Monday, June 24, 2019

ಇಂದಿನ ಇತಿಹಾಸ History Today ಜೂನ್ 24

ಇಂದಿನ ಇತಿಹಾಸ History Today ಜೂನ್ 24
2018: ಬಹಾದುರ್ ಗಢ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ರಾಷ್ಟ್ರದಲ್ಲಿ ನಡೆಯುತ್ತಿರುವ ಮೆಟ್ರೋ ಜಾಲ ವಿಸ್ತರಣೆಯು ’ಒಕ್ಕೂಟ ಸಹಕಾರಕ್ಕೆ ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು.  ದೆಹಲಿ ಮೆಟ್ರೋ ಗೀನ್ ಲೈನ್ ನ ಮುಂಡ್ಕ- ಬಹಾದುರ್ ಗಢ ವಿಭಾಗದ ಉದ್ಘಾಟನೆ ನೆರವೇರಿಸಿ ಮೋದಿ ಅವರು ಮಾತನಾಡುತ್ತಿದ್ದರು. ಏಳು ನಿಲ್ದಾಣಗಳನ್ನು ಒಳಗೊಂಡ ೧೧ ಕಿಮೀ ಉದ್ದದ ಎತ್ತರಿಸಿದ ಕಾರಿಡಾರ್ ದೆಹಲಿ ಮತ್ತು ಹರಿಯಾಣ ನಡುವಣ ಮೂರನೇ ಮೆಟ್ರೋ ಸಂಪರ್ಕವಾಗಿದೆ. ಇದರ ಹೊರತಾಗಿ ಗುರುಗ್ರಾಮ ಮತ್ತು ಫರೀದಾಬಾದ್ ಗೂ ಮೆಟ್ರೋ ಸಂಪರ್ಕ ಕಲ್ಪಿಸಲಾಗಿದೆ.  ಮೆಟ್ರೋ ಜಾಲ ಸ್ಥಾಪನೆಗೆ ಹಲವಾರು ರಾಷ್ಟ್ರಗಳು ನಮಗೆ ನೆರವಾಗಿವೆ. ಈಗ ನಾವು ಇತರರಿಗೆ ನೆರವಾಗುವ ಮೂಲಕ ಅಂತಾರಾಷ್ಟ್ರೀಯ ಬಾಂಧವ್ಯ ಸ್ಥಾಪನೆಯಲ್ಲಿ ಉದಾಹರಣೆಯಾಗುತ್ತಿದ್ದೇವೆ ಎಂದು ಮೋದಿ ಹೇಳಿದರು. ಭಾರತದ ಹಲವಾರು ನಗರಗಳಲ್ಲಿ ಮೆಟ್ರೋ ಜಾಲವನ್ನು ವಿಸ್ತರಿಸಲಾಗುತ್ತಿದ್ದು, ಬೋಗಿಗಳನ್ನು ದೇಶೀಯವಾಗಿಯೇ ನಿರ್ಮಿಸಲು ಆಧುನಿಕ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ನುಡಿದರು. ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಜಾಲ ವಿಸ್ತರಣೆಯಿಂದಾಗಿ ಭಾರತದಲ್ಲಿನ ಮೆಟ್ರೋ ಜಾಲವು ಬೀಜಿಂಗ್ ಮತ್ತು ಲಂಡನ್ ಬಳಿಕ ವಿಶ್ವದ ಐದನೇ ದೊಡ್ಡ ಜಾಲವಾಗಲಿದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರದಲ್ಲಿ ಮೆಟ್ರೋ ಜಾಲದ ಪರಿಣಾಮವಾಗಿ ರಸ್ತೆ ಮೇಲಿನ ವಾಹನಗಳ ಸಂಖ್ಯೆ ೬ ಲಕ್ಷದಷ್ಟು ಕಡಿಮೆಯಾಗಿದ್ದು, ಸಮಯ ಮತ್ತು ಹಣ ಉಳಿತಾಯದ ಜೊತೆಗೆ ಮಾಲಿನ್ಯವನ್ನೂ ತಗ್ಗಿಸಿದೆ ಎಂದು ಅವರು ಹೇಳಿದರು.  ಬಹಾದುರ್ ಗಢ ಅಭಿವೃದ್ಧಿಯ ಹೆಬ್ಬಾಗಿಲು: ಬಹಾದುರ್ ಗಢವು ’ಹರಿಯಾಣದ ಹೆಬ್ಬಾಗಿಲು ಎಂಬುದಾಗಿ ಖ್ಯಾತಿ ಪಡೆದಿದ್ದು, ಈಗ ಮೆಟ್ರೋ ಜಾಲ ಆಗಮನದ ಪರಿಣಾಮವಾಗಿ ’ಅಭಿವೃದ್ಧಿಯ ಹೆಬ್ಬಾಗಿಲು ಆಗಲಿದೆ. ಪ್ರದೇಶದಲ್ಲಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಉದ್ಯಮವು ಮೆಟ್ರೋ ಸಂಪರ್ಕಕ್ಕಾಗಿ ಕಾದಿತ್ತು. ಬಹಾದುರ್ ಗಢದಲ್ಲಿ ಹಲವಾರು ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ಹಾಗೂ ವಿದ್ಯಾರ್ಥಿಗಳೂ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಮೋದಿ ಹೇಳಿದರು.  ಮೆಟ್ರೋಕ್ಕೆ ಸಂಬಂಧಿಸಿದಂತೆ ತಮ್ಮ ಸರ್ಕಾರವು ಹೊಸ ತಂತ್ರಜ್ಞಾನ ಮತ್ತು ಗುಣಮಟ್ಟದ ಬಳಕೆ ಸಲುವಾಗಿ ಕಳೆದ ವರ್ಷ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈಗ ಮೆಟ್ರೋವಿಸ್ತರಣೆಯು ಉತ್ತಮಗುಣಮಟ್ಟ, ಸ್ವಚ್ಛತೆ, ಸುರಕ್ಷತೆ ಮತ್ತು ಸ್ಮಾರ್ಟ್ ಟ್ರಾನ್ಸಪೋರ್ಟ್ ಜನಸಮೂಹಕ್ಕೆ ಲಭ್ಯವಾಗಲಿದೆ ಎಂದು ಅವರು ನುಡಿದರು. ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಕೇಂದ್ರದ ನಗರಾಭಿವೃದ್ಧಿ ರಾಜ್ಯ ಸಚಿವ ಹರದೀಪ್ ಪುರಿ ಅವರೂ ಹಾಜರಿದ್ದರು.

2018: ಲಕ್ನೋ: ಉತ್ತರ ಪ್ರದೇಶದ ಹಿರಿಯ ಸಂಪುಟ ಸದಸ್ಯ ಹಾಗೂ ಸುಹೈಲ್ ದೇವ್ ಬಹುಜನ ಸಮಾಜ ಪಕ್ಷ (ಎಸ್ ಬಿಎಸ್ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜಭರ್ ಅವರು ವಾರಾಣಸಿಯ ಫತೇಪುರ ಖಂಡಾ ಗ್ರಾಮದಲ್ಲಿ ತಮ್ಮ ಮನೆಯ ಹೊರಭಾಗದಲ್ಲಿ ಸ್ವತಃ ರಸ್ತೆ ನಿರ್ಮಾಣ ಆರಂಭಿಸಿದ್ದು, ಬಿಜೆಪಿ ಸರ್ಕಾರಕ್ಕೆ ಮುಜುಗರದ ಸ್ಥಿತಿ ಉಂಟಾಯಿತು.  ತನ್ನ ಪಕ್ಷದ ಸಂಕೇತವಾಗಿರುವ ಹಳದಿ ಮುಂಡಾಸನ್ನು ತಲೆಗೆ ಕಟ್ಟಿಕೊಂಡು ಹಿಂದುಳಿದ ವರ್ಗಗಳು ಮತ್ತು ದಿವ್ಯಾಂಗರ ಕಲ್ಯಾಣ ಸಚಿವ ರಾಜಭರ್ ಅವರು ಮಣ್ಣು ತೆಗೆದುಹಾಕುವ ಸಲುವಾಗಿ ಶನಿವಾರ ಸ್ವತಃ ಹಾರೆ, ಪಿಕ್ಕಾಸಿ ಹಿಡಿದುಕೊಂಡು ರಸ್ತೆಯನ್ನು ಸಮತಟ್ಟುಗೊಳಿಸುವ ಕೆಲಸ ಆರಂಭಿಸಿದರು. ‘ಸಚಿವರಿಗೇ ರಸ್ತೆ ಮಾಡಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರ ಪರಿಸ್ಥಿತಿ ಏನಾದೀತು ಯೋಚಿಸಿ ಎಂದು ರಾಜಭರ್ ಅವರ ಪುತ್ರ ದೂರವಾಣಿ ಮೂಲಕ ಮಾತನಾಡುತ್ತಾ ಹೇಳಿದರು. ಸಚಿವರ ಹಿರಿಯ ಪುತ್ರ ಅರವಿಂದ್ ಅವರ ಮದುವೆ ಜೂನ್ ೨೧ರಂದು ನೆರವೇರಿದ್ದು, ಆರತಕ್ಷತೆಯು ಅವರ ಗ್ರಾಮದಲ್ಲಿಯೇ ಭಾನುವಾರಕ್ಕೆ ನಿಗದಿಯಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಕ್ಷದ ಸಂಘಟನಾ ಕಾರ್‍ಯದರ್ಶಿ ಸುನಿಲ್ ಬನ್ಸಲ್ ಮತ್ತು ಇತರ ಸಚಿವರು ಸೇರಿದಂತೆ ಹಲವಾರು ಅತಿಗಣ್ಯ ವ್ಯಕ್ತಿಗಳು (ವಿವಿಐಪಿ) ಪಾಲ್ಗೊಳ್ಳುವ ಸಾಧ್ಯತೆಗಳಿವೆ.  ಸಚಿವರು ಮತ್ತು ಅವರ ಕುಟುಂಬವು ರಸ್ತೆಯ ದುಃಸ್ಥಿತಿ ಮತ್ತು ಬರಲಿರುವ ಮದುವೆ ಬಗ್ಗೆ ಕಳೆದ ಆರು ತಿಂಗಳುಗಳಿಂದ ಜಿಲ್ಲಾ ಆಡಳಿತದ ಗಮನ ಸೆಳೆದಿದ್ದರು. ಆದರೆ ಅರ್ಜಿಗಳು ಕಿವುಡು ಕಿವಿಗಳ ಮೇಲೆ ಬಿದ್ದವು. ಮದುವೆಯ ಆರತಕ್ಷತೆಗೆ ಹೆಚ್ಚು ಸಮಯ ಇಲ್ಲದೇ ಇರುವುದರಿಂದ ನಮಗೆ ಸ್ವತಃ ಕೆಲಸ ಆರಂಭಿಸುವುದರ ಹೊರತು ಬೇರೆ ದಾರಿ ಉಳಿಸಯಲಿಲ್ಲ ಎಂದು ಎಸ್ ಬಿ ಎಸ್ ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ರಾಜಭರ್ ಹೇಳಿದರು.  ರಾಜಭರ್ ಅವರು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಕಳೆದ ಒಂದು ವರ್ಷದಿಂದ ಟೀಕಿಸುತ್ತಿದ್ದು, ಹಲವಾರು ಬಾರಿ ಬಹಿರಂಗವಾಗಿ ರಾಜ್ಯ ಸರ್ಕಾರದ ಮೇಲೆ ದಾಳಿ ನಡೆಸಿದ್ದರು.  ರಾಜ್ಯಸಭೆಗೆ ಏಪ್ರಿಲ್ ನಲ್ಲಿ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಲೂ ಅವರು ಸಜ್ಜಾಗಿದ್ದರು. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ಬಿಗಡಾಯಿಸದಂತೆ ತಡೆದಿದ್ದರು.  ಈ ತಿಂಗಳ ಆದಿಯಲ್ಲಿ ರಾಜಭರ್ ಅವರು ಸಮಾಜವಾದಿ ಪಕ್ಷದ (ಎಸ್ಪಿ) ಹಿರಿಯ ನಾಯಕ ಶಿವಪಾಲ್ ಸಿಂಗ್ ಯಾದವ್ ಅವರನ್ನು ಬೇಟಿ ಮಾಡುವ ಮೂಲಕ ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಹಿಂದುಳಿದ ಶಕ್ತಿಗಳ ಸಂಭಾವ್ಯ ಮರುಹೊಂದಾಣಿಕೆ ಬಗೆಗಿನ ಊಹಾಪೋಹಗಳಿಗೆ ನಾಂದಿ ಹಾಡಿದ್ದರು.

2018: ಬೆಳಗಾವಿ: ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಬರದೆ ಜೀವನ ಕಷ್ಟಕರವಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯವರು ಹಣ ನೀಡದೆ ಸತಾಯಿಸುತ್ತಿರುವುದರಿಂದ ಬಹಳ ನೊಂದಿದ್ದು, ಕುಟುಂಬದ ಸದಸ್ಯರಿಗೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಜಿಲ್ಲೆಯ ಖಾನಾಪುರದ ಲಿಂಗನಮಕ್ಕಿ ಗ್ರಾಮದ ಕಬ್ಬು ಬೆಳೆಗಾರ ಶಂಕರ ಮಾಟೊಳ್ಳಿ ವಿಧಿವಶರಾದರು.  ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರು ಹಾಸಿಗೆ ಹಿಡಿದಿದ್ದು ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಪತ್ನಿಯ ಆರೋಗ್ಯವೂ ತೀವ್ರವಾಗಿ ಹದಗೆಟ್ಟಿದೆ ಎಂದು ವರದಿಗಳು ಹೇಳಿದವು.  ಮಾಟೋಳ್ಳಿ  ಮೇ ೧೦ರಂದು ರಿಜಿಸ್ಟರ್ ಅಂಚೆ ಮೂಲಕ ಅವರು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಈ ಪತ್ರ ಕಳಿಸಿದ್ದರು. ಸಚಿವ ರಮೇಶ ಜಾರಕಿಹೊಳಿ ಒಡೆತನದ ಗೋಕಾಕ ತಾಲೂಕಿನ ಹಿರೇನಂದಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸಲಾಗಿತ್ತು. ಗಾಡಿ ಬಾಡಿಗೆ ಹಾಗೂ ಕಟಾವ್ ಸೇರಿ ೮೦ ಸಾವಿರದಿಂದ ಲಕ್ಷದವರೆಗೆ ಹಣ ಬರಬೇಕಾಗಿದೆ. ಕಾರ್ಖಾನೆಯ ಅಧಿಕಾರಿಗಳು ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಶಂಕರ ಮಾಟೊಳ್ಳಿ ಅವರ ಪುತ್ರ ಬಾಳಪ್ಪ ತಿಳಿಸಿದ್ದರು.   ರಾಮದುರ್ಗ ತಾಲೂಕಿನಲ್ಲಿರುವ ಶಿವಸಾಗರ ಸಕ್ಕರೆ ಕಾರ್ಖಾನೆಯಿಂದ ಸುಮಾರು ೫೦ ಸಾವಿರ ರೂಪಾಯಿ ಬರಬೇಕು. ಆಗ ಕಾರ್ಖಾನೆಯವರು ಟನ್ ಕಬ್ಬಿಗೆ ೨,೫೦೦ ರೂ. ದರ ಹೇಳಿ ನಂತರ ೧,೩೦೦ ರೂ. ನೀಡಿ ಮೋಸ ಮಾಡಿದ್ದಾರೆ. ಈ ಹಣವೂ ಪೂರ್ಣವಾಗಿ ಪಾವತಿಯಾಗಿಲ್ಲ ಎಂದು ನೋವು ತೋಡಿಕೊಂಡಿದ್ದರು.  ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದು ಕಾರ್ಖಾನೆಗೆ ಕಳಿಸುತಿದ್ದೇವೆ. ಬ್ಯಾಂಕಿನಲ್ಲಿ ೭.೫ ಲಕ್ಷ ರೂ. ಸಾಲ ಮಾಡಲಾಗಿದೆ. ತಂದೆ, ತಾಯಿಯ ಚಿಕಿತ್ಸೆ ಹಾಗೂ ಸಾಲ ತೀರಿಸಲು ಇದ್ದ ಲಾರಿಯನ್ನೂ ಮಾರಾಟ ಮಾಡಿದ್ದೇವೆ ಎಂದು ಅವರು ಪತ್ರದಲ್ಲಿ ಅಳಲು ತೋಡಿಕೊಂಡಿದ್ದರು.

2018: ನವದೆಹಲಿ: ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಕೆಳ ಅಧಿಕಾರಿಯ ಅಧಿಕಾರಿಯ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾ ಮೇಜರ್ ಒಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದರು. ಮೇಜರ್ ನಿಖಿಲ್ ಹಂಡಾ ಅವರನ್ನು ದೆಹಲಿಗೆ ಕರೆತರಲು ಯತ್ನಗಳು ನಡೆಯುತ್ತಿವೆ ಎಂದು ವರದಿ ತಿಳಿಸಿತು.  ಶೈಲಜಾ ದ್ವಿವೇದಿ ಅವರು ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿನ ಬ್ರಾರ್ ಚೌಕದಲ್ಲಿ ಹಿಂದಿನ ದಿನ ಮಧ್ಯಾಹ್ನ ಕತ್ತು ಸೀಳಲ್ಪಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದುದು ಪತ್ತೆಯಾಗಿತ್ತು.
ಶೈಲಜಾ ಅವರು ಸೇನಾ ಆಸ್ಪತ್ರೆಗೆ ಫಿಸಿಯೋಥೆರಪಿ ಸಲುವಾಗಿ ಬೆಳಗ್ಗೆ ೧೦ ಗಂಟೆಗೆ ಹೋಗಿದ್ದರು. ಅವರ ಶವ ಮಧ್ಯಾಹ್ನ ೧ ಗಂಟೆಗೆ ಪತ್ತೆಯಾಗಿತ್ತು. ದಿಮಾಪುರದಲ್ಲಿ ನಿಯೋಜಿತರಾಗಿದ್ದ ಮೇಜರ್ ಹಂಡಾ ಅವರು ಆಸ್ಪತ್ರೆಯ ಒಳಗೆ ಆಕೆಯನ್ನು ನೋಡಿದ್ದ ಕೊನೆಯ ವ್ಯಕ್ತಿಯಾಗಿದ್ದರು.  ಕತ್ತಿನಲ್ಲಿ ಗಾಯದ ಗುರುತುಗಳೊಂದಿಗೆ ಶೈಲಜಾ ಅವರ ಶವ ಪತ್ತೆಯಾಗಿತ್ತು. ಪತ್ನಿ ಕಣ್ಮರೆಯಾಗಿರುವ ಬಗ್ಗೆ ದೂರು ನೀಡಲು ಶೈಲಜಾ ಗಂಡ ಪೊಲೀಸ್ ಠಾಣೆಗೆ ಹೋದಾಗ ಆಕೆಯ ಗುರುತು ಪತ್ತೆಯಾಗಿತ್ತು.
ಕೊಲೆಯ ಉದ್ದೇಶ ವೈಯಕ್ತಿಕ ಕಾರಣಗಳಾಗಿರಬಹುದು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

2018: ನವದೆಹಲಿ: ಹಿಂಸೆ ಮತ್ತು ಕ್ರೂರತ್ವದಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಶಾಂತಿ ಮತ್ತು ಅಹಿಂಸೆಯೇ ಯಾವಾಗಲೂ ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು  ತಮ್ಮ ೪೫ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದರು.  ಗುರುನಾನಕ್ ದೇವ್, ಕಬೀರ್ ದಾಸ್ ಮತ್ತಿತರರನ್ನು ಉಲ್ಲೇಖಿಸಿದ ಪ್ರಧಾನಿ, ಅವರೆಲ್ಲರೂ ಸಾಮಾಜಿಕ ಸೌಹಾರ್ದಕ್ಕಾಗಿ ಶ್ರಮಿಸಿದರು ಮತ್ತು ಜಾತೀಯತೆ ವಿರುದ್ಧ ಹೋರಾಡಿದರು ಎಂದು ನುಡಿದರು. ೨೦೧೯ಕ್ಕೆ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಆಗಿ ೧೦೦ ವರ್ಷ ಆಗಲಿದೆ ಎಂದು ನೆನಪು ಮಾಡಿದ ಪ್ರಧಾನಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತಹ ಘಟನೆಗಳಿಂದ ನಾವು ಕಲಿಯಬೇಕಾದ ಪಾಠ ಏನೆಂದರೆ ’ಹಿಂಸಾಚಾರ ಮತ್ತು ಕ್ರೂರತ್ವವು ಯಾವುದೇ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ಶಾಂತಿ, ಅಹಿಂಸೆ, ತ್ಯಾಗ ಮತ್ತು ಬಲಿದಾನ ಕೊನೆಗೆ ಗೆಲ್ಲುತ್ತದೆ ಎಂಬುದು ಎಂದು ಹೇಳಿದರು.  ಜೂನ್ ೨೧ರಂದು ನಡೆದ ’ವಿಶ್ವ ಯೋಗ ದಿನದ ಮಹತ್ವದ ಬಗ್ಗೆ ಮಾತನಾಡಿದ  ಅವರು ಯೋಗ ದಿನದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಆರೋಗ್ಯ ಕ್ರಾಂತಿಯಾಗುತ್ತಿದೆ ಎಂದು ಹೇಳಿದರು. ವಿಶ್ವ ಯೋಗ ದಿನದಂದು ಇಡೀ ವಿಶ್ವವೇ ಒಂದಾಗಿತ್ತು. ವಿಶ್ವದಾದ್ಯಂತ ಜನತೆ ಉತ್ಸಾಹ ಮತ್ತು ಶಕ್ತಿಯಿಂದ ಯೋಗಾಭ್ಯಾಸ ಮಾಡಿದರು. ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಿಂದ ಹಿಡಿದು ಸೌದಿ ಅರೇಬಿಯಾದವರೆಗೂ ಯೋಗ ದಿನಾಚರಣೆ ನಡೆದಿದ್ದು, ಮಹಿಳೆಯರು ಸಹ ಯೋಗ ಪ್ರದರ್ಶನ ನಡೆಸಿದರು ಎಂದು ಮೋದಿ ನುಡಿದರು.  ವಸುಧೈವ ಕುಟುಂಬಂ ನೀತಿಯಂತೆ ನಮ್ಮ ದೇಶದ ಯೋಗ ಕಾರ್ಯಕ್ರಮ ಇದೀಗ ವಿಶ್ವವ್ಯಾಪಿ ಎಂದು ಮೋದಿ ಹೇಳಿದರು.  ಜೂನ್ ೨೩ರಂದು ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿಯವರ ಪುಣ್ಯ ದಿನ ಎಂಬುದಾಗಿ ಸ್ಮರಿಸಿಕೊಂಡ ಪ್ರಧಾನಿ, ಭಾರತದ ಏಕತೆ, ಸಮಗ್ರತೆ, ಶಿಕ್ಷಣ ಹಾಗೂ ಹಲವು ಕ್ಷೇತ್ರಗಳಿಗೆ ಮುಖರ್ಜಿ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ನೆನೆದರು.  ಆಫ್ಘಾನಿಸ್ತಾನ ವಿರುದ್ದ ಟೆಸ್ಟ್ ಪಂದ್ಯ ಗೆದ್ದ ಬಳಿಕ ಭಾರತ ತಂಡ ಕಪ್ ಅನ್ನು ಅವರ ಜತೆಯಲ್ಲೂ ಹಂಚಿಕೊಂಡದ್ದಕ್ಕೆ ಕೂಡಾ ಮೋದಿ ಶ್ಲಾಘಿಸಿದರು.  ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಒಂದು ವರ್ಷ ತುಂಬುತ್ತಿದೆ. ದೇಶದ ಜನರ ಕನಸಾಗಿದ್ದ ಒಂದು ದೇಶ ಒಂದು ತೆರಿಗೆ ನೀತಿ ನನಸಾಗಿದೆ. ಇದರ ಶ್ರೇಯಸ್ಸು ಎಲ್ಲ ರಾಜ್ಯಗಳಿಗೂ ಸಲ್ಲಬೇಕು ಪ್ರಧಾನಿ ಹೇಳಿದರು.

2018: ನವದೆಹಲಿ: ಉನ್ನತ ನ್ಯಾಯಾಧೀಶರ ಪುತ್ರನೊಬ್ಬ ಸೇರಿದಂತೆ ಇಬ್ಬರು ವಕೀಲರನ್ನು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸನ್ನು ಅವರ ವಿರುದ್ಧದ ದೂರುಗಳನ್ನು ಉಲ್ಲೇಖಿಸಿ ಸರ್ಕಾರ ಎರಡನೇ ಬಾರಿಗೆ ಹಿಂದಿರುಗಿಸಿತು. ಮೊಹಮ್ಮದ್ ಮನ್ಸೂರ್ ಮತ್ತು ಬಶಾರತ್ ಅಲಿ ಖಾನ್ ಈ ಇಬ್ಬರು ವಕೀಲರ ಹೆಸರುಗಳನ್ನು ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇವರ ಪೈಕಿ ಮನ್ಸೂರ್ ಅವರು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಗೀರ್ ಅಹಮದ್ ಅವರ ಪುತ್ರ. ಅಹಮದ್ ಅವರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಬಗೆಗಿನ ವಿಶೇಷ ಪ್ರಸ್ತಾಪದ ಜೊತೆಗೆ ಕೇಂದ್ರ -ರಾಜ್ಯ ಬಾಂಧವ್ಯಗಳ ಕುರಿತು ಅಧ್ಯಯನಕ್ಕೆ ರಚಿಸಿದ್ದ ವರ್ಕಿಂಗ್ ಗ್ರೂಪ್ ನೇತೃತ್ವ ವಹಿಸಿದ್ದರು. ಎನ್ ಡಿಎ ಸರ್ಕಾರ ಈ ಹಿಂದಿನ ಸಂದರ್ಭದಲ್ಲಿ ಎರಡು ಹೆಸರುಗಳನ್ನು ಶಿಫಾರಸು ಮಾಡಿ ಕಳುಹಿಸಲಾಗಿದ್ದ ಕಡತವನ್ನು ಅಭ್ಯರ್ಥಿಗಳ ವಿರುದ್ಧ ದೂರುಗಳಿವೆ ಎಂದು ತಿಳಿಸಿ ಹಿಂದಿರುಗಿಸಿತ್ತು. ಆದರೆ ದೂರುಗಳನ್ನು ತಿರುಳಿಲ್ಲದ ದೂರುಗಳು ಎಂಬುದಾಗಿ ಹೇಳಿದ್ದ ಕೊಲಿಜಿಯಂ ಕಡತಗಳನ್ನು ಪುನಃ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು.  ಎರಡೂವರೆ ವರ್ಷಗಳ ಬಳಿಕ ಕಳೆದ ತಿಂಗಳು, ಸರ್ಕಾರ ಕಡತಗಳನ್ನು ಕೊಲಿಜಿಯಂಗೆ ಹಿಂದಿರುಗಿಸಿ ಮರುಪರಿಶೀಲಿಸುವಂತೆ ಸೂಚಿಸಿತ್ತು. ನ್ಯಾಯಮೂರ್ತಿ ಜೆ. ಚೆಲಮೇಶ್ವರ ಅವರು ಶುಕ್ರವಾರ ನಿವೃತ್ತರಾದ ಹಿನ್ನೆಲೆಯಲ್ಲಿ ಈಗ ಪಂಚ ಸದಸ್ಯ ಕೊಲಿಜಿಯಂನ್ನು  ಪುನರ್ರಚಿಸಬೇಕಾಗಿದೆ.
ಹೊಸ ಸದಸ್ಯರ ಸೇರ್ಪಡೆ ಬಳಿಕ ಸುಪ್ರೀಂಕೋರ್ಟ್ ಕೊಲಿಜಿಯಂ ಎರಡೂ ಹೆಸರುಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಿದೆ. ಇಬ್ಬರೂ ವಕೀಲರು ಅಲಹಾಬಾದ್ ಹೈಕೋರ್ಟಿನಲ್ಲಿ ಹಿರಿಯ ವಕೀಲರಾಗಿ ಕೋರ್ಟಿಗೆ ನಿಯಮಿತವಾಗಿ ಹಾಜರಾಗುತ್ತಿದ್ದಾರೆ.  ಈ ಮಧ್ಯೆ ಸರ್ಕಾರವು ವಕೀಲ ನಜೀರ್ ಅಹಮದ್ ಬೇಗ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವಂತೆ ಶಿಫಾರಸು ಮಾಡಲಾದ ಕಡತವನ್ನೂ ಹಿಂದಿರುಗಿಸಲು ನಿರ್ಧರಿಸಿದೆ. ವಾಸಿಂ ಸಿದಿಖ್ ನರ್ಗಲ್, ಸಿಂಧು ಶರ್ಮ ಮತ್ತು ಜಿಲ್ಲಾ ನ್ಯಾಯಾಧೀಶ ರಶೀದ್ ಅಲಿ ದರ್ ಈ ಮೂರು ಹೆಸರುಗಳನ್ನು ಕಾನೂನು ಸಚಿವಾಲಯವು ಪರಿಶೀಲಿಸುತ್ತಿದೆ. ಬೇಗ್ ಹೆಸರನ್ನು ಕೊಲಿಜಿಯಂಗೆ ಹಿಂದಿರುಗಿಸಿರುವುದು ಏಕೆ ಎಂಬ ಬಗ್ಗೆ ತತ್ ಕ್ಷಣಕ್ಕೆ ಗೊತ್ತಾಗಿಲ್ಲ.

2018: ಶ್ರೀನಗರ: ಲಷ್ಕರ್ -ಇ-ತೊಯ್ಬಾ ಸಂಘಟನೆಯ ವಿಭಾಗೀಯ ಕಮಾಂಡರ್ ಶಕೂರ್ ಅಹಮದ್ ದರ್ ಸೇರಿದಂತೆ ಇಬ್ಬರು ಉಗ್ರಗಾಮಿಗಳು ಭದ್ರತಾ ಪಡೆಗಳ ಜೊತೆಗಿನ ಘರ್ಷಣೆಯಲ್ಲಿ ದಕ್ಷಿಣ ಕಾಶ್ಮೀರದ ಕುಲಗಂ ಜಿಲ್ಲೆಯಲ್ಲಿ ಹತರಾಗಿದ್ದು, ಇನ್ನೊಬ್ಬ ಉಗ್ರಗಾಮಿ ಶರಣಾದ.  ಕಾಶ್ಮೀರದಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಸೇರಿದ ೨೧ ಮಂದಿ ಉಗ್ರಗಾಮಿಗಳ ಪಟ್ಟಿಯಲ್ಲಿ ದರ್ ಒಬ್ಬನಾಗಿದ್ದು, ಈ ಉಗ್ರಗಾಮಿಗಳ ಹುಟ್ಟಡಗಿಸಲು ಭದ್ರತಾ ಪಡೆಗಳು ಕಾರ್ಯೋನ್ಮುಖವಾಗಿವೆ.  ಕುಲಗಂನ ತೆಂಗ್ಪೋರಾ ನಿವಾಸಿಯಾದ ದರ್ ಎ+ ವರ್ಗದ ಉಗ್ರಗಾಮಿಯಾಗಿದ್ದು ೨೦೧೬ರ ಸೆಪ್ಟೆಂಬರಿನಲ್ಲಿ ಲಷ್ಕರ್ ಸಂಘಟನೆಗೆ ಸೇರ್ಪಡೆಯಾಗಿದ್ದ. ಕುಲಗಂ ಜಿಲ್ಲೆಯ ಖೈಮೋಹ್‌ನ ಚೆಡ್ಡಾರ್ ಗ್ರಾಮದಲ್ಲಿ ಕೆಲವು ಉಗ್ರಗಾಮಿಗಳು ಇರುವ ಬಗ್ಗೆ ಲಭಿಸಿದ ಮಾಹಿತಿಯನ್ನು ಅನುಸರಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇನೆ ಮತ್ತು ಸಿಆರ್ ಪಿಎಫ್ ಸಿಬ್ಬಂದಿ ಜೊತೆಗೆ ಶಂಕಿತ ಮನೆಗೆ ಮುತ್ತಿಗೆ ಹಾಕಿದರು. ಶರಣಾಗುವಂತೆ ಭಯೋತ್ಪಾದಕರಿಗೆ ಎಚ್ಚರಿಕೆ ಕೊಡಲಾಯಿತು. ಆದರೆ ಅವರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದರು. ಪರಿಣಾಮವಾಗಿ ಗುಂಡಿನ ಘರ್ಷಣೆ ನಡೆಯಿತು ಎಂದು ಪೊಲೀಸರು ನುಡಿದರು.  ಗುಂಡಿನ ಘರ್ಷಣೆಯಲ್ಲಿ ದರ್ ಇನ್ನೊಬ್ಬ ಉಗ್ರಗಾಮಿಯ ಜೊತೆಗೆ ಹತನಾದ. ಸಾವನ್ನಪ್ಪಿದ ಎರಡನೇ ಉಗ್ರಗಾಮಿಯ ಗುರುತನ್ನು ಇನ್ನೂ ಪತ್ತೆ ಹಚ್ಚಬೇಕಾಗಿದೆ. ಆತ ಪಾಕಿಸ್ತಾನಿ ರಾಷ್ಟ್ರೀಯ ಎಂಬುದಾಗಿ ಶಂಕಿಸಲಾಗಿದೆ. ಮೂರನೇ ಉಗ್ರಗಾಮಿ ತನ್ನ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡಿನ ಜೊತೆಗೆ ಭದ್ರತಾ ಪಡೆಗಳಿಗೆ ಶರಣಾಗತನಾದ. ಶರಣಾಗತನಾದ ಉಗ್ರಗಾಮಿಯ ಗುರುತನ್ನು ಬಹಿರಂಗ ಪಡಿಸಲಾಗಿಲ್ಲ. ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಕಾಶ್ಮೀರ ವಲಯ) ಸ್ವಯಂ ಪ್ರಕಾಶ್ ಪನಿ ಹೇಳಿದರು. ಪುಲ್ವಾಮದ ಅವಂತಿಪೋರಾ ಪ್ರದೇಶದ ಲಾಮ್ ಗ್ರಾಮದಲ್ಲಿ ಉಗ್ರಗಾಮಿಗಳು ಶೋಧ ತಂಡದ ಮೇಲೆ ಗುಂಡು ಹಾರಿಸಿದ ಬಳಿಕ ಇನ್ನೊಂದು ಗುಂಡಿನ ಘರ್ಷಣೆ ನಡೆಯಿತು ಎಂದು ಪೊಲೀಸರು ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗಿನ ಘರ್ಷಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಜಮ್ಮು ಅಂಡ್ ಕಾಶ್ಮೀರ (ಐಎಸ್ ಐಕೆ)ಗೆ ಸೇರಿದ ನಾಲ್ವರು ಉಗ್ರಗಾಮಿಗಳನ್ನು ಶುಕ್ರವಾರ ಹತ್ಯೆಗೈದ ಕೇವಲ ೨ ದಿನಗಳಲ್ಲಿ ಈದಿನದ ಕಾರ್ಯಾಚರಣೆ ನಡೆಯಿತು. ಶುಕ್ರವಾರದ ಕಾರ್ಯಾಚರಣೆಯಲ್ಲಿ ಎ++ ಉಗ್ರಗಾಮಿ ಐಎಸ್ ಜೆಕೆ ಮುಖ್ಯಸ್ಥ ಶ್ರೀನಗರ ಎಚ್ ಎಂಟಿ ನಿವಾಸಿ ದಾವೂದ್ ಸೋಫಿ ಸಾವನ್ನಪ್ಪಿದ ಉಗ್ರಗಾಮಿಗಳಲ್ಲಿ ಸೇರಿದ್ದ.  ಆತ ಭದ್ರತಾ ಪಡೆಗಳು ಸಿದ್ಧ ಪಡಿಸಿದ ೨೧ ಮಂದಿ ಟಾಪ್ ಉಗ್ರಗಾಮಿಗಳ ಪಟ್ಟಿಯಲ್ಲಿ ಒಬ್ಬನಾಗಿದ್ದ.

2017: ನವದೆಹಲಿಚುನಾವಣೆ ವೆಚ್ಚದ ತಪ್ಪು ಮಾಹಿತಿ ನೀಡಿದ ಸಂಬಂಧ ಮಧ್ಯಪ್ರದೇಶದ ಹಿರಿಯ
ಸಚಿವ ನರೋತ್ತಮ್ಮಿಶ್ರಾ ಅವರನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶ ಮಾಡಿತು. ಆಯೋಗಕ್ಕೆ ಚುನಾವಣಾ ವೆಚ್ಚದ ಕುರಿತು ತಪ್ಪು ಮಾಹಿತಿ ಸಲ್ಲಿಸಿರುವ ಸಂಬಂಧ ಆಯೋಗ ಇಂದಿನಿಂದ ಅನ್ವಯವಾಗುವಂತೆ ಮೂರು ವರ್ಷ ಮಿಶ್ರಾ ಅವರನ್ನು ಅನರ್ಹಗೊಳಿಸಿದೆ ಎಂದು ಚುನಾವಣಾ ಆಯೋಗದ ವಕ್ತಾರರು ಖಚಿತಪಡಿಸಿದರು. ,ಮುಖ್ಯಮಂತ್ರಿ ಶಿವರಾಜ್ಸಿಂಗ್ಚೌಹಾಣ್ಅವರ ನಿಕಟವರ್ತಿ ನರೋತ್ತಮ್ಮಿಶ್ರಾ ಅವರು, 2008ರಲ್ಲಿ ನಡೆದ ಚುನಾವಣೆಯಲ್ಲಿ ಪೇಯ್ಡ್ ನ್ಯೂಸ್ ವೆಚ್ಚ ಸೇರಿದಂತೆ ಚುನಾವಣಾ ವೆಚ್ಚಗಳ ವಿವರಗಳನ್ನು ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ರಾಜೇಂದ್ರ ಭಾರತಿ ಆರೋಪಿಸಿದ್ದರು. 2013 ಜನವರಿ 15ರಂದು ಚುನಾವಣಾ ಆಯೋಗ ಮಿಶ್ರಾ ಅವರಿಗೆ ನೋಟಿಸ್ನೀಡಿತ್ತು. ಮಿಶ್ರಾ ಅವರು ಚುನಾವಣಾ ಆಯೋಗ ನೀಡಿರುವ ನೋಟಿಸನ್ನು ಪ್ರಶ್ನಿಸಿ ಹೈಕೋರ್ಟ್ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಯಾವುದೇ ಪರಿಹಾರ ಲಭಿಸಲಿಲ್ಲ. ಅಂತಿಮವಾಗಿ, ಚುನಾವಣಾ ಆಯೋಗ ಈದಿನ ತನ್ನ ತೀರ್ಪು ನೀಡಿತು. 

2016: ಬೀಜಿಂಗ್‌: ಚೀನಾದ ಗುಡ್ಡಗಾಡು ಪ್ರದೇಶ ನೈರುತ್ಯ ಸಿಚುವಾನ್ಪ್ರಾಂತ್ಯದಲ್ಲಿ ಗುಡ್ಡ
ಕುಸಿತದಿಂದ 140ಕ್ಕೂ ಹೆಚ್ಚು ಮಂದಿ ಕಲ್ಲು ಮಣ್ಣಿನಡಿ ಸಿಲುಕಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಘಟನೆಯಲ್ಲಿ ನೂರಾರು ಮಂದಿ ನಾಪತ್ತೆಯಾದರು. ಗುಡ್ಡ ಪ್ರದೇಶದ ಕ್ಸಿನ್ಮೊ ಗ್ರಾಮದ 40ಕ್ಕೂ ಹೆಚ್ಚು ಮನೆಗಳ ಮೇಲೆ ಭಾರಿ ಪ್ರಮಾಣದ ಗುಡ್ಡ ಕುಸಿದು ಬಿದ್ದಿತು. ಕಲ್ಲು ಮಣ್ಣಿನಡಿ ಹಲವರು ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆಎಂದು ಅಧಿಕಾರಿಗಳು ಹೇಳಿದರು. ಕಲ್ಲು ಮಣ್ಣಿನಡಿ ಸಿಲುಕಿರುವ ಬಹುತೇಕರು ಮೃತರಾಗಿರುವ ಸಾಧ್ಯತೆ ಇದೆ. ಹೀಗಾಗಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.
2009: ಮಾಜಿ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡರು. ವಿವಿಧ ರಾಜ್ಯಗಳ ರಾಜ್ಯಪಾಲರುಗಳ ನೇಮಕ ಕುರಿತಂತೆ ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆ ಹೊರಡಿಸಿತು. ಕರ್ನಾಟಕದ  ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು  ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು.

2009:  ಜಮ್ಮು ಖತ್ರಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಪಂಥಾಲ್ ಬಳಿ ಪ್ರಪಾತಕ್ಕೆ ಉರುಳಿದ ಪರಿಣಾಮ 25 ಮಂದಿ ಮೃತರಾಗಿ 48 ಜನ ಗಾಯಗೊಂಡರು. ಖತ್ರಾದಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಉರುಳಿತು ಎಂದು ಖತ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜುಗಲ್ ಕಿಶೋರ್ ತಿಳಿಸಿದರು.

2009: ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿದ  ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯ ರೈ, ಸಜ್ಲಾನ್ ಪವನ ವಿದ್ಯುತ್ ಕಂಪೆನಿಯ ಅಧ್ಯಕ್ಷೆ ತುಳಸಿಬಾಯಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಲಾಯಿತು. ತಮ್ಮ ಜಮೀನನ್ನು 20,000 ರೂಪಾಯಿಗೆ ಖರೀದಿಸಿ, ಸಜ್ಲಾನ್ ಕಂಪೆನಿ ಹೆಸರಲ್ಲಿ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ರೈತ ಆನಂದ ಲಾಲ್ ಠಾಕ್ರೆ ದೂರು ದಾಖಲಿಸಿದರು.  'ಜಮೀನನ್ನು ಸಜ್ಲಾನ್ ಕಂಪೆನಿಯವರು ಅಕ್ರಮವಾಗಿ ವಶಪಡಿಸಿಕೊಂಡು ಗಾಳಿಯಂತ್ರ ಜೋಡಿಸಿದ್ದಾರೆ' ಎಂದು ರೈತ ಠಾಕ್ರೆ ತಾವು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದರು. ಐಶ್ವರ್ಯ ರೈ ಅವರು ಸಜ್ಲಾನ್ ಕಂಪೆನಿಯಲ್ಲಿ ಷೇರುಹೊಂದಿದ್ದಾರೆ.

2009:  ಪಾಕಿಸ್ಥಾನದಲ್ಲಿ 1990ರಲ್ಲಿ ನಾಲ್ಕು ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಶಾಮೀಲಾದ ಆರೋಪದ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಪಾಕಿಸ್ಥಾನದ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ನ್ಯಾಯಮೂರ್ತಿ ರಾಜಾ ಫಯಾಜ್ ಅಹ್ಮದ್ ನೇತೃತ್ವದ ಮೂವರು ಸದಸ್ಯ ಪೀಠದ ಎದುರು ಸರಬ್ಜಿತ್ ಪರ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ಪೀಠವು ಮರಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ, 1991ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯಿತು. ಸರಬ್ಜಿತ್‌ಗೆ ರಾಣಾ ಅಬ್ದುಲ್ ಹಮೀದ್ ಎಂಬುವವರು ವಕೀಲರಾಗಿದ್ದರು.. ಕಳೆದ ವರ್ಷ ಅವರನ್ನು ಪಂಜಾಬ್ ಪ್ರಾಂತ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನಿಯುಕ್ತಿಗೊಳಿಸಲಾಗಿತ್ತು. ಅವರ ಬದಲಿಗೆ ಇನ್ನೊಬ್ಬ ವಕೀಲರನ್ನು ನಿಯೋಜಿಸಲಾಗಿತ್ತು.  ವಿಚಾರಣೆ ವೇಳೆ ಕೂಡಾ ಕೆಲವು ವಿಚಾರಣೆ ಸಂದರ್ಭದಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. 1990ರಲ್ಲಿ ಪಾಕಿಸ್ಥಾನದಲ್ಲಿ ನಡೆದ ನಾಲ್ಕು ಬಾಂಬ್ ಸ್ಫೋಟ ಕೃತ್ಯಗಳಲ್ಲಿ 14 ಮಂದಿ ಸತ್ತಿದ್ದರು. ಇದರ ಹಿಂದೆ ಸರಬ್ಜಿತ್ ಸಿಂಗ್ ಪಾತ್ರ ಇದೆ ಎಂದು ಆರೋಪಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ 2003ರಲ್ಲಿ ತಿರಸ್ಕರಿಸಿತ್ತು. 2005ರಲ್ಲಿ ಸುಪ್ರೀಂಕೋರ್ಟ್ ಸಹ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. 2008ರಲ್ಲಿ ಆತ ಸಲ್ಲಿಸಿದ್ದ ದಯಾ ಅರ್ಜಿಯನ್ನು ಅಧ್ಯಕ್ಷ ಪರ್ವೆಜ್ ಮುಷರಫ್ ತಳ್ಳಿಹಾಕಿದ್ದರು. ಬಳಿಕ 2008ರ ಏಪ್ರಿಲ್‌ನಲ್ಲೇ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ದಿನಾಂಕ ನಿಗದಿಯಾಗಿತ್ತು.  ಆದರೆ ಭಾರತದ ಒತ್ತಡದ ಹಿನ್ನೆಲೆಯಲ್ಲಿ ಪ್ರಧಾನಿ ಯೂಸೂಫ್ ರಜಾಕ್ ಗಿಲಾನಿ ಮಧ್ಯಪ್ರವೇಶಿಸಿ ಶಿಕ್ಷೆ ಜಾರಿಯಾಗುವುದನ್ನು ತಡೆದಿದ್ದರು. ಇದೀಗ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಕೈಯಲ್ಲೇ ಸರಬ್ಜಿತ್ ಜೀವ ನಿಂತಂತಾಯಿತು.

2009: ಕೇಳಿಸಿಕೊಳ್ಳಲು ಬಲಗಿವಿಯನ್ನೇ ಹೆಚ್ಚು ಅವಲಂಬಿಸಲಾಗುತ್ತದೆ ಎಂಬ ಅಂಶ ಹೊಸ ಸಂಶೋಧನೆಯಿಂದ ಬೆಳಕಿಗೆ ಬಂತು. ಇಟಲಿಯ ಗ್ಯಾಬ್ರೆಲ್ ಅನುಂಜಿಯೊ ವಿಶ್ವವಿದ್ಯಾಲಯವು ನಡೆಸಿದ ಮೂರು ಸಂಶೋಧನೆಗಳಿಂದ ಈ ವಿಷಯ ಗೊತ್ತಾಯಿತು. ಬಲಗಿವಿಯಿಂದ ಕೇಳಿಸಿಕೊಂಡ ಮಾತುಗಳನ್ನು ಎಡಭಾಗದ ಮಿದುಳು ತಕ್ಷಣದಲ್ಲಿ ವಿಶ್ಲೇಷಿಸಿ ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಈ ಸಂಶೋಧನೆಯಿಂದ ತಿಳಿದುಬಂತು.

2009:  ಗೀತರಚನೆಗೆ 1978ರ ಆಸ್ಕರ್ ಪ್ರಶಸ್ತಿ ಪಡೆದಿದ್ದ ಜೋಸೆಫ್ ಬ್ರೂಕ್ಸ್‌ನನ್ನು (71) ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಯಿತು. 11 ಮಂದಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಿ ಆತನನ್ನು ಬಂಧಿಸಲಾಯಿತು. ಆದರೆ 5 ಲಕ್ಷ ಡಾಲರ್ ಮೊತ್ತದ ಠೇವಣಿ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲಾಯಿತು. ಧ್ವನಿ ಪರೀಕ್ಷೆ ನೆಪದಲ್ಲಿ ವೆಬ್‌ ಸೈಟ್ ಮೂಲಕ ಮಹಿಳೆಯರನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆಸಿ, ಈ ಕೃತ್ಯ ಎಸಗಿರುವುದಾಗಿ ಆಪಾದಿಸಲಾಯಿತು.

2009:  ನಾಟಕ ಕರ್ನಾಟಕ ರಂಗಾಯಣದ ನೂತನ ನಿರ್ದೇಶಕಿಯಾಗಿ ಹೆಸರಾಂತ ರಂಗ ನಿರ್ದೇಶಕಿ, ಗಾಯಕಿ ಬಿ.ಜಯಶ್ರಿ ಮೈಸೂರಿನಲ್ಲಿ ಅಧಿಕಾರ ಸ್ವೀಕರಿಸಿದರು. ಒಂದೂವರೆ ವರ್ಷಗಳಿಂದ ಪ್ರಭಾರ ನಿರ್ದೇಶಕರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ ಅವರು ಜಯಶ್ರೀ ಅವರಿಗೆ ರಂಗಾಯಣದ ಕಚೇರಿಯಲ್ಲಿ ಅಧಿಕಾರವನ್ನು ಹಸ್ತಾಂತರಿಸಿದರು.

2009:  1990 ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್‌ನನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುವಂತೆ  ಆತನ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದರು. 'ನನ್ನ ಪತಿ ನಿರ್ದೋಷಿ ಎಂದು ಭಾರತ ಹಾಗೂ ಪಾಕಿಸ್ಥಾನ ಸರ್ಕಾರಗಳಿಗೆ ನಾನು ಅರಿಕೆ ಮಾಡಿಕೊಳ್ಳುವೆ. ಅವರು ಪಾಕಿಸ್ಥಾನದಲ್ಲಿ ಅನುಭವಿಸಿರುವ ಜೀವಾವಧಿ ಶಿಕ್ಷೆ  ಹೆಚ್ಚಿನದಾಯಿತು. ಅವರ ಬಿಡುಗಡೆಗೆ ವಿಳಂಬವಾಗುತ್ತಿರುವುದು ನಮಗೆ ಅತೀವ ಯಾತನೆಯನ್ನುಂಟು ಮಾಡುತ್ತಿದೆ. ಭಾರತ ಸರ್ಕಾರ ಪಾಕಿಸ್ಥಾನದ ಮೇಲೆ ಈ ಸಂಬಂಧ ಒತ್ತಡ ಹೇರಿದಲ್ಲಿ ಅವರು ಬದುಕುಳಿಯುತ್ತಾರೆ. ಭಾರತ ಸರ್ಕಾರ ಸುಮ್ಮನೆ ಕೂರಬಾರದು' ಎಂದು ಸರಬ್ಜಿತ್ ಪತ್ನಿ ಸುಖ್‌ಪ್ರೀತ್ ಕೌರ್ ಕಣ್ಣೀರಿಡುತ್ತಾ  ಹೇಳಿದರು.

2009:  ಹಿರಿಯ ಪತ್ರಕರ್ತ ಹರೀಶ್ ಖರೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು. ಖ್ಯಾತ ರಾಜಕೀಯ ಅಂಕಣಕಾರ ಖರೆ (62)  'ದಿ ಹಿಂದು' ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.

2009:  ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಟು ವಿಜೇತ ಅಶುತೋಷ್ ಕೌಶಿಕ್‌ಗೆ ಜೈಲುಶಿಕ್ಷೆ ವಿಧಿಸಲಾಯಿತು. ಜೂನ್ 13ರಂದು ಅಂಧೇರಿಯಲ್ಲಿ ಕುಡಿದು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕೌಶಿಕನನ್ನು ಬಂಧಿಸಲಾಗಿತ್ತು.  ಒಂದು ದಿನ ಸೆರೆಮನೆ ವಾಸ, ಎರಡು ವರ್ಷ ಚಾಲನಾ ಪರವಾನಗಿ ರದ್ದು  ಹಾಗೂ  ರೂ. 3100 ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತು.

2009:  ಉತ್ತರಾಖಂಡದ ಆರೋಗ್ಯ ಸಚಿವ ರಮೇಶ್ ಪೊಖ್ರಿಯಾಲ್ ಅವರು ಆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸೋತಿರುವುದಕ್ಕೆ  ನೈತಿಕ ಹೊಣೆ ಹೊತ್ತು ಉತ್ತರಾಖಂಡದ ಮುಖ್ಯಮಂತ್ರಿ ಬಿ.ಸಿ.ಖಂಡೂರಿ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2008: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು. ಪಕ್ಷದ ಹಳೆಯ ಪದಾಧಿಕಾರಿಗಳೊಂದಿಗೆ ಹೊಂದಿಕೊಳ್ಳದೆ ನಿಷ್ಕ್ರಿಯವಾಗಿರುವ ಕಾರಣದಿಂದ ಸಿಂಧ್ಯ ಅವರನ್ನು ಉಚ್ಚಾಟಿಸಲು ನಿರ್ಧರಿಸಲಾಯಿತು ಎಂದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ವೀರ್ಸಿಂಗ್ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗ ಸೇರಿದಂತೆ 4 ರಾಜ್ಯಗಳಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಒಟ್ಟು 130ಕ್ಕಿಂತಲೂ ಹೆಚ್ಚು ಮಂದಿ ಅಸು ನೀಗಿದರು. ಆಂಧ್ರಪ್ರದೇಶ, ಕೇರಳದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು.

2007: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರು ಬೆಂಗಳೂರಿನಲ್ಲಿ `ಮಾಸ್ತಿ' ಪ್ರಶಸ್ತಿ ಪ್ರದಾನ ಮಾಡಿದರು.

2007: 1980ರಲ್ಲಿ ತಮ್ಮ ವೈರಿಗಳನ್ನು ಕೊಲ್ಲುವ ಆಂದೋಲನದಲ್ಲಿ 1.80 ಲಕ್ಷ ಕುರ್ದ್ ಜನರನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದ `ಕೆಮಿಕಲ್ ಅಲಿ' ಎಂದೇ ಕುಖ್ಯಾತಿ ಪಡೆದ ಸದ್ದಾಂ ಹುಸೇನ್ ಸೋದರ ಸಂಬಂಧಿ ಅಲಿ ಹಸನ್ ಅಲ್ ಮಜಿದ್, ಸುಲ್ತಾನ್ ಹಷೀಮ್ ಅಹ್ಮದ್ ಮತ್ತು ಹುಸೇನ್ ರಷೀದ್ ಅಹ್ಮದ್ ಅವರಿಗೆ ನ್ಯಾಯಾಧೀಶ ಮಹಮ್ಮದ್ ಒರೈಬಿ ಅಲ್ - ಖಲೀಫ ಮರಣ ದಂಡನೆ ವಿಧಿಸಿದರು. 140 ಶಿಯಾ ಮುಸ್ಲಿಮರನ್ನು ಕೊಂದ ಮತ್ತು 1982ರ ಹತ್ಯೆಗಳ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿತರಾದ ಸದ್ದಾಂ ಹುಸೇನರನ್ನು 2006ರ ಡಿಸೆಂಬರ್ 30ರಂದು ಗಲ್ಲಿಗೇರಿಸಲಾಗಿತ್ತು.

2007: ಪಾಕಿಸ್ಥಾನದ ಬಂದರು ನಗರ ಕರಾಚಿ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ತತ್ತರಿಸಿತು. ವಿವಿಧ ರೀತಿಯ ಅನಾಹುತಗಳಿಂದ ಒಟ್ಟು 220 ಮಂದಿ ಮೃತರಾಗಿ, ಹಲವರು ಗಾಯಗೊಂಡರು. ವಿದ್ಯುತ್ ವ್ಯವಸ್ಥೆ, ಜನಜೀವನ ಅಸ್ತವ್ಯಸ್ತಗೊಂಡಿತು.

2007: ಅಂದಾಜು 1.20 ಕೋಟಿ ಯೂರೋ ವೆಚ್ಚದಲ್ಲಿ ನವೀಕರಣಗೊಂಡ ಫ್ರಾನ್ಸಿನ ಪ್ಯಾರಿಸ್ ಸಮೀಪದ `ಹಾಲ್ ಆಫ ಮಿರರ್ಸ್' ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಂಡಿತು. ಫ್ರೆಂಚ್ ಕಲಾವಿದ ಚಾರ್ಲ್ಸ್ ಲೀ ಬ್ರುನ್ (1619-1690) ಕಲಾಕೃತಿಗಳು ಇಲ್ಲಿವೆ. ಸ್ಥಾಪನೆಯಾಗಿ 300 ವರ್ಷಗಳ ಬಳಿಕ ಫ್ರಾನ್ಸಿನ ಮುಂಚೂಣಿಯ ರಿಯಲ್ ಎಸ್ಟೇಟ್ ಕಂಪೆನಿ ಮಿಂಚಿ `ಹಾಲ್ ಆಫ್ ಮಿರರ್ಸ್' ನವೀಕರಣದ ಹೊಣೆ ಹೊತ್ತಿತ್ತು.

2007: ಕೆನಡಾದಲ್ಲಿ ನೆಲೆಸಿದ ಬೆಂಗಳೂರು ಮೂಲದ ವೈದ್ಯೆ ಡಾ.ಶೀಲಾ ಬಸ್ರೂರು ಅವರನ್ನು, ಸಾರ್ವಜನಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರ್ಕಾರವು `ಕೆನಡಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು.

2006: ಮಾನವ ಹಕ್ಕುಗಳ ಖ್ಯಾತ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರು  `ವಿಜಿಲ್ ಇಂಡಿಯಾ ಮೂವ್ ಮೆಂಟ್' ಸಂಸ್ಥೆಯ `ಎಮ್. ಎ. ಥಾಮಸ್ ರಾಷ್ಟ್ರೀಯ ಮಾನವ ಹಕ್ಕು 2006' ಪ್ರಶಸ್ತಿಗೆ ಆಯ್ಕೆಯಾದರು. ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್(1998), ಮೇಧಾ ಪಾಟ್ಕರ್(1999), ನ್ಯಾಯಮೂರ್ತಿ ವಿ. ಎಂ.ತಾರ್ಕುಂಡೆ (2000) ಇವರು ಈ ಹಿಂದೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದರು.

2006: ಬೆಂಗಳೂರಿನ ಬಹು ನಿರೀಕ್ಷಿತ, ಮಹತ್ವಾಕಾಂಕ್ಷೆಯ `ನಮ್ಮ ಮೆಟ್ರೋ' ಯೋಜನೆಗೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಈದಿನ ಬೆಂಗಳೂರಿನ ಪೆರೇಡ್ ಮೈದಾನದಲ್ಲಿ ಶಿಲಾನ್ಯಾಸ ನೆರವೇರಿಸಿದರು.

2002: ರಷ್ಯದ ವ್ಲಾಡಿಮೀರ್ ಕ್ರಾಮ್ನಿಕ್ ಅವರು ಲಿಯೋನಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸುವ ಮೂಲಕ `ಅಡ್ವಾನ್ಸ್ಡ್ ಚೆಸ್' ಪ್ರಶಸ್ತಿಯನ್ನು ತಮ್ಮ ಬಗಲಿಗೆ ಹಾಕಿಕೊಂಡರು. `ಅಡ್ವಾನ್ಸ್ಡ್ ಚೆಸ್' ಎಂಬುದು ಗ್ಯಾರಿ ಕ್ಯಾಸ್ಪರೋವ್ ಅವರ ಸಂಶೋಧನೆಯಾಗಿದ್ದು ಇದರಲ್ಲಿ ಕಂಪ್ಯೂಟರ್ ನೆರವಿನೊಂದಿಗೆ `ಮೋಸ ಮಾಡಲು' ಅಧಿಕೃತವಾಗಿ ಅನುಮತಿ ನೀಡಲಾಗಿದೆ.

1980: ಭಾರತದ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ ಅವರು ತಮ್ಮ 85ನೇ ವಯಸ್ಸಿನಲ್ಲಿ ತಮಿಳ್ನಾಡಿನ ಮದ್ರಾಸಿನಲ್ಲಿ (ಈಗಿನ ಚೆನ್ನೈ) ನಿಧನರಾದರು.

1974: ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಎರಡನೇ ಇನ್ನಿಂಗ್ಸ್ ನಲ್ಲಿ 42 ರನ್ ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಇದು ಟೆಸ್ಟ್ ಕ್ರಿಕೆಟಿನಲ್ಲಿ ಭಾರತದ ಅತ್ಯಂತ ಕಡಿಮೆ ಮೊತ್ತದ ಇನ್ನಿಂಗ್ಸ್.

1966: ಕಲಾವಿದ ಪ್ರಕಾಶ ಕೆ. ನಾಯ್ಡು ಜನನ.

1949: ಕಲಾವಿದ ಚಂದ್ರಕುಮಾರ ಸಿಂಗ್ ಜನನ.

1935: ಕಲಾವಿದ ಬಳ್ಳಾರಿ ಎಂ. ಶೇಷಗಿರಿ ಆಚಾರ್ಯ ಜನನ.

1924: ಕರ್ನಾಟಕದಲ್ಲಿ ನಶಿಸುತ್ತಿರುವ ರಥ ನಿರ್ಮಾಣ ಸಂತತಿಯ ನಾಲ್ಕೈದು ಕುಟುಂಬ ವರ್ಗದವರಲ್ಲಿ ಒಬ್ಬರಾದ ರಥ ಶಿಲ್ಪಿ ಪರಮೇಶ್ವರಾಚಾರ್ಯ ಅವರು  ಮಾನಾಚಾರ್ಯರು- ವೀರಮ್ಮ ದಂಪತಿಯ ಮಗನಾಗಿ ಹೊಳಲ್ಕೆರೆ ತಾಲ್ಲೂಕಿನ ನೂಲೇನೂರಿನಲ್ಲಿ ಜನಿಸಿದರು.

1915: ಬ್ರಿಟಿಷ್ ಗಣಿತ ಹಾಗೂ ಖಗೋಳ ತಜ್ಞ ಸರ್ ಫ್ರೆಡ್ ಹೊಯ್ಲ್ ಜನ್ಮದಿನ. ಇವರು ತಮ್ಮ `ವಿಶ್ವ ವಿಕಸನ ಸಿದ್ಧಾಂತ'ಕ್ಕಾಗಿ ಖ್ಯಾತಿ ಪಡೆದಿದ್ದಾರೆ. ಇವರ ಸಿದ್ಧಾಂತದ ಪ್ರಕಾರ ವಿಶ್ವವು ವಿಕಸಿಸುತ್ತಿದೆ ಹಾಗೂ ಈ ವಿಕಸನದಿಂದ ಉಂಟಾಗುವ ಶೂನ್ಯವನ್ನು ತುಂಬಿ ಆಕಾಶದಲ್ಲಿನ ದ್ರವ್ಯದ ಸಾಂದ್ರತೆಯನ್ನು ನಿರಂತರವಾಗಿ ಇರಿಸಲು ಹೊಸ ದ್ರವ್ಯ ಸೃಷ್ಟಿಯಾಗುತ್ತಿರುತ್ತದೆ.

1885: ಅಕಾಲಿದಳದ ನಾಯಕ ಮಾಸ್ಟರ್ ತಾರಾಸಿಂಗ್ (1885-1967) ಜನ್ಮದಿನ. ಸಿಖ್ಖರ ರಾಜಕೀಯ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತಹ ಪಂಜಾಬಿ ಭಾಷಿಕರ ರಾಜ್ಯ ಸ್ಥಾಪನೆಯಾಗಬೇಕು ಎಂದು ಚಳವಳಿ ಹೂಡಿದ ಸಿಖ್ ಧುರೀಣರಿವರು. 1966ರಲ್ಲಿ ಈಗಿನ ಪಂಜಾಬ್ ರಾಜ್ಯ ರಚನೆಯೊಂದಿಗೆ ಅವರ ಕನಸು ನನಸಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment