ನಾನು ಮೆಚ್ಚಿದ ವಾಟ್ಸಪ್

Saturday, October 31, 2020

ಇಂದಿನ ಇತಿಹಾಸ History Today ಅಕ್ಟೋಬರ್ 31

 ಇಂದಿನ ಇತಿಹಾಸ  History Today ಅಕ್ಟೋಬರ್ 31

2020: ಅಹಮದಾಬಾದ್: ನರ್ಮದಾ ನದಿಯ ಏಕತಾ ಪ್ರತಿಮೆ ಇರುವ ಕೇವಡಿಯಾದಿಂದ ಅಹಮದಾಬಾದಿನ ಸಬರಮತಿ ನದಿ ಮುಂಭಾಗದವರೆಗೆ ಭಾರತದ ಮೊತ್ತ ಮೊದಲ ಸೀಪ್ಲೇನ್ ಸೇವೆ ಚೊಚ್ಚಲ ಹಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಸವಾರಿ ಮಾಡುವ ಮೂಲಕ 2020 ಅಕ್ಟೋಬರ್ 31ರ ಶನಿವಾರ ಚಾಲನೆ ನೀಡಿದರು. ಹಾರಾಟವನ್ನು ಸ್ಪೈಸ್ಜೆಟ್ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಸ್ಪೈಸ್ ಷಟಲ್ ನಿರ್ವಹಿಸುತ್ತದೆ.  ಸೀ ಪ್ಲೇನ್ ಅಥವಾ ಸಮುದ್ರ ವಿಮಾನ ಎಂದರೆ ರೆಕ್ಕೆ ಜೋಡಿಸಲ್ಪಟ್ಟಿರುವ ಆಗಸದಲ್ಲಿ ಹಾರುವುದರ ಜೊತೆಗೆ ನೀರಿನಲ್ಲಿ ಇಳಿಯುವ ಸಾಮರ್ಥ್ಯವಿರುವ ವಿಶಿಷ್ಟ ವಿಮಾನ.  ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ಸಿಎಸ್) - ಉಡಾನ್ ಅಡಿಯಲ್ಲಿ ಪ್ರಾರಂಭಿಸಲಾದ ಸೀಪ್ಲೇನ್ ಸೇವೆಯು ಕೊನೆಯ ಮೈಲಿನವರೆಗೆ ಜನರಿಗೆ ಸಂಪರ್ಕವನ್ನು ಕಲ್ಪಿಸುವುದರಿಂದ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆಯಿದೆ.  ಅಹಮದಾಬಾದಿನಲ್ಲಿ ಇಳಿದ ಕೂಡಲೇ ಪ್ರಧಾನಿ ಮೋದಿ ಅವರು ಸಬರಮತಿ ನದಿಯ ಮುಂಭಾಗದಲ್ಲಿ ವಾಟರ್ ಡ್ರೋಮ್ನ್ನು ಉದ್ಘಾಟಿಸಿದರು, ನಂತರ ಅವರು ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ (ಎಸ್ವಿಪಿಐ) ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದರು. ಸ್ಪೈಸ್ ಜೆಟ್ ಅಹಮದಾಬಾದ್-ಕೇವಡಿಯಾ ಮಾರ್ಗದಲ್ಲಿ ಅಕ್ಟೋಬರ್ ೩೧ ರಿಂದ ಪ್ರತಿದಿನ ಎರಡು ವಿಮಾನಗಳನ್ನು ನಿರ್ವಹಿಸಲಿದೆ. ಕೇವಡಿಯಾದಿಂದ ಅಹ್ಮದಾಬಾದ್ ತಲುಪಲು ಪ್ರಧಾನ ಮಂತ್ರಿಯವರು ೫೦ ನಿಮಿಷಗಳ ಕಾಲವನ್ನು ಸೀಪ್ಲೇನ್ ಸವಾರಿಗೆ ತೆಗೆದುಕೊಂಡರು. ಕೇವಡಿಯಾದ ಏಕತಾ ಪ್ರತಿಮೆ ಇರುವ ತಾಣದಿಂದ ಸಮುದ್ರ ವಿಮಾನ ಸವಾರಿಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಯಂದು ಏಕ್ ಭಾರತ್ ಶ್ರೇಷ್ಠ ಭಾರತ್ ಆಚರಣೆಯ ಅಂಗವಾಗಿ ನೆರವೇರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಕೇವಡಿಯಾ (ಗುಜರಾತ್):  ೨೦೧೯ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಇಸ್ಲಾಮಾಬಾದಿನ ಪಾತ್ರದ ಬಗ್ಗೆ ಪಾಕಿಸ್ತಾನದ ಸಚಿವರ ಒಪ್ಪಿಕೊಂಡಿರುವುದು ನಮ್ಮ ಹುತಾತ್ಮರ ತ್ಯಾಗವನ್ನು ಪ್ರಶ್ನಿಸಿದವರನ್ನು ಅನಾವರಣಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಅಕ್ಟೋಬರ್ 31ರ ಶನಿವಾರ ಹೇಳಿದರು. ಗುಜರಾತಿನ ಕೇವಡಿಯಾದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮಾತನಾಡಿದ ಮೋದಿ, ಪುಲ್ವಾಮಾ ದಾಳಿಯ ನಂತರ ಪ್ರತಿಪಕ್ಷಗಳು ಮಾಡಿದ ಅಸಹ್ಯಕರ ಟೀಕೆಗಳು ಮತ್ತು ಆರೋಪಗಳನ್ನು ದೇಶವು ಮರೆಯುವುದಿಲ್ಲ ಎಂದು ನುಡಿದರು. ಪುಲ್ವಾಮಾ ದಾಳಿಯ ಬಗ್ಗೆ ನೆರೆಯ ದೇಶದ ಅಂಗೀಕಾರವು ಪುಲ್ವಾಮಾ ಹುತಾತ್ಮರ ತ್ಯಾಗವನ್ನು ಪ್ರಶ್ನಿಸಿದ ಜನರನ್ನು ಬಯಲುಮಾಡಿದೆ. ನಾನು ಆರೋಪಗಳನ್ನು ಸಹಿಸಿಕೊಂಡಿದ್ದೇನೆ ಆದರೆ ಪ್ರಾಣನ್ನೇ ಅರ್ಪಿಸಿದ ನನ್ನ ಕೆಚ್ಚೆದೆಯ ಸೈನಿಕರಿಗಾದ ಅಪಮಾನ ನನ್ನ ಹೃದಯದಲ್ಲಿ ಆಳವಾದ ಗಾಯವನ್ನು ಮಾಡಿದೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ, ನಮ್ಮ ಭದ್ರತಾ ಪಡೆಗಳ ಸ್ಥೈರ್ಯಕ್ಕಾಗಿ, ದಯವಿಟ್ಟು ಅಂತಹ ರಾಜಕೀಯವನ್ನು ಮಾಡಬೇಡಿ ಎಂದು ನಾನು ಇಂತಹ ರಾಜಕೀಯ ಪಕ್ಷಗಳನ್ನು ಒತ್ತಾಯಿಸುತ್ತೇನೆಎಂದು ಪ್ರಧಾನಿ ಹೇಳಿದರು. ೨೦೧೯ರ ಫೆಬ್ರವರಿ ೧೪ ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ೪೦ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ನಂತರ "ಫಿತೂರಿ ಸಿದ್ಧಾಂತಗಳನ್ನು ಮುಂದಿಟ್ಟ ಕಾಂಗ್ರೆಸ್ ಪಕ್ಷವು ಇದಕ್ಕಾಗಿ ಕ್ಷಮೆ ಯಾಚಿಸಬೇಕು ಎಂಬುದಾಗಿ ಬಿಜೆಪಿ ಆಗ್ರಹಿಸಿದ ಒಂದು ದಿನದ ಬಳಿಕ ಪ್ರಧಾನ ಮಂತ್ರಿಯವರ ಹೇಳಿಕೆ ಹೊರಬಿದ್ದಿದೆ. ಉಭಯ ದೇಶಗಳನ್ನು ಯುದ್ಧದ ಅಂಚಿಗೆ ತಂದ ಪುಲ್ವಾಮಾ ದಾಳಿಗೆ ಇಸ್ಲಾಮಾಬಾದ್ ಕಾರಣ ಎಂಬುದಾಗಿ ಪಾಕಿಸ್ತಾನದ ಹಿರಿಯ ಸಚಿವ ಫವಾದ್ ಚೌಧರಿ ದೇಶದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಪ್ಪಿಕೊಂಡಿದ್ದರು. ನಂತರ ತಮ್ಮನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ತಾವು ಹೇಳಿದ್ದು ಪಾಕಿಸ್ತಾನದ "ಪುಲ್ವಾಮಾ ನಂತರದ ಕ್ರಮವನ್ನು ಎಂದು ಚೌದರಿ ಸಮಜಾಯಿಷಿ ನೀಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಚುನಾವಣಾ ಆಯೋಗವು ತಮ್ಮ ತಾರಾ ಪ್ರಚಾರಕ ಸ್ಥಾನಮಾನ ರದ್ದು ಪಡಿಸಿದ್ದನ್ನು ಪ್ರಶ್ನಿಸಿ, ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ 2020 ಅಕ್ಟೋಬರ್ 31ರ ಶನಿವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ರಾಜಕೀಯ ಪ್ರತಿಸ್ಪರ್ಧಿ ವಿರುದ್ಧ ಕಮಲನಾಥ್ ಅವರು "ಮಾಫಿಯಾ" ಮತ್ತು "ಮಿಲಾವತ್ ಖೋರ್ ಪದಗಳನ್ನು ಬಳಸಿದ್ದರು. ಕಳೆದ ವಾರ, ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಇಮಾರ್ತಿ ದೇವಿ ವಿರುದ್ಧ "ಐಟಂ ಪದ ಬಳಸಿದ್ದರು. ಇಂತಹ ಪದಗಳನ್ನು ಬಳಸಬೇಡಿ ಎಂದು ಚುನಾವಣಾ ಆಯೋಗ ಕಮಲನಾಥ್ ಅವರಿಗೆ ಸೂಚಿಸಿತ್ತು. ಆದರೂ ಕಮಲನಾಥ್ ವರಸೆ ಬದಲಾಗಿರಲಿಲ್ಲ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು, ಮಾದರಿ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಮತ್ತು ನೀಡಲಾದ ಸಲಹೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕಾಗಿ, ಕಮಲನಾಥ್ ಅವರ ತಾರಾ ಪ್ರಚಾರಕ (ಸ್ಟಾರ್ ಕ್ಯಾಂಪೇನರ್) ಸ್ಥಾನಮಾನವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ತಾರಾ ಪ್ರಚಾರಕ (ಸ್ಟಾರ್ ಕ್ಯಾಂಪೇನರ್) ಸ್ಥಾನಮಾನವನ್ನು ತತ್ ಕ್ಷಣದಿಂದ ರದ್ದು ಪಡಿಸಲಾಗಿದೆ. ಇಂದಿನಿಂದ ಯಾವುದೇ ಪ್ರಚಾರ ಅಭಿಯಾನವನ್ನು ಕಮಲನಾಥ್ ಕೈಗೊಂಡರೆ, ಅವರ ಪಯಣ, ವಾಸ್ತವ್ಯ ಮತ್ತು ಭೇಟಿಗೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು ಆಯಾ ಕ್ಷೇತ್ರದ ಅಭ್ಯರ್ಥಿಯು ಭರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಜಮ್ಮು: ಗುಪ್ಕರ್ ಘೋಷಣೆಗಾಗಿ ಜನತಾ ಮೈತ್ರಿಕೂಟ (ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್- ಪಿಎಜಿಡಿ) ನಿಯೋಗದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲ ಕಾರ್ಗಿಲ್ಗೆ ಭೇಟಿ ನೀಡಿದ್ದು, ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಜೊತೆಗೆ ರಹಸ್ಯ ಮಾತುಕತೆಗಳನ್ನು ನಡೆಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ೨೦೧೯ರ ಆಗಸ್ಟ್ ೫ಕ್ಕೆ ಮುನ್ನ ಇದ್ದ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುವುದಕ್ಕಾಗಿ ಹೋರಾಟ ನಡೆಸಲು ಪಿಎಜಿಡಿಯನ್ನು ರಚಿಸಲಾಗಿದ್ದು, ಅದರ ಸದಸ್ಯರಾದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ನಾಸಿರ್ ಅಸ್ಲಂ ವನಿ, ಪಿಡಿಪಿ ನಾಯಕರಾದ ಗುಲಾಬ್ ನಬಿ ಲೋನ್ ಹಂಜುರಾ ಮತ್ತು ವಹೀದ್ ಪ್ಯಾರಾ ಹಾಗೂ ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಮುಜಾಫರ್ ಶಾ ಅವರೂ ನಿಯೋಗದಲ್ಲಿದ್ದರು. ಶುಕ್ರವಾರ ಬೆಳಿಗ್ಗೆ, ನಿಯೋಗವು ಕಾರ್ಸ್ನಲ್ಲಿರುವ ಡ್ರಾಸ್ನಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡಿ ಅವರೊಂದಿಗೆ ಪಿಎಜಿಡಿ ಕಾರ್ಯಸೂಚಿಯ ಬಗ್ಗೆ ಚರ್ಚೆ ನಡೆಸಿತು. ಅದರ ನಂತರ, ನಿಯೋಗವು ಕಾರ್ಗಿಲ್ ತಲುಪಿತು, ಅಲ್ಲಿ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ನೊಂದಿಗೆ ಕಾರ್ಯಸೂಚಿ ಬಗ್ಗೆ ಚರ್ಚಿಸಿತು, ಕಳೆದ ವರ್ಷ ಆಗಸ್ಟ್ ರಂದು ರದ್ದು ಪಡಿಸಲಾದ ಸಂವಿಧಾನದ ೩೭೦ನೇ ವಿಧಿ ಮತ್ತು ೩೫- ವಿಧಿಗಳನ್ನು ಪುನಃಸ್ಥಾಪನೆ ಮಾಡಬೇಕು ಎಂಬ ಆಗ್ರಹ ಪಿಎಜಿಡಿಯದ್ದಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಬಹಾಮಾಸ್: ಜನಮನವನ್ನು ಸೂರೆಗೊಂಡ ಏಳು ಚಿತ್ರಗಳಲ್ಲಿ ಜೇಮ್ಸ್ ಬಾಂಡ್ ಪಾತ್ರವನ್ನು ನಿರ್ವಹಿಸಿದ ಹಾಲಿವುಡ್ ಚಿತ್ರಗಳ ಸ್ಕಾಟಿಷ್ ನಟ ಸಿಯಾನ್ ಕಾನರಿ ತಮ್ಮ ೯೦ ನೇ ವಯಸ್ಸಿನಲ್ಲಿ 2020 ಅಕ್ಟೋಬರ್ 31ರ ಶನಿವಾರ ನಿಧನರಾದರು. ಕೆಲಸಮಯದಿಂದ ಅಸ್ವಸ್ಥರಾಗಿದ್ದ ಸಿಯಾನ್ ಕಾನರಿ ಅವರು ಬಹಾಮಾಸ್ನಲ್ಲಿ ನಿದ್ರೆಯಲ್ಲಿದ್ದಾಗ ಶಾಂತವಾಗಿ ಕೊನೆಯುಸಿರು ಎಳೆದರು ಎಂದು ಅವರ ಪುತ್ರ ಸುದ್ದಿ ಜಾಲಕ್ಕೆ ತಿಳಿಸಿದ್ದಾರೆ.  ಸಿಯಾನ್ ಕಾನರಿ ಅವರು ಹಲವಾರು ಚಿತ್ರಗಳಲ್ಲಿ ಕಾಲ್ಪನಿಕ ಪತ್ತೇದಾರಿ ಜೇಮ್ಸ್ ಬಾಂಡ್ ಪಾತ್ರದಲ್ಲಿ ಹೆಸರುವಾಸಿಯಾದ್ದರು.  ಬಾಂಡ್ ತೆರೆಯ ಮೇಲೆ ನಟಿಸಿದ ಮೊದಲ ನಟ ಕಾನರಿ, ಏಳು ಬಾಂಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಡಾ ನೋ, ಫ್ರಮ್ ರಷ್ಯಾ ವಿಥ್ ಲವ್, ಗೋಲ್ಡ್ ಫಿಂಗರ್, ಥಂಡರ್ ಬಾಲ್, ಯು ಓನ್ಲಿ ಲೈವ್ (ಎರಡು ಬಾರಿ), ಡೈಮಂಡ್ಸ್ ಫಾರೆವರ್ ಮತ್ತು ನೆವರ್ ಸೇ ನೆವರ್ ಎಗೇನ್ ಇವು ಕಾನರಿ ಅವರು ನಟಿಸಿದ್ದ ಜೇಮ್ಸ್ ಬಾಂಡ್ ಚಿತ್ರಗಳು. ಸುವರ್ಣ, ಮಾದಕ ಮತ್ತು ಅತ್ಯಾಧುನಿಕ ಬ್ರಿಟಿಷ್ ದಳ್ಳಾಲಿ ಜೇಮ್ಸ್ ಬಾಂಡ್ ಎಂಬುದಾಗಿ ಅಂತಾರಾಷ್ಟ್ರೀಯ ತಾರಾಗಣದಲ್ಲಿ ಖ್ಯಾತಿ ಪಡೆದ ಕಾನರಿ ನಾಲ್ಕು ದಶಕಗಳ ಕಾಲ ಬೆಳ್ಳಿ ಪರದೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಬ್ರಿಯಾನ್ ಡಿ ಪಾಲ್ಮಾ ಅವರ ದಿ ಅನ್ಟಚಬಲ್ಸ್ ನಲ್ಲಿ ಐರಿಶ್ ಕಾಪ್ ಆಗಿ ಅವರ ಅಭಿನಯವೇ ಅವರಿಗೆ ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು ತಮ್ಮ ಸುದೀರ್ಘ ಮತ್ತು ಅಂತಸ್ತಿನ ವೃತ್ತಿಜೀವನದಲ್ಲಿ ಎರಡು ಬಾಫ್ಟಾ ಪ್ರಶಸ್ತಿಗಳು ಮತ್ತು ಮೂರು ಗೋಲ್ಡನ್ ಗ್ಲೋಬ್ಗಳನ್ನು ಗೆದ್ದಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ) 

2020: ನವದೆಹಲಿ: ಭಾರತದಲ್ಲಿ ಕೋವಿಡ್-೧೯ ಸೋಂಕು ಪ್ರಕರಣಗಳು ಮತ್ತು ಸಾವುಗಳು ಸೆಪ್ಟೆಂಬರ್ ಮಧ್ಯದ ಗರಿಷ್ಠ ಮಟ್ಟದ ಅರ್ಧದಷ್ಟು ಕಡಿಮೆಯಾಗಿವೆ. ದೇಶದಲ್ಲಿ ಕೊರೋನಾವೈರಸ್ ರೋಗವು ಸೆಪ್ಟೆಂಬರ್ ಮಧ್ಯz ಗರಿಷ್ಠ ಮಟ್ಟದಿಂದ ಶೇಕಡಾ ೫೦ರಷ್ಟು ಕೆಳಕ್ಕೆ ಇಳಿದಿದೆ. ವಿಶೇಷವೆಂದರೆ ಕೊರೋನಾವೈರಸ್ ಪ್ರಕರಣಗಳು ಮತ್ತು ಸಾವುಗಳು ಉತ್ತುಂಗಕ್ಕೆ ಏರಿದ ಗತಿಗಿಂತ ತೀವ್ರವಾದ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿವೆ. ದೇಶದಲ್ಲಿ ಸಾಂಕ್ರಾಮಿಕ ಪ್ರಕರಣಗಳ ಏಳು ದಿನಗಳ ಸರಾಸರಿ ಗುರುವಾರ ೪೭,೨೧೬ ರಷ್ಟಿತ್ತು. ಸೆಪ್ಟೆಂಬರ್ ೧೭ ರಂದು ೯೩,೭೩೫ ಪ್ರಕರಣಗಳೊಂದಿಗೆ ಗ್ರಾಫ್ ಉತ್ತುಂಗಕ್ಕೇರಿತ್ತು.  ಬೇರೆ ರೀತಿಯಲ್ಲಿ ಹೇಳುವುದಾದರೆ, ಕಳೆದ ವಾರದಲ್ಲಿ ಪತ್ತೆಯಾದ ಪ್ರಕರಣಗಳ ಸರಾಸರಿ ಸಂಖ್ಯೆ ಸಾಂಕ್ರಾಮಿಕ ರೋಗದ ದೊಡ್ಡ ಹಂತದಲ್ಲಿನ ಸರಾಸರಿಗಿಂತ ಶೇಕಡಾ ೫೦ರಷ್ಟು ಕಡಿಮೆಯಾಗಿದೆ. ದೈನಂದಿನ ಸಾವುಗಳ ಏಳು ದಿನಗಳ ಸರಾಸರಿ ಗ್ರಾಫ್ನಲ್ಲಿನ ಕುಸಿತ ಇನ್ನೂ ತೀವ್ರವಾಗಿದೆ. ಸೆಪ್ಟೆಂಬರ್ ೧೯ ರಂದು ಸಾವುಗಳು ,೧೭೬ ಕ್ಕೆ ಏರಿತ್ತು. ಅಕ್ಟೋಬರ್ ೨೯ ಹೊತ್ತಿಗೆ ಸಂಖ್ಯೆ ಶೇಕಡಾ ೫೦ಕ್ಕಿಂತ ಹೆಚ್ಚು ಅಂದರೆ ೫೪೩ಕ್ಕೆ ಇಳಿದಿದೆ. ದೈನಂದಿನ ಪ್ರಕರಣಗಳು ಮತ್ತು ಸಾವುಗಳು ಎರಡೂ ಪ್ರಸ್ತುತ ಜುಲೈನಲ್ಲಿ ಇದ್ದ ಪ್ರಮಾಣಕ್ಕೆ ಇಳಿದಿವೆ. ೪೭,೨೧೬ಕ್ಕೆ ಇಳಿದಿರುವ ಸೋಂಕಿನ ಪ್ರಕರಣಗಳ ಸಂಖ್ಯೆ, ಜುಲೈ ೨೭ ರಂದು ಇದ್ದ ೪೬,೭೬೦ಕ್ಕೆ ಸಮೀಪದಲ್ಲಿದೆಜುಲೈ ೨೭ರ ಬಳಿಕ ಸೆಪ್ಟೆಂಬರ್ ೧೭ ರಂದು ಕೋವಿಡ್ -೧೯ ಪ್ರಕರಣಗಳು ಉತ್ತುಂಗಕ್ಕೆ ಏರಲು ೫೨ ದಿನಗಳನ್ನು ತೆಗೆದುಕೊಂಡಿದ್ದವು. ಇದಕ್ಕೆ ವಿರುದ್ಧವಾಗಿ, ನಂತರದ ಗರಿಷ್ಠ ಶೇಕಡಾ ೫೦ಕ್ಕೆ ಇಳಿಯಲು ಬೇಕಾದ ದಿನಗಳು ೪೨-೪೨ ಮಾತ್ರ ಎಂದು ಅಂಕಿ ಸಂಖ್ಯೆಗಳು ತೋರಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

ನವದೆಹಲಿ: ೨೦೨೦ ನವೆಂಬರ್ ರ ಭಾನುವಾರದಿಂದ ಎಲ್ಪಿಜಿ ಸಿಲಿಂಡರುಗಳ ಮನೆ ಮನೆ ವಿತರಣೆ ವ್ಯವಸ್ಥೆ ಬದಲಾಗುತ್ತದೆ. ಏಕೆಂದರೆ ವಿತರಣೆಯ ಸಮಯದಲ್ಲಿ ದೃಢೀಕರಿಸಲು ಒಂದು-ಬಾರಿಯ ಪಾಸ್ವರ್ಡ್ ಅಗತ್ಯವಿರುತ್ತದೆ. ದೆಹಲಿಯಲ್ಲಿ, ಹೆಚ್ಚಿನ ಸುರಕ್ಷತೆಯ ನೋಂದಣಿ ಫಲಕಗಳಿಗಾಗಿ ಆನ್ಲೈನ್ ಬುಕಿಂಗ್ ಸಹ ನವೆಂಬರ್ ೧ರ ಭಾನುವಾರದಿಂದ ಪುನಾರಂಭಗೊಳ್ಳಲಿದೆ. ಬದಲಾವಣೆಗಳು ಕಳ್ಳತನವನ್ನು ತಡೆಗಟ್ಟುವ ಗುರಿ ಹೊಂದಿವೆ. ಜೈಪುರದಲ್ಲಿ ಈಗಾಗಲೇ ಪೈಲಟ್  ಪ್ರಾಜೆಕ್ಟ್ ಆಗಿರುವ ಕ್ರಮವನ್ನು ನವೆಂಬರ್ ರಿಂದ ೧೦೦ ಸ್ಮಾರ್ಟ್ ಸಿಟಿಗಳಲ್ಲಿ ಜಾರಿಗೆ ತರಲಾಗುವುದು. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಪಡೆಯುತ್ತಾರೆ. ವಿತರಣಾ ವ್ಯಕ್ತಿಗೆ ಇದನ್ನು ಒದಗಿಸಿದ ನಂತರವೇ, ಸಿಲಿಂಡರ್  ಸರಬರಾಜು ಮಾಡಲಾಗುತ್ತದೆ. ಇದು ಕಳ್ಳತನವನ್ನು ತಡೆಯಲು ಸಹಾಯ ಮಾಡುತ್ತದೆನವೆಂಬರ್ ರಿಂದ ಎಲ್ಪಿಜಿ ಸಿಲಿಂಡರ್ಗಳನ್ನು ಕಾಯ್ದಿರಿಸಲು ಇಂಡೇನ್ ಗ್ರಾಹಕರು 7718955555 (೭೭೧೮೯೫೫೫೫೫) ಎಂಬ ಹೊಸ ಫೋನ್ ಸಂಖ್ಯೆಯನ್ನು ಬಳಸಬೇಕಾಗುತ್ತದೆ. ಪ್ರಸ್ತುತ, ವಿವಿಧ ಸಂಖ್ಯೆಗಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಬಿಹಾರ: ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿP ಯಲ್ಲಿ ಉಚಿತ ಕೊರೊನಾ ವೈರಸ್ ಲಸಿಕೆ ನೀಡುವುದಾಗಿ ಬಿಜೆಪಿ ನೀಡಿದ ಭರವಸೆ ಚುನಾವಣೆ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿಲ್ಲ ಎಂದು ಚುನಾವಣಾ ಆಯೋಗ ಹೇಳಿತು. ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರ ದೂರಿಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಈ ಪ್ರಣಾಳಿಕೆಯಲ್ಲಿ ಚುನಾವಣೆ ಸಂಹಿತೆಯ ನಿಬಂಧನೆಗಳ ಉಲ್ಲಂಘನೆ ಕಂಡುಬಂದಿಲ್ಲ ಎಂದು ತಿಳಿಸಿತು. ಈ ಭರವಸೆಯ ಮುಖಾಂತರ ರಾಜ್ಯಗಳ ನಡುವೆ ತಾರತಮ್ಯ ಎಸಗಿದೆ ಹಾಗೂ ಚುನಾವಣಾ ಸಮಯದಲ್ಲಿ ಕೇಂದ್ರ ಸರ್ಕಾರವು ತನ್ನ ಅಧಿಕಾರವನ್ನು ದುರುಯೋಗಪಡಿಸಿಕೊಂಡಿದೆ ಎಂದು ಸಾಕೇತ್ ಗೋಖಲೆ ದೂರು ನೀಡಿದ್ದರು. 
ಉಚಿತ ಲಸಿಕೆ ಭರವಸೆಯು ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ತೀರ್ಮಾನಿಸಲು ಮಾದರಿ ನೀತಿ ಸಂಹಿತೆಯ ಕೆಲವು ಮಾರ್ಗಸೂಚಿಗಳನ್ನು ಚುನಾವಣಾ ಆಯೋಗವು ಉಲ್ಲೇಖಿಸಿತು. "ಸಂವಿಧಾನದಲ್ಲಿ ಪ್ರತಿಪಾದಿಸಿರುವ ರಾಜ್ಯ ನೀತಿಯ ನಿರ್ದೇಶನ ತತ್ವಗಳು ನಾಗರಿಕರಿಗಾಗಿ ವಿವಿಧ ಕಲ್ಯಾಣ ಕ್ರಮಗಳನ್ನು ರೂಪಿಸುವಂತೆ ರಾಜ್ಯಕ್ಕೆ ಆದೇಶಿಸುತ್ತವೆ. ಆದ್ದರಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಅಂತಹ ಕಲ್ಯಾಣದ ಭರವಸೆಗೆ ಯಾವುದೇ ಆಕ್ಷೇಪಣೆಗಳಿಲ್ಲ ಎಂಬುದು ಚುನಾವಣಾ ಆಯೋಗ ಉಲ್ಲೇಖಿಸಿದ ನಿಬಂಧನೆಗಳಲ್ಲಿ ಒಂದಾಗಿದೆ ಎಂದು ಹೇಳಿತು. ಈ ತಿಂಗಳ ಆರಂಭದಲ್ಲಿ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಐಸಿಎಂಆರ್ ಬಿಡುಗಡೆಗೊಳಿಸಿದ ನಂತರ ಬಿಹಾರದ ಜನತೆಗೆ ಉಚಿತ ಕೋವಿಡ್ -೧೯ ಲಸಿಕೆ ನೀಡುವ ಭರವಸೆ ನೀಡಿದ್ದರು. 

2020: ನವದೆಹಲಿ: ಧಾರ್ಮಿಕ ಸ್ಥಳಗಳ ಯಥಾಸ್ಥಿತಿ ಕಾಯ್ದುಕೊಳ್ಳಲು ೧೯೪೭ರ ಆಗಸ್ಟ್ ೧೫ರ ದಿನಾಂಕವನ್ನು ನಿಗದಿ ಮಾಡಿರುವ ೧೯೯೧ರ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ‘ಮೂಲಭೂತವಾದಿ, ಅನಾಗರಿಕ ದಾಳಿಕೋರರು ಮತ್ತು ಕಾನೂನು ಭಂಜಕರು ಅತಿಕ್ರಮಣ ಮಾಡಿದ ಧಾರ್ಮಿಕ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳ ಸ್ವರೂಪವನ್ನು ಉಳಿಸಿಕೊಳ್ಳಲು ನಿಗದಿ ಮಾಡಲಾದ ದಿನಾಂಕವು ಸ್ವೇಚ್ಛೆಯಿಂದ ಕೂಡಿದೆ ಮತ್ತು ಅತಾರ್ಕಿಕವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಬಿಜೆಪಿ ಮುಖಂಡ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದಾರೆ.ಹಿಂದೂ, ಜೈನ, ಬೌದ್ಧ ಹಾಗೂ ಸಿಖ್ ಧಾರ್ಮಿಕ ಸ್ಥಳಗಳಲ್ಲಿ ಆಗಿರುವ ಅತಿಕ್ರಮಣವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ದೂರು ನೀಡುವಂತಿಲ್ಲ ಹಾಗೂ ಹೈಕೋರ್ಟ್‌ಗೆ ಹೋಗುವಂತಿಲ್ಲ. ಇದಕ್ಕಿರುವ ಪರಿಹಾರೋಪಾಯಕ್ಕೆ ಕೇಂದ್ರ ಸರ್ಕಾರವು ನಿರ್ಬಂಧ ಹೇರಿದೆ ಎಂದು ಅರ್ಜಿಯಲ್ಲಿ ಅವರು ವಾದಿಸಿದ್ದಾರೆ. ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ ೧೯೯೧ರಲ್ಲಿನ ನಿಬಂಧನೆಗಳು ಸಮಾನತೆಯ ಮೂಲಭೂತ ಹಕ್ಕು, ಧರ್ಮವನ್ನು ಆಚರಿಸುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವ ಕಾರಣ, ಇದನ್ನು ಸಂವಿಧಾನ ಬಾಹಿರ ಹಾಗೂ ಅನೂರ್ಜಿತ ಎಂದು ನ್ಯಾಯಾಲಯ ಘೋಷಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ‘ಶ್ರಿಕೃಷ್ಣನ ಜನ್ಮಸ್ಥಳವು ತಮಗೆ ದೊರೆಯಬೇಕು ಎಂದು ಹಿಂದೂಗಳು ನೂರಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಕಾಯ್ದೆ ರೂಪಿಸುವ ವೇಳೆಯಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ವಿವಾದವನ್ನು ಮಾತ್ರ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ರಾಮ ಮತ್ತು ಕೃಷ್ಣ ವಿಷ್ಣುವಿನ ಅವತಾರವೇ ಆಗಿದ್ದರೂ ಕೃಷ್ಣ ಜನ್ಮಸ್ಥಳವನ್ನು ಸೇರಿಸಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ೨೦೧೯ರ ನ.೯ರಂದು ಸುಪ್ರೀಂ ಕೋರ್ಟ್ ಅಯೋಧ್ಯೆ ಪ್ರಕರಣದಲ್ಲಿ ಆ ತೀರ್ಪು ನೀಡದೇ ಹೋಗಿದ್ದರೆ, ರಾಮಮಂದಿರ ಧ್ವಂಸಗೊಂಡ ೫೦೦ ವರ್ಷಗಳ ಬಳಿಕವೂ ಹಿಂದೂಗಳಿಗೆ ನ್ಯಾಯ ದೊರೆಯುತ್ತಿರಲಿಲ್ಲ. ಧಾರ್ಮಿಕ ಸ್ಥಳಗಳಲ್ಲಿನ ಅತಿಕ್ರಮಣವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಅಥವಾ ನ್ಯಾಯಾಂಗ ವ್ಯವಸ್ಥೆಯ ಮೂಲಕ ಪರಿಹಾರ ಪಡೆಯುವುದನ್ನು ತಡೆಯುವುದಕ್ಕೆ ಕೇಂದ್ರಕ್ಕೆ ಯಾವ ಅಧಿಕಾರವೂ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಕಾಶಿ, ಮಥುರಾ ಮಂದಿರಗಳನ್ನು ಹಿಂದೂಗಳಿಗೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ಬೇಡಿಕೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಅರ್ಜಿ ಮಹತ್ವ ಪಡೆದಿದೆ. 

2020: ಬೆಂಗಳೂರು: ಮತೀಯ ಗಲಭೆ ಸೃಷ್ಟಿಸಲು ಹಾಗೂ ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಶಂಕಿತ ಉಗ್ರರನ್ನು ಪತ್ತೆ ಮಾಡಿ ಜೈಲಿಗಟ್ಟಿದ್ದ ರಾಜ್ಯದ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ವಿಶೇಷ ತಂಡಕ್ಕೆ, ಕೇಂದ್ರ ಗೃಹ ಸಚಿವಾಲಯದ ೨೦೨೦ನೇ ಸಾಲಿನ ಪದಕ ಲಭಿಸಿತು. ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ಪ್ರತಿ ವರ್ಷವೂ ಈ ಪದಕ ನೀಡಲಾಗುತ್ತದೆ. ಐಎಸ್‌ಡಿ ವಿಶೇಷ ತಂಡದಲ್ಲಿದ್ದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ, ಡಿವೈಎಸ್ಪಿಗಳಾದ ಡಿ. ಕುಮಾರ್, ಎಸ್.ಕೆ. ಉಮೇಶ್, ಇನ್‌ಸ್ಪೆಕ್ಟರ್ ಆರ್. ಸುಶೀಲಾ, ಕಾನ್‌ಸ್ಟೇಬಲ್‌ಗಳಾದ ವೈ.ಶಂಕರ್ ಹಾಗೂ ಎನ್.ಪ್ರಕಾಶ್ ಪದಕಕ್ಕೆ ಪಾತ್ರರಾದರು.  ದೇಶಕ್ಕೆ ಮಾದರಿಯಾದ ತನಿಖೆ: ಐಎಸ್ (ಇಸ್ಲಾಮಿಕ್ ಸ್ಟೇಟ್) ಹಾಗೂ ಪಾಕಿಸ್ತಾನದ ಕೆಲ ಉಗ್ರ ಸಂಘಟನೆಗಳ ಜೊತೆ ಶಂಕಿತರಾದ ಮೆಹಬೂಬ್ ಪಾಷಾ, ಖ್ವಾಜಾ ಮೊಹಿನುದ್ದೀನ್ ಹಾಗೂ ಇತರರು ಸಂಪರ್ಕ ಇಟ್ಟುಕೊಂಡಿದ್ದರು. ಕರ್ನಾಟಕ, ತಮಿಳುನಾಡಿನಲ್ಲಿ ಮತೀಯ ಗಲಭೆ ಸೃಷ್ಟಿಸಲು ಹಾಗೂ ಭಯೋತ್ಪಾದನಾ ಚಟುವಟಿಕೆ ನಡೆಸಲು ಶಂಕಿತರು ನಿರಂತರವಾಗಿ ಸಂಚು ರೂಪಿಸುತ್ತಿದ್ದರು. ಅದರ ಭಾಗವಾಗಿ ತಮಿಳುನಾಡಿನಲ್ಲಿ ಇನ್‌ಸ್ಪೆಕ್ಟರ್ ವಿಲ್ಸನ್ ಎಂಬುವರನ್ನು ಹತ್ಯೆ ಮಾಡಿದ್ದರು. ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೂ ಬಾಂಬ್ ಬೆದರಿಕೆ ಹಾಕಿದ್ದರು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ‘ಅಲ್ ಹಿಂದ್ ಟ್ರಸ್ಟ್ ಕಟ್ಟಿಕೊಂಡಿದ್ದ ಶಂಕಿತರು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜಮೀನು ಖರೀದಿಸಿದ್ದರು. ಅಲ್ಲಿಯೇ ಭಯೋತ್ಪಾದನೆ ತರಬೇತಿ ನೀಡಲಾರಂಭಿಸಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ತಮಿಳುನಾಡು ಪೊಲೀಸರು, ತನಿಖೆಗಾಗಿ ಕರ್ನಾಟಕ ಪೊಲೀಸರ ನೆರವು ಕೋರಿದ್ದರು. ಐಎಸ್‌ಡಿ ಹಾಗೂ ಸಿಸಿಬಿ ವಿಭಾಗದ ಪೊಲೀಸರು, ಶಂಕಿತರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಗುರಪ್ಪನಪಾಳ್ಯದಲ್ಲಿ ನೆಲೆಸಿದ್ದ ಶಂಕಿತ ಮೆಹಬೂಬ್ ಪಾಷಾನನ್ನು ಬಂಧಿಸಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಮುಂದುವರೆಸಿದ್ದ ಐಎಸ್‌ಡಿ ವಿಶೇಷ ತಂಡ, ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿತ್ತು. ನಂತರ, ಪ್ರಕರಣವು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾವಣೆ ಆಗಿತ್ತು. ಐಎಸ್‌ಡಿ ಪೊಲೀಸರ ತನಿಖೆಯು ಇಡೀ ದೇಶಕ್ಕೆ ಮಾದರಿಯೆಂದು ಅಭಿಪ್ರಾಯಪಟ್ಟಿರುವ ಕೇಂದ್ರ ಗೃಹ ಸಚಿವಾಲಯ, ಪದಕ ನೀಡಿ ಮೆಚ್ಚುಗೆ ವ್ಯಕ್ತಪಡಿಸಿತು.

ಇಂದಿನ ಇತಿಹಾಸ  History Today ಅಕ್ಟೋಬರ್ 31 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment