ಇಂದಿನ ಇತಿಹಾಸ History Today ಅಕ್ಟೋಬರ್ 29
2020: ನವದೆಹಲಿ: ದೆಹಲಿ- ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ದೆಹಲಿ-ಎನ್ಸಿಆರ್) ವಾಯುಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೊಳಿಸಿದೆ. ಸುಗ್ರೀವಾಜ್ಞೆಯ ಪ್ರಕಾರ ಮಾಲಿನ್ಯವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗಿದ್ದು, ೫ ವರ್ಷ ಸೆರೆವಾಸ ಮತ್ತು ೧ ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅನುಮೋದನೆಯ ಬಳಿಕ 2020 ಅಕ್ಟೋಬರ್ 28ರ ಬುಧವಾರ ರಾತ್ರಿಯಿಂದ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕೂ ಮುನ್ನ, ಈ ವಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ಸುಪ್ರೀಂಕೋರ್ಟಿನಲ್ಲಿ ತ್ಯಾಜ್ಯ (ಕೂಳೆ) ಸುಡುವುದನ್ನು ನಿಷೇಧಿಸಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ವೇಳೆಯಲ್ಲಿ ದೆಹಲಿ-ಎನ್ಸಿಆರ್ ವಾಯುಮಾಲಿನ್ಯ ನಿವಾರಿಸಲು ಕೇಂದ್ರ ಸರ್ಕಾರವು ಕಾನೂನು ಜಾರಿಗೆ ತರಲಿದೆ ಎಂದು ತಿಳಿಸಿದ್ದರು. ಕೂಳೆ ಸುಡುವಿಕೆ ಸಹಿತವಾಗಿ ವಾಯುಮಾಲಿನ್ಯವನ್ನು ನಿಯಂತ್ರಿಸಲು ನೇಮಿಸಲಾದ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ನೇತೃತ್ವದ ಏಕ ವ್ಯಕ್ತಿ ಸಮಿತಿಯನ್ನು ಅಮಾನತಿನಲ್ಲಿ ಇಡುವಂತೆಯೂ ಮೆಹ್ತ ಅವರು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದರು. ಸುಗ್ರೀವಾಜ್ಞೆಯ ಪ್ರಕಾರ, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್), ಮತ್ತು ದೆಹಲಿಯ ಆಸುಪಾಸಿನ ಪ್ರದೇಶಗಳಾದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವನ್ನು ರಚಿಸಲಾಗುವುದು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಪ್ಯಾರಿಸ್: ಫ್ರಾನ್ಸಿನ ನೈಸ್ ನಗರದ ಇಗರ್ಜಿ (ಚರ್ಚ್) ಒಂದರಲ್ಲಿ ಅಮಾನ್ ಚಾಕನ್ನು ಝಳಪಿಸುತ್ತಾ ಬಂದ ಹಲ್ಲೆಕೋರರು ಒಬ್ಬ ಮಹಿಳೆಯ ಶಿರಚ್ಛೇದ ಸೇರಿದಂತೆ ಮೂವರು ಮಹಿಳೆಯರನ್ನು ಹತ್ಯೆಗೈದು ಹಲವಾರು ಮಂದಿಯನ್ನು ಗಾಯಗೊಳಿಸಿದ ಘಟನೆ 2020 ಅಕ್ಟೋಬರ್ 29ರ ಗುರುವಾರ ಘಟಿಸಿತು. ದಾಳಿಕೋರರನ್ನು ಪೊಲೀಸರು ಬಂಧಿಸುವುದಕ್ಕೆ ಮುನ್ನ ಚಾಕು ದಾಳಿಯಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದವು. ನೈಸ್ ನಗರದ ಮೇಯರ್ ಕ್ರಿಶ್ಚಿಯನ್ ಎಸ್ಟ್ರೋಸಿ ಅವರು ’ಇದು ಇಸ್ಲಾಮೀ ಫ್ಯಾಸಿಸ್ಟ್ ದಾಳಿ’ ಎಂಬುದಾಗಿ ಬಣ್ಣಿಸಿದ್ದು, ಫ್ರೆಂಚ್ ಭಯೋತ್ಪಾದನಾ ನಿಗ್ರಹ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನಗರದ ನೊಟ್ರೆ ಡೇಮ್ ಇಗರ್ಜಿ ಅಥವಾ ಹತ್ತಿರದಲ್ಲಿ ಚಾಕು ದಾಳಿ ನಡೆದಿದ್ದು, ಪೊಲೀಸರು ದಾಳಿಕೋರರನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಟ್ರೋಸಿ ಟ್ವಿಟರ್ ಸಂದೇಶದಲ್ಲಿ ತಿಳಿಸಿದರು. ಹಲ್ಲೆ ಘಟನೆ ನಡೆದ ಸ್ವಲ್ಪ ಸಮಯದ ನಂತರ ಪೊಲೀಸರಿಂದ ಬಂಧಿಸಲ್ಪಟ್ಟ ಹಲ್ಲೆಕೋರರು "ಅಲ್ಲಾಹು ಅಕ್ಬರ್’ (ದೇವರು ದೊಡ್ಡವ) ಘೋಷಣೆಗಳನ್ನು ಪುನರಾವರ್ತಿಸುತ್ತಿದ್ದರು ಎಂದು ಮೇಯರ್ ಘಟನಾ ಸ್ಥಳದಲ್ಲಿ ಪತ್ರಕರ್ತರಿಗೆ ತಿಳಿಸಿದರು. ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯೊಬ್ಬರ ಶಿರಚ್ಛೇದ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಫ್ರೆಂಚ್ ರಾಜಕಾರಣಿ ಮರೀನ್ ಲೆ ಪೆನ್ ಕೂಡ ದಾಳಿಯಲ್ಲಿ ಶಿರಚ್ಛೇದ ನಡೆದುದನ್ನು ದೃಢ ಪಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ/ ಇಸ್ಲಾಮಾಬಾದ್: ಭಾರತದ ದಾಳಿಯ ಭೀತಿಯಿಂದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಬಿಡುಗಡೆ ಮಾಡಲಾಗಿತ್ತು ಎಂದು ಪಾಕಿಸ್ತಾನ ಸಂಸದರು ಬಹಿರಂಗ ಪಡಿಸಿದರು. ಪಾಕ್ ಸಂಸತ್ತಿನಲ್ಲಿ 2020 ಅಕ್ಟೋಬರ್ 28ರ ಬುಧವಾರ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಸರ್ದಾರ್ ಅಯಾಜ್ ಸಾದಿಕ್ ಅವರು ಸಂಸತ್ತಿನಲ್ಲಿ ’ಅಭಿನಂದನ್ ಬಿಡುಗಡೆಯ ಹಿನ್ನೆಲೆಯನ್ನು’ ಬಿಚ್ಚಿಟ್ಟರು. ಅಭಿನಂದನ್ ಅವರನ್ನು ಬಿಡುಗಡೆ ಮಾಡದೇ ಇದ್ದಿದ್ದರೆ ಆ ರಾತ್ರಿ ೯ ಗಂಟೆಗೆ ಭಾರತವು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದಾಗ ಪಾಕ್ ಸೇನೆಯ ಮುಖ್ಯಸ್ಥ ಜನರಲ್ ಬಜ್ವಾ ಬೆವರುತ್ತಿದ್ದರು ಮತ್ತು ಅವರ ‘ಕಾಲುಗಳು ನಡುಗುತ್ತಿದ್ದವು’ ಎಂದು ಸರ್ದಾರ್ ಅಯಾಜ್ ಸಾದಿಕ್ ಸಂಸತ್ತಿನಲ್ಲಿ ಹೇಳಿದರು. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಇಮ್ರಾನ್ ಖಾನ್ ಸರ್ಕಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನಡೆದಿದ್ದ ೨೦೧೯ರಲ್ಲಿ ನಡೆದಿದ್ದ ಸಂಸದೀಯ ನಾಯಕರ ಸಭೆಯ ಕಲಾಪಗಳನ್ನು ನೆನಪಿಸಿಕೊಂಡ ಸಾದಿಕ್ ಅವರು ’ಶಾ ಮಹಮೂದ್ ಖುರೇಷಿ ಅವರು ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ರಾತ್ರಿ ೯ ಗಂಟೆ ಸುಮಾರಿಗೆ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಬಹುದು ಎಂದು ಹೇಳಿದಾಗ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಕಾಲುಗಳು ನಡುಗುತ್ತಿದ್ದವು’ ಎಂದು ನೆನಪು ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ/ ಇಸ್ಲಾಮಾಬಾದ್: ೨೦೧೯ ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಪಾಕಿಸ್ತಾನದ ಹಿರಿಯ ಸಚಿವರು 2020 ಅಕ್ಟೋಬರ್ 29ರ ಗುರುವಾರ ಒಪ್ಪಿಕೊಂಡರು. ಇದು ಉಭಯ ದೇಶಗಳನ್ನು ಯುದ್ಧದ ಅಂಚಿಗೆ ತಂದಿತು. "ಹಮ್ನೆ ಹಿಂದೂಸ್ತಾನ್ ಕೊ ಘುಸ್ ಕೆ ಮಾರಾ (ನಾವು ಭಾರತವನ್ನು ಅವರ ಮನೆಯಲ್ಲಿ ಹೊಡೆದಿದ್ದೇವೆ). ಪುಲ್ವಾಮಾದಲ್ಲಿ ನಮ್ಮ ಯಶಸ್ಸು ಇಮ್ರಾನ್ ಖಾನ್ ನೇತೃತ್ವದಲ್ಲಿ ಈ ರಾಷ್ಟ್ರ ಗಳಿಸಿದ ಯಶಸ್ಸಾಗಿದೆ. ನೀವು ಮತ್ತು ನಾವೆಲ್ಲರೂ ಆ ಯಶಸ್ಸಿನ ಭಾಗವಾಗಿದ್ದೇವೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಚರ್ಚೆಯ ಸಂದರ್ಭದಲ್ಲಿ ಹೇಳಿದರು. ಆದರೆ, ಆ ಬಳಿಕ ತಮ್ಮ ಹೇಳಿಕೆಗೆ ಸಮಜಾಯಿಸಿ ನೀಡಲು ಯತ್ನಿಸಿದ ಚೌಧರಿ, "ನಾನು ಮಾತನಾಡಿದ್ದು ಪುಲ್ವಾಮಾ ನಂತರದ ನಮ್ಮ ಕ್ರಮದ ಬಗ್ಗೆ. ಆದರೆ ನಾವು ಭಾರತದೊಂದಿಗೆ ಯುದ್ಧವನ್ನು ಹುಟ್ಟುಹಾಕಲು ಯೋಚಿಸುತ್ತಿಲ್ಲ. ಇದು ಸುದೀರ್ಘ ಭಾಷಣವಾಗಿತ್ತು ಮತ್ತು ಪುಲ್ವಾಮಾ ಪಾಕಿಸ್ತಾನದ ಕೆಲಸ ಎಂದು ನಾನು ಹೇಳಿಲ್ಲ’ ಎಂದು ಸುದ್ದಿ ಜಾಲ ಒಂದರ ಜೊತೆ ಮಾತನಾಡುತ್ತಾ ಹೇಳಿದರು. ವಿರೋಧ ಪಕ್ಷವಾಗಿರುವ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಅಯಾಜ್ ಸಾದಿಕ್ ಅವರು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಮಹತ್ವದ ಸಭೆಯಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು ಎಂದು ಹೇಳಿದಕ್ಕೆ ಪ್ರತಿಯಾಗಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಚೌಧರಿ ಈ ಹೇಳಿಕೆ ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಸಂಪರ್ಕ ಪತ್ತೆ ಅಪ್ಲಿಕೇಷನ್ ’ಆರೋಗ್ಯ ಸೇತು’ವಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯ (ಆರ್ಟಿಐ) ಅಡಿ ಸಲ್ಲಿಸಿದ ಅರ್ಜಿಗೆ ಎಲ್ಲ ಮಾಹಿತಿಯನ್ನು ಒದಗಿಸಲು ಮತ್ತು ಕೇಂದ್ರ ಮಾಹಿತಿ ಆಯೋಗದ ನಿರ್ದೇಶನವನ್ನು ಅನುಸರಿಸಲು ಬದ್ಧವಾಗಿರುವುದಾಗಿ ಕೇಂದ್ರ ಸರ್ಕಾರವು 2020 ಅಕ್ಟೋಬರ್ 29ರ ಗುರುವಾರ ತಿಳಿಸಿತು. ಆರೋಗ್ಯ ಸೇತು ಆಪ್ ಸೃಷ್ಟಿಗೆ ಸಂಬಂಧಿಸಿದಂತೆ ಕೋರಲಾದ ಮಾಹಿತಿಗೆ ಹಾರಿಕೆಯ ಉತ್ತರ ನೀಡಿದ್ದಕ್ಕಾಗಿ ರಾಷ್ಟ್ರೀಯ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಲಕ್ಷಾಂತರ ಬಳಕೆದಾರರ ಡೇಟಾವನ್ನು ಹೊಂದಿರುವ ಆರೋಗ್ಯ ಸೇತು ಆಪ್ ಬಗ್ಗೆ ಮಾಹಿತಿ ನೀಡುವಲ್ಲಿ ಆಗಿರುವ ಲೋಪಗಳ ಬಗ್ಗೆ ಕೇಂದ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) ಗಮನ ಹರಿಸಿದ್ದು, ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು. ಆರ್ಟಿಐ ಪ್ರಶ್ನೆಯೊಂದಿಗೆ ತಮ್ಮ ಸಂಸ್ಥೆಗಳಲ್ಲಿ ವ್ಯವಹರಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾUಕ್ಕೆ (ಎನ್ಜಿಇಡಿ) ಅದು ನಿರ್ದೇಶನ ನೀಡಿದೆ. ಆರ್ಟಿಐ ಕಾಯ್ದೆಯಡಿ ಕೋರಿದ ಎಲ್ಲ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲು ಮತ್ತು ಸಿಐಸಿಯ ನಿರ್ದೇಶನಗಳನ್ನು ಅನುಸರಿಸಲು ಸಚಿವಾಲಯ ಬದ್ಧವಾಗಿದೆ ಎಂದು ಅವರು ಹೇಳಿದರು. ಆಯೋಗವು ಸರ್ಕಾರದ ಪ್ರತಿಕ್ರಿಯೆಯನ್ನು "ಅತ್ಯಂತ ಅಸಂಬದ್ಧ’ ಎಂದು ಬಣ್ಣಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ‘ರಾಜ್ಯಸಭೆ ಹಾಗೂ ವಿಧಾನಪರಿಷತ್ ಸೇರಿದಂತೆ, ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ನಮ್ಮ ಪಕ್ಷ ಬಿಜೆಪಿ ಅಥವಾ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಬೇಕಾದರೂ ಮತ ಹಾಕುವುದು’ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ 2020 ಅಕ್ಟೋಬರ್ 29ರ ಗುರುವಾರ ಹೇಳಿದರು. ಉತ್ತರ ಪ್ರದೇಶದಲ್ಲಿ ತಮ್ಮ ಶಾಸಕರು ‘ಪಕ್ಷಾಂತರ‘ ಮಾಡಬಹುದೆಂಬ ಊಹಾಪೋಹಗಳ ನಡುವೆಯೇ ಮಾಯಾವತಿ ಅವರು ’ಸಮಾಜವಾದಿ ಪಕ್ಷವನ್ನು ಸೋಲಿಸಲು ನಮ್ಮ ಪಕ್ಷವು ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ. ಬಿಜೆಪಿ ಅಥವಾ ಇತರ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವ ಸಾಧ್ಯತೆಯನ್ನೂ ಅಲ್ಲಗಳೆಯುವುದಿಲ್ಲ’ ಎಂದು ಹೇಳಿದರು. ‘ಸಮಾಜವಾದಿ ಪಕ್ಷದ ಅಭ್ಯರ್ಥಿಯ ಮೇಲೆ ಪ್ರಾಬಲ್ಯ ಸಾಧಿಸುವ ಯಾವುದೇ ಅಭ್ಯರ್ಥಿಗೆ ಬಿಎಸ್ಪಿ ಶಾಸಕರ ಮತ ಸಿಗುತ್ತದೆ‘ ಎಂದು ಮಾಯಾವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment