Saturday, June 15, 2019

ಇಂದಿನ ಇತಿಹಾಸ History Today ಜೂನ್ 15

ಇಂದಿನ ಇತಿಹಾಸ History Today ಜೂನ್ 15
2019: ನವದೆಹಲಿ: ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಶೃಂಗದಿಂದ ಹಿಂದಿನ ರಾತ್ರಿಯಷ್ಟೇ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ   ನಡೆದ ನೀತಿ ಆಯೋಗದ ಸಭೆಯಲ್ಲಿ ಭಾರತೀಯ ಆರ್ಥಿಕತೆ ಕುರಿತ ತಮ್ಮ ಮುನ್ನೋಟವನ್ನು ಅನಾವರಣಗೊಳಿಸಿದರುಭಾರತವು ೨೦೨೪ರ ವೇಳೆಗೆ ೫೦೦೦ ಕೋಟಿ ಡಾಲರ್ ಆರ್ಥಿಕತೆಯಾಗಿ ರೂಪುಗೊಳ್ಳಬೇಕು ಎಂಬುದಾಗಿ ತಮ್ಮ ಬಯಕೆ ಎಂದು ಪ್ರಧಾನಿ ನುಡಿದರು.  2೦೨೪ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೆಯ ಅವಧಿ ಮುಕ್ತಾಯಗೊಳ್ಳುತ್ತದೆ.  ‘೨೦೨೪ರ ವೇಳೆಗೆ ಭಾರತವನ್ನು ೫೦೦೦ ಕೋಟಿ ಡಾಲರ್ ಆರ್ಥಿಕತೆಯಾಗಿ ರೂಪಿಸುವ ಗುರಿ ಒಂದು ಸವಾಲು. ಆದರೆ ರಾಜ್ಯಗಳ ಒಗ್ಗೂಡಿದ ಪ್ರಯತ್ನಗಳ ಮೂಲಕ ಸಾಧಿಸಲು ಸಾಧ್ಯವಿರುವಂತಹ ಸವಾಲು ಇದು ಎಂದು ಮೋದಿ ಅವರು ತಮ್ಮ ಪಕ್ಷವು ಮಹಾಚುನಾವಣೆಯಲ್ಲಿ ಪ್ರಚಂಡ ಜಯಗಳಿಸಿ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿದ ಬಳಿಕ ನಡೆದ ಮೊದಲ ನೀತಿ ಆಯೋಗದ ಸಭೆಯಲ್ಲಿ ನುಡಿದರು. ಆಯೋಗದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರವನ್ನು ಈಡೇರಿಸುವ ನಿಟ್ಟಿನಲ್ಲಿ ಆಯೋಗವು ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಹೇಳಿದರು. ತಮ್ಮ ಇತ್ತೀಚಿನ ಚುನಾವಣಾ ವಿಜಯದ ಬಳಿಕ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಪಕ್ಷದ ನೂತನ ಸಂಸದರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ತಮ್ಮಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಗೆಸಬ್ ಕಾ ವಿಶ್ವಾಸ್ ಘೋಷಣೆಯನ್ನೂ ಸೇರ್ಪಡೆ ಮಾಡಿದ್ದರು. ಬಿಜೆಪಿಗೆ ಮತನೀಡಿದವರಿಗಾಗಿ ಮಾತ್ರವೇ ಅಲ್ಲ, ಎಲ್ಲರಿಗಾಗಿ ಕೆಲಸ ಮಾಡಬೇಕು ಎಂದು ಅವರು ತಮ್ಮ ಸಂಸತ್ ಸದಸ್ಯರಿಗೆ ಸೂಚಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜೊತೆಗೆ ತೀವ್ರ ಘರ್ಷಣೆಗೆ ಇಳಿದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು  ಕಾಲೇಶ್ವರಂ ಎತ್ತು ನೀರಾವರಿ ಯೋಜನೆ ಉದ್ಘಾಟನೆ ಹಿನ್ನೆಲೆಯಲಿ ಕಾರ್ಯಮಗ್ನರಾದ ತೆಲಂಗಾಣದ ಮುಖ್ಯಮಂತ್ರಿ  ಕೆ. ಚಂದ್ರಶೇಖರ ರಾವ್ ಅವರು ನೀತಿ ಆಯೋಗದ ಸಭೆಗೆ ಹಾಜರಾಗಲಿಲ್ಲ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರೂ ಸಭೆಗೆ ಹಾಜರಾಗಲಿಲ್ಲ. ಅಮರೀಂದರ್ ಸಿಂಗ್ ಅವರು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಯಿತು.    ಇತ್ತೀಚಿನ ಲೋಕಸಭಾ ಚುನಾವಣೆಯನ್ನು ವಿಶ್ವದ ಅತಿದೊಡ್ಡ ಪ್ರಜಾತಾಂತ್ರಿಕ ಕವಾಯತು ಎಂಬುದಾಗಿ ನೆನಪಿಸಿದ ಪ್ರಧಾನಿ, ’ಈಗ ಪ್ರತಿಯೊಬ್ಬರೂ ಭಾರತದ ಅಭಿವೃದ್ಧಿಗಾಗಿ ದುಡಿಯಬೇಕಾದ ಸಮಯ ಎಂದು ಹೇಳಿದರು.   ಮಧ್ಯೆ, ನೀತಿ ಆಯೋಗದ ಸಭೆಗೆ ಮುಂಚಿತವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿದರುಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಪುದುಚೆರಿಯ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಸಭೆಯಲ್ಲಿ ಹಾಜರಿದ್ದರು ಎಂದು ಹೇಳಲಾಗಿದೆ. ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಬಳಿಕ ಸಭೆಗೆ ಆಗಮಿಸಿದರು. ಅವರು ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಜೊತೆಗೆ ಕೈಗೆತ್ತಿಕೊಳ್ಳಬೇಕಾದ ಪ್ರಸ್ತಾಪಿತ ಕಾರ್ಯಸೂಚಿ/ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಆಡಳಿತವಿರುವ ರಾಜ್ಯಗಳ ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ಹೇಳಿವೆ. ಬಡತನ, ನಿರುದ್ಯೋಗ, ಬರ, ಪ್ರವಾಹ, ಮಾಲಿನ್ಯ, ಭ್ರಷ್ಟಾಚಾರ ಮತ್ತು ಹಿಂಸೆ ಇತ್ಯಾದಿಗಳ ವಿರುದ್ಧ ಸಾಮೂಹಿಕ ಹೋರಾಟ ಸಾರುವ ಬಗ್ಗೆ ಪ್ರಧಾನಿ ಮಾತನಾಡಿದರು. ವೇದಿಕೆಯಲ್ಲಿನ ಪ್ರತಿಯೊಬ್ಬರೂ ೨೦೨೨ರ ವೇಳೆಗೆ ನವ ಭಾರತ ನಿರ್ಮಿಸುವ ಸಾಮಾನ್ಯ ಗುರಿಯನ್ನು ಹೊಂದಿದ್ದಾರೆ ಎಂದು ಪ್ರಧಾನಿ ನುಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸಾಧಿಸಬಹುದಾದ ಕಾರ್ಯಗಳಿಗೆ ಸ್ವಚ್ಛ ಭಾರತ ಅಭಿಯಾನ ಮತ್ತು  ಪಿಎಂ ಆವಾಸ್ ಯೋಜನೆಗಳನ್ನು ಪ್ರಧಾನಿ ಉದಾಹರಿಸಿದರು. ಪ್ರಗತಿಶೀಲ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ರಫ್ತು ರಂಗವು ಅತ್ಯಂತ ಮಹತ್ವಪೂರ್ಣವಾದದ್ದು ಎಂದು ಒತ್ತಿ ಹೇಳಿದ ಪ್ರಧಾನಿ, ತಲಾ ಆದಾಯ ಹೆಚ್ಚಳಕ್ಕಾಗಿ ಕೇಂದ್ರ ಮತ್ತು ರಾಜ್ಯಗಳು ರಫ್ತು ಹೆಚ್ಚಳ ನಿಟ್ಟಿನಲ್ಲಿ ಕೆಲಸಮಾಡಬೇಕು ಎಂದು ಹೇಳಿದರು. ಈಶಾನ್ಯ ರಾಜ್ಯಗಳು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ರಫ್ತು ಮಾಡಬಹುದಾದ ಹಲವಾರು ಸಂಪನ್ಮೂಲಗಳಿವೆ. ಅವುಗಳನ್ನು ಇನ್ನೂ ಮುಟ್ಟಿಯೇ ಇಲ್ಲ  ಎಂದು ಮೋದಿ ಹೇಳಿದರು. ರಾಜ್ಯ ಮಟ್ಟದಲ್ಲಿ ರಫ್ತು ಅಭಿವೃದ್ಧಿಗೆ ನೀಡುವ ಒತ್ತು ಆದಾಯ ಮತ್ತು ಉದ್ಯೋಗಳನ್ನು ವರ್ಧಿಸುತ್ತದೆ ಎಂದು ಪ್ರಧಾನಿ ನುಡಿದರು. ಬರ ಪರಿಸ್ಥಿತಿಯನ್ನು  ನಿಭಾಯಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಕರೆ ನೀಡಿದರು. ಹನಿ ನೀರಿನ ಮಹತ್ವ ಮತ್ತು ಹೆಚ್ಚು ಬೆಳೆ ಬೆಳೆಯಬೇಕಾದ ಅಗತ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು. ರೈತರ ಆದಾಯವನ್ನು ೨೦೨೨ರ ವೇಳೆಗೆ ದುಪ್ಪಟ್ಟು ಗೊಳಿಸುವುದಕ್ಕೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಇದನ್ನು ಸಾಧಿಸಲು ಮೀನುಗಾರಿಕೆ, ಪಶುಸಂಗೋಪನೆ, ತೋಟಗಾರಿಕೆ, ಹಣ್ಣುಗಳು ಮತ್ತು ತರಕಾರಿ ಬೆಳೆಗಳ ಬಗ್ಗೆ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಗುರಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲಾಗಿದ್ದು, ಅವುಗಳನ್ನು ೨೦೨೨ರ ವೇಳೆಗೆ ಸಾಧಿಸಬೇಕಾಗಿದ ಎಂದು ಮೋದಿ ನುಡಿದರು. ೨೦೨೫ರ ವೇಳೆಗೆ ಕ್ಷಯ ರೋಗವನ್ನು (ಟಿಬಿ) ಸಂಪೂರ್ಣವಾಗಿ ತೊಡೆದುಹಾಕುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಪ್ರಧಾನಿ ನುಡಿದರು. ಪ್ರತಿಯೊಂದು ರಾಜ್ಯವೂ ಸಮಗ್ರ ದೇಶೀ ಉತ್ಪನ್ನ (ಆಂತರಿಕ ಉತ್ಪನ್ನ- ಜಿಡಿಪಿ) ಹೆಚ್ಚಳದ ಗುರಿ ಮುಟ್ಟಲು ಜಿಲ್ಲಾ ಮಟ್ಟಗಳಿಂದಲೇ ಯತ್ನಗಳನ್ನು ನಡೆಸಬೇಕು ಎಂದು ಮೋದಿ ಹೇಳಿದರು.

2019: ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಿಲ್ಲದ ರಾಜಕೀಯ ಹಿಂಸಾಚಾರ ಹಾಗೂ ತೀವ್ರಗೊಂಡಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮುಷ್ಕರ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯವು  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸೂಚಿಸಿತು. ರಾಜ್ಯದ ರಾಜಕೀಯ ಹಿಂಸಾಚಾರಗಳು ಮತ್ತು ವೈದ್ಯರ ಮುಷ್ಕರ ಬಗ್ಗೆ ತುರ್ತು ವರದಿ ಕಳುಹಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯವು ಪ್ರತ್ಯೇಕ ಪತ್ರಗಳಲ್ಲಿ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ವಾರದ ಹಿಂದೆಯೂ ರಾಜ್ಯದಲ್ಲಿ ನಶಿಸುತ್ತಿರುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿತ್ತು. ವೈದ್ಯ ಮುಷ್ಕರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಹರ್ಷವರ್ಧನ್ ಅವರೂ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ವೈದ್ಯರ ನ್ಯಾಯೋಚಿತ ಬೇಡಿಕೆ ಈಡೇರಿಸುವಂತೆ ಸೂಚಿಸಿದರು. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಈದಿನ  ನಸುಕಿನಲ್ಲಿ ಇನ್ನೂ ಮೂವರ ಹತ್ಯೆಯೊಂದಿಗೆ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ೧೪ಕ್ಕೆ ಏರಿತು.  ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜಕೀಯ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ೧೬೦ಕ್ಕೆ ಏರಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತು. ಗುಂಡು ಹಾರಾಟ ಮತ್ತುನೂರಾರು ಬಾಂಬ್ಗಳ ಸದ್ದಿನಿಂದಾಗಿ ಗ್ರಾಮದ ನಸುಕಿನ ಶಾಂತಿ ಭಗ್ನಗೊಂಡಿತು ಎಂದು ಉತ್ತರ ಕೋಲ್ಕತದಿಂದ ೨೩೦ ಕಿಮೀ ದೂರದ ಹಲಶಾನಪರ ಗ್ರಾಮದ ನಿವಾಸಿಗಳು ಹೇಳಿದರು. ಖೈರುದ್ದೀನ್ ಶೇಖ್ (೪೦) ಮತ್ತು ಅವರ ಅಳಿಯಂದಿರಾದ ಸೊಹೆಲ್ ರಾಣಾ (೨೨) ಮತ್ತು ರಹೀದುಲ್ ಶೇಖ್ (೩೨) ಅವರನ್ನು ಕೊಲೆಗೈಯ್ಯಲಾಗಿದ್ದು, ಗರೈಮಾರಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸಬ್ಬೀರ್ ಶೇಖ್ (೪೦)ಅವರನ್ನು ಗುಂಡೇಟಿನ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹಿರಿಯ ಅಧಿಕಾರಿಗಳು ಹಂತಕರ ಶೋಧಕ್ಕಾಗಿ ದಾಳಿಗಳನ್ನು ನಡೆಸುತ್ತಿದ್ದಾರೆ. ಕೆಲವರನ್ನು ಪ್ರಶ್ನಿಸುವ ಸಲುವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲಾಲ್ ಬಾಗ್- ಮುರ್ಶಿದಾಬಾದ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಂಗ್ಶುಮಾನ್ ರಾಯ್ ಹೇಳಿದರು. ಇತ್ತೀಚಿನ ಸುತ್ತಿನ ಹತ್ಯೆಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಮೇಲಿನ ಒತ್ತಡವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆಗಳಿವೆ. ಸುದ್ದಿ ಸಂಸ್ಥೆಗಳ ವರದಿಗಳ ಪ್ರಕಾರ ರಾಜ್ಯದಲ್ಲಿ ಸಂಭವಿಸುತ್ತಿರುವ ರಾಜಕೀಯ ಹಿಂಸಾಚಾರಗಳನ್ನು ನಿಗ್ರಹಿಸಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎನ್ನಲಾಯಿತು. ಹಿಂಸಾತ್ಮಕ ಕೃತ್ಯಗಳ ಬಗ್ಗೆ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಲು ಕ್ರಮ ಕೈಗೊಳ್ಳುವಂತೆಯೂ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿತು. ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಂಭವಿಸುತ್ತಿರುವ ನಿರಂತರ ಹಿಂಸಾಚಾರದ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ತೀವ್ರ ಕಳವಳ ವ್ಯಕ್ತ ಪಡಿಸಿ ಪತ್ರವನ್ನು ಕಳುಹಿಸಿದೆ ಎಂದೂ ಮೂಲಗಳು ಹೇಳಿದವು.  ಈದಿನ ಬೆಳಗ್ಗೆ ಸಂಭವಿಸಿದ ಹತ್ಯೆಗಳ ಬಗ್ಗೆ ಕೂಡಾ ರಾಜಕೀಯ ದೂಷಣೆಯ ಆಟ ಶುರುವಾಯಿತು. ಈದಿನ  ಹತರಾದ ಮೂರೂ ಮಂದಿ ಮತ್ತು ಗಾಯಗೊಂಡಿರುವ ಸಬ್ಬೀರ್ ಶೇಖ್ ತಮ್ಮ ಪಕ್ಷದ ಕಾರ್ಯಕರ್ತರು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರತಿಪಾದಿಸಿತು. ಹಂತಕರಿಗೆ ಬಿಜೆಪಿ ಬೆಂಬಲವಿತ್ತು ಎಂದು ಅದು ಹೇಳಿತು. ಶನಿವಾರದ ಹತ್ಯೆಗಳಿಗೆ ಮಾರ್ಚ್ ೧೮ರಂದು ನಡೆದ ಅಲ್ತಾಬ್ ಶೇಖ್ (ಟಿಎಂಸಿಆಡಳಿತದ ಡೊಮ್ಕಾಲ್ ಪಂಚಾಯತ್ ಸಮಿತಿಯ ಅಧಿಕಾರಿ) ಹತ್ಯೆಯ ಸಂಬಂಧ ಇದೆ. ಕೊಲೆಯ ಕೆಲವು ಆರೋಪಿಗಳಿಗೆ ಇತ್ತೀಚೆಗೆ ಜಾಮೀನು ಲಭಿಸಿದ್ದು ಅವರು ಗ್ರಾಮಕ್ಕೆ ಮರಳಿದ್ದರು ಎಂದು ಟಿಎಂಸಿ ಹೇಳಿತು. ‘ಕಾಂಗ್ರೆಸ್ ಮತ್ತು ಎಡರಂಗದ ಗೂಂಡಾಗಳು ಮಹಾಚುನಾವಣೆಗೆ ಮುನ್ನ ಅಲ್ತಾಬ್ ಹತ್ಯೆ ನಡೆಸಿದ್ದರು. ಆದರೆ ಅವರು ಈಗ ಬಿಜೆಪಿಯಲ್ಲಿ ಇದ್ದಾರೆ. ಶನಿವಾರ ಬಿಜೆಪಿ ಬೆಂಬಲಿತ ಗೂಂಡಾಗಳು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಲು ವಿಫಲರಾದ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಕೊಂದಿದ್ದಾರೆ ಎಂದು ಟಿಎಂಸಿ ಸ್ವಾಮ್ಯದ ಡೊಂಕಾಲ್ ಮುನಿಸಿಪಾಲಿಟಿಯ ಅರ್ಧಯಕ್ಷ ಸೌಮಿಕ್ ಹುಸೈನ್ ಆಪಾದಿಸಿದರು. ಏನಿದ್ದರೂ,  ಈದಿನ ಕೊಲೆಗಳು ಟಿಎಂಸಿ ಒಳಗಿನ ಆಂತರಿಕ ಕಲಹದ ಫಲ ಎಂದು ಬಿಜೆಪಿ ಹೇಳಿತು.  ’ಡೊಂಕಾಲ್ನಲ್ಲಿ ಬಿಜೆಪಿ ಪ್ರಬಲ ಸಂಘಟನೆಯನ್ನು ಹೊಂದಿಲ್ಲ. ಬಾರಿಯ ಚುನಾವಣೆಯಲ್ಲಿ ಡೊಂಕಾಲ್ ನಲ್ಲಿ ನಮ್ಮ ಸಾಧನೆ ತೃಪ್ತಿಕರವಾಗಿರಲಿಲ್ಲ.  ಬೆಳಗ್ಗೆ ಸಂಭವಿಸಿದ ಕೊಲೆಗಳು ಟಿಎಂಸಿಯ ಆಂತರಿಕ ಕಲಹದ ಪರಿಣಾಮವಾಗಿ ಸಂಭವಿಸಿವೆ, ಕ್ರಿಮಿನಲ್ ತನಿಖಾ ಇಲಾಖೆಯ ತನಿಖೆಯಿಂದ ಇದು ಸಾಬೀತಾಗಲಿದೆ ಎಂದು ಬಿಜೆಪಿಯ ಮುರ್ಶಿದಾಬಾದ್ (ದಕ್ಷಿಣ) ಘಟಕದ ಉಪಾಧ್ಯಕ್ಷ ಹುಮಾಯೂನ್ ಕಬೀರ್ ಹೇಳಿದರು.

2019: ಕೋಲ್ಕತ: ಸಹೋದ್ಯೋಗಿ ಮೇಲಿನ ಮಾರಣಾಂತಿಕ ಹಲ್ಲೆಯಿಂದ ರೊಚ್ಚಿಗೆದ್ದು ಮುಷ್ಕರಕ್ಕೆ ಇಳಿದ ಪಶ್ಚಿಮ ಬಂಗಾಳದ ಕಿರಿಯ ವೈದ್ಯರಿಗೆ ಬೆಂಬಲ ಸೂಚಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಶಿಸ್ತುಕ್ರಮದ ಬೆದರಿಕೆಯನ್ನು ನಿರ್ಲಕ್ಷಿಸಿ ಕಲ್ಯಾಣಿಯ ಜೆಎನ್ಎಂ ಆಸ್ಪತೆಯ ಇನ್ನೂ ೩೪ ವೈದ್ಯರು ರಾಜೀನಾಮೆ ಸಲ್ಲಿಸಿದ್ದು ಕೋಲ್ಕತಾ ಮುನಿಸಿಪಲ್ ಕಾರ್ಪೋರೇಷನ್ ಆರೋಗ್ಯ ಕೇಂದ್ರದ ೧೪೪ ವೈದ್ಯರು ಸಾಂದರ್ಭಿಕ ರಜೆಯ ಮೇಲೆ ತೆರಳಲು  ತೀರ್ಮಾನಿಸಿದರು. ವೈದ್ಯರ ಮುಷ್ಕರ ಐದನೇ ದಿನಕ್ಕೆ ಕಾಲಿರಿಸಿದ್ದು, ಈದಿನ ಮಧ್ಯಾಹ್ನದವರೆಗೆ ೫೦೦ಕ್ಕೂ ಹೆಚ್ಚು ಸರ್ಕಾರಿ ವೈದ್ಯರು ರಾಜೀನಾಮೆ ಸಲ್ಲಿಸುವ ಮೂಲಕ ಮುಷ್ಕರ ನಿರತ ಕಿರಿಯ ವೈದ್ಯರ ಜೊತೆ ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿದರು. ಈ ಮಧ್ಯೆ ದೆಹಲಿಯ ಏಮ್ಸ್ ಮತ್ತು ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರು ಬಂಗಾಳದ ಮುಷ್ಕರ ನಿರತ ಸಹೋದ್ಯೋಗಿಗಳ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ೪೮ ಗಂಟೆಗಳ ಗಡುವು ನೀಡಿದ್ದು, ಗಡುವಿನ ಒಳಗೆ ಬೇಡಿಕೆ ಈಡೇರಿಸದೇ ಇದ್ದಲ್ಲಿ ದೆಹಲಿಯಲ್ಲೂ ಅನಿರ್ದಿಷ್ಟ ಮುಷ್ಕರ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.  ಜೂನ್ ೧೪ರಂದು ರಾಷ್ಟ್ರವ್ಯಾಪಿ ಚಳವಳಿಯಲ್ಲಿ ಪಾಲ್ಗೊಳ್ಳಲಾಗದ ದೆಹಲಿಯ ಹಲವಾರು ಸರ್ಕಾರಿ ಆಸ್ಪತ್ರೆಗಳ ನೂರಾರು ವೈದ್ಯರು ಈದಿನ  ಇಲ್ಲಿ ಪ್ರತಿಭಟನೆ ನಡೆಸಿ ಸೂಕ್ತ ಭದ್ರತೆಗಾಗಿ ಆಗ್ರಹಿಸಿ ತಮ್ಮ ಕೋಲ್ಕತ ಸಹೋದ್ಯೋಗಿಗಳು ಮುಂದಿಟ್ಟಿರುವ ಬೇಡಿಕೆಯನ್ನು ಈಡೇರಿಸದೇ ಇದ್ದಲ್ಲಿ ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಕೇಂದ್ರ ಸರ್ಕಾರಿ ಸ್ವಾಮ್ಯದ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಆರ್ಎಂಎಲ್ ಆಸ್ಪತ್ರೆ ಮತ್ತು ದೆಹಲಿ ಸರ್ಕಾರಿ ಸವಲತ್ತುಗಳಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆ ಮತ್ತು ಡಿಡಿಯು ಆಸ್ಪತ್ರೆಯ ವೈದ್ಯರು ಕೆಲಸ ಬಹಿಷ್ಕರಿಸಿ ಪ್ರತಿಭಟನೆಗಳನ್ನು ನಡೆಸಿದರು. ಮುಷ್ಕರ ನಿರತ ವೈದ್ಯರು  ಮಮತಾ ಬ್ಯಾನರ್ಜಿ ಅವರು ಭೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ತಮ್ಮ ಚಳವಳಿ ಹಿಂತೆಗೆದುಕೊಳ್ಳಲು ಆರು ಷರತ್ತುಗಳನ್ನು ಪ್ರಕಟಿಸಿದ್ದರು. ‘ಮುಖ್ಯಮಂತ್ರಿಯವರು ಸಭೆಗೆ ಬರುವಂತೆ ನೀಡಿದ ಆಹ್ವಾನದ ಪ್ರಕಾರ ನಾವು ಸಚಿವಾಲಯಕ್ಕೆ ಮಾತುಕತೆಗಾಗಿ ಹೋಗುವುದಿಲ್ಲ. ಮಮತಾ ಅವರು ನೀಲ್ ರತನ್ ಸಿಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಬರಬೇಕು ಮತ್ತು ಎಸ್ಎಸ್ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಹೇಳಿಕೆಗಾಗಿ ಭೇಷರತ್ ಕ್ಷಮೆ ಯಾಚಿಸಬೇಕು ಎಂದು ಕಿರಿಯ ವೈದ್ಯರ ಜಂಟಿ ವೇದಿಕೆಯ ವಕ್ತಾರ ಅರಿಂದಮ್ ದತ್ತ ಹೇಳಿದರು.  ‘ಅವರಿಗೆ ಎಸ್ಎಸ್ಕೆಎಂ ಹೋಗಲು ಸಾಧ್ಯವಿದ್ದರೆ, ಎನ್ಆರ್ಎಸ್ಗೂ  ಅವರು  ಬರಬಹುದು... ಇಲ್ಲದೇ ಇದ್ದಲ್ಲಿ ಚಳವಳಿ ಮುಂದುವರೆಯುತ್ತದೆ ಎಂದು ದತ್ತ ನುಡಿದರು.  ಎಸ್ಎಸ್ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ್ದ ಬ್ಯಾನರ್ಜಿ ಅವರು ಮುಷ್ಕರ ನಿರತ ವಿದ್ಯಾರ್ಥಿಗಳ  ’ನಮಗೆ ನ್ಯಾಯ ಬೇಕು  ಘೋಷಣೆಗಳ ಮಧ್ಯೆವೈದ್ಯಕೀಯ ಕಾಲೇಜುಗಳಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಈಗ ನಡೆಯುತ್ತಿರುವ ಚಳವಳಿಯು ಸಿಪಿಐ (ಎಂ) ಮತ್ತು  ಬಿಜೆಪಿಯ ಸಂಚು ಎಂಬುದಾಗಿ ಆಪಾದಿಸಿದ್ದರುಹಿಂದಿನ  ರಾತ್ರಿ ರಾಜ್ಯ ಸಚಿವಾಲಯದಲ್ಲಿ ಬ್ಯಾನರ್ಜಿ ಅವರು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಚಳವಳಿ ನಿರತ ಕಿರಿಯ ವೈದ್ಯರು ನಿರಾಕರಿಸಿದ್ದರು. ಇದು ತಮ್ಮ ಚಳವಳಿ ಒಡೆಯುವ ಆಟ ಎಂದು ಅವರು ಹೇಳಿದ್ದರು. ಎನ್ ಆರ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೂನ್ ೧೦ರ ಸೋಮವಾರ ರಾತ್ರಿ ಪರಿಬಾಹ ಮುಖ್ಯೋಪಾಧ್ಯಾಯ ಎಂಬ ಕಿರಿಯ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಬಳಿಕ ಕೋಲ್ಕತ ಮತ್ತು ಪಶ್ಚಿಮ ಬಂಗಾಳದ ಇತರ ಭಾಗಗಳಲ್ಲಿ ವೈದ್ಯರು ಬ್ಯಾನರ್ಜಿ ಮತ್ತು ಅವರ ಆಡಳಿತದ ಜೊತೆಗೆ ಘರ್ಷಣೆಗೆ ಇಳಿದಿದ್ದರು.  ಪರಿಬಾಹ ಅವರ ತಲೆ ಬುರುಡೆಗೆ  ಹಲ್ಲೆ ಕಾಲದಲ್ಲಿ ತೀವ್ರ ಏಟು ಬಿದ್ದಿತ್ತು. ಮಧ್ಯೆ, ಬ್ಯಾನರ್ಜಿ ಅವರು ಕೋಲ್ಕತದ ಇನ್ಸ್ಟಿಟ್ಯೂಟ್ ಆಫ್ ನ್ಯೂರಾಲಜಿಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯೋಪಾಧ್ಯಾಯ ಅವರನ್ನು ಭೇಟಿ ಮಾಡಿದರು. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ವಿವಿಧ ಸ್ಥಾನಿಕ ವೈದ್ಯರ ಸಂಘಗಳು (ಆರ್ಡಿಎ) ನೀಡಿದ್ದ ಕರೆಯ ಮೇರೆಗೆ ದೆಹಲಿಯ ಬಹುತೇಕ ಆಸ್ಪತ್ರೆಗಳ ವೈದ್ಯರು ಪಶ್ಚಿಮ ಬಂಗಾಳದ ವೈದ್ಯರಿಗೆ ಬೆಂಬಲ ವ್ಯಕ್ತ ಪಡಿಸಿ ನಡೆದ ರಾಷ್ಟ್ರವ್ಯಾಪಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಆಸ್ಪತ್ರೆಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನು (ಸಿಆರ್ಪಿಎಫ್) ನಿಯೋಜಿಸಬೇಕು ಎಂದೂ ಅವರು ಆಗ್ರಹಿಸಿದ್ದರು. ದೆಹಲಿಯಲ್ಲಿ ರಾಮ ಮನೋಹರ ಲೋಹಿಯಾ ಆಸ್ಪತ್ರೆ, ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜು, ಗುರು ತೇಗಬಹಾದುರ್ ಆಸ್ಪತ್ರೆ, ದೀನದಯಾಳ ಉಪಾಧ್ಯಾಯ ಆಸ್ಪತ್ರೆ, ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆ, ಅಂಬೇಡ್ಕರ್ ಆಸ್ಪತ್ರೆ, ಗುರುಗೋವಿಂದ ಸಿಂಗ್ ಆಸ್ಪತ್ರೆ, ಇಎಸ್ ವಾಸೈಧಾರಪುರ, ದಾದಾ ದೇವ್ ಶಿಶು ಚಿಕಿತ್ಸಾಲಯ, ಇನ್ಸ್ಟಿಟ್ಯೂಟ್ ಆಫ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸಸ್, ಹಿಂದುರಾವ್, ಭಗವಾನ್ ಮಹಾವೀರ, ಚಾಚಾ ನೆಹರೂ ಬಾಲ ಚಿಕಿತ್ಸಾಲಯ ಮತ್ತು ರೈಲ್ವೇ ಆಸ್ಪತ್ರೆಗಳಲ್ಲಿ ಈದಿನ ಮುಷ್ಕರ ನಡೆಯಿತು. ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಮತ್ತು ತೀವ್ರ ನಿಗಾ ಘಟಕ (ಐಸಿಯು) ಸೇವೆಗಳನ್ನು ಮಾತ್ರ ಒದಗಿಸಲಾಯಿತು.   ಮಧ್ಯೆ, ಹಿಂದಿನ ದಿನ  ಕೆಲಸ ಬಹಿಷ್ಕರಿಸಿದ್ದ ಏಮ್ಸ್ ಮತ್ತು ಸಫ್ದರ್ಜಂಗ್ ಆಸ್ಪತ್ರೆಯ ಸ್ಥಾನಿಕ ವೈದ್ಯರು ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳದ ಮುಷ್ಕರ ನಿರತ ವೈದ್ಯರ ಬೇಡಿಕೆ ಈಡೇರಿಸಲು ೪೮ ಗಂಟೆಗಳ ಗಡುವು ನೀಡಿದರು. ಗಡುವಿನ ಒಳಗೆ ಬೇಡಿಕೆ ಈಡೇರಿಸಲು ಮಮತಾ ಸರ್ಕಾರ ವಿಫಲವಾದಲ್ಲಿ ತಾವು ಅನಿರ್ದಿಷ್ಟ ಮುಷ್ಕರ ಆರಂಭಿಸುವುದಾಗಿ  ಈದಿನ ಸೇವೆ ಒದಗಿಸಿದ ಅವರು ಎಚ್ಚರಿಸಿದರು. ಪಶ್ಚಿಮ ಬಂಗಾಳ ಸರ್ಕಾರದ ಹಗೆತನದ ಮತ್ತು ತಪ್ಪೊಪ್ಪಿಕೊಳ್ಳದ ಧೋರಣೆಯನ್ನು ನಾವು ಖಂಡಿಸುತ್ತೇವೆ. ನ್ಯಾಯ ಸಿಗುವವರೆಗೂ ನಮ್ಮ ನವದೆಹಲಿಯ ಏಮ್ಸ್ನಲ್ಲಿನ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಅವರು ನುಡಿದರು.
.
2019: ನವದೆಹಲಿ: ಮೇಕೆದಾಟು ಯೋಜನೆಗೆ ಅನುಮತಿ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನ್ಯಾಯಾಧಿಕರಣ ಹಾಗೂ ಕೃಷ್ಣಾ ನ್ಯಾಯಾಧೀಕರಣದ ಆದೇಶಗಳ ಗೆಜೆಟ್ ಅಧಿಸೂಚನೆ ಹೊರಡಿಸಿ, ಶೀಘ್ರವೇ ಯೋಜನೆಗಳ ಅನುಷ್ಠಾನಕ್ಕೆ ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ದೆಹಲಿಯಲ್ಲಿ ನೀತಿ ಆಯೋಗದ ಸಭೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಲಶಕ್ತಿ ಖಾತೆ ಸಹಾಯಕ ಸಚಿವ ಗಜೇಂದ್ರ ಸಿಂಗ್ ಶೇಖಾ ವತ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ವಿವಿಧ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದರು.  ‘ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸುವ ಬಗ್ಗೆ ಸಂಬಂಧಿಸಿದ ರಾಜ್ಯಗಳೊಂದಿಗೆ ಸಭೆ ಕರೆದು ಚರ್ಚಿಸು ವುದಾಗಿ ಶೇಖಾವತ್ ಭರವಸೆ ನೀಡಿದರು. ಕರ್ನಾಟಕ ರಾಜ್ಯವು ಜನವರಿ ೧೮, ೨೦೧೯ ರಂದು ಕೇಂದ್ರ ಸರ್ಕಾರಕ್ಕೆ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಅನುಮೋ ದನೆಗಾಗಿ ಸಲ್ಲಿಸಿತ್ತು.. ಯೋಜನೆಯಿಂದ .೭೫ ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಬಳಸುವ ಹಾಗೂ ೪೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿ ಸುವ ಉದ್ದೇಶವಿ ದೆ.


2018: ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ  ‘ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಮುಖ್ಯಸಂಪಾದಕ ಶುಜಾತ್ ಬುಖಾರಿ ಅವರ ಹಂತಕರಲ್ಲಿ  ಒಬ್ಬ ವ್ಯಕ್ತಿ ಉಗ್ರ ನವೀದ್ ಜಾಟ್ ಎಂಬುದು ಬೆಳಕಿಗೆ ಬಂದಿದ್ದರೆ, ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಗುಂಡಿಕ್ಕಿ ಕೊಂದ ಘಟನೆಯ ಹಿಂದೆ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕೈವಾಡ ಇರುವ ಬಗ್ಗೆ ಸುಳಿವುಗಳು ಲಭಿಸಿದವು. ಸಿಂಗ್ ಕಾಶ್ಮೀರ್ ಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಅವರನ್ನು ಹತ್ಯೆಗೈಯಲು ಬೈಕಿನಲ್ಲಿ ಬಂದಿದ್ದ ಮೂವರ ಪೈಕಿ ಒಬ್ಬ ವ್ಯಕ್ತಿ ಪಾಕ್ ಉಗ್ರ ನವೀದ್ ಜಾಟ್ ಎಂದು ಗುಪ್ತಚರ ದಳ ಹೇಳಿತು. ನವೀದ್ ಜಾಟ್ ಕಾಶ್ಮೀರದಲ್ಲಿನ ಹಲವಾರು ಉಗ್ರ ದಾಳಿಗಳಲ್ಲಿ ಭಾಗಿಯಾಗಿದ್ದವ. ಹಾಗೆಯೇ ಆತ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹದ್ದುಗಣ್ಣಿಗೆ ಒಳಪಟ್ಟಿರುವ ಉಗ್ರನಾಗಿದ್ದಾನೆ. ಈತ ಈಚೆಗೆ ಶ್ರೀನಗರ ಆಸ್ಪತ್ರೆಯಿಂದ ಪರಾರಿಯಾಗಿದ್ದ.   ರೈಸಿಂಗ್ ಕಾಶ್ಮೀರ್ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಅವರ ಹತ್ಯೆ ನಡೆದ ಕೆಲವೇ ತಾಸುಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಶಂಕಿತ ಹಂತಕರ ಫೋಟೋಗಳನ್ನು ಬಿಡುಗಡೆ ಮಾಡಿದರು. ಪೊಲೀಸರಿಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೈಕಿನಲ್ಲಿ ಮೂವರು ಉಗ್ರರು ಇದ್ದು ಮುಂದೆ ಕುಳಿತವ ಕಪ್ಪು ಹೆಲ್ಮೆಟ್ ಧರಿಸಿದ್ದ. ಮಧ್ಯದಲ್ಲಿದ್ದವನ ಕೈಯಲ್ಲಿ ಬ್ಯಾಗ್ ಇದ್ದು ಆತ ಮುಖವನ್ನು ಮುಚ್ಚಿಕೊಂಡಿದ್ದ. ಈತನ ಬೆನ್ನ ಹಿಂದೆ ಕುಳಿತವ ಕಪ್ಪು ಮುಖವಾಡ ತೊಟ್ಟಿದ್ದ.  ಬುಖಾರಿ ಹಂತಕರನ್ನು ಸೆರೆ ಹಿಡಿಯಲು ಜನರು ತಮಗೆ ತಿಳಿದಿರುವ ಮಾಹಿತಿಯನ್ನು ಕೊಡುವಂತೆ ಪೊಲೀಸರು ಕೋರಿದ್ದರು.   ಪಾಕಿಸ್ತಾನದ ಮುಲ್ತಾನ್ ನಿವಾಸಿಯಾಗಿರುವ ಮೊಹಮ್ಮದ್ ನವೀದ್ ಜಾಟ್ ಈ ವರ್ಷ ಫೆ.೬ರಂದು ಶ್ರೀನಗರದಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಬಂಧಿತ ನವೀದ್ ಜಾಟನನ್ನು ವೈದ್ಯಕೀಯ ಪರೀಕ್ಷೆಗಾಗಿ ಒಯ್ಯುತ್ತಿದ್ದ ಇಬ್ಬರು ಪೊಲೀಸರನ್ನು ಆತನ ಸಂಗಡಿಗರು ಗುಂಡಿಕ್ಕಿ ಕೊಂದು ಜಾಟ್ ಪಲಾಯನಕ್ಕೆ ಸಹಕರಿಸಿದ್ದರು.   ಐಎಸ್ ಐ ಕೈವಾಡ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಲಾಂಪೋರಾದಲ್ಲಿ ಗುಂಡೇಟುಗಳಿಂದ ಜರ್ಜರಿತ ಶವವಾಗಿ ಪತ್ತೆಯಾಗಿರುವ ಅಪಹೃತ ಸೇನಾ ಜವಾನ ಔರಂಗಜೇಬ್ ಅವರ ಹತ್ಯೆಯ ಹಿಂದೆ ಕುಖ್ಯಾತ ಪಾಕ್ ಬೇಹು ಸಂಸ್ಥೆ ಐಎಸ್‌ಐ ಕೈವಾಡ ಇರುವ ಬಗ್ಗೆ ಭಾರತೀಯ ಗುಪ್ತಚರ ದಳಕ್ಕೆ ಕೆಲವು ಸೂಕ್ಷ್ಮ ಮಾಹಿತಿಗಳು ಲಭಿಸಿವೆ ಎಂದು ವರದಿಗಳು ತಿಳಿಸಿದವು. ಕಾಶ್ಮೀರ ವಿಮೋಚನೆಗಾಗಿ ಜಿಹಾದ್ ವಿಮೋಚನಾ ಸಮರದಲ್ಲಿ ಭಾಗಿಯಾಗಿರುವ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಿಂದ ಧೃತಿಗೆಟ್ಟಿರುವ ಪಾಕ್ ಐಎಸ್‌ಐ, ಭಾರತಕ್ಕೆ ಬುದ್ದಿ ಕಲಿಸುವ ಸಂಚು ಹೂಡಿ ಯೋಧ ಔರಂಜೇಬ್ ಅವರನ್ನು ಹತ್ಯೆಗೈದಿರುವುದಾಗಿ ಮಾಧ್ಯಮ ವರದಿಗಳು ಹೇಳಿದವು. ಯೋಧ ಔರಂಗಜೇಬ್ ಅವರು ಅಪಹರಣಕ್ಕೆ ಗುರಿಯಾದ ಕೆಲವೇ ತಾಸುಗಳಲ್ಲಿ ಶವವಾಗಿ ಪತ್ತೆಯಾಗಿದ್ದರು. ಔರಂಗಜೇಬ್ ಅವರು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಮೀರ್ ಟೈಗರ್ ನನ್ನು ಕಳೆದ ಮೇ ತಿಂಗಳಲ್ಲಿ ಗುಂಡಿನ ಘರ್ಷಣೆಯಲ್ಲಿ ಹತ್ಯೆಗೈದ ಭಾರತೀಯ ಸೇನಾ ತಂಡದ ಸದಸ್ಯರಾಗಿದ್ದರು.   ಕಾಶ್ಮೀರದಲ್ಲಿನ ವಿಮೋಚನಾ ಜಿಹಾದಿಗಳು ಭಾರತೀಯ ಸೇನಾ ಪಡೆಯ ಕಾರ್ಯಾಚರಣೆಗೆ ಬೆದರುವುದಿಲ್ಲ ಎಂಬ ಸಂದೇಶ ರವಾನಿಸುವ ಸಲುವಾಗಿ ಪಾಕ್ ಐಎಸ್‌ಐ ಯೋಧ ಔರಂಗಜೇಬ ಅವರ ಅಪಹರಣ ಮತ್ತು ಹತ್ಯೆಯನ್ನು ಆಯೋಜಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳಿದವು.

2018: ನ್ಯೂಯಾರ್ಕ್: ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ - ಸಿಐಎ ತನ್ನ ಜಾಗತಿಕ ವಾಸ್ತವಾಂಶಗಳು ಪುಸ್ತಕದ (ವರ್ಲ್ಡ್  ಫ್ಯಾಕ್ಟ್ ಬುಕ್) ಇತ್ತೀಚೆಗಿನ ಸಂಚಿಕೆಯಲ್ಲಿ ವಿಶ್ವಹಿಂದು ಪರಿಷದ್ ಮತ್ತು ಬಜರಂಗದಳವನ್ನು ಧಾರ್ಮಿಕ ಉಗ್ರ ಸಂಘಟನೆಗಳು ಎಂದು ಬಿಂಬಿಸಿದ್ದು, ಇದಕ್ಕೆ ಉಭಯ ಸಂಘಟನೆಗಳಿಂದಲೂ ವ್ಯಾಪಕ ಪ್ರತಿರೋಧ ವ್ಯಕ್ತವಾಯಿತು.  ವಿಶ್ವ ಹಿಂದೂ ಪರಿಷದ್ ಮತ್ತು  ಬಜರಂಗದಳ ರಾಜಕೀಯದಲ್ಲಿ ತೊಡಗುವ ಅಥವಾ ರಾಜಕೀಯ ಒತ್ತಡವನ್ನು ಉಂಟುಮಾಡುವ ಸಂಘಟನೆಗಳು ಆದರೆ ಅದರ ನಾಯಕರು ಶಾಸಕಾಂಗ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಅಮೆರಿಕ ಸರ್ಕಾರದ ಗುಪ್ತಚರ ವಿಭಾಗದ ಸಂಸ್ಥೆಯಾಗಿರುವ  ಸಿಐಎ ತಿಳಿಸಿತು.  ‘ಸಿಐಎ ವರದಿ ಸುಳ್ಳು ಎಂಬುದಾಗಿ ಹೇಳಿರುವ ವಿಶ್ವ ಹಿಂದೂ ಪರಿಷದ್ ವಕ್ತಾರ ವಿನೋದ ಬನ್ಸಲ್ ಅವರು ’ಈ ವಿಚಾರದಲ್ಲಿ ಭಾರತವು ಮಧ್ಯಪ್ರವೇಶ ಮಾಡಬೇಕು ಮತ್ತು ಅಮೆರಿಕದ ಜೊತೆಗೆ ಸಿಐಎ ವರದಿ ಬಗ್ಗೆ ಪ್ರಶ್ನಿಸಬೇಕು. ಸಿಐಎ ವರದಿಯಲ್ಲಿನ ತನ್ನ ತಪ್ಪು ಮಾಹಿತಿಗಾಗಿ  ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದರು.  ಅಮೆರಿಕದ ಗುಪ್ತಚರ ಸಂಸ್ಥೆಯು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್), ಹುರಿಯತ್ ಕಾನ್ಫರೆನ್ಸ್ ಮತ್ತು ಜಮಾತ್ ಉಲೇಮಾ-ಇ-ಹಿಂದ್ ಸಂಘಟನೆಗಳ ಬಗೆಗೂ ಪ್ರಸ್ತಾಪಿಸಿ ಇವು ಭಾರತದಲ್ಲಿ ರಾಜಕೀಯ ಒತ್ತಡ ನಿರ್ಮಿಸುವ ಸಂಘಟನೆಗಳು ಎಂದು ಹೇಳಿತು.  ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ’ರಾಷ್ಟ್ರವಾದಿ ಸಂಘಟನೆ ಎಂಬುದಾಗಿ ಹೇಳಿರುವ ಸಿಐಎ, ಇದು ರಾಜಕೀಯ ಒತ್ತಡ ತರುವ ಪಾತ್ರ ವಹಿಸುತ್ತದೆ ಎಂದು ಬಣ್ಣಿಸಿತು.   ಹುರಿಯತ್ ಕಾನ್ಫರೆನ್ಸ್‌ನ್ನು ’ಪ್ರತ್ಯೇಕತಾವಾದಿ ಸಂಘಟನೆ ಎಂಬುದಾಗಿ ಕರೆದಿರುವ ಅಮೆರಿಕದ ಗುಪ್ತಚರ ಸಂಸ್ಥೆಯು ಜಮಾತ್ ಉಲೆಮಾ -ಇ-ಹಿಂದ್‌ನ್ನು ’ಧಾರ್ಮಿಕ ಸಂಘಟನೆ ಎಂಬುದಾಗಿ ಹೇಳಿತು.  ಸಿಐಎ ಪ್ರತಿವರ್ಷವೂ ಅಮೆರಿಕ ಸರ್ಕಾರಕ್ಕೆ ಒಂದು ದೇಶದ ಬಗ್ಗೆ ಇಲ್ಲವೇ ವಿವಾದದ ಬಗ್ಗೆ ಗುಪ್ತಚರ ಅಥವಾ ವಾಸ್ತವಿಕ ಉಲ್ಲೇಖ ವರದಿಗಳನ್ನು ನೀಡುತ್ತದೆ. ಇದರಲ್ಲಿ ಇತಿಹಾಸ, ಜನತೆ, ಸರ್ಕಾರ, ಆರ್ಥಿಕತೆ, ಶಕ್ತಿ, ಭೌಗೋಳಿಕತೆ, ಸಂವಹನ, ಸಾರಿಗೆ, ಮಿಲಿಟರಿ, ಮತ್ತು ರಾಷ್ಟ್ರವ್ಯಾಪಿ ವಿಷಯಗಳು ಇರುತ್ತವೆ.  ಸಂಸ್ಥೆಯು ೧೯೬೨ರಿಂದ ಇಂತಹ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ಒದಗಿಸುವ ಕೆಲಸ ಮಾಡುತ್ತಿದೆ. ಆದರೆ ೧೯೭೫ರಲ್ಲಿ ಮಾತ್ರ ಅದನ್ನು ಬಹಿರಂಗ ಪಡಿಸಿತ್ತು.

2018: ನಾಗಪುರ: ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯ ಮೂವರು ಶಂಕಿತ ಸದಸ್ಯರನ್ನು ಭದ್ರತಾ ಪಡೆಗಳು ದಕ್ಷಿಣ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಗುಂಡಿಟ್ಟು ಹತ್ಯೆಗೈದವು. ಚಿಂಟಾಗುಫಾ ಪ್ರದೇಶದಲ್ಲಿ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಗುಂಡಿನ ಘರ್ಷಣೆ ನಡೆಯಿತು.  ಸುಕ್ಮಾ ಜಿಲ್ಲಾ ಮೀಸಲು ಗಾರ್ಡ್ ಮತ್ತು ಛತ್ತೀಸ್ ಗಢ ವಿಶೇಷ ಕಾರ್ಯಪಡೆ ಮಾವೋವಾದಿಗಳ ವಿರುದ್ಧ ಜಂಟಿ ಕಾರ್ರ್ಯಾಚರಣೆ ಆರಂಭಿಸಿದಾಗ ಈ ಘರ್ಷಣೆ ನಡೆಯಿತು. ಮಾವೋವಾದಿ ನಕ್ಸಲೀಯರ ವಿರುದ್ಧದ ಕಾರ್‍ಯಾಚರಣೆ ಇನ್ನು ಮುಂದುವರೆದಿದೆ ಎಂದು ವರದಿಗಳು ತಿಳಿಸಿದವು.  ಘಟನಾ ಸ್ಥಳದಲ್ಲಿ ತಂಡವು ನಾಲ್ಕು ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಂಡಿತು.  ‘ಮೂವರು ಮಾವೋವಾದಿಗಳ ಶವಗಳನ್ನು ಪತ್ತೆ ಹಚ್ಚಲಾಗಿದೆ. ಮಾವೋವಾದಿಗಳ ಕಡೆಯಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಸುಕ್ಮಾದಲ್ಲಿ ಇರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

2018: ನವದೆಹಲಿ: ಪಾಕಿಸ್ತಾನದ ಬಾಲಕಿಯರ ಶಿಕ್ಷಣಕ್ಕಾಗಿ ಅಂತರ್ಜಾಲ ಅಭಿಯಾನ ನಡೆಸಿದ್ದ ಬಾಲಕಿ ಮಲಾಲಾ ಯೂಸುಫ್ ಝಾಯಿ ಅವರ ಮೇಲೆ ೨೦೧೨ರಲ್ಲಿ ಗುಂಡಿಕ್ಕಿದ ಮತ್ತು ೨೦೧೪ರಲ್ಲಿ ಪಾಕಿಸ್ತಾನದ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿ ೧೩೦ ಮಕ್ಕಳನ್ನು ಬಲಿ ಪಡೆದಿದ್ದ ಪಾಕಿಸ್ತಾನಿ ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಮುಲ್ಲಾ ಮೌಲಾನಾ ಫಜ್ಲುಲ್ಲಾ ಅಮೆರಿಕದ ಡ್ರೋನ್ ದಾಳಿಗೆ ಬಲಿಯಾಗಿರುವುದಾಗಿ ವರದಿಗಳು ತಿಳಿಸಿದವು. ಅಮೆರಿಕ ಸೇನೆಯು ಹಿಂದಿನ ದಿನ  ನಡೆಸಿದ ಜಂಟಿ ಭಯೋತ್ಪಾದನೆ ನಿಗ್ರಹ ದಾಳಿಯಲ್ಲಿ, ತೆಹ್ರೀಕ್ -ಇ- ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಖ್ಯಸ್ಥ ಫಜ್ಲುಲ್ಲಾ  ಹಾಗೂ ಆತನ ಸಹಚರರು ಹತರಾಗಿರುವುದಾಗಿ ವರದಿಗಳು ಹೇಳಿದವು. ಈ ಕುರಿತು ಅಮೆರಿಕ ಸೇನಾಪಡೆ ಅಧಿಕೃತ ಮಾಹಿತಿ ಬಹಿರಂಗಪಡಿಸಿತು.  ಕುನ್ನಾರ್ ಪ್ರಾಂತ್ಯದಲ್ಲಿ ಡ್ರೋನ್ ದಾಳಿ ನಡೆಸಲಾಗಿದ್ದು, ಭಯೋತ್ಪಾದನಾ ಸಂಘಟನೆಗಳ ಮುಖ್ಯಸ್ಥರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಆಫಘಾನಿಸ್ಥಾನದಲ್ಲಿರುವ ಅಮೆರಿಕದ ಲೆಫ್ಟಿನೆಂಟ್ ಕ.ಮಾರ್ಟಿನ್ ಮೆಕ್‌ಡೊನೆಲ್ ತಿಳಿಸಿದರು.  ಫಜ್ಲುಲ್ಲ ೨೦೧೪ರ ಡಿಸೆಂಬರ್ ತಿಂಗಳಲ್ಲಿ ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿ, ೧೩೦ ಮಕ್ಕಳನ್ನು ಬಲಿಪಡೆದುಕೊಂಡಿದ್ದ. ಅಂತೆಯೇ ೨೦೧೨ರಲ್ಲಿ ಬಾಲಕಿ ಮಲಾಲ ಯುಸುಫ್ ಝಾಯಿ ಅವರನ್ನು ಹತ್ಯೆ ಮಾಡಲು ಈತನ ಸಂಚು ರೂಪಿಸಿದ್ದ ಎನ್ನಲಾಗಿದೆ. ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡರೂ ಬಳಿಕ ಪ್ರಾಣಾಪಾಯದಿಂದ ಪಾರಾದ ಮಲಾಲಾ ಅವರಿಗೆ ಬಳಿಕ ನೊಬೆಲ್ ಪ್ರಶಸ್ತಿ ಲಭಿಸಿತ್ತು.  ೨೦೧೦ರಲ್ಲಿ ನ್ಯೂಯಾರ್ಕಿನ ಟೈಮ್ಸ್ ಚೌಕದಲ್ಲಿ ಕಾರುಬಾಂಬ್ ದಾಳಿ ನಡೆಸಲು ಫಜ್ಲುಲ್ಲಾ ನೇತೃತ್ವದ ತಾಲಿಬಾನ್ ಸಂಘಟನೆ ಯತ್ನಿಸಿತ್ತು ಎಂದು ಅಮೆರಿಕ ಆಪಾದಿಸಿತ್ತು.  ಕಳೆದ ಮಾರ್ಚ್ ತಿಂಗಳಲ್ಲಿ ಅಮೆರಿಕವು ಫಜ್ಲುಲ್ಲಾ ತಲೆಗೆ ೫೦ ಲಕ್ಷ ಡಾಲರ್ ಬಹುಮಾನವನ್ನು ಫಜ್ಲುಲ್ಲ ಕುರಿತು ಸುಳಿವು ನೀಡಿದವರಿಗೆ ನೀಡುವುದಾಗಿ ಪ್ರಕಟಿಸಿತ್ತು. ಫಜ್ಲುಲ್ಲಾ ನೇತೃತ್ವದ ಸಂಘಟನೆಯು ಅಲ್-ಖೈದಾ ಜೊತೆಗೆ ನಿಕಟ ಬಾಂಧವ್ಯ ಹೊಂದಿದ್ದು, ಟೈಮ್ಸ್ ಚೌಕದಲ್ಲಿ ಬಾಂಬ್ ದಾಳಿಕೋರ ಫೈಸಲ್ ಶಾಹಜಾದನಿಗೆ ಸ್ಫೋಟಕಗಳ ತರಬೇತಿ ನೀಡಿತ್ತು ಎಂದು ಅಮೆರಿಕ ಆಪಾದಿಸಿತ್ತು.  ಪವಿತ್ರ ರಂಜಾನ್ ಹಬ್ಬದ ಸಲುವಾಗಿ ಕಾಬೂಲ್ ಸರ್ಕಾರ ಮತ್ತು ಆಫ್ಘನ ತಾಲಿಬಾನ್ ಮಧ್ಯೆ ಕದನ ವಿರಾಮ ಘೋಷಣೆ ಮುಕ್ತಾಯಗೊಳ್ಳುತ್ತಿದ್ದ ಹೊತ್ತಿನಲ್ಲೇ ಫಜ್ಲುಲ್ಲಾ ಗುರಿಯಾಗಿಟ್ಟುಕೊಂಡ ಡ್ರೋನ್ ದಾಳಿ ನಡೆಯಿತು. ಪಾಕಿಸ್ತಾನದ ಗಡಿಯಲ್ಲಿನ ಆಫ್ಘಾನ್ ಪ್ರಾಂತ್ಯದಲ್ಲಿ ಪಾಕಿಸ್ತಾನಿ ತಾಲಿಬಾನ್ ನಾಯಕನನ್ನು ಗುರಿಯಾಗಿಟ್ಟುಕೊಂಡು ಅಮೆರಿಕ ಡ್ರೋಣ್ ದಾಳಿ ನಡೆಸಿತು ಎಂದು ಭದ್ರತಾ ಮೂಲಗಳು ಹೇಳಿದವು. ಅಮೆರಿಕದ ಸೇನಾ ಅಧಿಕಾರಿಗಳಲ್ಲದೆ, ಆಫ್ಘಾನಿಸ್ಥಾನ ರಕ್ಷಣಾ ಸಚಿವಾಲಯದ ವಕ್ತಾರ ಮೊಹಮ್ಮದ ರದ್ಮಾನಿಶ್ ಅವರೂ ಫಜ್ಲುಲ್ಲಾ ಸಾವನ್ನು ದೃಢ ಪಡಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿದವು. ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ ಫಜ್ಲುಲ್ಲಾ ೪೦ರ ಹರೆಯದವನಾಗಿದ್ದ ಮತ್ತು ಸೇನಾ ಶಾಲೆಯ ಮಕ್ಕಳ ಮೇಲಿನ ದಾಳಿ ಬಳಿಕ ಪಾಕಿಸ್ತಾನದಲ್ಲಿ ಸಂಘಟನೆಯ ಮೇಲೆ ತೀವ್ರ ದಾಳಿ ಕಾರ್ಯಾಚರಣೆ ನಡೆದಾಗ ಆಫ್ಘಾನಿಸ್ಥಾನದಲ್ಲಿ ಆಶ್ರಯ ಪಡೆದಿದ್ದ ಎನ್ನಲಾಗಿತ್ತು.  ಪಾಕಿಸ್ತಾನದಲ್ಲಿ ಇನ್ನೂ ಅಲ್ಲಲ್ಲಿ ದಾಳಿಗಳನ್ನು ನಡೆಸುತ್ತಿದ್ದರೂ, ಸಂಘಟನೆಯು ಪಾಕಿಸ್ತಾನದಲ್ಲಿ ತನ್ನ ನೆಲೆಯನ್ನು ಕಳೆದುಕೊಂಡಿದೆ ಎನ್ನಲಾಗಿತ್ತು.

2018: ನವದೆಹಲಿ: ಸ್ವಾತಂತ್ರ್ಯ ಪೂರ್ವ ದಾಖಲೆಗಳನ್ನು ಒಳಗೊಂಡ ಭೂವಿವಾದ ಒಂದಕ್ಕೆ ಸಂಬಂಧಿಸಿದಂತೆ ೮೯ ವರ್ಷದ ಮಹಿಳಾ ಕಕ್ಷಿದಾರಳ ನೆರವಿಗೆ ಬಂದ ಸುಪ್ರೀಂಕೋರ್ಟ್ ಖಟ್ಲೆಯನ್ನು ತ್ವರಿತವಾಗಿ ಇತ್ಯರ್ಥ ಪಡಿಸುವಂತೆಯೂ, ವಿರೋಧಿಗಳಿಗೆ ಪ್ರತಿ ಮುಂದೂಡಿಕೆಗೂ ಕನಿಷ್ಠ ೧೦,೦೦೦ ರೂಪಾಯಿಗಳ ದಂಡ ವಿಧಿಸುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ಆದೇಶ ನೀಡಿತು.  ನ್ಯಾಯಮೂರ್ತಿ ಮದನ್ ಬಿ ಲೋಕುರ್ ನೇತೃತ್ವದ ಪೀಠವು ಭೂವಿವಾದವು ದಶಕಗಳ ಕಾಲದಿಂದ ಹೋರಾಟ ನಡೆಸುತ್ತಿರುವ ಅತ್ಯಂತ ವೃದ್ಧ ಮಹಿಳೆಗೆ ಸಂಬಂಧಿಸಿದ್ದಾದರೂ ವಿಚಾರಣಾ ನ್ಯಾಯಾಲಯವು ಉದಾರವಾಗಿ ಮುಂದೂಡಿಕೆಗಳನ್ನು ನೀಡುತ್ತಿರುವುದಕ್ಕೆ ವಿಷಾದ ವ್ಯಕ್ತ ಪಡಿಸಿತು.  ಸುಪ್ರೀಂಕೋರ್ಟ್ ಮುಂದಿರುವ ಪ್ರಕರಣದಲ್ಲಿ ಪ್ರತಿವಾದಿಗಳಾದ (ಮೂಲ ಖಟ್ಲೆಯಲ್ಲಿ ಅರ್ಜಿದಾರರು) ತನ್ವೀರ್ ಸಿಂಗ್ ಮತ್ತು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೂಡಿಕೆಗಳನ್ನು ಪಡೆದು ಕೊಂಡಿರುವುದನ್ನು ವಿಚಾರಣಾ ಕಾಲದಲ್ಲಿ ಗಮನಿಸಿದ ಪೀಠವು, ’ಪ್ರಕರಣದ ಪ್ರತಿವಾದಿ ಮತ್ತು ನಮ್ಮ ಮುಂದಿರುವ ಅರ್ಜಿದಾರರು (ಸುರೀಂದರ್ ಕೌರ್) ೮೯ ವರ್ಷ ವಯಸ್ಸಿನವರು. ಅವರು ಬೆನ್ನುಹುರಿಯ ಕ್ಷಯರೋಗದಿಂದ ನರಳುತ್ತಿದ್ದಾರೆ ಎಂಬುದು ಹೈಕೋರ್ಟಿನ ಆದೇಶದಲಿ ನಮೂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಚಾರಣಾ ನ್ಯಾಯಾಲಯವು ಅತ್ಯಂತ ಉದಾರವಾಗಿ ಮುಂದೂಡಿಕೆಗಳನ್ನು ನೀಡುತ್ತಿರುವುದು ನಮಗೆ ಅಚ್ಚರಿ ಉಂಟು ಮಾಡಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ೨೦೧೫ರಲ್ಲೇ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ನಿರ್ದಿಷ್ಟ ನಿರ್ದೇಶನ ನೀಡಿದ್ದರೂ, ವಿಚಾರಣಾ ನ್ಯಾಯಾಲಯವು ಅಲುಗಾಡಿಲ್ಲ ಎಂಬ ವಾಸ್ತವಾಂಶವನ್ನೂ ಪೀಠವು ಗಮನಕ್ಕೆ ತೆಗೆದುಕೊಂಡಿತು.  ಅತಿಯಾದ ವಿಳಂಬದ ಪರಿಣಾಮವಾಗಿ ಸುರೀಂದರ್ ಕೌರ್ ಅವರು ತಮ್ಮ ಬದುಕಿನ ಹೋರಾಟದಲ್ಲಿ ಸೋತು, ಪ್ರತಿವಾದಿಗಳಿಗೆ ಅನಾಯಾಸವಾಗಿ ಜಯಲಭಿಸುವಂತಾಗಲು ಅವಕಾಶ ನೀಡಬಾರದು ಎಂದು ಪೀಠ ಹೇಳಿತು.  ಹೀಗಾಗಿ ವಿಚಾರಣೆಯನ್ನು ತ್ವರಿತಗೊಳಿಸಿ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು. ಅನಗತ್ಯ ಮುಂದೂಡಿಕೆಗಳನ್ನು ತಪ್ಪಿಸುವ ಸಲುವಾಗಿ, ಮೂಲದಾವೆಯ ಅರ್ಜಿದಾರರ ಪರವಾಗಿ ಮುಂದೂಡಿಕೆಯ ಕೋರಿಕೆ ಬಂದಾಗ ಕನಿಷ್ಠ ೧೦,೦೦೦ ರೂಪಾಯಿಗಳ ದಂಡ ವಿಧಿಸಬೇಕು ಮತ್ತು ಒಂದು ವಾರಕ್ಕಿಂತ ಹೆಚ್ಚು ಅವಧಿಗೆ ಮುಂದೂಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು.  ಪಾಟಿಯಾಲ ಮತ್ತು ಅಮೃತಸರ ಜಿಲ್ಲೆಗಳ ಹಲವಾರು ಭೂಮಿ ಮತ್ತು ಫಾರ್ಮ್ ಹೌಸ್‌ಗಳಿಗೆ ಸಂಬಂಧಪಟ್ಟ ವಿವಾದ ಇದಾಗಿದೆ. ಉಭಯ ಕಡೆಗಳೂ ಈ ಆಸ್ತಿಗಳ ನ್ಯಾಯೋಚಿತ ಮಾಲೀಕರು ಯಾರು ಎಂಬುದನ್ನು ಇತ್ಯರ್ಥ ಪಡಿಸಿಕೊಳ್ಳುವ ಸಲುವಾಗಿ ಹೋರಾಟ ನಡೆಸುತ್ತಿದ್ದಾರೆ.
ಈ ಪ್ರಕರಣದ ದಾಖಲೆಗಳು ಕಕ್ಷಿದಾರರ ಪೂರ್ವೀಕರು ಆಸ್ತಿಗಳ ಮಾಲಕತ್ವ ಹೊಂದಿದ್ದ ಕಾಲದ್ದಾಗಿವೆ. ಪಶ್ಚಿಮ ಪಾಕಿಸ್ತಾನದಲ್ಲಿ ಆಸ್ತಿ ಹೊಂದಿದ್ದ ಕಕ್ಷಿದಾರರಿಗೆ ೧೯೪೭ರ ದೇಶ ವಿಭಜನೆಯ ಬಳಿಕ ಪಂಜಾಬಿನ ವಿವಿಧ ಕಡೆಗಳಲ್ಲಿ ಭೂಮಿ ಹಂಚಿಕೆ ಮಾಡಲಾಗಿತ್ತು.

2018: ವಾಷಿಂಗ್ಟನ್: ಅಮೆರಿಕದ ಬೌದ್ಧಿಕ ಆಸ್ತಿ ಕಳವು ಆಪಾದನೆಯ ಹಿನ್ನೆಲೆಯಲ್ಲಿ ಚೀನಾವನ್ನು ಶಿಕ್ಷಿಸುವ ಸಲುವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಆಮದು ವಸ್ತುಗಳ ಮೇಲೆ ಶೇಕಡಾ ೨೫ರಷ್ಟು ಅಂದರೆ ೫೦೦೦ ಕೋಟಿ (೫೦ ಬಿಲಿಯನ್) ಡಾಲರ್ ಸುಂಕ ಹೇರಿಕೆ ಕ್ರಮವನ್ನು ಪ್ರಕಟಿಸಿದರು.  ಕೈಗಾರಿಕೋದ್ಯಮದ ಮಹತ್ವದ ತಂತ್ರಜ್ಞಾನ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಈ ಸುಂಕ ವಿಧಿಸಲಾಗಿದೆ ಎಂದು ಟ್ರಂಪ್ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿತು. ಇದಕ್ಕೆ ಪ್ರತಿಯಾಗಿ ಅಮೆರಿಕದ ವಸ್ತುಗಳು ಮತ್ತು ಸೇವಾ ರಫ್ತಿಗೆ ಸಂಬಂಧಿಸಿದಂತೆ ಚೀನಾ ಸೇಡಿನ ಪ್ರತಿಕ್ರಮಗಳನ್ನು ಏನಾದರೂ ಕೈಗೊಂಡರೆ ಅದರ ವಿರುದ್ಧ ’ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಟ್ರಂಪ್ ಅವರು ನೀಡಿದರು. ಅಪ್ರಾಮಾಣಿಕ ಆರ್ಥಿಕ ಅಭ್ಯಾಸಗಳ ಮೂಲಕ ನಮ್ಮ ತಂತ್ರಜ್ಞಾನ ಹಾಗೂ ಬೌದ್ಧಿಕ ಆಸ್ತಿ ಕಳವು ಮಾಡುವುದನ್ನು ಅಮೆರಿಕವು ಇನ್ನು ಮುಂದೆ ಸಹಿಸಿಕೊಳ್ಳುವುದಿಲ್ಲ ಎಂದು ಟ್ರಂಪ್ ಹೇಳಿದ್ದರು.  ಜಿ-೭ ರಾಷ್ಟ್ರಗಳು ಅಮೆರಿಕದ ಉತ್ಪನ್ನಗಳಿಗೆ ಸುಂಕ ಹೇರುವುದನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದ ಟ್ರಂಪ್, ಅಮೆರಿಕದ ಉತ್ಪನ್ನಗಳ ಮೇಲೆ ದುಬಾರಿ ಸುಂಕ ವಿಧಿಸುತ್ತಿರುವುದಕ್ಕಾಗಿ ಭಾರತದ ಮೇಲೂ ಹರಿಹಾಯ್ದಿದ್ದರು.  ‘ಅವರ ಉತ್ಪನ್ನಗಳ ಮೇಲೆ ನಾವು ಚಿಕ್ಕಾಸು ಸುಂಕವನ್ನೂ ವಿಧಿಸುವುದಿಲ್ಲ. ಅವರು ಮಾತ್ರ ನಮ್ಮ ಉತ್ಪನ್ನಗಳ ಮೇಲೆ ದುಬಾರಿ ಸುಂಕ ವಿಧಿಸುತ್ತಾರೆ. ಇದೆಲ್ಲವನ್ನು ಇನ್ನೂ ಸಹಿಸುತ್ತಾ ಕೂರಲು ಸಾಧ್ಯವಿಲ್ಲ ಎಂದು ಟ್ರಂಪ್ ಕೂಗಾಡಿದ್ದರು.

2018: ಶ್ರೀನಗರ: ’ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿರುವ ವಿಶೇಷ ತನಿಖಾ ತಂಡವು ಪ್ರಕರಣದಲ್ಲಿ ಮೊದಲ ಆರೋಪಿಯನ್ನು ಬಂಧಿಸಿತು.  ಗುಂಡು ಹಾರಾಟದ ಬಳಿಕ ಮೃತರ ಶವಗಳನ್ನು ತಡಕಾಡುತ್ತಿದ್ದ ಗಡ್ಡಧಾರಿ ವ್ಯಕ್ತಿಯೊಬ್ಬ ಪಿಸ್ತೂಲ್ ಒಂದನ್ನು ತೆಗೆದುಕೊಂಡ ದೃಶ್ಯವನ್ನು ಆಧರಿಸಿ ಸಾರ್ವಜನಿಕರ ನೆರವಿನಿಂದ ಆತನನ್ನು ಬಂಧಿಸಲಾಯಿತು. ಗಡ್ಡಧಾರಿ ವ್ಯಕ್ತಿ ಮೂರು ಮಂದಿ ಹಂತಕರ ಜೊತೆಗೆ ಸಂಬಂಧ ಹೊಂದಿರಬಹುದು ಎಂದು ಶಂಕಿಸಲಾಗಿದ್ದು, ಆತ ಬುಖಾರಿ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯ ಕೈಯಿಂದ ಬಿದ್ದುಹೋಗಿದ್ದ ಪಿಸ್ತೂಲನ್ನು ಎತ್ತಿಕೊಂಡಿದ್ದ.  ಪೊಲೀಸರು ವಿಡಿಯೋ ಮತ್ತು ಆತನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಬಳಿಕ ಸಾರ್ವಜನಿಕರ ನೆರವಿನಿಂದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಯಿತು ಎಂದು ಡಿಐಜಿ ಸ್ವಯಂ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ಗುಂಡು ಹಾರಾಟದ ಬಳಿಕ ಬಿಳಿ ಉಡುಪಿನಲ್ಲಿದ್ದ ಗಡ್ಡಧಾರಿ ವ್ಯಕ್ತಿಯು ಬುಖಾರಿ ಅವರು ಪಯಣಿಸಿದ ಕಾರಿನಲ್ಲಿದ್ದ ಶವಗಳನ್ನು ತಪಾಸಿಸಿ ಪಿಸ್ತೂಲನ್ನು ಎತ್ತಿಕೊಂಡ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು, ಬಳಿಕ ಈ ವ್ಯಕ್ತಿ ಸ್ಥಳದಿಂದ ನಿಗೂಢವಾಗಿ ಕಣ್ಮರೆಯಾಗಿದ್ದ.

ದಾಳಿಗೆ ಸಂಬಂಧಿಸಿದಂತೆ ಈ ವ್ಯಕ್ತಿ ಕೊಂಡಿಯಾಗಿದ್ದಾನೆ ಎಂಬುದಾಗಿ ಪೊಲೀಸರು ನಂಬಿದ್ದಾರೆ. ಲಷ್ಕರ್ -ಇ- ತೊಯಿಬಾ (ಎಲ್ ಇಟಿ) ಬುಖಾರಿ ಮೇಲಿನ ದಾಳಿಯ ಹಿಂದೆ ಇರಬಹುದು ಎಂದು ಗುಪ್ತಚರ ಸಂಸ್ಥೆಗಳು ಶಂಕಿಸಿವೆ. ವಿಡಿಯೋದಲ್ಲಿ ಕಾಣುತ್ತಿದ್ದ ವ್ಯಕ್ತಿ ಧರಿಸಿದ್ದ ಬಟ್ಟೆಗಳು ಮತ್ತು ಪಿಸ್ತೂಲನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಡಿಐಜಿ ನುಡಿದರು.  ಘಟನೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಶ್ರೀನಗರ ಪೊಲೀಸರು ಬಿಡುಗಡೆ ಮಾಡಿದ್ದು, ಅವರ ಗುರುತು ಪತ್ತೆಗೆ ನೆರವಾಗುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮೂವರು ಮುಸುಕುಧಾರಿ ಹಂತಕರು ಬೈಕಿನಲ್ಲಿ ಬಂದಿದ್ದುದು ದಾಖಲಾಗಿದೆ. ಅವರ ಗನ್ ಗಳು ಚೀಲವೊಂದರಲ್ಲಿ ಇದ್ದು ಅದನ್ನು ಅವರ ಪೈಕಿ ಒಬ್ಬ ಹಿಡಿದುಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದರು.  ದಾಳಿಕೋರರ ಪೈಕಿ ಒಬ್ಬ ವ್ಯಕ್ತಿ ಎಲ್ ಇಟಿ ಭಯೋತ್ಪಾದಕ ನವೀದ್ ಜಾಟ್ ನನ್ನು ಹೋಲುತ್ತಿದ್ದು, ಉಳಿದಿಬ್ಬರನ್ನು ಮೆಹ್ರಾಜುದ್ದೀನ್ ಬಂಗ್ರೂ ಮತ್ತು ವಾಝಾ ಎಂಬುದಾಗಿ ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದರು. ಬಂಗ್ರೂ ಪೊಲೀಸರು ಹುಡುತ್ತಿರುವ ಕೆಳ ಶ್ರೀನಗರದ ಉಗ್ರಗಾಮಿಯಾಗಿದ್ದು, ಭದ್ರತಾ ಸಿಬ್ಬಂದಿ ಹತ್ಯೆಯಲ್ಲಿ ಮತ್ತು ಭಯೋತ್ಪಾದಕರ ನೇಮಕಾತಿಯಲ್ಲಿ ಸಕ್ರಿಯನಾದ ವ್ಯಕ್ತಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಾಟ್ ಶ್ರೀನಗರದ ಶ್ರೀ ಮಹಾರಾಜಾ ಹರಿಸಿಂಗ್ ಆಸ್ಪತ್ರೆಯಿಂದ (ಎಸ್ ಎಂ ಎಸ್ ಎಚ್) ಫೆಬ್ರುವರಿ ೬ರಂದು ನಾಟಕೀಯವಾಗಿ ಪರಾರಿಯಾಗಿದ್ದು, ಕಾಶ್ಮೀರದ ಭದ್ರತಾ ಪಡೆಗಳ ಮೇಲಿನ ದಾಳಿಗಳ ಹಿಂದಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಆತನ ಮೇಲೆ ಹದ್ದುಗಣ್ಣು ಇಟ್ಟಿತ್ತು.

2009: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಹಲವು ಸಲ ಬಹಿರಂಗ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನದಿಂದ ಹಾಗೂ ಚಿತ್ರನಟಿ ಶ್ರುತಿ ಅವರನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೈ ಬಿಡಲಾಯಿತು. ಶ್ರುತಿ ಅವರ ಸ್ಥಾನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಡಿ.ಎಸ್.ಅಶ್ವತ್ಥ್ ಅವರನ್ನು ನೇಮಿಸಲಾಯಿತು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ದವೆ ಅವರಿಗೆ ಹೆಚ್ಚುವರಿಯಾಗಿ ಅಧ್ಯಕ್ಷ ಸ್ಥಾನ ಕೂಡ ನೀಡಲಾಯಿತು. ತಮ್ಮ ಪತಿ, ಚಿತ್ರ ನಿರ್ದೇಶಕ ಮಹೇಂದರ್ ಅವರಿಂದ ಶ್ರುತಿ ವಿವಾಹ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತಿದ ಹಿನ್ನೆಲೆಯಲ್ಲಿ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಯಿತು.

2009: ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿದ ಏಕೈಕ ಉಗ್ರ ಮೊಹ್ಮಮದ್ ಅಜ್ಮಲ್ ಕಸಾಬ್‌ನನ್ನು ಮುಂಬೈಯ ಪತ್ರಿಕೆಯೊಂದರ ಛಾಯಾಗ್ರಾಹಕ ಸೆಬಾಸ್ಟಿಯನ್ ಡಿಸೋಜ ಅವರು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಗುರುತಿಸಿದರು. ನವೆಂಬರ್ 26ರ ರಾತ್ರಿ ನಡೆದ ದಾಳಿ ಸಮಯದಲ್ಲಿ ಬಂದೂಕು ಹಿಡಿದು ಉಗ್ರರು ಜನರತ್ತ ಮನಬಂದಂತೆ ಗುಂಡಿನ ಮಳೆಗರೆದಿದ್ದ ದೃಶ್ಯಗಳನ್ನು ಸೆರೆಹಿಡಿದ ನೂರಕ್ಕೂ ಹೆಚ್ಚು ಛಾಯಾಚಿತ್ರಗಳನ್ನೂ ನ್ಯಾಯಾಲಯದ ಮುಂದೆ  ಅವರು ಹಾಜರುಪಡಿಸಿದರು. ಇವರು ಕೇವಲ ಪ್ರತ್ಯಕ್ಷ ಸಾಕ್ಷಿ ಮಾತ್ರವಲ್ಲದೇ, ಉಗ್ರರ ದಾಳಿಯ ದೃಶ್ಯಗಳನ್ನು ಸೆರೆಹಿಡಿದು ದಾಖಲೆ ಸಹಿತ ಪುರಾವೆಗಳನ್ನು ಒದಗಿಸಿದ ಮೊದಲ ಸಾಕ್ಷಿ ಕೂಡಾ. ಹೀಗಾಗಿ ಇವರ ಹೇಳಿಕೆ ಹಾಗೂ ಛಾಯಾಚಿತ್ರಗಳನ್ನು ಮಹತ್ವದ್ದು ಎಂದು ಪರಿಗಣಿಸಲಾಯಿತು.

2009: ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆಮುಂದುವರೆಯಿತು. ಮೆಲ್ಬರ್ನ್ ಪೂರ್ವದಲ್ಲಿನ ಉಪನಗರದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ, 20ರ ಹರೆಯದ, ದೆಹಲಿ ಮೂಲದ ಸನ್ನಿ ಬಜಾಜ್ ಮೇಲೆ ಹಲ್ಲೆ ನಡೆಯಿತು. ಈತ ರಾತ್ರಿ ಬರೊನಿಯಾದಲ್ಲಿ ತನ್ನ ಕಾರೊಳಗೆ ಕುಳಿತುಕೊಳ್ಳುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಈತನನ್ನು ವಾಚಾಮಗೋಚರವಾಗಿ ಬೈದು ಮುಷ್ಟಿಯಿಂದ ಗುದ್ದಿದರು ಎಂದು 'ದಿ ಏಜ್' ಪತ್ರಿಕೆ ವರದಿ ಮಾಡಿತು.

2009: ಹಂದಿಜ್ವರ ಹಾಗೂ ಅದರ ವೈರಾಣು ಮೆಕ್ಸಿಕೊದಲ್ಲಿ ಪತ್ತೆಯಾಗುವ ಹಲವು ತಿಂಗಳ ಮೊದಲೇ ಮನುಷ್ಯರಲ್ಲಿ ಗುಪ್ತವಾಗಿ ಹಬ್ಬಿತ್ತು. ಅದಕ್ಕೂ ಹಲವು ವರ್ಷಗಳ ಮೊದಲೇ ಈ ವೈರಸ್ ಹಂದಿಗಳಲ್ಲಿ ಜೀವ ತಳೆದಿತ್ತು ಎಂದು ಬ್ರಿಟನ್ನಿನ ಸಂಶೋಧಕರು ಅಭಿಪ್ರಾಯ ಪಟ್ಟರು. ಆಕ್ಸ್‌ಫರ್ಡ್ ವಿವಿಯ ವಿಜ್ಞಾನಿಗಳ ತಂಡ ಸಂಶೋಧನೆ ಕೈಗೊಂಡು ಈ ಅಂಶ ಬಹಿರಂಗಪಡಿಸಿತು. ವಿಜ್ಞಾನಿಗಳ ಪ್ರಕಾರ ಹಂದಿಗಳಲ್ಲಿ ವಿವಿಧ ಸೋಂಕುಗಳಿಗೆ ಕಾರಣವಾಗುವ ಹಲವು ಬಗೆಯ ವೈರಸ್‌ಗಳು ಸೇರಿಕೊಂಡು ಈ ಹೊಸ ವೈರಸ್ ಹಲವು ವರ್ಷಗಳ ಹಿಂದೆಯೇ ಜೀವ ತಳೆದಿತ್ತು. ಹಂದಿಗಳ ಮೂಲಕ ವಿವಿಧ ಖಂಡಗಳಿಗೂ ಪ್ರಸಾರವಾಗಿತ್ತು.

2009: ಸೇನೆಯಲ್ಲಿ ಸೇವೆ ಸಲ್ಲಿಸಲು ತಮ್ಮ ಪೇಟ ಮತ್ತು  ಗಡ್ಡ ತೆಗೆಯಬೇಕು ಎಂಬುದಾಗಿ  ಅಮೆರಿಕದ ಸೇನೆಯಲ್ಲಿರುವ ಮೂರು ದಶಕಗಳಷ್ಟು ಹಳೆಯದಾದ ನಿಯಮವನ್ನು ಇಬ್ಬರು ಸಿಖ್ ಸೇನಾ ಅಧಿಕಾರಿಗಳು ಪ್ರಶ್ನಿಸಿದರು. ತಮ್ಮ ಕುಟುಂಬದಲ್ಲಿ  ನಾಲ್ಕನೇ ತಲೆಮಾರಿನ ವ್ಯಕ್ತಿಯಾಗಿ  ಸೇನೆಯಲ್ಲಿ ಸೇವೆ ಸಲ್ಲಿಸುವ ನಿರೀಕ್ಷೆಯಲ್ಲಿರುವ  ಕ್ಯಾಪ್ಟನ್ ಕಮಲಜಿತ್ ಕಲ್ಸಿ ಮತ್ತು ಇನ್ನೊಬ್ಬ ಸಿಖ್ ಕ್ಯಾಪ್ಟನ್ ತೇಜ್‌ದೀಪ್ ಸಿಂಗ್ ರತ್ತನ್ ಅವರು ಧಾರ್ಮಿಕ ವಸ್ತುಗಳ ಉಡುಗೆ ತೊಡುಗೆಗೆ ಸಂಬಂಧಿಸಿದ ನಿಯಮಗಳು ಬದಲಾಗಬೇಕು ಎಂದು ಕೋರಿದರು.

2008: ಉಡುಪಿಯ ಬಿಜೆಪಿ ಶಾಸಕ ಬಿ.ರಘುಪತಿಭಟ್ ಅವರ ಪತ್ನಿ ಪದ್ಮಪ್ರಿಯಾ (35) ಅವರ ಮೃತದೇಹ ನವದೆಹಲಿಯ ಅಪಾರ್ಟ್ ಮೆಂಟೊಂದರಲ್ಲಿ ಪತ್ತೆಯಾಯಿತು. ಸುಳಿವು ಆಧರಿಸಿ ನವದೆಹಲಿಯ ದ್ವಾರಕಾನಗರದ ಶಮಾ ಅಪಾರ್ಟ್ ಮೆಂಟಿನ 20 ನೇ ನಂಬರ್ ಕೊಠಡಿಗೆ ಕರ್ನಾಟಕದ ಪೊಲೀಸರು ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆದು  ಬಾಗಿಲು ಮುರಿದು ಒಳಗೆ ನುಗ್ಗಿದಾಗ ಪದ್ಮಪ್ರಿಯಾ ದೇಹ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ  ಪತ್ತೆಯಾಯಿತು. ಐದು ದಿನಗಳಿಂದ ಆಕೆ ನಾಪತ್ತೆಯಾಗಿದ್ದರು.

2007: ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ದೇಶಕ ಎ.ವಿ. ಶೇಷಗಿರಿರಾವ್ (80) ಅವರು ಚೆನ್ನೈಯಲ್ಲಿ ನಿಧನರಾದರು. ಕನ್ನಡ ಹಾಗೂ ತೆಲುಗಿನಲ್ಲಿ ಸುಮಾರು 30 ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ `ಸೊಸೆ ತಂದ ಸೌಭಾಗ್ಯ' ನಿರ್ದೇಶಿಸಿದ ಹೆಗ್ಗಳಿಕೆ ಇವರದು. ವರನಟ ರಾಜಕುಮಾರ್ ಅಭಿನಯದ `ಬೆಟ್ಟದ ಹುಲಿ' `ಸಂಪತ್ತಿಗೆ ಸವಾಲ್' `ಬಹದ್ದೂರ್ ಗಂಡು', `ರಾಜ ನನ್ನ ರಾಜ' ಇತ್ಯಾದಿ ಅವರು ನಿರ್ದೇಶಿಸಿದ ಕೆಲವು ಜನಪ್ರಿಯ ಸಿನಿಮಾಗಳು.

2007: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಂದಗುಡಿಯಲ್ಲಿ 12,350 ಎಕರೆ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಸ್ಥಾಪನೆಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತು. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ವರ್ಗದ ಒಳ ಮೀಸಲಾತಿಗೆ ಸಚಿವ ಸಂಪುಟ ಉಪ ಸಮಿತಿ ರಚಿಸಲೂ ಸಂಪುಟ ಒಪ್ಪಿತು.

2007: ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕ ಏಜೆನ್ಸಿಯಲ್ಲಿ ಹಿರಿಯ ಇಂಧನ ಸಲಹೆಗಾರರಾದ ಶ್ರಿನಿವಾಸನ್ ಪದ್ಮನಾಭನ್ ಅವರಿಗೆ `ವರ್ಲ್ಡ್ ಕ್ಲೀನ್ ಎನರ್ಜಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವದೆಹಲಿಯಲ್ಲಿ ವಾಸಿಸಿರುವ ಪದ್ಮನಾಭನ್ ಅವರಿಗೆ ಸ್ವಿಟ್ಜರ್ಲೆಂಡಿನ ಬೇಸಲ್ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2007: ದಕ್ಷಿಣ ಭಾರತದ ಸಿನಿಮಾ ಪ್ರಿಯರ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ `ಶಿವಾಜಿ- ದಿ ಬಾಸ್' ದೇಶ- ವಿದೇಶಗಳಲ್ಲಿ ಈದಿನ ಏಕಕಾಲದಲ್ಲಿ ಬಿಡುಗಡೆಯಾಯಿತು. ತಂಜಾವೂರಿನಲ್ಲಿ ಬೆಳಗಿನ ಜಾವ 3 ಗಂಟೆಗೇ ಈ ಚಿತ್ರ ಪ್ರದರ್ಶನ ಕಂಡಿತು.

2007: ಪ್ಯಾಲೆಸ್ಟೈನ್ ಮೇಲೆ ನಿಯಂತ್ರಣ ಸಾಧಿಸಿದ ಹಮಾಸ್ ಸಂಘಟನೆ ಸದಸ್ಯರು ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರಿಗೆ ದಿಗ್ಬಂಧನ ವಿಧಿಸಿ ಇಡೀದಿನ ಅವರ ಕಚೇರಿಯಲ್ಲಿ ನಿರಾತಂಕವಾಗಿ ಕಾಲ ಕಳೆದರು.

2007: ಮಹಾತ್ಮ ಗಾಂಧಿ ಜನ್ಮದಿನವಾದ ಅಕ್ಟೋಬರ್ 2 ದಿನವನ್ನು `ಅಂತಾರಾಷ್ಟ್ರೀಯ ಅಹಿಂಸಾ ದಿನ'ವಾಗಿ ಘೋಷಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಧರಿಸಿತು. ವಿಶ್ವದಾದ್ಯಂತ ಶಾಂತಿಯ ಸಂದೇಶವನ್ನು ಸಾರಲು ಗಾಂಧೀಜಿ ವಹಿಸಿದ ಪಾತ್ರವನ್ನು ಪರಿಗಣಿಸಿ ಸಾಮಾನ್ಯ ಸಭೆ ಈ ತೀರ್ಮಾನ ಕೈಗೊಂಡಿತು.

2007: ಮುಂಬೈಯಲ್ಲಿ ಜನಿಸಿ ಸ್ವೀಡನ್ ನಿವಾಸಿಯಾಗಿರುವ ಭಾರತೀಯ ನಾವಿಕ ಭಾವಿಕ್ ಗಾಂಧಿ (30) ಅವರು ಯಾರ ನೆರವನ್ನೂ ಆಶ್ರಯಿಸದೆ ಅಟ್ಲಾಂಟಿಕ್ ಸಾಗರದುದ್ದಕ್ಕೂ ದೋಣಿ ಹುಟ್ಟು ಹಾಕಿ ಗುರಿ ಮುಟ್ಟುವ ಮೂಲಕ ದಾಖಲೆ ನಿರ್ಮಿಸಿದರು. ಹಾಯಿ, ಮೋಟಾರ್, ಸಹಾಯಕ ಹಡಗು ಇತ್ಯಾದಿ ಯಾವುದರ ನೆರವೂ ಇಲ್ಲದೆ ಕೇವಲ ದೋಣಿಯಲ್ಲಿ ಹುಟ್ಟು ಹಾಕುತ್ತಾ 106 ದಿನಗಳಲ್ಲಿ ಅವರು ತಮ್ಮ ಪಯಣ ಪೂರ್ಣಗೊಳಿಸಿದರು. ಕ್ರಿಸ್ಟೋಫರ್ ಕೊಲಂಬಸ್ ಸಾಗಿದ ಹಾದಿಯಲ್ಲಿ ದೋಣಿಗೆ ಹುಟ್ಟು ಹಾಕಿದ ಭಾವಿಕ್ ಗಾಂಧಿ ಈ ಮಹಾಸಾಗರದಲ್ಲಿ ಇಂತಹ ಸಾಧನೆಗೈದ 33ನೇ ವ್ಯಕ್ತಿ. ಇಂತಹ ಏಕವ್ಯಕ್ತಿ ಸಾಹಸ ಗೈದ ಏಷ್ಯಾದ ಮೊದಲಿಗ. ತಮ್ಮ ದೋಣಿ `ಮಿಸ್ ಒಲಿವ್' ನಲ್ಲಿ ಅಂಟಿಗುವಾದ ಕೆನರಿ ದ್ವೀಪದ ಲಾ ರೆಸ್ಟಿಂಗಾದಿಂದ ಸಾಗರ ಪ್ರಯಾಣ ಆರಂಭಿಸಿದ್ದರು.

2007: ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯ ದುರಸ್ತಿಗಾಗಿ ಇಬ್ಬರು ತಂತ್ರಜ್ಞರು ಮೂರನೇ ಬಾಹ್ಯಾಕಾಶ ನಡಿಗೆ ಆರಂಭಿಸಿದರು.

2007: ನೈಜೀರಿಯಾದ ದಕ್ಷಿಣ ಭಾಗದ ತೈಲ ಕ್ಷೇತ್ರದಲ್ಲಿ ಬಂದೂಕುಧಾರಿಗಳು ಇಬ್ಬರು ಭಾರತೀಯರು ಸೇರಿದಂತೆ ಐವರು ವಿದೇಶಿ ಪ್ರಜೆಗಳನ್ನು ಅಪಹರಿಸಿದರು.

2006: ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಭಿಕ್ಷಾಟನೆಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಯಿತು.

2006: ಡಿಸೆಂಬರ್ 21ರಂದು ಕೋಫಿ ಅನ್ನಾನ್ ನಿವೃತ್ತಿಯಿಂದ ತೆರವಾಗುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಶಿ ತರೂರ್ ಅವರನ್ನು ಭಾರತದ ಅಭ್ಯರ್ಥಿ ಎಂದು ಸರ್ಕಾರ ಪ್ರಕಟಿಸಿತು. 1978ರಿಂದಲೇ ವಿಶ್ವಸಂಸ್ಥೆಯಲ್ಲಿ ಸೇವೆಯಲ್ಲಿರುವ ತರೂರ್ ಈ ವೇಳೆಯಲ್ಲಿ ಅಲ್ಲಿ ಸಂಪರ್ಕ ಮತ್ತು ಮಾಹಿತಿ ವಿಭಾಗದ ಆಧೀನ ಪ್ರಧಾನ ಕಾರ್ಯದರ್ಶಿಯಾಗಿದ್ದರು.

2006: ಶಂಕಿತ ತಮಿಳು ಉಗ್ರಗಾಮಿಗಳು ಅಡಗಿಸಿ ಇಟ್ಟ್ದಿದ ನೆಲಬಾಂಬ್ ಸ್ಫೋಟಕ್ಕೆ ಬಸ್ಸಿನಲ್ಲಿದ್ದ 64 ಪ್ರಯಾಣಿಕರು ಸತ್ತು 39 ಮಂದಿ ಗಾಯಗೊಂಡ ಘಟನೆ ಉತ್ತರ ಶ್ರೀಲಂಕಾದಲ್ಲಿ ಘಟಿಸಿತು. ಬೆನ್ನಲ್ಲೇ ಶ್ರೀಲಂಕಾ ಸೇನೆ ಎಲ್ಟಿಟಿಇ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿತು.

2006: ವಿಜಯಾನಂದ ಪ್ರಿಂಟರ್ಸ್ ಲಿಮಿಟೆಡ್ ನ ವಿಜಯ ಕನರ್ಾಟಕ, ವಿಜಯ ಟೈಮ್ಸ್ ಮತ್ತು ಉಷಾಕಿರಣ ಪತ್ರಿಕೆಗಳ ಮಾಲೀಕತ್ವವನ್ನು ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ವಹಿಸಿಕೊಂಡಿತು.

2006: ಎನ್ ಸಿಪಿ, ಬಿಜೆಪಿ, ಮತ್ತು ಶಿವಸೇನೆಯ ಬೆಂಬಲದೊಂದಿಗೆ ಮಹಾರಾಷ್ಟ್ರದಿಂದ ಕಣಕ್ಕೆ ಇಳಿದಿದ್ದ ಉದ್ಯಮಿ ರಾಹುಲ್ ಬಜಾಜ್ ರಾಜ್ಯಸಭೆಗೆ ಆಯ್ಕೆಯಾದರು. ಕಾಂಗ್ರೆಸ್ಸಿನ ಅವಿನಾಶ ಪಾಂಡೆ ಅವರನ್ನು ರಾಹುಲ್ ಬಜಾಜ್ ಪರಾಭವಗೊಳಿಸಿದರು.

1993: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ್ಪ ಈದಿನ ನಿಧನರಾದರು.

1990: ಸ್ವರ್ಣಮಂದಿರದ ಮೇಲೆ 1984ರಲ್ಲಿ ನಡೆದ ಕಾರ್ಯಾಚರಣೆ ಕಾಲದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನ ಮತ್ತು ಇತರ ಮೌಲ್ಯಯುಕ್ತ ವಸ್ತುಗಳನ್ನು ಪಂಜಾಬ್ ಸರ್ಕಾರ ಹಿಂದಕ್ಕೆ ನೀಡಿತು.

1986: ಕ್ರಿಕೆಟ್ ಪಟು ಕೆ.ಕೆ. ತಾರಾಪೂರ್ ಅವರು ಈದಿನ ನಿಧನರಾದರು.

1956: ಕಲಾವಿದೆ ಕನಕತಾರಾ ಜನನ.

1947: ಭಾರತವನ್ನು ವಿಭಜಿಸುವ ಬ್ರಿಟಿಷ್ ಇಂಡಿಯಾದ ಆಲೋಚನೆಯನ್ನು ಆಲ್ ಇಂಡಿಯಾ ಕಾಂಗ್ರೆಸ್ ಒಪ್ಪಿಕೊಂಡಿತು.

1942: ಸಾಹಿತಿ ಚಿದಾನಂದ ಗೌಡ ಜನನ.

1940: ಕಲಾವಿದ ಭೀಮಪ್ಪ ಸನದಿ ಜನನ.

1932: ಸಾಹಿತಿ ರಸಿಕ ಪುತ್ತಿಗೆ ಜನನ.

1931: ಗೀತಪ್ರಿಯ ಜನನ.

1929: ಕಲಾವಿದ ಸಿ.ಪಿ. ಪರಮೇಶ್ವರಪ್ಪ ಜನನ.

1928: ಕಲಾವಿದ ಪಿ.ಬಿ. ಧುತ್ತರಗಿ ಜನನ.

1924: ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಗುರುರಾಜ ಭಟ್ (15-6-1924ರಿಂದ 27-8-1978) ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ ಈದಿನ ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ದೇವಸ್ಥಾನಗಳ ಸಂಶೋಧನೆ, ಶಿಲಾಗೋರಿ, ತಾಮ್ರಶಾಸನಗಳು, ಅಪೂರ್ವ ಶಾಸನಗಳ ಸಂಶೋಧನೆ ನಡೆಸಿದ ಇವರು 700ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಒಳಗೊಂಡ `ತುಳುನಾಡು' ಗ್ರಂಥ ರಚಿಸಿದರು. ಅವರ ಈ ಮೊದಲ ಗ್ರಂಥಕ್ಕೇ ದೇವರಾಜ ಬಹದ್ದೂರ್ ಪ್ರಶಸ್ತಿ, ಎರಡನೆಯ ಕೃತಿ `ತುಳುನಾಡಿನ ಸ್ಥಾನಿಕರು' ಗ್ರಂಥಕ್ಕೆ ಉತ್ತಮ ಸಂಶೋಧನಾ ಕೃತಿ ಎಂಬ ಪ್ರಶಂಸೆ ಲಭಿಸಿತು.

1924: ಸಾಹಿತಿ ನಿರಂಜನ ಜನನ.

1920: ಸಾಹಿತಿ ಮಲ್ಲಿಕಾ ಕಡಿದಾಳ್ ಮಂಜಪ್ಪ ಜನನ.

1919: ಬ್ರಿಟಿಷ್ ವಿಮಾನ ಹಾರಾಟಗಾರರಾದ ಜಾನ್ ಅಲ್ ಕಾಕ್ ಮತ್ತು ಆರ್ಥರ್ ಬ್ರೌನ್ ನ್ಯೂ ಫೌಂಡ್ ಲ್ಯಾಂಡ್ ನಿಂದ ಐರ್ಲೆಂಡ್ ವರೆಗಿನ ಮೊತ್ತ ಮೊದಲ ನಿಲುಗಡೆ ರಹಿತ ಟ್ರಾನ್ಸ್ ಅಟ್ಲಾಂಟಿಕ್ ಹಾರಾಟವನ್ನು ಪೂರ್ಣಗೊಳಿಸಿದರು. 1890 ಮೈಲು ದೂರದ ಈ ಹಾರಾಟವನ್ನು ಅವರು ವಿಕರ್ಸ್ ವಿಮಿ ಬಾಂಬರ್ ವಿಮಾನದಲ್ಲಿ ಕೇವಲ 16 ಗಂಟೆಗಳಲ್ಲಿ ಮುಗಿಸಿದರು. ಈ ವಿಮಾನವನ್ನು ಲಂಡನ್ನಿನ ಸೈನ್ಸ್ ಮ್ಯೂಸಿಯಂಮ್ಮಿನಲ್ಲಿ ಇಡಲಾಗಿದೆ.

1915: ಅಮೆರಿಕದ ವೈದ್ಯ ಥಾಮಸ್ ಎಚ್. ವೆಲ್ಲರ್ ಜನ್ಮದಿನ. ಪೋಲಿಯೋ ವ್ಯಾಕ್ಸಿನ್ ಅಭಿವೃದ್ಧಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು.

1911: ಖ್ಯಾತ ಚಿಂತನಶೀಲ ಕಲಾವಿದ ಕೆ. ಕೃಷ್ಣ ಹೆಬ್ಬಾರ (15-6-1911ರಿಂದ 26-3-1996) ಅವರು ನಾರಾಯಣ ಹೆಬ್ಬಾರ- ಸೀತಮ್ಮ ದಂಪತಿಯ ಮಗನಾಗಿ ಉಡುಪಿ ಬಳಿಯ ಕಟ್ಟಂಗೇರಿಯಲ್ಲಿ ಜನಿಸಿದರು.

1907: ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಗಣೇಶ ಗೋರೆ ನಿಧನ.

1869: ಅಮೆರಿಕನ್ ಸಂಶೋಧಕ ಜಾನ್ ವೆಸ್ಲೆ ಹ್ಯಾಟ್ ಸೆಲ್ಯುಲಾಯ್ಡ್ ನ್ನು (ತೆಳುವಾದ ಪಾರದರ್ಶಕ ಪ್ಲಾಸ್ಟಿಕ್ ವಸ್ತು) ಕಂಡುಹಿಡಿದ.

1762: ಮಿಂಚು ಅಂದರೆ ವಿದ್ಯುತ್ ಎಂಬುದಾಗಿ ಸಾಬೀತುಪಡಿಸುವಂತಹ ಪ್ರಯೋಗವನ್ನು ಬೆಂಜಮಿನ್ ಫ್ರಾಂಕ್ಲಿನ್ ಕೈಗೊಂಡ. ನಂತರ  ಅದೇ ವರ್ಷ ಈತ ತನ್ನ ಮನೆಯಲ್ಲಿ ಮಿಂಚುವ ಸಲಾಕೆಯನ್ನು ಇರಿಸಿ ಅದಕ್ಕೆ ಗಂಟೆಯ ಸಂಪರ್ಕ ಕಲ್ಪಿಸಿದ. ಈ ಮಿಂಚುವ ಸಲಾಕೆಗೆ ವಿದ್ಯುತ್ ಸಂಪರ್ಕ ನೀಡಿದಾಗ ಅದು ಮಿಂಚುವುದರೊಂದಿಗೆ ಅದರ ಸಂಪರ್ಕದಲ್ಲಿದ್ದ ಗಂಟೆ ಸದ್ದು ಮಾಡಿತು. ಮುಂದೆ ಈತ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದ.

1659: ಮೊಘಲ್ ದೊರೆ ಔರಂಗಜೇಬ್ ಸಿಂಹಾಸನವನ್ನು ಏರಿದ. ಆತ 1659ರ ಮೇ ತಿಂಗಳಲ್ಲಿ ದೆಹಲಿ ಪ್ರವೇಶಿಸಿದ. ಆತನ ದೆಹಲಿ ಪ್ರವೇಶದ ಸಂಭ್ರಮಾಚರಣೆ ಮೇ 22ರಂದು ಆರಂಭವಾಗಿ ಆಗಸ್ಟ್ 29ರವರೆಗೆ 14 ವಾರಗಳ ಕಾಲ ನಡೆಯಿತು.
1215: ಸರ್ರೆಯ ರನ್ನಿಮೇಡ್ ನಲ್ಲಿ ದೊರೆ ಕಾನ್ `ಮ್ಯಾಗ್ನಕಾರ್ಟ'ಕ್ಕೆ ಸಹಿ ಮಾಡಿದ. ಇದು ರಾಜಕೀಯ ಹಕ್ಕುಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಸ್ಥಾಪನೆಗೆ ನಾಂದಿ ಹಾಡಿತು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment