2020: ನವದೆಹಲಿ:
ದೇಶದ ಪ್ರತಿಷ್ಠಿತ ಚುನಾವಣಾ ಸಮರದಲ್ಲಿ ದೆಹಲಿ ವಿಧಾನಸಭೆಯ ೭೦ಸ್ಥಾನಗಳ ಪೈಕಿ ೬೨ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು 2020 ಫೆಬ್ರುವರಿ 11ರ ಮಂಗಳವಾರ ಮತ್ತೆ
ಪ್ರಚಂಡ ವಿಜಯ ಗಳಿಸಿದ್ದು ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿ ಗದ್ದುಗೆ ಏರಲು ಸಜ್ಜಾಗಿದ್ದಾರೆ. ಆಪ್ ಜೊತೆಗೆ ತೀವ್ರ ಸೆಣಸಾಟ ನಡೆಸಿದ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕೇವಲ ೮ ಸ್ಥಾನಗಳಿಗೆ ತೃಪ್ತಿ
ಪಟ್ಟುಕೊಂಡರೆ, ಕಾಂಗ್ರೆಸ್ ಪಕ್ಷವು ಪುನಃ ಶೂನ್ಯಸಂಪಾದನೆ ಮಾಡಿತು. ಕೇಂದ್ರದಲ್ಲಿ
ಆಡಳಿತಾರೂಢ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷವು ೨೦ ವರ್ಷಗಳ ಬಳಿಕ
ರಾಷ್ಟ್ರ ರಾಜಧಾನಿಯ ಅಧಿಕಾರ ಪಡೆದುಕೊಳ್ಳಲು ಆಮ್ ಆದ್ಮಿ ಪಕ್ಷದೊಂದಿಗೆ ನೇರಹಣಾಹಣಿ ನಡೆಸಿದರೂ, ಸಾಧ್ಯವಾಗದೆ ಸೋಲನ್ನು ಒಪ್ಪಿಕೊಂಡಿತು. ಬಿಜೆಪಿ
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ
ಅವರು ’ದೆಹಲಿ ಮತದಾರರ ತೀರ್ಪನ್ನು ಬಿಜೆಪಿಯ ಮಾನ್ಯ ಮಾಡುತ್ತದೆ’
ಎಂಬುದಾಗಿ ಟ್ವೀಟ್ ಮಾಡುವ ಮೂಲಕ ಚುನಾವಣಾ ಸೋಲನ್ನು ಒಪ್ಪಿಕೊಂಡರು ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಭಿನಂದಿಸಿದರು. ಚುನಾವಣಾ ಕಾಲದಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅವರು ಅದೇ ಟ್ವೀಟ್ ಮೂಲಕ ಕೃತಜ್ಞತೆ ಸಲ್ಲಿಸಿದರು. ಬಿಜೆಪಿಯ
ದೆಹಲಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಅವರು ಫಲಿತಾಂಶ ದಿಕ್ಕನ್ನು ಗುರುತಿಸಿ ’ಫಲಿತಾಂಶ ಏನೇ ಬಂದರೂ ನಾವು ಸ್ವಾಗತಿಸುತ್ತೇವೆ. ಬಿಜೆಪಿ ಸೇಡಿನ ರಾಜಕೀಯಕ್ಕೆ ಇಳಿಯುವುದಿಲ್ಲ’ ಎಂದು
ಹೇಳಿದ್ದರು. ಪಕ್ಷದ ಇನ್ನೊಬ್ಬ ನಾಯಕ, ಕ್ರಿಕೆಟಿಗ ಗೌತಮ್ ಗಂಭೀರ್ ಅವರೂ ಸೋಲನ್ನು ಒಪ್ಪಿಕೊಂಡು ಕೇಜ್ರಿವಾಲ್ ಅವರನ್ನು ಅಭಿನಂದಿಸಿದರು. ‘ನಾವು ದೆಹಲಿ ಜನರ ಮನಸ್ಸು ಗೆಲ್ಲಲು ಸಾಕಷ್ಟು ಪ್ರಯತ್ನ ಮಾಡಿದೆವು. ಆದರೆ ಜನರು ನಮಗೆ ಆಶೀರ್ವಾದ ಮಾಡಲಿಲ್ಲ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಜನರಿಗೆ ಉತ್ತಮ ಆಡಳಿತ ನೀಡಲಿ’ ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸೇರಿದಂತೆ ತನ್ನ ಅತಿರಥರೆಲ್ಲರನ್ನೂ ಚುನಾವಣಾ ಹೋರಾಟದ ಕಣದಲ್ಲಿ ಸುತ್ತಾಡಿಸಿ, ಆಮ್ ಆದ್ಮಿ ಪಕ್ಷದ ಪ್ರಚಾರವನ್ನು ಮೀರುವಂತೆ ಪ್ರಚಾರ ನಡೆಸಿದರೂ ಭಾರತೀಯ ಜನತಾ ಪಕ್ಷವು ತನ್ನ ಸದಸ್ಯ ಬಲವನ್ನು ಎರಡಂಕಿ ತಲುಪಿಸಲೂ ಸಮರ್ಥವಾಗಲಿಲ್ಲ. ೨೦೧೫ರಲ್ಲಿ ೩ ಸ್ಥಾನಗಳನ್ನು ಗೆದ್ದಿದ್ದ
ಪಕ್ಷದ ಬಲ ಈ ಬಾರಿ
೮ಕ್ಕೆ ಏರಿ ನಿಂತಿತು. ೨೦೧೫ರಲ್ಲಿ ೬೭ ಸ್ಥಾನಗಳನ್ನು ಗೆದ್ದಿದ್ದ
ಆಮ್ ಆದ್ಮಿ ಪಕ್ಷ ಈ ಬಾರಿ ಅಲ್ಪ
ಕುಸಿತವನ್ನು ಕಂಡಿದ್ದು, ೬೨ ಸ್ಥಾನಗಳಲ್ಲಷ್ಟೇ ಜಯ
ಸಾಧಿಸಿತು. ರಾಷ್ಟ್ರಮಟ್ಟದ
ಪಕ್ಷವಾಗಿರುವ ಕಾಂಗ್ರೆಸ್ ಮಾತ್ರ ಈ ಚುನಾವಣೆಯಲ್ಲಿ ೬೩
ಅಭ್ಯರ್ಥಿಗಳ ಠೇವಣಿ ನಷ್ಟದೊಂದಿದೆ ದಾಖಲೆ ಮಟ್ಟದ ಕಳಪೆ ಪ್ರದರ್ಶನವನ್ನು ಮಾಡಿತು. ಚಲಾವಣೆಗೊಂಡ ಮತಗಳ ಪೈಕಿ ಕಾಂಗೆಸ್ ಪಕ್ಷವು ಶೇಕಡಾ ೫ಕ್ಕಿಂತಲೂ ಮತಗಳನ್ನು ಪಡೆಯಿತು. ಕಾಂಗ್ರೆಸ್ ಅಭ್ಯರ್ಥಿಗಳಾದ ಅರವಿಂದರ್ ಸಿಂಗ್ ಲವ್ಲಿ (ಗಾಂಧಿನಗರ), ದೇವಿಂದರ್ ಯಾದವ್ (ಬಾಡ್ಲಿ) ಮತ್ತು ಅಭಿಷೇಕ್ ದತ್ತ್ (ಕಸ್ತೂರ್ಬಾ ನಗರ) ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಸಮರ್ಥರಾದರು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಪಕ್ಷದ ಬಹುತೇಕ ಪ್ರಮಖರು ಜಯಗಳಿಸಿದರೂ, ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರು ಕೂದಲೆಳೆಯ ಅಂತರದಲ್ಲಿ ಜಯಗಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ದೆಹಲಿ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಮುಂದುವರೆಯುತ್ತಿದ್ದಂತೆ ಯೇ ಭಾರತೀಯ ಜನತಾ ಪಕ್ಷವು 2020 ಫೆಬ್ರುವರಿ 11ರ ಮಂಗಳವಾರ ತನ್ನ
ದೆಹಲಿ ಕಚೇರಿಯ ಮುಂದೆ ನಿಗೂಢ ಸಂದೇಶವನ್ನು ಹೊತ್ತ ಭಿತ್ತಿ ಚಿತ್ರವನ್ನು ಪ್ರದರ್ಶಿಸಿತು. ‘ವಿಜಯದಿಂದ ಅಹಂಕಾರಿಗಳಾಗಿ ಬೀಗುವುದಿಲ್ಲ, ಸೋಲಿನಿಂದ ಭ್ರಮನಿರಸನಗೊಂಡು ಕುಗ್ಗುವುದಿಲ್ಲ’ ಎಂಬ
ಒಕ್ಕಣೆ ಇರುವ ಹಿಂದಿ ಭಾಷೆಯ ಭಿತ್ತಿ ಚಿತ್ರವನ್ನು ಪಕ್ಷವು ಪ್ರದರ್ಶಿಸಿತು. ಚಿತ್ರದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಬಿಜೆಪಿ ಪ್ರಚಾರದ ನೇತೃತ್ವ ವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು
ಪ್ರಕಟಿಸಲಾಯಿತು. ಕನಿಷ್ಠ ಐದು ಮತಗಟ್ಟೆ ಸಮೀಕ್ಷೆಗಳು ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ-ಆಪ್) ದೆಹಲಿಯಲಿ ಸುಲಭ ಜಯದ ಭವಿಷ್ಯ ನುಡಿದಿದ್ದವು. ಮತ್ತು ಮಂಗಳವಾರ ಮತಗಳ ಎಣಿಕೆಯಲ್ಲಿ ಪ್ರಗತಿಯಾಗುತ್ತಿದ್ದಂತೆಯೇ ಈ ಭವಿಷ್ಯ ನಿಜವಾಗುವ
ಮುನ್ಸೂಚನೆ ಲಭಿಸಿತು.ಆಮ್ ಆದ್ಮಿ ಪಕ್ಷವು ೬೦ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪ್ರಚಂಡ ಮುನ್ನಡೆಯತ್ತ ದಾಪುಗಾಲು ಹಾಕಿದರೆ, ಬಿಜೆಪಿಯು ಎರಡಂಕಿಗಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲುವ ಸೂಚನೆ ನೀಡಿತು. ಕಾಂಗ್ರೆಸ್ ಈ ಬಾರಿಯೂ ಶೂನ್ಯ
ಸಾಧನೆಯ ಸ್ಪಷ್ಟ ಸುಳಿವು ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಪ್ರಚಂಡ ವಿಜಯಗಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು 2020 ಫೆಬ್ರುವರಿ 11ರ ಮಂಗಳವಾರ ಅಭಿನಂದಿಸಿದರು.
‘ಆಪ್ ಮತ್ತು ಶ್ರಿ ಅರವಿಂದ ಕೇಜ್ರಿವಾಲ್ ಜಿ ಅವರಿಗೆ ದೆಹಲಿ
ವಿಧಾನಸಭಾ ಚುನಾವಣೆಯ ವಿಜಯಕ್ಕಾಗಿ ಅಭಿನಂದನೆಗಳು. ದೆಹಲಿಯ ಜನರ ಆಶಯಗಳನ್ನು ಈಡೇರಿಸುವಲ್ಲಿ ಅವರಿಗೆ ಯಶಸ್ಸು ಸಿಗಲಿ ಹಾರೈಸುತ್ತೇನೆ’ ಎಂದು
ಪ್ರಧಾನಿ ಟ್ವೀಟ್ ಮಾಡಿದರು. ಪ್ರಧಾನಿ
ಮೋದಿ ಅವರ ಟ್ವೀಟ್ಗೆ ತತ್ ಕ್ಷಣವೇ
ಸ್ಪಂದಿಸಿದ ಅರವಿಂದ ಕೇಜ್ರಿವಾಲ್ ಅವರು ಧನ್ಯವಾದಗಳನ್ನು ಹೇಳಿ, ಕೇಂದ್ರದ ಜೊತೆ ನಿಕಟವಾಗಿ ಕೆಲಸ ಮಾಡಲು ಬಯಸುವುದಾಗಿ ತಿಳಿಸಿದರು. ’ತುಂಬಾ
ಧನ್ಯವಾದಗಳು ಸರ್. ನಮ್ಮ ರಾಜಧಾನಿ ನಗರವನ್ನು ನಿಜವಾದ ವಿಶ್ವದರ್ಜೆಯ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರದ ಜೊತೆಗೆ ನಿಕಟವಾಗಿ ಶ್ರಮಿಸುವುದನ್ನು ಎದುರು ನೋಡುತ್ತಿದ್ದೇನೆ’ ಎಂದು
ಕೇಜ್ರಿವಾಲ್ ಅವರು ಟ್ವೀಟ್ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಸಂಯುಕ್ತ ಜನತಾದಳದಿಂದ ನಿತೀಶ್ ಕುಮಾರ್ ಅವರು ಕಿತ್ತೆಸೆದಿದ್ದ ರಾಜಕೀಯ ವ್ಯೂಹ ಚತುರ ಪ್ರಶಾಂತ ಕಿಶೋರ್ ಅವರು ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆಯ ರೂವಾರಿಯಾಗಿದ್ದು ಪಕ್ಷದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಕಾರಣ ಎಂಬ ಸುಳಿವನ್ನು 2020 ಫೆಬ್ರುವರಿ
11ರ ಮಂಗಳವಾರ ನೀಡಿದರು. ೭೦ ವಿಧಾನಸಭಾ
ಕ್ಷೇತ್ರಗಳ ಪೈಕಿ ೫೭ ಸ್ಥಾನಗಳಲ್ಲಿ ಅರವಿಂದ
ಕೇಜ್ರಿವಾಲ್ ನೇತೃತ್ವದ ಆಪ್ ಸ್ಪಷ್ಟ ಮುನ್ನಡೆ ಸಾಧಿಸುತ್ತಿದ್ದಂತೆಯೇ ಪ್ರಶಾಂತ ಕಿಶೋರ್ ಅವರು ದೆಹಲಿ ಮತದಾರರಿಗೆ ಧನ್ಯವಾದಗಳನ್ನು ಹೇಳಿ ಟ್ವೀಟ್ ಮಾಡಿದರು. ‘ಭಾರತದ ಆತ್ಮ ರಕ್ಷಣೆಗಾಗಿ ಎದ್ದು ನಿಂತದ್ದಕ್ಕಾಗಿ ಧನ್ಯವಾದಗಳು ದೆಹಲಿ’ ಎಂದು ಪ್ರಶಾಂತ ಕಿಶೋರ್ ಟ್ವೀಟ್ ಮಾಡಿದರು. ಅರವಿಂದ ಕೇಜ್ರಿವಾಲ್ ಅವರು ವಿದಾನಸಭಾ ಚುನಾವಣೆಗೆ ಮುನ್ನ ಪ್ರಶಾಂತ ಕಿಶೋರ್ ನೇತೃತ್ವದ ಚುನಾವಣಾ ವ್ಯೂಹಗಾರಿಕಾ ಸಂಸ್ಥೆ ’ಇಂಡಿಯನ್ ಪೊಲಿಟಿಕಲ್
ಆಕ್ಷನ್ ಕಮಿಟಿ’ಯನ್ನು ತಮ್ಮ ಕಡೆಗೆ ಸೆಳೆದುಕೊಂಡಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಮರಣದಂಡನೆ ಜಾರಿಗಾಗಿ ಹೊಸದಾಗಿ ಡೆತ್ ವಾರಂಟ್ ಹೊರಡಿಸುವಂತೆ ಕೋರಿ, ಸಂತ್ರಸ್ಥೆಯ ಪಾಲಕರು ಮತ್ತು ದೆಹಲಿ ಸರ್ಕಾರ 2020 ಫೆಬ್ರುವರಿ 11ರ ಮಂಗಳವಾರ ದೆಹಲಿ
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಉತ್ತರ ನೀಡುವಂತೆ ನ್ಯಾಯಾಲಯವು ಶಿಕ್ಷಿತ ಅಪರಾಧಿಗಳಿಗೆ ನೋಟಿಸ್ ನೀಡಿತು. ಅಡಿಷನಲ್ ಸೆಷನ್ಸ್
ನ್ಯಾಯಾಧೀಶ ಧಮೇಂದ್ರ ರಾಣಾ ಅವರು ಎಲ್ಲ ಶಿಕ್ಷಿತ ಅಪರಾಧಿಗಳೂ ನೋಟಿಸ್ ಜಾರಿ ಮಾಡಿದ್ದು, ಪ್ರಕರಣವನ್ನು ಬುಧವಾರ (ಫೆಬ್ರುವರಿ ೧೨) ವಿಚಾರಣೆಗೆ ಎತ್ತಿಕೊಳ್ಳುವುದಾಗಿ ತಿಳಿಸಿದರು. ಶಿಕ್ಷಿತ
ಅಪರಾಧಿಗಳು ಕಾನೂನನ್ನು ಅಣಕಿಸುತ್ತಿದ್ದಾರೆ ಮತ್ತು ವ್ಯರ್ಥಗೊಳಿಸುತ್ತಿದ್ದಾರೆ ಎಂದು ಸಂತ್ರಸ್ಥೆಯ ಪಾಲಕರು ನ್ಯಾಯಾಲಯಕ್ಕೆ ತಿಳಿಸಿದರು. ಶಿಕ್ಷಿತ ಅಪರಾಧಿಗಳನ್ನು ಗಲ್ಲಿಗೆ ಏರಿಸಲು ಹೊಸದಾಗಿ ದಿನಾಂಕ ನಿಗದಿ ಪಡಿಸುವಂತೆ ಕೋರಿ ಅಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮಂಗಳವಾರ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ಹೊಸ ಡೆತ್ ವಾರಂಟ್ ಜಾರಿ ಕೋರಿ ಅರ್ಜಿ ಸಲ್ಲಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment