Monday, February 3, 2020

ಇಂದಿನ ಇತಿಹಾಸ History Today ಫೆಬ್ರುವರಿ 03

2020: ಮಂಗಳೂರು/ ತಿರುವನಂತಪುರಂ: ಕೇರಳದಲ್ಲಿ ಕೊರೊನಾ ವೈರಸ್ ಎರಡನೇ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕಾಸರಗೋಡಿನ ಕಾಂಞಗಾಡಿ ನಲ್ಲಿ ಮೂರನೇ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ 2020 ಫೆಬ್ರುವರಿ 03ರ ಸೋಮವಾರ ಖಚಿತಪಡಿಸಿದರು. ಇದರ ಬೆನ್ನಲ್ಲೇ ಕೇರಳ ಸರ್ಕಾರವು ‘ಕೊರೋನಾವೈರಸ್’ನ್ನು ‘ರಾಜ್ಯ ವಿಪತ್ತು’ ಎಂಬುದಾಗಿ ಘೋಷಿಸಿತು. ಮೂರನೇ ವ್ಯಕ್ತಿ ಕೂಡಾ ಇತ್ತೀಚೆಗೆ ಕೊರೊನಾ ವೈರಸ್ ತವರಾದ ಚೀನಾದಿಂದ ತಾಯ್ನಾಡಿಗೆ ಮರಳಿದ್ದು, ಈಗಾಗಲೇ ಚೀನಾದಿಂದ ಕೇರಳಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಪ್ರಸ್ತುತ ರೋಗಿಯನ್ನು  ಕಾಸರಗೋಡಿನ ಕಾಂಞಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಿ,  ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಈತ ಇತ್ತೀಚೆಗಷ್ಟೇ ಚೀನಾದ ವುಹಾನ್ ನಿಂದ ಕಾಸರಗೋಡಿಗೆ ಬಂದಿರುವುದಾಗಿ ವರದಿ ವಿವರಿಸಿತು. ಕೇರಳದಲ್ಲಿ ಈವರೆಗೆ ಮೂರು ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚಲಾಗಿದೆ. ಅಲ್ಲದೇ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು ಎರಡು ಸಾವಿರ ಜನರ ಮೇಲೆ ನಿಗಾ ಇರಿಸಲಾಗಿದೆ ಎಂದು ಸಚಿವರು ತಿಳಿಸಿದರು.  ಕಳೆದ ಗುರುವಾರವಷ್ಟೇ ಕೇರಳದ ತ್ರಿಶ್ಯೂರ್ ನಲ್ಲಿ ಮೊದಲ ಕೊರೊನಾ ವೈರಸ್ ರೋಗವನ್ನು ಪತ್ತೆ ಹಚ್ಚಲಾಗಿತ್ತು. ಈಕೆ ಚೀನಾದ ವುಹಾನ್ ನಿಂದ ಊರಿಗೆ ಮರಳಿದ್ದು, ಪರೀಕ್ಷೆ ನಡೆಸಿದ ವೇಳೆ ಪಾಸಿಟಿವ್ ಲಕ್ಷಣ ಪತ್ತೆಯಾಗಿತ್ತು ಎಂದು ವರದಿ ವಿವರಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ಟೀಕೆಗಳಿಗಾಗಿ ಬೇಷರತ್ ಕ್ಷಮೆ ಯಾಚಿಸುವಂತೆ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಹೆಗಡೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು 2020 ಫೆಬ್ರುವರಿ 03ರ ಸೋಮವಾರ ದೃಢ ಪಡಿಸಿದರು.  ರಾಷ್ಟ್ರಪಿತನ ಬಗ್ಗೆ ಅನಂತಕುಮಾರ ಹೆಗಡೆ ಅವರು ಮಾಡಿರುವ ಟೀಕೆಗೆಳ ಬಗ್ಗೆ ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವವು , ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ತೀವ್ರ  ಅಸಮಾಧಾನಗೊಂಡಿದ್ದಾರೆ. ಮತ್ತು ಸಂಸದೀಯ ಮಂಡಳಿ ಸಭೆಗೆ ಹಾಜರಾಗದಂತೆ ಅವರಿಗೆ ವರಿಷ್ಠರು ಸೂಚಿಸಿದ್ದಾರೆ  ಎಂದು ಸುದ್ದಿ ಸಂಸ್ಥೆಯು ಅಪರಿಚಿತ ಮೂಲಗಳನ್ನು ಉಲ್ಲೇಖಿಸಿ ಹೇಳಿತು. ತಮ್ಮ ವಿವಾದಾತ್ಮಕ ಹೇಳಿಕೆಗಳಿಗಾಗಿ ಪರಿಚಿತರಾಗಿರುವ ಮಾಜಿ ಕೇಂದ್ರ ಸಚಿವರು ಮಹಾತ್ಮ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟವನ್ನುನಾಟಕಎಂಬುದಾಗಿ ಬಣ್ಣಿಸಿದ್ದರು ಮತ್ತುಇಂತಹ ವ್ಯಕ್ತಿಗಳನ್ನುಭಾರತದಲ್ಲಿಮಹಾತ್ಮಎಂಬುದಾಗಿ ಕರೆಯುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ್ದರುಉತ್ರರ ಕನ್ನಡದಿಂದ ಆರು ಬಾರಿ ಲೋಕಸಭಾ ಸದಸ್ಯರಾಗಿರುವ ಅನಂತಕುಮಾರ ಹೆಗಡೆ ಅವರು ಬೆಂಗಳೂರಿನಲ್ಲಿ ಶನಿವಾರ ಸಮಾರಂಭ ಒಂದರಲ್ಲಿ ಭಾಷಣ ಮಾಡುತ್ತಾಇಡೀ ಸ್ವಾತಂತ್ರ್ಯ ಚಳವಳಿಯೇ ಬ್ರಿಟಿಷರ ಒಪ್ಪಿಗೆ ಮತ್ತು ಬೆಂಬಲದ ಜೊತೆಗೆ ನಡೆದಿತ್ತುಎಂದು ಹೇಳಿದ್ದರು.  ‘ ತಥಾಕಥಿತ ನಾಯಕರಾರನ್ನೂ ಪೊಲೀಸರು ಒಮ್ಮೆ ಕೂಡಾ ಥಳಿಸಿಲ್ಲ. ಅವರ ಸ್ವಾತಂತ್ರ್ಯ ಚಳವಳಿಯು ಒಂದು ದೊಡ್ಡ ನಾಟಕ. ಅದನ್ನು ನಾಯಕರು ಬ್ರಿಟಿಷರ ಒಪ್ಪಿಗೆಯೊಂದಿಗೇ ನಡೆಸಿದ್ದರು. ಅದು ನೈಜ ಹೋರಾಟವಲ್ಲ. ಅದೊಂದು ಹೊಂದಾಣಿಕೆಯ ಸ್ವಾತಂತ್ರ್ಯ ಹೋರಾಟವಾಗಿತ್ತುಎಂದು ಹೆಗಡೆ ಹೇಳಿದುದಾಗಿ ವರದಿಗಳು ತಿಳಿಸಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನುಭಯೋತ್ಪಾದಕಎಂಬುದಾಗಿ ಕರೆದಿರುವುದಕ್ಕಾಗಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ತೀವ್ರ ಟೀಕೆಗೆ ಒಳಗಾಗಿರುವುದರ ಮಧ್ಯೆಯೇ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು 2020ರ ಫೆಬ್ರುವರಿ 03ರ ಸೋಮವಾರ ಪಕ್ಷ ಸಂಸದನ ಬೆಂಬಲಕ್ಕೆ ಬಂದಿದ್ದು, ’ಕೇಜ್ರಿವಾಲ್ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಬೇಕಾದಷ್ಟು ಸಾಕ್ಷ್ಯಾಧಾರಗಳು ಇವೆಎಂದು ಪ್ರತಿಪಾದಿಸಿದರು. ಕೇಜ್ರಿವಾಲ್ ವಿರುದ್ಧ ವರ್ಮಾ ಮಾಡಿದ ಆರೋಪವನ್ನು ಪತ್ರಿಕಾಗೋಷ್ಠಿಯಲ್ಲಿ ಪುನರುಚ್ಚರಿಸಿದ ಜಾವಡೇಕರ್, ’ಕೇಜ್ರಿವಾಲ್ ಅವರು ಈಗ ಬೇಸರದ ಮುಖ ಹೊತ್ತುಕೊಂಡುನಾನು ಭಯೋತ್ಪಾದಕನೇ?’ ಎಂದು ಕೇಳುತ್ತಿದ್ದಾರೆ. ನೀವು ಭಯೋತ್ಪಾದಕ ಮತ್ತು ಅದನ್ನು ಸಾಬೀತು ಪಡಿಸಲು ಬೇಕಾದಷ್ಟು ಸಾಕ್ಷ್ಯಾಧಾರಗಳಿವೆ. ನೀವೊಬ್ಬ ಅರಾಜಕತಾವಾದಿ ಎಂದು ನೀವೇ ಸ್ವತಃ ಹೇಳಿಕೊಂಡಿದ್ದಿರಿ. ಅರಾಜಕತಾವಾದಿ ಮತ್ತು ಭಯೋತ್ಪಾದಕನಿಗೆ ಹೆಚ್ಚಿನ ವ್ಯತ್ಯಾಸವೇನಿಲ್ಲಎಂದು ಹೇಳಿದರು. ಕೇಜ್ರಿವಾಲ್ ವಿರುದ್ಧ ಮಾಡಿದ ಟೀಕೆಗಾಗಿ ಚುನಾವಣಾ ಆಯೋಗವು ಪರ್ವೇಶ್ ವರ್ಮಾ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಕೆಲವು ದಿನಗಳ ಬಳಿಕ ಜಾವಡೇಕರ್ ಅವರಿಂದ ಹೇಳಿಕೆ ಬಂದಿತು. ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಜಾವಡೇಕರ್, ’ಕೇಜ್ರಿವಾಲ್ ಅವರು ಪಂಜಾಬ್ ವಿಧಾನಸಭಾ ಚುನಾವಣೆಗಳ ವೇಳೆಯಲ್ಲಿ ಖಲಿಸ್ಥಾನ್ ಕಮಾಂಡೋ ಪಡೆಯ ಮುಖ್ಯಸ್ಥ ಗುರೀಂದರ್ ಸಿಂಗ್ ಮೋಗಾ ನಿವಾಸದಲ್ಲಿ ಒಂದು ರಾತ್ರಿ ತಂಗಿದ್ದರುಎಂದು ನೆನಪಿಸಿದರು. ‘ಅದು ಉಗ್ರಗಾಮಿಯೊಬ್ಬನ ಮನೆ ಎಂಬುದು ನಿಮಗೆ ಗೊತ್ತಿದೆ. ಆದರೂ, ನೀವು ಅಲ್ಲಿ ತಂಗಿದ್ದಿರಿ. ಇನ್ನೆಷ್ಟು ಸಾಕ್ಷ್ಯಗಳ ಅಗತ್ಯವಿದೆ?’ ಎಂದು ಜಾವಡೇಕರ್ ಪ್ರಶ್ನಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ವಿಧಾನಸಭಾ ಚುನಾವಣೆಗಾಗಿ ಸಜ್ಜಾಗಿರುವ ದೆಹಲಿಯ ಪ್ರಚಾರಕಣಕ್ಕೆ ಇಳಿದು ಚೊಚ್ಚಲ ಪ್ರಚಾರ  ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರದ ಪ್ರತಿಷ್ಠಿತ ಚುನಾವಣಾ ಕಣಕ್ಕೆ ಸೋಮವಾರ ಇನ್ನಷ್ಟು ಕಾವೇರಿಸಿದ ಪ್ರಧಾನಿ ನರೇಂದ್ರ ಮೋದಿ, ’ದೆಹಲಿಯ ಶಾಹೀನಾಬಾಗ್, ಜಾಮಿಯಾ ಪ್ರತಿಭಟನೆಗಳ ಹಿಂದೆ ದೇಶವನ್ನು ಛಿದ್ರಗೊಳಿಸುವ ರಾಜಕೀಯ ಷಡ್ಯಂತ್ರವಿದೆಎಂದು ಆಪಾದಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ರಾಷ್ಟ್ರೀಯ ರಾಜಧಾನಿಯ ಹಲವು ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಸಂಚಿನ ಭಾಗವಾಗಿವೆಯೇ ಹೊರತು, ಕಾಕತಾಳೀಯ ಅಲ್ಲ ಎಂದು ನುಡಿದ ಮೋದಿ, ಆಮ್ ಆದ್ಮಿ ಪಕ್ಷ (ಆಪ್) ಮತ್ತು ಕಾಂಗ್ರೆಸ್ ಪ್ರದರ್ಶನಗಳಿಗೆಇಂಧನತುಂಬುತ್ತಿವೆ ಎಂದು ಟೀಕಿಸಿದರು. ಕಳೆದ ವರ್ಷ ಡಿಸೆಂಬರ್ ೧೫ರಿಂದ ಮಹಿಳೆಯರ ನೇತೃತ್ವದಲ್ಲಿ ಶಾಹೀನಾ ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಜಾಮಿಯಾ ಮಿಲ್ಲಿಯಾದಲ್ಲಿ ವಿದ್ಯಾಥಿಗಳ ನೇತೃತ್ವದಲ್ಲಿ ಪದೇ ಪದೇ ನಡೆಯುತ್ತಿರುವ ಪ್ರತಿಭಟನೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ‘ಸೀಲಂಪುರ ಇರಬಹುದು, ಜಾಮಿಯಾ ಇರಬಹುದು ಅಥವಾ ಶಾಹೀನಾಬಾಗ್ ಇರಬಹುದು, ಕಳೆದ ಹಲವಾರು ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪ್ರತಿಭಟನೆ ಕೇವಲ ಕಾಕತಾಳೀಯವೇ? ಇಲ್ಲ. ಇದೊಂದು ಸಂಚುಎಂದು ಪ್ರಧಾನಿ ನುಡಿದರು. ಪೂರ್ವದೆಹಲಿಯ ಕರ್ಕರಡೂಮದಲ್ಲಿ ರಾಷ್ಟ್ರದ ಸಾಮರಸ್ಯವನ್ನೇ ಹಾಳುಗಡೆಹುವ ರಾಜಕೀಯ ಹಿನ್ನೆಲೆಯ ಸಂಚು ರೂಪಿಸಲಾಗಿದೆ ಎಂದು ನುಡಿದ ಮೋದಿ, ’ಶಾಹೀನಾಬಾಗ್ ಪ್ರತಿಭಟನೆಗಳ ಪರಿಣಾಮವಾಗಿ ನೋಯ್ಡಾಕ್ಕೆ ಬಂದು ಹೋಗುವ ಜನರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿನ ರಸ್ತೆಯ ಬಹುಭಾಗವನ್ನು ಪ್ರತಿಭಟನಕಾರರು ಆವರಿಸಿದ್ದಾರೆಎಂದು ಹೇಳಿದರು. ದೆಹಲಿಯ ಜನರು ಮೌನವಾಗಿದ್ದಾರೆ ಮತ್ತು ವೋಟ್ ಬ್ಯಾಂಕ್ ರಾಜಕೀಯವನ್ನು ಕೋಪೋದ್ರಿಕ್ತರಾಗಿ ವೀಕ್ಷಿಸುತ್ತಿದ್ದಾರೆ. ಶಾಹೀನಾಬಾಗ್ ಪ್ರತಿಭಟನೆಗಳಿಂದಾಗಿ ದೆಹಲಿಯ ಜನರು ಹಲವಾರು ಅಡಚಣೆಗಳನ್ನು ಎದುರಿಸುತ್ತಿದ್ದಾರೆಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಅವರು ಫೆಬ್ರುವರಿ ೧ರ ಶನಿವಾರ ಮಂಡಿಸಿದ ಬಜೆಟ್ ಭಾಷಣವು ೧೧ ಲಕ್ಷಕ್ಕೂ ಅಧಿಕ ಟ್ವೀಟ್ ಗಳ ಮೂಲಕ ದಾಖಲೆ ನಿರ್ಮಿಸಿತು. ಬರೋಬ್ಬರಿ ಗಂಟೆ ೪೦ ನಿಮಿಷಗಳ ಕಾಲ ನಿರಂತರ ಭಾಷಣ ಮಾಡಿದ ಬಳಿಕ ಆಯಾಸದಿಂದ  ಸೀತಾರಾಮನ್ ಅವರು ಅವರು ಕೊನೆಯ ಪುಟಗಳನ್ನು ಓದಿರಲೇ ಇಲ್ಲ. ಯೂನಿಯನ್ ಬಜೆಟ್ ೨೦೨೦’ ಎಂಬ ಹ್ಯಾಷ್ ಟ್ಯಾಗ್  ಅಡಿ ಟ್ವೀಟುಗಳನ್ನು ಮಾಡಲಾಗಿದೆ. ಟ್ವೀಟ್ ಮಾಡಿದವರೆಲ್ಲ ಬಜೆಟ್ ಬಗ್ಗೆ ಬಗ್ಗೆ ಪರ-ವಿರೋಧ ಅಭಿಪ್ರಾಯ ಮಂಡನೆ ಮಾಡಿದ್ದಾರೆ. ಭಾಷಣಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ವಿರುದ್ಧ ಲೇವಡಿಯ ಮಾತುಗಳೂ ಇದ್ದವು. ಹಂಟರ್ ಎಂಬ ಹೆಸರಿನಲ್ಲಿ ಟ್ವೀಟ್ ಮಾಡಿದವರು ಮಧ್ಯಮ ವರ್ಗದವರು ಬಜೆಟ್ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬರೆದರು.  ಅಶುತೋಶ್ ಸಿಂಗ್ ಎಂಬವರುರಾಹುಲ್ ಗಾಂಧಿಯವರು ಇನ್ನೂ ಬಜೆಟ್ ತಿಳಿದುಕೊಳ್ಳುತ್ತಿದ್ದಾರೆಎಂದು ಬರೆದಿದ್ದರು. ಅದಕ್ಕೆ ಲೋಕಸಭೆಯಲ್ಲಿ ಕುಳಿತು ಏನನ್ನೋ ನೋಡುತ್ತಿರುವ ಫೋಟೋ ಹಾಕಲಾಗಿದೆ. ಟ್ವೀಟ್ ದಾಖಲೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಇಂಡಿಯಾದ ಅಮಿತ್ ತ್ರಿಪಾಠಿ, ಬಜೆಟ್ ಭಾಷಣ ಮತ್ತು ಅದರ ವಿಶ್ಲೇಷಣೆಯನ್ನು ಹೆಚ್ಚಿನ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಾಹೀನ್ಬಾಗ್ನಲ್ಲಿ
ನಡೆಯುತ್ತಿರುವ   ಪ್ರತಿಭಟನೆ 2020 ಫೆಬ್ರುವರಿ 03ರ ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಹಾಗೂ ಇತರರಿಗೆ ನಿರ್ದೇಶನ ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟಿಗೆ ಮನವಿ ಮಾಡಿದರು. ನಂದಕಿಶೋರ್ ಗರ್ಗ್ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ,  ’ಕಳೆದ ಒಂದೂವರೆ ತಿಂಗಳಿಂದ ದೆಹಲಿಯ ಶಾಹೀನ್ಬಾಗ್, ಕಾಳಿಂಡಿ ಕುಂಜ್ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ದೆಹಲಿ ಹಾಗೂ ನೋಯ್ಡಾಗಳ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆಎಂದು ತಿಳಿಸಿದರು. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವುದರಿಂದ ಜನರ ದಿನನಿತ್ಯದ ಕೆಲಸಗಳಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಸಮಗ್ರ ಮಾರ್ಗಸೂಚಿ ರಚಿಸುವಂತೆ ಕೇಂದ್ರ ಸರ್ಕಾ ರಕ್ಕೆ ಸೂಚನೆ ನೀಡಬೇಕು ಎಂದೂ ಅವರು ತಮ್ಮ ಮನವಿಯಲ್ಲಿ ಕೋರಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment