ಇಂದಿನ ಇತಿಹಾಸ History Today ಅಕ್ಟೋಬರ್ 28
2020: ನವದೆಹಲಿ: ಟ್ವಿಟ್ಟರ್ ಇಂಡಿಯಾ ಮೈಕ್ರೋಬ್ಲಾಗಿಂಗ್ ಸಂಸ್ಥೆಯು ಲಡಾಖ್ನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿ ತೋರಿಸಿದ ಕೆಲವು ದಿನಗಳ ನಂತರ, ದತ್ತಾಂಶ ಸಂರಕ್ಷಣೆ ಕುರಿತ ಸಂಸದೀಯ ಸಮಿತಿಯು ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ನೀಡಿರುವ ಸ್ಪಷ್ಟೀಕರಣವು ಅಸಮರ್ಪಕವಾಗಿದೆ ಎಂದು 2020 ಅಕ್ಟೋಬರ್ 28ರ ಬುಧವಾರ ಹೇಳಿತು. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿ ಟ್ವಿಟ್ಟರ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರವನ್ನು ತೋರಿಸಿದೆ ಎಂದು ಭಾರತ ಮೂಲದ ಥಿಂಕ್ ಟ್ಯಾಂಕ್ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ವಿಶೇಷ ಸಹೋದ್ಯೋಗಿ ಗಮನಸೆಳೆದ ನಂತರ ದೊಡ್ಡ ವಿವಾದವೆದ್ದಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್ ಇಂಡಿಯಾ ಅಧಿಕಾರಿಗಳನ್ನು ಡೇಟಾ ಸಂರಕ್ಷಣೆಗಾಗಿ ಜಂಟಿ ಸಂಸದೀಯ ಸಮಿತಿ ಪ್ರಶ್ನಿಸಿತ್ತು. ಸಮಿತಿಗೆ ಟ್ವಿಟ್ಟರ್ ನೀಡಿದ ವಿವರಣೆಯು ಅಸಮರ್ಪಕವಾಗಿದೆ ಎಂಬ ಸರ್ವಾನುಮತದ ಅಭಿಪ್ರಾಯ ಸಮಿತಿಯಲ್ಲಿ ವ್ಯಕ್ತವಾಗಿದೆ ಎಂದು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಲಡಾಖ್ನ್ನು ಚೀನಾದ ಭಾಗವಾಗಿ ತೋರಿಸಿರುವುದು ಕ್ರಿಮಿನಲ್ ಅಪರಾಧವಾಗಿದ್ದು, ಇದಕ್ಕೆ ಏಳು ವರ್ಷಗಳವರೆಗೆ ಸೆರೆವಾಸವನ್ನು ವಿಧಿಸಬಹುದು ಎಂದು ಬಿಜೆಪಿ ಸಂಸದೆ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬೀಜಿಂಗ್: ಚೀನಾ-ಭಾರತದ ಗಡಿ ವಿವಾದವು ದ್ವಿಪಕ್ಷೀಯ ವಿಷಯವಾಗಿದೆ ಎಂದು 2020 ಅಕ್ಟೋಬರ್ 28ರ ಬುಧವಾರ ಹೇಳಿದ ಚೀನಾ, ’ಇಂಡೋ-ಪೆಸಿಫಿಕ್ ನೀತಿ ಹಳಸಲು ಶೀತಲ ಸಮರ ತಂತ್ರ’ ಎಂದು ಹೇಳುವ ಮೂಲಕ ಅಮೆರಿಕದ ಪ್ರಯತ್ನಗಳನ್ನು ತಳ್ಳಿಹಾಕಿತು. ನವದೆಹಲಿಯಲ್ಲಿ ಮಂಗಳವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ನೀಡಿದ ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿತು. ಚೀನಾದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ನಡೆಯುತ್ತಿರುವ ಸೇನಾ ಮುಖಾಮುಖಿಯಲ್ಲಿ ಅಮೆರಿಕವು ಭಾರತದೊಂದಿಗೆ ನಿಂತಿದೆ ಎಂದು ಪೊಂಪಿಯೊ ಹೇಳಿದ್ದರು. "ಚೀನಾ ಮತ್ತು ಭಾರತದ ನಡುವಿನ ಗಡಿ ವ್ಯವಹಾರಗಳು ಉಭಯ ದೇಶಗಳ ನಡುವಿನ ವಿಷಯಗಳಾಗಿವೆ. ಈಗ ಗಡಿಯುದ್ದಕ್ಕೂ ಪರಿಸ್ಥಿತಿ ಸಾಮಾನ್ಯವಾಗಿ ಸ್ಥಿರವಾಗಿದೆ. ಸಮಾಲೋಚನೆ ಮತ್ತು ಮಾತುಕತೆಗಳ ಮೂಲಕ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯತ್ನದಲ್ಲಿ ಉಭಯ ಕಡೆಯರೂ ಇದ್ದಾರೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಬುಧವಾರ ಬೀಜಿಂಗ್ನಲ್ಲಿ ನಡೆದ ಸಚಿವಾಲಯದ ನಿಯಮಿತ ಸಮಾವೇಶದಲ್ಲಿ ಹೇಳಿದರು. ಚೀನಾ-ಭಾರತ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಪೊಂಪಿಯೊ ಭಾರತದೊಂದಿಗೆ ನಿಕಟ ಸಂಬಂಧವನ್ನು ಹೊಂದಲು ಮುಂದಾಗಿರುವ ಪ್ರಶ್ನೆಗೆ ವಾಂಗ್ ಪ್ರತಿಕ್ರಿಯಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್-೧೯ರ ವಿರುದ್ಧ ಲಸಿಕೆ ೨೦೨೦ರ ಡಿಸೆಂಬರ್ ವೇಳೆಗೆ ಸಿದ್ಧವಾಗಬಹುದು, ಆದರೆ ವಿತರಣೆಯು ಇಂಗ್ಲೆಂಡಿನ ಪರೀಕ್ಷೆಗಳು ಮತ್ತು ಮತ್ತು ಡಿಜಿಸಿಎ ಒಪ್ಪಿಗೆಯನ್ನು ಅವಲಂಬಿಸಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಸಿಇಒ ಆದರ್ ಪೂನವಾಲ್ಲಾ 2020 ಅಕ್ಟೋಬರ್ 28ರ ಬುಧವಾರ ಹೇಳಿದರು. ೨೦೨೦ ರ ಡಿಸೆಂಬರ್ ವೇಳೆಗೆ ಲಸಿಕೆ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆದರ್ ಪೂನವಾಲ್ಲಾ ಸುದ್ದಿ ಸಂಸ್ಥೆ ಒಂದಕ್ಕೆ ತಿಳಿಸಿದರು. ಆದಾಗ್ಯೂ, ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಪ್ರಯೋಗಗಳು ಮತ್ತು ಭಾರತದ ಔಷಧ ನಿಯಂತ್ರಕರ (ಡಿಸಿಜಿಐ) ಅನುಮೋದನೆಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ’ ಎಂದು ಅವರು ಹೇಳಿದರು. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಇಂಗ್ಲೆಂಡಿನ ಲಸಿಕೆ ಕಾರ್ಯಪಡೆಯ ಮುಖ್ಯಸ್ಥರಾದ ಕಾಟೆ ಬಿಂಘಮ್ ಅವರು ಕೋವಿಡ್-೧೯ರ ಮೊದಲ ತಲೆಮಾರಿನ ಲಸಿಕೆಗಳು ಅಸಮರ್ಪಕವಾಗಿರುವ ಮತ್ತು ಎಲ್ಲರ ಮೇಲೂ ಪರಿಣಾಮಕಾರಿ ಆಗದೇ ಇರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ’ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದುದಕ್ಕಾಗಿ’ ಶಿಕ್ಷಣ ಸಚಿವಾಲಯವು ರಾಷ್ಟ್ರಪತಿಯವರ ಆದೇಶದ ಮೇರೆಗೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಯೋಗೇಶ್ ತ್ಯಾಗಿ ಅವರನ್ನು ಅಮಾನತುಗೊಳಿಸಿದೆ ಎಂದು ಸಚಿವಾಲಯದ ಅಧಿಕಾರಿಗಳು 2020 ಅಕ್ಟೋಬರ್ 28ರ ಬುಧವಾರ ತಿಳಿಸಿದರು. ಉಪಕುಲಪತಿಯವರು ತೆಗೆದುಕೊಂಡ ನಿರ್ಣಾಯಕ ನೇಮಕಾತಿಗಳ ಬಗ್ಗೆ ಇತ್ತೀಚಿನ ನಿರ್ಧಾರಗಳು ಮತ್ತು ವಿಶ್ವ ವಿದ್ಯಾಲಯ ಮಾನದಂಡಗಳ ಅನುಸರಣೆಯ ಕುರಿತು ವಿಶ್ವವಿದ್ಯಾಲಯದ ಎರಡು ವಿಭಾಗಗಳ ನಡುವೆ ಇತ್ತೀಚೆಗೆ ನಡೆದ ಅಧಿಕಾರದ ಜಗ್ಗಾಟದ ನಡುವೆ ತ್ಯಾಗಿ ಅವರನ್ನು ರಾಷ್ಟ್ರಪತಿಯವರು ಅಮಾನತುಗೊಳಿಸಿದ್ದಾರೆ. ಈಗ ಅಮಾನತುಗೊಂಡಿರುವ ವಿಶ್ವ ವಿದ್ಯಾಲಯದ ಉಪಕುಲಪತಿ ವಿಸಿ ತ್ಯಾಗಿ ಅವರು ವೈದ್ಯಕೀಯ ನೆಲೆಯಲ್ಲಿ ಅನುಪಸ್ಥಿತಿಯ ಅವಧಿಯಲ್ಲಿ ಹೊರಡಿಸಿದ ಆದೇಶಗಳನ್ನು ಶೂನ್ಯ ಮತ್ತು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮೋತಿಪುರ (ಮುಜಾಫ್ಫರಪುರ): ಭವ್ಯ ಮೈತ್ರಿ ಅಥವಾ ಆರ್ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಹಾ ಘಟಬಂಧನ್ ಅಧಿಕಾರಕ್ಕೆ ಬಂದರೆ ಬಿಹಾರ ರಾಜ್ಯದ ಯುವಕರಿಗೆ ೧೦ ಲಕ್ಷ (೧ ಮಿಲಿಯನ್) ಉದ್ಯೋಗ ನೀಡುವುದಾಗಿ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಕುಡಿ ತೇಜಸ್ವಿ ಯಾದವ್ ನೀಡಿದ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ 2020 ಅಕ್ಟೋಬರ್ 28ರ ಬುಧವಾರ ಅಪಹಾಸ್ಯ ಮಾಡಿದರು. ಮೋತಿಪುರ ಸಕ್ಕರೆ ಕಾರ್ಖಾನೆ ಆವರಣದ ಕ್ರೀಡಾ ಮೈದಾನದಲ್ಲಿ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತೇಜಸ್ವಿ ಅವರ ಭರವಸೆಯ ಮೇಲೆ ತೀವ್ರ ದಾಳಿ ನಡೆಸಿ ಅವರನ್ನು ‘ಯುವರಾಜ್ ಆಫ್ ಜಂಗಲ್ ರಾಜ್’ (ಅರಾಜಕತೆಯ ರಾಜಕುಮಾರ) ಎಂದು ಬಣ್ಣಿಸಿದರು. ಭವ್ಯಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಬಣ್ಣಿಸಲಾಗಿರುವ ತೇಜಸ್ವಿ ಅವರ ಕಾಲೆಳೆದ ಪ್ರಧಾನಿ ’ಆ ಜನರು ನಿಮಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ಬಿಹಾರದ ಜನರು ನನಗಿಂತ ಅವರನ್ನು ಚೆನ್ನಾಗಿ ಬಲ್ಲರು. ನಿಮಗಾಗಿ ಮೀಸಲಿಟ್ಟಿರುವ ಅಭಿವೃದ್ಧಿ ನಿಧಿಗಳೊಂದಿಗೆ ಹಗರಣಗಳಲ್ಲಿ ಪಾಲ್ಗೊಳ್ಳಲು ಅವರು ಅಧಿಕಾರಕ್ಕೆ ಬರಲು ಬಯಸುತ್ತಾರೆ. ಅವರ ಬಗ್ಗೆ ಜಾಗರೂಕರಾಗಿರಿ ಮತ್ತು ಅವರ ಭರವಸೆಗಳಿಂದ ವಿಮುಖರಾಗಬೇಡಿ. ಅರಾಜಕತೆ ಮತ್ತು ಬೂಟಾಟಿಕೆಯನ್ನು ರಾಜ್ಯದ ಆಡಳಿತದ ಹೆಸರಿನಲ್ಲಿ ಅವರು ನೀಡಬಹುದು. ಸುಲಿಗೆ, ಅಪಹರಣ ಮತ್ತು ಕೊಲೆಯಂತಹ ಅಪರಾಧ ಚಟುವಟಿಕೆಗಳಲ್ಲಿ ವ್ಯವಹರಿಸುವ ಕಾಟೇಜ್ ಕೈಗಾರಿಕೆಗಳನ್ನು ನಡೆಸಲು ಅವರಿಗೆ ಹಕ್ಕುಸ್ವಾಮ್ಯವಿದೆ’ ಎಂದು ಪ್ರಧಾನಿ ಗಡಚಿಕ್ಕುವ ಚಪ್ಪಾಳೆಗಳು ’ಮೋದಿ’ ’ಮೋದಿ’ ಘೋಷಣೆಗಳ ಮಧ್ಯೆ ಹೇಳಿದರು. ಮತದಾನದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಕೋವಿಡ್-೧೯ರ ಮುಂಜಾಗರೂಕತಾ ಕ್ರಮಗಳೊಂದಿಗೆ ಬಂದು ಮುಖ್ಯಮಂತ್ರಿ ನಿತೀಶ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಅನುಭವಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಪ್ರಧಾನಿ ಜನರನ್ನು ಒತ್ತಾಯಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಪಾಟ್ನಾ: ೨೪೩ ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಮೊದಲ ಹಂತದ ಚುನಾವಣೆ 2020 ಅಕ್ಟೋಬರ್ 28ರ ಬುಧವಾರ ಸಂಜೆ ೬ ಗಂಟೆಯವರೆಗೆ ನಡೆದಿದ್ದು ಶೇಕಡಾ ೫೩.೫೪ರಷ್ಟು ಮತದಾನವಾಯಿತು. ಮತ ಚಲಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಇದೇ ಮೊದಲ ಬಾರಿಗೆ ಸಂಜೆ ೫ ಗಂಟೆಯ ಬದಲು ೬ ಗಂಟೆಯವರೆಗೂ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಹಲವೆಡೆಗಳಲ್ಲಿ ಸಂಜೆ ೬ ಗಂಟೆಯ ಬಳಿಕವೂ ಉದ್ದನೆಯ ಸಾಲುಗಳು ಕಂಡು ಬಂದವು. ಕೋವಿಡ್ -೧೯ ಸಾಂಕ್ರಾಮಿಕ ರೋಗದ ಮಧ್ಯೆ ನಡೆಸಿದ ಮೊದಲ ಪ್ರಮುಖ ಚುನಾವಣೆ ಇದು. ಯಾವುದೇ ಪ್ರಮುಖ ಘಟನೆ ಅಥವಾ ಇವಿಎಂ ತೊಂದರೆಗಳಿಲ್ಲದೆ ಮತದಾನವು ಶಾಂತಿಯುತವಾಗಿದ್ದರೂ, ನವೆಂಬರ್ ೩ಕ್ಕೆ ನಿಗದಿಯಾಗಿರುವ ಎರಡನೇ ಹಂತದ ಚುನಾವಣೆಗೆ ಬಿರುಸಿನ ಸಿದ್ಧತೆಗೂ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಬ್ಬರೂ ಬುಧವಾರ ರಾಜ್ಯದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ಮೊದಲ ಬಾರಿಗೆ ಮತದಾನ ಸಂಜೆ ೫ ರ ಬದಲು ಸಂಜೆ ೬ ರವರೆಗೆ ನಡೆಯಿತು. ಯಾವುದೇ ಮತಗಟ್ಟೆಯಲ್ಲಿ ಜನಸಂದಣಿ ಆಗದಂತೆ ತಡೆಯಲು ಚುನಾವಣಾ ಆಯೋಗವು ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಿತು. ಸಂಜೆ ೬ ಗಂಟೆಯ ನಂತರವೂ ಮತದಾನ ಮುಂದುವರೆಯಿತು ಎಂದು ಚುನಾವಣಾ ಆಯೋಗ ತಿಳಿಸಿತು. "ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗಿಂತ ಹೆಚ್ಚಿನ ಮತದಾನವಾಗಿದೆ. ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ, ಜನರು ಮತ ಚಲಾಯಿಸಲು ಬಂದರು ಎಂಬುದು ಪ್ರೋತ್ಸಾಹದಾಯಕವಾಗಿದೆ. ೨೦೧೫ ರ ವಿಧಾನಸಭಾ ಚುನಾವಣೆಯಲ್ಲಿ ಸಂಜೆ ೫ ರವರೆಗೆ ಮತದಾನ ಪ್ರಮಾಣಶೆಕಡಾ ೫೪.೯೪ ಆಗಿತ್ತು. ಮತ್ತು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಸಂಜೆ ೫ ರವರೆಗೆ ಮತದಾನ ಪ್ರಮಾಣ ಶೇಕಡಾ ೫೩.೫೪ ಆಗಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ತಮಗೆ ಕೊರೊನಾವೈರಸ್ ಸೋಂಕು ತಗುಲಿರುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ 2020 ಅಕ್ಟೋಬರ್ 28ರ ಬುಧವಾರ ಮಾಹಿತಿ ನೀಡಿದರು. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ ಅವರು, ಇತ್ತೀಚಿನ ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ತಮ್ಮನ್ನು ತಾವು ಬೇಗನೆ ಪರೀಕ್ಷಿಸಿಕೊಳ್ಳುವಂತೆ ಸೂಚಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸಚಿವರಾಗಿರುವ ಸ್ಮೃತಿ ಇರಾನಿ, ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಸಲುವಾಗಿ ಪಕ್ಷದ ಪರ ಶನಿವಾರ ಪ್ರಚಾರ ನಡೆಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment