Tuesday, June 25, 2019

ಇಂದಿನ ಇತಿಹಾಸ History Today ಜೂನ್ 25

ಇಂದಿನ ಇತಿಹಾಸ History Today  ಜೂನ್  25
2018: ಅಹಮದಾಬಾದ್: ೨೦೦೨ರ ನರೋಡಾ ಪಟಿಯಾ ಹತ್ಯಾಂಕಾಂಡ ಪ್ರಕರಣದ ಮೂವರು ಅಪರಾಧಿಗಳಿಗೆ ಗುಜರಾತ್ ಹೈಕೋರ್ಟ್ ೧೦ ವರ್ಷಗಳ ಕಠಿಣ ಸಜೆ ವಿಧಿಸಿತು.
ನ್ಯಾಯಮೂರ್ತಿಗಳಾದ ಹರ್ಷ ದೇವಾನಿ ಮತ್ತು ಎ.ಎಸ್. ಸುಫಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ’ಅಪರಾಧಿಗಳು ಸಮಾಜದ ವಿರುದ್ಧ ಅಪರಾಧಗಳನ್ನು ಎಸಗಿದ್ದಾರೆ ಮತ್ತು ಅವರಿಗೆ ನೀಡುವ ಶಿಕ್ಷೆಯು ಅವರು ಎಸಗಿದ ಅಪರಾಧದ ಕ್ರೂರತ್ವಕ್ಕೆ ಸಮನಾದ ಶಿಕ್ಷೆಯಾಗಿರಬೇಕು ಎಂದು ಹೇಳಿತು.  ಏಪ್ರಿಲ್ ೨೦ರಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ತೀರ್ಪು ನೀಡಿದ್ದ ನ್ಯಾಯಾಲಯವು ೧೬ ಮಂದಿ ಆರೋಪಿಗಳ ಪೈಕಿ ಪಿ.ಜೆ. ರಜಪೂತ್, ರಾಜಕುಮಾರ್ ಚೌಮಲ್ ಮತ್ತು ಉಮೇಶ ಭರ್‍ವಾಡ್ ಅವರನ್ನು ತಪ್ಪಿತಸ್ಥರು ಎಂಬುದಾಗಿ ಘೋಷಿಸಿತ್ತು. ಏಪ್ರಿಲ್ ೨೦ರಂದು ತೀರ್ಪು ಘೋಷಣೆಯಾದ ಬಳಿಕ ತಮ್ಮ ಅಹವಾಲನ್ನು ಸಮರ್ಪಕವಾಗಿ ಆಲಿಸಲಾಗಿಲ್ಲ ಎಂಬ ನೆಲೆಯಲ್ಲಿ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿಚಾರಣೆ ನಡೆಯಬೇಕು ಎಂದು ಮೂರೂ ಮಂದಿ ಅಪರಾಧಿಗಳು ಕೋರಿದ್ದರು. ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಲಯವು ಅಪರಾಧಿಗಳಿಗೆ ಪೊಲೀಸರ ಮುಂದೆ ಶರಣಾಗಲು ೬ ವಾರಗಳ ಕಾಲಾವಕಾಶವನ್ನು ನೀಡಿತು.  ಮೂರೂ ಮಂದಿ ಅಪರಾಧಿಗಳು ಕೊಲೆಯಲ್ಲದೆ, ಮನೆ ನಾಶದ ಉದ್ದೇಶದಿಂದ ಸ್ಫೋಟಕ ಸಾಧನಗಳ ಬಳಕೆ ಇತ್ಯಾದಿ ಅಪರಾಧಗಳನ್ನೂ ಎಸಗಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.  ‘ಸಂತ್ರಸ್ಥರ ತುಮುಲ, ದುಃಖವನ್ನು ನ್ಯಾಯಾಲಯ ತಳ್ಳಿಹಾಕಲು ಸಾಧ್ಯವಿಲ್ಲ. ಅಪರಾಧಗಳು ವ್ಯಕ್ತಿಗಳ ವಿರುದ್ಧವಷ್ಟೇ ನಡೆದಿರುವ ಅಪರಾಧಗಳಲ್ಲ, ಬದಲಿಗೆ ಸಮಾಜದ ವಿರುದ್ಧ ನಡೆದ ಅಪರಾಧಗಳು ಮತ್ತು ಪರಿಣಾಮವಾಗಿ ಸಮಾಜದ ಧ್ರುವೀಕರಣವಾಗಿದೆ ಎಂದು ಪೀಠ ಹೇಳಿತು.   ‘ಉದಾರ ಸ್ವರೂಪದ ಶಿಕ್ಷೆ ನೀಡುವುದು ನ್ಯಾಯದ ದುರಂತಕ್ಕೆ ಸಮವಾಗುತ್ತದೆ. ೧೦ ವರ್ಷಗಳ ಕಠಿಣ ಸಜೆಯು ಅಪರಾಧಕ್ಕೆ ಸೂಕ್ತ ಶಿಕ್ಷೆಯಾಗುತ್ತದೆ ಎಂದು ಪೀಠ ಹೇಳಿತು.  ಇಂತಹ ಅಪರಾಧಗಳಿಗೆ ಸಂಬಂಧಿಸಿದಂತೆ ತಳೆಯುವ ಯಾವುದೇ ಉದಾರ ಧೋರಣೆಯು ’ಸಮಾಜದ ಹಿತಾಸಕ್ತಿಗೆ ವಿರುದ್ಧವಾಗುತ್ತದೆ ಎಂದು ಪೀಠ ವಿಶ್ಲೇಷಿಸಿತು.  ಇದಕ್ಕೆ ಮುನ್ನ ಕಡಿಮೆ ಶಿಕ್ಷೆ ವಿಧಿಸುವಂತೆ ಅಪರಾಧಿಗಳ ಪರವಾಗಿ ಮನವಿ ಮಾಡಲಾಗಿತ್ತು. ಕನಿಷ್ಠ ಶಿಕ್ಷೆ ವಿಧಿಸುವ ವಿವೇಚನಾಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಅಪರಾಧಿಗಳ ಪರ ವಕೀಲರು ಮನವಿ ಮಾಡಿದರು.  ವಿಶೇಷ ತನಿಖಾ ತಂಡ (ಎಸ್ ಐಟಿ) ಮತ್ತು ರಾಜ್ಯ ಸರ್ಕಾರವು ಅಪರಾಧಕ್ಕೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದವು. ವಿಶೇಷ ಎಸ್ ಐಟಿ ನ್ಯಾಯಾಲಯವು ಮೂರೂ ಮಂದಿಯನ್ನು ಖುಲಾಸೆಗೊಳಿಸಿತ್ತು.  ಏನಿದ್ದರೂ, ಮೇಲ್ಮನವಿಗಳನ್ನು ಆಲಿಸಿದ ಹೈಕೋರ್ಟ್ ಏಪ್ರಿಲ್ ೨೦ರಂದು ನೀಡಿದ ತನ್ನ ತೀರ್ಪಿನಲ್ಲಿ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿ ಸೇರಿದಂತೆ ೧೮ ಮಂದಿಯನ್ನು ಖುಲಾಸೆಗೊಳಿಸಿದ್ದನ್ನು ಎತ್ತಿ ಹಿಡಿಯಿತಾದರೂ, ಬಜರಂಗದಳದ ನಾಯಕ ಬಾಬು ಬಜರಂಗಿ ಮತ್ತು ಈ ಮೂವರು ಸೇರಿದಂತೆ ೧೬ ಮಂದಿಯನ್ನು ತಪ್ಪಿತಸ್ಥರು ಎಂಬುದಾಗಿ ತೀರ್ಪು ನೀಡಿತ್ತು.   ಸೋಮವಾರ ಶಿಕ್ಷಿತರಾದ ಮೂವರನ್ನು ಹೊರತುಪಡಿಸಿ, ಉಳಿದ ೧೩ ಮಂದಿ ಅಪರಾಧಿಗಳ ಪೈಕಿ ೧೨ ಮಂದಿಗೆ ನ್ಯಾಯಾಲಯ ೨೧ ವರ್ಷಗಳ ಕಠಿಣ ಸಜೆ ವಿಧಿಸಿತು. ಒಬ್ಬನಿಗೆ ೧೦ ವರ್ಷಗಳ ಸಜೆ ವಿಧಿಸಿತು. ಪ್ರಕರಣದ ಒಟ್ಟು ೬೧ ಮಂದಿ ಆರೋಪಿಗಳ ಪೈಕಿ ವಿಶೇಷ ಎಸ್ ಐಟಿ ನ್ಯಾಯಾಲಯವು ೨೦೧೨ರ ಆಗಸ್ಟ್ ತಿಂಗಳಲ್ಲಿ ೩೨ ಮಂದಿ ತಪ್ಪಿತಸ್ಥರು ಎಂದು ಹೇಳಿ, ೨೯ ಮಂದಿಯನ್ನು ಖುಲಾಸೆಗೊಳಿಸಿತ್ತು.

2018: ಅಸ್ಸಾಮಕಾ ನೈಜೆರ್: ಅಲ್ಜೀರಿಯಾವು ಕಳೆದ ೧೪ ತಿಂಗಳ ಅವಧಿಯಲ್ಲಿ ಗರ್ಭಿಣಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ೧೩,೦೦೦ ಕ್ಕೂ ಹೆಚ್ಚು ಮಂದಿಯನ್ನು ದೇಶದಿಂದ ಉಚ್ಚಾಟಿಸಿ, ಸಹಾರಾ ಮರುಭೂಮಿಗೆ ತಳ್ಳಿ ಅವರು ಆಹಾರ, ನೀರು ಇಲ್ಲದೆ ಬಂದೂಕಿಗೆ ಹೆದರಿ ಮರುಭೂಮಿಯಲ್ಲಿ ಎಲ್ಲೆಂದರಲ್ಲಿ ಆಂಡಲೆಯುವಂತೆ ಮಾಡಿದೆ. ಅವರ ಪೈಕಿ ಕೆಲವರೂ ಹೇಗೋ ಪಾರಾಗಿದ್ದರೆ, ಹಲವರು ಮರುಭೂಮಿಯಲ್ಲಿ ಸೂರ್‍ಯನ ಪ್ರಖರ ಬಿಸಿಲ ಝಳಕ್ಕೆ ತುತ್ತಾಗಿ ಕಳೆದುಹೋಗಿದ್ದಾರೆ.  ಉಚ್ಚಾಟಿತರಾಗಿ ಮರುಭೂಮಿಗೆ ತಳ್ಳಲ್ಪಟ್ಟ ವಲಸಿಗರು ನೂರಾರು ಸಂಖ್ಯೆಯಲ್ಲಿ ೪೮ ಡಿಗ್ರಿ ಸೆಲ್ಸಿಯಸ್ ತಾಪದ ಅಡಿಯಲ್ಲಿ ಬೆಂದು ಬೆಂಡಾಗಿ ನೂರಾರು ಸಂಖ್ಯೆಯಲ್ಲಿ ನೆರೆಯ ದೇಶಕ್ಕೆ ಬಂದು ತಲುಪಿದ್ದು ವರದಿಯಾಯಿತು. ಬಹುತೇಕ ಮಂದಿ ಬಂದು ತಲುಪಿರುವ ನೈಜೆರ್ ನಲ್ಲಿ ಅಸ್ಸಾಮಕಾ ಗ್ರಾಮದ ಗಡಿಯಲ್ಲಿನ ೧೫ ಕಿಮೀ ಉದ್ದದ ’ನೋ ಮ್ಯಾನ್ಸ್ ಲ್ಯಾಂಡ್ಗೆ (ಯಾರಿಗೂ ಸೇರದ ಜಾಗ) ಅದೃಷ್ಟವಶಾತ್ ಬದುಕಿ ಉಳಿದ ಮಂದಿ ಭಾರಿ ಸಂಖ್ಯೆಯಯಲ್ಲಿ ಬಂದಿದ್ದಾರೆ. ಇನ್ನೊಂದಷ್ಟು ಮಂದಿ ವಿಶ್ವ ಸಂಸ್ಥೆ ರಕ್ಷಣಾ ತಂಡದ ಕಣ್ಣಿಗೆ ಬೀಳುವವರೆಗೆ ದಿನಗಟ್ಟಲೆ ಮರುಭೂಮಿಯಲ್ಲಿ ಕಾಲೆಳದುಕೊಂಡು ನಡೆದು ಬೆಂಡಾಗಿಹೋಗಿದ್ದಾರೆ. ಹಲವರು ಮರುಭೂಮಿಯಲ್ಲಿ ಮುಂದಕ್ಕೆ ನಡೆಯಲಾಗದೆ ಅಲ್ಲೇ ಕಳೆದುಹೋಗಿದ್ದಾರೆ. ಬದುಕಿ ಉಳಿದ ಹಲವಾರು ಮಂದಿ ತಮ್ಮ ದುಸ್ಥಿತಿಯನ್ನು ಮಾಧ್ಯಮಗಳ ಬಳಿ ಹೇಳಿಕೊಂಡರು.  ‘ಮಹಿಳೆಯರು ಸತ್ತು ಬೀಳುತ್ತಿದ್ದರು... ಪುರುಷರು.. ಇತರರು ಮರುಭೂಮಿಯಲ್ಲಿ ದಾರಿ ಗೊತ್ತಿಲ್ಲದೇ ಕಳೆದುಹೋಗುತ್ತಿದ್ದರು ಎಂದು ಮರುಭೂಮಿಗೆ ತಳ್ಳಲ್ಪಟ್ಟ ವೇಳೆಯಲ್ಲಿ ಗರ್ಭಿಣಿಯಾಗಿದ್ದ ಜಾನೆಟ್ ಕಮಾರಾ ಹೇಳಿದರು. ಪ್ರತಿಯೊಬ್ಬನಿಗೂ ತನ್ನ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿತ್ತು ಎಂದು ಅವರು ನುಡಿದರು.  ನಿರ್ಭಾವುಕ  ಸ್ವರದಲ್ಲಿ ಕನಿಷ್ಠ ಎರಡು ರಾತ್ರಿ ತಾನು ಪಟ್ಟ ಬವಣೆಯನ್ನು ಆಕೆ ವಿವರಿಸಿದಳು. ಆದರೆ ಆಕೆಗೆ ಸಮಯದ ಪರಿವೆ ಇರಲಿಲ್ಲ. ’ನಾನು ನನ್ನ ಮಗನನ್ನು, ನನ್ನ ಮಗುವನ್ನು ಕಳೆದುಕೊಂಡೆ ಎಂದು ಆಕೆ ನುಡಿದರು.  ೨೦ರ ಹರೆಯದ ಇನ್ನೊಬ್ಬ ಮಹಿಳೆಗೆ ಮರುಭೂಮಿಯಲ್ಲಿ ಆಂಡಲೆಯುತ್ತಿದ್ದಾಗಲೇ ಹೆರಿಗೆ ನೋವು ಕಾಣಿಸಿತು. ಆಕೆ ಮಗುವನ್ನು ಕಳೆದುಕೊಂಡಳು. ಐರೋಪ್ಯ ಒಕ್ಕೂಟವು ಉತ್ತರ ಆಫ್ರಿಕಾದ ರಾಷ್ಟ್ರಗಳ ಮೇಲೆ ಮೆಡಿಟರೇನಿಯನ್ ಸಮುದ್ರದ ಮೂಲಕ ಉತ್ತರ ಯುರೋಪಿಗೆ ಹೋಗುತ್ತಿದ್ದ ವಲಸೆಗಾರರನ್ನು  ಕಳುಹಿಸದಂತೆ ಒತ್ತಡ ಹಾಕಿದ ಬಳಿಕ ೨೦೧೭ರ ಅಕ್ಟೋಬರ್ ತಿಂಗಳಲ್ಲಿ ಸಹಾರಾ ಮರುಭೂಮಿಗೆ ಅಲ್ಜೀರಿಯಾದಿಂದ ವಲಸೆಗಾರರ ಸಾಮೂಹಿಕ ಉಚ್ಚಾಟನೆ ಅರಂಭವಾಗಿತ್ತು. ಅಲ್ಜೀರಿಯಾ ಏನು ಮಾಡುತ್ತಿದೆ ಎಂಬುದು ತಮಗೆ ಗೊತ್ತಿತ್ತು. ಆದರೆ ಅಂತಾರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವವರೆಗೂ ಸಾರ್ವಭೌಮ ರಾಷ್ಟ್ರಗಳು ವಲಸೆಗಾರರನ್ನು ಉಚ್ಚಾಟಿಸಬಹುದಾಗಿತ್ತು. ನೈಜೆರ್ ನಂತೆ ಅಲ್ಜೀರಿಯಾವು ೨೦೧೪-೧೭ರ ಅವಧಿಯಲ್ಲಿ ಯುರೋಪಿನಿಂದ ೧೧೧.೩ ಮಿಲಿಯನ್ ಡಾಲರ್‌ಗಳನ್ನು ಪಡೆದಿದ್ದರೂ ವಲಸೆ ಬಿಕ್ಕಟ್ಟನ್ನು ಎದುರಿಸಲು ಐರೋಪ್ಯ ಒಕ್ಕೂಟದಿಂದ ಚಿಕ್ಕಾಸು ನೆರವನ್ನೂ ಪಡೆದಿರಲಿಲ್ಲ.   ಉಚ್ಚಾಟನೆ ಕುರಿತ ಯಾವುದೇ ಅಂಕಿ ಸಂಖ್ಯೆಯನ್ನು ಅಲ್ಜೀರಿಯಾ ಒದಗಿಸಿಲ್ಲ. ಆದರೆ ನೈಜೆರ್ ಗೆ ಬರಿಗಾಲಲ್ಲಿ ಮರುಭೂಮಿಯಲ್ಲಿ ನಡೆದು ಬರುವವರ ಸಂಖ್ಯೆಯನ್ನು ೨೦೧೭ರಲ್ಲಿ ಅಂತಾರಾಷ್ಟ್ರಿಯ ವಲಸೆ ಸಂಘಟನೆಯು (ಐಕ್ಯೂಎಂ) ಲೆಕ್ಕ ಹಾಕಲು ಆರಂಭಿಸಿದ ಬಳಿಕ ಅಂತಹ ಮಂದಿಯ ಸಂಖ್ಯೆ ಹೆಚ್ಚುತ್ತಿರುವುದು ಬೆಳಕಿಗೆ ಬಂತು. ಮೊದಲಿಗೆ ೧೩೫ರಷ್ಟಿದ್ದ ಇಂತಹವರ ಸಂಖ್ಯೆ ೨೦೧೮ರ ಏಪ್ರಿಲ್ ವೇಳೆಗೆ ೨,೮೮೮ ರಷ್ಟಕ್ಕೆ ಏರಿತ್ತು. ವಲಸೆ ಸಂಘಟನೆಯ ಪ್ರಕಾರ ಒಟ್ಟಾರೆ ೧೧,೨೭೬ ಮಂದಿ ಪುರುಷರು, ಮಹಿಳೆಯರು ಮಕ್ಕಳು ಈ ’ಸಹಾರಾ ಮರುಭೂಮಿ ನಡಿಗೆಯಲ್ಲಿ ಬದುಕಿ ಉಳಿದಿದ್ದಾರೆ.  ಕನಿಷ್ಠ ೨,೫೦೦ ಮಂದಿ ಇದೇ ರೀತಿ ಮರುಭೂಮಿಯಲ್ಲಿ ಬಲವಂತವಾಗಿ ಪಾದಯಾತ್ರೆ ಮಾಡಿ ಮಾಲಿಯನ್ನು ತಲುಪಿದ್ದಾರೆ. ಈ ಜನರಲ್ಲೂ ಹಲವರು ಮರುಭೂಮಿಯಲ್ಲೇ ಕಳೆದುಹೋಗಿದ್ದಾರೆ.
ವಲಸಿಗರು ಹೇಳುವಂತೆ ನೂರಾರು ಸಂಖ್ಯೆಯ ವಲಸಿಗರನ್ನು ಹಿಡಿದು ಟ್ರಕ್ಕುಗಳಿಗೆ ತುಂಬಲಾಗುತ್ತಿತ್ತು. ಗಂಟೆಗಟ್ಟಲೆ ಹಾಗೆಯೇ ಟ್ರಕ್ಕಿನಲ್ಲಿ ಒಯ್ದು ಬಳಿಕ ಮರುಭೂಮಿಗೆ ತಳ್ಳಿ ನೈಜೆರ್‌ನತ್ತ ಬೊಟ್ಟು ಮಾಡಿ ಅಟ್ಟಲಾಗುತ್ತಿತ್ತು. ಕೆಲವೊಮ್ಮ ಬಂದೂಕು ತೋರಿಸಿ ಓಡಿಸಲಾಗುತ್ತಿತ್ತು.   ‘ನಡೆಯಲಾಗದ ಮಂದಿ ಮರುಭೂಮಿಯ ಮಧ್ಯೆ ಕುಸಿದು ಕುಳಿತುಕೊಳ್ಳುತ್ತಿದ್ದರು. ನಾವು ಅವರನ್ನು ಬಿಟ್ಟು ಮುಂದುವರೆದೆವು. ಅವರು ಅದೆಷ್ಟು ನರಳಿದರೋ ಎಂದು ಸೆನೆಗಲ್ ನ ೧೮ರ ಹರೆಯದ ಅಲಿಯೊವು ಕಂಡೆ ಹೇಳಿದರು.
ಡಜನ್ ಗಟ್ಟಲೆ ಮಂದಿ ಮರುಭೂಮಿಯಲ್ಲಿ ಕುಸಿದು ಕಳೆದುಹೋದರು. ಸುಮಾರು ೧೦೦೦ ಜನರಿದ್ದ ತಮ್ಮ ಗುಂಪು ಬೆಳಗ್ಗೆ ೮ರಿಂದ ರಾತ್ರಿ ೭ರವರೆಗೆ ಆಂಡಲೆದಿತ್ತು ಎಂದು ಕಂಡೆ ಹೇಳಿದರು. ’ಅವರು ನಮ್ಮ ದೂರವಾಣಿ, ಹಣವನ್ನು ಕಸಿದುಕೊಂಡು ನಮ್ಮನ್ನು ಮರುಭೂಮಿಗೆ ತಳ್ಳಿದರು ಎಂದು ಅವರು ನುಡಿದರು.  ಲೈಬೇರಿಯಾದ ಜು ಡೆನ್ನಿಸ್ ಎಂಬ ವ್ಯಕ್ತಿ ತಮ್ಮನ್ನು ಬಲವಂತವಾಗಿ ಮರುಭೂಮಿಗೆ ತಳ್ಳಿದ್ದನ್ನು ದೇಹದಲ್ಲೇ ಅಡಗಿಸಿ ಇಟ್ಟಿದ್ದ ಫೋನ್ ಮೂಲಕ ಚಿತ್ರೀಕರಿಸಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಓಪನ್ ಟ್ರಕ್ಕಿನೊಳಗೆ ಜನರನ್ನು ಒತ್ತರಿಸಿ ತುಂಬಿದ್ದು ಕಂಡು ಬರುತ್ತದೆ. ಬಿಸಿಲ ಝಳದಿಂದ ಪಾರಾಗಲು ಮತ್ತು ತಮ್ಮ ಗುಪ್ತಾಂಗಗಳನ್ನು ಮುಚ್ಚಿಕೊಳ್ಳಲು ಅವರು ಪರದಾಡುತ್ತಿದ್ದ ದೃಶ್ಯಗಳು ಅದರಲ್ಲಿ ದಾಖಲಾಗಿವೆ. ಪ್ರತಿಯೊಂದು ಹಂತವನ್ನೂ ಆತ ತನ್ನ ಸ್ವರದಲ್ಲೇ ವಿವರಣೆ ಕೊಡುವ ಮೂಲಕ ದಾಖಲಿಸಿದ್ದ.  ‘ನೀವು ಬಲವಂತವಾಗಿ ಅಲ್ಜೀರಿಯಾದಿಂದ ಸಾಗಿಸಲ್ಪಡುತ್ತಿದ್ದೀರಿ. ಇಲ್ಲಿ ಯಾವುದೇ ದಯೆ ಎಂಬುದಿಲ್ಲ. ನಾನು ಅವರನ್ನು ಬಯಲುಗೊಳಿಸಲು ಬಯಸಿದ್ದೇನೆ. ನಾವು ಇಲ್ಲಿದ್ದೇವೆ, ಮತ್ತು ಅವರು ಏನು ಮಾಡಿದರು ಎಂಬುದನ್ನು ನಾವು ಕಂಡಿದ್ದೇವೆ. ಅದಕ್ಕೆ ನಮ್ಮಲ್ಲಿ ಸಾಕ್ಷ್ಯಾಧರವೂ ಇದೆ ಎಂದು ಆತ ಹೇಳಿದ್ದಾನೆ.


2017: ಬಹಾವಲ್ಪುರ: ಪಾಕಿಸ್ತಾನದ ಪಂಜಾಬ್ಪ್ರಾಂತ್ಯದ ಬಹಾಹವಲ್ಪುರ ಸಮೀಪದ ಹೆದ್ದಾರಿಯಲ್ಲಿ ಈದಿನ ತೈಲ ಟ್ಯಾಂಕರ್ಸ್ಫೋಟಗೊಂಡು ಕನಿಷ್ಠ 151ಮಂದಿ ಸಾವನ್ನಪ್ಪಿದರು.  ಘಟನೆಯಲ್ಲಿ 140ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡರು ಎಂದು ‘ಡಾನ್’ ವರದಿ ಮಾಡಿತು. ಹೆದ್ದಾರಿಯಲ್ಲಿ ತೈಲ ಟ್ಯಾಂಕರ್ಉರುಳಿಬಿದ್ದು ಅದರಲ್ಲಿದ್ದ ಇಂಧನ ಸೋರಿಕೆಯಾಗುತ್ತಿತ್ತು. ವಿಷಯ ತಿಳಿದ ಸ್ಥಳೀಯರು ಸೋರಿಕೆಯಾಗುತ್ತಿರುವ ಇಂಧನ ತುಂಬಿಕೊಳ್ಳಲು ಟ್ಯಾಂಕರ್ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಿದ್ದರು. ವೇಳೆ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡು ಕೆಲ ಕ್ಷಣಗಳಲ್ಲೇ ಅದು ಸ್ಫೋಟಿಸಿತು. ಇಂಧನ ತುಂಬಿಕೊಳ್ಳಲು ಟ್ಯಾಂಕರ್ಸುತ್ತ ಸೇರಿದ್ದ ಜನ ಸ್ಫೋಟಕ್ಕೆ ಬಲಿಯಾದರು ಎಂದು ಪಾಕಿಸ್ತಾನ್ರೇಡಿಯೊ ವರದಿ ಮಾಡಿತು. 
2008: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ `ಈ-ಪಾಸ್ಪೋರ್ಟ್' ಸೇವೆ ಈದಿನ ನವದೆಹಲಿಯಲ್ಲಿ ಆರಂಭವಾಯಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಅವರಿಂದ ಪಾಸ್ಪೋರ್ಟ್ ಪ್ರತಿಯನ್ನು ಸ್ವೀಕರಿಸುವುದರೊಂದಿಗೆ `ಈ-ಪಾಸ್ಪೋರ್ಟ್' ಸೇವೆಗೆ ವಿಧ್ಯುಕ್ತ ಚಾಲನೆ ದೊರೆಯಿತು.
2007: ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಟ್ಟದ್ದೀರೋ ಅದೇ ಮಾಧ್ಯಮದಲ್ಲಿಯೇ ಒಂದನೇ ತರಗತಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಬೋಧನೆ ಮಾಡಬೇಕು' ಎಂದು ಕರ್ನಾಟಕ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಿತು. ಇದರಿಂದಾಗಿ ಕೆಲವು ತಿಂಗಳುಗಳಿಂದ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಮಧ್ಯೆ ಸತತವಾಗಿ ಬಿಸಿ ವಾತಾವರಣ ಸೃಷ್ಟಿಸಿದ್ದ ಭಾಷಾ ಮಾಧ್ಯಮ ವಿವಾದ ತಕ್ಕ ಮಟ್ಟಿಗೆ ತಿಳಿಯಾಯಿತು.

2007: ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅವರು ಎನ್ ಡಿಎ ಬೆಂಬಲಿತ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

2007: ಬಿಹಾರದ ಭೋಜಪುರ ಜಿಲ್ಲೆಯ ರಾಮಕರಣಿ ಗ್ರಾಮದ ಶಿವದತ್ತ ಯಾದವ್ ಅವರು ತಮ್ಮ ಆರು ಮಂದಿ ಹೆಣ್ಮಕ್ಕಳನ್ನು ಲಕ್ಷ್ಮೀಪುರಂನ ಕುಟುಂಬ ಒಂದರ 6 ಮಂದಿ ಸಹೋದರರಿಗೆ ಮದುವೆ ಮಾಡಿಕೊಟ್ಟರು. ಒಂದೇ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ಮಂತ್ರಘೋಷದ ಮಧ್ಯೆ ನಡೆದ ಈ ಸರಳ ಮದುವೆಗೆ ನೆರೆದಿದ್ದ ಜನ ಸಾಕ್ಷಿಯಾದರು.

2007: ಸೆರೆವಾಸದಲ್ಲಿರುವ ಮಾಜಿ ಸಚಿವ, ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಅಧ್ಯಕ್ಷ ಶಿಬು ಸೊರೇನ್ ಅವರನ್ನು ಗುರಿಯಾಗಿ ಇಟ್ಟುಕೊಂಡು ನಡೆದ ಬಾಂಬ್ ದಾಳಿಯಲ್ಲಿ ಸೊರೇನ್ ಅಪಾಯದಿಂದ ಪಾರಾದರು.

2007: ಇರಾಕಿನಲ್ಲಿ ನಡೆದ ಸರಣಿ ಮಾನವ ಬಾಂಬ್ ದಾಳಿಗಳಿಗೆ ಸಿಲುಕಿ 32ಕ್ಕೂ ಹೆಚ್ಚು ಮಂದಿ ಅಸು ನೀಗಿದರು.

2007: ಹಿರಿಯ ಬಿಜೆಪಿ ಮುಖಂಡ, ಗುಜರಾತ್ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಕೊಲೆ ಪ್ರಕರಣದಲ್ಲಿ ಒಂಬತ್ತು ಆರೋಪಿಗಳಿಗೆ ಪೋಟಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು.

1991: ಒಕ್ಕೂಟ ರಚನೆಗೆ ಸಂಬಂಧಿಸಿದಂತೆ ಯುಗೋಸ್ಲಾವಿಯಾದ ಆರು ಗಣರಾಜ್ಯಗಳ ಮಧ್ಯೆ ನಡೆದ ಹಲವು ತಿಂಗಳುಗಳ ಮಾತುಕತೆ ವಿಫಲಗೊಂಡ ಬಳಿಕ ಪಶ್ಚಿಮದ ಗಣರಾಜ್ಯಗಳಾದ ಸ್ಲೊವೇನಿಯಾ ಮತ್ತು ಕ್ರೊವೇಷಿಯಾ ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡವು.

1983: ಲಾರ್ಡ್ಸ್ ಮೈದಾನದಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಭಾರತ ಅದನ್ನು ಸೋಲಿಸುವ ಮೂಲಕ ಮೊತ್ತ ಮೊದಲ ಬಾರಿಗೆ ಕ್ರಿಕೆಟ್ ವಿಶ್ವ ಕಪ್ಪನ್ನು ತನ್ನ ಬಗಲಿಗೆ ಹಾಕಿಕೊಂಡಿತು. ಇದು ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಅತ್ಯಂತ ಸುಂದರ ಘಳಿಗೆಯಾಯಿತು. `ಭಾರತ ಸಾಧಿಸಬಲ್ಲುದು ಎಂಬುದೇ ನನ್ನ ಘೋಷಣೆ' ಎಂದು ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಹೇಳಿದರು.

1957: ಕಾವ್ಯರಚನೆ, ಚಿತ್ರಕಲೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದೆ ಪ್ರೇಮಾಪ್ರಭು ಹಂದಿಗೋಳ ಅವರು ವಿರೂಪಾಕ್ಷಯ್ಯ- ಶಾಂತಾದೇವಿ ದಂಪತಿಯ ಮಗನಾಗಿ ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆ ಆಲೂರಿನಲ್ಲಿ ಜನಿಸಿದರು.

1950: ದಕ್ಷಿಣ ಕೊರಿಯಾದ ಮೇಲೆ ಉತ್ತರ ಕೊರಿಯಾ ದಾಳಿ ಮಾಡಿತು. ಇದರೊಂದಿಗೆ ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳ ಮಧ್ಯೆ ವೈರತ್ವ ಆರಂಭವಾಯಿತು.

1948: ಹೆವಿ ವೇಯ್ಟ್ ಬಾಕ್ಸರ್ ಜೋ ಲೂಯಿ ತನ್ನ ಎದುರಾಳಿ ಜೋ ವಾಲ್ಕೋಟ್ ಅವರನ್ನು ಸೋಲಿಸುವ ಮೂಲಕ 25ನೇ ಸಲಕ್ಕೆ ತಮ್ಮ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ರಕ್ಷಿಸಿಕೊಂಡರು. ಜೋ ಲೂಯಿ ಅವರಿಗೆ ಸವಾಲು ಹಾಕಿ ಈ ರೀತಿ ಪರಾಜಯಗೊಂಡ 22ನೇ ವ್ಯಕ್ತಿಯಾದರು ಜೋ ವಾಲ್ಕೋಟ್.

1932: ಇಂಗ್ಲೆಂಡಿನ ಲಾರ್ಡ್ಸ್ಸ್ ಮೈದಾನದಲ್ಲಿ ಇಂಗ್ಲೆಂಡಿನ ವಿರುದ್ಧ ಆಡುವ ಮೂಲಕ ಭಾರತ ಮೊತ್ತ ಮೊದಲ ಬಾರಿಗೆ ವಿದೇಶವೊಂದರ ಜೊತೆಗೆ ಟೆಸ್ಟ್ ಕ್ರಿಕೆಟಿನಲ್ಲಿ ಪಾಲ್ಗೊಂಡಿತು. ಈ ಪಂದ್ಯದಲ್ಲಿ ಭಾರತ 158 ರನ್ನುಗಳ ಅಂತರದಲ್ಲಿ ಸೋತಿತು.

1931: ಭಾರತದ ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಜನನ.

No comments:

Post a Comment