Sunday, June 2, 2019

ಇಂದಿನ ಇತಿಹಾಸ History Today ಜೂನ್ 02

ಇಂದಿನ ಇತಿಹಾಸ History Today ಜೂನ್ 02
2019: ಇಸ್ಲಾಮಾಬಾದ್: ಭಾರತೀಯ ಹೈಕಮೀಷನರ್ ಅವರು ಇಸ್ಲಾಮಾಬಾದಿನಲ್ಲಿ ಸಂಘಟಸಿದ್ದ ಸಾಂಪ್ರದಾಯಿಕಇಫ್ತಾರ್ ಔತಣ ಕೂಟಕ್ಕೆ ಬಂದಿದ್ದ ಪಾಕಿಸ್ತಾನಿ ಆಹ್ವಾನಿತರನ್ನು ಪಾಕಿಸ್ತಾನಿ ಭದ್ರತಾ ಪಡೆಗಳು ತಡೆದು ಬಲವಂತವಾಗಿ ಹಿಂದಕ್ಕೆ ಕಳುಹಿಸಿದ ಘಟನೆ ಇಸ್ಲಾಮಾಬಾದಿನಲ್ಲಿ ಹಿಂದಿನ  ರಾತ್ರಿ ಘಟಿಸಿದ್ದು, ’ಇದು ನಾಗರಿಕ ವರ್ತನೆಯ ಎಲ್ಲ ಎಲ್ಲೆಗಳನ್ನೂ ಮೀರಿದ ವರ್ತನೆ ಎಂದು ಭಾರತ  ಈದಿನ ಪ್ರಬಲವಾಗಿ ಖಂಡಿಸಿತು. ಪಾಕಿಸ್ತಾನದ ವರ್ತನೆಗೆ ಪ್ರಬಲ ಪ್ರತಿಭಟನೆ ವ್ಯಕ್ತ ಪಡಿಸಿದ ಭಾರತದ ಹೈ ಕಮೀಷನ್,  ’ಜೂನ್ ಒಂದರಂದು ಘಟಿಸಿದ ಭ್ರಮನಿರಸನದಾಯಕ ಘಟನೆಗಳು ರಾಜತಾಂತ್ರಿಕ ವರ್ತನೆಯ ನಿಯಮಗಳ ಉಲ್ಲಂಘನೆಯಷ್ಟೇ ಅಲ್ಲ, ನಾಗರಿಕ ವರ್ತನೆಯ ಎಲ್ಲ ನಡೆ ನುಡಿಗಳಿಗೆ ವಿರುದ್ಧವಾದದ್ದು ಎಂದು ಹೇಳಿಕೆಯಲ್ಲಿ ತಿಳಿಸಿತು. ಪಾಕಿಸ್ತಾನದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯ ರಾಜತಾಂತ್ರಿಕರನ್ನು ಮತ್ತು ಅಧಿಕಾರಿಗಳನ್ನೂ ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆದತೋಳು ತಿರುಚುವ ಕ್ರಮಗಳು ನಮ್ಮ ದ್ವಿಪಕ್ಷೀಯ ಬಾಂಧವ್ಯಗಳ ಮೇಲೆ ದುಷ್ಪರಿಣಾಮ ಬೀರಬಲ್ಲವು ಎಂದು ಹೇಳಿಕೆ  ಎಚ್ಚರಿಸಿತು. ಭಾರತೀಯ ಹೈಕಮೀಷನರ್ ಅಜಯ್ ಬಿಸಾರಿಯಾ ಅವರು ಇಲ್ಲಿನ ಸೆರೆನಾ ಹೋಟೆಲ್ನಲ್ಲಿ ಏರ್ಪಡಿಸಿದ ಸಾಂಪ್ರದಾಯಿಕಇಫ್ತಾರ್ ಕೂಟಕ್ಕೆ ಆಗಮಿಸಿದ್ದ ಬಹುತೇಕ ಪಾಕಿಸ್ತಾನದವರೇ ಆಗಿದ್ದ ೩೦೦ ಮಂದಿ ಆಹ್ವಾನಿತರನ್ನು ಕೂಟದಲ್ಲಿ ಭಾಗವಹಿಸದಂತೆ ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಬಲವಂತವಾಗಿ ತಡೆದು ಹಿಂದಕ್ಕೆ ಕಳುಹಿಸಿದ ಘಟನೆ ಘಟಿಸಿತ್ತು. ಭದ್ರತಾ ಸಿಬ್ಬಂದಿ ಭಾರತೀಯ ರಾಜತಾಂತ್ರಿಕರ ಜೊತೆಗೂ ಅಸಭ್ಯವಾಗಿ ವರ್ತಿಸಿದ್ದರು. ಹೋಟೆಲ್ ಸೆರೆನಾದ ಹೊರಭಾಗದಲ್ಲಿ ಮುಖ್ಯರಸ್ತೆಯಲ್ಲಿ ಇದ್ದ ಭದ್ರತಾ ಪಡೆಗಳು ಭಾರತೀಯ ಹೈಕಮೀಷನ್ ಅಧಿಕಾರಿಗಳು ಮತ್ತು ರಾಜತಾಂತ್ರಿಕ ಸಿಬ್ಬಂದಿಯನ್ನು ತಮ್ಮ ಕರ್ತವ್ಯ ನಿರ್ವಹಿಸದಂತೆಯೂ ಅಡ್ಡಿ ಪಡಿಸಿದರು. ಅತಿಥಿಗಳಿಗೆ ಆದ ಕಿರುಕುಳಕ್ಕೆ ಕಾರಣವೇನು ಎಂದು ತಿಳಿಯಲು ಯತ್ನಿಸುತ್ತಿದ್ದ ರಾಜತಾಂತ್ರಿಕ ಕಚೇರಿಯ ರಾಜತಾಂತ್ರಿಕರು ಮತ್ತು ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿದವು ಎಂದು ಹೇಳಿಕೆ ತಿಳಿಸಿತು. ‘ಕೆಲವು ಅಧಿಕಾರಿಗಳನ್ನು ಜಗ್ಗಾಡಲಾಯಿತು, ತಳ್ಳಲಾಯಿತು, ನಿಂದಿಸಲಾಯಿತು ಮತ್ತು ದೈಹಿಕ ಹಲ್ಲೆಯ ಬೆದರಿಕೆ ಹಾಕಲಾಯಿತು. ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳ ಮೊಬೈಲ್ ದೂರವಾಣಿಗಳನ್ನೂ ಕಿತ್ತುಕೊಳ್ಳಲಾಯಿತು.’ಅತಿಥಿಗಳು ಭದ್ರತಾ ಸಂಸ್ಥೆಗಳಿಂದ  ಹಿಂದೆಂದೂ ಕಾಣದಂತಹ ಕಿರುಕುಳ ಮತ್ತು ಹಸ್ತಕ್ಷೇಪ ಎದುರಿಸಿದರು ಎಂದು ಹೇಳಿಕೆ ತಿಳಿಸಿತು. ಇಫ್ತಾರ್ ಕೂಟಕ್ಕೆ ಮುನ್ನವೇ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳದಂತೆ ಆಹ್ವಾನಿತರ ಮನವೊಲಿಸುವ ಕೆಲಸವನ್ನೂ ಭದ್ರತಾ ಸಂಸ್ಥೆಗಳು ಮಾಡಿದ್ದವು ಎಂದು ಹೇಳಿಕೆ ತಿಳಿಸಿತು. ಲಾಹೋರ್ ಮತ್ತು ಕರಾಚಿಯಂತಹ ದೂರದ ಸ್ಥಳಗಳಿಂದಇಫ್ತಾರ್ ಕೂಟ ನಡೆಯುವ ಸ್ಥಳಕ್ಕೆ ಆಗಮಿಸಿದ ಅತಿಥಿಗಳನ್ನು  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಪಾಕಿಸ್ತಾನಿ ಪಡೆಗಳು ದೈಹಿಕವಾಗಿಯೇ ತಡೆದವು. ಸೆರೆನಾ ಹೋಟೆಲ್ಗೆ ಭದ್ರತಾ ಪಡೆಗಳು ವಸ್ತುಶಃ ಮುತ್ತಿಗೆಯನ್ನೇ ಹಾಕಿದ್ದವು ಎಂದು ಹೇಳಿಕೆ ಹೇಳಿತು. ಇಸ್ಲಾಮಾಬಾದಿನಲ್ಲೇ ಇದ್ದ ರಾಜತಾಂತ್ರಿಕ ಸಮುದಾಯದ ಹಲವಾರು ಅತಿಥಿಗಳು ಕೂಡಾ ಕಿರುಕುಳಕ್ಕೆ ಒಳಗಾದರು. ರಾಜತಾಂತ್ರಿಕ ಮಿತಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಭರಾಟೆಯಲ್ಲಿದ್ದ ಪಾಕಿಸ್ತಾನಿ ಭದ್ರತಾ ಪಡೆಗಳು ಸೆರೆನಾ ಹೋಟೆಲ್ ಹೊರಭಾಗದಲ್ಲಿ ಫೋರ್ಕ್ ಲಿಫ್ಟ್ ಗಳೊಂದಿಗೆ ಸಜ್ಜಾಗಿ ನಿಂತು, ಹೋಟೆಲಿನತ್ತ ಹೊರಟಿದ್ದ ಪಾಕಿಸ್ತಾನಿ ನಾಗರಿಕರನ್ನೇ ಹೊರದಬ್ಬಿದವು ಎಂದು ಹೇಳಿಕೆ ತಿಳಿಸಿತು. ಕೆಲವು ಪ್ರಕರಣಗಳಲ್ಲಿ ಆಹ್ವಾನಿತರು ತಂದಿದ್ದ ವಾಹನಗಳನ್ನೇ ಫೋರ್ಕ್ ಲಿಫ್ಟ್ ಬಳಸಿ ಎತ್ತಂಗಡಿ ಮಾಡಲಾಯಿತು. ಹೊಟೇಲ್ ಆವರಣ ಪ್ರವೇಶಿಸದಂತೆ ತಡೆದು ಹೊರಕ್ಕೆ ಕಳುಹಿಸಲಾದ ಸುಮಾರು ೩೦೦ ಮಂದಿ ಗಣ್ಯ ಪಾಕಿಸ್ತಾನಿ ಅತಿಥಿಗಳಲ್ಲಿ ಸಂಸತ್ ಸದಸ್ಯರು, ಸರ್ಕಾರಿ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ನಿವೃತ್ತ ಸೇನಾ ಅಧಿಕಾರಿಗಳು, ವರ್ತಕರು, ನಿವೃತ್ತ ರಾಜತಾಂತ್ರಿಕರು ಮತ್ತು ಸಮಾಜದ ಎಲ್ಲ ವರ್ಗಗಳಿಗೆ ಸೇರಿದ ಗಣ್ಯ ನಾಗರಿಕರು ಸೇರಿದ್ದರು. ಅತಿಥಿಗಳನ್ನು ತಡೆದ ನಿಯಮಾವಳಿಗಳ ಉಲ್ಲಘನೆ ಬಗ್ಗೆ ಭಾರತವು ಪಾಕಿಸ್ತಾನಕ್ಕೆ ಪ್ರಬಲ ಪ್ರತಿಭಟನೆ ವ್ಯಕ್ತಪಡಿಸಿದೆ ಎಂದು ಹೈಕಮೀಷನ್ ಹೇಳಿತು.
ಅಸಹ್ಯ ಘಟನಾವಳಿಗಳ ಬಗ್ಗೆ ತುರ್ತಾಗಿ ತನಿಖೆ ನಡೆಸಬೇಕು ಮತ್ತು  ಅದರ  ವರದಿ ಮತ್ತು  ಕೈಗೊಂಡ ಕ್ರಮಗಳನ್ನು ಹಂಚಿಕೊಳ್ಳಬೇಕು ಎಂದು ಹೈಕಮೀಷನ್ ಪಾಕಿಸ್ತಾನಿ ಸರ್ಕಾರವನ್ನು ಆಗ್ರಹಿಸಿತು. ಭಾರತೀಯ ಹೈಕಮೀಷನ್ನಿನ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ತೋಳು ತಿರುಚುವ ಭೀತಿ ಮತ್ತು  ಯಾವುದೇ ಕಿರುಕುಳ ಇಲ್ಲದೆ ನಿರ್ಭೀತವಾಗಿ ಕರ್ತವ್ಯ ನಿರ್ವಹಿಸಲು ಖಾತರಿ ಒದಗಿಸುವ ಅಗತ್ಯ ಇದೆ ಎಂದೂ ಹೇಳಿಕೆ ಪಾಕಿಸ್ತಾನಿ ಸರ್ಕಾರಕ್ಕೆ ಒತ್ತಿ ಹೇಳಿತು. ಘಟನಾವಳಿಗಳ ಬಳಿಕ ಬಿಸಾರಿಯಾ ಅವರುಸ್ಥಳದ ಹೊರಭಾಗದಲ್ಲಿದ್ದ ಹೆಚ್ಚುವರಿ ಭದ್ರತಾಪಡೆಗಳಿಂದ ತೊಂದರೆಗೆ ಒಳಗಾದ ಎಲ್ಲ ಗೆಳೆಯರ ಬಳಿಯೂ ಕ್ಷಮೆ ಕೇಳಲು ಇಚ್ಛಿಸುತ್ತೇನೆ ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದರು. ಸಮವಸ್ತ್ರದಲ್ಲಿ ಇಲ್ಲದೇ ಇದ್ದ ಗುಪ್ತಚರ ಸಿಬ್ಬಂದಿ ಸೇರಿದಂತೆ ಪಾಕಿಸ್ತಾನಿ ಭದ್ರತಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.  ‘ಇಫ್ತಾರ್ ಕೂಟಕ್ಕೆ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಅರಿಫ್ ಅಲ್ವಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಅದಕ್ಕೆ ಹಾಜರಾಗಿರಲಿಲ್ಲ. ಅತಿಥಿಗಳು ಬರಲು ಆರಂಭವಾಗುತ್ತಿದ್ದಂತೆಯೇ ಭದ್ರತಾ ಪಡೆಗಳು ಅವರನ್ನು ಹೊರಗಿನಿಂದಲೇ ತಡೆದು ಆಚೆಗೆ ಕಳುಹಿಸತೊಡಗಿದ್ದವು. ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಕರಾಚಿ ಫೆಡರೇಶನ್ ಆಫ್ ಚೇಂಬರ್ ಆಫ್ ಕಾಮರ್ಸ್, ಫೈಸಲಾಬಾದ್ ಚೇಂಬರ್ಸ್ ಆಫ್ ಕಾಮ್ಸ್ ಮತ್ತು ಲಾಹೋರ್ ಚೇಂಬರ್ ಆಫ್ ಕಾಮರ್ಸ್ ಸದಸ್ಯರಿಗೆ ದೂರವಾಣಿ ಕರೆಗಳನ್ನು ಮಾಡಿ ಇಫ್ತಾರ್ ಔತಣ ಕೂಟದಲ್ಲಿ ಪಾಲ್ಗೊಳ್ಳದಂತೆ ಸೂಚಿಸಿದರು ಎಂದು ವರದಿಗಳು ಹೇಳಿದವು. ಪಾಕಿಸ್ತಾನಿ ಮಾಧ್ಯಮಗಳು ಘಟನೆಯನ್ನು ವರದಿ ಮಾಡಲಿಲ್ಲ. ನವದೆಹಲಿಯಲ್ಲಿ ಪಾಕಿಸ್ತಾನಿ ಹೈ ಕಮೀಷನ್ ಏರ್ಪಡಿಸಿದ್ದ ಇಫ್ತಾರ್ ಔತಣ ಕೂಟಕ್ಕೆ ಆಗಮಿಸಲು ಬಂದಿದ್ದ ಭಾರತೀಯರನ್ನು ಭದ್ರತಾ ಸಿಬ್ಬಂದಿ ಅಡ್ಡಿ ಪಡಿಸಿದರು ಎಂದು ಆರೋಪಿಸಲಾದ ಘಟನೆಯ ಕೆಲ ದಿನಗಳ ಬಳಿಕ ಪಾಕಿಸ್ತಾನದಲ್ಲಿ ಘಟನೆ ಘಟಿಸಿತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಕಳೆದ ಫೆಬ್ರುವರಿ ತಿಂಗಳಲ್ಲಿ ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿಪಡೆದ ಆತ್ಮಹತ್ಯಾ ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನಿ ಮೂಲದ ಜೈಶೆ ಭಯೋತ್ಪಾದಕ ಗುಂಪು ಹೊತ್ತುಕೊಂಡಿರುವುದಾಗಿ ಪ್ರಕಟಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಹದಗೆಟ್ಟಿತ್ತು.

2019: ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈದಿನ ಎಂಟು ಮಂದಿ ನೂತನ ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಂಪುಟವನ್ನು ವಿಸ್ತರಿಸಿದರು. ಆದರೆ ನೂತನ ಸಚಿವರನ್ನು ಸೇರ್ಪಡೆ ಮಾಡುವಾಗ ಎಲ್ಲ ಹೊಸಬರನ್ನೂ ಜನತಾದಳ (ಯು) ದಿಂದ ಸೇರ್ಪಡೆ ಮಾಡಿಕೊಂಡಿದ್ದು, ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಎಲ್ಜೆಪಿಯನ್ನು ಸಂಪುಟದಿಂದ ಹೊರಗಿಟ್ಟರು. ಸಂಪುಟ ವಿಸ್ತರಣೆಯ ಬಳಿಕ ನಿತೀಶ್ ಕುಮಾರ್ ಅವರುಬಿಜೆಪಿಯು ಒಂದು ಸಚಿವ ಸ್ಥಾನದ ಕೊಡುಗೆ ಮುಂದಿಟ್ಟಿತ್ತು. ಆದರೆ ಪಕ್ಷಕ್ಕೆ ಅದರ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ಹೇಳಿದರು. ಅದನ್ನು ಅನುಮೋದಿಸಿದ ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರುಪಕ್ಷವು ಸಚಿವ ಸ್ಥಾನದ ಕೊಡುಗೆ ಮುಂದಿಟ್ಟಿತ್ತು ಎಂದು ಹೇಳಿದರು. ’ಅದನ್ನು ಸೂಕ್ತ ಕಾಲದಲ್ಲಿ ಭರ್ತಿ ಮಾಡಲು ಬಿಜೆಪಿಯು ನಿರ್ಧರಿಸಿದೆ ಎಂದು ಸುಶೀಲ್ ಮೋದಿ ಟ್ವೀಟ್ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಜೊತೆಗೆ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಸಹಮತ ಬಾರದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಸರ್ಕಾರದಿಂದ ಹೊರಗುಳಿಯಲು ನಿರ್ಧರಿಸಿದ್ದರು. ಜೆಡಿ(ಯು)ಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಅದನ್ನು ನಿರಾಕರಿಸಿದ್ದ ನಿತೀಶ್ ಕುಮಾರ್ ಅವರು ಸಂಸತ್ತಿನಲ್ಲಿ ಪಕ್ಷಗಳ ಬಲಕ್ಕೆ ಅನುಗುಣವಾಗಿ ಸಚಿವ ಸ್ಥಾನಗಳು ಇರಬೇಕು ಎಂಬುದಾಗಿ ಹೇಳಿದ್ದರು.  ‘ಬಿಹಾರದಲ್ಲಿ ಎನ್ಡಿಎ ದಾಖಲಿಸಿರುವ ವಿಜಯವು ಬಿಹಾರದ ಜನರ ವಿಜಯ ಎಂಬುದನ್ನು ಯಾರೂ ಗೊಂದಲ ಮಾಡಿಕೊಳ್ಳಬಾರದು. ಯಾರಾದರೂ ಇದನ್ನು ತಮ್ಮ ವೈಯಕ್ತಿಕ ವಿಜಯ ಎಂಬುದಾಗಿ ಪ್ರತಿಪಾದಿಸಿದರೆ ಅದು ಭ್ರಮೆ ಅಷ್ಟೆ ಎಂದು ನಿತೀಶ್ ಕುಮಾರ್ ಹೇಳಿದರು. ರಾಷ್ಟ್ರಪತಿ ಭವನದ ಆವರಣದಲ್ಲಿ ನಡೆದ ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಜೆಡಿ(ಯು) ಮುಖ್ಯಸ್ಥ ಹಾಜರಿದ್ದರು. ಬಿಹಾರದಲ್ಲಿ ಜೆಡಿ(ಯು) ಬಿಜೆಪಿ ಜೊತೆಗೆ ಮೈತ್ತಿ ಸರ್ಕಾರ ನಡೆಸುತ್ತಿದೆ. ನಿತೀಶ್ ಕುಮಾರ್ ನೇತೃತ್ವದ ಪಕ್ಷವು ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಹಾರದ ೪೦ ಸ್ಥಾನಗಳ ಪೈಕಿ ೧೬ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ೧೭ ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿ(ಯು) ಮೋದಿ ಸರ್ಕಾರದ ಹಿಂದಿನ ಅವಧಿಯಲ್ಲಿ ಪಾಲ್ಗೊಂಡಿರಲಿಲ್ಲ. ೨೦೧೭ರಲ್ಲಿ ಕಾಂಗ್ರೆಸ್-ರಾಷ್ಟ್ರೀಯ ಜನತಾದಳ ಮೈತ್ರಿಯಿಂದ ಹೊರಬಂದು ಬಿಜೆಪಿ ಎನ್ ಡಿಎ ಜೊತೆ ಸೇರಿತ್ತು. ಹಾಲಿ ಸಂಪುಟ ವಿಸ್ತರಣೆಯ ಬಳಿಕ ಮೂರು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು ಇವು ಮೂರೂ ಜೆಡಿ-ಯು, ಬಿಜೆಪಿ ಮತ್ತು ಎಲ್ ಜೆಪಿ ಕೋಟಾ ಆಗಿವೆ. ಜೆಡಿಯು ಕೋಟಾದಲ್ಲಿ ಸಚಿವ ಸ್ಥಾನಗಳು ಖಾಲಿ ಉಳಿದಿದ್ದವು. ಅವುಗಳ ಪೈಕಿ ಸ್ಥಾನಗಳನ್ನು ಜೆಡಿ-ಯು ಈಗ ಭರ್ತಿ ಮಾಡಿತು. ಬಿಹಾರವು ಸದನದ ಬಲಕ್ಕೆ ಅನುಗುಣವಾಗಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ ೩೬ ಸಚಿವರನ್ನು ಹೊಂದಲು ಅವಕಾಶ ಇದೆ. ನಿಯಮಾವಳಿಗಳ ಪ್ರಕಾರ ಸಂಪುಟದ ಬಲವು ಯಾವ ಕಾರಣಕ್ಕೂ ಶಾಸನ ಸಭೆಯ ಬಲದ ಶೇಕಡಾ  ೧೫ನ್ನು ಮೀರುವಂತಿಲ್ಲ. ಮಹಾ ಮೈತ್ರಿಯಿಂದ ಎನ್ಡಿಎ ಕಡೆಗೆ ವಾಲಿದ ಬಳಿಕ ನಿತೀಶ್ ಕುಮಾರ್ ಅವರು ಮಾಡಿರುವ ಮೊತ್ತ ಮೊದಲನೆಯ ಸಂಪುಟ ವಿಸ್ತರಣೆ ಇದಾಗಿದ್ದು, ಮುಂದುವರೆದವರು, ಹಿಂದುಳಿದ ಜಾತಿ, ಹಿಂದುಳಿದ ವರ್ಗಗಳು, ಇಬಿಸಿಗಳು ಮತ್ತು ದಲಿತರಿಗೆ ತಲಾ ಸ್ಥಾನಗಳನ್ನು ನೀಡುವ ಮೂಲಕ ಸಮತೋಲನವನ್ನು ಸಾಧಿಸಲಾಯಿತು. ನಿತೀಶ್ ಸಂಪುಟದಲ್ಲಿ ಬಿಮಾ  ಭಾರತಿ ಅವರು ಹೊಸದಾಗಿ ಸೇರ್ಪಡೆಯಾದ ಏಕೈಕ ಮಹಿಳಾ ಪ್ರತಿನಿಧಿಯಾಗಿದ್ದಾರೆ. ಮಾಜಿ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮ ಅವರು ಕಳೆದ ವರ್ಷ ರಾಜೀನಾಮೆ ನೀಡಿದ ಬಳಿಕ ಸಂಪುಟದಲ್ಲಿ ಬೇರೆ ಯಾರೂ ಮಹಿಳೆ ಇರಲಿಲ್ಲರಾಜ್ಯಪಾಲ ಲಾಲ್ ಜಿ ಟಂಡನ್ ಅವರು ನೂತನ ಸಚಿವರಿಗೆ ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದರು. ಎರಡು ವರ್ಷಗಳ ಅವಧಿಯಲ್ಲಿ ನಿತೀಶ್ ಕುಮಾರ್ ಅವರು ತಮ್ಮ ಸಂಪುಟವನ್ನು ವಿಸ್ತರಿಸಿದ್ದು ಇದು ಎರಡನೇ ಬಾರಿ. ೨೦೧೭ರ ಜುಲೈ ೨೯ರಂದು ನಿತೀಶ್ ಅವರು ಎನ್ ಡಿಎ ಅಂಗಪಕ್ಷಗಳಾದ ಜೆಡಿ-ಯು, ಬಿಜೆಪಿ ಮತ್ತು ಎಲ್ ಜೆಪಿಗಳಿಂದ ಒಟ್ಟು ೨೭ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.
.
2019: ನವದೆಹಲಿ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಸಂಸತ್ ಸದಸ್ಯ ಶಶಿ ತರೂರ್ ಅವರು ದೇಶಾದ್ಯಂತ ಕಾವೇರಿದ ತ್ರಿಭಾಷಾ ಸೂತ್ರ ಚರ್ಚೆಯಲ್ಲಿ ಮಧ್ಯ ಪ್ರವೇಶ ಮಾಡಿ,  ತ್ರಿಭಾಷಾ ಸೂತ್ರ ಸಮಸ್ಯೆಗೆ ಪರಿಹಾರ ಕಲ್ಪನೆಯನ್ನೇ ಬಿಟ್ಟು ಬಿಡುವುದರಲ್ಲಿ ಅಲ್ಲ ಅದನ್ನು ದೇಶಾದ್ಯಂತ ಉತ್ತರ ರೀತಿಯಲ್ಲಿ ಅನುಷ್ಠಾನಗೊಳಿಸುವುದರಲ್ಲಿ ಇದೆ ಎಂದು ಪ್ರತಿಪಾದಿಸಿದರು. ನಮ್ಮಲ್ಲಿ ಬಹುತೇಕರು ದಕ್ಷಿಣ ಭಾರತದಲ್ಲಿ ಹಿಂದಿಯನ್ನು ದ್ವಿತೀಯ ಭಾಷೆಯಾಗಿ ಕಲಿಯುತ್ತೇವೆ. ಆದರೆ ಉತ್ತರದಲ್ಲಿ ಯಾರೂ ಮಲಯಾಳಿ ಅಥವಾ ತಮಿಳನ್ನು ಕಲಿಯುತ್ತಿಲ್ಲ ಎಂದು ತರೂರ್ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ಹೇಳಿದರು.  ‘ತ್ರಿಭಾಷಾ ಸೂತ್ರ ಸಮಸ್ಯೆಗೆ ಪರಿಹಾರ ಕಲ್ಪನೆಯನ್ನೇ ಬಿಟ್ಟು ಬಿಡುವುದರಲ್ಲಿ ಇಲ್ಲ, ಬದಲಿಗೆ ಇನ್ನೂ ಉತ್ತಮ ರೀತಿಯಲ್ಲಿ ಅದನ್ನು ಅನುಷ್ಠಾನಗೊಳಿಸುವುದರಲ್ಲಿ ಇದೆ ಎಂದು ಅವರು ಪ್ರತಿಪಾದಿಸಿದರು.  ಕೇಂದ್ರದ ಹಿಂದಿನ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮುಖ್ಯಸ್ಥರಾಗಿದ್ದಾಗ ಸಚಿವ ಪ್ರಕಾಶ ಜಾವಡೇಕರ್ ಅವರು ಖ್ಯಾತ ವಿಜ್ಞಾನಿ ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ಪ್ರಸ್ತಾಪಿಸಿರುವ ಕರಡು ಶಿಕ್ಷಣ ನೀತಿಯಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಕಲಿಸಲು ಸಲಹೆ ಮಾಡಲಾಗಿತ್ತು. ಹೊಸ ಕರಡು ಶಿಕ್ಷಣ ನೀತಿಯಲ್ಲಿನ ಪ್ರಸ್ತಾಪಿತ ಭಾಷಾ ಸೂತ್ರವು ಹೊಸದೇನಲ್ಲ. ೧೯೬೦ರ ಮಧ್ಯಾವಧಿಯಷ್ಟು ಹಿಂದೆಯೇ ಸೂತ್ರದ ಪ್ರಸ್ತಾಪವಾಗಿತ್ತು. ಆದರೆ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ  ಎಂದು ತರೂರ್ ಹೇಳಿದರುಕರಡು ಶಿಕ್ಷಣ ನೀತಿಯು ಹಿಂದಿ ಭಾಷೆಯನ್ನು ಶಾಲೆಗಳಲ್ಲಿ ಸೇರ್ಪಡೆ ಮಾಡಲು ಮಾಡಿರುವ ಸಲಹೆಗೆ ಡಿಎಂಕೆ ಸೇರಿದಂತೆ ತಮಿಳುನಾಡಿನ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿದವು. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಕ್ರಮವನ್ನುಜೇನುಗೂಡಿಗೆ ಕಲ್ಲೆಸೆಯುವುದಕ್ಕೆ ಸಮ ಎಂಬುದಾಗಿ ಬಣ್ಣಿಸಿದರೆ, ಪಕ್ಷದ ಇನ್ನೊಬ್ಬ ನಾಯಕ ಟಿ. ಸಿವ ಅವರು ಇಂತಹ ತೀರ್ಮಾನದ ಮೂಲಕ ಕೇಂದ್ರ ಸರ್ಕಾರವು ಬೆಂಕಿಯ ಜೊತೆಗೆ ಸರಸವಾಡುತ್ತಿದೆ ಎಂದು ಟೀಕಿಸಿದರು. ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇಪ್ರಸ್ತಾಪವು ಶಿಫಾರಸು ಮಾತ್ರ, ಸರ್ಕಾರದ ನೀತಿ ಅಲ್ಲ ಎಂಬುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸ್ಪಷ್ಟ ಪಡಿಸಿತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರು ಕೂಡಾ ಇದೊಂದು ತಪ್ಪು ತಿಳುವಳಿಕೆ ಎಂದು ಬಣ್ಣಿಸಿದ್ದರು.  ‘ರಾಜ್ಯ ಸರ್ಕಾರಗಳಿಗೆ ತಪ್ಪು ಮಾಹಿತಿ ಲಭಿಸಿದಂತಿದೆ. ಅಲ್ಲದೆ, ಯಾವುದೇ ಪ್ರದೇಶದಲ್ಲಿ ಯಾವುದೇ ನಿರ್ದಿಷ್ಟ ಭಾಷೆಯನ್ನು ಹೇರಲಾಗುವುದಿಲ್ಲ ಎಂಬುದಾಗಿ ಸ್ವತಃ ಮೋದಿಯವರೇ ಹೇಳಿದ್ದಾರೆನಾವು ಕರಡು ರೂಪಿಸಿದ್ದೇವೆ ಮತ್ತು ವಿವಿಧ ರಾಜ್ಯಗಳಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮಾಹಿತಿ ಬಂದ ಬಳಿಕ ನಾವು ಮುಂದಿನ ಮಾತುಕತೆ ನಡೆಸಬೇಕಾಗಿದೆ ಎಂದು ಪೋಖ್ರಿಯಾಲ್ ಹೇಳಿದ್ದರುಡಿಎಂಕೆ ಮತ್ತು ಸಿಪಿಐ ಹೊರತಾಗಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಪಿಎಂಕೆ ಕೂಡಾತ್ರಿಭಾಷಾ ಸೂತ್ರದ ಶಿಫಾರಸು ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ಸಮ ಎಂದು ಆಪಾದಿಸಿತ್ತು.

2019: ಮುಂಬೈ: ಮಹಾರಾಷ್ಟ್ರದ ಐಎಎಸ್ ಅಧಿಕಾರಿಯೊಬ್ಬರು ಮಹಾತ್ಮಾ ಗಾಂಧೀಜಿ ಅವರ ಬಗ್ಗೆವ್ಯಂಗ್ಯ ಟ್ವೀಟ್ ಪ್ರಕಟಿಸಿ ತೀವ್ರ ವಿವಾದಕ್ಕೆ ಒಳಗಾದರು. ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ (ಬಿಎಂಸಿ) ಡೆಪ್ಯುಟಿ ಮುನಿಸಿಪಲ್ ಕಮಿಷನರ್ ನಿಧಿ ಚೌಧರಿ ಅವರು ತಮ್ಮ ಟ್ವೀಟ್ ವ್ಯಂಗ್ಯವಾದುದಾಗಿದ್ದು, ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಗಾಂಧಿ ಹಂತಕ ನಾಥೂರಾಮ್ ಗೋಡ್ಡೆಯನ್ನು ದೇಶಭಕ್ತ ಎಂಬುದಾಗಿ ಚುನಾವಣಾ ಪ್ರಚಾರ ಕಾಲದಲ್ಲಿ ಹೇಳಿದ್ದಕ್ಕೆ ಪ್ರತಿಕ್ರಿಯೆಯೆಯಾಗಿ ಮಾಡಿದ ಟ್ವೀಟ್ ಇದಾಗಿದೆ ಎಂದು ಪ್ರತಿಪಾದಿಸಿದರು.  ಟ್ವೀಟ್ಗೆ ತೀವ್ರ ಟೀಕೆಗಳು ಬರುತ್ತಿದ್ದಂತೆಯೇ ಚೌಧರಿ ಅವರು ಟ್ವೀಟನ್ನು ಕಿತ್ತು ಹಾಕಿದರು. ಮಾಧ್ಯಮ ಒಂದರ ಜೊತೆಗೆ ಮಾತನಾಡಿದ ಅವರುನಾನು ನಿಷ್ಠಾವಂತ ಗಾಂಧಿ ಅನುಯಾಯಿಯಾಗಿದ್ದು ಗಾಂಧೀಜಿಯರನ್ನು ಅಥವಾ ಯಾರೇ ಸ್ವಾತಂತ್ರ್ಯ ಹೋರಾಟಗಾರರನ್ನು ಎಂದಿಗೂ ಅವಮಾನಿಸಲಾರೆ. ಅವರು (ಟೀಕಾಕಾರರು) ಟ್ವೀಟನ್ನು ಪೂರ್ತಿಯಾಗಿ ಓದಿ ಅದು ವ್ಯಂಗ್ಯಾತ್ಮಕ ಟ್ವೀಟ್ ಮತ್ತು ಮಹಾತ್ಮಾ ಗಾಂಧಿಯರಿಗೆ ಕಳಂಕ ಹಚ್ಚುವ ಸಾಮಾಜಿಕ ಮಾಧ್ಯಮ ಬರಹಗಳಿಗೆ ವಿರುದ್ಧವಾದುದು ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕಾಗಿತ್ತು ಎಂದು ಹೇಳಿದರು.  ‘ನಾನು ಸಂವಿಧಾನ ವಿರೋಧಿಯಲ್ಲ. ನಾನು ಸಂವಿಧಾನದ ೫೧ಎ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬ ಸ್ವಾತಂತ್ರ್ಯ ಯೋಧನಿಗೂ ಗೌರವ ಅರ್ಪಿಸುವ ಕರ್ತವ್ಯವನ್ನು ಮಾಡಿದ್ದೇನೆ ಎಂದು ಚೌಧರಿ ಸ್ಪಷ್ಟ ಪಡಿಸಿದರುಏನಿದ್ದರೂ, ಎನ್ಸಿಪಿ ಶಾಸಕ ಜಿತೇಂದ್ರ ಅಹ್ವಾದ್ ಅವರು ಚೌಧರಿ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.  ‘ಚೌಧರಿಯವರು ಒಬ್ಬ ಐಎಎಸ್ ಅಧಿಕಾರಿ. ಆಕೆಯಿಂದ ಇಂತಹುದನ್ನು ನಿರೀಕ್ಷಿಸಿಲು ಸಾಧ್ಯವಿಲ್ಲ. ಅವರು ಏನು ಟ್ವೀಟ್ ಮಾಡಿದ್ದಾರೋ ಅದು ಸಂಪೂರ್ಣವಾಗಿ ಸಲ್ಲದ ನಡೆ. ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವರನ್ನು ಅಮಾನತುಗೊಳಿಸಬೇಕು ಎಂದು ಎನ್ಸಿಪಿ ಶಾಸಕ ಆಗ್ರಹಿಸಿದರು.


2019: ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ  ಸಂಜೆ ಗುಡುಗು, ಮಿಂಚು ಸಹಿತವಾಗಿ ಭಾರೀ ಮಳೆ ಸುರಿಯಿತು. ನಗರದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಯಿತು. ಭಾರಿ ಮಿಂಚು ಹಾಗೂ ಗುಡುಗು ಅಬ್ಬರಿಸಿದ್ದು, ಜನರಲ್ಲಿ ಸ್ವಲ್ಪ ಸಮಯ ಭೀತಿ ಮನೆ ಮಾಡಿತ್ತು. ವ್ಯಾಪಕ ಮಳೆಗೆ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಯಿತು. ನಾಗರಿಕರು, ವಾಹನ ಸವಾರರು ಮಳೆಯಿಂದ ತೊಂದರೆಗೀಡಾದರು.  ಭಾರಿ ಮಳೆಯಿಂದಾಗಿ ವಾಹನ ಸಂಚಾರವೂ ವ್ಯತ್ಯಯವಾಯಿತು. ಮಲ್ಲೇಶ್ವರದಲ್ಲಿ ಮಳೆ, ಗಾಳಿಯಿಂದ ಜನರು ಪುಳಕಿತರಾದರು. ವಿಧಾನಸೌಧ, ಶಾಂತಿ ನಗರ, ಆಡುಗೋಡಿ, ಎಂಜಿ ರಸ್ತೆ, ಮಲ್ಲೇಶ್ವರ, ರಾಜಾಜಿನಗರ, ಶ್ರೀನಿವಾಸನಗರ, ಹನುಮಂತನಗರ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯಿತು.  ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಯಶವಂತಪುರ, ಹನುಮಂತನಗರ, ವಿದ್ಯಾರಣ್ಯಪುರ ಸೇರಿ ಹಲವೆಡೆ ವಾಹನ ಸಂಚಾರಕ್ಕೆ ತೀವ್ರ ಧಕ್ಕೆಯಾಯಿತು.  ಬೆಂಗಳೂರು ಅಲ್ಲದೆ, ಕಲಬುರಗಿ, ಕೋಲಾರ, ಚಿಂತಾಮಣಿ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿರುವ ವರದಿಗಳು ಬಂದವು.

 2018: ಸಿಂಗಾಪುರ: ಸಿಂಗಾಪುರ ಭೇಟಿಯ ಕೊನೆಯ ದಿನವಾದ ಈದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಮಾಜಿ ಪ್ರಧಾನಿ ಗೊಹ್ ಚೊಕ್ ತೊಂಗ್ ಅವರು ಜಂಟಿಯಾಗಿ ನಗರ ರಾಜ್ಯದ ಕ್ಲಿಫರ್ಡ್ ಹಡಗುಕಟ್ಟೆಯಲ್ಲಿ ಮಹಾತ್ಮಾ ಗಾಂಧಿ ಅವರ ಚಿತಾಭಸ್ಮ ವಿಸರ್ಜಿಸಲಾಗಿದ್ದ ಸ್ಥಳದಲ್ಲಿ ಮಹಾತ್ಮಾ ಗಾಂಧಿ ಫಲಕವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಚೀನೀ ಸಂಗೀತ ಉಪಕರಣದಲ್ಲಿ ಮಹಾತ್ಮಾ ಗಾಂಧಿಯವರ ಅಚ್ಚುಮೆಚ್ಚಿನ ’ರಘುಪತಿ ರಾಘವ ಹಾಡನ್ನು ನುಡಿಸಲಾಯಿತು. ಅದೇ ರೀತಿ ಬಾಪೂಜಿ ಅವರ ಅಚ್ಚು ಮೆಚ್ಚಿನ ’ವೈಷ್ಣವ ಜನತೋ ಹಾಡನ್ನೂ ಹಾಡಲಾಯಿತು. ಮೋದಿ ಅವರು ಅದನ್ನು ಟ್ವೀಟ್ ಮಾಡಿ ಶ್ಲಾಘಿಸಿದರು.  ೧೯೪೮ರಲ್ಲಿ ಮಹಾತ್ಮಾ ಗಾಂಧಿ ಅವರ ಚಿತಾಭಸ್ಮವನ್ನು ಭಾರತ ಹಾಗೂ ಜಗತ್ತಿನ ವಿವಿಧ ಕಡೆಗಳಿಗೆ ವಿಸರ್ಜನೆಗಾಗಿ ಕಳುಹಿಸಲಾಗಿತ್ತು. ಅದರಲ್ಲಿ ಸ್ವಲ್ಪ ಭಾಗವನ್ನು ಇಲ್ಲಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗಿತ್ತು. ತ್ರಿರಾಷ್ಟ್ರ ಪ್ರವಾಸದಲ್ಲಿ ಇರುವ ಮೋದಿ ಅವರು ಇಂಡೋನೇಶಿಯಾ, ಮಲೇಶಿಯಾ ಬಳಿಕ ಸಿಂಗಾಪುರಕ್ಕೆ ಭೇಟಿ ನೀಡಿದ್ದರು.  ಪ್ರಧಾನಿಯವರು ಸಿಂಗಾಪುರದ ಚೈನಾಟೌನಿನಲ್ಲಿ ಹಿಂದೂ ಮತ್ತು ಬೌದ್ಧ ದೇವಾಲಯಗಳು ಮತ್ತು ಮಸೀದಿಗೆ ಭೇಟಿ ನೀಡಿದರು. ಸಿಂಗಾಪುರದಲ್ಲಿ ಅತ್ಯಂತ ಪುರಾತನವಾದ ಶ್ರೀ ಮಾರಿಯಮ್ಮನ ದೇವಾಲಯದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಅರ್ಚಕರು ಪ್ರಧಾನಿಗೆ ಕಾಣಿಕೆಗಳನ್ನು ನೀಡಿದರು. ಪ್ರಧಾನಿಯವರು ಈದಿನ ಚಾಂಗಿ ನೌಕಾನೆಲೆಗೂ ಭೇಟಿ ನೀಡಿ ಅಲ್ಲಿನ ಭಾರತೀಯ ನೌಕಾಪಡೆ ಮತ್ತು ರಾಯಲ್ ಸಿಂಗಾಪುರ ನೌಕಾಪಡೆಯ ಅಧಿಕಾರಿಗಳು, ನಾವಿಕರನ್ನು ಭೇಟಿ ಮಾಡಿದರು. ನಮ್ಮ ನಾವಿಕರು ಮತ್ತು ಅಧಿಕಾರಿಗಳ ಜೊತೆ ಸಂಭಾಷಣೆ ಮಾಡುವುದು ಯಾವಾಗಲೂ ಅತ್ಯಂತ ಖುಷಿ ಮತ್ತು ಗೌರವದ ವಿಚಾರ ಎಂದು ಮೋದಿ ನುಡಿದರು.  ನೌಕಾನೆಲೆಗೆ ಭೇಟಿ ನೀಡುವುದಕ್ಕೆ ಮುನ್ನ ಮೋದಿಯವರು ಇಂಡಿಯನ್ ಹೆರಿಟೇಜ್ ಸೆಂಟರಿಗೆ ಭೇಟಿ ನೀಡಿ ರೂಪೇಯನ್ನು ಬಳಸಿ ಮಧುಬನಿ ವರ್ಣಚಿತ್ರವನ್ನು ಖರೀದಿಸಿದರು. ಮೋದಿಯವರು ಭಾರತದ ಮೂರು ಮೊಬೈಲ್ ಪಾವತಿ ಆಪ್ ಗಳಾದ ಭೀಮ್, ರೂಪೇ ಮತ್ತು ಎಸ್ ಬಿ ಐ ಕಾರ್ಡುಗಳನ್ನು ಸಿಂಗಾಪುರದಲ್ಲಿ ಬಿಡುಗಡೆ ಮಾಡಿದ್ದರು.  ಆರ್ಕಿಡ್ ಗೆ ಮೋದಿ ಹೆಸರು: ಪ್ರಧಾನಿ ಮೋದಿ ಅವರ ಭೇಟಿಯ ನೆನಪಿಗಾಗಿ ಸಿಂಗಾಪುರದ ರಾಷ್ಟ್ರೀಯ ಆರ್ಕಿಡ್ ಉದ್ಯಾನದಲ್ಲಿನ ವಿಶಿಷ್ಟ ಆರ್ಕಿಡ್ ಒಂದಕ್ಕೆ ’ಡೆಂಡ್ರೊಬ್ರಿಯಮ್ ನರೇಂದ್ರ ಮೋದಿ ಎಂಬುದಾಗಿ ಹೆಸರು ಇಡಲಾಯಿತು.  ಮೋದಿ ಅವರು ಈದಿನ ಅಮೆರಿಕದ ರಕ್ಷಣಾ ಕಾರ್‍ಯದರ್ಶಿ ಜಿಮ್ ಮ್ಯಾಟ್ಟಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

 2018: ನವದೆಹಲಿ: ವೈಟಿಂಗ್ ಲಿಸ್ಟಿನಲ್ಲಿ ಹೆಸರು ಇರುವ ಇ-ಟಿಕೆಟ್ ಹೊಂದಿರುವ ರೈಲ್ವೇ ಪ್ರಯಾಣಿಕರು ಕೂಡಾ ಈಗ ರೈಲು ಏರಬಹುದು ಮತ್ತು ದೃಢೀಕೃತ ಸೀಟುದಾರರು ಬಾರದೇ ಇದ್ದಲ್ಲಿ ಅವರ ಬರ್ತ್‌ಗಳನ್ನು ಆಕ್ರಮಿಸಿಕೊಳ್ಳಬಹುದು. ಇ-ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಅನುಕೂಲಕರವಾಗುವಂತಹ  ದೆಹಲಿ ಹೈಕೋರ್ಟಿನ ತೀರ್ಪಿನ ವಿರುದ್ಧ ರೈಲ್ವೇ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಪರಿಣಾಮವಾಗಿ ರೈಲ್ವೇ ಇಲಾಖೆಯಿಂದ ನೀಡಲಾಗುವ ನೈಜ ಟಿಕೆಟ್ ಮತ್ತು ಇ-ಟಿಕೆಟ್ ಗಳ ನಡುವೆ ತಾರತಮ್ಯ ಮಾಡುವುದನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಈಗ ರೈಲ್ವೆ ಸಚಿವಾಲಯ ಪಾಲಿಸಬೇಕಾಗಿ ಬಂದಿದೆ.  ಬೋಗಸ್ ಹೆಸರಿನಲ್ಲಿ ಸೀಟುಗಳನ್ನು ಮಧ್ಯವರ್ತಿಗಳು ಮತ್ತು ಏಜೆಂಟರು ಬ್ಲಾಕ್ ಮಾಡದಂತೆ ಖಾತರಿ ನೀಡುವ ಯೋಜನೆಯೊಂದನ್ನು ತಯಾರಿಸುವಂತೆಯೂ ಹೈಕೋರ್ಟ್ ರೈಲ್ವೇ ಇಲಾಖೆಗೆ ನಿರ್ದೇಶಿಸಿತ್ತು. ಮಧ್ಯವರ್ತಿಗಳು ಮತ್ತು ಏಜೆಂಟರು ಬೋಗಸ್ ಹೆಸರಿನಲ್ಲಿ ಸೀಟುಗಳನ್ನು ಕಾಯ್ದಿರಿಸಿ, ಬಳಿಕ ಹೆಚ್ಚು ಹಣ ಪಡೆದು ಅದನ್ನು ಪ್ರಯಾಣಿಕರಿಗೆ ಮಾರಾಟ ಮಾಡುವ ವ್ಯವಸ್ಥೆಗೆ ಕೊನೆಹಾಕಬೇಕು ಎಂದು ಹೈಕೋರ್ಟ್ ಸೂಚಿಸಿತ್ತು.  ಇ-ಟಿಕೆಟ್ ಮತ್ತು ಇಲಾಖೆ ನೀಡುವ ನೈಜ ಟಿಕೆಟ್ ಹೊಂದಿರುವವರ ಮಧ್ಯೆ ತಾರತಮ್ಯ ಮಾಡುವುದನ್ನು ನಿವಾರಿಸುವ ಬಗ್ಗೆ ಪರಿಶೀಲಿಸುವಂತೆ ರೈಲ್ವೇ ಸಚಿವಾಲಯಕ್ಕೆ ನಿದೇರ್ಶನ ನೀಡಿದ್ದ ದೆಹಲಿ ಹೈಕೋರ್ಟಿನ ತೀರ್ಪಿನ ವಿರುದ್ಧ ರೈಲ್ವೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.  ವೈಟಿಂಗ್ ಲಿಸ್ಟಿನಲ್ಲಿ ಇರುವ ಇ-ಟಿಕೆಟ್ ಹೊಂದಿರುವ ಪ್ರಯಾಣಿಕರನ್ನು ರೈಲು ಏರದಂತೆಯೇ ನಿಷೇಧಿಸಿರುವ ರೈಲ್ವೇಯು ಇಲಾಖೆಯು ನೀಡುವ ನೈಜ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ವೈಟಿಂಗ್ ಲಿಸ್ಟಿನಲ್ಲಿ ಹೆಸರು ಇದ್ದರೆ ರೈಲು ಏರಲು ಅವಕಾಶ ಕಲ್ಪಿಸಿತ್ತು. ಹೀಗೆ ರೈಲು ಏರಿದ ಬರ್ತ್ ದೃಢಪಡದ ಪ್ರಯಾಣಿಕರು ಬಳಿಕ ಹೆಚ್ಚು ಹಣ ನೀಡಿ ದೃಢಪಟ್ಟ ಸೀಟಿಗೆ ಬಾರದ ಪ್ರಯಾಣಿಕರ ಬರ್ತ್ ಪಡೆದುಕೊಳ್ಳಲು ಅವಕಾಶವಿತ್ತು.  ನ್ಯಾಯಮೂರ್ತಿ ಮದನ್ ಬಿ. ಲೋಕುರ್ ನೇತೃತ್ವದ ಪೀಠವು ೨೦೧೪ರ ಜುಲೈ ತಿಂಗಳಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ರೈಲ್ವೇಯು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿತು.  ಪ್ರಕರಣವು ಪೀಠದ ಮುಂದೆ ವಿಚಾರಣೆಗೆ ಬಂದಿದ್ದಾಗ, ಮೇಲ್ಮನವಿದಾರ ರೈಲ್ವೇ ಇಲಾಖೆಯ ವಕೀಲರು ಹಾಜರಾಗದೇ ಇದ್ದುದರಿಂದ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು. ’ವಿಷಯವನ್ನು ಎರಡು ಬಾರಿ ಕರೆಯಲಾಯಿತು. ಅರ್ಜಿದಾರರ ಪರವಾಗಿ ಯಾರೂ ಹಾಜರಿರಲಿಲ್ಲ. ವಿಶೇಷ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟಿನ ಇತ್ತೀಚೆಗಿನ ಆದೇಶ ಹೇಳಿತ್ತು. ರೈಲ್ವೇಯು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದರಿಂದ ದೆಹಲಿ ಹೈಕೋರ್ಟಿನ ತೀರ್ಪು ರೈಲ್ವೇ ಇಲಾಖೆಗೆ ಬಂಧನಕಾರಿಯಾಗುತ್ತದೆ. ಹೀಗಾಗಿ ಇಲಾಖೆಯು ಇ-ಟಿಕೆಟ್ ಮತ್ತು ನೈಜ ಟಿಕೆಟ್ ನಡುವಣ ತಾರತಮ್ಯಕ್ಕೆ ಕೊನೆ ಹಾಡುವ ಮಾರ್ಗಗಳನ್ನು ಹುಡುಕುವುದು ಅನಿವಾರ್ಯವಾಗುವಂತೆ ಮಾಡಿತು.  ೨೦೧೪ರ ಜುಲೈ ತಿಂಗಳಲ್ಲಿ ನೀಡಲಾದ ತನ್ನ ಆದೇಶದಲ್ಲಿ ದೆಹಲಿ ಹೈಕೋರ್ಟ್ ಇ-ಟಿಕೆಟ್ ಗಳ ಅನಾನುಕೂಲತೆಯನ್ನು ನಿವಾರಿಸುವ ಬಗ್ಗೆ ಖಚಿತ ಪಡಿಸುವಂತೆ ರೈಲ್ವೇ ಇಲಾಖೆಗೆ ನಿರ್ದೇಶಿಸಿತ್ತು. ವಕೀಲ ವಿಭಾಸ್ ಕುಮಾರ್ ಝಾ ಅವರು ಸಲ್ಲಿಸಿದ್ದ ಅರ್ಜಿಯ ಮೇಲೆ ನೀಡಿದ ತೀರ್ಪಿನಲ್ಲಿ ನಿರ್ದೇಶನಗಳನ್ನು ನೀಡಿದ ಹೈಕೋರ್ಟ್ ಇ-ಟಿಕೆಟ್ ಮತ್ತು ನೈಜ ಟಿಕೆಟ್ ನಡುವಣ ತಾರತಮ್ಯ ನಿವಾರಣೆಗೆ ರೈಲ್ವೇಗೆ ಆರು ತಿಂಗಳ ಕಾಲಾವಕಾಶ ನೀಡಿತ್ತು. ಮಧ್ಯವರ್ತಿಗಳು ಮತ್ತು ಏಜೆಂಟರು ಸೀಟುಗಳನ್ನು ಬ್ಲಾಕ್ ಮಾಡಿ ಬಳಿಕ ನೈಜ ಟಿಕೆಟ್ ಹೊಂದಿರುವವರಿಗೆ ಮಾತ್ರ ಬರ್ತ್ ನೀಡುವ ವ್ಯವಸ್ಥೆ ನಿವಾರಣೆ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸುವಂತೆಯೂ ನಿರ್ದೇಶಿಸಿತ್ತು.  ‘ನಮ್ಮ ಮನಸ್ಸಿಗೆ ಬರುತ್ತಿರುವ ಒಂದು ಸಲಹೆ ಏನೆಂದರೆ ಇ-ಟಿಕೆಟ್ ಪಡೆದ ಪ್ರಯಾಣಿಕರಿಗೆ  ರೈಲು ಹೊರಡುವ ಮುನ್ನ ಅಂತಿಮ ಚಾರ್ಟ್ ಸಿದ್ಧ ಪಡಿಸುವ ವೇಳೆಗೆ ತಾನೇ ತಾನಾಗಿ ಇ-ಟಿಕೆಟ್ ರದ್ದು ಮಾಡುವುದನ್ನು ನಿಲ್ಲಿಸಿ, ಇ-ಟಿಕೆಟ್ ಹೊಂದಿರುವ ಪ್ರಯಾಣಿಕರಿಗೂ ರೈಲ್ವೇ ನಿಲ್ದಾಣಕ್ಕೆ ಬಂದು ಬಾರದ ಪ್ರಯಾಣಿಕರ ರಿಸರ್ವ್ ಮಾಡಿದ ಟಿಕೆಟ್ ಪಡೆದುಕೊಳ್ಳುವ ಅವಕಾಶ ಪರಿಶೀಲಿಸಲು ಅವಕಾಶ ಕಲ್ಪಿಸುವುದು ಮತು ಬಯಸಿದರೆ ಅವರಿಗೆ ರೈಲು ಏರಿ ಮಾರ್ಗ ಮಧ್ಯದಲ್ಲಿ ಬರ್ತ್ ಪಡೆಯಲು ಅವಕಾಶ ಕಲ್ಪಿಸುವುದು.’ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿತ್ತು.  ವೈಟಿಂಗ್ ಲಿಸ್ಟಿನಲ್ಲಿ ಇರುವ ನೈಜ ಟಿಕೆಟ್‌ದಾರರಿಗೆ ಮೇಲುಗೈ ಒದಗಿಸುವಂತಹ ಯಾವುದೇ ವಿಧಿ ಕಾನೂನಿನಲ್ಲಿ ಇಲ್ಲ. ಇಂತಹ ಪ್ರಯಾಣಿಕರಿಗೆ ಫೈನಲ್ ಚಾರ್ಟ್ ಸಿದ್ಧ ಪಡಿಸಿದ ಬಳಿಕ ಬರ್ತ್ ಪಡೆಯುವ ಅವಕಾಶ ನೀಡುವುದಾಗಿದ್ದರೆ, ಈ ವಿಚಾರದಲ್ಲಿ ಇ-ಟಿಕೆಟ್ ಹೊಂದಿದವರಿಗೂ ತಾರತಮ್ಯ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.

2018: ವಿಜಯವಾಡ: ರಾಜ್ಯವನ್ನು ಅಸ್ಥಿರಗೊಳಿಸಲು ಬಿಜೆಪಿಯ ನಡೆಸುತ್ತಿರುವ ಯತ್ನಗಳನ್ನು ನೋಡಿದರೆ, ’ಆಪರೇಷನ್  ಗರುಡ ಯೋಜನೆಯು ಆಂಧ್ರಪ್ರದೇಶಕ್ಕೆ ದೊಡ್ಡ ಅಪಾಯ ಎಂಬುದಾಗಿ ತೆಲುಗು ಚಿತ್ರ ನಟ ಹೇಳಿದ್ದು ನಿಜ ಇರಬಹುದು  ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಇಲ್ಲಿ ಭೀತಿ ವ್ಯಕ್ತ ಪಡಿಸಿದರು.  ವೈಎಸ್ ಆರ್ ಕಾಂಗ್ರೆಸ್ ಮತ್ತು ಜನ ಸೇನಾ ಪಕ್ಷಗಳು ಪ್ರಜ್ಞಾಪೂರ್ವಕವಾಗಿಯೇ ಬಿಜೆಪಿಗೆ ರಾಜ್ಯದಲ್ಲಿನ ಅದರ ರಾಜಕೀಯ ಕಾರ್ಯಸೂಚಿಯನ್ನು ವಿಸ್ತರಿಸಲು ನಿರಂತರವಾಗಿ ನೆರವಾಗುತ್ತಿವೆ ಎಂದು ನಾಯ್ಡು ಆಪಾದಿಸಿದರು.  ರಾಜ್ಯ ವಿಂಗಡಣೆಯ ಕಾಲದಲ್ಲಿ ರಾಜ್ಯಕ್ಕೆ ನೀಡಿದ ವಚನವನ್ನು ಈಡೇರಿಸಲು ಹಿಂದೇಟು ಹಾಕಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಚಂದ್ರಬಾಬು, ಮೋದಿ ಅವರ ಪಕ್ಷವು ಇದಕಾಗಿ ಬೆಲೆ ತೆರಲಿದೆ ಎಂದು ಎಚ್ಚರಿಸಿದರು.  ೨೦೧೪ರಲ್ಲಿ ಏಕೀಕೃತ ಆಂಧ್ರಪ್ರದೇಶವನ್ನು ವಿಭಜಿಸಿದ ದಿನದಂದು ಇಲ್ಲಿನ ಬೆಂಝ್ ಸರ್ಕಲಿನಲ್ಲಿ ಸಂಘಟಿಸಲಾದ ’ನವ ನಿರ್ಮಾಣ ದೀಕ್ಷಾ ಕಾರ್‍ಯಕ್ರಮದಲ್ಲಿ ಮಾತನಾಡಿದ ನಾಯ್ಡು, ’ವಿಶೇಷ ಸ್ಥಾನಮಾನವು ರಾಜ್ಯದ ಹಕ್ಕು ಎಂದು ಪುನರುಚ್ಚರಿಸಿದರು.  ಸಂಸತ್ತಿನಲ್ಲಿ ಏಕಪಕ್ಷೀಯವಾಗಿ ಆಂಧ್ರ ಪ್ರದೇಶ ಮರುವಿಂಗಡಣಾ ಮಸೂದೆಯನ್ನು ಅಂಗೀಕರಿಸುವಲ್ಲಿ ಕಾಂಗ್ರೆಸ್ ಜೊತೆಗೆ ಸಹಕರಿಸಿದ ಹೊಣೆಗಾರಿಕೆಯಿಂದ ಬಿಜೆಪಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆಗ ತಾನು ನೀಡಿದ್ದ ಭರವಸೆಗಳೆಲ್ಲವನ್ನೂ ಅದು (ಬಿಜೆಪಿ) ರಾಜಕೀಯ ಲಾಭಗಳಿಗಾಗಿ ಅಗೌರವಿಸಿದೆ ಎಂದು ಅವರು ಹೇಳಿದರು. ಆಂಧ್ರ ಪ್ರದೇಶದ ಜನರ ಭಾವನೆಗಳ ಜೊತೆ ಚೆಲ್ಲಾಟವಾಡಿದ್ದಕ್ಕಾಗಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಾಗಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯೂ ನಾಮಾವಶೇಷವಾಗಲಿದೆ ಎಂದು ಅವರು ಭವಿಷ್ಯ ನುಡಿದರು.  ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ನಡೆಸಲಾಗುತ್ತಿರುವ ಹೋರಾಟದಲ್ಲಿ ಜನತೆ ಸರ್ಕಾರದ ಜೊತೆಗೆ ಇರಬೇಕು ಎಂದು ಅವರು ಆಗ್ರಹಿಸಿದರು.  ಪ್ರಧಾನಿಯವರು ಅಮರಾವತಿಯನ್ನು ಮಹಾನ್ ನಗರಗಳಿಗೆ ಸಮವಾಗಿ ನಿರ್ಮಿಸುವುದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದ್ದರು ಎಂದು ನೆನಪಿಸಿದ ನಾಯ್ಡು, ಈಗ ಅದು ಅವರಿಗೆ ಮರೆತುಹೋಗಿದೆ ಎಂದು ಹೇಳಿದರು. ಆದರೆ, ಮೋದಿ ಅವರು ತಮ್ಮ ರಾಜ್ಯವಾದ ಗುಜರಾತಿನ ಧೊಲೆರಾ ನಗರಕ್ಕೆ ಕೇಂದ್ರ ಸರ್ಕಾರದಿಂದ ಹಣದ ಹೊಳೆ ಹರಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಕುರಿತು ಅದರ ಮಾಜಿ ಮುಖ್ಯ ಅರ್ಚಕ ರಮಣ ದೀಕ್ಷಿತರು ಮೂಲಕ ವಿವಾದ ಹುಟ್ಟುಹಾಕಿ, ಆಂಧ್ರ ಪ್ರದೇಶ ಸರ್ಕಾರಕ್ಕೆ ಕಿರುಕುಳ ನೀಡುವ ಮಟ್ಟಕ್ಕೂ ಬಿಜೆಪಿ ಹೋಯಿತು. ಟಿಟಿಡಿಯಲ್ಲಿ ಕಣ್ಮರೆಯಾದ ವಜ್ರಗಳು ಮತ್ತು ಚಿನ್ನಾಭರಣಗಳ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂಬುದಾಗಿ ದೀಕ್ಷಿತರು ಆಗ್ರಹಿಸಿದ್ದು ಟಿಟಿಡಿಯ ವರ್ಚಸ್ಸಿಗೆ ಮಸಿ ಬಳಿಯುವ ಆಟವಾಗಿತ್ತು ಎಂದು ನಾಯ್ಡು ಆಪಾದಿಸಿದರು.

2018: ನವದೆಹಲಿ: ಐವತ್ತು ಸಾವಿರ ರೂಪಾಯಿ ಮೌಲ್ಯಕ್ಕೆ ಮೇಲ್ಪಟ್ಟು ಖರೀದಿಸಿದ, ಮಾರಾಟ ಮಾಡಿದ ಸರಕುಗಳ ಸಾಗಾಣಿಕೆಗೆ ಎಲೆಕ್ಟ್ರಾನಿಕ್ ವೇ ಬಿಲ್ (ಇ-ವೇ ಬಿಲ್) ವ್ಯವಸ್ಥೆ ದೇಶಾದ್ಯಂತ ಜೂನ್ ೩ರಿಂದ ಕಡ್ಡಾಯವಾಗಿ ಜಾರಿಯಾಗಲಿದೆ. ರಾಜ್ಯಗಳಲ್ಲಿ ಸರಕು ಸಾಗಣೆಗೆ ಎಲೆಕ್ಟ್ರಾನಿಕ್ ವೇ ಬಿಲ್ ಜೂನ್ ೩ರಿಂದ ಕಡ್ಡಾಯ ಎಂದು ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಕೇಂದ್ರೀಯ ಮಂಡಳಿಯು ಈಗಾಗಲೇ ತಿಳಿಸಿದ್ದು, ಜೂನ್ 3ರಿಂದ  ದೇಶಾದ್ಯಂತ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ. ಎಲೆಕ್ಟ್ರಾನಿಕ್ ವೇ ಬಿಲ್ ವ್ಯವಸ್ಥೆಯಿಂದ ಸಾಗಾಣಿಕಾ ವೆಚ್ಚದಲ್ಲಿ ಪಾರದರ್ಶಕತೆಯ ಜತೆಗೆ ತ್ವರಿತ ಪ್ರಕ್ರಿಯೆ ಚಾಲನೆಯಾಗಲಿದೆ. ಇದರಿಂದ ಅಂತರ್ ರಾಜ್ಯಗಳ ನಡುವಿನ ಸರಕು ಸಾಗಾಟ ಸುಲಭವಾಗಿ ಪರಿಣಮಿಸಲಿದೆ. ಈ ವ್ಯವಸ್ಥೆಯು ಪ್ರಮುಖವಾಗಿ ಆನ್‌ಲೈನ್ ಶಾಪಿಂಗ್ ಮೂಲಕ ಖರೀದಿಸಲಾಗುವ ಉತ್ಪನ್ನಗಳನ್ನು ತ್ವರಿತವಾಗಿ ಗ್ರಾಹಕರಿಗೆ ತಲುಪಿಸುವಲ್ಲಿ ಸಹಕಾರಿಯಾಗಲಿದೆ. ಸರಕು ಹಾಗೂ ಸೇವಾ ತೆರಿಗೆಯಡಿಯಲ್ಲಿ ಇ-ವೇ ಬಿಲ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ವೆಬ್‌ಪೋರ್ಟಲ್ ಮೂಲಕ ಒಂದು ಬಾರಿ ತೆರಿಗೆ ಪಾವತಿಸಿದರೆ, ಬೇರೊಂದು ರಾಜ್ಯದಲ್ಲೂ ಅದು ಅನ್ವಯವಾಗಲಿದೆ. ತೆರಿಗೆ ಪಾವತಿಗೆ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ.  ಸರಕು ಸಾಗಾಣಿಕೆಯಲ್ಲಿ ಶೇ.೧೬ರಷ್ಟು ವೆಚ್ಚ ಅಂತರ್ ರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ವ್ಯಯವಾಗುತ್ತಿರುವುದರಿಂದ ಈ ಹೊಸ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.  ಎಲೆಕ್ಟ್ರಾನಿಕ್ ವೇ ಬಿಲ್ ಪಡೆಯುವುದರಿಂದ ಸಾಗಾಣಿಕೆ ವೇಳೆ ಯಾವುದೇ ವಿಧವಾದ ತೆರಿಗೆ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಅಲ್ಲದೆ ಚೆಕ್‌ಪೋಸ್ಟ್‌ಗಳಲ್ಲಿ ಪರವಾನಗಿ ಸಂಬಂಧಿಸಿದ ತೊಡಕುಗಳೂ ನಿವಾರಣೆಯಾಗಲಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಶೀಘ್ರವಾಗಿ ಉತ್ಪನ್ನಗಳನ್ನು ವಿಲೇವಾರಿ ಮಾಡುವುದು, ಸರಿಯಾದ ವಿಳಾಸಕ್ಕೆ ತಲುಪಿಸುವ ಕಾರ್ಯಗಳು ತೆರಿಗೆ ಕಾರಣದಿಂದ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಎಸ್‌ಟಿ ಮಂಡಳಿ ಈ ನಿರ್ಧಾರವನ್ನು ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿತ್ತು. ಪಂಜಾಬ್ ಒಡಿಶಾ, ಮಿಜೋರಂ, ಛತ್ತೀಸ್ ಗಢ, ಗೋವಾ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳು ಈದಿನ ಎಲೆಕ್ಟ್ರಾನಿಕ್ ವೇ ಬಿಲ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ ಜೂನ್ ೨ ಮತ್ತು ೩ರಂದು ಎಲೆಕ್ಟಾನಿಕ್ ವೇ ಬಿಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿವೆ.  ಈವರೆಗೆ ೨೭ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಲೆಕ್ಟ್ರಾನಿಕ್ ವೇ ಬಿಲ್ ವ್ಯವಸ್ಥೆಯನ್ನು ಸರಕು ಸಾಗಾಣಿಕೆಗೆ ಕಡ್ಡಾಯಗೊಳಿಸಿವೆ.  ಏಪ್ರಿಲ್ ತಿಂಗಳ ಮೊದಲ ವಾರ ಸುಮಾರು ೮ ಲಕ್ಷ ಎಲೆಕ್ಟ್ರಾನಿಕ್ ವೇ ಬಿಲ್ ಗಳು ಸೃಷ್ಟಿಯಾಗಿದ್ದು, ಮೇ ೩೦ರ ವೇಳೆಗೆ ಸರಾಸರಿ ಎಲೆಕ್ಟ್ರಾನಿಕ್ ವೇ ಬಿಲ್‌ಗಳ ಸಂಖ್ಯೆ ೧೬.೮ ಲಕ್ಷಕ್ಕೆ ಏರಿಕೆಯಾಗಿತ್ತು.  ಎಲೆಕ್ಟ್ರಾನಿಕ್ ವೇ ಪೋರ್ಟಲ್ ನಲ್ಲಿ ಈವರೆಗೆ ೬.೪೩ ಕೋಟಿ ಎಲೆಕ್ಟ್ರಾನಿಕ್ ವೇ ಬಿಲ್ ಗಳ ಸೃಷ್ಟಿ ಆಗಿದೆ ಎಂದು ಜಿಎಸ್ ಟಿಎನ್ ತಿಳಿಸಿತು. ೫೦,೦೦೦ ರೂಪಾಯಿ ಮೇಲ್ಪಟ್ಟ ಮೌಲ್ಯದ ಸರಕುಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಒಯ್ಯಲು ಎಲೆಕ್ಟ್ರಾನಿಕ್ ವೇ ಬಿಲ್ ವ್ಯವಸ್ಥೆಯನ್ನು ಸರ್ಕಾರ ಏಪ್ರಿಲ್ ೧ರಂದು ಆರಂಭಿಸಿತ್ತು. ರಾಜ್ಯಗಳ ಒಳಗೆ ಸರಕು ಸಂಚಾರಕ್ಕೆ ಎಲೆಕ್ಟ್ರಾನಿಕ್ ವೇ ಬಿಲ್ ವ್ಯವಸ್ಥೆಯನ್ನು ಏಪ್ರಿಲ್ ೧೫ರಿಂದ ಆರಂಭಿಸಲಾಗಿತ್ತು.  ತೆರಿಗೆ ವಂಚನೆಯನ್ನು ತಪ್ಪಿಸುವ ಕ್ರಮವಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ೫೦,೦೦೦ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಸರಕು ಸಾಗಿಸುವವರು ಜಿಎಸ್ ಟಿ ಇನ್‌ಸ್ಪೆಕ್ಟರ್ ಕೇಳಿದರೆ ಎಲೆಕ್ಟ್ರಾನಿಕ್ ವೇ ಬಿಲ್ ನ್ನು ಹಾಜರು ಪಡಿಸಬೇಕಾಗುತ್ತದೆ. ಇದರಿಂದ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. 

2018: ಲಕ್ನೋ: ತಮ್ಮ ಅಧಿಕೃತ ಬಂಗಲೆಗಳನ್ನು ತೆರವುಗೊಳಿಸಲು ನೀಡಲಾಗಿದ್ದ ಗಡುವಿಗಿಂತ ಒಂದು ದಿನ ಮುಂಚಿತವಾಗಿಯೇ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರು ಸರ್ಕಾರಿ ಬಂಗಲೆ ತೆರವುಗೊಳಿಸಿ ಇಲ್ಲಿನ ವಿವಿಐಪಿ ಅತಿಥಿಗೃಹಕ್ಕೆ  (ವಿವಿಐಪಿ ಗೆಸ್ಟ್ ಹೌಸ್) ತಮ್ಮ ವಾಸ್ತವ್ಯವನ್ನು ಬದಲಾಯಿಸಿದರು.  ಬಿಎಸ್ಪಿ ನಾಯಕಿ ಮಾಯಾವತಿ ಅವರು ಒಂದು ಬಂಗಲೆಯನ್ನು ತೆರವುಗೊಳಿಸಿದ್ದು, ಇನ್ನೊಂದು ಬಂಗಲೆಯನ್ನು ಬಿಎಸ್ ಪಿ ಸ್ಥಾಪಕ ಕಾನ್ಶೀರಾಮ್ ಸ್ಮಾರಕವಾಗಿ ಪರಿವರ್ತಿಸಲಾಗಿದೆ ಎಂದು ಪ್ರತಿಪಾದಿಸಿದರು.  ‘ಮುಲಾಯಂ ಸಿಂಗ್ ಯಾದವ್ ಅವರು ವಿವಿಐಪಿ ಗೆಸ್ಟ್ ಹೌಸಿಗೆ ಸ್ಥಳಾಂತರಗೊಂಡಿದ್ದರೆ, ಅಖಿಲೇಶ್ ಯಾದವ್ ಅವರು ತಮ್ಮ ಸಂಸದೆ ಪತ್ನಿ ಡಿಂಪಲ್ ಮತ್ತು ಮಕ್ಕಳ ಜೊತೆಗೆ ಈದಿನ ವಿವಿಐಪಿ ಗೆಸ್ಟ್ ಹೌಸಿಗೆ ಸ್ಥಳಾಂತರಗೊಂಡರು. ಅಖಿಲೇಶ್, ಡಿಂಪಲ್ ಮತ್ತು ಮುಲಾಯಂ ಅವರಿಗೆ ತಲಾ ಒಂದು ಕೊಠಡಿ ಹಂಚಿಕೆ ಮಾಡಲಾಗಿದೆ ಎಂದು ವಿವಿಐಪಿ ಗೆಸ್ಟ್ ಹೌಸ್ ಮುಖ್ಯ ನಿರ್ವಹಣಾ ಅಧಿಕಾರಿ ರಾಜೀವ್ ಕುಮಾರ್ ತಿಳಿಸಿದರು. ಅವರಿಗೆ ಹಂಚಿಕೆ ಮಾಡಲಾಗಿರುವ ಎಲ್ಲ ಕೊಠಡಿಗಳೂ ಎರಡು ಕೋಣೆಗಳನ್ನು ಹೊಂದಿವೆ ಎಂದು ಅವರು ನುಡಿದರು.
ಯಾದವ್ ಕುಟುಂಬ ಸದಸ್ಯರಿಗೆ ಅತಿಥಿಗೃಹದ ಮೊದಲ ಮಹಡಿಯಲ್ಲಿ ಕೊಠಡಿಗಳನ್ನು ಕೊಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.  ನಿಯಮಾವಳಿಗಳ ಪ್ರಕಾರ ಕೊಠಡಿಯೊಂದನ್ನು ಕೇವಲ ಮೂರು ದಿನಗಳ ಅವಧಿಗೆ ಬುಕ್ ಮಾಡಬಹುದು. ಬಳಿಕ ಅವಧಿ ವಿಸ್ತರಣೆ ಅಥವಾ ಮರು ಬುಕ್ಕಿಂಗ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಅವರು ಹೇಳಿದರು.  ಸುಪ್ರೀಂಕೋರ್ಟ್ ಕಳೆದ ತಿಂಗಳು ನೀಡಿದ್ದ ಆದೇಶದ ಪ್ರಕಾರ ಉತ್ತರ ಪ್ರದೇಶದ ಎಸ್ಟೇಟ್ ಇಲಾಖೆಯು ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮ ಅಧಿಕೃತ ಬಂಗಲೆಗಳನ್ನು ೧೫ ದಿನಗಳ ಒಳಗಾಗಿ ತೆರವು ಮಾಡುವಂತೆ ನೋಟಿಸ್ ನೀಡಿತ್ತು. ಈ ನೋಟಿಸಿನ ಗಡುವು ಜೂನ್ ೩ಕ್ಕೆ ಮುಕ್ತಾಯವಾಗುತ್ತಿತ್ತು.  ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ತಮ್ಮ ಸರ್ಕಾರಿ ಬಂಗಲೆಗಳನ್ನು ಹುದ್ದೆ ತೆರವುಗೊಳಿಸಿದ ಬಳಿಕ ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮೇ ೭ರಂದು ಆದೇಶ ನೀಡಿತ್ತು. ತೀರ್ಪಿನ ಬಳಿಕ ಎಸ್ಟೇಟ್ ಇಲಾಖೆಯು ನಾರಾಯಣ ದತ್ತ ತಿವಾರಿ, ಮುಲಾಯಂ ಸಿಂಗ್ ಯಾದವ್, ಕಲ್ಯಾಣ ಸಿಂಗ್, ಮಾಯವತಿ, ರಾಜನಾಥ್ ಸಿಂಗ್ ಮತ್ತು ಅಖಿಲೇಶ್ ಯಾದವ್ ಈ ೬ ಮಂದಿ ಮಾಜಿ ಮುಖ್ಯಮಂತ್ರಿಗಳಿಗೆ ಸುಪ್ರೀಂಕೋರ್ಟ್ ಆದೇಶದಂತೆ ಬಂಗಲೆ ತೆರವುಗೊಳಿಸಲು ನೋಟಿಸ್ ಜಾರಿ ಮಾಡಿತ್ತು.
ಅಖಿಲೇಶ್ ಮತ್ತು ಮುಲಾಯಂ ವಿವಿಐಪಿ ಗೆಸ್ಟ್ ಹೌಸಿಗೆ ಸ್ಥಳಾಂತರಗೊಂಡಿದ್ದರೆ ತಿವಾರಿ ಅವರು ತಮ್ಮ ಪತ್ನಿ ಉಜ್ವಲ ತಿವಾರಿ ಜೊತೆಗೆ ಇನ್ನೂ ಬಂಗಲೆ ತೆರವುಗೊಳಿಸಬೇಕಾಗಿದ್ದು, ಉಜ್ವಲ ತಿವಾರಿ ಅವರು ತಮ್ಮ ಪತಿ ಬದುಕಿನ ಕೊನೆಯ ಹಂತದಲ್ಲಿ ಇರುವುದರಿಂದ ತೆರವುಗೊಳಿಸಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದಾರೆ. ತಿವಾರಿ ಅವರ ಮಾಲ್ ಎ ಅವೆನ್ಯೂ ಬಂಗಲೆಯ ಹೊರಭಾಗದಲ್ಲಿ ಅದನ್ನು ಉಳಿಸಿಕೊಳ್ಳುವ ಯತ್ನವಾಗಿ ’ಪಂಡಿತ್ ನಾರಾಯಣ ದತ್ ತಿವಾರಿ ಸರ್ವಜನ ವಿಕಾಸ ಫೌಂಡೇಶನ್ ಎಂಬ ನಾಮಫಲಕ ಹಾಕಲಾಗಿದೆ.  ಮಾಯಾವತಿ ಅವರು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಒಂದು ಸರ್ಕಾರಿ ಮನೆಯನ್ನು ತೆರವುಗೊಳಿಸಿರುವುದಾಗಿಯೂ, ವಿಶಾಲವಾದ ಎರಡನೆಯ ಬಂಗಲೆಯು ಪಕ್ಷದ ಸ್ಥಾಪಕ ಕಾನ್ಶಿರಾಮ್ ಸ್ಮಾರಕವಾಗಿದೆ ಎಂದು ಪಕ್ಷವು ಪ್ರತಿಪಾದಿಸಿತು. ಮಾಯಾವತಿ ಅವರು ಮಾಜಿ ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ಮಂಜೂರಾಗಿದ್ದ ನಂ.೬, ಲಾಲ್ ಬಹಾದುರ್ ಶಾಸ್ತ್ರಿ ಮಾರ್ಗ್ ಮನೆಯನ್ನು ಮೇ ೨೯ರಂದು ತೆರವುಗೊಳಿಸಿದ್ದಾರೆ ಎಂದು ಮಾಯಾವತಿ ಅವರ ಆಪ್ತ ಕಾರ್‍ಯದರ್ಶಿ ಹೇಳಿದ್ದಾರೆ. ನಂ.೧೩ ಎ ಮಾಲ್ ಅವೆನ್ಯೂ ಬಂಗಲೆಯು ಪಕ್ಷದ ಸ್ಥಾಪಕ ಕಾನ್ಶಿರಾಮ್  ಸ್ಮಾರಕವಾಗಿದೆ ಎಂದು ಅವರು ಹೇಳಿದರು. ಮಾಯಾವತಿ ಪ್ರತಿಪಾದನೆಯನ್ನು ಎಸ್ಟೇಟ್ ಇಲಾಖೆಯು ತಿರಸ್ಕರಿಸಿತು.  ಮಾಯಾವತಿ ಅವರಿಗೆ ಮಾಜಿ ಮುಖ್ಯಮಂತ್ರಿ ನೆಲೆಯಲ್ಲಿ ೧೩ ಎ ಮಾಲ್ ಅವೆನ್ಯೂವನ್ನು ಹಂಚಿಕೆ ಮಾಡಲಾಗಿದ್ದು, ತೆರವು ಮಾಡಿರುವ ನಂ.೬, ಲಾಲ್ ಬಹಾದುರ್ ಶಾಸ್ತ್ರಿ ಮಾರ್ಗ ನಿವಾಸವನ್ನು ಅವರು ಅಕ್ರಮವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು ಎಂದು ಎಸ್ಟೇಟ್ ಇಲಾಖೆ ತಿಳಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಅವರು ಮಾಲ್ ಅವೆನ್ಯೂ ತೆರವು ಮಾಡಲೇಬೇಕಾಗುತ್ತದೆ ಎಂದು ಎಸ್ಟೇಟ್ ಇಲಾಖೆಯ ಅಧಿಕಾರಿಯೊಬ್ಬರು ನುಡಿದರು.  ಬಿಎಸ್ಪಿ ನಿಯೋಗವೊಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಮಾಡಿ ೨೦೧೧ರಲ್ಲೇ ಮಾಲ್ ಅವೆನ್ಯೂವನ್ನು ಕಾನ್ಶೀರಾಮ್ ಸ್ಮಾರಕವಾಗಿ ಪರಿವರ್ತಿಸಲಾಗಿದ್ದು, ಮಾಯವತಿಯವರು ಅದರಲ್ಲಿ ಕೇವಲ ೨ ಕೊಠಡಿಗಳನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿತ್ತು. ಮೇ ೨೧ರಂದು ನೋಟಿಸ್ ತಲುಪಿದ ಬಳಿಕ ಬಿಎಸ್ ಪಿಯು ಬಂಗಲೆ ಹೊರಗೆ ’ಶ್ರೀ ಕಾನ್ಶೀರಾಮ್ ಜಿ ಯಾದ್ಗಾರ್ ವಿಶ್ರಾಮ್ ಸ್ಥಳ ಫಲಕವನ್ನು ಹಾಕಿತ್ತು. ಸ್ಥಳೀಯ ಸಂಸತ್ ಸದಸ್ಯರೂ ಆಗಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ನಂ.೪, ಕಾಳಿದಾಸ್ ಮಾರ್ಗ ಬಂಗಲೆಯಿಂದ ಸಮೀಪದಲ್ಲೇ ಇರುವ ಗೋಮತಿ ನಗರದ ವಿಪುಲ್ ಖಂಡ್ ಪ್ಲಾಟ್ ಗೆ ವಾಸ್ತವ್ಯ ಬದಲಿಸಿದ್ದರು. ರಾಜಸ್ಥಾನದ ರಾಜ್ಯಪಾಲರಾಗಿರುವ ಕಲ್ಯಾಣ್ ಸಿಂಗ್ ಅವರು ತಮ್ಮ ಸಾಮಾನುಗಳನ್ನು ಅಧಿಕೃತ ಬಂಗಲೆಯಿಂದ ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಸಚಿವರೂ ಆಗಿರುವ ಮೊಮ್ಮಗ ಸಂದೀಪ ಸಿಂಗ್ ನಿವಾಸಕ್ಕೆ ಸ್ಥಳಾಂತರಿಸಿದರು.  ಲೋಕಪ್ರಹರಿ ಸರ್ಕಾರೇತರ ಸಂಘಟನೆಯು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಮಾಜಿ ಮುಖ್ಯಮಂತ್ರಿಗಳಿಗೆ ಜೀವಮಾನ ಪೂರ್ತಿ ಸರ್ಕಾರಿ ಬಂಗಲೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಿ ಶಾಸನಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ’ನಿರಂಕುಶ ಮತ್ತು ತಾರತಮ್ಯದ್ದು ಎಂದು ಹೇಳಿ ರದ್ದು ಪಡಿಸಿತ್ತು. ಹುದ್ದೆ ತೆರವುಗೊಳಿಸಿದ ಬಳಿಕ ಮುಖ್ಯಮಂತ್ರಿಯು ಶ್ರೀಸಾಮಾನ್ಯನಿಗೆ ಸಮ ಎಂದು ಕೋರ್ಟ್ ಹೇಳಿತ್ತು.  ಅಖಿಲೇಶ್ ಯಾದವ್ ಸರ್ಕಾರ ಉತ್ತರ ಪ್ರದೇಶ ಸಚಿವರು (ವೇತನ, ಭತ್ಯೆ ಇತ್ಯಾದಿ ಅವಕಾಶಗಳು) ಕಾಯ್ದೆ ೧೯೮೧ಕ್ಕೆ ಈ ತಿದ್ದುಪಡಿಯನ್ನು ಮಾಡಿತ್ತು. ಸರ್ಕಾರೇತರ ಸಂಸ್ಥೆ ಅದನ್ನು ಪ್ರಶ್ನಿಸಿತ್ತು.

2018: ಲಕ್ನೋ: ಅಚ್ಚರಿಯ ಬೆಳವಣಿಗೆ ಒಂದರಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ತಾನು ಲಕ್ನೋದಲ್ಲಿನ ಎರಡನೇ ಸರ್ಕಾರಿ ಬಂಗಲೆಯನ್ನೂ ತೆರವುಗೊಳಿಸುತ್ತಿರುವುದಾಗಿ ಪ್ರಕಟಿಸಿದರು. ಬಿಎಸ್ಪಿ ಸ್ಥಾಪಕ ಕಾನ್ಶೀರಾಮ್ ಸ್ಮಾರಕ ಎಂಬುದಾಗಿ ಮೊದಲು ಹೇಳಿದ್ದ ಬಂಗಲೆಯನ್ನೂ ಮಾಯಾವತಿ ಅವರು ಈಗ ತೆರವು ಮಾಡಿದರು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬಂಗಲೆಯನ್ನು ತೆರವುಗೊಳಿಸಿದ ಮಾಯಾವತಿ ಅದನ್ನು ರಾಜ್ಯ ಸಂಪತಿ ವಿಭಾಗದ ಅಧಿಕಾರಿಗೆ ಒಪ್ಪಿಸಿದರು.  ಕಾನ್ಶೀರಾಮ್ ಸ್ಮಾರಕದಲ್ಲಿ ತಾವು ವಾಸವಾಗಿದ್ದ ಭಾಗವನ್ನು ತೆರವುಗೊಳಿಸುತ್ತಿರುವುದಾಗಿ ಹೇಳಿದ ಮಾಯಾವತಿ ಕಾನ್ಶೀರಾಮ್ ಸ್ಮಾರಕವು ಹಾಗೆಯೇ ಮುಂದುವರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.


2009: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಬಂಡಾಯದ ಕಿಡಿ ಹಾರಿಸಿದ ಬೆನ್ನಲ್ಲೇ, ಬಳ್ಳಾರಿಯ ಗಣಿ ಧಣಿಗಳ ಮುನಿಸು ಬಹಿರಂಗಗೊಂಡು ಬಿಜೆಪಿ ನೇತೃತ್ವದ ಸರ್ಕಾರದೊಳಗಿನ ಭಿನ್ನಮತ ಉಲ್ಬಣಗೊಳ್ಳುವಂತೆ ಮಾಡಿತು. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಕೆಲವರ ವಿರುದ್ಧ ಹರಿಹಾಯ್ದರು. ಇತ್ತ ಶಿವಮೊಗ್ಗ ಜಿಲ್ಲೆಯ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಚಿವ ಎಚ್. ಹಾಲಪ್ಪ ವಿರುದ್ಧ ತಿರುಗಿಬಿದ್ದು ಮತ್ತಷ್ಟು ಗೊಂದಲಕ್ಕೆ ಕಾರಣವಾದರು. ದೆಹಲಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 'ನಾನು ಯಾರ ಜತೆಯೂ ಮಾತನಾಡುವುದಿಲ್ಲ. ಯಾರ ಮನವೊಲಿಸಲೂ ಹೋಗುವುದಿಲ್ಲ. ಸದ್ಯಕ್ಕೆ ರಾಜ್ಯದ ಅಭಿವೃದ್ಧಿಯಷ್ಟೇ ನನ್ನ ಮುಂದಿರುವ ವಿಚಾರ' ಎಂದು ಪ್ರತಿಕ್ರಿಯೆ ನೀಡಿದರು. 'ರಾಜ್ಯ ಬಿಜೆಪಿಯಲ್ಲಿ ಆಗಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಏನು ಮಾಡಬೇಕೆಂಬುದು ಪಕ್ಷದ ಅಧ್ಯಕ್ಷ ಡಿ.ವಿ. ಸದಾನಂದ ಗೌಡ ಅವರಿಗೆ ಬಿಟ್ಟ ವಿಷಯ' ಎಂದು ಅವರು ಹೇಳಿದರು.

2009: ಮುಂಬೈ ಮೇಲಿನ ಅಮಾನುಷ ದಾಳಿ ಹಿಂದಿನ 'ಮುಖ್ಯ ಮಿದುಳು' ಹಾಗೂ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಮಾರುವೇಷದ ಸಂಘಟನೆ ಎಂದು ವಿಶ್ವಸಂಸ್ಥೆಯಿಂದ ನಿಷೇಧಕ್ಕೆ ಒಳಗಾದ ಜೆಯುಡಿ ಮುಖ್ಯಸ್ಥ ಹಫೀಜ್‌ನನ್ನು ಬಿಡುಗಡೆ ಮಾಡಿದ್ದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮುಂಬೈ ಮೇಲಿನ ದಾಳಿ ನಂತರ ವಿಶ್ವಸಂಸ್ಥೆ ಜೆಯುಡಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದಾಗ, ಪಾಕಿಸ್ಥಾನ ಸರ್ಕಾರವು ಕಳೆದ ಡಿಸೆಂಬರಿನಲ್ಲಿ ಹಫೀಜ್‌ನನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಿತ್ತು.

2009: ರಿಯ ಸಂಸದ, ಬುಡಕಟ್ಟು ಸಮುದಾಯದ ನಾಯಕ ಕರಿಯಾ ಮುಂಡಾ ಅವರನ್ನು ಲೋಕಸಭಾ ಉಪಾಧ್ಯಕ್ಷ ಸ್ಥಾನಕ್ಕೆ ಹೆಸರಿಸಲು ಬಿಜೆಪಿಯು ನಿರ್ಧರಿಸಿತು.

2009: ಹಿಂದಿನ ದಿನ ಬೆಳಿಗ್ಗೆ ಕಣ್ಮರೆಯಾದ ಏರ್ ಫ್ರಾನ್ಸ್ ವಿಮಾನದ ಶಂಕಿತ ಅವಶೇಷಗಳು ಬ್ರೆಜಿಲ್‌ನ ಫೆರ್ನಾಂಡೊ ಡೆ ನರೊನ್ಹಾ ದ್ವೀಪ ಸಮೂಹಕ್ಕೆ 650 ಕಿ.ಮೀ. ಈಶಾನ್ಯ ದಿಕ್ಕಿನಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಪತ್ತೆಯಾದವು. ವಿಮಾನ ನಾಪತ್ತೆಯಾದ ದಿಕ್ಕಿನಲ್ಲಿ ಸಮುದ್ರದಲ್ಲಿ ವಿಮಾನದ ಸೀಟುಗಳು ಮತ್ತು ಇತರ ಅವಶೇಷಗಳನ್ನು ತಾನು ಪತ್ತೆಹಚ್ಚಿದುದಾಗಿ ಬ್ರೆಜಿಲ್‌ನ ವಾಯುಪಡೆ ತಿಳಿಸಿತು.

2009: ತಿರುವನಂತಪುರದ ಪಾಳಯಂ ಜುಮ್ಮಾ ಮಸೀದಿ ಆವರಣದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಖ್ಯಾತ ಲೇಖಕಿ ಕಮಲಾ ಸುರಯ್ಯಾ ಅವರಿಗೆ ಸಹಸ್ರಾರು ಜನರ ಕಂಬನಿ, ಗಣ್ಯರ ಅಂತಿಮ ನಮನ, ಸರ್ಕಾರದ ಪರವಾಗಿ ಕುಶಾಲತೋಪುಗಳ ಗೌರವ ವಂದನೆಯೊಂದಿಗೆ ಅಂತಿಮ ವಿದಾಯ ನೀಡಲಾಯತು.

2009: ರಾಹುಲ್ ಗಾಂಧಿ, ವರುಣ್ ಗಾಂಧಿ, ಮುಲಾಯಂ ಸಿಂಗ್, ರಾಜನಾಥ್ ಸಿಂಗ್ ,ಕಲ್ಯಾಣ್ ಸಿಂಗ್.. ಹೀಗೆ ಹಲವು ಗಣ್ಯರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಹುಲ್ ಗಾಂಧಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೆ ಮುನ್ನ ಪ್ರತಿಪಕ್ಷ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಹಸ್ತಲಾಘವ ನೀಡಿದರು. ಮಗ ಪ್ರಮಾಣ ವಚನ ಸ್ವೀಕರಿಸುವುದನ್ನು ತಾಯಿ ಸೋನಿಯಾ ಸೋದರಿ ಪ್ರಿಯಾಂಕಾ, ಅವರ ಪತಿ ರಾಬರ್ಟ್ ವಾಧ್ರಾ ವೀಕ್ಷಿಸಿದರು.

2009: ಮಾತನಾಡುತ್ತಿರುವ ವ್ಯಕ್ತಿಯೊಬ್ಬನ ವಿಡಿಯೊ ತುಣುಕುಗಳನ್ನು ಇಟ್ಟುಕೊಂಡು ಕಂಪ್ಯೂಟರ್ ಸಹಾಯದಿಂದ ಅಂತಹ ವ್ಯಕ್ತಿಯ ಲಿಂಗವನ್ನು ಕಂಪ್ಯೂಟರ್ ಪರದೆಯಲ್ಲಿ ಬದಲಿಸಬಲ್ಲ ಸಾಫ್ಟ್‌ವೇರನ್ನು ಅಭಿವೃದ್ಧಿ ಪಡಿಸಿರುವುದಾಗಿ ವಿಜ್ಞಾನಿಗಳು ಲಂಡನ್ನಿನಲ್ಲಿ ಪ್ರಕಟಿಸಿದರು. ವ್ಯಕ್ತಿಯ ಮುಖದ ಮೇಲಿನ 30ಕ್ಕೂ ಅಧಿಕ ಬಗೆಯ ಭಾವನೆಗಳನ್ನು (ಉದಾ:ಅಚ್ಚರಿ,ಮುಗುಳ್ನಗು, ಸಿಟ್ಟು) ಹಾಗೂ ಇಂತಹ ಭಾವಗಳ ಸಂದರ್ಭದಲ್ಲಿ ಕಣ್ಣು, ಮೂಗು, ಬಾಯಿ ಮತ್ತಿತರ ಅವಯವಗಳ ಚಲನೆಗಳನ್ನು ದಾಖಲಿಸಲಾಗುತ್ತದೆ. ಪ್ರತಿಯೊಬ್ಬನ ಮುಖದ ಚಹರೆ, ಮುಖದ ಭಾವಗಳನ್ನು ಕಂಪ್ಯೂಟರಿಗೆ ಅಳವಡಿಸಿಕೊಂಡ ಬಳಿಕ ಅದು ಅಂತಹ ವ್ಯಕ್ತಿಯ ಮುಖದ ಭಾವವನ್ನು ಎದುರಿಗಿರುವ ಇನ್ನೊಬ್ಬ ವ್ಯಕ್ತಿಯ ಮುಖದ ಭಾವಕ್ಕೆ ಬದಲಿಸುತ್ತದೆ. ವ್ಯಕ್ತಿಯ ಧ್ವನಿಯ ಸಂಯೋಜನೆಯೇ ಇಲ್ಲಿ ಪ್ರಮುಖ ಅಂಶವಾಗಿರುವುದರಿಂದ ಹೆಣ್ಣನ್ನು ಎದುರಿಗಿರುವ ಗಂಡಿನಂತೆ ಹಾಗೂ ಗಂಡನ್ನು ಎದುರಿಗಿರುವ ಹೆಣ್ಣಿನಂತೆ ಪರದೆಯಲ್ಲಿ ಚಿತ್ರಿಸುವುದು ಸಾಧ್ಯ. ಕಂಪ್ಯೂಟರ್ ವಿಜ್ಞಾನಿಗಳಾದ ಬಾರಿಜಾನ್ ತಿಯಾಬಾಲ್ಡ್ ಮತ್ತು ಇಯಾನ್ ಮ್ಯಾಥ್ಯೂಸ್ ಈ ಸಂಶೋಧನೆ ನಡೆಸಿದ್ದಾರೆ ಎಂದು 'ನ್ಯೂ ಸೈಂಟಿಸ್ಟ್' ವರದಿ ಮಾಡಿತು. ಈ ಪ್ರಯೋಗಕ್ಕಾಗಿ ಒಟ್ಟು 30 ಸ್ವಯಂಸೇವಕರನ್ನು ಪ್ರಯೋಗಕ್ಕೆ ಗುರಿಪಡಿಸಲಾಗಿತ್ತು. ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡುತ್ತಿದ್ದುದನ್ನು ವಿಡಿಯೊ ಚಿತ್ರೀಕರಣ ಮಾಡುತ್ತ ಅವರ ಮುಂದೆಯೇ ಬದಲಾದ ಮುಖಚಹರೆಯನ್ನು ತೋರಿಸಿ ಅಚ್ಚರಿ ಮೂಡಿಸಲಾಗಿತ್ತು. ಲಿಂಗ ಬದಲಾವಣೆಗೆ ಕಂಪ್ಯೂಟರ್ ತೆಗೆದುಕೊಳ್ಳುವ ಸಮಯ ಕೇವಲ 150 ಮಿಲಿ ಸೆಕೆಂಡುಗಳು.

2009: ನಾಲ್ಕು ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ದೊಡ್ಡಪ್ರಮಾಣದಲ್ಲಿ ಉಲ್ಕೆಗಳು ಅಪ್ಪಳಿಸ್ದಿದರಿಂದಲೇ ಭುವಿಯಲ್ಲಿ ಜೀವ ಸಂಕುಲ ನೆಲೆಸಲು ಸಾಧ್ಯವಾಗಿರಬೇಕು ಎಂಬುದನ್ನು ನೂತನ ಅಧ್ಯಯನವೊಂದು ಕಂಡುಕೊಂಡಿತು. ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರ ತಂಡವೊಂದು 'ಲೇಟ್ ಹೆವಿ ಬೊಂಬಾರ್ಡ್‌ಮೆಂಟ್' (ಎಲ್‌ಎಚ್‌ಬಿ) ಹೆಸರಿನ ಪ್ರಾಚೀನ ಉಲ್ಕಾಪಾತದ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವೇಳೆ ಇದನ್ನು ಕಂಡುಕೊಂಡಿತು. ನಾಲ್ಕು ಶತ (ನಾನ್ನೂರು) ಕೋಟಿ ವರ್ಷಗಳ ಹಿಂದೆ ಸಂಭವಿಸಿದ ಈ ಉಲ್ಕಾಪಾತದ ಸಂದರ್ಭದಲ್ಲಿ 20 ದಶಲಕ್ಷ ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಬಂಡೆಗಳು ಭೂಮಿ ಮತ್ತು ಮಂಗಳ ಗ್ರಹದ ಮೇಲೆ ಅಪ್ಪಳಿಸಿದ್ದವು. ಈ ಉಲ್ಕಾಪಾತದ ವೇಳೆ ಪ್ರತಿ ವರ್ಷ 10 ಶತಕೋಟಿ ಟನ್ ಕಾರ್ಬನ್ ಡೈಆಕ್ಸೈಡ್ ಮತ್ತು 10 ಶತಕೋಟಿ ಟನ್ ನೀರಿನ ತೇವಾಂಶ ಭೂಮಿಯ ವಾತಾವರಣ ಸೇರುವಂತಾಯಿತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂಗಾಲ ಮತ್ತು ನೀರಿನ ಅಂಶ ಭೂಮಿ ಮತ್ತು ಮಂಗಳನಲ್ಲಿ ಬಿಡುಗಡೆಯಾದುದರಿಂದ ಈ ಎರಡೂ ಗ್ರಹಗಳ ವಾತಾವರಣ ಬಿಸಿ ಮತ್ತು ತೇವಗೊಂಡಿತು. ಇದರಿಂದ ಜೀವ ಸಂಕುಲ ಇಲ್ಲಿ ಕುಡಿಯೊಡೆಯಿತು ಎಂದು ಅಧ್ಯಯನದಿಂದ ಕಂಡುಕೊಳ್ಳಲಾಯಿತು. ಭೂಮಿಗಿದ್ದ ಸೌಭಾಗ್ಯ ಮಂಗಳನಿಗೆ ಇರಲಿಲ್ಲ. ಭೂಮಿಗೆ ಇರುವಂತೆ ಮಂಗಳನಿಗೆ ಸೂರ್ಯನ ಕಿರಣದಿಂದ ಸಂರಕ್ಷಣೆ ಮಾಡಿಕೊಳ್ಳಲು ಗುರಾಣಿ ಇಲ್ಲ. ಹೀಗಾಗಿ ಅದರ ವಾತಾವರಣದಿಂದ ಈ ಅಂಶಗಳು ನಾಶವಾದವು ಎಂದು ಸಂಶೋಧನಾ ತಂಡದ ಮುಖ್ಯಸ್ಥರಾದ ಡಾ. ರಿಚರ್ಡ್ ಕೋರ್ಟ್ ಮತ್ತು ಪ್ರೊ. ಮಾರ್ಕ್ ಸೆಫ್ಟನ್ ಹೇಳಿದರು.

2009: ಹಿರಿಯ ಜಾನಪದ ಸಾಹಿತಿ, ರಾಜ್ಯೋತ್ಸವ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ನಿಂಗಣ್ಣ ಸಣ್ಣಕ್ಕಿ (70) ಈದಿನ ಗೋಕಾಕದಲ್ಲಿ ಅನಾರೋಗ್ಯದಿಂದಾಗಿ ನಿಧನರಾದರು. ನಿಂಗಣ್ಣ ಸಣ್ಣಕ್ಕಿ 40ಕ್ಕೂ ಹೆಚ್ಚು ಜಾನಪದ ಕೃತಿಗಳನ್ನು ರಚಿಸಿದ್ದರು. ಶಿಕ್ಷಕರಾಗಿ, ಪ್ರೌಢಶಾಲಾ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗೆ ಮೂರು ಬಾರಿ ಸದಸ್ಯರಾಗಿದ್ದರು. ಸಣ್ಣಕ್ಕಿ ಅವರಿಗೆ 1982ರಲ್ಲಿ ಪಿಎಚ್‌ಡಿ ಪದವಿ, 1983ರಲ್ಲಿ ಜಾನಪದ ಕೇಂದ್ರ ಪ್ರಶಸ್ತಿ, 1987ರಲ್ಲಿ ಕರ್ನಾಟಕ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, 1989ರಲ್ಲಿ ಮಾದರಿ ಶಿಕ್ಷಕ ರಾಷ್ಟ್ರ ಪ್ರಶಸ್ತಿ, 1996ರಲ್ಲಿ ಮೈಸೂರು ಜಾನಪದ ಪ್ರಶಸ್ತಿ, 1997ರಲ್ಲಿ ಬೆಳಗಾವಿ ರಾಜ್ಯೋತ್ಸವ ಗೌರವ, 2002ರಲ್ಲಿ ಅಂತರರಾಷ್ಟ್ರೀಯ ಸಂಸ್ಥೆ ನೀಡುವ ವಿಶ್ವ ಮಾನವ ಪ್ರಶಸ್ತಿ ಮತ್ತು 2003 ರಲ್ಲಿ 'ಜಾನಪದ ತರಂಗಗಳು' ಕೃತಿಗೆ ಸಿರಿಗನ್ನಡ ಪ್ರಶಸ್ತಿ ಲಭಿಸಿದ್ದವು.

2008: ತೈಲ ಬೆಲೆ ಏರಿಕೆಯಿಂದ ಆಗುವ ದುಷ್ಪರಿಣಾಮಗಳಿಂದ ಗ್ರಾಹಕರಿಗೆ ಸಂಪೂರ್ಣ ರಕ್ಷಣೆ ಒದಗಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ಹೇಳಿದರು. ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳಿಂದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ತೀವ್ರ ದಾಳಿಗೆ ತುತ್ತಾದ ಪ್ರಧಾನಿ ಅಸ್ಸೋಚೆಮ್ ವಾರ್ಷಿಕ ಸಭೆಯಲ್ಲಿ ಮಾತನಾಡುತ್ತಾ ಈ ಅಸಹಾಯಕತೆ ವ್ಯಕ್ತ ಪಡಿಸಿದರು. 'ಸಬ್ಸಿಡಿ ಮೊತ್ತ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿಲ್ಲ, ಅಥವಾ ಉತ್ಪನ್ನಗಳು ಮತ್ತು ತೈಲ ಬೆಲೆಗಳ ವಿಶ್ವ ವ್ಯಾಪಿ ಉಬ್ಬರದಿಂದ ಆಗುವ ದುಷ್ಪರಿಣಾಮಗಳಿಂದ ಸಂಪೂರ್ಣವಾಗಿ ರಕ್ಷಿಸಲೂ ಸರ್ಕಾರಕ್ಕೆ ಸಾಧ್ಯವಿಲ್ಲ' ಎಂದು ಅವರು ಹೇಳಿದರು.

2008: ಒಂದೂವರೆ ವರ್ಷಕ್ಕೂ ಹಿಂದೆ ಅಪಹೃತಳಾಗಿದ್ದ ಮಹಿಳೆಯೊಬ್ಬಳು ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಅವರ ಕಪಿಮುಷ್ಟಿಯಿಂದ ಪಾರಾಗಿ ಬಂದ ಘಟನೆ ಜಮ್ಮುವಿನಲ್ಲಿ ಈದಿನ ಘಟಿಸಿತು. ಹಿಜ್ಬುಲ್ ಉಗ್ರಗಾಮಿಗಳು 2006ರ ನವೆಂಬರ್ 17ರಂದು ಪರ್ವೀನ್ ಬೇಗಂ ಎಂಬ 24 ವರ್ಷದ ಮಹಿಳೆಯೊಬ್ಬಳನ್ನು ಭಾದೇರ್ವಾಹ ಪ್ರದೇಶದ ಬಡೋಸೊ ಗ್ರಾಮದಿಂದ ಅಪಹರಿಸಿದ್ದರು. ಪರ್ವೀನ್ ಕುಟುಂಬ ಸದಸ್ಯರು ಆಕೆ ಕಣ್ಮರೆಯಾಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದರು. ಸ್ವಯಂಘೋಷಿತ ಹಿಜ್ಬುಲ್ ಕಮಾಂಡರ್ ಮಂಝೂರ ಗನೀ ಆಕೆಯನ್ನು ಅಪಹರಿಸಿ, ನಂತರ ಸ್ವಯಂಘೋಷಿತ ಉಗ್ರಗಾಮಿ ಜಿಲ್ಲಾ ಕಮಾಂಡರ್ ಮತ್ತು ಹಣಕಾಸು ಮುಖ್ಯಸ್ಥ ಎಚ್.ಎಂ. ಶಮೀಮ್ ಥೂಲ್ ವಶಕ್ಕೆ ಒಪ್ಪಿಸಿದ್ದ. ಥೂಲ್ ಈ ವರ್ಷ ಏಪ್ರಿಲಿನಲ್ಲಿ ಹತನಾಗಿದ್ದ. ಈದಿನ ಉಗ್ರಗಾಮಿಗಳ ಕೈಸೆರೆಯಿಂದ ತಪ್ಪಿಸಿಕೊಂಡ ಬಳಿಕ ಪರ್ವೀನ್ ಬೇಗಂ ದೋಡಾ ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ಬಂದು ಸೇರಿಕೊಳ್ಳುವಲ್ಲಿ ಯಶಸ್ವಿಯಾದಳು.

2008: ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದಿನಲ್ಲಿ ಇರುವ ಡೆನ್ಮಾರ್ಕ್ ದೇಶದ ರಾಯಭಾರಿ ಕಚೇರಿಯ ಎದುರು ಭಾರಿ ಸ್ಫೋಟ ಸಂಭವಿಸಿ ಎಂಟು ಮಂದಿ ಮೃತರಾಗಿ ಇತರ 6 ಮಂದಿ ಗಾಯಗೊಂಡರು.

2008: ಕೇಂದ್ರ ಕಾನೂನು ಸಚಿವಾಲಯವು ಗುರ್ಜರರ ಮೀಸಲಾತಿಯ ಚೆಂಡನ್ನು (ವಿಷಯವನ್ನು) ರಾಜಸ್ಥಾನ ಸರ್ಕಾರದ ಅಂಗಳಕ್ಕೆ ವಾಪಸ್ ತಳ್ಳಿತು. ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡುವ ಅವಶ್ಯಕತೆ ಕುರಿತು ಆಯಾ ರಾಜ್ಯಗಳೇ ನಿರ್ಧಾರ ಕೈಗೊಳ್ಳಬೇಕೆಂದು ಅದು ತಿಳಿಸಿತು. ಗುರ್ಜರರಿಗೆ ಬುಡಕಟ್ಟು ವರ್ಗದ (ಎಸ್ಟಿ) ಸ್ಥಾನಮಾನ ನೀಡಿ ಶೇ 4ರಿಂದ 6ರಷ್ಟು ಮೀಸಲಾತಿ ಕೋಟಾ ಒದಗಿಸಲು ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಪ್ರಧಾನಿಗೆ ಮನವಿ ಮಾಡಿದ್ದರು. ತಮ್ಮನ್ನು ಪರಿಶಿಷ್ಟ ವರ್ಗ ಎಂಬುದಾಗಿ ಘೋಷಿಸಿ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ರಾಜಸ್ಥಾನ, ಹರಿಯಾಣ, ಉತ್ತರಪ್ರದೇಶ, ದೆಹಲಿ ಮುಂತಾದ ಕಡೆ ಗುರ್ಜರರು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 43 ಮಂದಿ ಮೃತರಾಗಿದ್ದರು.

2008: ಗುರುವಾಯೂರಿನ ಖ್ಯಾತ ಶ್ರೀಕೃಷ್ಣ ದೇವಾಲಯದ ಗರ್ಭಗುಡಿಯಲ್ಲಿ ಬ್ಲೇಡಿನ ತುಂಡೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ದೇಗುಲವನ್ನೇ ಸಂಪೂರ್ಣವಾಗಿ ಶುದ್ಧೀಕರಿಸಿದ ಪ್ರಸಂಗ ನಡೆಯಿತು. ಈ ಬ್ಲೇಡು ದೇವರ ಅಲಂಕಾರಕ್ಕೆಂದು ಬಳಸುವ ಹೂವಿನ ಹಾರದ ಮೂಲಕ ಗರ್ಭಗುಡಿ ಸೇರಿರಬಹುದೆಂದು ಶಂಕಿಸಲಾಯಿತು. ದೇವಾಲಯಕ್ಕೆ ವಂಶಪಾರಂಪರ್ಯವಾಗಿ ಹೂವಿನ ಹಾರ ಸರಬರಾಜು ಮಾಡುವ 17 ಕುಟುಂಬಗಳಿವೆ. ಇವರು ಪೂಜೆಗೆ ಹೂವು ಹೊತ್ತು ತರುವ ಪ್ಲಾಸ್ಟಿಕ್ ಮತ್ತು ಗೋಣಿ ಚೀಲಗಳನ್ನು ಕೊಯ್ಯಲು ಬ್ಲೇಡ್ ಬಳಸಲಾಗುತ್ತದೆ. ಇದರೊಂದಿಗೆ ಬ್ಲೇಡ್ ಗರ್ಭಗುಡಿ ಸೇರಿರಬಹುದು ಎಂದು ಶಂಕಿಸಲಾಯಿತು.

2008: ತೀವ್ರ ಸ್ವರೂಪದ ವಿದ್ಯುತ್ ಸಮಸ್ಯೆ ಎದುರಿಸಿದ ಪಾಕಿಸ್ಥಾನವು ಹಗಲು ಹೊತ್ತನ್ನು ಒಂದು ಗಂಟೆ ಕಾಲ ವಿಸ್ತರಿಸಲು ನಿರ್ಧರಿಸಿತು. `ಹಗಲಿನ ಸಮಯ ಉಳಿಸುವ' (ಡಿಎಸ್ಟಿ) ಪರಿಕಲ್ಪನೆಯನ್ನು ದೇಶದಾದ್ಯಂತ ಜಾರಿಗೆ ತರಲಾಯಿತು. ಹಿಂದಿನ ದಿನ ಮಧ್ಯರಾತ್ರಿಯಲ್ಲಿ ಗಡಿಯಾರವನ್ನು ಒಂದು ಗಂಟೆಯಷ್ಟು ಮುಂದಕ್ಕೆ ಹಾಕಲಾಯಿತು.

2008: ತುರ್ಕ್ಮೆನಿಸ್ಥಾನದ ಗಡಿಗೆ ಹೊಂದಿಕೊಂಡ ಆಫ್ಘಾನಿಸ್ಥಾನದ ಬದ್ಘಿನ್ಸ್ ಪ್ರಾಂತ್ಯದಲ್ಲಿ ನಡೆದ ನ್ಯಾಟೊ ವಾಯುದಾಳಿಯಲ್ಲಿ ಕನಿಷ್ಠ 50 ಜನ ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ಆಫ್ಘಾನ್ ಅಧಿಕಾರಿಗಳು ತಿಳಿಸಿದರು. ಹಿಂದಿನ ದಿನ ರಾತ್ರಿ ಸುಮಾರು 300ರಿಂದ 400 ತಾಲಿಬಾನ್ ಉಗ್ರರು ಬಾಲಾ ಮುರ್ಫಾಬ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ನ್ಯಾಟೊ ವಾಯು ದಾಳಿ ನಡೆಸಿದಾಗ 50 ಜನ ಉಗ್ರರು ಮೃತರಾದರು.

2008: ಹತ್ತುವರ್ಷಗಳ ಹಿಂದೆ ಪಾಕಿಸ್ಥಾನದ ಗಡಿ ಪ್ರದೇಶದೊಳಗೆ ಆಕಸ್ಮಿಕವಾಗಿ ನುಸುಳಿ ಅಲ್ಲಿನ ಜೈಲಿನಲ್ಲಿ ಬಂಧನದಲ್ಲಿದ್ದ ಜಮ್ಮುವಿನ ಯುವಕ ಮಂಗಲ್ ಸಿಂಗ್ನನ್ನು ಬಿಡುಗಡೆ ಮಾಡಲಾಯಿತು. ಆತ ಸುರಕ್ಷಿತವಾಗಿ ಮನೆಸೇರಿದ. 1997ರ ಫೆಬ್ರುವರಿ 17ರಂದು ಈತ ಪಾಕ್ ವಶವಾಗಿದ್ದ.

2008: ವೈದ್ಯಕೀಯ ಪ್ರವಾಸೋದ್ಯಮ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ವೊಕಾರ್ಟ್ ಆಸ್ಪತ್ರೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿ `ಅಂತರರಾಷ್ಟ್ರೀಯ ಮಟ್ಟದ ಉತ್ತಮ ಆಸ್ಪತ್ರೆ' ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವೆಬ್ಸೈಟ್ ಮೂಲಕ ರೋಗಿಗಳಿಗೆ ಮಾಹಿತಿ ನೀಡುವ ವಿಷಯದಲ್ಲಿ ಮಾಡಿರುವ ಸಾಧನೆಯನ್ನು ಮೆಚ್ಚಿ ಅಮೆರಿಕದಲ್ಲಿ ನಡೆದ ವಿಶ್ವ ಆರೋಗ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು ಎಂದು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಶಾಲ ಬಾಲಿ ಅವರು ತಿಳಿಸಿದರು.

2008: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನತಾದಳ (ಯು) ಸೋಲಿಗೆ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಸೋಮಶೇಖರ್ ರಾಜೀನಾಮೆ ನೀಡಿದರು. ತೆರವಾದ ಈ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯ ಡಾ. ಎಂ.ಪಿ.ನಾಡಗೌಡ ಅವರನ್ನು ನೇಮಕ ಮಾಡಲಾಯಿತು.

2008: ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಸಾಲ ಯೋಜನೆಯ ಅನುಷ್ಠಾನಕ್ಕೆ ನೀಡುವ `ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿ-1'ಯನ್ನು ರಾಜ್ಯದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಸತತವಾಗಿ ಮೂರನೇ ಬಾರಿಗೆ ಪಡೆದುಕೊಂಡಿತು.

2008: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಕೇಂದ್ರ ಭೂ ಸಾರಿಗೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಸಕಲೇಶಪುರದಲ್ಲಿ ಹಸಿರು ನಿಶಾನೆ ತೋರಿಸಿದರು. ಭಾರೀ ವಾಹನಗಳ ಸಂಚಾರದಿಂದ ಸಂಪೂರ್ಣವಾಗಿ ಹಾಳಾಗಿದ್ದ ಶಿರಾಡಿಘಾಟಿ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಕಳೆದ ನವೆಂಬರ್ 14 ರಿಂದ ಈ ಮಾರ್ಗದ ಸಂಚಾರ ನಿರ್ಬಂಧಿಸಲಾಗಿತ್ತು.

2007: 1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ನಾಪತ್ತೆಯಾದ ತಮ್ಮ ಕುಟುಂಬದ ಸದಸ್ಯರನ್ನು ಹುಡುಕುವ ಸಲುವಾಗಿ ಭಾರತದಿಂದ ಬಂದ ಹಲವಾರು ಯೋಧರ ಕುಟುಂಬಗಳು ಪಾಕಿಸ್ಥಾನದ ಜೈಲಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದವು.

2007; ಪಾಕ್ ಸರ್ಕಾರ ಹೇರಿದ ನಿಷೇಧವನ್ನು ಉಲ್ಲಂಘಿಸಿ ಪಾಕಿಸ್ಥಾನಿ ಟಿವಿ ಚಾನೆಲ್ಲುಗಳು ಅಮಾನುತುಗೊಂಡ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಅವರ ಚಲನವಲನದ ನೇರ ಪ್ರಸಾರ ಮಾಡಿದವು.

2006: ಆನ್ ಲೈನ್ ಲಾಟರಿ ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ತಳ್ಳಿಹಾಕಿತು. 2004ರ ಜುಲೈ 29ರಂದು ಧರ್ಮಸಿಂಗ್ ಸರ್ಕಾರವು ಆನ್ ಲೈನ್ ಲಾಟರಿಯನ್ನು ರದ್ದು ಪಡಿಸಿತ್ತು.

2006: ಭೂಗತ ದೊರೆ ದಾವೂದ್ ಇಬ್ರಾಹಿಂನನ್ನು `ವಿದೇಶಿ ಮಾದಕ ವಸ್ತುಗಳ ಜಾಲದ ಪ್ರಮುಖ ಅಪರಾಧಿ' ಎಂದು ಅಮೆರಿಕ ಘೋಷಿಸಿತು.

2006: ಬಿಜೆಪಿ ಮುಖಂಡ ಪ್ರಮೋದ ಮಹಾಜನ್ ಅವರು ಅಕಾಲ ಮೃತ್ಯುವಿಗೆ ಈಡಾಗಿ ಸರಿಯಾಗಿ ಒಂದು ತಿಂಗಳ ನಂತರ ಅವರ ಪುತ್ರ ರಾಹುಲ್ ವಿಷಾಹಾರ ಸೇವನೆಯ ಪರಿಣಾಮವಾಗಿ ಅಸ್ವಸ್ಥಗೊಂಡರು. ಮೂವರು ಆಗಂತುಕರ ಜೊತೆಗೆ ಭೋಜನಕೂಟದಲ್ಲಿ ಪಾಲ್ಗೊಂಡ ಬಳಿಕ ಅವರು ಅಸ್ವಸ್ಥರಾಗಿದ್ದು ಅವರ ಜೊತೆಗೇ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಪ್ರಮೋದ ಮಹಾಜನ್ ಅವರ ಕಾರ್ಯದರ್ಶಿ ವಿವೇಕ ಮೊಯಿತ್ರಾ ಜೂನ್ 1ರ ರಾತ್ರಿ 3 ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಮೃತರಾದರು.

2006: ಭಾರತೀಯ ಚಿತ್ರರಂಗದಲ್ಲಿ ಮಾಡಿದ ಸಾಧನೆಗಾಗಿ ಖ್ಯಾತ ಚಿತ್ರನಟಿ ಆಶಾ ಪರೇಖ್ ಅವರು ದುಬೈಯಲ್ಲಿ ನಡೆಯುವ ಏಳನೇ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭದ `ಐಐಎಫ್ಎ ಪ್ರಶಸ್ತಿ-2006' ಗೆ ಆಯ್ಕೆಯಾದರು. `ಚಿತ್ ಚೋರ್', `ಅಮೃತ್' ಮತ್ತು `ಅಖೇಲಾ'ದಂತಹ ಭಾರತೀಯ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಸಲ್ಲಿಸಿದ ಕಾಣಿಕೆಗಾಗಿ ಸ್ಕ್ರಿಪ್ಟ್ ಮತ್ತು ಸಂಭಾಷಣೆ ರಚನೆಕಾರ ಒ.ಪಿ. ದತ್ತ ಮತ್ತು ಸಿನಿಮಾಟೋಗ್ರಾಫರ್ ಕೆ.ಕೆ. ಮೆನನ್ ಅವರನ್ನೂ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. `ಅರುವತ್ತರ ದಶಕದ ನಾಟ್ಯರಾಣಿ' ಎಂದೇ ಖ್ಯಾತಿ ಪಡೆದ ಆಶಾ ಪರೇಖ್ ಅವರನ್ನು ಚಿತ್ರನಟಿ, ನಿರ್ಮಾಪಕಿ ಹಾಗೂ ಭಾರತೀಯ ಚಲನಚಿತ್ರ ಸೆನ್ಸಾರ್ ಮಂಡಳಿಯ ಮೊತ್ತ ಮೊದಲ ಮಹಿಳಾ ಅಧ್ಯಕ್ಷರಾಗಿ ಚಿತ್ರರಂಗಕ್ಕೆ ನೀಡಿದ ಕಾಣಿಕೆಗಾಗಿ ಸರ್ವಾನುಮತದಿಂದ `ಪ್ರಶಸ್ತಿ'ಗೆ ಆರಿಸಲಾಯಿತು.

1999: ಭೂತಾನ್ ದೇಶಕ್ಕೆ ಟಿವಿ ಬಂತು.

1967: ಪ್ರಗತಿಶೀಲ ಮನೋಭಾವದ ಕಲಾವಿದ ಡಾ. ಶಿವಾನಂದ ಬಂಟನೂರು ಅವರು ಹನುಮಂತರಾಯ- ಶಾಂತಾಬಾಯಿ ದಂಪತಿಯ ಮಗನಾಗಿ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಜನಿಸಿದರು.

1966: ಅಮೆರಿಕದ ಬಾಹ್ಯಾಕಾಶ ನೌಕೆ `ಸರ್ವೇಯರ್' ಚಂದ್ರನ ಮೇಲೆ ಇಳಿಯಿತು.

1957: ಕಲಾವಿದ ಬಾಲಚಂದ್ರ ನಾಕೋಡ್ ಜನನ.

1953: ಕಲಾವಿದ ಮಹಾದೇವಪ್ಪ ಎಂ.ಸಿ. ಜನನ.

1953: ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಬ್ರಿಟನ್ನಿನ ರಾಣಿ ಎರಡನೇ ಎಲಿಜಬೆತ್ ಕಿರೀಟ ಧಾರಣೆ ನಡೆಯಿತು. ಆಕೆಯ ತಂದೆ ದೊರೆ ಆರನೇ ಜಾರ್ಜ್ ಮೃತನಾದ 16 ತಿಂಗಳುಗಳ ಬಳಿಕ ಈ ಕಿರೀಟಧಾರಣೆ ಕಾರ್ಯಕ್ರಮ ನಡೆಯಿತು. ಪ್ರಖರ ಬಿಸಿಲಿನ (ದೀರ್ಘ ಹಗಲಿನ) ದಿನವಾದ್ದರಿಂದ ಕಿರೀಟಧಾರಣೆಗೆ ಉತ್ತಮ ಎಂದು ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅದೇ ದಿನ ಮಳೆ ಸುರಿಯಿತು.

1951: ಕಲಾವಿದ ಸೀತಾರಾಮ ಶೆಟ್ಟಿ ಜಿ. ಜನನ.

1943: ಅಮೆರಿಕದ ಖ್ಯಾತ ಸಿವಿಲ್ ಎಂಜಿನಿಯರ್ ಜಾನ್ ಫ್ರಾಂಕ್ ಸ್ಟೀವನ್ಸ್ ತಮ್ಮ 90ನೇ ವಯಸ್ಸಿನಲ್ಲಿ ಮೃತರಾದರು. ಪನಾಮಾ ಕಾಲುವೆ ಯೋಜನೆಯ ಮುಖ್ಯ ಎಂಜಿನಿಯರ್ ಆಗಿದ್ದ ಇವರು ಈ ಕಾಲುವೆ ಯೋಜನೆ ಯಶಸ್ಸಿಗೆ ಅಡಿಗಲ್ಲು ಹಾಕಿದವರು.

1929: ಹಾಸ್ಯ ಸಾಹಿತಿ, ಕಾದಂಬರಿಗಾರ್ತಿ ನುಗ್ಗೆಹಳ್ಳಿ ಪಂಕಜ ಅವರು ಎಸ್.ವಿ. ರಾಘವಾಚಾರ್- ಶಾಂತಮ್ಮ ದಂಪತಿಯ ಪುತ್ರಿಯಾಗಿ ಬೆಂಗಳೂರಿನಲ್ಲಿ ಈದಿನ ಜನಿಸಿದರು. ರಾತ್ರಿ ಹೊತ್ತಿನಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದ ಪಂಕಜ ಅವರು ರಚಿಸಿದ ಕೃತಿಗಳ ಸಂಖ್ಯೆ 40ಕ್ಕೂ ಹೆಚ್ಚು. ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಶ್ರೀರಸ ಪ್ರಶಸ್ತಿ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಲಿಪಿ ಪ್ರಾಜ್ಞೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1911: ಕಲಾವಿದ ಸಿ.ಟಿ. ಶೇಷಾಚಲಂ ಜನನ.

1904: ಜಾನಿ ವೀಸ್ ಮುಲ್ಲರ್ (1904-84) ಜನ್ಮದಿನ. ಅಮೆರಿಕ ಫ್ರೀಸ್ಟೈಲ್ ಈಜುಗಾರರಾದ ಇವರು ಐದು ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದಿದ್ದರು. ನಂತರ ಚಲನಚಿತ್ರ ನಟನಾಗಿ `ಟಾರ್ಜಾನ್' ಪಾತ್ರದ ಮೂಲಕ ಮಿಂಚಿದರು.

1897: ನ್ಯೂಯಾರ್ಕ್ ಜರ್ನಲ್ನಲ್ಲಿ ತಾನು ಮರಣ ಹೊಂದಿದ್ದೇನೆಂಬ ಸುದ್ದಿ ಓದಿ ಮಾರ್ಕ್ ಟ್ವೇನ್ `ಇದು ತೀರಾ ಅತಿಶಯೋಕ್ತಿಯ ವರದಿ' ಎಂದು ಪ್ರತಿಕ್ರಿಯೆ ನೀಡಿದ.

1882: ಇಟಲಿ ಏಕೀಕರಣದ ರೂವಾರಿ ಜೋಸೆಫ್ ಗ್ಯಾರಿಬಾಲ್ಡಿ ಈದಿನ ನಿಧನರಾದರು. ಇವರ ಹಲವಾರು ಸೇನಾ ದಂಡಯಾತ್ರೆಗಳು ಇಟಲಿ ಏಕೀಕರಣಕ್ಕೆ ನೆರವಾದವು. ಇವರು ಜನಿಸಿದ್ದು 1807ರ ಜುಲೈ 4ರಂದು.

No comments:

Post a Comment