ನಾನು ಮೆಚ್ಚಿದ ವಾಟ್ಸಪ್

Saturday, February 29, 2020

ಇಂದಿನ ಇತಿಹಾಸ History Today ಫೆಬ್ರುವರಿ 29

ಇಂದಿನ ಇತಿಹಾಸ  History Today ಫೆಬ್ರುವರಿ 29
2020: ಕಾಬೂಲ್/ ದೋಹಾ: ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿದ್ದ ೧೮ ವರ್ಷಗಳ ಸುದೀರ್ಘ ಸಮರವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕ ಮತ್ತು ತಾಲೀಬಾನ್ 2020 ಫೆಬ್ರುವರಿ 29ರ ಶನಿವಾರ ಚಾರಿತ್ರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಅಮೆರಿಕ- ತಾಲಿಬಾನ್ ಶಾಂತಿ ಒಪ್ಪಂದವು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ೧೮ ವರ್ಷಗಳ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶವನ್ನು ಹೊಂದಿದೆ. ಅಂತ್ಯವಿಲ್ಲದ ಯುದ್ಧಗಳಿಂದ ಅಮೆರಿಕವನ್ನು ಹೊರತರುವುದಾಗಿ ನೀಡಿದ್ದ ತಮ್ಮ ಪ್ರಮುಖ ಚುನಾವಣಾ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಒಪ್ಪಂದವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೆರವಾಗಲಿದೆ. ಒಪ್ಪಂದದ ಪ್ರಕಾರ, ಅಫ್ಘಾನಿಸ್ಥಾನವನ್ನು ಭಯೋತ್ಪಾದಕ ದಾಳಿಗೆ ಉಡಾವಣಾ ತಾಣ ಆಗದಂತೆ ನೋಡಿಕೊಳ್ಳುವ ಬದ್ಧತೆಯನ್ನು ತಾಲೀಬಾನ್ ವ್ಯಕ್ತ ಪಡಿಸಿದೆ. ಇದಕ್ಕೆ ಬದಲಿಯಾಗಿ ಅಮೆರಿಕವು ತನ್ನ ಸಹಸ್ರಾರು ಸೈನಿಕರನ್ನು ಅಫ್ಘಾನಿಸ್ಥಾನದಿಂದ ಹಿಂತೆಗೆದುಕೊಳ್ಳಲು ಪ್ರಾರಂಭಿಸಲಿದೆ. ತಾಲಿಬಾನ್ ತನ್ನ ಬದ್ಧತೆಗಳನ್ನು ಪೂರೈಸಿದರೆ, ಅಮೆರಿಕದ ಎಲ್ಲ ಪಡೆಗಳು ೧೪ ತಿಂಗಳಲ್ಲಿ ವಾಪಸಾಗಲಿವೆ. ೨೦೦೧ ಸೆಪ್ಟೆಂಬರ್ ೧೧ರಂದು ಸಹಸ್ರಾರು ಮಂದಿಯನ್ನು ಬಲಿ ತೆಗೆದುಕೊಂಡು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ಬಳಿಕ ಸಂಭ್ರಮಿಸಿದ್ದ ಒಸಾಮಾ ಬಿನ್ ಲಾಡೆನ್ ಮತ್ತು ಅಲ್-ಖೈದಾವನ್ನು ಸಾಕಿ ಬೆಳೆಸಿದ್ದ್ದ ತಾಲಿಬಾನಿನ ಹುಟ್ಟಡಗಿಸುವ ಸಲುವಾಗಿ ಅಮೆರಿಕವು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಈಶಾನ್ಯ ದೆಹಲಿ ಗಲಭೆಗಳಿಂದ ಈಗಷ್ಟೇ ಚೇತರಿಸುತ್ತಿರುವ ದೆಹಲಿಯ  ಜನನಿಬಿಡ ರಾಜೀವ್ ಚೌಕ ಮೆಟ್ರೋ ನಿಲ್ದಾಣದೊಳಗೆ ದೇಶ್ ದೇಶ್ ಕೆ ಗದ್ದಾರೋಂ ಕೋ, ಗೋಲಿ ಮಾರೊ ಸಾಲೋಂಕೊ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂಬುದಾಗಿ ಘೋಷಣೆ ಕೂಗಿದ ಘಟನೆ 2020 ಫೆಬ್ರುವರಿ 29ರ ಶನಿವಾರ ಸಂಭವಿಸಿದ್ದು, ಘಟನೆ ಸಂಬಂಧವಾಗಿ ಆರು ಮಂದಿಯನ್ನು  ಬಂಧಿಸಲಾಯಿತು.  ಮೆಟ್ರೋ ನಿಲ್ದಾಣದಲ್ಲಿ ದಿಢೀರನೆ ಸಂಭವಿಸಿದ ಘಟನೆಯ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಬೆಳಿಗ್ಗೆ ೧೦.೫೨ ಸುಮಾರಿಗೆ ವೈರಲ್ ಆಯಿತು.  "ಈದಿನ ಆರು ಯುವಕರು ರಾಜೀವ್ ಚೌಕ ಮೆಟ್ರೋ ನಿಲ್ದಾಣದಲ್ಲಿ ದೇಶ್ ಕೆ ಗದ್ದಾರೋಂ ಕೋ ಗೋಲಿ ಮಾರೊ ಸಾಲೋಂ ಕೋ ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತು. ಅವರನ್ನು ವಶಕ್ಕೆ ಪಡೆದುಕೊಂಡು ರಾಜೀವ್ ಚೌಕ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ" ಎಂದು ಡಿಸಿಪಿ (ಮೆಟ್ರೋ) ವಿಕ್ರಮ್ ಪೊರ್ವಾಲ್ ಹೇಳಿದರು.  ಕೇಸರಿ ಶರ್ಟ್ ಮತ್ತು ಕುರ್ತಾ ಧರಿಸಿ, ರೈಲು ನಿಲ್ಲುತ್ತಿದ್ದಂತೆಯೇ ಯುವಕರ ಗುಂಪು ಮೆಟ್ರೋ ನಿಲ್ದಾಣದಲ್ಲಿ  ಘೋಷಣೆ ಮಾಡಲು ಪ್ರಾರಂಭಿಸಿತು. ರೈಲಿನಿಂದ ಇಳಿದ ಬಳಿಕವೂ ಅವರು ಪ್ರಚೋದನಕಾರಿ ಘೋಷಣೆ ಮುಂದುವರೆಸಿದರು. ಕೆಲವು ಪ್ರಯಾಣಿಕರು ಅವರೊಂದಿಗೆ ಸೇರಿಕೊಂಡರೆ, ಇತರರು ವೀಡಿಯೊ ಮಾಡಿಕೊಳ್ಳುವ ಸಲುವಾಗಿ ತಮ್ಮ ತಮ್ಮ ಕ್ಯಾಮೆರಾಗಳನ್ನು ಹೊರತೆಗೆದಿದ್ದರು. ಹಠಾತ್ ಕೋಲಾಹಲದಿಂದ ನಿಲ್ದಾಣದಲ್ಲಿದ್ದ ಅನೇಕರು ತತ್ತರಿಸಿ ದಿಕ್ಕಾಪಾಲಾಗಿ ಓಡಿದರು ಎಂದು ವರದಿಗಳು ತಿಳಿಸಿವೆ. ದೆಹಲಿ ಮೆಟ್ರೊದ ಭದ್ರತೆಯ ಜವಾಬ್ದಾರಿ ವಹಿಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದು ದೆಹಲಿ ಪೊಲೀಸರಿಗೆ ಒಪ್ಪಿಸಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ತಿರುವನಂತಪುರಂ: ಶೀತಜ್ವರ (ಫೂ) ಮತ್ತು ಉಸಿರಾಟದ ತೊಂದರೆಗಳೊಂದಿಗೆ ಮಲೇಶ್ಯಾದಿಂದ ಕೇರಳದ ಕೋಚಿಗೆ ವಾಪಸಾದ ೩೬ರ ಹರೆಯದ ವ್ಯಕ್ತಿಯೊಬ್ಬ ಮಾರಕ ಕೊರೋನಾ ವೈರಸ್ ಸೋಂಕು ಇಲ್ಲ ಎಂಬುದಾಗಿ ಖಚಿತವಾದ ಬಳಿಕ 2020 ಫೆಬ್ರುವರಿ 29ರ ಶನಿವಾರ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದರು.  ಸದರಿ ವ್ಯಕ್ತಿ ಗುರುವಾರ ರಾತ್ರಿ ಕೋಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಶೀತ ಜ್ವರ ಮತ್ತು ಉಸಿರಾಟದ ತೊಂದರೆ ಕಾರಣ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಏಕಾಂಗಿ ವಾಸಕ್ಕೆ ಕಳುಹಿಸಲಾಗಿತ್ತು. ಆತ ಮಲೇಶ್ಯಾದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ವೈದ್ಯರ ಪ್ರಕಾರ, ವ್ಯಕ್ತಿ ನ್ಯುಮೋನಿಯಾ ಮತ್ತು ಎದೆಗೂಡು ಕಟ್ಟಿಕೊಂಡ ಪರಿಣಾಮವಾಗಿ ಸಾವನ್ನಪ್ಪಿದ್ದಾನೆ. ಆದರೆ, ವೈದ್ಯರು ಇನ್ನೂ ಲ್ಯಾಬೋರೇಟರಿಯಿಂದ ಎರಡನೇ ಮಾದರಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆಪ್ರಾಥಮಿಕ ತಪಾಸಣೆಯಲ್ಲಿ ವ್ಯಕ್ತಿ ತೀವ್ರವಾದ ನ್ಯಮೋನಿಯಾ ಮತ್ತು ಉಸಿರಾಟದ ತೊಂದರೆ ಎದುರಿಸುತ್ತಿದ್ದುದು ಪತ್ತೆಯಾಗಿತ್ತು. ಆತನಿಗೆ ಮಧುಮೇಹದ ಸಮಸ್ಯೆಯೂ ಇತ್ತು. ಸೋಂಕು ತೀವ್ರವಾಗಿದ್ದಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆಯಾಗುತ್ತದೆ ಎಂದು ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಗಣೇಶ ಮೋಹನನ್ ಹೇಳಿದರು. ಆತ ನ್ಯಮೋನಿಯಾ ಮತ್ತು ದೇಹದಲ್ಲಿ ಇನ್ ಸುಲಿನ್ ಉತ್ಪಾದನೆಯಾಗದೆ ಮಧುವೇಹ ತೀವ್ರಗೊಂಡ ಪರಿಣಾಮವಾಗಿ ಸಾವನ್ನಪ್ಪಿರಬಹುದು ಎಂಬುದು ನಮ್ಮ ಗುಮಾನಿ ಎಂದು ಡಾ. ಮೋಹನನ್ ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೧೨ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ರಾಷ್ಟ್ರಪತಿಗೆ ಹೊಸದಾಗಿ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಎರಡನೇ ಬಾರಿಗೆ 2020 ಫೆಬ್ರುವರಿ 29ರ ಶನಿವಾರ ಸಲ್ಲಿಸಿದ. ಹಿಂದೆ ಸಲ್ಲಿಸಿದ ಅರ್ಜಿಯಲ್ಲಿ ಎಲ್ಲ ಮಾಹಿತಿಗಳು ಇರದಿದ್ದ ಕಾರಣ ಅರ್ಜಿ ಸಲ್ಲಿಸಿರುವುದಾಗಿ ಆತ ಸಮರ್ಥನೆ ಮಾಡಿಕೊಂಡ.  ಮರಣದಂಡನೆಯನ್ನು ಜೀವಾವಧಿ ಶಿಕ್ಷಿಗೆ ಪರಿವರ್ತಿಸಬೇಕು ಎಂಬುದಾಗ ಕೋರಿದ ಅಕ್ಷಯ್ ಕುಮಾರನ  ಹೊಸ ಅರ್ಜಿಯನ್ನು ದೆಹಲಿ ನ್ಯಾಯಾಲಯದ ಆದೇಶದಂತೆ ಗಲ್ಲುಶಿಕ್ಷೆ ಜಾರಿಗಾಗಿ ಹೊಸದಾಗಿ ನಿಗದಿಯಾಗಿರುವ ಮಾರ್ಚ್ ೩ರ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿ ರಾಷ್ಟ್ರಪತಿಗೆ ಸಲ್ಲಿಸಲಾಗಿದೆ. ಅಕ್ಷಯ್ ಕುಮಾರ್  ಫೆಬ್ರುವರಿ ರಂದು ಸಲ್ಲಿಸಿದ್ದ ಕ್ಷಮಾದಾನ ಕೋರಿಕೆಯ ಮೂಲ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಫೆಬ್ರುವರಿ ರಂದು ತಿರಸ್ಕರಿಸಿದ್ದರು. ಮತ್ತೊಬ್ಬ ಅಪರಾಧಿ ಪವನ್ ಕುಮಾರ್ ಗುಪ್ತಾ ತನ್ನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಬೇಕೆಂದು  ಕೋರಿ ಶುಕ್ರವಾರ ಸುಪ್ರೀಂ ಕೋರ್ಟಿಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದಾನೆ. ಕುರೇಟಿವ್ ಅರ್ಜಿಯನ್ನು ಸಲ್ಲಿಸಿದ ನಾಲ್ವರು ಅಪರಾಧಿಗಳಲ್ಲಿ ಗುಪ್ತಾ ಕೊನೆಯವನಾಗಿದ್ದಾನೆ. ಮುಕೇಶ್ ಕುಮಾರ್ ಸಿಂಗ್, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಎಂಬ ಮೂವರು ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ಹಿಂದೆ ರಾಷ್ಟ್ರಪತಿಗಳು ವಜಾಗೊಳಿಸಿದ್ದರು. ತನ್ನ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮುಕೇಶ್ ಕುಮಾರ್ ಸಿಂಗ್ ಮತ್ತು ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಈಶಾನ್ಯ ದೆಹಲಿಯ ಶಿವ ವಿಹಾರದ ಹಿಂದೂ ನಿವಾಸಿಗಳು ಜೈ ಶ್ರೀ ರಾಮ್ ಪಠಣವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಗಲಭೆಕೋರರ ವಿರುದ್ಧ ತಮ್ಮ ವಸಾಹತುಗಳನ್ನು ಕಾಪಾಡುವ ಪ್ರಯತ್ನದಲ್ಲಿ ಅವರು ಈಗ ರಾತ್ರಿ ಜಾಗರಣೆ ವೇಳೆ  ಹರ್ ಹರ್ ಮಹಾದೇವ್ ಮತ್ತು ವೀರ್ ಭಜರಂಗಿ ಘೋಷಣೆಗಳನ್ನು ಬಳಸುತ್ತಿದ್ದಾರೆ. ಈಶಾನ್ಯ ದೆಹಲಿಯಲ್ಲಿ ಮೂರು ದಿನಗಳ ಹಿಂಸಾಚಾರದ ನಂತರ, ಶಿವ ವಿಹಾರದ ವಸಾಹತುಗಳು ಭೂತ ಪಟ್ಟಣಗಳಾಗಿ ಮಾರ್ಪಟ್ಟಿವೆ. ಹೆಚ್ಚಿನ ಮುಸ್ಲಿಂ ಕುಟುಂಬಗಳು ನಗರ ಮತ್ತು ಅದರಾಚೆ ಸುರಕ್ಷಿತ ಸ್ಥಳಗಳಿಗಾಗಿ ತೆರಳಿದ್ದು ಪ್ರದೇಶವನ್ನು ತೊರೆದಿವೆ. ಉಳಿದಿರುವ ನಿವಾಸಿಗಳು ಭಾನುವಾರದಿಂದ ಮಲಗಿಲ್ಲ. ಪ್ರದೇಶದ ಸ್ಥಳೀಯರು ರಾತ್ರಿಯ ಊಟದ ನಂತರ ಒಟ್ಟುಗೂಡುತ್ತಾರೆ, ಸಣ್ಣ ಬೆಂಕಿಯನ್ನು ಹಚ್ಚುತ್ತಾರೆ ಮತ್ತು ಸೂರ್ಯೋದಯವಾಗುವವರೆಗೂ ಗಲಭೆಕೋರರ ವಿರುದ್ಧ ತಮ್ಮ ವಸಾಹತುಗಳನ್ನು ಕಾಪಾಡುತ್ತಾರೆ. ಗುರುವಾರ ರಾತ್ರಿ ಸುಮಾರು ೧೦೦ ಪುರುಷರ ಸಭೆಯು ರಾತ್ರಿ ಕಾವಲಿನ ಸಮಯದಲ್ಲಿ ಜೈ ಶ್ರೀ ರಾಮ್ ಪಠಣವನ್ನು ತ್ಯಜಿಸಲು ನಿರ್ಧರಿಸಿತು. ಪ್ರದೇಶದ ಮಹಿಳೆಯರು, ಮಕ್ಕಳು ಮತ್ತು ಹಿರಿಯ ಸದಸ್ಯರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಘೋಷಣೆಗಳನ್ನು ಕೂಗುತ್ತಾ ಇಡೀ ಪ್ರದೇಶದ ಸುತ್ತಲೂ ಕಾವಲು ನಡೆಯುತ್ತೇವೆ. ನಾವು ಈಗ ಹರ ಹರ  ಮಹಾದೇವ್, ವೀರ್ ಭಜರಂಗಿ ಮಂತ್ರವನ್ನು ನಮ್ಮ ಘೋಷಣೆಯಾಗಿ ಬಳಸುತ್ತೇವೆ. ಯಾಕೆಂದರೆ, ಗಲಭೆಯ ಸಮಯದಲ್ಲಿ, ಜೈ ಶ್ರೀ ರಾಮ್ ಎಂದು ಕೂಗಿದ, ನಮ್ಮ ವಸಾಹತುಗಳಿಗೆ ಪ್ರವೇಶಿಸಿ ಮನೆಗಳು ಮತ್ತು ಅಂಗಡಿಗಳನ್ನು ಸುಟ್ಟುಹಾಕುವ ಅನೇಕ ಗುಂಪುಗಳು ಇದ್ದವು. ದುಷ್ಕರ್ಮಿಗಳು ಮತ್ತು ದಂಗೆಕೋರರ ನಡುವೆ ವ್ಯತ್ಯಾಸವನ್ನು ತೋರಿಸಲು, ನಮ್ಮ ಘೋಷಣೆಯನ್ನು ಬದಲಾಯಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಪೂರ್ವ ಕಮಲ್ ವಿಹಾರದ ಸ್ಥಳೀಯ ನಿವಾಸಿ ಅಶುತೋಷ್ ಪ್ರಕಾಶ್ ರಾಣಾ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಯೋಧ ಮೊಹಮ್ಮದ್ ಅನೀಸ್ ಅವರಿಗೆ ಮನೆ ಕಟ್ಟಿಸಿ ಕೊಡುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) 2020 ಫೆಬ್ರುವರಿ 29ರ ಶನಿವಾರ ಭರವಸೆ ನೀಡಿತು. ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆ ಖಾಸ್ ಖಜೂರಿ ಗಾಲಿ ಪ್ರದೇಶದಲ್ಲಿದ್ದ ಗಡಿ ಭದ್ರತಾ ಪಡೆ ಯೋಧ ಮೊಹಮ್ಮದ್ ಅನೀಸ್ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಯೋಧ ಮೊಹಮ್ಮದ್ ಅನೀಸ್ ಮದುವೆಗೆ ಮನೆ ಕಟ್ಟಿಸಿ ಉಡುಗೊರೆಯಾಗಿ ನೀಡುವುದಾಗಿ ಬಿಎಸ್ಎಫ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಪುಷ್ಪೇಂದ್ರ ರಾಥೋಡ್ ಭರವಸೆ ನೀಡಿದರು. ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಗುಂಪುಗಳ ಘರ್ಷಣೆಯಿಂದ  ಸಂಭವಿಸಿದ ಹಿಂಸಾಚಾರದಲ್ಲಿ ಇಲ್ಲಿಯವರೆಗೂ ಈಶಾನ್ಯ ದೆಹಲಿಯಲ್ಲಿ ೪೨ ಮಂದಿ ಸಾವನ್ನಪ್ಪಿದ್ದಾರೆ. ಹಲವರು ತಮ್ಮ ಮನೆ, ಅಂಗಡಿ ಕಳೆದುಕೊಂಡಿದ್ದಾರೆ. ಹೀಗೆ ಮನೆ, ಅಂಗಡಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಜನರಿಗೆ ದೆಹಲಿಯ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ ನೆರವು ನೀಡುತ್ತಿದೆ. ಹಾಗೆಯೇ ದೆಹಲಿ ಸರ್ಕಾರವೂ ಗಲಭೆ ಪೀಡಿತ ಪ್ರದೇಶದಲ್ಲಿ ನಲುಗಿರುವ ಜನರಿಗೆ ಅಗತ್ಯವಿರುವ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪೂರೈಸುತ್ತಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)



No comments:

Post a Comment