ನಾನು ಮೆಚ್ಚಿದ ವಾಟ್ಸಪ್

Monday, October 12, 2020

ಇಂದಿನ ಇತಿಹಾಸ History Today ಅಕ್ಟೋಬರ್ 12

 ಇಂದಿನ ಇತಿಹಾಸ  History Today ಅಕ್ಟೋಬರ್ 12

2020: ಸ್ಟಾಕ್ ಹೋಮ್: ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರಗಳಿಗಾಗಿ ೨೦೨೦ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಅರ್ಥಶಾಸ್ತ್ರಜ್ಞರಾದ ಪಾಲ್ ಆರ್.ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ.ವಿಲ್ಸನ್ ಅವರು ಭಾಜನರಾದರು. ೨೦೨೦ ಅಕ್ಟೋಬರ್ ೧೨ ರ ಸೋಮವಾರ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಗೋರನ್ ಕೆ. ಹ್ಯಾನ್ಸನ್ ಅವರು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಘೋಷಿಸಿದ್ದು, ಅದನ್ನು ಟ್ವಿಟ್ಟರಿನಲ್ಲಿ ಪ್ರಕಟಿಸಲಾಯಿತು. ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರನ್ನು ಟ್ವಿಟ್ಟರಿನಲ್ಲಿ ಘೋಷಿಸಿರುವ ನೊಬೆಲ್ ಪ್ರಶಸ್ತಿ ಸಮಿತಿಯು, ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ನೀಡಲಾಗುವ ೨೦೨೦ನೇ ಅರ್ಥಶಾಸ್ತ್ರದ ಸ್ವೆರಿಜಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿಗೆ ಪಾಲ್ ಆರ್. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ.ವಿಲ್ಸನ್ ಅವರು ಪಾತ್ರರಾಗಿದ್ದಾರೆ ಎಂದು ಹೇಳಿತು. ನಮ್ಮ ಅನುದಿನದ ಜೀವನದಲ್ಲಿ ಹರಾಜು ಒಂದು ಭಾಗವಾಗಿದೆ. ಹರಾಜು ಸಿದ್ಧಾಂತವನ್ನು ಸುಧಾರಿಸಿರುವ ಮತ್ತು ಹೊಸ ಹರಾಜು ಮಾದರಿಗಳನ್ನು ಅನ್ವೇಷಿಸಿರುವ ಅರ್ಥಶಾಸ್ತ್ರಜ್ಞರಾದ ಪಾಲ್ ಮಿಲ್ಗ್ರೋಮ್ ಮತ್ತು ರಾಬರ್ಟ್ ವಿಲ್ಸನ್ ಅವರು ಸಾಧನೆಗಾಗಿ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿತು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಸೇನೆಯ ಗಡಿ ರಸ್ತೆಗಳ ಸಂಸ್ಥೆ ಅಥವಾ ಬಿಆರ್‌ಒ ನಿರ್ಮಿಸಿದ ೪೪ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೨೦೨೦ ಅಕ್ಟೋಬರ್ ೧೨ ರ ಸೋಮವಾರ  ಔಪಚಾರಿಕವಾಗಿ ಉದ್ಘಾಟಿಸಿದರು. ೪೮ ಸೇತುವೆಗಳನ್ನು ನಿರ್ಮಿಸುವತ್ತ ಇದೀಗ ಬಿಆರ್‌ಒ ಗಮನ ಕೇಂದ್ರೀಕರಿಸಿದೆ. ಬಿಆರ್‌ಒ ನಿರ್ಮಿಸುತ್ತಿರುವ ೧೦೨ ಸೇತುವೆಗಳಲ್ಲಿ ೪೪ ಸೇತುವೆಗಳು ಸೇರಿವೆ. ಸೇತುವೆಗಳನ್ನು ಭಾರತದ ಭಾರವಾದ ಯುದ್ಧ ಟ್ಯಾಂಕ್‌ಗಳ ಚಲನೆಯನ್ನು ತಡೆದುಕೊಳ್ಳಲು ಸಮರ್ಥವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸೋಮವಾರ ಉದ್ಘಾಟಿಸಲಾದ ೪೪ ಸೇತುವೆಗಳಲ್ಲಿ ೩೦ ಸೇತುವೆಗಳು ಲಡಾಖ್‌ನಿಂದ ಅರುಣಾಚಲ ಪ್ರದೇಶಕ್ಕೆ ನೈಜ ನಿಯಂತ್ರಣ ರೇಖೆಯ ಮಾರ್ಗದಲ್ಲಿ ಬರುತ್ತವೆ. ಉನ್ನತ ತಾಂತ್ರಿಕ ಗುಣಮಟ್ಟವನ್ನು ಹೊಂದಿರುವ ೭೦ ಸೇತುವೆಗಳು ೭೦ ಟನ್ ವಾಹನಗಳ ಭಾರವನ್ನು ಸಹಿಸಬಲ್ಲ ತಾಂತ್ರಿಕತೆಯನ್ನು ಹೊಂದಿವೆ. ಭಾರತದ ಅತ್ಯಂತ ಭಾರವಾದ ಯುದ್ಧ ಟ್ಯಾಂಕ್ ಅರ್ಜುನ್ ತೂಕ ಸುಮಾರು ೬೦ ಟನ್. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನೈಜ ನಿಯಂತ್ರಣ ರೇಖೆಯಿಂದ ಹಿಂದೆ ಸರಿಯಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ  ಪೂರ್ವ ಲಡಾಖ್ ವಲಯದ ಸ್ಥಳಗಳಿಗೆ ಸ್ಥಳಾಂತರಿಸಲಾದ ಟಿ -೯೦ ಭೀಷ್ಮ ಟ್ಯಾಂಕ್‌ಗಳು ಸುಮಾರು ೪೫ ಟನ್ ತೂಕ ಹೊಂದಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದ ಉತ್ತರ ಮತ್ತು ಪೂರ್ವ ಗಡಿನಾಡುಗಳು ಉದ್ವಿಗ್ನವಾಗಿರುವಂತೆ ನೋಡಿಕೊಳ್ಳಲು ಪಾಕಿಸ್ತಾನ ಮತ್ತು ಚೀನಾಗಳುಯೋಜನಾಬದ್ಧ ಕಾರ್ಯತಂತ್ರದ  ಅಡಿಯಲ್ಲಿ ಗಡಿ ವಿವಾದಗಳನ್ನು ಸೃಷ್ಟಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೨೦೨೦ ಅಕ್ಟೋಬರ್ ೧೨ ರ ಸೋಮವಾರ ಹೇಳಿದರು. "ನಮ್ಮ ಉತ್ತರ ಮತ್ತು ಪೂರ್ವ ಗಡಿಗಳಲ್ಲಿ ಸೃಷ್ಟಿಸಲಾದ ಪರಿಸ್ಥಿತಿಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಮೊದಲನೆಯದಾಗಿ, ಇದು ಪಾಕಿಸ್ತಾನದ ತಂತ್ರವಾಗಿತ್ತು, ಈಗ ಚೀನಾ ಕೂಡಾ ಯೋಜನಾಬದ್ಧ ಕಾರ್‍ಯಾಚರಣೆಯ ಅಡಿಯಲ್ಲಿ ಗಡಿವಿವಾದವನ್ನು ಸೃಷ್ಟಿಸುತ್ತಿದೆಎಂದು ರಕ್ಷಣಾ ಸಚಿವರು ನುಡಿದರು. ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿರ್ಮಿಸಿದ ೪೪ ಸೇತುವೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ರಾಜನಾಥ್ ಸಿಂಗ್ಪಾಕಿಸ್ತಾನ ಮತ್ತು ಚೀನಾ ಜೊತೆಗೆ ನಾವು ಸುಮಾರು ,೦೦೦ ಕಿಲೋಮೀಟರ್ (ಕಿಮೀ) ಗಡಿಯನ್ನು ಹೊಂದಿದ್ದೇವೆ, ಅಲ್ಲಿ ಪ್ರತಿದಿನವೂ ಉದ್ವಿಗ್ನತೆ ಇರುತ್ತದೆ ಎಂದು ಹೇಳಿದರು. ಗಡಿಯ ಮುಂಚೂಣಿ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸಲು ಬಿಆರ್‌ಒ ಒಟ್ಟು ೧೦೨ ಸೇತುವೆಗಳ ನಿರ್ಮಾಣವನ್ನು ಮಾಡುತ್ತಿದೆ. ಪಾಕಿಸ್ತಾನದ ಜೊತೆಗಿನ ಗಡಿ ನಿಯಂತ್ರಣ ರೇಖೆಯಲ್ಲಿ ಹೆಚ್ಚಿರುವ ಉದ್ವಿಗ್ನತೆ ಮತ್ತು ಚೀನಾದ ಜೊತೆಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮತ್ತು ಭಾರತೀಯ ಸೇನೆ ಮುಖಾಮುಖಿಯಾಗಿರುವ ಹೊತ್ತಿನಲ್ಲಿ ರಕ್ಷಣಾ ಸಚಿವರಿಂದ ಅಭಿಪ್ರಾಯಗಳು ಬಂದಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಹೆಚ್ಚಿನ ವೆಚ್ಚಕ್ಕೆ ಅನುಕೂಲ ಕಲ್ಪಿಸಿಕೊಡಲು ಪ್ರವಾಸದ ಚೀಟಿ (ಟ್ರಾವಲ್ ವೋಚರ್) ಮತ್ತು ಹಬ್ಬದ ಯೋಜನೆಯನ್ನು ೨೦೨೦ ಅಕ್ಟೋಬರ್ ೧೨ ರ ಸೋಮವಾರ ಪ್ರಕಟಿಸಿತು. ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡವಾಗಿ ೧೦,೦೦೦ ರೂ.ಗಳನ್ನು ಒದಗಿಸುವ ಯೋಜನೆಯನ್ನು ಪುನಾರಂಭ ಮಾಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ಪೂರ್ವಪಾವತಿ ರುಪೇ ಕಾರ್ಡ್ ನೀಡುವ ಮೂಲಕ ಹಬ್ಬದ ಮುಂಗಡವನ್ನು ಸರ್ಕಾರ ಭರಿಸುತ್ತದೆ. ನೌಕರರು ಹಣವನ್ನು ನಗದು ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ. ಡಿಜಿಟಲ್ ವಿಧಾನಗಳನ್ನು ಬಳಸಿಕೊಂಡು ಹಣವನ್ನು ವೆಚ್ಚ ಮಾಡಬಹುದು. ಹಬ್ಬದ ಮುಂಗಡವು ಗೆಜೆಟೆಡ್ ಅಲ್ಲದವರೂ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ್ಲ ಉದ್ಯೋಗಿಗಳಿಗೆ ಲಭ್ಯವಿದೆ. ಇದು ಬಡ್ಡಿರಹಿತ ಮುಂಗಡವಾಗಿರುತ್ತದೆ ಮತ್ತು ೧೦ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರಗಳು ನೀಡುವ ಹಬ್ಬದ ಮುಂಗಡದಂತೆಯೇ, ಹಬ್ಬದ ಮುಂಗಡವನ್ನು ನೀಡುವ ಆಯ್ಕೆಯನ್ನು ರಾಜ್ಯ ಸರ್ಕಾರಗಳು ಹೊಂದಿವೆ. ಆರನೇ ವೇತನ ಆಯೋಗದ ಪ್ರಕಾರ ಗೆಜೆಟೆಡ್ ಅಲ್ಲದ ಅಧಿಕಾರಿಗಳಲ್ಲಿ ಮತ್ತು ಕೆಳಗಿನ ಶ್ರೇಣಿಗಳಲ್ಲಿ ಉದ್ಯೋಗಿಗಳಿಗೆ ,೫೦೦ ರೂ.ಗಳ ಉತ್ಸವ ಮುಂಗಡ ಲಭ್ಯವಿತ್ತು.  ಏಳನೇ ವೇತನ ಆಯೋಗದ ವೇತನ ಶ್ರೇಣಿಯನ್ನು ಜಾರಿಗೊಳಿಸಿದಾಗ ಅದನ್ನು ರದ್ದು ಪಡಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ:  ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಟಿ ಖುಷ್ಬೂ ಸುಂದರ್ ೨೦೨೦ ಅಕ್ಟೋಬರ್ ೧೨ ರ ಸೋಮವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಖುಷ್ಬೂ ಪಕ್ಷವನ್ನು ಸೇರಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಉಸ್ತುವಾರಿ ಸಿ.ಟಿ ರವಿ ಅವರು ಖುಷ್ಬೂ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು, ಸರಿಯಾದ ದಿಕ್ಕಿನಲ್ಲಿ ದೇಶವನ್ನು ಕರೆದೊಯ್ಯಲು ನಮಗೆ ಪ್ರಧಾನಿ ನರೇಂದ್ರ ಮೋದಿಯಂತಹ ವ್ಯಕ್ತಿಯ ಅಗತ್ಯವಿದೆ ಎಂದು ಬಿಜೆಪಿ ಸೇರ್ಪಡೆಯ ಬಳಿಕ ಖುಷ್ಬೂ ಹೇಳಿದರು. ಖಷ್ಬೂ ಅವರು ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ಖಷ್ಬೂ ಪಕ್ಷ ಸೇರ್ಪಡೆ ಬಗ್ಗೆ ಟ್ವೀಟ್ ಮಾಡಿದ ಸಿ.ಟಿ ರವಿ, ‘ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸಲು ಖುಷ್ಬೂ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಿರುಮುರುಗನ್ ಅವರ ನೇತೃತ್ವದಲ್ಲಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಮಾರ್ಗದರ್ಶನದಲ್ಲಿ ನಾವು ತಮಿಳುನಾಡಿನ ಜನರಿಗಾಗಿ (ತಮಿಳ್ ಮಕ್ಕಳ್) ಶ್ರಮಿಸಲಿದ್ದೇವೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಮಹಾ ಗ್ರಿಡ್ ವೈಫಲ್ಯದಿಂದಾಗಿ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ  ೨೦೨೦ ಅಕ್ಟೋಬರ್ ೧೨ ರ ಸೋಮವಾರ ಜನಜೀವನ, ರೈಲ್ವೇ ಸಂಚಾರ ವ್ಯಾಪಕ ವಿದ್ಯುತ್ ಕಡಿತದಿಂದ ತತ್ತರಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರಿಗಳ ತುರ್ತು ಸಭೆ ಕರೆದರು. ಮುಂಬೈ ಮತ್ತು ಅದರ ಉಪನಗರಗಳಲ್ಲಿನ ಎಲ್ಲಾ ಅಗತ್ಯ ಸೇವೆಗಳಿಗೆ ವಿದ್ಯುತ್ ಸರಬರಾಜು ನಂತರ ಪುನಃಸ್ಥಾಪನೆಯಾಗಿದ್ದರೂ, ರಾಜ್ಯ ಇಂಧನ ಸಚಿವ ನಿತಿನ್ ರೌತ್ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು. "ಮುಂಬೈ, ಮುಂಬೈ ಉಪನಗರ, ಕಲ್ಯಾಣ್, ಥಾಣೆ, ಪಾಲ್ಘರ್ ಮತ್ತು ಹೊಸ ಮುಂಬೈಯಲ್ಲಿನ ಎಲ್ಲ ಅಗತ್ಯ ಸೇವೆಗಳಿಗೆ ವಿದ್ಯುತ್ ಸರಬರಾಜನ್ನು ಪುನಃಸ್ಥಾಪನೆ ಮಾಡಲಾಗಿದೆ. ಅನಿವಾರ್ಯವಲ್ಲದ ಸೇವೆಗಳನ್ನು ಕೂಡ ಶೀಘ್ರದಲ್ಲೇ ಪುನಃಸ್ಥಾಪಿಸಲಾಗುವುದು ಎಂದು ಸಚಿವ ನಿತಿನ್ ರೌತ್ ಟ್ವೀಟ್ ಮಾಡಿದರು. ನಿರ್ವಹಣಾ ಕೆಲಸದ ಸಮಯದಲ್ಲಿ "ತಾಂತ್ರಿಕ ಸಮಸ್ಯೆಗಳಿಂದ ವೈಫಲ್ಯ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಮುಂಬೈನಲ್ಲಿ ಗ್ರಿಡ್ ವೈಫಲ್ಯದ ಬಗ್ಗೆ ಠಾಕ್ರೆ ಹಿಂದೆ ರೌತ್ ಮತ್ತು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆಯುಕ್ತ .ಎಸ್.ಚಹಾಲ್ಸಾಧ್ಯವಾದಷ್ಟು ಬೇಗ ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲು ಮುಖ್ಯಮಂತ್ರಿ ಸೂಚನೆಗಳನ್ನು ನೀಡಿದ್ದಾರೆ. ಅಗತ್ಯವಿರುವ ಸಮಯದಲ್ಲಿ ಜಾಗರೂಕರಾಗಿರಲು ಅವರು ಅಗ್ನಿಶಾಮಕ ದಳದಂತಹ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ. ಮುಂಬೈ ಸ್ಥಳೀಯ ರೈಲುಗಳ ಗುಣಮಟ್ಟದ ಪ್ರಯಾಣಿಕರಿಗೆ ಸರಿಯಾದ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದರು. ಮಹಾವಿದ್ಯುತ್ ಕಡಿತದಿಂದಾಗಿ ನಗರದ ಜೀವಸೆಲೆ ಎಂದು ಪರಿಗಣಿಸಲಾದ ಸ್ಥಳೀಯ ರೈಲುಗಳು ಸುಮಾರು ಎರಡೂವರೆ ಗಂಟೆಗಳ ಕಾಲ ಸ್ಥಗಿತಗೊಂಡವು. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಹಬ್ಬದ ಅವಧಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನದ ಒಂದು ಭಾಗವನ್ನು ಮುಂಗಡವಾಗಿ ಪಾವತಿಸುವ ಮೂಲಕ ಗ್ರಾಹಕರ ಬೇಡಿಕೆಗೆ ಉತ್ತೇಜನ ಮತ್ತು ಮೂಲ ಸೌಕರ್ಯಗಳಿಗಾಗಿ ೨೫,೦೦೦ ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ, ರಾಜ್ಯಗಳಿಗೆ ೫೦ ವರ್ಷಗಳ ೧೨,೦೦೦ ಕೋಟಿ ರೂಪಾಯಿಗಳ ಬಡ್ಡಿ ರಹಿತ ಸಾಲ ಒದಗಿಸುವ ಮೂಲಕ ಕೋವಿಡ್ ಹಿನ್ನೆಲೆಯಿಂದ ಕುಸಿತ ಆರ್ಥಿಕತೆಯ ಚೇತರಿಕೆಗೆ ವಿವಿಧ ಕ್ರಮಗಳನ್ನು ಭಾರತ ೨೦೨೦ ಅಕ್ಟೋಬರ್ ೧೨ ರ ಸೋಮವಾರ ಪ್ರಕಟಿಸಿತು. ಗ್ರಾಹಕ ಬೇಡಿಕೆಗೆ ಉತ್ತೇಜನ ನೀಡುವ ಕ್ರಮಗಳನ್ನು ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಸ್ತೆಗಳು, ಬಂದರುಗಳು ಮತ್ತು ರಕ್ಷಣಾ ಯೋಜನೆಗಳಿಗೆ ಹೆಚ್ಚುವರಿಯಾಗಿ ೨೫೦ ಬಿಲಿಯನ್ (೨೫,೦೦೦ ಕೋಟಿ) ರೂಪಾಯಿಗಳನ್ನು ವೆಚ್ಚ ಮಾಡಲಾಗುವುದು ಮತ್ತು ರಾಜ್ಯಗಳಿಗೆ ೨೦೨೧ರ ಮಾರ್ಚ್ ೩೧ರ ಮುನ್ನ ವೆಚ್ಚ ಮಾಡಲು ೫೦ ವರ್ಷಗಳ ಅವಧಿಯ ೧೨,೦೦೦ಕೋಟಿ ರೂಪಾಯಿಗಳ ಬಡ್ಡಿ ರಹಿತ ಸಾಲ ಒದಗಿಸಲಾಗುವುದು ಎಂದು ಹೇಳಿದರು. ಸರಕು ಮತ್ತು ಸೇವೆಗಳಿಗೆ ತೆರಿಗೆ ವಿನಾಯಿತಿ ಪ್ರಯಾಣ ಭತ್ಯೆಯನ್ನು ಖರ್ಚು ಮಾಡಲು ಸರ್ಕಾರ ತನ್ನ ಉದ್ಯೋಗಿಗಳಿಗೆ ಅವಕಾಶ ನೀಡುತ್ತದೆ ಎಂದೂ ಸೀತಾರಾಮನ್ ನುಡಿದರು.  " ಎಲ್ಲಾ ಕ್ರಮಗಳು ಒಟ್ಟು ೭೩೦ ಬಿಲಿಯನ್ (೭೩,೦೦೦ ಕೋಟಿ) ರೂಪಾಯಿಗಳ (.೯೬ ಬಿಲಿಯನ್ ಡಾಲರ್) ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ ಮತ್ತು ಪ್ರಸ್ತಾಪಗಳು ಬೇಡಿಕೆಯನ್ನು "ಹಣಕಾಸಿನ ವಿವೇಕಯುತ ರೀತಿಯಲ್ಲಿ ಉತ್ತೇಜಿಸುತ್ತದೆ’ ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಗ್ವಾಲಿಯಾರ್ ರಾಜಮಾತೆ ಎಂದೇ ಖ್ಯಾತರಾದ ವಿಜಯರಾಜೇ ಸಿಂಧಿಯಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಣಕಾಸು ಸಚಿವಾಲಯವು ಮುದ್ರಿಸಿದ ೧೦೦ ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ ಮಾಡಿದರು. ವಿಜಯರಾಜೇ ಸಿಂಧಿಯಾ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜಮಾತೆ ಸಿಂಧಿಯಾ ಅವರು ತಮ್ಮ ಜೀವನವನ್ನು ಜನರಿಗಾಗಿ ಅರ್ಪಿಸಿದರು. ತ್ರಿವಳಿ ತಲಾಖ್ ವಿರುದ್ಧ ಕಾನೂನು ಮಾಡುವ ಮೂಲಕ ದೇಶವು ರಾಜಮಾತೆ ಸಿಂಧಿಯಾ ಅವರ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು. ಧೀಮಂತ ನಾಯಕಿಗೆ ಗೌರವ ಸಲ್ಲಿಸಿದ ಮೋದಿ, ರಾಜಮಾತಾ ಸಿಂಧಿಯಾ ಅವರ ಜೀವನ ಮತ್ತು ಕಾರ್ಯ  ಸದಾ ಬಡವರ ಆಕಾಂಕ್ಷೆಗಳೊಂದಿಗೆ ಬೆಸೆದುಕೊಂಡಿತ್ತು ಮತ್ತು ಅವರ ಜೀವನವು ಜನಸೇವಗೆ ಮೀಸಲಾಗಿತ್ತು. ಕಳೆದ ಶತಮಾನದಲ್ಲಿ ಭಾರತಕ್ಕೆ ನಿರ್ದೇಶನ ನೀಡಿದ ಮತ್ತು ಭಾರತೀಯ ರಾಜಕಾರಣದ ಪ್ರತಿಯೊಂದು ಪ್ರಮುಖ ಹಂತಕ್ಕೂ ಸಾಕ್ಷಿಯಾದ ವ್ಯಕ್ತಿಗಳಲ್ಲಿ ಸಿಂಧಿಯಾ ಒಬ್ಬರು ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಸುಳ್ಯ: ಹೆಸರಾಂತ ಕಲಾವಿದ ಮೋಹನ ಸೋನ (೬೪) ಅಲ್ಪ ಕಾಲದ ಅಸೌಖ್ಯದಿಂದ ೨೦೨೦ ಅಕ್ಟೋಬರ್ ೧೨ ಸೋಮವಾರ ರಾತ್ರಿ ನಿಧನರಾದರು. ವಿಟ್ಲದ ಸಿ.ಪಿ.ಸಿ.ಆರ್. ನಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಮೋಹನ್ ಸೋನಾ (೬೪) ಕರ್ನಾಟಕ ಕಂಡ ಪ್ರಸಿದ್ಧ ಕಲಾವಿದ. ಚಿತ್ರ ಕಲಾವಿದರಾಗಿ, ನಾಟಕ ನಟರಾಗಿ, ನಿರ್ದೇಶಕರಾಗಿ ತನ್ನ ಪ್ರತಿಭೆ ಮೆರೆದವರು. ಚೋಮ, ನಾಳೆ ಯಾರಿಗೂ ಇಲ್ಲ, ತೆರೆಗಳಲ್ಲಿ ಅದ್ಭುತ ಅಭಿನಯ ತೋರಿದವರು. ಅನೇಕ ಕಡೆ ಚಿತ್ರಕಲಾ ಪ್ರದರ್ಶನ ಮಾಡಿದವರು. ಸುಳ್ಯದ ಸೋಣಂಗೇರಿಯಲ್ಲಿ ಬಯಲು ಚಿತ್ರಾಲಯ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದ ಇವರು, ಕಾರವಾರದ ಕಡಲ ತೀರದಲಿ ಶಿಲ್ಪಗಳನ್ನು ನಿಲ್ಲಿಸಿದ ಖ್ಯಾತಿ ಹೊಂದಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಪತ್ನಿ ಮತ್ತು ಇಬ್ಬರು ಮಕ್ಕಳು, ಸಹೋದರ ಸಹೋದರಿಯರನ್ನು ಅಗಲಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 12 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment