ಇಂದಿನ ಇತಿಹಾಸ History Today ಜೂನ್ 12
2019: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಈದಿನ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಐವರು ಯೋಧರು ಹುತಾತ್ಮರಾಗಿದ್ದು,
ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಒಬ್ಬ ನಾಗರಿಕ ಸೇರಿ ಇತರ ಐವರು ಗಾಯಗೊಂಡರು. ಭಾರತೀಯ ಪಡೆ ನಡೆಸಿದ ಪ್ರತಿದಾಳಿಯಲ್ಲಿ ಒಬ್ಬ ಭಯೋತ್ಪಾದಕ ಹತನಾದ. ಭಯೋತ್ಪಾದಕ
ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು,
ತೀವ್ರವಾಗಿ ಗಾಯಗೊಂಡಿದ್ದ ಒಬ್ಬ ಯೋಧ ಬಳಿಕ ಆಸ್ಪತ್ರೆಯಲ್ಲಿ ಅಸು ನೀಗಿರುವುದಾಗಿ ವರದಿಗಳು ಹೇಳಿದವು. ಪಾಕಿಸ್ತಾನ ಮೂಲದ, ಮುಸ್ತಾಖ್ ಅಹ್ಮದ್ ಝರ್ಗಾರ್ ನೇತೃತ್ವದ ಅಲ್- ಉಮರ್ - ಮುಜಾಹಿದೀನ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿತು. ಇಬ್ಬರು ಭಯೋತ್ಪಾದಕರು ಈ ದಾಳಿ ನಡೆಸಿದ್ದು, ಅವರಲ್ಲಿ ಒಬ್ಬನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ ಎಂದು ವರದಿಗಳು ಹೇಳಿದವು. ಗುಂಡಿನ ಘರ್ಷಣೆ ಇನ್ನೂ ಮುಂದುವರೆದಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಜಮ್ಮು ಮತ್ತು
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೆಪಿ ರಸ್ತೆಯಲ್ಲಿ ಈದಿನ ಭಯೋತ್ಪಾದಕ ದಾಳಿ ನಡೆದಿದೆ. ಭಯೋತ್ಪಾದಕರು ಯೋಧರ ಮೇಲೆ ಸ್ವಯಂಚಾಲಿತ ರೈಫಲ್ಗಳಿಂದ ಗುಂಡು ಹಾರಿಸುವುದರ ಜೊತೆಗೆ ಗ್ರೆನೇಡ್ ದಾಳಿಯನ್ನೂ ನಡೆಸಿದರು ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿತು. ಅನಂತನಾಗ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅರ್ಶದ್ ಅಹ್ಮದ್ ಅವರೂ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿ ಹೇಳಿತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನ ಮೂಲದ ಜೈಶ್ -ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯು ಆತ್ಮಹತ್ಯಾ ಭಯೋತ್ಪಾದಕ ದಾಳಿಯಲ್ಲಿ ಸುಮಾರು ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿಪಡೆದ ಘಟನೆಯ ಕೆಲವು ತಿಂಗಳುಗಳ ಬಳಿಕ ಈ ಭಯೋತ್ಪಾದಕ ದಾಳಿ ನಡೆದಿದೆ. ಪುಲ್ವಾಮ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಬಾಲಾಕೋಟ್ನಲ್ಲಿ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿತ್ತು . ಇದಕ್ಕೆ ವಿರುದ್ಧವಾಗಿ ಪಾಕಿಸ್ತಾನವೂ ಭಾರತೀಯ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿಗೆ ಯತ್ನಿಸಿದಾಗ ಉಭಯ ರಾಷ್ಟ್ರಗಳ ಮಧ್ಯೆ ’ವೈಮಾನಿಕ ಡಾಗ್ ಫೈಟ್’ ನಡೆದಿತ್ತು. ಅನಂತನಾಗ್ ಬಸ್ಸು ನಿಲ್ದಾಣದ ಬಳಿ ಪಹರೆ ನಿರತರಾಗಿದ್ದ ಯೋಧರ ಮೇಲೆ ಭಯೋತ್ಪಾದಕರು ಮೊದಲು ಗುಂಡು ಹಾರಿಸಿದರು ಎಂದು ಸಿಆರ್ಪಿಎಫ್ ಮೂಲಗಳು ಹೇಳಿದವು. ನಾಲ್ಕು ಗುಂಪುಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ
ಸಿಆರ್ಪಿಎಫ್ ಯೋಧರ ಮೇಲೆ ಪಕ್ಕದ ಕಟ್ಟಡಗಳು ಮತ್ತು ಅಡ್ಡರಸ್ತೆಗಳ ಮೂಲಕ ಗುಂಡಿನ ದಾಳಿ ನಡೆಯಿತು. ಕೆಪಿ ಚೌಕದ ಜನರಲ್ ಬಸ್ಸು ನಿಲ್ದಾಣದ ಸಮೀಪ ವಾಹನದಲ್ಲಿ ಬಂದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಮೊದಲು ಗುಂಡು ಹಾರಿಸಿದರು ಎಂದು ಸಿಆರ್ಪಿಎಫ್ ಮೂಲಗಳೂ ಹೇಳಿದವು. ಕೆಪಿ ರಸ್ತೆಯು ಅಮರನಾಥ ಯಾತ್ರೆಯ ಮಾರ್ಗದಲ್ಲಿದೆ. ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿರುವ ಯೋಧರನನ್ನು ತತ್ ಕ್ಷಣಕ್ಕೆ ಜಂಗ್ಲತ್ ಮಂಡಿ ಆಸ್ಪತ್ರೆಗೆ ಒಯ್ಯಲಾಯಿತು. ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ಕರೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು
ತಿಳಿಸಿದರು. ಭಯೋತ್ಪಾದಕ ದಾಳಿ ’ಫಿದಾಯೀನ್’
(ಆತ್ಮಹತ್ಯಾ) ದಾಳಿಯಂತೆ ಕಂಡು ಬರುತ್ತಿದೆ ಎಂದು ಅನಂತನಾಗ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ನುಡಿದರು. ಪಾಕ್ ವಾಯುಮಾರ್ಗ ತ್ಯಜಿಸಿದ ಪ್ರಧಾನಿ ಮೋದಿ: ಈ ಮಧ್ಯೆ ಪ್ರುಮುಖ ಭದ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿಮಾನವು ಜೂನ್ ೧೩ರಂದು ಪಾಕಿಸ್ತಾನದ ವಾಯುಮಾರ್ಗವನ್ನು ಕೈಬಿಟ್ಟು ಬಳಸುಮಾರ್ಗದ ಮೂಲಕ ಕಿರ್ಗಿಸ್ಥಾನಕ್ಕೆ ಶಾಘಾಯಿ ಸಹಕಾರ ಸಂಘಟನೆಯ (ಎಸ್ಸಿಒ) ಶೃಂಗದಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಪಾಕಿಸ್ತಾನದ ವಾಯುಮಾರ್ಗವಾಗಿ ಸಾಗಲು ಪಾಕಿಸ್ತಾನವು ದಿನದ ಹಿಂದೆಯಷ್ಟೇ ಪ್ರಧಾನಿ ಮೋದಿ ಅವರಿಗೆ ಅನುಮತಿ ನೀಡಿತ್ತು. ಭದ್ರತಾ ಪಡೆಗಳು ಮತ್ತು ಸಿಆರ್ಪಿಎಫ್ ಯೋಧರ ಮಧ್ಯೆ ಗುಂಡಿನ ಘರ್ಷಣೆ ನಡೆಯುವುದಕ್ಕೆ ಕೆಲವು
ಗಂಟೆಗಳ ಮುನ್ನ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಶಸ್ತ್ರಾಸ್ತ್ರ ತೊರೆದು ಮಾತುಕತೆಗೆ ಬರುವಂತೆ ಭಯೋತ್ಪಾದಕರಿಗೆ ಸೂಚಿಸಿದ್ದರು. ಸಂವಿಧಾನದ ವ್ಯಾಪ್ತಿಯಲ್ಲಿ ತಮಗೆ ಏನು ಬೇಕೋ ಅದನ್ನು ಪಡೆದುಕೊಳ್ಳಲು ಮಾತುಕತೆಯೊಂದೇ ಮಾರ್ಗ. ಹಿಂಸಾಚಾರದ ಮೂಲಕ ಭಾರತವನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಜುಲೈ ೧ರಂದು ಅಮರನಾಥ ಯಾತ್ರೆ ಆರಂಭವಾಗಲಿದ್ದು ಅದಕ್ಕೆ ಮುನ್ನ ನಡೆದಿರುವ ಈ ಭಯೋತ್ಪಾದಕ ದಾಳಿಯು ಯಾತ್ರೆಯ ಭದ್ರತೆಗೆ ಸಂಬಂಧಿಸಿದಂತೆ ಕಳವಳಕ್ಕೆ ಕಾರಣವಾಯಿತು. ೧೫
ಕೋರ್ಗಳ ಜನರಲ್ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅವರು ವಾರ್ಷಿಕ ಅಮರನಾಥ ಯಾತ್ರೆ ಸಲುವಾಗಿ ಸಕಲ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜೂನ್ ೧೦ರಂದು ತಿಳಿಸಿದ್ದರು. ಹೊಣೆ ಹೊತ್ತ ಅಲ್-ಉಮರ್ ಮುಜಾಹಿದೀನ್: ಕಾಶ್ಮೀರಿ ಸುದ್ದಿ ಸಂಸ್ಥೆಯ ಪ್ರಕಾರ ಪಾಕಿಸ್ತಾನ ಮೂಲದ, ಮುಸ್ತಾಖ್ ಅಹ್ಮದ್ ಝರ್ಗಾರ್ ನೇತೃತ್ವದ ಅಲ್- ಉಮರ್ - ಮುಜಾಹಿದೀನ್ ಸಂಘಟನೆಯ ದಾಳಿಯ ಹೊಣೆ ಹೊತ್ತಿದೆ. ಅಹ್ಮದ್ ಝರ್ಗಾರ್ ೧೯೯೯ರಲ್ಲಿ ಪಾಕಿಸ್ತಾನಕ್ಕೆ ಅಪಹರಿಸಲಾಗಿದ್ದ ಭಾರತೀಯ ವಿಮಾನ ಐಸಿ೮೧೪ರ ಪ್ರಯಾಣಿಕರ ಬಿಡುಗಡೆ ಸಲುವಾಗಿ ಭಾರತ ಬಿಡುಗಡೆ ಮಾಡಿದ್ದ ಮಸೂದ್ ಅಜರ್ ಜೊತೆಗೆ ಬಿಡುಗಡೆಯಾಗಿದ್ದ ಭಯೋತ್ಪಾದಕ ಎನ್ನಲಾಯಿತು.
2019:
ಆಗ್ರಾ: ಉತ್ತರ ಪ್ರದೇಶ ವಕೀಲರ ಮಂಡಳಿಯ (ಬಾರ್ ಕೌನ್ನಿಲ್) ಅಧ್ಯಕ್ಷೆ ದರ್ವೇಶ್ ಸಿಂಗ್ ಅವರನ್ನು ನ್ಯಾಯಾಲಯದ ಆವರಣದಲೇ ವಕೀಲರೊಬ್ಬರು ಗುಂಡಿಟ್ಟು ಕೊಲೆಗೈದಿದ್ದು, ಗುಂಡು ಹಾರಿಸಿದ ವ್ಯಕ್ತಿ ಬಳಿಕ ಅಲ್ಲೇ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಘಟಿಸಿದೆ ಎಂದು ಪೊಲೀಸರು ತಿಳಿಸಿದರು. ದರ್ವೇಶ್ ಸಿಂಗ್ ಅವರು ಉತ್ತರ ಪ್ರದೇಶ ವಕೀಲರ ಮಂಡಳಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಕೇವಲ ಎರಡು ದಿನಗಳ ಹಿಂದೆ ಆಯ್ಕೆಯಾಗಿದ್ದರು.
ಮಧ್ಯಾಹ್ನ ೨.೩೦ರ ವೇಳೆಗೆ ದಾಳಿ ನಡೆದ ಹೊತ್ತಿನಲ್ಲಿ ಸಿಂಗ್ ಅವರು ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದರು. ವಕೀಲ ಮನೀಶ್ ಶರ್ಮ ಎಂಬ ವ್ಯಕ್ತಿ ದರ್ವೇಶ್ ಅವರನ್ನು ಗುಂಡು ಹೊಡೆದ ಕೊಂದಿದ್ದಾನೆ ಎಂದು ಆಗ್ರಾ ನಗರ ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರವೀಣ್ ವರ್ಮಾ ಹೇಳಿದರು. ಹಲ್ಲೆ ನಡೆಸಿದ ವಕೀಲ ದೀರ್ಘ ಕಾಲದಿಂದ ಸಿಂಗ್ ಅವರಿಗೆ ಪರಿಚಿತನಾದ ವ್ಯಕ್ತಿಯಾಗಿದ್ದ ಎಂದು ವರ್ಮಾ ನುಡಿದರು. ಸಿಂಗ್ ಮೇಲೆ ಮೂರು ಗುಂಡು ಹಾರಿಸಿದ ಬಳಿಕ ಆತ ಸ್ವತಃ ಗುಂಡು ಹಾರಿಸಿಕೊಳ್ಳಲು ಯತ್ನಿಸಿದ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು. ವಕೀಲ ಬಳಸಿದ ಪಿಸ್ತೂಲು ಪರವಾನಗಿ ಹೊಂದಿರುವ ಆಯುಧವಾಗಿದ್ದು, ಪೊಲೀಸರು ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಘಟನೆ ಬಗ್ಗೆ ಕ್ಷಿಪ್ರ ಪ್ರತಿಕ್ರಿಯೆ ನೀಡಿದ ರಾಷ್ಟ್ರೀಯ ಲೋಕದಳ ವಕ್ತಾರ ಅನಿಲ್ ದುಬೆ ಅವರು ’ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಾಲಿ ಆಡಳಿತದಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಹದಗೆಟ್ಟಿದೆ. ಕೊಲೆ, ಲೂಟಿ, ಅತ್ಯಾಚಾರದಂತಹ ಅಪರಾಧಗಳು ಹೆಚ್ಚಿವೆ. ವಕೀಲರ ಮಂಡಳಿಯ ಮಹಿಳಾ ಅಧ್ಯಕ್ಷರ ಹತ್ಯೆಯಂತೂ ನಿಶ್ಚಿತವಾಗಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಒಂದು ಕಪ್ಪು ಚುಕ್ಕೆ’ ಎಂದು ಟೀಕಿಸಿದರು.
ಮುಖ್ಯಮಂತ್ರಿಯವರು ಅಧಿಕಾರಿಗಳ ಜೊತೆ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಭೆ ನಡೆಸುತ್ತಿರುವಾಗಲೇ ಇನ್ನೊಂದೆಡೆಯಲ್ಲಿ
ಜನರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ’ ಎಂದು ದುಬೆ ದೂರಿದರು. ವಕೀಲರ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಸಿಂಗ್ ಅವರು ಇದೇ ಚೊಚ್ಚಲ ಭೇಟಿ ನೀಡಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರನ್ನು ದುಬೆ ಉಲ್ಲೇಖಿಸಿದರು. ದರ್ವೇಶ್ ಸಿಂಗ್ ಗೌರವಾರ್ಥ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ವಕೀಲ ಶರ್ಮ ದಿಢೀರನೇ ಎದ್ದು ನಿಂತು ಆಕೆಯ ಮೇಲಕ್ಕೆ ಗುಂಡು ಹಾರಿಸಿದ ಎಂದು ಪೊಲೀಸರು ಹೇಳಿದರು. ಅಲ್ಲಿದ್ದವರು ಪ್ರತಿಕ್ರಿಯಿಸುವುದಕ್ಕೂ ಮುನ್ನವೇ ಆತ ಸ್ವತಃ ಗುಂಡು ಹಾರಿಸಿಕೊಳ್ಳಲೂ ಯತ್ನಿಸಿದ ಎಂದು
ಅವರು ನುಡಿದರು. ಗಾಯಗೊಂಡಿರುವ ಶರ್ಮನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು
ಆತನ ಸ್ಥಿತಿಯೂ ಗಂಭೀರವಾಗಿದೆ ಎಂದ ಪೊಲೀಸರು ಹೇಳಿದರು. ಸಿಂಗ್ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
2019: ಲಂಡನ್: ಶರಣಾಗತನಾಗಲು ವಿಫಲರಾಗಬಹುದು ಮತ್ತು ಸಾಕ್ಷ್ಯದಲ್ಲಿ ಹಸ್ತಕ್ಷೇಪ ನಡೆಸಬಹುದು ಎಂಬುದಾಗಿ ನಂಬಲು ಸಾಕಷ್ಟು ಆಧಾರಗಳಿವೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಹೈಕೋರ್ಟ್ ನ್ಯಾಯಮೂರ್ತಿ ಇಂಗ್ರಿಡ್ ಸಿಮ್ಲೆರ್ ಹೇಳುವುದರೊಂದಿಗೆ
ಗಡೀಪಾರು ಪ್ರಕರಣದಲ್ಲಿ ಜಾಮೀನು ಪಡೆಯಲು ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್ ಮೋದಿ ನಡೆಸಿದ ನಾಲ್ಕನೇ ಯತ್ನವೂ ಈದಿನ ವಿಫಲಗೊಂಡಿತು. ನೀರವ್ ಮೋದಿ ಅವರ ವಕೀಲ ಕ್ಲೈರ್ ಮಾಂಟ್ಗೊಮೆರಿ ಅವರು ಮಂಗಳವಾರ ಜಾಮೀನು ಕೋರಿಕೆಗೆ ವಿವಿಧ ಕಾರಣಗಳನ್ನು ನ್ಯಾಯಾಲಯಕ್ಕೆ ವಿವರಿಸಿದ್ದರು. ಭಾರತವನ್ನು ಪ್ರತಿನಿಧಿಸಿದ ಕ್ರೌನ್ ಪ್ರಾಸೆಕ್ಯೂಷನ್ ಸರ್ವೀಸ್ (ಸಿಪಿಎಸ್) ಅದನ್ನು ವಿರೋಧಿಸಿತ್ತು. ನೀರವ್ ಮೋದಿಯನ್ನು ಪಶ್ಚಿಮ ಲಂಡನ್ನಿನ ವಾಂಡ್ಸ್ವರ್ತ್ ಸೆರೆಮನೆಯಲ್ಲಿ ಇರಿಸಲಾಗಿತ್ತು. ಗಡೀಪಾರು ಪ್ರಕರಣದಲ್ಲಿ ಮುಂದಿನ ಹಂತ ವಾಡಿಕೆಯ ರಿಮಾಂಡ್ ವಿಚಾರಣೆಯಾಗಿದ್ದು ಜೂನ್ ೨೭ರಂದು ವೆಸ್ಟ್ಮಿನ್ಸ್ಟರ್ ನಡೆಯಲಿದೆ. ಅದನ್ನು ೨೮ ದಿನಗಳ ಅವಧಿಗೆ ಇನ್ನೊಮ್ಮೆ ವಿಸ್ತರಿಸಬಹುದು. ಮುಂದಿನ ವಿಚಾರಣೆ ಇದೇ ನ್ಯಾಯಾಯದಲ್ಲಿ ಜುಲೈ ೨೯ರಂದು ನಡೆಯಲಿದೆ. ನ್ಯಾಯಾಲಯದಲ್ಲಿ ನೀರವ್ ಮೋದಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ತಮ್ಮ ಆದೇಶವನ್ನು ಓದಿ ಹೇಳಿದ ನ್ಯಾಯಮೂರ್ತಿ ಇಂಗ್ರಿಡ್ ಸಿಮ್ಲೆರ್ ಅವರು ನೀರವ್ ಮೋದಿ ಪ್ರಕರಣದ ಕಾಲಗಣನೆಯನ್ನು ನಿಗದಿ ಪಡಿಸಿದರು. ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಂಚನೆ ನಿವಾರಣೆಯ ಒಳ್ಳೆಯ ಉದ್ದೇಶದಿಂದ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು. ಸಾಕ್ಷ್ಯದಲ್ಲಿ ಕೈಯಾಡಿಸಲು ಮತ್ತು ಸಾಕ್ಷ್ಯ ನಾಶಕ್ಕೆ ಯತ್ನ ನಡೆದಿದೆ ಎಂಬುದಾಗಿ ನಂಬಲು ಸಾಕಷ್ಟು ಆಧಾರಗಳಿವೆ ಎಂದು ಆಕೆ ಹೇಳಿದರು. ಅವರಿಗೆ (ನೀರವ್ ಮೋದಿ) ಹಣ ಪಡೆಯಲು ಮಾರ್ಗಗಳು ಇರುವಂತೆ ಕಾಣುತ್ತದೆ. ಅವರಿಗೆ ಗಡೀಪಾರು ತಪ್ಪಿಸಿಕೊಳ್ಳಲು ಇಂಗ್ಲೆಂಡ್ ಏಕೆ ಸುರಕ್ಷಿತ ಸ್ವರ್ಗವಾಗಿರಬೇಕು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ನ್ಯಾಯಮೂರ್ತಿ ಹೇಳಿದರು. ಗಡೀಪಾರು ತಪ್ಪಿಸಿಕೊಳ್ಳಲು
ಜಗತ್ತಿನಲ್ಲಿ ಬೇಕಾದಷ್ಟು ಸ್ಥಳಗಳು ಇನ್ನೂ ಇವೆ ಎಂದು ನ್ಯಾಯಮೂರ್ತಿ ನುಡಿದರು. ೪೮ರ ಹರೆಯದ ನೀರವ್ ಮೋದಿಯನ್ನು ಮಾರ್ಚ್ ೧೯ರಂದು ಬಂಧಿಸಲಾಗಿದ್ದು, ಈವರೆಗೆ ಅವರು ಸಲ್ಲಿಸಿದ್ದ ಮೂರು ಜಾಮೀನು ಅರ್ಜಿಗಳು ಮ್ಯಾಜಿಸ್ಟ್ರೇಟ್
ಕೋರ್ಟಿನಲ್ಲಿ ತಿರಸ್ಕೃತಗೊಂಡಿವೆ.
ಈಗ ಅವರು ಸಾಂದರ್ಭಿಕ ಸ್ಥಿತಿಗತಿಯಲ್ಲಿ
ಬದಲಾವಣೆಯಾಗಿದ್ದರೆ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ಪುನಃ ಅದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮೋಂಟ್ಗೊಮೆರಿ ಅವರು ನೀರವ್ ಮೋದಿ ಮತ್ತು ಅವರ ಅಮೆರಿಕ ಮೂಲದ ಸಹೋದರ ನಿಹಾಲ್ ಮೋದಿ ಅವರು ಸಾಕ್ಷ್ಯದಲ್ಲಿ ಕೈಯಾಡಿಸಲು ಯತ್ನಿಸಿದ್ದಾರೆ ಎಂಬ ಪ್ರಾಸೆಕ್ಯೂಷನ್ ವಾದವನ್ನು ತಿರಸ್ಕರಿಸಿದ್ದರು,
ಇದೇ ವೇಳೆಗೆ ಸಿಪಿಎಸ್ ವಕೀಲ ನಿಕ್ ಹೀಮ್ ಅವರು ಇಂತಹ ಯತ್ನಗಳ ಬಗೆಗಿನ ತಮ್ಮ ವಾದವನ್ನು ಪುರುಚ್ಚರಿಸಿದ್ದರು. ನೀರವ್ ಮೋದಿ ಸೆರೆವಾಸವು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲುದು ಎಂಬ ವಾದದ ಬಗ್ಗೆ ಕೋರ್ಟಿನಲ್ಲಿ ತೀವ್ರ ವಾಗ್ವಾದ ನಡೆದಿತ್ತು. ವೈದ್ಯಕೀಯ ವರದಿಗಳನ್ನು ಸಲ್ಲಿಸಲಾಯಿತು. ಆದರೆ ಅವು ರಹಸ್ಯ ಸ್ವರೂಪದ್ದಾದ ಕಾರಣ ಅವುಗಳನ್ನು ನ್ಯಾಯಾಲಯದಲ್ಲಿ ಓದಿ ಹೇಳಲಿಲ್ಲ. ವೈದ್ಯಕೀಯ ವರದಿಗಳು ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಈ ಕಲಾಕ್ಕೆ ಸಾಕ್ಷ್ಯಗಳಾಗಿವೆ ಎಂದು ಹೀಮ್ ನುಡಿದರು. ’ಸೆರೆಮನೆಯಲ್ಲಿನ ಪರಿಸ್ಥಿತಿ ಅತ್ಯಂತ ತೀವ್ರ ಸ್ವರೂಪದ್ದಾಗಿದ್ದು ವೈಯಕ್ತಿಕವಾಗಿ ಅತ್ಯಂತ ಕಷ್ಟಕರವಾಗಿದೆ. ಸೆರೆವಾಸದ ಅನುಭವವು ಅವರಿಗೆ ಮಾನಸಿಕವಾಗಿ ಯಾತನೆ ಉಂಟು ಮಾಡಿದೆ. ೨೪ ಗಂಟೆಗಳ ನಿಗಾಕ್ಕೆ ಒಳಗಾಗಲು ಅವರು ಸಿದ್ಧರಿದ್ದಾರೆ, ಆದ್ದರಿಂದ ಜಾಮೀನು ಷರತ್ತುಗಳನ್ನು ಉಲ್ಲಂಘಿಸುವ ಪ್ರಶ್ನೆ ಇಲ್ಲ ಎಂದು ಮಾಂಟ್ಗೊಮೆರಿ ವಾದಿಸಿದರು. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿಗಳ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ನೀರವ್ ಮೋದಿಯವರನ್ನು ಮಾರ್ಚ್ ೧೯ರಂದು ಸ್ಲಾಟ್ಲೆಂಡ್ ಯಾರ್ಡ್ನಲ್ಲಿ ಬಂಧಿಸಲಾಗಿತ್ತು.
2019: ನವದೆಹಲಿ: ರಾಜ್ಯಸಭೆಯ ಬಿಜೆಪಿ
ಪಕ್ಷದ ನಾಯಕರಾಗಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ರನ್ನು ಆಯ್ಕೆ ಮಾಡಲಾಯಿತು. ಅರುಣ್
ಜೇಟ್ಲಿಯವರು ಅನಾ ರೋಗ್ಯದ ಕಾರಣ ದಿಂದ ಹೊಸ ಸಂಪು ಟದಲ್ಲಿ ಕಾರ್ಯ ಭಾರ ನಿರ್ವಹಿಸಲು ಸಾಧ್ಯವಿಲ್ಲ
ಎಂದು ಹೊರಗುಳಿದಿರುವ ಹಿನ್ನೆಲೆಯಲ್ಲಿ ಜೇಟ್ಲಿ ತೆರವು ಮಾಡಿದ ರಾಜ್ಯಸಭಾ ನಾಯಕನ ಸ್ಥಾನವನ್ನು ಗೆಹ್ಲೋಟ್
ತುಂಬಿದರು.
2019: ಬೆಂಗಳೂರು: ಐಎಂಎಜುವೆಲರ್ಸ್ ಬಹುಕೋಟಿ
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ೭ ಮಂದಿ ನಿರ್ದೇಶಕರು ಪೊಲೀಸರ ಮುಂದೆ ಶರಣಾಗತರಾದರು. ಈದಿನ ಸಂಜೆ
ಬೆಂಗಳೂರು ಪೂರ್ವ ವಿಭಾಗದ ಪೊಲೀಸರ ಮುಂದೆ ಐಎಂಎ ಕಂಪನಿಯ ಏಳು ನಿರ್ದೇಶಕರು ಶರಣಾದರು. ನಿಜಾಮುದ್ದೀನ್,
ನಾಸಿರ್ ಹುಸೇನ್, ನವೀದ್ ಅಹ್ಮದ್, ಅರ್ಶದ್ ಖಾನ್, ವಾಸಿಮ್, ಅನ್ಸರ್ ಪಾ?, ದಾದಾ ಪೀರ್ ಶರಣಾದ ಆರೋಪಿಗಳು.
ಪೊಲೀಸರ ಎದುರು ಶರಣಾದ ಈ ೭ ಮಂದಿ ವಂಚನೆಯ ಹಿಂದೆ ಹಾಗೂ ಮನ್ಸೂರ್ ಖಾನ್ ಕಾಣೆಯಾಗಿರುವ ಹಿಂದೆ ತಮ್ಮದೇನೂ
ಪಾತ್ರವಿಲ್ಲ. ಯಾವುದೇ ರೀತಿಯ ತನಿಖೆಗೆ ಸಹಕರಿಸಲು ತಾವು ಸಿದ್ಧ ಎಂದು ಡಿಸಿಪಿ ಎದುರು ಹೇಳಿಕೊಂಡಿದ್ದಾರೆ
ಎನ್ನ ಲಾಯಿತು. ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ
ಡಿಸಿಪಿ ರಾಹುಲ್ ಕುಮಾರ್ ಮಾತನಾಡಿ, ಐಎಂಎ ಪ್ರಕರಣ ಸಂಬಂಧ ಕಂಪನಿಯ ೭ ನಿರ್ದೇಶಕರನ್ನು ಅರೆಸ್ಟ್ ಮಾಡಿದ್ದೇವೆ.
ಆರೋಪಿಗಳನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ತೆಗೆದು ಕೊಳ್ಳಲಾಗುತ್ತದೆ.ಜೊತೆಗೆ
ಐಎಂಎ ಮಾಲೀಕರಿಗೆ ಸೇರಿದ ೨ ಕಾರುಗಳನ್ನು ಜಪ್ತಿ ಮಾಡಿದ್ದೇವೆ ಎಂದರು. ಹಗರಣದಲ್ಲಿ
ಬಂಧಿತ ನಿರ್ದೇಶಕರ ಪಾತ್ರವೇನು? ಹೂಡಿಕೆದಾರರಿಗೆ ವಂಚಿಸಲು ಇವರ ಕೈವಾಡಗಳೇನು? ಸೇರಿದಂತೆ ಇನ್ನಿತರ
ಮಾಹಿತಿಗಳ ಬಗ್ಗೆ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಆದರೆ, ಐಎಂಎ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾಗಿದ್ದಾನೆ.
ಇನ್ನು ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಟಿ ತಿನಿಖೆ ವಹಿಸಿದ್ದು, ಈಗಾಗಲೇ ತನಿಖಾ ತಂಡವು ಸಹ ರಚನೆಯಾಗಿತ್ತು.
2019: ಅಹ್ಮದಾಬಾದ್: ಅರಬ್ಬಿ ಸಮುದ್ರದಲ್ಲಿ
ಎದ್ದಿರುವ ’ವಾಯು’ ಚಂಡಮಾರುತವು ಗುಜರಾತ್ ಕರಾವಳಿಯ ಸಮೀಪಕ್ಕೆ
ಬರುತ್ತಿದ್ದಂತೆಯೇ ಅಧಿಕಾರಿಗಳು ಸೌರಾಷ್ಟ್ರ ಮತ್ತ ಕಛ್ ಪ್ರದೇಶದ ತಗ್ಗು ಪ್ರದೇಶಗಳ ೧.೬೦ ಲಕ್ಷ ಜನರನ್ನು
ಎತ್ತರದ ಸ್ಥಳಗಳಿಗೆ ಸ್ಥಳಾಂತರ ಮಾಡಿದರು. ’ವಾಯು’ ಚಂಡಮಾರುತವು ಗುಜರಾತ್ ಕರಾವಳಿಗೆ ಜೂನ್
13ರ ಗುರುವಾರ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಯಿತು. ಸೌರಾಷ್ಟ್ರ ಮತ್ತು ಕಛ್ ಪದೇಶಗಳಲ್ಲಿನ ಬಂದರುಗಳು
ಮತ್ತು ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಮುಂಜಾಗರೂಕತಾ ಕ್ರಮವಾಗಿ ಅಮಾನತುಗೊಳಿಸಲಾಗಿದೆ ಎಂದು
ಅಧಿಕಾರಿಗಳು ತಿಳಿಸಿದರು. ಇತ್ತೀಚಿನ ಹವಾಮಾನ ವರದಿಯ ಪ್ರಕಾರ ’ವಾಯು’ ಚಂಡಮಾರುತವು ಅತ್ಯಂತ ಭೀಕರ ಬಿರುಗಾಳಿಯಾಗಿ
ಪರಿವರ್ತನೆಗೊಂಡಿದ್ದು. ತನ್ನ ಮಾರ್ಗವನ್ನು ಸ್ವಲ್ಪ ಬದಲಿಸಿಕೊಂಡಿದ್ದು, ಈಗ ಗುಜರಾತಿನ ಪಶ್ಚಿಮ ಕರಾವಳಿಯಲ್ಲಿ
ದಕ್ಷಿಣದ ವೇರಾವಲ್ ಮತ್ತು ದ್ವಾರಕಾ ಮಧ್ಯೆ ಯಾವುದೇ ಸ್ಥಳದಲ್ಲಿ ಮಧ್ಯಾಹ್ನದ ವೇಳೆಗೆ ಅಪ್ಪಳಿಸಬಹುದು
ಎಂದು ಅಧಿಕಾರಿಗಳು ಹೇಳಿದರು. ಚಂಡಮಾರುತವು ಪ್ರಸ್ತುತ ವೇರಾವಲ್‌ನ ದಕ್ಷಿಣದಲ್ಲಿ ೨೮೦ ಕಿಮೀ ದೂರದಲ್ಲಿದೆ
ಎಂದು ಅವರು ನುಡಿದರು. ಗುಜರಾತ್
ಕರಾವಳಿಗೆ ಅಪ್ಪಳಿಸಿದ ಬಳಿಕ ಚಂಡಮಾರುತವು ಸೌರಾಷ್ಟ್ರ ಮತ್ತು ಕಚ್ ಕರಾವಳಿಯತ್ತ ಸಾಗಲಿದೆ ಎಂದು ಅಧಿಕಾರಿಗಳು
ನುಡಿದರು.
2018: ಸಿಂಗಪುರ: ಅಮೆರಿಕ ಅಧ್ಯಕ್ಷ ಡೊನಾಲ್ಡ್
ಟ್ರಂಪ್ ಮತ್ತು ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜಾಂಗ್ ಉನ್ ಅವರು ಸಿಂಗಪುರದಲ್ಲಿ ನಡೆದ ಚಾರಿತ್ರಿಕ
ಶೃಂಗ ಸಭೆಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಮತ್ತು ಪ್ರಚೋದನಕಾರಿ ಸಮರಕ್ಕೆ ಕಡಿವಾಣ ಹಾಕುವ ಒಪ್ಪಂದಕ್ಕೆ
ಸಹಿ ಹಾಕಿದರು. ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಭಯ ನಾಯಕರು ತಮ್ಮ ಐತಿಹಾಸಿಕ
ಶೃಂಗವನ್ನು ಶೀತಲ ಯುದ್ಧದ ವೈರಿಗಳ ನಡುವಿನ ಸಂಬಂಧಗಳ ಪ್ರಗತಿ ಎಂದು ಬಣ್ಣಿಸಿದರು. ಆದರೆ, ಪ್ಯಾಂಗ್‌ಯಾಂಗ್‌ನಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ
ಉತ್ತರ ಕೊರಿಯಾ ಸಮ್ಮತಿಸಿದೆಯಾದರೂ, ಅದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳು ಲಭ್ಯವಾಗಲಿಲ್ಲ. ಅಣ್ವಸ್ತ್ರ
ನಿಶ್ಯಸ್ತ್ರೀಕರಣ ಎಷ್ಟು ವರ್ಷಗಳಲ್ಲಿ ಹೇಗೆ ಪೂರ್ಣಗೊಳ್ಳುವುದು ಎಂಬುದು ಸ್ಪಷ್ಟವಾಗಲಿಲ್ಲ. ಉತ್ತರ ಕೊರಿಯಾ ಈ ನಿಟ್ಟಿನಲ್ಲಿ ಸಂಪೂರ್ಣ ಒಪ್ಪಂದ ಮಾಡಿಕೊಂಡಿಲ್ಲ
ಎಂದು ವರದಿಗಳು ತಿಳಿಸಿದವು. ಹೊಸ ಮೈತ್ರಿ ವರ್ಧನೆ
ಬಗ್ಗೆ ಘೋಷಣೆಗಳು ಪ್ರಕಟಿಸಿದರೂ, ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಬಗ್ಗೆ ಅವು ಸ್ಪಷ್ಟವಾಗಿಲ್ಲ. ಸಿಂಗಪುರದ ಸೆಂತೋಸಾ ದ್ವೀಪದಲ್ಲಿರುವ ಕೆಪೆಲ್ಲಾ ಹೋಟೆಲ್‌ನಲ್ಲಿ
ಈ ವಿಷಯ ಕುರಿತು ಇಬ್ಬರೂ ನಾಯಕರ ನಡುವೆ ಇದೇ ಮೊದಲ ಬಾರಿಗೆ ಮಾತುಕತೆ ನಡೆಯಿತು. ಇಡೀ ವಿಶ್ವವೇ ಬೆರಗುಗಣ್ಣಿನಿಂದ ಬಹು ನಿರೀಕ್ಷೆಯಲ್ಲಿ ನೋಡುತ್ತಿದ್ದ
ಈ ಶೃಂಗದಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಉತ್ತರ ಕೊರಿಯಾ, ಸಮ್ಮತಿಯನ್ನಷ್ಟೇ ಸೂಚಿಸಿರುವುದರಿಂದ
ಒಪ್ಪಂದದ ಬಗ್ಗೆ ಹಲವಾರು ಅನುಮಾನಗಳು ಉಳಿದವು. ಬೆಳಗ್ಗೆ
ಶೃಂಗದಲ್ಲಿ ಭೇಟಿಯಾದ ವಿಶ್ವದ ಪ್ರಭಾವಶಾಲಿ ಪ್ರಜಾಪ್ರಭುತ್ವದ ಉಭಯ ದೇಶಗಳ ನಾಯಕರು ಪರಸ್ಪರ ಹಸ್ತಲಾಘವ
ಮಾಡಿ, ನಗೆ ಬೀರಿದ್ದರು. ‘ಕೊರಿಯಾ ಪ್ಯಾಂಗ್‌ಯಾಂಗ್‌ನಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ’ ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜಾಂಗ್ ಉನ್
ಸಮ್ಮತಿಸಿದ್ದಾರೆ. ಈ ಮೂಲಕ ‘ಉತ್ತರ ಕೊರಿಯಾ ಅಣ್ವಸ್ತ್ರ ಕಾರ್ಯಾಚರಣೆಯಿಂದ ಸಂಪೂರ್ಣವಾಗಿ ಹಿಂದೆ
ಸರಿಯಬೇಕು’ ಎಂಬ ಅಮೆರಿಕದ ಬಹು ಕಾಲದ ಬೇಡಿಕೆ ಸ್ವಲ್ಪ
ಮಟ್ಟಿಗೆ ಈಡೇರಿದಂತಾಗಿದೆ ಎಂದು ಸುದ್ದಿ ಮೂಲಗಳು ಹೇಳಿದವು. ಉತ್ತರ ಕೊರಿಯಾ ಸಂಪೂರ್ಣವಾಗಿ ಅಣ್ವಸ್ತ್ರ
ಬಳಕೆ ತ್ಯಜಿಸಲು ಒಪ್ಪಿದರೆ ಅದಕ್ಕೆ ನಿಶ್ಚಿತವಾಗಿ ‘ವಿಶಿಷ್ಟ’ ಭದ್ರತೆ ಒದಗಿಸಲು ಸಿದ್ಧ
ಎಂದು ಅಮೆರಿಕ ಮಾತುಕತೆಯ ಮುನ್ನಾ ದಿನ ಭರವಸೆ ನೀಡಿತ್ತು. ಉಭಯ ನಾಯಕರ ಭೇಟಿಯ ಬಳಿಕ ’ಉಭಯ ರಾಷ್ಟ್ರಗಳ
ನಡುವಣ ಪ್ರಚೋದನಾಕಾರಿ ಯುದ್ಧಕ್ಕೆ ಕಡಿವಾಣ ಹಾಕುವುದಾಗಿ’ ಡೊನಾಲ್ಡ್ ಟ್ರಂಪ್ ಪ್ರಕಟಿಸಿದರು. ಅಮೆರಿಕ ದಕ್ಷಿಣ ಕೊರಿಯದಲ್ಲಿ ಸಮರಾಭ್ಯಾಸ ನಡೆಸುತ್ತಿದೆ
ಮತ್ತು ಸೋಲ್‌ನಲ್ಲಿ ಸುಮಾರು ೩೦,೦೦೦ ಅಮೆರಿಕನ್ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಉತ್ತರ
ಕೊರಿಯಾದ ಅಣ್ವಸ್ತ್ರ ಪರೀಕ್ಷೆಗೆ ಪ್ರತಿಯಾಗಿ ಅಲ್ಲಿ ಅಮೆರಿಕ ಅಣ್ವಸ್ತ್ರಗಳ ಅಭಿವೃದ್ಧಿ ಮತ್ತು ಪರೀಕ್ಷೆ
ನಡೆಸುತ್ತಿದೆ. ಇದರಿಂದ ಉಭಯ ರಾಷ್ಟ್ರಗಳ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಆದರೆ ಇದನ್ನು ಮುಂದುವರಿಸದಿರಲು
ಉಭಯ ರಾಷ್ಟ್ರಗಳು ಶೃಂಗ ಸಭೆಯಲ್ಲಿ ನಿರ್ಧರಿಸಿದವು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸೋಲ್‌ನಲ್ಲಿ
ಸಮರಾಭ್ಯಾಸ ನಡೆಸದಿರಲು ಮತ್ತು ಅಲ್ಲಿ ನಿಯೋಜಿಸಿರುವ ಅಮೆರಿಕನ್ ಪಡೆಗಳನ್ನು ವಾಪಸ್ ಕರೆಸಲು ಟ್ರಂಪ್
ನಿರ್ಧರಿಸಿದರು. ಉತ್ತರ ಕೊರಿಯಾ ಕೂಡ ಅಣ್ವಸ್ತ್ರ ಪರೀಕ್ಷೆ ಮತ್ತು ಸಂಗ್ರಹ ನಡೆಸದಿರಲು ನಿರ್ಧರಿಸಿದೆ. ಉಭಯ
ರಾಷ್ಟ್ರಗಳ ನಡುವಣ ಅಣ್ವಸ್ತ್ರ ಪೈಪೋಟಿ ಮತ್ತು ಪ್ರಚೋದನಾಕಾರಿ ಯುದ್ಧ ನಿಲ್ಲಿಸುವುದರಿಂದ, ದೊಡ್ಡ
ಮೊತ್ತದ ಹಣವನ್ನು ಉಳಿಸಬಹುದು ಮತ್ತು ನಮ್ಮ ಈ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತದೆ. ಹೀಗಾಗಿ
ಪರಸ್ಪರ ಒಪ್ಪಿಗೆಯ ಮೂಲಕ ಯುದ್ಧ ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಟ್ರಂಪ್ ಹೇಳಿದರು. ಏನಿದ್ದರೂ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದಂತೆ
ಶೃಂಗಸಭೆಯಲ್ಲಿ ಆಗಿರುವ ನಿರ್ಣಯಗಳ ವಿವರಗಳು ಹೊರಬರಲು ದಶಕಗಳು ಅಲ್ಲವಾದರೂ, ಕೆಲವು ವರ್ಷಗಳಾದರೂ
ಬೇಕಾಗಬಹುದು ಎಂದು ಹೇಳಲಾಯಿತು. ‘ನಾವಿಬ್ಬರೂ ಏನನ್ನಾದರೂ
ಮಾಡಲು ಬಯಸಿದ್ದೇವೆ. ನಾವಿಬ್ಬರೂ ಏನನ್ನಾದರೂ ಮಾಡಲಿದ್ದೇವೆ. ನಾವು ಅತ್ಯಂತ ವಿಶೇಷವಾದ ಬಾಂಧವ್ಯವನ್ನು
ಬೆಳೆಸಿದ್ದೇವೆ.’ ಎಂದು ಟ್ರಂಪ್ ಐತಿಹಾಸಿಕ ಶೃಂಗಸಭೆಯ ಸಮಾರೋಪದಲ್ಲಿ ಹೇಳಿದರು. ‘ಜನರಿಗೆ ಅತ್ಯಂತ ಖುಷಿಯಾಗಲಿದೆ’ ಎಂದು ಅವರು ನುಡಿದರು. ಟ್ರಂಪ್ ಮತ್ತು ಕಿಮ್ ಅವರು ಸಹಿ ಮಾಡಿದ ದಾಖಲೆಯು ಕೊರಿಯಾ
ಪರ್‍ಯಾಯದ್ವೀಪವನ್ನು ಸಂಪೂರ್ಣವಾಗಿ ಅಣ್ವಸ್ತ್ರ ಮುಕ್ತವನ್ನಾಗಿ ಮಾಡುವ ತೀರ್ಮಾನಕ್ಕೆ ದೃಢವಾದ ಬದ್ಧತೆಯನ್ನು
ವ್ಯಕ್ತ ಪಡಿಸಿತು.. ಇದಕ್ಕೆ ಪ್ರತಿಯಾದಿ ಉತ್ತರ ಕೊರಿಯಾಕ್ಕೆ ಭದ್ರತಾ ಖಾತರಿ ನೀಡಲು ಟ್ರಂಪ್ ಒಪ್ಪಿದರು. ಬಹಳಷ್ಟು
ಮಂದಿಯ ನಿರೀಕ್ಷೆಗಿಂತ ಒಪ್ಪಂದವು ಸಾಕಷ್ಟು ಮುಂದೆ ಹೋಗಿದೆ ಎಂದು ಟ್ರಂಪ್ ಹೇಳಿದರು. ಅಣ್ವಸ್ತ್ರ
ನಿಶ್ಯಸ್ತ್ರೀಕರಣದ ಕಾರ್ಯವನ್ನು ಯಾಂತ್ರಿಕವಾಗಿ ಮತ್ತು ಭೌತಿಕವಾಗಿ ಮಾಡಬೇಕಾಗಿರುವುದರಿಂದ ನಾವು
ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅದನ್ನು ಮಾಡುವೆವು ಎಂದು ಅವರು ನುಡಿದರು. ಅಮೆರಿಕ ಮತ್ತು ಉತ್ತರ ಕೊರಿಯಾದ ನಡುವಣ ಬಾಂಧವ್ಯ ಇನ್ನು
ಮುಂದೆ ಸಂಪೂರ್ಣವಾಗಿ ಬದಲಾಗಲಿದೆ ಎಂದು ಟ್ರಂಪ್ ಹೇಳಿದರೆ. ನಾವು ಹಳೆಯದನ್ನು ’ಹೂತು ಹಾಕಿ, ಹೊಸ
ದಾರಿಯಲ್ಲಿ ಸಾಗಲಿದ್ದೇವೆ’ ಎಂದು ಕಿಮ್ ಹೇಳಿದರು.
2018: ವಾರಾಣಸಿ : ಕೇಂದ್ರ ಸಚಿವೆ ಅನುಪ್ರಿಯಾ
ಪಟೇಲ್ ಅವರು ಉತ್ತರ ಪ್ರದೇಶದಲ್ಲಿ ಕಿಡಿಗೇಡಿಗಳಿಂದ ಚುಡಾವಣೆಗೆ ಗುರಿಯಾದ ಘಟನೆ ಘಟಿಸಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವೆಯಾಗಿರುವ
ಅನುಪ್ರಿಯಾ ಪಟೇಲ್ ಅವರು ಹಿಂದಿನ ರಾತ್ರಿ ತಮ್ಮ ಮಿರ್ಜಾಪುರ
ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ವಾರಾಣಸಿಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆಯಿತು. ಔರಾಯಿ - ಮಿರ್ಜಾಮುರಾದ್ ನಡುವೆ ಸಚಿವೆ ಅನುಪ್ರಿಯಾ ತಮ್ಮ
ಕಾರಿನಲ್ಲಿ ಬೆಂಗಾವಲು ಕಾರುಗಳೊಂದಿಗೆ ಸಾಗುತ್ತಿದ್ದಾಗ ಮೂವರು ಕಿಡಿಗೇಡಿಗಳು ನಂಬರ್ ಪ್ಲೇಟ್ ಇಲ್ಲದ
ಕಾರಿನಲ್ಲಿ ಅಡ್ಡ ಬಂದು ಅಶ್ಲೀಲ ಘೋಷಣೆಗಳನ್ನು ಕೂಗುತ್ತಾ ಓವರ್ ಟೇಕ್ ಮಾಡಿದರು. ಭದ್ರತಾ ಸಿಬಂದಿಯ ಎಲ್ಲ ಎಚ್ಚರಿಕೆಗಳನ್ನು ಈ ಕಿಡಿಗೇಡಿಗಳು
ಗಾಳಿಗೆ ತೂರಿ ತಮ್ಮ ದುಷ್ಕೃತ್ಯ ಮುಂದುವರೆಸಿದ್ದಲ್ಲದೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ಕೊನೆಗೂ
ಈ ಕಿಡಿಗೇಡಿಗಳನ್ನು ಮಿರ್ಜಾಮುರಾದ್ ಪೊಲೀಸರು ಬಂಧಿಸುವಲ್ಲಿ
ಸಫಲರಾದರು. ಕಿಡಿಗೇಡಿಗಳ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
2018: ಇಂದೋರ್ : ಸ್ವಯಂಘೋಷಿತ ಗುರು
ಮತ್ತು ಆಧ್ಯಾತ್ಮಿಕ ಸಲಹೆಗಾರ ಭಯ್ಯೂಜೀ ಮಹಾರಾಜ್
ಅವರು ಇಂದೋರಿನ ತಮ್ಮ ನಿವಾಸದಲ್ಲಿ ಸ್ವತಃ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ
ಘಟಿಸಿತು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ
ಭಯ್ಯೂಜೀ ಅವರನ್ನು ಇಂದೋರ್‌ನ ಬಾಂಬೆ ಹಾಸ್ಪಿಟಲ್ ಗೆ ತತ್ ಕ್ಷಣವೇ ಒಯ್ಯಲಾಯಿತಾದರೂ, ಆಸ್ಪತ್ರೆಯಲ್ಲಿ
ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಹಲವು ರಾಜಕಾರಣಿಗಳ ಆಧ್ಯಾತ್ಮಿಕ ಸಲಹೆಗಾರರಾಗಿದ್ದ ಭಯ್ಯೂಜೀ ಅವರು ಈಚೆಗೆ ತಮ್ಮ ಕೌಟುಂಬಿಕ
ಕಾರಣಗಳಿಗಾಗಿ ತೀವ್ರ ಮಾನಸಿಕ ಒತ್ತಡ, ಖಿನ್ನತೆ ಮತ್ತು
ಅಸಂತುಷ್ಟಿ ಅನುಭವಿಸುತ್ತಿದ್ದರು ಎಂದು ಹೇಳಲಾಯಿತು. ಈದಿನ ಮಧ್ಯಾಹ ೧.೫೭ರ ಸುಮಾರಿಗೆ ಆತ್ಮಹತ್ಯೆ
ಮಾಡಿಕೊಳ್ಳುವ ಮುನ್ನ ಅವರು ’ಮಾಸಿಕ ಶಿವರಾತ್ರಿ’ ಬಗ್ಗೆ ಟ್ವೀಟ್ ಮಾಡಿದ್ದರು. ಭಯ್ಯೂಜೀ ಅವರ ಮೂಲನಾಮ ಉದಯ್ ಸಿಂಗ್ ದೇಶ್‌ಮುಖ್. ಸದ್ಗುರು
ದತ್ತ ಧಾರ್ಮಿಕ್ ಏವಂ ಪಾರಮಾರ್ಥಿಕ್ ಟ್ರಸ್ಟ್ ಮತ್ತು ಸೂರ್ಯೋದಯ ಆಶ್ರಮದಂತಹ ಸಂಸ್ಥೆಗಳ ಸ್ಥಾಪಕರಾಗಿದ್ದರು. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಅನುಯಾಯಿಗಳನ್ನು
ಹೊಂದಿರುವ ಮಹಾರಾಜ್, ೨೦೧೬ರ ಏಪ್ರಿಲ್‌ನಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಿಸಿದ್ದರು. ಈ
ವರ್ಷದ ಏಪ್ರಿಲ್‌ನಲ್ಲಿ ಅವರಿಗೆ ಮಧ್ಯಪ್ರದೇಶ ಸರಕಾರ ಸಚಿವರ ಸ್ಥಾನಮಾನವನ್ನು ಘೋಷಿಸಿತ್ತು. ರಾಜ್ಯ
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನೀಡಿದ ಈ ಕೊಡುಗೆಯನ್ನು ಭಯ್ಯೂಜಿ ಅದನ್ನು ತಿರಸ್ಕರಿಸಿದ್ದರು. ೨೦೧೧ರಲ್ಲಿ
ಅಣ್ಣಾ ಹಜಾರೆಯವರು ಲೋಕಪಾಲ ವಿಧೇಯಕಕ್ಕಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಘೋಷಿಸಿದಾಗ ಭಯ್ಯೂಜಿ
ಮಹಾರಾಜ್ ದೇಶದ ಗಮನ ಸೆಳೆದಿದ್ದರು. ಕೇಂದ್ರ ಸರಕಾರದ ಜತೆ ಚರ್ಚಿಸಲು ಅಣ್ಣಾ ಸಿದ್ಧರಿಲ್ಲದಾಗ, ದಿವಂಗತ
ವಿಲಾಸ್‌ರಾವ್ ದೇಶ್‌ಮುಖ್ ಅವರು ಭಯ್ಯೂಜಿ ಅವರನ್ನು ಸಂಧಾನಕಾರರಾಗಿ ಮುಂಚೂಣಿಗೆ ತಂದಿದ್ದರು. ಇಂದೋರಿನ
ಸಿಲ್ವರ್ ಸ್ಪ್ರಿಂಗ್ ಕಾಲೋನಿಯಲ್ಲಿನ ತಮ್ಮ ನಿವಾಸದ ಎರಡನೇ ಮಹಡಿಯಲ್ಲಿ ಮಹಾರಾಜ್ ಅವರು ಸ್ವತಃ ಹಣೆಗೆ
ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದ ಅವರು ಇತ್ತೀಚೆಗೆ ತೀವ್ರ ಖಿನ್ನತೆಗೆ
ಒಳಗಾಗಿದ್ದರು ಎಂದು ಆಧ್ಯಾತ್ಮಗುರುವಿನ ನಿಕಟವತಿಗಳು ಹೇಳಿದರು. ಭಯ್ಯೂಜಿ ಮಹಾರಾಜ್ ಸಾವಿನ ಸುದ್ದಿ ಹರಡುತ್ತಿದ್ದಂತೆಯೇ
ನೂರಾರು ಮಂದಿ ಅನುಯಾಯಿಗಳು ಆಸ್ಪತ್ರೆಗೆಯ ಹೊರಗೆ ಜಮಾಯಿಸಿದರು. ಘಟನೆಗೆ ನಿಖರ ಕಾರಣ ಏನೆಂಬುದು ಖಚಿತವಾಗಲಿಲ್ಲ. ತನಿಖೆಯಿಂದಷ್ಟೇ
ಅದು ಗೊತ್ತಾಗಬೇಕಾಗಿದೆ. ಪಾರ್ಥಿವ ಶರೀರವನ್ನು ಶವ ಪರೀಕ್ಷೆಗಾಗಿ ಮೈ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು
ಇಂದೋರ್ ಕಲೆಕ್ಟರ್ ನಿಶಾಂತ್ ವರ್ವಡೆ ಹೇಳಿದರು. ತಮ್ಮ
ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಂದಾಗಿ ಭಯ್ಯೂಜಿ ಮಹಾರಾಜ್ ಅವರು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ
ಜನಪ್ರಿಯರಾಗಿದ್ದರು. ಚಲನ ಚಿತ್ರೋದ್ಯಮ, ರಾಜಕೀಯ
ಮತ್ತು ಕಾರ್ಪೋರೇಟ್ ಜಗತ್ತಿನಲ್ಲಿ ಭಯ್ಯೂಜಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದರು. ಮಾಜಿ
ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಂಎನ್ ಎಸ್ ಮುಖ್ಯಸ್ಥ ರಾಜ್
ಠಾಕ್ರೆ, ಗಾಯಕಿ ಲತಾ ಮಂಗೇಶ್ಕರ್, ನಟಿ ಮಿಲಿಂದ್ ಗುಣಾಜಿ ಮತ್ತಿತರರು ಅವರ ಅನುಯಾಯಿಗಳ ಪಟ್ಟಿಯಲ್ಲಿ
ಇದ್ದರು. ಮುಂಬೈಯಲ್ಲಿ ಶಿಕ್ಷಣ ಪೂರೈಸಿದ ಬಳಿಕ ಮಹಾರಾಜ್
ಅವರು ಅಪಾರೆಲ್ ಬ್ರಾಂಡ್ ಗಳಿಗಾಗಿ ಮಾಡೆಲಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ
ಅವರು ಗ್ಲಾಮರ್ ಜಗತ್ತಿಗೆ ವಿದಾಯ ಹೇಳಿ ಸದ್ಗುರು ದತ್ತ ಧಾರ್ಮಿಕ ಮತ್ತು ದತ್ತಿ ಸಂಸ್ಥೆ ಆರಂಭಿಸಿದರು.
೨೦೧೭ರ ಏಪ್ರಿಲ್ ನಲ್ಲಿ ಅವರು ತಮ್ಮ ಅನುಯಾಯಿಯಾಗಿದ್ದ ಡಾ. ಆಯುಷಿ ಅವರನ್ನು ಮದುವೆಯಾಗಿದ್ದರು. ಅವರಿಗೆ ಒಬ್ಬ ಪುತ್ರಿಯೂ ಜನಿಸಿದ್ದಳು. ನರ್ಮದಾ
ಸಂರಕ್ಷಣೆಗಾಗಿ ಮಾಡಿದ ಕೆಲಸವನ್ನು ಮನ್ನಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಸರ್ಕಾರ
ಸಚಿವ ಸ್ಥಾನಮಾನ ನೀಡಿದ್ದ ಐವರು ಸಂತರಲ್ಲಿ ಮಹಾರಾಜ್ ಕೂಡಾ ಒಬ್ಬರಾಗಿದ್ದರು. ಆದರೆ ಮಹಾರಾಜ್ ಅದನ್ನು
ತಿರಸ್ಕರಿಸಿದ್ದರು. ‘ಸಂತನಿಗೆ ಹುದ್ದೆ ಮಹತ್ವವಲ್ಲ,
ಜನರ ಸೇವೆಯಷ್ಟೇ ಮುಖ್ಯ’ ಎಂದು ಮಹಾರಾಜ್ ಹೇಳಿದ್ದುದನ್ನು
ಸುದ್ದಿ ಸಂಸ್ಥೆ ಉಲ್ಲೇಖಿಸಿ ವರದಿ ಮಾಡಿತ್ತು.
2017: ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಮಾತುಕತೆ ನಡೆಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಜೂನ್ 25–26ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಅವರು ಅಮೆರಿಕಕ್ಕೆ ನೀಡುತ್ತಿರುವ ಮೊದಲ ಭೇಟಿ ಇದು. ಈ ಹಿಂದೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದ ವೇಳೆ ತಮ್ಮ ದೇಶಕ್ಕೆ ಆಗಮಿಸುವಂತೆ ಮೋದಿ ಅವರಿಗೆ ಟ್ರಂಪ್ ಆಹ್ವಾನ ನೀಡಿದ್ದರು. ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರು ಮೂರು ಬಾರಿ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ. ಉಭಯ ನಾಯಕರ ಭೇಟಿ ವೇಳೆ ಎಚ್1ಬಿ ವೀಸಾ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದ ಮತ್ತಿತರ ವಿಷಯಗಳ ಬಗ್ಗೆ ಮಾತುಕತೆ ನಡೆಯುವ ನಿರೀಕ್ಷೆ ಇದೆ.
2017:
ಬೆಂಗಳೂರು: ಬಹು ದಿನಗಳಿಂದ ಸ್ಥಗಿತವಾಗಿದ್ದ ಐತಿಹಾಸಿಕ ಪತ್ರಿಕೆ ಹಾಗೂ ಕಾಂಗ್ರೆಸ್‌ನ
ಮುಖವಾಣಿ
‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ
ಮರು ಬಿಡುಗಡೆ ಮಾಡಿದರು. ನಗರದಲ್ಲಿ ಪತ್ರಿಕೆಗೆ ಮರು ಚಾಲನೆ ನೀಡಿದ ಬಳಿಕ ಮಾತನಾಡಿದ ರಾಹುಲ್ ಗಾಂಧಿ
ಅವರು, ರಾಜಕೀಯ ಕಾರಣಗಳಿಂದ ಪತ್ರಿಕೆ ಪ್ರಕಟಣೆ ನಿಂತಿತ್ತು. ಈಗ ಪುನರ್ ಆರಂಭವಾಗಿದೆ. ಕೇಂದ್ರ ಸರ್ಕಾರ
ಸತ್ಯದ ಪರ ನಿಲ್ಲುವವರನ್ನು ಅಧಿಕಾರಯುತವಾಗಿ ತುಳಿಯುತ್ತಿದೆ. ನ್ಯಾಷನಲ್ ಹೆರಾಲ್ಡ್ ಹೆಚ್ಚು ಶಕ್ತಿಯುತವಾಗಿದ್ದು,
ಪತ್ರಿಕೆಯ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ನ್ಯಾನಲ್ ಹೆರಾಲ್ಡ್ ಪತ್ರಿಕೆಯ
ಸುವರ್ಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ರಾಜ್ಯಪಾಲ ವಜುಭಾಯಿ ವಾಲ, ಮುಖ್ಯಮಂತ್ರಿ
ಸಿದ್ದರಾಮಯಯ ಇದ್ದರು.
2017:
ನವದೆಹಲಿ: ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿರುವ
ಹಿನ್ನೆಲೆಯಲ್ಲಿ ಪಕ್ಷದ
ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಲು ಬಿಜೆಪಿ ರಾಷ್ಟ್ರೀಯ
ಅಧ್ಯಕ್ಷ ಅಮಿತ್ ಷಾ ಅವರು ಮೂವರು ಸಚಿವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದರು. ಗೃಹ ಸಚಿವ ರಾಜನಾಥ್
ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ವೆಂಕಯ್ಯ ನಾಯ್ಡು ಅವರು
ಸಮಿತಿಯ ಸದಸ್ಯರು. ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿ ಇತರ ರಾಜಕೀಯ ಪಕ್ಷಗಳು ಮತ್ತು ಮಿತ್ರಪಕ್ಷಗಳ
ಜತೆ ಸಮಾಲೋಚನೆ ನಡೆಸುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಯಿತು. ಚುನಾವಣಾ ಪೂರ್ವತಯಾರಿಗಾಗಿ ಈದಿನಕ್ಕೆ
ನಿಗದಿಯಾಗಿದ್ದ ಅರುಣಾಚಲ ಪ್ರದೇಶ ಭೇಟಿಯನ್ನು ಷಾ ರದ್ದುಗೊಳಿಸಿದರು. ಜುಲೈ 15 ಮತ್ತು 16ರಂದು ವಿಶಾಖಪಟ್ಟಣದಲ್ಲಿ
ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ರಾಷ್ಟ್ರಪತಿ ಚುನಾವಣೆ ಹಿನ್ನೆಯಲ್ಲಿ ಮುಂದೂಡಿಕೆಯಾಗುವ
ಸಾಧ್ಯತೆ ಇದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆ ನಡೆಸಲು ಪ್ರತಿಪಕ್ಷಗಳು ನಿರ್ಧರಿಸಿದ್ದವು.
2016: ನವದೆಹಲಿ: ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಗೆದ್ದುಕೊಂಡರು. ಚೀನಾದ ವಿಶ್ವದ ನಂ.12 ಬ್ಯಾಡ್ಮಿಂಟನ್ ಆಟಗಾರ್ತಿ ಸುನ್ ಯು ಅವರನ್ನು 11-21, 21-14, 21-19 ಅಂತರದಿಂದ ಸೋಲಿಸಿ ಸೈನಾ ಪ್ರಶಸ್ತಿ ತನ್ನದಾಗಿಸಿಕೊಂಡರು. ಈ ಮೂಲಕ ಸೈನಾ 2ನೇ ಆಸ್ಟ್ರೇಲಿಯನ್ ಓಪನ್ ಮತ್ತು ಒಟ್ಟು 22 ನೇ ವೃತ್ತಿ ಪರ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಈ ಹಿಂದೆ ಸೈನಾ ನೆಹ್ವಾಲ್ ಚೀನಾ ಮೂಲದ ವಿಶ್ವದ ನಂ 2 ಬ್ಯಾಡ್ಮಿಂಟನ್ ಆಟಗಾರ್ತಿ ವಾಂಗ್ ಇವಾನ್ ಅವರನ್ನು 21-8, 21-12 ಗೇಮ್ಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
2016: ಫ್ಲಾರಿಡಾ (ಅಮೆರಿಕ): ಫ್ಲಾರಿಡಾದ ಓರ್ಲಾಂಡೊದಲ್ಲಿ ಕಿಕ್ಕಿರಿದಿದ್ದ ಸಲಿಂಗಕಾಮಿ ನೈಟ್ ಕ್ಲಬ್ ಒಂದರಲ್ಲಿ ಈದಿನ ಬೆಳಗ್ಗೆ ಅನಾಮಿಕ ಶಸ್ತ್ರಧಾರಿಯೊಬ್ಬ ನಡೆಸಿದ ಯದ್ವಾತದ್ವ ಗುಂಡಿನ ದಾಳಿಯಲ್ಲಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, ಗಾಯಗೊಂಡಿರುವ 53 ಮಂದಿಯನ್ನು ಮೂರು ಆಸ್ಪತ್ರೆಗಳಿಗೆ ದಾಖಲು ಮಾಡಲಾಯಿತು. ಓರ್ಲಾಂಡೋ ಪೊಲೀಸ್ ಮುಖ್ಯಸ್ಥ ಜಾನ್ ಮಿನಾ ಅವರ ಪ್ರಕಾರ ಹಂತಕ ನೈಟ್ ಕ್ಲಬ್ಬಿನಲ್ಲೇ ಸಾವನ್ನಪ್ಪಿದ್ದಾನೆ. ಗುಂಡಿನ ದಾಳಿ ಆರಂಭವಾದ 4 ಗಂಟೆಗಳ ಬಳಿಕ ಹಂತಕ ಸಾವನ್ನಪ್ಪಿದ್ದಾನೆ ಎಂದು ಮಿನಾ ಹೇಳಿದ್ದಾರೆ. ಇದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಹೇಳಿರುವ ಪೊಲೀಸರು ಈ ಕೃತ್ಯ ದೇಶೀಯ ಭಯೋತ್ಪಾದಕರಿಂದ ನಡೆದಿದೆಯೇ ಅಥವಾ ಅಂತಾರಾಷ್ಟ್ರೀಯ ಭಯೋತ್ಪಾದಕರಿಂದ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಶೂಟೌಟ್ ಘಟನೆಯ ಬಳಿಕ ಪಲ್ಸ್ ನೈಟ್ ಕ್ಲಬ್ ತನ್ನ ಗ್ರಾಹಕರಿಗೆ ‘ಹೊರಕ್ಕೆ ಹೋಗಿ’ ಎಂಬುದಾಗಿ ಫೇಸ್ಬುಕ್ ಮೂಲಕ ಸೂಚನೆ ನೀಡಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. ಶೂಟೌಟ್ ನಡೆಸಿದ ಶಸ್ತ್ರಧಾರಿ ಕೆಲವರನ್ನು ಒತ್ತೆ ಸೆರೆ ಹಿಡಿದಿರುವುದಾಗಿಯೂ ಈ ಮೊದಲಿನ ವರದಿಗಳು ತಿಳಿಸಿದ್ದವು. ಅಮೆರಿಕದಲ್ಲಿ ಒಂದೇ ವಾರದಲ್ಲಿ ನಡೆದ ಎರಡನೇ ಗುಂಡಿನ ದಾಳಿ ಇದಾಗಿದ್ದು, ಶಸ್ತ್ರಧಾರಿಯೊಬ್ಬ ಗಾಯಕಿ ಕ್ರಿಸ್ಟೀನಾ ಗ್ರಿಮ್ಮೀ ಅವರನ್ನು ಗುಂಡಿಟ್ಟು ಕೊಲೆಗೈದ ಒಂದು ದಿನದ ಬಳಿಕ ಈ ಈದಿನದ ಶೂಟೌಟ್ ಘಟನೆ ಘಟಿಸಿತು. ಓರ್ಲಾಂಡೋದ ಪ್ಲಾಜಾ ಲೈವ್ ಥಿಯೇಟರ್ನಲ್ಲಿ ಗ್ರಿಮ್ಮೀ ಹತ್ಯೆ ನಡೆದಿತ್ತು. ಗಾಯಕಿ ಗ್ರಿಮ್ಮೀಯನ್ನು ಕೊಂದು ಸ್ವತಃ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿದ 27ರ ಹರೆಯದ ವ್ಯಕ್ತಿಯನ್ನು ಸೈಂಟ್ ಪೀಟರ್ಸ್ ಬರ್ಗ್ನ ಕೆವಿನ್ ಜೇಮ್್ಸ ಲೋಯ್ಬುಲ್ ಎಂಬುದಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲಗಂ ಜಿಲ್ಲೆಯ ಖಾಜಿಗುಂದದ ಬಳಿ ಪಹರೆ ನಿರತ ಪೊಲೀಸ್ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದು ನಾಲ್ವರು ಪೊಲೀಸರು ಗಾಯಗೊಂಡರು.
2016: ನವದೆಹಲಿ: ವಿಶ್ವದಲ್ಲಿ ಮೆದುಳಿನ ಕಾಯಿಲೆಗಳು ಅಧಿಕವಾಗುತ್ತಿವೆ. ಇದಕ್ಕೆ ಭಾರತ ಕೂಡಾ ಹೊರತಾಗಿಲ್ಲ. ದೇಶದಲ್ಲಿ ಪ್ರತಿ ವರ್ಷ ಸುಮಾರು 2,500 ಮಕ್ಕಳು ಮೆಡುಲ್ಲೊಬ್ಲಾಸ್ಟೊಮಾ (ಮೆದುಳಗಡ್ಡೆ- ಬ್ರೇನ್ ಟ್ಯೂಮರ್) ಎಂಬ ಪ್ರಾಥಮಿಕ ಮೆದುಳಿನ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವೈದ್ಯರು ಬಹಿರಂಗಪಡಿಸಿದರು. ಭಾರತದಲ್ಲಿ ಒಟ್ಟು 40,000ದಿಂದ 50,000 ಜನರು ಪ್ರತಿ ವರ್ಷ ಮೆದುಳು ಕಾಯಿಲೆಗೆ
ತುತ್ತಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 20ರಷ್ಟು ಮಕ್ಕಳು ಎಂಬುದು ಆತಂಕಕಾರಿ. ಒಂದು ವರ್ಷದ ಹಿಂದೆ ಈ ಕಾಯಿಲೆ ಶೇಕಡಾ ಐದರಷ್ಟು ಮಾತ್ರ ಇತ್ತು. ಆದರೆ ಇದೀಗ ಹೆಮ್ಮರವಾಗಿ ಬೆಳೆದಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇಂಥಹ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಮುಂದೆ ಆಗುವ ಅನಾಹುತವನ್ನು ತಡೆಯಲು ಸಾಧ್ಯ. ಶೇಕಡಾ ತೊಂಭತ್ತರಷ್ಟು ಮೆಡುಲ್ಲೊಬ್ಲಾಸ್ಟೊಮಾ ರೋಗಕ್ಕೆ ತುತ್ತಾದವರಿಗೆ ಆರಂಭದಲ್ಲೇ ಚಿಕಿತ್ಸೆ ನೀಡಿ ಕಾಯಿಲೆ ಗುಣಪಡಿಸಲಾಗಿದೆ ಎಂದು ವೈದ್ಯರು ತಿಳಿಸಿದರು. ಈ ರೋಗದ ಕುರಿತು ಬಿಎಲ್ಕೆ ಆಸ್ಪತ್ರೆಯ ನಿರ್ದೇಶಕ ಹಾಗೂ ಶಸ್ತ್ರಚಿಕಿತ್ಸಕ ವಿಕಾಸ್ ಗುಪ್ತಾ ಪ್ರತಿಕ್ರಿಯಿಸಿ, ರೋಗದ ಆರಂಭಿಕ ಲಕ್ಷಣವಾಗಿ ತಲೆಶೂಲೆ ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ಚಿಕಿತ್ಸೆ ಪಡೆದರೆ ಜೀವಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಮಕ್ಕಳಿಗಾದರೆ ಚಿಕಿತ್ಸೆ ಪಡೆದ ನಂತರ 70ರೊಂ 80 ವರ್ಷ ಜೀವಿಸಬಹುದಾಗಿದೆ ಎಂದು ತಿಳಿಸಿದರು.
2016: ಲಂಡನ್: ವಿದ್ಯಾರ್ಥಿಗಳಿಗೆ ತಾವು ಇಚ್ಛಿಸಿದಲ್ಲಿ ಹುಡುಗರು ಲಂಗ ಮತ್ತು ಹುಡುಗಿಯರು ಪ್ಯಾಂಟ್ ಧರಿಸಿ ಶಾಲೆಗೆ ಬರಬಹುದು ಎಂಬ ವಿಚಿತ್ರ ನಿಯಮವೊಂದನ್ನು ಬ್ರಿಟನ್ ಸರ್ಕಾರ ಜಾರಿಗೊಳಿಸಿತು. ಈಗಾಗಲೇ 80 ಶಾಲೆಗಳು ನಿಯಮವನ್ನು ಅನುಸರಿಸುತ್ತಿದ್ದು ಲಿಂಗತಾರತಮ್ಯ ಹೋಗಲಾಡಿಸುವ ನಿಟ್ಟಿನಿಂದ ಈ ನಿಯಮ ಜಾರಿ ಮಾಡಲಾಗಿದೆ ಎನ್ನಲಾಯಿತು. ನಿಯಮದ ಪ್ರಕಾರ ಐದು ವರ್ಷದ ಒಳಗಿನ ಮಕ್ಕಳು ಹುಡುಗ, ಹುಡುಗಿ ಎಂಬ ಭೇದ ಇಲ್ಲದೆ ತಮಗೆ ಬೇಕಾದ ಸಮವಸ್ತ್ರ ಧರಿಸಬಹುದು. ಹೊಸ ನಿಯಮಕ್ಕೆ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಇದು ಮಕ್ಕಳಲ್ಲಿ ಗೊಂದಲವನ್ನುಂಟುಮಾಡುವ ಸಂಭವವಿದೆ ಎಂದು ಹೇಳಿಕೆ ನೀಡಿದವು. ಈ ಹೊಸ ನಿಯಮದಲ್ಲಿ ವಿದ್ಯಾರ್ಥಿಗಳಿಗೆ ಯಾವುದು ಸರಿ ಎನಿಸುತ್ತದೋ ಆ ಉಡುಪನ್ನು ಧರಿಸುವ ಸ್ವಾತಂತ್ರ್ಯರುತ್ತದೆ ಎಂದು ಹೇಳಲಾಯಿತು.
2016: ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ಕಮಲ್ ನಾಥ್ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಯಿತು. ಜೊತೆಗೇ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಗುಲಾಂ ನಬಿ ಆಜಾದ್ ಅವರಿಗೆ ಉತ್ತರ ಪ್ರದೇಶದ ಉಸ್ತುವಾರಿಯನ್ನೂ, ಕಮಲನಾಥ್ ಅವರಿಗೆ ಪಂಜಾಬ್ ಮತ್ತು ಹರಿಯಾಣದ ಉಸ್ತುವಾರಿಯನ್ನೂ ವಹಿಸಲಾಯಿತು.
2016: ನವದೆಹಲಿ: ಮುಂದಿನ ತಿಂಗಳು 46ನೇ ವರ್ಷವನ್ನು ಪೂರ್ಣಗೊಳಿಸಲು ಸಜ್ಜಾಗಿರುವ ರಾಷ್ಟ್ರದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮಾ’ ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದು ಅಸ್ತಿತ್ವ ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸುತ್ತಿದೆ. ಕರ್ನಾಟಕದ ಮೈಸೂರು ಮೂಲದ ಈ ದೈನಿಕದ ಪ್ರಸಾರ ಸಂಖ್ಯೆ 3000 ಮಾತ್ರ ಇದ್ದು, ನೆರವು ನೀಡುವಂತೆ ಸಂಪಾದಕರು ಕೇಂದ್ರ
ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಕೇಂದ್ರದಿಂದ ಈವರೆಗೂ ಯಾವುದೇ ಸ್ಪಂದನೆ ಲಭಿಸಿಲ್ಲ.
‘ನಮಗೆ ಬೆಂಬಲದ ಅಗತ್ಯ ಇದೆ. ಈ ವೃತ್ತ ಪತ್ರಿಕೆಯ ವಾರ್ಷಿಕ ಚಂದಾ ದರ ಕೇವಲ 400 ರೂಪಾಯಿ. ಆದರೂ ಪ್ರಸಾರ ಕುಸಿಯುತ್ತಿದೆ. ನಾವು ಪ್ರಧಾನಿ ನರೇಂದ್ರ ಮೋದಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಅವರಿಗೆ ಪತ್ರ ಬರೆದಿದ್ದೇವೆ. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಸಂಪಾದಕ ಸಂಪತ್ ಕುಮಾರ್ ಹೇಳಿಕೆ. ಈಗ ಅವರು ಪತ್ರಿಕೆ ಉಳಿಸಿಕೊಳ್ಳಲು ಸಾರ್ವಜನಿಕರ ಮೊರೆ ಹೊಕ್ಕಿದ್ದಾರೆ. ಪತ್ರಿಕೆಯಲ್ಲಿ ಉದಾರ ದೇಣಿಗೆ ನೀಡುವಂತೆ ಕೋರಿ ಮನವಿ ಪ್ರಕಟಿಸಿದ್ದಾರೆ. ಪತ್ರಿಕೆಗೆ ಹೊಸ ರೂಪ ಕೊಡಲು ಮತ್ತು ಆರು ತಿಂಗಳಿಗೊಮ್ಮೆ ಸುಧರ್ಮಾ ನಿಯತಕಾಲಿಕವೊಂದನ್ನು ತರಲು ಯೋಜಿಸಿದ್ದೇವೆ. ಏಕ ವರ್ಣದ ಆಫ್ಸೆಟ್ ಮುದ್ರಣ ಯಂತ್ರ ಖರೀದಿಗೆ ಅಂದಾಜು 20 ಲಕ್ಷ ರೂಪಾಯಿ ಬೇಕಾಗುತ್ತದೆ. ಇದು ಲಾಭಕ್ಕಾಗಿ ಇರುವ ಪತ್ರಿಕೆಯಲ್ಲ. ಸಂಸ್ಕೃತ ಮತ್ತು ಪತ್ರಿಕೋದ್ಯಮ ಪ್ರೀತಿಯ ಈ ಪತ್ರಿಕೆ ಉಳಿಸಲು ಉದಾರ ನೆರವು ನೀಡಿ ಎಂದು ಅವರು ಕೋರಿದರು. ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ಸಂಸ್ಕೃತ ವಿಧ್ವಾಂಸ ಕಳಲೆ ನಡದೂರು ವರದರಾಜ ಅಯ್ಯಂಗಾರ್ ಅವರು 1970ರಲ್ಲಿ ಈ ಪತ್ರಿಕೆಯನ್ನು ಆರಂಭಿಸಿದ್ದರು.
2016: ನವದೆಹಲಿ: ಬಡವರಿಗೆ ಉಚಿತ ಚಿಕಿತ್ಸೆ ನಿರಾಕರಿಸಿದ ಆರೋಪ ಎದುರಿಸುತ್ತಿರುವ ದೆಹಲಿಯ 5 ಖ್ಯಾತ ಖಾಸಗಿ ಆಸ್ಪತ್ರೆಗಳಿಗೆ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರ ಶಾಕ್ ನೀಡಿದ್ದು, 600 ಕೋಟಿ ರೂ. ದಂಡ ಪಾವತಿಸಲು ಸೂಚಿಸಿತು. ದೆಹಲಿ ಸರ್ಕಾರವು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್, ಮ್ಯಾಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಸಾಕೇತ್), ಶಾಂತಿ ಮುಕುಂದ್ ಆಸ್ಪತ್ರೆ, ಧರ್ಮಶೀಲ ಕ್ಯಾನ್ಸರ್ ಆಸ್ಪತ್ರೆ, ಪುಷ್ಪವತಿ ಸಿಂಘಾನಿಯಾ ರಿಸರ್ಚ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗಳಿಗೆ ದಂಡ ಪಾವತಿಸಲು ಸೂಚಿಸಿತು. ದೆಹಲಿ ಸರ್ಕಾರವು ಈ 5 ಆಸ್ಪತ್ರೆಗಳು ಸೇರಿದಂತೆ ಒಟ್ಟು 43 ಖಾಸಗಿ ಆಸ್ಪತ್ರೆಗಳಿಗೆ ರಿಯಾಯತಿ ದರದಲ್ಲಿ ಭೂಮಿ ಒದಗಿಸಿವೆ. ಒಟ್ಟು ರೋಗಿಗಳ ಶೇ. 10 ರಷ್ಟು ಬಡವರಿಗೆ ಒಳರೋಗಿಗಳಾಗಿ ಮತ್ತು ಒಟ್ಟು ರೋಗಿಗಳ ಶೇ. 25ರಷ್ಟು ಬಡರೋಗಿಗಳಿಗೆ ಹೊರ ರೋಗಿಗಳಾಗಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ. ಆದರೆ ಈ 5 ಆಸ್ಪತ್ರೆಗಳು ನಿಯಮಾವಳಿಗಳಿಗೆ ಅನುಗುಣವಾಗಿ ಬಡವರಿಗೆ ಚಿಕಿತ್ಸೆ ನೀಡಿಲ್ಲ. ಹಾಗಾಗಿ ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ ಎಂದು ದೆಹಲಿ ಸರ್ಕಾರದ ಹೆಚ್ಚುವರಿ ನಿರ್ದೇಶಕ ಡಾ. ಹೇಮ್ ಪ್ರಕಾಶ್ ತಿಳಿಸಿದರು. ನಿಯಮವನ್ನು ಉಲ್ಲಂಘಿಸಿದ ಕಾರಣ 503 ಕೋಟಿ ರೂ. ದಂಡ ಪಾವತಿಸಲು ದೆಹಲಿ ಸರ್ಕಾರವು ನೋಟಿಸ್ ನೀಡಿತು. ಆಸ್ಪತ್ರೆ ಆಡಳಿತ ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಿದೆ ಎಂದು ಫೋರ್ಟಿಸ್ ಆಸ್ಪತ್ರೆ ನೋಟಿಸ್ಗೆ ಪ್ರತಿಕ್ರಿಯೆ ನೀಡಿತು.
2016: ಪಂಜಾಬ್: ಗಡಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಮಾದಕದ್ರವ್ಯ ಹೆರಾಯಿನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಇಬ್ಬರು ಪಾಕಿಸ್ತಾನಿ ವ್ಯಕ್ತಿಗಳನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿತು. ಪಂಬಾಬಿನ ಫಾಕಿಜಾ ಗಡಿಯಲ್ಲಿ ಬೆಳಗಿನ ಜಾವ ಭಾರತಕ್ಕೆ ನುಸುಳತ್ನೆಸಿದ ಮೂರು ಜನರ ಪೈಕಿ ಇಬ್ಬರನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದರು. ಮತ್ತೋರ್ವನಿಗೆ ಗಾಯವಾಯಿತು. ಮೃತರ ಬಳಿಯಿಂದ 15 ಪ್ಯಾಕೆಟ್ ಮಾದಕದ್ರವ್ಯದ ಜತೆ ಪಿಸ್ತೂಲು, ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದರು.
2016: ನವದೆಹಲಿ: 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು 2002ರಲ್ಲಿ ನಡೆದ ಗೋದ್ರಾ ಹಿಂಸಾಚಾರ ಪ್ರಕರಣದಿಂದಾಗಿ ಹಲವು ಮುಸ್ಲಿಂ ಯುವಕರು ಉಗ್ರವಾದದತ್ತ ಮುಖ ಮಾಡಿದ್ದಾರೆ. ಅಲ್ ಖೈದಾ ಉಗ್ರ ಸಂಘಟನೆ ಸ್ಥಾಪಿಸಿ ಭಾರತದಲ್ಲಿ ಉಗ್ರವಾದ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಕೋರ್ಟಿಗೆ ತಿಳಿಸಿದರು. 2015ರ ಡಿಸೆಂಬರ್ ಮತ್ತು 2016ರ ಜನವರಿಯಲ್ಲಿ ದೇಶದ ಹಲವಡೆ ಬಂಧಿಸಲಾದ ಶಂಕಿತ ಭಯೋತ್ಪಾದಕರ ವಿರುದ್ಧ ಪೊಲೀಸರು ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ಈ ವಿಷಯವನ್ನು ನಮೂದಿಸಿದರು. ಕೋಮು ಗಲಭೆಗಳ ನಂತರ ಸೇಡು ತೀರಿಸಿಕೊಳ್ಳುವ ಭಾವನೆಯಿಂದ ಹಲವು ಮುಸ್ಲಿಂ ಯುವಕರು ಪಾಕಿಸ್ತಾನಕ್ಕೆ ತೆರಳಿದ್ದರು. ನಂತರ ಜಮಾತ್ ಉದ್ ದವಾ ಅಧ್ಯಕ್ಷ ಹಫೀಜ್ ಸಯೀದ್ ಮತ್ತು ಲಷ್ಕರ್ ಎ ತೊಯಿಬಾ ಅಧ್ಯಕ್ಷ ಜಕೀರ್ ಉರ್ ರೆಹಮಾನ್ ಲಖ್ವಿಯನ್ನು ಭೇಟಿ ಮಾಡಿದ್ದಾರೆ. ಜತೆಗೆ ಮಸೀದಿಗಳಲ್ಲಿ ಜಿಹಾದಿ ಭಾಷಣ ಮಾಡುವಾಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು ಗೋದ್ರಾ ಹತ್ಯಾಕಾಂಡದ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ಈ ವಿಷಯವಾಗಿ ಯುವಕರ ಮನಃಪರಿವರ್ತನೆ ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸರ ವಿಶೇಷ ಪಡೆ ಕೋರ್ಟ್ಗೆ ತಿಳಿಸಿತು. ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಮೂವರು ಪಾಕ್ ಉಗ್ರರಿಗೆ ಆಶ್ರಯ ನೀಡಿದ್ದ. ಅವರನ್ನು 2001ರಲ್ಲಿ ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು. ಉಗ್ರರು ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಆದರೆ ಅದಕ್ಕೂ ಮುನ್ನ ಎನ್ಕೌಂಟರ್ನಲ್ಲಿ ಮೃತರಾದರು ಎಂದು ಪೊಲೀಸರು ತಿಳಿಸಿದರು.
2016: ನವದೆಹಲಿ: ನವದೆಹಲಿಯ ಕನ್ನೌಟ್ ಪ್ರದೇಶದಲ್ಲಿರುವ ಶಿವ ಸಾಗರ ಎಂಬ ಹೋಟೆಲ್ನಲ್ಲಿ ಮಧ್ಯಾಹ್ನದ ಊಟಕ್ಕಾಗಿ ಬೀದಿ ಮಕ್ಕಳ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಘಟನೆ ಕುರಿತು ತನಿಖೆ ನಡೆಸುವಂತೆ ದೆಹಲಿ ಸರ್ಕಾರ ಆದೇಶಿಸಿತು. ಸಾಮಾಜಿಕ ಕಾರ್ಯಕರ್ತೆ ಸೋನಾಲಿ ಶೆಟ್ಟಿ ಅವರು ಬಡ ಮಕ್ಕಳಿಗೆ ಊಟ ಒದಗಿಸುವ
ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಮಕ್ಕಳು ಕೊಳಕು ಬಟ್ಟೆಯಲ್ಲಿ ಬಂದಿರುವ ಕಾರಣ ಪ್ರವೇಶವಿಲ್ಲ ಎಂದು ಹೇಳಿ ಮಕ್ಕಳೆಲ್ಲರನ್ನೂ ಹೋಟೆಲ್ನಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಹೇಳಲಾಯಿತು. ‘ದೀದಿ ನಮ್ಮನ್ನು ಊಟ ಕೊಡಿಸಲೆಂದು ಹೋಟೆಲ್ಗೆ ಕರೆದೊಯ್ದರು. ಆದರೆ ಅಂಕಲ್ ನಮ್ಮನ್ನು ಅಲ್ಲಿಂದ ಹೊರದಬ್ಬಿದರು. ದೀದಿ ತಾವೇ ಬಿಲ್ ಪಾವತಿ ಮಾಡುವುದಾಗಿಯೂ ಹೇಳಿದರು. ಆದರೂ ಊಟ ಮಾಡಲು ಅವಕಾಶ ನಿರಾಕರಿಸಲಾಯಿತು. ಬಳಿಕ ನಾವು ಸರವಣ ಭವನದಲ್ಲಿ ಊಟ ಮಾಡಿದೆವು’ ಎಂದು ಬಾಲಕಿಯೊಬ್ಬಳು ತಿಳಿಸಿದಳು.. ಇದಕ್ಕೆ ಪ್ರತಿಕ್ರಿಯಿಸಿರುವ ಹೋಟೆಲ್ ಆಡಳಿತವು, ಮಕ್ಕಳು ಹೋಟೆಲ್ ಒಳಗೆ ತೀರಾ ಶಬ್ದ ಮಾಡುತ್ತಿದ್ದರಿಂದ ಆಚೆ ಕಳುಹಿಸಿದೆವು ಎಂದು ಪ್ರತಿಪಾದಿಸಿತು. ನಮ್ಮ ಗ್ರಾಹಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಲು ನಾವು ಬದ್ಧ. ಗ್ರಾಹಕರಿಗೆ ತೊಂದರೆಯಾದರೆ ಇಂತಹ ಕ್ರಮ ಕೈಗೊಳ್ಳುವ ಹಕ್ಕು ನಮಗಿದೆ ಎಂದು ಆಡಳಿತ ಹೇಳಿತು. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಘಟನೆ ಬಗ್ಗೆ ತನಿಖೆ ಮಾಡುವಂತೆ ಆದೇಶಿಸಿದರು. ಒಂದು ವೇಳೆ ಆರೋಪ ಸಾಬೀತಾದರೆ ಹೋಟೆಲ್ ಲೈಸನ್ಸ್ ರದ್ದುಗೊಳಿಸುವುದಾಗಿ ಅವರು ತಿಳಿಸಿದರು.
2016: ಅಲಹಾಬಾದ್: ಮುಂದಿನ ವರ್ಷ ಉತ್ತರಪ್ರದೇಶ ವಿಧಾನ ಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭಗೊಂಡಿತು. ಪಕ್ಷದ ಸುಮಾರು 300 ಮಂದಿ ನಾಯಕರು ಸಭೆಯಲ್ಲಿ ಪಾಲ್ಗೊಂಡರು. ಪ್ರಧಾನಿ ನರೇಂದ್ರ ಮೊದಿ, ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ಕೆಲವು ಪಕ್ಷ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡರು. ಪಕ್ಷಾಧ್ಯಕ್ಷ ಅಮಿತ್ ಷಾ ಸಭೆಯ ಅಧ್ಯಕ್ಷತೆ ವಹಿಸಿದರು. ಮೋದಿ ಸರ್ಕಾರ ಪದಗ್ರಹಣದ ಎರಡನೇ ವರ್ಷಾಚರಣೆ ಹಾಗೂ ಕೇಂದ್ರದ ಬಡವರ ಪರ ಯೋಜನೆಗಳ ಪ್ರಚಾರಕ್ಕೆ ಒತ್ತು ನೀಡುವ ಯತ್ನಗಳ ಮಧ್ಯೆ ಈ ಸಭೆ ಆರಂಭವಾಯಿತು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಅಸ್ಸಾಂನಲ್ಲಿ ಗಳಿಸಿರುವ ವಿಜಯ ಹಾಗೂ ಕೇರಳ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಬಲ ವೃದ್ಧಿಯಾಗಿರುವ ಉತ್ಸಾಹವನ್ನು ಉತ್ತರ ಪ್ರದೇಶದಲ್ಲಿ ಗಟ್ಟಿಗೊಳಿಸುವ ಗುರಿ ಹೊಂದಿದೆ. ಉತ್ತರಪ್ರದೇಶದಲ್ಲಿ 2014ರ ಲೋಕಸಭಾ ಚುನಾವಣೆಗಳಲ್ಲಿ ಪಕ್ಷವು 80 ಸ್ಥಾನಗಳ ಪೈಕ 71 ಸ್ಥಾನಗಳನ್ನು ಗೆದ್ದಿತ್ತು. ಐದು ರಾಜ್ಯಗಳಲ್ಲಿ ಚುನಾವಣೆ ಬರಲಿದೆ. ಈ ಐದೂ ರಾಜ್ಯಗಳಲ್ಲಿ ಯಾವ ರೀತಿಯ ವ್ಯೂಹವನ್ನು ರಚಿಸಬೇಕು ಎಂಬ ಬಗ್ಗೆ ಚರ್ಚಿಸಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪಿಂದರ್ ಯಾದವ್ ಹೇಳಿದರು.
2009: ಹಲವು ರಾತ್ರಿಗಳ ಸಂಪೂರ್ಣ ನಿದ್ರಾಹೀನತೆಯ ನಂತರ ಸಂಭವಿಸಬಹುದಾದ ಅಪಾಯವನ್ನು
ಒಂದು ಗುಟುಕು 'ಕೆಫಿನ್' (ಕಾಫಿ ಮತ್ತು ಟೀಯ ಉತ್ತೇಜನಾಕಾರಿ ಸಸ್ಯಕ್ಷಾರಸತ್ವ) ಸೇವನೆ ತಡೆಯಬಲ್ಲದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು. ದಿಢೀರ್ ಸಂಭವಿಸುವ ಅಪಾಯಗಳನ್ನು ಅಳೆಯುವ ಕಂಪ್ಯೂಟರೀಕೃತ ವ್ಯವಸ್ಥೆ 'ಬಾರ್ಟ್' (ಬಲೂನ್ ಅನಲಾಗ್ ರಿಸ್ಕ್ ಟಾಸ್ಕ್) ಅನ್ವಯ, 'ತೀವ್ರ ನಿದ್ರಾಹೀನತೆಯ ನಂತರವೂ ಕೆಫಿನ್ ಸೇವಿಸಿದ ವ್ಯಕ್ತಿ ಮಾತ್ರ ಹೆಚ್ಚಿನ ತೊಂದರೆ ಎದುರಿಸುವ ನಡವಳಿಕೆ ತೋರಿಸುವುದಿಲ್ಲ' ಎಂಬುದನ್ನು ಸಂಶೋಧನಾ ಫಲಿತಾಂಶ ಪ್ರಕಟಪಡಿಸಿತು. ಈ ಸಂಶೋಧನಾ ಪ್ರಬಂಧವನ್ನು (ಸ್ಲೀಪ್ 2009) ವೃತ್ತಿಪರ ನಿದ್ರಾ ಸಂಸ್ಥೆಗಳ ಒಕ್ಕೂಟದ 23ನೇ ವಾರ್ಷಿಕ ಸಭೆಯಲ್ಲಿ ಮಂಡಿಸಲಾಯಿತು.
2009: ಪಾಕಿಸ್ಥಾನದ ನೌಷೇರಾ ನಗರದ ಮಸೀದಿ ಆವರಣದಲ್ಲಿ ಹಾಗೂ ಲಾಹೋರಿನ ಧಾರ್ಮಿಕ ಸಂಸ್ಥೆಯೊಂದರ ಅಂಗಣಲ್ಲಿ ನಡೆದ ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ವಿರೊಧಿ ಧರ್ಮಗುರು ಸೇರಿದಂತೆ ಹನ್ನೊಂದು ಮಂದಿ ಮೃತರಾದರು. 'ಆತ್ಮಾಹುತಿ ಬಾಂಬ್ ಸಂಸ್ಕೃತಿ ಇಸ್ಲಾಮ್ ಧರ್ಮಕ್ಕೆ ವಿರುದ್ಧ' ಎಂದು ಫತ್ವಾ ಹೊರಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧರ್ಮಗುರು ಮೌಲಾನ ಸರ್‌ಫ್ರಾಜ್ ನಯೀಮ್ ಹಾಗೂ ಇತರ ಮೂವರು ಲಾಹೋರ್‌ನ ಜೈಮಾ ನಯೀಮಾ ಧರ್ಮ ಸಂಘಟನೆಯ ಆವರಣದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮೃತರಾದರು.
2009: ಪಾಕಿಸ್ಥಾನದಲ್ಲಿನ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದವನ್ನು ನಿಗ್ರಹಿಸುವ ಸಲುವಾಗಿ 300 ದಶಲಕ್ಷ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಇತರ ಸಲಕರಣೆಗಳನ್ನು ಚೀನಾದಿಂದ ಖರೀದಿಸಲು ಪಾಕಿಸ್ಥಾನ ಒಪ್ಪಂದವೊಂದಕ್ಕೆ ಸಹಿ ಹಾಕಿದೆ ಎಂದು ಪಾಕಿಸ್ಥಾನದ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲ್ಲಿಕ್ ಅವರು ಬೀಜಿಂಗ್‌ನಲ್ಲಿ ಪ್ರಕಟಿಸಿದರು.
2009: ಮಾನವ ತ್ಯಾಜ್ಯದಿಂದ ಕಡಿಮೆ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದಿಸುವ ಶೌಚಾಲಯ ತಾಂತ್ರಿಕತೆಯನ್ನು ಪ್ರಥಮ ಬಾರಿಗೆ ಅಭಿವೃದ್ಧಿ ಪಡಿಸಿದ ಸುಲಭ್ ಅಂತರರಾಷ್ಟ್ರಿಯ ಸಂಸ್ಥೆಯ ಸಂಸ್ಥಾಪಕ ಬಿಂದೇಶ್ವರ ಪಾಠಕ್ ಅವರಿಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಪುನರ್‌ಬಳಕೆ ಇಂಧನ ಪ್ರಶಸ್ತಿ ನೀಡಿತು. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
2009: ನೇಪಾಳದ ಮಾಜಿ ಉಪ ಪ್ರಧಾನಿ ಹಾಗೂ ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಶೈಲಜಾ ಆಚಾರ್ಯ (65) ದೀರ್ಘ ಕಾಲದ ಅಸ್ವಸ್ಥತೆಯ ನಂತರ ಕಠ್ಮಂಡುವಿನಲ್ಲಿ ನಿಧನರಾದರು. ಹಲವು ವರ್ಷಗಳಿಂದ ನ್ಯೂಮೋನಿಯಾ ಹಾಗೂ ಮರೆಗುಳಿ ರೋಗದಿಂದ ಬಳಲುತ್ತಿದ್ದ ಅವರನ್ನು ಎರಡು ದಿನ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದಕ್ಕೂ ಮೊದಲ ಅವರು ಬ್ಯಾಂಕಾಕ್ ಮತ್ತು ಕಠ್ಮಂಡು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಬಾಲಿವುಡ್ ನಟಿ ಮೊನಿಷಾ ಕೊಯಿರಾಲ ಅವರ ಸಂಬಂಧಿಯಾದ ಶೈಲಜಾ ಅವರು, ದೊರೆ ಮಹೇಂದ್ರ ಅವರಿಗೆ ಕಪ್ಪು ಬಾವುಟ ತೋರಿಸಿದ ಕಾರಣಕ್ಕೆ 1961ರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.
2009: ನವೀಕರಣಕ್ಕಾಗಿ ಕೆಲ ತಿಂಗಳುಗಳಿಂದ ಮುಚ್ಚಿದ್ದ ನವದೆಹಲಿಯ ಶಂಕರ್ ಅಂತಾರಾಷ್ಟ್ರೀಯ ಬೊಂಬೆ ಸಂಗ್ರಹಾಲಯವಾದ ದೇಶದ ಅತಿದೊಡ್ಡ ಬೊಂಬೆ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಯಿತು. ಹರಪ್ಪ ನಾಗರಿಕತೆಯ ಬೊಂಬೆಯಿಂದ ಹಿಡಿದು ಬಾರ್ಬಿವರೆಗಿನ ಬೊಂಬೆಗಳ ಮಾಯಾಲೋಕವೊಂದು ಇಲ್ಲಿ ಮೈದಳೆದಿದೆ. ಅಲ್ಲಾವ್ದದೀನ್, ಆಲಿಬಾಬಾ, ಸ್ನೋವೈಟ್, ಸಿಂಡ್ರೆಲಾ ಬೊಂಬೆಗಳಂತೂ ಮನಸೆಳೆಯುತ್ತವೆ. ಜತೆಗೆ ಇವುಗಳ ಬಗೆಗಿನ ಸಮಗ್ರ ಮಾಹಿತಿ ಇರುವುದು ಕೂಡ ಈ ಸಂಗ್ರಹಾಲಯದ ವಿಶೇಷ. ಅಂತಾರಾಷ್ಟ್ರೀಯ ಬೊಂಬೆ ಸಂಗ್ರಹಾಲಯ 1985ರಲ್ಲಿ ಸರ್ಕಾರ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ತಲೆ ಎತ್ತಿತು. ಇಲ್ಲಿ 90 ದೇಶಗಳ 7000ಕ್ಕೂ ಹೆಚ್ಚು ಬೊಂಬೆಗಳಿವೆ.
2008: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕಾರ್ಯಕರ್ತರು ಸ್ಥಳೀಯ ಜನರು, ಪ್ರವಾಸಿಗರು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಲಿಗುರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶಾಂತಿ ಪಾಲನೆಗಾಗಿ ಸೇನೆ ಕರೆಸಲಾಯಿತು.
2007: ಗಿನ್ನೆಸ್ ದಾಖಲೆ ನಿರ್ಮಾಣದ ಸಲುವಾಗಿ ಚೆನ್ನೈಯ ಕಾಸ್ಮೋಪಾಲಿಟನ್ ಕ್ಲಬ್ ಈಜುಗೊಳದಲ್ಲಿ 15 ತಿಂಗಳ ಮಗುವೊಂದು (ಒಂದೂ ಕಾಲು ವರ್ಷ) ನಾಲ್ಕು ಮೀಟರ್ ದೂರವನ್ನು ಈಜಿತು. 2006ರ ಮಾರ್ಚ್ 13ರಂದು ಜನಿಸಿದ ಮಹರಂತ್ ಕಮಲಾಕರ್ ಈ ಸಾಧನೆ ಮಾಡಿದ ಪೋರ. ಈ ಬಾಲಕನ ಹೆತ್ತವರ ಪ್ರಕಾರ ಆಸ್ಟ್ರೇಲಿಯಾದ ಬಾಲಕನೊಬ್ಬ ಎರಡೂವರೆ ವರ್ಷದವನಾಗಿದ್ದಾಗ 80 ನಿಮಿಷಗಳ ಕಾಲ ತೇಲಾಡಿದ್ದಷ್ಟೇ ಈವರೆಗಿನ ದಾಖಲೆ.
2007: ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶದಲ್ಲಿ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 103ಕ್ಕೆ ಏರಿತು.
2007: ವಿಶ್ವಸಂಸ್ಥೆಯ ಸಮರ ಅಪರಾಧಗಳ ನ್ಯಾಯಮಂಡಳಿಯು ಕ್ರೊಯೇಷಿಯಾದ ಮಾಜಿ ಸೆರ್ಬ್ ಬಂಡಾಯ ನಾಯಕ ಮಿಲನ್ ಮಾರ್ಟಿಕ್ ಅವರಿಗೆ 35 ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು. ಕ್ರೊಯೇಷಿಯಾದಲ್ಲಿ ಪ್ರತ್ಯೇಕ ಸೆರ್ಬ್ ರಾಷ್ಟ್ರ ಸ್ಥಾಪನೆಯ ಸಲುವಾಗಿ ಕ್ರೊಯೇಷಿಯನ್ನರು, ಮುಸ್ಲಿಮರು ಮತ್ತು ಸೆರ್ಬೇತರ ನಾಗರಿಕರ ಕೊಲೆ, ಚಿತ್ರಹಿಂಸೆ ನಡೆಸಿದ್ದರು ಎಂದು ಆಪಾದಿಸಲಾಗಿತ್ತು.
2007: ವೇತನ ಬಾಕಿ ಹಾಗೂ ಬಡ್ತಿಗೆ ಸಂಬಂಧಿಸಿದಂತೆ ಭಾರತೀಯ ವಿಮಾನಯಾನ ಸಂಸ್ಥೆ `ಇಂಡಿಯನ್' ಆಡಳಿತ ಮಂಡಳಿಯು ತಾನು ನೀಡಿದ್ದ ಭರವಸೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ ಎಂದು ಆಪಾದಿಸಿ ಸಂಸ್ಥೆಯ 12,000ಕ್ಕೂ ಹೆಚ್ಚು ಮಂದಿ ಭೂ ಸಿಬ್ಬಂದಿ ರಾತ್ರಿ ಮಿಂಚಿನ ಮುಷ್ಕರ ಆರಂಭಿಸಿದರು.
2006: ಹಿರಿಯ ಪತ್ರಕರ್ತ ಎಸ್.ವಿ. ಹೆಗಡೆ (74) ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಯುಕ್ತ ಕರ್ನಾಟಕದ ಹುಬ್ಬಳ್ಳಿ ಆವೃತ್ತಿಯ ಸಹ ಸಂಪಾದಕರಾಗಿ ಅವರು ನಿವೃತ್ತರಾಗಿದ್ದರು.
2006: ಸೌರಶಕ್ತಿಯಿಂದ ಹಾರಬಲ್ಲ ವಿಶ್ವದ ಪ್ರಪ್ರಥಮ ವಿಮಾನವೊಂದು ಪ್ಯಾರಿಸ್ ಹೊರವಲಯದ ವಿಮಾನ ನಿಲ್ದಾಣದಲ್ಲಿ ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ, ವಾರಾಂತ್ಯದಲ್ಲಿ ಲಂಡನ್ನಿಗೆ ಹಾರಿ `ಇತಿಹಾಸ' ನಿರ್ಮಿಸಲು ಸಜ್ಜಾಯಿತು.
2006: ಕೆನಡಾದ ವೃತ್ತಪತ್ರಿಕಾ ದೊರೆ ಕೆನ್ ಥಾಮ್ಸನ್ ಈ ದಿನ ನಿಧನರಾದರು.
2006: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕವಿ ಡಾ. ಸಿದ್ದಲಿಂಗಯ್ಯ ಅಧಿಕಾರ ವಹಿಸಿಕೊಂಡರು.
2006: ವಿದೇಶೀ ನೇರ ಬಂಡವಾಳ ಹೂಡಿಕೆಗೆ (ಎಫ್ ಡಿಐ) ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಕರ್ನಾಟಕ ಮೂಲದ ನಾಲ್ಕು ವಿಶೇಷ ಆರ್ಥಿಕ ವಲಯಗಳಿಗೆ ಮಂಜೂರಾತಿ ನೀಡಿತು. ರಾಜ್ಯ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್ ಜಿಸಿ) ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್, ಮಾಹಿತಿ ತಂತ್ರಜ್ಞಾನ ರಂಗದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಇನ್ಫೋಸಿಸ್ ಟೆಕ್ನಾಲಜೀಸ್ ನ ಪ್ರಸ್ತಾವ, ಬೆಂಗಳೂರಿನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಉದ್ದೇಶಿಸಿರುವ ಹಿಸ್ಕಿಲ್ ಪ್ರಸ್ತಾವ ಮತ್ತು ಮಂಗಳೂರಿನಲ್ಲಿ ಅಸಾಂಪ್ರದಾಯಿಕ ಇಂಧನ ವಲಯದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಉದ್ದೇಶಿಸಿರುವ ಸುಜ್ಲೋನ್ ಪ್ರಸ್ತಾವಗಳಿಗೆ ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವ ಏಕಗವಾಕ್ಷಿ ಸಂಸ್ಥೆಯಾಗಿರುವ `ಮಂಜೂರಾತಿಗಳ ಮಂಡಳಿ'ಯು (ಬೋರ್ಡ್ ಆಫ್ ಅಪ್ರೂವಲ್ಸ್- ಬಿಒಎ) ಔಪಚಾರಿಕ ಒಪ್ಪಿಗೆ ನೀಡಿತು.
1997: ಸೀತಾರಾಂ ಕೇಸರಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.
1996: ನೂತನ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು.
1957: ಪಾಕಿಸ್ಥಾನದ ಮಾಜಿ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್ ಜನ್ಮದಿನ. 50ಕ್ಕೂ ಹೆಚ್ಚು ಟೆಸ್ಟ್ ಮ್ಯಾಚುಗಳಲ್ಲಿ ನಿರಂತರವಾಗಿ ಆಡಿದ ಮೊತ್ತ ಮೊದಲ ಪಾಕಿಸ್ಥಾನಿ ಕ್ರಿಕೆಟ್ ಆಟಗಾರ ಈ ವ್ಯಕ್ತಿ.
1949: ಸಾಹಿತಿ ನೆಲೆಮನೆ ದೇವೇಗೌಡ ಜನನ.
1944: ಸಾಹಿತಿ ಎಂ.ಜಿ. ರೇಣುಕಾ ಪ್ರಸಾದ್ ಜನನ.
1942: ಯಹೂದಿ ಬಾಲಕಿ ಆನ್ ಫ್ರಾಂಕ್ (1929-45) ತನ್ನ 13ನೇ ಜನ್ಮದಿನದಂದು ದಿನಚರಿ ಬರೆಯಲು ಆರಂಭಿಸಿದಳು. 1944ರ ವರೆಗಿನ ಅವಧಿಯ ಈ ದಿನಚರಿಯ ದಾಖಲೆಗಳು ಆಕೆಯ ಕುಟುಂಬ ಸದಸ್ಯರು ನಾಝಿಗಳು ಯಹೂದಿಗಳ ವಿರುದ್ಧ ನಡೆಸಿದ ದೌರ್ಜನ್ಯದಿಂದ ಪಾರಾಗಲು ಆಮ್ ಸ್ಟರ್ ಡ್ಯಾಮಿನಲ್ಲಿ ಅಡಗಿಕೊಂಡಿದ್ದ ಎರಡು ವರ್ಷಗಳ ವಿವರಗಳನ್ನು ಒಳಗೊಂಡಿದೆ. ಈ ದಿನಚರಿ 50ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಆಮ್ ಸ್ಟರ್ ಡ್ಯಾಮಿನಲ್ಲಿ ಫ್ರಾಂಕ್ ಕುಟುಂಬ ಅಡಗಿಕೊಂಡಿದ್ದ ಪ್ರಿನ್ಸೆಂಗ್ರಾಚ್ ಕಾಲುವೆ ಈಗ ಮ್ಯೂಸಿಯಂ ಆಗಿದೆ.
1929: ಯಹೂದಿ ಬಾಲಕಿ ಅನ್ನೆ ಫ್ರಾಂಕ್ ಈದಿನ ಫ್ರಾಂಕ್ ಫರ್ಟಿನಲ್ಲಿ ಜನಿಸಿದಳು. 1942ರಲ್ಲಿ ಇದೇ ದಿನ ತನ್ನ 13ನೇ ಜನ್ಮದಿನದಂದು ಈಕೆ ತನ್ನ ದಿನಚರಿ ಬರೆಯಲು ಆರಂಭಿಸಿದಳು.
1924: ಅಮೆರಿಕದ 41ನೇ ಅಧ್ಯಕ್ಷ ಜಾರ್ಜ್ ಬುಷ್ ಜನ್ಮದಿನ.
1906: ಸಾಹಿತಿ ತ.ಸು.ಶಾಮರಾವ್ ಅವರು ಸುಬ್ಬಣ್ಣ- ಲಕ್ಷ್ಮೀ ದೇವಮ್ಮ ದಂಪತಿಯ ಪುತ್ರನಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ ಜನಿಸಿದರು.
1915: ಸಾಹಿತಿ ಸಿ.ಕೆ. ನಾಗರಾಜರಾವ್ ಜನನ.
1902: ಸಾಹಿತಿ ಎನ್. ಎಸ್. ನಾರಾಯಣಶಾಸ್ತ್ರಿ ಜನನ.
1897: ಸ್ವಿಸ್ ಕಟ್ಲೆರಿ ನಿರ್ಮಾಪಕ ಕಾರ್ಲ್ ಎಲ್ಸನರ್ ತಮ್ಮ `ದಿ ಆಫೀಸರ್ ಅಂಡ್ ಸ್ಪೋರ್ಟ್ ನೈಫ್' ಹೆಸರಿನ ತನ್ನ ಪೆನ್- ಚೂರಿಗೆ ಪೇಟೆಂಟ್ ಪಡೆದರು. ಈ ಬಹೂಪಯೋಗಿ ಚೂರಿ ಈಗ `ಸ್ವಿಸ್ ಆರ್ಮಿ ನೈಫ್' ಎಂದೇ ಖ್ಯಾತಿ ಪಡೆದಿದೆ. ಈ ಚೂರಿ ತಯಾರಿ ಕಂಪೆನಿಗೆ ಕಾರ್ಲ್ ತಮ್ಮ ತಾಯಿ ವಿಕ್ಟೋರಿಯಾಳ ಹೆಸರು ಇರಿಸಿದರು.
1842: ಇಂಗ್ಲಿಷ್ ಶಿಕ್ಷಣ ಹಾಗೂ ಪಬ್ಲಿಕ್ ಶಾಲಾ ವ್ಯವಸ್ಥೆಯನ್ನು ಸುಧಾರಿಸಿದ ರಗ್ಬಿಯ ಹೆಡ್ ಮಾಸ್ಟರ್ ಥಾಮಸ್ ಆರ್ನಾಲ್ಡ್ ತಮ್ಮ 47ನೇ ಹುಟ್ಟು ಹಬ್ಬಕ್ಕೆ ಒಂದು ದಿನ ಮೊದಲು ಮೃತರಾದರು. ಇವರು ಖ್ಯಾತ ಇಂಗ್ಲಿಷ್ ಕವಿ ಮ್ಯಾಥ್ಯೂ ಅರ್ನಾಲ್ಡ್ ಅವರ ತಂದೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment