ಇಂದಿನ ಇತಿಹಾಸ History Today ಅಕ್ಟೋಬರ್ 16
2020: ಮಥುರಾ: ಉತ್ತರ ಪ್ರದೇಶದ ಮಥುರಾ ನಗರದ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮಥುರಾ ನ್ಯಾಯಾಲಯವು 2020 ಅಕ್ಟೋಬರ್ 16ರ ಶುಕ್ರವಾರ ವಿಚಾರಣೆಗೆ ಅಂಗೀಕರಿಸಿತು. ಕಳೆದ ತಿಂಗಳು, ಮಥುರಾ ಸಿವಿಲ್ ನ್ಯಾಯಾಲಯವು ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿಯ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ಕಿತ್ತು ಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಖಟ್ಲೆಯನ್ನು ವಜಾಗೊಳಿಸಿತ್ತು. ಜಿಲ್ಲಾ ನ್ಯಾಯಾಧೀಶ ಸಾಧನಾ ರಾಣಿ ಠಾಕೂರ್ ಅವರ ನ್ಯಾಯಾಲಯವು ಮೇಲ್ಮನವಿಯನ್ನು ಶುಕ್ರವಾರ ಅಂಗೀಕರಿಸಿದೆ. ನ್ಯಾಯಾಲಯವು ನವೆಂಬರ್ ೧೮ ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ. ಕತ್ರ ಕೇಶವ್ ದೇವ್ ದೇವಸ್ಥಾನದ ೧೩ ಎಕರೆ ಆವರಣದಲ್ಲಿರುವ ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿರುವ ೧೭ ನೇ ಶತಮಾನದ ಶಾಹಿ ಈದ್ಗಾ ಮಸೀದಿನ್ನು ಕಿತ್ತು ಹಾಕುವಂತೆ ಕೋರಿ ಕೆಲವು ವ್ಯಕ್ತಿಗಳ ಸಮೂಹವೊಂದು ಮಥುರಾ ನ್ಯಾಯಾಲಯಕ್ಕೆ ಮೆಟ್ಟಿಲೇರಿದೆ. ಹಿರಿಯ ಸಿವಿಲ್ ನ್ಯಾಯಾಧೀ ಛಾಯಾ ಶರ್ಮಾ ಅವರ ನ್ಯಾಯಾಲಯದಲ್ಲಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ, ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿ ನಡುವೆ ಮಾಡಿಕೊಳ್ಳಲಾದ ಭೂ ಒಪ್ಪಂದವನ್ನು ಅನುಮೋದಿಸಿ ೧೯೬೮ರಲ್ಲಿ ಮಥುರಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸುವಂತೆ ಕೋರಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಪರಿಷ್ಕರಣೆ ಸಂಬಂಧ ರಚಿಸಲಾಗಿರುವ ಸಮಿತಿಯಿಂದ ವರದಿ ಬಂದ ಬಳಿಕ ಬಾಲಕಿಯರ ಕಾನೂನು ಬದ್ಧ ಮದುವೆಯ ಕನಿಷ್ಠ ವಯಸ್ಸನ್ನು ಪರಿಷ್ಕರಿಸುವ ಬಗ್ಗೆ ಕೇಂದ್ರವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಅಕ್ಟೋಬರ್ 16ರ ಶುಕ್ರವಾರ ಹೇಳಿದರು. ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ೭೫ ನೇ ವಾರ್ಷಿಕೋತ್ಸವದಂದು ೭೫ ರೂ.ಗಳ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ನಂತರ ವಿಡಿಯೋ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಹಲವಾರು ಪ್ರಯತ್ನಗಳಿಂದಾಗಿ ಶಿಕ್ಷಣದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತವು ದೇಶದಲ್ಲಿ ಮೊದಲ ಬಾರಿಗೆ ಬಾಲಕರಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು. "ಹೆಣ್ಣುಮಕ್ಕಳ ವಿವಾಹದ ಆದರ್ಶ ವಯಸ್ಸು ಯಾವುದು ಎಂದು ನಿರ್ಧರಿಸಲು ಒಂದು ಪ್ರಮುಖ ಚರ್ಚೆ ನಡೆಯುತ್ತಿದೆ’ ಎಂದು ಪ್ರಧಾನಿ ನುಡಿದರು. ಬಾಲಕಿಯರ ಮದುವೆ ವಯಸ್ಸಿಗೆ ಸಂಬಂಧಿಸಿದಂತೆ ಸಮಿತಿಯ ವರದಿ ಹಾಗೂ ಸರ್ಕಾರ ಯಾವಾಗ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದಾಗಿ ವಿಚಾರಿಸಿ ದೇಶಾದ್ಯಂತದಿಂದ ತಮಗೆ ಪತ್ರಗಳು ಬರುತ್ತಿವೆ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ ೨೩ ರಂದು ಸಾಸರಾಮ್ ನ ಡೆಹ್ರಿಯಲ್ಲಿ ಮೊದಲ ಹಂತದ ಮತದಾನಕ್ಕೆ ಮುನ್ನವೇ ರಾಲಿಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಬಿಹಾರ ಚುನಾವಣಾ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಲಿದ್ದು, ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯವರೆಗೂ ಅದನ್ನು ಮುಂದುವರೆಸಲಿದ್ದಾರೆ. ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಪ್ರಭಾವವನ್ನು ಸೀಮಿತಗೊಳಿಸುವ ಅಭಿಯಾನ ನಡೆಸಬೇಕೆಂದು ಜೆಡಿಯು ಬಯಸುತ್ತಿರುವ ಸಮಸ್ಟಿಪುರದ ಸ್ಥಾನಗಳು ಸೇರಿದಂತೆ ಬಿಹಾರದಲ್ಲಿ ೧೨ ರಾಲಿಗಳನ್ನು ಪ್ರಧಾನಿ ನಡೆಸಲಿದ್ದಾರೆ. ಸಮಸ್ಟಿಪುರವನ್ನು ಎಲ್ಜೆಪಿಯ ಭದ್ರಕೋಟೆಯೆಂದು ಪರಿಗಣಿಸಲಾಗಿದೆ. ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಏಕತೆಯನ್ನು ಪ್ರಸ್ತುತಪಡಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೊದಲ ಮತ್ತು ಮೂರನೇ ಹಂತದ ರ್ಯಾಲಿಗಳಲ್ಲಿ ಸೇರಿಕೊಳ್ಳಲಿದ್ದಾರೆ. ಮೊದಲ ದಿನ, ಅಂದರೆ, ಅಕ್ಟೋಬರ್ ೨೩ ರಂದು ಪ್ರಧಾನಿ ಮೂರು ರಾಲಿಗಳನ್ನು ನಡೆಸಲಿದ್ದಾರೆ, ಉಳಿದ ಎರಡು ಗಯಾ ಮತ್ತು ಭಾಗಲ್ಪುರದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವೇಶ್ ಕುಮಾರ್ 2020 ಅಕ್ಟೋಬರ್ 16ರ ಶುಕ್ರವಾರ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಪಾಟ್ನಾ: ಕೇಸರಿ ಪಕ್ಷದ ಹಿರಿಯ ನಾಯಕರೊಂದಿಗಿನ ಸಮೀಕರಣಗಳನ್ನು ತಿಳಿಸುವ ಮೂಲಕ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಶುಕ್ರವಾರ ಆರೋಪಿಸಿದ ಕೆಲವೇ ಗಂಟೆಗಳಲ್ಲಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ 2020 ಅಕ್ಟೋಬರ್ 16ರ ಶುಕ್ರವಾರ ಘೋಷಿಸಿದರು. ಜೆಡಿಯು ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ದಾಳಿ ನಡೆಸುತ್ತಿರುವ ಪಾಸ್ವಾನ್ ಅವರು ಬಿಜೆಪಿ ಮತ್ತು ಅದರ ಉನ್ನತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸುತ್ತಿದ್ದಾರೆ. ಇದು ಅವರು ಕೇಸರಿ ಪಕ್ಷದೊಂದಿಗೆ ರಹಸ್ಯ ತಿಳುವಳಿಕೆಯನ್ನು ಹೊಂದಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ ಎಂಬುದಾಗಿ ಎಲ್ಜೆಪಿ ನಾಯಕರ ಬಗ್ಗೆ ಬಿಜೆಪಿ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಪಾಸ್ವಾನ್, "ನಾನು ಪ್ರಧಾನಿ ಮೋದಿಯವರ ಫೋಟೋಗಳನ್ನು ಪ್ರಚಾರಕ್ಕಾಗಿ ಬಳಸಬೇಕಾಗಿಲ್ಲ. ಅವರು ನನ್ನ ಹೃದಯದಲ್ಲಿ ವಾಸವಾಗಿದ್ದಾರೆ. ನಾನು ಅವರ ಹನುಮಂತ. ಅಗತ್ಯವಿದ್ದರೆ, ನಾನು ನನ್ನ ಎದೆಯನ್ನು ಬಗೆದು ತೋರಿಸುತ್ತೇನೆ’ ಎಂದು ಹೇಳಿದರು. ಪಾಸ್ವಾನ್ ಅವರು ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಶುಕ್ರವಾರ ಆರೋಪಿಸಿದರು ಮತ್ತು ಎಲ್ಜೆಪಿಯನ್ನು "ಮತ ಒಡೆಯುವವರು’ ಎಂದು ಟೀಕಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯ/ ಕೂಳೆ ಅಥವಾ ಮೊಂಡು ಸುಡುವಿಕೆಯ ಮೇಲ್ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ 2020 ಅಕ್ಟೋಬರ್ 16ರ ಶುಕ್ರವಾರ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರನ್ನು ನೇಮಕ ಮಾಡಿತು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ಏಕವ್ಯಕ್ತಿ ಸಮಿತಿಯ ನೇಮಕವನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಮಾಡಿದ ಮನವಿಯನ್ನು ನಿರಾಕರಿಸಿದ ಸುಪ್ರೀಮಕೋರ್ಟ್ ’ದೆಹಲಿ-ಎನ್ಸಿಆರ್ ನಾಗರಿಕರು ಶುದ್ಧ ಶುದ್ಧ ಗಾಳಿಯಲ್ಲಿ ಉಸಿರಾಡಲು ಸಾಧ್ಯವಾಗುವುದರ ಬಗ್ಗೆ ಮಾತ್ರ ನಾವು ಕಾಳಜಿ ವಹಿಸುತ್ತೇವೆ’ ಎಂದು ಹೇಳಿತು. ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ನ್ಯಾಯಾಲಯದಿಂದ ನೇಮಿಸಲ್ಪಟ್ಟ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಮತ್ತು ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಲೋಕೂರ್ ಫಲಕಕ್ಕೆ ಸಹಾಯ ಮಾಡುವಂತೆ ನಿರ್ದೇಶನವನ್ನೂ ನೀಡಿತು. "ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಈ ಸಮಿತಿಗೆ ಕಾರ್ಯದರ್ಶಿ, ಭದ್ರತೆ ಮತ್ತು ಆರ್ಥಿಕ ಸೌಲಭ್ಯಗಳನ್ನು ಒದಗಿಸಲಿವೆ. ಸಮಿತಿಗೆ ಸಹಾಯ ಮಾಡಲು ರಾಷ್ಟ್ರೀಯ ಕೆಡೆಟ್ ಕೋರ್ (ಎನ್ಸಿಸಿ), ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾರತ್ ಸ್ಕೌಟ್ಗಳನ್ನು ಸಹ ನಿಯೋಜಿಸಲಾಗುವುದು. ಸಮಿತಿಯು ತನ್ನ ವರದಿಯನ್ನು ೧೫ ದಿನಗಳಲ್ಲಿ ಸುಪ್ರೀಂಕೋರ್ಟಿಗೆ ಸಲ್ಲಿಸಲಿದೆ’ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಯೋತ್ಪಾದನೆಯನ್ನು ಪಾಕಿಸ್ತಾನ ಸರ್ಕಾರವು ತಾನು ಸಮರ್ಥಿಸುವ ನೀತಿಯೆಂದು ಸಾರ್ವಜನಿಕವಾಗಿ ಅಂಗೀಕರಿಸಿದೆ, ಹೀಗಾಗಿ ಪಾಕಿಸ್ತಾನದ ಜೊತೆ ಸಾಮಾನ್ಯ ಸಂಬಂಧವನ್ನು ಮುಂದುವರೆಸುವುದು ತುಂಬಾ ಕಷ್ಟಕರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ 2020 ಅಕ್ಟೋಬರ್ 16ರ ಶುಕ್ರವಾರ ಹೇಳಿದರು. ಏಷ್ಯಾ ಸೊಸೈಟಿ ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, "ಪಾಕಿಸ್ತಾನದ ಜೊತೆ ನಾವು ಹೇಗೆ ಇದ್ದೇವೆ ಎಂಬುದು ನಿಮ್ಮ ಪ್ರಶ್ನೆ. ಪಾಕಿಸ್ತಾನದಿಂದ ಭಯೋತ್ಪಾದನೆ ಮುಂದುವರೆದಿದೆ. ಭಯೋತ್ಪಾದನೆ ತಾವು ಸಮರ್ಥಿಸುವ ನೀತಿಯೆಂದು ಪಾಕಿಸ್ತಾನ ಸರ್ಕಾರವು ಸಾರ್ವಜನಿಕವಾಗಿ ಅಂಗೀಕರಿಸಿದೆ. ಆದ್ದರಿಂದ ಅವರೊಂದಿಗೆ ಸಾಮಾನ್ಯ ಸಂಬಂಧವನ್ನು ನಡೆಸುವುದು ತುಂಬಾ ಕಷ್ಟಕರವಾಗಿದೆ’ ಎಂದು ಹೇಳಿದರು. ’ಇದು ಭಯೋತ್ಪಾದನೆ ವಿಚಾರ ಮಾತ್ರವಲ್ಲ, ಪಾಕಿಸ್ತಾನವು ಭಾರತದೊಂದಿಗೆ ಸಾಮಾನ್ಯ ವ್ಯಾಪಾರ ಮಾಡುವುದಿಲ್ಲ ಮತ್ತು ಭಾರvಕ್ಕೆ ಅತ್ಯಂತ ಆಪ್ತ ರಾಷ್ಟ್ರ (ಎಂಎಫ್ಎನ್-ಮೋಸ್ಟ್ ಫೇವರ್ಡ್ ನೇಷನ್) ಸ್ಥಾನಮಾನವನ್ನು ನೀಡಿಲ್ಲ ಎಂದು ಜೈಶಂಕರ್ ಹೇಳಿದರು. "ನಮಲ್ಲಿ ಸಾಮಾನ್ಯ ವೀಸಾ ಸಂಬಂಧವೂ ಇಲ್ಲ, ಈ ವಿಚಾರದಲ್ಲಿ ಅವರು ಬಹಳ ನಿರ್ಬಂಧಗಳನ್ನು ಹೇರಿದ್ದಾರೆ. ಅವರು ಭಾರತ ಮತ್ತು ಅಫ್ಘಾನಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಸಂಪರ್ಕವನ್ನು ನಿರ್ಬಂಧಿಸಿದ್ದಾರೆ’ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ತನ್ನ ಅಣ್ವಸ್ತ್ರ ಸಾಗಣೆ ಸಾಮರ್ಥ್ಯದ ಪೃಥ್ವಿ -೨ ಕ್ಷಿಪಣಿಯ ಮತ್ತೊಂದು ರಾತ್ರಿ ಪ್ರಯೋಗವನ್ನು ಭಾರತವು ಯಶಸ್ವಿಯಾಗಿ ಒಡಿಶಾ ಕರಾವಳಿಯ ಪರೀಕ್ಷಾ ವಲಯದಲ್ಲಿ 2020 ಅಕ್ಟೋಬರ್ 16ರ ಶುಕ್ರವಾರ ಸಂಜೆ ನಡೆಸಿತು. ಪ್ರಯೋಗವನ್ನು ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಶುಕ್ರವಾರ ಸಂಜೆ ನಡೆಸಿತು ಎಂದು ಸುದ್ದಿ ಮೂಲಗಳು ತಿಳಿಸಿದವು. ದ್ರವ-ಚಾಲಿತ ಪೃಥ್ವಿ -೨ ಕ್ಷಿಪಣಿಯು ೨೫೦ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು ೧ ಟನ್ ಸಿಡಿತಲೆ ಸಾಗಿಸಬಲ್ಲದು. ಇದು ಭಾರತದ ಮೊದಲ ಸ್ಥಳೀಯ ಮೇಲ್ಮೈಯಿಂದ ಮೇಲ್ಮೈಗೆ ನೆಗೆಯಬಲ್ಲ ಕಾರ್ಯತಂತ್ರದ ಕ್ಷಿಪಣಿಯಾಗಿದೆ. ಇದು ಮೂರು ವಾರಗಳಲ್ಲಿ ಪೃಥ್ವಿ -೨ ರ ಎರಡನೇ ರಾತ್ರಿ ಪ್ರಯೋಗವಾಗಿದೆ. ಸೆಪ್ಟೆಂಬರ್ ೨೭ ರಂದು ಡಿಆರ್ಡಿಒ ಪರಮಾಣು ಕ್ಷಿಪಣಿಯ ಮತ್ತೊಂದು ಸುತ್ತಿನ ರಾತ್ರಿ ಪ್ರಯೋಗವನ್ನು ಸದ್ದಿಲ್ಲದೆ ನಡೆಸಿತ್ತು. ಮೇಲ್ಮೈಯಿಂದ ಮೇಲ್ಮೈಗೆ ಕ್ಷಿಪಣಿಯ ಹಾರಾಟ ಪರೀಕ್ಷೆಯು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ೪೦ ದಿನಗಳಲ್ಲಿ ನಡೆಸಿದ ೧೧ ನೇ ಕ್ಷಿಪಣಿ ಪರೀಕ್ಷೆಯಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌ಎಒ) ೭೫ನೇ ವರ್ಷಾಚರಣೆಯ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ ಅಕ್ಟೋಬರ್ ೧೬ರ ಶುಕ್ರವಾರ ೭೫ ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು. ವಿಡಿಯೊ ಸಮಾವೇಶದಲ್ಲಿ ಪ್ರಧಾನಿ ಈ ನಾಣ್ಯಗಳನ್ನು ಅನಾವರಣಗೊಳಿಸಿದರು. ಇದೇ ಸಮಾರಂಭದಲ್ಲಿ ಅವರು ೧೭ ಹೊಸ ಜೈವಿಕಸಂವರ್ಧಿತ ಬೆಳೆ ಪ್ರಭೇದಗಳನ್ನು ಬಿಡುಗಡೆ ಮಾಡಿದರು. ಕೃಷಿ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಖರೀದಿಸುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಕೇಂದ್ರದ ಮೂರು ಕೃಷಿ ಮಸೂದೆಗಳ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಮೋದಿ ಕನಿಷ್ಠ ಬೆಂಬಲ ಬೆಲೆಯ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಮಾಡಿದರು. ದೇಶದಲ್ಲಿ ಅಪೌಷ್ಟಿಕತೆ ನಿವಾರಿಸಲು ರಾಗಿ ಮತ್ತು ಹೆಚ್ಚಿನ ಪೌಷ್ಠಿಕಾಂಶದ ಬೆಳೆಗಳನ್ನು ಕೇಂದ್ರವು ಉತ್ತೇಜಿಸುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ಎಂಟು ವರ್ಷಗಳ ಹಿಂದೆ ಪೊಲೀಸ್ ಕಾನ್ಸ್ಟೆಬಲ್ ಒಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಅವರಿಗೆ ೨೦೨೦ ಅಕ್ಟೋಬರ್ ೧೬ರ ಶುಕ್ರವಾರ ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. ಕಾಂಗ್ರೆಸ್ ಶಾಸಕಿಯಾಗಿರುವ ಠಾಕೂರ್, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷೆಯೂ ಆಗಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್-ಎನ್ಸಿಪಿ ಹಾಗೂ ಶಿವಸೇನಾ ಮೈತ್ರಿ ಸರ್ಕಾರಕ್ಕೆ ಈ ತೀರ್ಪು ಮುಜುಗರ ಉಂಟು ಮಾಡಿತು. ೨೦೧೨ರಲ್ಲಿ ಘಟನೆ: ಅಮರಾವತಿ ಜಿಲ್ಲೆಯ ರಾಜಾಪೇಠ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬಾದೇವಿ ದೇವಸ್ಥಾನದ ಸಮೀಪ ೨೦೧೨ರ ಮಾರ್ಚ್ ೨೪ರಂದು ಸಂಜೆ ೪.೧೫ರ ವೇಳೆಗೆ ಠಾಕೂರ್ ಹಾಗೂ ಅವರ ಬೆಂಬಲಿಗರು ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಉಲ್ಲಾಸ್ ರೊರಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವಿತ್ತು. ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಸಂಚರಿಸದಂತೆ ಠಾಕೂರ್ ಅವರಿದ್ದ ಕಾರನ್ನು ಕಾನ್ಸ್ಟೇಬಲ್ ತಡೆದಿದ್ದರು. ಆಗ ಈ ಘಟನೆ ನಡೆದಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment