ಇಂದಿನ ಇತಿಹಾಸ History Today ಅಕ್ಟೋಬರ್ 22
2020: ನವದೆಹಲಿ: ಚೀನಾದ ನಂತರ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೊರೋನಾವೈರಸ್ ವಿರೋಧಿ ಲಸಿಕೆ ನೀಡಲು ಭಾರತದ ಸರ್ಕಾರ ಸುಮಾರು ೫೦೦ ಬಿಲಿಯನ್ (೫೦,೦೦೦ ಕೋಟಿ) ರೂಪಾಯಿಗಳನ್ನು ಅಂದರೆ ಸುಮಾರು ೭ ಬಿಲಿಯನ್ (೭೦೦ ಕೋಟಿ) ಡಾಲರ್ಗಳನ್ನು ಮೀಸಲಿಟ್ಟಿದೆ ಎಂದು ನಂಬಲರ್ಹ ಮೂಲಗಳು 2020 ಅಕ್ಟೋಬರ್ 22ರ ಗುರುವಾರ ವರದಿ ಮಾಡಿದವು. ಪ್ರಧಾನಿ ನರೇಂದ್ರ ಮೋದಿಯ ಆಡಳಿತವು ೧೩೦ ಕೋಟಿ ಜನಸಂಖ್ಯೆಯುಳ್ಳ ರಾಷ್ಟ್ರದ ಪ್ರತಿ ವ್ಯಕ್ತಿಗೆ ಲಸಿಕೆ ಒದಗಿಸಲು ಸುಮಾರು ೬-೭ ಡಾಲರ್ ವೆಚ್ಚವನ್ನು ಅಂದಾಜು ಮಾಡಿದೆ ಎಂದು ಗುರುತು ಹೇಳಲು ಇಚ್ಛಿಸದ ಬೆಳವಣಿಗೆ ಬಗ್ಗೆ ಅರಿವು ಉಳ್ಳ ವ್ಯಕ್ತಿಗಳು ಹೇಳಿದರು. ಹಣವನ್ನು ಮಾರ್ಚ್ ೩೧ಕ್ಕೆ ಮುಕ್ತಾಯವಾಗುವ ಪ್ರಸಕ್ತ ಹಣಕಾಸು ವರ್ಷಕ್ಕಾಗಿ ವ್ಯವಸ್ಥೆಗೊಳಿಸಲಾಗಿದೆ. ಆದ್ದರಿಂದ ಈ ಉದ್ದೇಶಕ್ಕಾಗಿ ಯಾವುದೇ ಹಣದ ಕೊರತೆ ಉಂಟಾಗುವುದಿಲ್ಲ ಎಂದು ಅವರು ನುಡಿದರು. ವಿಶ್ವದ ಅತಿದೊಡ್ಡ ಲಸಿಕೆಗಳ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈ.ಲಿ.ನ ಮುಖ್ಯಸ್ಥ ಆದರ್ ಪೂನಾವಾಲ್ಲಾ ಅವರು, ಹಿಮಾಲಯದಿಂದ ದೂರದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳವರೆಗೆ ಎಲ್ಲೆಡೆ ವಾಸಿಸುವ ಜನರಿಗಾಗಿ ಲಸಿಕೆ ಸಂಗ್ರಹ ಮತ್ತು ಚುಚ್ಚುಮದ್ದು ನೀಡಲು ರಾಷ್ಟ್ರಕ್ಕೆ ಸುಮಾರು ೮೦೦ ಬಿಲಿಯನ್ (೮೦,೦೦೦ ಕೋಟಿ) ರೂಪಾಯಿಗಳ ಅಗತ್ಯವಿರುತ್ತದೆ ಎಂದು ಊಹಿಸಿದ್ದಾರೆ. ಲಸಿಕೆ ಖರೀದಿ ಜೊತೆಗೆ ಅವುಗಳನ್ನು ಉತ್ಪಾದನಾ ತಾಣಗಳಿಂದ ವಿತರಣಾ ತಾಣಗಳಿಗೆ ಸಾಗಿಸುವುದು ಬೃಹತ್ ಕಾರ್ಯವಾಗಿದೆ. ’ಭಾರತದಾದ್ಯಂತ ಲಸಿಕೆ ವಿತರಿಸುವುದು ‘ಒಂದು ಬೃಹತ್ ಕಾರ್ಯವಾಗಲಿದೆ’ ಎಂದು ಚಂಡೀUಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಮಹೇಶ್ ದೇವ್ನಾನಿ ಅವರು ವೆಬ್ನಾರ್ನಲ್ಲಿ ಮಾತನಾಡುತ್ತಾ ಬುಧವಾರ ಹೇಳಿದರು. ‘ನಮಗೆ ಆದ್ಯತೆಯ ಯೋಜನೆ ಬೇಕು, ಪ್ರತಿಯೊಬ್ಬರೂ ಇದನ್ನು ಆರಂಭದಲ್ಲಿ ಹೊಂದಲು ಸಾಧ್ಯವಿಲ್ಲ’ ಎಂದು ಅವರು ನುಡಿದರು. ಒಂದು ಅಂದಾಜಿನ ಪ್ರಕಾರ, ವಿಶ್ವದ ಜನಸಂಖ್ಯೆಯನ್ನು ರಕ್ಷಿಸಲು ಸಿಂಗಲ್-ಡೋಸ್ ಲಸಿಕೆಯನನು ವಿಮಾನಗಳ ಮೂಲಕ ಸಾಗಿಸಲು ಸುಮಾರು ೮,೦೦೦ ಸರಕು ವಿಮಾನಗಳಲ್ಲಿ ಸ್ಥಳಾವಕಾಶ ಬೇಕಾಗುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಹಾವಳಿ ಮತ್ತು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಜಾರಿಯ ಬಳಿಕ ಅಮಾನತುಗೊಳಿಸಲಾಗಿದ್ದ ಎಲೆಕ್ಟ್ರಾನಿಕ್, ಪ್ರವಾಸಿ ಮತ್ತು ವೈದ್ಯಕೀಯ ವೀಸಾಗಳನ್ನು ಹೊರತು ಪಡಿಸಿ, ಅಸ್ತಿತ್ವದಲ್ಲಿ ಇರುವ ಎಲ್ಲ ವೀಸಾಗಳನ್ನು ಎಂಟು ತಿಂಗಳ ಬಳಿಕ, ತತ್ ಕ್ಷಣದಿಂದ ಪುನಃಸ್ಥಾಪಿಸಲು ಸರ್ಕಾರ 2020 ಅಕ್ಟೋಬರ್ 22ರ ಗುರುವಾರ ನಿರ್ಧರಿಸಿತು. ಎಲ್ಲ ವಿದೇಶೀ ನಾಗರಿಕರು (ಒಸಿಐ) ಮತ್ತು ಭಾರತೀಯ ಮೂಲದ ವ್ಯಕ್ತಿ (ಪರ್ಸನ್ ಆಫ್ ಇಂಡಿಯನ್ ಒರಿಜಿನ್ -ಪಿಐಒ) ಕಾರ್ಡ್ ಹೊಂದಿರುವವರು ಮತ್ತು ಇತರ ಎಲ್ಲ ವಿದೇಶಿ ಪ್ರಜೆಗಳಿಗೆ ಪ್ರವಾಸೋದ್ಯಮ ವೀಸಾ ಹೊರತುಪಡಿಸಿ ಯಾವುದೇ ಉದ್ದೇಶಕ್ಕಾಗಿ ಭಾರತಕ್ಕೆ ಭೇಟಿ ನೀಡಲು ಅನುಮತಿ ನೀಡುವುದಾಗಿ ಗೃಹ ಸಚಿವಾಲಯ (ಎಂಎಚ್‌ಎ) ಪ್ರಕಟಿಸಿತು. ಕೋವಿಡ್-೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಉಂಟಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ೨೦೨೦ ರ ಫೆಬ್ರವರಿಯಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಒಳಬರುವ ಮತ್ತು ಹೊರ ಹೋಗುವ ಪಯಣಗಳನ್ನು ಮೊಟಕುಗೊಳಿಸಲು ಸರ್ಕಾರ ಸರಣಿ ಕ್ರಮಗಳನ್ನು ಕೈಗೊಂಡಿತ್ತು. ಈಗ ಭಾರತವನ್ನು ಪ್ರವೇಶಿಸಲು ಅಥವಾ ಭಾರತದಿಂದ ಹೊರಹೋಗಲು ಬಯಸುವ ವಿದೇಶೀ ಪ್ರಜೆಗಳು ಮತ್ತು ಭಾರತೀಯ ಪ್ರಜೆಗಳಿಗೆ ಪ್ರಯಾಣ ನಿರ್ಬಂಧಗಳಲ್ಲಿ ಶ್ರೇಣೀಕೃತ ಸಡಿಲಿಕೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ಪಾಟ್ನಾ: ಬಿಹಾರದಲ್ಲಿ ೧೦ ಲಕ್ಷ ಉದ್ಯೋಗದ ಭರವಸೆ ನೀಡಿದ್ದಕ್ಕಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಅಪಹಾಸ್ಯ ಮಾಡಿದ್ದ ಬಿಜೆಪಿ 2020 ಅಕ್ಟೋಬರ್ 22ರ ಗುರುವಾರ ತಾನು ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಎರಡು ಪಟ್ಟು ಸಂಖ್ಯೆಯ ಉದ್ಯೋಗದ ಭರವಸೆ ನೀಡಿತು. ಬಿಜೆಪಿಯ ಹಿರಿಯ ಮುಖಂಡ ಮತ್ತು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ತೇಜಸ್ವಿ ಯಾದವ್ ಅವರು ಚುನಾವಣೆ ನಡೆಯುತ್ತಿರುವ ರಾಜ್ಯದಲ್ಲಿ ೧೦ ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ಅಪಹಾಸ್ಯ ಮಾಡಿದ ೨೪ ಗಂಟೆಗಳ ಒಳಗೆ, ಬಿಜೆಪಿ ತನ್ನದೇ ಆದ ಪ್ರಣಾಳಿಕೆಯಲ್ಲಿ ೧೯ ಲಕ್ಷ ಉದ್ಯೋಗಗಳನ್ನು ನೀಡುವ ಭರವಸೆ ನೀಡಿದೆ. ಮೊದಲ ಸುತ್ತಿನ ಚುನಾವಣೆಗೆ ಒಂದು ವಾರಕ್ಕಿಂತ ಕಡಿಮೆ ಸಮಯವಿರುವಾಗ, ಬಿಜೆಪಿಯು ’ಸಂಕಲ್ಪ ಪತ್ರ’ ಹೆಸರಿನ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಬಿಹಾರದ ಅಂದಾಜು ೧೯ ಲಕ್ಷ ಉದ್ಯೋಗ ಒದಗಿಸುವ ಭರವಸೆ ನೀಡಿತು. ಕೊರೋನಾವೈರಸ್ ಲಸಿಕೆಯನ್ನು ಸರ್ಕಾರಕ್ಕೆ ತಲುಪಿದ ಕೂಡಲೇ ಉಚಿತವಾಗಿ ನೀಡುವುದಾಗಿಯೂ ಪಕ್ಷವು ಭರವಸೆ ಕೊಟ್ಟಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಬಿಜೆಪಿಯು ಮೊದಲ ವರ್ಷದೊಳಗೆ ಶಿಕ್ಷಕರಿಗೆ ಮೂರು ಲಕ್ಷ ಉದ್ಯೋಗ, ಐಟಿ ಕ್ಷೇತ್ರದಲ್ಲಿ ಐದು ಲಕ್ಷ ಉದ್ಯೋಗದ ಭರವಸೆ ನೀಡಿದ್ದು, ಇದಕ್ಕಾಗಿ ’ಮುಂದಿನ ಪೀಳಿಗೆಯ ಐಟಿ ಹಬ್’ ನಿರ್ಮಿಸುವ ಭರವಸೆ ನೀಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಲಕ್ಷ ಉದ್ಯೋಗ ಮತ್ತು ಕೃಷಿ ಕ್ಷೇತ್ರದಲ್ಲಿ ೧೦ ಲಕ್ಷ ಉದ್ಯೋಗ ನೀಡುವ ಭರವಸೆಯನ್ನೂ ಬಿಜೆಪಿ ನೀಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ಆಡಳಿತಾರೂಢ ಜನತಾದವು (ಯುನೈಟೆಡ್) 2020 ಅಕ್ಟೋಬರ್ 22ರ ಗುರುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಪಕ್ಷದ ದೃಷ್ಟಿ ದಾಖಲೆಯನ್ನು ಜೆಡಿಯು ರಾಜ್ಯ ಘಟಕ ಅಧ್ಯಕ್ಷ ಬಶಿಷ್ಠ ನರೈನ್ ಸಿಂಗ್ ಬಿಡುಗಡೆ ಮಾಡಿದರು. "ಬಡ ಹೊಟೆ ವಾಡೆ, ಅಬ್ ಹೈಂ ನಾಯ್ ಇರೇಡ್ (ಭರವಸೆಗಳು ಈಡೇರುತ್ತಿವೆ, ಈಗ ಹೊಸ ಉದ್ದೇಶಗಳು)’ ಎಂಬ ಘೋಷಣೆಯೊಂದಿಗೆ ಜನತಾದಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯದ ಯುವಕರ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು, ಆರ್ಥಿಕ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಬಿಹಾರದ ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಲು ಪಕ್ಷವು ಸಂಕಲ್ಪಿಸಿದೆ ಎಂದು ಸಿಂಗ್ ಹೇಳಿದರು. "ಸಾತ್ ನಿಶ್ಚಯ್ (೭ ಭರವಸೆಗಳು)’ ಯೋಜನೆಯ ಎರಡನೇ ಪುನರಾವರ್ತನೆಯನ್ನೂ ಅವರು ಘೋಷಿಸಿದರು. ತಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದರೆ ೧೦ ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದಕ್ಕಾಗಿ ಜೆಡಿಯು ಮುಖಂಡ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮುಖಂಡ ತೇಜಸ್ವಿ ಯಾದವ್ ಅವರನ್ನು ಟೀಕಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ: ಜೆಇಇ (ಮುಖ್ಯ/ಮೇನ್) ಪರೀಕ್ಷೆಯನ್ನು ೨೦೨೦ರ ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಇನ್ನು ಮುಂದೆ ಪ್ರಾದೇಶಿಕ ಭಾಷೆಗಳನ್ನೂ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ 2020 ಅಕ್ಟೋಬರ್ 22ರ ಗುರುವಾರ ಪ್ರಕಟಿಸಿದರು. ಜೆಇಇ (ಮುಖ್ಯ) ಪರೀಕ್ಷೆಯನ್ನು ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಭಾರತದ ಹೆಚ್ಚಿನ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಜಂಟಿ ಪ್ರವೇಶ ಮಂಡಳಿ (ಜೆಎಬಿ) ನಿರ್ಧರಿಸಿದೆ ಎಂದು ಪೋಖ್ರಿಯಾಲ್ ಹೇಳಿದರು. "ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸಲಾಗುವುದು, ಈ ಪರೀಕ್ಷೆಯ ಆಧಾರದ ಮೇಲೆ ರಾಜ್ಯ ಪ್ರಾದೇಶಿಕ ಕಾಲೇಜುಗಳಿಗೆ ಪ್ರವೇಶವನ್ನು ನಿರ್ಧರಿಸಲಾಗುತ್ತದೆ. ಜೆಇಇ (ಮುಖ್ಯ) ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರವೇಶಿಸುವ ರಾಜ್ಯಗಳ ರಾಜ್ಯ ಭಾಷೆಯನ್ನು ಸಹ ಇದರ ಅಡಿಯಲ್ಲಿ ಸೇರಿಸಲಾಗುವುದು’ ಎಂದು ಶಿಕ್ಷಣ ಸಚಿವರು ಟ್ವೀಟ್ ಮಾಡಿದರು. ಪಿಸಾ (ಪಿಐಎಸ್‌ಎ) ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ದೇಶಗಳು ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. "ಜಂಟಿ ಪರೀಕ್ಷಾ ಮಂಡಳಿ (ಜೆಎಬಿ) ನಿರ್ಧಾರವು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತದೆ’ ಎಂದು ಸಚಿವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ: ಲೆಹ್ನ್ನು ಚೀನಾದ ಭಾಗವಾಗಿ ತೋರಿಸಿದ ಸಾಮಾಜಿಕ ಮಾಧ್ಯಮ ಟ್ವಿಟ್ಟರನ್ನು ಭಾರತ ಸರ್ಕಾರವು ತರಾಟೆಗೆ ತೆಗೆದುಕೊಂಡಿದ್ದು, ಟ್ವಿಟ್ಟರ್ ಸಿಇಒ ಜಾಕ್ ಡಾರ್ಸಿಗೆ ಖಡಕ್ ಪತ್ರ ಬರೆದು ’ಟ್ವಿಟ್ಟರ್ ವರ್ತನೆಯು ಅದರ ವಿಶ್ವಾಸಾರ್ಹತೆ ಮತ್ತು ತಟಸ್ಥತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಹೇಳಿದೆ. "ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಸಾಹ್ನಿ ಅವರು ಜಾಕ್ ಡಾರ್ಸಿ ಅವರಿಗೆ ಬರೆದ ಪತ್ರದಲ್ಲಿ ಸರ್ಕಾರದ ಭ್ರಮನಿರಸನವನ್ನು ತಿಳಿಸಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಅಕ್ಟೋಬರ್ ೧೮ ರಂದು ಹಿರಿಯ ಪತ್ರಕರ್ತರೊಬ್ಬರು ಲೆಹ್ನಿಂದ ಟ್ವಿಟರ್ ಮೂಲಕ ನೇರ ಪ್ರಕಟಣೆ ಮಾಡುತ್ತಿದ್ದಾಗ ತೋರಿಸಲಾಗುತ್ತಿದ್ದ ಸ್ಥಳ ಸೆಟ್ಟಿಂಗ್ಗಳನ್ನು ನಮ್ಮ ಗಮನಕ್ಕೆ ತರಲಾಗಿದೆ.... ಅದು [ಲೇಹ್] ಚೀನಾದಲ್ಲಿದೆ ಎಂದು ಸೆಟ್ಟಿಂಗ್ ತೋರಿಸಿದೆ ಎಂಬುದನ್ನು ನಾವು ಗಮನಿಸಿದ್ದೇವೆ.’ ಎಂದು ಅಧಿಕಾರಿ ಟ್ವಿಟ್ಟರಿಗೆ ತಿಳಿಸಿದ್ದಾರೆ. ’ಟ್ವಿಟ್ಟರ್ ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು. ಇದು ಸ್ವೀಕಾರಾರ್ಹವಲ್ಲ ಮತ್ತು ಟ್ವಿಟ್ಟರ್ ಇದಕ್ಕೆ ವಿವರಣೆ ನೀಡಬೇಕು. ಮತ್ತು ಮುಂದೆಂದೂ ಇಂತಹ ಘಟನೆ ಸಂಭವಿಸುವುದಿಲ್ಲ ಎಂದು ಅವರು ಖಚಿತಪಡಿಸಿಕೊಳ್ಳಬೇಕು’ ಎಂದು ಅಧಿಕಾರಿ ತಿಳಿಸಿದ್ದಾರೆ. ಅತ್ಯಂತ ಹೆಚ್ಚು ಟ್ವಿಟ್ಟರ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು’ ಎಂದೂ ಅಧಿಕಾರಿ ಪತ್ರದಲ್ಲಿ ನೆನಪಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ನೀಡಿರುವ ಮರಣ ದಂಡನೆಯನ್ನು ಪುನರ್ ಪರಿಶೀಲಿಸುವ ಮಸೂದೆಗೆ ಪಾಕಿಸ್ತಾನದ ಸಂಸದೀಯ ಸಮಿತಿ ಅನುಮೋದನೆ ನೀಡಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ ‘ಅಂತಾರಾಷ್ಟ್ರೀಯ ನ್ಯಾಯಾಲಯ (ವಿಮರ್ಶೆ ಮತ್ತು ಮರುಪರಿಶೀಲನೆ) ಸುಗ್ರೀವಾಜ್ಞೆ‘’ ಶೀರ್ಷಿಕೆಯ ಕರಡು ಮಸೂದೆಯನ್ನು 2020 ಅಕ್ಟೋಬರ್ 21ರ ಬುಧವಾರ ಕಾನೂನು ಮತ್ತು ನ್ಯಾಯಾಂಗ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಅಂಗೀಕರಿಸಿದೆ. ಚರ್ಚೆಯಲ್ಲಿ ಭಾಗವಹಿಸಿದ ಫೆಡರಲ್ ಕಾನೂನು ಮತ್ತು ನ್ಯಾಯಾಂಗ ಸಚಿವ ಫರೋಗ್ ನಸೀಮ್, ‘ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ದೇಶನಗಳಿಗೆ ಅನುಸಾರವಾಗಿ ಮಸೂದೆಯನ್ನು ಮಂಡಿಸಲಾಗಿದೆ‘ ಎಂದು ಹೇಳಿದರು. ಸಂಸತ್ತು ಮಸೂದೆಯನ್ನು ಅಂಗೀಕರಿಸದಿದ್ದಲ್ಲಿ ಐಸಿಜೆ ತೀರ್ಪನ್ನು ಪಾಲಿಸದ ಕಾರಣಕ್ಕಾಗಿ ಪಾಕಿಸ್ತಾನವು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಐವತ್ತು ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರಿಗೆ ೨೦೧೭ರ ಏಪ್ರಿಲ್ ತಿಂಗಳಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
No comments:
Post a Comment