ಇಂದಿನ ಇತಿಹಾಸ History Today ಜೂನ್ 05
2019: ನವದೆಹಲಿ: ವೈದ್ಯ ಹಾಗೂ ದಂತ ವೈದ್ಯ ಕೋರ್ಸ್ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ರಾಷ್ಟ್ರೀ ಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಫಲಿತಾಂಶ ಪ್ರಕಟಿಸಿತು. ರಾಜ ಸ್ಥಾನದ ಜೈಪುರ ವಿದ್ಯಾರ್ಥಿ ನಳಿನ್ ಖಂಡೇಲ್ ವಾಲ್ ದೇಶ ಕ್ಕೆ ಪ್ರಥಮ ಸ್ಥಾನ ಪಡೆದರು. ದೆಹಲಿ ಮೂಲದ ಭವೀಕ್ ಬನ್ಸಾಲ್ ಮತ್ತು ಉತ್ತರ ಪ್ರದೇಶ ದ ಅಕ್ಷತ್ ಕೌಶಿಕ್ ೨ ಮತ್ತು ೩ ನೇ ಸ್ಥಾನ ಗಳಿಸಿದರು.
2019: ಲಾಹೋರ್: ಹಲವಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಭಯೋತ್ಪಾದಕ ದಾಳಿಯ
ಪಾತಕಿ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ಗೆ ತನ್ನ ಒಲವಿನ ಸ್ಥಳವಾದ ಖಡ್ಡಾಫಿ ಕ್ರೀಡಾಂಗಣದಲ್ಲಿ ಈದುಲ್-ಫಿತರ್ ಪ್ರಾರ್ಥನೆಯ ನೇತೃತ್ವ ವಹಿಸಿಲು ಸರ್ಕಾರ ನಿರಾಕರಿಸಿದ ಘಟನೆ ಪಾಕಿಸ್ತಾನದಲಿ ಘಟಿಸಿತು. ಸರ್ಕಾರದ ನಿರಾಕರಣೆಯ ಪರಿಣಾಮವಾಗಿ, ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆ ಎಂಬುದಾಗಿ ಘೋಷಿಸಲ್ಪಟ್ಟಿರುವ ಜೆಯುಡಿ ನಾಯಕ ಹಫೀಜ್ ಸಯೀದ್ ತನ್ನ ಜೌಹರ್ ಪಟ್ಟಣದ ವಸತಿಗೆ ಸಮೀಪದ ಸ್ಥಳೀಯ ಮಸೀದಿಯೊಂದಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಜೆಯುಡಿ ಮುಖ್ಯಸ್ಥ ಸಯೀದ್ ಖಡ್ಡಾಫಿ ಕ್ರೀಡಾಂಗಣದಲ್ಲಿ ಈದ್ ಪ್ರಾರ್ಥನೆಯ ನೇತೃತ್ವ ವಹಿಸಲು ಬಯಸಿದ್ದ. ಆದರೆ ಆತ ಹಾಗೆ ಮಾಡುವಂತಿಲ್ಲ ಎಂದ ಸಂದೇಶವನ್ನು ಪಂಜಾಬ್ ಸರ್ಕಾರವು ಅಧಿಕಾರಿಯೊಬ್ಬರ ಮೂಲಕ ಒಂದು ದಿನ ಮುಂಚಿತವಾಗಿಯೇ (ಮಂಗಳವಾರ) ಆತನಿಗೆ ರವಾನಿಸಿತ್ತು. ತನ್ನ ಯೋಜನೆಯಂತೆಯೇ ಮುಂದುವರೆದರೆ (ಈದ್ ಪ್ರಾರ್ಥನೆಯ ನೇತೃತ್ವ ವಹಿಸಲು ಮುಂದಾದರೆ) ಸರ್ಕಾರವು ಆತನನ್ನು ಬಂಧಿಸಬಹುದು ಎಂಬುದಾಗಿ ಆತನಿಗೆ ತಿಳಿಸಲಾಗಿತ್ತು ಎಂದು
ಅಧಿಕಾರಿ ನುಡಿದರು. ಬೇರಾವುದೇ ದಾರಿಯಿಲ್ಲದೆ, ಸಯೀದ್ ಸರ್ಕಾರದ ನಿರ್ದೇಶನವನ್ನು ಪಾಲಿಸಿದ್ದಾನೆ ಮತ್ತು ಖಡ್ಡಾಫಿ ಕ್ರೀಡಾಂಗಣದಲ್ಲಿ ಈದ್ ಪ್ರಾರ್ಥನೆಯ ನೇತೃತ್ವ ವಹಿಸುವ ಯೋಚನೆಯನ್ನು ಕೈಬಿಟ್ಟಿದ್ದಾನೆ ಎಂದು ಅವರು ಹೇಳಿದರು. ಕಳೆದ ಹಲವಾರು ವರ್ಷಗಳಿಂದ ಯಾವುದೇ ಅಡೆ ತಡೆಯೂ ಇಲ್ಲದೆ, ಸಯೀದ್ ಖಡ್ಢಾಫಿ ಕ್ರೀಡಾಂಗಣದಲ್ಲಿ
ಈದುಲ್-ಫಿತರ್ ಮತ್ತು ಈದುಲ್-ಅಝಾ ಪ್ರಾರ್ಥನೆಗಳ ನಾಯಕತ್ವವನ್ನು ವಹಿಸುತ್ತಾ ಬಂದಿದ್ದ. ಅಡ್ಡಿ ಮಾಡುವ ಬದಲು ಸರ್ಕಾರ ಆತನಿಗೆ ಸ್ವತಃ ಭದ್ರತೆ ಒದಗಿಸುತ್ತಿತ್ತು.
ಈ ಹಿಂದೆ ಸಯೀದ್ ಈದ್ ಪ್ರಾರ್ಥನೆಗಳ ನೇತೃತ್ವ ವಹಿಸುತ್ತಿದ್ದುದಷ್ಟೇ ಅಲ್ಲ, ಧಾರ್ಮಿಕ ಉತ್ಸವಗಳ ಸಂದರ್ಭಗಳಲ್ಲಿ ಭಾರೀ ಜನ ಸಮುದಾಯವನ್ನು ಉದ್ದೇಶಿಸಿ ತನ್ನ ಅಭಿಪ್ರಾಯಗಳನ್ನು ಅದರಲ್ಲೂ ವಿಶೇಷವಾಗಿ ಕಾಶ್ಮೀರಕ್ಕೆ ಸಂಬಂಧಿಸಿದ ಅಭಿಪ್ರಾಯಗಳನ್ನು
ಪ್ರಚಾರ ಮಾಡುತ್ತಿದ್ದ. ೧೬೬ ಮಂದಿಯನ್ನು ಬಲಿ ಪಡೆದ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಸಯೀದನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ೨೦೦೮ರ ಡಿಸೆಂಬರ್ ೧೦ರಂದು ನಿಷೇಧಿಸಿತ್ತು. ಈ ನಿಷೇಧದ ಬಳಿಕ ಆತ ಹೆಚ್ಚು ಬಹಿರಂಗಕ್ಕೆ ಬರುತ್ತಿರಲಿಲ್ಲ. ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಮೂರು ತಿಂಗಳುಗಳ ಹಿಂದೆ ಸೂಚಿತ ಭಯೋತ್ಪಾದಕ ಸಂಘಟನೆಗಳ ವಿರುದ್ಧ ದಮನ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿಕೆಯ ಮೇಲೆ ಕಣ್ಣಿಟ್ಟಿರುವ ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಸೂಚನೆಗಳಿಗೆ ತನ್ನ ಬದ್ಧತೆ ವ್ಯಕ್ತ ಪಡಿಸಿತ್ತು. ಫೆಬ್ರುವರಿ ತಿಂಗಳಲ್ಲಿ ಪ್ಯಾರಿಸ್ ಮೂಲದ ಅಂತಾರಾಷ್ಟ್ರೀಯ ಭಯೋತ್ಪಾದನಾ ಹಣಕಾಸು ನೆರವು ನೀಡಿಕೆಯ ಮೇಲೆ ಕಣ್ಣಿಟ್ಟಿರುವ ಹಣಕಾಸು ಕಾರ್ಯಪಡೆಯು, ಜೈಶ್-ಇ-ಮೊಹಮ್ಮದ್ (ಜೆಇಎಂ), ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಮತ್ತು ಜಮಾತ್-ಉದ್ -ದವಾ (ಜೆಯುಡಿ) ದಂತಹ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ಸರಬರಾಜು ಸ್ಥಗಿತಗೊಳಿಸುವಲ್ಲಿನ ವೈಫಲ್ಯಕ್ಕಾಗಿ ಪಾಕಿಸ್ತಾವನ್ನು
’ಬೂದು’ ಪಟ್ಟಿಯಲ್ಲಿ (ಗ್ರೇ ಲಿಸ್ಟ್) ಮುಂದುವರೆಸಲು ತೀರ್ಮಾನಿಸಿತ್ತು.
2019: ನವದೆಹಲಿ: ಸರ್ಕಾರವು ಎದುರಿಸುತ್ತಿರುವ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸಂಬಂಧಿ ಸವಾಲುಗಳನ್ನು ತುರ್ತಾಗಿ ಮತ್ತು s ಸರ್ವ ಪ್ರಯತ್ನಗಳ ಮೂಲಕ ನಿಭಾಯಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೇತೃತ್ವದಲ್ಲಿ ಎರಡು ಉನ್ನತಾಧಿಕಾರ ಸಚಿವಾಲಯ ಸಮಿತಿಗಳನ್ನು ರಚಿಸಿದರು. ಹೂಡಿಕೆ
ಮತ್ತು ಬೆಳವಣಿಗೆ ಕುರಿತ ಪಂಚ ಸದಸ್ಯ ಸಂಪುಟ ಸಮಿತಿಯನ್ನು ಪ್ರಧಾನಿಯವರ ನಾಯಕತ್ವದಲ್ಲಿ ರಚಿಸಲಾಗಿದ್ದು ಅದರಲ್ಲಿ ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೆ ಹಾಗೂ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಸದಸ್ಯರಾಗಿದ್ದಾರೆ.
ಪ್ರಧಾನಿ ನೇತೃತ್ವದ ಇನ್ನೊಂದು ೧೦ ಸದಸ್ಯರ ಸಂಪುಟ ಸಮಿತಿಯು ಉದ್ಯೋಗ, ಕೌಶಲಾಭಿವೃದ್ಧಿ ಬಗ್ಗೆ ಗಮನ ಹರಿಸಲಿದೆ. ಈ ಸಮಿತಿಯಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಪೀಯೂಶ್ ಗೋಯಲ್, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಪೆಟ್ರೋಲಿಯಂ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್, ಕೌಶಲ ಮತ್ತು ಉದ್ಯಮಶೀಲತಾ ಸಚಿವ ಮಹೇಂದ್ರನಾಥ ಪಾಂಡೆ ಮತ್ತು ರಾಜ್ಯ ಸಚಿವರಾದ ಸಂತೋಷ್ ಕುಮಾರ್ ಗಂಗ್ವಾರ್ ಹಾಗೂ ಹರದೀಪ್ ಸಿಂಗ್ ಪುರಿ ಸದಸ್ಯರಾದರು. ಗಂಗ್ವಾರ್ ಮತ್ತು ಪುರಿ ಅವರು ಕಾರ್ಮಿಕ ಮತ್ತು ಉದ್ಯೋಗ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಕಿರಿಯ ಸಚಿವರಾಗಿದ್ದಾರೆ.
ಈ ಸಮಿತಿಗಳ ರಚನೆಯ ಮೂಲಕ ಸರ್ಕಾರದ ಉನ್ನತ ಮಟ್ಟದ ಗಮನವು ಎರಡು ಪ್ರಮುಖ ಸವಾಲುಗಳತ್ತ ಹರಿಯುವುದು ಮತ್ತು ಸಂಬಂಧಪಟ್ಟ ಸಚಿವಾಲಯಗಳ ಮೂಲಕ ಸವಾಲುಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಕೆಲವು ಸವಾಲುಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ ೫ರಂದು ಮಂಡಿಸಲಿರುವ ಮುಂಬರುವ ಮುಂಗಡಪತ್ರದಲ್ಲೇ ಪರಿಹಾರ ಲಭಿಸುವ ಸಾಧ್ಯತೆಗಳಿವೆ. ಮೋದಿ
ಸರ್ಕಾರವು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಅತಿ ತುರ್ತಾಗಿ ಎರಡು ಉನ್ನತ ಸಮಿತಿಗಳನ್ನು ರಚಿಸಿರುವುದು ಈ ಸವಾಲುಗಳ ನಿಭಾವಣೆಯತ್ತ ಸರ್ಕಾರ ನೀಡಿರುವ ಮಹತ್ವವನ್ನು ತೋರಿಸಿದೆ. ಈ ಸವಾಲುಗಳು ದೇಶೀಯ ಹಾಗೂ ಜಾಗತಿಕ ಅಂಶಗಳ ಪರಿಣಾಮವಾಗಿ ಹುಟ್ಟಿಕೊಂಡಿವೆ. ಭಾರತದ ಆರ್ಥಿಕತೆಯು ೨೦೧೮-೧೯ರ ಹಣಕಾಸು ವರ್ಷದ ಜನವರಿ-ಮಾರ್ಚ್ ಅವಧಿಯಲಿ ನಿರೀಕ್ಷಿತ ಶೇಕಡಾ ೫.೮ಕ್ಕಿಂತಲೂ ನಿಧಾನಗತಿಯ ಬೆಳವಣಿಗೆಯನ್ನು ದಾಖಲಿಸಿದೆ. ಇದೇ ಅವಧಿಯಲ್ಲಿ ಚೀನಾ ಶೇಕಡಾ ೬.೪ರ ಬೆಳವಣಿಗೆ ದಾಖಲಿಸಿರುವುದನ್ನು ಸರ್ಕಾರ ಕಳೆದ ಶುಕ್ರವಾರ ಬಿಡುಗಡೆ ಮಾಡಿರುವ ಜನವರಿ- ಮಾರ್ಚ್ ಅವಧಿಯ ಅಂಕಿ ಅಂಶಗಳು ತೋರಿಸಿವೆ. ಕಳೆದ ನಾಲ್ಕು ವರ್ಷಗಳ ಜನವರಿ- ಮಾರ್ಚ್ ಅವಧಿಯ ಆರ್ಥಿಕ ಬೆಳವಣಿಗೆಯಲ್ಲೇ ಈ ಬಾರಿಯ ಆರ್ಥಿಕ ಬೆಳವಣಿಗೆ ಕಡಿಮೆಯಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಬೆಳವಣಿಗೆ ಚೀನಾದ ಆರ್ಥಿಕ ಬೆಳವಣಿಗೆಗಿಂತಲೂ ಹಿಂದೆ ಬಿದ್ದಿದೆ. ಅಂಕಿ ಅಂಶಗಳ ಸಚಿವಾಲಯವು ಕಳೆದ ವಾರ ಬಿಡುಗಡೆ ಮಾಡಿರುವ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯ ಪ್ರಕಾರ ನಿರುದ್ಯೋಗ ದರವು ೨೦೧೭-೧೮ರ ಹಣಕಾಸು ವರ್ಷದಲ್ಲಿ ಶೇಕಡಾ ೬.೧ಕ್ಕೆ ಏರಿದೆ. ಕಳೆದ ೪೫ ವರ್ಷಗಳಲ್ಲೇ ಇದು ಗರಿಷ್ಠ. ಈ ಅಂಕಿ ಸಂಖ್ಯೆಯು ಈ ವರ್ಷದ ಆದಿಯಲ್ಲಿ ಪತ್ರಿಕೆಯೊಂದು ಪ್ರಕಟಿಸಿದ್ದ ಅಂಕಿಸಂಖ್ಯೆಗೆ ತಾಳೆಯಾಗಿದ್ದು, ವಿರೋಧ ಪಕ್ಷಗಳು ಸರ್ಕಾರದ ಆರ್ಥಿಕ ದಾಖಲೆಯನ್ನು ಟೀಕಿಸಲು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದವು.
ಏನಿದ್ದರೂ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿಯು (ಎನ್‌ಎಸ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿ ಹೊಸ ವಿನ್ಯಾಸ ವಿಧಾನದ್ದಾಗಿದೆ, ಆದ್ದರಿಂದ ಹಿಂದಿನ ಮಾಹಿತಿಯೊಂದಿಗೆ ಅದನ್ನು ಹೋಲಿಸಲಾಗದು ಎಂದು ಸರ್ಕಾರ ಪ್ರತಿಪಾದಿಸಿತ್ತು. ಹಿಂದಿನ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಟ್ಟು ಆರು ಸಚಿವಾಲಯ ಸಮಿತಿಗಳನ್ನು ರಚಿಸಿತ್ತು. ಇವುಗಳಲ್ಲಿ ನೇಮಕಾತಿಗಳ ಸಂಪುಟ
ಸಮಿತಿ, ವಸತಿಗಳ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ, ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಮತ್ತು ಭದ್ರತಾ ಸಂಪುಟ ಸಮಿತಿ - ಇವು ಸೇರಿವೆ.
2019: ಚೆನ್ನೈ: ’ತಿಭಾಷಾ ಸೂತ್ರ’ ವಿವಾದದಲ್ಲಿ ವಿರೋಧಿ ಡಿಎಂಕೆಯನ್ನು ಮೀರಿಸಲು ಬಯಸಿದ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತರ ರಾಜ್ಯಗಳಲ್ಲಿ ತಮಿಳು ಭಾಷೆಯನ್ನು ತೃತೀಯ ಐಚ್ಛಿಕ ಭಾಷೆಯಾಗಿ ವಿದ್ಯಾರ್ಥಿಗಳಿಗೆ
ಕಲಿಸುವಂತೆ ಮನವಿ ಮಾಡಿದರು. ಆದರೆ ಮುಖ್ಯಮಂತ್ರಿ ತ್ರಿಭಾಷಾ ಸೂತ್ರವನ್ನು ಅನುಮೋದಿಸಿದ್ದಾರೆ ಎಂಬ ಟೀಕಾಪ್ರಹಾರವನ್ನು ಅನುಸರಿಸಿ ಕೇವಲ ೪ ಗಂಟೆಗಳಲ್ಲಿ ಪಳನಿಸ್ವಾಮಿ ತಮ್ಮ ಟ್ವೀಟನ್ನು ಕಿತ್ತು ಹಾಕಿದರು. ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಭುಗಿಲೆದ್ದ ತೀವ್ರ ವಿವಾದ ಮತ್ತು ತಮಿಳುನಾಡಿನಲ್ಲಿ
ಅದು ಪಡೆದ ರಾಜಕೀಯ ಆಯಾಮಗಳ ಮಧ್ಯೆ ಕರಡು ಶಿಕ್ಷಣ ನೀತಿ ಬಗ್ಗೆ ಮುಖ್ಯಮಂತ್ರಿ ಪಳನಿಸ್ವಾಮಿ ಗಾಢ ಮೌನ ತಳೆದಿದ್ದರು. ಕರಡು ಶಿಕ್ಷಣ ನೀತಿಯನ್ನು ತಮಿಳುನಾಡಿನ ಶಾಲೆಗಳಲ್ಲಿ ಹಿಂದಿ ಹೇರಿಕೆ ಎಂಬುದಾಗಿಯೇ ಭಾವಿಸಿ ಟೀಕೆಗಳ ಸುರಿಮಳೆಯಾಗಿತ್ತು. ವಿಷಯವನ್ನು ಇಪಿಎಸ್ ಅವರು ಸಂಪೂರ್ಣವಾಗಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ
ಬಿಟ್ಟು ಬಿಟ್ಟಿದ್ದರು ಮತ್ತು ಮಾತೃಭಾಷೆ ತಮಿಳು ಮತ್ತು ಇಂಗ್ಲಿಷ್ ಈ ಎರಡು ಭಾಷೆಗಳ ’ದ್ವಿಭಾಷಾ ಸೂತ್ರ’ಕ್ಕೆ ರಾಜ್ಯದ ಬದ್ಧತೆಯನ್ನು ವ್ಯಕ್ತಪಡಿಸುವ ಹೊಣೆಯನ್ನು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ
ವಹಿಸಿದ್ದರು. ಈದಿನ ಬೆಳಗ್ಗೆ ೧೦.೫೮ ಗಂಟೆಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ’ಇತರ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ತಮಿಳು ಭಾಷೆಯನ್ನು ತೃತೀಯ ಐಚ್ಛಿಕ ಭಾಷೆಯಾಗಿ ಕಲಿಸಬೇಕು’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಳನಿಸ್ವಾಮಿ ಆಗ್ರಹಿಸಿದರು. ’ಇದರಿಂದ ವಿಶ್ವದ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾದ ತಮಿಳುಭಾಷೆಗೆ ಮಹಾನ್ ಸೇವೆ ಮಾಡಿದಂತಾಗುತ್ತದೆ’ ಎಂಬ ಕಾರಣವನ್ನೂ ಅವರು ತಮ್ಮ ಮನವಿಗೆ ಪೂರಕವಾಗಿ ನೀಡಿದ್ದರು. ‘ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ತಮಿಳು ಭಾಷೆಯನ್ನು ಇತರ ರಾಜ್ಯಗಳಲ್ಲಿ ಐಚ್ಛಿಕ ಭಾಷೆಯಾಗಿ ಅಧ್ಯಯನಕ್ಕೆ ಸೇರ್ಪಡೆ ಮಾಡಲು ಮನವಿ. ಇದರಿಂದ ವಿಶ್ವದ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಕ್ಕೆ ಮಹಾನ್ ಸೇವೆ ಮಾಡಿದಂತಾಗುತ್ತದೆ’ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಟ್ವೀಟ್ ಮಾಡಿದರು. ಮುಖ್ಯಮಂತ್ರಿಯವರು ಎರಡು ಟ್ವಿಟ್ಟರ್ ಖಾತೆಗಳನ್ನು ಹೊಂದಿದ್ದಾರೆ. ತಮ್ಮ ಅಧಿಕೃತ ಕರ್ತವ್ಯಗಳ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ಒಂದು ಟ್ವಿಟ್ಟರ್ ಖಾತೆ ಇದ್ದರೆ, ಇನ್ನೊಂದು ಟ್ವಿಟ್ಟರ್ ಖಾತೆ ಪಳನಿಸ್ವಾಮಿ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಾಗಿದೆ. ವಿವಾದ ಸೃಷ್ಟಿಸಿದ ಈ ಟ್ವೀಟ್‌ನ್ನು ಮುಖ್ಯಮಂತ್ರಿ ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಮಾಡಿದ್ದರು. ಮಧ್ಯಾಹ್ನ ೩ ಗಂಟೆ ಸುಮಾರಿಗೆ ಯಾವುದೇ ವಿವರಣೆಯನ್ನು ಕೂಡಾ ನೀಡದೆ ಟ್ವೀಟನ್ನು ಕಿತ್ತು ಹಾಕಲಾಯಿತು. ಮುಖ್ಯಮಂತ್ರಿಯವರು
ತಮ್ಮ ಟ್ವೀಟ್ ಪ್ರಕಟಿಸಿದ ಬೆನ್ನಲ್ಲೇ ವಿರೋಧ ಪಕ್ಷಗಳು ಮತ್ತು ತಮಿಳು ಪರ ಗುಂಪುಗಳಿಂದ ಟ್ವೀಟ್ ಮೇಲೆ ಭಾರೀ ಟೀಕಾಪ್ರಹಾರ ನಡೆಯಿತು. ಮುಖ್ಯಮಂತ್ರಿ ಪಳನಿಸ್ವಾಮಿ ಅವರು ತ್ರಿಭಾಷಾ ಸೂತ್ರದ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಆಪಾದಿಸಿದ ವಿರೋಧಿಗಳು ’ಇದು
ರಾಜ್ಯದಲ್ಲಿ ಹಿಂದಿ ಪ್ರವೇಶಕ್ಕೆ ದಾರಿಯನ್ನು ಸುಗಮಗೊಳಿಸಬಹುದು’ ಎಂದು ಭೀತಿ ವ್ಯಕ್ತ ಪಡಿಸಿದರು. ಇದಕ್ಕೆ ಮುನ್ನ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಒತ್ತಾಯಿಸಿದ್ದರು.
2019: ಪಟ್ಟಣಂತಿಟ್ಟ: (ಕೇರಳ): ರಾಜ್ಯದ ಉತ್ತರಭಾಗದಲ್ಲಿ
’ನಿಫಾ’ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಪಟ್ಟಣಂತಿಟ್ಟ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೇರಳ ಆರೋಗ್ಯ ಇಲಾಖೆಯು ’ಪ್ರತ್ಯೇಕತಾ (ಐಸೋಲೇಷನ್) ವಾರ್ಡ್’ಗಳನ್ನು ಸ್ಥಾಪಿಸುತ್ತಿದೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ (ಡಿಎಂಒ) ಎ.ಎಸ್. ಶೀಜಾ ಇಲ್ಲಿ ತಿಳಿಸಿದರು. ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮುಲ್ಲಪಳ್ಳಿಯ ೪೭ರ ಹರೆಯದ ಗೃಹಣಿಯೊಬ್ಬರು ಮಂಗಳವಾರ ಸಾವನ್ನಪ್ಪಿದ್ದಾರೆ. ಆಕೆಯ ಸಾವಿಗೆ ಎಚ್೧ಎನ್೧ ಸೋಂಕು (ಹಂದಿಜ್ವರ) ಕಾರಣ ಎಂದು ವರದಿಗಳು ಹೇಳಿದವು. ಮೃತಳ ಕಂಠದಿಂದ ಸಂಗ್ರಹಿಸಲಾದ ಮಾದರಿಗಳನ್ನು ಮಣಿಪಾಲದ ವೈರಾಣು ಪ್ರಯೋಗಾಲಯಕ್ಕೆ
(ವೈರಾಲಜಿ ಲ್ಯಾಬೋರೇಟರಿ) ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಡಾ. ಶೀಜಾ ನುಡಿದರು. ಜಿಲ್ಲಾ ವೈದ್ಯಕೀಯ ಅಧಿಕಾರಿ ಪ್ರಕಾರ, ಪಟ್ಟಣಂತಿಟ್ಟ, ತಿರುವಳ್ಳ, ಕೋಳೆಚೆರ್ರಿ, ಅಡೂರು, ರಾನ್ನಿ, ಕೊನ್ನಿ ಮತ್ತು ಮಾಲ್ಲಾಪಳ್ಳಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ತಿರುವಳ್ಳದ ಎರಡು ಖಾಸಗಿ ಆಸ್ಪತ್ರೆಗಳಲ್ಲಿ
ಸಮರೋಪಾದಿಯಲ್ಲಿ ’ಪ್ರತ್ಯೇಕತಾ ವಾರ್ಡ್‌ಗಳು’ ಮತ್ತು
ಕಫ ಮೂಲೆಗಳನ್ನು (ಕಫ್ ಕಾರ್ನರ್) ಸ್ಥಾಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯನ್ನು ನಡೆಸಿದ ಡಾ. ಶೀಜಾ ಅವರು ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲೂ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಪ್ರತ್ಯೇಕ ಹೊರರೋಗಿ ಸವಲತ್ತುಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದರು. ಈ ಮಧ್ಯೆ, ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ
ಹಿಂದಿನ
ದಿನ ಸುಮಾರು ೨೧೫ ಮಂದಿ ಜ್ವರಕ್ಕೆ ಚಿಕಿತ್ಸೆ ಕೋರಿ ಬಂದಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿದವು. ಈ ಮಧ್ಯೆ,
ಕೋಚಿಯ ಕಲಮಸ್ಸೇರಿಯಲ್ಲಿನ
ಸರ್ಕಾರಿ ವೈದ್ಯಕೀಯ ಕಾಲೇಜಿನ ಐಸೋಲೇಷನ್ ವಾರ್ಡುಗಳಿಗೆ ಸೇರಿಸಲಾಗಿರುವ ಐವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಗಳು ಹೇಳಿವೆ. ಪರವೂರ್‌ನ ೨೩ರ ಹರೆಯದ ಯುವಕನೊಬ್ಬನಿಗೆ ನಿಫಾ ಸೊಂಕು ತಗುಲಿದ್ದು ದೃಢ ಪಟ್ಟ ಹಿನ್ನೆಲೆಯಲ್ಲಿ ಈ ಐದು ಮಂದಿಯನ್ನು ಐಸೋಲೇಷನ್ ವಾರ್ಡಿಗೆ ಸ್ಥಳಾಂತರಿಸಲಾಗಿತ್ತು. ನಿಫಾ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕದಲ್ಲಿದ್ದ ಎನ್ನಲಾದ ಪರವೂರ್‌ನ ಆರನೇ ವ್ಯಕ್ತಿಯನ್ನೂ ಜ್ವರ ಲಕ್ಷಣಗಳು ಕಾಣಿಸಿದ ಹಿನ್ನೆಲೆಯಲ್ಲಿ ಐಸೋಲೇಷನ್ ವಾರ್ಡಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಮೂಲಗಳು ಹೇಳಿದವು. ನಿಫಾ ಸೋಂಕು ತಗುಲಿದ ವ್ಯಕ್ತಿಯು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾನೆ ಎಂದು ಮೂಲಗಳು ಹೇಳಿವೆ. ಐದು ಶಂಕಿತ ಪ್ರಕರಣಗಳಲ್ಲಿ ಸಂಗ್ರಹಿಸಲಾದ ಮಾದರಿಗಳನ್ನು ಮಣಿಪಾಲದ ವೈರಾಣು ಸಂಸ್ಥೆ ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿದವು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಕೋಚಿ ತಲುಪುವ ನಿರೀಕ್ಷೆಯಿದ್ದು
ಪರಿಸ್ಥಿತಿ ಬಗ್ಗೆ ಪರಿಶೀಲಿಸಲು ಪರಾಮರ್ಶೆ ಸಭೆ ನಡೆಸಲಿದ್ದಾರೆ. ಬುಧವಾರ ಕೋಚಿ ತಲುಪಿದ ಆರೋಗ್ಯ ಸಚಿವೆ ಕೆ.ಕೆ. ಶೈಲಜ ಅವರು ವೈದ್ಯಕೀಯ ಕಾಲೇಜಿನಲ್ಲಿ ತಜ್ಞರ ಜೊತೆಗೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿ ಇರುವುದರಿಂದ ಶಾಲೆಗಳ ಪುನಾರಂಭವನ್ನು ಮುಂದೂಡದೇ ಇರಲು ನಿರ್ಧರಿಸಲಾಯಿತು
ಎಂದು ಮೂಲಗಳು ಹೇಳಿದವು.
2019: ಲಕ್ನೋ: ’ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಜೊತೆಗಿನ ಮೈತ್ರಿ ಒಂದು ಪ್ರಯೋಗವಾಗಿತ್ತು ಮತ್ತು ಕೆಲವೊಮ್ಮೆ ಪ್ರಯೋಗಗಳು ಯಶಸ್ವಿಯಾಗುವುದಿಲ್ಲ’ ಎಂಬುದಾಗಿ ಹೇಳುವ ಮೂಲಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬುಧವಾರ ಮಾಯಾವತಿ ಅವರಿಗೆ ಎದಿರೇಟು ನೀಡಿದರು. ‘ನಾನು ಮೈಸೂರಿನಲ್ಲಿ ಎಂಜಿನಿಯರಿಂಗ್ ಓದಿದ್ದೇನೆ. ವಿಜ್ಞಾನದ ವಿದ್ಯಾರ್ಥಿಯಾಗಿ, ಎಲ್ಲ ಪ್ರಯೋಗಗಳೂ ಯಾವಾಗಲೂ ಯಶಸ್ವಿಯಾಗುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೂ ನಾವು ಪ್ರಯೋಗಗಳನ್ನು ಮಾಡುತ್ತೇವೆ ಮತ್ತು ಆ ಮೂಲಕ ಕೊರತೆ ಏನು ಎಂಬುದನ್ನು ತಿಳಿಯುತ್ತೇವೆ’ ಎಂದು ಯಾದವ್ ಹೇಳಿದ್ದನ್ನು ಸುದ್ದಿ ಸಂಸ್ಥೆಯೊಂದು ಉಲ್ಲೇಖಿಸಿತು. ಲೋಕಸಭಾ ಚುನಾವಣಾ ಪರಾಭವದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಜೊತೆಗಿನ ಮಹಾಮೈತ್ರಿಗೆ ಮಂಗಳ ಹಾಡಿರುವ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ಉತ್ತರಪ್ರದೇಶದಲ್ಲಿ ವಿಧಾನಸಭೆಯ ೧೧ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ
ಏಕಾಂಗಿಯಾಗಿ ಸ್ಪರ್ಧಿಸುವುದಾಗಿ
ಪ್ರಕಟಿಸಿದ್ದಾರೆ, ಏನಿದ್ದರೂ ’ಈ ಮೈತ್ರಿ ರದ್ದು ನಿರ್ಧಾರ ಕಾಯಂ ಅಲ್ಲ’ ಎಂದೂ
ಅವರು ಹೇಳಿದರು. ಮಾಯಾವತಿ
ಅವರ ಬಗೆಗಿನ ತಮ್ಮ ಗೌರವ ಚ್ಯುತಿ ಇಲ್ಲದೆ ಹಾಗೆಯೇ ಮುಂದುವರೆಯಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಹೇಳಿದರು. ’ಮೊದಲ ಪತ್ರಿಕಾಗೋಷ್ಠಿಯಲ್ಲಿಯೇ ನಾನು ಮಾಯಾವತಿಯವರ ಗೌರವವೇ ನನ್ನ ಗೌರವ ಎಂದು ಹೇಳಿದ್ದೆ. ಈಗ ಕೂಡಾ ನಾನು ಆ ಹೇಳಿಕೆಗೆ ಬದ್ಧನಾಗಿದ್ದೇನೆ’ ಎಂದು ಅವರು ನುಡಿದರು. ಉತ್ತರ ಪ್ರದೇಶ ವಿಧಾನಸಭಾ ಉಪ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷವು ಬಹುಜನ ಸಮಾಜ ಪಕ್ಷದ ಜೊತೆಗೆ ಕೈಜೋಡಿಸುವ ಸಾಧ್ಯತೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ’ಈಗ ಇರುವ ಯೋಜನೆ ಉಪಚುನಾವಣೆಯಲ್ಲಿ
ಏಕಾಂಗಿಯಾಗಿ ಹೋರಾಡುವುದು ಮಾತ್ರ ಮತ್ತು ೨೦೨೨ರ ಹೋರಾಟದ ರೂಪುರೇಷೆಯನ್ನು ತಡವಾಗಿ ನಿರ್ಧರಿಸಲಾಗುವುದು’ ಎಂದು ಅಖಿಲೇಶ್ ಯಾದವ್ ಉತ್ತರಿಸಿದರು. ‘ನಾವು ವಿವಿಧ ಹಾದಿಗಳನ್ನು ಮತ್ತು ಕೆಲಸದ
ವಿಭಿನ್ನ ಶೈಲಿಗಳನ್ನು ಹೊಂದಬಹುದು. ನಾನು ಎಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ’ ಎಂದು
ಅವರು ನುಡಿದರು.
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಸಂಸದೀಯ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಈ ವರ್ಷದ ಜನವರಿಯಲ್ಲಿ ಮೈತ್ರಿಕೂಟ ರಚಿಸಿದ್ದವು. ಉತ್ತರ ಪ್ರದೇಶದ ೮೦ ಲೋಕಸಭಾ ಸ್ಥಾನಗಳ ಪೈಕಿ ೬೨ ಸ್ಥಾನಗಳನ್ನು ಬಿಜೆಪಿಯು ಗೆಲ್ಲುವುದರೊಂದಿಗೆ ಮೈತ್ರಿಕೂಟ ತನ್ನ ಗುರಿಸಾಧನೆಯಲ್ಲಿ
ವಿಫಲವಾಗಿತ್ತು. ಎಸ್ಪಿ- ಬಿಎಸ್ಪಿ ಮೈತ್ರಿಕೂಟವು ಕೇವಲ ೧೫ ಸ್ಥಾನಗಳನ್ನು ಗೆದ್ದು ಅತ್ಯಂತ ಕಳಪೆ ಸಾಧನೆ ಪ್ರದರ್ಶಿಸಿತ್ತು.
2018: ಮುಂಬೈ: ೨,೦೦೦ ಕೋಟಿ ರೂಪಾಯಿ
ಮೊತ್ತದ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಉದ್ಯಮಿ ರಾಜ್ ಕುಂದ್ರಾ
ಅವರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆ ನಡೆಸಿತು.
ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿಗಳಲ್ಲೊ ಒಬ್ಬನಾದ ಅಮಿತ್ ಭಾರದ್ವಾಜ್ ವಿಚಾರಣೆ ವೇಳೆ ರಾಜ್ ಕುಂದ್ರಾ ಹೆಸರು ಹೇಳಿದ
ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ರಾಜ್ ಕುಂದ್ರಾ ಅವರನ್ನು ವಿಚಾರಣೆಗೆ ಒಳಪಡಿಸಿತು ಎಂದು ಸುದ್ದಿ
ಮೂಲಗಳು ಹೇಳಿದವು. ಜಾರಿ ನಿರ್ದೇಶನಾಲಯವು ಅಮಿತ್
ಭಾರದ್ವಾಜ್ ಮತ್ತು ಅವರ ಸಹೋದರ ವಿವೇಕ್ ಬಿಟ್ ಕಾಯಿನ್ ಹಗರಣದ ಮುಖ್ಯ ಸೂತ್ರಧಾರಿಗಳು ಎಂದು ಆಪಾದಿಸಿತ್ತು. ಆದಾಯ ತೆರಿಗೆ ಇಲಾಖೆ ಕೂಡಾ ಹಗರಣಕ್ಕೆ ಸಂಬಂಧಿಸಿ ತನಿಖೆ
ನಡೆಸುತ್ತಿದ್ದು , ಕೆಲ ದಿನಗಳ ಹಿಂದೆ ಪ್ರತಿದಿನ
೧ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಿಟ್
ಕಾಯಿನ್ ಬಳಕೆದಾರರಿಗೆ ನೊಟೀಸ್ ಜಾರಿ ಮಾಡಿತ್ತು.
ರಾಜ್
ಕುಂದ್ರಾ ಅವರು ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ
ಪತಿ. ಹಗರಣಕ್ಕೆ ಸಂಬಂಧಿಸಿದಂತೆ ಹಲವು ಬಾಲಿವುಡ್ ಮಂದಿಯನ್ನು ವಿಚಾರಿಸುವ ಸಾಧ್ಯತೆಗಳಿವೆ ಎಂದೂ ವರದಿಗಳು ಹೇಳಿದವು. ಅಮಿತ್ ಭಾರದ್ವಾಜ್ ಮತ್ತು ವಿವೇಕ್ ವಿರುದ್ಧ ಹಲವಾರು ಮಂದಿ
ದೂರು ದಾಖಲಿಸಿದ್ದು ನೂರಾರು ಮಂದಿ ಹೂಡಿಕೆದಾರರನ್ನು ತಮ್ಮ ಸ್ಕೀಮ್ ಗಳತ್ತ ಸೆಳೆಯುವ ಮೂಲಕ ಅವರು
ವಂಚಿಸಿದ್ದಾರೆ ಎಂದು ಆಪಾದಿಸಲಾಗಿತ್ತು. ಹಣವನ್ನು ಚೀನಾ, ದುಬೈ ಮತ್ತು ಹಾಂಕಾಂಗ್ ಗಳಿಗೆ ವರ್ಗಾಯಿಸಲಾಗುತ್ತಿತ್ತು
ಎನ್ನಲಾಗಿದ್ದು, ಅಲ್ಲಿ ಭಾರದ್ವಾಜ್ ಕ್ರೌಡ್ ಫಂಡೆಡ್ ಕ್ರಿಪ್ಟ್ ಕರೆನ್ಸಿ ಮೈನಿಂಗ್ ವ್ಯವಹಾರ ನಡೆಸುತ್ತಿದ್ದುದಾಗಿ
ಆರೋಪ ಮಾಡಲಾಗಿತ್ತು. ಭಾರದ್ವಾಜ್
ಸಹೋದರರು ಗೈನ್ ಬಿಟ್ ಕಾಯಿನ್ ಮತ್ತು ಜಿಬಿ ಮೈನಿಂಗ್ ಉದ್ಯಮಗಳ ಮಾಲೀಕರಾಗಿದ್ದು, ಬಹುಹಂತದ ಮಾರುಕಟ್ಟೆ
ಯೋಜನೆಗಳನ್ನು ಅವರು ಆರಂಭಿಸಿದ್ದರು. ಆದರೆ ಬಳಿಕ ಅವರು ವ್ಯವಹಾರದಲ್ಲಿ ಸಮಸ್ಯೆಗಳಾಗಿವೆ ಎಂದು ಹೇಳಿ
ಹೂಡಿಕೆದಾರರಿಗೆ ಹಣ ಪಾವತಿ ಸ್ಥಗಿತಗೊಳಿಸಿದ್ದರು.
ಪುಣೆ ಪೊಲೀಸರು ಎರಡು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ೭ ಮಂದಿ ಭಾರದ್ವಾಜ್ ಸಹಚರರನ್ನು
ಬಂಧಿಸಿದ್ದರು.
2018: ನವದೆಹಲಿ: ಸುನಂದಾ ಪುಷ್ಕರ್
ಸಾವಿನ ನಾಲ್ಕು ವರ್ಷಗಳ ಬಳಿಕ ದೆಹಲಿಯ ನ್ಯಾಯಾಲಯವೊಂದು ದೆಹಲಿ ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯನ್ನು
ಪರಿಗಣಿಸಿ ಜುಲೈ ೭ರಂದು ತನ್ನ ಮುಂದೆ ಹಾಜರಾಗುವಂತೆ ಪುಷ್ಕರ್ ಪತಿ, ಕಾಂಗ್ರೆಸ್ ನಾಯಕ ಶಶಿ ತರೂರ್
ಅವರಿಗೆ ಸಮನ್ಸ್ ಜಾರಿ ಮಾಡಿತು. ಅಡಿಷನಲ್ ಚೀಫ್ ಮೆಟ್ರೊಪಾಲಿಟನ್
ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ತನ್ನ ಮೃತ ಪತ್ನಿಯ ವಿರುದ್ಧ ಕ್ರೌರ್ಯ ಎಸಗಿ ಆತ್ಮಹತ್ಯೆಗೆ
ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತರೂರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಕಷ್ಟು
ಆಧಾರಗಳಿವೆ ಎಂದು ತಮ್ಮ ಆದೇಶವನ್ನು ಓದುತ್ತಾ ಹೇಳಿದರು. ’ನಾನು ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಮತ್ತು sಸಲ್ಲಿಸಲಾಗಿರುವ
ದಾಖಲೆಗಳನ್ನು ಗಮನಿಸಿದ್ದೇನೆ. ಪೊಲೀಸರು ಸಲ್ಲಿಸಿರುವ ವರದಿಯ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯ
ಸೆಕ್ಷನ್ ೩೦೬ರ ಅಡಿಯಲ್ಲಿ ಶಿಕ್ಷಿಸಬಹುದಾದಂತಹ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಮತ್ತು ದಿವಂಗತ
ಸುನಂದಾ ಪುಷ್ಕರ್ ವಿರುದ್ಧ ಐಸಿಪಿಯ ಸೆಕ್ಷನ್ ೪೯೮ಎ ಅಡಿಯಲ್ಲಿ ಕ್ರೌರ್‍ಯದ ಅಪರಾಧವನ್ನು ಶಶಿ ತರೂರ್
ಅವರು ಎಸಗಿದ್ದನ್ನು ನಾನು ಪರಿಗಣನೆಗೆ ತೆಗೆದುಕೊಂಡಿದ್ದೇನೆ’ ಎಂದು ನ್ಯಾಯಾಧೀಶರು
ಹೇಳಿದರು. ತಮ್ಮ ೩೦೦೦ ಪುಟಗಳ ದೋಷಾರೋಪ ಪಟ್ಟಿಯಲ್ಲಿ
ಶಶಿ ತರೂರ್ ಅವರು ಪತ್ನಿಯನ್ನು ಕ್ರೌರ್‍ಯಕ್ಕೆ ಗುರಿಪಡಿಸಿದ್ದಾರೆ ಎಂದು ದೆಹಲಿ ಪೊಲೀಸರು ಆಪಾದಿಸಿದ್ದರು.
ತರೂರ್ ಅವರ ಪತ್ನಿ ದೆಹಲಿಯ ಹೊಟೇಲ್ ಒಂದರ ಕೊಠಡಿಯಲ್ಲಿ
ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದುದು ಪತ್ತೆಯಾದ ನಾಲ್ಕು ವರ್ಷಗಳ ಬಳಿಕ ಪೊಲೀಸರು ದೋಷಾರೋಪ ಪಟ್ಟಿ
ಸಲ್ಲಿಸಿದ್ದರು. ಸುನಂದಾ
ಪುಷ್ಕರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಯಾರ ವಿರುದ್ಧವೂ ಕೊಲೆ ಆರೋಪ ಮಾಡಲು ಸಾಧ್ಯವಿಲ್ಲ
ಎಂದು ದೋಷಾರೋಪ ಪಟ್ಟಿ ಹೇಳಿತ್ತು. ದೋಷಾರೋಪ ಪಟ್ಟಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೯೮ಎ
ಮತ್ತು ಸೆಕ್ಷನ್ ೩೦೬ರ ಅಡಿಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಲಾಗಿತ್ತು.
ವೈವಾಹಿಕ
ಅಸಂತೋಷ ಆತ್ಮಹತ್ಯೆಗೆ ಕಾರಣ ಎಂದು ಹೇಳಿರುವ ಚಾರ್ಜ್‌ಶೀಟ್, ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ
ಪ್ರಚೋದನೆ ನೀಡಲಾಗಿದೆ. ಸುನಂದಾ ಪುಷ್ಕರ್ ಅವರನ್ನು ದೀರ್ಘ ಕಾಲದಿಂದ ಚಿತ್ರಹಿಂಸೆಗೆ ಗುರಿಪಡಿಸಲಾಗಿತ್ತು.
ಆಕೆಯ ವೈದ್ಯಕೀಯ ದಾಖಲೆಗಳು ಅವರು ದೀರ್ಘ ಕಾಲದಿಂದ ಖಿನ್ನತೆಯಿಂದ ನರಳುತ್ತಿದ್ದರು ಎಂಬುದನ್ನು ತೋರಿಸಿದೆ
ಎಂದು ತಿಳಿಸಿತ್ತು. ಚಾರ್ಜ್‌ಶೀಟ್ ಬಗ್ಗೆ ಎರಡು ಟ್ವೀಟ್
ಗಳ ಮೂಲಕ ಪ್ರತಿಕ್ರಿಯಿಸಿದ ತರೂರ್ ಅವರು ಅದನ್ನು ಅಸಂಬದ್ದ ಎಂಬುದಾಗಿ ಬಣ್ಣಿಸಿ, ತಾವು ಅದನ್ನು ವಿರೋಧಿಸುವುದಾಗಿ
ತಿಳಿಸಿದರು. ’ಸುನಂದಾ ಬಗ್ಗೆ ಗೊತ್ತಿದ್ದವರು ಯಾರೂ
ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಲಾರರು. ಇನ್ನು ನಾನು ಆತ್ಮಹತ್ಯೆಗೆ ಕುಮ್ಮಕ್ಕು ನೀಡುವ
ಪ್ರಶ್ನೆಯೆಲ್ಲಿ ಬಂತು? ೪ ವರ್ಷಗಳ ತನಿಖೆಯ ಬಳಿಕ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದರೆ, ಅದಕ್ಕೆ
ಕಾರಣವೇನು ಎಂಬುದನ್ನು ಅದು ಹೇಳುವುದಿಲ್ಲ’ ಎಂದು ಅವರು ಹೇಳಿದರು. ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಜೊತೆಗೆ ಶಶಿ ತರೂರ್
ಅವರು ನಿಕಟ ಬಾಂಧವ್ಯ ಹೊಂದಿದ್ದ ಬಗ್ಗೆ ಆಕೆಯ ಜೊತೆಗೆ ಟ್ವಿಟ್ಟರ್ ಸಮರ ನಡೆಸಿದ್ದ ಸುನಂದಾ ಪುಷ್ಕರ್
ಕೆಲ ದಿನಗಳ ಬಳಿಕ ೨೦೧೪ರ ಜನವರಿ ೧೭ರಂದು ಐಷಾರಾಮಿ ಹೋಟೆಲಿನ ಕೊಠಡಿಯಲ್ಲಿ ಸತ್ತು ಬಿದ್ದಿದ್ದುದು
ಪತ್ತೆಯಾಗಿತ್ತು.
2018: ಬೆಂಗಳೂರು: ವಿಮಾನ ನಿಲ್ದಾಣಕ್ಕೆ
ಹೋಗುವ ಹಾದಿಯಲ್ಲಿ ಬೆಂಗಳೂರಿನ ೨೬ರ ಹರೆಯದ ಮಹಿಳೆಯೊಬ್ಬರನ್ನು ಓಲಾ ಕ್ಯಾಬ್ ಚಾಲಕನೊಬ್ಬ ಒತ್ತೆಯಾಳಾಗಿ
ಹಿಡಿದಿಟ್ಟು, ಕಿರುಕುಳ ನೀಡಿ, ಬಲಾತ್ಕಾರವಾಗಿ ಬಟ್ಟೆ ಕಳಚಿಸಿ ಮಾನಭಂಗ ಎಸಗಿ ಫೊಟೋ ತೆಗೆದುಕೊಂಡ
ಘಟನೆ ಘಟಿಸಿತು. ಕಿರುಕುಳಕ್ಕೆ ಈಡಾದ ಮಹಿಳೆ ನೀಡಿದ
ದೂರನ್ನು ಅನುಸರಿಸಿ ಕ್ಯಾಬ್ ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದರು. ಜೂನ್ ೧ರ ಶುಕ್ರವಾರ
ನಸುಕಿನ ವೇಳೆಯಲ್ಲಿ ಮುಂಬೈಗೆ ಹೋಗುವ ವಿಮಾನ ಏರುವ ಸಲುವಾಗಿ ತಾನು ಏಕಾಂಗಿಯಾಗಿ ಕ್ಯಾಬ್ ನಲ್ಲಿ ಪ್ರಯಾಣ
ಹೊರಟಿದ್ದೆ. ಮಾರ್ಗ ಮಧ್ಯೆ ಶೀಘ್ರ ತಲುಪುವುದಾಗಿ ಹೇಳಿ ಚಾಲಕ ಬಳಸುದಾರಿ ಹಿಡಿದ ಎಂದು ವಾಸ್ತುಶಿಲ್ಪಿಯಾಗಿರುವ
ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ನಿರ್ಜನ ರಸ್ತೆ ತಲುಪಿದ ಬಳಿಕ ಚಾಲಕ ಕಾರಿನಲ್ಲೇ
ಆಕೆಗೆ ಕಿರುಕುಳ ನೀಡಿದ. ಕಾರಿನ ಕಿಟಕಿ, ಬಾಗಿಲುಗಳನ್ನು ಲಾಕ್ ಮಾಡಿದ ಚಾಲಕ, ಗಂಭೀರ ಪರಿಣಾಮದ ಬೆದರಿಕೆ
ಹಾಕಿ ತಾನು ಹೇಳಿದಂತೆ ಕೇಳಲು ಸೂಚಿಸಿದ. ಇನ್ನಷ್ಟು ಮಂದಿಯನ್ನು ಕರೆದು ಸಾಮೂಹಿಕ ಅತ್ಯಾಚಾರ ಎಸಗುವುದಾಗಿಯೂ
ಆತ ಬೆದರಿಸಿದ. ಬಳಿಕ
ಬಟ್ಟೆ ಕಳಚಿ ಫೋಟೋಕ್ಕೆ ಪೋಸ್ ನೀಡುವಂತೆ ಮಹಿಳೆಗೆ ಸೂಚಿಸಿದ ಚಾಲಕ ಆಕೆ ನಿರಾಕರಿಸಿದಾಗ ಆಕೆಯ ಗಂಟಲು
ಹಿಸುಕಲು ಯತ್ನಿಸಿದ. ಸ್ವಲ್ಪ ಹೊತ್ತು ಪ್ರತಿಭಟಿಸಿದ ಆಕೆ ಕಡೆಗೆ ಆತ ಹೇಳಿದಂತೆ ಕೇಳಬೇಕಾಯಿತು. ಆಕೆಯ ಫೊಟೋಗಳನ್ನು ತೆಗೆದು
ಅವುಗಳನ್ನು ವಾಟ್ಸ್ ಆಪ್ ಮೂಲಕ ಶೇರ್ ಮಾಡಿದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು
ಹೇಳಿದರು. ಘಟನೆ ಬಗ್ಗೆ ಏನಾದರೂ ದೂರು ನೀಡಿದರೆ,
ಸಾಮಾಜಿಕ ಮಾಧ್ಯಮಗಳಲ್ಲಿ ಫೊಟೋಗಳನ್ನು ಹಂಚಿಕೊಳ್ಳುವುದಾಗಿಯೂ ಆತ ಬೆದರಿಕೆ ಹಾಕಿದ ಎಂದು ಪೊಲೀಸ್
ಸಿಬ್ಬಂದಿಯೊಬ್ಬರು ತಿಳಿಸಿದರು. ಘಟನೆಯ ಬಳಿಕ ವಿಮಾನವೇರಿ ಮುಂಬೈಗೆ ತೆರಳಿದ ಮಹಿಳೆ ಬೆಂಗಳೂರು ಪೊಲೀಸ್
ಕಮೀಷನರ್ ಅವರಿಗೆ ಇ-ಮೇಲ್ ಮೂಲಕ ದೂರು ನೀಡಿದರು. ಆಕೆಯ ದೂರನ್ನು ಆಧರಿಸಿ ಪೊಲೀಸರು ಎಫ್ ಐಆರ್ ದಾಖಲಿಸಿ
ಆರೋಪಿಯನ್ನು ಬಂಧಿಸಿದರು. ಚಾಲಕನನ್ನು ಪೊಲೀಸ್ ತಪಾಸಣೆಗೆ
ಏಕೆ ಒಳಪಡಿಸಲಿಲ್ಲ ಎಂಬುದಾಗಿ ವಿವರಣೆ ನೀಡುವಂತೆ ಓಲಾ ಕ್ಯಾಬ್ ಗಳಿಗೆ ನೋಟಿಸ್ ನೀಡಲಾಗಿದೆ ಎಂದು
ಪೊಲೀಸರು ತಿಳಿಸಿದರು. ‘ಪಯಣದ ವೇಳೆ ಗ್ರಾಹಕರಿಗೆ
ಆದ ದುರದೃಷ್ಟಕರ ಅನುಭವಕ್ಕಾಗಿ ವಿಷಾದಿಸುತ್ತೇವೆ. ಇಂತಹ ಘಟನೆಗಳನ್ನು ನಾವು ಸಹಿಸುವುದಿಲ್ಲ. ದೂರು
ಬಂದ ಕೂಡಲೇ ತತ್ ಕ್ಷಣದ ಕ್ರಮವಾಗಿ ಆರೋಪಿ ಚಾಲಕನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಗ್ರಾಹಕ ಸುರಕ್ಷತೆ
ನಮ್ಮ ಆದ್ಯತೆಯಾಗಿದ್ದು, ಪೊಲೀಸರಿಗೆ ಪ್ರಕರಣದ ತನಿಖೆಯಲ್ಲಿ ಪೂರ್ಣ ಪ್ರಮಾಣದ ಸಹಕಾರ ನೀಡುತ್ತೇವೆ’ ಎಂದು ಓಲಾ ವಕ್ತಾರರು ಹೇಳಿದರು. ಚಾಲಕನ ಪೊಲೀಸ್ ತಪಾಸಣೆಯನ್ನು ನಿಯಮಗಳ ಪ್ರಕಾರ ನಡೆಸಲಾಗಿದೆ
ಎಂದೂ ಓಲಾ ಹೇಳಿತು. ’ಚಾಲಕ-ಪಾಲುದಾರರು ಪೊಲೀಸ್ ತಪಾಸಣೆಗೆ
ಒಳಪಡಬೇಕು ಮತ್ತು ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲವೆಂಬುದು ದೃಢಪಡಿಸಬೇಕು. ಇದು
ನಮ್ಮ ವೇದಿಕೆಯಡಿಯಲ್ಲಿ ಕಾರ್‍ಯನಿರ್ವಹಿಸುವ ಎಲ್ಲ ಚಾಲಕ -ಪಾಲುದಾರರೂ ಕಡ್ಡಾಯವಾಗಿ ಪಾಲಿಸಲೇಬೇಕಾದ
ಪ್ರಕ್ರಿಯೆ ಎಂದೂ ವಕ್ತಾರ ನುಡಿದರು.
2018: ನವದೆಹಲಿ: ಮಹತ್ವದ ಬೆಳವಣಿಗೆ
ಒಂದರಲ್ಲಿ, ಕಾನೂನಿಗೆ ಅನುಗುಣವಾಗಿ ಪರಿಶಿಷ್ಟ ಜಾತಿ (ಎಸ್ ಸಿ ) ಮತ್ತು ಪರಿಶಿಷ್ಟ ವರ್ಗ (ಎಸ್ ಟಿ)
ವರ್ಗಗಳಿಗೆ ಸೇರಿದ ನೌಕರರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಒದಗಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾತ್ಕಾಲಿಕ ಅನುಮತಿ ನೀಡಿತು. ವಿವಿಧ ಹೈಕೋರ್ಟುಗಳು ನೀಡಿದ ಆದೇಶಗಳು ಮತ್ತು ಇಂತಹುದೇ
ವಿಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಪಾಲಿಸುವಂತೆ ೨೦೧೫ರಲ್ಲಿ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ
ಪರಿಣಾಮವಾಗಿ ಇಡೀ ಬಡ್ತಿ ಪ್ರಕ್ರಿಯೆಯೇ ಸ್ಥಗಿತಗೊಂಡಿದೆ ಎಂಬುದಾಗಿ ಸರ್ಕಾರವು ಸಲ್ಲಿಸಿದ ಅಹವಾಲುಗಳನ್ನು
ಆಲಿಸಿದ ಬಳಿಕ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಈ ವಿಚಾರದಲ್ಲಿ ಮುಂದುವರೆಯಲು ಅನುಮತಿ ನೀಡಿತು. ನ್ಯಾಯಮೂರ್ತಿಗಳಾದ
ಆದರ್ಶ ಕುಮಾರ್ ಗೋಯೆಲ್ ಮತ್ತು ಅಶೋಕ ಭೂಷಣ್ ಅವರನ್ನು ಒಳಗೊಂಡ ರಜಾಕಾಲೀನ ಪೀಠವು ಕಾನೂನಿಗೆ ಅನುಗುಣವಾಗಿ
ಬಡ್ತಿಗಳನ್ನು ನೀಡಲು ಕೇಂದ್ರ ಸರ್ಕಾರವನ್ನು ನಿಷೇಧಿಸಲಾಗಿಲ್ಲ, ಆದರೆ ಅಂತಹ ಕ್ರಮಗಳು ವಿಷಯಕ್ಕೆ
ಸಂಬಂಧಿಸಿದಂತೆ ನ್ಯಾಯಾಲಯದ ಮುಂದಿನ ಆದೇಶಗಳಿಗೆ ಒಳಪಟ್ಟಿರುತ್ತವೆ ಎಂದು ಹೇಳಿತು. ವಿವಿಧ ಹೈಕೋರ್ಟ್‌ಗಳ ಆದೇಶದಂತೆ ತನ್ನ ಉದ್ಯೋಗಿಗಳಿಗೆ ಬಡ್ತಿ
ನೀಡಬೇಕಾಗಿದ್ದು, ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಅವೆಲ್ಲವೂ ಸ್ಥಗಿತಗೊಂಡಿದೆ. ಹೀಗಾಗಿ ಬಡ್ತಿಗೆ
ಸೂಕ್ತ ರೀತಿಯಲ್ಲಿ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿತು. ‘ನಾನೇ ಸರ್ಕಾರವಾಗಿದ್ದು, ನನ್ನ ಉದ್ಯೋಗಿಗಳಿಗೆ ಬಡ್ತಿ
ನೀಡಬೇಕಾಗಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಮನೀಂದರ್
ಸಿಂಗ್ ಸುಪ್ರೀಂ ಕೋರ್ಟಿಗೆ ತಿಳಿಸಿದರು. ಆಗ ಸುಪ್ರೀಂ
ಕೋರ್ಟ್ ಕಾನೂನಿನಂತೆ ಬಡ್ತಿ ನೀಡಿ ಎಂದು ಸಲಹೆ ನೀಡಿತು. ’ಕಾನೂನಿಂತೆ ಬಡ್ತಿ ನೀಡಿ ಎಂದು ನಾವು ಹೇಳಬಲ್ಲೆವು.
ಯಾವ ಕಾನೂನು ಎಂದು ಹೇಳಲಾಗದು’ ಎಂದು ಸುಪ್ರೀಂ ಕೋರ್ಟ್
ಸ್ಪಷ್ಟಪಡಿಸಿತು. ಕೇಂದ್ರ ಸಚಿವ ಹಾಗೂ ಬಿಜೆಪಿ ಮಿತ್ರಪಕ್ಷದ
ನಾಯಕ ರಾಮ್ ವಿಲಾಸ್ ಪಾಸ್ವಾನ್ ಏಪ್ರಿಲ್‌ನಲ್ಲಿ ದಲಿತರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತ, ಸುಪ್ರೀಂ
ಕೋರ್ಟಿನ ನಿರ್ದೇಶನಗಳನ್ನು ಹಿಂಪಡೆಯುವಂತೆ ಮತ್ತೆ ಕೋರ್ಟ್‌ಗೆ ಮೊರೆ ಹೋಗುವುದಾಗಿ ಸುದ್ದಿಗಾರರಿಗೆ
ತಿಳಿಸಿದ್ದರು. ‘ಕಾನೂನಿಗೆ ಅನುಗುಣವಾಗಿ ಬಡ್ತಿಗಳನ್ನು
ನೀಡದಂತೆ ಭಾರತ ಸರ್ಕಾರವನ್ನು ನಿಷೇಧಿಸಲಾಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸಲಾಗಿದೆ. ಇದು ವಿಷಯಕ್ಕೆ
ಸಂಬಂಧಿಸಿದಂತೆ ಮುಂದಿನ ಆದೇಶಗಳಿಗೆ ಒಳಪಟ್ಟಿರುತ್ತದೆ’ ಎಂದು ಪೀಠ ತಿಳಿಸಿತು. ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ)
ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರು ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿದರು. ’ಈ ಆದೇಶವು
ಪರಿಶಿಷ್ಟ ಜಾತಿ/ ಪರಿಶಿಷ್ಟ ಸಮುದಾಯಗಳ ಸದಸ್ಯರಿಗೆ ಸರ್ಕಾರಿ ನೌಕರಿಗಳಲ್ಲಿ ಬಡ್ತಿಗೆ ಮತ್ತೆ ದ್ವಾರಗಳನ್ನು
ತೆರೆಯಲಿದೆ’ ಎಂದು ಅವರು ನುಡಿದರು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಬಡ್ತಿ ನೀಡುವುದಕ್ಕೆ
ಸಂಬಂಧಿಸಿದ ಈ ತೀರ್ಪಿಗಾಗಿ ನಾನು ಸುಪ್ರೀಂಕೋರ್ಟಿಗೆ ಧನ್ಯವಾದ ಹೇಳುತ್ತೇನೆ. ಈಗ ಮುಚ್ಚಿದ ದ್ವಾರಗಳು
ತೆರೆಯಲ್ಪಡುತ್ತವೆ ಎಂದು ದಲಿತ ನಾಯಕ ಹೇಳಿದರು.
2017: ಬೀಜಿಂಗ್: ಜಪಾನ್‌ನ ಹಿತಾಚಿ ಕಂಪೆನಿ
ಅಭಿವೃದ್ಧಿಪಡಿಸಿದ ವಿಶ್ವದ ಅತ್ಯಂತ ವೇಗದ
ಎಲಿವೇಟರನ್ನು ಬೀಜಿಂಗಿನ ಸ್ಕೈಸ್ಕ್ರ್ಯಾಪರ್
ಕಾಂಪ್ಲೆಕ್ಸ್‌ನಲ್ಲಿ ಅಳವಡಿಸಲು ಚೀನಾ ಮುಂದಾಯಿತು. ಕೇವಲ ಒಂದು ನಿಮಿಷದಲ್ಲಿ 1,260 ಮೀಟರ್
ಎತ್ತರಕ್ಕೆ ತಲುಪಿಸಬಲ್ಲ ಸಾಮರ್ಥ್ಯವನ್ನು ಈ ಎಲಿವೇಟರ್(ಸ್ವಯಂ ಚಾಲಿತ ಮೆಟ್ಟಿಲು) ಹೊಂದಿದೆ.
ಚೀನಾದ ಗುಂಗ್‌ಜೊನಲ್ಲಿ ಈ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷವೂ
ಮೇ ತಿಂಗಳಲ್ಲಿ ನಡೆಸಿದ ಎಲಿವೇಟರ್‌ನ ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ರತಿ ನಿಮಿಷಕ್ಕೆ 1,200
ಮೀಟರ್ ಎತ್ತರ ತಲುಪುವಲ್ಲಿ ಯಶಸ್ವಿಯಾಗಿತ್ತು. ಎಲಿವೇಟರ್‌ನಲ್ಲಿ ಬ್ರೇಕ್ ಉಪಕರಣ ಸೇರಿದಂತೆ
ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
2017:
ರಿಯಾದ್: ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಖತಾರ್
ದೇಶದೊಂದಿಗಿನ ತಮ್ಮ
ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದಾಗಿ ಸೌದಿ ಅರೇಬಿಯ, ಈಜಿಪ್ಟ್, ಬಹ್ರೈನ್ ಮತ್ತು
ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ 7 ರಾಷ್ಟ್ರಗಳು ಪ್ರಕಟಿಸಿದವು. ಭಯೋತ್ಪಾದನೆ ಮತ್ತು ಉಗ್ರವಾದಗಳಿಂದ
ತಂತಮ್ಮ ದೇಶದ ಭದ್ರತೆಯನ್ನು ರಕ್ಷಿಸಿಕೊಳ್ಳಲು ಸೌದಿ ಅರೇಬಿಯಾ ಖತಾರ್ ಜೊತೆಗಿನ ರಾಜ ತಾಂತ್ರಿಕ
ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿದವು. ಖತಾರ್ ಜತೆಗಿನ
ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲು ಕಡಿದುಕೊಳ್ಳಲು ರಿಯಾಧ್ ನಿರ್ಧರಿಸಿದ್ದು ಖತಾರ್
ಜತಗಿನ ಭೂ, ಸಮುದ್ರ ಗಡಿಗಳನ್ನು ಹಾಗೂ ವಾಯು ನಿಲ್ದಾಣಗಳನ್ನು ಮುಚ್ಚಲು ನಿರ್ಧರಿಸಲಾಗಿರುವುದಾಗಿ
ವರದಿ ಹೇಳಿತು. ಖತಾರ್ ಆಡಳಿತದಿಂದ ಕಳೆದ ಕೆಲವು ವರ್ಷಗಳಿಂದ ಒಪ್ಪಂದ ಉಲ್ಲಂಘನೆ ಆಗುತ್ತಿರುವುದೇ
ಈ ನಿರ್ಣಾಯಕ ಕ್ರಮಕ್ಕೆ ಕಾರಣ ಎಂದು ಸೌದಿ ಅರೇಬಿಯಾ ತಿಳಿಸಿತು. ಈಜಿಪ್ಟ್ ಕೂಡಾ ತನ್ನ ವಾಯುಮಾರ್ಗ
ಹಾಗೂ ಬಂದರುಗಳನ್ನು ಖತಾರ್ ಪಾಲಿಗೆ ಮುಚ್ಚಿತು.. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಖತಾರ್ ರಾಜತಾಂತ್ರಿಕ
ಸಿಬ್ಬಂದಿಗಳಿಗೆ ದೇಶ ಬಿಡಲು 48 ಗಂಟೆಗಳ ಗಡುವು ನೀಡಿತು. ಬಹ್ರೇನ್ ಕೂಡಾ ರಾಜತಾಂತ್ರಿಕ ಸಿಬ್ಬಂದಿಗೆ
ದೇಶ ತೊರೆಯಲು ಸೂಚಿಸಿತು. ದೇಶದ ಭದ್ರತೆ ಬುಡಮೇಲಾಗುತ್ತಿದೆ. ಹೀಗಾಗಿ ಖತಾರ್ ಜೊತೆಗಿನ ಎಲ್ಲಾ
ರೀತಿಯ ಸಂಬಂಧಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಬಹ್ರೇನ್ ಹೇಳಿತು. ದೋಹಾದ ನಡೆಗಳು
'ಭಯೋತ್ಪಾದನಗೆ ಶಕ್ತಿ' ನೀಡುತ್ತಿವೆ. 'ಅಲ್ ಖೈದಾ ಮತ್ತು ಡಾಯಿಷ್ (ಇಸ್ಲಾಮಿಕ್ ಸ್ಟೇಟ್ -ಐಸಿಸ್)'
ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಈ ದೇಶಗಳು ಆರೋಪಿಸಿದವು. 2022ರಲ್ಲಿ ವಿಶ್ವ ಕಪ್
ಫುಟ್ಬಾಲ್ ಪಂದ್ಯಾವಳಿಯ ಆತಿಥ್ಯವನ್ನು ಖತಾರ್ ಪಡೆದುಕೊಂಡಿದೆ. ಇಸ್ಲಾಮಿಕ್ ಉಗ್ರರ ವಿರುದ್ಧದ
ಹೋರಾಟದಲ್ಲಿ ಅಮೆರಿಕ ನೇತೃತ್ವದ ಮಿತ್ರಕೂಟದ ಓರ್ವ ಸದಸ್ಯ ದೇಶವಾಗಿದೆ. ಈಚಿನ ವರ್ಷಗಳಲ್ಲಿ ಖತಾರ್
ಇಸ್ಲಾಮಿಕ್ ಉಗ್ರರಿಗೆ ಹಣ ಇತ್ಯಾದಿ ನೆರವನ್ನು ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಇಂದು ವಿಶ್ವ ಪರಿಸರ ದಿನ.
2016: ಪ್ಯಾರಿಸ್: ವಿಶ್ವ ನಂ. 1 ಟೆನಿಸ್ ಆಟಗಾರ ನೂವಾಕ್ ಜೋಕೊವಿಕ್ ಬ್ರಿಟ್ನ ಆಂಡಿ ಮರ್ರೆ ಅವರನ್ನು ಸೋಲಿಸಿ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದರು. ಈದಿನ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಜೋಕೊವಿಕ್ ಮರ್ರೆ ವಿರುದ್ಧ 3-6, 6-1, 6-2, 6-4 ಸೆಟ್ಗಳ ಅಂತರದಿಂದ ಜಯ ಗಳಿಸಿ ಮೊದಲ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದರು. ಈ ಮೂಲಕ ಕೆರಿಯರ್ ಗ್ರಾಂಡ್ಸ್ಲಾಂ ಗೆದ್ದ ಸಾಧನೆ ಮಾಡಿದರು. ಮೊದಲ ಸೆಟ್ನಲ್ಲಿ 3-6 ಅಂತರದಿಂದ ಸೋಲುವ ಮೂಲಕ ಹಿನ್ನಡೆ ಅನುಭವಿಸಿದ ಜೋಕೊವಿಕ್, ನಂತರದ ಸೆಟ್ಗಳಲ್ಲಿ ಮರ್ರೆಗೆ ತಿರುಗೇಟು ನೀಡಿ ಪ್ರಶಸ್ತಿ ಗೆದ್ದರು.
2016: ದೋಹಾ: ಜಗತ್ತಿನ ಎಲ್ಲ ರಾಷ್ಟ್ರಗಳೂ ಭಾರತದ ಅಭ್ಯುದಯವನ್ನು ಅದಮ್ಯ ಉತ್ಸಾಹದಿಂದ ಪರಿವೀಕ್ಷಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಎರಡು ದಿನಗಳ ಖತಾರ್ ಭೇಟಿಯ ಕೊನೆಯ ಭಾಗದಲ್ಲಿ ಭಾರತೀಯ ಸಮುದಾಯಗಳನ್ನು ಉದ್ದೇಶಿಸಿ ಮಾತನಾಡಿದ ಅವರು,125 ಕೋಟಿ ಜನರನ್ನು ಹೊಂದಿರುವ ಮಹಾನ್ ರಾಷ್ಟ್ರ ಭಾರತ ಸಾಧನಾ ಪಥದಲ್ಲಿ ದೊಡ್ಡ ಮೈಲಿಗಲ್ಲುಗಳನ್ನು ದಾಟುತ್ತಿದೆ ಎಂಬುದೇ ಹೆಮ್ಮೆಯ ಸಂಗತಿ ಎಂದರು. ಖತಾರ್ನಲ್ಲಿರುವ ಭಾರತೀಯರು 'ದೇಶ ಬಿಟ್ಟು ಹೊರಗೆ ಇದ್ದೇವೆ' ಎಂದು ಪರಿಭಾವಿಸುವುದು ಬೇಡ. ಪ್ರತಿ ಕ್ಷಣವೂ ನೀವೆಲ್ಲಾ ಭಾರತದ ಜತೆಗೇ ಇರುತ್ತೀರಿ. ಇಂದು ವಿಶ್ವವೇ ಭಾರತದ ಕಡೆಗೆ ಆಕರ್ಷಿತವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಊರ್ಧ್ವಮುಖಿಯಾಗಿದೆ. ದೇಶವಾಸಿಗಳಲ್ಲಿ ರಾಷ್ಟ್ರದ ಬಗ್ಗೆ ಇರುವ ಭರವಸೆ, ತುಡಿತಗಳೇ ಈ ಮೈಲಿಗಲ್ಲುಗಳಿಗೆ ಕಾರಣ ಎಂದರು. ಭಾರತದಲ್ಲಿ ಅತಿ ವೇಗವಾಗಿರುವ ಆರ್ಥಿಕ ಅಭಿವೃದ್ಧಿಯಾಗುತ್ತಿರುವ ಕಾರಣದಿಂದ ಎಲ್ಲರೂ ನಮ್ಮತ್ತ ದೃಷ್ಟಿ ನೆಟ್ಟಿದ್ದಾರೆ. ಎರಡು ವರ್ಷಗಳಿಂದ ಮುಂಗಾರು ಮಳೆ ತೃಪ್ತಿದಾಯಕವಾಗಿಲ್ಲದಿದ್ದರೂ ನಮ್ಮ ಬೆಳವಣಿಗೆಗೆ ಇವ್ಯಾವುದೂ ಮಾರಕವಾಗಿಲ್ಲ ಎಂದರು. ಭ್ರಷ್ಟಾಚಾರ ನಮ್ಮನ್ನು ಬಹುವರ್ಷ ಕಾಡಿ ಪ್ರಗತಿಗೆ ಅಡ್ಡಗಾಲು ಹಾಕಿತ್ತು. ಅದನ್ನು ಬೇರು ಸಹಿತ ನಿಮೂಲನೆ ಮಾಡುವ ತಂತ್ರ ನಮಗೀಗ ಕರಗತವಾಗಿದೆ. ನೂತನ ಕಾರ್ಯತಂತ್ರ ಮತ್ತು ಹಣಕಾಸು ಕ್ಷೇತ್ರದ ಸುಧಾರಣೆ ಇದಕ್ಕೆ ಪೂರಕವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಭಾರತೀಯ ಸಮುದಾಯದವರು ಧನ್ಯವಾದ ಸಮರ್ಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಮೋದಿ, ಅಭಿವೃದ್ಧಿ ಪಥದಲ್ಲಿ ಕ್ರಾಂತಿಯಾಗಿರುವುದು ನನ್ನೊಬ್ಬನಿಂದ ಅಲ್ಲ, 125 ಕೋಟಿ ಭಾರತೀಯರಿಂದ ಎಂದರು.
2016: ಕೋಲ್ಕತಾ: ಭಾರತದ ಪ್ರಪ್ರಥಮ ಮಿಸ್ಟರ್ ಯೂನಿವರ್ಸ್, ಶತಾಯುಷಿ ಮನೋಹರ ಏಕ್(104) ಈದಿನ ಮಧ್ಯಾಹ್ನ ಬಾಗುಯೇತಿ ಗ್ರಾಮದಲ್ಲಿ ನಿಧನ ರಾದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕಳೆದ 15 ದಿನಗಳಿಂದ ಮಾತನಾಡುವ ಸಾಮರ್ಥ್ಯ ಕಳೆದುಕೊಂಡು ಕೇವಲ ದ್ರವಾಹಾರ ಮಾತ್ರ ಸೇವಿಸುತ್ತಿದ್ದರು. 2016ರ ಕಳೆದ ಮಾರ್ಚಿ 17ಕ್ಕೆ 104 ವರ್ಷ ಪೂರ್ಣಗೊಳಿಸಿದ್ದ ಮನೋಹರ್, 1952ರಲ್ಲೇ ಭಾರತದ ಪ್ರಪ್ರಥಮ ಮಿಸ್ಟರ್ ಯೂನಿವರ್ಸ್ ಕಿರೀಟ ತೊಟ್ಟು ದೇಶಾದ್ಯಂತ ಹೆಸರು ಮಾಡಿದ್ದರು. ಲಂಡನ್ನಲ್ಲಿ ನ್ಯಾಷನಲ್ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿ ಯೇಷನ್ ಆಯೋಜಿಸಿದ್ದ ಚಾಂಪಿಯನ್ ಶಿಪ್ನಲ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು. ಬಾಂಗ್ಲಾದೇಶದ ಕೊಮಿಲ್ಲಾದಲ್ಲಿ ಜನಿಸಿದ್ದ ಮನೋಹರ್ ಉತ್ತಮ ದೇಹದಾರ್ಢ್ಯ ಪಟುವಾಗಿದ್ದರು. 4 ಅಡಿ, 11 ಇಂಚು ಎತ್ತರವಿದ್ದರೂ ಆಂಗ್ಲ ಅಧಿಕಾರಿ ರಿಬ್ ಮಾರ್ಟಿನ್ ನೀಡಿದ ಪ್ರೋತ್ಸಾಹದಿಂದ ದೇಹದಾರ್ಢ್ಯ ಕ್ಷೇತ್ರವನ್ನೇ ಜೀವನದ ಭಾಗವನ್ನಾಗಿಸಿ ಕೊಂಡಿದ್ದರು. ವಸಾಹತು ದಬ್ಬಾಳಿಕೆ ವಿರುದ್ಧ ಪ್ರತಿಭಟಿಸಿದ್ದ ಕಾರಣ ಹಲವು ವರ್ಷ ಅವರು ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಅಲ್ಲಿಯೂ ಅಂಗಸಾಧನೆ ಬಿಡದ ಮನೋಹರ್ ಜೈಲು ಅಧಿಕಾರಿಗಳ ಮನಗೆದ್ದು, ದಿನಕ್ಕೆ 12 ತಾಸು ಕಸರತ್ತು ಮಾಡುತ್ತಿದ್ದರು. ಜೈಲೇ ನನ್ನ ಗರಡಿ ಮನೆಯಾಗಿತ್ತು ಎಂದು ಶತಮಾನ ಪೂರೈಸಿದ ಸಂದರ್ಭ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು. 1950ರಲ್ಲಿ ಹರ್ಕ್ಯುಲಿಸ್ ಪ್ರಶಸ್ತಿ ಪಡೆದು ‘ಹರ್ಕ್ಯುಲಿಸ್ ಆಫ್ ಇಂಡಿಯಾ’ಎಂದೇ ಹೆಸರುವಾಸಿಯಾಗಿದ್ದರು.
ಏಷ್ಯನ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಸೇರಿದಂತೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಹಲವು ಪ್ರಶಸ್ತಿ ಮುಡಿಗೇರಿತ್ತು.
2016: ಜ್ಯೂರಿಚ್: ಸ್ವಿಜರ್ಲೆಂಡ್ನ ಪ್ರತಿಯೊಬ್ಬ ನಾಗರಿಕನಿಗೂ ಪ್ರತೀ ತಿಂಗಳೂ ಸುಮಾರು 1.70 ಲಕ್ಷ ರೂ. (2,563 ಡಾಲರ್) ನಿಗದಿತ ಮಾಸಿಕ ವೇತನ ನೀಡುವ ಪ್ರಸ್ತಾವನೆಯನ್ನು ಸ್ವಿಜರ್ಲೆಂಡ್ನ ಮತದಾರರು ತಿರಸ್ಕರಿಸಿದರು. ಈದಿನ
ನಡೆದ ಮತದಾನದಲ್ಲಿ ಮತದಾರರು ಪ್ರಸ್ತಾವನೆಯನ್ನು ತಿರಸ್ಕರಿಸಿದರು. ಸ್ವಿಜರ್ಲೆಂಡ್ನಲ್ಲಿ ನೇರ ಪಾಲ್ಗೊಳ್ಳುವಿಕೆ (ಡೈರೆಕ್ಟ್ ರೆಪ್ರಸೆಂಟೇಷನ್) ಎಂಬ ಸಂಸದೀಯ ವ್ಯವಸ್ಥೆಯಿದೆ. ಈ ವ್ಯವಸ್ಥೆಯಲ್ಲಿ ಸರ್ಕಾರದ ಯಾವುದೇ ನೀತಿಯನ್ನು ನಾಗರಿಕರು ಪ್ರಶ್ನಿಸಬಹುದು. 100 ದಿನಗಳ ಅವಧಿಯಲ್ಲಿ 50,000 ಸಹಿ ಸಂಗ್ರಹ ಮಾಡಿದರೆ ಆ ವಿಧೇಯಕದ ಬಗ್ಗೆ ಸಂಸತ್ನಲ್ಲಿ ಮರುಮತದಾನ ನಡೆಸಬೇಕಾಗುತ್ತದೆ. ಇದೇ ಮಾದರಿಯಲ್ಲಿ ನಾಗರಿಕರು ವಿಧೇಯಕ ವನ್ನೂ ಮಂಡನೆ ಮಾಡಬಹುದು. ವಿಧೇಯಕ ಮಂಡನೆಗೆ ಒಂದೂವರೆ ವರ್ಷದಲ್ಲಿ 1 ಲಕ್ಷ ಸಹಿ ಸಂಗ್ರಹ ಮಾಡಬೇಕು ಎಂಬ ನಿಯಮವಿದೆ. ಈ ಮಾದರಿಯಲ್ಲಿ ಬೇಸಿಕ್ ಇನ್ಕಮ್ ವಿಧೇಯಕ ನಾಗರಿಕರಿಂದ ಮಂಡನೆಯಾಗಿತ್ತು. 21ನೇ ಶತಮಾನದಲ್ಲಿ ಹೆಚ್ಚಿನ ಕೆಲಸಗಳು ರೋಬಾಟ್ಗಳಿಂದಲೇ ನಡೆಯುತ್ತಿರುವುದ ರಿಂದ ಹೆಚ್ಚು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮೂಲ ವೇತನದ ಅಗತ್ಯವಿದೆ ಎಂಬುದು ಈ ಪ್ರಸ್ತಾವನೆ ಬೆಂಬಲಿಸುವವರ ವಾದ. ಇದಕ್ಕಾಗಿ ಜ್ಯೂರಿಚ್ನ ಬೀದಿಗಳಲ್ಲಿ ರೋಬಾಟ್ಗಳ ನೃತ್ಯ ಪ್ರದರ್ಶನದ ಮೂಲಕ ಇವರು ಪ್ರಚಾರಗಳನ್ನೂ ನಡೆಸಿದ್ದರು. ದೇಶದ ಎಲ್ಲ ನಾಗರಿಕರಿಗೂ ಮಾಸಿಕ ವೇತನ ನೀಡುವುದಕ್ಕೆ ಸ್ವಿಜರ್ಲೆಂಡ್ ಸರ್ಕಾರಕ್ಕೆ 1.71 ಲಕ್ಷ ಕೋಟಿ ರೂ. ಅಗತ್ಯವಿತ್ತು. ಈ ಮೊತ್ತವನ್ನು ಭರಿಸಲು ಸರ್ಕಾರಿ ಭಾರಿ ವೆಚ್ಚ ಕಡಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ಸ್ವಿಸ್ ಸರ್ಕಾರ ಈ ಯೋಜನೆಯನ್ನು ವಿರೋಧಿಸುತ್ತಿದ್ದು, ವಿರೋಧಿಸಿ ಮತ ಹಾಕುವಂತೆ ಜನರಿಗೆ ಮನವಿ
ಮಾಡಿತ್ತು. ಅಲ್ಲದೆ ಯಾವ ರಾಜಕೀಯ ಪಕ್ಷವೂ ಈವರೆಗೆ ಈ ಪ್ರಸ್ತಾವನೆ ಪರವಾಗಿ ನಿಲ್ಲಲಿಲ್ಲ.
2016: ಶ್ರೀನಗರ/ ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿ ಬರುವ ಭಯೋತ್ಪಾದಕರ ಬಳಿ ಇರುವ ಸ್ಮಾರ್ಟ್ ಫೋನ್ಗಳಲ್ಲಿ ‘ಕ್ಯಾಲಿಕ್ಯುಲೇಟರ್’ ಎಂಬ ಹೊಸ ಆಪ್ ಪತ್ತೆಯಾಗಿದೆ. ಈ ಆಪ್ ಭಯೋತ್ಪಾದಕರಿಗೆ ತಮ್ಮನ್ನು ನಿಯೋಜಿಸಿದ ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಲು ನೆರವಾಗುತ್ತದೆ. ಆದರೆ ಸೇನೆಯ ತಾಂತ್ರಿಕ ಕಣ್ಗಾವಲಿಗೆ ಇದು ಸಿಕ್ಕುವುದಿಲ್ಲ! ಈ ‘ಆಪ್’ ವಿಶೇಷ ಏನೆಂದರೆ ಇದು ಸ್ಮಾರ್ಟ್ ಫೋನ್ಗಳನ್ನು ಸಂಪರ್ಕ ಜಾಲಗಳ ಸಂಪರ್ಕದಿಂದಲೇ ತಪ್ಪಿಸಿಬಿಡುತ್ತದೆ. ಈ ವರ್ಷ ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಿಂದ ನುಸುಳುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದರ ಜೊತೆಗೆ ಸಿಕ್ಕಿ ಬಿದ್ದ ನುಸುಳುಕೋರರ ಬಳಿ ಯಾವ ಸಂದೇಶಗಳೂ ದಾಖಲಾಗಿ ಇರದ ಈ ವಿಶಿಷ್ಟ ಸ್ಮಾರ್ಟ್ ಫೋನ್ಗಳನ್ನು ಸೇನೆ ಪತ್ತೆ ಹಚ್ಚಿತು. ಸೇನೆಯ ಸಂಕೇತ ಘಟಕವು ಸಾಮಾನ್ಯವಾಗಿ ಅತಿಕ್ರಮಿಸಿ ಬರುವ ಭಯೋತ್ಪಾದಕರ ಪತ್ತೆಗೆ ವೈರ್ಲೆಸ್ ಮತ್ತು ಮೊಬೈಲ್ ಫೋನ್ನಂತಹ ಸ್ಮಾರ್ಟ್ ಫೋನ್ಗಳನ್ನು ತಾಂತ್ರಿಕವಾಗಿ ಪ್ರತಿಬಂಧಿಸುತ್ತದೆ. ಇದೀಗ ಭಯೋತ್ಪಾದಕರು ಬಳಸುತ್ತಿರುವ ಹೊಸ ತಂತ್ರಜ್ಞಾನವನ್ನು ಭೇದಿಸುವ ನಿಟ್ಟಿನಲ್ಲಿ ಸೇನಾ ತಂತ್ರಜ್ಞರು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಮತ್ತು ಇತರ ಸಂಸ್ಥೆಗಳ ನೆರವಿನೊಂದಿಗೆ ಕಾರ್ಯ ನಿರತವಾಗಿವೆ. ಭಯೋತ್ಪಾದಕರು ಬಳಸುತ್ತಿರುವ ತಂತ್ರಜ್ಞಾನವನ್ನು ಮೊದಲಿಗೆ ಅಮೆರಿಕ ಮೂಲದ ಕಂಪೆನಿಯೊಂದು ‘ಕತ್ರಿನಾ’ ಬಿರುಗಾಳಿ ಬೀಸಿದ ಸಂದರ್ಭದಲ್ಲಿ ಸಂತ್ರಸ್ಥ ಜನರಿಗೆ ಪರಸ್ಪರ ಸಂಪರ್ಕದಲ್ಲಿ ಇರಲು ಸಾಧ್ಯವಾಗುವಂತೆ ಮಾಡಲು ಬಳಸಿತ್ತು.
2016: ಕರ್ನಾಲ್: ಮೀಸಲಾತಿಗೆ ಒತ್ತಾಯಿಸಿ ಅಖಿಲ ಭಾರತೀಯ ಜಾಟ್ ಆರಕ್ಷಣ ಸಂಘರ್ಷ ಸಮಿತಿ ಕರೆ ನೀಡಿದ್ದ ಪ್ರತಿಭಟನೆಗೆ ಹರಿಯಾಣದ ಉತ್ತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡನೇ ಬಾರಿ ಜಾಟ್ ಸಮುದಾಯದವರು ಪ್ರತಿಭಟನೆ ನಡೆಸಲು ಮುಂದಾಗಿದ್ದರಿಂದ ರಾಜ್ಯದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹಾಗಾಗಿ ಪ್ರತಿಭಟನೆಯ ಬಿಸಿ ಕಡಿಮೆಯಾಯಿತು. ಹರಿಯಾಣದ ಯಮುನಾನಗರ, ಕುರುಕ್ಷೇತ್ರ, ಕರ್ನಾಲ್ ಮತ್ತು ಕೈತಿಹಾಲ್ ಜಿಲ್ಲೆಗಳಲ್ಲಿ ಸಣ್ಣ ಸಣ್ಣ ಗುಂಪುಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವು. ಪ್ರತಿಭಟನಾ ಸ್ಥಳಗಳಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಯ ಯೋಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೆ ಶಾಂತಿಯುತವಾಗಿ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಜಾಟ್ ಮೀಸಲಾತಿ ಪರ ಹೋರಾಟಗಾರರು ತಿಳಿಸಿದರು. ಫೆಬ್ರವರಿಯಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿ ಹಲವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಈ ಸಲದ ಪ್ರತಿಭಟನೆಯನ್ನು ನಿಯಂತ್ರಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿತ್ತು. ರಾಜ್ಯಾದ್ಯಂತ 144 ಸೆಕ್ಷನ್ ಹೇರಲಾಗಿತ್ತು. ಈ ಮೂಲಕ ಜನರು ಗುಂಪು ಕೂಡುವುದನ್ನು ಮತ್ತು ಮಾರಕಸ್ತ್ರಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿತ್ತು
2016: ವಡೋದರ: ವಯಸ್ಸು 74. ಆದರೆ ಉತ್ಸಾಹ ಮಾತ್ರ 24 ರ ವಸಂತದಲ್ಲೇ ಇದೆ. ವೃತ್ತಿಯಲ್ಲಿ ಗುಜರಾತ್ ಕೃಷಿ ಕುಲಪತಿಯಾಗಿ ನಿವೃತ್ತರು. ಆದರೆ ಪ್ರವೃತ್ತಿಯಿಂದ ಎಂದೂ ನಿವೃತ್ತರಾಗ ಬಯಸದವರು. ಇವರ ಪರಿಸರ ಸ್ನೇಹಿ ಚಟುವಟಿಕೆ, ಹಸಿರೇ ಉಸಿರೆಂಬ ಮಂತ್ರ ಜಪಕ್ಕೆ, ಆಯೋಜಿಸಿದ ಆಂದೋಲನಕ್ಕೆಲ್ಲಾ ಸಾಕಷ್ಟು ಧನಾತ್ಮಕ ಪರಿಣಾಮ ದೊರಕಿದೆ. ಸಾವಿರಾರು ಜನರ ಬದುಕನ್ನು ಹಸಿರು ಮಾಡಿದೆ. ಇದಕ್ಕಾಗಿ ಅವರಿಗೆ ಪದ್ಮಶ್ರೀ ಸೇರಿ ನೂರಾರು ಪ್ರಶಸ್ತಿ ಅಲಂಕರಿಸಿವೆ. ಇಷ್ಟಾದರೂ ಅವರು ಸುಮ್ಮನೆ ಕೂರಲೊಪ್ಪರು. ಒಂದಿಲ್ಲೊಂದು ಪರಿಸರಾತ್ಮಕ ಚಟುವಟಿಕೆಯಿಂದ ಬದುಕನ್ನೂ ಹಸಿರಾಗಿ ಇಟ್ಟುಕೊಂಡಿದ್ದಾರೆ. ಇವರೇ ಪ್ರೊ. ಎಂ.ಎಚ್.ಮೆಹ್ತಾ. ಗುಜರಾತ್ ಕೃಷಿ ವಿವಿ ಕುಲಪತಿಯಾಗಿದ್ದಾಗ ಅಲ್ಲಿ ವೈಜ್ಞಾನಿಕ ಸಂಶೋಧನೆಗೆ ಅನುವಾಗುವಂತೆ ಹತ್ತಾರು ಗ್ರೀನ್ಹೌಸ್ ಸ್ಥಾಪಿಸುವ ಕಾಯಕಕ್ಕೆ ಚಾಲನೆ ನೀಡಿ, ಅದನ್ನು ಕಾರ್ಯಗತಗೊಳಿಸುವ ಮೂಲಕ ಹೊಸ ಕ್ರಾಂತಿ ಮಾಡಿದರು. ಇಂದಿಗೂ ಅಲ್ಲಿ ಸಂಶೋಧಕರು ವಿಜ್ಞಾನಿ ಮೆಹ್ತಾರನ್ನು ಹತ್ತಾರು ಬಾರಿ ನೆನೆಯುತ್ತಾರೆ. ನೈಸರ್ಗಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಅತಿ ಶೀಘ್ರ ಮತ್ತು ಕಡಿಮೆ ವೆಚ್ಚದ ಪರಿಸರ ಸ್ನೇಹಿ ಮನೆ ನಿರ್ಮಾಣ ಮಾಡುವ ಕಾರ್ಯದಲ್ಲಿ ಮೆಹ್ತಾ ಅಗ್ರಗಣ್ಯ. ಇದಕ್ಕಾಗಿ ಯಾವ ಸರ್ಕಾರದ ನೆರವು, ಬೆಂಬಲವನ್ನೂ ಕೋರಲಿಲ್ಲ. ಖಚ್ನಲ್ಲಿ 2001 ರಲ್ಲಿ ನಡೆದ ಭೀಕರ ಭೂಕಂಪ ಸಂತ್ರಸ್ತರಿಗೆ ನೂರಾರು ‘ಹಸಿರು ಮನೆ’ ನಿರ್ವಿುಸುವ ಮೂಲಕ ದಾಖಲೆಯನ್ನೇ ಬರೆದರು. ತಮಿಳುನಾಡಿನ ಕಲ್ಪಾಕಂಗೆ ಸುನಾಮಿ ಅಪ್ಪಳಿಸಿ ನೂರಾರು ಮಂದಿ ಮನೆ ಕಳೆದುಕೊಂಡಾಗ ಸದ್ದಿಲ್ಲದೆ ಧಾವಿಸಿದ ಮೆಹ್ತಾ, ಸಲ್ಪ ದಿನದಲ್ಲೇ ಸೂರು ನಿರ್ವಿುಸಿಕೊಟ್ಟರು. ನೇಪಾಳದ ಸಂತ್ರಸ್ತರಿಗೂ ಇವರ ಸೇವೆ ಲಭ್ಯವಾಗಿದ್ದು ಇತಿಹಾಸ. ರಸಗೊಬ್ಬರದ ಉತ್ಪಾದನೆ (ಬಳಕೆ) ಕಡಿತಗೊಳಿಸಿ ಇಳುವರಿ ಹೆಚ್ಚಿಸಿ ಎಂಬುದು ಇವರ ಕರೆ. ಅದಕ್ಕಾಗಿ‘ 20:20 ಮಾದರಿ’ ಪರಿಕಲ್ಪನೆ ಪರಿಚಯಿಸಿದರು. ಇದು ಬಿಹಾರ, ಪಂಚಾಬ್, ತಮಿಳುನಾಡು, ಮಧ್ಯಪ್ರದೇಶದ ಎಲ್ಲೆ ಮೀರಿ ಮಾರಿಷಸ್ ಮತ್ತು ಚೀನಾದಲ್ಲೂ ಪ್ರಖ್ಯಾತವಾಯಿತು. ನೂರಾರು ಕೃಷಿಕರು ಈ ಸೂತ್ರ ಅಳ ವಡಿಸಿಕೊಂಡು ಬಂಪರ್ ಬೆಳೆ ತೆಗೆದರು. ಉತ್ತರಾ ಖಂಡದಲ್ಲಿ ಜಲಪ್ರಳಯ ಸಂಭವಿಸಿದಾಗ ಅಲ್ಲಿಗೂ ಧಾವಿಸಿದ ಈ ಪರಿಸರ ಯೋಧ, ಸಮಗ್ರ ಜಲ ಸುರಕ್ಷತಾ ವಿಧಾನಗಳ ಅಳವಡಿಕೆಯ ಸೂತ್ರ ಹೇಳಿಕೊಟ್ಟರು. 6 ವರ್ಷಗಳಿಂದ ‘ವಹೋ ವಿಶ್ವಾಮಿತ್ರ ಅಭಿಯಾನ’ ಆರಂಭಿಸಿದ್ದಾರೆ. ವಡೋದರದಿಂದ ಉಗಮವಾದ ನದಿಗಳ ಪುನರುತ್ಥಾನದ ಕಾರ್ಯದಲ್ಲಿ ಅಹರ್ನಿಷಿ ತೊಡಗಿಸಿಕೊಂಡು ದೊಡ್ಡ ‘ಹಸಿರುಪಡೆ’ಯನ್ನೇ ಕಟ್ಟಿದ್ದಾರೆ. 74 ವರ್ಷವಾಗಿದ್ದರೂ ‘ನನ್ನಿಂದ ಸಾಕಷ್ಟು ಪರಿಸರಾತ್ಮಕ ಕೆಲಸ ಬಾಕಿ ಇದೆ. ಪರ್ಯಾವರಣ ಸ್ನೇಹಿ ಕೃಷಿ ದೇಶದೆಲ್ಲೆಡೆ ಅನುಷ್ಠಾನಗೊಳ್ಳಲಿಕ್ಕಾಗಿ ಆಂದೋಲನ ಆರಂಭಿಸಿರುವೆ’ ಎನ್ನುತ್ತಾರೆ. ಪರ್ಯಾವರಣ ಸ್ನೇಹಿ ಕಾಯಕದಲ್ಲಿ ಮೆಹ್ತಾ ದಣಿವರಿಯದ ಉತ್ಸಾಹಿ. ಅವರಿಗೆ ನಿತ್ಯವೂ ‘ಪರಿಸರ ದಿನ’ . ಪ್ರತಿ ಕ್ಷಣವೂ ಪರ್ಯಾವರಣ ಕಾಳಜಿಯೇ ಅವರ ಮಂತ್ರ.
2016: ಕಾಬೂಲ್: ಅಪ್ಘಾನಿಸ್ತಾನ ರಾಷ್ಟ್ರೀಯ ಪೊಲೀಸ್ ಪಡೆಗಳು ಈದಿನ ನಡೆಸಿದ ಕಾರ್ಯಾಚರಣೆಯಲ್ಲಿ 18 ತಾಲಿಬಾನ್ ದಂಗೆಕೋರರು ಸಾವನ್ನಪ್ಪಿ 19 ಜನರು ಗಾಯಗೊಂಡರು. ಪೊಲೀಸ್ ಪಡೆಗಳ ಯಶಸ್ವಿ ಕಾರ್ಯಾಚರಣೆಯಲ್ಲಿ ಸತ್ತ ದಂಗೆಕೋರರು ತಾಲಿಬಾನ್ ಸಂಘಟನೆಯವರು ಎಂದು ತಿಳಿದು ಬಂದಿತು. ಇವರಲ್ಲಿ ಇಬ್ಬರು ಕಮಾಂಡರ್ಗಳ ಗುರುತು ಪತ್ತೆ ಹಚ್ಚಲಾಗಿದ್ದು, ಅವರನ್ನು ಸಂಗರಿ ಹಾಗೂ ಕ್ವಾರ್ ಆಮಿನ್ ಎಂದು ಹೇಳಲಾಯಿತು. ಈ ಕುರಿತು ಗೃಹ ಸಚಿವಾಲಯ ಪ್ರತಿಕ್ರಿಯಿಸಿ, ಕಳೆದ 48 ಗಂಟೆಗಳಿಂದ ಕಾಬೂಲ್, ಘಜ್ನಿ, ಹೆಲ್ಮಂಡ್, ಲೊಗರ್ ಸೇರಿದಂತೆ ಹಲವು ಪ್ರದೇಶದಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು. ದಂಗೆಕೋರರು ಪಿಕೆ ಮಶೀನ್ ಗನ್, ಎಕೆ 47 ಸೇರಿದಂತೆ ಅಧಿಕ ಶಕ್ತಿಶಾಲಿ ಗನ್ಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದರು.
2016: ಮುಂಬೈ: ತನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಮಾಡಿ ಚಾಟ್ ಮಾಡುತ್ತಿದ್ದಾರೆ ಎಂದು ಮಿಸ್ಟರ್ ಪರ್ಪೆಕ್ಟ್ ಆಮೀರ್ ಖಾನ್ ಪತ್ನಿ ಕಿರಣ್ ರಾವ್ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದರು. ಬಾಂದ್ರಾ-ಕುರ್ಲಾದಲ್ಲಿರುವ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಿರಣ್ ಎಫ್ಐಆರ್ ದಾಖಲಿಸಿದರು. ತನ್ನ ಹೆಸರಿನಲ್ಲಿ ಅಕೌಂಟ್ ಸೃಷ್ಟಿ ಮಾಡಿ ಸ್ನೇಹಿತರಿಗೆ ಹಾಗೂ ಕುಟುಂಬದ ಸದಸ್ಯರಿಗೆ ಸಂದೇಶ ಹಾಗೂ ಚಿತ್ರಗಳನ್ನು ವಿನಿಮಯ ಮಾಡಲಾಗುತ್ತಿದೆ. ಇದರಿಂದಾಗಿ ನನಗೆ ಕಟ್ಟ ಹೆಸರು ಬರುವ ಸಾಧ್ಯತೆ ಇದೆ ಎಂದು ಕಿರಣ್ ರಾವ್ ತಿಳಿಸಿದರು.
2016: ದೋಹಾ (ಖತಾರ್): ‘ಭಾರತವು ಅವಕಾಶಗಳ ನಾಡು’ ಎಂದು ಇಲ್ಲಿ ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಅದರ ಲಾಭ ಪಡೆದುಕೊಳ್ಳಿ ಎಂದು ಖತಾರ್ನ ವಾಣಿಜ್ಯೋದ್ಯಮಿಗಳನ್ನು ಆಹ್ವಾನಿಸಿದರು. ‘ನೀವು ಗುರುತಿಸುವ ಅಡಚಣೆಗಳನ್ನು ಸರ್ಕಾರ ನಿವಾರಿಸಿಕೊಡುತ್ತದೆ’ ಎಂದು ಪ್ರಧಾನಿ ದುಂಡುಮೇಜಿನ ಸಭೆಯಲ್ಲಿ ಖತಾರ್ ವಾಣಿಜ್ಯೋದ್ಯಮಿಗಳ ಜೊತೆ ಮಾತನಾಡುತ್ತಾ ಹೇಳಿದರು. ಪಂಚರಾಷ್ಟ್ರ ಪ್ರವಾಸದ ಎರಡನೇ ದಿನ ತೈಲ ಸಮೃದ್ಧ ರಾಷ್ಟ್ರ ಖತಾರ್ನಲ್ಲಿ ತಮ್ಮ ಮೊದಲ ಕಾರ್ಯಕ್ರಮದಲ್ಲಿ ಪ್ರಧಾನಿ ವಾಣಿಜ್ಯೋದ್ಯಮಿಗಳ ಜೊತೆಗೆ ಸಭೆ ನಡೆಸಿದರು.
ಕೃಷಿ ಸಂಸ್ಕರಣೆ, ರೈಲ್ವೆ, ಮತ್ತು ಸೌರ ಇಂಧನ ಕ್ಷೇತ್ರಗಳು ಖತಾರಿ ಉದ್ಯಮಿಗಳಿಗೆ ಬಂಡವಾಳ ಹೂಡಿಕೆಗೆ ಅತ್ಯುತ್ತಮ ಕ್ಷೇತ್ರಗಳು ಎಂದು ಮೋದಿ ನುಡಿದರು. ಭಾರತದ 80 ಕೋಟಿ ಯುವಕರು ರಾಷ್ಟ್ರದ ಅತ್ಯಂತ ದೊಡ್ಡ ಶಕ್ತಿ. ಮೂಲ ಸವಲತ್ತು ವಿಸ್ತರಣೆ ಮತ್ತು ಮೇಲ್ದರ್ಜೆಗೆ ಏರಿಸುವುದು ಹಾಗೂ ಉತ್ಪಾದನೆ ನನ್ನ ಇತರ ಆದ್ಯತೆಗಳು ಎಂದು ಪ್ರಧಾನಿ ವಿವರಿಸಿದರು.
2016: ಪುದುಚೆರಿ: ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಪರಿಸರವನ್ನು ನಿರ್ವಲವಾಗಿಡಲು ಮತ್ತು ಪ್ರವಾಸಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಲ್ಲಿನ ನೂತನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪೌರ ಕಾರ್ವಿುಕರೊಡನೆ ಕಸ ವಿಲೇವಾರಿ ಕಾರ್ಯದಲ್ಲಿ ಪಾಲ್ಗೊಂಡರು. ನಗರಪಾಲಿಕೆ ಕಾರ್ವಿುಕರೊಡನೆ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟ್ರೀಟ್ ಮತ್ತು ಗಿಂಗೀ ಸಾಲೈನಲ್ಲಿ ಕಸವಿಲೇವಾರಿ ಕಾರ್ಯದಲ್ಲಿ ಪಾಲ್ಗೊಂಡ ಅವರು ಅವರು ಪುದುಚ್ಚೇರಿಯನ್ನು ಸ್ವಚ್ಚ ನಗರವನ್ನಾಗಿಸಲು ಪೌರ ಕಾರ್ವಿುಕರೊಡನೆ ಪ್ರತಿ ಭಾನುವಾರವೂ ಕೆಲಸ ಮಾಡುವುದಾಗಿ ಹೇಳಿದರು. ಸಮಾಜದಲ್ಲಿ ಪೌರ ಕಾರ್ವಿುಕರು ಮತ್ತು ಪೊಲೀಸರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು. ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯದರ್ಶಿ ತೇವಾ ನೀದಿ ದಾಸ್, ರಾಜ್ ನಿವಾಸ್ ಮತ್ತಿತರ ಅಧಿಕಾರಿಗಳು ಹಾಗೂ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳೂ ಕಸ ವಿಲೇವಾರಿ ಕಾರ್ಯದಲ್ಲಿ ಪಾಲ್ಗೊಂಡರು.
2016: ದೆಹಲಿ: ದೆಹಲಿಯಲ್ಲಿರುವ ಎಲ್ಲಾ ಜಲಮೂಲಗಳನ್ನೂ ಮುಂಗಾರು ಮಳೆ ಆಗಮನಕ್ಕೆ ಮುನ್ನ, ಮೂರು ವಾರಗಳ ಒಳಗಾಗಿ ಸ್ವಚ್ಛಗೊಳಿಸುವಂತೆ ದೆಹಲಿ ಸರ್ಕಾರಕ್ಕೆ ಹಸಿರು ನ್ಯಾಯಮಂಡಳಿಯು ಆದೇಶ ನೀಡಿತು. ಈ ಬಗ್ಗೆ ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತರ್ಕುಮಾರ್ ನೇತೃತ್ವದ ಪೀಠವು ಪರಿಸರ ಮತ್ತು ಅರಣ್ಯ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ, ಕೇಂದ್ರ ಅಂತರ್ಜಲ ಪ್ರಾಧಿಕಾರ, ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ದೆಹಲಿ ಜಲ ಮಂಡಳಿಗೆ ನೋಟಿಸ್ ಜಾರಿ ಮಾಡಿ ಎರಡು ವಾರಗಳಲ್ಲಿ ಉತ್ತರಿಸುವಂತೆ ತಿಳಿಸಿತು.
ಪರಿಸರ ಮಿತ್ರ, ಅಗ್ಗದ ವಿಧಾನಗಳ ಮೂಲಕ ಮಳೆ ನೀರು ಕೊಯ್ಲಿಗೆ ರಾಷ್ಟ್ರವ್ಯಾಪಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಸರ್ಕಾರೇತರ ಸಂಘಟನೆ ಚೇತನ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹಸಿರು ನ್ಯಾಯಮಂಡಳಿ ಈ ಆದೇಶ ಹೊರಡಿಸಿತು.
2016: ಮುಂಬೈ: ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ರಂಗಭೂಮಿ,
ಸಿನಿಮಾ ಮತ್ತು ಕಿರುತೆರೆ ಕಲಾವಿದೆ ಸುಲಭಾ ದೇಶಪಾಂಡೆ ಅವರು ಈದಿನ ತಮ್ಮ 79 ನೇ ವಯಸ್ಸಿನಲ್ಲಿ ವಿಧಿವಶರಾದರು. ಹಿರಿಯ ನಟ, ನಾಟಕಕಾರ ವಿಜಯ್ ತೆಂಡೂಲ್ಕರ್ ಅವರಂತಹ ಖ್ಯಾತರ ನಾಟಕಗಳಲ್ಲಿ ಅಭಿನಯಿಸಿರುವ ಸುಲಭಾ ದೇಶಪಾಂಡೆ, ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದರು. ಹಿಂದಿಯ ಖ್ಯಾತ ಚಿತ್ರಗಳಾದ ಭೂಮಿಕಾ (1977), ಅರವಿಂದ್ ದೇಸಾಯಿ ಕಿ ಅಜೀಬ್ ದಾಸ್ತಾನ್(1978), ಗಮನ್ (1978) ಮತ್ತು ಇತ್ತೀಚೆಗೆ ಬಿಡುಗಡೆಯಾದ ಗೌರಿ ಶಿಂಧೆ ಅವರ ಹಿಟ್ ಚಿತ್ರ ‘ಇಂಗೀಷ್ ವಿಂಗ್ಲಿಶ್’ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ವಿಜಯ್ ಮೆಹ್ತಾ, ಸತ್ಯದೇವ್ ದುಬೆ ಜತೆಗೆ ಮರಾಠಿಯಲ್ಲಿ ರಂಗಾಯಣ ತಂಡದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಸುಲಭಾ, 1971 ರಲ್ಲಿ ‘ಆವಿಷ್ಕಾರ್’ ಎಂಬ ಹೆಸರಿನ ನಾಟಕ ತಂಡವನ್ನು ತಮ್ಮ ಪತಿ ಅರವಿಂದ್ ದೇಶಪಾಂಡೆ ಜತೆ ಪ್ರಾರಂಭಿಸಿದ್ದರು.2009: ಜಾಗತಿಕ ಟಿವಿ ವಾಹಿನಿಗಳು ಪ್ರದರ್ಶಿಸಿದ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ನನ ಮೃತದೇಹ ಶ್ರೀಲಂಕಾ ಸೇನೆ ಪ್ರತಿಪಾದಿಸಿದಂತೆ ಕಾರ್ಯಾಚರಣೆಯ ವೇಳೆ ದೊರಕಿದ್ದೇ ಅಥವಾ ಇದೊಂದು ಸೇನೆಯ ವ್ಯವಸ್ಥಿತ 'ನಕಲಿ ಕಾರ್ಯಾಚರಣೆ'ಯ ಭಾಗವೇ ಎಂಬುದಾಗಿ ಕಾಡಿದ್ದ ಶಂಕೆ ನಿಜ ಎಂಬುದಾಗಿ ಸೇನೆಯ ಬೇಹುಗಾರಿಕೆಗೆ ನಿಕಟವಾದ ಮೂಲಗಳು ಪತ್ರಿಕೆಗಳಿಗೆ ತಿಳಿಸಿದವು. 'ಬಂಡುಕೋರ ನಾಯಕನನ್ನು ಮೊದಲು ಜೀವಂತವಾಗಿ ಸೆರೆಹಿಡಿದು ನಂತರ ಅತಿ ಹತ್ತಿರದಿಂದ ಆತನ ತಲೆಗೆ ಗುಂಡಿಟ್ಟು ಕೊಲ್ಲಲಾಯಿತು' ಎಂದು ಈ ಮೂಲಗಳು ಹೇಳಿದವು. ಗುಂಡಿನ ಗಾಯ ಆತನ ಹಣೆಯ ಬಲಬದಿಯಲ್ಲಿ ಇದ್ದುದು ಮತ್ತು ದೇಹದ ಇತರ ಭಾಗದಲ್ಲಿ ಯಾವುದೇ ಗಾಯ ಆಗಿರದಿದ್ದುದು ಈ ಹೇಳಿಕೆಗೆ ಪುಷ್ಟಿ ನೀಡಿತು. ಮೂಲಗಳ ಪ್ರಕಾರ, ಅಂತಿಮ ಹಣಾಹಣಿಯಲ್ಲಿ ವಿಶೇಷ ಪಡೆ ತಮ್ಮನ್ನು ಸುತ್ತುವರಿಯುತ್ತ್ದಿದಂತೆಯೇ ಪ್ರಭಾಕರನ್ನನ ಅಂಗರಕ್ಷಕರು ಮತ್ತು ಕೆಲ ಬಂಡುಕೋರರು ಬೃಹತ್ ಗುಂಡಿನ ಕಾಳಗ ನಡೆಸಿದರು. ಆದರೆ ವೆಲ್ಲಮುಲ್ಲೈವೈಕ್ಕಲ್ ಮತ್ತು ಪುದುಕುದಿರಿಪ್ಪು ಪ್ರದೇಶದಲ್ಲಿ ನಡೆದ ಅವರ ಈ ಹೋರಾಟ ಹೆಚ್ಚು ಕಾಲ ಮುಂದುವರೆಯಲಿಲ್ಲ. ಏಕೆಂದರೆ ಆ ವೇಳೆಗೆ ಸುಮಾರು 300 ಬಂಡುಕೋರರು ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದರಲ್ಲದೆ, 30ರಷ್ಟಿದ್ದ ಅಂಗರಕ್ಷಕರ ಶಸ್ತ್ರಾಸ್ತ್ರವೂ ಬರಿದಾಗಲಾರಂಭಿಸಿತ್ತು. ಆಗ ಎಲ್‌ಟಿಟಿಇ ಮುಖ್ಯಸ್ಥನಿಗೆ ಶರಣಾಗದೆ ಅನ್ಯ ಗತಿ ಇರಲಿಲ್ಲ. ನಂತರ ಯಾವುದೇ ವಿಶೇಷ ಆದ್ಯತೆ ನೀಡದೆ ಇತರ ಸಾಮಾನ್ಯರಂತೆಯೇ ಆತನನ್ನು ಗುಂಡಿಟ್ಟು ಕೊಲ್ಲಲಾಯಿತು ಎಂದು ಮೂಲಗಳು ಹೇಳಿದವು. ವೆಲ್ಲಮುಲ್ಲೈ ವೈಕ್ಕಲ್‌ನಲ್ಲಿದ್ದ ಪ್ರಭಾಕರನ್ ಅಡಗು ತಾಣವನ್ನು ಕಾರ್ಯಾಚರಣೆ ಅಂತಿಮಗೊಂಡ ಕನಿಷ್ಠ ಎರಡು ದಿನಗಳ ಮೊದಲೇ ಪಡೆಗಳು ಸುತ್ತುವರಿದ್ದಿದವು. ಎಲ್‌ಟಿಟಿಇ ಬೇಹುಗಾರಿಕಾ ವಿಭಾಗದ ಮುಖ್ಯಸ್ಥ ಷಣ್ಮುಗಲಿಂಗಂ ಶಿವಶಂಕರ್ ಅಲಿಯಾಸ್ ಪೊಟ್ಟು ಅಮ್ಮಾನ್, ಪ್ರಭಾಕರನ್ ಕುಟುಂಬ ಮತ್ತು ಆತನ ಅಂಗರಕ್ಷಕರನ್ನು ಬಿಟ್ಟರೆ ಈ ಅಡಗುತಾಣದ ಬಗ್ಗೆ ಅರಿತಿದ್ದ ಏಕೈಕ ವ್ಯಕ್ತಿಯೆಂದರೆ ವೈದ್ಯಕೀಯ ವಿಭಾಗದ ಮುಖ್ಯಸ್ಥ ರೀಗನ್. ಆದರೆ ಮೇ ಮೊದಲ ವಾರ ಪಡೆಗಳು ಈತನನ್ನು ಸೆರೆಹಿಡಿದು ವಿಚಾರಣೆಗೆ ಒಳಪಡಿಸಿದಾಗ ಪ್ರಭಾಕರನ್ ಅಡಗುತಾಣದ ಮಾಹಿತಿ ಬಹಿರಂಗವಾಯಿತು. ಇಡೀ ಸಂಘಟನೆಯೇ ನಾಶವಾಗುವ ಹಂತ ತಲುಪಿರುವುದನ್ನು ಮನಗಂಡಿದ್ದ ಎಲ್‌ಟಿಟಿಇ ನಾಯಕತ್ವ, ಪಲಾಯನಕ್ಕೆ ವಿಸ್ತೃತ ಯೋಜನೆಯೊಂದನ್ನು ಸಿದ್ಧಪಡಿಸಿತ್ತು. ಅದರ ಪ್ರಕಾರ ತಂಡ ಮುಲ್ಲೈತೀವು- ವೇಲಿ ಒಯಾ ಅರಣ್ಯದಲ್ಲಿನ ಯುದ್ಧರಹಿತ ವಲಯವನ್ನು ದಾಟಿ, ಪೂರ್ವ ಪ್ರಾಂತ್ಯದ ಬಟ್ಟಿಕಲೋವ ಪ್ರದೇಶವನ್ನು ತಲುಪಬೇಕು. ಅಲ್ಲಿ 'ಕರ್ನಲ್' ರಾಮ್ ಎಂಬಾತ ತಂಡಕ್ಕೆ ದ್ವೀಪ ರಾಷ್ಟ್ರದಿಂದಲೇ ಪರಾರಿಯಾಗುವ ಮಾರ್ಗ ತೋರಲಿದ್ದ' ಈ ಎಲ್ಲ ವಿಷಯವನ್ನೂ ರೀಗನ್ ಅಧಿಕಾರಿಗಳ ಎದುರು ಬಾಯಿಬಿಟ್ಟಿದ್ದ. ಈ ಯೋಜನೆಯಂತೆ ಮೇ 17ರ ಸಂಜೆ ಬಂಡುಕೋರರು ಸಮುದ್ರ ಕಾರ್ಯಾಚರಣೆಗೆ ಮುಂದಾಗಿ ಸೇನೆಯ ಹಿಡಿತದಲ್ಲಿದ್ದ ಪ್ರದೇಶದಿಂದ ಪಾರಾಗಿ ಬಂದಿದ್ದರು. ಬಂಕರ್ ಮೇಲೆ ದಾಳಿ ನಡೆಸಿ ಕನಿಷ್ಠ 15 ಸೈನಿಕರನ್ನು ಕೊಂದು ಹಾಕಿದ್ದರಲ್ಲದೆ, ಅಂಬುಲೆನ್ಸನ್ನು ವಶಪಡಿಸಿಕೊಂಡಿದ್ದರು. ಆದರೆ ಮುಂದೆ ವಿಶೇಷ ಪಡೆಗಳ ಕಬಂಧಬಾಹುವಿನಿಂದ ತಪ್ಪಿಸಿಕೊಳ್ಳಲು ಮಾತ್ರ ಅವರಿಗೆ ಸಾಧ್ಯವಾಗಲಿಲ್ಲ ಎಂದು ಮೂಲಗಳು ವಿವರಿಸಿದವು.
2009: ಆಸ್ಟ್ರೇಲಿಯಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ ನಡೆಯಿತು. ಹರಿಯಾಣ ಮೂಲದ ಅಮೃತ್‌ಪಾಲ್ ಸಿಂಗ್ (20) ತಾನು ಕೆಲಸ ಮಾಡುವ ಸ್ಥಳಕ್ಕೆ ನಡೆದುಕೊಂಡು ಹೋಗುವಾಗ ಯುವಕರ ಗುಂಪೊಂದು ಹಲ್ಲೆ ನಡೆಸಿ ಪರಾರಿಯಾಯಿತು. ಇದು ಕಳೆದ ಒಂದು ತಿಂಗಳಲ್ಲಿ ಭಾರತೀಯರ ಮೇಲೆ ನಡೆದ 10ನೇ ಹಲ್ಲೆ ಪ್ರಕರಣ.
2009: ಪಾಕಿಸ್ಥಾನದ ವಾಯವ್ಯ ಭಾಗದಲ್ಲಿರುವ ಹಿಂಸಾ ಪೀಡಿತ ದಿರ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಮೃತರಾಗಿ 50 ಮಂದಿ ಗಾಯಗೊಂಡರೆ, ಮರ್ದಾನ್ ಜಿಲ್ಲೆಯ ನತ್ಯಾನ್ ಎಂಬಲ್ಲಿ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ ದಾಳಿಯಲ್ಲಿ ಏಳು ಭದ್ರತಾ ಸಿಬ್ಬಂದಿ ಮೃತರಾದರು. ಪಾಕಿಸ್ಥಾನದ ವಾಯವ್ಯ ಗಡಿರೇಖೆ ಬಳಿಯ ದಿರ್‌ನಲ್ಲಿರುವ ಹಯಾಗಾಯಿ ಶೆರ್ಕಿ ಮಸಿದಿಯಲ್ಲಿ ಸುಮಾರು 200 ಜನರು ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡಿತು.
2009: ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಪ್ರಸ್ತಾಪ ಮಾಡಿ ಕಾಂಗ್ರೆಸ್ಸಿನಿಂದ ಹೊರ ಬಂದ 10 ವರ್ಷಗಳ ಬಳಿಕ ಎನ್‌ಸಿಪಿ ನಾಯಕ ಪಿ.ಎ.ಸಂಗ್ಮಾ ತಮ್ಮ ಅಂದಿನ ಹೇಳಿಕೆಗಾಗಿ ಕ್ಷಮೆ ಕೋರಿದರು. '10 ವರ್ಷಗಳ ಹಿಂದೆ ಮಾಡಿದ ಹೇಳಿಕೆಗೆ ಈಗ ನಾನು ಅವರ ಕ್ಷಮೆ ಕೋರಿದ್ದೇನೆ' ಎಂದು ಕೆಲವು ದಿನಗಳ ಹಿಂದೆ ಸೋನಿಯಾ ಅವರನ್ನು ಖುದ್ದು ಭೇಟಿಯಾಗಿದ್ದ ಸಂಗ್ಮಾ ನವದೆಹಲಿಯಲ್ಲಿ ಬಹಿರಂಗ ಪಡಿಸಿದರು. 'ಆಗಿದ್ದು ಆಗಿಹೋಯಿತು. ಅದನ್ನು ಮರೆತು ಬಿಡುವುದು ಒಳ್ಳೆಯದು. ಸೋನಿಯಾ ಬಲು ಘನತೆಯ ವ್ಯಕ್ತಿ' ಎಂದು ಲೋಕಸಭೆಯ ಮಾಜಿ ಸ್ಪೀಕರ್ ಸಂಗ್ಮಾ ಹೇಳಿದರು.
2009: ಹಿರಿಯ ಸಾಹಿತಿ ಪ್ರೊ. ಅ.ರಾ.ಮಿತ್ರ ಸೇರಿದಂತೆ ಐವರು ಸಾಹಿತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದರು. ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ. ಮಲ್ಲಿಕಾರ್ಜುನ ಹಿರೇಮಠ ಮತ್ತು ಲಕ್ಷ್ಮಣ್ ಅವರಿಗೆ ಗೌರವ ಪ್ರಶಸ್ತಿ ಲಭಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಚ್.ಕೃಷ್ಣಯ್ಯ ಬೆಂಗಳೂರಿನಲ್ಲಿ ಪ್ರಕಟಿಸಿದರು.
2009: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಉಪ ನಾಯಕರಾಗಿ ಮತ್ತೊಬ್ಬ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಬೆಂಗಳೂರಿನಲ್ಲಿ ಅವಿರೋಧವಾಗಿ ಆಯ್ಕೆಯಾದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಸಮ್ಮುಖದಲ್ಲಿ ನಡೆದ ಶಾಸ ಕಾಂಗ ಪಕ್ಷದ ಸಭೆಯಲ್ಲಿ ಇವರಿಬ್ಬರ ಆಯ್ಕೆಯನ್ನು ಪ್ರಕಟಿಸಲಾಯಿತು.
2009: ಕೇಂದ್ರ ಕಾನೂನು ಹಾಗೂ ನ್ಯಾಯಾಂಗ ಸಚಿವ ವೀರಪ್ಪ ಮೊಯಿಲಿ ಅವರ 'ಅನ್‌ಲೀಸಿಂಗ್ ಇಂಡಿಯಾ- ಎ ರೋಡ್ ಮ್ಯಾಪ್ ಫಾರ್ ಅಗ್ರೇರಿಯನ್ ವೆಲ್ತ್ ಕ್ರಿಯೇಷನ್' ಕೃತಿಯನ್ನು ನವದೆಹಲಿಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್ ಆಹ್ಲುವಾಲಿಯಾ ಬಿಡುಗಡೆ ಮಾಡಿದರು.
2009: ಸಕಲೇಶಪುರ ತಾಲ್ಲೂಕಿನ ತಾಲ್ಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ದೇಶದ ಪ್ರಥಮ ದೇಸಿ 'ಭತ್ತ ಸಮುದಾಯ ಬೀಜ ಬ್ಯಾಂಕ್'ನ್ನು ಶಾಸಕ ಎಚ್.ಕೆ. ಕುಮಾರ ಸ್ವಾಮಿ ಉದ್ಘಾಟಿಸಿದರು. ದೇಶದ ಪ್ರಥಮ ದೇಸಿ 'ಭತ್ತ ಸಮುದಾಯ ಬೀಜ ಬ್ಯಾಂಕ್' ಭತ್ತದ ದೇಶಿ ತಳಿ ಸಂರಕ್ಷಿಸಲು ಯತ್ನಿಸುವುದು. ಭೂಮಿ ಸಂಸ್ಥೆಯ ಗಾಣದಾಳು ಶ್ರೀಕಂಠ ಹಾಗೂ ಜಯಪ್ರಸಾದ್ ಅವರ 'ನೆಲ ಮೂಲ-ಕೃಷಿ ಜ್ಞಾನ' ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
2008: ಬಿಜೆಪಿಯ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸದನದ ನಾಯಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಜಗದೀಶ್ ಶೆಟ್ಟರ ಅವರ ಹೆಸರನ್ನು ಸೂಚಿಸಿದರು. ಸಚಿವ ರೇವುನಾಯಕ ಬೆಳಮಗಿ ಅನುಮೋದಿಸಿದರು. ಹಂಗಾಮಿ ಸಭಾಧ್ಯಕ್ಷ ಕೆ.ಜಿ. ಭೋಪಯ್ಯ ಅವರು ಜಗದೀಶ್ ಶೆಟ್ಟರ್ ನೂತನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
2007: ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 40 ಸ್ಥಾನಗಳಲ್ಲಿ ಯಾವುದೇ ಪಕ್ಷ ಇಲ್ಲವೇ ಬಣಕ್ಕೆ ಸ್ಪಷ್ಟ ಬಹುಮತ ದೊರೆಯಲಿಲ್ಲ. ಆಡಳಿತಾರೂಢ ಕಾಂಗ್ರೆಸ್ - ಎನ್ಸಿಪಿ ಒಕ್ಕೂಟ ಒಟ್ಟು 19 ಸ್ಥಾನ (ಕಾಂಗ್ರೆಸ್ 16, ಎನ್ಸಿಪಿ 3) ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮರಳಿತು. ಬಿಜೆಪಿ 14 ಸ್ಥಾನ ಪಡೆಯಿತು. ಕರ್ನಾಟಕದ ಉಳ್ಳಾಲ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಯು.ಟಿ. ಖಾದರ್ ಅವರು ಬಿಜೆಪಿಯ ಚಂದ್ರಶೇಖರ ಉಚ್ಚಿಲ ಅವರನ್ನು ಪರಾಭವಗೊಳಿಸಿದರು. ಜೆ.ಡಿ.(ಎಸ್) ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
2007: ಓಮನ್ ಗೆ ಭಾರಿ ಚಂಡಮಾರುತ ಅಪ್ಪಳಿಸಿದ ಪರಿಣಾಮವಾಗಿ ಮಸಿರಾಹ್ ದ್ವೀಪದ ಸಹಸ್ರಾರು ಮಂದಿ ಮನೆ ಮಠ ಬಿಟ್ಟು ಓಡಿದರು.
2007: ಜಗ ತಾಪ ಏರಿಕೆಯ ಪರಿಣಾಮವಾಗಿ ವಿಶ್ವದ ಕೋಟ್ಯಂತರ ಜನ ಕುಡಿಯಲು ಹಾಗೂ ಕೃಷಿಗೆ ಯೋಗ್ಯ ನೀರು ಲಭಿಸದೆ ಒದ್ದಾಡಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ಎಚ್ಚರಿಸಿತು. ಜಗತಾಪ ಏರಿಕೆಯ ಪರಿಣಾಮವಾಗಿ ಮಂಜುಗಡ್ಡೆ ಮತ್ತು ನೀರ್ಗಲ್ಲುಗಳು ಕರಗುವ ಪರಿಣಾಮವಾಗಿ ಜಗತ್ತಿನಾದ್ಯಂತ ಪ್ರವಾಹಗಳು ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗುವುದು. ಕ್ರಮೇಣ ಹಿಮಾಲಯದ ನದಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವುದು ಎಂದು ಅಧ್ಯಯನ ಎಚ್ಚರಿಕೆ ನೀಡಿತು. ಹಿಮಾಲಯದ ನೀರ್ಗಲ್ಲುಗಳಲ್ಲಿ ಈಗಾಗಲೇ ಬಿರುಕು ಕಾಣಿಸಿಕೊಂಡಿದೆ ಎಂದು ಭಾರತೀಯ ಭೂ ಸರ್ವೇಕ್ಷಣಾಲಯ ಇಲಾಖೆ ವರದಿ ಹೇಳಿತು.
2007: ಭಾರತದ ಅತ್ಯಂತ ಪ್ರಾಚೀನ ವಿದ್ಯೆಗಳಲ್ಲಿ ಒಂದಾಗಿರುವ ಯೋಗದ ಆಸನಗಳಿಗೆ ತಾನು ಪೇಟೆಂಟ್ ನೀಡಿಲ್ಲ ಎಂದು ಅಮೆರಿಕ ಸರ್ಕಾರ ಸ್ಪಷ್ಟ ಪಡಿಸಿತು. ಯೋಗದಲ್ಲಿ ಬಳಸುವ ಅನೇಕ ಸಾಧನ, ಸಲಕರಣೆಗಳಿಗೆ ಅಮೆರಿಕದ ಪೇಟೆಂಟ್ ಇಲಾಖೆ ಪೇಟೆಂಟ್ ನೀಡಿದೆ. ಆದರೆ ಇದರಲ್ಲಿ ಯೋಗದ ಆಸನಗಳು ಸೇರಿಲ್ಲ ಎಂದು ನವದೆಹಲಿಯ ಅಮೆರಿಕ ರಾಯಭಾರ ಕಚೇರಿ ಸ್ಪಷ್ಟ ಪಡಿಸಿತು.
2007: ಲಖನೌನ ದಿನಗೂಲಿ ನೌಕರನೊಬ್ಬನ ಪುತ್ರಿ ಏಳೂವರೆ ವರ್ಷದ (ಜನನ: 2000) ಸುಷ್ಮಾ ವರ್ಮ ಉತ್ತರ ಪ್ರದೇಶ ಹೈಸ್ಕೂಲ್ ಪರೀಕ್ಷಾ ಮಂಡಳಿಯಿಂದ ಹತ್ತನೇ ತರಗತಿ ಪರೀಕ್ಷೆ ಉತ್ತೀರ್ಣಳಾದುದಕ್ಕೆ ಸರ್ಟಿಫಿಕೇಟ್ ಪಡೆಯುವ ಮೂಲಕ ಭಾರತದ ಅತ್ಯಂತ ಕಿರಿಯ `ಮೆಟ್ರಿಕ್ಯುಲೇಟ್' ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಅಕೆ 600ರಲ್ಲಿ 354 ಅಂಕಗಳನ್ನು ಪಡೆದಳು.
2006: ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರು ಆನಂದ್ ನ ಗ್ರಾಮೀಣ ನಿರ್ವಹಣಾ ಸಂಸ್ಥೆ (ಐಆರ್ಎಂಎ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಸತತ 30 ವರ್ಷಗಳಿಂದ ಈ ಹುದ್ದೆ ನಿಭಾಯಿಸಿದ ಅವರು ತಮ್ಮ ವಿರುದ್ಧ ಹೆಚ್ಚುತ್ತಿರುವ ಅತೃಪ್ತಿಯನ್ನು ಅನುಸರಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದರು.
2006: ಹಿರಿಯ ಪತ್ರಕರ್ತ ಹುಬ್ಬಳ್ಳಿಯ ಸುರೇಂದ್ರ ದಾನಿ ಅವರು 2005ರ ಸಾಲಿನ ಪ್ರತಿಷ್ಠಿತ ಟಿಯೆಸ್ಸಾರ್ ಪ್ರಶಸ್ತಿಗೆ ಆಯ್ಕೆಯಾದರು.
2006: ಮಾದಕ ದ್ರವ್ಯ ಸೇವನೆ ಮತ್ತು ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ದಿವಂಗತ ಪ್ರಮೋದ ಮಹಾಜನ್ ಪುತ್ರ ರಾಹುಲ್ ಮಹಾಜನ್ ಅವರನ್ನು ಪೊಲೀಸರು ಬಂಧಿಸಿದರು.
2006: ಅಮೀರ್ ಖಾನ್ ನಟಿಸಿದ `ಫನಾ' ಚಿತ್ರವನ್ನು ಗುಜರಾತಿನ ಚಿತ್ರಮಂದಿರಗಳಲ್ಲಿ ಶಾಂತಿಯುತವಾಗಿ ಪ್ರದರ್ಶಿಸುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಚಿತ್ರ ನಿರ್ಮಾಪಕ ಮಹೇಶ ಭಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ನ್ಯಾಯಮೂರ್ತಿ ಸಿ.ಕೆ. ಥಕ್ಕರ್ ಅವರನ್ನು ಒಳಗೊಂಡ ರಜಾಕಾಲೀನ ಪೀಠವು ಅರ್ಜಿಯನ್ನು ತಿರಸ್ಕರಿಸಿ `ಚಿತ್ರ ಮಂದಿರಗಳ ಮಾಲೀಕರು ಚಿತ್ರ ಪ್ರದರ್ಶಿಸಲು ಬಯಸುವುದಾದರೆ ಪೊಲೀಸ್ ರಕ್ಷಣೆ ಕೇಳಬಹುದು' ಎಂದು ಹೇಳಿತು.
1995: ಅಸ್ಸಾಂನಿಂದ ಮನಮೋಹನ್ ಸಿಂಗ್ ಅವರು ರಾಜ್ಯಸಭೆಗೆ ಆಯ್ಕೆಯಾದರು.
1989: ತ್ರಿಶೂಲ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ.
1984: ಪಂಜಾಬಿನ ಅಮೃತಸರ ಸ್ವರ್ಣಮಂದಿರದಲ್ಲಿ ಸೇರಿಕೊಂಡಿದ್ದ ಉಗ್ರಗಾಮಿಗಳ ವಿರುದ್ಧ `ಆಪರೇಷನ್ ಬ್ಲೂಸ್ಟಾರ್' ಕಾರ್ಯಾಚರಣೆ ನಡೆಸಲಾಯಿತು.
1968: ಲಾಸ್ ಏಂಜೆಲಿಸ್ ಅಂಬಾಸಿಡರ್ ಹೊಟೇಲಿನಿಂದ ಹೊರ ಹೊರಟಿದ್ದ ಅಮೆರಿಕದ ಸೆನೆಟರ್ ರಾಬರ್ಟ್ ಕೆನಡಿ ಅವರಿಗೆ ಪ್ಯಾಲೆಸ್ತೀನಿ ವಲಸೆಗಾರ ಸಿರ್ ಹಾನ್ ಬಿಶಾರ ಸಿರ್ ಹಾನ್ ಎಂಬಾತ ಗುಂಡು ಹಾರಿಸಿದ. ಕೆನಡಿ ಮರುದಿನ ಅಸುನೀಗಿದರು.
1952: ಸಾಹಿತಿ ಮಲ್ಲೇಪುರಂ ವೆಂಕಟೇಶ್ ಜನನ.
1947: ಜಾನಪದ ಗಾರುಡಿಗ ಎಸ್. ಕೆ. ಕರೀಂಖಾನ್ ಅವರ ಪ್ರಭಾವದಿಂದ ಜಾನಪದ ಗೀತೆಗಳ ಗಾಯನ ಮೈಗೂಡಿಸಿಕೊಂಡ ಗಾಯಕ ವೈ.ಕೆ. ಮುದ್ದುಕೃಷ್ಣ ಅವರು ತಂದೆ ಕೃಷ್ಣೇಗೌಡ- ತಾಯಿ ಕೆಂಚಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಯಡಕೆರೆಯಲ್ಲಿ ಜನಿಸಿದರು.
1939: ಚಾರ್ಲ್ಸ್ ಜೋಸೆಫ್ ಕ್ಲಾರ್ಕ್ ಜನ್ಮದಿನ. ಇವರು 1979ರಲ್ಲಿ ಬ್ರಿಟನ್ನಿನ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾದರು.
1935: ಸಾಹಿತಿ ಸೂ. ಸುಬ್ರಹ್ಮಣ್ಯಂ ಜನನ.
1932: ಸಾಹಿತಿ ನೀಳಾದೇವಿ ಜನನ.
1916: ಬ್ರಿಟಿಷ್ ಫೀಲ್ಡ್ ಮಾರ್ಷಲ್ ಹಾಗೂ ಸಮರ ಸಂಬಂಧಿ ವಿದೇಶಾಂಗ ಕಾರ್ಯದರ್ಶಿ ವಿಸ್ಕೌಂಟ್ ಕಿಚ್ನರ್ ಸಮುದ್ರದಲ್ಲಿ ಮುಳುಗಿ ಅಸುನೀಗಿದರು. ಅವರು ಕುಳಿತಿದ್ದ ಎಚ್ಎಂಎಸ್ ಹ್ಯಾಂಪ್ ಶೈರ್ ನೌಕೆಯು ರಷ್ಯದತ್ತ ಹೊರಟಿದ್ದಾಗ ಜರ್ಮನಿಯ ಸ್ಫೋಟಕವೊಂದಕ್ಕೆ ಡಿಕ್ಕಿ ಹೊಡೆದು ಸ್ಕಾಟ್ ಲ್ಯಾಂಡ್ಗೆ ಸೇರಿದ ಆರ್ಕ್ನೀ ದ್ವೀಪದ ಬಳಿ ಸಮುದದಲ್ಲಿ ಮುಳುಗಿದ್ದರಿಂದ ಈ ದುರ್ಘಟನೆ ಸಂಭವಿಸಿತು.
1903: ಸಾಹಿತಿ ಸೀತಾದೇವಿ ಪಡುಕೋಣೆ ಜನನ.
1894: ರಾಯ್ ಹರ್ಬರ್ಟ್ ಥಾಮ್ಸನ್ (1894-1976) ಜನ್ಮದಿನ. ಕೆನಡಾ ಸಂಜಾತ ಬ್ರಿಟಿಷ್ ಮುದ್ರಕನಾದ ಈತ `ದಿ ಟೈಮ್ಸ್ ಆಫ್ ಲಂಡನ್' ಮತ್ತು ಇತರ ವೃತ್ತ ಪತ್ರಿಕೆಗಳು ಮತ್ತು ಸಂಪರ್ಕ ಮಾಧ್ಯಮಗಳ ಸಂಸ್ಥೆಯ ಮಾಲೀಕ.
1891: ಆಯುರ್ವೇದ, ಯೋಗಶಾಸ್ತ್ರ, ಸಂಗೀತ, ತತ್ವಜ್ಞಾನ, ಶಿಕ್ಷಣ, ಸಾಹಿತ್ಯ, ರಾಜಕಾರಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದುಡಿದ ಪಂಡಿತ ತಾರಾನಾಥ (5-6-1891ರಿಂದ 30-10-1942) ಅವರು ರಂಗರಾಯರು-ರಾಜೀವಮ್ಮ ದಂಪತಿಯ ಪುತ್ರನಾಗಿ ಮಂಗಳೂರಿನಲ್ಲಿ ಈದಿನ ಜನಿಸಿದರು.
1879: ನಾರಾಯಣ ಮಲ್ಹಾರ್ ಜೋಷಿ (1879-1955) ಜನ್ಮದಿನ. ಇವರು ಭಾರತೀಯ ಟ್ರೇಡ್ ಯೂನಿಯನ್ ಚಳವಳಿಯ ಪಿತಾಮಹ.
1819: ಬ್ರಿಟಿಷ್ ಗಣಿತಜ್ಞ ಹಾಗೂ ಖಗೋಳ ವಿಜ್ಞಾನಿ ಜಾನ್ ಕೌಚ್ ಆಡಮ್ಸ್ (1819-1992) ಜನ್ಮದಿನ. ನೆಪ್ಚೂನ್ ಗ್ರಹವನ್ನು ಕಂಡು ಹಿಡಿದ ಇಬ್ಬರು ವಿಜ್ಞಾನಿಗಳಲ್ಲಿ ಒಬ್ಬ ಈ ವ್ಯಕ್ತಿ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment