Saturday, June 1, 2019

ಇಂದಿನ ಇತಿಹಾಸ History Today ಜೂನ್ 01

ಇಂದಿನ ಇತಿಹಾಸ History Today ಜೂನ್ 01
2019: ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ನಾಯಕಿಯಾಗಿ ಈದಿನ ಪುನರಾಯ್ಕೆಗೊಂಡ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರುಪಕ್ಷವು ಮತ್ತೆ ಮೇಲೇಳುತ್ತದೆ ಎಂಬುದಾಗಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ಸಂಸದರನ್ನು ಹುರಿದುಂಬಿಸಿದರು. ೫೪೨ ಸದಸ್ಯ ಬಲದ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ೩೫೨ ಸ್ಥಾನಗಳೊಂದಿಗೆ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮರಳಿ ಅಧಿಕಾರಕ್ಕೆ ಏರಿದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆ ಪ್ರಕಟಿಸಿದ ಒಂದು ವಾರದ ಬಳಿಕ ನಾಯಕನ ಆಯ್ಕೆಗಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ನಡೆಯಿತು. ಜೂನ್ ೧೭ರಂದು ಆರಂಭವಾಗಲಿರುವ ಸಂಸತ್ ಅಧಿವೇಶನಕ್ಕೆ ಮುಂಚಿತವಾಗಿ ಶನಿವಾರ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಲೋಕಸಭಾ ಸದಸ್ಯರ ಸಭೆ ನಡೆಯಿತು. ಕಾಂಗ್ರೆಸ್ ರಾಜ್ಯಸಭಾ ಸದಸ್ಯರು ಮತ್ತು ೫೨ ಮಂದಿ ಹೊಸದಾಗಿ ಆಯ್ಕೆಯಾದ ಸಂಸತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸೋನಿಯಾಗಾಂಧಿಯವರು ಉಭಯ ಸದನಗಳ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಸಂಸತ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಪಕ್ಷವನ್ನು ಬಲಪಡಿಸಲು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನುಡಿದರು. ಬಿಕ್ಕಟ್ಟಿನ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಹಲವಾರು ಸವಾಲುಗಳನ್ನು  ಎದುರಿಸುತ್ತಿದೆ ಎಂಬುದನ್ನು ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕೆಲವು ದಿನಗಳ ಹಿಂದೆ ಸಭೆ ಸೇರಿ ಮುಂದಿನ ಮಾರ್ಗದ ಬಗ್ಗೆ ಪರಿಶೀಲಿಸಿದೆ. ಪಕ್ಷವನ್ನು ಬಲಪಡಿಸಲು ಹಲವಾರು ನಿರ್ಣಾಯಕ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಸೋನಿಯಾ ನುಡಿದರು. ಕಾಂಗ್ರೆಸ್ ಪಕ್ಷವು ಹಿಂದೆಂದೂ ಕಾಣದ ಬಿಕ್ಕಟ್ಟನ್ನು ಎದುರಿಸುತ್ತಿರುವುದು ಹೌದು ಎಂಬುದಾಗಿ ಒಪ್ಪಿಕೊಂಡ ಸೋನಿಯಾ ಗಾಂಧಿ, ’ ಸವಾಲುಗಳಲ್ಲೇ ಅಗಾಧ ಅವಕಾಶಗಳು ಕೂಡಾ ಇವೆ ಎಂದು ಹೇಳಿದರು. ಹಿಂದೆಂದೂ ಕಾಣದ ಬಿಕ್ಕಟ್ಟಿನಲ್ಲೇ ಅಗಾಧ ಅವಕಾಶಗಳು ಕೂಡಾ ಇವೆ. ಅದನ್ನು ವಿನಯಪೂರ್ವಕವಾಗಿ ಗ್ರಹಿಸಿ, ಆತ್ಮವಿಶ್ವಾಸದೊಂದಿಗೆ ನಮ್ಮ ಸೋಲಿನ ಪಾಠಗಳನ್ನು ಕಲಿತುಕೊಳ್ಳಬೇಕು. ನಾವು ಜನಾದೇಶವನ್ನು ಗೌರವಿಸಬೇಕು ಮತ್ತು  ನಮ್ಮನ್ನು ನಾವು ಸುಧಾರಿಸಬೇಕು ಎಂದು ಭಾರತದ ಜನತೆ ಬಯಸುತ್ತದೆ ಎಂದು ಸೋನಿಯಾ ನುಡಿದರು. ಮುಂದಿರುವ ಸವಾಲುಗಳ ಬಗ್ಗೆ ಎದೆಗುಂದದೆ ಅವುಗಳನ್ನು ಎದುರಿಸುವ ಮೂಲಕ ನಾವು ಮತ್ತೆ ಮೇಲೇಳಬೇಕು ಎಂದು ಅವರು ನುಡಿದರುಪರಾಭವದ ಹಿನ್ನೆಲೆಯಲ್ಲಿ ಕಾಂಗೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೊಟ್ಟಿರುವ ರಾಜೀನಾಮೆಯಿಂದ ಉದ್ಭವಿಸಿರುವ ಬಿಕ್ಕಟ್ಟು ಮುಂದುವರೆದಿರುವಾಗಲೇ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ನಡೆಯಿತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿ ಡಬ್ಲ್ಬೂಸಿ) ರಾಹುಲ್ ಗಾಂಧಿಯವರು ಮೇ ೨೫ರಂದು ಪ್ರಕಟಿಸಿದ ರಾಜೀನಾಮೆ ಪ್ರಸ್ತಾವವನ್ನು ತಿರಸ್ಕರಿಸಿದೆ ಮತ್ತು ರಾಹುಲ್ ಗಾಂಧಿಯವರು ರಾಜೀನಾಮೆ ವಾಪಸಿಗೆ ನಿರಾಕರಿಸಿದ್ದರೂ, ಪಕ್ಷವನ್ನು ಸಮಗ್ರವಾಗಿ ಮರುಸಂಘಟಿಸುವ ಮುಕ್ತ ಅಧಿಕಾರವನ್ನು ಅವರಿಗೆ ನೀಡಿದೆ. ರಾಹುಲ್ ಗಾಂಧಿಯವರನ್ನು ಅವರ ಬಿರುಸಿನ ಹಾಗೂ ನಿರಂತರ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿಯವರೂ ಶಾಘಿಸಿದರು. ಕಾಂಗ್ರೆಸ್ ಅಧ್ಯಕ್ಷರಾಗಿ, ಅವರು ಹಗಲು ಮತ್ತು ರಾತ್ರಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರು. ತಮ್ಮ ನಿರ್ಭೀತ ನಾಯಕತ್ವವನ್ನು ಅವರು ಪ್ರದರ್ಶಿಸಿದರು. ಮೋದಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ರೈತರು, ಕಾರ್ಮಿಕರು, ವರ್ತಕರು ಮತ್ತು ಸಣ್ಣ ಉದ್ಯಮಿಗಳು, ಮಹಿಳೆಯುರು, ಯುವಕರು, ಮಹಿಳೆಯರು ಮತ್ತು ಸಮಾಜದಲ್ಲಿ ಮೂಲೆಗುಂಪಾದ  ವರ್ಗಗಳಿಗೆ ಆಗಿರುವ ಅನ್ಯಾಯಗಳ ಕಡೆಗೆ ಗಮನ ಸೆಳೆದರು ಎಂದು ಸೋನಿಯಾ ಗಾಂಧಿ ಹೇಳಿದರು. ರಾಹುಲ್ ಗಾಂಧಿಯವರು ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪುನರುಜ್ಜೀವನ ನೀಡಿದರು ಮತ್ತು ಕೆಲವ ದಿನಗಳ ಹಿಂದೆ ರಾಜ್ಯಗಳಲ್ಲಿ ಪಕ್ಷಕ್ಕೆ ವಿಜಯವನ್ನು ತಂದುಕೊಟ್ಟರು. ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ದೇಶಾದ್ಯಂತ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ಮತದಾರರಿಂದ ಗೌರವ ಹಾಗೂ ಪ್ರೀತಿಯನ್ನು  ಸಂಪಾದಿಸಿದ್ದಾರೆ ಎಂದು ಸೋನಿಯಾ ಗಾಂಧಿ ನುಡಿದರು. ರಾಹುಲ್ ಗಾಂಧಿಯವರು ತಮ್ಮ ಪಟ್ಟನ್ನು ಸಡಿಲಿಸಿ ತಮ್ಮ ಪಕ್ಷವನ್ನು ಮುನ್ನಡೆಸಲಿದ್ದಾರೆಯೇ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಮಧ್ಯೆ ದೇಶಾದ್ಯಂತ ಹಲವಾರು ನಗರಗಳಲ್ಲಿ ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ ಮರುಚಿಂತನೆ ಮಾಡುವಂತೆ ಕಾರ್ಯಕರ್ತರು ಪ್ರದರ್ಶನಗಳನ್ನು ನಡೆಸುತ್ತಿದ್ದಾರೆ.
ಮೇ ೨೫ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸೋನಿಯಾಗಾಂಧಿಯವರು ಪಕ್ಷದ ನಾಯಕರ ಜೊತೆಗೆ ಸಂವಹನ ನಡೆಸಿದ್ದು ಇದೇ ಪ್ರಥಮ.

2019: ವಾಷಿಂಗ್ಟನ್: ಭಾರತದ ಮಾರುಕಟ್ಟೆಗಳಿಗೆ ಅಮರಿಕದ ನ್ಯಾಯಸಮ್ಮತ ಪ್ರವೇಶಕ್ಕೆ ಅವಕಾಶ ಒದಗಿಸುವುದಾಗಿ ಭರವಸೆ ಲಭಿಸದ ಹಿನ್ನೆಲೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೀಡಲಾಗುವ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಭಾರತಕ್ಕೆ ಜೂನ್ ೫ರಿಂದ ರದ್ದು ಪಡಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದ್ದು, ಭಾರತವು ನಿರ್ಧಾರವನ್ನುದುರದೃಷ್ಟಕರ ಎಂಬುದಾಗಿ ಬಣ್ಣಿಸಿತು. ಭಾರತದ ಮಾರುಕಟ್ಟೆಗೆ ನ್ಯಾಯೋಚಿತ ಪ್ರವೇಶ ಕಲ್ಲಿಸುವ ಬಗ್ಗೆ ಭಾರತ ಭರವಸೆ ಕೊಟ್ಟಿಲ್ಲ ಎಂಬುದಾಗಿ ಹೇಳಿರುವ ಟ್ರಂಪ್ ಆಡಳಿತ, ಹಿನ್ನೆಲೆಯಲ್ಲಿ ಭಾರತದಫಲಾನುಭವಿ ಅಭಿವೃದ್ಧಿಶೀಲ ರಾಷ್ಟ್ಟ ಸ್ಥಾನಮಾನವನ್ನು ೨೦೧೯ರ ಜೂನ್ ೫ರಿಂದ ಅನ್ವಯವಾಗುವಂತೆ ರದ್ದು ಪಡಿಸಲಾಗುವುದು ಎಂದು ಪ್ರಕಟಣೆ ಒಂದರಲ್ಲಿ ತಿಳಿಸಿತು. ಇಂತಹ ಕ್ರಮ ಕೈಗೊಳ್ಳದಂತೆ ಅಮೆರಿಕದ ಹಲವಾರು ಶಾಸನಕರ್ತರು ಮಾಡಿದ ಮನವಿಗಳನ್ನು ನಿರ್ಲಕ್ಷಿಸಿ ಟ್ರಂಪ್ ಆಡಳಿತ ಕ್ರಮ ಕೈಗೊಂಡಿತು. ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಅಮೆರಿಕವು ದೀರ್ಘ ಕಾಲದಿಂದ ಸಾಮಾನ್ಯ ಆದ್ಯತಾ ವ್ಯವಸ್ಥೆಯನ್ನು (ಜಿಎಸ್ಪಿ) ಅಳವಡಿಸಿಕೊಂಡಿದೆ. ವ್ಯವಸ್ಥೆಯ ಅಡಿಯಲ್ಲಿ ಫಲಾನುಭವಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಅಭಿವೃದ್ಧಿ ಸಲುವಾಗಿ ಅವುಗಳ ಸಹಸ್ರಾರು ಉತ್ಪನ್ನಗಳಿಗೆ ಸುಂಕರಹಿತವಾಗಿ ಅಮೆರಿಕದ ಮಾರುಕಟ್ಟೆಗಳಿಗೆ ಪ್ರವೇಶ ಅವಕಾಶ ಕಲ್ಪಿಸಿದೆ. ಭಾರತವು ೨೦೧೭ರಿಂದ ವ್ಯವಸ್ಥೆಯ ಅಡಿಯಲ್ಲಿ ಅತ್ಯಂತ ದೊಡ್ಡ  ಫಲಾನುಭವಿ ರಾಷ್ಟ್ರವಾಗಿತ್ತು. ಜಿಎಸ್ಪಿ ಅಡಿಯಲ್ಲಿ ಭಾರತಕ್ಕೆ ನೀಡಲಾಗಿರುವ ಫಲಾನುಭವಿ ಅಭಿವೃದ್ಧಿಶೀಲ ರಾಷ್ಟ್ರ ಸ್ಥಾನಮಾನವನ್ನು ಕೊನೆಗೊಳಿಸಲು ಅಮೆರಿಕ ಉದ್ದೇಶಿಸಿದೆ ಎಂದು ಟ್ರಂಪ್ ಮಾಚ್ ೪ರಂದು ಪ್ರಕಟಿಸಿದ್ದರು. ಅವರ ೬೦ ದಿನಗಳ ನೋಟಿಸ್ ಅವಧಿ ಮೇ ೩ಕ್ಕೆ ಮುಕ್ತಾಯಗೊಂಡಿತ್ತು. ಅಮೆರಿಕದ ಕಂಪೆನಿಗಳಿಗೆ ವ್ಯಾಪಾರ ವಹಿವಾಟು ನಡೆಸಲು ಭಾರತದ ಮಾರುಕಟ್ಟೆಗಳಲ್ಲಿ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಟ್ರಂಟ್ ಆಡಳಿತ ಆದ್ಯತೆ ನೀಡಿ ಭಾರತದೊಂದಿಗೆ ಮಾತುಕತೆ ನಡೆಸಿತ್ತು ಎಂದು ಹಿರಿಯ ವಿದೇಶಾಂಗ ಇಲಾಖೆ ಅಧಿಕಾರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಹೇಳಿದ್ದರು. ಜಿಎಸ್ಪಿ ಅಡಿಯಲ್ಲಿ ಆಟೋ ಭಾಗಗಳು  ಮತ್ತು ಜವುಳಿ ಉತ್ನನ್ನಗಳು ಸೇರಿದಂತೆ ಸುಮಾರು ,೦೦೦ ಉತ್ಪನ್ನಗಳು ಸುಂಕರಹಿತವಾಗಿ ಅಮೆರಿಕದ ಮಾರುಕಟ್ಟೆಯನ್ನು ಪ್ರವೇಶಿಸಬಹುದಾಗಿತ್ತು. ಅದಕ್ಕೆ ಕಾಂಗ್ರೆಸ್ ವಿಧಿಸಿದ ಅರ್ಹತಾ ಮಾನದಂಡಗಳನ್ನು ಫಲಾನುಭವಿ ಅಭಿವೃದ್ಧಿಶೀಲ ರಾಷ್ಟ್ರಗಳು ಈಡೇರಿಸಬೇಕಾಗಿತ್ತು೨೦೧೭ರಲ್ಲಿ ಜಿಎಸ್ಪಿ ಕಾರ್ಯಕ್ರಮದ ಅತಿದೊಡ್ಡ ಫಲಾನುಭವಿಯಾಗಿದ್ದ ಭಾರತವು ಅಮೆರಿಕಕ್ಕೆ . ಬಿಲಿಯನ್ (೫೭೦ ಕೋಟಿ) ಡಾಲರ್ ಮೌಲ್ಯದ ಉತ್ಪನ್ನಗಳನ್ನು ಅಮೆರಿಕಕ್ಕೆ ಸುಂಕರಹಿತವಾಗಿ ರಫ್ತು ಮಾಡುತ್ತಿತ್ತು. ಟರ್ಕಿ ಕಾರ್ಯಕ್ರಮದಡಿಯ ಐದನೇ ಅತಿದೊಡ್ಡ ಫಲಾನುಭವಿ ರಾಷ್ಟ್ರವಾಗಿದ್ದು . ಬಿಲಿಯನ್ (೧೭೦ ಕೋಟಿ) ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುತ್ತಿತ್ತು ಎಂದು ಕಾಂಗ್ರೆಸ್ಸಿನ ಸಂಶೋಧನಾ ಸೇವೆ ವರದಿ ಜನವರಿಯಲ್ಲಿ ತಿಳಿಸಿತ್ತುಅಮೆರಿಕದ ನಾಗರಿಕರು ಅಥವಾ ಕಾರ್ಪೋರೇಷನ್ಗಳ ಪರವಾಗಿ ಮಧ್ಯಸ್ಥಿಕೆ ವ್ಯವಹಾರಗಳನ್ನು ಗೌರವಿಸುವುದು, ಬಾಲ ಕಾರ್ಮಿಕ ವ್ಯವಸ್ಥೆ ವಿರುದ್ಧ ಹೋರಾಟ, ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಕಾರ್ಮಿಕ ಹಕ್ಕುಗಳನ್ನು ಗೌರವಿಸುವುದು, ಬೌದ್ಧಿಕ ಆಸ್ತಿ ಸಂರಕ್ಷಣೆಗೆ ಪರಿಣಾಮಕಾರಿ ಕ್ರಮ ಮತ್ತು ಅಮರಿಕಕ್ಕೆ ತನ್ನ ಮಾರುಕಟ್ಟೆಗಳಲ್ಲಿ ನ್ಯಾಯೋಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು -ಇತ್ಯಾದಿ ಜಿಎಸ್ಪಿ ಮಾನದಂಡಗಳಲ್ಲಿ ಸೇರಿವೆದುರದೃಷ್ಟಕರ- ಭಾರತ: ಭಾರತದ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ರದ್ದು ಪಡಿಸುವ ಅಮೆರಿಕದ ನಿರ್ಧಾರದ ಬಗ್ಗೆ ಭ್ರಮ ನಿರಸನ ವ್ಯಕ್ತಪಡಿಸಿದ ಭಾರತ, ’ಮೈತ್ರಿಯುತವಾಗಿ ಉಭಯರಿಗೂ ಸಮ್ಮತವಾಗುವಂತೆ ವಿಷಯ ಇತ್ಯರ್ಥ ಪಡಿಸುವ ಭರವಸೆಯ ಹೊರತಾಗಿಯೂ ಅಮೆರಿಕದ ಆಡಳಿತ ಕ್ರಮ ಕೈಗೊಂಡಿರುವುದು ದುರದೃಷ್ಟಕರ ಎಂದು ಹೇಳಿತು.  ‘ಯಾವುದೇ ಬಾಂಧವ್ಯ, ನಿರ್ದಿಷ್ಟವಾಗಿ ಆರ್ಥಿಕ ಬಾಂಧವ್ಯವಗಳ ಕ್ಷೇತ್ರದಲ್ಲಿ ಕಾಲ ಕಾಲಕ್ಕೆ ಪರಸ್ಪರ ಸಮ್ಮತಿಯೊಂದಿಗೆ ಇತ್ಯರ್ಥಪಡಿಸಬಹುದಾದ ವಿಷಯಗಳನ್ನು ಹೊಂದಿರುತ್ತದೆ. ನಾವು ಇಂತಹ ವಿಷಯಗಳನ್ನು ನಿಗದಿತ ಪ್ರಕ್ರಿಯೆಯ ಅಡಿಯಲ್ಲಿ ಪರಿಶೀಲಿಸಿ, ಅಮೆರಿಕದ ಜೊತೆಗಿನ ಜನರ ನಡುವಣ ಮತ್ತು ಆರ್ಥಿಕ ಬಾಂಧವ್ಯ ಪ್ರಬಲವಾಗಿ ಮುಂದುವರೆಯುವಂತೆ ಮಾಡುವ ಯತ್ನವನ್ನು ನಾವು ಮುಂದುವರೆಸುತ್ತೇವೆ ಎಂದು ವಾಣಿಜ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿತು. ಅಮೆರಿಕದ ಜೊತೆಗಿನ ತನ್ನ ಹಾಲಿ ಆರ್ಥಿಕ ಬಾಂಧವ್ಯದ ಭಾಗವಾಗಿ ಭಾರತವು ವಿಷಯವನ್ನು ಪರಿಗಣಿಸಿದೆ. ಮತ್ತು ಅಮೆರಿಕದ ಜೊತೆಗಿನ ಆರ್ಥಿಕ ಮತ್ತು ಜನರಿಂದ -ಜನರ ನಡುವಣ ಬಾಂಧವ್ಯವನ್ನು ಪ್ರಬಲಗೊಳಿಸುವ ನಿಟ್ಟಿನ ಯತ್ನ ಮುಂದುವರೆಸುತ್ತೇವೆ. ಉಭಯ ರಾಷ್ಟ್ರಗಳು ಬಾಂಧವ್ಯಗಳನ್ನು ಪರಸ್ಪರರಿಗೆ ಅನುಕೂಲಕರವಾಗುವ ರೀತಿಯಲ್ಲಿ ಇನ್ನಷ್ಟು ಬಲಪಡಿಸಲು ತಮ್ಮ ಯತ್ನಗಳನ್ನು ಮುಂದುವರೆಸುತ್ತವೆ ಎಂದೂ ಹೇಳಿಕೆ ತಿಳಿಸಿತು. ಭಾರತಕ್ಕೆ ನೀಡಲಾಗಿರುವ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಜೂನ್ ೫ರಿಂದ ಅನ್ವಯವಾಗುವಂತೆ ರದ್ದು ಪಡಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರುಅಮೆರಿಕಕ್ಕೆ ತನ್ನ ಮಾರುಕಟ್ಟೆಗಳ ಪ್ರವೇಶಕ್ಕೆ ನ್ಯಾಯೋಚಿತ ಅವಕಾಶ ಕಲ್ಪಿಸುವ ಭರವಸೆಯನ್ನು ಭಾಋತ ನೀಡಿಲ್ಲ. ಹೀಗಾಗಿ ಭಾರತದ ಫಲಾನುಭವಿ ಅಭಿವೃದ್ಧಿಶೀಲ ರಾಷ್ಟ್ರ ಸ್ಥಾನಮಾನವನ್ನು ರದ್ದು ಪಡಿಸುವುದು ಸೂಕ್ತವಾಗಿರುತ್ತದೆ ಎಂದು ಟ್ರಂಪ್ ಹೇಳಿದ್ದರು.

2018: ಪಾಟ್ನಾ: ಬೋಧ ಗಯಾ ಸರಣಿ ಸ್ಫೋಟ ಪ್ರಕರಣದ ಐವರು ಅಪರಾಧಿಗಳಿಗೆ ಪಾಟ್ನಾದ ವಿಶೇಷ ರಾಷ್ಟೀಯ ತನಿಖಾ ಸಂಸ್ಥೆ (ಎನ್ ಐಎ) ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿತು.  ೨೦೧೩ರ ಜುಲೈ ೭ರಂದು ಬೌದ್ಧ ಯಾತ್ರಾಸ್ಥಳವಾದ ಬೋಧ್ ಗಯಾದಲ್ಲಿ ೯ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ ಇಬ್ಬರು ಬೌದ್ಧ ಭಿಕ್ಷುಗಳು ಸೇರಿದಂತೆ ಐವರು ಗಾಯಗೊಂಡಿದ್ದರು.  ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ಮುಜೀಬ್ ಉಲ್ಲಾ, ಒಮೈರ್ ಸಿದ್ದಿಖಿ ಮತ್ತು ಅಜರುದ್ದೀನ್ ಖುರೇಶಿ ಅವರು ಭಾರತೀಯ ದಂಡ ಸಂಹಿತೆ ಮತ್ತು ಅಕ್ರಮ ಚಟುವಟಿಕೆ (ತಡೆ) ಕಾಯ್ದೆ ಮತ್ತು ಸ್ಫೋಟಕ ಕಾಯ್ದೆಯ ವಿವಿಧ ಕಾಯ್ದೆಗಳ ಅಡಿಯಲ್ಲಿ ತಪ್ಪಿತಸ್ಥರು ಎಂದು ನ್ಯಾಯಾಲಯ ಮೇ ೨೫ರಂದು ತೀರ್ಪು ನೀಡಿತ್ತು.  ಅಪರಾಧ ಘಟಿಸಿದ ವೇಳೆಯಲ್ಲಿ ಅಪ್ರಾಪ್ತ ವಯಸ್ಕನಾಗಿದ್ದ ಆರನೇ ಆರೋಪಿ ತೌಫೀಖ್ ಅಹ್ಮದ್‌ಗೆ ಇದಕ್ಕೆ ಮೊದಲೇ ಮೂರು ವರ್ಷಗಳ ರಿಮಾಂಡ್ ಹೋಮ್ ಶಿಕ್ಷೆಯನ್ನು ವಿಧಿಸಲಾಗಿತ್ತು. ನ್ಯಾಯಾಧೀಶ ಮನೋಜ್ ಕುಮಾರ್ ಸಿನ್ಹ ಅವರು ಅಪರಾಧಿಗಳಾದ ಹೈದರ್ ಅಲಿ ಮತ್ತು ಒಮೈರ್ ಸಿದ್ದಿಖಿ ಅವರಿಗೆ ಕ್ರಮವಾಗಿ ೧೪ ವರ್ಷ ಮತ್ತು ೭ ವರ್ಷಗಳ ಸೆರೆವಾಸವನ್ನು ಕೂಡಾ ವಿಧಿಸಿದರು. ಇದರ ಹೊರತಾಗಿ ಎಲ್ಲ ಅಪರಾಧಿಗಳಿಗೂ ನ್ಯಾಯಾಲಯ ೧೦,೦೦೦ ರೂಪಾಯಿಗಳ ದಂಡವನ್ನೂ ವಿಧಿಸಿತು.

2018: ನವದೆಹಲಿ: ಮಧ್ಯಪ್ರದೇಶದ ಮಂಡ್ಸೌರ್ ಪ್ರದರ್ಶನದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಎಂಟು ರಾಜ್ಯಗಳ ರೈತ ಸಂಘಟನೆಗಳು ಜೂನ್ ೧ರಿಂದ ೧೦ ದಿನಗಳ ಕಾಲ ಹಾಲು, ತರಕಾರಿ ಪೂರೈಕೆ ಸ್ಥಗಿತಗೊಳಿಸುವ ’ಮಹಾ ಪ್ರತಿಭಟನೆಯನ್ನು ಆರಂಭಿಸಿದವು. ವರ್ಷದ ಹಿಂದೆ ಮಂಡ್ಸೌರ್ ನಲ್ಲಿ ನಡೆದ ರೈತ ಪ್ರತಿಭಟನೆ ಕಾಲದಲ್ಲಿ ೬ ರೈತರು ಪೊಲೀಸ್ ಗೋಲಿಬಾರ್ ನಿಂದ ಸಾವನ್ನಪ್ಪಿದ್ದರು.  ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಕರ್ನಾಟಕ, ಹರ್‍ಯಾಣ ಮತ್ತು ಛತ್ತೀಸ್ ಗಢ ಈ ಎಂಟು ರಾಜ್ಯಗಳಲ್ಲಿ ರೈತರ ಮಹಾ ಪ್ರತಿಭಟನೆ ಆರಂಭವಾಯಿತು.  ಈ ಬಾರಿ ರೈತರು ಪ್ರತಿಭಟಿಸುವ ಸಲುವಾಗಿ ರಸ್ತೆಗಳಿಗೆ ಇಳಿಯುವುದಿಲ್ಲ. ಬದಲಿಗೆ ರಾಜ್ಯ ಮಾರುಕಟ್ಟೆಗಳಿಗೆ ಹಾಲು, ತರಕಾರಿಗಳ ಸರಬರಾಜನ್ನು ಸ್ಥಗಿತಗೊಳಿಸುವ ಕೆಲಸವನ್ನು ಮಾತ್ರವೇ ಮಾಡುತ್ತಾರೆ. ನಗರಗಳ ನಿವಾಸಿಗಳು ಗ್ರಾಮಗಳಿಗೆ ತೆರಳಿ ನೇರವಾಗಿ ರೈತರಿಂದ ತಮಗೆ ಬೇಕಾದ ತರಕಾರಿ ಇತ್ಯಾದಿ ಖರೀದಿಸಬಹುದು.  ಒಂದು ಸಲದ ಸಾಲಮನ್ನಾ, ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿ ನಿಗದಿ ಪಡಿಸುವುದು, ರೈತರ ಉತ್ಪನ್ನಗಳಿಗೆ ಸಾಮಾನ್ಯ ಮಾರುಕಟ್ಟೆಯಲ್ಲೂ ಗರಿಷ್ಠ ಬೆಲೆ ದೊರಕಿಸಿಕೊಡುವುದು ಅವರ ಹಲವಾರು ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆಗಳಾಗಿವೆ.  ಮೇ ೧೧ರಂದು ಸುಮಾರು ೧೦೦ಕ್ಕೂ ಹೆಚ್ಚಿನ ರೈತ ಸಂಘಟನೆಗಳು ಭೋಪಾಲ್ ನ ವಾರ್ಧಾ ಗಾಂಧಿ ಆಶ್ರಮದಲ್ಲಿ ಸಭೆ ನಡೆಸಿದ್ದವು. ರಾಷ್ಟ್ರೀಯ ಕಿಸಾನ್ ಮಹಾಸಂಘ ಸಭೆಯನ್ನು ಸಂಘಟಿಸಿತ್ತು. ಸಭೆಯಲ್ಲಿ ೧೦ ದಿನಗಳ ಚಳವಳಿಯ ರೂಪುರೇಷೆ ಬಗ್ಗೆ ಚರ್ಚಿಸಲಾಗಿತ್ತು. ಸಾಲಮನ್ನಾಕ್ಕಾಗಿ ನಡೆದ ನಡೆದ ಮಹಾರಾಷ್ಟ್ರದ ಚಳವಳಿಯಲ್ಲಿ ಪಾಲ್ಗೊಂಡಿದ್ದ ಸ್ವಾಭಿಮಾನ ಶೇತ್ಕರಿ ಸಂಘಟನೆಯು ಚಳವಳಿಯಿಂದ ಹೊರಗುಳಿದಿದೆ. ಈ ಸಂಘಟನೆಗಳ ವಿಶ್ವಾಸಾರ್ಹತೆಯನ್ನು ಅದು ಪ್ರಶ್ನಿಸಿದೆ. ಇದೇ ರೀತಿ ಆರೆಸ್ಸೆಸ್ ಬೆಂಬಲಿತ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಕೂಡಾ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿತು. ಮಂಡ್ಸೌರ್ ನಲ್ಲಿ ಪೊಲೀಸರು ರೈತರಿಂದ ಚಳವಳಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ೨೪,೦೦೦ ರೂಪಾಯಿಗಳ ಬಾಂಡ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿದವು.  ಆಡಳಿತಾತ್ಮಕ ಅಧಿಕಾರಿಗಳು ಹಿಂಸಾತ್ಮಕ ಚಳವಳಿಗೆ ಇಳಿಯುವುದಿಲ್ಲ ಎಂಬುದಾಗಿ ಬಾಂಡ್‌ಗಳಿಗೆ ಸಹಿ ಹಾಕಿಸಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಅಶ್ರುವಾಯು ಶೆಲ್ಲುಗಳನ್ನು ಸಿಡಿಸುವ ಬಗ್ಗೆ ಕೂಡಾ ತರಬೇತಿ ನೀಡಲಾಗುತ್ತಿದೆ. ಒಂದು ರೀತಿಯ ಸಮರಕ್ಕೆ ಸಿದ್ಧತೆ ನಡೆದಿರುವಂತಿದೆ. ನಾವು ನಮ್ಮ ಅಗತ್ಯಗಳಿಗಾಗಿ ಆಗ್ರಹಿಸಿ ಚಳವಳಿ ನಡೆಸುತ್ತಿರುವ ಸಾಮಾನ್ಯ ರೈತರಷ್ಟೆ ಎಂದು ಮಧ್ಯ ಪ್ರದೇಶದ ಸ್ಥಳೀಯ ರೈತರ ನಾಯಕ ಅನಿಲ್ ಯಾದವ್ ಹೇಳಿದರು.  ಕಳೆದ ವರ್ಷ ಜೂನ್ ೬ರಂದು ಮಂಡ್ಸೌರ್ ಹಿಂಸಾಚಾರವನ್ನು ಅನುಸರಿಸಿ ಯಾದವ್ ಅವರನ್ನು ಬಂಧಿಸಲಾಗಿತ್ತು ಮತ್ತು ಪೊಲೀಸ್ ಕಸ್ಟಡಿಯಲ್ಲಿ ಅವರನ್ನು ಥಳಿಸಲಾಗಿತ್ತು. ’ನನ್ನನ್ನು ತಪ್ಪಾಗಿ ಬಂಧಿಸಲಾಗಿತ್ತು. ನಾವು ಆಗ ಮುಂದಿಟ್ಟಿದ್ದ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಅವರು ನುಡಿದರು. ಹಿಂಸಾಚಾರ ಸಂಭವಿಸಿದರೆ, ಏಕತೆ ಮತ್ತು ನಾಗರಿಕತೆಯ ಸಂಕೇತವಾಗಿ ರೈತರು ತಾವಾಗಿಯೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತೆರಳಿ ’ಜೈಲ್ ಭರೋ ಚಳವಳಿ ನಡೆಸುವರು. ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹಾಕಿದರೆ ಗಾಂಧಿ ಮಾರ್ಗವನ್ನು ಅನುಸರಿಸಿ ಮೌನ ಆಚರಿಸಲಿದ್ದೇವೆ ಎಂದು ಸ್ಥಳೀಯ ರೈತ ನಾಯಕರೊಬ್ಬರು ತಿಳಿಸಿದರು.
ಹಾಲು ಮತ್ತು ತರಕಾರಿಯನ್ನು ಹಾಳುಮಾಡಬೇಡಿ ಎಂದು ರೈತರಿಗೆ ಕರೆ ನೀಡಲಾಗಿದೆ. ಆದರೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕೆಲವು ಪ್ರತಿಭಟನೆಕಾರರು ಇದನ್ನು ಉಲ್ಲಂಘಿಸಿದರು. ಪಂಜಾಬಿನಲ್ಲಿ ರೈತರು ಅತ್ಯಂತ ದೊಡ್ಡ ಪ್ರಮಾಣದಲ್ಲಿ ತೊಂದರೆಗೆ ಒಳಗಾಗಿದ್ದಾರೆ. ನಾವು ಮಾರುಕಟ್ಟೆಗಳಿಗೆ ನಮ್ಮ ಉತ್ಪನ್ನಗಳನ್ನು ಸರಬರಾಜು ಮಾಡದೇ ಇರಲು ನಿರ್ಧರಿಸಿದ್ದೇವೆ. ಆಹಾರಕ್ಕೆ ಸಂಬಂಧಿಸಿದಂತೆ ಭಯ ಹುಟ್ಟುವಂತೆ ಮತ್ತು ಸರ್ಕಾರವು ನಮ್ಮ ಮಾತು ಆಲಿಸುವಂತೆ ನಾವು ಮಾಡುತ್ತೇವೆ. ಬೀದಿಗಳಲ್ಲಿ ಚೆಲ್ಲುವ ಮೂಲಕ ಉತ್ಪನ್ನಗಳನ್ನು ಹಾಳುಮಾಡಬೇಡಿ ಎಂದು ನಾವು ಎಲ್ಲ ರೈತರಿಗೂ ಸೂಚಿಸಿದ್ದೇವೆ. ನಮ್ಮ ಅಸ್ತಿತ್ವವನ್ನು ನಿರ್ಲಕ್ಷಿಸಿದ ಜಗತ್ತಿಗೆ ನಮ್ಮ ಮಹತ್ವದ ಅರಿವನ್ನು ಸಾರುವ ಸಲುವಾಗಿ ನಾವು  ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪಂಜಾಬಿನಲ್ಲಿ ಪ್ರತಿಭಟನೆಗಳ ನೇತೃತ್ವ ವಹಿಸಿದ ಇಂದರ್ ಜಿತ್ ಜೈಜೀ ಹೇಳಿದರು.  ಮಹಾರಾಷ್ಟ್ರದ ರೈತರು ತಮ್ಮ ಕಾರ್ಯಯೋಜನೆಯನ್ನು ಪುನರುಚ್ಚರಿಸಿದ್ದಾರೆ. ’ರಾಷ್ಟ್ರ ಮಟ್ಟದ ಸಭೆಯ ಮೂಲಕ ನಾವು ಸಾಮಾನ್ಯ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಯಾವುದೇ ರೀತಿಯ ಹಿಂಸಾಚಾರಕ್ಕೆ ಇಳಿಯುವುದಿಲ್ಲ. ಆದರೆ ಕೃಷಿ ಉತ್ಪನ್ನ ಸರಬರಾಜು ಸ್ಥಗಿತಗೊಳಿಸುವ ಮೂಲಕ ನಾವು ಮಾರುಕಟ್ಟೆಗಳ ಮೇಲೆ ಅಗಾಧ ಒತ್ತಡ ಸೃಷ್ಟಿಸುತ್ತೇವೆ ಎಂದು ಮಹಾರಾಷ್ಟ್ರದ ಸ್ಥಳೀಯ ರೈತ ನಾಯಕರೊಬ್ಬರು ತಿಳಿಸಿದರು.  ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಈ ವಾರ ಭೇಟಿ ಮಾಡಿ ಮುಂಬರುವ ಸಂಸತ್ ಅಧಿವೇಶನದ ಒಂದು ವಾರ ರೈತ ವಿಷಯಗಳಿಗೆ ಮೀಸಲಾಗಿಡುವಂತೆ ಖಾತರಿಗೊಳಿಸಲು ಮನವಿ ಮಾಡಿತ್ತು. ಕಳೆದ ವರ್ಷ ಪ್ರತಿಭಟನೆ ಹಿಂಸಾತ್ಮಕಗೊಳ್ಳಲು ಒಂದು ಮುಖ್ಯ ಕಾರಣ ಸಂಪರ್ಕದ ಕೊರತೆ ಮತ್ತು ತಪ್ಪು ನಿರ್ವಹಣೆ. ಈ ವರ್ಷ ಏನಿದ್ದರೂ ಮೆಸ್ಸೇಜಿಂಗ್ ಆಪ್, ವಾಟ್ಸ್ ಆಪ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪ್ರತಿಭಟನೆಯು ಶಾಂತಿಯುತವಾಗಿರುವಂತೆ ನೋಡಿಕೊಳ್ಳಲು ಬಳಸಲಾಗುವುದು ಎಂದು ರೈತ ಪ್ರತಿಭಟನಾ ಪ್ರಮುಖರು ಹೇಳಿದರು.

2018: ನವದೆಹಲಿ: ಎಂಟು ರಾಜ್ಯಗಳಲ್ಲಿ ಶುಕ್ರವಾರ ಆರಂಭಗೊಂಡ ೧೦ ದಿನಗಳ ರೈತ ಮುಷ್ಕರದಲ್ಲಿ ಪಾಲ್ಗೊಳ್ಳದೇ ಇರಲು ಆರೆಸ್ಸೆಸ್ ಬೆಂಬಲಿತ ಭಾರತೀಯ ಕಿಸಾನ್ ಸಂಘ ನಿರ್ಧರಿಸಿತು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ ಮತ್ತು ಛತ್ತಿಸ್ ಗಢ ರಾಜ್ಯಗಳ ರೈತ ಸಂಘಟನೆಗಳು ಬೆಳಗ್ಗೆಯಿಂದ ನಗರಗಳಿಗೆ ಹಾಲು, ತರಕಾರಿ, ಅಗತ್ಯ ವಸ್ತುಗಳ ಸರಬರಾಜು ಸ್ಥಗಿತ ಚಳವಳಿ ಆರಂಭಿಸಿದವು. ಮಂಡ್ಸೌರ್ ಚಳವಳಿ ಕಾಲದಲ್ಲಿ ವಿಷಯಗಳಲ್ಲಿ ’ರಾಜಿ ಮಾಡಿಕೊಳ್ಳಲಾಗಿದೆ. ಇದು ರಾಜಕೀಯ ಚಳವಳಿಯಾಗಿದ್ದು ರೈತ ವಿಷಯಗಳಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲ. ಕಳೆದ ಬಾರಿ ನಾವು ಕೆಲವು ಮಧ್ಯಪ್ರದೇಶ ಸರ್ಕಾರದ ಜೊತೆಗೆ ಧನಾತ್ಮಕ ಫಲಿತಾಂಶದತ್ತ ಸಾಗುವಲ್ಲಿ ಸಫಲರಾಗಿದ್ದೆವು. ಆದರೆ ಯೋಜಿತ ಹಿಂಸಾಚಾರ ಎಲ್ಲ ಪ್ರಯತ್ನಗಳನ್ನೂ ಹಾಳುಗೆಡವಿತು ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಮೋಹನ್ ಹೇಳಿದರು. ‘ಈಗಿನ ಪ್ರತಿಭಟನೆಗಳು ೨೦೧೯ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡು ನಡೆಯುತ್ತಿರುವ ಪ್ರತಿಭಟನೆಗಳಾಗಿವೆ. ಹಿಂಸಾಚಾರಕ್ಕೆ ಯೋಜಿಸಿರುವ ರಾಜಕೀಯ ಪ್ರೇರಿತ ಶಕ್ತಿಗಳು  ೨೦೧೯ರ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರತಿಭಟನೆಯನ್ನು ಸಂಘಟಿಸಿವೆ. ನಾವು ಅದರ ಭಾಗವಾಗಲು ಇಚ್ಛಿಸುವುದಿಲ್ಲ ಎಂದು ಅವರು ನುಡಿದರು.  ರೈತರ ಈಗಿನ ಬೇಡಿಕೆಗಳ ಬಗ್ಗೆ ನಮಗೆ ಸಹಮತ ಇಲ್ಲ. ಈ ಸಾಲಮನ್ನಾ ಬೇಡಿಕೆಯ ಬಗ್ಗೆ ನಮಗೆ ಒಲವು ಇಲ್ಲ. ಈ ಹಿಂದೆ ಇದು ಉತ್ತಮ ಫಲಿತಾಂಶವನ್ನು ಕೊಟಿಲ್ಲ. ರೈತರಿಗೆ ಲಾಭದಾಯಕವಾಗುವಂತಹ ಕನಿಷ್ಠ ಬೆಂಬಲ ಬೆಲೆ ಲಭಿಸಬೇಕು ಎಂಬುದು ನಮ್ಮ ಆಗ್ರಹ ಎಂದು ಅವರು ಹೇಳಿದರು.  ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ಕಾರ್ಯಕರ್ತರು ಹಾಜರಿರುವ ಬಗೆಗೂ ಅವರು ಅಚ್ಚರಿ ವ್ಯಕ್ತ ಪಡಿಸಿದರು.  ದೆಹಲಿ ಸರ್ಕಾರವು ಕೃಷಿ ಸಚಿವಾಲಯವನ್ನೇ ಹೊಂದಿಲ್ಲ. ಅವರು ಹೇಗೆ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ವಿಚಿತ್ರವಾಗಿ ನನಗೆ ಕಾಣುತ್ತಿದೆ ಎಂದು ಮೋಹನ್ ನುಡಿದರು.

2018: ಕೋಚಿ: ಮಹತ್ವದ ತೀರ್ಪೊಂದರಲ್ಲಿ ಕೇರಳ ಹೈಕೋರ್ಟ್ ೧೮ ವರ್ಷದ ಬಾಲಕ ಮತ್ತು ೧೯ ವರ್ಷದ ಬಾಲಕಿಗೆ ಒಟ್ಟಿಗೆ ವಾಸವಾಗಿರಲು ಅನುಮತಿ ನೀಡಿತು. ’ಲಿವ್-ಇನ್- ರಿಲೇಶನ್‌ಶಿಪ್ (ಲಿವ್ -ಇನ್-ಬಾಂಧವ್ಯ) ಗಳ ಬಗ್ಗೆ ನ್ಯಾಯಾಲಯ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ಇರಲಾಗದು ಎಂದು ನ್ಯಾಯಾಲಯ ಹೇಳಿತು.  ಶಾಸನಬದ್ಧ ಮದುವೆ ವಯಸ್ಸು ಆಗಿರದಿದ್ದರೂ ವಯಸ್ಕರಿಗೆ ಲಿವ್-ಇನ್-ಬಾಂಧವ್ಯದ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಒಂದು ತಿಂಗಳ ಬಳಿಕ ಕೇರಳ ಹೈಕೋರ್ಟಿನ ಈ ತೀರ್ಪು ಬಂದಿತು. ನ್ಯಾಯಮೂರ್ತಿ ವಿ. ಚಿತಂಬರೇಶ್ ಮತ್ತು ನ್ಯಾಯಮೂರ್ತಿ ಕೆಪಿ ಜ್ಯೋತೀಂದ್ರನಾಥ್ ಅವರು ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ’ಇಂತಹ ಜೋಡಿಗಳನ್ನು, ಅವರು ವಯಸ್ಕರಾಗಿರುವುದರಿಂದ ಹೇಬಿಯಸ್ ಕಾರ್ಪಸ್ ರಿಟ್ ಮೂಲಕ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರಾಪ್ತ ವಯಸ್ಕನೊಬ್ಬನ ಲಿವ್-ಇನ್- ಬಾಂಧವ್ಯ ಹೊಂದುವ ಹಕ್ಕು ಸಮಾಜದ ಸಂಪ್ರದಾಯಸ್ಥ ವರ್ಗಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇದ್ದರೂ, ಅದನ್ನು ಗೌರವಿಸಲು ಸಾಂವಿಧಾನಿಕ ನ್ಯಾಯಾಲಯವು ಬದ್ಧವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿತು.  ಅಲಪ್ಪುಳದ ನಿವಾಸಿ ಮುಹಮ್ಮದ್ ರಿಯಾದ್ ಅವರು ತನ್ನ ಪುತ್ರಿಗೆ ಶಾಸನಬದ್ಧ ಮದುವೆಯ ವಯಸ್ಸು ಆಗದೇ ಇರುವುದರಿಂದ ಮತ್ತು ೨೦೦೬ರ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ ೨ (ಎ) ಪ್ರಕಾರ ಆಕೆ ’ಮಗು ಆಗಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ಈ ವಯಸ್ಸಿನಲ್ಲಿ ಎಳೆಯ ಜೋಡಿ ಮದುವೆಯಾದರೂ, ಮದುವೆಯು ಸಿಂಧುವಲ್ಲ ಮತ್ತು ಅವರ ಮಗು ಅಕ್ರಮ ಮಗುವಾಗುತ್ತದೆ ಎಂದು ವಾದಿಸಿದ್ದರು.  ಏನಿದ್ದರೂ, ಬಾಲಕಿಯು ಪ್ರೌಢಳಾಗಿದ್ದು ಮಹಮ್ಮದೀಯ ಕಾನೂನಿನ ಸೆಕ್ಷನ್ ೨೫೧ ಮತ್ತು ಇತರ ವಿಧಿಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾಳೆ ಎಂದು ಕೇರಳ ಹೈಕೋರ್ಟ್ ಹೇಳಿತು.  ‘ಬಾಲಕಿಯು ಬಾಲಕನ ಜೊತೆಗೆ ಸ್ವ ಇಚ್ಛೆಯಿಂದ ವಾಸವಾಗಿರುವುದರಿಂದ ಮತ್ತು ಆಕೆ ವಯಸ್ಕಳಾಗಿರುವುದರಿಂದ ತನ್ನಿಷ್ಟದಂತೆ ಬದುಕುವ ಮತ್ತು ಸಂಚರಿಸುವ ಹಕ್ಕನ್ನು ಹೊಂದಿದ್ದಾಳೆ. ಲಿವ್-ಇನ್-ಬಾಂಧವ್ಯವನ್ನು ಶಾಸನಸಭೆಯೇ ಶಾಸನ ರೂಪದಲ್ಲಿ ಮಾನ್ಯ ಮಾಡಿರುವುದರಿಂದ ಬಾಲಕಿಯು ವಿವಾಹದಾಚೆಗೆ ಕೂಡಾ ಯುವಕನೊಂದಿಗೆ ಜೀವಿಸುವ ಹಕ್ಕನ್ನು ಹೊಂದಿದ್ದಾಳೆ ಎಂದು ನ್ಯಾಯಾಲಯ ಹೇಳಿತು.
  
2018: ಬೆಂಗಳೂರು/ ನವದೆಹಲಿ: ಹಲವಾರು ದಿನಗಳ ತುರುಸಿನ ಮಾತುಕತೆಗಳ ಬಳಿಕ ಜನತಾದಳ (ಎಸ್) ಮತ್ತು ಕಾಂಗ್ರೆಸ್ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಒಮ್ಮತಕ್ಕೆ ಬಂದಿದ್ದು ೨೦೧೯ರ ಮಹಾ ಚುನಾವಣೆಯಲ್ಲೂ ಚುನಾವಣಾ ಪೂರ್ವ ಮೈತ್ರಿಕೂಟವಾಗಿ ಒಟ್ಟಿಗೆ ಹೋರಾಟಕ್ಕೆ ಇಳಿಯಲಿವೆ ಎಂದು ಪ್ರಕಟಿಸಿದವು.  ‘ಈಗ ಎಲ್ಲವೂ ಇತ್ಯರ್ಥಗೊಂಡಿದೆ ಎಂದು ಖಾತೆ ಹಂಚಿಕೆಯ ವಿವರಗಳನ್ನು ತಿಳಿಸುತ್ತಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಭಾರೀ ಜಟಾಪಟಿಗೆ ಕಾರಣವಾಗಿದ್ದ ಹಣಕಾಸು, ಲೋಕೋಪಯೋಗಿ ಮತ್ತು ಇಂಧನ ಇಲಾಖೆಗಳನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಳ್ಳುವಲ್ಲಿ ಜೆಡಿ(ಎಸ್) ಯಶಸ್ವಿಯಾಗಿದೆ. ಒಟ್ಟು  ೧೨ ಖಾತೆಗಳು ಜೆಡಿ(ಎಸ್) ಪಾಲಾಗಿವೆ.  ಇಂಧನ ಖಾತೆಗೆ ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ವರಿಷ್ಠರು ಹೇಗೆ ಸಮಾಧಾನಪಡಿಸಲಿದ್ದಾರೋ ಕಾದುನೋಡಬೇಕಾಗಿದೆ.  ಪ್ರತಿಷ್ಠಿತ ಖಾತೆಗಳು ಎನಿಸಿಕೊಂಡಿರುವ ಗೃಹ, ನೀರಾವರಿ ಮತ್ತು ಬೆಂಗಳೂರು ನಗರ ಅಭಿವೃದ್ಧಿ ಇಲಾಖೆಗಳು ಸೇರಿದಂತೆ ಒಟ್ಟು ೨೨ ಖಾತೆಗಳನ್ನು ಕಾಂಗ್ರೆಸ್ ತನಗೆ ದಕ್ಕಿಸಿಕೊಂಡಿತು. ಸರ್ಕಾರ ಮತ್ತು ಪಕ್ಷಗಳ ನಡುವೆ ತಲೆದೋರಬಹುದಾದ ಭಿನ್ನಾಭಿಪ್ರಾಯ ಪರಿಹರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ರಚಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಮಿತಿಯ ಸದಸ್ಯರು. ಡ್ಯಾನಿಶ್ ಅಲಿ ಸಂಚಾಲಕರಾಗಿರುತ್ತಾರೆ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹೇಳಿದರು.  ಸಮನ್ವಯ ಸಮಿತಿಯು ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಸಭೆ ಸೇರಬೇಕು ಮತ್ತು ಸರ್ಕಾರ ನಡೆಸುವಲ್ಲಿನ ಸಮಸ್ಯೆಗಳನ್ನು ಒಟ್ಟಾಗಿ ಇತ್ಯರ್ಥ ಪಡಿಸಿಕೊಳಳಬೇಕು, ನಿಗಮ ಮಂಡಳಿಗಳ ಪ್ರತಿಯೊಂದು ನೇಮಕಾತಿ ಪ್ರಕ್ರಿಯೆಯನ್ನು ಸಮಿತಿಯೇ ಪೂರ್ಣಗೊಳಿಸಬೇಕು, . ಈ ನೇಮಕಾತಿಗಳಲ್ಲಿ ಕಾಂಗ್ರೆಸ್‌ಗೆ ಮೂರನೇ ಎರಡು (೨/೩) ಮತ್ತು ಜೆಡಿಎಸ್‌ಗೆ ಮೂರನೇ ಒಂದು (೧/೩) ಪಾಲು ಸಿಗಲಿದೆ ಎಂದು ವೇಣುಗೋಪಾಲ್ ಹೇಳಿದರು.  ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗೂಡಿ ಸೆಣೆಸಬೇಕು ಎಂದೂ ತೀರ್ಮಾನಿಸಲಾಗಿದೆ ಎಂದೂ ಎಂದು ಅವರು ಘೋಷಿಸಿದರು.
ಕೋಮುಸೌಹಾರ್ದ, ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿಗೆ ಮೈತ್ರಿ ಸರ್ಕಾರ ಆದ್ಯತೆ ಕೊಡಲಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಐದು ವರ್ಷ ಆಡಳಿತ ಪೂರ್ಣಗೊಳಿಸಲಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.  ಯಾವ ಪಕ್ಷಕ್ಕೆ ಯಾವ ಖಾತೆ? ಕಾಂಗ್ರೆಸ್:  ಗೃಹ, ನೀರಾವರಿ, ಬೆಂಗಳೂರು ನಗರ ಅಭಿವೃದ್ಧಿ, ಕೈಗಾರಿಕೆ, ಆರೋಗ್ಯ, ಕಂದಾಯ, ಮುಜರಾಯಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ವಸತಿ, ವೈದ್ಯಕೀಯ ಶಿಕ್ಷಣ, ಅರಣ್ಯ, ಗಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ, ಸಂಸದೀಯ ವ್ಯವಹಾರ, ವಿಜ್ಞಾನ ಐಟಿಬಿಟಿ, ಕನ್ನಡ ಮತ್ತು ಸಂಸ್ಕೃತಿ, ಕ್ರೀಡೆ ಮತ್ತು ಯುವಜನ.  ಜೆಡಿಎಸ್:
ಮಾಹಿತಿ ತಂತ್ರಜ್ಞಾನ, ಯೋಜನೆ ಮತ್ತು ಸಾಂಖ್ಯಿಕ, ಹಣಕಾಸು, ಅಬಕಾರಿ, ಲೋಕೋಪಯೋಗಿ, ಇಂಧನ, ಸಹಕಾರ, ಪ್ರವಾಸೋದ್ಯಮ, ಶಿಕ್ಷಣ, ಪಶುಸಂಗೋಪನೆ, ತೋಟಗಾರಿಕೆ ಮತ್ತು ರೇಷ್ಮೆ, ಸಣ್ಣ ಕೈಗಾರಿಕೆ, ಸಾರಿಗೆ, ಸಣ್ಣ ನೀರಾವರಿ. ಜೂನ್ ೬ರಂದು ಸಂಪುಟ ವಿಸ್ತರಣೆ: ಹಿಂದಿನ ದಿನ  ಆರಂಭಗೊಂಡಿದ್ದ ಸುದೀರ್ಘ ಐದು ಸುತ್ತಿನ ಮಾತುಕತೆಗಳ ಬಳಿಕ ಉಭಯ ಪಕ್ಷಗಳೂ ಖಾತೆ ಹಂಚಿಕೆ ಕಗ್ಗಂಟನ್ನು ಬಗೆ ಹರಿಸಿಕೊಂಡವು.
ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ತಮ್ಮ ದ್ವಿ ಸದಸ್ಯ ಸಚಿವ ಸಂಪುಟವನ್ನು ಜೂನ್ ೬ರಂದು ವಿಸ್ತರಿಸಲಿದ್ದಾರೆ.  ಮೈತ್ರಿಕೂಟದ ಅಂಗ ಪಕ್ಷಗಳು ಪ್ರತಿಷ್ಠಿತ ಖಾತೆಗಳಿಗಾಗಿ ಪಟ್ಟು ಹಿಡಿದ ಪರಿಣಾಮವಾಗಿ ಖಾತೆ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿ, ಮಂತ್ರಿಮಂಡಲದ ವಿಸ್ತರಣೆಗೆ ವಿಳಂಬಗೊಂಡಿತ್ತು. ಮೇ ೨೩ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಕೊಂಡ ಕುಮಾರ ಸ್ವಾಮಿ ಅವರಿಗೆ ಇನ್ನೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯೇ ಸಾಧ್ಯವಾಗಿರಲಿಲ್ಲ.  ಕುಮಾರ ಸ್ವಾಮಿ ಅವರು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರ ಜೊತೆಗೆ ಶುಕ್ರವಾರ ಬೆಳಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ನೂತನ ಸಚಿವರ ಪ್ರಮಾಣವಚನಕ್ಕೆ ದಿನಾಂಕ ನಿಗದಿಪಡಿಸುವ ಬಗ್ಗೆ ಚರ್ಚಿಸಿದ್ದರು.

2018: ನವದೆಹಲಿ: ಆದಾಯ ತೆರಿಗೆ ಇಲಾಖೆಗೆ ಯಾವುದೇ ಬೇನಾಮಿ ವ್ಯವಹಾರ ಅಥವಾ ಆಸ್ತಿ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡುವ ಮೂಲಕ ನೀವು ಒಂದು ಕೋಟಿ ರೂಪಾಯಿಗಳವರೆಗೆ ಸಂಪಾದಿಸಬಹುದು. ವಿದೇಶದಲ್ಲಿ ಸಂಗ್ರಹಿಸಿ ಇಟ್ಟ ಕಾಳಧನದ ಬಗ್ಗೆ ಮಾಹಿತಿ ನೀಡಿದರೆ ೫ ಕೋಟಿ ರೂಪಾಯಿಗಳವರೆಗಿನ ಬಹುಮಾನ ನಿಮ್ಮದಾಗಬಹುದು. ಇದಲ್ಲದೆ, ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಆದಾಯ ಅಥವಾ ಆಸ್ತಿಗಳ ಮೇಲಿನ ತೆರಿಗೆ ತಪ್ಪಿಸುತ್ತಿರುವ ಬಗ್ಗೆ ನೀಡುವ ನಿರ್ದಿಷ್ಟ ಮಾಹಿತಿಗೆ ವ್ಯಕ್ತಿಯೊಬ್ಬರಿಗೆ ೧೯೬೧ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ೫೦ ಲಕ್ಷ ರೂಪಾಯಿಗಳವರೆಗಿನ ಬಹುಮಾನ ನೀಡಲು ಸಾಧ್ಯವಾಗುವಂತೆ ಆದಾಯ ತೆರಿಗೆ ಮಾಹಿತಿದಾರರ ಬಹುಮಾನ ಯೋಜನೆಗೂ ತಿದ್ದುಪಡಿ ತರಲಾಯಿತು.  ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಟಿಡಿ) ಈದಿನ  ೨೦೧೮ರ ಬೇನಾಮಿ ವಹಿವಾಟು ಮಾಹಿತಿದಾರರ ಬಹುಮಾನ ಯೋಜನೆಯನ್ನು ಪ್ರಕಟಿಸಿತು. ಇದರ ಅಡಿಯಲ್ಲಿ ವಿದೇಶೀಯರೂ ಸೇರಿದಂತೆ ಯಾರೇ ವ್ಯಕ್ತಿ ಜಂಟಿ ಅಥವಾ ಹೆಚ್ಚುವರಿ (ಅಡಿಷನಲ್) ಕಮೀಷನರ್ ಗಳಿಗೆ ಬೇನಾಮಿ ವಹಿವಾಟುಗಳು ಮತ್ತು ಆಸ್ತಿಗಳ ಬಗ್ಗೆ ಮಾಹಿತಿ ನೀಡಬಹುದು. ಇಂತಹ ಪ್ರಕರಣಗಳನ್ನು ೨೦೧೬ರ ಬೇನಾಮಿ ವಹಿವಾಟುಗಳು (ನಿಷೇಧ) ತಿದ್ದುಪಡಿ ಕಾಯ್ದೆಯ ಅಡಿ ವಿಚಾರಣೆಗೆ ಗುರಿ ಪಡಿಸಲಾಗುವುದು.  ಬೇನಾಮಿ ವಹಿವಾಟುಗಳು ಮತ್ತು ಆಸ್ತಿಗಳ ಬಗ್ಗೆ ಹಾಗೂ ಇಂತಹ ಆಸ್ತಿಗಳ ಮೂಲಕ ಗುಪ್ತ ಹೂಡಿಕೆದಾರರು ಗಳಿಸುವ ಆದಾಯ ಮತ್ತು ಫಲಾನುಭವಿ ಮಾಲೀಕರ ಬಗ್ಗೆ ಮಾಹಿತಿ ನೀಡಲು ಜನರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಿಬಿಟಿಡಿ ಹೇಳಿದೆ. ೨೦೧೮ರ ಬೇನಾಮಿ ವಹಿವಾಟು ಮಾಹಿತಿದಾರರ ಬಹುಮಾನ ಯೋಜನೆಯ ಅಡಿಯಲ್ಲಿ ಬೇನಾಮಿ ವಹಿವಾಟು, ಆಸ್ತಿಗಳ ಬಗೆಗಿನ ಆದಾಯ ತೆರಿಗೆ ಇಲಾಖೆಯ ತನಿಖಾ ನಿರ್ದೇಶನಾಲಯದ ಬೇನಾಮಿ ನಿಷೇಧ ಘಟಕಗಳ (ಬಿಪಿಯು) ಜಂಟಿ ಅಥವಾ ಹೆಚ್ಚುವರಿ ಕಮೀಷನರ್‌ಗಳಿಗೆ ಸೂಚಿತ ರೀತಿಯಲ್ಲಿ ನಿರ್ದಿಷ್ಟ ಮಾಹಿತಿ ನೀಡುವ ವ್ಯಕ್ತಿಗೆ ಒಂದು ಕೋಟಿ ರೂಪಾಯಿವರೆಗೆ ಬಹುಮಾನ ನೀಡಬಹುದು. ೧೯೮೮ರ ಬೇನಾಮಿ ಆಸ್ತಿ ವಹಿವಾಟು ಕಾಯ್ದೆಯ ಅಡಿಯಲ್ಲಿ ಇಂತಹ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದ್ದು ಅದಕ್ಕೆ  ೨೦೧೬ರ ಬೇನಾಮಿ ವಹಿವಾಟುಗಳು (ನಿಷೇಧ) ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಸಿಬಿಟಿಡಿ ತಿಳಿಸಿತು. ಬಹುಮಾನ ಯೋಜನೆಗಳ ಅಡಿಯಲ್ಲಿ ಮಾಹಿತಿ ನೀಡುವವರ ಬಗ್ಗೆ ಸಂಪೂರ್ಣ ರಹಸ್ಯ ಕಾಯ್ದುಕೊಳ್ಳಲಾಗುವುದು. ಯಾವ ಕಾರಣಕ್ಕೂ ಮಾಹಿತಿದಾರರ ಗುರುತು ಬಹಿರಂಗ ಪಡಿಸಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಭರವಸೆ ನೀಡಿತು.
ಕಾಳಧನ (ಬಹಿರಂಗ ಪಡಿಸದ ವಿದೇಶೀ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆ ಹೇರಿಕೆ ಕಾಯ್ದೆ ೨೦೧೫ರ ಅಡಿಯಲ್ಲಿ ಸಾಗರದಾಚೆ ಸಂಗ್ರಹಿಸಿಟ್ಟ ಯಾವುದೇ ಕಪ್ಪು ಹಣದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ವ್ಯಕ್ತಿಯು ೫ ಕೋಟಿ ರೂಪಾಯಿಗಳವರೆಗಿನ ಬಹುಮಾನ ಪಡೆಯಬಹುದು.  ವಿದೇಶಗಳಲ್ಲಿನ ಸಂಭಾವ್ಯ ಮೂಲಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವಿದೇಶೀ ಕಾಳಧನ ಕಾಯ್ದೆಯ ಅಡಿಯಲ್ಲಿ ಮಾಹಿತಿದಾರರಿಗೆ ನೀಡುವ ಬಹುಮಾನದ ಮೊತ್ತವನ್ನು ೫ ಕೋಟಿ ರೂಪಾಯಿಗಳವರೆಗೆ ಏರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿತು. ಹಲವಾರು ಪ್ರಕರಣಗಳಲ್ಲಿ ಕಪ್ಪು ಹಣವನ್ನು ಆಸ್ತಿಗಳಲ್ಲಿ ಇತರರ ಹೆಸರಿನಲ್ಲಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ತನ್ನ ಮಾಲೀಕತ್ವವನ್ನು ಬಚ್ಚಿಟ್ಟುಕೊಂಡು ಹೂಡಿಕೆದಾರ ತೆರಿಗೆ ವಂಚಿಸಿ ಲಾಭಗಳಿಸುತ್ತಿರುತ್ತಾನೆ ಎಂದು ತೆರಿಗೆ ಇಲಾಖೆಗೆ ಹೇಳಿಕೆ ತಿಳಿಸಿತು. ಸರ್ಕಾರವು ೧೯೮೮ರ ಬೇನಾಮಿ ಆಸ್ತಿ ವಹಿವಾಟು ಕಾಯ್ದೆಯನ್ನು ತಿದ್ದುಪಡಿ ಮಾಡಿ, ಬೇನಾಮಿ ವಹಿವಾಟುಗಳು (ನಿಷೇಧ) ತಿದ್ದುಪಡಿ ಕಾಯ್ದೆ ೨೦೧೬ರ ಮೂಲಕ ಕಾನೂನನ್ನು ಮತ್ತಷ್ಟು ಪ್ರಬಲಗೊಳಿಸಿತು. ಕಾಳಧನ ಪತ್ತೆ ಹಚ್ಚುವ ತನ್ನ ಯತ್ನದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಸಲುವಾಗಿ ಮತ್ತು ತೆರಿಗೆ ವಂಚನೆಯನ್ನು ತಗ್ಗಿಸುವ ಸಲುವಾಗಿ ಬೇನಾಮಿ ವಹಿವಾಟುಗಳ ಬಹುಮಾನ ಯೋಜನೆ, ೨೦೧೮ರ ಹೆಸರಿನ ಹೊಸ ಬಹುಮಾನ ಯೋಜನೆಯನ್ನು ಜಾರಿಗೊಳಿಸಿತು.
  
2018: ಬೆಂಗಳೂರು: ಐದು ವರ್ಷಗಳ ಕಾಲ ಸರ್ಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಕಾಂಗ್ರೆಸ್ ಮತ್ತು ಜೆಡಿ(ಎಸ್) ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿದ್ದು, ಸರ್ಕಾರವನ್ನು ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸಲಿದ್ದು, ಮೈತ್ರಿ ಸರ್ಕಾರದಲ್ಲಿ ಇದೀಗ ಇನ್ನಷ್ಟು ಪ್ರಬಲರಾದರು. ಉಭಯ ಪಕ್ಷಗಳು ಮಾಡಿಕೊಂಡಿರುವ ಒಪ್ಪಂದಗಳ ಹಿನ್ನೆಲೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಸರ್ಕಾರ ನಡೆಸಲು ಮಾರ್ಗದರ್ಶನ ಮಾಡುವ ಜೆಡಿ(ಎಸ್)- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕಗೊಂಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ಸಿ. ವೇಣುಗೋಪಾಲ್ ಹೇಳಿದರು. ಪಂಚ ಸೂತ್ರಗಳ ಒಪ್ಪಂದದ ಆಧಾರದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತವು ರಾಜ್ಯದ ಎಲ್ಲಾ ಸ್ಥಳಗಳಲ್ಲೂ ಸಾಮಾಜಿಕ ನ್ಯಾಯ, ಸೌಹಾರ್ದತೆಗೆ ಒತ್ತು ನೀಡುವುದು ಸೇರಿದಂತೆ ಹಲವು ಗುರಿಗಳನ್ನು ವಿವರಿಸುವ ಎರಡು ಪುಟಗಳ ಒಪ್ಪಂz ಪತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಹಿ ಹಾಕಿದವು. ಸರ್ಕಾರಕ್ಕೆ ಪಂಚಸೂತ್ರ: ಜೆಡಿ(ಎಸ್) - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಲು ರೂಪಿಸಲಾಗಿರುವ ಪಂಚಸೂತ್ರಗಳು ಹೀಗಿವೆ; ೧)       ಸರ್ಕಾರ ನಡೆಸಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮ. ೨)          ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ಸಮನ್ವಯ ಸಮಿತಿ ರಚನೆ.  ೩)        ಸಮ್ಮಿಶ್ರ ಸಮನ್ವಯ  ಸಮಿತಿಗೆ ಇಬ್ಬರು ವಕ್ತಾರರ ನೇಮಕ. ೪)  ನೇಮಕಾತಿ ಬಗ್ಗೆ ಸಮನ್ವಯ ಸಮಿತಿಯಿಂದ ತೀರ್ಮಾನ. ೫) ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ.


2018: ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ಸಂಪ್ರದಾಯ, ಶಾಸ್ತ್ರಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದ ಕಾರಣ ಹೊನ್ನಾವರ ತಾಲ್ಲೂಕಿನ ಕರ್ಕಿಯಹಾಸ್ಯಗಾರ ಯಕ್ಷಗಾನ ಮೇಳಕ್ಕೆಮಡಿ ಮೇಳಎಂಬ ಅಭಿದಾನವಿತ್ತು. ಅದನ್ನು ಮುನ್ನಡೆಸಿಕೊಂಡು ಬರುತ್ತಿದ್ದ, ವೈಶಿಷ್ಟ್ಯಪೂರ್ಣಹಾಸ್ಯಗಾರ ಪರಂಪರೆಯನ್ನು ಹುಟ್ಟುಹಾಕಿದ ವಂಶದ ಕುಡಿಯೇ ಕೃಷ್ಣ ಪರಮಯ್ಯ ಹಾಸ್ಯಗಾರ ಹಿಂದಿನ ದಿನ (ಮೇ 31) ರಾತ್ರಿ ನಿಧನರಾದರು. ಯಕ್ಷಗಾನ ಪ್ರಸಂಗದಲ್ಲಿ ನಗಣ್ಯ ಎಂದು ಭಾವಿಸಲಾಗಿದ್ದ ಸಣ್ಣ ಸಣ್ಣ ಪಾತ್ರಗಳಿಗೂ ಅವರು ಹೊಸ ಭಾಷ್ಯ ಬರೆದು ಪ್ರೇಕ್ಷಕರ ಮುಂದೆ ಪ್ರಯೋಗದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟರು. 1926 ಜನವರಿ 28ರಂದು ಕರ್ಕಿಯ ಹಾಸ್ಯಗಾರ ಕಲಾ ಕುಟುಂಬದಲ್ಲಿ ಜನಿಸಿದ ಕೃಷ್ಣ, ಹೊನ್ನಾವರದ ಸೇಂಟ್ ಥಾಮಸ್ ಪ್ರೌಢಶಾಲೆಯಲ್ಲಿ ಹಲವು ವರ್ಷ ಕಲಾ ಶಿಕ್ಷಕರಾಗಿದ್ದರು. ತಮ್ಮ ವೃತ್ತಿಯ ಜೊತೆಗೇ ಯಕ್ಷಗಾನ ಹಾಗೂ ಮಣ್ಣಿನ ವಿಗ್ರಹ ತಯಾರಿಸುವ ಹವ್ಯಾಸವನ್ನೂ ಪೋಷಿಸಿಕೊಂಡು ಬಂದರು. ಶಿಕ್ಷಕರಾಗಿ ನಿವೃತ್ತಿಯಾದ ನಂತರ ಎರಡು ದಶಕಗಳಿಗೂ ಹೆಚ್ಚು ಕಾಲ ಕಲಾಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರುಅಪ್ರತಿಮ ಮುಖವರ್ಣಿಕೆ ಕಲೆಯನ್ನು ಸಿದ್ಧಿಸಿಕೊಂಡಿದ್ದ ಅವರು ಸಿಂಹ, ಪ್ರೇತ, ಬೇತಾಳ ಪಾತ್ರಗಳ ಸೃಜನಶೀಲ ಪ್ರಯೋಗಗಳ ಮೂಲಕ ಯಕ್ಷಗಾನ ಪ್ರಿಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ‘ಜಾಂಬವತಿ ಕಲ್ಯಾಣಪ್ರಸಂಗದ ಸಿಂಹ, ‘ಗದಾಯುದ್ಧಪ್ರಸಂಗದ ಪ್ರೇತದ ಪಾತ್ರ ಕೃಷ್ಣ ಹಾಸ್ಯಗಾರ ಅವರ ಹೆಸರಿಗೆ ಅನ್ವರ್ಥಕದಂತಿವೆ. ಪಾತ್ರಗಳ ಜೊತೆಗೆ ಹಾಸ್ಯ, ರಾಕ್ಷಸ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದ ಅವರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ವೃತ್ತಿ ಮೇಳಗಳ ಕಲಾವಿದರಾಗಿಯೂ ಕಾರ್ಯ ನಿರ್ವಹಿಸಿದ್ದರುನಾಡಿನಾದ್ಯಂತ ತಮ್ಮ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸಿ ಯಕ್ಷಗಾನ ರಂಗದ ಶ್ರೀಮಂತಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಅವರು ಕಲಾ ಪ್ರದರ್ಶನಗಳಲ್ಲಿ ಪ್ರಸಾಧನ ಕಲಾವಿದರಾಗಿಯೂ ಇತರ ಕಲಾವಿದರಿಗೆ ನೆರವಾಗುತ್ತಿದ್ದರು. ಅವರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದ್ದವು. ಅಂತ್ಯಕ್ರಿಯೆ:  ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಲ್ಲಾರಪುರದಲ್ಲಿ ಮೇ 31ರ ಗುರುವಾರ ರಾತ್ರಿ ನಿಧನರಾದ ಯಕ್ಷಗಾನ ಕಲಾವಿದ, ಹೊನ್ನಾವರ ತಾಲ್ಲೂಕಿನ ಕರ್ಕಿಯ ಕೃಷ್ಣ ಪರಮಯ್ಯ ಹಾಸ್ಯಗಾರ (92) ಅವರ ಅಂತ್ಯಕ್ರಿಯೆ ಈದಿನ  ನೆರವೇರಿತು. ಅವರು ಕೆಲವು ವರ್ಷಗಳಿಂದ ಮಹಾರಾಷ್ಟ್ರದಲ್ಲಿದ್ದ ಮಗನ ಮನೆಯಲ್ಲಿಯೇ ವಾಸ ಇದ್ದರು. ಅವರು ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದರು.

2016: ಬೆರ್ನ್: ವಿಶ್ವದ ಅತಿ ಉದ್ದವಾದ ಮತ್ತು ಆಳವಾದ ರೈಲ್ವೆ ಸುರಂಗ ಮಾರ್ಗ ಸ್ವಿಜರ್ಲೆಂಡ್ನಲ್ಲಿ ಅಧಿಕೃತವಾಗಿ ಓಡಾಟಕ್ಕೆ ಸಿದ್ಧವಾಗಿದೆ ಎಂದು ವರದಿಗಳು ತಿಳಿಸಿದವು. 57ಕಿ.ಮೀ ಉದ್ದ ಮತ್ತು 2.5 ಕಿ.ಮೀ ಆಳದಲ್ಲಿರುವ ಸುರಂಗಮಾರ್ಗ ನಿರ್ಮಿಸಲು ಎರಡುದಶಕಗಳ ಕಾಲಾವಕಾಶ ಬೇಕಾಯಿತು. ಮೂಲಕ ಜಪಾನ್ನಲ್ಲಿರುವ 53.9 ಕಿ.ಮೀ ಉದ್ದದ ರೈಲ್ವೆ ಸುರಂಗ ಮಾರ್ಗವನ್ನು ಸ್ವಿಜರ್ಲೆಂಡ್ ಸುರಂಗ ಮಾರ್ಗವು ಹಿಂದಿಕ್ಕಿದೆ. 1947ರಲ್ಲೇ ಇದರ ನೀಲನಕ್ಷೆ ತಯಾರಾಗಿದ್ದರೂ ನಿರ್ಮಾಣ ಕೆಲಸ 1992ರಲ್ಲಿ ಕಾರ್ಯರಂಭಗೊಂಡಿತ್ತುನಿರ್ಮಾಣ ಹಂತದಲ್ಲಿ ಏಳು ಕಾರ್ವಿುಕರನ್ನು ಬಲಿಪಡೆದ ಸುರಂಗ ಮಾರ್ಗದ ಕಾರ್ಯ 12 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 57 ಕಿ.ಮೀ ಉದ್ದವಿರುವ ರೈಲ್ವೆ ಸುರಂಗವನ್ನು ಕ್ರಮಿಸಲು ರೈಲು 17 ನಿಮಿಷ ಕಾಲಾವಕಾಶ ತೆಗೆದುಕೊಳ್ಳಲಿದೆ.

2016: ನವದೆಹಲಿ: ವಿವಾದಿತ ಶಸ್ತ್ರಾಸ್ರ ವ್ಯಾಪಾರಿ ಸಂಜಯ್ ಭಂಡಾರಿ ಹಾಗೂ ರಾಬರ್ಟ್ ವಾದ್ರಾ ನಡುವೆ -ಮೇಲ್ ಸಂಪರ್ಕವಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕೆಲವು ದೇಶಗಳಿಗೆ ನೋಟಿಸ್ ನೀಡಿತು.  ಇ -ಮೇಲ್ ಮಾಹಿತಿಯನ್ನು ಸಂಗ್ರಹಿಸಿ ಆದಾಯ ತೆರಿಗೆ ಇಲಾಖೆ ಇದರಲ್ಲಿ ಭಂಡಾರಿಯ ಪಾತ್ರವೇನು ಎಂಬ ಮಾಹಿತಿ ನೀಡುವಂತೆ ಬ್ರಿಟಿಷ್ ಮೂಲದ ಐಲ್ಯಾಂಡ್, ಯುಕೆ ಮತ್ತು ದುಬೈಗೆ ಪತ್ರ ಕಳುಹಿಸಿತು. ರಾಬರ್ಟ್ ವಾದ್ರಾ ಹಾಗೂ ಸಹಾಯಕ ಮನೋಜ್ ಅರೋರಾ 2009ರಲ್ಲಿ ಸಂಜಯ್ ಭಂಡಾರಿಗೆ ಹಲವು -ಮೇಲ್ ಕಳುಹಿದ್ದು ಲಂಡನ್ನಲ್ಲಿರುವ ಮನೆ ಖರೀದಿಯ ಬಗ್ಗೆ ಚರ್ಚೆ ನಡೆಸಿದ್ದರು. ನಂತರ 2009 ಅಕ್ಟೋಬರ್ನಲ್ಲಿ 19 ಕೋಟಿ ರೂ.ಗೆ ಮನೆ ಖರೀದಿಸಿ 2010ರಲ್ಲಿ ಮಾರಾಟ ಮಾಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಬರ್ಟ್ ವಾದ್ರಾ ಮತ್ತು ಭಂಡಾರಿ ನಡುವಿನ ಸಂಬಂಧವಿದೆ ಎಂಬ ಹೇಳಿಕೆಯನ್ನು ನಿರಾಕರಿಸಿ, ಇದು ವಾದ್ರಾ ವಿರುದ್ಧ ಮಾಡಿರುವ ವ್ಯವಸ್ಥಿತ ಸಂಚು ಎಂದು ಗುಡುಗಿದ್ದರು.

2016: ನವದೆಹಲಿ: ಮುಸ್ಲಿಂ ವೈವಾಹಿಕ ವ್ಯವಸ್ಥೆಯಲ್ಲಿರುವ ವಿಚ್ಛೇದನಕ್ಕೆ ಇರುವ ತ್ರಿವಳಿ ತಲಾಕ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಮ್å್ಎ) ಹಮ್ಮಿಕೊಂಡ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ಈಗಾಗಲೇ ಐವತ್ತು ಸಾವಿರ ಸಹಿ ಸಂಗ್ರಹವಾಗಿದೆ ಎಂದು ವರದಿಗಳು ತಿಳಿಸಿದವು. ಖುರಾನಿನಲ್ಲಿರುವ ತಲಾಕ್ ಪದ್ಧತಿಯನ್ನು ವಜಾಗೊಳಿಸಬೇಕೆಂದು ಮಹಿಳೆಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬೇಡಿಕೆ ಸಲ್ಲಿಸದರು. ಈ ಅಭಿಯಾನದ ಕುರಿತು ಬಿಎಮ್å್ಎ ಸಹ ಸಂಸ್ಥಾಪಕಿ ಜಾಕಿಯಾ ಸೋಮನ್ ಪ್ರತಿಕ್ರಿಯಿಸಿ, ಸಹಿ ಸಂಗ್ರಹ ಅಭಿಯಾನವನ್ನು ಬಿಹಾರ್, ಕರ್ನಾಟಕ, ಗುಜರಾತ್, ತಮಿಳುನಾಡು, ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ಅಭಿಯಾನಕ್ಕೆ ಮಹಿಳೆಯರು ಹಾಗೂ ಪುರುಷರು ಸಮಾನವಾಗಿ ಬೆಂಬಲ ಸೂಚಿಸಿದ್ದಾರೆ. ವಿಚಾರವಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ತ್ರಿವಳಿ ತಲಾಕ್ ಪೋನ್ ಹಾಗೂ ಮೆಸೇಜ್ಗಳ ಮೂಲಕ ಕೂಡ ಪಡೆಯಲಾಗುತ್ತಿದೆ. ಇದರಿಂದ ಮಹಿಳೆಯರು ಅಭದ್ರತೆಗೆ ಒಳಗಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಶೇಕಡ 92ರಷ್ಟು ಮಹಿಳೆಯರು ತ್ರಿವಳಿ ತಲಾಕ್ ವಿರೋಧಿಸಿದ್ದಾರೆ ಎನ್ನಲಾಗಿದೆ. ಭೋಪಾಲ್ ಮೂಲದ ಸಾದಿಯಾ ವಕ್ ಮಾತನಾಡಿ, ತಲಾಕ್ ಹಾಸ್ಯಾಸ್ಪದವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಕೂಡ ತಲಾಕ್ ನೀಡುತ್ತಿರುವುದು ವಿಪರ್ಯಾಸ. ರೀತಿ ತಲಾಕ್ಗೆ ಯಾವುದೇ ಕಾನೂನಿನ ಮಾನ್ಯತೆಯಿಲ್ಲ ಎಂದು ತಿಳಿಸಿದರು. ಶಾ ಬಾನೊ ಪ್ರಕರಣದ ಸಂಬಂಧ ಸುಪ್ರಿಂಕೊರ್ಟ್ಗೆ ಸಲ್ಲಿಸಿರುವ ಅರ್ಜಿ ಯೊಂದರಲ್ಲಿ ತಲಾಕ್ನ್ನು ಅಸಂವಿಧಾನಿಕ ಎಂದು ಮಾನ್ಯಮಾಡುವಂತೆ ಹಿಂದೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೊರ್ಡ್(ಎಐಎಂಪಿಎಲ್ಬಿ) ಒತ್ತಾಯಿಸಿತ್ತು.

2016: ಗುವಾಹಟಿ: ಅಸ್ಸಾಂನಲ್ಲಿ ಆರ್ಎಸ್ಎಸ್ ನಡೆಸುತ್ತಿರುವ ಶಂಕರದೇವ ಶಿಶು ನಿಕೇತನ ಶಾಲೆಯಲ್ಲಿ ಓದಿದ ಮುಸ್ಲಿಂ ಬಾಲಕ ಹತ್ತನೆ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸರ್ಫರಾಜ್ ಹುಸೈನ್ 600 ಅಂಕಗಳಿಗೆ 590 ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ತಮ್ಮ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ತಂದೆ-ತಾಯಿಯ ಪ್ರೋತ್ಸಾಹವೇ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು. ಎಂಟನೇ ತರಗತಿಯಿಂದ ಸಂಸ್ಕೃತ ಅಭ್ಯಾಸ ಕೈಗೊಂಡ ಬಾಲಕ ಸಾರಿ ನೂರಕ್ಕೆ ನೂರು ಅಂಕಗಳಿಸಿದ್ದು ಮಾತ್ರವಲ್ಲ ಸಂಸ್ಕೃತ ಪ್ರಬಂಧ ಹಾಗೂ ವಿಚಾರ ಸಂಕಿರಣದಲ್ಲೂ ಮುಂಚೂಣಿ ಸಾಧಿಸಿರುವುದು ವಿಶೇಷ. ಮುಂದೆ ಎಂಜಿನಿಯರ್ ಆಗಬೇಕೆಂದು ಸರ್ಫರಾಜ್ ಕನಸು ಹೊತ್ತಿದ್ದಾರೆ. ಈತನ ತಂದೆ ಹೋಟೆಲ್ ಉದ್ಯಮಿ ಆಗಿದ್ದು, ತಾಯಿ ಗೃಹಿಣಿ.

 

2016: ಪುಲ್ ಗಾಂವ್: ಮಹಾರಾಷ್ಟ್ರದ ಪುಲ್ ಗಾಂವ್ನಲ್ಲಿರುವ ಸೇನಾ ಶಸ್ತ್ರಾಗಾರದಲ್ಲಿ
ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತರಾದವರ  ಸಂಖ್ಯೆ 19ಕ್ಕೆ ಏರಿತು. ಈದಿನ ಇನ್ನೂ ಮೂರು ಯೋಧರ ಶವಗಳು ದೊರೆತವು. ಸುಟ್ಟಗಾಯಗಳಿಂದ 17 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಠಾಣ್ಕೋಟ್ ವಾಯುನೆಲೆ ನೆಲೆ ಮೇಲೆ ಉಗ್ರರ ದಾಳಿ ನಡೆದ ನಂತರ ಭದ್ರತಾ ಸಾಮರ್ಥ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಈಡಾಗಿದ್ದ ಭಾರತಕ್ಕೀಗ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರದ ಅಗ್ನಿದುರಂತದ ಆಘಾತ ಎದುರಾಯಿತು. ಮಹಾರಾಷ್ಟ್ರದ ಪುಲ್ಗಾಂವ್ನಲ್ಲಿರುವ ದೇಶದ ಅತಿ ದೊಡ್ಡ ಸೇನಾ ಶಸ್ತ್ರಾಗಾರದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 16 ಯೋಧರು ಮೃತರಾಗಿದ್ದರು. ಭಾರತದ ಸೇನಾ ಬತ್ತಳಿಕೆಯಲ್ಲಿರುವ ಅನೇಕ ಪ್ರಮುಖ ಶಸ್ತ್ರಾಸ್ತ್ರಗಳು ಅಗ್ನಿಗಾಹುತಿಯಾಗಿ ಆತಂಕ ಸೃಷ್ಟಿಯಾಗಿತ್ತು.. ದುರಂತದ ಹಿಂದೆ ವಿಧ್ವಂಸಕ ಶಕ್ತಿಗಳ ಕೈವಾಡ ಇರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಯುತ್ತಿರುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.

2016: ನವದೆಹಲಿ: ಪೆಟ್ರೋಲ್ ದರ ಏರಿಸಿದಂತೆ ವಿಮಾನಗಳಿಗೆ ಬಳಸುವ ಇಂಧನ ದರವನ್ನೂ ಕೇಂದ್ರ ಸರ್ಕಾರ ಶೇ. 9.2 ರಷ್ಟು ಹೆಚ್ಚಳ ಮಾಡಿತು. ಇದರಿಂದಾಗಿ ಶೀಘ್ರವೇ ವಿಮಾನಯಾನ ಟಿಕೆಟ್ ದರವೂ ಹೆಚ್ಚಾಗುವ ಸಾಧ್ಯತೆ ಹೆಚ್ಚಿತು.  ಶೇ. 9.2 ದರ ಏರಿಕೆಯಿಂದ ವಿಮಾನ ಇಂಧನ ದರ ಜೂನ್ 1 ರಿಂದ 3,945 ರೂ. ಹೆಚ್ಚಳವಾಯಿತು.. (ಅಂದರೆ ದೆಹಲಿಯಲ್ಲಿ ಒಂದು ಕಿಲೋ ಲೀಟರ್ ಇಂಧನ ದರ 46,729 ರೂ.) ಹಣಕಾಸು ಸಚಿವ ಅರುಣ್ ಜೇಟ್ಲಿ 2016-17 ಮುಂಗಡಪತ್ರದಲ್ಲಿ ಕೃಷಿ ಕಲ್ಯಾಣ ಸೆಸ್ನ್ನು ತೆರಿಗೆಗೆ ಒಳಪಡುವ ಎಲ್ಲ ಸೇವೆಗಳ ಮೇಲೂ ವಿಧಿಸುವ ಪ್ರಸ್ತಾಪ ಮಾಡಿದ್ದರು. ಅದು ಜೂನ್ 1 ರಿಂದಲೇ ಜಾರಿಗೆ ಬಂದಿತು.

2016: ಭುವನೇಶ್ವರ: ಜಿಲ್ಲೆಯ ವಿವಿಧೆಡೆ ಈದಿನ ಸಂಜೆ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲಿಗೆ 15 ಜನ ಬಲಿಯಾಗಿ, 8 ಕ್ಕೂ ಹೆಚ್ಚು ಜನ ಗಾಯಗೊಂಡರು. ಸಂಜೆ ಗುಡುಗು ಸಹಿತ ಮಳೆಯಾದ ಸಂದರ್ಭ ಅವಗಢ ಘಟಿಸಿತು.

2016: ಬ್ಯಾಂಕಾಕ್: ಥಾಯ್ಲೆಂಡ್ ಕಾಂಚನ್ಬುರಿಯಲ್ಲಿರುವ ವಿವಾದಾತ್ಮಕ ವಾತ್ ಪಾ ಲುಂಗ್ ಬುವಾ ಹುಲಿ ದೇಗುಲದ ಫ್ರೀಜರ್ನಲ್ಲಿ 40 ಹುಲಿ ಮರಿಗಳ ಮೃತದೇಹ ಪತ್ತೆಯಾಯಿತು. ಹುಲಿಗಳನ್ನು ಅಕ್ರಮವಾಗಿ ಸಾಕಲಾಗಿದೆ ಎಂಬ ಆರೋಪದ ಮೇಲೆ ದೇಗುಲದ ವಿರುದ್ಧ ಥಾಯ್ಲೆಂಡ್ ಸರ್ಕಾರ ಕ್ರಮ ತೆಗೆದುಕೊಂಡಿತು.   ಈದಿನ 45
ಹುಲಿಗಳನ್ನು ರಕ್ಷಿಸಲಾಗಿದ್ದು, ದೇಗುಲಕ್ಕೆ ಬೀಗ ಮುದ್ರೆ ಹಾಕಲಾಯಿತು. ಈದಿನ ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ದೇಗುಲದಲ್ಲಿದ್ದ ಫ್ರೀಜರ್ನಲ್ಲಿ 40 ಹುಲಿ ಮರಿಗಳ ಮೃತದೇಹ ಪತ್ತೆಯಾಯಿತು. ನವಜಾತ ಹುಲಿ ಮರಿಗಳ ಮೃತದೇಹವನ್ನು ಸಂರಕ್ಷಿಸಿ ಇಡಲಾಗಿದೆ. ಇವುಗಳನ್ನು ಎಷ್ಟು ದಿನದಿಂದ ಸಂರಕ್ಷಿಸಿ ಇಡಲಾಗಿದೆ ಎಂಬುದ ಮಾಹಿತಿ ಇಲ್ಲ. ಅನುಮತಿಯಿಲ್ಲದೆ ಹುಲಿ ಮರಿಗಳ ಮೃತದೇಹವನ್ನು ಸಂಗ್ರಹಸಿದ ಕಾರಣಕ್ಕಾಗಿ ದೇಗುಲದ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾದರು. ಮೃತ ಹುಲಿ ಮರಿಗಳ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿತ್ತು. ಆದರೆ 2010ರಲ್ಲಿ ನಿಯಮಗಳು ಬದಲಾದ ಕಾರಣ ಮೃತಪಟ್ಟ ಹುಲಿ ಮರಿಗಳನ್ನು ಸಂರಕ್ಷಿಸಿ ಫ್ರೀಜರ್ಗಳಲ್ಲಿ ಸಂಗ್ರಹಿಸಿಡಲಾಗಿದೆ ಎಂದು ದೇಗುಲದ ಆಡಳಿತ ತಿಳಿಸಿತು.
2016: ಮೇಘಾಲಯ: ಅರುಣಾಚಲ ಪ್ರದೇಶದದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟು ಮುಖ್ಯಮಂತ್ರಿ ನಿಖಿಲ್ ಸಂಗ್ಮಾ ಅವರ ಸ್ಥಾನಕ್ಕೆ ಚ್ಯುತಿ ತರುವ ಹಂತಕ್ಕೆ ತಲುಪಿತು.
ಸಂಗ್ಮಾ ಅವರನ್ನು ಪದಚ್ಯುತಗೊಳಿಸಬೇಕು, ಅವರ ಸರ್ವಾಧಿಕಾರಿ ಆಡಳಿತಕ್ಕೆ ಮಂಗಳ ಹಾಡಬೇಕು ಎಂಬ ಕಾಂಗ್ರೆಸ್ ಭಿನ್ನರ ಪಡೆಯ ಕೂಗು ತಾರಕಕ್ಕೆ ಏರಿತು. ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರು ಪಕ್ಷದ ಹೈಕಮಾಂಡ್ ಸೋನಿಯಾಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಗೆ ತುರ್ತು ಸಂದೇಶ ರವಾನಿಸಿದರು. ಬಿಜೆಪಿ ಮುಖಂಡ ರಾಮ್ ಮಾಧವ್ ಅವರು ಕಾಂಗ್ರೆಸ್ ಭಿನ್ನಮತೀಯರ ಶಾಸಕರ ಗುಂಪಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಸರ್ಕಾರವನ್ನು ಬೀಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಮುಖಂಡರು ತುರ್ತು ಸಂದೇಶದಲ್ಲಿ ತಿಳಿಸಿದರು. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿತಗೊಳಿಸುವಲ್ಲಿ ಬಿಜೆಪಿ ಚಿತಾವಣೆ ನಡೆಸುತ್ತಿದೆ. ಬಗ್ಗೆ ಹೈಕಮಾಂಡ್ ತುರ್ತಾಗಿ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಮೊರೆ ಇಟ್ಟರು. ನಿಖಿಲ್ ಸಂಗ್ಮಾ ಅವರನ್ನು ಗದ್ದುಗೆಯಿಂದ ಕೆಳಗಿಳಿಸಿ ಡಿ.ಡಿ.ಲೆಪಾಂಗ್ ಅವರಿಗೆ ಪಟ್ಟ ಕಟ್ಟುವ ಪ್ರಕ್ರಿಯೆಗೆ ತೆರೆಮರೆಯ ಚಟುವಟಿಕೆಗಳು ತೀವ್ರಗೊಂಡವು.

2016: ಮುಂಬೈ: ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರಲು ಜಸ್ಟೀಸ್ ಲೋಧಾ ಸಮಿತಿ ಮಾಡಿರುವ ಶಿಫಾರಸಿನಂತೆ ಇದೇ ಮೊದಲ ಬಾರಿಗೆ ಬಿಸಿಸಿಐಗೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ನೇಮಕ ಮಾಡಲಾಯಿತು.. ಪ್ರಥಮ ಸಿಇಒ ಆಗಿ ರಾಹುಲ್ ಜೋಹರಿ ಅಧಿಕಾರ ಸ್ವೀಕರಿಸಿದರು. ರಾಹುಲ್ ಜೋಹರಿ ಈದಿನ ಅಧಿಕಾರ ಸ್ವೀಕಾರ ಮಾಡಿದ್ದು, ಇವರು ಬಿಸಿಸಿಐ ಕಾರ್ಯದರ್ಶಿಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಮುಂಬೈ ಮುಖ್ಯ ಕಚೇರಿಯಲ್ಲಿ ಇವರು ಕಾರ್ಯ ನಿರ್ವಹಿಸುವರು ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿತು. ರಾಹುಲ್ ಜೋಹರಿ ಮುನ್ನ ಡಿಸ್ಕವರಿ ನೆಟ್ವರ್ಕ್ ಏಷ್ಯಾ ಫೆಕ್ಕ್ ವಲಯದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ದಕ್ಷಿಣ ಏಷ್ಯಾ ವಲಯದ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು.. ರಾಹುಲ್ ಅವರು ಮಾಧ್ಯಮ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಡಿಸ್ಕವರಿ ನೆಟ್ವರ್ಕ್ನಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿದ ಅನುಭವ ಹೊಂದಿದ್ದರು.

2016: ಬ್ರೆಜಿಲಿಯಾ: ಅಪ್ರಾಪ್ತೆಯ ಮೇಲೆ ನಡೆದ ಗ್ಯಾಂಗ್ರೇಪ್ ಮತ್ತು ಗ್ರಾಫಿಕ್ ವಿಡಿಯೋವನ್ನು ಆಲ್ಲೈನ್ಗೆ ಪೋಸ್ಟ್ ಮಾಡಿ ಇಡೀ ಬ್ರೆಜಿಲ್ ಬೆಚ್ಚಿಬೀಳುವಂತೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.  ಉಳಿದ ನಾಲ್ವರು ಶಂಕಿತರಿಗಾಗಿ ಶೋಧಕಾರ್ಯ ಮುಂದುವರಿಸಲಾಯಿತು.  ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಯ್ ಸೋಜಾ ಹಾಗೂ ಲೂಕಾಸ್ ಪರ್ಡೊಮೊ ಪೊಲೀಸರಿಗೆ ಶರಣಾದರು. ಕಳೆದವಾರ 16 ವರ್ಷದ ಬಾಲಕಿಯ ಮೇಲೆ 30 ಜನರು ಸೇರಿ ಅತ್ಯಾಚಾರ ಮಾಡಿ ವಿಡಿಯೋವನ್ನು ಟ್ವಿಟರ್ ಹಾಕಿ ಬೆಚ್ಚಿಬೀಳುವಂತೆ ಮಾಡಿದ್ದರು. ಘಟನೆಯ ನಂತರ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಿಂದ ವಿಶೇಷ ಪಡೆಯನ್ನು ಆಯೋಜಿಸಲಾಗುವುದು ಎಂದು ಬ್ರೆಜಿಲ್ ಅಧ್ಯಕ್ಷ ಮೈಕಲ್ ಟೆಮೆರ್ ತಿಳಿಸಿದ್ದರು.

2016: ಬ್ಯಾಂಕಾಕ್: ಥೈಲ್ಯಾಂಡ್ ಪ್ರಸಿದ್ಧ ಬೌದ್ಧ ದೇವಾಲಯವೊಂದರಲ್ಲಿ ಹುಲಿಗಳನ್ನು ಅಕ್ರಮವಾಗಿ ಸಾಕಲಾಗುತ್ತಿದೆ ಎಂದು ವನ್ಯಜೀವಿ ಅಧಿಕಾರಿಗಳು 40 ಹುಲಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಥೈಲ್ಯಾಂಡ್ ಕಾಂಚನಬುರಿ ಎಂಬಲ್ಲಿನ ಬೌದ್ಧ ದೇವಾಲಯದಲ್ಲಿ ಅಲ್ಲಿನ ಸನ್ಯಾಸಿಗಳು 130 ಹುಲಿಗಳನ್ನು ಸಾಕಿದ್ದ ಹಿನ್ನೆಲೆಯಲ್ಲಿ ದೇಗುಲ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿತ್ತು. ಪ್ರತಿನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಹುಲಿಗಳೊಡನೆ ಸೆಲ್ಪಿ ತೆಗೆಯುತ್ತಿದ್ದರು. ವನ್ಯಜೀವಿ ಪ್ರೇಮಿಗಳು ಸೇರಿದಂತೆ ಅಧಿಕಾರಿಗಳು 2001ರಿಂದ ಪ್ರಾಣಿಗಳನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದರಾದರೂ ಸಾಧ್ಯವಾಗಿರಲಿಲ್ಲ. ಆದರೆ ಸಲ ಕೋರ್ಟ್ ಅದಿಸೂಚನೆಯನ್ನು ಪಡೆದು ಪ್ರಾಣಿಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ವನ್ಯಜೀವಿ ಅಧಿಕಾರಿ ಅಡಿಸನ್ ತಿಳಿಸಿದರು.

 2009: ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಲು ಹಣ, ಹೆಂಡ, ಜಾತಿಯ ಬಳಕೆ ಆಗಿದ್ದು, ಇದರ ಬಗ್ಗೆ ಹಿರಿಯ ಮುಖಂಡರಿಂದ ತನಿಖೆ ನಡೆಸಬೇಕು ಎಂದು ಶಿವಮೊಗ್ಗದಲ್ಲಿ ಆಗ್ರಹ ಪಡಿಸುವುದರೊಂದಿಗೆ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ಕತ್ತಿ ಝಳಪಿಪಿಸಿದರು. ಧಾರ್ಮಿಕ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಸಂಸದ ಬಿ.ವೈ. ರಾಘವೇಂದ್ರರಿಗೆ ಚುನಾವಣೆಯಲ್ಲಿ ಈಶ್ವರಪ್ಪನವರ ಕ್ಷೇತ್ರದಲ್ಲಿ ಕಡಿಮೆ ಮತಗಳು ಬಂದ ಬಗ್ಗೆ ಬಹಿರಂಗವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಈದಿನ ಈಶ್ವರಪ್ಪ, ಮುಖ್ಯಮಂತ್ರಿಗಳ ಈ ಹೇಳಿಕೆಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿ ಬಹುದಿನಗಳಿಂದ ಅದುಮಿಟ್ಟಿದ್ದ ಭಿನ್ನಮತ ಸ್ಫೋಟಿಸಿದರು.

2009: ಬ್ರೆಜಿಲ್‌ನ ರಿಯೊ ಡಿ ಜನೈರೊದಿಂದ ಪ್ಯಾರಿಸ್‌ಗೆ ಹೊರಟಿದ್ದ 228 ಮಂದಿ ಇದ್ದ ಏರ್ ಫ್ರಾನ್ಸ್ ವಿಮಾನ ಹಾರಾಟ ಆರಂಭಿಸಿದ ಕೆಲ ಗಂಟೆಗಳಲ್ಲೇ ಕಣ್ಮರೆಯಾಯಿತು. ಅದು ಅಟ್ಲಾಂಟಿಕ್ ಸಾಗರದಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ನಂಬಲಾಯಿತು. ಬ್ರೆಜಿಲ್ ಕಾಲಮಾನದಂತೆ ಹಿಂದಿನ ಸಂಜೆ 7 ಗಂಟೆಗೆ ಈ ವಿಮಾನ ಹಾರಾಟ ಆರಂಭಿಸಿತು. ರಿಯೊ ಡಿ ಜನೈರೊದಿಂದ ಈಶಾನ್ಯಕ್ಕೆ 1,500 ಮೈಲಿ ದೂರದಲ್ಲಿರುವ ಅಟ್ಲಾಂಟಿಕ್ ಸಾಗರದ ದ್ವೀಪ ಸಮೂಹ ಫರ್ನಾಡೊ ಡಿ ನೊರೊನ್ಹಾ ಬಳಿ ನಾಪತ್ತೆಯಾಯಿತು. ಈ ದ್ವೀಪ ಸಮೂಹ ಬ್ರೆಜಿಲ್‌ನ ಈಶಾನ್ಯ ತುದಿಯ ನಗರ ನಟಾಲ್‌ನಿಂದ 300 ಕಿ.ಮೀ. ದೂರದಲ್ಲಿ ವಿಮಾನ ವಿದ್ಯುತ್ ವೈಫಲ್ಯದಿಂದ ಸಂಪರ್ಕ ಕಡಿದುಕೊಂಡಿತು.

2009: ಜಾಗತಿಕ ಹಿಂಜರಿತ ಮತ್ತು ಬೇಡಿಕೆ ಕುಸಿತದಿಂದಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದೆ ಅಮೆರಿಕದ ಪ್ರಮುಖ ಕಾರು ತಯಾರಿಕಾ ಕಂಪೆನಿ ಜನರಲ್ ಮೋಟಾರ್ಸ್‌ (ಜಿಎಂ), ದಿವಾಳಿ ಆಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿತು. ಕಾರ್ಪೊರೇಟ್ ವಲಯದ ಇತಿಹಾಸದಲ್ಲಿ ದಿವಾಳಿಯಾಗಿರುವ ಕಂಪೆನಿಗಳ ಸಾಲಿನಲ್ಲಿ ಇದು ಅತ್ಯಂತ ದೊಡ್ಡ ಪ್ರಮಾಣದ್ದು. ನೂರು ವರ್ಷಗಳ ಹಿನ್ನೆಲೆ ಇರುವ ಜನರಲ್ ಮೋಟಾರ್ಸ್‌, ಷೇರು ಹೂಡಿಕೆದಾರರ ಹಿತಾಸಕ್ತಿಯನ್ನು ಉಳಿಸಿಕೊಳ್ಳಲು ನ್ಯೂಯಾರ್ಕ್‌ನ ದಕ್ಷಿಣ ಭಾಗದಲ್ಲಿರುವ 'ಯುಎಸ್ ಬ್ಯಾಂಕರ್‌ಪ್ಟಸಿ ಕೋರ್ಟ್'ನಲ್ಲಿ ಚಾಪ್ಟರ್ 11ರ ಅಡಿಯಲ್ಲಿ ದಿವಾಳಿಯಾಗಿರುವ ಬಗ್ಗೆ ಅರ್ಜಿ ಸಲ್ಲಿಸಿತು. ಜನರಲ್ ಮೋಟಾರ್ಸ್‌ 1908ರಲ್ಲಿ ಸ್ಥಾಪನೆಯಾಗಿತ್ತು. ಎರಡು ಮಹಾಯುದ್ಧ ಮತ್ತು 1930ರ ಭೀಕರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ದಿವಾಳಿಯಾಗುವುದರಿಂದ ಪಾರಾಗಿತ್ತು. ಆದರೆ, ಪ್ರಸ್ತುತ ಆರ್ಥಿಕ ಹಿಂಜರಿತ ಕಠಿಣ ಸವಾಲಾಗಿ ಪರಿಣಮಿಸಿದೆ ಎನ್ನುವುದು ಈ ಮೂಲಕ ಸಾಬೀತಾಯಿತು. ಜನರಲ್ ಮೋಟಾರ್ಸ್‌ ಕಂಪೆನಿಯಲ್ಲಿ ವಿಶ್ವದಾದ್ಯಂತ 140 ದೇಶಗಳಲ್ಲಿ ಒಟ್ಟು 24.4 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದರು.

2009: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಮೀರಾ ಕುಮಾರ್ ನಾಮಕರಣಗೊಂಡರು. ಅವರು ಇದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಮಿತ್ರಪಕ್ಷಗಳಿಗೆ ಕೃತಜ್ಞತೆ ಸಲ್ಲಿಸಿದರು. ಜಲ ಸಂಪನ್ಮೂಲ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನಗಳಲ್ಲಿ ಮೀರಾ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಮೀರಾ ನಡೆದು ಬಂದ ಹಾದಿ

1945: ಮಾರ್ಚ್ 31ರಂದು ಜನನ
1973: ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆ
1985: ಹುದ್ದೆಗೆ ರಾಜೀನಾಮೆ, ಸಕ್ರಿಯ ರಾಜಕಾರಣಕ್ಕೆ ಪ್ರವೇಶ
ಬಿಂಜೋರ್ ಉಪ ಚುನಾವಣೆಯಲ್ಲಿ ಎದುರಾಳಿ ಆಗಿದ್ದ ಮಾಯಾವತಿ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಸೋಲಿಸಿ ಮೊದಲ ಬಾರಿ ಲೋಕಸಭೆಗೆ ಆಯ್ಕೆ
1991: ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯೆಯಾಗಿ ನೇಮಕ
1991-92: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
1996: ದೆಹಲಿಯ ಕರೋಲ್ ಬಾಗ್ ಕ್ಷೇತ್ರದಿಂದ ಆಯ್ಕೆ
1998: ಕರೋಲ್ ಬಾಗ್ ಕ್ಷೇತ್ರದಿಂದ ಲೋಕಸಭೆಗೆ ಪುನರಾಯ್ಕೆ
2004: ಜಗಜೀವನ್ ರಾಮ್ ಅವರ ತವರು ಕ್ಷೇತ್ರ ಬಿಹಾರದ ಸಸಾರಾಮ್‌ನಿಂದ ಆಯ್ಕೆ
2004: ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಂಪುಟ ಸಚಿವೆಯಾಗಿ ಸಿಂಗ್ ಮಂತ್ರಿಮಂಡಲಕ್ಕೆ ಸೇರ್ಪಡೆ 2009: ಸಸಾರಾಮ್ ಕ್ಷೇತ್ರದಿಂದ ಪುನರಾಯ್ಕೆ. ಜಲಸಂಪನ್ಮೂಲ ಸಚಿವೆಯಾಗಿ (ಸಂಪುಟ ದರ್ಜೆ) ಪ್ರಮಾಣ ವಚನ ಸ್ವೀಕಾರ.

2009: ಈದಿನ ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಎಲ್.ಕೆ. ಅಡ್ವಾಣಿ (81) ಅವರನ್ನು ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಲೋಕಸಭೆಯಲ್ಲಿ ಅತಿ ದೊಡ್ಡ ವಿರೋಧ ಪಕ್ಷದ ನಾಯಕರಾದ ಕಾರಣ ಸಹಜವಾಗಿಯೇ ವಿರೋಧ ಪಕ್ಷದ ನಾಯಕನ ಹೊಣೆ ಅವರ ಕೊರಳಿಗೆ ಬಿದ್ದಿತು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಎರಡೂ ಸದನಗಳ ಉಪ ನಾಯಕರು ಹಾಗೂ ಮುಖ್ಯ ಸಚೇತಕರನ್ನು ನೇಮಕ ಮಾಡುವ ಅಧಿಕಾರವನ್ನು ಈ ಸಭೆಯಲ್ಲಿ ಅವರಿಗೆ ನೀಡಲಾಯಿತು.

2009: ಟೈಟಾನಿಕ್ ಹಡಗು ದುರಂತದಲ್ಲಿ ಪಾರಾಗಿ ಬದುಕುಳಿದಿದ್ದ ಕೊನೆಯ ಮಹಿಳೆ
ಮಿಲ್ವಿನಾ ಡೀನ್ ಇಂಗ್ಲೆಂಡಿನ ಪೋಷಣಾ ಗೃಹವೊಂದರಲ್ಲಿ ಕೊನೆಯುಸಿರು ಎಳೆದರು. ಅವರ ಇಬ್ಬರು ಸ್ನೇಹಿತರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ಈ ವರದಿ ಮಾಡಿತು. ಡೀನ್ ಅವರಿಗೆ 97 ವರ್ಷ ವಯಸ್ಸಾಗಿತ್ತು. 1912ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗು ಹಿಮಗಡ್ಡೆಗೆ ಅಪ್ಪಳಿಸಿ ದುರಂತ ಸಂಭವಿಸಿದಾಗ ಡೀನ್ ಎರಡು ತಿಂಗಳ ಮಗುವಾಗಿದ್ದರು. ಆ ಸಂದರ್ಭದಲ್ಲಿ ಅವರ ಕುಟುಂಬ ಅಮೆರಿಕದ ಕನ್ಸಾಸ್‌ಗೆ ವಲಸೆ ಹೊರಟಿತ್ತು. ದುರಂತ ಸಂಭವಿಸಿದಾಗ ಡೀನ್ ಅವರನ್ನು ಚೀಲದಲ್ಲಿಟ್ಟು ರಕ್ಷಿಸಲಾಗಿತ್ತು. ಅವರ ಸಹೋದರ ಹಾಗೂ ತಾಯಿ ಕೂಡ ದುರಂತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.. ಆದರೆ ತಂದೆ ಮಾತ್ರ ಪ್ರಾಣ ಕಳೆದುಕೊಂಡ 1,500 ಪ್ರಯಾಣಿಕರ ಹಾಗೂ ಸಿಬ್ಬಂದಿ ಜೊತೆಯಲ್ಲಿ ಸೇರಿದ್ದರು. ದಕ್ಷಿಣ ಇಂಗ್ಲೆಂಡಿನಲ್ಲಿರುವ ಹ್ಯಾಂಪಶೈರ್‌ನ ಪೋಷಣಾ ಗೃಹವೊಂದರಲ್ಲಿ ಡೀನ್ ಮೃತರಾದರು ಎಂದು ಹೆಸರು ಹೇಳದ ಮಿಲ್ವಿನಾ ಡೀನ್ ಅವರ ಇಬ್ಬರು ಸ್ನೇಹಿತೆಯರು ಬಿಬಿಸಿಗೆ ತಿಳಿಸಿದರು. ಜೀವನದ ಹೆಚ್ಚು ಅವಧಿಯನ್ನು ಹಾಂಪ್ಟನ್ ಕೌಂಟಿಯ ಸೌತಾಂಪ್ಟನ್‌ನಲ್ಲಿ ಕಳೆದಿದ್ದ ಡೀನ್ ಪೋಷಣಾ ಗೃಹದ ವೆಚ್ಚವನ್ನು ಭರಿಸಲು ಕಷ್ಟ ಪಡುತ್ತಿದ್ದರು. 2008ರ ಅಕ್ಟೋಬರ್‌ನಲ್ಲಿ ಹಡಗಿನ ಸಾಮಾಗ್ರಿಗಳನ್ನು ಹರಾಜು ಹಾಕುವ ಮೂಲಕ 53,900 ಅಮೆರಿಕನ್ ಡಾಲರ್‌ಗಳನ್ನು ಸಂಗ್ರಹಿಸಲಾಗಿತ್ತು. ದುರಂತದಲ್ಲಿ ಪಾರಾಗಿ ನ್ಯೂಯಾರ್ಕ್‌ಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೀಡಲಾಗಿದ್ದ ಹಳೆಯ ಬಟ್ಟೆಗಳನ್ನು ತುಂಬಿಸಿದ್ದ 100 ವರ್ಷದ ಸೂಟ್‌ಕೇಸನ್ನು ಅವರು ನಿವಾರ್ಯವಾಗಿ ಮಾರಬೇಕಾಯಿತು. ಹಡಗಿನಲ್ಲಿದ್ದ ಅಪರೂಪದ ಕಲಾಕೃತಿಗಳನ್ನು ಹಾಗೂ ಟೈಟಾನಿಕ್ ಪರಿಹಾರ ನಿಧಿಯಿಂದ ಅವರ ತಾಯಿಗೆ ಕಳುಹಿಸಿದ್ದ ಪತ್ರಗಳನ್ನು ಕೂಡ ಇಂಗ್ಲೆಂಡಿನ ನೈಋತ್ಯಕ್ಕಿರುವ ಡಿವೈಜ್‌ನಲ್ಲಿ ನಡೆದ ಹರಾಜಿನಲ್ಲಿ ಬಳಸಲಾಗಿತ್ತು. ದುರಂತದಲ್ಲಿ ಬದುಕುಳಿದಿದ್ದ ಅಮೆರಿಕದ ಕೊನೆಯ ವ್ಯಕ್ತಿ ಲಿಲ್ಲಿಯನ್ ಅಸ್ಟ್ಲುಂಡ್ 2006ರ ಮೇ ತಿಂಗಳಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಟೈಟಾನಿಕ್ ದುರಂತದ ಸಂದರ್ಭದಲ್ಲಿ ಅವರಿಗೆ ಐದು ವರ್ಷ ವಯಸ್ಸಾಗಿತ್ತು.

2009: ಕನಿಷ್ಠ ವಾರಕ್ಕೊಮ್ಮೆ ಹಸಿರು ಚಹಾ ಸೇವಿಸಿ ಪಾರ್ಶ್ವವಾಯು ಭೀತಿಯಿಂದ ದೂರವಿರಿ. ಆಸ್ಟ್ರೇಲಿಯಾದ ಕರ್ಟಿನ್ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಸಂಶೋಧನಾ ವರದಿ ಮೆಲ್ಬೋರ್ನಿನಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿತು. ಸಂಶೋಧನೆ ವೇಳೆ ಚೀನಾದಲ್ಲಿ ಹಸಿರು ಚಹಾ ಸೇವಿಸುತ್ತಿದ್ದ 374 ಪಾರ್ಶ್ವವಾಯು ಪೀಡಿತ ರೋಗಿಗಳನ್ನು ಪರೀಕ್ಷೆಗೊಳಪಡಿಸಲಾಯಿತು. ಅವರು ದಿನಕ್ಕೆ ಎಷ್ಟು ಬಾರಿ ಹಸಿರು ಚಹಾ ಸೇವಿಸುತ್ತಾರೆ ಎಂಬುದನ್ನು ಲೆಕ್ಕಹಾಕಲಾಯಿತು. ಚಹಾಪುಡಿ ಬಳಕೆದಾರರ ಬಗ್ಗೆಯೂ ಅನಿಯಮಿತವಾಗಿ ಮತ್ತು ಚಹಾ ಸೇವಿಸದವರ ಬಗ್ಗೆಯೂ ಸಂಶೋಧನೆ ನಡೆಸಲಾಯಿತು. ಚಹಾಪುಡಿ ಬಳಸಿ ತಯಾರಿಸುವ ಚಹಾ ಸೇವಿಸುವ ರೋಗಿಗಳಿಗಿಂತ ವಾರಕ್ಕೊಮ್ಮೆ ನಿರಂತರವಾಗಿ ಹಸಿರು ಚಹಾ ಸೇವಿಸುವ ರೋಗಿಗಳು ಬೇಗ ಗುಣಮುಖರಾಗುವರೆಂದು ವರದಿ ತಿಳಿಸಿತು. ಸ್ಟ್ರೋಕ್ ಎಂಬ ಆರೋಗ್ಯ ಪತ್ರಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಯಿತು.

2009: ವಿಶ್ವದ ಹಲವು ರಾಷ್ಟ್ರಗಳನ್ನು ನಡುಗಿಸಿದ 'ಹಂದಿ ಜ್ವರ'ಕ್ಕೆ ಪವಿತ್ರ ತುಳಸಿ ಉತ್ತಮ ಔಷಧ ಎಂದು ಆಯುರ್ವೇದ ವೈದ್ಯರು ಲಖನೌ ನಗರದಲ್ಲಿ ಅಭಿಪ್ರಾಯಪಟ್ಟರು. ತುಳಸಿ ರಸ, ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಅಂಟಿದ ರೋಗವನ್ನೂ ಗುಣಪಡಿಸುತ್ತದೆ ಎಂದು ಅವರು ತಿಳಿಸಿದರು. 'ತುಳಸಿ, ವೈರಾಣು ಬಾಧಿತ ರೋಗಗಳ ವಿರುದ್ಧ ಯಶಸ್ವಿಯಾಗಿ ಹೋರಾಡುವ ಜೊತೆಗೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಾತ್ರವಲ್ಲ, ವಿಷಮ ಶೀತ ಜ್ವರ ನಿಗ್ರಹಿಸುವ ಗುಣ ಹೊಂದಿರುವುದಾಗಿ ವಿಶ್ವದಾದ್ಯಂತ ವೈದ್ಯಕೀಯ ಪರಿಣತರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ತುಳಸಿಯನ್ನು ಜಪಾನಿನಲ್ಲಿ ಕಂಡುಬಂದು ವಿಚಿತ್ರ ಜ್ವರವೊಂದಕ್ಕೆ ಔಷಧಿಯಾಗಿ ಬಳಸಲಾಗಿದ್ದು, ಇದೇ ಸಿದ್ಧಾಂತವನ್ನು ಹಂದಿ ಜ್ವರ ನಿವಾರಣೆಗೂ ಬಳಸಬಹುದು' ಎಂದು ಆಯುರ್ವೇದ ವೈದ್ಯ ಡಾ.ಯು.ಕೆ.ತಿವಾರಿ ತಿಳಿಸಿದರು.

2009: ಕೇವಲ 30 ನಿಮಿಷಗಳಲ್ಲಿ ಫಲಿತಾಂಶ ನೀಡುವ ಜಗತ್ತಿನ ಅತಿ ಕಡಿಮೆ ಬೆಲೆಯ ಎಚ್‌ಐವಿ ಸೋಂಕು ಪರೀಕ್ಷಾ ವಿಧಾನವನ್ನು ಕಂಡು ಹಿಡಿದಿರುವುದಗಿ ವಾಷಿಂಗ್ಟನ್‌ನಲ್ಲಿ ವಿಜ್ಞಾನಿಗಳು ಬಹಿರಂಗ ಪಡಿಸಿದರು. ಇದಕ್ಕಾಗಿ ಯಾವುದೇ ಪ್ರಯೋಗಾಲಯದ ಅವಶ್ಯಕತೆ ಇಲ್ಲ ಎಂಬುದು ವಿಶೇಷ. ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಇದನ್ನು 'ಸಿಡಿ4 ಕ್ಷಿಪ್ರ ಪರೀಕ್ಷೆ' ಎಂದು ಹೆಸರಿಸಿತು. ಇದು ಗರ್ಭಿಣಿಯರ ಪರೀಕ್ಷಾ ವಿಧಾನದಂತೆಯೇ ಇರುತ್ತದೆ. ಯಾವುದೇ ಪ್ರಯೋಗಾಲಯದ ಅವಶ್ಯಕತೆ ಇಲ್ಲದೇ ಎಚ್‌ಐವಿ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಗುಟ್ಟಾಗಿ ವ್ಯಕ್ತಿಗಳೇ ಪರೀಕ್ಷಿಸಿಕೊಳ್ಳಬಹುದು ಎಂದು ತಂಡದ ನೇತೃತ್ವ ವಹಿಸಿದ ಖ್ಯಾತ ವಿಜ್ಞಾನಿ ಪ್ರೊ. ಸುಜಾನೆ ಕ್ರೋವ್ ತಿಳಿಸಿದರು. ಬಡ ರೋಗಿಗಳು ಮತ್ತು ರೋಗದ ಬಗ್ಗೆ ತಿಳುವಳಿಕೆ ಇಲ್ಲದವರಿಗೆ ಈ ವಿಧಾನ ಹೆಚ್ಚು ಸಹಕಾರಿಯಾಗಲಿದೆ. ವಿಶ್ವದ 33 ಕೋಟಿ ಮಂದಿ ಪ್ರಸ್ತುತ ಎಚ್‌ಐವಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ನುಡಿದರು.

2008: ಬಕ್ಕತಲೆಯವವರಿಗೆ ಇಲ್ಲೊಂದು ಸಂತಸದ ಸುದ್ದಿ. `ಕ್ಲೋನ್' ಮೂಲಕ ಪ್ರಾಣಿಗಳ ಪ್ರತಿರೂಪದ ಜೀವಿಗಳನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ಕೂದಲನ್ನೂ ಕ್ಲೋನ್ ಮಾಡಲು ಮುಂದಾದರು. ಈ ಹೊಸ ತಂತ್ರಜ್ಞಾನದಲ್ಲಿ ಬಕ್ಕತಲೆಯವರು ತಲೆಯಲ್ಲಿ ಸಮೃದ್ಧ ಕೂದಲು ಬೆಳೆಯುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿರುವುದಾಗಿ `ದಿ.ಡೇಲಿ ಟೆಲಿಗ್ರಾಫ್ ` ಪತ್ರಿಕೆ ವರದಿ ಮಾಡಿತು. ಕ್ಯಾನ್ಸರ್ ಚಿಕಿತ್ಸೆ ಸಂದರ್ಭದಲ್ಲಿ, ಸುಟ್ಟು ಕೂದಲು ಕಳೆದುಕೊಂಡವರಿಗೆ, ಅಕಾಲದಲ್ಲಿ ಬಕ್ಕತಲೆಯಾದವರಿಗೆ ಇದು ತುಂಬ ಉಪಯುಕ್ತ ಎಂಬುದು ವಿಜ್ಞಾನಿಗಳ ಅಭಿಮತ. ಆದರೆ ಈ ತಂತ್ರಜ್ಞಾನದ ಚಿಕಿತ್ಸೆ ಪಡೆಯುವಾಗ 1000 ಸಂಖ್ಯೆಯಲ್ಲಿ ಚುಚ್ಚುಮದ್ದು ಹಾಕಿಸಿಕೊಳ್ಳಬೇಕಾಗುತ್ತದೆ. ಇಷ್ಟಾದರೂ ಸದ್ಯದ ಹೊಸ ಕೂದಲು ಬರಿಸುವ ಚಿಕಿತ್ಸೆಗಿಂತ ಇದು ಪರಿಣಾಮಕಾರಿ ಚಿಕಿತ್ಸೆ ಎಂಬುದು ಅವರ ವಾದ.

2008: ಮುಂಬೈಯಲ್ಲಿ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ- 20 ಕ್ರಿಕೆಟ್ ಟೂರ್ನಿಯ ಫೈನಲ್ಲಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

2008: ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ತಮ್ಮ ಜೀವಿತಾವಧಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ತಂಗಿದ್ದ ಹಾಗೂ ಐತಿಹಾಸಿಕ ಮಹತ್ವವಿರುವ ಮನೆಯೊಂದು ಅಗ್ನಿ ಆಕಸ್ಮಿಕದಿಂದ ನಾಶವಾದ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿತು. ಮಹಾತ್ಮಗಾಂಧಿಯವರ ಮೊಮ್ಮಗ ಪಶ್ಚಿಮ ಬಂಗಾಳದ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿಯವರು ಹಿಮಾಚಲ ಪ್ರದೇಶ ಸರ್ಕಾರದಿಂದ ಐತಿಹಾಸಿಕ ದಾಖಲೆಗಳಿಗಾಗಿ ಆಗ್ರಹಿಸಿದರು. ಆದರೆ ಗಾಂಧೀಜಿ ಅಂದು (1921) ನೆಲೆಸಿದ್ದ ಪಂಡಿತ್ ಮದನ ಮೋಹನ ಮಾಲವೀಯ ಅವರ ಮನೆ ಅಗ್ನಿಸ್ಪರ್ಶದಿಂದ ನಾಶವಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿತು. ಮಾಹಿತಿ ಆಗ್ರಹಿಸಿ ಪಶ್ಚಿಮ ಬಂಗಾಲದ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿಯವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಹಿಮಾಚಲ ಪ್ರದೇಶದ ಸಂಸ್ಕೃತಿ ಹಾಗೂ ಭಾಷಾ ನಿರ್ದೇಶನಾಲಯದ ಇತಿಹಾಸ ವಿಭಾಗವು ಗಾಂಧೀಜಿಯವರು 1921 ರಿಂದ 1945ರ ಅವಧಿಯಲ್ಲಿ ಆ ರಾಜ್ಯದಲ್ಲಿ ನೆಲೆಸಿದ ಹಾಗೂ ಪಾಲ್ಗೊಂಡ ಕಾರ್ಯಕ್ರಮಗಳ ಸಮಗ್ರ ಸಮೀಕ್ಷೆಗೆ ಆದೇಶಿಸಿತ್ತು. ಸಮೀಕ್ಷೆಯಲ್ಲಿ ತಿಳಿದು ಬಂದಂತೆ 'ನಿಖರ ಮಾಹಿತಿ ನೀಡುವ ದಾಖಲೆಗಳು ಲಭ್ಯವಾಗುತ್ತಿಲ್ಲ. ಆದರೆ ಲಭಿಸಿರುವ ಪುರಾವೆಗಳ ಆಧಾರದಲ್ಲಿ ಗಾಂಧೀಜಿ 19 21ರಲ್ಲಿ ನೆಲೆಸಿದ್ದ ಪಂಡಿತ ಮಾಲವೀಯ ಮನೆಯನ್ನು ಅಂದು `ಕರ್ಟನ್ ಗ್ರೋವ್' ಎಂದು ಗುರುತಿಸಲಾಗಿದ್ದು, ಅದು ಬೆಂಕಿ ಅನಾಹುತದಲ್ಲಿ ನಾಶವಾಗಿದೆ, ಅದು ಇಂದಿನ ರಾಜ್ಯ ವಿಧಾನ ಸಭಾ ಕಟ್ಟಡದ ಹಿಂಭಾಗದಲ್ಲಿತ್ತು' ಎಂದು ತಿಳಿಸಲಾಯಿತು. ಹಳೆಮನೆಯ ಕುರಿತಾದ ಯಾವ ಪುರಾವೆಯೂ ಈಗಿಲ್ಲ. ಆ ಜಾಗದಲ್ಲಿ ದೀಪಕ್ ಸೂದ್ ಎಂಬವರಿಗೆ ಸೇರಿದ ಹೊಸ ಕಟ್ಟಡ ನಿರ್ಮಾಣವಾಗಿರುವುದೂ ಬೆಳಕಿಗೆ ಬಂತು. ಇದೇ ರೀತಿ 1931ರಲ್ಲಿ ಮಹಾತ್ಮಾ ಭೇಟಿಯ ವೇಳೆ ಅವರು ನೆಲೆಸಿದ್ದ ಮನೆಯು ಸ್ವಾತಂತ್ರ್ಯ ಹೋರಾಟಗಾರ ರಾಯ್ ಬಹದ್ದೂರ್ ಮೋಹನ್ ಲಾಲ್ ಅವರ ಹೆಸರಲ್ಲಿ ಇತ್ತು. ಆದರೆ ಈಗ ಅದು ನವದೆಹಲಿಯ ಪಂಚಶೀಲ ಪಾರ್ಕ್ ಬಳಿಯ ನಿವಾಸಿ ಮೊಹೀಂದರ್ ಲಾಲ್ ಅವರಿಗೆ ಸೇರಿದ್ದು, ಫಾಗ್ರೋರ್ವ್ ಭವನ್ , ಥಾಕು ಎಂಬ ಹೆಸರಲ್ಲಿ ನೋಂದಾಯಿಸಲ್ಪಟ್ಟಿದೆ. ಗಾಂಧೀಜಿಯವರು 1930, 1940 ಹಾಗೂ 1945ರ ಭೇಟಿಯ ವೇಳೆ ನೆಲೆಸಿದ್ದ ಮನೆಗಳ ಕುರಿತಾದ ಯಾವುದೇ ನಿಖರ ದಾಖಲೆಗಳು ಈಗ ಸಿಗುತ್ತಿಲ್ಲ ಎಂದೂ ಇಲಾಖೆಗಳು ಒಪ್ಪಿಕೊಂಡವು. ಹಿಮಾಚಲ ಪ್ರದೇಶದ ರಾಜಕುಮಾರಿ  ಅಮೃತಾ ಕೌರ್ ಅವರ ಬೇಸಿಗೆಯ ನಿವಾಸ `ಮನವರ್ ವಿಲ್ಲಾ' ಕೂಡಾ ಅಸ್ಪಷ್ಟತೆಯ ಪಟ್ಟಿಗೆ ಸೇರಿದೆ. ಮುನ್ಸಿಪಾಲಿಟಿ ದಾಖಲೆಯಂತೆ ಈ ಮನೆಯ ಜಾಗದಲ್ಲಿರುವ ಹಾಲಿ ಕಟ್ಟಡವು ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯ ಸ್ವಾಧೀನಕ್ಕೆ ಸೇರಿದೆ.

2008: ಕರ್ನಾಟಕದ ವಿವಿಧೆಡೆ ಗುಡುಗು, ಸಿಡಿಲು, ಭಾರಿ ಗಾಳಿಯಿಂದ ಕೂಡಿದ ಮಳೆ ಮುಂದುವರೆದು, ಬಾಗಲಕೋಟೆ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ತಲಾ ಇಬ್ಬರು, ಹಾವೇರಿ ಜಿಲ್ಲೆಯಲ್ಲಿ ಒಬ್ಬರು ಸೇರಿ ಐವರು ಮೃತರಾದರು.

2008: ರಾಜಸ್ಥಾನದಲ್ಲಿ ಹತ್ತು ದಿನಗಳ ಹಿಂದೆ ಪೊಲೀಸರ ಗೋಲಿಬಾರಿಗೆ ಸಾವನ್ನಪ್ಪಿದ ಹನ್ನೆರಡು ಮಂದಿಯ ಮೃತದೇಹವನ್ನು ತಮ್ಮ ಸಮುದಾಯ ಸೂಚಿಸಿದ ವೈದ್ಯರಿಂದ ಶವಪರೀಕ್ಷೆ ನಡೆಸಲು ಗುರ್ಜರ್ ಸಮುದಾಯ ಒಪ್ಪಿಗೆ ನೀಡಿತು. ಗುರ್ಜರ್ ಪ್ರತಿಭಟನೆಯ ನೇತೃತ್ವ ವಹಿಸಿರುವ 70 ವರ್ಷದ ಕಿರೋರಿ ಸಿಂಗ್ ಬೈನ್ ಸ್ಲಾ ಅವರು `ಶವಪರೀಕ್ಷೆ' ಕುರಿತು ರಾಜ್ಯ ಸರ್ಕಾರಕ್ಕೆ ಬರೆದ ಪತ್ರದ ಷರತ್ತಿನ ಪ್ರಕಾರವೇ ದೇಹಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು. ರಾಜಸ್ಥಾನದಲ್ಲಿ ಪ್ರಸ್ತುತ ಗುರ್ಜರರನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಇರುವಂತೆ ತಮ್ಮ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂಬುದು ಗುರ್ಜರರ ಪಟ್ಟು.

2008: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಜಪಾನಿನ ಬೃಹತ್ ವೈಜ್ಞಾನಿಕ ಪ್ರಯೋಗಾಲಯ ಮತ್ತು ಟಾಯ್ಲೆಟ್ ಪಂಪ್ ಒಂದನ್ನು ಅಳವಡಿಸುವ ಸಲುವಾಗಿ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಏಳು ಮಂದಿ ವ್ಯೋಮಯಾನಿಗಳನ್ನು ಹೊತ್ತ ಡಿಸ್ಕವರಿ ಗಗನನೌಕೆಯನ್ನು ಹಾರಿಬಿಡಲಾಯಿತು. 14 ದಿನಗಳ ಅವಧಿಯಲ್ಲಿ ವ್ಯೋಮಯಾನಿಗಳು `ಕಿಬೊ' ಹೆಸರಿನ ಒಂದು ಶತಕೋಟಿ ಡಾಲರ್ ಮೌಲ್ಯದ ಪ್ರಯೋಗಾಲಯವನ್ನು ಅಳವಡಿಸುವರು. 32 ಸಾವಿರ ಪೌಂಡ್ ತೂಕದ ಈ ಪ್ರಯೋಗಾಲಯವನ್ನು ಅಳವಡಿಸಿದಾಗ ನಿಲ್ದಾಣದ ಮೂರನೇ ಒಂದು ಭಾಗದ ನಿರ್ಮಾಣಪೂರ್ಣಗೊಂಡಂತಾಗುವುದು. ಪ್ರಯೋಗಾಲಯದ ಕೊನೆಯ ಭಾಗವನ್ನು ಮುಂದಿನ ವರ್ಷ ಜೋಡಿಸಲಾಗುವುದು. ಕಮಾಂಡರ್ ಮಾರ್ಕ್ ಕೆಲ್ಲಿ ಅವರು ಡಿಸ್ಕವರಿ ನೌಕೆಯ ನೇತೃತ್ವ ವಹಿಸಿದವರು.

2008: ಮಂಗಳೂರಿನ ಯುವ ಜಾದೂಗಾರ ಸಾಗರ್ ಅವರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಸಮುದ್ರದಂಡೆಯಲ್ಲಿ ಮೈ ಜುಮ್ಮೆನಿಸುವ `ಗ್ಲಾಸ್ ಸ್ಟಂಟ್' ಗಾಜಿನ ಸಾಹಸ ಪ್ರದರ್ಶನ ನಡೆಯಿತು. ಸಮುದ್ರದಲ್ಲಿ ನೀರು ಅಲೆ ಅಲೆಯಾಗಿ ದಂಡೆಯತ್ತ ಬರುತ್ತಿದ್ದರೆ, ಇತ್ತ ಸಮುದ್ರ ದಡದಲ್ಲಿ ಸಾಗರ್ ಗಾಜುಗಳ ಚೂರುಗಳ ಮೇಲೆ ಮಲಗಿ ವಿಶಿಷ್ಟ ಸಾಹಸದ ಸಂತಸದ ಅಲೆಯಲ್ಲಿ ತೇಲಿದರು. ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸುವ ವೇಳೆಗಾಗಲೇ ಬೀದಿ ಜಾದೂ ಮೂಲಕ ಜನಮನ ಗೆದ್ದ ಸಾಗರ್ ಸಾಗರದ ತಡಿಯಲ್ಲೇ ಸಾಹಸ ಮೆರೆಯುವ ಮೂಲಕ ಇತಿಹಾಸ ಸೃಷ್ಟಿಸಿದರು. ಗಾಜಿನ ಜೂರುಗಳ ಹಾಸಿಗೆಯ ಮೇಲೆ ಮಲಗಿದ ಸಾಗರ್ ಅವರ ಮೇಲೆ ಮತ್ತಷ್ಟು ಗಾಜು ಚೂರುಗಳನ್ನು ಸುರಿಯಲಾಯಿತು. ಕೆಳಗೂ ಗಾಜು ಜೂರುಗಳು, ಮೇಲೂ ಗಾಜು ಚೂರುಗಳು. ಇಂಥ ಸನ್ನಿವೇಶದಲ್ಲಿ ಸತತ ಮೂರು ಗಂಟೆಗಳ ಕಾಲ ಮಲಗುವ ಮೂಲಕ ಸಾಗರ್ ಜನರಲ್ಲಿ ಅಚ್ಚರಿ ಮೂಡಿಸಿದರು. ಗಾಜಿನ ಚೂರುಗಳ ಮೇಲೆ ಕೆಲವು ಹೆಜ್ಜೆಗಳನ್ನು ಇಟ್ಟ ನಂತರ ಅವರು ಅದರ ಮೇಲೆಯೇ ಮಲಗಿದರು. ಸಾಗರ್ ತಾತ ಸದಾಶಿವ ಅಮೀನ್, ಸಾಗರ್ ಅವರ ತಾಯಿ ಸುನಿತಾ, ಅಕ್ಕ ಶಿಲ್ಪಾ ಹಾಗೂ ಸ್ನೇಹಿತರು ಸಾಗರ್ ಅವರ ಈ ವಿಶೇಷ ಸಾಹಸದ ಸಂತಸದಲ್ಲಿ ಭಾಗಿಯಾದರು.

2008: 2008ರ ಅಕ್ಟೋಬರ್ 2 ರ ಗಾಂಧಿ ಜಯಂತಿ ದಿನದಿಂದ ಸಾರ್ವಜನಿಕ ಸ್ಥಳದಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಪ್ರಕಟಿಸಿದರು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮೇ 30 ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ತಂಬಾಕು ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯ್ದೆ-2008ನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು. ಪರಿಷ್ಕರಿಸಿದ ಕಾಯ್ದೆ ಪ್ರಕಾರ ಉದ್ಯೋಗ ಸ್ಥಳ, ಶಾಪಿಂಗ್ ಮಾಲ್, ಚಿತ್ರಮಂದಿರ, ಹೋಟೆಲ್, ಬೋರ್ಡಿಂಗ್ ಹೌಸ್, ಡಿಸ್ಕೊಥೆಕ್, ಔತಣ ಕೂಟ ನಡೆಯುವ ಸಭಾಂಗಣ, ಕ್ಯಾಂಟೀನ್, ಕಾಫಿ ಹೌಸ್, ಪಬ್, ಬಾರ್ ಹಾಗೂ ವಿಮಾನ ನಿಲ್ದಾಣದ ಮೊಗಸಾಲೆಗಳು `ಸಾರ್ವಜನಿಕ ಸ್ಥಳ' ವ್ಯಾಪ್ತಿಗೆ ಸೇರುತ್ತವೆ. ಕರಡು ನಿಯಮದ ಪ್ರಕಾರ ಇವುಗಳ ಮಾಲೀಕರು ತಮ್ಮ ಅಧೀನಕ್ಕೊಳಪಟ್ಟ ಪ್ರದೇಶದಲ್ಲಿ ಯಾರೂ ಧೂಮಪಾನ ಮಾಡದಂತೆ ನೋಡಿಕೊಳ್ಳಬೇಕು.

2008: ಆಂಧ್ರ ಪ್ರದೇಶದಲ್ಲಿ ಮೇ 29 ರಂದು ನಡೆದ ಲೋಕಸಭೆ ಹಾಗೂ ವಿಧಾನ ಸಭೆ ಉಪಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿಯು (ಟಿಆರ್ಎಸ್) ಹೀನಾಯ ಸೋಲು ಅನುಭವಿಸಿತು.

2008: ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದ ರಾಜಮನೆತನ ನಶಿಸಿ ಹೋಗಿ ಗಣರಾಜ್ಯವೆಂದು ಘೋಷಿಸಿಕೊಂಡ ಬಳಿಕ ನೇಪಾಳವು ತನ್ನ ಪ್ರಥಮ ದಿನವನ್ನು ಚಟುವಟಿಕೆಗಳಿಂದ ಕಳೆಯಿತು. ಆದರೆ ಅರಮನೆ ಸಿಬ್ಬಂದಿ ಮಾತ್ರ ಗೊಂದಲದಲ್ಲೇ ಇದ್ದರು. ರಾಜಮನೆತನವನ್ನು ಹತ್ತಿಕ್ಕುವ ಐತಿಹಾಸಿಕ ನಿರ್ಧಾರವನ್ನು ಸಂವಿಧಾನ ರಚನಾ ಸಭೆಯು ಕೈಗೊಂಡಿತ್ತು ಹಾಗೂ ದೊರೆ ಜ್ಞಾನೇಂದ್ರ ಅವರಿಗೆ ಅರಮನೆ ತೊರೆಯಲು 15 ದಿನಗಳ ಗಡುವು ನೀಡಿತ್ತು. ನೇಪಾಳವು ಗಣತಂತ್ರ ರಾಷ್ಟ್ರವಾಗಿ ರೂಪುಗೊಂಡ ಕುರುಹಾಗಿ ಮೂರು ದಿನಗಳ ರಾಷ್ಟ್ರೀಯ ರಜಾ ಘೋಷಿಸಲಾಗಿತ್ತು. ಭಾನುವಾರ ಕೂಡಾ ಎಲಾ ಸರ್ಕಾರಿ ಕಚೇರಿಗಳು, ಶಾಲೆಗಳು ತೆರೆದು ದೇಶದಲ್ಲಿ ಲವಲವಿಕೆ ಮೂಡಿದ ದೃಶ್ಯ ಕಂಡುಬಂತು. 2006ರಲ್ಲಿ ಮಾವೋವಾದಿಗಳನ್ನೊಳಗೊಂಡ ಮಾಜಿ ಬಂಡುಕೋರರ ಜತೆಗೆ ಆದ ಒಪ್ಪಂದದಂತೆ ಚುನಾವಣೆಯ ಬಳಿಕ ರಾಜಮನೆತನ ಪತನಗೊಳ್ಳುವುದು ಅನಿವಾರ್ಯವಾಗಿತ್ತು. ದೇಶದಲ್ಲಿ ಭುಗಿಲೆದ್ದಿದ್ದ ಅಶಾಂತಿ 13 ಸಾವಿರಕ್ಕೂ ಅಧಿಕ ಜನರನ್ನು ಬಲಿ ತೆಗೆದು ಕೊಂಡಿತ್ತು.

2008: ತಾನು ಬರೆದ ಪುಸ್ತಕವೊಂದರ ಪ್ರಚಾರದ ಸಲುವಾಗಿ 100 ದಶಲಕ್ಷ ರೂಪಿಯಾ (10,700 ಡಾಲರ್) ನೋಟುಗಳನ್ನು ವಿಮಾನದ ಮೂಲಕ ಹೊರ ಚೆಲ್ಲಿದ ವಿಲಕ್ಷಣ ಘಟನೆ ನಡೆಯಿತು. ಇಂಡೋನೇಷ್ಯದ ಉದ್ಯಮಿ ತಂಗ್ ದೆಸೆಮ್ ವರಿಂಗಿನ್ ಅವರು ತಮ್ಮ ಹೊಸ ಪುಸ್ತಕದ ಪ್ರಚಾರದ ಸಲುವಾಗಿ ಜಕಾರ್ತದಿಂದ 40 ಕಿ.ಮೀ. ಪಶ್ಚಿಮಕ್ಕೆ ಇರುವ ಸೆರಂಗ್ ಪ್ರದೇಶದಲ್ಲಿ ಫುಟ್ಬಾಲ್ ಮೈದಾನವೊಂದರ ಮೇಲ್ಭಾಗ ವಿಮಾನವೊಂದರಿಂದ 100 ದಶಲಕ್ಷ ರೂಪಿಯಾ ನೋಟುಗಳು ಮತ್ತು ಸೆಮಿನಾರ್ ಟಿಕೆಟುಗಳನ್ನು ಹೊರಕ್ಕೆ ಚೆಲ್ಲಿದರು.

2007: ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರು ರೈತರಲ್ಲ ಎಂದು ತೀರ್ಪು ನೀಡಿದ ಫೈಜಾಬಾದ್ ನ್ಯಾಯಾಲಯವೊಂದು ರೈತನೆಂದು ಘೋಷಿಸಿ ಬಾರಾಬಂಕಿಯಲ್ಲಿ ಖರೀದಿಸಿದ್ದ ಎರಡು ಎಕರೆ ಜಮೀನಿನ ಒಡೆತನಕ್ಕೆ ಅಮಿತಾಭ್ ಅವರು ಮಂಡಿಸಿದ್ದ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿತು.

2007: ನಟ ಸಂಜಯದತ್ ಅವರಿಗೆ ಎಕೆ-56 ರೈಫಲ್ ಪೂರೈಸಿದ್ದ ಸಮೀರ್ ಹೀಂಗೋರಾಗೆ ಟಾಡಾ ನ್ಯಾಯಾಲಯವು 8 ವರ್ಷಗಳ ಕಠಿಣ ಸಜೆ ವಿಧಿಸಿತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯವು ಹಿಂಗೋರಾಗೆ 2 ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿತು.

2007: `ಆಶಾಪೂರ ಗೌಡ' ಎಂದೇ ಖ್ಯಾತರಾಗಿದ್ದ ಹಿರಿಯ ರಂಗಕರ್ಮಿ ಬಸವರಾಜ ಪಾಟೀಲ (60) ರಾಯಚೂರಿನಲ್ಲಿ ನಿಧನರಾದರು. ಕೃಷಿಕ, ರಂಗಭೂಮಿ ಕಲಾವಿದರಾಗಿದ್ದ ಬಸವರಾಜ ಪಾಟೀಲ ಅವರು ಸ್ಥಾಪಿಸಿದ ಶ್ರೀಸಂಗಮೇಶ್ವರ ನಾಟ್ಯಸಂಘ ಆಶಾಪೂರ' ಇಂದಿಗೂ ನಾಡಿನಾದ್ಯಂತ ಪ್ರದರ್ಶನ ನೀಡುತ್ತಿದೆ.

2007: ಎನ್ ಸಿಪಿ ಖಜಾಂಚಿ ರಾಮ್ ಅವತಾರ್ ಜಗ್ಗಿ ಕೊಲೆ ಪ್ರಕರಣದ ಆರೋಪಿ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿ ಅವರನ್ನು ರಾಯಪುರದ ವಿಶೇಷ ನ್ಯಾಯಾಲಯವು ಈದಿನ ಖುಲಾಸೆ ಗೊಳಿಸಿತು.

2007: ಭಾಷಾ ಮಾಧ್ಯಮ ನೀತಿ ಉಲ್ಲಂಘಿಸಿದ ಸುಮಾರು 400 ಶಾಲೆಗಳು ಸಕಾಲದಲ್ಲಿ ಪ್ರಮಾಣಪತ್ರ ಸಲ್ಲಿಸದ ಕಾರಣ ಅವುಗಳ ಮಾನ್ಯತೆ ರದ್ದು ಮಾಡುವ ಸರ್ಕಾರದ ನಿರ್ಧಾರಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿತು.

2006: ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿ ಧ್ವಂಸಗೊಳಿಸುವ ಉಗ್ರಗಾಮಿಗಳ ಸಂಚು ವಿಫಲಗೊಳಿಸಲಾಯಿತು. ಕಚೇರಿ ಮೇಲೆ ನುಗ್ಗಲು ಯತ್ನಿಸಿದ ಮೂವರು ಸಶಸ್ತ್ರ ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು. ನಸುಕಿನ 4 ಗಂಟೆ ಸುಮಾರಿಗೆ ಸಬ್ ಇನ್ ಸ್ಪೆಕ್ಟರ್ ದಿರಿಸಿನಲ್ಲಿ ಕೆಂಪು ಗೂಟದ ಅಂಬಾಸಿಡರ್ ಕಾರಿನಲ್ಲಿ ಬಂದು ಉಗ್ರಗಾಮಿಗಳು ಪ್ರಧಾನ ಕಚೇರಿ ಬಳಿಯ ಅಡೆತಡೆ ಉಲ್ಲಂಘಿಸಲು ಯತ್ನಿಸಿದಾಗ ಚಕಮಕಿ ಹಾಗೂ ಗುಂಡಿನ ಘರ್ಷಣೆ ನಡೆದು, ಪೊಲೀಸರು ಕಾರಿನಲ್ಲಿದ್ದ ಮೂರೂ ಮಂದಿ ಉಗ್ರಗಾಮಿಗಳನ್ನು ಕೊಂದು ಹಾಕಿದರು.

2006: ರಾಜ್ಯಸಭಾ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಜಯಾಬಚ್ಚನ್ ಅವರು ತಮ್ಮ ಹೆಸರನ್ನು ಬಚ್ಚನ್ ಜಯಾ ಅಮಿತಾಭ್ ಎಂದು ಬದಲಾಯಿಸಿಕೊಂಡರು.

2001: ನೇಪಾಳದ ಕಠ್ಮಂಡುವಿನಲ್ಲಿ ದೊರೆ ಬೀರೇಂದ್ರ, ರಾಣಿ ಐಶ್ವರ್ಯ ಮತ್ತು ರಾಜಕುಟುಂಬದ 8 ಮಂದಿ ಸದಸ್ಯರನ್ನು ರಾಜಕುಮಾರ ದೀಪೇಂದ್ರ ಗುಂಡು ಹೊಡೆದು ಕೊಂದು ಹಾಕಿದ. ನಂತರ ತನಗೂ ಗುಂಡು ಹಾರಿಸಿಕೊಂಡ ದೀಪೇಂದ್ರ ಮೂರು ದಿನಗಳ ಬಳಿಕ ಮೃತನಾದ.

1975: ಕರಣಂ ಮಲ್ಲೇಶ್ವರಿ ಹುಟ್ಟಿದ ದಿನ. ಭಾರತದ ವೇಯ್ಟ್ ಲಿಫ್ಟರ್ ಆದ ಈಕೆ ಸಿಡ್ನಿಯಲ್ಲಿ 2000ದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1967: ಕಲಾವಿದ ರವೀಂದ್ರ ಸೋರೆಗಾಂವಿ ಜನನ.

1951: ಕಲಾವಿದ ಬಸವರಾಜ ಹಿರೇಮಠ ಜನನ.

1951: ಕಲಾವಿದ ನೀರ್ನಳ್ಳಿ ಗಣಪತಿ ಜನನ.

1950: ಹೊನ್ನಾವರ ಕರ್ಕಿಕೋಡಿಯ ಕವಿ, ವಿಮರ್ಶಕ, ಜಾನಪದ ವಿದ್ವಾಂಸ ವಿ.ಗ. ನಾಯಕ್ ಅವರು ಗಣಪತಿ ನಾಯಕ್- ಸೀತಾದೇವಿ ದಂಪತಿಯ ಮಗನಾಗಿ ಜನಿಸಿದರು.

1939: ಕಲಾವಿದ ಎನ್.ವಿ. ಗೋಪೀನಾಥ ಜನನ.

1933: ಸಂವೇದನಾಶೀಲ ಪಾತ್ರಗಳಿಗೆ ತಮ್ಮದೇ ಆದ ವಿಶಿಷ್ಟ ರೂಪ ನೀಡಿ ನಟನೆಯಲ್ಲಿ ವಿಶೇಷ ಛಾಪು ಮೂಡಿಸಿಕೊಂಡ ಖ್ಯಾತ ನಟಿ ಯಮುನಾ ಮೂರ್ತಿ ಅವರು ಎಸ್.ಪಿ. ರಂಗರಾವ್- ಸಂಗೀತಗಾರ್ತಿ ವೆಂಕಟಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1926: ಅಮೆರಿಕದ ಖ್ಯಾತ ಚಿತ್ರನಟಿ ಮರ್ಲಿನ್ ಮನ್ರೋ ಹುಟ್ಟಿದ್ದು ಇದೇ ದಿನ.

1892: ಆಫ್ಘಾನಿಸ್ಥಾನದ ಆಡಳಿತಗಾರ ಅಮಾನೊಲ್ಲಾ ಖಾನ್ (1892-1960) ಜನ್ಮದಿನ. ಆಫ್ಘಾನಿಸ್ಥಾನವನ್ನು ಬ್ರಿಟಿಷರ ಪ್ರಭಾವದಿಂದ ಹೊರತಂದು ಪೂರ್ಣ ಸ್ವಾತಂತ್ರ್ಯದತ್ತ ಮುನ್ನಡೆಸಿದ ಆಡಳಿತಗಾರ ಈತ.

1889: ಚಾರ್ಸ್ ಕೆ. ಆಗ್ಡನ್ (1889-1957) ಜನ್ಮದಿನ. ಬ್ರಿಟಿಷ್ ಬರಹಗಾರ ಹಾಗೂ ಭಾಷಾ ತಜ್ಞನಾದ ಈತ ಇಂಗ್ಲಿಷ್ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಮಾಧ್ಯಮವಾಗಿ ಬಳಸಲು ಸಾಧ್ಯವಾಗುವಂತೆ ಸರಳಗೊಳಿಸಿದ. ಈತ ಸರಳಗೊಳಿಸಿದ ಏಕರೂಪದ ಇಂಗ್ಲಿಷ್ ಭಾಷೆಯೇ `ಮೂಲ ಇಂಗ್ಲಿಷ್' (ಬೇಸಿಕ್ ಇಂಗ್ಲಿಷ್) ಎಂದು ಪರಿಗಣಿತವಾಗಿದೆ.

No comments:

Post a Comment