ನಾನು ಮೆಚ್ಚಿದ ವಾಟ್ಸಪ್

Monday, February 26, 2018

ಇಂದಿನ ಇತಿಹಾಸ History Today ಫೆಬ್ರುವರಿ 25

ಇಂದಿನ ಇತಿಹಾಸ History Today ಫೆಬ್ರುವರಿ 25
2018: ನವದೆಹಲಿ:  ಚಿತ್ರರಂಗವನ್ನು  ನಾಲ್ಕು ದಶಕಗಳ ಕಾಲ ಶ್ರೀಮಂತಗೊಳಿಸಿ, ’ಹವಾ ಹವಾಯಿ’ ಹಾಡಿನಿಂದ ಖ್ಯಾತಿ ಪಡೆದ, ಬಹುಮುಖ ಪ್ರತಿಭೆಯ ಹಿರಿಯ ನಟಿ ಶ್ರೀದೇವಿ ಅವರು ನಸುಕಿನ ವೇಳೆಯಲ್ಲಿ (ಶನಿವಾರ ತಡರಾತ್ರಿ) ದುಬೈಯಲ್ಲಿ ನಿಧನರಾದರು. ಅವರಿಗೆ ೫೫ ವರ್ಷ ವಯಸ್ಸಾಗಿತ್ತು. ಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಪತ್ನಿ, ಚಿತ್ರ ನಟಿ ಶ್ರೀದೇವಿ ಅವರು ಕುಟುಂಬ ಸದಸ್ಯರ ಜೊತೆಗೆ ಸೋದರಳಿಯ ಮೋಹಿತ್ ಮಾರ್ವಾ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ, ದುಬೈಯಲ್ಲಿ ಫೆಬ್ರುವರಿ 24ರ  ತಡರಾತ್ರಿ (ಫೆ.25ರ ನಸುಕಿನಲ್ಲಿ) ಹೃದಯಸ್ಥಂಭನದಿಂದ ಅಸು ನೀಗಿದರು ಎಂದು ವರದಿ ತಿಳಿಸಿತು.  ನಿಧನದ ವೇಳೆಯಲ್ಲಿ ಶ್ರೀದೇವಿ ಅವರು ತಮ್ಮ ಪತಿ ಬೋನಿ ಕಪೂರ್, ಪುತ್ರಿ ಖುಷಿ ಜೊತೆಗೆ ಇದ್ದರು. ಶ್ರೀದೇವಿ ನಿಧನದ ಸುದ್ದಿ ಅಂತರ್ಜಾಲ ವದಂತಿಯಷ್ಟೇ ಆಗಿರಬಹುದು ಎಂದು ಮೊದಲಿಗೆ ಭಾವಿಸಲಾದರೂ, ಬಳಿಕ ಆಕೆಯ ಭಾವ ಸಂಜಯ್ ಕಪೂರ್ ಅವರು ಸುದ್ದಿಯನ್ನು ದೃಢ ಪಡಿಸಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕುಟುಂಬದ ಹಲವು ಸದಸ್ಯರು ವಾಪಸಾಗಿದ್ದರೂ, ಶ್ರೀದೇವಿ, ಬೋನಿಮತ್ತು ಖುಷಿ ದುಬೈಯಲ್ಲೇ ಉಳಿದಿದ್ದರು.  ೧೯೬೩ರ ಆಗಸ್ಟ್ ೧೩ರಂದು ಜನಿಸಿದ್ದ ಶ್ರೀದೇವಿ ಕಪೂರ್ (ಬಾಲ್ಯ ನಾಮ: ಶ್ರೀ ಅಮ್ಮಾ ಯಂಗರ್ ಅಯ್ಯಪ್ಪನ್) ಚಿತ್ರ ನಟಿಯಾಗಿ ಮಾತ್ರವಲ್ಲ, ಚಿತ್ರ ನಿರ್ಮಾಪಕಿಯಾಗಿಯೂ ಖ್ಯಾತಿ ಗಳಿಸಿದ್ದರು. ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಅವರು ಬಾಲಿವುಡ್ಡಿನ  ಮೊತ್ತ ಮೊದಲ ಮಹಿಳಾ ’ಸೂಪರ್ ಸ್ಟಾರ್’ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ೨೦೧೩ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದ ಅವರು ಆರು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದಿದ್ದರು. ೧೯೯೦ರ ದಶಕದಲ್ಲಿ ಗರಿಷ್ಠ ಸಂಭಾವನೆ ಪಡೆಯುತ್ತಿದ್ದ ನಟ ನಟಿಯರ ಪೈಕಿ ಒಬ್ಬರಾಗಿದ್ದ ಶ್ರೀದೇವಿ ಈ ಯುಗದ ಅತ್ಯಂತ ಜನಪ್ರಿಯ ನಟಿ ಎಂದು ಪರಿಗಣಿತರಾಗಿದ್ದರು.  ಬಹುಮುಖ ಪ್ರತಿಭೆಯ ನಟಿ ಶ್ರೀದೇವಿ ೧೯೬೯ರಲ್ಲಿ ತಮ್ಮ ೪ನೇ ವಯಸ್ಸಿನಲ್ಲಿ ಎಂ.ಎ. ತಿರುಮುಗಮ್ ಅವರ ಥುನೈವನ್ ಭಕ್ತಿ ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವುದರೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಬಳಿಕ ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿಯೇ ಮುಂದುವರೆದ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದರು. ೧೯೭೫ರಲ್ಲಿ ತಮ್ಮ ೧೩ನೇ ವಯಸ್ಸಿನಲ್ಲಿ ಜೂಲೀ ಚಿತ್ರದಲ್ಲಿ ಬಾಲನಟಿಯಾಗಿಯೇ ಬಾಲಿವುಡ್‌ಗೂ ಪ್ರವೇಶ ಪಡೆದ ಶ್ರೀದೇವಿ, ೧೯೭೬ರಲ್ಲಿ ವಯಸ್ಸಿನಲ್ಲಿಯೇ ತಮಿಳು ಚಿತ್ರ ಮೂಂಡ್ರು ಮುಡಿಚು ಚಿತ್ರದಲ್ಲಿ ವಯಸ್ಕ ನಟಿಯ ಪಾತ್ರವನ್ನು ನಿರ್ವಹಿಸಿದ್ದರು. ೧೯೭೬ರಲ್ಲಿಯೇ ವಯಸ್ಕರ ಚಿತ್ರ, ಕೆ. ಬಾಲಚಂದರ್ ಅವರ ’ಮೂಂಡ್ರು ಮುಡಿಚು’ ಚಿತ್ರದಲ್ಲಿ ಭಾರತದ ಇಬ್ಬರು ಮಹಾನ್ ನಟರಾದ ಕಮಲಹಾಸನ್ ಮತ್ತು ರಜನೀಕಾಂತ್ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದರು. ಗಾಯತ್ರಿ, ಕವಿಕ್ಕುಯಯಿಲ್ ಮತ್ತು ಹಿಟ್ ಚಿತ್ರಗಳಲ್ಲಿ ಒಂದಾದ ೧೬ ವಯಥಿನಿಲೈ ಚಿತ್ರದಲ್ಲಿ ನಟಿಸಿದರು. ೧೯೭೮ರಲ್ಲಿ ಸೊಲ್ವ ಸಾವನ್ ಮೂಲಕ ಬಾಲಿವುಡ್ ಚಿತ್ರಕ್ಕೆ ಅವರು ಪ್ರವೇಶ ಪಡೆದರು. ಐದು ವರ್ಷಗಳ ಬಳಿಕ ಜಿತೇಂದ್ರ ನಟಿಸಿದ ಹಿಮ್ಮತ್ ವಾಲ ಮೂಲಕ ಶ್ರೀದೇವಿ ಕಮರ್ಶಿಯಲ್ ಯಶಸ್ಸು ಸಾಧಿಸಿದರು. ಆಕರ್ಷಕ ಕಣ್ಣುಗಳು, ಸೌಂದರ್ಯ ಮತ್ತು ಮುಗ್ಧ ಅಭಿನಯ ಶ್ರೀದೇವಿಯನ್ನು ಬಲುಬೇಗನೆ ಹಿಂದಿ ಚಿತ್ರರಂಗಕ್ಕೆ ಬೇಕಾಗಿದ್ದ ಪ್ರಬುದ್ಧ ನಟಿಯನ್ನಾಗಿ ರೂಪಿಸಿದವು.  ಬಳಿಕ ಭಾರತದ ಭಾಷೆಗಳಾದ ಹಿಂದಿ, ತಮಿಳು, ಮಲಯಾಳಂ, ಕನ್ನಡ ಚಿತ್ರಗಳಲ್ಲಿ ಸಾಲುಸಾಲಾಗಿ ಶ್ರೀದೇವಿ ಚಿತ್ರಗಳು ತೆರೆಕಂಡವು. ಜುದಾಯಿ ಚಿತ್ರದ ಬಳಿಕ ಶ್ರೀದೇವಿ ೧೫ ವರ್ಷಗಳ ವಿರಾಮ ಪಡೆದಿದ್ದರು. ೨೦೧೨ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಮೂಲಕ ಶ್ರೀದೇವಿ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದರು. ಕಳೆದ ವರ್ಷ ’ಮೋಮ್’ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅಕ್ಷಯ್ ಖನ್ನಾಗೆ ಎದುರಿಗೆ ನಟಿಸಿದ್ದ ಶ್ರೀದೇವಿ, ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ’ಝೀರೋ’ದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಚಿತ್ರ ಡಿಸೆಂಬರ್ ತಿಂಗಳಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ ವಿಜಯ್ ನಟಿಸಿದ ಪುಲಿ ಅವರ ಕೊನೆಯ ಚಿತ್ರ. ಬೋನಿ ಮತ್ತು ಖುಷಿ ಹೊರತಾಗಿ ಹಿರಿಯ ಪುತ್ರಿ ಜಾಹ್ನವಿ ಕಪೂರ್ ಅವರನ್ನೂ  ಶ್ರೀದೇವಿ ಅಗಲಿದರು.  ಶ್ರೀದೇವಿ ಅವರು ಬೋನಿಕಪೂರ್ ಅವರ ಮೊದಲ ಪತ್ನಿ ದಿವಂಗತ ಮೋನಾ ಅವರ ಮಕ್ಕಳಾದ ನಟ ಅರ್ಜುನ್ ಕಪೂರ್ ಮತ್ತು ಅವರ ಸಹೋದರಿ ಅನ್ಶೂಲ ಅವರಿಗೆ ಚಿಕ್ಕಮ್ಮ ಕೂಡಾ.

2018: ಬೆಂಗಳೂರು: ಬಹುಭಾಷಾ ನಟಿ ಶ್ರೀದೇವಿ ಅವರು ಕನ್ನಡದ ‘ಭಕ್ತ ಕುಂಬಾರ’ ಸಿನಿಮಾದಲ್ಲಿ ವರ ನಟ ಡಾ. ರಾಜ್‌ಕುಮಾರ್ ಜೊತೆ ಬಾಲನಟಿಯಾಗಿ ಅಭಿನಯಿಸಿದ್ದರು.  ೧೯೭೪ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ನಟಿಸಿದ್ದ ಅವರು ನಂತರ ಕನ್ನಡ ಚಿತ್ರರಂಗದ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಕನ್ನಡದ ಭಕ್ತ ಕುಂಬಾರ, ಹೆಣ್ಣು ಸಂಸಾರದ ಕಣ್ಣು, ಪ್ರಿಯಾ, ಯಶೋದ ಕೃಷ್ಣ, ರಾಮಾಯಣ ಮತ್ತು ಬಾಲಭಾರತ ಸಿನಿಮಾಗಳಲ್ಲಿ ಅವರು ನಟಿಸಿದ್ದರು.

2018: ನವದೆಹಲಿ: ಬಹುಭಾಷಾ ಜನಪ್ರಿಯ ಮೋಹಕ ನಟಿ ಶ್ರೀದೇವಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ,
ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್, ಹಿರಿಯ ನಟರಾದ ರಜನಿಕಾಂತ್, ಕಮಲಹಾಸನ್ ಸೇರಿದಂತೆ ಚಿತ್ರರಂಗದ ಪ್ರಮುಖರು ಮತ್ತು ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದರು.  ’ಅಭಿನಯದ ಮೂಲಕ ಎಲ್ಲರ ಮನಗೆದ್ದ ನಟಿಯ ನಿಧನದ ಸುದ್ದಿ ನೋವುಂಟು ಮಾಡಿತು’ ಎಂದು ಬಹುತೇಕ ಮಂದಿ ವಿಷಾದಿಸಿದರು.  ’ಖ್ಯಾತ ನಟಿ ಶ್ರೀದೇವಿ ಅವರ ಅಕಾಲಿಕ ನಿಧನದಿಂದ ದುಃಖಿತನಾದೆ. ಅವರು ಚಲನಚಿತ್ರ ಉದ್ಯಮದ ಹಿರಿಯರು, ಅವರ ಸುದೀರ್ಘ ವೃತ್ತಿಜೀವನದಲ್ಲಿ ವೈವಿಧ್ಯಮಯ ಪಾತ್ರಗಳು ಮತ್ತು ಸ್ಮರಣೀಯ ಅಭಿನಯಗಳು ಇದ್ದವು. ದುಃಖದ ಈ ವೇಳೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ. ಅವರ ಆತ್ಮಕ್ಕೆ ಶಾಂತಿಯು ಲಭಿಸಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದರು. ತೆಂಡೂಲ್ಕರ್: ’ನನಗೆ ಹೇಳಲು ಪದಗಳೇ ಬರುತ್ತಿಲ್ಲ. ನಾವು ಅವರನ್ನು ನೋಡುತ್ತಾ ಬೆಳೆದಿದ್ದೇವೆ. ಅವರು ನಮ್ಮೊಂದಿಗಿಲ್ಲ ಎಂಬುದನ್ನು ಸಹಿಸಿಕೊಳ್ಳುವುದು ಕಷ್ಟ. ಅವರಿಗೆ ಹೃತ್ಪೂರ್ವಕ ಸಂತಾಪ ಸೂಚಿಸುವೆ. ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುವೆ’ ಎಂದು ಕ್ರಿಕೆಟ್  ಆಟಗಾರ ಸಚಿನ್ ತೆಂಡೂಲ್ಕರ್ ಹೇಳಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ: ’ಶ್ರೀದೇವಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅವರು ಕಲೆಗೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಜನರಿಗೆ ಸಂತೋಷದ ನಗುವನ್ನು ನೀಡಿದ ಬಹುಮುಖಿ ನಟಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದರು.

2018: ಮುಂಬೈ: ಭಾರತದ ಬಹುಭಾಷಾ ಹಿರಿಯ ನಟಿ ಶ್ರೀದೇವಿ ಅವರು ಹೃದಯಾಘಾತದಿಂದ ನಿಧನರಾದ
ಸುದ್ದಿ ಬಹಿರಂಗವಾಗುವ ಕೆಲವೇ ಕ್ಷಣಗಳ ಮುನ್ನ ನಟ ಅಮಿತಾಭ್ ಬಚ್ಚನ್ ಅವರು ದುಗುಡಕ್ಕೆ ಒಳಗಾಗಿ ಮಾಡಿದ್ದ ಟ್ವೀಟ್ ವೈರಲ್ ಆಯಿತು. ಫೆ.25ರ ಭಾನುವಾರ ನಸುಕಿನ ವೇಳೆ ಸುಮಾರು ೧.೧೫ರ ಹೊತ್ತೆಗೆ ಅಮಿತಾಭ್ ಅವರು ’ಯಾಕೋ ಗೊತ್ತಿಲ್ಲ. ಅವ್ಯಕ್ತ ಭಯ ಕಾಡುತ್ತಿದೆ’ (ನ ಜಾನೆ ಕ್ಯೋಂ, ಏಕ್ ಅಜೀಬ್ ಸಿ ಗಬರಾಹಟ್ ಹೋ ರಹೀ ಹೈ!! ) ಎಂದು ಟ್ವೀಟ್ ಮಾಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಶ್ರೀದೇವಿ ಅವರ ಸಾವಿನ ಸುದ್ದಿ ಬಹಿರಂಗಗೊಂಡಿತ್ತು.  ಅಮಿತಾಭ್ ಅವರ ಈ ಟ್ವೀಟ್ ೮ ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದ್ದು, ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನ ಇದಕ್ಕೆ ಪ್ರತಿಕ್ರಿಯಿಸಿದರು.  ‘ಇದು ಆರನೇ ಇಂದ್ರಿಯಕ್ಕೆ ಸಂಬಂಧಿಸಿದ್ದು, 
#RIPSridevi’  ಎಂದು ಸರ್ ರವೀಂದ್ರ ಜಡೇಜ ಎಂಬ ವ್ಯಕ್ತಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದರು. ‘ಋಣಾತ್ಮಕ ಅನುಭವದ ಬಗ್ಗೆ ಬಚ್ಚನ್ ಸರ್ ಟ್ವೀಟ್ ಮಾಡಿದ ೨೦ ನಿಮಿಷಗಳಲ್ಲಿ  ಶ್ರೀದೇವಿ ಮೃತರಾಗಿದ್ದಾರೆ  #RIPSridevi’  ಎಂದು ಮೊಹಮ್ಮದ್ ಸುಹೈಲ್ ಎಂಬವರು ಟ್ವೀಟ್ ಮಾಡಿದರು. ಭಾನುವಾರ ನಸುಕಿನಲ್ಲಿ ಮಾಡಿದ  ಈ ಟ್ವೀಟ್ ಬಳಿಕ ಇದುವರೆಗೆ ಅಮಿತಾಭ್ ಅವರು ಟ್ವಿಟರ್‌ನಲ್ಲಿ ಯಾವುದೇ ಸಂದೇಶ ಪ್ರಕಟಿಸಲಿಲ್ಲ.
2018: ಮುಂಬಯಿ: ಹೃದಯಾಘಾತದಿಂದ ನಿಧನರಾದ ಬಹುಭಾಷಾ ನಟಿ ಶ್ರೀದೇವಿ ಅವರಿಗಿದ್ದ
ಮಹದಾಸೆಯೊಂದು  ಈಡೇರದೆ ಉಳಿಯಿತು ಎಂದು ಎಂದು ವರದಿಗಳು ತಿಳಿಸಿದವು. ಹಿರಿಯ ಪುತ್ರಿ ಜಾಹ್ನವಿಯನ್ನು ಹಿರಿತೆರೆಯ ಮೇಲೆ ನೋಡಬೇಕೆಂದು ಶ್ರೀದೇವಿ ಹಗಲಿರುಳು ಶ್ರಮಿಸುತ್ತಿದ್ದರು. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನ ಶ್ರೀದೇವಿ ಯಾವುದೇ ಪೂರ್ವ ಸೂಚನೆ ಇಲ್ಲದೆ ಕಣ್ಮರೆಯಾದರು. ಜಾಹ್ನವಿ ಅವರಿಗೆ ನಟನಾ ತರಬೇತಿಯನ್ನೂ ಕೊಡಿಸಿ, ಸ್ವಯಂ ಸೂಚನೆಗಳನ್ನೂ ನೀಡುತ್ತಿದ್ದ ಶ್ರೀದೇವಿ ’ಧಡಕ್’ ಹಿಂದಿ ಚಿತ್ರದ ಮೂಲಕ ಬಾಲಿವುಡ್‌ಗೆ ತಮ್ಮ ಪ್ರತಿನಿದಿಯನ್ನು ನೀಡಲು ಮುಂದಾಗಿದ್ದರು.  ಮರಾಠಿಯ ಬ್ಲಾಕ್ ಬಸ್ಟರ್ ಪ್ರೇಮಕಥೆ ’ಸೈರಾತ್’ ಚಿತ್ರದ ರಿಮೇಕ್ ಆಗಿರುವ ’ಧಡಕ್’ ಚಿತ್ರದಲ್ಲಿ  ಜಾಹ್ನವಿ ನಾಯಕಿಯಾಗಿ ಶೂಟಿಂಗ್‌ನಲ್ಲಿ ನಿರತರಾಗಿರುವ  ವೇಳೆಯಲ್ಲೇ ತಾಯಿ ಶ್ರೀದೇವಿ ದುಬೈಯಲ್ಲಿ ಬಾರದ ಲೋಕಕ್ಕೆ ತೆರಳಿದರು. ತಾಯಿಯ ಹಠಾತ್ ಅಗಲುವಿಕೆಯಿಂದ ಜಾಹ್ನವಿಗೆ ಬರಸಿಡಿಲು ಬಡಿದಂತಾಗಿದ್ದು ಅತೀವ ದುಃಖಿತರಾದರು.  ಮಗಳ ಉತ್ತಮ ಭವಿಷ್ಯಕ್ಕಾಗಿ ಆಂಧ್ರದ ದೇವಾಲಯವೊಂದಕ್ಕೆ  ಇತ್ತೀಚೆಗೆ ತೆರಳಿದ್ದ ಸರ್ಪ ಸಂಬಂಧಿ ಪೂಜಾ ಪುನಸ್ಕಾರಗಳನ್ನೂ ಶ್ರೀದೇವಿ ನೆರವೇರಿಸಿದ್ದರು ಮಕ್ಕಳಿಬ್ಬರ ಉಜ್ವಲ ಭವಿಷ್ಯಕ್ಕಾಗಿ ಅಪಾರ ಕನಸು ಕಂಡಿದ್ದ ಶ್ರೀದೇವಿ ಪುತ್ರಿಯ ಮೊದಲ ಚಿತ್ರ ತೆರೆಕಾಣುವ ಮುನ್ನವೆ ಮರೆಯಾದುದು ದುರಂತ.

2018: ಪುದುಚೆರಿ:  ಜಾಗತಿಕ ವೈವಿಧ್ಯಗಳನ್ನು ಒಗ್ಗೂಡಿಸುವ ಆರೋವಿಲ್ಲೆಯ ವಿಶಿಷ್ಠ ದೃಷ್ಟಿ ಮತ್ತು ಭಾರತದ ಪ್ರಾಚೀನ ಪರಂಪರೆಯ ತತ್ವಗಳಲ್ಲಿ ಹಲವಾರು ಸಾಮ್ಯತೆಗಳಿವೆ ಎಂದು  ಇಲ್ಲಿ ನುಡಿದ ಪ್ರಧಾನಿ ನರೇಂದ್ರ ಮೋದಿ ಅವರು ’ಆರೋವಿಲ್ಲೆ ವಿಶ್ವವ್ಯಾಪಿ ಪಟ್ಟಣವು ಜಗತ್ತಿಗೆ ಬೆಳಕಾಗಿ ಮುಂದುವರೆಯುವುದು ಎಂದು ಹಾರೈಸಿದರು. ಆರೋವಿಲ್ಲೆಯ ಸ್ವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮೋದಿ, ವಿಶ್ವವು ಕಳೆದ ಹಲವಾರು ವರ್ಷಗಳಿಂದ ಆರೋವಿಲ್ಲೆಯಿಂದ ಧನಾತ್ಮಕ ಕಂಪನ-ಸಂದೇಶಗಳನ್ನು ಪಡೆಯುತ್ತಿದೆ ಎಂದು ಹೇಳಿದರು. ಅಂತ್ಯವಿಲ್ಲದ ಶಿಕ್ಷಣವಿರಲಿ, ಪರಿಸರ ಮರುಸೃಷ್ಟಿಯಿರಲಿ, ನವೀಕರಿಸುವ ಇಂಧನ ಕ್ಷೇತ್ರವಿರಲಿ, ಜೈವಿಕ ಕೃಷಿ ಇರಲಿ, ಸೂಕ್ತ ಕಟ್ಟಡ ತಂತ್ರಜ್ಞಾನಗಳಿರಲಿ, ನೀರು ನಿರ್ವಹಣೆಯಿರಲಿ ಅಥವಾ ತ್ಯಾಜ್ಯ ನಿರ್ವಹಣೆ ಇರಲಿ -ಆರೋವಿಲ್ಲೆ ಸದಾ ಆದ್ಯ ಪ್ರವರ್ತಕನಾಗಿ ಕಾರ್ಯ ನಿರ್ವಹಿಸಿದೆ ಎಂದು ಪ್ರಧಾನಿ ನುಡಿದರು. ಆರೋವಿಲ್ಲೆ ಎಲ್ಲ ಮಾನವತೆಗಳಿಗೆ ಸೇರಿದ್ದು ಎಂಬ ಅದರ ಉನ್ನತ ತತ್ವವು ಭಾರತದ ಪ್ರಾಚೀನ ಪರಂಪರೆ ಸಾರಿ ಹೇಳುತ್ತಿರುವ ’ವಸುದೈವ ಕುಟುಂಬಕಂ’ ನಂಬಿಕೆಯ ಪ್ರತಿಫಲನ ಎಂದು ಅವರು ಹೇಳಿದರು. ಭಾರತದ ಸಮಾಜ ಮೂಲಭೂತವಾಗಿಯೇ ವೈವಿಧ್ಯಮಯ. ಅದು ಚರ್ಚೆ, ಸಂವಾದ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪೋಷಿಸಿದೆ.  ಆರೋವಿಲ್ಲೆಯು ಅಂತಹ ಎಲ್ಲ ವೈವಿಧ್ಯಮಯ ಜನರನ್ನು ಮತ್ತು ಸಿದ್ಧಾಂತಗಳನ್ನು ಒಗ್ಗೂಡಿಸಿದೆ ಎಂಬ ವಾಸ್ತವವೇ ಸಹಜ ಚರ್ಚೆಗೆ ನಾಂದಿ ಹಾಡುತ್ತದೆ’ ಎಂದು ಪ್ರಧಾನಿ ನುಡಿದರು. ದೈವದತ್ತ ಪ್ರಜ್ಞೆಯ ಸೇವೆಯಲ್ಲಿ ಇಚ್ಛಾಪೂರ್ವಕವಾಗಿ ತೊಡಗಬಯಸುವ ಯಾರೇ ವ್ಯಕ್ತಿ ಆರೋವಿಲ್ಲೆಯಲ್ಲಿ ವಾಸಿಸಲು ಅರ್ಹತೆ ಹೊಂದುತ್ತಾನೆ ಎಂಬ ಆರೋವಿಲ್ಲೆಯ ಉನ್ನತ ತತ್ವವನ್ನು ಪ್ರಸ್ತಾಪಿಸಿದ ಮೋದಿ, ಶೀ ಅರವಿಂದರ ಪ್ರಜ್ಞೆಯ ಸಿದ್ಧಾಂತವು ಕೇವಲ ಮಾನವರನ್ನಲ್ಲ ಇಡಿಯ ವಿಶ್ವವನ್ನೇ ಒಗ್ಗೂಡಿಸುತ್ತದೆ’ ಎಂದು ಬಣ್ಣಿಸಿದರು. ಇದು ಈಶ್ವರೀಯ ಉಪನಿಷತ್ತಿನಲ್ಲಿ ಇರುವ ವಾಕ್ಯವೊಂದಕ್ಕೆ ಹೊಂದಿಕೊಳ್ಳುತ್ತದೆ. ಮಹಾತ್ಮಾ ಗಾಂಧಿಯವರು ಇದನ್ನು ಭಾಷಾಂತರಿಸಿದ್ದು ’ಅತ್ಯಂತ ಸೂಕ್ಷ್ಮವಾದ ಪ್ರತಿಯೊಂದು ಅಣುವು ಕೂಡಾ ದೈವದತ್ತವಾದುದು’ ಎಂದು ಗಾಂಧೀಜಿ ಅವರು ಬಣ್ಣಿಸಿದ್ದಾರೆ ಎಂದು ಮೋದಿ ಹೇಳಿದರು. ಭಾರತವು ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳ ಸಹ ಬಾಳ್ವೆ ಮತ್ತು ಪರಸ್ಪರ ಗೌರವಕ್ಕೆ ಭಾರತ ಸದಾಕಾಲ ಅವಕಾಶ ನೀಡಿದೆ. ಭಾರತದ ಪ್ರಾಚೀನ ಗುರುಕುಲಗಳಲ್ಲಿ ಜ್ಞಾನಾರ್ಜನೆ ಕೇವಲ ತರಗತಿಗಳಿಗೆ ಸೀಮಿತವಾಗಿರಲಿಲ್ಲ, ಅಲ್ಲಿ ಜೀವನವೇ ಜೀವಂತ ಪ್ರಯೋಗಾಲಯವಾಗಿತ್ತು. ಆರೋವಿಲ್ಲೆ ಕೂಡಾ ಅಂತ್ಯರಹಿತವಾದ ಜೀವನ ಪರ್ಯಂತದ ಶಿಕ್ಷಣದ ಸ್ಥಳವಾಗಿ ಅಭಿವೃದ್ಧಿ ಹೊಂದಿದೆ’ ಎಂದು ಪ್ರಧಾನಿ ಬಣ್ಣಿಸಿದರು. ವಿಶ್ವವು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಭೌತಿಕ ಬೆಳವಣಿಗೆ ಹೊಂದುವಾಗ ಸಾಮಾಜಿಕ ವ್ಯವಸ್ಥೆ ಮತ್ತು ಸ್ಥಿರತೆಗಾಗಿ ಆಧ್ಯಾತ್ಮಿಕ ದೃಷ್ಟಿಕೋನವನ್ನು ಒದಗಿಸುವ ಅಗತ್ಯ ಹೆಚ್ಚುತ್ತಿದೆ ಎಂದು ಮೋದಿ ಹೇಳಿದರು.  ಶ್ರೀ ಅರವಿಂದರ ಭಾರತದ ಆಧ್ಯಾತ್ಮಿಕ ನಾಯಕತ್ವದ ದೃಷ್ಟಿಯು ಇಂದಿನ ದಿನಗಳಲ್ಲಿ ನಮಗೆ ಸ್ಫೂರ್ತಿಯನ್ನು ನೀಡುತ್ತದೆ. ಕಳೆದ ಐದು ದಶಕಗಳಿಂದ ಈ ದೃಷ್ಟಿಕೋನವನ್ನು ಪ್ರಸರಿಸುತ್ತಾ ಬಂದಿರುವ ಆರೋವಿಲ್ಲೆಯು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಆವಿಷ್ಕಾರದ ಆಡುಂಬೊಲವಾಗಿದೆ ಎಂದು ಪ್ರಧಾನಿ ನುಡಿದರು. ಮಾನವ ಮನಸ್ಸಿನೊಳಗಿನ ಗೋಡೆಗಳನ್ನು ತೊಡೆದುಹಾಕಿ ವಿಶ್ವಕ್ಕೆ ಬೆಳಕು ನೀಡುವ ಮತ್ತು ಅದರ ರಕ್ಷಕನಾಗಿ ಆರೋವಿಲ್ಲೆ ತನ್ನ ಸೇವೆಯನ್ನು ಮುಂದುವರೆಸಲಿ ಎಂದು ಮೋದಿ ಹಾರೈಸಿದರು. ಇದೇ ಸಂದರ್ಭದಲ್ಲಿ ಅಂಚೆ ಇಲಾಖೆಯು ಹೊರತಂದಿರುವ ಆರೋವಿಲ್ಲೆ ಕುರಿತ ಸ್ಮಾರಕ ಅಂಚೆಚೀಟಿ ಮತ್ತು ಸ್ವರ್ಣ ಮಹೋತ್ಸವ ಸ್ಮರಣ ಸಂಚಿಕೆಯನ್ನೂ ಪ್ರಧಾನಿ ಬಿಡುಗಡೆ ಮಾಡಿದರು.
2018: ಪುದುಚೆರಿ: ಒಂದು ಕುಟುಂಬ ದೇಶವನ್ನು ನಾಲ್ಕು ದಶಕಗಳ ಕಾಲ ಆಳ್ವಿಕೆ ಮಾಡಿತು ಎಂಬುದಾಗಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಿ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, ’ವಂಶಾಡಳಿತ ನೇತೃತ್ವದ ಸರ್ಕಾರಗಳ ಜೊತೆ ಅಭಿವೃದ್ಧಿ ಆಧಾರಿತವಾದ ಎನ್ ಡಿಎ ಸರ್ಕಾರವನ್ನು ಹೋಲಿಸಿ ನೋಡಿ ಎಂದು ಜನತೆಗೆ ಕರೆ ನೀಡಿದರು. ’ಒಂದು ಕುಟುಂಬ ನೇರವಾಗಿ ಅಥವಾ ಪರೋಕ್ಷವಾಗಿ ೪೮ ವರ್ಷಗಳ ಕಾಲ ದೇಶದ ಆಡಳಿತವನ್ನು ನಡೆಸಿದೆ.’ ಎಂದು ಬಿಜೆಪಿಯು ಇಲ್ಲಿ ಸಂಘಟಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ  ಪ್ರಧಾನಿ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸರ್ಕಾರಗಳನ್ನು ಉಲ್ಲೇಖಿಸಿದರು. ಇನ್ನೊಂದೆಡೆಯಲ್ಲಿ ಎನ್ ಡಿಎ ಸರ್ಕಾರ ಮೇ ತಿಂಗಳಲ್ಲಿ ೪೮ ತಿಂಗಳುಗಳನ್ನು ಪೂರೈಸಲಿದೆ ಎಂದು ನುಡಿದ ಪ್ರಧಾನಿ ’ಕಾಂಗ್ರೆಸ್ ಸರ್ಕಾರಗಳ ಕಾಲದಲ್ಲಿ ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಮಾಡಲಾಗಿರುವ ಸಾಧನೆಗಳ ನಡುವಣ ವ್ಯತ್ಯಾಸ ಏನು ಎಂದು ಬುದ್ಧಿಜೀವಿಗಳು ಚರ್ಚಿಸಲಿ’ ಎಂದು ಹೇಳಿದರು.  ಪುದುಚೆರಿಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೋದಿ ’ಕೇಂದ್ರಾಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶ ಅತ್ಯಂತ ದುರ್ಬಲ ಮೂಲಸವಲತ್ತುಗಳನ್ನು ಹೊಂದಿದ್ದು, ಕಾಂಗ್ರೆಸ್ ಸಂಸ್ಕೃತಿಯ ಬಲಿಪಶುವಾಗಿದೆ’ ಎಂದು ಟೀಕಿಸಿದರು.  ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿನ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಲಿದ್ದು, ಕಾಂಗ್ರೆಸ್ ಪಕ್ಷದ ಕೈಯಲ್ಲಿ ಪುದುಚೆರಿಯ ವಿ. ನಾರಾಯಣಸ್ವಾಮಿ ಅವರ ಏಕೈಕ ಸರ್ಕಾರ ಉಳಿಯಲಿದೆ ಎಂದು ಮೋದಿ ಒತ್ತಿ ಹೇಳಿದರು.  ಪ್ರಧಾನಿಯವರು ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬಿನ ಕಾಂಗ್ರೆಸ್ ಸರ್ಕಾರವನ್ನು ಪ್ರಸ್ತಾಪಿಸಲಿಲ್ಲ. ’ನಾನು ಪುದುಚೆರಿಯ ಮುಖ್ಯಮಂತ್ರಿಯನ್ನು ಅಭಿನಂದಿಸಬಯಸುತ್ತೇನೆ. ಏಕೆಂದರೆ ಜೂನ್ ತಿಂಗಳ ಬಳಿಕ ಕಾಂಗ್ರೆಸ್ ಪಕ್ಷವು ಅವರನ್ನು ’ಮಾದರಿ’ ಆಗಿ ಪ್ರದರ್ಶಿಸಲಿದೆ ಎಂದು ಹೇಳುವ ಮೂಲಕ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಪರಾಭವ ಅನುಭವಿಸಲಿದೆ ಎಂದು ಪ್ರಧಾನಿ ಭವಿಷ್ಯ ನುಡಿದರು.  ಪುದುಚೆರಿಯು ಅತ್ಯಂತ ದುರ್ಬಲ ಮೂಲಸವಲತ್ತುಗಳನ್ನು ಹೊಂದಿದೆ. ಸಾರಿಗೆ ಮತ್ತು ಸಹಕಾರದಂತಹ ಕ್ಷೇತ್ರಗಳು ಅವ್ಯವಸ್ಥೆಯ ಗೂಡುಗಳಾಗಿವೆ ಎಂದು ಮೋದಿ ಹೇಳಿದರು.  ಕಾಂಗ್ರೆಸ್ ಆಡಳಿತವು ಪುದುಚೆರಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ಪ್ರಧಾನಿ ಹೇಳಿದರು.
2018: ಜೈಪುರ: ತಮ್ಮ ವೇತನವನ್ನು ತಾವೇ ಹೆಚ್ಚಿಸಿಕೊಳ್ಳುವ ಜನಪ್ರತಿನಿಧಿಗಳ ಅಧಿಕಾರವನ್ನು ಉತ್ತರ ಪ್ರದೇಶ ಸುಲ್ತಾನ್‌ಪುರ ಕ್ಷೇತ್ರದ ಸಂಸದ ವರುಣ್ ಗಾಂಧಿ ಪುನಃ ಪ್ರಶ್ನಿಸಿದರು. ಜೈಪುರದ  ಕಾಲೇಜೊಂದರಲ್ಲಿ ಮಾತನಾಡಿದ ಅವರು, ‘ಕಳೆದ ಆರು ವರ್ಷಗಳಲ್ಲಿ ಸಂಸತ್ ಸದಸ್ಯರ ವೇತನವನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ. ೧೯೫೨ರಿಂದ ೧೯೭೨ರ ವರೆಗೆ ಸಂಸತ್ತು ವರ್ಷದಲ್ಲಿ ೧೫೦ ದಿನ ಕಾರ್ಯ ನಿರ್ವಹಿಸುತ್ತಿದ್ದರೆ, ಈಗ ಕೇವಲ ೫೦ ದಿನ ಕಾರ್ಯ ನಿರ್ವಹಿಸುತ್ತಿದೆ’ ಎಂದು ಹೇಳಿದರು. ‘ಯಾರೇ ಆಗಲಿ ತಮ್ಮ ವೇತನವನ್ನು ತಾವೇ ನಿರ್ಧರಿಸಬಹುದೇ?’ ಎಂದು ಪ್ರಶ್ನಿಸಿದ ವರುಣ್, ’ ಯಾವ ಆಧಾರದಲ್ಲಿ ಸಂಸದರು ಮತ್ತು ಶಾಸಕರು ಹೀಗೆ ತಮ್ಮ ವೇತನವನ್ನು ತಾವೇ ಏರಿಕೆ ಮಾಡಿಕೊಳ್ಳುತ್ತಾರೆ?’ ಎಂದು ಪ್ರಶ್ನಿಸಿದರು.  ಜನಪ್ರತಿನಿಧಿಗಳು ತಾವೇ ವೇತನ ಹೆಚ್ಚಿಸಿಕೊಳ್ಳುವುದಕ್ಕೆ ಈ ಹಿಂದೆಯೂ ಆಕ್ಷೇಪ ವ್ಯಕ್ತಪಡಿಸಿದ್ದ ವರುಣ್ ಗಾಂಧಿ, ಈ ಕ್ರಮ ಪ್ರಜಾಪ್ರಭುತ್ವದ ನೀತಿಗಳಿಗೆ ವಿರುದ್ಧವಾದದ್ದು ಎಂದು ಹೇಳಿದ್ದರು. ಕೆಲ ದಿನಗಳ ಹಿಂದೆ ’ಪ್ರಸಕ್ತ ಲೋಕಸಭೆಯ ಇನ್ನುಳಿದ ಅವಧಿಗೆ ಶ್ರೀಮಂತ ಸಂಸದರು ಸ್ವಯಂ ಪ್ರೇರಿತರಾಗಿ ವೇತನ ತ್ಯಜಿಸಬೇಕು. ಈ ಬಗ್ಗೆ ತಾವು ಮುಖಂಡತ್ವ ವಹಿಸಬೇಕು ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಸಂಸದ ವರುಣ್ ಗಾಂಧಿ ಪತ್ರ ಬರೆದಿದ್ದರು.  ಲೋಕಸಭೆಯ ಇನ್ನುಳಿದ ಅವಧಿಗೆ ಶ್ರೀಮಂತ ಸಂಸದರು ವೇತನವನ್ನು ತ್ಯಜಿಸಿ ಹೊಸ ಆಂದೋಲನಕ್ಕೆ ಸ್ವಯಂ ಪ್ರೇರಿತರಾಗಿ ಕೈ ಜೋಡಿಸಬೇಕು ಎಂದು ವರುಣ್ ಮನವಿ ಮಾಡಿದ್ದರು. ಸಂಸದರು ತೆಗೆದುಕೊಳ್ಳುವ ಸ್ವಯಂ ಪ್ರೇರಿತ ನಿರ್ಧಾರದಿಂದ ಚುನಾಯಿತ ಪ್ರತಿನಿಧಿಗಳ ಬಗ್ಗೆ ಸಮಾಜದಲ್ಲಿ ಸಕಾರಾತ್ಮಕ ಸಂದೇಶ ರವಾನೆಯಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದರು. ಇದಕ್ಕೆ ಮುನ್ನ ಬೆಂಗಳೂರಿನ ಕಾಲೇಜು ಒಂದರಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವರುಣ್ ಗಾಂಧಿ, ಶಾಸಕರು ಮತ್ತು ಸಂಸತ್ ಸದಸ್ಯರ ವೇತನ ಹೆಚ್ಚಳ ನಿರ್ಧರಿಸಲು ಸಾಂವಿಧಾನಿಕ ಸಮಿತಿ ಇರಬೇಕು ಎಂದು ಆಗ್ರಹಿಸಿದ್ದರು. ಪದೇಪದೇ ವೇತನ ಹೆಚ್ಚಿಸಿಕೊಳ್ಳುವುದು ಒಳ್ಳೆಯ ನಡೆಯಲ್ಲ. ಜೀವನ ನಿರ್ವಹಣೆಯನ್ನು ಗಮನದಲ್ಲಿ ಇಟ್ಟುಕೊಂಡು ವೇತನ ನಿರ್ಧರಿಸಬೇಕು. ಇದಕ್ಕಾಗಿ ಸಮಿತಿ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದರು.  ವೈದ್ಯ, ಎಂಜಿನಿಯರ್, ವಿಜ್ಞಾನಿ, ಶಿಕ್ಷಕರು, ರೈತರು ತಮ್ಮ ವೇತನವನ್ನು ನಿರ್ಧರಿಸಲು ಹಾಗೂ ಹೆಚ್ಚಿಕೊಳ್ಳಲು ಅವಕಾಶ ಇದೆಯೇ ಎಂದು ವರುಣ್ ಪ್ರಶ್ನಿಸಿದ್ದರು.

2017: ಹ್ಯೂಸ್ಟನ್: ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಕೈಗೊಳ್ಳುವ ಕ್ರಮಗಳೇನುಎಂದು ಕನ್ಸಾಸ್ನಲ್ಲಿ ಕೊಲೆಯಾದ ಎಂಜಿನಿಯರ್ ಶ್ರೀನಿವಾಸ ಕೂಚಿಬೊಟ್ಲಾ ಅವರ ಪತ್ನಿ ಸುನಯನಾ ದುಮಾಲಾ ಅಮೆರಿಕದ ಸರ್ಕಾರವನ್ನು ಪ್ರಶ್ನಿಸಿದರು. ಅಲ್ಪಸಂಖ್ಯಾತರ ಕುರಿತು ಅಮೆರಿಕ ದಲ್ಲಿ ಬೆಳೆಯುತ್ತಿರುವ ಪೂರ್ವಾಗ್ರಹಕ್ಕೆ ಸಂಬಂಧಿಸಿದ ವರದಿಗಳು ತಮ್ಮಲ್ಲಿ ಭಯ ಮೂಡಿಸುತ್ತಿವೆ ಎಂದು ಹೇಳಿದ ಅವರು, ‘ನಾವು ನಾಡಿಗೆ ಸೇರಿದವರು ಹೌದಾ ಎಂಬ ಪ್ರಶ್ನೆಗಳು ಮೂಡುತ್ತಿವೆಎಂದರು. ಗಾರ್ಮಿನ್ ಕಂಪೆನಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ದೇಶಕ್ಕೆ ಎಲ್ಲರೂಕೇಡು ಬಯಸುವುದಿಲ್ಲಎಂದೂ ಹೇಳಿದರು. ಗುಂಡಿನ ದಾಳಿ ಘಟನೆಗಳು ಕಳವಳ ಮೂಡಿಸುತ್ತಿವೆ. ತಮ್ಮ ಕುಟುಂಬ ಅಮೆರಿಕದಲ್ಲಿ ವಾಸ್ತವ್ಯ ಮುಂದುವರೆಸಬೇಕೇ ಎಂಬ ಪ್ರಶ್ನೆ ಮೊದಲೇ ಕಾಡಿತ್ತು. ಆದರೆ, ‘ಅಮೆರಿಕದಲ್ಲಿ ಒಳ್ಳೆಯದಾಗುತ್ತದೆ ಎಂದು ನನ್ನ ಪತಿ ಭರವಸೆ ನೀಡಿದ್ದರುಎಂದರು.  ಶ್ರೀನಿವಾಸ ಕೊಲೆ ಪ್ರಕರಣವು ವಲಸಿಗರಲ್ಲಿ ಭೀತಿ ಮೂಡಿಸಿದೆ. ಮೆಕ್ಸಿಕೊಅಮೆರಿಕ ಗಡಿಯಲ್ಲಿ ಗೋಡೆ ನಿರ್ಮಾಣ ಹಾಗೂ ಕೆಲವು ದೇಶಗಳ ಜನರಿಗೆ ಅಮೆರಿಕದ ವೀಸಾ ನೀಡದಿರುವ ಟ್ರಂಪ್ ಸರ್ಕಾರದ ನಿಲುವುಗಳು ತಮ್ಮನ್ನು ಗುರಿಯಾಗಿಸಿಕೊಂಡಿವೆ ಎಂಬುದು ಕೆಲವು ವಲಸಿಗರ ಭಾವನೆ.
2017: ವೆಲ್ಲಿಂಗ್ಟನ್: ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತಿ ಕಡಿಮೆ ಇನಿಂಗ್ಸ್ನಲ್ಲಿ 900 ಸಾವಿರ ರನ್ಪೂರೈಸಿದ ಶ್ರೇಯಕ್ಕೆ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿ ವಿಲಿಯರ್ಸ್ಪಾತ್ರರಾದರು. 9 ಸಾವಿರ ರನ್ಕಲೆಹಾಕಿದ ವಿಶ್ವದ 19ನೇಹಾಗೂ ದಕ್ಷಿಣ ಆಫ್ರಿಕಾದ 2ನೇ ಆಟಗಾರರಾದ ವಿಲಿಯರ್ಸ್‌. ಸಾಧನೆ ಮಾಡಲು ಅವರು ತೆಗೆದು ಕೊಂಡಿದ್ದು ಕೇವಲ 205 ಇನಿಂಗ್ಸ್ಗಳು. ಹಿಂದೆ ಭಾರತ ತಂಡದ ಮಾಜಿ ನಾಯಕ ಸೌರವ್ಗಂಗೂಲಿ ಅತಿ ಕಡಿಮೆ ಇನಿಂಗ್ಸ್ಗಳಲ್ಲಿ 9000ಸಾವಿರ ರನ್ಪೂರೈಸಿದ ದಾಖಲೆ ಹೊಂದಿದ್ದರು. ಅವರು 228 ಇನಿಂಗ್ಸ್ಗಳಲ್ಲಿ ಸಾಧನೆ ಮಾಡಿದ್ದರು. ಸದ್ಯ ನ್ಯೂಜಿಲೆಂಡ್ಪ್ರವಾಸದಲ್ಲಿರುವ ವಿಲಿಯರ್ಸ್ಮೂರನೇ ಏಕದಿನ ಪಂದ್ಯದಲ್ಲಿ ಐದು ರನ್ಗಳಿಸಿದ್ದ ವೇಳೆ ಸಾಧನೆ ಮಾಡಿದರು, ಜೊತೆಗೆ ಕೇವಲ 182 ಇನಿಂಗ್ಸ್ಗಳಲ್ಲಿ 8000ಸಾವಿರ ರನ್ಪೂರೈಸಿರುವ ವಿಲಿಯರ್ಸ್ವೇಗದ 8000ರನ್ಕಲೆಹಾಕಿದ ದಾಖಲೆಯನ್ನೂ ತಮ್ಮ ಹೆಸರಿನಲ್ಲಿಯೇ ಉಳಿಸಿಕೊಂಡರು. ಇವರ ಸಾಧನೆಗೆ ಸನಿಹವಿರುವ ಭಾರತ ತಂಡದ ನಾಯಕ ವಿರಾಟ್ಕೊಹ್ಲಿ 171 ಇನಿಂಗ್ಸ್ಗಳಲ್ಲಿ 7755ರನ್ಕಲೆಹಾಕಿದ್ದು, ವೇಗದ 8000 ಹಾಗೂ 9000ರನ್ಗಳಿಸಿ ದಾಖಲೆ ನಿರ್ಮಿಸಲು ಕ್ರಮವಾಗಿ 10  ಹಾಗೂ 34 ಇನಿಂಗ್ಸ್ಗಳ ಅಗತ್ಯ ಹೊಂದಿದ್ದಾರೆ.
2017: ಡೆಹ್ರಾಡೂನ್: ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಉತ್ತರಾಖಂಡದಲ್ಲಿ ಹರೀಶ್ ರಾವತ್ ಸರ್ಕಾರ ಹೊಸ ವಿವಾದವೊಂದರಲ್ಲಿ  ಸಿಲುಕಿತು. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಯಿಂದ ರಾವತ್ ಸರ್ಕಾರ ರೂ.47.19 ಲಕ್ಷ ನೀಡಿದೆ ಎಂಬ ಆರೋಪ ಕೇಳಿ ಬಂದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತು. 2015 ಜೂನ್ ತಿಂಗಳಲ್ಲಿ  ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಗಾಗಿ ಕೊಹ್ಲಿ  60 ಸೆಕೆಂಡ್ ಅವಧಿಯ ವಿಡಿಯೊವೊಂದರಲ್ಲಿ ನಟಿಸಿದ್ದರು. ಕೊಹ್ಲಿಯವರ ನಟನೆಗಾಗಿ ರಾವತ್ ಸರ್ಕಾರ 2013ರಲ್ಲಿ ಕೇದಾರನಾಥ್ ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ಮೀಸಲಿರಿಸಿದ ನಿಧಿಯಿಂದ ಹಣ ಪಾವತಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. 2013ರಲ್ಲಿ ಕೊಹ್ಲಿ ಉತ್ತರಾಖಂಡ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಬಿಜೆಪಿ ಕಾರ್ಯಕರ್ತರೊಬ್ಬರು ಆರ್ಟಿ ಮೂಲಕ ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರವನ್ನು ಉಲ್ಲೇಖಿಸಿ ಬಿಜೆಪಿ ಆರೋಪ ಮಾಡಿದೆ. ಆದರೆ ರೀತಿಯ ಹಣ ವಹಿವಾಟು ನಡೆದಿಲ್ಲ ಎಂದು ಕೊಹ್ಲಿ  ಅವರ ಏಜೆಂಟ್ ಬಂಟಿ ಸಜ್ದೇ ಹೇಳಿದರು. ಈ ಆರೋಪಗಳೆಲ್ಲವೂ ಆಧಾರರಹಿತವಾಗಿದೆ. ಕೇದಾರನಾಥ ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ಕಾಂಗ್ರೆಸ್ ಸರ್ಕಾರ ಯಾವ ರೀತಿ ಮುತುವರ್ಜಿ ವಹಿಸಿದೆ ಎಂಬುದು ಜನರಿಗೆ ತಿಳಿದಿದೆ. ಬಿಜೆಪಿಗೆ ಚುನಾವಣೆಯಲ್ಲಿ ಸೋಲು ಖಚಿತ. ನಿರಾಸೆಯಿಂದಾಗಿಯೇ ಬಿಜೆಪಿ ರೀತಿಯ ಆರೋಪ ಮಾಡುತ್ತಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಮಾಧ್ಯಮ ಸಲಹೆಗಾರ  ಸುರೇಂದ್ರ ಕುಮಾರ್ ಪ್ರತಿಕ್ರಿಯಿಸಿದರು.
2017: ನವದೆಹಲಿ: ಲಿಬಿಯಾದಲ್ಲಿ ಐಸಿಸ್ ಉಗ್ರರಿಂದ ಅಪಹೃತಗೊಂಡಿದ್ದ ಭಾರತೀಯ ವೈದ್ಯನನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದರು. ಇಸ್ಲಾಮಿಕ್ ಸ್ಟೇಟ್ ಉಗ್ರರ ವಶದಿಂದ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯವರಾದ ಡಾ. ರಾಮಮೂರ್ತಿ ಕೊಸನಂ ಎಂಬುವವರನ್ನು ರಕ್ಷಿಸಲಾಗಿದ್ದು, ವೇಳೆ ವೈದ್ಯರಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಶೀಘ್ರದಲ್ಲೇ ವೈದ್ಯರನ್ನು ತವರಿಗೆ ಕರೆತರಲಾಗುವುದು ಎಂದು ಸುಷ್ಮಾ ತಿಳಿಸಿದ್ದಾರೆ. ಲಿಬಿಯಾದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಕೋಸನಂ ಅವರನ್ನು 18 ತಿಂಗಳ ಹಿಂದೆ ಐಸಿಸ್ ಉಗ್ರರು ಅಪಹರಣ ಮಾಡಿದ್ದರು. ವಿದೇಶದಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ತುರ್ತು ಸೇವೆಗೆ madad.gov.inನಲ್ಲಿ ಹೆಸರು ನೋಂದಾಯಿಸಲು ವಿದೇಶಾಂಗ ಸಚಿವಾಲಯ ಕೋರಿತು.
2017: ವಾಷಿಂಗ್ಟನ್: ಬಾಕ್ಸಿಂಗ್ ದಂತಕತೆ ಮೊಹಮ್ಮದ್ ಅಲಿ ಅವರ ಮಗ ಮೊಹಮ್ಮದ್ ಅಲಿ ಜೂನಿಯರ್ ಅವರನ್ನು ಅಮೆರಿಕದ ಫ್ಲಾರಿಡಾ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಸುಮಾರು 2 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿತು. ಅಮೆರಿಕದ ಫಿಲಡೆಲ್ಫಿಯಾದಲ್ಲಿ ಜನಿಸಿದ ಮೊಹಮ್ಮದ್ ಅಲಿ ಜೂನಿಯರ್ ಅಮೆರಿಕದ ಪಾಸ್ಪೋರ್ಟ್ ಹೊಂದಿದ್ದರು. ಫೆಬ್ರವರಿ 7 ರಂದು ಮೊಹಮ್ಮದ್ ಅಲಿ ಜೂನಿಯರ್ ತಮ್ಮ ತಾಯಿ ಖಲೀಲಾಹ್ ಕಮಾಚೋ ಅಲಿ ಅವರೊಂದಿಗೆ ಫ್ಲಾರಿಡಾ ಏರ್ಪೋರ್ಟ್ಗೆ ಬಂದಿಳಿದಿದ್ದರು.  ಆದರೆ ಇವರು ಮುಸ್ಲಿಮ್  ಹೆಸರು ಹೊಂದಿದ್ದ ಕಾರಣದಿಂದ ಏರ್ಪೋರ್ಟ್ ಭದ್ರತಾ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದರು. ಖಲೀಲಾಹ್ ತಾವು ಮೊಹಮ್ಮದ್ ಅಲಿ ಅವರೊಂದಿಗೆ ಇದ್ದ ಫೋಟೋ ತೋರಿಸಿ ಭದ್ರತಾ ಅಧಿಕಾರಿಗಳ ಕೊಠಡಿಯಿಂದ ಹೊರಬಂದರು.  ಆದರೆ ಮಹಮ್ಮದ್ ಅಲಿ ಜೂನಿಯರ್ ಅವರ ಬಳಿ ಇಂತಹ ಯಾವುದೇ ಫೋಟೋ ಇರಲಿಲ್ಲ. ಹಾಗಾಗಿ ಅವರನ್ನು ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ಖಲೀಲಾಹ್ ಪರ ವಕೀಲರು ತಿಳಿಸಿದರು.

2009: ದೇಶವನ್ನೇ ನಡುಗಿಸಿದ ಮುಂಬೈ ದಾಳಿ ಘಟನೆಯಲ್ಲಿ ಜೀವಂತವಾಗಿ ಸೆರೆಸಿಕ್ಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಉರುಫ್ ಕಸಾಬ್ ವಿರುದ್ಧ ಮುಂಬೈ ಪೊಲೀಸರು 11,280 ಪುಟಗಳ ಸುದೀರ್ಘ ಆರೋಪಪಟ್ಟಿ ಸಲ್ಲಿಸಿದರು. ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ (ಸಿಟಿಎಸ್) ಕೂಗಳತೆಯ ದೂರದಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಈ ಆರೋಪಪಟ್ಟಿ ಸಲ್ಲಿಸಿದರು. ಈ ಬೃಹತ್ ಆರೋಪಪಟ್ಟಿ ಸಲ್ಲಿಕೆಯಿಂದ ಭಯೋತ್ಪಾದನೆ ಘಟನೆಗೆ ಸಂಬಂಧಿಸಿದಂತೆ ಮೊದಲ ಹಂತದ ತನಿಖೆ ಪೂರ್ಣಗೊಂಡಂತಾಯಿತು. ಕಸಾಬ್ ಹೊರತಾಗಿ ಬಂಧಿತ ಲಷ್ಕರ್ ಉಗ್ರರಾದ ಫಾಹಿಮ್ ಅನ್ಸಾರಿ ಹಾಗೂ ಸಲಾವುದ್ದೀನ್ ಮೊಹಮ್ಮದ್ ಸೇರಿದಂತೆ 19 ಆರೋಪಿಗಳ ಹೆಸರುಗಳು ಆರೋಪಪಟ್ಟಿಯಲ್ಲಿ ಇವೆ. ಆರೋಪಪಟ್ಟಿಯನ್ನು ಇಂಗ್ಲಿಷ್, ಮರಾಠಿ ಹಾಗೂ ಉರ್ದು ಭಾಷೆಯಲ್ಲಿ ಸಲ್ಲಿಸಲಾಯಿತು. ಆದರೆ, ಕಸಾಬ್‌ನ ತಪ್ಪೊಪ್ಪಿಗೆ ಹೇಳಿಕೆಯನ್ನು ಪೊಲೀಸರು ನ್ಯಾಯಾಲಯದಿಂದ ಪಡೆಯದ ಕಾರಣ ಇದರಲ್ಲಿ ಸೇರಿಸಲಿಲ್ಲ ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಹೇಳಿದರು.

2009: ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಆದಾಯ ಮೂಲ ಮೀರಿದ ಆಸ್ತಿ ಸಂಗ್ರಹಿಸಿದ್ದಕ್ಕಾಗಿ ಕೇಂದ್ರದ ಮಾಜಿ ಸಚಿವ ಸುಖರಾಮ್‌ಗೆ ಸಿಬಿಐ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತು. ಜೈಲು ಶಿಕ್ಷೆ ಜೊತೆಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ ನ್ಯಾಯಾಲಯ, 4.25 ಕೋಟಿ ರೂಪಾಯಿ ಮೌಲ್ಯದ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶ ನೀಡಿತು. ತಲಾ 50,000 ರೂಪಾಯಿಗಳ ಬಾಂಡ್ ಹಾಗೂ ಭದ್ರತಾ ಠೇವಣಿಯನ್ನು ಕೋರ್ಟ್‌ಗೆ ಸಲ್ಲಿಸಿದ ನಂತರ ವಿಶೇಷ ಸಿಬಿಐ ನ್ಯಾಯಾಧೀಶ ವಿ.ಕೆ. ಮಹೇಶ್ವರಿ 82 ವರ್ಷದ ಈ ಕಾಂಗ್ರೆಸ್ ನಾಯಕನಿಗೆ ಜಾಮೀನು ನೀಡಿದರು. ಆದಾಯ ಮೂಲ ಮೀರಿದ ಆಸ್ತಿ ಸಂಗ್ರಹಿಸಿದ್ದಕ್ಕಾಗಿ ಸಿಬಿಐ 1996ರ ಆಗಸ್ಟ್ 27ರಂದು ಸುಖರಾಮ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಸುಖರಾಮ್ ಅವರ ದೆಹಲಿ ಬಂಗ್ಲೆ ಹಾಗೂ ಹಿಮಾಚಲ ಪ್ರದೇಶದಲ್ಲಿರುವ ಮನೆಗಳ ಮೇಲೆ 1996ರ ಆಗಸ್ಟ್ 16ರಂದು ದಾಳಿ ನಡೆಸಲಾಗಿತ್ತು.

2009: ಢಾಕಾದಲ್ಲಿನ ಬಾಂಗ್ಲಾದೇಶ ಅರೆಸೇನಾ ರೈಫಲ್ಸ್ ಪಡೆ (ಬಿಡಿಆರ್)ಯ ಮುಖ್ಯ ಕೇಂದ್ರದಲ್ಲಿ ಯೋಧರು ಅಧಿಕಾರಿಗಳ ವಿರುದ್ಧ ತೀವ್ರ ಬಂಡಾಯ ಎದ್ದ ಪರಿಣಾಮವಾಗಿ ಪರಸ್ಪರ ಗುಂಡಿನ ಕಾಳಗ ನಡೆಯಿತು. ಪಡೆಯ ವಾರ್ಷಿಕ ಸಮ್ಮೇಳನದಲ್ಲಿ ಮಹಾನಿರ್ದೇಶಕರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಯೋಧರು ಏಕಾಏಕಿ ಗುಂಡು ಹಾರಿಸಿ ಹಲವಾರು ಹಿರಿಯ ಅಧಿಕಾರಿಗಳನ್ನು ಕೊಂದು ಹಾಕಿದರು ಎಂದು ಹೇಳಲಾಯಿತು. ಕೇಂದ್ರದ ಹೊರಭಾಗದಲ್ಲೂ ಯೋಧರು ನಡೆಸಿದ ಗುಂಡಿನ ಸುರಿಮಳೆಗೆ ಒಬ್ಬ ನಾಗರಿಕ ಮೃತನಾಗಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡರು. ಕೆಲವು ಸೈನಿಕರು ಸೇನಾ ಸಂಕೀರ್ಣಕ್ಕೆ ಬೆಂಕಿ ಹಚ್ಚಿ ಪಕ್ಕದ ವಾಣಿಜ್ಯ ಸಂಕೀರ್ಣಕ್ಕೂ ಮುತ್ತಿಗೆ ಹಾಕಿದರು.

2009: ಲೋಕಸಭಾ ಚುನಾವಣೆಗೆ ವಿವಿಧ ಪಕ್ಷಗಳು ಭರದ ಸಿದ್ಧತೆ ಆರಂಭಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಚುನಾವಣಾ ತಂತ್ರ ನಿರೂಪಣೆಗೆ ಹೆಚ್ಚಿನ ಸಮಯ ಮೀಸಲಿಡುವ ಉದ್ದೇಶದಿಂದ ಕೇಂದ್ರ ಮಂತ್ರಿ ಜೈರಾಮ್ ರಮೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಲಿ ಆಂಧ್ರಪ್ರದೇಶದ ರಾಜ್ಯಸಭಾ ಸದಸ್ಯರೂ ಆದ 54 ವರ್ಷದ ರಮೇಶ್ ವಾಣಿಜ್ಯ ಮತ್ತು ಇಂಧನ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ಪಕ್ಷದ ಸೂಚನೆಯಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದರು.

2009: ದೋಡಾ ಜಿಲ್ಲೆಯ ನೇರು ನದಿಗೆ ಬಸ್ ಉರುಳಿ 35 ಪ್ರಯಾಣಿಕರು ಮೃತರಾಗಿ 13 ಜನರು ಗಾಯಗೊಂಡ ಘಟನೆ ಸಂಭವಿಸಿತು. ನತ್ತಿ-ಗಲಗಾಂಧರ್ ಸಮೀಪ ಬೆಳಿಗ್ಗೆ 8.15 ಕ್ಕೆ ಬಸ್ಸು ರಸ್ತೆಯ ಮೇಲೆ ನಿಯಂತ್ರಣ ಕಳೆದುಕೊಂಡು ನದಿಗೆ ಬಿತ್ತು.


2009: ಪಾಕಿಸ್ಥಾನದ ವಿರೋಧ ಪಕ್ಷ ಪಿಎಂಎಲ್-ಎನ್‌ನ ನಾಯಕ ನವಾಜ್ ಷರೀಫ್ ಅವರನ್ನು ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಿದ ಕೆಳ ನ್ಯಾಯಾಲಯದ ತೀರ್ಪನ್ನು ಪಾಕಿಸ್ಥಾನ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಷರೀಫ್ ಅವರ ಸಹೋದರ ಶಾಬಾಜ್ ಷರೀಫ್ ಅವರ ವಿಷಯದಲ್ಲೂ ಇದೇ ಬಗೆಯ ತೀರ್ಪು ಹೊರಬಿದ್ದಿತು. ಇದರಿಂದ ದೇಶದ ಅತ್ಯಂತ ಜನಪ್ರಿಯ ಪ್ರದೇಶವಾಗಿರುವ ಪಂಜಾಬ್‌ನ ಮುಖ್ಯಮಂತ್ರಿ ಸ್ಥಾನದಿಂದ ಶಾಬಾಜ್ ಷರೀಫ್ ಅವರು ಕೆಳಗಿಳಿಯುವುದು ಅನಿವಾರ್ಯವಾಯಿತು.

2009: ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಸೇರಿದಂತೆ ಎಂಟು ಮಂದಿ ಮಹಿಳೆಯರು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಆರು ಸಂಸ್ಥೆಗಳನ್ನು ರಾಜ್ಯ ಸರ್ಕಾರವು 'ಕಿತ್ತೂರು ರಾಣಿ ಚನ್ನಮ್ಮ' ಪ್ರಶಸ್ತಿಗೆ ಆಯ್ಕೆ ಮಾಡಿತು. ಮಹಿಳಾ ಅಭಿವೃದ್ಧಿ, ಕಲೆ, ಕ್ರೀಡೆ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಎಂಟು ಮಂದಿ ಮಹಿಳೆಯರಿಗೆ ತಲಾ ರೂ 10 ಸಾವಿರ ನಗದು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಆರು ಸಂಸ್ಥೆಗಳಿಗೆ ತಲಾ ರೂ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ವಿವರಿಸಿದರು. ಮಹಿಳೆಯರ ಹೆಸರು: ಹುಲಿಗೆಮ್ಮ-ಬಳ್ಳಾರಿ; ಲೋಕೇಶ್ವರಿ ವಿನಯಚಂದ್ರ- ದಕ್ಷಿಣ ಕನ್ನಡ; ವಿಜಯ ವಿಷ್ಣುಭಟ್- ಕೊಡಗು; ಅನ್ನಪೂರ್ಣ ವೆಂಕಟ ನಂಜಪ್ಪ- ತುಮಕೂರು; ಮೀರಾ ಶಿವಲಿಂಗಯ್ಯ- ಮಂಡ್ಯ; ವಿದ್ಯಾ ಎಸ್.ವಾರೇಕರ್- ತುಮಕೂರು; ಸುವರ್ಣ ಸಂಬು ಬಡಿಗೇರ್- ರಾಯಭಾಗ. ಸಂಸ್ಥೆಗಳು: ಶಂಕರಿ ಬಳಗ- ಬೆಂಗಳೂರು; ಎಸ್.ಜೆ.ಎಂ ವಿದ್ಯಾಪೀಠ- ಚಿತ್ರದುರ್ಗ; ಸ್ವಯಂ ಉದ್ಯೋಗ ತರಬೇತಿ ಘಟಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ- ಗದಗ; ಸುರಕ್ಷಿತ ಮಹಿಳೆಯರ ಮತ್ತು ಮಕ್ಕಳ ವಿವಿಧೋದ್ದೇಶ ಕಲ್ಯಾಣ ಸಾಂಸ್ಕೃತಿಕ ಸಾಮಾಜಿಕ ದತ್ತಿ ಸಂಘ- ಹಾಸನ; ವಿನೂತನ ಶಿಕ್ಷಣ ಸೇವಾ ಸಂಸ್ಥೆ-ಕೊಪ್ಪಳ; ಸರ್ಚ್ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆ- ಬಾಗಲಕೋಟೆ. ಸ್ತ್ರೀಶಕ್ತಿ ಗುಂಪುಗಳಿಗೆ: ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ರಾಜ್ಯದ ಮೂರು ಸ್ತ್ರೀಶಕ್ತಿ ಗುಂಪುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು: ಮೊದಲ ಅತ್ಯುತ್ತಮ ಸ್ತ್ರೀಶಕ್ತಿ ಗುಂಪಾದ ಪುತ್ತೂರು ತಾಲ್ಲೂಕಿನ ದೀಕ್ಷಾ ಸ್ತ್ರೀಶಕ್ತಿ ಗುಂಪು, 2ನೇ ಅತ್ಯುತ್ತಮ ಸಂಸ್ಥೆಯಾಗಿ ಬಳ್ಳಾರಿ ಜಿಲ್ಲೆಯ ದುರ್ಗಾಂಬಿಕ ಸ್ತ್ರೀ ಶಕ್ತಿ ಗುಂಪು, ಮತ್ತು 3ನೇ ಅತ್ಯುತ್ತಮ ಸಂಸ್ಥೆಯಾಗಿ ಹಾಸನ ಜಿಲ್ಲೆಯ ಧನಲಕ್ಷ್ಮಿ ಸ್ತ್ರೀ ಶಕ್ತಿ ಗುಂಪು.

2008: ಹಾಲಿವುಡ್ಡಿನ ಕೊಡಕ್ ಥಿಯೇಟರಿನಲ್ಲಿ ನಡೆದ ಎಂಬತ್ತನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಿರ್ದೇಶನಕ್ಕಾಗಿ (ಗೋಯೆನ್ ಬ್ರದರ್ಸ್) ನೀಡಲಾಗುವ `ಆಸ್ಕರ್ ಪ್ರಶಸ್ತಿ'ಗಳನ್ನು `ನೋ ಕಂಟ್ರಿ ಫಾರ್ ಓಲ್ಡ್ ಮೆನ್' ಚಿತ್ರವು ಗೆದ್ದುಕೊಂಡಿತು. ಈ ಚಿತ್ರವು `ಆಸ್ಕರ್' ಚಲನಚಿತ್ರ ಪ್ರಶಸ್ತಿಗಳ ಪೈಕಿ ನಾಲ್ಕನ್ನು ತನ್ನದಾಗಿಸಿಕೊಂಡು ವಿಜೃಂಭಿಸಿತು. ಎರಡನೇ ಅತ್ಯುತ್ತಮ ನಟ ಪ್ರಶಸ್ತಿಯು `ದೇರ್ ವಿಲ್ ಬಿ ಬ್ಲಡ್' ಚಿತ್ರದ ನಟನೆಗಾಗಿ ಡೇನಿಯಲ್ ಡೇ -ಲೆವಿಸ್ ಅವರಿಗೆ ಲಭಿಸಿದರೆ, `ಲಾ ವೀ ಎನ್ ರೋಸ್'ದ ನಟನೆಗಾಗಿ ನಟಿ ಮಾರಿಯೋನ್ ಕೊಟಿಲ್ಲಾಡ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ಅತ್ಯುತ್ತಮ ಚೊಚ್ಚಲ ನಟನೆಗಾಗಿ ನೀಡಲಾಗುವ ಪ್ರಶಸ್ತಿಯು ಸ್ಪೇನಿನ ಜೇವಿಯರ್ ಬಾರ್ಡೆಮ್ ಅವರಿಗೆ ಲಭಿಸಿದ್ದು ಸ್ಪೇನಿಗೆ ಮೊತ್ತ ಮೊದಲ ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟಿತು. `ನೋ ಕಂಟ್ರಿ ಫಾರ್ ಓಲ್ಡ್ ಮೆನ್' ಚಿತ್ರದಲ್ಲಿನ ನಟನೆ ಅವರಿಗೆ ಈ ಪ್ರಶಸ್ತಿಯನ್ನು ತಂದುಕೊಟ್ಟತು. ಡೇನಿಯಲ್ ಡೇ ಲೆವಿಸ್ ಅವರು `ದೇರ್ ವಿಲ್ ಬಿ ಬ್ಲಡ್' ಚಿತ್ರದ ತೈಲ ದೊರೆಯ ಪಾತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮ ಹೆಗಲಿಗೆ ಏರಿಸಿಕೊಂಡರು. ಈ ಪಾತ್ರವು ಅವರಿಗೆ ಈ ಮೊದಲೇ `ಗೋಲ್ಡನ್ ಗ್ಲೋಬ್' ಮತ್ತು `ಬಾಫ್ಟಾ' ಪ್ರಶಸ್ತಿಗಳನ್ನು ತಂದು ಕೊಟ್ಟಿತ್ತು. 32ರ ಹರೆಯದ ಫ್ರಾನ್ಸ್ನ ನಟಿ ಮಾರಿಯೋನ್ ಕೊಟಿಲ್ಲಾಡ್ ಅವರು `ಲಾ ವೀ ಎನ್ ರೋಸ್' ಚಿತ್ರದಲ್ಲಿನ ತಮ್ಮ ದುರಂತ ಪಾತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ 1960ರ ಬಳಿಕ ಅತ್ಯುತ್ತಮ ಆಸ್ಕರ್ ಪ್ರಶಸ್ತಿ ಗೆದ್ದ ಫ್ರಾನ್ಸಿನ ಪ್ರಪ್ರಥಮ ನಟಿ ಎಂಬ ಹೆಗ್ಗಳಿಕೆ ಅವರದಾಯಿತು. 1960ರಲ್ಲಿ ಫ್ರಾನ್ಸಿನ ಸೀಮೋನೆ ಸಿಗ್ನೊರೆಟ್ ಈ ಪ್ರಶಸ್ತಿ ಗೆದ್ದಿದ್ದರು. ಅತ್ಯುತ್ತಮ ಅನಿಮೇಶನ್ ಚಿತ್ರಕ್ಕೆ ನೀಡಲಾಗುವ ಪ್ರಶಸ್ತಿಯು ಪಿಕ್ಸರ್-ಡಿಸ್ನಿ ಚಿತ್ರ `ರಟಟೌಯಿಲ್' ಚಿತ್ರಕ್ಕೆ ಲಭಿಸಿತು.

2008: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಜುಲೈ ತಿಂಗಳಲ್ಲಿ ಆಯ್ಕೆಯಾದ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಜಂಟಿಸದನಗಳನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದರು. 50 ನಿಮಿಷ ಅವಧಿಯಲ್ಲಿ 19 ಪುಟಗಳ ಅವರ ಲಿಖಿತ ಭಾಷಣವನ್ನು ಅತಿ ಗಣ್ಯರ ಗ್ಯಾಲರಿಯಲ್ಲಿ ಕುಳಿತ ಅವರ ಪತಿ ದೇವಿ ಸಿಂಗ್ ಶೆಖಾವತ್ ಅವರೂ ಆಲಿಸಿದರು.

2008: ಅರಬ್ಬಿ ಸಮುದ್ರದ ಸುಪ್ತ ದ್ವೀಪಗಳಲ್ಲಿ ಆಶ್ರಯ ಪಡೆದು ಕರ್ನಾಟಕ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆಗಳು ಹವಣಿಸುತ್ತಿವೆ ಎಂದು ರಾಜ್ಯದ ಪೊಲೀಸ್ ಇಲಾಖೆ ಮತ್ತು ಕರಾವಳಿ ರಕ್ಷಣಾ ಪಡೆಗೆ ಕೇಂದ್ರ ಗುಪ್ತಚರ ಇಲಾಖೆ ತಿಳಿಸಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಇರುವ ದ್ವೀಪಗಳಲ್ಲಿ ಸುಮಾರು 26 ದ್ವೀಪಗಳನ್ನು ಉಗ್ರರು ತಮ್ಮ ನೆಲೆಯಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಮಾರಕಾಸ್ತ್ರಗಳನ್ನು ಬಚ್ಚಿಡಲು ಅವರು ಸಿದ್ಧತೆ ನಡೆಸಿದ್ದು, ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿತು.

2008: ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ ಸಿಓಡಿ ಪೊಲೀಸರು ಮತ್ತೊಬ್ಬ ಶಂಕಿತ ಉಗ್ರ ಸೈಯದ್ ಸಾದಿಕ್ ಸಮೀರ್ ಎಂಬಾತನನ್ನು ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ಬಂಧಿಸಿದರು.

2008: ಮುಳ್ಳೇರಿಯಾ ಸಮೀಪದ ಕೋಟೂರು ಎರಿಂಜೇರಿಯ ಚೆಂಡೆಮೂಲೆಯ ಸುಧಾಮ ಮಣಿಯಾಣಿ (69) ಎಂಬುವವರು ಮನೆಯ ಸಮೀಪದ ಸುರಂಗವೊಂದರ ಕೆಸರಿನಲ್ಲಿ ಸಿಲುಕಿಕೊಂಡು ಅದೃಷ್ಟವಶಾತ್ ಬದುಕಿ ಬಂದರು.
ತಮ್ಮ ಮನೆಯ ಹಿತ್ತಲಿನಲ್ಲಿರುವ ಸುರಂಗದಿಂದ ಕೃಷಿಗೆ ಸಾಕಾಗುವಷ್ಟು ನೀರು ಹರಿಯುತ್ತಿಲ್ಲ ಎಂದು, ನೀರಿನ ಹರಿಯುವಿಕೆಗೆ ಅಡ್ಡವಾಗುವ ಕಸಕಡ್ಡಿಗಳನ್ನು ತೆಗೆಯಲು ಸುರಂಗ ಪ್ರವೇಶಿಸಿದರು. ನಂತರ ಸುರಂಗದಲ್ಲಿನ ಕೆಸರಿನಲ್ಲಿ ಹೂತು ಹೋದರು. ಒಳ ಹೋದ ಸುಧಾಮರು ಎರಡು ಗಂಟೆಯಾದರೂ ಹೊರಬಾರದಿರುವುದನ್ನು ಗಮನಿಸಿದ ಅವರ ಮಕ್ಕಳು, ಕೂಡಲೇ ಅಪಾಯವನ್ನರಿತು ಸುರಂಗದ ಒಳ ಪ್ರವೇಶಿಸಿದರು. ಒಳಗೆ ಕುತ್ತಿಗೆ ತನಕ ಕೆಸರಿನಲ್ಲಿ ಹೂತು ಹೋಗಿದ್ದ ತಂದೆಯನ್ನು ಕಂಡು ದಿಗಿಲಿನಿಂದ ಊರವರಿಗೆ ವಿಷಯ ತಿಳಿಸಿದರು. ನಂತರ ಪಾತನಡ್ಕದ ಸುರಂಗ ಕಾಮಗಾರಿ ಪ್ರವೀಣರಾದ ಚರಳಿಮೂಲೆ ಕೃಷ್ಣ ನಾಯ್ಕ ಹಾಗೂ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಧಾಮ ಮಣಿಯಾಣಿ ಬದುಕಿ ಬಂದರು. ಏಕ ಮುಖವಾಗಿದ್ದ ಸುಮಾರು 80 ಮೀಟರ್ ಆಳದ ಸುರಂಗದೊಳಗೆ ಕುತ್ತಿಗೆ ತನಕ ಹೂತು ಹೋಗಿದ್ದ ಸುಧಾಮರು ಸುರಕ್ಷಿತವಾಗಿ ಹೊರ ಬಂದಾಗ ರಾತ್ರಿಯಾಗಿತ್ತು. ಸುಮಾರು ಐದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಉಸಿರಾಟಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಗ್ನಿಶಾಮಕ ದಳದ ಮನೋಜ್ ಹಾಗೂ ರಜೀಶ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

2008: ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಅಮೆರಿಕದ ಪ್ರಜೆ ನವಜೀತ್ ಕೇ. ಬಾಲ್ ಎಂಬ ಮಹಿಳೆ ಮೆಸಾಚುಸೆಟ್ಸಿನ ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು. ಅಮೆರಿಕದಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬರು ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ನೇಮಕವಾದದ್ದು ಇದೇ ಪ್ರಥಮ.

2008: ಅನುಚಿತ ವರ್ತನೆ ತೋರಿದ ಕಾರಣಕ್ಕಾಗಿ ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮ ಮೇಲೆ ಹೊಬಾರ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫರಿ ಜೆಫ್ ಕ್ರೋವ್ ಪಂದ್ಯ ಸಂಭಾವನೆಯ ಶೇಕಡಾ ಹದಿನೈದರಷ್ಟು ಮೊತ್ತದ ದಂಡ ವಿಧಿಸಿದರು. ಆದರೆ ಮಹೇಂದ್ರ ಸಿಂಗ್ ದೋನಿ ಬಳಗವು ಕ್ರೋವ್ ಈ ತೀರ್ಮಾನವನ್ನು ಆಕ್ಷೇಪಿಸಿತು. ಇಶಾಂತ್ ಆ ರೀತಿಯಲ್ಲಿ ವರ್ತಿಸಿದ್ದು ಎದುರಾಳಿ ಪಡೆಯವರು ಕೀಟಲೆ ಮಾಡಿ ಕೆಣಕಿದ್ದರಿಂದ ಎಂದು ಪ್ರತಿದೂರು ಕೂಡ ನೀಡಿತು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕರ್ನಾಟಕದ ಗುಲ್ಬರ್ಗದಿಂದ 12 ಕಿ.ಮೀ. ದೂರದ ಸರಡಗಿ ಗ್ರಾಮದಲ್ಲಿ ತಮ್ಮ ಕನಸಿನ ಕೂಸಾದ ಸುವರ್ಣ ಗ್ರಾಮೋದಯ ಯೋಜನೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

2007: ಭದ್ರಾವತಿಯ ಬೈಪಾಸ್ ರಸೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿದಂತೆ 9 ಮಂದಿ ಮೃತರಾದರು. ಮಾರುತಿ ವ್ಯಾನ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿತು.

2007: ಪಾನ್ ಮಸಾಲ ಖ್ಯಾತಿಯ ಮಾಣಿಕ್ ಚಂದ್ ಸಮೂಹವು ತನ್ನ ಕುಡಿಯುವ ನೀರು ಬ್ರ್ಯಾಂಡ್ ಉತ್ಪನ್ನವಾದ `ಆಕ್ಸಿರಿಚ್'ನ ಆಮ್ಲಜನಕೀಕರಣ ಪ್ರಕ್ರಿಯೆಗೆ ಭಾರತೀಯ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಂಡಿತು. ಮಾಣಿಕ್ ಚಂದ್ ಸಮೂಹದ ಅಧ್ಯಕ್ಷ ರಸಿಕ್ ಲಾಲ್ ಮಾಣಿಕ್ ಚಂದ್ ಧಾರಿವಾಲ್ ಅವರು ಬೆಂಗಳೂರಿನಲ್ಲಿ ಈ ವಿಚಾರ ಪ್ರಕಟಿಸಿದರು. ವಿಶೇಷ ತಂತ್ರಜ್ಞಾನದ ಮೂಲಕ ಈ ನೀರಿನಲ್ಲಿ ಶೇಕಡಾ 300ರಷ್ಟು ಕರಗಿದ ಆಮ್ಲಜನಕವನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ. ಈ ತಂತ್ರಜ್ಞಾನದ ಬಳಕೆ ಇದೇ ಪ್ರಥಮ. ಹಾಗಾಗಿ ಇದರ ಮೇಲೆ ಪೇಟೆಂಟ್ ಪಡೆಯಲಾಯಿತು.

2006: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದ ಮಧ್ಯಭಾಗದ ಆರು ಮಹಡಿಯ ಕಟ್ಟಡ ಕುಸಿದು ಕನಿಷ್ಠ 16 ಮಂದಿ ಮೃತರಾಗಿ ಇತರ ಹಲವರು ಅವಶೇಷಗಳ ಅಡಿ ಸಿಲುಕಿದರು.

2006: `ಬ್ಲ್ಯಾಕ್' ಮತ್ತು `ಪರಿಣೀತಾ' ತಾಂತ್ರಿಕ ವರ್ಗದ ಫಿಲ್ಮಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡವು. ಉತ್ತಮ ನಟ ಪ್ರಶಸ್ತಿ ಅಮಿತಾಭ್ ಬಚ್ಚನ್ ಅವರಿಗೂ ಉತ್ತಮ ನಟಿ ಪ್ರಶಸ್ತಿ ರಾಣಿ ಮುಖರ್ಜಿ ಅವರಿಗೂ ಲಭಿಸಿತು.

2005: ನೋಬೆಲ್ ಪ್ರಶಸ್ತಿ ವಿಜೇತ ಮಾನವ ಹಕ್ಕುಗಳ ಸಂಘಟನೆ `ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸ್ಥಾಪಕ ಪೀಟರ್ ಬೆನೆನ್ಸನ್ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

2001: ಜಗತ್ತಿನ ಖ್ಯಾತ ಬ್ಯಾಟ್ಸ್ ಮನ್ ಎಂದು ಹೆಸರು ಪಡೆದ ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ (1908-2001) ನಿಧನರಾದರು. ಸರಾಸರಿ 99.94 ರನ್ನುಗಳು, 10 ದ್ವಿಶತಕಗಳು, ಎರಡು ತ್ರಿಶತಕಗಳನ್ನು ಸಿಡಿಸುವ ಮೂಲಕ ಇಪ್ಪತ್ತನೇ ಶತಮಾನದ ಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

1993: ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 19.5 ಓವರುಗಳಲ್ಲಿ 43 ರನ್ನುಗಳನ್ನು ಗಳಿಸಿದ ಪಾಕಿಸ್ಥಾನ 2001ರ ವರೆಗಿನ ದಾಖಲೆಗಳಲ್ಲಿ ಅತ್ಯಂತ ಕಡಿಮೆ ರನ್ ಗಳಿಕೆಯ ದಾಖಲೆ ಮಾಡಿತು.

1988: ಭಾರತದ ಮೊತ್ತ ಮೊದಲ ನೆಲದಿಂದ ನೆಲಕ್ಕೆ ಚಿಮ್ಮುವ `ಪೃಥ್ವಿ' ಕ್ಷಿಪಣಿಯನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಿಸಲಾಯಿತು.

1986: ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ರಾಷ್ಟ್ರ ಬಿಟ್ಟು ಓಡಿ ಹವಾಯಿಯಲ್ಲಿ ಆಶ್ರಯ ಪಡೆದರು.

1964: ಮಹಮ್ಮದ್ ಅಲಿ (ಕ್ಯಾಸಿಯಸ್ ಕ್ಲೇ) ಮಿಯಾಮಿಯಲ್ಲಿ ಸೋನಿ ಲಿಸ್ಟನ್ ಅವರನ್ನು ಸೋಲಿಸಿ ಮೊತ್ತ ಮೊದಲ ಬಾರಿಗೆ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿ ಗೆದ್ದುಕೊಂಡರು.

1953: ಸಲಾಖೆಯ ಗೊಂಬೆಯಾಟದ ಕಲೆಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ದತ್ತಾತ್ರೇಯ ಅರಳಿಕಟ್ಟೆ ಅವರು ಅರಳಿಕಟ್ಟೆ ರಾಮರಾಯರು- ಲಲಿತಮ್ಮ ದಂಪತಿಯ ಮಗನಾಗಿ ಶೃಂಗೇರಿ ಸಮೀಪದ ಅರಳಿಕಟ್ಟೆ ಎಂಬ ಸ್ಥಳದಲ್ಲಿ ಜನಿಸಿದರು. ಅಂದಾಜು 9-10 ಕಿಲೋಗ್ರಾಂ ತೂಕದ ಗೊಂಬೆಗಳನ್ನು ಸಲಾಖೆಯಿಂದ ಹತೋಟಿಗೆ ಒಳಪಡಿಸಿ ಪೌರಾಣಿಕ ಪ್ರಸಂಗಗಳಿಗೆ ಕರ್ನಾಟಕ ಸಂಗೀತ, ನೃತ್ಯ, ನಾಟಕದ ಲೇಪ ಹಚ್ಚಿ, ಸರಳ ಮಾತುಗಾರಿಕೆಯ ಮೂಲಕ ಪ್ರೇಕ್ಷಕರ ಎದುರು ಕಥೆ ಬಿಚ್ಚುವ ಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ದತ್ತಾತ್ರೇಯ ಅವರಿಗೆ ದೇಶ ವಿದೇಶಗಳಲ್ಲೂ ಮನ್ನಣೆ, ಪ್ರಶಸ್ತಿಗಳು ಲಭಿಸಿವೆ. ಡಿಡಿ, ಇಂಟರ್ ನ್ಯಾಷನಲ್ ಟಿವಿ ಚಾನೆಲ್ಲುಗಳಲ್ಲೂ ಇವರ ಸಂದರ್ಶನ, ಗೊಂಬೆಯಾಟಗಳ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಂಡಿವೆ.

1938: ಭಾರತದ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಫರೂಖ್ ಎಂಜಿನಿಯರ್ ಹುಟ್ಟಿದರು. ವಿಶ್ವಕಪ್ ಪಂದ್ಯದಲ್ಲಿ `ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದ ಮೊದಲ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಇವರು ಪಾತ್ರರಾದರು.

1914: ಇಂಗ್ಲಿಷ್ ಕಲಾವಿದ ಹಾಗೂ `ಅಲೀಸ್ ಇನ್ ವಂಡರ್ ಲ್ಯಾಂಡ್' ಇಲ್ಲಸ್ಟ್ರೇಟರ್ ಜಾನ್ ಟೆನ್ನೀಲ್ ನಿಧನರಾದರು.

1894: ಮೆರ್ವಾನ್ ಷೆರಿಯರ್ ಇರಾನಿ (1894-1969) ಹುಟ್ಟಿದ ದಿನ. `ಮೆಹರ್ ಬಾಬಾ' ಎಂದೇ ಪಶ್ಚಿಮ ಭಾರತದಲ್ಲಿ ಖ್ಯಾತರಾಗಿರುವ ಈ ಈ ಆಧ್ಯಾತ್ಮಿಕ ಗುರು ತಮ್ಮ ಬದುಕಿನ 44 ವರ್ಷಗಳ ಕಾಲ `ಮೌನ' ಆಚರಿಸಿದರು.

1862: ಅಮೆರಿಕದ ಬ್ಯಾಂಕ್ ನೋಟುಗಳಾದ `ಗ್ರೀನ್ ಬ್ಯಾಕ್ಸ್' ಗಳನ್ನು ಅಂತರ್ಯುದ್ಧ ಕಾಲದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೊತ್ತ ಮೊದಲ ಬಾರಿಗೆ ಬಿಡುಗಡೆ ಮಾಡಿದರು.

1778: ಜೋಸ್ ಡೆ ಸಾನ್ ಮಾರ್ಟಿನ್ (1778-1850) ಹುಟ್ಟಿದ ದಿನ. ಅರ್ಜೆಂಟೀನಾದ ಯೋಧ, ಮುತ್ಸದ್ಧಿ ಹಾಗೂ ರಾಷ್ಟ್ರೀಯ ನಾಯಕನಾದ ಈತ 1812ರಲ್ಲಿ ಅರ್ಜೆಂಟೀನಾ, 1818ರಲ್ಲಿ ಚಿಲಿ, 1821ರಲ್ಲಿ ಪೆರುವಿನಲ್ಲಿ ಸ್ಪಾನಿಷ್ ಆಳ್ವಿಕೆ ವಿರುದ್ಧ ಕ್ರಾಂತಿಗಳನ್ನು ಮುನ್ನಡೆಸಲು ನೆರವಾದರು.

No comments:

Post a Comment