ಇಂದಿನ ಇತಿಹಾಸ History Today ಅಕ್ಟೋಬರ್ 20
2020: ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಮುಗಿದಿದ್ದರೂ, ಕೊರೋನಾವೈರಸ್ ಇನ್ನೂ ಠಳಾಯಿಸುತ್ತಿದೆ. ಹಬ್ಬದ ಋತುಮಾನ ಪ್ರಾರಂಭವಾಗುತ್ತಿದ್ದು ಜನರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ 2020 ಅಕ್ಟೋಬರ್ 20ರ ಮಂಗಳವಾರ ಸಂಜೆ ಕಿವಿಮಾತು ಹೇಳಿದರು. "ಈ ಹಬ್ಬದ, ಋತುವಿನಲ್ಲಿ, ಮಾರುಕಟ್ಟೆಗಳು ಮತ್ತೆ ಪ್ರಕಾಶಮಾನವಾಗಿವೆ, ಆದರೆ ರಾಷ್ಟ್ರವ್ಯಾಪಿ ದಿಗ್ಬಂಧನ ಮುಗಿದ್ದರೂ ಕೋವಿಡ್-೧೯ ಇನ್ನೂ ಠಳಾಯಿಸುತ್ತಲೇ ಇದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು’ ಎಂದು ದೇಶದ ಜನತೆಯನ್ನು ಉದ್ದೇಶಿಸಿ ಮಾಡಿದ ರಾಷ್ಟ್ರವ್ಯಾಪಿ ಭಾಷಣದಲ್ಲಿ ಪ್ರಧಾನಿ ನುಡಿದರು. ’ಕಳೆದ ೭-೮ ತಿಂಗಳುಗಳಲ್ಲಿ ಪ್ರತಿಯೊಬ್ಬ ಭಾರತೀಯರ ಪ್ರಯತ್ನದಿಂದ, ಭಾರತವು ಸ್ಥಿರ ಪರಿಸ್ಥಿತಿಯಲ್ಲಿದೆ, ನಾವು ಅದನ್ನು ಹದಗೆಡಿಸಲು ಬಿಡಬಾರದು’ ಎಂದು ಅವರು ಹೇಳಿದರು. ಸರಣಿ ಹಬ್ಬಗಳ ಋತುಮಾನವು ಪ್ರಾರಂಭವಾಗುತ್ತಿದ್ದಂತೆ ನಾಗರಿಕರು ಎಚ್ಚರಿಕೆ ಮತ್ತು ಸಂಯಮವನ್ನು ಅಭ್ಯಾಸ ಮಾಡಬೇಕು ಎಂದ ಪ್ರಧಾನಿ ಆಗ್ರಹಿಸಿದರು. "ಇತ್ತೀಚೆಗೆ, ನಾವು ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿದ್ದೇವೆ, ಅವುಗಳಲ್ಲಿ ಜನರು ಜಾಗರೂಕರಾಗಿ ಇಲ್ಲದೇ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದು ಸರಿಯಲ್ಲ. ಮುಖಹೊದಿಕೆ ಇಲ್ಲದೆ ಹೆಜ್ಜೆ ಹಾಕಿದರೆ, ನೀವು ನಿಮ್ಮ ಕುಟುಂಬಗಳನ್ನು ಅಪಾಯಕ್ಕೆ ದೂಡುತ್ತೀರಿ. ಅಮೆರಿಕ ಅಥವಾ ಯುರೋಪಿನಲ್ಲಿ ಪ್ರಕರಣಗಳು ಕಡಿಮೆಯಾದವು ಎನ್ನುತ್ತಿದ್ದಂತೆಯೇ ಬಳಿಕ ದಿಢೀರ್ ಕಂಡುಬಂದಿದೆ’ ಎಂದು ಪ್ರಧಾನಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಸುಮಾರು ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ದೈನಂದಿನ ಕೊರೊನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ೫೦,೦೦೦ಕ್ಕಿಂತ ಕೆಳಕ್ಕೆ ಇಳಿದಿರುವುದನ್ನು ಆರೋಗ್ಯ ಸಚಿವಾಲಯದ ಮಾಹಿತಿಯು 2020 ಅಕ್ಟೋಬರ್ 20ರ ಮಂಗಳವಾರ ತೋರಿಸಿದೆ. ಸೆಪ್ಟೆಂಬರಿನಲ್ಲಿ ಹೊಸ ಪ್ರಕರಣಗಳು ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾಗುತ್ತಿವೆ. ಇದರೊಂದಿಗೆ ಭಾರತದಲ್ಲಿ ಕೊರೋನಾವೈರಸ್ ನಿವಾರಣೆಯ ನಿಟ್ಟಿನಲ್ಲಿ ಹೊಸ ಆಶಾಕಿರಣ ಗೋಚರಿಸಿತು. ಕಳೆದ ೨೪ ಗಂಟೆಗಳಲ್ಲಿ ದೇಶವು ೪೬,೭೯೦ ಹೊಸ ಸೋಂಕುಗಳನ್ನು ದಾಖಲಿಸಿದೆ. ಇದರೊಂದಿಗೆ ಕೊರೋನಾವೈರಸ್ ಒಟ್ಟು ಪ್ರಕರಣಗಳ ಸಂಖ್ಯೆ ಸುಮಾರು ೭.೬ ಮಿಲಿಯನ್‌ಗೆ (೭೬ ಲಕ್ಷ) ತಲುಪಿದೆ. ಅಮೆರಿಕದ ಬಳಿಕ ವಿಶ್ವದಲ್ಲಿ ಇದು ಎರಡನೇ ಗರಿಷ್ಠ ಸಂಖ್ಯೆಯಾಗಿದೆ. ಭಾರತವು ಹೊಸದಾಗಿ ೫೮೭ ಸಾವುಗಳನ್ನು ವರದಿ ಮಾಡಿದ್ದು ಒಟ್ಟು ಸಾವಿನ ಸಂಖ್ಯೆ ೧,೧೫,೧೯೭ ಕ್ಕೆ ತಲುಪಿತು. ದೇಶಾದ್ಯಂತ ಪ್ರತಿದಿನ ವರದಿಯಾದ ಹೊಸ ಸಾವುನೋವುಗಳ ಸಂಖ್ಯೆ ಸತತ ಎರಡನೇ ದಿನ ೬೦೦ ಕ್ಕಿಂತ ಕಡಿಮೆಯಾಗಿದೆ.ಕೊರೋನವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು ಸತತ ನಾಲ್ಕನೇ ದಿನ ೮ ಲಕ್ಷಕ್ಕಿಂತ ಕಡಿಮೆಯಾಗಿವೆ. ದೇಶದಲ್ಲಿ ೭,೪೮,೫೩೮, ಕೊರೊನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ ೯.೮೫ ರಷ್ಟಿದೆ ಎಂದು ಮಾಹಿತಿ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಚಂಡೀಗಢ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳನ್ನು ತಿರಸ್ಕರಿಸುವ ನಿರ್ಣಯ ಹಾಗೂ ತನ್ನದೇ ಆದ ೩ ರಾಜ್ಯ ಕೃಷಿ ಮಸೂದೆಗಳನ್ನು ಪಂಜಾಬ್ ವಿಧಾನಸಭೆಯಲ್ಲಿ 2020 ಅಕ್ಟೋಬರ್ 20ರ ಮಂಗಳವಾರ ಮಂಡಿಸಿದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು, ‘ನಾನು ರಾಜೀನಾಮೆ ನೀಡಲು ಹೆದರುವುದಿಲ್ಲ’ ಎಂದು ಘೋಷಿಸಿದರು. ಕೇಂದ್ರವು ಜಾರಿಗೆ ತಂದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ‘ನನ್ನ ಸರ್ಕಾರವನ್ನು ವಜಾಗೊಳಿಸುವ ಬಗ್ಗೆ ನನಗೆ ಭಯವಿಲ್ಲ. ಆದರೆ ರೈತರು ತೊಂದರೆ ಅನುಭವಿಸಲು ಅಥವಾ ಹಾಳಾಗಲು ನಾನು ಬಿಡುವುದಿಲ್ಲ’ ಎಂದು ಹೇಳಿದರು. ಹೊಸ ಕೃಷಿ ಕಾನೂನುಗಳ ಕುರಿತು ಚಂಡೀಗಢದಲ್ಲಿ ನಡೆದ ವಿಶೇಷ ವಿಧಾನಸಭೆಯ ಅಧಿವೇಶನದ ಎರಡನೇ ದಿನದಂದು ಸದನದ ನಾಯಕರಾಗಿರುವ ಸಿಂಗ್ ಅವರು ಈ ನಿರ್ಣಯವನ್ನು ಮಂಡಿಸಿದರು. ಕೇಂದ್ರದ ಕೃಷಿ ಕಾನೂನುಗಳಿಗೆ ಬದಲಿಯಾಗಿ ಮೂರು ರಾಜ್ಯ ಮಸೂದೆಗಳನ್ನೂ ಮುಖ್ಯಮಂತ್ರಿ ಪರಿಚಯಿಸಿದರು. ’ಸಾಧ್ಯವಾದಷ್ಟು ಕಾನೂನುಗಳನ್ನು ಬಳಸಿಕೊಂಡು ರಾಜ್ಯ ಮಟ್ಟದಲ್ಲಿ ಕೃಷಿ ಕಾನೂನುಗಳು ಪರಿಣಾಮ ಬೀರದಂತೆ ತಡೆಯಲು ಪಂಜಾಬ್ ಯತ್ನಿಸುತ್ತಿದೆ’ ಎಂದು ಅವರು ನುಡಿದರು. ಕೃಷಿ ಕಾನೂನುಗಳ ವಿರುದ್ಧ ರೈತರು ಮತ್ತು ರಾಜಕೀಯ ಪಕ್ಷಗಳು ನಡೆಸಿದ ಪ್ರತಿಭಟನೆಯ ಪ್ರಮುಖ ಕೇಂದ್ರಗಳಲ್ಲಿ ಪಂಜಾಬ್ ಒಂದಾಗಿತ್ತು. "ನಾವು ನಿಮ್ಮೊಂದಿಗೆ ನಿಂತಿದ್ದೇವೆ, ಈಗ ನಮ್ಮೊಂದಿಗೆ ನಿಲ್ಲುವುದು ನಿಮ್ಮ ಸರದಿ" ಎಂದು ಅಮರೀಂದರ್ ಸಿಂಗ್ ರೈತರಿಗೆ ಮನವಿ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ (ಎನ್ಕೌಂಟರ್) ಭದ್ರತಾ ಪಡೆಗಳು 2020 ಅಕ್ಟೋಬರ್ 20ರ ಮಂಗಳವಾರ ಮತ್ತೊಬ್ಬ ಭಯೋತ್ಪಾದಕನನ್ನು ಕೊಂದಿದ್ದು, ಸೋಮವಾರ ಆರಂಭವಾದ ಗುಂಡಿನ ಘರ್ಷಣೆಯಲ್ಲಿ ಈವರೆಗೆ ಒಟ್ಟು ೫ ಭಯೋತ್ಪಾದಕರನ್ನು ಕೊಂದು ಹಾಕಿವೆ. ಪ್ರದೇಶವನ್ನು ಸುತ್ತುವರಿಯಲಾಗಿದ್ದು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇದರೊಂದಿಗೆ ದಕ್ಷಿಣ ಕಾಶ್ಮೀರದಲ್ಲಿ ಎರಡು ದಿನಗಳಲ್ಲಿ ಒಟ್ಟು ಐದು ಭಯೋತ್ಪಾದಕರು ಹತರಾಗಿದ್ದಾರೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೋಮವಾರ ಪ್ರಾರಂಭವಾದ ಗುಂಡಿನ ಕಾಳಗ ಪ್ರಾರಂಭವಾಯಿತು, ಮಂಗಳವಾರ ಬೆಳಗ್ಗಿನವರೆಗೂ ಮುಂದುವರೆಯಿತು. ಈ ಗುಂಡಿನ ಘರ್ಷಣೆಯಲ್ಲಿ ಓರ್ವ ಭಯೋತ್ಪಾದಕನನ್ನು ಕೊಲ್ಲಲಾಯಿತು. ಗುಂಡಿನ ಸಮರ ನಡೆದ ಸ್ಥಳದಿಂದ ಪೊಲೀಸರು ಎಕೆ ರೈಫಲ್ ಮತ್ತು ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಜೈನಪೋರಾದ ಮೆಲ್ಹುರಾಕ್ಕೆ ಮುತ್ತಿಗೆ ಹಾಕಿ, ಶೋಧ ಕಾರ್ಯಾಚರಣೆ ನಡೆಸಿದವು. ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆಯು ಗುಂಡಿನ ಘರ್ಷಣೆಯಾಗಿ ಮಾರ್ಪಟ್ಟಿತು ಎಂದು ಪೊಲೀಸರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬೀಜಿಂಗ್: ಅಮೆರಿಕ ಮತ್ತು ಜಪಾನ್ ಜೊತೆಗೆ ಆಸ್ಟ್ರೇಲಿಯಾವು ವಾರ್ಷಿಕ ಮಲಬಾರ್ ನೌಕಾ ಕವಾಯತಿಗೆ ಸೇರಲಿದೆ ಎಂಬ ಭಾರತದ ಘೋಷಣೆಯನ್ನು "ಗಮನಿಸಿರುವುದಾಗಿ’ ಎಂದು ಚೀನಾ 2020 ಅಕ್ಟೋಬರ್ 20ರ ಮಂಗಳವಾರ ಹೇಳಿತು. ’ಮಿಲಿಟರಿ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ "ಅನುಕೂಲಕರ" ವಾಗಿರಬೇಕು ಎಂದು ಅದು ಒತ್ತಿಹೇಳಿತು. ಮುಂಬರುವ ಮಲಬಾರ್ ನೌಕಾ ಕವಾಯತಿಗೆ ಆಸ್ಟ್ರೇಲಿಯಾ ಸೇರಲಿದೆ ಎಂಬುದಾಗಿ ಭಾರತ ಸೋಮವಾರ ಪ್ರಕಟಿಸಿದೆ, ಇದರರ್ಥ ‘ಕ್ವಾಡ್’ ಅಥವಾ ’ಚತುರ್ಭುಜ’ ಒಕ್ಕೂಟದ ನಾಲ್ಕು ಸದಸ್ಯ ರಾಷ್ಟ್ರಗಳು ಮೆಗಾ ಡ್ರಿಲ್ನಲ್ಲಿ ಭಾಗವಹಿಸಲಿವೆ. ಅಮೆರಿಕ ಮತ್ತು ಜಪಾನ್ ವಾರ್ಷಿಕ ಸಮರಾಭ್ಯಾಸದಲ್ಲಿ ಭಾಗವಹಿಸುವ ಇತರ ದೇಶಗಳು, ಇದು ಮುಂದಿನ ತಿಂಗಳು ಬಂಗಾಳಕೊಲ್ಲಿಯಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ನಡೆಯಲಿದೆ. ಭಾರತದ ಪ್ರಕಟಣೆಯ ಕುರಿತು ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಚೀನಾ "ಈ ಬೆಳವಣಿಗೆಯನ್ನು ಗಮನಿಸಿದೆ’ ಎಂದು ಹೇಳಿದರು. "ದೇಶಗಳ ನಡುವಣ ಮಿಲಿಟರಿ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅನುಕೂಲಕರವಾಗಿರಬೇಕು ಎಂದು ನಾವು ಯಾವಾಗಲೂ ನಂಬುತ್ತೇವೆ’ ಎಂದು ಅವರು ಸಂಕ್ಷಿಪ್ತ ಪ್ರತಿಕ್ರಿಯೆಯಲ್ಲಿ ಹೇಳಿದರು. ಮೆಗಾ ನೌಕಾ ಕವಾಯತಿನ ಭಾಗವಾಗಬೇಕೆಂಬ ಆಸ್ಟ್ರೇಲಿಯಾದ ಮನವಿಗೆ ಕಿವಿಗೊಡುವ ಭಾರತದ ನಿರ್ಧಾರವು ಚೀನಾದ ಜೊತೆಗೆ ನಡೆಯುತ್ತಿರುವ ಪೂರ್ವ ಲಡಾಖ್‌ನ ಗಡಿ ಬಿಕ್ಕಟ್ಟಿನ ಒತ್ತಡಗಳ ಮಧ್ಯೆ ಬಂದಿದೆ. ಹಿಂದೂ ಮಹಾಸಾಗರ- ಶಾಂತ ಸಾಗರ (ಇಂಡೋ-ಪೆಸಿಫಿಕ್) ಪ್ರದೇಶದಲ್ಲಿ ತನ್ನ ಪ್ರಭಾವವನ್ನು ತಡೆಯುವ ಉದ್ದೇಶದ ವಾರ್ಷಿಕ ಯುದ್ಧದ ಆಟ ಎಂದು ಚೀನಾವು ಮಲಬಾರ್ ಕವಾಯತಿನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದ ವಿರುದ್ಧ ಭಯೋತ್ಪಾದಕ ಸಂಘಟನೆ ಐಸಿಸ್‌ನ ಭೀಕರ ಯೋಜನೆಯನ್ನು ಮತ್ತೊಮ್ಮೆ ಅನಾವರಣಗೊಂಡಿದೆ. ಭಾರತದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಜಿಹಾದ್ ನಡೆಸುವಂತೆ ಐಸಿಸ್ ಭಯೋತ್ಪಾದಕ ಸಂಘಟನೆಯ ಡಿಜಿಟಲ್ ನಿಯತಕಾಲಿಕದ ಕಪಟ ಸಾಹಿತ್ಯ ಕರೆ ನೀಡಿರುವುದು ಬಹಿರಂಗಕ್ಕೆ ಬಂದಿದೆ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರನ್ನು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಮತ್ತು ಭಾರತ ಸರ್ಕಾರದ ವಿರುದ್ಧ ಜಿಹಾದ್ ನಡೆಸಲು ಪ್ರೇರೇಪಿಸಲು ಈ ಸಾಹಿತ್ಯವನ್ನು ಬಳಸಲಾಗುತ್ತಿದೆ ಎಂಬುದೂ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯೆಂದು ತೋರುತ್ತಿರುವ ಈ ಪತ್ರಿಕೆ ಇದೀಗ ಭದ್ರತಾ ಸಂಸ್ಥೆಗಳ ನಿಗಾಕ್ಕೆ ಒಳಪಟ್ಟಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ಜನರಿಗೆ ಕರೆ ನೀಡುವ ಪತ್ರಿಕೆಯು, ಹೋರಾಟದಲ್ಲಿ ಅವರೊಂದಿಗೆ ದೃಢವಾಗಿ ನಿಲ್ಲುವುದಾಗಿ ಎಂದು ಭರವಸೆ ನೀಡುತ್ತದೆ ಎಂದು ಮೂಲಗಳು ಹೇಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment