ನಾನು ಮೆಚ್ಚಿದ ವಾಟ್ಸಪ್

Thursday, October 8, 2020

ಇಂದಿನ ಇತಿಹಾಸ History Today ಅಕ್ಟೋಬರ್ 08

 ಇಂದಿನ ಇತಿಹಾಸ  History Today ಅಕ್ಟೋಬರ್ 08

2020: ನವದೆಹಲಿ: ಅಮೆರಿಕದ ಕವಿ ಲೂಯಿ ಎಲಿಸಬೆತ್ ಗ್ಲಕ್ ಅವರು 2020 ಅಕ್ಟೋಬರ್ 08ರ ಗುರುವಾರ ೨೦೨೦ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು. ೧೯೪೩ರ ಏಪ್ರಿಲ್ ೨೨ರಂದು ಜನಿಸಿದ ಗ್ಲಕ್ ಒಬ್ಬ ಅಮೇರಿಕನ್ ಕವಿ ಮತ್ತು ಪ್ರಬಂಧಕಾರ್ತಿಯಾಗಿದ್ದು, "ಸ್ನಿಗ್ಧ್ಧ ಸೌಂದರ್ಯದೊಂದಿಗೆ ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕವಾಗಿಸುವ ಸ್ಪಷ್ಟವಾದ ಕಾವ್ಯಾತ್ಮಕ ಧ್ವನಿಗಾಗಿ ೨೦೨೦ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಅವರಿಗೆ ಪ್ರಕಟಿಸಲಾಯಿತು. ಅಮೆರಿಕದಲ್ಲಿ ರಾಷ್ಟ್ರೀಯ ಮಾನವಿಕ ಪದಕ, ಪುಲಿಟ್ಜರ್ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ವಿಮರ್ಶಕರ ವಲಯ ಪ್ರಶಸ್ತಿ, ಮತ್ತು ಬೊಲ್ಲಿಂಗನ್ ಪ್ರಶಸ್ತಿ ಸೇದಂತೆ ಅನೇಕ ಪ್ರಮುಖ ಸಾಹಿತ್ಯ ಪ್ರಶಸ್ತಿಗಳನ್ನು ಗ್ಲಕ್ ಅವರು ಗೆದ್ದಿದ್ದಾರೆ. ಅಮೆರಿಕದ ಕವಿ ಪ್ರಶಸ್ತಿ ವಿಜೇತರಾದ ಗ್ಲಕ್ ಅವರನ್ನಆತ್ಮಚರಿತ್ರೆಯ ಕವಿ ಎಂದು ಬಣ್ಣಿಸಲಾಗುತ್ತದೆ. ಪುರಾಣ, ಇತಿಹಾಸ ಅಥವಾ ಪ್ರಕೃತಿಯನ್ನು ಮತ್ತು ವೈಯಕ್ತಿಕ ಅನುಭವಗಳನ್ನು ನೀಡುವ ಅವರ ಕೃತಿಗಳು ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿವೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಚುನಾವಣೆ ನಡೆಯಲಿರುವ ೧೨ ರಾಜ್ಯಗಳ ಸಲುವಾಗಿ ಸೆಪ್ಟೆಂಬರ್ ೩೦ ರಂದು ಹೊರಡಿಸಲಾಗಿದ್ದ ಕೋವಿಡ್ -೧೯ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯವು 2020 ಅಕ್ಟೋಬರ್ 08ರ ಗುರುವಾರ ಪರಿಷ್ಕರಿಸಿತು. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಪರಿಷ್ಕೃತ ಆದೇಶವು ಚುನಾವಣೆ ನಡೆಯಲಿರುವ ೧೨ ರಾಜ್ಯಗಳಲ್ಲಿ ರಾಜಕೀಯ ರಾಲಿಗಳನ್ನು ನಡೆಸಲು ತತ್ ಕ್ಷಣದಿಂದ ಅನುವು ಮಾಡಿಕೊಡುತ್ತದೆ. ಮೂಲ ಕೋವಿಡ್-೧೯ ಮಾರ್ಗಸೂಚಿ ಪ್ರಕಾರ, ಅಕ್ಟೋಬರ್ ೧೫ರವರೆಗೆ ರಾಲಿಗಳನ್ನು ನಿಷೇಧಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆಯು ಬಿಹಾರದ ಚುನಾವಣಾ ಸಿದ್ಧತೆಗಳ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಕೋವಿಡ್ -೧೯ ತಡೆಗಟ್ಟುವ ನಿಯಮಗಳ ಅಡಿಯಲ್ಲಿ ದೊಡ್ಡ ಸಭೆಗಳಿಗೆ ಅನುಮತಿ ನೀಡಲಾಗಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ಚುನಾವಣಾ ರ್ಯಾಲಿ ಮತ್ತು ಸಭೆಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಬಿಹಾರದ ಹೊರತಾಗಿ, ಚುನಾವಣೆ (ಉಪಚುನಾವಣೆ) ನಡೆಯಲಿರುವ ಇತರ ರಾಜ್ಯಗಳು ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಹರಿಯಾಣ, ಜಾರ್ಖಂಡ್, ಛತ್ತೀಸ್ಗಢ, ಮಣಿಪುರ, ನಾಗಾಲ್ಯಾಂಡ್ ಮತ್ತು ಒಡಿಶಾ. ೨೮ ಸ್ಥಾನಗಳಲ್ಲಿ ಉಪ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಕೂಡಾ ಮತದಾನದ ಸಿದ್ಧತೆಗಳು ನಡೆಯುತ್ತಿವೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಖಾಸಗಿ ಟೆಲಿವಿಷನ್ ಚಾನೆಲ್ಗಳು ತಮ್ಮ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅಥವಾ ಟಿಆರ್ಪಿ ಹೆಚ್ಚಿಸಲು ಕುಶಲತೆಯಿಂದ ನಡೆಸುತ್ತಿದ್ದ ದಂಧೆಯ ಜಾಲವನ್ನು ಮುಂಬೈ ಪೊಲೀಸರು 2020 ಅಕ್ಟೋಬರ್ 08ರ ಗುರುವಾರ ಭೇದಿಸಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಖಾಸಗಿ ಟೆಲಿವಿಷನ್ ಜಾಲಗಳ ಮೇಲೆ ನಿಗಾ ಇಟ್ಟಿದ್ದು, ಎರಡು ಟಿವಿ ಜಾಲಗಳ ಮಾಲೀಕರನ್ನು ಬಂಧಿಸಿದರು. ಫಖ್ತ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ಚಾನೆಲ್ಗಳ ಮಾಲೀಕರನ್ನು ಬಂಧಿಸಲಾಗಿದೆ. ರಿಪಬ್ಲಿಕ್ ಟಿವಿ ನಿರ್ದೇಶಕರು ಮತ್ತು ಪ್ರವರ್ತಕರನ್ನು ಇನ್ನೂ ಪ್ರಶ್ನಿಸಬೇಕಾಗಿದೆ. ರಿಪಬ್ಲಿಕ್ ಟಿವಿಯ ಕೆಲವು ನೌಕರರನ್ನೂ ನಾವು ತನಿಖೆಗಾಗಿ ಕರೆಸಲಿದ್ದೇವೆ ಎಂದು ಮುಂಬೈ ಪೊಲೀಸ್ ಕಮೀಷನರ್ ಪರಮ್ ಬಿರ್ ಸಿಂಗ್ ಹೇಳಿದರು. ಖಾಸಗಿ ಟೆಲಿವಿಷನ್ ಚಾನೆಲ್ಗಳು ತಮ್ಮ ಟೆಲಿವಿಷನ್ ರೇಟಿಂಗ್ ಪಾಯಿಂಟ್ಗಳನ್ನು ಅಥವಾ ಟಿಆರ್ಪಿಯನ್ನು ಕುಶಲತೆಯಿಂದ ನಿರ್ವಹಿಸುವ ದಂಧೆ ನಡೆಸಿವೆ ಎಂದು ಅವರು ಹೇಳಿದರು. ದಂಧೆ ನಡೆಸುತ್ತಿದ್ದ ಮೂರು ಚಾನೆಲ್ಗಳಲ್ಲಿ ಒಂದು ರಿಪಬ್ಲಿಕ್ ಟಿವಿ, ಉಳಿದ ಎರಡು ಮುಂಬೈಯ ಸ್ಥಳೀಯ ಚಾನೆಲ್ಗಳು ಎಂದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಮುಂಬೈ ಪೊಲೀಸ್ ಕಮೀಷನರ್ ಪರಮ್ ಬೀರ್ ಸಿಂಗ್ ಅವರ ಹೇಳಿಕೆಗೆ ಕ್ಷಿಪ್ರವಾಗಿ ಕಠಿಣ ಪ್ರತಿಕ್ರಿಯೆ ನೀಡಿದ  ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ, ಪೊಲೀಸ್ ಕಮೀಷನರ್ ವಿರುದ್ಧ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತ ಪೊಲೀಸ್ ತನಿಖೆ ಕುರಿತ ಟೆಲಿವಿಷನ್ ಚಾನೆಲ್ ಮಾಡಿರುವ ವರದಿಗಳಿಗೂ ಪೊಲೀಸರ ಕ್ರಮಕ್ಕೂ ಸಂಬಂಧ ಇದೆ ಎಂದು ಗೋಸ್ವಾಮಿ ಹೇಳಿದ್ದಾರೆ. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2020: ಕೊಲ್ಕತ: ಪಶ್ಚಿಮ ಬಂಗಾಳ ಸಚಿವಾಲಯನಬನ್ನಾ ಹೊರಭಾಗದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಘಟನೆ 2020 ಅಕ್ಟೋಬರ್ 08ರ ಗುರುವಾರ ಸಂಭವಿಸಿದ್ದು, ಗಲಭೆ ನಿಯಂತ್ರಣ ಸಮವಸ್ತ್ರ ಧರಿಸಿದ್ದ ಪೊಲೀಸರು ಅಶ್ರುವಾಯು ಶೆಲ್ ಮತ್ತು ಜಲಫಿರಂಗಿ ಬಳಸಿ ಗುಂಪು ಚದುರಿಸಲು ಯತ್ನಿಸಿದರುನಬನ್ನಾ ಚಲೋ ಅಭಿಜನ್ (ರಾಜ್ಯ ಕಾರ್ಯದರ್ಶಿ ಕಚೇರಿಗೆ ಮೆರವಣಿಗೆ) ಬ್ಯಾನರ್ ಅಡಿಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ವಿಭಾಗವು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ  ಹಿರಿಯ ಮುಖಂಡರು ಮತ್ತು ಪೊಲೀಸರು ಸೇರಿದಂತೆ ೧೦೦ ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಗಾಯಗೊಂಡರು ಮತ್ತು ಅವರಲ್ಲಿ ಕೆಲವರು ಆಸ್ಪತ್ರೆಗೆ ದಾಖಲಾದರು. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಲಾಠಿ ಚಾರ್ಜ್ ಮಾಡಿದ್ದಾರೆ. ಕಲ್ಲು ತೂರಾಟದಲ್ಲಿ ನಮ್ಮ ಕಾರ್ಯಕರ್ತರು ಪಾಲ್ಗೊಂಡಿಲ್ಲ. ಟಿಎಂಸಿ ಕಾರ್ಯಕರ್ತರು ಬಾಂಬ್ಗಳನ್ನು ಎಸೆದಿದ್ದಾರೆ ಎಂದು ಬಿಜೆಪಿ ನಾಯಕ ಲೋಕೆತ್ ಚಟರ್ಜಿ ಆಕ್ರೋಶ ವ್ಯಕ್ತಪಡಿಸಿದರು. ಜನರು ಗುಂಪು ಸೇರುವಂತಿಲ್ಲ ಎಂದು ಸೂಚಿಸಿದ್ದ ಪಶ್ಚಿಮ ಬಂಗಾಳ ಸರ್ಕಾರವು ಬಿಜೆಪಿ ಆಯೋಜಿಸಿದ್ದನಬನ್ನ ಚಲೋ ಪ್ರತಿಭಟನೆಗೆ ಅನುಮತಿ ನಿರಾಕರಿಸಿತ್ತು. ಬಿಜೆಪಿ ಯುವ ಘಟಕದ ಮುಖ್ಯಸ್ಥ ತೇಜಸ್ವಿ ಸೂರ್ಯ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೆಂದು ಕೊಲ್ಕತಕ್ಕೆ ಬಂದಿದ್ದರು. ಇದು ಕೊಲ್ಕತ್ತಾದಲ್ಲಿ ಬಿಜೆಪಿಯ ಶಕ್ತಿಪ್ರದರ್ಶನ ಎಂದೇ ವಿಶ್ಲೇಷಿಸಲಾಗಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತವು ಇಂದು ಪ್ರಬಲವಾಗಿದ್ದು ನಾಳೆ ಇನ್ನಷ್ಟು ಬಲಗೊಳ್ಳಲಿದೆ. ಪ್ರತಿಯೊಬ್ಬರಿಗೂ ದೇಶದಲ್ಲಿ ಘಟಕಗಳನ್ನು ಸ್ಥಾಪಿಸಲು ಮತ್ತು ಹೂಡಿಕೆಗಳನ್ನು ಮಾಡಲು  ಅವಕಾಶಗಳು ಇರುವುದರಿಂದ ಭಾರತವು ಹೂಡಿಕೆಗಳ ಅತ್ಯಂತ ಆಕರ್ಷಕ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಅಕ್ಟೋಬರ್ 08ರ ಗುರುವಾರ ಹೇಳಿದರು. ಕೆನಡಾದಲ್ಲಿ ನಡೆಯುವ ಇನ್ವೆಸ್ಟ್ ಇಂಡಿಯಾ ಸಮ್ಮೇಳನದ ಅಂಗವಾಗಿ ಕೆನಡಾದ ಹೂಡಿಕೆದಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಕೆನಡಾ ಎರಡೂ ರಾಷ್ಟ್ರಗಳು ಪರಸ್ಪರರ ಬೆಳವಣಿಗೆಗೆ ಕೊಡುಗೆ ನೀಡಿವೆ ಎಂದು ಹೇಳಿದರು. ಕೆನಡಾವು ಅತಿದೊಡ್ಡ ಮತ್ತು ಅತ್ಯಂತ ಅನುಭವಿ ಮೂಲಸೌಕರ್ಯ ಹೂಡಿಕೆದಾರರಿಗೆ ನೆಲೆಯಾಗಿದೆ. ಭಾರತದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ ಮೊದಲ ಹೂಡಿಕೆದಾರರಲ್ಲಿ ಕೆನಡಾದ ಪಿಂಚಣಿ ನಿಧಿಗಳು ಸೇರಿವೆ. ಅವರ ಪೈಕಿ ಹಲವರು ಈಗಾಗಲೇ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಲಾಜಿಸ್ಟಿಕ್ಸ್ನಂತಹ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಂಡುಕೊಂಡಿದ್ದಾರೆ ಎಂದು ಪ್ರಧಾನಿ ನುಡಿದರು. ಹೂಡಿಕೆದಾರರು ಭಾರತದಲ್ಲಿ ಬೆಳೆಯಲು ಮತ್ತು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ಅವರು ಹೇಳಿದರು. ಕೋವಿಡ್ ನಂತರದ ಜಗತ್ತಿನಲ್ಲಿ, ಅನೇಕ ಸಮಸ್ಯೆಗಳು, ಉತ್ಪಾದನೆಯ ತೊಂದರೆಗಳು, ಪೂರೈಕೆ ಸರಪಳಿಗಳು ಇತ್ಯಾದಿ ಇವೆ ಎಂದು ನೀವು ಕೇಳುತ್ತೀರಿ. ಸಮಸ್ಯೆಗಳು ಸಹಜ, ಆದರೆ ಭಾರತವು ಸಮಸ್ಯೆಗಳ ನಡುವೆಯೇ ಹೊರಹೊಮ್ಮಿದೆ ಮತ್ತು ಸ್ಥಿತಿಸ್ಥಾಪಕತ್ವವನ್ನು ತೋರಿಸುವ ಮೂಲಕ ನಾವು ಅದನ್ನು ಪರಿಹಾರಗಳ ಭೂಮಿಯಾಗಿ ಮಾಡಿದ್ದೇವೆ ಎಂದು ಪ್ರಧಾನಿ ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಇತ್ತೀಚೆಗೆ ದೆಹಲಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ (1946-2020) ಅವರು 2020 ಅಕ್ಟೋಬರ್ 08ರ ಗುರುವಾರ ರಾತ್ರಿ ನಿಧನರಾದರು. ಅವರಿಗೆ ೭೪ ವರ್ಷ ವಯಸ್ಸಾಗಿತ್ತು. ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯ ರಾಜಕೀಯದಲ್ಲಿದ್ದ ಮತ್ತು ದೇಶದ ಅತ್ಯಂತ ಪ್ರಸಿದ್ಧ ದಲಿತ ನಾಯಕರಲ್ಲಿ ಒಬ್ಬರಾದ ಪಾಸ್ವಾನ್ (೭೪) ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖ್ಯಸ್ಥ, ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ತಮ್ಮ ತಂದೆಯ ನಿಧನದ ಸುದ್ದಿಯನ್ನು ತಿಳಿಸಿದರು. "ಕಳೆದ ಹಲವು ದಿನಗಳಿಂದ ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ಕೆಲವು ಹಠಾತ್ ಬೆಳವಣಿಗೆಗಳಿಂದಾಗಿ, ಅವರ ಹೃದಯದ ಶಸ್ತ್ರಚಿಕಿತ್ಸೆ ಮಾಡಬೇಕಾಯಿತುಅಗತ್ಯವಿದ್ದಲ್ಲಿ, ಕೆಲವು ವಾರಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು. ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಜೊತೆಗೆ ಬೆಂಬಲವಾಗಿ ನಿಂತಿದ್ದ ಎಲ್ಲರಿಗೂ ಧನ್ಯವಾದಗಳು ಎಂದು ಚಿರಾಗ್ ಪಾಸ್ವಾನ್ ಕಳೆದವಾರ ಟ್ವೀಟ್ ಮಾಡಿದ್ದರು. ಚಿರಾಗ್ ಚಿಕಿತ್ಸೆ ಪಡೆಯಬೇಕೆಂದು ಒತ್ತಾಯಿಸಿದ ನಂತರ ಅಂತಿಮವಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ರಾಮ್ ವಿಲಾಸ್ ಪಾಸ್ವಾನ್ ಕೂಡಾ ಇದಕ್ಕೆ ಮುನ್ನ ಹೇಳಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 08 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment