ಎಲ್ಲ ರಾಷ್ಟ್ರಗಳಿಗೂ ನವೆಂಬರ್ ೪ರ ಒಳಗಾಗಿ ಇರಾನಿನಿಂದ ತೈಲ ಆಮದು ಸ್ಥಗಿತಗೊಳಿಸುವಂತೆ ಅಮೆರಿಕದ ತಿಳಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖಾ ಅಧಿಕಾರಿಯೊಬ್ಬರು ತಿಳಿಸಿದರು.   ಇತರ ರಾಷ್ಟ್ರಗಳಿಗೆ ಯಾವ ದಿಗ್ಬಂಧನಗಳು ಅನ್ವಯವಾಗುತ್ತವೋ ಆ ದಿಗ್ಬಂಧನಗಳು ಭಾರತ ಮತ್ತು ಚೀನಾಕ್ಕೂ ಅನ್ವಯವಾಗುತ್ತವೆ ಎಂದು ಅಧಿಕಾರಿ ನುಡಿದರು.  ಇಂಧನ ಅಗತ್ಯಗಳಿಗೆ ಸಂಬಂಧಿಸಿದಂತೆ , ಇರಾನಿನಿಂದ ಅತ್ಯಂತ ದೊಡ್ಡ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿರುವ ಎರಡು ರಾಷ್ಟ್ರಗಳೆಂದರೆ ಭಾರತ ಮತ್ತು ಚೀನಾ.  ಎಲ್ಲ ತೈಲ ಆಮದುದಾರರಿಗೂ ಇರಾನಿನಿಂದ ಮಾಡಿಕೊಳ್ಳಲಾಗುವ ತೈಲ ಆಮದನ್ನು ಶೂನ್ಯಕ್ಕೆ ಇಳಿಸಿ ಎಂದು ನಾವು ಮನವಿ ಮಾಡುತ್ತಿದ್ದೇವೆ ಎಂದು ಗುರುತು ಬಹಿರಂಗ ಪಡಿಸಲು ಇಚ್ಛಿಸದ ವಿದೇಶಾಂಗ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು. ಇದನ್ನು ನಾವು ನಮ್ಮ ಉನ್ನತ ರಾಷ್ಟ್ರೀಯ ಭದ್ರತಾ ಆದ್ಯತೆಯಾಗಿ ಪರಿಗಣಿಸಿದ್ದೇವೆ ಎಂದು ಅವರು ನುಡಿದರು.  ‘ಎಲ್ಲ ರಾಷ್ಟ್ರಗಳೂ ಈಗಿನಿಂದಲೇ ಇರಾನಿನಿಂದ ತೈಲ ಆಮದು ಕಡಿತ ಆರಂಭಿಸಬೇಕು ಮತ್ತು ನವೆಂಬರ್ ೪ರ ವೇಳೆಗೆ ಅದನ್ನು ಶೂನ್ಯಗೊಳಿಸಬೇಕು ಎಂದು ಅವರು ಹೇಳಿದರು.  ಈ ಮಧ್ಯೆ ಮುಂದಿನವಾರ ಅಮೆರಿಕದ ಜೊತೆಗೆ ನಡೆಯಲಿರುವ ಮುಖಾಮುಖಿ ಮಾತುಕತೆ ವೇಳೆಯಲ್ಲಿ ಭಾರತವು ಇರಾನಿನ ತೈಲ ಆಮದು ವಿಚಾರವನ್ನು ಮುಖ್ಯವಾಗಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ.

2018: ನವದೆಹಲಿ:  ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ೧೮ ಮಂದಿ ಎಐಎಡಿಎಂಕೆ ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆಗಾಗಿ ಮೂರನೇ ನ್ಯಾಯಮೂರ್ತಿಯಾಗಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ. ಸತ್ಯನಾರಾಯಣನ್ ಅವರನ್ನು ಸುಪ್ರೀಂಕೋರ್ಟ್ ನೇಮಕ ಮಾಡಿತು. ಅನರ್ಹಗೊಂಡ ಶಾಸಕರು ತಮ್ಮ ಪ್ರಕರಣವನ್ನು ಮದ್ರಾಸ್ ಹೈಕೋರ್ಟಿನಿಂದ ಸುಪ್ರೀಂಕೋರ್ಟಿಗೆ ವರ್ಗಾಯಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಶಾಸಕರ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಮೂರನೇ ನ್ಯಾಯಮೂರ್ತಿ ಬಗ್ಗೆ ಜನರಿಗೆ ವಾಟ್ಸ್ ಆಪ್ ಮೂಲಕ ಮೂರನೇ ನ್ಯಾಯಮೂರ್ತಿಯ ನೇಮಕಾತಿ ವಿಚಾರ ಗೊತ್ತಾಗಿದೆ ಎಂದು ಆಪಾದಿಸಿದ್ದರು.  ಪಕ್ಷದಲ್ಲಿ ಮೂಲೆಗುಂಪಾದ ನಾಯಕ ಟಿ.ಟಿ.ವಿ. ದಿನಕರನ್ ಅವರಿಗೆ ನಿಷ್ಠರಾದ ೧೮ ಮಂದಿ ಶಾಸಕರನ್ನು ಅನಹಗೊಳಿಸಿದ್ದನ್ನು ಪ್ರಶ್ನಿಸಿದ ಅರ್ಜಿಗಳ ಬಗ್ಗೆ ಮದ್ರಾಸ್ ಹೈಕೋರ್ಟ್ ಜೂನ್ ೧೪ರಂದು ’ವಿಭಜಿತ ತೀರ್ಪು ನೀಡಿತ್ತು. ೧೮ ಶಾಸಕರ ಅನರ್ಹತೆ ಪರಿಣಾಮವಾಗಿ ತಮಿಳುನಾಡಿನ ಅಧಿಕಾರದ ಮೊಗಸಾಲೆಯಲ್ಲಿ ಯಥಾಸ್ಥಿತಿ ನೆಲೆಸಿತ್ತು.  ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ. ಸುಂದರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಪದಚ್ಯುತಿಗೊಳಿಸಬೇಕೆಂದು ಕೋರಿದ್ದ ೧೮ ಮಂದಿ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ವಿಧಾನಸಭಾಧ್ಯಕ್ಷ ಪಿ. ಧನಪಾಲ್ ಅವರು ೨೦೧೭ರ ಸೆಪ್ಟೆಂಬರ್ ೧೮ರಂದು ಅನರ್ಹಗೊಳಿಸಿದ್ದು ಸರಿಯೇ ಎಂಬ ಬಗ್ಗೆ ಪರಸ್ಪರ ವಿರುದ್ಧಾಭಿಪ್ರಾಯದ ತೀರ್ಪು ನೀಡಿತ್ತು.  ಅತ್ಯಂತ ಹಿರಿಯ ನ್ಯಾಯಮೂರ್ತಿಯವರನ್ನು ಇದೀಗ ಮುಖ್ಯ ನ್ಯಾಯಮೂರ್ತಿ ಬಳಿಕದ ಆಸನದಲ್ಲಿ ಕೂರಲು ಆಯ್ಕೆ ಮಾಡುವಂತೆ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.  ತನ್ನ ೨೦೦ ಪುಟಗಳ ಆದೇಶದಲ್ಲಿ ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿಯವರು ವಿಧಾನಸಭಾಧ್ಯಕ್ಷರ ನಿರ್ಧಾರವನ್ನು ಎತ್ತಿ ಹಿಡಿದಿದ್ದರು. ವಿಧಾನಸಭಾಧ್ಯಕ್ಷರ ನಿರ್ಧಾರವು ಯಾವುದೇ ರೀತಿಯಿಂದ ನ್ಯಾಯೋಚಿತವಲ್ಲ, ತರ್ಕಬದ್ಧವಲ್ಲ ಅಥವಾ ವಿಕೃತ ಎಂದು ನಾನು ಹೇಳಲಾರೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದರು.  ನ್ಯಾಯಮೂರ್ತಿ ಸುಂದರ್ ಅವರು ತಮ್ಮ ೧೩೫ ಪುಟಗಳ ತೀರ್ಪಿನಲ್ಲಿ ವಿಧಾನಸಭಾಧ್ಯಕ್ಷ ಧನಪಾಲ್ ಅವರ ಆದೇಶವು ವಿಕೃತಿ, ಸಹಜ ನ್ಯಾಯದ ತತ್ವಗಳಿಗೆ ಬದ್ಧವಾಗದೇ ಇದ್ದುದು ಹಾಗೂ ಸಾಂವಿಧಾನಿಕ ಜನಾದೇಶದ ಉಲ್ಲಂಘನೆಯ ನೆಲೆಯಲ್ಲಿ ತಳ್ಳಿಹಾಕಲು ಯೋಗ್ಯವಾಗಿದೆ ಎಂದು ಹೇಳಿದ್ದರು.  ಜೂನ್ ೧೮ರಂದು ಮದ್ರಾಸ್ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯವರಾದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು ೧೮ ಮಂದಿ ಶಾಸಕರ ಅನರ್ಹತೆ ಪ್ರಕರಣದಲ್ಲಿ ಮೂರನೇ ನ್ಯಾಯಮೂರ್ತಿಯಾಗಿ ಪೀಠಕ್ಕೆ ನ್ಯಾಯಮೂರ್ತಿ ಎಸ್. ವಿಮಲಾ ಅವರನ್ನು ಪೀಠಕ್ಕೆ ಮೂರನೇ ನ್ಯಾಯಮೂರ್ತಿಯಾಗಿ ನೇಮಿಸಿದ್ದರು.

2018: ನವದೆಹಲಿ:  ನೀರವ್ ಮೋದಿ ಪತ್ತೆ ಮತ್ತು ಭಾರತದ ವಶಕ್ಕೆ ಪಡೆಯುವ ಯತ್ನಕ್ಕೆ ಕಳೆದ ವಾರ ದಿಢೀರನೆ ಚಾಲನೆ ಲಭಿಸಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸಭೆಗಳು ನಡೆದಿವೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದರು. ಈ ಸಭೆಯಲ್ಲಿ ಸಚಿವಾಲಯವು ಫೆಬ್ರುವರಿ ತಿಂಗಳಲ್ಲಿ ಪಾಸ್ ಪೋರ್ಟನ್ನು ರದ್ದು ಪಡಿಸಿದ ಬಳಿಕವೂ ನೀರವ್ ಮೋದಿ ಜಗತ್ತಿನ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಿರುವುದು ಹೇಗೆ ಪ್ರಶ್ನೆಗಳು ಎದ್ದವು ಎಂದು ಮೂಲಗಳು ಹೇಳಿದವು.  ಪಾಸ್ ಪೋರ್ಟ್ ರದ್ದು ಪಡಿಸಿದ ಮಾತ್ರಕ್ಕೆ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗುವುದಿಲ್ಲ. ಹಲವಾರು ರಾಷ್ಟ್ರಗಳು ಪಾಸ್ ಪೋರ್ಟ್ ರದ್ದು ಪಡಿಸಿದ್ದನ್ನು ಗೌರವಿಸುವುದೇ ಇಲ್ಲ. ಏನಿದ್ದರೂ ಅವರು ಇಂಟರ್ ಪೋಲ್ ಜಾರಿಗೊಳಿಸಿದ ರೆಡ್ ಕಾರ್ನರ್ ನೋಟಿಸನ್ನು ಮಾತ್ರ (ಆರ್ ಸಿಎನ್) ಅವು ಗೌರವಿಸುತ್ತವೆ.   ಘೋಷಿತ ಅಪರಾಧಿಗಳನ್ನು ವಶಕ್ಕೆ ಪಡೆದುಕೊಳ್ಳಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ವಿಧಾನವೆಂದರೆ ಇಂಟರ್ ಪೋಲ್ ಆರ್.ಸಿ ಎನ್ ಮಾತ್ರ ಎಂದು ಮೂಲಗಳು ಹೇಳಿದವು. ಈ ಮಧ್ಯೆ, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ನೀರವ್ ಮೋದಿ ವಿಷಯಕ್ಕೆ  ಸಂಬಂಧಿಸಿದಂತೆಯೇ ಚರ್ಚಿಸಲು ನಿರ್ದಿಷ್ಟ ಸಭೆ ಕರೆದಿದ್ದರು. ಸಭೆಯ ಬಳಿಕ ನೀರವ್ ಮೋದಿ ಅವಿತುಕೊಂಡಿದ್ದಾರೆ ಎಂದು ಭಾರತ ನಂಬಿರುವ ಮೂರು ಐರೋಪ್ಯ ರಾಷ್ಟ್ರಗಳಿಗೆ ಮೌಖಿಕ ಸೂಚನೆಗಳನ್ನು ನೀಡಲಾಯಿತು.  ಇಂಗ್ಲೆಂಡ್, ಬೆಲ್ಜಿಯಂ ಮತ್ತು ಫ್ರಾನ್ಸ್ - ಈ ಮೂರು ರಾಷ್ಟ್ರಗಳು.  ಸಚಿವಾಲಯವು ಈ ಮೂರು ರಾಷ್ಟ್ರಗಳ ಜೊತೆ ಸಂಪರ್ಕದಲ್ಲಿದ್ದು, ನೀರವ್ ಮೋದಿ ಚಲನವಲನಗಳ ಬಗೆಗಿನ ಮಾಹಿತಿಯನ್ನು ತನಗೆ ಒದಗಿಸುವಂತೆ ಮನವಿ ಮಾಡಿತು.  ನೀರವ್ ಮೋದಿಯನ್ನು ವಶಕ್ಕೆ ಪಡೆಯಲು ಎರಡು ಆಯ್ಕೆಗಳಿವೆ. ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವುದು ಮೊದಲ ಮತ್ತು ಅತ್ಯಂತ ಸೂಕ್ತವಾದ ಆಯ್ಕೆ. ರದ್ದು ಪಡಿಸಲಾದ ಪಾಸ್‌ಪೋರ್ಟ್, ಕೋರ್ಟ್ ನೋಟಿಸ್ ಗಳು ಮತ್ತು ನೀರವ್ ಮೋದಿ ವಿರುದ್ಧದ ಇತರ ಸಾಕ್ಷ್ಯಾಧಾರಗಳು ಇಂಟರ್ ಪೋಲ್ ಕೆಲಸ ಮಾಡಲು ಅನುಕೂಲವಾಗುತ್ತವೆ. ಈ ನಿಟ್ಟಿನಲ್ಲಿ ಮೋದಿ ಪಾಸ್ ಪೋರ್ಟ್ ರದ್ದು ಪಡಿಸಿರುವುದು ಅನುಕೂಲಕರವಾಗಲಿದೆ.  ನೀರವ್ ಮೋದಿ ವಶಕ್ಕೆ ಇರುವ ಇನ್ನೊಂದು ಆಯ್ಕೆ ಎಂದರೆ ಅವರು ಇರುವ ಸ್ಥಳ ಪತ್ತೆ ಹಚ್ಚುವುದು. ಅವರು ಇರುವ ಸ್ಥಳ ಖಚಿತವಾದರೆ ಭಾರತವು ಅವರ ಗಡೀಪಾರಿಗೆ ಕ್ರಮ ಕೈಗೊಳ್ಳಬಹುದು. ಆ ನಿರ್ದಿಷ್ಟ ರಾಷ್ಟ್ರದ ಜೊತೆಗೆ ಪರಸ್ಪರ ಕಾನೂನು ನೆರವು ಮತ್ತು ಗಡೀಪಾರು ಒಪ್ಪಂದ ಈ ನಿಟ್ಟಿನಲ್ಲಿ ನೆರವಿಗೆ ಬರುತ್ತದೆ. ಇದನ್ನು ಕೂಡಾ ವಿದೇಶಾಂಗ ವ್ಯವಹಾರಗಳ ಇಲಾಖೆಯು ತನಿಖಾ ಸಂಸ್ಥೆಗಳ ಮನವಿಯ ಮೇರೆಗೆ ಮಾತ್ರ ಮಾಡಬಹುದು.

2018: ನಾಶಿಕ್(ಮಹಾರಾಷ್ಟ್ರ): ನಿರ್ಮಾಣ ಹಂತದ ಸುಖೋಯ್ ಎಸ್‌ಯು ೩೦ ಫೈಟರ್ ಜೆಟ್ ಬುಧವಾರ ಇಲ್ಲಿ ಪತನಗೊಂಡಿದ್ದು, ಅದೃಷ್ಟವಷಾತ್ ಇಬ್ಬರು ಪೈಲಟ್‌ಗಳು ಪಾರಾದರು. ಎಚ್‌ಎಎಲ್ ವಿಮಾನದ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದ್ದ ವೇಳೆಯಲ್ಲಿ ಈ ವೇಳೆ ದುರಂತ ಸಂಭವಿಸಿತು.  ಈ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಬೇಕಾಗಿತ್ತು.  ಪಾರಾಗಿರುವ ಪೈಲಟ್‌ಗಳಲ್ಲಿ ಒಬ್ಬರು ವಾಯುಪಡೆಯ ಅಧಿಕಾರಿಯಾಗಿದ್ದು, ಇನ್ನೋರ್ವರು ನಿವೃತ್ತ ವಾಯುಪಡೆಯ ಸಿಬ್ಬಂದಿ ಎಂದು ಮೂಲಗಳು ಹೇಳಿದವು. ಪತನವಾದ ಸ್ಥಳಕ್ಕೆ ವಾಯುಪಡೆ ಸಿಬಂದಿಗಳು ಮತ್ತು ಅಧಿಕಾರಿಗಳು ದೌಡಾಯಿಸಿದರು.

2018: ಶ್ರೀನಗರ: ’ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಕೊಲೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಪ್ರಗತಿಯಾಗಿದ್ದು, ಗುಂಡು ಹಾರಿಸಿದ ವ್ಯಕ್ತಿ, ಬುಖಾರಿ ವಿರುದ್ಧ ಕಳಂಕ ಪ್ರಚಾರ ಮಾಡುತ್ತಿದ್ದ ಬ್ಲಾಗರ್ ಗುರುತು ಪತ್ತೆ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಸಂಭವಿಸಿದ ಗುಂಡಿನ ಘರ್ಷಣಾ ಸ್ಥಳದಲ್ಲಿ ಉಗ್ರಗಾಮಿಯೊಬ್ಬನ ಬಂಧನದ ಮೂಲಕ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದರು. ಶ್ರೀನಗರದ ಜನ ನಿಬಿಡ ಲಾಲ್ ಚೌಕದಲ್ಲಿನ ಹಲವಾರು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹತ್ಯೆ ನಡೆದ ದಿನ ದಾಖಲಾಗಿರುವ ಮೂವರು ಶಸ್ತ್ರಧಾರಿ ಬೈಕ್ ಸವಾರರನ್ನು ’ಮಾನವ ಬುದ್ದಿಮತ್ತೆಯಿಂದ ಚಿತ್ರಗಳ ಹೊಂದಾಣಿಕೆ ಮಾಡುವ ಮೂಲಕ ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.  ‘ಇಬ್ಬರು ಸ್ಥಳೀಯರು ಹತ್ಯೆಯಲ್ಲಿ ಶಾಮೀಲಾಗಿದ್ದಾರೆ. ಕನ್ನಡಕ ಧರಿಸಿದ್ದ ಒಬ್ಬ ಬೈಕ್ ಸವಾರ ಕುಲಗಂ ಗ್ರಾಮದ ನಿವಾಸಿಯಾಗಿದ್ದು, ಹೆಲ್ಮೆಟ್ ಧರಿಸಿದ ಇನ್ನೊಬ್ಬ ಕೂಡಾ ದಕ್ಷಿಣ ಕಾಶ್ಮೀರದವನು ಎಂಬುದು ಖಚಿತಗೊಂಡಿದೆ ಎಂದು ಅಧಿಕಾರಿ ನುಡಿದರು.    ‘ವಿವಿಧ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜೋಡಿಸುವ ಮೂಲಕ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಹಿಂಬದಿ ಸವಾರನ ಮಧ್ಯೆ ಕುಳಿತಿದ್ದ ಮೂರನೇ ಉಗ್ರಗಾಮಿ ವಿದೇಶೀ ಉಗ್ರಗಾಮಿಯಾಗಿದ್ದಾನೆ ಎಂಬುದನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.  ಈ ಉಗ್ರಗಾಮಿ ಮತ್ತು ಪರಾರಿಯಾಗಿರುವ ಲಷ್ಕರ್-ಇ-ತೊಯ್ಬಾ ಉಗ್ರಗಾಮಿ ನವೀದ್ ಜುಟ್ ಮಧ್ಯೆ ಗಮನ ಸೆಳೆಯುವಂತಹ ಸಾಮ್ಯತೆಗಳಿವೆ. ಮಣಿಕಟ್ಟಿನಲ್ಲಿನ ಕರಿಯ ಬ್ಯಾಂಡ್, ಮೇಕಪ್, ಸ್ನಾಯುವಿನ ಕರುಳುಗಳು ಎಲ್ಲವೂ ಜುಟ್ ಕಡೆಗೆ ಬೊಟ್ಟು ಮಾಡುತ್ತವೆ. ಏನಿದ್ದರೂ ಗುರುತಿಸುವಿಕೆ ಇನ್ನೂ ತನಿಖಾ ವಿಚಾರವಾಗಿದೆ ಎಂದು ಇನ್ನೊಬ್ಬ ಅಧಿಕಾರಿ ನುಡಿದರು. ದಕ್ಷಿಣ ಕಾಶ್ಮೀರದ ಕುಲಗಂನಲ್ಲಿ ಬಂಧಿತನಾಗಿರುವ ಎಲ್ ಇಟಿ ಉಗ್ರಗಾಮಿಯೊಬ್ಬ ಪೊಲಿಸರಿಗೆ ತನಿಖೆಯಲ್ಲಿ ನೆರವಾಗಿದ್ದಾನೆ ಎಂದು ಅಧಿಕಾರಿ ಹೇಳಿದರು. ಈ ಮಧ್ಯೆ ಶ್ರೀನಗರದ ಉಗ್ರಗಾಮಿ ಎಂಬುದಾಗಿ ಪೊಲೀಸರು ನಂಬಿರುವ ಬ್ಲಾಗರ್ ಈಗ ಪಾಕಿಸ್ತಾನದಲ್ಲಿ ಇದ್ದಾನೆ ಎನ್ನಲಾಗಿದೆ. ಈ ಬ್ಲಾಗರ್ ಬುಖಾರಿ ವಿರುದ್ಧ ಅವರ ಹತ್ಯೆಗಿಂತ ಸ್ವಲ್ಪ ಮುನ್ನ ಜೂನ್ ತಿಂಗಳಲ್ಲಿ ಕಳಂಕ ಪ್ರಚಾರ ನಡೆಸಿದ್ದ.  ಬುಖಾರಿ ಅವರನ್ನು ಜೂನ್ ೧೪ರಂದು ಇಬ್ಬರು ಪೊಲೀಸ್ ಗಾರ್ಡ್‌ಗಳ ಜೊತೆಗೆ ಹತ್ಯೆಗೈಯಲಾಗಿತ್ತು.  ಯುನೈಟೆಡ್ ಜೆಹಾದ್ ಕೌನ್ಸಿಲ್ (ಯುಜೆಸಿ) ಮತ್ತು ಲಷ್ಕರ್-ಇ-ತೊಯ್ಬಾ (ಎಲ್ ಇಟಿ) ಎರಡೂ ಸಂಘಟನೆಗಳು ಬುಖಾರಿ ಹತ್ಯೆಯಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿವೆ. ’ಬುಖಾರಿ ಹತ್ಯೆಗೆ ಅವರ ವಿರೋಧಿಗಳನ್ನು ದೂಷಿಸಲಾಗದು ಎಂದು ಯುಜೆಸಿ ಮುಖ್ಯಸ್ಥ ಸೈಯದ್ ಸಲಾಹುದ್ದೀನ್  ಹೇಳಿದ್ದರು. 

2018: ನವದೆಹಲಿ: ವಿಶ್ವ ವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬದಲಿಗೆ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಬಯಸಿದ್ದು, ಇದಕ್ಕೆ ಸಂಬಂಧಿಸಿದ ಕಾಯ್ದೆಯ ಕರಡನ್ನು ಪ್ರಕಟಿಸಿತು.  ಯುಜಿಸಿ ದೇಶದಲ್ಲಿನ ವಿಶ್ವವಿದ್ಯಾಲಯಗಳಿಗೆ ಹಣಕಾಸು ಒದಗಿಸುವ ಪ್ರಧಾನ ಸಂಸ್ಥೆಯಾಗಿದೆ.  ಯುಜಿಸಿಯನ್ನು ಬದಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕಾಯ್ದೆಯ ಕರಡನ್ನು ಪ್ರಸ್ತಾಪಿಸಿದೆ. ೧೯೫೬ರ ಯುಜಿಸಿ ಕಾಯಿದೆಯನ್ನು ಅನೂರ್ಜಿತಗೊಳಿಸುವ ಹೊಸ ಕಾಯ್ದೆಯ ಕರಡನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದರು.  ೨೦೧೮ರ ಜುಲೈ ೭ರ ಒಳಗಾಗಿ ಈ ಪ್ರಸ್ತಾವಿತ ಕಾಯ್ದೆಗೆ ತಮ್ಮ ಶಿಫಾರಸುಗಳನ್ನು ಕಳುಹಿಸುವಂತೆ ಅವರು ಎಲ್ಲ ಆಸಕ್ತರನ್ನು ಕೋರಿದರು.  ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ಒದಗಿಸುವುದು, ದೇಶದ ಶಿಕ್ಷಣ ವ್ಯವಸ್ಥೆಯ ಸಮಗ್ರ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಮತ್ತು ಶಿಕ್ಷಣದಲ್ಲಿ ವಿಶ್ವ ಮಟ್ಟದ ಉತ್ಕೃಷ್ಟತೆಯನ್ನು ಸಾಧಿಸುವುದು ಹೊಸ ಕಾಯ್ದೆಯ ಪ್ರಧಾನ ಆಶಯಗಳಾಗಿವೆ ಎಂದು ಸಚಿವ ಜಾವಡೇಕರ್ ಹೇಳಿದರು.  ನೂತನ ಪ್ರಸ್ತಾವಿತ "೨೦೧೮ರ ಭಾರತದ ಉನ್ನತ ಶಿಕ್ಷಣ ಆಯೋಗ ಕಾಯ್ದೆಯು ದೇಶದಲ್ಲಿ ಯಾವುದೇ ಇತರ ಕಾಯ್ದೆಗಳ ಅಡಿ ಸ್ಥಾಪಿಸಲ್ಪಟ್ಟಿರುವ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಸಚಿವ ಜಾವಡೇಕರ್ ನುಡಿದರು.
 
ಬ್ರಸೆಲ್ಸ್: ಯುರೋಪಿಯನ್ ಒಕ್ಕೂಟದ ‘ನಂಬಿಕೆ ದ್ರೋಹ’ ಕಾನೂನಿನ ಅನ್ವಯ ಗೂಗಲ್ ಕಂಪೆನಿಗೆ ರೂ. 17 ಸಾವಿರ ಕೋಟಿ (2.7 ಶತಕೋಟಿ ಡಾಲರ್) ದಂಡ ವಿಧಿಸಲಾಯಿತು. ಕಂಪೆನಿಯೊಂದಕ್ಕೆ
ಯುರೋಪಿಯನ್ ಒಕ್ಕೂಟ ಇದುವರೆಗೆ ವಿಧಿಸಿರುವ ಅತಿ ಹೆಚ್ಚು ಮೊತ್ತದ ದಂಡ ಇದು.  ಸರ್ಚ್‌ ಇಂಜಿನ್‌ಗೆಂದು ಪಡೆದ ಪರವಾನಗಿಯ ಮೂಲಕ ಅಕ್ರಮವಾಗಿ ಶಾಪಿಂಗ್‌ ಸೇವೆ ನೀಡಿದ್ದಕ್ಕಾಗಿ ದಂಡ ವಿಧಿಸಲಾಯಿತು.  ಅಕ್ರಮ ಚಟುವಟಿಕೆಯನ್ನು ನಿಲ್ಲಿಸುವಂತೆ ಗೂಗಲ್‌ಗೆ ಸೂಚಿಸಿದ್ದ ಯುರೋಪಿಯನ್ ಒಕ್ಕೂಟ 90 ದಿನಗಳ ಕಾಲಾವಕಾಶವನ್ನೂ ನೀಡಿತ್ತು. ಆದರೆ, ಕಂಪೆನಿ ಮತ್ತೆಯೂ ಅಕ್ರಮವಾಗಿ ಶಾಪಿಂಗ್‌ ಸೇವೆಗಳನ್ನು ಮುಂದುವರೆಸಿತ್ತು. ಹೀಗಾಗಿ ಗೂಗಲ್‌ನ ಪ್ರತಿ ದಿನದ ಜಾಗತಿಕ ವಹಿವಾಟಿನ ಶೇಕಡ 5ರಷ್ಟು ದಂಡ ವಿಧಿಸಲು ತೀರ್ಮಾನಿಸಲಾಯಿತು.  ‘ನವೀನ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಒದಗಿಸಲು ಗೂಗಲ್ ಮುಂದಾಗಿತ್ತು. ಇದೊಂದು ಉತ್ತಮ ವಿಚಾರ. ಆದರೆ, ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುವುದಷ್ಟೇ ಅದರ ಉದ್ದೇಶವಾಗಿರಲಿಲ್ಲ. ಹೋಲಿಕೆ ಮಾಡುವುದರ ಜತೆಗೆ ಶಾಪಿಂಗ್ ನಡೆಸಲು ಅವಕಾಶ ನೀಡುವ ಮೂಲಕ ಪ್ರತಿಸ್ಪರ್ಧಿಗಳನ್ನು ಕೆಳ ತಳ್ಳಲು ಕಂಪೆನಿ ಪ್ರಯತ್ನಿಸಿತ್ತು. ಸರ್ಚ್‌ ಇಂಜಿನ್ ಬಳಸಿಕೊಂಡು ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸಲು ಮುಂದಾಗಿತ್ತು’ ಎಂದು ಯುರೋಪಿಯನ್ ಆಯೋಗದ ಆಯುಕ್ತ ಮಾರ್ಗರೇಟ್ ವೆಸ್ಟೆಜರ್ ತಿಳಿಸಿದರು. ಮೇಲ್ಮನವಿಗೆ ಚಿಂತನೆ: ಯುರೋಪಿಯನ್ ಒಕ್ಕೂಟದ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಗೂಗಲ್ ಚಿಂತನೆ ನಡೆಸಿದೆ. ಗೂಗಲ್ ಕಂಪೆನಿಯು 2004ರಲ್ಲಿ ಶಾಪಿಂಗ್ ಮಾಡುವ ಅವಕಾಶವನ್ನು ಯುರೋಪ್‌ನ ಗ್ರಾಹಕರಿಗೆ ನೀಡಿತ್ತು. ಆಗ ‘ಫೂಗಲ್’ ಎಂಬ ಹೆಸರಿನಲ್ಲಿ ಆರಂಭಿಸಲಾಗಿದ್ದ ಸೇವೆಯನ್ನು ನಂತರ ‘ಗೂಗಲ್ ಪ್ರಾಡಕ್ಟ್ ಸರ್ಚ್‌’ ಎಂದು ಮರುನಾಮಕರಣ ಮಾಡಲಾಗಿತ್ತು. 2013ರಲ್ಲಿ ‘ಗೂಗಲ್ ಶಾಪಿಂಗ್’ ಎಂಬ ಹೆಸರು ನೀಡಲಾಗಿತ್ತು. ಆದರೆ, ಇತ್ತೀಚೆಗೆ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡದೆ ಇತರ ಆನ್‌ಲೈನ್ ಕಂಪೆನಿಗಳ ಉತ್ಪನ್ನಗಳ ಗುಣಮಟ್ಟ, ದರ,  ಜತೆ ತುಲನೆ ಮಾಡಲು ಅವಕಾಶ ನೀಡಿತ್ತು. ತನ್ಮೂಲಕ ಇತರ ಕಂಪೆನಿಗಳನ್ನು ಹಿಮ್ಮೆಟ್ಟಿಸಲು ಮುಂದಾಗಿತ್ತು. ಇದರಿಂದಾಗಿ ಯುರೋಪಿಯನ್ ಒಕ್ಕೂಟದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

2017: ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ಡೊನಾಲ್ಡ್‌
ಟ್ರಂಪ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶ್ವೇತ ಭವನದಲ್ಲಿ ಉಭಯ ನಾಯಕರು ಮಾತುಕತೆ ನಡೆಸುವುದಕ್ಕೂ ಮುನ್ನ ಟ್ರಂಪ್ ಅವರು ಪತ್ನಿ ಮೆಲಾನಿಯಾ ಟ್ರಂಪ್ ಅವರ ಜತೆಗೂಡಿ ಮೋದಿ ಅವರನ್ನು ಸ್ವಾಗತಿಸಿ, ಬರಮಾಡಿಕೊಂಡರು. ಟ್ರಂಪ್ ಮತ್ತು ಅವರ ಪತ್ನಿಯ ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳನ್ನು ಹೇಳಿದ ಮೋದಿ, ಭೇಟಿಯ ನಂತರ ಅಮೆರಿಕದ ಅಧ್ಯಕ್ಷರಿಗೆ ವಿಶೇಷ ಉಡುಗೊರೆಯನ್ನು ನೀಡಿದರು.  1965ರಲ್ಲಿ ಬಿಡುಗಡೆಯಾದ ಅಬ್ರಹಾಂ ಲಿಂಕನ್ ಪುಣ್ಯ ಸ್ಮರಣೆಯ ಅಂಚೆ ಚೀಟಿಯನ್ನು ಮೋದಿ ಟ್ರಂಪ್ ಅವರಿಗೆ ಉಡುಗೊರೆಯಾಗಿ ನೀಡಿದರು. ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರಿಗೆ ಗೌರವ ಸೂಚಿಸುವ ಅಂಚೆ ಚೀಟಿ ಇದು. ಮಹಾತ್ಮಗಾಂಧಿ ಮತ್ತು ಲಿಂಕನ್ ನಂಬಿದ್ದ ಧ್ಯೇಯಗಳ ಪ್ರತೀಕವಾಗಿ ಇದನ್ನು ನೀಡಲಾಗಿದೆ ಎಂದು ಉಡುಗೊರೆಯ ಚಿತ್ರವನ್ನು ಪ್ರಧಾನಿಯವರ ಕಚೇರಿ ಟ್ವೀಟ್ ಮಾಡಿತು. ಇದರ ಜತೆಗೆ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಸಾಂಪ್ರದಾಯಿಕ, ಕರಕುಶಲ ಕಲೆಯ ಹಿಮಾಚಲಿ ಬೆಳ್ಳಿ ಬ್ರೇಸ್‍ಲೆಟ್,  ಕಂಗರಾದ ಚಹಾಪುಡಿ ಮತ್ತು ಜೇನು ತುಪ್ಪ, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಶಾಲು ಉಡುಗೊರೆಯಾಗಿ ನೀಡಿದರು.

2017: ನವದೆಹಲಿ: ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯಗೊಳಿಸಿ
ಸರ್ಕಾರ ಹೊರಡಿಸಿದ ಅಧಿಸೂಚನೆಯ ವಿರುದ್ಧ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ್ದರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಮಕ್ಕಳು ವಂಚಿತರಾಗಬಹುದು ಎಂದು ಅರ್ಜಿದಾರ ಶಾಂತಾ ಸಿನ್ಹಾ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದಿಸಿದ್ದರು. ಆದರೆ, ನ್ಯಾಯಮೂರ್ತಿ ಎ.ಎಂ. ಖಾನ್‌ವಿಲ್ಕರ್ ಮತ್ತು ನವೀನ್ ಸಿನ್ಹಾ ಅವರ ನ್ಯಾಯಪೀಠ ಈ ವಾದವನ್ನು ತಿರಸ್ಕರಿಸಿತು. ‘ಮಧ್ಯಾಹ್ನದ ಬಿಸಿಯೂಟ ವಂಚಿತರಾದವರು ಯಾರೆಲ್ಲ ಎಂಬುದನ್ನು ತೋರಿಸಿ. ಆಧಾರ್ ಇಲ್ಲದ್ದಕ್ಕೆ ಎಷ್ಟು ಮಕ್ಕಳಿಗೆ ಬಿಸಿಯೂಟ ನಿರಾಕರಿಸಲಾಗಿದೆ ಎಂಬುದನ್ನು ಪತ್ತೆ ಮಾಡಿ. ಕೇವಲ  ಆತಂಕವನ್ನು  ಗಮನದಲ್ಲಿಟ್ಟುಕೊಂಡು ನಾವು ತೀರ್ಪು ನೀಡಲಾಗದು’ ಎಂದು ನ್ಯಾಯಪೀಠ ಹೇಳಿತು. ಈ ಮಧ್ಯೆ, ಆಧಾರ್ ಪಡೆಯಲು ನಿಗದಿಪಡಿಸಲಾದ ಗಡುವನ್ನು ಜೂನ್ 30ರ ಬದಲಾಗಿ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 7ಕ್ಕೆ ನಿಗದಿಪಡಿಸಲಾಯಿತು.
2008: ಹೆಸರಾಂತ ವಿಜ್ಞಾನ ಲೇಖಕ ಗುಡ್ಡೆಹಿತ್ಲು ತಿಮ್ಮಪ್ಪಯ್ಯ (ಜಿ.ಟಿ.) ನಾರಾಯಣರಾವ್ (83)
ಬೆಳಿಗ್ಗೆ ಏಳು ಗಂಟೆಗೆ ಮೈಸೂರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ಜಿಟಿಎನ್ ಅವರ ಮೃತದೇಹಕ್ಕೆ ಅಂತ್ಯಕ್ರಿಯೆ ಮಾಡದೆ ಅವರ ಇಚ್ಛೆಯಂತೆ ಜೆಎಸ್ಎಸ್
ಆಸ್ಪತ್ರೆಗೆ ದಾನ ಮಾಡಲಾಯಿತು. ಪತ್ನಿ ಲಕ್ಷ್ಮಿದೇವಿ, ಪುತ್ರರಾದ ಅಶೋಕವರ್ಧನ, ಅನಂತವರ್ಧನ, ಆನಂದವರ್ಧನ, ಅಪಾರ ಬಂಧು-ಬಳಗ ಹಾಗೂ ಶಿಷ್ಯವರ್ಗವನ್ನು ಅವರು ಅಗಲಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕೂಡ ಜಿಟಿಎನ್ ಶಿಷ್ಯರಲ್ಲಿ ಒಬ್ಬರು. 1926ರ ಜನವರಿ ಒಂದರಂದು ಮಡಿಕೇರಿಯಲ್ಲಿ ಜನಿಸಿದ ಜಿಟಿಎನ್ ಮದ್ರಾಸು ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದವರು. ಎನ್ಎಸ್ಎಸ್ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದ ಅವರಿಗೆ, ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಮಯ ಕುರಿತು, ಅಪಾರ ಆಸಕ್ತಿ ಇತ್ತು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ ಜಿಟಿಎನ್ ಗಹನವಾದ ವಿಜ್ಞಾನದ ಸಂಗತಿಗಳನ್ನು ಸರಳವಾಗಿ ಬರೆದವರು. ಇವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ `ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ' ಒಂದು ಅಮೂಲ್ಯ ಆಕರ ಗ್ರಂಥ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್ ಅವರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್ ಅವರನ್ನು ಚಿಕಾಗೋದಲ್ಲಿಯೂ ಭೇಟಿ ಮಾಡಿ ಇವರಿಬ್ಬರ ಬಗೆಗೆ ವೈಜ್ಞಾನಿಕ ಜೀವನ ಚರಿತ್ರೆಗಳನ್ನೂ ರಚಿಸಿದವರು ಇವರು. ಇಂಗ್ಲಿಷಿನಿಂದ ಕನ್ನಡಕ್ಕೆ, ವೈಜ್ಞಾನಿಕ ಕೃತಿಗಳನ್ನೂ, ವಿಜ್ಞಾನ ಲೇಖನಗಳನ್ನೂ ವಿಪುಲವಾಗಿ ಅನುವಾದಿಸಿದ್ದಾರೆ. 60ಕ್ಕೂ ಅಧಿಕ ಕನ್ನಡ ಹಾಗೂ ಮೂರು ಇಂಗ್ಲಿಷ್ ಕೃತಿಗಳನ್ನು ಅವರು ರಚಿಸಿದ್ದಾರೆ. ಕೃಷ್ಣ ವಿವರಗಳು, ವಿಶ್ವದ ಕತೆ, ಸೂಪರ್ನೋವಾ, ರಾಮನ್ ಸಂದರ್ಶನ, ಸುಬ್ರಹ್ಮಣ್ಯನ್ ಚಂದ್ರಶೇಖರ್, ರಾಮಾನುಜನ್ ಬಾಳಿದರಿಲ್ಲಿ, ವಿಜ್ಞಾನ ಸಪ್ತರ್ಷಿಗಳು, ಐನ್ಸ್ಟೈನ್ ಬಾಳಿದರಿಲ್ಲಿ, ಕೊಪರ್ನಿಕಸ್ ಕ್ರಾಂತಿ, ಜಾತಕ ಮತ್ತು ಭವಿಷ್ಯ, ಎನ್ಸಿಸಿ ದಿನಗಳು, ನೋಡೋಣು ಬಾರಾ ನಕ್ಷತ್ರ., ಫರ್ಮಾ ಯಕ್ಷಪ್ರಶ್ನೆ, ವೈಜ್ಞಾನಿಕ ಮನೋಧರ್ಮ, ಆಕಾಶದಲ್ಲಿ ಭಾರತ, ಮುಗಿಯದ ಪಯಣ, ಸಂಗೀತ ರಸನಿಮಿಷಗಳು ಅವರ ಪ್ರಮುಖ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಎಚ್.ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಮಾಳವಾಡ ಪ್ರಶಸ್ತಿ, ಕನ್ನಡ ವಿಜ್ಞಾನ ಪರಿಷತ್ತಿನ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದ್ದವು. ಇದೇ ವರ್ಷ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅವರಿಗೆ `ಗೌರವ ಡಾಕ್ಟರೇಟ್' ಪ್ರಶಸ್ತಿ ನೀಡಿ ಗೌರವಿಸಿತ್ತು.

2007: ಸದ್ದುಗದ್ದಲ ಇಲ್ಲದೆ ಕೆಲಸ ಮಾಡುವ ಲೇಬರ್ ಪಕ್ಷದ ನಾಯಕ ಗಾರ್ಡನ್ ಬ್ರೌನ್ ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಇದೇ ಪಕ್ಷದ ಟೋನಿ ಬ್ಲೇರ್ ಅವರ 10 ವರ್ಷದ ಆಡಳಿತಕ್ಕೆ ತೆರೆ ಬಿತ್ತು.

2007: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಆರೋಪಿಗಳಾಗಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಆರ್. ಎಸ್. ಶರ್ಮಾ ಮತ್ತು ಮತ್ತಿಬ್ಬರು ಪೊಲೀಸ್ ಅಧಿಕಾರಿಗಳನ್ನು ಸಾಕ್ಷ್ಯಗಳ ಕೊರತೆಯ ಕಾರಣ ಪುಣೆಯ ವಿಶೇಷ ನ್ಯಾಯಾಲಯ ಆರೋಪಮುಕ್ತ ಗೊಳಿಸಿತು.

2007: ಮೂರು ವರ್ಷಗಳಿಂದ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಯಾಗಿದ್ದ ಡಾ. ಬಿ.ಎ. ವಿವೇಕ ರೈ ಅವರು ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡರು.

2007: ಕಾರ್ಮಿಕ ಮುಖಂಡ, ಸ್ವಾತಂತ್ರ್ಯ ಹೋರಾಟಗಾರ ಎಡ ಪಂಥೀಯ ನಾಯಕ ಕೆ.ಆರ್. ನಾಯಕ್ (78) ಅವರು ತುಮಕೂರಿನಲ್ಲಿ ಈದಿನ ನಿಧನರಾದರು.

2006: ಗೋವಾದ ರಾಷ್ಟ್ರೀಯ ಸಾಗರ ಭೂಗರ್ಭ ವಿಜ್ಞಾನ ಸಂಸ್ಥೆಯ 55 ವರ್ಷದ ಸಾಗರ ಭೂಗರ್ಭ ವಿಜ್ಞಾನಿ ಅನಿಲ್ ಬಾಲ್ಸಂಕರ್ ಅವರು ಲಿಮ್ಕಾ ದಾಖಲೆ ಸೇರಲು ಪಣಜಿಯಲ್ಲಿ ಮಾಧ್ಯಮ, ಕ್ಯಾಮರಾಗಳು, ವೈದ್ಯರ ಮುಂದೆ ಇಚ್ಛಾಶಕ್ತಿಯನ್ನು ಬಳಸಿ ಬೇಕೆಂದಾಗ ತಮ್ಮ ರೋಮಗಳನ್ನು ನಿಮಿರಿಸಿದರು..! (ನೆಟ್ಟಗೆ ನಿಲ್ಲಿಸಿದರು..!) ಈ ವಿಜ್ಞಾನಿ ಕಳೆದ 25 ವರ್ಷಗಳಿಂದ ತಮ್ಮ ಕೂದಲುಗಳನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ನೆಟ್ಟಗೆ ನಿಲ್ಲಿಸುವ ಕಲೆ ಅಭ್ಯಾಸ ಮಾಡುತ್ತಾ ಬಂದಿದ್ದಾರೆ. ಪರಿಣಾಮವಾಗಿ ಬಾಲ್ಸಂಕರ್ ಅವರು ತಮ್ಮ ಮನಸ್ಸಿನ ಮೂಲಕವಾಗಿ ಏಕಾಗ್ರತೆ ಸಾಧಿಸಿದ ಐದಾರು ಸೆಕೆಂಡುಗಳಲ್ಲಿ, ಅವರ ಕೈಗಳು, ಕಾಲುಗಳು, ಕಂಕುಳ ರೋಮಗಳು ನೆಟ್ಟಗೆ ನಿಲ್ಲುತ್ತವೆ.

2006: ಲಾಹೋರಿನಲ್ಲಿ ಇರುವ ಏಕೈಕ ಕೃಷ್ಣ ದೇವಾಲಯವನ್ನು ಕೆಡವಿಲ್ಲ. ಸತ್ಯಾಸತ್ಯತೆ ಪರಿಶೀಲಿಸಲು ಲಾಹೋರಿಗೆ ಬನ್ನಿ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ಎಜಾಜುಲ್ ಹಕ್ ಅವರು ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರನ್ನು ಕೋರಿದರು.

1979: ಅಮೆರಿಕದ ಬಾಕ್ಸರ್ ಮಹಮ್ಮದ್ ಅಲಿ ಬಾಕ್ಸಿಂಗ್ ನಿಂದ ತಮ್ಮ ನಿವೃತ್ತಿ ಘೋಷಿಸಿದರು. ಜಗತ್ತಿನ ಮಹಾನ್ ಹೆವಿವೇಯ್ಟ್ ಬಾಕ್ಸರ್ಗಳಲ್ಲಿ ಇವರು ಒಬ್ಬರು. 20ನೇ ಶತಮಾನದ ಮಹಾನ್ ಅಥ್ಲೆಟ್ ಗಳಲ್ಲೂ ಒಬ್ಬರೆಂದು ಖ್ಯಾತರಾಗಿದ್ದಾರೆ.

1967: ಜಗತ್ತಿನ ಪ್ರಪ್ರಥಮ ಎಟಿಎಂ (ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್) ಲಂಡನ್ನಿನ ಎನ್ ಫೀಲ್ಡಿನಲ್ಲಿ ಸ್ಥಾಪನೆಗೊಂಡಿತು. ಬ್ಯಾಂಕ್ ಗ್ರಾಹಕರಿಗೆ ಯಾವುದೇ ಸಮಯದಲ್ಲಿ ಮಾನವ ನೆರವು ಇಲ್ಲದೆಯೇ ಹಣ ಹಿಂತೆಗೆದುಕೊಳ್ಳಲು, ಬ್ಯಾಲೆನ್ಸ್ ನೋಡಿಕೊಳ್ಳಲು ಈ ಎಲೆಕ್ಟ್ರಾನಿಕ್ ಯಂತ್ರ ಅವಕಾಶ ಕಲ್ಪಿಸುತ್ತದೆ.

1961: ಕ್ಯಾಂಟರ್ಬರಿ ಕ್ಯಾಥೆಡ್ರಲ್ ನಲ್ಲಿ 100ನೇ ಕ್ಯಾಂಟರ್ ಬರಿ ಆರ್ಚ್ ಬಿಷಪ್ ಆಗಿ ಆರ್ಥರ್ ಮೈಕೆಲ್ ರಾಮ್ ಸೆ ಅವರಿಗೆ ಪಟ್ಟಗಟ್ಟಲಾಯಿತು.

1943: ಸಂಗೀತ ಕಲಾವಿದರ, ಸಂಗೀತ ತಜ್ಞರ ಮನೆತನದಲ್ಲಿ ಹುಟ್ಟಿ ಸಂಗೀತ ವಿದುಷಿ ಎನಿಸಿಕೊಂಡು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಹಾಡಿ ಮೋಡಿ ಮಾಡಿದ ಗಾಯಕಿ ಸರೋಜಾ ನಟರಾಜನ್ ಜನನ.

1839: ಪಂಜಾಬಿನ ಮಹಾರಾಜ ರಣಜಿತ್ ಸಿಂಗ್ ತನ್ನ 58ನೇ ವಯಸ್ಸಿನಲ್ಲಿ ಲಾಹೋರಿನಲ್ಲಿ ಮೃತನಾದ. ಆತನ ನಾಲ್ವರು ಪತ್ನಿಯರು ಮತ್ತು 7 ಮಂದಿ ದಾಸಿಯರು ಸಿಂಗ್ ಚಿತೆಗೆ ಹಾರಿ ಆತ್ಮಾರ್ಪಣೆ ಮಾಡಿಕೊಂಡರು. ರಣಜಿತ್ ಸಿಂಗ್ ಸಾವಿನ ಆರು ವರ್ಷಗಳಿಗೂ ಕಡಿಮೆ ಅವದಿಯಲ್ಲಿ ಆತ ಕಟ್ಟಿದ್ದ ಸಿಖ್ ರಾಜ್ಯ ನಾಯಕರ ಪೈಪೋಟಿಯಿಂದ ಉಂಟಾದ ಆಂತರಿಕ ಗೊಂದಲದ ಪರಿಣಾಮವಾಗಿ ಪತನಗೊಂಡಿತು.

1829: ವಾಷಿಂಗ್ಟನ್ ಡಿ.ಸಿ.ಯ ಸ್ಮಿತ್ ಸೋನಿಯನ್ ಇನ್ ಸ್ಟಿಟ್ಯೂಟ್ ಸ್ಥಾಪನೆಗೆ ನಿಧಿ ಒದಗಿಸಿದ ಇಂಗ್ಲಿಷ್ ವಿಜ್ಞಾನಿ ಜೇಮ್ಸ್ ಸ್ಮಿತ್ ಸನ್ (1765-1829) ಜಿನೋವಾದಲ್ಲಿ ಮೃತನಾದ. ತಾನು ಜನಿಸಿದ ಸಂದರ್ಭ ಕುರಿತ ವಿವಾದಗಳ ಅಸಮಾಧಾನದ ಹಿನ್ನೆಲೆಯಲ್ಲಿ ಆತ ತನ್ನ ಹಣವನ್ನೆಲ್ಲ ಅಮೆರಿಕದ ಸಂಸ್ಥೆಗೆ ನೀಡಿದ. 1904ರಲ್ಲಿ ಆತನ ಅಸ್ಥಿಯನ್ನು ಬಿಗಿ ಭದ್ರತೆಯ ಮಧ್ಯೆ ಅಮೆರಿಕಕ್ಕೆ ತಂದು ಸ್ಮಿತ್ ಸೋನಿಯನ್ ಸಂಸ್ಥೆಯ ಮೂಲ ಕಟ್ಟಡದಲ್ಲಿ ಇರಿಸಲಾಯಿತು.

No comments:

Post a Comment