ಇಂದಿನ ಇತಿಹಾಸ History Today ಅಕ್ಟೋಬರ್ 27
2020: ನವದೆಹಲಿ: ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನೆಯೊಂದಿಗೆ ನಡೆದಿರುವ ಭಾರತೀಯ ಸೇನಾ ಮುಖಾಮುಖಿಯ ಹಿನ್ನೆಲೆಯಲ್ಲಿ ತನ್ನ ಸಾರ್ವಭೌಮತ್ವವನ್ನು ಕಾಪಾಡುವ ಭಾರತದ ಪ್ರಯತ್ನಗಳಲ್ಲಿ ಜೊತೆಯಾಗಿ ನಿಲ್ಲುವುದಾಗಿ ಅಮೆರಿಕ 2020 ಅಕ್ಟೋಬರ್ 27ರ ಮಂಗಳವಾರ ಇಲ್ಲಿ ಘೋಷಿಸಿತು. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆಗೆ ೨ ಪ್ಲಸ್ ೨ ಮಾತುಕತೆಯ ಸಂದರ್ಭದಲ್ಲಿ ಈ ಭರವಸೆ ನೀಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಚೀನಾದ ಯಾವುದೇ ಬೆದರಿಕೆಯನ್ನು ಎದುರಿಸಲು ಭಾರತದ ಜೊತೆಗೆ ಅಮೆರಿಕವು ನಿಲ್ಲುತ್ತದೆ ಎಂದು ಹೇಳಿದರು. ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾದ ಸೇನೆ ಮತ್ತು ಭಾರತೀಯ ಸೇನೆಯ ಮುಖಾಮುಖಿ ಹಿನ್ನೆಲೆಯಲ್ಲಿ "ತನ್ನ ಸಾರ್ವಭೌಮತ್ವವನ್ನು ಕಾಪಾಡುವ’ ಪ್ರಯತ್ನಗಳಲ್ಲಿ ಭಾರತಕ್ಕೆ ತಮ್ಮ ದೇಶದ ದೃಢ ಬೆಂಬಲವನ್ನು ವ್ಯಕ್ತಪಡಿಸಿದರು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರೊಂದಿಗೆ ೨ + ೨ ಮಾತುಕತೆಯ ಮೂರನೇ ಆವೃತ್ತಿಯನ್ನು ಲಡಾಖ್ ಪ್ರದೇಶದ ತೀವ್ರ ಉದ್ವಿಗ್ನತೆಯ ಸಮಯದಲ್ಲಿ ನಡೆಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್-೧೯ರ ಹಿನ್ನೆಲೆಯಲ್ಲಿ ವಿಧಿಸಲಾದ ರಾಷ್ಟ್ರವ್ಯಾಪಿ ದಿಗ್ಬಂಧನಕ್ಕೆ (ಲಾಕ್ ಡೌನ್) ಸಂಬಂಧಿಸಿದ ’ಅನ್‌ಲಾಕ್’ ಮಾರ್ಗ ಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯವು (ಎಂಎಚ್‌ಎ) 2020 ಅಕ್ಟೋಬರ್ 27ರ ಮಂಗಳವಾರ ನವೆಂಬರ್ ೩೦ ರವರೆಗೆ ವಿಸ್ತರಿಸಿತು. ಅನ್ ಲಾಕ್ ಮಾರ್ಗಸೂಚಿಗಳಲ್ಲಿ ಎಲ್ಲ ಪ್ರಮುಖ ಚಟುವಟಿಕೆಗಳಿಗೆ ಈಗಾಗಲೇ ನೀಡಲಾಗಿರುವ ಅನುಮತಿಯಲ್ಲಿ ಯಾವುದೇ ಹೊಸ ಬದಲಾವಣೆಗಳಿಲ್ಲ, ಆದರೆ ಧಾರಕ ವಲಯಗಳಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಮುಂದುವರಿಯುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತು. ಪ್ರಧಾನಿ ನರೇಂದ್ರ ಮೋದಿಯರು ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಿದ ಜನಾಂದೋಲನವನ್ನು ಅನುಸರಿಸುವಂತೆ, ಸಾಂಕ್ರಾಮಿಕದ ವಿರುದ್ಧ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಗೃಹ ಇಲಾಖೆ ಸೂಚಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಫೇಸ್‌ಬುಕ್ ಇಂಕ್‌ನ ಸಾರ್ವಜನಿಕ ನೀತಿ ನಿರ್ದೇಶಕರಾದ ಅಂಕಿ ದಾಸ್ ಅವರು ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ವಹಿಸುವ ಸಲುವಾಗಿ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಕಂಪೆನಿ 2020 ಅಕ್ಟೋಬರ್ 27ರ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿತು. ತನ್ನ ಅತಿದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ರಾಜಕೀಯ ವಿಷಯವನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂಬ ಬಗ್ಗೆ ಫೇಸ್ಬುಕ್ ಮತ್ತು ದಾಸ್ ಅವರು ನೌಕರರಿಂದ ಆಂತರಿಕವಾಗಿ ಪ್ರಶ್ನೆಗಳನ್ನು ಎದುರಿಸಿದ ಕೆಲವು ವಾರಗಳ ಅಂಕಿದಾಸ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. "ಸಾರ್ವಜನಿಕ ಸೇವೆಯಲ್ಲಿನ ಆಸಕ್ತಿಯನ್ನು ಮುಂದುವರೆಸಲು, ಫೇಸ್ಬುಕ್ನಲ್ಲಿನ ತನ್ನ ಹುದ್ದೆಯಿಂದ ಕೆಳಗಿಳಿಯಲು ಅಂಕಿದಾಸ್ ನಿರ್ಧರಿಸಿದ್ದಾರೆ. ಅಂಕಿದಾಸ್ ನಮ್ಮ ಭಾರತದ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು ಮತ್ತು ಕಳೆದ ೯ ವರ್ಷಗಳಲ್ಲಿ ಕಂಪೆನಿಯ ಮತ್ತು ಅದರ ಸೇವೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಫೇಸ್‌ಬುಕ್‌ನ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಇ-ಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರವನ್ನು ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಪ್ರಕ್ರಿಯೆಗಳ ದೊಡ್ಡ ಶತ್ರು ಎಂದು 2020 ಅಕ್ಟೋಬರ್ 27ರ ಮಂಗಳವಾರ ಹೇಳಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಾಗರೂಕತೆ ಮತ್ತು ಭ್ರಷ್ಟಾಚಾರ ವಿರೋಧಿ ಕುರಿತು ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. "ನಮ್ಮ ಆಡಳಿತಾತ್ಮಕ ಪ್ರಕ್ರಿಯೆಗಳು ಪಾರದರ್ಶಕವಾಗಿರುವುದು, ಜವಾಬ್ದಾರಿಯುತವಾಗಿರುವುದು ಮತ್ತು ಜನರಿಗೆ ಉತ್ತರದಾಯಿ ಆಗಿರುವುದು ಅಭಿವೃದ್ಧಿಗೆ ಕಡ್ಡಾಯವಾಗಿದೆ. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರವೇ ದೊಡ್ಡ ಶತ್ರು. ಭ್ರಷ್ಟಾಚಾರವು ಅಭಿವೃದ್ಧಿಗೆ ಧಕ್ಕೆ ಉಂಟು ಮಾಡುತ್ತದೆ ಮತ್ತು ಸಾಮಾಜಿಕ ಸಮತೋಲನವನ್ನು ಅಡ್ಡಿಪಡಿಸುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದರು.ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ದೇಶವು ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ ಮಾತನಾಡಿದ ಪ್ರಧಾನಿ, ಪಟೇಲ್ ಅವರನ್ನು ಭಾರತದ ಆಡಳಿತದ ವಾಸ್ತುಶಿಲ್ಪಿ ಎಂದು ಬಣ್ಣಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿ ವಾರಾಣಸಿ ಮೂಲದ ಬೀದಿ ವ್ಯಾಪಾರಿ ಅರವಿಂದ ಮೌರ್ಯ ಅವರ ’ಮೊಮೊ ಉಪಕ್ರಮ’ಕ್ಕೆ 2020 ಅಕ್ಟೋಬರ್ 27ರ ಮಂಗಳವಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ -೧೯ನ್ನು ದೂರ ಇರಿಸುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಮ್ಮ ಗಾಡಿಯಲ್ಲಿ ಮೊಮೊ ಖರೀದಿಸುವವರಿಗೆ ಮೌರ್ಯ ಅವರು ಮುಖವಾಡಗಳನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಪ್ರಧಾನಿಯವರು ತಮ್ಮ ಮೊಮೊವನ್ನು ಉಚಿತವಾಗಿ ನೀಡುವುದಾಗಿ ಹೇಳಿರುವ ಅರವಿಂದ ಮೌರ್ಯ ಅವರ ಕಾಳಜಿಯನ್ನು ಪ್ರಧಾನಿ ಮೆಚ್ಚಿದರು. ಪ್ರಧಾನಮಂತ್ರಿಯೊಂದಿಗೆ ಸಂವಹನ ನಡೆಸಿದ ಅರವಿಂದ, "ನಾನು ಮೊಮೊಗಳು ಮತ್ತು ಕಾಫಿಯನ್ನು ಮಾರುತ್ತೇನೆ ಮತ್ತು ದುರ್ಗಾ ಕುಂಡ್ ಪ್ರದೇಶದಲ್ಲಿ ನನ್ನ ವಿತರಣಾ ಕಾರ್ಟ್ ಹೊಂದಿದ್ದೇನೆ’ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್ -೧೯ ಪ್ರಕರಣಗಳಲ್ಲಿ ಹೆಚ್ಚಿನ ಸಾವುಗಳಿಗೆ ವಾಯುಮಾಲಿನ್ಯ ಕಾರಣವಾಗಿರುವುದು ಯುರೋಪ್ ಮತ್ತು ಅಮೆರಿಕದ ಅಧ್ಯಯನಗಳು ದೃಢ ಪಡಿಸಿವೆ ಎಂದು ಕೇಂದ್ರ ಸರ್ಕಾರ 2020 ಅಕ್ಟೋಬರ್ 27ರ ಮಂಗಳವಾರ ಹೇಳಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಪ್ರೊಫೆಸರ್ ಬಲರಾಮ ಭಾರ್ಗವ ಅವರು ’ಕೊರೋನಾವೈರಸ್ ಮತ್ತು ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ) ೨.೫ ಕಣಗಳಿಗೂ ನಿಜಕ್ಕೂ ಸಂಬಂಧವಿದೆ ಮತ್ತು ಈ ಕಣಗಳಲ್ಲಿ ಕೊರೋನವೈರಸ್ ಕಂಡುಬಂದಿದೆ’ ಎಂದು ಹೇಳಿದರು. ಬೋಸ್ಟನ್‌ನ ಹಾರ್ವರ್ಡ್ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು ನಡೆಸಿದ ಅಧ್ಯಯನವನ್ನು ಭಾರ್ಗವ ಉಲ್ಲೇಖಿಸಿದರು. ಶೇಕಡಾ ೯೮ ಜನಸಂಖ್ಯೆಯನ್ನು ಒಳಗೊಂಡ ಅಮೆರಿಕದ ೩,೦೦೦ ಕೌಂಟಿಗಳಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಕೋವಿಡ್ -೧೯ ಸಾವಿನ ಪ್ರಮಾಣದಲ್ಲಿ ಶೇಕಡಾ ೧೫ ಹೆಚ್ಚಳಕ್ಕೆ ಪಿಎಂ ೨.೫ ಕಣಗಳಲ್ಲಿ ಕೇವಲ ೧ಯುಜಿ / ಎಂ೩ ಹೆಚ್ಚಳವು ಸಂಬಂಧಿಸಿದೆ ಎಂದು ಅಧ್ಯಯನವು ಕಂಡುಹಿಡಿದಿದೆ ಎಂದು ಈ ಅಧ್ಯಯನ ಹೇಳಿದೆ. ಚೀನಾದಲ್ಲಿ ೨೦೦೩ ರಲ್ಲಿ ನಡೆಸಿದ ಪರಿಸರ ಅಧ್ಯಯನವು ೧೦೦ ಅಥವಾ ಹೆಚ್ಚಿನ ಸಾರ್ಸ್ ಪ್ರಕರಣಗಳನ್ನು ಹೊಂದಿರುವ ಐದು ಪ್ರದೇಶಗಳಲ್ಲಿ, ವಾಯುಮಾಲಿನ್ಯವು ಹದಗೆಟ್ಟಿದ್ದಾಗ ಪ್ರಕರಣಗಳ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ತೋರಿಸಿದೆ. ಈ ಅಧ್ಯಯನದಲ್ಲಿ, ಪರಿಸರ ಅಧ್ಯಯನ ವಿನ್ಯಾಸದ ಮೂಲಕ ವಾಯುಮಾಲಿನ್ಯ ಮತ್ತು ಸಾರ್ಸ್ ಪ್ರಕರಣದ ಸಾವಿನ ನಡುವಣ ಸಂಬಂಧವನ್ನು ಪರಿಶೋಧಿಸಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment