2020: ಲಂಡನ್:
ಬ್ರೆಕ್ಸಿಟ್ ಅನುಷ್ಠಾನಗೊಂಡ ಕೆಲವೇ ವಾರಗಳಲ್ಲಿ ಸಾಜಿದ್ ಜಾವಿದ್ ಅವರು ರಾಜೀನಾಮೆ ಕೊಟ್ಟ ಬಳಿಕ ಇಂಗ್ಲೆಂಡಿನ ನೂತನ ಹಣಕಾಸು ಸಚಿವರಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ
ಮೂರ್ತಿ ಅವರ ಅಳಿಯ ರಿಶಿ ಸುನಕ್ 2020 ಫೆಬ್ರುವರಿ
13ರ ಗುರುವಾರ ನೇಮಕಗೊಂಡರು. ಬೊಕ್ಕಸದ ಮುಖ್ಯ
ಕಾರ್ಯದರ್ಶಿಯಾಗಿದ್ದ ೩೯ರ ಹರೆಯದ ರಿಶಿ ಸುನಕ್ ಅವರಿಗೆ ಚಾನ್ಸಲರ್ ಆಫ್ ಎಕ್ಸ್ಚೆಕರ್ ಹುದ್ದೆಯು (ಭಾರತದ ವಿತ್ತ ಸಚಿವ ಹುದ್ದೆಗೆ
ಸಮ) ಅತ್ಯಂತ ಪ್ರತಿಷ್ಠಿತ
ಬಡ್ತಿಯಾಗಿದೆ. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸರ್ಕಾರದ ವಾರ್ಷಿಕ ಬಜೆಟ್ಗೆ ಒಂದು ತಿಂಗಳು
ಮುಂಚಿತವಾಗಿ ಮಾಡಿದ ತಮ್ಮ ಸಂಪುಟ ಪುನಾರಚನೆಯಲ್ಲಿ ಈ ದೊಡ್ಡ ಬದಲಾವಣೆಯನ್ನು ಮಾಡಿದರು. ರಿಶಿ ಸುನಕ್
ಅವರು ೨೦೧೫ರಲ್ಲಿ ಮೊತ್ತ ಮೊದಲಿಗೆ ಬ್ರಿಟಿಷ್ ಸಂಸತ್ತಿಗೆ ಚುನಾಯಿತರಾಗಿದ್ದರು. ಬೊಕ್ಕಸದ ಮುಖ್ಯ ಕಾರ್ಯದರ್ಶಿಯಾಗಿ ಹಿಂದೆ ಸೇವೆ ಸಲ್ಲಿಸುತ್ತಿದ್ದ ಸುನಕ್ ಅವರು ಹಣಕಾಸು ಸಚಿವರಿಗೆ ಎರಡನೇ ಸಹಾಯಕರಾಗಿದ್ದು ಸರ್ಕಾರಿ ವೆಚ್ಚದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ರಾಜಕಾರಣ,
ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ತೆರಳುವ ಮುನ್ನ ಸುನಕ್ ಅವರು ಪ್ರತಿಷ್ಠಿತ ವಿಂಚೆಸ್ಟರ್ ಕಾಲೇಜಿಗೆ ಸೇರಿದ್ದರು. ಅಮೆರಿಕದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಅವರು ಪಡೆದಿದ್ದರು. ಸುನಕ್
ಅವರ ತಂದೆ ಒಬ್ಬ ವೈದ್ಯರಾಗಿದ್ದು, ತಾಯಿ ಕೆಮಿಸ್ಟ್ ಶಾಪ್ ನಡೆಸುತ್ತಿದ್ದಾರೆ. ರಾಜಕೀಯಕ್ಕೆ ಸೇರುವ ಮುನ್ನ ಸುನಕ್ ಅವರು ಗೋಲ್ಡ್ಮ್ಯಾನ್ ಸಚ್ಸ್ ಮತ್ತು ಹೆಜ್ ಫಂಡ್ನಲ್ಲಿ ಕೆಲಸ ಮಾಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ೨೦೧೨ರ
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ 2020 ಫೆಬ್ರುವರಿ
14ರ ಶುಕ್ರವಾರಕ್ಕೆ ಮುಂದೂಡಿ,
ಆ ವೇಳೆಗೆ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಶಿಕ್ಷಿತ ಅಪರಾಧಿಗಳಿಗೆ ನಿರ್ದೇಶನ ನೀಡಿತು. ನ್ಯಾಯಮೂರ್ತಿ ಗಳಾದ ಆರ್. ಭಾನುಮತಿ, ಅಶೋಕ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರನ್ನು ಒಳಗೊಂಡ ಪೀಠವು ಶಿಕ್ಷಿತ ಅಪರಾಧಿ ಪವನ್ ಕುಮಾರ್ ಗುಪ್ತನನ್ನು ಪ್ರತಿನಿಧಿಸಲು ಹಿರಿಯ ವಕೀಲರಾದ ಅಂಜನಾ ಪ್ರಕಾಶ್ ಅವರನ್ನು ಕೋರ್ಟ್ ಸಹಾಯಕರಾಗಿ (ಅಮಿಕಸ್ ಕ್ಯೂರೀ) ಆಗಿ 2020 ಫೆಬ್ರುವರಿ 13ರ ಗುರುವಾರ ನೇಮಕ ಮಾಡಿತು. ಶಿಕ್ಷಿತ
ಅಪರಾಧಿಯನ್ನು ಪ್ರತಿನಿಧಿಸುವ ಸಲುವಾಗಿ ವಕೀಲರನ್ನು ಆಯ್ಕೆ ಮಾಡಲು ವಕೀಲರ ಪಟ್ಟಿಯೊಂದನ್ನು ಪವನ್
ಗುಪ್ತ ತಂದೆಗೆ ನೀಡುವಂತೆ ಜಿಲಾ ಕಾನೂನು ಸೇವೆ ಪ್ರಾಧಿಕಾರಕ್ಕೆ ವಿಚಾರಣಾ ನ್ಯಾಯಾಲಯವು ಬುಧವಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ತಾನು ಪ್ರಕರಣದ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಮುಂದೂಡುವುದಾಗಿ
ಸುಪ್ರೀಂಕೋರ್ಟ್ ಪೀಠ ತಿಳಿಸಿತು. ಕೊನೆಯ
ಕಾನೂನುಬದ್ಧ ಪರಿಹಾರವಾದ ಕ್ಯೂರೇಟಿವ್ ಅರ್ಜಿಯನ್ನು ಇನ್ನೂ ಸಲ್ಲಿಸದೇ ಇರುವ ಏಕೈಕ ಅಪರಾಧಿ ಪವನ್ ಗುಪ್ತ ಆಗಿದ್ದು, ಕ್ಯುರೇಟಿವ್ ಅರ್ಜಿ ಇತ್ಯರ್ಥದ ಬಳಿಕ ಆತನಿಗೆ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅವಕಾಶವೂ ಇದೆ. ವಿಚಾರಣಾ ನ್ಯಾಯಾಲಯದಲ್ಲಿ: ಈ ಮಧ್ಯೆ ದೆಹಲಿಯ
ವಿಚಾರಣಾ ನ್ಯಾಯಾಲಯವು ೨೦೧೨ರ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಪಾಲಕರು ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ ೨ ಗಂಟೆಗೆ ಮುಂದೂಡಿತು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ತನ್ನ ಸಾಂವಿಧಾನಿಕ ವಿಶೇಷ ಅಧಿಕಾರಗಳನ್ನು ಚಲಾಯಿಸಿದ ಸುಪ್ರೀಂಕೋರ್ಟ್ ಕ್ರಿಮಿನಲ್ ಹಿನೆಲ್ನೆಗಳಿರುವ ಕಳಂಕಿತರಿಗೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ಕಾರಣಗಳು ಏನು ಎಂಬುದನ್ನು ಪಟ್ಟಿ ಮಾಡಿ ಪ್ರಕಟಿಸುವುದನ್ನು 2020 ಫೆಬ್ರುವರಿ 13ರ ಗುರುವಾರ ಎಲ್ಲ ರಾಜಕೀಯ ಪಕ್ಷಗಳಿಗೆ ಕಡ್ಡಾಯಗೊಳಿಸಿತು. ತನ್ನ
ಲೋಕಸಭೆ ಮತ್ತು ವಿಧಾನಸಭಾ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ೪೮ ಗಂಟೆಗಳ ಒಳಗಾಗಿ
ಅವರ ಕ್ರಿಮಿನಲ್ ಇತಿಹಾಸವನ್ನು ಮತ್ತು ಅವರಿಗೆ ಟಿಕೆಟ್ ನೀಡಲು ಕಾರಣಗಳೇನು ಎಂಬ ಪಟ್ಟಿಯನ್ನು ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಹಾಗೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ನ್ಯಾಯಮೂರ್ತಿ ರೊಹಿಂಟನ್ ಎಫ್. ನಾರಿಮನ್ ನೇತೃತ್ವದ ಪೀಠವು ಆಜ್ಞಾಪಿಸಿತು. ಜೊತೆಗೇ
ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿದ ಬಗೆಗಿನ ವರದಿಯನ್ನು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಬೇಕು ಇಲ್ಲವೇ ನ್ಯಾಯಾಲಯ ನಿಂದನೆ ಕ್ರಮವನ್ನು ಎದುರಿಸಬೇಕು ಎಂದೂ ಪೀಠವು ಆದೇಶ ನೀಡಿತು. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಂತಹ ಹೀನ ಅಪರಾಧಗಳ ಆಪಾದನೆ ಹೊತ್ತವರಿಗೂ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ ಕಲ್ಪಿಸುವ ಪ್ರವೃತ್ತಿ ರಾಜಕೀಯ ಪಕ್ಷಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ತೀರ್ಪು ಅತ್ಯಂತ ಮಹತ್ವ ಪಡೆದಿದೆ. ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂಬುದಾಗಿ ಭಾರತದ ಚುನಾವಣಾ ಆಯೋಗವು ನೀಡಿದ ಸಲಹೆಯನ್ನು ಅನುಸರಿಸಿ ಸುಪ್ರೀಂಕೋರ್ಟ್ ಈ ಆದೇಶವನ್ನು ನೀಡಿತು.
ಸಂಸತ್ತಿನ ಶೇಕಡಾ ೪೬ರಷ್ಟು ಸದಸ್ಯರು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ ಎಂದು ಭಾರತದ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ತಿಳಿಸಿತ್ತು. ರಾಜಕೀಯವನ್ನು ಅಪರಾಧೀಕರಣಗೊಳಿಸುವುದರ ವಿರುದ್ಧ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ
ತೀರ್ಪುಗಳು ರಾಜಕೀಯ ಪಕ್ಷಗಳನ್ನು ತಟ್ಟಿರಲಿಲ್ಲ. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಹಿರಿಯ ಅಧಿಕಾರಿ ರಾಜೀವ್ ಬನ್ಸಲ್ ಅವರನ್ನು 2020 ಫೆಬ್ರುವರಿ 13ರ ಗುರುವಾರ ಏರ್
ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ (ಸಿಎಂಡಿ) ನೇಮಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶವೊಂದು ತಿಳಿಸಿತು. ನಾಗಾಲ್ಯಾಂಡ್ ಕೇಡರಿನ ೧೯೮೮ರ ತಂಡದ ಐಎಎಸ್ ಅಧಿಕಾರಿ ಬನ್ಸಲ್ ಅವರು ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ಅಡಿಷನಲ್ ಕಾರ್ಯದರ್ಶಿಯಾಗಿದ್ದಾರೆ. ಸಂಪುಟದ
ನೇಮಕಾತಿ ಸಮಿತಿಯು ರಾಜೀವ್ ಬನ್ಸಲ್ ಅವರನ್ನು ಏರ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಆದೇಶವು ತಿಳಿಸಿದೆ. ಹೆಚ್ಚಿನ ವಿವರಗಳನ್ನು ಅದು ನೀಡಿಲ್ಲ. ಅಶ್ವನಿ
ಲೋಹಾನಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಹುದ್ದೆಯು ಖಾಲಿ ಬಿದ್ದಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಲಕ್ನೋ:
ಲಕ್ನೋದ ಜಿಲ್ಲಾ ನ್ಯಾಯಾಲಯ ಸಮುಚ್ಚಯದಲ್ಲಿ 2020 ಫೆಬ್ರುವರಿ 13ರ ಗುರುವಾರ ಬಾಂಬ್ ಒಂದು ಸ್ಫೋಟಗೊಂಡಿದ್ದು, ಕನಿಷ್ಠ ಮೂವರು ವಕೀಲರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿದವು. ವಜೀರ್ ಗಂಜ್ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ನ್ಯಾಯಾಲಯ ಸಮುಚ್ಚಯದಲ್ಲಿ ಇತರ ಮೂರು ಸಜೀವ ಕಚ್ಚಾ ಬಾಂಬ್ಗಳೂ ಪತ್ತೆಯಾಗಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು. ವಕೀಲರ ಗುಂಪುಗಳ
ಮಧ್ಯೆ ಘರ್ಷಣೆ ಸಂಭವಿಸಿದ ವೇಳೆಯಲ್ಲಿ ಸ್ಫೋಟ ಸಂಭವಿಸಿತು. ತನ್ನನ್ನು ಗುರಿಯಾಗಿಸಿ ದಾಳಿ ನಡೆಯಿತು ಎಮದು ವಕೀಲರೊಬ್ಬರು ವರದಿಗಾರರ ಜೊತೆ ಮಾತನಾಡುತ್ತಾ ಪ್ರತಿಪಾದಿಸಿದರು ಎಂದು ವರದಿಗಳು ಹೇಳಿದವು. ಸ್ಫೋಟದ ಬಳಿಕ
ನ್ಯಾಯಾಲಯ ಸಮುಚ್ಚಯದಲ್ಲಿ ಭಾರೀ ಗೊಂದಲ ಉಂಟಾಯಿತು. ವಕೀಲರು ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಕಚ್ಚಾ ಬಾಂಬ್ ಒಂದು ಸ್ಫೋಟಗೊಂಡರೆ, ಇತರ ಎರಡು ಸಜೀವ ಬಾಂಬ್ಗಳನ್ನು ನ್ಯಾಯಾಲಯದ ಆವರಣದಲ್ಲಿ ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಶ್ರೀನಗರ:
೨೦೧೯ರ ಫೆಬ್ರುವರಿ ತಿಂಗಳಲ್ಲಿ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದ ೪೦ ಮಂದಿ ಕೇಂದ್ರೀಯ
ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರ ಗೌರವಾರ್ಥ ನಿರ್ಮಿಸಲಾಗಿರುವ ಸ್ಮಾರಕವನ್ನು 2020 ಫೆಬ್ರುವರಿ
14ರ ಶುಕ್ರವಾರ ಲೆತ್ಪೋರ
ಶಿಬಿರದಲ್ಲಿ ಉದ್ಘಾಟಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು 2020 ಫೆಬ್ರುವರಿ 13ರ ಗುರುವಾರ ಇಲ್ಲಿ
ತಿಳಿಸಿದರು. ‘ದಾಳಿಯಲ್ಲಿ
ತಮ್ಮ ಪ್ರಾಣಗಳನ್ನು ಕಳೆದುಕೊಂಡ ಕೆಚ್ಚೆದೆಯ ಯೋಧರಿಗೆ ನೀಡುವ ಗೌರವ ಇದು’ ಎಂದು ಸಿಆರ್‌ಪಿಎಫ್‌ನ ಅಡಿಷನಲ್ ಡೈರೆಕ್ಟರ್
ಜನರಲ್ ಝುಲ್ಪಿಕರ್ ಹಸನ್ ಸ್ಮಾರಕ ತಾಣಕ್ಕೆ ಭೇಟಿ ನೀಡಿದ ಬಳಿಕ ಹೇಳಿದರು. ಹುತಾತ್ಮರಾದ ಎಲ್ಲ ೪೦ ಮಂದಿ ಸಿಬ್ಬಂದಿಯ
ಹೆಸರುಗಳನ್ನು ಅವರ ಚಿತ್ರ ಮತ್ತು ಸಿಆರ್‌ಪಿಎಫ್‌ನ ’ಸೇವಾ ಮತ್ತು
ನಿಷ್ಠಾ’ ಲಾಂಛನ ಸಹಿತವಾಗಿ ಸ್ಮಾರಕದಲ್ಲಿ ಅಳವಡಿಸಲಾಗಿದೆ. ‘ಇದು
ಖಂಡಿತವಾಗಿ ದುರದೃಷ್ಟಕರ ಘಟನೆ ಮತ್ತು ನಾವೀಗ ಇದರಿಂದ ಪಾಠ ಕಲಿತಿದ್ದೇವೆ. ಈಗ ನಾವು ನಮ್ಮ
ಚಲನವಲನಗಳ ವೇಳೆ ಹೆಚ್ಚಿನ ಎಚ್ಚರ ವಹಿಸುತ್ತೇವೆ’ ಎಂದು
ಹಸನ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಚುನಾವಣೆ ಹತ್ತಿರ ಬರುತ್ತಿದ್ದಾಗ ಬಿಜೆಪಿ ನಾಯಕರು ’ಗೋಲಿ ಮಾರೋ’
(ಗುಂಡು ಹಾರಿಸಿ) ಮತ್ತು ’ಇಂಡೋ -ಪಾಕಿಸ್ತಾನ್ ಮ್ಯಾಚ್’ನಂತಹ (ಭಾರತ- ಪಾಕಿಸ್ತಾನ ಪಂದ್ಯ) ದ್ವೇಷ ಭಾಷಣದ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2020 ಫೆಬ್ರುವರಿ
13ರ ಗುರುವಾರ ಇಲ್ಲಿ ಹೇಳಿದರು. ಫೆಬ್ರುವರಿ
೧೧ರಂದು ದೆಹಲಿ ಚುನಾವಣಾ ಫಲಿತಾಂಶದ ಪ್ರಕಟಗೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಶಾ, ’ಬಿಜೆಪಿ ಇಂತಹ ಹೇಳಿಕೆಗಳಿಂದ ದೂರ ನಿಂತಿದೆ. ಆದರೂ ಪಕ್ಷದ ಕೆಲವು ನಾಯಕರ ಇಂತಹ ಹೇಳಿಕೆಗಳ ಪರಿಣಾಮವಾಗಿ ಪಕ್ಷವು ನಷ್ಟ ಅನುಭವಿಸಿದೆ’ ಎಂದು
ನುಡಿದರು. ಇವುಗಳನ್ನು
ಪಕ್ಷದ ಹೇಳಿಕೆಗಳು ಎಂಬುದಾಗಿ ಭಾವಿಸಲು ಸಾಧ್ಯವಿಲ್ಲ, ಆದರೆ ಕಣದಲ್ಲಿ ಎಲ್ಲ ಮಾದರಿಯ ವ್ಯಕ್ತಿಗಳೂ ಇದ್ದರು ಎಂದು ಶಾ ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ೭೦ ಸ್ಥಾನಗಳ ಪೈಕಿ
೮ ಸ್ಥಾನಗಳನ್ನು ಮಾತ್ರ ಗೆದ್ದಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ-ಆಪ್) ೬೨ ಸ್ಥಾನಗಳನ್ನು ತನ್ನ
ಬಗಲಿಗೆ ಹಾಕಿಕೊಂಡಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿಯ ರಿತಾಲಾದಲ್ಲಿ ಫೆಬ್ರುವರಿ ೮ರಂದು ನಡೆದ ಚುನಾವಣಾ ಸಭೆಯಲ್ಲಿ ವಿತ್ತ ಸಹಾಯಕ ಸಚಿವ ಅನುರಾಗ್ ಠಾಕೂರ್ ಅವರು ಪ್ರಚೋದನಾಕಾರಿ ಮಾತುಗಳನ್ನು ಆಡಿದ್ದು ಕ್ಯಾಮರಾದಲ್ಲಿ ದಾಖಲಾಗಿತ್ತು. ತಲೆಯ ಮೇಲ್ಭಾಗದಲ್ಲಿ ತಮ್ಮ ಕೈಗಳಿಂದ ಚಪ್ಪಾಳೆ ತಟ್ಟುತ್ತಾ ಠಾಕೂರ್ ಅವರು ’ದೇಶ್ ಕಿ ಗದ್ದಾರೋಂ ಕೊ’ (ದೇಶ
ದ್ರೋಹಿಗಳಿಗೆ) ಎಂದು ಕೂಗುವುದು ಮತ್ತು ಗುಂಪು ಅದಕ್ಕೆ ’ಗೋಲಿ ಮಾರೋ ಎಸ್***ಎನ್ ಕೊ’
(ಗುಂಡು ಹಾರಿಸಿ) ಎಂಬುದಾಗಿ ಘೋಷಣೆ ಕೂಗಿ ಪ್ರತಿಕ್ರಿಯಿಸಿದ್ದು ವಿಡಿಯೋದಲ್ಲಿ ದಾಖಲಾಗಿತ್ತು. ಈ
ವಿಡಿಯೋ ವ್ಯಾಪಕವಾಗಿ ಪ್ರಸಾರಗೊಂಡಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment