ಇಂದಿನ ಇತಿಹಾಸ History Today ಜೂನ್ 09
2019: ಕೊಲಂಬೋ: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಜೊತೆಗೆ ೧೦ ದಿನಗಳ ಒಳಗಾಗಿ ಎರಡನೇ ಬಾರಿಗೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಉಭಯ ನಾಯಕರೂ ಭಯೋತ್ಪಾದನೆಯನ್ನು ಜಂಟಿ ಬೆದರಿಕೆ ಎಂಬುದಾಗಿ ಬಣ್ಣಿಸಿ, ಅದರ ವಿರುದ್ಧ ಸಾಮೂಹಿಕ ಮತ್ತು ಕೇಂದ್ರೀಕೃತ ಕ್ರಮದ ಅಗತ್ಯವಿದೆ ಎಂಬುದಾಗಿ ಒಪ್ಪಿದರು. ಶ್ರೀಲಂಕೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಸಂಭವಿಸಿದ ಮಾರಕ ಈಸ್ಟರ್ ಭಯೋತ್ಪಾದಕ ದಾಳಿಗಳ ಬಳಿಕ ಅಲ್ಲಿಗೆ ಭೇಟಿ ನೀಡಿದ ಮೊದಲ ವಿದೇಶೀ ನಾಯಕ ನರೇಂದ್ರ ಮೋದಿ ಅವರಾಗಿದ್ದಾರೆ. ಅವರ ಭೇಟಿಯು ದಾಳಿಗಳ ಬಳಿಕ ಶ್ರೀಲಂಕೆ ಜೊತೆಗಿನ ಭಾರತದ ಐಕ್ಯಮತ್ಯದ ದೃಢೀಕರಣದ ಸಂಕೇತ ಎಂಬುದಾಗಿ ಪರಿಗಣಿಸಲಾಗಿದೆ. ‘ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಭೇಟಿ ಮಾಡಿದೆ. ೧೦ ದಿನಗಳ ಅವಧಿಯಲ್ಲಿ ಇದು ನಮ್ಮ ಎರಡನೇ ಭೇಟಿ. ಭಯೋತ್ಪಾದನೆಯು ಜಂಟಿ ಬೆದರಿಕೆಯಾಗಿದ್ದು
ಅದರ ವಿರುದ್ಧ ಸಾಮೂಹಿಕ ಮತ್ತು ಕೇಂದ್ರೀಕೃತ ಕ್ರಮದ ಅಗತ್ಯವಿದೆ ಎಂಬುದನ್ನು ಅಧ್ಯಕ್ಷ ಸಿರಿಸೇನಾ ಮತ್ತು ನಾನು ಒಪ್ಪಿದ್ದೇವೆ. ಶ್ರೀಲಂಕೆಯ ಭದ್ರತೆ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಾಯಿತು’ ಎಂದು ಮೋದಿ ಅವರು ಸಿರಿಸೇನಾ ಅವರ ಜೊತೆಗಿನ ಮಾತುಕತೆ ಬಳಿಕ ಟ್ವೀಟ್ ಮಾಡಿದರು. ದ್ವಿಪಕ್ಷೀಯ ವಿಷಯಗಳ ಚರ್ಚೆ: ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಿದರು. ಪ್ರಧಾನಿ ಮೋದಿಯವರ ಗೌರವಾರ್ಥ ಅಧ್ಯಕ್ಷ ಸಿರಿಸೇನಾ ಅವರು ಔತಣಕೂಟ ಏರ್ಪಡಿಸಿದ್ದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಹೇಳಿದರು. ‘ವಿಶೇಷ ಗೆಳೆಯ’ ಸಿರಿಸೇನಾ ಅವರಿಂದ ಸಮಾಧಿ ಬುದ್ಧನ ಪ್ರತಿಕೃತಿ ಪ್ರತಿಮೆಯೊಂದನ್ನೂ ವಿಶೇಷ ಕೊಡುಗೆಯಾಗಿ ಮೋದಿ ಅವರು ಸ್ವೀಕರಿಸಿದರು. ‘ವಿಶೇಷ
ಗೆಳೆಯನಿಂದ ವಿಶೇಷ ಕೊಡುಗೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾಧಿ ಬುದ್ಧನ ಪ್ರತಿಮೆಯನ್ನು ನೀಡಿದರು. ಇದು ಅನುರಾಧಪುರ ಪ್ರದೇಶದ ಅತ್ಯುತ್ತಮ ಕೆತ್ತನೆಗಳಲ್ಲಿ ಒಂದು ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಮೂಲ ಪ್ರತಿಮೆಯನ್ನು ಕ್ರಿಸ್ತಶಕ ೪ನೇ ಮತ್ತು ೭ನೇ ಶತಮಾನಗಳ ನಡುವಣ ಅವಧಿಯಲ್ಲಿ ಕೆತ್ತಲಾಗಿತ್ತು’ ಎಂದು ಪ್ರಧಾನಿಯವರ ಕಚೇರಿ ಟ್ವೀಟ್ ಮಾಡಿದೆ. ’ಸಮಾಧಿ
ಬುದ್ಧನ ಈ ಪ್ರತಿಕೃತಿಯನ್ನು ಬಿಳಿ ತೇಗದ ಮರವನ್ನು ಕೈಯಿಂದ ಕೆತ್ತಿ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ನಿರ್ಮಿಸಲು ಎರಡು ವರ್ಷ ತಗುಲಿತ್ತು. ಧ್ಯಾನ ಮಾಡುತ್ತಿರುವ ಈ ಸ್ಥಿತಿಯ ’ಧ್ಯಾನ ಮುದ್ರೆ’ ಎಂಬುದಾಗಿಯೇ ಪರಿಚಿತವಾಗಿದೆ’ ಎಂದು ಟ್ವೀಟ್ ಹೇಳಿದೆ. ಈಸ್ಟರ್ ಭಾನುವಾರದ ದಾಳಿ ಸ್ಥಳಕ್ಕೆ ಭೇಟಿ: ಇದಕ್ಕೆ ಮುನ್ನ ಅಧ್ಯಕ್ಷರ ಸಚಿವಾಲಯಕ್ಕೆ ಹೋಗುವ ಮಾರ್ಗದಲ್ಲಿ ಪ್ರಧಾನಿ ಮೋದಿಯವರು ಭೀಕರ ಈಸ್ಟರ್ ಭಾನುವಾರದ ದಾಳಿ ನಡೆದ ನಿವೇಶನಗಳಲ್ಲಿ ಒಂದಾದ ಸೈಂಟ್ ಆಂತೋಣಿ ಇಗರ್ಜಿಗೆ (ಚರ್ಚ್) ಭೇಟಿ ನೀಡಿದರು. ಇಗರ್ಜಿಯ ಭೀಕರ ದಾಳಿಯಲ್ಲಿ ಮೃತರಾದವರಿಗೆ ಸಂತಾಪ ವ್ಯಕ್ತ ಪಡಿಸಿದ ಮೋದಿ ’ಭಯೋತ್ಪಾದನೆಯ ಹೇಡಿ ಕೃತ್ಯಗಳು ಶ್ರೀಲಂಕಾದ ಚೈತನ್ಯವನ್ನು ಪರಾಭವಗೊಳಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ’ಶ್ರೀಲಂಕಾ ಮತ್ತೆ ತಲೆಎತ್ತಿ ನಿಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ಭಯೋತ್ಪಾದನೆಯ ಹೇಡಿ ಕೃತ್ಯಗಳು ಶ್ರೀಲಂಕೆಯ ಚೈತನ್ಯವನ್ನು ಉಡುಗಿಸಲು ಸಾಧ್ಯವಿಲ್ಲ. ಭಾರತವು ಶ್ರೀಲಂಕಾದ ಜನರ ಜೊತೆಗೆ ಐಕ್ಯಮತ್ಯದೊಂದಿಗೆ ನಿಲ್ಲುತ್ತದೆ’ ಎಂದು
ಮೋದಿ ಹೇಳಿದರು. ಒಂಬತ್ತು ಆತ್ಮಹತ್ಯಾ ಬಾಂಬರುಗಳು ಕೊಲಂಬೋದ ಸೈಂಟ್ ಆಂತೋಣಿ ಇಗರ್ಜಿ, ನೆಗೊಂಬೋ ಕರಾವಳಿ ಪಟ್ಟಣದ ಪಶ್ಚಿಮ ಭಾಗದ ಸೈಂಟ್ ಸೆಬಾಸ್ಟಿಯನ್ ಇಗರ್ಜಿ ಮತ್ತು ಬಟ್ಟಿಕಲೋವಾದ ಇನ್ನೊಂದು ಇಗರ್ಜಿಯಲ್ಲಿ ಹಾಗೂ ವಿದೇಶೀಯರು ಹೆಚ್ಚಾಗಿ ಆಗಮಿಸುವ ಮೂರು ತಾರಾ ಹೋಟೆಲ್ಗಳಲ್ಲಿ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರು. ೨೦೦೯ರ ಅಂತರ್ಯುದ್ಧದ ಬಳಿಕ ಶ್ರೀಲಂಕೆಯಲ್ಲಿ ಸಂಭವಿಸಿದ ಅತಿಭೀಕರ ಹಿಂಸಾಚಾರ ಇದಾಗಿತ್ತು. ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರಗಾಮಿ ಸಂಘಟನೆಯು ಈ ದಾಳಿಗಳ ಹೊಣೆ ಹೊತ್ತಿತ್ತು. ಆದರೆ ಸರ್ಕಾರವು ದಾಳಿಗಳಿಗೆ ಸ್ಥಳೀಯ ಇಸ್ಲಾಮಿಸ್ಟ್ ಉಗ್ರಗಾಮಿ ಗುಂಪು ನ್ಯಾಷನಲ್ ತೌಹೀದ್ ಜಮಾತ್(ಎನ್ ಟಿಜೆ) ಹೊಣೆ ಎಂಬುದಾಗಿ ಹೇಳಿತ್ತು. ಸಾಂಪ್ರದಾಯಿಕ ಸ್ವಾಗತ, ಕೊಡೆ ಹಿಡಿದ ಸಿರಿಸೇನಾ: ಈಸ್ಟರ್ ಭಾನುವಾರದ ದಾಳಿಗಳಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೋದಿಯವರು ಅಧ್ಯಕ್ಷರ ಭವನಕ್ಕೆ ಆಗಮಿಸಿದರು. ಅಲ್ಲಿ ಅವರಿಗೆ ಭವ್ಯವಾದ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಧ್ಯಕ್ಷ ಸಿರಿಸೇನಾ ಅವರು ತಮಗೆ ಮತ್ತು ಪ್ರಧಾನಿ ಮೋದಿ ಅವರಿಗೆ ಕೊಡೆ ಹಿಡಿದರು. ಮೋದಿಯವರು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಜೊತೆಗೂ ಫಲಪ್ರದ ಮಾತುಕತೆ ನಡೆಸಿದರು. ಶ್ರೀಲಂಕಾದಲ್ಲಿ ಜನತಾ ಆಧಾರಿತ ಯೋಜನೆಗಳ ಮೂಲಕ ದ್ವಿಪಕ್ಷೀಯ ಅಭಿವೃದ್ಧಿ ಪಾಲುದಾರಿಕೆಯನ್ನು ಬಲ ಪಡಿಸುವುದಕ್ಕೆ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದೇನೆ ಎಂದು ವಿಕ್ರಮಸಿಂಘೆ ಅವರ ಜೊತೆಗಿನ ಮಾತುಕತೆ ಬಳಿಕ ಮೋದಿ ಹೇಳಿದರು. ಶ್ರೀಲಂಕೆಯ ವಿರೋಧಿ ನಾಯಕ ಮಹಿಂದ ರಾಜಪಕ್ಸ ಅವರ ಜೊತೆಗೂ ವಿಸ್ತೃತ ಮಾತುಕತೆ ನಡೆಸಿದ ಮೋದಿ, ಭಯೋತ್ಪಾದನೆ ನಿಗ್ರಹ, ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಿಕಟ ಸಹಯೋಗ ಬಗ್ಗೆ ಚರ್ಚಿಸಿದರು. ಶ್ರೀಲಂಕೆಯ ಮಾಜಿ ಅಧ್ಯಕ್ಷರಾದ ರಾಜಪಕ್ಸ ಅವರು ೨೦೦೯ರಲ್ಲಿ ತಮಿಳು ಟೈಗರ್ಗಳ ವಿರುದ್ಧ ತಮ್ಮ ರಾಷ್ಟ್ರವನ್ನು ನಿರ್ಣಾಯಕ ವಿಜಯದತ್ತ ಮುನ್ನಡೆಸಿದ್ದರು. ಆರ್. ಸಂಪಥನ್ ನೇತೃತ್ವದ ತಮಿಳು ನ್ಯಾಷನಲ್ ಅಲಯನ್ಸ್ ನಿಯೋಗ ಕೂಡಾ ಮೋದಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣಾ ವಿಜಯಕ್ಕಾಗಿ ಅವರನ್ನು ಅಭಿನಂದಿಸಿತು. ದ್ವೀಪರಾಷ್ಟ್ರವನ್ನು ಬಿಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕೊಲಂಬೋ ಭೇಟಿ ಅತ್ಯಂತ ಫಲಪ್ರದ ಎಂದು ಬಣ್ಣಿಸಿದರು. ‘ನಮ್ಮ ಹೃದಯಗಳಲ್ಲಿ ಶ್ರೀಲಂಕೆಗೆ ವಿಶೇಷ ಸ್ಥಾನವಿದೆ. ಶ್ರೀಲಂಕೆಯ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಭಾರತವು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಮತ್ತು ನಿಮ್ಮ ರಾಷ್ಟ್ರದ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಸ್ಮರಣೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಿಮಗೆ ಧನ್ಯವಾದಗಳು’ ಎಂದು ಪ್ರಧಾನಿ ದ್ವೀಪರಾಷ್ಟ್ರದಿಂದ
ಹೊರಡುವ ಮುನ್ನ ಹೇಳಿದರು. ಪ್ರಧಾನಿ ಮೋದಿಯವರ ಅವಧಿಯಲ್ಲಿ ಭದ್ರತಾ ಸಹಕಾರ, ವ್ಯಾಪಾರ ಮತ್ತು ಸಾಂಸ್ಕೃತಿಕ ಬಾಂಧವ್ಯ ಸೇರಿದಂತೆ ಭಾರತ ಮತ್ತು ಶ್ರೀಲಂಕೆಯ ದ್ವಿಪಕ್ಷಿಯ ಬಾಂಧವ್ಯಗಳು ಹೊಸ ಎತ್ತರಕ್ಕೆ ಏರಿದ್ದವು. ಮೋದಿಯವರು ಈ ಹಿಂದೆ ೨೦೧೫ರ ಮಾರ್ಚ್ ಮತ್ತು ೨೦೧೭ರ ಮೇ ತಿಂಗಳ ಭೇಟಿ ಸೇರಿದಂತೆ ಎರಡು ಬಾರಿ ಶ್ರೀಲಂಕೆಗೆ ಭೇಟಿ ನೀಡಿದ್ದರು. ಮೋದಿ
ಸರ್ಕಾರದ ಅಡಿಯಲ್ಲಿ ಭಾರತವು ಶ್ರೀಲಂಕಾದ ಚಹಾ ತೋಟಗಾರಿಕೆ ಪ್ರದೇಶಗಳಲ್ಲಿ ವಾಸಿಸುವ ಬಹುತೇಕ ತಮಿಳು ಜನರಿಗಾಗಿ ೩೫೦ ಮಿಲಿಯನ್ (೩೫ ಕೋಟಿ) ಡಾಲರ್ ಮೊತ್ತದ ಯೋಜನೆಯಡಿ ನಿರ್ಮಿಸಲಾದ ಮನೆಗಳ ಮೊದಲ ಕಂತನ್ನು ಹಸ್ತಾಂತರಿಸಿತ್ತು. ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಚೊಚ್ಚಲ ದ್ವಿರಾಷ್ಟ್ರ ಪ್ರವಾಸದಲ್ಲಿ ಶನಿವಾರ ಮಾಲ್ದೀವ್ಸ್ಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರ ಜೊತೆಗೆ ವ್ಯಾಪಕ ನಡೆಸಿದ್ದ ಮೋದಿ ಅವರು ಮಾಲೆಯಿಂದ ಭಾನುವಾರ ಶ್ರೀಲಂಕೆಗೆ ಆಗಮಿಸಿದ್ದರು.
2019: ತಿರುವಂಬಾಡಿ: ಕೇರಳವು ತಮಗೆ ವಾರಾಣಸಿಯಷ್ಟೇ ಪ್ರಿಯ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯನ್ನು ಇಲ್ಲಿ ತಿರಸ್ಕರಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ’ಪ್ರಧಾನಿಯವರು ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತಾಳಿದ್ದಾರೆ, ಅವರಿಂದ ಯಾವುದೇ ನೆರವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ತಮ್ಮನ್ನು ಲೋಕಸಭೆಗೆ ಆಯ್ಕೆ ಮಾಡಿದ್ದಕ್ಕಾಗಿ ವಯನಾಡು ಕ್ಷೇತ್ರದ ಮತದಾರರಿಗೆ ಧನ್ಯವಾದ ಅರ್ಪಿಸಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿಯವರು ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ದ್ವೇಷ ಮತ್ತು ಸಿಟ್ಟಿನಿಂದ ಕುರುಡಾಗಿದೆ. ಅದು ಭಾರತೀಯನಾಗಿರುವ ಬದಲಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಿದ್ಧಾಂತವನ್ನು ಅನುಸರಿಸುತ್ತಿದೆ’ ಎಂದು ಹೇಳಿ ಇದರ ವಿರುದ್ಧ ಹೋರಾಡುವುದಾಗಿ ಪಣ ತೊಟ್ಟರು. ರಾಹುಲ್ ಗಾಂಧಿಯವರು ಇಲ್ಲಿಗೆ ಸಮೀಪದ ಕೋಳಿಕ್ಕೋಡ್ ಜಿಲ್ಲೆಯ ಪುಟ್ಟ ಪಟ್ಟಣವಾದ ಎಂಗಪುಳದಲ್ಲಿ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ವಯನಾಡು ಕ್ಷೇತ್ರಕ್ಕೆ ಸೇರಿದ ಈ ಜಿಲ್ಲೆಯಲ್ಲಿ ರಾಹುಲ್ ಗಾಂಧಿಯವರು ಧನ್ಯವಾದ ಸಮರ್ಪಣೆ ಭೇಟಿಯ ಸಲುವಾಗಿ ಹಮ್ಮಿಕೊಳ್ಳಲಾದ ಮೂರನೇ ಹಾಗೂ ಅಂತಿಮ ದಿನದ ರೋಡ್ ಶೋ ನಡೆಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದರು. ’ಪ್ರಧಾನಿಯವರು ಬಿಜೆಪಿ ಆಡಳಿತದ ರಾಜ್ಯಗಳನ್ನು ಪರಿಗಣಿಸುತ್ತಾರೆ ಮತ್ತು ಬಿಜೆಪಿಯೇತರ ಆಳ್ವಿಕೆಯ ರಾಜ್ಯಗಳನ್ನು ಭಿನ್ನವಾಗಿ ನೋಡುತ್ತಾರೆ. ನನಗೆ ಗೊತ್ತಿದೆ, ಅವರು ಎಂದಿಗೂ ಉತ್ತರಪ್ರದೇಶವನ್ನು
ಪರಿಗಣಿಸುವ ರೀತಿಯಲ್ಲಿ ಕೇರಳವನ್ನು ಪರಿಗಣಿಸುವುದಿಲ್ಲ,
ಏಕೆಂದರೆ ಇಲ್ಲಿ ಸಿಪಿಐ(ಎಂ) ಆಡಳಿತ ಇದೆ’ ಎಂದು
ಮೋದಿಯವರು ಶನಿವಾರ ಕೇರಳ:ದ ಗುರುವಾಯೂರಿನಲ್ಲಿ ಮಾಡಿದ ಭಾಷಣವನ್ನು ಉಲ್ಲೇಖಿಸುತ್ತಾ ರಾಹುಲ್ ಗಾಂಧಿ ನುಡಿದರು. ಗುರುವಾಯೂರಿನ ಶ್ರೀಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಹಾಗೂ ಕಮಲ ತುಲಾಭಾರ ಸೇವೆ ಸಲ್ಲಿಸಿದ ಬಳಿಕ ಮೋದಿಯವರು ಬಿಜೆಪಿಯು ಕೇವಲ ಚುನಾವಣಾ ರಾಜಕೀಯಕ್ಕಾಗಿ ಕೆಲಸ ಮಾಡುವುದಿಲ್ಲ. ಅದು ರಾಷ್ಟ್ರ ನಿರ್ಮಾಣದಲ್ಲಿ ಆಸಕ್ತವಾಗಿದೆ ಮತ್ತು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯ ಸ್ಥಾನ ದೊರಕಿಸುವ ನಿಟ್ಟಿನಲ್ಲಿ ಖಾತ್ರಿ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.
’ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳಿಗೆ ತಮ್ಮದೇ ಆದ ಸ್ಥಾನ ಇದೆ. ದೇಶದ ಎಲ್ಲ ೧೩೦ ಕೋಟಿ ಜನರ ಕಾಳಜಿ ವಹಿಸಬೇಕಾದ್ದು ಚುನಾವಣಾ ವಿಜೇತನ ಹೊಣೆಗಾರಿಕೆಯಾಗಿದೆ.
ನಮ್ಮನ್ನು ಗೆಲ್ಲುವಂತೆ ಮಾಡಿದವರು ಮತ್ತು ನಮ್ಮನ್ನು ಗೆಲ್ಲದಂತೆ ಮಾಡಿದವರು ಸೇರಿದಂತೆ ಎಲ್ಲರೂ ನಮ್ಮವರೇ. ಕೇರಳವು ನನಗೆ ವಾರಾಣಸಿಯಷ್ಟೇ ಪ್ರಿಯವಾದದ್ದು’ ಎಂದು ಮೋದಿಯವರು ಉತ್ತರ ಪ್ರದೇಶದ ತಮ್ಮ ಕ್ಷೇತ್ರವನ್ನು ಉಲ್ಲೇಖಿಸುತ್ತಾ ಹೇಳಿದ್ದರು.
ಏನಿದ್ದರೂ, ಕೇರಳ ಮತ್ತು ವಯನಾಡು ಅಭಿವೃದ್ಧಿಗೆ ಪ್ರಧಾನಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಯಾವುದೇ ಸಹಕಾರವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥ ನುಡಿದರು. ವಯನಾಡು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೇರಳದ ಕಲ್ಪೇಟದ ಸಿಪಿಐ(ಎಂ) ಶಾಸಕನ ಜೊತೆಗಿನ ಶನಿವಾರದ ಸಭೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿಯವರು ’ಸೈದ್ಧಾಂತಿಕ ಭಿನ್ನಮತಗಳು (ಕಾಂಗ್ರೆಸ್ ಮತ್ತು ಎಡಪಕ್ಷದ ನಡುವೆ) ಇರಬಹುದು, ಆದರೆ ಅವುಗಳನ್ನು ಬದಿಗೊತ್ತಲಾಗುವುದು ಮತ್ತು ಉಭಯ ಪಕ್ಷಗಳೂ ವಯನಾಡು ಅಭಿವೃದ್ಧಿಗಾಗಿ ಒಟ್ಟಾಗಿ ದುಡಿಯುವುವು ಎಂದು ಹೇಳಿದರು. ಆದರೆ ಅಂತಹ ಸಹಕಾರ ಪ್ರಧಾನಿ ಮತ್ತು ಬಿಜೆಪಿಯಿಂದ ಬರುತ್ತಿಲ್ಲ ಎಂದು ಅವರು ಆಪಾದಿಸಿದರು. ’ಏಕೆಂದರೆ ಅವರು ದ್ವೇಷ ಮತ್ತು ಸಿಟ್ಟಿನಿಂದ ಕುರುಡಾಗಿದ್ದಾರೆ...ಏಕೆಂದರೆ ನೀವು ಆರ್ ಎಸ್ ಎಸ್ ಸಿದ್ಧಾಂತವನ್ನು ಅನುಸರಿಸಬೇಕು ಅಥವಾ ನೀವು ಭಾರತೀಯನಾಗಿರಬಾರದು....ನಾವು ಇದರ ವಿರುದ್ಧ ಹೋರಾಡುತ್ತೇವೆ ಮತ್ತು ನಾವು ನಾಗಪುರದಿಂದ (ಆರ್ ಎಸ್ ಎಸ್ ಮೂಲ) ಆಳಲ್ಪಡುವುದಿಲ್ಲ ಎಂಬುದಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದರು. ಕಳೆದ ಎರಡು ದಿನಗಳ ಅವಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಮಂದಿ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯರು ಎಂಗಪುಳದಲ್ಲಿ ಭಾನುವಾರ ಬೆಳಗ್ಗೆ ನಡೆದ ರೋಡ್ ಶೋದಲ್ಲಿ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದರು. ಗುಂಪಿನಲ್ಲಿದ್ದ ಹಲವಾರು ಜನರು ’ರಾಹುಲ್ ವಿ ನೀಡ್ ಯು’ ಮತ್ತು ’ರಾಹುಲ್ ಪದ’ (ಸೇನೆ) ಎಂಬುದಾಗಿ ಬರೆಯಲಾಗಿದ್ದ ಟೀ-ಶರ್ಟ್ಗಳನ್ನು ಧರಿಸಿದ್ದುದು ಕಂಡು ಬಂತು. ಮಧ್ಯಾಹ್ನ ದೆಹಲಿಗೆ ವಾಪಸಾಗುವ ಮುನ್ನ ರಾಹುಲ್ ಗಾಂಧಿಯವರು ಇಲ್ಲಿಗೆ ಸಮೀಪದ ಮುಕ್ಕಮ್ ನಲ್ಲಿ ಇನ್ನೊಂದು ರೋಡ್ ಶೋ ನಡೆಸಿದರು. ೪.೩೧ ಲಕ್ಷ ಮತಗಳ ಅಂತರದ ಬಹುಮತದೊಂದಿಗೆ ಪ್ರಚಂಡ ವಿಜಯ ಗಳಿಸಿದ ಬಳಿಕ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ವಯನಾಡು ಕ್ಷೇತ್ರಕ್ಕೆ ನೀಡಿದ ಮೊದಲ ಭೇಟಿ ಇದು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸಂಸದೀಯ ಚುನಾವಣೆಯಲ್ಲಿ ಕೇರಳದಲ್ಲಿ ೨೦ ಸ್ಥಾನಗಳ ಪೈಕಿ ೧೯ ಸ್ಥಾನಗಳನ್ನು ಗೆದ್ದು ಪ್ರಚಂಡ ಜಯ ಗಳಿಸಿತ್ತು. ವಯನಾಡು ಹೊರತಾಗಿ, ರಾಹುಲ್ ಗಾಂಧಿಯವರು ಉತ್ತರಪ್ರದೇಶದ ತಮ್ಮ ಸ್ವಕ್ಷೇತ್ರ ಅಮೇಥಿಯಲ್ಲಿ ಸ್ಪರ್ಧಿಸಿದ್ದರು.
ಆದರೆ ಅಲ್ಲಿ ಅವರು ಬಿಜೆಪಿಯ ಎದುರಾಳಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಎದುರು ಪರಾಭವ ಅನುಭವಿಸಿದ್ದರು. ಜೂನ್ ೭ರಂದು ಕೇರಳಕ್ಕೆ ಆಗಮಿಸಿದ ಬಳಿಕ ಕಾಂಗ್ರೆಸ್ ಮುಖ್ಯಸ್ಥರು ವಯನಾಡು, ಮಲಪ್ಪುರಂ ಮತ್ತು ಕೋಳಿಕ್ಕೋಡ್ ಈ ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ವಯನಾಡು ಕ್ಷೇತ್ರದ ವಿವಿಧ ಕಡೆಗಳಲ್ಲಿ ಭಾರೀ ರೋಡ್ ಶೋಗಳನ್ನು ನಡೆಸಿದ್ದರು. ರೋಡ್ ಶೋದಲ್ಲಿ ಅವರು ಜನರಿಂದ ದೂರುಗಳು ಮತ್ತು ಮನವಿಪತ್ರಗಳನ್ನು ಸ್ವೀಕರಿಸಿದ್ದರು.
ಮತ್ತು ಬುಡಕಟ್ಟು ಜನರು ರೈತರ ಪ್ರತಿನಿಧಿಗಳ ಜೊತೆಗೆ ವಯನಾಡು ಜಿಲ್ಲಾ ಕಲೆಕ್ಟೋರೇಟ್ ಕಚೇರಿಯಲ್ಲಿ ಸಭೆ ನಡೆಸಿ, ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿದ್ದರು. ರೋಡ್ ಶೋಗಳಲ್ಲಿ ಮೋದಿ ಅವರ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದ ರಾಹುಲ್, ತಾವು ಸಂಸತ್ತಿನಲ್ಲಿ ವಯನಾಡು ಮಾತ್ರವೇ ಅಲ್ಲ ಇಡೀ ಕೇರಳ ರಾಜ್ಯದ ವಿಷಯಗಳನ್ನು ಪ್ರಸ್ತಾಪಿಸುವುದಾಗಿ
ಜನರಿಗೆ ಭರವಸೆ ನೀಡಿದ್ದರು. ಚುನಾವಣೆಯ ಬಳಿಕ ಮೋದಿ ವಿರುದ್ಧದ ತಮ್ಮ ದಾಳಿಯನ್ನು ಪುನರುಜ್ಜೀವನಗೊಳಿಸಿದ ಕಾಂಗ್ರೆಸ್ ಅಧ್ಯಕ್ಷ, ಪ್ರಧಾನಿಯವರ ಚುನಾವಣಾ ಪ್ರಚಾರ ಸುಳ್ಳುಗಳು, ವಿಷ ಮತ್ತು ದ್ವೇಷದಿಂದ ತುಂಬಿತ್ತು, ಆದರೆ ತಮ್ಮ ಪಕ್ಷವು ಸತ್ಯ, ಪ್ರೇಮ ಮತ್ತು ಅನುರಾಗದ ಪರ ನಿಂತಿದೆ ಎಂದು ಪ್ರಧಾನಿ ಹೇಳಿದರು.
2019: ಕೋಲ್ಕತ: ಹಿಂದಿನ ದಿನದ ಘರ್ಷಣೆಯಲ್ಲಿ ಸಾವನ್ನಪ್ಪಿದ ತನ್ನ ಮೂವರು ಕಾರ್ಯಕರ್ತರ ಶವಗಳಿಗೆ ಬಸಂತಿ ಹೆದ್ದಾರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಬಿಜೆಪಿ ಸಿದ್ಧತೆ ನಡೆಸುವುದರೊಂದಿಗೆ
ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರ ನಾಟಕೀಯ ತಿರುವು ಪಡೆಯಿತು. ಪೊಲೀಸರ ಜೊತೆಗೆ ನಡೆದ ಜಟಾಪಟಿಯ ಬಳಿಕ ನೂರಾರು ಸಂಖ್ಯೆಯಲ್ಲಿ ಸೇರಿರುವ ಬಿಜೆಪಿ ಕಾರ್ಯಕರ್ತರು ಹೆದ್ದಾರಿಯಲ್ಲೇ ಚಿತೆ ನಿರ್ಮಾಣವನ್ನು ಆರಂಭಿಸಿದ್ದಾರೆ ಎಂದು ವರದಿಗಳು ಹೇಳಿದವು. ಈ ಮಧ್ಯೆ ಬಿಜೆಪಿಯು ಜೂನ್ ೧೦ರಂದು ರಾಜ್ಯವ್ಯಾಪಿ ’ಕರಾಳ ದಿನಾಚರಣೆ’ ಸೇರಿದಂತೆ ಸರಣಿ ಪ್ರತಿಭಟನೆಗಳಿಗೂ
ಕರೆ ಕೊಟ್ಟಿದ್ದು ರಾಜ್ಯದ ರಾಜಕೀಯ ಸಂಘರ್ಷ ತಾರಕಕ್ಕೆ ಏರಿತು. ಬಿಜೆಪಿಯು ಹಿಂದಿನ ದಿನದ ಘರ್ಷಣೆಯಲ್ಲಿ ಸಾವನ್ನಪ್ಪಿದ ತನ್ನ ಕಾರ್ಯಕರ್ತರ ಪಾರ್ಥಿವ ಶರೀರಗಳನ್ನು ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಕೋಲ್ಕತಕ್ಕೆ ಒಯ್ಯಲು ಬಯಸಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಪೊಲೀಸರು ಅದಕ್ಕೆ ಅಡ್ಡಿ ಪಡಿಸಿದರು. ಪರಿಣಾಮವಾಗಿ ಬಿಜೆಪಿ ಕಾರ್ಯಕರ್ತರು ಮೃತರ ಅಂತ್ಯಕ್ರಿಯೆಯನ್ನು
ತಾವು ಹೆದ್ದಾರಿಯಲ್ಲೇ ನಡೆಸುವುದಾಗಿ ಪ್ರಕಟಿಸಿದರು. ಬಳಿಕ ಸ್ಥಳೀಯವಾಗಿ ಹರತಾಳ ಮತ್ತು ಜೂನ್ ೧೦ರಂದು ರಾಜ್ಯವ್ಯಾಪಿ ಕರಾಳ ದಿನಾಚರಣೆ ಮತು ಜೂನ್ ೧೨ರಂದು ಪೊಲೀಸ್ ಕೇಂದ್ರ ಕಚೇರಿಯಾದ ಲಾಲ್ ಬಜಾರ್ಗೆ ಬೃಹತ್ ಸಭೆ ನಡೆಸುವುದಾಗಿ ಪಕ್ಷವು ಪ್ರಕಟಿಸಿತು. ಕೋಲ್ಕತದಿಂದ ೭೦ ಕಿಮೀ ದೂರದ ನಯಾಜತ್ನಲ್ಲಿ ಸಂಭವಿಸಿದ ಘರ್ಷಣೆಗಳಲ್ಲಿ ತಮ್ಮ ಪಕ್ಷದ ಮೂವರು ಕಾರ್ಯಕರ್ತರು ಸಾವನ್ನಪ್ಪಿರುವುದಾಗಿ ಬಿಜೆಪಿ ಪ್ರತಿಪಾದಿಸಿತು. ಸಾರ್ವಜನಿಕ ಸ್ಥಳಗಳಿಂದ ಪಕ್ಷ ಧ್ವಜಗಳನ್ನು ಕಿತ್ತು ಹಾಕುವ ವಿಚಾರವಾಗಿ ಘರ್ಷಣೆ ಉಂಟಾಇ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ಘರ್ಷಣೆಯ ಮಧ್ಯೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ
ಗುಂಡೇಟು ಬಿದ್ದಿದ್ದು ಬಳಿಕ ಆತನನ್ನು ಕೊಲ್ಲಲಾಯಿತು ಎಂದು ಆಪಾದಿಸಲಾಗಿದೆ. ಘರ್ಷಣೆಯಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಅಸುನೀಗಿದರು. ಅವರ ಪೈಕಿ ಒಬ್ಬನ ಕಣ್ಣಿಗೆ ಗುಂಡು ಹೊಡೆಯಲಾಯಿತು ಎಂದು ಮೂಲಗಳು ತಿಳಿಸಿದವು. ತಮ್ಮ
ಮಾಜಿ ’ಬಾಸ್’ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಟಿಎಂಸಿಯಿಂದ ಇತ್ತೀಚೆಗೆ ಬಿಜೆಪಿ ಸೇರಿದ್ದ ನಾಯಕ ಮುಕುಲ್ ರಾಯ್ ಆಪಾದಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿಯು ನೀಡಿದ ದೂರನ್ನು ಅನುಸರಿಸಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಮುಂದುವರೆಯುತ್ತಿರುವ ಹಿಂಸಾಚಾರಕ್ಕೆ ತೀವ್ರ ಕಳವಳ ವ್ಯಕ್ತ ಪಡಿಸಿದೆ. ರಾಜ್ಯದಲ್ಲಿ ಸರ್ಕಾರವು ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ವಿಫಲವಾಗಿದೆ ಎಂದೂ ಕೇಂದ್ರವು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹೇಳಿದೆ. ಕಳೆದ ಹಲವು ವಾರಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ನಿರಂತರ ಹಿಂಸಾಚಾರವು ರಾಜ್ಯದ ಕಾನೂನು ಸುವ್ಯವಸ್ಥೆ ಯಂತ್ರವು ಕಾನೂನಿನ ಆಳ್ವಿಕೆಯಲ್ಲಿ ಮತ್ತು ಜನರಲ್ಲಿ ವಿಶ್ವಾಸ ತುಂಬಲು ವಿಫಲವಾಗಿರುವುದನ್ನು
ತೋರಿಸಿದೆ ಎಂದು ಗೃಹ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಕಳುಹಿಸಿದ ಪತ್ರದಲ್ಲಿ ತಿಳಿಸಿತು. ಬಂಗಾಳ ವಿಧಾನಸಭೆಗೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಣ ಘರ್ಷಣೆಗೆ ಹೆಚ್ಚುತ್ತಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ರಾಜ್ಯದ ೪೨ ಸ್ಥಾನಗಳ ಪೈಕಿ ೧೮ ಸ್ಥಾನಗಳನ್ನು ಗೆದ್ದುಕೊಳ್ಳೂವ ಮೂಲಕ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ಕೇವಲ ೨ ಸ್ಥಾನ ಗೆದ್ದಿತ್ತು. ಮಮತಾ ಬ್ಯಾನರ್ಜಿ ಅವರ ಪಕ್ಷವು ೨೨ ಸ್ಥಾನಗಳನ್ನು ಗೆದ್ದುಕೊಂಡು ಬಿಜೆಪಿಯಿಂದ ಅತ್ಯಂತ ಅಲ್ಪ ಅಂತರದಲ್ಲಿ ಮುಂದಿದೆ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ೨ ವರ್ಷಗಳಿವೆ. ಕಳೆದ ೧೦ ದಿನಗಳಲ್ಲಿ ರಾಜ್ಯದಲ್ಲಿ ಕನಿಷ್ಠ ಮೂರು ಘರ್ಷಣೆಗಳು ಸಂಭವಿಸಿದ ವರದಿಗಳು ಬಂದಿವೆ. ಈ ಘರ್ಷಣೆಗಳಲ್ಲಿ ಮೂವರು ಸಾವನ್ನಪ್ಪಿದ್ದು,
ಇಬ್ಬರು ಟಿಎಂಸಿ ಕಾರ್ಯಕರ್ತರಾಗಿದ್ದರೆ, ಒಬ್ಬರು ಬಿಜೆಪಿ ಕಾರ್ಯಕರ್ತ ಎಂದು ಸುದ್ದಿ ಮೂಲಗಳು ಹೇಳಿದವು.
2019: ಪಾಟ್ನಾ: ಜಾರ್ಖಂಡ್, ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಏಕಾಂಗಿ ಹೋರಾಟ ನಡೆಸಲು ಜನತಾದಳ (ಸಂಯುಕ್ತ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಲ್ಲಿ ನಿರ್ಧರಿಸಿತು. ಆದರೆ ಬಿಹಾರದಲ್ಲಿ ಅದು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಅಂಗಪಕ್ಷವಾಗಿ ಬಿಜೆಪಿ ಮತ್ತು ಎಲ್ಜೆಪಿ ಜೊತೆಗಿನ ಮೈತ್ರಿಯನ್ನು ಮುಂದುವರೆಸಲಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಮ್ಮುಖದಲ್ಲಿ ಸುಮಾರು ೪ ಗಂಟೆಗಳ ಬಿರುಸಿನ ಚರ್ಚೆಯ ಬಳಿಕ ಕಾರ್ಯಕಾರಿಣಿ ಸಭೆಯು ಈ ನಿರ್ಧಾರಕ್ಕೆ ಬಂದಿತು. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯು ಜಾರ್ಖಂಡ್ ಮತ್ತು ಹರಿಯಾಣದಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳಲು ಮತ್ತು ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರ ಕೈವಶ ಪಡಿಸಿಕೊಳ್ಳಲು ಹೋರಾಟ ನಡೆಸಲಿದೆ. ಈ ಹೋರಾಟದಲ್ಲಿ ಬಿಜೆಪಿ ಜೊತೆಗೆ ಹೋಗುವುದು ಬೇಡ ಎಂಬ ತೀರ್ಮಾನವನ್ನು ಜೆಡಿ(ಯು) ಮಾಡಿತು. ನಾಲ್ಕೂ ರಾಜ್ಯಗಳಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ೬೦ ಸ್ಥಾನಗಳ ಪೈಕಿ ೭ ಸ್ಥಾನಗಳನ್ನು ಗೆದ್ದ ಬಳಿಕ ಬಿಹಾರದಿಂದ ಹೊರಗಿನ ರಾಜ್ಯಗಳಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸಬೇಕು ಎಂಬ ಚಿಂತನೆಗೆ ಜೆಡಿ(ಯು)ನಲ್ಲಿ ಬಲ ಬಂದಿದೆ. ಅರುಣಾಚಲ ಪ್ರದೇಶದಲ್ಲಿ ಜೆಡಿ(ಯು) ರಾಜ್ಯ ಪಕ್ಷ ಎಂಬುದಾಗಿ ಮಾನ್ಯತೆ ಪಡೆದಿದೆ. ಜಾರ್ಖಂಡ್ನಲ್ಲಿ ೨೦೧೪ರವರೆಗೆ ಜೆಡಿ(ಯು) ಇಬ್ಬರು ಶಾಸಕರನ್ನು ಹೊಂದಿತ್ತು. ಇತರ ಹಲವು ರಾಜ್ಯಗಳಲ್ಲಿ ಅದು ಬಿಜೆಪಿ ಜೊತೆಗೆ ಮೈತ್ರಿ ಇಲ್ಲದೆಯೇ ಸ್ಪರ್ಧಿಸಿತ್ತು, ಆದರೆ ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿತ್ತು. ಬಿಹಾರ ಎನ್ಡಿಎಯಲ್ಲಿ ಎಲ್ಲವೂ ಚೆನ್ನಾಗಿದೆ ಎಂಬುದಾಗಿ ನಿತೀಶ್ ಕುಮಾರ್ ಹೇಳುತ್ತಿದ್ದರೂ, ಇತರ ರಾಜ್ಯಗಳಲ್ಲಿ ಪಕ್ಷವು ಏಕಾಂಗಿಯಾಗಿ ಬಲವರ್ಧನೆಗೆ ನಿರ್ಧಾರ ಮಾಡಿರುವುದು ಉಭಯ ಪಕ್ಷಗಳ ನಡುವಣ ಭಿನ್ನಮತದ ಸೂಚನೆ ಎಂದು ಪಕ್ಷದ ಒಂದು ವರ್ಗವು ಭಾವಿಸಿದೆ. ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಲು ಜೆಡಿಯು ನಿರಾಕರಿಸಿದ ಘಟನೆ ಮತ್ತು ಇತ್ತೀಚಿನ ನಿತೀಶ್ ಕುಮಾರ್ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯ ಪ್ರತಿನಿಧಿಗೆ ಜಾಗ ಒದಗಿಸಲು ಅದು ನಿರಾಕರಿಸಿದ್ದು ಎನ್ ಡಿಎ ಅಂಗ ಪಕ್ಷಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನದ ದ್ಯೋತಕ ಎಂದು ಭಾವಿಸಲಾಗಿತ್ತು.
2018: ನವದೆಹಲಿ: ಜಾಗತಿಕ ಮಟ್ಟದಲ್ಲಿ
ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಈ ವರೆಗೆ ಒಂದೆರಡು ಬಾರಿಯಲ್ಲ, ಬರೋಬ್ಬರಿ
ಐದು ಬಾರಿ ಸ್ಕೆಚ್ ಹಾಕಿದ್ದ ವಿಷಯ ಇದೀಗ ಬಹಿರಂಗಕ್ಕೆ ಬಂದಿತು. ೨೦೧೩ರಿಂದ ಈ ವರೆಗೆ ದೇಶದ ವಿವಿಧ
ಭಾಗಗಳಲ್ಲಿ ನಡೆದ ಮೆರವಣಿಗೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ
ಹತ್ಯೆಗೈಯ್ಯುವ ಸಂಚು ಹೆಣೆಯಲಾಗಿತ್ತು. ಆದರೆ ೫ ಬಾರಿಯೂ ಹತ್ಯೆಯ ತಂತ್ರ ವಿಫಲವಾಗಿರುವುದಾಗಿ ಪೊಲೀಸರು
ತಿಳಿಸಿದರು. ಯಾವ ಯಾವ ಸಂದರ್ಭಗಳಲ್ಲಿ ಪ್ರಧಾನಿ ಮೋದಿ
ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಇಲ್ಲಿದೆ: ೨೦೧೩ರ ಅಕ್ಟೋಬರ್: ೨೦೧೩ರ ಅಕ್ಟೋಬರ್ ೨೭ರಂದು ಪಾಟ್ನಾದಲ್ಲಿ ನರೇಂದ್ರ ಮೋದಿ ಅವರ ರ್‍ಯಾಲಿ ವೇಳೆ ಸರಣಿ ಬಾಂಬ್ ಸ್ಪೋಟ
ಸಂಭವಿಸಿತ್ತು. ಗಾಂಧಿ ಮೈದಾನದ ಸುತ್ತಮುತ್ತಣ ಪ್ರದೇಶದಲ್ಲಿ ಒಟ್ಟು ೯ ಬಾಂಬುಗಳನ್ನು ಪತ್ತೆ ಹಚ್ಚಲಾಗಿತ್ತು.
ಬಾಂಬ್ ಸ್ಫೋಟದಲ್ಲಿ ೬ ಮಂದಿ ಸಾವನ್ನಪ್ಪಿ, ಇತರ ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ
೧೦ ಮಂದಿಯನ್ನು ಪೊಲೀಸರು ಬಂಧಿಸಿದ್ದರು. ೨೦೧೫ ಮೇ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ
ವರ್ಷಾಚರಣೆ ವೇಳೆ, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಗ್ರಾಮದಲ್ಲಿ ರ್‍ಯಾಲಿ ಹಾಗೂ ಸಾರ್ವಜನಿಕ
ಸಭೆ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಮೋದಿ ಅವರನ್ನು ಬಾಂಬ್ ಮೂಲಕ ಸ್ಫೋಟಿಸುವ ಬಗ್ಗೆ ವಾಟ್ಸ್‌ಆಪ್
ಸಂದೇಶ ರವಾನೆಯಾಗಿತ್ತು. ಈ ಸಂಬಂಧ ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದರು. ೨೦೧೭ ಫೆಬ್ರವರಿ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಕಾಲದಲ್ಲಿ ಹರೇನ್
ಪಾಂಡ್ಯ ಹತ್ಯೆ ಪ್ರಕರಣದ ಆರೋಪಿ ಪ್ರಧಾನಿ ಮೋದಿ ಅವರ ವಾಹನವನ್ನು ರಾಕೆಟ್ ಲಾಂಚರ್ ಮೂಲಕ ಉಡಾಯಿಸಲು
ಯೋಜನೆ ರೂಪಿಸಿದ್ದು ಬೆಳಕಿಗೆ ಬಂದಿತ್ತು. ಮಾವೊ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿಗೆ ಆಗಮಿಸುವ ವೇಳೆ
ಪ್ರಧಾನಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಎಎಸ್ಪಿ ಆರ್ಕೆ ಸಿಂಗ್ ಮಾಹಿತಿ ನೀಡಿದ್ದರು. ಬೆದರಿಕೆ
ಹಿನ್ನೆಲೆಯಲ್ಲಿ ಮೋದಿ ಅವರಿಗೆ ಹೆಚ್ಚಿನ ಭದ್ರತೆಯ ಏರ್ಪಾಡು ಮಾಡಲಾಗಿತ್ತು. ೨೦೧೭ ಜೂನ್: ಕೇರಳದ ಕೋಚಿಯಲ್ಲಿನ ಮೆಟ್ರೋ ರೈಲು ಉದ್ಘಾಟನೆಗೆ ಆಗಮಿಸಿದ್ದ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ ದಿನ ಭಯೋತ್ಪಾದಕರಿಂದ ಜೀವ ಬೆದರಿಕೆ ಇತ್ತು ಎಂದು ಕೇರಳ ಡಿಜಿಪಿ
ಟಿಪಿ ಸೆನ್ಕುಮಾರ್ ತಿಳಿಸಿದರು. ಆದರೆ ಈ ಕುರಿತು
ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು. ೨೦೧೮ ಜೂನ್:
ಮಾವೋ
ವಾದಿ ನಕ್ಸಲೀಯರು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪುಣೆ ಪೊಲೀಸರು
ಬಹಿರಂಗ ಪಡಿಸಿದರು. ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ
ಹತ್ಯೆಗೈಯುವಂತೆ ಮಾವೋವಾದಿಗಳಿಗೆ ಬರೆದ ಪತ್ರ ರೋನ್ ವಿಲ್ಸನ್ ಎಂಬವರ ದೆಹಲಿಯ ಮನೆಯಲ್ಲಿ ಸಿಕ್ಕಿತ್ತು. ಮೋದಿ ಅವರ ರೋಡ್ ಶೋ ಹಾಗೂ ಬಹಿರಂಗ ಕಾರ್ಯಕ್ರಮಗಳನ್ನು ಗುರಿಯಾಗಿಟ್ಟು,
ರಾಜೀವ್ ಗಾಂಧಿ ಅವರನ್ನು ಹತ್ಯೆ ಗೈದ ಮಾದರಿಯಲ್ಲೇ ಕೊಲ್ಲುವ ಬಗ್ಗೆ ಪತ್ರದಲ್ಲಿ ತಿಳಿಸಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ರೋನ ವಿಲ್ಸನ್
ಸೇರಿದಂತೆ ಐವರನ್ನು ಪೊಲೀಸರು ಈ ಪ್ರಕರಣದಲ್ಲಿ ಬಂಧಿಸಿದರು.
2018: ಲಕ್ನೋ: ಹತ್ತನೇ ತರಗತಿಯ ರಾಂಕ್
ವಿಜೇತ ವಿದ್ಯಾರ್ಥಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ ಒಂದು ಲಕ್ಷ
ರೂಪಾಯಿಗಳ ಚೆಕ್ ಬ್ಯಾಂಕಿನಲ್ಲಿ ಅಮಾನ್ಯಗೊಂಡ (ಬೌನ್ಸ್) ಆದ ಘಟನೆ ಘಟಿಸಿತು. ಚೆಕ್ ಆಮಾನ್ಯ ಗೊಂಡದ್ದಷ್ಟೇ
ಅಲ್ಲ, ಚೆಕ್ ಅಮಾನ್ಯ ಗೊಂಡದ್ದಕ್ಕಾಗಿ ವಿದ್ಯಾರ್ಥಿಗೆ ದಂಡವನ್ನೂ ವಿಧಿಸಲಾಗಿದೆ ಎಂದು ವರದಿ ತಿಳಿಸಿತು.
ಬಾರಾಬಂಕಿ ಜಿಲ್ಲೆಯ ಯಂಗ್ ಸ್ಟ್ರೀಮ್ ಇಂಟರ್ ಕಾಲೇಜಿನ ಹೈಸ್ಕೂಲ್ ವಿದ್ಯಾರ್ಥಿ ಅಲೋಕ್ ಮಿಶ್ರ ಉತ್ತರ
ಪ್ರದೇಶ ಹೈಸ್ಕೂಲ್ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಶೇಕಡಾ ೯೩.೫ ರಷ್ಟು ಅಂಕ ಪಡೆದು ರಾಜ್ಯಕ್ಕೆ ೭ನೇ
ರ್‍ಯಾಂಕ್ ಗಳಿಸಿದ್ದ. ಬಳಿಕ ಅಲೋಕನನ್ನು ಲಕ್ನೋದಲ್ಲಿ ಮೇ ೨೯ರಂದು ನಡೆದ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು.
ಅಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲೋಕನಿಗೆ ಕಠಿಣ ಶ್ರಮ ಮತ್ತು ಸಾಧನೆಗಾಗಿ ೧ ಲಕ್ಷ
ರೂಪಾಯಿಗಳ ಚೆಕ್ ನೀಡಿದರು. ಅರ್ಹ (ಮೆರಿಟ್) ವಿದ್ಯಾರ್ಥಿಗಳಿಗೆ
ನೀಡಲಾಗುವ ಈ ಚೆಕ್ ಮೇಲೆ ಬಾರಾಬಂಕಿಯ ಜಿಲ್ಲಾ ಇನ್‌ಸ್ಪೆಕ್ಟರ್ ಆಫ್ ಸ್ಕೂಲ್ಸ್ ರಾಜ್ ಕುಮಾರ್ ಯಾದವ್
ಸಹಿ ಇತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿಪಾರ್ಟ್‌ಮೆಂಟಲ್ ಖಾತೆಯ ಚೆಕ್ ಅದಾಗಿತ್ತು. ಅಲೋಕ್ ಮಿಶ್ರನಿಗೆ ನೀಡಲಾದ ೯೭೪೯೨೬ ನಂಬರಿನ ಚೆಕ್ಕನ್ನು
ಆತನ ಪಾಲಕರು ೨೦೧೮ರ ಜೂನ್ ೫ರಂದು ಲಕ್ನೋದ ಹಜರತ್ ಗಂಜ್ ಪ್ರದೇಶದ ದೇನಾ ಬ್ಯಾಂಕಿನಲ್ಲಿನ ಆತನ ಖಾತೆಗೆ
ಹಾಕಿದರು. ಆದರೆ, ಅಲೋಕ್ ಖಾತೆಗೆ ಹಣ ಜಮಾ ಆಗದೇ ಹೋದಾಗ
ಅಲೋಕ್ ಬ್ಯಾಂಕನ್ನು ಸಂಪರ್ಕಿಸಿದರು. ಆಗ ಅವರಿಗೆ ಚೆಕ್ ಅಮಾನ್ಯಗೊಂಡಿದೆ ಎಂಬ ಮಾಹಿತಿ ಲಭಿಸಿತು.
‘ಮುಖ್ಯಮಂತ್ರಿ ಅವರಿಂದಲೇ ಚೆಕ್ ಪಡೆದಾಗ ನನಗೆ ಅತ್ಯಂತ
ಖುಷಿಯಾಗಿತ್ತು. ಎರಡು ದಿನಗಳ ಬಳಿಕ ನಾವು ಅದನ್ನು ಬ್ಯಾಂಕಿಗೆ ಹಾಕಿದೆವು. ಎರಡು ದಿನಗಳ ಬಳಿಕ ಚೆಕ್
ಅಮಾನ್ಯಗೊಂಡದ್ದು ಗೊತ್ತಾಯಿತು. ನನಗೆ ಸ್ವಲ್ಪಮಟ್ಟಿಗೆ ಭ್ರಮ ನಿರಸನವೂ ಆಯಿತು’ ಎಂದು ಅಲೋಕ್ ಹೇಳಿದರು. ಚೆಕ್ ಅಮಾನ್ಯಗೊಳ್ಳಲು
ಸಹಿಗಳು ತಾಳೆಯಾಗದೇ ಇದ್ದದ್ದು ಕಾರಣ ಎಂದು ಬ್ಯಾಂಕ್ ತಿಳಿಸಿದೆ. ’ಸಹಿ ತಾ:ಳೆಯಾಗದೇ ಇದ್ದುದು ಚೆಕ್
ಅಮಾನ್ಯಗೊಳ್ಳಲು ಕಾರಣ ಎಂದು ಬ್ಯಾಂಕ್ ತಿಳಿಸಿದೆ. ಬೇರೆ ಯಾರೇ ವಿದ್ಯಾರ್ಥಿಗಳಿಂದಲೂ ಇಂತಹ ದೂರು
ಬಂದಿಲ್ಲ. ಈಗ ಹೊಸ ಚೆಕ್ ನ್ನು ವಿದ್ಯಾರ್ಥಿಗೆ ನೀಡಲಾಗಿದೆ’ ಎಂದು ಡಿಐಒಎಸ್ ರಾಜ್
ಕುಮಾರ್ ಯಾದವ್ ನುಡಿದರು. ಇದು ಅತ್ಯಂತ ಗಂಭೀರ ವಿಚಾರ.
ಏನಾದರೂ ಲೋಪ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿಷಯ ಮುಖ್ಯಮಂತ್ರಿಯವರಿಗೆ ಸಂಬಂಧಿಸಿದ್ದು,
ಹೀಗಾಗಿ ಇದನ್ನು ಅತ್ಯಂತ ಗಂಭಿರವಾಗಿ ತೆಗೆದುಕೊಳ್ಳಬೇಕಾಗಿತ್ತು ಎಂದು ಬಾರಾಬಂಕಿಯ ಜಿಲ್ಲ್ಯಾ ಮ್ಯಾಜಿಸ್ಟ್ರೇಟ್
ಉದಯ್ ಭಾನು ತ್ರಿಪಾಠಿ ಹೇಳಿದರು.
2018: ನವದೆಹಲಿ/ ಮುಂಬೈ: ಭಾರತದ ವಾಣಿಜ್ಯ ರಾಜಧಾನಿ
ಮುಂಬೈಗೆ ಮುಂಗಾರು ಕಾಲಿಟ್ಟಿದ್ದು, ಈದಿನ ಮಹಾ ಮಳೆಗೆ
ತಗ್ಗು ಪ್ರದೇಶಗಳು ಜಲಾವೃತಗೊಳ್ಳುವುದರ ಜೊತೆಗೆ ರಸ್ತೆಗಳಲ್ಲಿ ನೀರಿನ ಪ್ರವಾಹ ಹರಿದು ಸಂಚಾರ ವ್ಯವಸ್ಥೆ
ಅಸ್ತವ್ಯಸ್ತಗೊಂಡಿತು. ವಿಮಾನ ಹಾರಾಟಗಳೂ ವಿಳಂಬಗೊಂಡವು.
ಮುಂಬೈ ನಗರದಲ್ಲಿ ೧೨ ಗಂಟೆಗಳಲ್ಲಿ ೭೫-೯೫ ಸೆಂ.ಮೀ. ಮಳೆ ಸುರಿದಿದೆ. ಮಳೆ ಸುರಿಯಲು ಆರಂಭವಾದ
ಕೇವಲ ೩೦ ನಿಮಿಷಗಳ ಒಳಗಾಗಿ ಮಾಹಿಮ್, ಹಿಂದ್ಮಟ, ಮತ್ತು ಮರೈನ್ ಡ್ರೈವ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ
ರಸ್ತೆಗಳ ಮೇಲೆ ನೀರಿನ ಪ್ರವಾಹ ಹರಿಯಿತು. ಅತ್ಯಂತ ಹೆಚ್ಚು ತೊಂದರೆಗೆ ಒಳಗಾಗಿ ಹಿಂದ್ಮಟ ಸೇರಿದಂತೆ
ಪ್ರವಾಹದಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿ ಆರ್
ಎಫ್) ತಂಡಗಳನ್ನು ನಿಯೋಜಿಸಲಾಯಿತು. ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಎರಡು ವಿಮಾನಗಳ ಸಂಚಾರವನ್ನು
ರದ್ದು ಪಡಿಸಲಾಗಿದ್ದು ಇತರ ಹಲವಾರು ವಿಮಾನಗಳ ಹಾರಾಟ ವಿಳಂಬಗೊಂಡವು ಎಂದು ವರದಿಗಳು ಹೇಳಿವೆ. ರೈಲು
ಸಂಚಾರ ರದ್ದುಪಡಿಸಲಾಗಿಲ್ಲ. ಆದರೆ ೧೦-೧೨ ನಿಮಿಷ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಪ್ರಯಾಣಿಕರಿಗೆ
ತಿಳಿಸಲಾಯಿತು. ಮುಂಬೈಗೆ ಕಾಲಿಡುತ್ತಿರುವ ಮುಂಗಾರು
ತೀವ್ರ ಸ್ವರೂಪದಲ್ಲಿದ್ದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)
ಶನಿವಾರ ಇದಕ್ಕೆ ಮುನ್ನ ಎಚ್ಚರಿಕೆ ನೀಡಿತ್ತು. ಮುಂಗಾರು ಮಳೆ ಮುಂಬೈ, ಥಾಣೆ ಮತ್ತು ಮಹಾರಾಷ್ಟ್ರದ
ಇತರ ಹಲವಾರು ಭಾಗಗಳಿಗೆ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದರು.
2018: ನವದೆಹಲಿ: ಭಾರತದಲ್ಲಿ ನಡೆದ ವಿಶ್ವ
ಪರಿಸರ ದಿನಾಚರಣೆ ’ಐತಿಹಾಸಿಕ’ ಎಂದು ಇಲ್ಲಿ ಬಣ್ಣಿಸಿದ
ವಿಶ್ವಸಂಸ್ಥೆ ಪರಿಸರ ಮುಖ್ಯಸ್ಥ ಎರಿಕ್ ಸೊಲ್ಹೀಮ್, ’೨೦೨೨ರ ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್ ನ್ನು
ನಿರ್ಮೂಲನೆ ಮಾಡುವುದಾಗಿ ಘೋಷಿಸುವ ಮೂಲಕ ಭಾರತವು ಜಾಗತಿಕ ನಾಯಕತ್ವವನ್ನು ಅಂಗೀಕರಿಸಿದೆ’ ಎಂದು ಹೇಳಿದರು. ಜೂನ್ ೫ರಂದು ನವದೆಹಲಿಯಲ್ಲಿ
ವಿಶ್ವ ಪರಿಸರ ದಿನಾಚರಣೆ -೨೦೧೮ರ ಅಂಗವಾಗಿ ಸಂಘಟಿಸಲಾಗಿದ್ದ ಸಮಾರಂಭದಲ್ಲಿ ಕೇಂದ್ರ ಪರಿಸರ ಸಚಿವ
ಹರ್ಷ ವರ್ಧನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿಯೇ ೨೦೨೨ರ ವೇಳೆಗೆ ಭಾರತದಿಂದ ಏಕ
ಬಳಕೆಯ ಪ್ಲಾಸ್ಟಿಕ್ ನ್ನು ತೊಲಗಿಸುವ ಪ್ರತಿಜ್ಞೆ ತೊಟ್ಟಿದ್ದರು. ‘ವಿಶ್ವ ಪರಿಸರ ದಿನಾಚರಣೆ ನಿಜವಾಗಿಯೂ ಚಾರಿತ್ರಿಕವಾಗಿತ್ತು.
ಜಾಗತಿಕ ಅತಿಥೇಯನಾಗಿ ಭಾರತವು ಕರಾವಳಿ ಮತ್ತು ನದಿ ಸ್ವಚ್ಚತೆ ಮತ್ತು ಯುವ ಜನರಲ್ಲಿ ಈ ನಿಟ್ಟಿನಲ್ಲಿ
ಜಾಗೃತಿ ಮೂಡಿಸುವ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸುವ ಹೊಣೆಗಾರಿಕೆಯನ್ನು ಭಾರತವು ವಹಿಸಿಕೊಂಡಿತು
ಎಂದು ಸೊಲ್ಹೀಮ್ ನುಡಿದರು. ‘೨೦೨೨ರ ವೇಳೆಗೆ ರಾಷ್ಟ್ರದಿಂದ
ಏಕ ಬಳಕೆಯ ಪ್ಲಾಸ್ಟಿಕ್‌ನ್ನು ತೊಲಗಿಸಲಾಗುವುದು ಎಂಬುದಾಗಿ ಘೋಷಿಸುವ ಮೂಲಕ ಭಾರತವು ಜಾಗತಿಕ ನಾಯಕತ್ವವನ್ನು
ಅಂಗೀಕರಿಸಿತು. ಈಗ ಇದನ್ನು ಅನುಸರಿಸುವ ಕೆಲಸವನ್ನು ಇತರ ರಾಷ್ಟ್ರಗಳು ಮಾಡಬೇಕು’ ಎಂದು ಪರಿಸರ ಮುಖ್ಯಸ್ಥ ಹೇಳಿದರು. ವಿಶ್ವಸಂಸ್ಥೆ ಪರಿಸರದ ಸಮುದ್ರ ಸ್ವಚ್ಚತಾ ಅಭಿಯಾನಕ್ಕೆ
ಪ್ರಧಾನಿ ನರೇಂದ್ರ ಮೋದಿ ಅವರು ಸಹಿ ಹಾಕುವಾಗ ಹಾಜರಿರುವ ಗೌರವ ತಮ್ಮದಾಗಿತ್ತು ಎಂದು ನೆನಪಿಸಿದ ಎರಿಕ್
ಸೊಲ್ಹೀಮ್, ’ಭಾರತದ ಬೆಂಬಲದೊಂದಿಗೆ ಈ ಕಾರ್‍ಯಕ್ರಮವು ಬಲಾಢ್ಯಗೊಳ್ಳುವುದು ಮತ್ತು ಇತರ ರಾಷ್ಟ್ರಗಳಿಗೆ
ಸ್ಪಷ್ಟ ಸಂದೇಶವನ್ನು ರವಾನಿಸುವುದು’ ಎಂದು ಹೇಳಿದರು. ‘ಕಾರ್ಯಕ್ರಮದ ಅನುಷ್ಠಾನ ಒಂದು ಸವಾಲು ಎಂಬುದು ನನಗೆ ಗೊತ್ತಿದೆ,
ಭಾರತವು ಇದರಲ್ಲಿ ಯಶಸ್ವಿಯಾಗುವುದು ಮತ್ತು ವಿಶ್ವದ ಮೇಲೆ ಮಹತ್ವದ ಪರಿಣಾಮ ಬೀರುವುದು ಎಂಬ ಬಗ್ಗೆ
ನನಗೆ ಎಳ್ಳಷ್ಟೂ ಸಂಶಯವಿಲ್ಲ’ ಎಂದು ಅವರು ನುಡಿದರು. ಇದಕ್ಕೆ ಮುನ್ನ ಸೊಲ್ಹೀಮ್ ಅವರು ’ವಿಶ್ವ ಪರಿಸರ ದಿನಾಚರಣೆಯು
ಜಾಗತಿಕ ನಾಯಕತ್ವ ವಹಿಸಿಕೊಳ್ಳಲು ಕರೆಯಾಗಿದೆ’ ಎಂದು ಹೇಳಿ, ’ಇದಕ್ಕೆ ಭಾರತ ಅತ್ಯಂತ ಸೂಕ್ತ
ಸ್ಥಳ’ ಎಂದಿದ್ದರು. ರಾಷ್ಟ್ರದ ರಾಜಧಾನಿ ಮತ್ತು ಭಾರತಾದ್ಯಂತ ಈ ಮಾಸಾರಂಭದಲ್ಲಿ
ವಿಶ್ವ ಪರಿಸರ ದಿನ ಆಚರಣೆ ಕಾರ್‍ಯಕ್ರಮಗಳು ಆರಂಭವಾಗಿದ್ದವು. ರಾಜ್ಯ ಸರ್ಕಾರಗಳಿಂದ ಸ್ವಚ್ಛತಾ ಅಭಿಯಾನಗಳು,
೧೯ ರಾಜ್ಯಗಳಲ್ಲಿ ೨೪ ಸಮುದ್ರ ತೀರಗಳು, ೨೪ ನದಿಗಳನ್ನು ಸ್ವಚ್ಛಗೊಳಿಸುವುದು ಪಾನ್- ಇಂಡಿಯಾ ಕಾರ್ಯಕ್ರಮಗಳಲ್ಲಿ
ಸೇರಿದ್ದವು. ಮಾನವ ಅಭಿವೃದ್ಧಿ ಕುರಿತ ಸ್ಟಾಕ್ ಹೋಮ್
ಸಮ್ಮೇಳನ ಆರಂಭದ ಸ್ಮರಣೆಗಾಗಿ ಜೂನ್ ೫ರಂದು ವಿಶ್ವ ಪರಿಸರ ದಿನ ಆಚರಿಸಲು ವಿಶ್ವ ಸಂಸ್ಥೆ ಸಾಮಾನ್ಯ
ಸಭೆಯು ಕರೆ ನೀಡಿದೆ. ವಿಶ್ವ ಪರಿಸರ ದಿನದ ವಾರ್ಷಿಕ ಆಚರಣೆಗಳು ೧೯೭೪ರಲ್ಲಿ ಆರಂಭವಾಗಿದ್ದವು. ೨೦೧೮ರ ವಿಶ್ವ ಪರಿಸರ ದಿನಾಚರಣೆಗೆ ’ಪ್ಲಾಸ್ಟಿಕ್ ಮಾಲಿನ್ಯವನ್ನು
ಸೋಲಿಸಿ’ ಎಂಬುದು ನಿರೂಪಣಾ ವಿಷಯ (ಥೀಮ್) ಆಗಿತ್ತು.
2018: ನವದೆಹಲಿ: ದೆಹಲಿ ಪೊಲೀಸ್ ವಿಶೇಷ
ಘಟಕವು ನಡೆಸಿದ ಎನ್‌ಕೌಂಟರ್‌ನಲ್ಲಿ ಗ್ಯಾಂಗ್ ಸ್ಟರ್ ರಾಜೇಶ ಭಾರ್ತಿ ಸೇರಿದಂತೆ ನಾಲ್ಕು ಮಂದಿ ಕ್ರಿಮಿನಲ್
ಗಳು ಸಾವನ್ನಪ್ಪಿದರು. ಘಟನೆಯಲ್ಲಿ ಕೆಲವು ಪೊಲೀಸರೂ ಗಾಯಗೊಂಡರು. ರಾಜೇಶ ಭಾರ್ತಿ ತಂಡದ ಜೊತೆಗೆ ದೆಹಲಿಯ
ದಕ್ಷಿಣಭಾಗದ ಫತೇಪುರ ಬೆರಿಯ ಗ್ರಾಮ ಒಂದರ ಬಳಿ ಪೊಲೀಸರು ಘರ್ಷಿಸಿದ್ದು, ಪೊಲೀಸ್ ದಾಳಿಯಲ್ಲಿ ತೀವ್ರವಾಗಿ
ಗಾಯಗೊಂಡ ಕ್ರಿಮಿನಲ್ ಗಳ ತಂಡದ ನಾಯಕ ರಾಜೇಶ ಭಾರ್ತಿ ಮತ್ತು ಇತರ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆಗೂ ಮುನ್ನ ನಾಲ್ವರೂ ಸಾವನ್ನಪ್ಪಿದರು ಎಂದು ವರದಿ ತಿಳಿಸಿತು. ಕಾರಿನಲ್ಲಿ ತೆರೆಳುತ್ತಿದ್ದ ರಾಜೇಶ ಭಾರ್ತಿ ಗ್ಯಾಂಗ್ ಮೇಲೆ
ದೆಹಲಿ ದಕ್ಷಿಣ ಭಾಗದ ಫತೇಹ್‌ಪುರ್ ಬೆರಿಯ ಗ್ರಾಮವೊಂದರ ಸಮೀಪ ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆ.
ಪೊಲೀಸ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗ್ಯಾಂಗ್‌ನ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆಗೂ ಮುನ್ನವೇ ರಾಜೇಶ ಭಾರ್ತಿ ಸೇರಿ ನಾಲ್ಕು ಮಂದಿ ಮೃತಪಟ್ಟಿದ್ದಾಗಿ ಹಿಂದುಸ್ತಾನ್
ಟೈಮ್ಸ್ ವರದಿ ಮಾಡಿತು. ಘರ್ಷಣೆಯಲ್ಲಿ ನಾಲ್ವರು ಪೊಲೀಸರೂ ಗಾಯಗೊಂಡರು. ಆರೋಪಿಗಳ ಪೈಕಿ ತೀವ್ರವಾಗಿ ಗಾಯಗೊಂಡ ಐದನೇ ವ್ಯಕ್ತಿಗೆ ಆಸ್ಪತ್ರೆಯಲ್ಲಿ
ಚಿಕಿತ್ಸೆ ನೀಡಲಾಯಿತು. ಹಲವಾರು
ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಜೇಶ ಭಾರ್ತಿ, ಹರಿಯಾಣ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ.
ಈತನ ಬಂಧನಕ್ಕಾಗಿ ೧ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ರಾಜೇಶ ಭಾರ್ತಿ ತಂಡವನ್ನು ಸುತ್ತುವರೆದ ಪೊಲೀಸರು ಶರಣಗಾಗುವಂತೆ
ಸೂಚನೆ ನೀಡಿದರು. ಆದರೆ, ತಂಡದ ಸದಸ್ಯರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ೩೫ ಸುತ್ತುಗಳ
ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರೂ ಗುಂಡೇಟಿನಿಂದ ಗಾಯಗೊಂಡರು. ರಾಜೇಶ ಭಾರ್ತಿ ತಂಡ ಪ್ರಯಾಣಿಸುತ್ತಿದ್ದ
ಫೋರ್ಡ್ ಎಂಡೆವರ್ ಕಾರಿನಿಂದ ಪರವಾನಗಿ ಇರದ ಸೆಮಿ ಆಟೋಮ್ಯಾಟಿಕ್ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ
ಎಂದು ಪೊಲೀಸರು ಮಾಹಿತಿ ನೀಡಿದರು.
2018: ಕ್ವಿಂಗ್ಡಾವೋ
(ಚೀನಾ):
ಭಾರತದಿಂದ ಚೀನಾಕ್ಕೆ ಎಲ್ಲ ತಳಿಯ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಚೀನಾ ಒಪ್ಪಿಕೊಂಡಿದ್ದು, ಬ್ರಹ್ಮಾಪುತ್ರಾ
ನದಿಯ ನೀರಿನ ಹರಿವು ಕುರಿತ ಮಾಹಿತಿ ಹಂಚಿಕೊಳ್ಳಲು ಸಮ್ಮತಿ ನೀಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು
ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಶಾಂಘಾಯಿ ಸಹಕಾರ ಸಂಘಟನೆಯ (ಎಸ್ ಸಿಒ) ಶೃಂಗ ಸಭೆಯ ಕಾಲದಲ್ಲಿ ಪ್ರತ್ಯೇಕ ಮಾತುಕತೆ
ನಡೆಸಿದ ಬಳಿಕ ಉಭಯ ನಾಯಕರ ಸಮ್ಮುಖದಲ್ಲಿ ಈ ನಿಟ್ಟಿನ ಒಪ್ಪಂದಕ್ಕೆ ಈದಿನ ಸಹಿ ಹಾಕಲಾಯಿತು.
ಉಭಯದೇಶಗಳಲ್ಲೂ ಹರಿಯುವ ಬ್ರಹ್ಮಪುತ್ರಾ ನದಿಯ ಪ್ರವಾಹ ಕಾಲದ ನೀರಿನ ಹರಿವಿನ ಮಾಹಿತಿ ಹಂಚಿಕೊಳ್ಳುವ
ಸಂಬಂಧ ಭಾರತ ಜೊತೆಗಿನ ತನ್ನ ಒಪ್ಪಂದವನ್ನು ಚೀನಾ ನವೀಕರಿಸಿತು. ಈದಿನ (ಜೂನ್ ೯ರಂದು) ಸಹಿ ಹಾಕಲಾದ ತಿಳಿವಳಿಕೆ ಪತ್ರದ ಪ್ರಕಾರ
ಚೀನಾವು ಮೇ ೧೫ರಿಂದ ಅಕ್ಟೋಬರ್ ೧೫ರ ನಡುವಣ ಬ್ರಹ್ಮಪುತ್ರಾ ಪ್ರವಾಹ ಕಾಲದ ಜಲವಿಜ್ಞಾನ (ಹೈಡ್ರಾಲಾಜಿಕಲ್)
ಮಾಹಿತಿಯನ್ನು ಭಾರತಕ್ಕೆ ಒದಗಿಸಲಿದೆ. ಪ್ರವಾಹ ರಹಿತ ಕಾಲದಲ್ಲಿ ನೀರಿನ ಮಟ್ಟ ಪರಸ್ಪರ ಒಪ್ಪಿಕೊಂಡ
ಮಟ್ಟಕ್ಕಿಂತ ಹೆಚ್ಚಾದರೆ ಆಗ ಕೂಡಾ ಜಲ ವಿಜ್ಞಾನ ಮಾಹಿತಿಯನ್ನು ಒದಗಿಸಲೂ ಚೀನಾ ಒಪ್ಪಿತು. ಭಾರತದಿಂದ ಚೀನಾಕ್ಕೆ ಎಲ್ಲ ತಳಿಯ ಅಕ್ಕಿಯನ್ನೂ ರಫ್ತು ಮಾಡಲು
ಸಾಧ್ಯವಾಗುವಂತೆ ಕೃಷಿ ಮತ್ತು ಸುಂಕ ಸಂಬಂಧಿತ ಚೀನೀ ಆಡಳಿತ ಇಲಾಖೆಯ ಫೈಟೋಸ್ಯಾನಿಟರಿ ಅಗತ್ಯ ಕುರಿತ
ಶಿಷ್ಟಾಚಾರ ಸಂಹಿತೆಗೂ ಉಭಯ ರಾಷ್ಟ್ರಗಳು ಸಹಿ ಹಾಕಿದವು.
ತನ್ನ ಪ್ರತಿಕೂಲ ಪಾವತಿ ಬಾಕಿಯನ್ನು ಇಳಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಚೀನಾಕ್ಕೆ ಕೃಷಿ
ಉತ್ಪನ್ನಗಳ ರಫ್ತು ಮಾಡಲು ಅನುಮತಿ ನೀಡುವಂತೆ ಭಾರತವು ಚೀನಾವನ್ನು ಒತ್ತಾಯಿಸುತ್ತಲೇ ಬಂದಿತ್ತು.
ಜೂನ್ ೯ರ ಶಿಷ್ಟಾಚಾರ ಸಂಹಿತೆಯು ೨೦೦೬ರ ಹಿಂದಿನ ಒಪ್ಪಂದವನ್ನು ಪರಿಷ್ಕರಿಸುತ್ತದೆ. ಹೊಸ ಒಪ್ಪಂದದ
ಪ್ರಕಾರ ಭಾರತದಿಂದ ಚೀನಾಕ್ಕೆ ಬಾಸ್ಮತಿಯೇತರ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಲಾಗಿದೆ.
ಇದಕ್ಕೆ
ಮುನ್ನ ಪ್ರಧಾನಿ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಷಿ ಅವರು ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು
ಗಾಢಗೊಳಿಸುವ ನೀಲನಕ್ಷೆ ರೂಪಿಸುವ ಬಗ್ಗೆ ಮಾತುಕತೆ ನಡೆಸಿದರು ಮತ್ತು ವುಹಾನ್ ನಗರದಲ್ಲಿ ನಡೆದಿದ್ದ
ಅನೌಪಚಾರಿಕ ಶೃಂಗ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಜಾರಿಗೊಳಿಸುವ ಬಗ್ಗೆ ಪರಾಮರ್ಶೆ ನಡೆಸಿದರು. ವುಹಾನ್
ಶೃಂಗಸಭೆಯ ಸುಮಾರು ೬ ವಾರಗಳ ಬಳಿಕ ನಡೆದ ಎರಡನೇ ಸಭೆಯಲ್ಲಿ ಉಭಯ ನಾಯಕರೂ ದ್ವಿಪಕ್ಷೀಯ ಬಾಂಧವ್ಯಗಳಿಗೆ
ಸಂಬಂಧಿಸಿದ ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಿದರು. ಡೊಕ್ಲಾಮ್ ಬಿಕ್ಕಟ್ಟು ಮತ್ತು ಇತರ ಹಲವಾರು ಭಿನ್ನಮತದ
ವಿಷಯಗಳಿಂದಾಗಿ ಹದಗೆಟ್ಟಿದ್ದ ಬಾಂಧವ್ಯಗಳನ್ನು ಸರಿಪಡಿಸಿ ಮತ್ತೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ
ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಅವರು ಚರ್ಚಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಸಭೆಯನ್ನು ’ಹಿತಕರ’ ಮತ್ತು ’ಮುನ್ನೋಟ’ದ ಸಭೆ ಎಂಬುದಾಗಿ ಬಣ್ಣಿಸಿದರು. ಭಾರತದಲ್ಲಿನ ಚೀನೀ
ರಾಯಭಾರಿ ಲುವೊ ಝಾವೋಹುಯಿ ಅವರು ಉಭಯ ನಾಯಕರು ’ವುಹಾನ್ ಸರ್ವಾನುಮತದ’ ನಿರ್ಣಯ ಅನುಷ್ಠಾನ ಮತ್ತು ಭವಿಷ್ಯದ ಚೀನಾ-ಭಾರತ
ಬಾಂಧವ್ಯದ ನೀಲನಕ್ಷೆ ರೂಪಿಸುವತ್ತ ಬೆಳಕು ಚೆಲ್ಲಿದರು ಎಂದು ಹೇಳಿದರು. ಎರಡು ದಿನಗಳ ವಾರ್ಷಿಕ ಶಾಂಘಾಯಿ
ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೋದಿ ಅವರು ಈದಿನ ಮಧ್ಯಾಹ್ನ ಕ್ವಿಂಗ್ಡಾವೋಗೆ
ಆಗಮಿಸಿದರು.
2018: ನವದೆಹಲಿ: ರಾಷ್ಟ ರಾಜಧಾನಿ ದೆಹಲಿ
- ಎನ್ ಸಿ ಆರ್ ಪ್ರದೇಶವು ಸಂಜೆ ಧೂಳಿನ ಬಿರುಗಾಳಿ ಮತ್ತು ಜಡಿ ಮಳೆಗೆ ತತ್ತರಿಸಿತು. ಹಲವಾರು ಮರಗಳು
ಉರುಳಿ ಬಿದ್ದಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿತು ಎಂದು ವರದಿಗಳು ತಿಳಿಸಿದವು. ಪ್ರತಿಕೂಲ
ಹವಾಮಾನದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದ ಕನಿಷ್ಠ ೨೭ ವಿಮಾನಗಳನ್ನು ಈದಿನ ಸಂಜೆ ಮಾರ್ಗ ಬದಲಾಯಿಸಿ
ಬೇರೆಡೆಗೆ ಕಳುಹಿಸಲಾಯಿತು. ಈ ನಡುವೆ ಭಾರತೀಯ ಹವಾಮಾನ
ಇಲಾಖೆ ದೆಹಲಿ ಮಂದಿಗೆ ಧೂಳು ಮಿಶ್ರಿತ ಬಿರುಗಾಳಿ ಬಗ್ಗೆ
ಕಟ್ಟೆಚ್ಚರದ ಮುನ್ಸೂಚನೆ ನೀಡಿದೆ. ಜಡಿ ಮಳೆಯೊಂದಿಗೆ ಪ್ರಬಲ ಗಾಳಿ ಬೀಸಲಿದ್ದು ಅದು ಧೂಳು
ಮಿಶ್ರಿತವಾಗಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಧೂಳು ಮಿಶ್ರಿತ ಬಿರುಗಾಳಿಯ ಪರಿಣಾಮವಾಗಿ
ದೆಹಲಿಯಲ್ಲಿ ಕಗ್ಗತ್ತಲು ಕವಿದಿದೆ. ದೆಹಲಿ ಆಸುಪಾಸಿನ ಪ್ರದೇಶಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಉಂಟಾಯಿತು. ಧೂಳು ಬಿರುಗಾಳಿ ಪರಿಣಾಮವಾಗಿ ಮೆಟ್ರೋ ಸಂಚಾರ ಕೂಡಾ ಕೆಲವೆಡೆ
ಅಸ್ತವ್ಯಸ್ತಗೊಂಡಿತು. ಈ ಮಧ್ಯೆ ಮುಂಬೈಯಲ್ಲಿ ಜಡಿ
ಮಳೆಗೆ ಇಬ್ಬರು ಬಲಿಯಾಗಿದ್ದಾರೆ ಎಂದು ವರದಿಗಳು ಹೇಳಿದವು.
2016: ವಿಯೆನ್ನಾ: ಪರಮಾಣು ತಂತ್ರಜ್ಞಾನ ನಿಯಂತ್ರಣ ಹೊಂದಿರುವ ಪರಮಾಣು ಸರಬರಾಜುದಾರರ ಸಮೂಹಕ್ಕೆ (ಎನ್ಎಸ್ಜಿ) ಭಾರತದ ಪ್ರವೇಶವನ್ನು ಅಮೆರಿಕ ಮತ್ತು ಇತರ
ಪ್ರಮುಖ ರಾಷ್ಟ್ರಗಳು ಬೆಂಬಲಿಸಿರುವುದರ ಮಧ್ಯೆಯೇ ಇದನ್ನು ವಿರೋಧಿಸುವ ರಾಷ್ಟ್ರಗಳಿಗೆ ಚೀನಾ ನೇತೃತ್ವ ನೀಡಿದೆ ಎಂದು ಈದಿನ ನಡೆದ ಸಮೂಹದ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜತಾಂತ್ರಿಕರು ತಿಳಿಸಿದರು. ಭಾರತವನ್ನು ಪರಮಾಣು ಪರಮಾಣು ಕ್ಲಬ್ಗೆ ಸೇರಿಸುವ ಬಗ್ಗೆ ಈದಿನ ನಡೆದ ಪ್ರಾಥಮಿಕ ಸಭೆಯಲ್ಲಿ ಚೀನಾ ದೇಶವು ಭಾರತ ವಿರೋಧಿ ರಾಷ್ಟ್ರಗಳ ನೇತೃತ್ವ ವಹಿಸಿತು ಎಂದು ಹೆಸರು ಹೇಳಲು ಇಚ್ಛಿಸದ ರಾಜತಾಂತ್ರಿಕರು ಇಲ್ಲಿ ತಿಳಿಸಿದರು. ಚೀನಾದ ಹೊರತಾಗಿ ನ್ಯೂಜಿಲೆಂಡ್, ಐರ್ಲೆಂಡ್, ಟರ್ಕಿ, ದಕ್ಷಿಣ ಆಫ್ರಿಕ ಮತ್ತು ಆಸ್ಟ್ರಿಯಾ ದೇಶಗಳು ಎನ್ಎಸ್ಜಿಗೆ ಭಾರತದ ಸದಸ್ಯತ್ವ ನೀಡುವುದಕ್ಕೆ ವಿರೋಧ ಸೂಚಿಸಿದವು ಎಂದು ರಾಜತಾಂತ್ರಿಕರು ಹೇಳಿದರು. 48 ರಾಷ್ಟ್ರಗಳು ಇರುವ ಎನ್ಎಸ್ಜಿಯು ಅಣ್ವಸ್ತ್ರ ತಯಾರಿಸಲು ಸಾಧ್ಯವಾಗದಂತೆ ಮಾಡುವ ಸಲುವಾಗಿ ಅಣ್ವಸ್ತ್ರ ಸಂಬಂಧಿ ಸಾಧನಗಳ ಮಾರಾಟವನ್ನು ನಿಯಂತ್ರಿಸುವ ಮೂಲಕ ಅಣ್ವಸ್ತ್ರ ಪ್ರಸರಣವನ್ನು ತಡೆಯುವ ಗುರಿಯನ್ನು ಹೊಂದಿದೆ. ಭಾರತವು ಈಗಾಗಲೇ 2008ರ ಎನ್ಎಸ್ಜಿ ವಿನಾಯ್ತಿ ಅಡಿಯಲ್ಲಿ ಸದಸ್ಯತ್ವದ ಲಾಭಗಳೆಲ್ಲವನ್ನೂ ಪಡೆಯುತ್ತಿದೆ. ಅಣ್ವಸ್ತ್ರಗಳನ್ನು ತಯಾರಿಸಿದ್ದರೂ ಜಾಗತಿಕ ಅಣ್ವಸ್ತ್ರ ನಿಯಂತ್ರಣ ಒಪ್ಪಂದವಾದ ಅಣ್ವಸ್ತ್ರ ಪ್ರಸರಣ ಒಪ್ಪಂದಕ್ಕೆ (ಎನ್ಪಿಟಿ) ಭಾರತ ಸಹಿ ಹಾಕಿಲ್ಲ. ಹೀಗಾಗಿ ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ನೀಡಿದರೆ ಅಣ್ವಸ್ತ್ರ ಪ್ರಸರಣವನ್ನು ತಡೆಯುವ ಗುಂಪಿನ ಪ್ರಯತ್ನಗಳನ್ನೇ ಗೌಣಗೊಳಿಸಿದಂತಾಗುತ್ತದೆ ಎಂದು ಚೀನಾ ಸಹಿತವಾಗಿ ಭಾರತ ವಿರೋಧಿ ರಾಷ್ಟ್ರಗಳು ಪ್ರತಿಪಾದಿಸುತ್ತಿವೆ ಎಂದು ಅವರು ನುಡಿದರು.
2016: ಕಾರವಾರ: ಮುಳುಗುತ್ತಿದ್ದ ಹಡಗಿನಲ್ಲಿನ ನಾವಿಕರನ್ನು ಭಾರತೀಯ ನೌಕಾದಳ ಸಿಬ್ಬಂದಿಗಳು ಅರಬ್ಬಿ ಸಮುದ್ರದಲ್ಲಿ ರಕ್ಷಿಸಿದ ಘಟನೆ ಘಟಿಸಿತು. ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಇನ್ಸಿನಿಟಿ ಹೆಸರಿನ ವಿದೇಶಿ ಹಡಗು ಸಂಚರಿಸುತ್ತಿರುವಾಗ ರಂದ್ರ ಕಾಣಿಸಿಕೊಂಡಿದ್ದರಿಂದ ಮುಳುಗುವ ಸ್ಥಿತಿಗೆ ತಲುಪಿತ್ತು. ಹಡಗಿನಲ್ಲಿ ಒಂದೇ ಸಮನೆ ನೀರು ತುಂಬಿದ ಪರಿಣಾಮ ಪರಿಸ್ಥಿತಿ ಹದಗೆಟ್ಟಿತ್ತು. ಈ ಸಂದರ್ಭದಲ್ಲಿ ಭಾರತೀಯ ನೌಕಾದಳ ಸಿಬ್ಬಂದಿ ನೆರವಿಗೆ ಧಾವಿಸಿ, ವಿದೇಶಿ ನಾವಿಕರನ್ನು ರಕ್ಷಿಸಿದರು. ಈ ಹಡಗು ಕಾಂಡ್ಲಾ ದೇಶದಿಂದ ಕಾರವಾರಕ್ಕೆ ಆಗಮಿಸುತಿತ್ತು.
2016: ನವದೆಹಲಿ: ಭಾರತದ ಪ್ರವಾಸೀ ಸ್ಥಳಗಳು, ಗುಡ್ಡಗಳು ಮತ್ತು ನದಿಗಳನ್ನು ‘ಸ್ಟ್ರೀಟ್ ವ್ಯೂ’ ಸೇವೆಯಲ್ಲಿ ಸೇರಿಸುವ ಗೂಗಲ್ ಯೋಜನೆಯನ್ನು ಭಾರತ ಭದ್ರತಾ ಕಾರಣಗಳಿಗಾಗಿ ನಿರಾಕರಿಸಿತು. ಗೂಗಲ್ ಸ್ಟ್ರೀಟ್ ವ್ಯೂ ಸೇವೆಯ ಅಡಿಯಲ್ಲಿ ಬಳಕೆದಾರರಿಗೆ 360 ಡಿಗ್ರಿ ಕೋನದಲ್ಲಿ ಪ್ರವಾಸೀ ಸ್ಥಳ, ನದಿ, ಗುಡ್ಡಗಳ ವೀಕ್ಷಣೆ ಸಾಧ್ಯವಾಗುತ್ತದೆ. ಭಾರತವನ್ನು ಸ್ಟ್ರೀಟ್ ವ್ಯೂ ಸೇವೆಗೆ ಸೇರಿಸುವ ಗೂಗಲ್ನ ಯೋಜನೆಯನ್ನು ತಿರಸ್ಕರಿಸಲಾಗಿದೆ ಎಂದು ಗೃಹ ಸಚಿವಾಲಯವು ಗೂಗಲ್ ಸಂಸ್ಥೆಗೆ ತಿಳಿಸಿದೆ ಎಂದು ಸುದ್ದಿ ಮೂಲವೊಂದು ತಿಳಿಸಿತು. ಸ್ಟ್ರೀಟ್ ವ್ಯೂ ಸೇವೆ ಅಳವಡಿಸಿದಲ್ಲಿ 2008ರಲ್ಲಿ ಮುಂಬೈ ಮೇಲೆ ನಡೆದ ಮಾದರಿಯ ಭಯೋತ್ಪಾದಕ ದಾಳಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಭದ್ರತಾ ಸಂಸ್ಥೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಈ ಕ್ರಮ ಕೈಗೊಂಡಿತು. ಪಾಕಿಸ್ತಾನ ಮೂಲದ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಫೊಟೋಗಳ ಮೂಲಕವೇ ದಾಳಿಯ ಗುರಿಗಳನ್ನು 2008ರಲ್ಲಿ ರೂಪಿಸಿದ್ದ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಈ ಎಚ್ಚರಿಕೆ ನೀಡಿವೆ ಎನ್ನಲಾಯಿತು. ಯೋಜನೆಯ ವಿಸ್ತೃತ ವಿಶ್ಲೇಷಣೆ ನಡೆಸಿದ ಬಳಿಕ ಗೂಗಲ್ನ ಸ್ಟ್ರೀಟ್ ವ್ಯೂಗೆ ಭಾರತವನ್ನು ಸೇರಿಸುವುದರಿಂದ ರಾಷ್ಟ್ರದ ಭದ್ರತಾ ಹಿತಾಸಕ್ತಿ ಜೊತೆಗೆ ರಾಜಿ ಮಾಡಿಕೊಂಡಂತಾಗುತ್ತದೆ ಎಂದು ಭದ್ರತಾ ಸಂಸ್ಥೆಗಳು ಮತ್ತು ರಕ್ಷಣಾ ಪಡೆಗಳು ಅಭಿಪ್ರಾಯ ವ್ಯಕ್ತ ಪಡಿಸಿದ ಬಳಿಕ ಸರ್ಕಾರವು ಈ ಯೋಜನೆಯ ಪ್ರಸ್ತಾಪವನ್ನು ತಿರಸ್ಕರಿಸಲು ನಿರ್ಧರಿಸಿತು ಎಂದು ಮೂಲಗಳು ಹೇಳಿದವು.
2016: ಜೋಧ್ಪುರ: ಬ್ಯಾಂಕ್ ಉದ್ಯೋಗಿಯೊಬ್ಬರು ಎಟಿಎಂನಲ್ಲಿ ಹಣ ವಿತ್ಡ್ರಾ ಮಾಡುತ್ತಿರುವ ವೇಳೆ ದಾಳಿ ನಡೆಸಿದ ಘಟನೆಗೆ ಸಾಕಷ್ಟು ಸಾಮ್ಯವಿರುವ ಘಟನೆಯೊಂದು ಜೋಧ್ಪುರದಲ್ಲಿ ಜೂನ್ 1ರಂದು ನಡೆದಿದ್ದು, ಈದಿನ ತಡವಾಗಿ ಬೆಳಕಿಗೆ ಬಂದಿತು. ಹಣ ವಿತ್ಡ್ರಾ ಮಾಡುತ್ತಿರುವಾಗ ಚೂರಿಯಿಂದ ಇರಿದು ಹಣ ದೋಚಲು ಯತ್ನಿಸಿದ ವ್ಯಕ್ತಿ ಈಗ ಪೊಲೀಸರ ಅತಿಥಿ. ಹಲ್ಲೆಗೊಳಗಾಗಿದ್ದ ವ್ಯಕ್ತಿ ನೀಡಿದ ಮಾಹಿತಿ ಆಧರಿಸಿ ಪತ್ತೆ ಕಾರ್ಯಕ್ಕೆ ಇಳಿದಿದ್ದ ಪೊಲೀಸ್ ತಂಡ ಕಡೆಗೂ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಹಲ್ಲೆ ನಡೆಸಿ ಹಣ ದೋಚಲು ಯತ್ನಿಸಿದ ವ್ಯಕ್ತಿ ನವೀನ್ ಪರಿಹಾರ್ ಎಂದು ಗುರುತಿಸಲಾಯಿತು. ಈತ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿತು. ‘ಹಣ ಇಲ್ಲದೇ ಸಾಕಷ್ಟು ಹತಾಶನಾಗಿದ್ದೆ. ಆಗ ಇದೊಂದೆ ಮಾರ್ಗ ನನಗೆ ಕಾಣಿಸಿದ್ದು. ಹಣಕ್ಕಾಗಿ ಹೀಗೆ ಮಾಡಿದ್ದೇನೆ’ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದು, ಹಣ ಸಂಪಾದನೆಗೆ ಯಾವುದಾದರೂ ಮಾರ್ಗ ಹುಡುಕಿಕೊಳ್ಳಬೇಕೆಂದು, ಅಂತಿಮವಾಗಿ ಈ ದಾರಿ ಹಿಡಿದ. ಚೂರಿ ಇರಿತಕ್ಕೊಳಗಾದ ವ್ಯಕ್ತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಸಮಸ್ಯೆ ಇಲ್ಲದೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.
2016: ನ್ಯೂಯಾರ್ಕ್: ಟೈಮ್ಸ್ ನಿಯತಕಾಲಿಕದ 2016ರ ಮುಂದಿನ ತಲೆಮಾರಿನ ಪ್ರಭಾವಿ ವಿಶ್ವನಾಯಕರ ಪಟ್ಟಿಯಲ್ಲಿ ಭಾರತದ ಉಮೇಶ್ ಸಚ್ದೇವ್ ಸ್ಥಾನ ಪಡೆದಿದ್ದು ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿ ಹೊರಹೊಮ್ಮಿದರು. ಪಟ್ಟಿಯನ್ನು ಈದಿನ ಪ್ರಕಟಿಲಾಯಿತು. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಚೆನ್ನೈ ಮೂಲದ ಉಮೇಶ್ 2008ರಿಂದ ಯುನಿಪೋನ್ ಸಾಫ್ಟ್ ವೇರ್ನ ಸಹ ಸಂಸ್ಥಾಪಕ ಹಾಗೂ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಅಭಿವೃದ್ಧಿ ಪಡಿಸುತ್ತಿರುವ ಟೆಲಿಪೋನ್ ಸಾಫ್ಟ್ ವೇರ್ನ ವಿಶೇಷತೆ ಎಂದರೆ ವಿಶ್ವದ ಯಾವುದೇ ಭಾಷೆಯನ್ನು ಗ್ರಹಿಕೆ ಮಾಡಿಕೊಂಡು ಸಂವಹನವನ್ನು ಸುಲಭವಾಗಿಸುವುದು. ಟೈಮ್ಸ್ ಈ ಯುವ ನಾಯಕನ ಅನ್ವೇಷಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು. ವಿಶ್ವದ 25 ಪ್ರಮುಖ ಭಾಷೆಗಳಲ್ಲಿ ಈಗಾಗಲೇ 5 ಮಿಲಿಯನ್ ಜನತೆ ಇದನ್ನು ಬಳಕೆ ಮಾಡುತ್ತಿದ್ದಾರೆ. ಆರ್ಥಿಕ ಸ್ವಾವಲಂಬನೆ ಸಾಧಿಸಲು ಹಾಗೂ ರೈತರಿಗೆ ಹವಾಮಾನದ ವೈಪರೀತ್ಯ ತಿಳಿಯಲು ಈ ಸಾಫ್ಟ್ ವೇರ್ ಸಹಾಯಕವಾಗುತ್ತದೆ ಎಂದು ತಿಳಿಸಲಾಯಿತು. ಈ ಪಟ್ಟಿಯಲ್ಲಿ ಐರೀಶ್ ನಟ ಸೊರೈಸ್ ರೊನನ್, ಲಿಬೇರಿಯನ್ ಜಲ ಸಂರಕ್ಷಕ ಸರನ್ ಕಾಬಾ ಜೋನ್ಸ್, ಅಮೆರಿಕಾದ ಜಿಮ್ನಾಸ್ಟಿಕ್ ಪಟು ಸಿಮೊನ್ ಬಿಲ್ಸ್, ದಕ್ಷಿಣ ಕೋರಿಯಾದ ಐರಿನ್ ಕಿಮ್ ಸೇರಿದಂತೆ ಹಲವರು ಸ್ಥಾನ ಪಡೆದರು.
2016: ನವದೆಹಲಿ: ಬಾಲಿವುಡ್ ಮಂದಿ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಸೆನ್ಸಾರ್ ಮಂಡಳಿಯ ನಡೆ ಖಂಡಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಕೇಂದ್ರೀಯ ಸೆನ್ಸಾರ್ ಮಂಡಳಿ ಕೇವಲ 13 ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು ಎಂದು ಪ್ರಕಟಿಸಿತು. ಬಾಲಿವುಡ್ನ ಬಿಗ್ಬಿ ಅಮಿತಾಭ್ ಬಚ್ಚನ್, ಆಮೀರ್ ಖಾನ್, ಕರಣ್ ಜೋಹರ್, ಕಪೀಲ್ ಶರ್ಮ, ಕ್ರಿಕೆಟಿಗ ಹರ್ಭಜನ್ ಸಿಂಗ್, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೆನ್ಸಾರ್ ಮಂಡಳಿಯ ನಡೆಯನ್ನು ಬಹಿರಂಗವಾಗಿ ಖಂಡಿಸಿದ್ದರು. ಅಷ್ಟೇ ಅಲ್ಲ ಸೃಜನಾತ್ಮಕತೆಯನ್ನು ಕೊಲ್ಲಲಾಗುತ್ತಿದೆ ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ತನ್ನ ತೀರ್ವನವನ್ನು ಬದಲಿಸಿದೆ. 89 ದೃಶ್ಯಗಳ ಬದಲು ಕೇವಲ 13 ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು ಎಂದು ಹೇಳಿತು. 89 ದೃಶ್ಯಗಳಿಗೆ ಕತ್ತರಿ ಹಾಗೂ ಶೀರ್ಷಿಕೆಯಲ್ಲಿ ಪಂಜಾಬ್ ಹೆಸರನ್ನು ತೆಗೆಯುವಂತೆ ಸೂಚಿಸಿದ ಸೆನ್ಸಾರ್ ಮಂಡಳಿ ವಿರುದ್ಧ ನಿರ್ದೇಶಕ ಹಾಗೂ ನಿರ್ವಪಕ ಅನುರಾಗ್ ಕಶ್ಯಪ್ ಬಾಂಬೆ ಹೈ ಕೋರ್ಟ್ ಮೆಟ್ಟಿಲೆರಿದ್ದರು. ಇದಕ್ಕೂ ಮೊದಲು ಅನುರಾಗ್ ಕಶ್ಯಕ್ ಪಂಜಾಬ್ ರಾಜ್ಯವನ್ನು ನಕಾರಾತ್ಮಕವಾಗಿ ಬಿಂಬಿಸಲು ಎಎಪಿಯಿಂದ ಹಣಪಡೆದಿದ್ದಾರೆ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹಲಾಜ್ ನಿಹಲಾನಿ ಆರೋಪ ಮಾಡಿದ್ದರು.
2016: ನವದೆಹಲಿ: ಲೈಂಗಿಕ ಕಿರುಕುಳ ನೀಡಿ ಅದರ ವಿಡಿಯೋ ಚಿತ್ರೀಕರಣ ಮಾಡಿರುವುದಾಗಿ ಹತ್ತು ಮಂದಿ ಬಾಲಕಿಯರು ಆರೋಪಿಸಿದ್ದನ್ನು ಅನುಸರಿಸಿ ದೆಹಲಿ ಬಾಲ ಗೃಹದ ಮುಖ್ಯಸ್ಥ ರಾಮ್ ಸಹಾಯ್ ಮೀನಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ವೇಶ್ಯಾವಾಟಿಕೆ, ಬಿಕ್ಷೆ ಬೇಡುವಿಕೆ ಮತ್ತು ಬಾಲ ಕಾರ್ಮಿಕ ಜಾಲಗಳಿಂದ ರಕ್ಷಿಸಲಾದ ಮಕ್ಕಳನ್ನು ಇರಿಸಲಾಗಿದ್ದ ಸರ್ಕಾರಿ ಸ್ವಾಮ್ಯದ ಬಾಲ ಗೃಹದ ಮುಖ್ಯಸ್ಥ ಆರ್.ಎಸ್. ಮೀನಾ, ಮಕ್ಕಳ ಮೇಲೆ ತಾನು ನಡೆಸಿದ ಲೈಂಗಿಕ ಕಿರುಕುಳದ ದೃಶ್ಯಗಳನ್ನು ತನ್ನ ಮೊಬೈಲ್ನಲ್ಲೇ ಸೆಲ್ಪಿ ತೆಗೆದುಕೊಳ್ಳುತ್ತಿದ್ದುದಾಗಿ ಬಾಲಕಿಯರು ದೂರಿದ್ದರು. ಬಾಲಕಿಯರ ಮತ್ತು ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಕೈನ್ ತಿಳಿಸಿದರು. ವೈದ್ಯಕೀಯ ಪರೀಕ್ಷೆಗಳು ಬಾಲಕಿಯರ ಮೇಲೆ ಲೈಂಗಿಕ ಹಲ್ಲೆ ನಡೆದಿರುವುದನ್ನು ದೃಢ ಪಡಿಸಿವೆ ಎಂದೂ ಅವರು ತಿಳಿಸಿದರು.
2016: ಪಿಥೋರ್ಗಢ: ನೂರಲ್ಲ… ಸಾವಿರವಲ್ಲ… ಒಂದು ಲಕ್ಷವೂ ಅಲ್ಲ. ಬರೋಬ್ಬರಿ ಒಂದು ಕೋಟಿ ಸಸಿ ನೆಟ್ಟು, ಮರವಾಗಿ ಬೆಳೆಸಿ ಇಂದಿರಾ ಪ್ರಿಯದರ್ಶಿನಿ ವಿಕಾಸ್ ಮಿತ್ರ ಪ್ರಶಸ್ತಿಗೆ ಭಾಜನರಾದ ಉತ್ತರಾಖಂಡದ ಕೃಷಿ ಜೀವಿ, 91 ವರ್ಷದ ಕುನ್ವರ್ ದಾಮೋದರ್ ಸಿಂಗ್ ರಾಥೋಡ್ ಹಿಂದಿನ ದಿನ ಕೊನೆಯುಸಿರೆಳೆದರು. ಸ್ಥಳೀಯ ವರದಿಯ ಪ್ರಕಾರ ಮೇ 25ರಂದು ಅನಾರೋಗ್ಯದ ಕಾರಣ ಸ್ಥಳೀಯ ಆಸ್ಪತ್ರೆಗೆ ಸೇರಿದ್ದರು. ಭನೋರಾದ ದಿದಿಹಾಟ್ನಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಾಗ ಅಲ್ಲಿಗೆ ಆಗಮಿಸಿದ್ದ ರಾಥೋಡ್ ಮರಳಿದ ಬಳಿಕ ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರಾಥೋಡ್ ಅವರಿಗೆ ಪರಿಸರದ ಮೇಲಿನ ಪ್ರೀತಿ, ಕಾಳಜಿ ಸಾಕಷ್ಟಿತ್ತು ಎನ್ನುವುದಕ್ಕೆ ಇಲ್ಲೊಂದು ಚಿಕ್ಕ ಉದಾಹರಣೆ ಇದೆ. ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಅವರು ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿದ್ದರು. ಆದರೂ ತನ್ನ ಸ್ನೇಹಿತರನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಂಡು, ಗಿಡಗಳನ್ನು ಅಲ್ಲಿಗೇ ತರಿಸಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು ಎಂದು ಆಪ್ತರು ಹೇಳಿದರು. ಸಾವಿಗೆ ಮೂರು ದಿನ ಮೊದಲು ಆಸ್ಪತ್ರೆಗೆ 4000 ಸಾವಿರ ಗಿಡಗಳನ್ನು ತರಿಸಿಕೊಂಡು ಶಾಲಾ ಮಕ್ಕಳಿಗೆ ಹಂಚಿ ಖುಷಿ ಪಟ್ಟಿದ್ದರು. 1960ರಲ್ಲಿಯೇ ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಭನೋರಾ ಸುತ್ತಮುತ್ತ 160ಕ್ಕೂ ಹೆಚ್ಚು ಜಾತಿಯ ಸಸ್ಯಗಳನ್ನು ಬೆಳೆಸಿರುವ ರಾಥೋಡ್, ಕಾಶಿಪುರ, ಡೆಹರಾಡೂನ್, ಹರಿದ್ವಾರಗಳಲ್ಲಿಯೂ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ಜನಪ್ರಿಯರಾಗಿದ್ದರು.
2016: ನವದೆಹಲಿ: ಚೀನಾಕ್ಕೆ ಇರುಸು -ಮುರುಸು ಆಗಬಹುದಾಗಿದ್ದರೂ ವಿಯೆಟ್ನಾಮ್ ಗೆ ಬ್ರಹ್ಮೋಸ್ ಅತ್ಯಾಧುನಿಕ ಕ್ರೂಸ್ ಕ್ಷಿಪಣಿ ವ್ಯವಸ್ಥೆಯನ್ನು ಮಾರಾಟ ಮಾಡುವ ಪ್ರಯತ್ನಗಳನ್ನು ಭಾರತ ತೀವ್ರಗೊಳಿಸಿತು. ವಿಯೆಟ್ನಾಮ್ ಅಲ್ಲದೆ ಇತರ 15 ಮಾರುಕಟ್ಟೆಗಳು ಭಾರತದ ಕಣ್ಣ ಮುಂದಿವೆ ಎಂದು ತಜ್ಞರು ತಿಳಿಸಿದರು. ಚೀನಾವು ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಯಿತು. ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸಿರುವ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳನ್ನು ಮಾರಾಟ ಮಾಡುವುದರಿಂದ ಪಾಲುದಾರರ ರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸುವುದರ ಜೊತೆಗೆ ತನ್ನ ಆದಾಯವನ್ನೂ ಭಾರತ ಹೆಚ್ಚಿಸಿಕೊಳ್ಳಲಿದೆ. ವಿಯೆಟ್ನಾಮ್ ಸೇರಿದಂತೆ ಐದು ರಾಷ್ಟ್ರಗಳಿಗೆ ಕ್ಷಿಪಣಿ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತ ಸರ್ಕಾರವು ಕ್ಷಿಪಣಿ ಉತ್ಪಾದಿಸುವ ಬ್ರಹ್ಮೋಸ್ ಏರೋಸ್ಪೇಸ್ಗೆ ಆರ್ಡರ್ ಮಾಡಿದೆ. ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಚಿಲಿ ಮತ್ತು ಬ್ರೆಜಿಲ್ ಇವು ವಿಯೆಟ್ನಾಮ್ ಹೊರತಾಗಿ ಬ್ರಹ್ಮೋಸ್ ಖರಿದಿಸುವ ಇತರ ರಾಷ್ಟ್ರಗಳು ಎಂದು ವರದಿಗಳು ಹೇಳಿದವು.
2016: ನವದೆಹಲಿ: ಕಳೆದ ವರ್ಷ ದೆಹಲಿಯಲ್ಲಿ ಆಯೋಜಿಸಿದ್ದ ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಚೀನಾ ನಿರ್ಮಿತ ನೆಲಹಾಸು ಬಳಸಲಾಗಿತ್ತು. ಆ ನಂತರ ಉಂಟಾಗಿದ್ದ ವಿವಾದದಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಯೋಗ ದಿನದಂದು ಕೇವಲ ಸ್ವದೇಶಿ ನೆಲಹಾಸು ಬಳಸುವಂತೆ ಸೂಚನೆ ನೀಡಿತು. ಯೋಗದಿನವನ್ನು ಸಂಪೂರ್ಣವಾಗಿ ಸ್ವದೇಶಿಯಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಿತು. ಯೋಗ ದಿನಾಚರಣೆಗೆ ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಕೆ ಮಾಡಬೇಕು, ಈ ಮೂಲಕ ಸ್ಥಳೀಯ ಕುಶಲಕರ್ಮಿಗಳು ಮತ್ತು ಸಣ್ಣ ಉದ್ದಿಮೆಗಳಿಗೆ ಬೆಂಬಲ ನೀಡಬೇಕು ಎಂದು ಕೇಂದ್ರ ಸರ್ಕಾರ ತನ್ನ ಪತ್ರದಲ್ಲಿ ತಿಳಿಸಿತು. 2ನೇ ಅಂತಾರಾಷ್ಟ್ರೀಯ ಯೋಗದಿನವನ್ನು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಸ್ವದೇಶಿ ನಿರ್ಮಿತ ನೆಲಹಾಸು ಮತ್ತು ಬಟ್ಟೆಗಳನ್ನು ಖರೀದಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದೇವೆ. ಕಳೆದ ವರ್ಷ ದೆಹಲಿಯಲ್ಲಿ ಆಚರಿಸಿದ ಯೋಗ ದಿನ ಸಮಾರಂಭದಲ್ಲಿ 33 ಸಾವಿರಕ್ಕೂ ಹೆಚ್ಚು ಚೀನಾ ನಿರ್ಮಿತ ನೆಲಹಾಸು ಬಳಸಲಾಗಿತ್ತು. ಇದಕ್ಕೆ ವ್ಯಾಪಕವಾದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ನೆಲಹಾಸು ಬಳಸಲು ತಿರ್ಮಾನಿಸಲಾಗಿದೆ ಎಂದು ಆಯುಷ್ ಸಚಿವ ಶ್ರೀಪಾದ್ ನಾಯಕ್ ತಿಳಿಸಿದರು.
2016: ನವದೆಹಲಿ: ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರಸಿಂಗ್ ಅವರು ಸಿಬಿಐ ಮುಂದೆ ವಿಚಾರಣೆಗೆ ಹಾಜರಾದರು. ಸಿಬಿಐ ಅಧಿಕಾರಿಗಳು ದೀರ್ಘ ಕಾಲ ಅವರನ್ನು ಪ್ರಶ್ನಿಸಿದರು. ಯುಪಿಎ -2 ಸರ್ಕಾರದ ಅವಧಿಯಲ್ಲಿ ಉಕ್ಕು ಸಚಿವರಾಗಿದ್ದ ವೇಳೆಯಲ್ಲಿ ವೀರಭದ್ರ ಸಿಂಗ್ ಅವರು 6.03 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಸಿಂಗ್ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಸಿಬಿಐ ತನಿಖೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇತ್ತೀಚೆಗೆ ಆಪಲ್ ವ್ಯಾಪಾರಿಯೊಬ್ಬರ ಅಕೌಂಟೆಟ್ನ್ನು ವಿಚಾರಣೆಗೆ ಗುರಿಪಡಿಸಿತ್ತು.
2016: ಚೆನ್ನೈ: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಚುನಾವಣೆಯಲ್ಲಿ ಸೋತ ಮಾಜಿ ಸಚಿವರನ್ನು ಪಕ್ಷದ ಪ್ರಮುಖ ಸ್ಥಾನಗಳಿಂದ ಕೈಬಿಟ್ಟು ಶಾಕ್ ನೀಡಿದರು. ಚುನಾವಣೆಯಲ್ಲಿ ಸೋತ ಮಾಜಿ ಇಂಧನ ಸಚಿವ ಆರ್.ವಿಶ್ವನಾಥನ್ ಅವರನ್ನು ದಿಂಡಿಗಲ್ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಯಿತು. ಜಯಲಲಿತಾ ಅವರ ಆಪ್ತ ಓ ಪನೀರ್ಸೆಲ್ವಮ್ ಅವರನ್ನು ಪಕ್ಷದ ಖಜಾಂಚಿಯಾಗಿ ಮುಂದುವರೆಸಲಾಯಿತು.
ಆದರೆ ಅವರ ಮಗ ಪಿ. ರವೀಂದ್ರನಾಥ್ ಕುಮಾರ್ ಅವರನ್ನು ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲಾಯಿತು. ಜತೆಗೆ ಮಾಜಿ ಸಚಿವರಾದ ಸಿ ಪನ್ನೈಯನ್, ಪೊ ಪಳನಿಯಪ್ಪನ್, ಪನ್ರುತಿ ಎಸ್. ರಾಮಚಂದ್ರನ್ ಮತ್ತು ಪಿ. ಮೋಹನ್ ಅವರನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ವಜಾ ಮಾಡಲಾಯಿತು.
2016: ಮೆಕ್ಸಿಕೋ ಸಿಟಿ: ಪಂಚರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಮೆಕ್ಸಿಕೋ ಕ್ಕೆ ಈದಿನ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮೆಕ್ಸಿಕೋ ಅಧ್ಯಕ್ಷ ಎನ್ರಿಕ್ಸ್ ಪೆನಾ ನಿಟೊ ಅವರು ರಾತ್ರಿ ಭೋಜನಕ್ಕೆ ನಗರದ ಖ್ಯಾತ ಶಾಖಾಹಾರಿ ‘ಕ್ವಿಂಟೋನಿಲ್’ ಹೋಟೆಲ್ಗೆ ಸ್ವತಃ ವಾಹನ ಚಾಲನೆ ಮಾಡಿಕೊಂಡು ಕರೆದೊಯ್ದರು. ವಿಶೇಷ ಆತಿಥ್ಯ ಸ್ವೀಕರಿಸುತ್ತ ಇಬ್ಬರು ನಾಯಕರು ಭೋಜನ ಮಾಡುತ್ತ ಮಾತುಕತೆ ನಡೆಸಿರುವ ಚಿತ್ರವನ್ನು ಭಾರತದ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್ ಫೋಟೊ ಸಮೇತ ಟ್ವೀಟ್ ಮಾಡಿದರು. ಮೆಕ್ಸಿಕೊ ಸಿಟಿ ಭೇಟಿಯ ಬಳಿಕ ಬಳಿಕ ಪಂಚರಾಷ್ಟ್ರ ಪ್ರವಾಸವನ್ನು ಮುಗಿಸಿಕೊಂಡು ಪ್ರಧಾನಿ ಮೋದಿ ಸ್ವದೇಶಕ್ಕೆ ವಾಪಸ್ ಹೊರಟರು ಎಂದು ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದರು.
2016: ಹುಬ್ಬಳ್ಳಿ: ಕಿರುತೆರೆಯ ಖ್ಯಾತ ಧಾರವಾಹಿ ಅಶ್ವಿನಿ ನಕ್ಷತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿ ನಂತರ ಚಿತ್ರರಂಗ ಪ್ರವೇಶಿಸಿ ಮೊದಲ ಚಿತ್ರದಲ್ಲೆ ಸೆಂಚುರಿ ಬಾರಿಸಿದ ಚಿತ್ರನಡಿ ಮಯೂರಿ ಅವರ ತಂದೆ, ವಿಆರ್ಎಲ್ ಸಮೂಹ ಸಂಸ್ಥೆಗಳ ಎಂ ಪಿ ಸಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್ ರಾಮಚಂದ್ರಪ್ಪ ಕ್ಯಾತೇರಿ (58) ಹೃದಯಾಘಾತದಿಂದ ಈದಿನ ಬೆಳಗಿನ ಜಾವ ಸಾವನ್ನಪ್ಪಿದರು. ಮೂಲತಃ ಹುಬ್ಬಳ್ಳಿ ಕೇಶ್ವಾಪುರದ ಆಜಾದ್ ಕಾಲನಿ ನಿವಾಸಿಯಾದ ಪ್ರಕಾಶ್ ಕುಟುಂಬ ಮಯೂರಿಯ ಚಿತ್ರರಂಗದ ಯಶಸ್ಸಿನ ನಂತರವೂ ಹುಬ್ಬಳ್ಳಿಯಲ್ಲಿಯೆ ನೆಲೆಸಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದರು. ಹಿರಿಯ ಪುತ್ರಿ ಮಾಧುರಿ ಜರ್ಮನಿಯಲ್ಲಿದ್ದು ಕಿರಿಯ ಪುತ್ರಿ ಮಯೂರಿ ಚಿತ್ರನಟಿ, ಸರಳ ಸ್ವಭಾವದ ಪ್ರಕಾಶ್ ಅಪಾರ ಬಂಧು ಬಳಗವನ್ನು ಅಗಲಿದರು.
2016: ಮೆಕ್ಸಿಕೋ ಸಿಟಿ: ಅಣುಸಾಮಗ್ರಿ ಪೂರೈಕೆದಾರರ ಗುಂಪು (ಎನ್ಎಸ್ಜಿ)ಗೆ ಸೇರ್ಪಡೆಯಾಗಲು ಭಾರತಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ಮೆಕ್ಸಿಕೋದ ಅಧ್ಯಕ್ಷ ಎನ್ರಿಕ್ ಪೆನಾ ನಿಯೆಟೋ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ನಡೆದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ನಿಯೆಟೋ ತಮ್ಮ ನಿರ್ಧಾರವನ್ನು ತಿಳಿಸಿದರು. ಎನ್ಎಸ್ಜಿ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿರುವ ಮೆಕ್ಸಿಕೋದ ಅಧ್ಯಕ್ಷ ನಿಯೆಟೋಗೆ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು. ನಾವು ಕಳೆದ ಎರಡು ವರ್ಷದಲ್ಲಿ ಮೂರನೇ ಭಾರಿಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಇದು ನಮ್ಮ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಗೊಳಿಸಿದೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಮತ್ತು ಪರಸ್ಪರ ಸಹಕಾರ ನೀಡಲು ಒಪ್ಪಿಗೆ ಸೂಚಿಸಿದ್ದೇವೆ. ನಾವು ಕೊಳ್ಳುವ ಮಾರುವ ಸಂಬಂಧದಿಂದ ಹೊರತಾದ ಸಂಬಂಧವನ್ನು ಹೊಂದಲು ಬಯಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
2009: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು 'ಬೆಂಗಳೂರು ಬೇಡ, ಬಫೆಲೊ ಬೇಕು' ಎನ್ನುವ ಮಂತ್ರ ಜಪಿಸಿದ್ದಕ್ಕೆ ಅಮೆರಿಕದಲ್ಲಿಯೇ ಅಪಸ್ವರ ವ್ಯಕ್ತವಾಯಿತು. ಭಾರತವೂ ಸೇರಿದಂತೆ ವಿದೇಶಗಳಲ್ಲಿ ಉದ್ಯೋಗ ಅವಕಾಶ ಸೃಷ್ಟಿಸುವ ಅಮೆರಿಕದ ಸಂಸ್ಥೆಗಳಿಗೆ ನೀಡುತ್ತಿರುವ ತೆರಿಗೆ ಉತ್ತೇಜನ ಕ್ರಮಗಳಿಗೆ ಕೊನೆ ಹಾಡುವ ಒಬಾಮ ಕ್ರಮದ ವಿರುದ್ಧ ಅಮೆರಿಕದ ಕಾರ್ಪೋರೇಟ್ ವಲಯ ಪ್ರಚಾರ ಅಭಿಯಾನ ಆರಂಭಿಸಿತು. ವಾಷಿಂಗ್ಟನ್ ಮೂಲದ ತಂತ್ರಜ್ಞಾನ ಮುಖ್ಯಸ್ಥರ (ಸಿಇಒ) ಮಂಡಳಿಯು ಬಿಡುಗಡೆ ಮಾಡಿರುವ ವರದಿಯಲ್ಲಿ, ಒಬಾಮ ಪ್ರಕಟಿಸಿದ ತೆರಿಗೆ ಉತ್ತೇಜನಾ ಕ್ರಮಗಳನ್ನು ರದ್ದುಪಡಿಸುವ ಕ್ರಮಗಳಿಂದ ಅಮೆರಿಕದಲ್ಲಿನ 22 ಲಕ್ಷ ಉದ್ಯೋಗ ಅವಕಾಶಗಳು ಇಲ್ಲದಂತಾಗಲಿವೆ ಎಂದು ಅಭಿಪ್ರಾಯ ಪಡಲಾಯಿತು. 'ಬೆಂಗಳೂರು ಬೇಕು' ಎನ್ನುವುದೇ ಈ ವರದಿಯ ತಿರುಳು. ಒಬಾಮ ಜಪಿಸಿದ 'ಬೆಂಗಳೂರು ಬಿಡಿ ಬಫೆಲೊ ಬಯಸಿ' ನಿಲುವಿನಿಂದಾಗಿ ಅಮೆರಿಕದಲ್ಲಿ ಉದ್ದಿಮೆಗಳ ಸ್ಥಾಪನೆ, ಸಲಕರಣೆ ಖರೀದಿ ಮಾರಾಟ ಮತ್ತು ಆಸ್ತಿ ನಷ್ಟದ ಪ್ರಮಾಣವು 85 ಶತಕೋಟಿ ಡಾಲರ್‌ಗಳಷ್ಟು ಆಗಲಿದೆ ಎಂದೂ ವರದಿ ಅಂದಾಜು ಮಾಡಿತು.
2009: ಬಿದಿರು ಮತ್ತು ದಾಲ್ಚಿನ್ನಿ ಜಾತಿಗೆ ಸೇರಿದ ತಲಾ ಎರಡೆರಡು ಸಸ್ಯ ಪ್ರಬೇಧಗಳು ಮತ್ತು ಶುಂಠಿ ಜಾತಿಗೆ ಸೇರಿದ ಮೂರು ಪ್ರಬೇಧಗಳು ಸೇರಿದಂತೆ ದೇಶದಲ್ಲಿ ಒಟ್ಟು 167 ಬಗೆಯ ಹೊಸ ಸಸ್ಯಗಳನ್ನು 2008ರಲ್ಲಿ ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ನವದೆಹಲಿಯಲ್ಲಿ ಪ್ರಕಟಿಸಿದರು. ಬಟಾನಿಕಲ್ ಸರ್ವೆ ಆಫ್ ಇಂಡಿಯಾ ಹೊರತಂದಿರುವ 'ಸಸ್ಯ ಅನ್ವೇಷಣೆ 2008' ಪುಸ್ತಕದಲ್ಲಿ ಈ ಬಗ್ಗೆ ಮಾಹಿತಿಯಿದೆ. 137 ಬಗೆಯ ಸಸ್ಯಗಳ ಬಗ್ಗೆ ಪುಸ್ತಕದಲ್ಲಿ ಮಾಹಿತಿ ಇದ್ದರೆ, ಉಳಿದ 30 ಸಸ್ಯಗಳನ್ನು ಇದೇ ಮೊದಲ ಬಾರಿಗೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಎಂದು ಬಿಎಸ್‌ಐ ನಿರ್ದೇಶಕ ಎಂ.ಸಂಜಪ್ಪ ತಿಳಿಸಿದರು. ಅಧ್ಯಯನವನ್ನು ಇನ್ನೂ ವಿಸ್ತಾರಗೊಳಿಸುವ ಉದ್ದೇಶದಿಂದ ದೇಶದ ವಿಜ್ಞಾನಿಗಳು ಮಾತ್ರವಲ್ಲದೇ ಟ್ಯಾಕ್ಸಾನಮಿ ತಜ್ಞರನ್ನು ಶೋಧನೆಗೆ ಆಹ್ವಾನಿಸಲಾಗಿತ್ತು ಹಿಮಾಲಯ, ಪಶ್ಚಿಮಘಟ್ಟ, ಮತ್ತು ಅಂಡಮಾನ್ ನಿಕೋಬಾರ್‌ಗಳಲ್ಲಿ ಭಾರತೀಯ ಸಸ್ಯ ಜಗತ್ತು ಹರಡಿಕೊಂಡಿದೆ. ಅನ್ವೇಷಣೆಯಿಂದ ಸಸ್ಯಲೋಕದ ಸಾಮರ್ಥ್ಯ ತಿಳಿದುಬಂತು. ಹೊಸ ಬಿದಿರು ತಳಿ 'ಮುನ್ರೋಕ್ಲೋವಾ' ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾಗಿದ್ದರೆ, 'ಕಲಾಮಸ್ ರೇಣುಕೆ' ಕೇರಳದ 'ಮೌನ ಕಣಿವೆ'ಯ ನಿತ್ಯಹರಿದ್ವರ್ಣ ಕಾಡಿನಲ್ಲಿ ಕಂಡುಬಂದಿದೆ. ಗಡ್ಡೆ ಜಾತಿಗೆ ಸೇರಿದ 'ಅಕೋನಿಟಮ್ ಬಟಾನಿಕಮ್' ಹಿಮಾಚಲ ಪ್ರದೇಶದ ಪಿನ್ ವ್ಯಾಲಿಯಲ್ಲಿ ಪ್ರಥಮ ಬಾರಿಗೆ ಗೋಚರಿಸಿದೆ. ಚೀನಾ, ಶ್ರೀಲಂಕಾ, ಮ್ಯಾನ್ಮಾರಿಗೆ ಸೇರಿದ ವಿವಿಧ ಸಸ್ಯಗಳು ಕೂಡ ಹಿಮಾಚಲ ಪ್ರದೇಶದಲ್ಲಿ ಕಂಡುಬಂದಿವೆ. ವಿಶ್ವದ ಸಸ್ಯ ಸಂಪತ್ತಿನಲ್ಲಿ ಶೇ 11ರಷ್ಟು ಭಾಗ ಭಾರತದಲ್ಲಿದೆ. ಭಾರತದಲ್ಲಿ ಆಂಜಿಯೋಸ್ಪರ್ಮ್ ಪ್ರಬೇಧಕ್ಕೆ ಸೇರಿದ 45,968 ಸಸ್ಯಗಳಿವೆ ಎಂದರು ಸಂಜಪ್ಪ.
2009: ಅಟ್ಲಾಂಟಿಕ್ ಸಾಗರಕ್ಕೆ ಬಿದ್ದ ಏರ್ ಫ್ರಾನ್ಸ್ ವಿಮಾನದ ಬಾಲದಲ್ಲಿದ್ದ (ಹಿಂಭಾಗ) ಲಂಬಾಕೃತ ಸ್ಟೆಬಿಲೈಜರನ್ನು ರಕ್ಷಣಾ ತಂಡ ಪತ್ತೆ ಹಚ್ಚಿತು. ಇದು ಬ್ಲ್ಯಾಕ್ ಬಾಕ್ಸ್ ಹುಡುಕಲು ಮತ್ತು ಜೆಟ್ ವಿಮಾನ ಹೇಗೆ ಅಪಘಾತಕ್ಕೀಡಾಯಿತು ಎಂಬುದನ್ನು ತಿಳಿಯಲು ನೆರವಾಗುತ್ತದೆ ಎಂದು ಬ್ರೆಜಿಲ್ ನೌಕಾ ಮತ್ತು ವಾಯುಪಡೆ ತಿಳಿಸಿತು. ಈದಿನ ಎಂಟು ಮೃತದೇಹ ಪತ್ತೆಯಾಗುವುದರೊಂದಿಗೆ ಒಟ್ಟು 24 ಮೃತದೇಹಗಳನ್ನು ಹೊರತೆಗೆಯಲಾಯಿತು.
2009: 2008ರಲ್ಲಿ ಕಂಧಮಲ್‌ನಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ದಂಪತಿ ತಮ್ಮ ಎರಡೂವರೆ ವರ್ಷದ ಪುತ್ರಿಯ ಉತ್ತಮ ಭವಿಷ್ಯಕ್ಕಾಗಿ ಪೊಲೀಸರಿಗೆ ಶರಣಾದರು. ನಿಷೇಧಿತ ಸಿಪಿಐ ಮಾವೋ ಸಂಘಟನೆಯ ಬನಸಾಧರ ವಿಭಾಗದ ಸ್ಥಾಪಕ ಸದಸ್ಯರಾದ ಘಾಸಿರಾಂ ಮುಜ್ಹಿ ಅಲಿಯಾಸ್ ಆಕಾಶ್ ಹಾಗೂ ಈತನ ಪತ್ನಿ ಜಾರನಾ ರಾಯಗಡ ಜಿಲ್ಲೆಯಲ್ಲಿ ಶರಣಾದರು ಎಂದು ಪೊಲೀಸರು ತಿಳಿಸಿದರು.
2009: ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ 'ಧ್ಯಾನ' ಒಂದು ಅತ್ಯುತ್ತಮ ಔಷಧವಾಗಲಿದೆ ಎಂದು ಇತ್ತೀಚೆಗಿನ ಅಧ್ಯಯನವೊಂದು ಬಹಿರಂಗ ಪಡಿಸಿತು. ಇಲಿನಾಯ್ ಈಶಾನ್ಯ ಮೆಮೋರಿಯಲ್ ಆಸ್ಪತ್ರೆ ಪ್ರಾಯೋಜಿತ 'ನಿದ್ರಾಹೀನತೆ ನಿವಾರಣೆ' ಕಾರ್ಯಕ್ರಮದ ನಿರ್ದೇಶಕಿ ಭಾರತೀಯ ಮೂಲದ ರಮಾದೇವಿ ಗೌರಿನೇನಿ ಅವರು ತೀವ್ರ ನಿದ್ರಾಹೀನತೆಯಿಂದ ಬಳಲುತ್ತಿದ್ದ 25 ಮತ್ತು 45 ವಯೋಮಾನದ ಹನ್ನೊಂದು ಮಂದಿಯನ್ನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಹನ್ನೊಂದು ಮಂದಿಯನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಮಾಹಿತಿ ಸಂಗ್ರಹಿಸಲಾಗಿತ್ತು. ಮೊದಲ ಗುಂಪನ್ನು ಕ್ರಿಯಾ ಯೋಗಕ್ಕೆ (ಧ್ಯಾನ) ಅಳವಡಿಸಲಾಗಿತ್ತು. ಆಂತರಿಕ ಗಮನದ ಮೇಲೆ ಕೇಂದ್ರೀಕರಿಸಿ ಮನಸ್ಸಿನ ಒತ್ತಡವನ್ನು ಕಡಿತಗೊಳಿಸುವ ಪ್ರಯತ್ನ ಮಾಡಲಾಯಿತು. ಇನ್ನೊಂದು ಗುಂಪಿಗೆ ಆರೋಗ್ಯ ಶಿಕ್ಷಣ ನೀಡಲಾಯಿತು. ಈ ವಿಭಾಗದಲ್ಲಿ ತಮ್ಮ ಆರೋಗ್ಯವನ್ನು ವ್ಯಾಯಾಮದ ಮೂಲಕ ಹೇಗೆ ಸರಿಪಡಿಸಿಕೊಳ್ಳಬೇಕು, ದೇಹದ ತೂಕ ಇಳಿಸಿಕೊಳ್ಳುವುದು, ಒತ್ತಡ ನಿರ್ವಹಣೆ ಮಾಡಿಕೊಳ್ಳಬಹುದು ಎಂಬ ಕುರಿತು ಮಾಹಿತಿ ನೀಡಲಾಯಿತು. ಪ್ರಯೋಗದ ನಂತರ ಎರಡೂ ವಿಭಾಗಗಳಲ್ಲಿನ ವ್ಯಕ್ತಿಗಳಲ್ಲಿ ಉಂಟಾದ ಪರಿಣಾಮಗಳನ್ನು ದಾಖಲಿಸಲಾಯಿತು. ಕೆಲವು ಮಾನದಂಡಗಳ ಪ್ರಕಾರ (ನಿದ್ರೆ ಮಾಡುವ ಸಮಯ, ಎಚ್ಚರವಾಗುವ ಸಮಯ ಹಾಗೂ ಸಾಮರ್ಥ್ಯ) ಪರಾಮರ್ಶಿಸಿದಾಗ ಕ್ರಿಯಾ ಯೋಗಕ್ಕೆ ಒಳಪಟ್ಟ ಗುಂಪಿನವರಲ್ಲಿ ನಿದ್ರಾ ಸಾಮರ್ಥ್ಯ ಹಾಗೂ ಗುಣಮಟ್ಟ ಸುಧಾರಣೆಯಾಗಿರುವುದು ಕಂಡುಬಂದಿತು. ಎಂದು ಆಂಧ್ರಪ್ರದೇಶದ ಕರ್ನೂಲ್ ಮೆಡಿಕಲ್ ಕಾಲೇಜಿನಲ್ಲಿ ಓದಿ ಅಮೆರಿಕಾದಲ್ಲಿ ನೆಲೆಸಿರುವ ಡಾ.ರಮಾದೇವಿ ಗೌರಿನೇನಿ ತಿಳಿಸಿದರು.
2009: ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಕೈಲಾಸ ಪರ್ವತ ಮತ್ತು ಮಾನಸ ಸರೋವರಕ್ಕೆ ಪ್ರವಾಸ ಹೊರಟ್ದಿದ ಕನಿಷ್ಠ ಹತ್ತು ಭಾರತೀಯ ಯಾತ್ರಾತ್ರಿಗಳು ಮೃತರಾದರು.
2009: ಉಭಯಗಾನ ವಿಶಾರದ, ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾಗಿದ್ದ ಸೊರಬ ಪಟ್ಟಣದ ಪಂಡಿತ್ ಬಿ. ನಾರಾಯಣಪ್ಪ (78) ಹೃದಯಾಘಾತದಿಂದ ನಿಧನರಾದರು. ಗಾನ ವಿಶಾರದ ಗುರುಶಾಂತ ಗವಾಯಿಗಳಿಂದ ಸಂಗೀತ ಕಲಿತಿದ್ದ ನಾರಾಯಣಪ್ಪ ಬಹುಮುಖ ಪ್ರತಿಭೆಯ ವ್ಯಕ್ತಿ. ಗಿಟಾರ್, ವಯೋಲಿನ್, ವಿಚಿತ್ರ ವೀಣೆ, ತಬಲಾ, ಹಾರ್ಮೋನಿಯಂ ಹಾಗೂ ಜಲತರಂಗ ವಾದನದಲ್ಲೂ ಪರಿಣತರಾಗಿದ್ದರು. ಕಲಿತದ್ದು ಕೇವಲ 10ನೇ ತರಗತಿಯಾದರೂ, ರಾಜ್ಯಾದ್ಯಂತ ನೂರಾರು ಕಾರ್ಯಕ್ರಮ ನೀಡಿದ್ದರು. ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯಿಂದ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಒಳಗೊಂಡಂತೆ ಸಂಗೀತ ಸುಧಾಕರ, ಗಾನ ಕೋಗಿಲೆ, ಗಾನ ವಿಶಾರದ, ಸಂಗೀತ ಕಲಾನಿಧಿ ಮೊದಲಾದ ಬಿರುದುಗಳನ್ನು ಪಡೆದಿದ್ದರು. ಸೊರಬ ಸಂಗೀತ ಸೇವಾ ಸಮಿತಿಯ ಸ್ಥಾಪಕರೂ ಆಗಿದ್ದ ಅವರು, 1964ರಿಂದ ಪ್ರತಿವರ್ಷ ಪಟ್ಟಣದಲ್ಲಿ ಗುರುವಿನ ಸ್ಮರಣಾರ್ಥ ಸಂಗೀತೋತ್ಸವ ನಡೆಸಿಕೊಂಡು ಬರುತ್ತಿದ್ದರು. 2006ರಲ್ಲಿ ತಮ್ಮ ಮನೆಯಲ್ಲಿಯೇ 'ನಾದ ನಿಧಿ' ಸಂಸ್ಥೆ ಸ್ಥಾಪಿಸಿ ಉಚಿತ ಗಾಯನ, ವಾದನ ತರಬೇತಿ ಆರಂಭಿಸಿದ್ದರು. ಅಪೂರ್ವ ಸಂಗೀತ ವಾದ್ಯ, ಗ್ರಂಥಗಳನ್ನು ಸಂಗ್ರಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು..
2009: ಉತ್ತರ ಶ್ರೀಲಂಕಾದಲ್ಲಿ ಸ್ಥಳಾಂತರಗೊಂಡು ನಿರಾಶ್ರಿತರ ಶಿಬಿರದಲ್ಲಿ ನೆಲೆಸಿದ ತಮಿಳರು ಹಾಗೂ ಮುಸ್ಲಿಮ್ ನಾಗರಿಕರಿಗೆ ಆಗಸ್ಟಿನಲ್ಲಿ ಜಾಫ್ನಾ ಹಾಗೂ ವಾವುನಿಯಾದಲ್ಲಿ ನಡೆಯುವ ಸ್ಥಳೀಯ ಚುನಾವಣೆಗಳಲ್ಲಿ ಮತದಾನ ಮಾಡಲು ಶ್ರೀಲಂಕಾ ಸರ್ಕಾರ ಅವಕಾಶ ನೀಡಿತು. ಮೂರು ದಶಕಗಳ ಎಲ್‌ಟಿಟಿಇ ಹಾಗೂ ಲಂಕಾ ಪಡೆಗಳ ನಡುವಿನ ಘರ್ಷಣೆಯಿಂದಾಗಿ ಸ್ಥಳಾಂತರಗೊಂಡಿದ್ದ ನಾಗರಿಕರು ಈ ಬಾರಿ ನಡೆಯುವ ಸ್ಥಳೀಯ ಚುನಾವಣೆಗಳಲ್ಲಿ ಮತಚಲಾಯಿಸುವ ಹಕ್ಕನ್ನು ಪಡೆದರು. ಈ ಮೊದಲು ಇವರಿಗೆ ಸಂಸತ್ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕನ್ನು ಮಾತ್ರ ನೀಡಲಾಗಿತ್ತು.
2009: ಕಡಿಮೆ ವೆಚ್ಚದ ಶೌಚಾಲಯ ತಂತ್ರಜ್ಞಾನವನ್ನು ಜನಪ್ರಿಯಗೊಳಿಸಿದ ಭಾರತದ ಮೂಲದ 'ಸುಲಭ್ ಇಂಟರ್ನ್ಯಾಷನಲ್' ಸಂಸ್ಥೆಯನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ನವೀಕರಿಸುವ ಇಂಧನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. 'ಅಂತರ್‌ಸರ್ಕಾರಿ ನವೀಕರಿಸುವ ಇಂಧನ ಸಂಸ್ಥೆ (ಐಆರ್‌ಇಒ)'ಯು ಇಲ್ಲಿನ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ 'ಸುಲಭ್ ಇಂಟರ್‌ನ್ಯಾಷನಲ್' ಸಂಸ್ಥೆಯ ಅಧ್ಯಕ್ಷ ಡಾ.ಬಿಂದೇಶ್ವರ ಪಾಠಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದು. ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮೂಲಕ ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ನೈರ್ಮಲ್ಯ ಸುಧಾರಣೆಗೆ ಒತ್ತು ನೀಡಿದ್ದಕ್ಕಾಗಿ ಪಾಠಕ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು 'ಐಆರ್‌ಇಒ'ದ ಪ್ರಧಾನ ಕಾರ್ಯದರ್ಶಿ ರಾಬಿನ್ ಸನ್ ಮೆಲೊ ಅವರು ಹೇಳಿದರು. ಪಾಠಕ್ ಅವರ ತಂಡ ಎರಡು ಗುಂಡಿಗಳಲ್ಲಿ ಶೌಚಾಲಯದ ಮಾನವ ತ್ಯಾಜ್ಯವನ್ನು ಸಂಗ್ರಹಿಸಿ ಅದರಿಂದ ಬಯೋಗ್ಯಾಸ್ ಉತ್ಪಾದಿಸುವ ಕಡಿಮೆ ವೆಚ್ಚದ ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿತ್ತು. ಆರೋಗ್ಯಕ್ಕೆ ಮಾರಕವಾದ 'ಮಾನವ ತಾಜ್ಯ'ವನ್ನು ಬಳಸಿ ಬಯೋ ಗ್ಯಾಸ್ ಉತ್ಪಾದಿಸುವ ತಂತ್ರಜ್ಞಾನ ನೈರ್ಮಲ್ಯದ ಕ್ಷೇತ್ರದಲ್ಲಿನ ಪ್ರಮುಖ ಹೆಜ್ಜೆ ಎಂದು ಗುರುತಿಸಲಾಯಿತು.
2009: ನೈಋತ್ಯ ಪಾಕಿಸ್ಥಾನದ ಪೇಷಾವರದ ಜನಪ್ರಿಯ ಫೈವ್ ಸ್ಟಾರ್ ಹೋಟೆಲಿನ ಕುಸಿದ ಕಟ್ಟಡದ ವಸ್ತುಗಳ ಅಡಿಯಲ್ಲಿ ಸಿಲುಕಿದ್ದ ಐದು ಶವಗಳು ಪತ್ತೆಯಾಗುವುದರೊಂದಿಗೆ ಹೋಟೆಲಿನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸತ್ತವರ ಒಟ್ಟು ಸಂಖ್ಯೆ 16ಕ್ಕೆ ಏರಿತು.
2008: ಬ್ಯಾಂಕಾಕಿನಲ್ಲಿ ಹಿಂದಿನ ರಾತ್ರಿ ನಡೆದ ಒಂಬತ್ತನೇ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಟಿಸಿರುವ `ಚಕ್ ದೆ ಇಂಡಿಯಾ' ಚಿತ್ರ 9 ಪ್ರಶಸ್ತಿಗಳನ್ನು ಬಾಚಿಕೊಂಡಿತು. ಧರ್ಮ ಮತ್ತು ವರ್ಗ ಸಂಘರ್ಷದ ಕಥಾವಸ್ತುವನ್ನು ಹೊಂದಿದ ಕ್ರೀಡಾಚಿತ್ರದಲ್ಲಿ ಹಾಕಿ ತರಬೇತುದಾರನ ಪಾತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ ಶಾರುಖ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತು.
2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರನ್ನು ಮರಳಿ ಭೂಮಿಗೆ ಕರೆತರುವ ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಗಗನಕ್ಕೆ ನೆಗೆಯಿತು. ಇದರೊಂದಿಗೆ ಆರು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣವಾಸಿಯಾದ ಸುನೀತಾ ವಿಲಿಯಮ್ಸ್ ಮತ್ತು ಇತರ ಗಗನಯಾನಿಗಳ ಮರುಪಯಣಕ್ಕೆ ದಿನಗಣನೆ ಆರಂಭವಾಯಿತು.
2007: ವಿಮಾನ ಪ್ರಯಾಣದ ಕಾಲದಲ್ಲಿ ಸಸ್ಯಾಹಾರದ ಬದಲು ಮಾಂಸಾಹಾರ (ಕೋಳಿಮಾಂಸ) ನೀಡಿ ಮಾನಸಿಕ ಯಾತನೆ, ಆಘಾತ ಮತ್ತು ಖಿನ್ನತೆಗೆ ಒಳಗಾಗುವಂತೆ ಮಾಡಿದ್ದಕ್ಕಾಗಿ ಬ್ರಾಹ್ಮಣ ಪ್ರಯಾಣಿಕ ಅರವಿಂದ ಶರ್ಮಾ ಅವರಿಗೆ 20 ಸಾವಿರ ರಿಂಗಿಟ್ (ಸುಮಾರು 2.35 ಲಕ್ಷ ರೂಪಾಯಿ) ಪರಿಹಾರ ನೀಡುವಂತೆ ಕ್ವಾಲಾಲಂಪುರದ ನ್ಯಾಯಾಲಯವು ಮಲೇಷಿಯಾ ಏರ್ ಲೈನ್ಸ್ ಕಂಪೆನಿಗೆ ಆದೇಶ ನೀಡಿತು.
2007: ಬುದ್ಧ ಜಯಂತಿ ಅಂಗವಾಗಿ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯು ಏರ್ಪಡಿಸಿದ್ದ `ಬುದ್ಧನೆಡೆಗೆ ಮರಳಿ ಮನೆಗೆ' ಧಮ್ಮ ದೀಕ್ಷಾ ಸಮಾವೇಶದಲ್ಲಿ ಸಹಸ್ರಾರು ದಲಿತರು ಬೌದ್ಧ ಧರ್ಮ ಸ್ವೀಕರಿಸಿದರು.
2007: ಬೊಪೋರ್ಸ್ ಫಿರಂಗಿ ಖರೀದಿ ವಹಿವಾಟಿನಲ್ಲಿ ಬಹುಕೋಟಿ ಲಂಚ ಪಡೆದ ಆರೋಪಕ್ಕೆ ಒಳಗಾದ ಇಟಲಿ ವ್ಯಾಪಾರಿ ಒಟ್ಟಾವಿಯೋ ಕ್ವಟ್ರೋಚಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅರ್ಜೆಂಟೀನಾದ ಎಲ್ವೊರಡೊ ನ್ಯಾಯಾಲಯ ನಿರಾಕರಿಸಿತು.
2007 ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದ ಮಾಜಿ ಕ್ರಿಕೆಟ್ ಟೆಸ್ಟ್ ಆಟಗಾರ ಮಣಿಂದರ್ ಸಿಂಗ್ ಅವರು ಎರಡೂ ಕೈಗಳ ಮಣಿಕಟ್ಟುಗಳನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವದೆಹಲಿಯಲ್ಲಿ ಘಟಿಸಿತು. 1.5 ಗ್ರಾಂ ಕೊಕೇನ್ ಹೊಂದಿದ್ದ ಆರೋಪದಲ್ಲಿ ಅವರನ್ನು ಮಾದಕ ವಸ್ತು ವಿರೋಧಿ ಪೊಲೀಸರು ಮೇ 22ರಂದು ಬಂಧಿಸಿದ್ದರು.
2007: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಬಾನಾ ಆಜ್ಮಿ ಹಾಗೂ ಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರಿಗೆ ಯಾರ್ಕ್ ಶೈರಿನ ಲೀಡ್ಸ್ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
2007: ಗಣ್ಯ ಸಂಸ್ಕೃತ ವಿದ್ವಾಂಸರಲ್ಲಿ ಒಬ್ಬರಾದ ಮೈಸೂರಿನ ಜಿ.ಎನ್. ಚಕ್ರವರ್ತಿ ಅವರನ್ನು 2006-07ನೇ ಸಾಲಿನ ಸೇಡಿಯಾಪು ಕೃಷ್ಣಭಟ್ಟ ಸ್ಮಾರಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣಭಟ್ಟ ಉಡುಪಿಯಲ್ಲಿ ಪ್ರಕಟಿಸಿದರು.
2006: ಅಸ್ವಸ್ಥರಾಗಿ ಬೆಂಗಳೂರಿನ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಜನಪದ ಕಲಾವಿದ ಡಾ. ಎಸ್.ಕೆ. ಕರೀಂಖಾನ್ (84) ಅವರಿಗೆ ಬೆಂಗಳೂರಿನ ಮೇಯರ್ ಮಮ್ತಾಜ್ ಬೇಗಂ ಅವರು ಆಸ್ಪತ್ರೆಯಲ್ಲೇ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.
2006: ಜರ್ಮನಿಯ ಮ್ಯೂನಿಕ್ಕಿನಲ್ಲಿ ಸಾಂಪ್ರದಾಯಿಕ ವಾದ್ಯ, ಜನಪದ ಹಾಡು ಮತ್ತು ನೃತ್ಯಗಳ ಮನಸೂರೆಗೊಳ್ಳುವ ಸಂಭ್ರಮದ ನಡುವೆ 18ನೇ ಫುಟ್ಬಾಲ್ ವಿಶ್ವಕಪ್ ಆರಂಭವಾಯಿತು. 32 ದೇಶಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡವು.
2006: ಐಜೆಟಿ ವಿಮಾನ ಅತಿ ಹೆಚ್ಚಿನ ಉಷ್ಣಾಂಶದಲ್ಲಿ ಸುಸೂತ್ರವಾಗಿ ಹಾರಾಟ ನಡೆಸುವ ಮೂಲಕ ವಿಮಾನಯಾನ ದಾಖಲೆ ನಿರ್ಮಾಣ ಮಾಡಿತು. ಎಚ್.ಎ.ಎಲ್. ತಯಾರಿಸಿರುವ ಎರಡು ಮಾದರಿಯ ಈ ವಿಮಾನಗಳು ಎಲ್ಲ ವಾತಾವರಣದಲ್ಲೂ ಪರೀಕ್ಷಾರ್ಥ ಹಾರಾಟ ನಡೆಸಿ ಮನ್ನಣೆ ಪಡೆದವು. ನಾಗಪುರದಲ್ಲಿ ಈ ವಿಮಾನಗಳನ್ನು ಮೂರು ಗಂಟೆ ಕಾಲ 13 ರೀತಿಯ ಪರೀಕ್ಷೆಗೆ ಒಳಪಡಿಸಲಾಯಿತು. 2003ರಲ್ಲಿ ಹಾರಾಟ ಆರಂಭಿಸಿದ ಐಜೆಟಿ 2008ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆ ಆಗಲಿದೆ.
2001: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರಿಗೆ ಮೂರು ವರ್ಷದ ಸೆರೆವಾಸ ಶಿಕ್ಷೆ ವಿಧಿಸಿತು.
1982: ಹಠಾತ್ತನೆ ಬಂದ ಭಾರಿ ಮಳೆಯಿಂದಾಗಿ ಉಡುಪಿಯ ತಗ್ಗು ಪ್ರದೇಶಗಳಲ್ಲಿ ಜಲ ಪ್ರಳಯವಾಗಿ ನೂರಾರು ಮನೆಗಳು ಕುಸಿದು 15 ಜನ ಮೃತರಾದರು.
1959: ಅಣ್ವಸ್ತ್ರ ಹೊತ್ತ ಅಮೆರಿಕದ ಮೊತ್ತ ಮೊದಲ ಪೋಲಾರಿಸ್ ಜಲಾಂತರ್ಗಾಮಿಯು ಜಾರ್ಜ್ ವಾಷಿಂಗ್ಟನ್ ನೌಕಾಪಡೆಗೆ ಸೇರ್ಪಡೆಯಾಯಿತು.
1954: ಸಾಹಿತಿ ರೇಖಾ ಕಾಕಂಡಕಿ ಜನನ.
1954: ಶಾಂತಾ ಇಮ್ರಾಪುರ ಜನನ.
1950: ಸಾಹಿತಿ ಅರುಂಧತಿ ರಮೇಶ್ ಜನನ.
1950: ವೃತ್ತಿ ರಂಗಭೂಮಿಯಿಂದ ಟಿ.ವಿ. ಧಾರಾವಾಹಿಯವರೆಗೆ ಅಭಿನಯದಲ್ಲಿ ವಿಶಿಷ್ಟ ಸಾಧನೆ ಮಾಡಿದ ಬಿ. ಜಯಶ್ರೀ ಅವರು ಬಸವರಾಜ್ - ಜಿ.ವಿ. ಮಾಲತಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1949: ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತೆ ಕಿರಣ್ ಬೇಡಿ ಜನ್ಮದಿನ. ಭಾರತೀಯ ಪೊಲೀಸ್ ಸೇವೆಯನ್ನು ಸೇರಿದ ಮೊತ್ತ ಮೊದಲ ಮಹಿಳೆ ಈಕೆ.
1946: ಸಿಯಾಮಿನ ಚಕ್ರಿ ರಾಜವಂಶದ ದೊರೆ `8ನೇ ರಾಮ' ಎಂದೇ ಖ್ಯಾತರಾದ ಆನಂದ ಮಹಿದೋಲ್ (1925-46) ತಮ್ಮ ಹಾಸಿಗೆಯಲ್ಲಿ ಗುಂಡೇಟಿನಿಂದ ಮೃತರಾಗಿ ಬಿದ್ದಿದ್ದುದು ಪತ್ತೆಯಾಯಿತು. ಅವರ ನಿಗೂಢ ಮರಣಕ್ಕೆ ಕಾರಣ ಏನೆಂಬುದು ಪತ್ತೆಯಾಗಲೇ ಇಲ್ಲ. ಈ ಕೊಲೆಯ ವಿವಾದ ಥೈಲ್ಯಾಂಡಿನ ಸಾಂವಿಧಾನಿಕ ಸರ್ಕಾರವನ್ನು ದುರ್ಬಲಗೊಳಿಸಿ, ಸೇನಾ ಆಡಳಿತದ ಪುನರಾಗಮನಕ್ಕೆ ನೆರವಾಯಿತು.
1942: ಸಾಹಿತಿ ಕೆ.ಎನ್. ಭಗವಾನ್ ಜನನ.
1938: ಸಾಹಿತಿ ಗುರುಮೂರ್ತಿ ಪೆಂಡಕೂರು ಅವರು ವಿರೂಪಣ್ಣ- ರಾಮಕ್ಕ ದಂಪತಿಯ ಪುತ್ರನಾಗಿ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯದ ಮುಳುಗಡೆಯಾದ ದೇವರ ಕೆರೆಯಲ್ಲಿ ಜನಿಸಿದರು.
1936: ಸಾಹಿತಿ ಎಸ್. ಕೆ. ಜೋಶಿ ಜನನ.
1934: ವಾಲ್ಟ್ ಡಿಸ್ನಿ ಅವರ `ದಿ ವೈಸ್ ಲಿಟ್ಲ್ ಹೆನ್' ನಲ್ಲಿ `ಡೊನಾಲ್ಡ್ ಡಕ್' ಜನ್ಮ ತಳೆಯಿತು.
1931: ನಂದಿನಿ ಸತ್ಪತಿ ಜನ್ಮದಿನ. ಇವರು ರಾಜಕಾರಣಿ ಹಾಗೂ ಒರಿಸ್ಸಾದ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿ.
1898: ಬ್ರಿಟನ್ ಚೀನಾದಿಂದ ಹಾಂಕಾಂಗನ್ನು 99 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆಯಿತು. 1997ರಲ್ಲಿ ಅದನ್ನು ಚೀನಾಕ್ಕೆ ಹಿಂದಿರುಗಿಸಲಾಯಿತು.
1812: ಜೊಹಾನ್ ಗೊಟ್ ಫ್ರೀಡ್ ಗ್ಯಾಲೆ (1812-1910) ಜನ್ಮದಿನ. ಜರ್ಮನ್ ಖಗೋಳ ತಜ್ಞನಾದ ಈತ ನೆಪ್ಚೂನ್ ಗ್ರಹವನ್ನು ಮೊತ್ತ ಮೊದಲಿಗೆ ಪತ್ತೆ ಹಚ್ಚಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment