ನಾನು ಮೆಚ್ಚಿದ ವಾಟ್ಸಪ್

Friday, February 21, 2020

ಇಂದಿನ ಇತಿಹಾಸ History Today ಫೆಬ್ರುವರಿ 21

2020: ಲಕ್ನೋ: ಉತ್ತರಪ್ರದೇಶದ ಸೋನ್ ಫಾಡಿ ಮತ್ತು ಹಾರ್ಡಿ ಪ್ರದೇಶದಲ್ಲಿ ಸುಮಾರು ೩೩೫೦ ಟನ್ನುಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಉತ್ತರಪ್ರದೇಶದ ಭೂವಿಜ್ಞಾನ ಮತ್ತು ಗಣಿ ನಿರ್ದೇಶನಾಲಯ 2020 ಫೆಬ್ರುವರಿ 21ರ ಶುಕ್ರವಾರ  ತಿಳಿಸಿತು.  ಸೋನ್ ಭದ್ರಾ ಜಿಲ್ಲೆಯ ಸೋನ್ ಫಾಡಿ ಪ್ರದೇಶದಲ್ಲಿ ಅಂದಾಜು ೨,೭೦೦ ಟನ್ ಗಳಷ್ಟು ಹಾಗೂ ಹಾರ್ಡಿ ಪ್ರದೇಶದಲ್ಲಿ ೬೫೦ ಟನ್ ಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿ ವಿವರಿಸಿತು. ಈ ಕುರಿತು ವಿವರಿಸಿದ ಜಿಲ್ಲಾ ಗಣಿ ಇಲಾಖಾ ಅಧಿಕಾರಿ ಕೆಕೆ ರಾಯ್  ಅವರು , ರಾಜ್ಯ ಗಣಿ ಇಲಾಖೆ ರಚಿಸಿದ ಏಳು ಜನರ ತಂಡ  2020 ಫೆಬ್ರುವರಿ 20ರ ಗುರುವಾರ ಸೋನ್ ಭದ್ರಾ ಪ್ರದೇಶಕ್ಕೆ ಭೇಟಿ ನೀಡಿತ್ತು. ಚಿನ್ನದ ಗಣಿಗಾರಿಕೆ ಮಾಡುವ ಪ್ರದೇಶವನ್ನು ತಂಡ ಮ್ಯಾಪ್ ಮಾಡಿದ್ದು, ಚಿನ್ನ ನಿಕ್ಷೇಪ ಸ್ಥಳವನ್ನು ಜಿಯೋ ಟ್ಯಾಗಿಂಗ್ (ಸ್ಥಳ ಗುರುತಿಸುವಿಕೆ) ಮಾಡಿರುವುದಾಗಿ ಹೇಳಿದರು. ಖನಿಜ ಶ್ರೀಮಂತಿಕೆಯ ಸೋನ್ ಭದ್ರಾ ಪ್ರದೇಶದಲ್ಲಿ ಸುಲಭವಾಗಿ ಚಿನ್ನದ ಗಣಿಗಾರಿಕೆ ಮಾಡಬಹುದು.  ಗಣಿಗಾರಿಕೆಯನ್ನು ಗುಡ್ಡಪ್ರದೇಶವನ್ನು ಸುತ್ತುವರಿದಿದೆ. ಈ ಬಗ್ಗೆ ಸರ್ಕಾರ ಕೂಡಲೇ ಹರಾಜು ಪ್ರಕ್ರಿಯೆ ಆರಂಭಿಸಲಿದೆ ಎಂದು ಅವರು ನುಡಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು:  ಪಾಕಿಸ್ತಾನ ಪರ ಘೋಷಣೆ ಕೂಗಿ ‘ಫ್ರೀ ಕಾಶ್ಮೀರ’ ಭಿತ್ತಿ ಚಿತ್ರ  ಪ್ರದರ್ಶಿಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ  2020 ಫೆಬ್ರುವರಿ 21ರ ಶುಕ್ರವಾರ ಬಂಧಿತಳಾದ ಆರೋಪಿ ಅರುದ್ರಾಗೆ  ನ್ಯಾಯಾಲಯವು ೧೪ ದಿನಗಳ  ನ್ಯಾಯಾಂಗ ಬಂಧನ ವಿಧಿಸಿತು. ನಗರದ ೬ನೇ ಎಸಿಎಂಎ ನ್ಯಾಯಾಧೀಶ ಕೃಷ್ಣಮೂರ್ತಿ  ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಮಾರ್ಚ್ ೫ರವೆಗೂ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ  ಅರುದ್ರಾಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಯಿತು.  2020 ಫೆಬ್ರುವರಿ 20ರ ಗುರುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾ ಕಾರ್ಯಕ್ರಮದ ವೇಳೆಯಲ್ಲಿ
ಎಕಾಏಕಿ ‘ಪಾಕಿಸ್ತಾನ್ ಜಿಂದಾಬಾದ್’  ಎಂದು ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದ ಬೆಂಗಳೂರಿನ ಎನ್ ಎಂಕೆ ಆರ್ ವಿ ಕಾಲೇಜಿನ ವಿದ್ಯಾರ್ಥಿನಿ, ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನಾ ವಿರುದ್ಧ  ಈದಿನ ಟೌನ್ ಹಾಲ್  ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಿಂದೂಪರ ಸಂಘಟನೆಗಳು ಅಮೂಲ್ಯ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅರುದ್ರಾ ಎಂಬ ಯುವತಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಲ್ಲದೆ ‘ಫ್ರೀ ಕಾಶ್ಮೀರ’ ಭಿತ್ತಿಚಿತ್ರ ಪ್ರದರ್ಶಿಸಿದಳು ಎಂಬುದಾಗಿ ಆರೋಪಿಸಲಾಯಿತು. ಸಿಎಎ ವಿರೋಧಿಸಿ ಪ್ರತಿಭಟನೆ ವೇಳೆ  ಸ್ವಾತಂತ್ರ್ಯ ಉದ್ಯಾನವನದಲ್ಲಿ  ’ಪಾಕಿಸ್ತಾನ್ ಜಿಂದಾಬಾದ್ ಎಂದು ಅಮೂಲ್ಯ ಲಿಯೋನಾ ಘೋಷಣೆ ಕೂಗಿದ್ದಳು. ಈಕೆ ವಿರುದ್ಧ ಹಿಂದೂಪರ ಸಂಘಟನೆಗಳು ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದವು. ಆಗ ಅರುದ್ರಾ ಎಂಬಾಕೆ ದಿಢೀರ್, ‘ಮುಸಲ್ಮಾನ್, ದಲಿತ, ಕಾಶ್ಮೀರಿ, ಟ್ರಾನ್ಸ್ , ಆದಿವಾಸ ಮುಕ್ತಿ ಎಂದು ಬರೆದಿದ್ದ ಭಿತ್ತಿಪತ್ರ ಪ್ರದರ್ಶಿಸಿದಳು. ನಂತರ ಪಾಕಿಸ್ತಾನ ಪರ ಘೋಷಣೆ ಕೂಗಿದಳು  ಎಂದು ಪ್ರತಿಭಟನೆ ಆಯೋಜಿಸಿದ್ದ ಸಂಘಟಕರು ಆರೋಪಿಸಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2020: ಮಂಗಳೂರು:  ಅಯೋಧ್ಯೆಯಲ್ಲಿ 67 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣದ ಜೊತೆಗೇ ಸಂಪೂ ಣ ಅಯೋಧ್ಯೆಗೆ ಹೊಸ ರೂಪ ಕೊಡುವ ಉದ್ದೇಶವಿದೆ ಎಂದು ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ರಚಿಸಿರುವ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಸದಸ್ಯರಲ್ಲಿ ಒಬ್ಬರಾಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  2020 ಫೆಬ್ರುವರಿ 21 ಶುಕ್ರವಾರ ಹೇಳಿದರು  ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ವಿಶ್ವಸ್ಥ ಮಂಡಳಿ (ಟ್ರಸ್ಟ್)  ರಚಿಸಿದೆ.  ಈ ಟ್ರಸ್ಟಿನ ಮೊದಲ ಸಭೆಯಲ್ಲಿ ಈ ಹಿಂದಿನ ನೀಲನಕ್ಷೆ ಪ್ರಕಾರವೇ ಯೋಜನಾಬದ್ಧವಾಗಿ ಮಂದಿರ ನಿರ್ಮಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  ನುಡಿದರು.  ಮಂದಿರ ನಿರ್ಮಾಣಕ್ಕೆ ಬೇಕಾದ ಶಿಲಾಕಲ್ಲುಗಳ ಕೆತ್ತನೆ ಕೆಲಸ ಹಲವು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಇವು ಶಿಲೆಕಲ್ಲುಗಳಾದ್ದರಿಂದ ಶಿಥಿಲಗೊಳ್ಳುವ ಸಂಭವ ಇಲ್ಲ. ಇವೆಲ್ಲವನ್ನೂ ಮತ್ತೆ ಪರಿಶೀಲಿಸಿಯೇ ಮಂದಿರ ನಿರ್ಮಾಣಕ್ಕೆ ಮುಂದಾಗಲಿದ್ದೇವೆ ಎಂದು ಅವರು ನುಡಿದರು. ಈ ಮಂದಿರ ಶತಮಾನಗಳವರೆಗೆ ಚಿರಸ್ಥಾಯಿಯಾಗಿ ಉಳಿದುಕೊಳ್ಳಬೇಕು ಎಂಬ ಬಯಕೆ ಇದೆ. ಇದಕ್ಕಾಗಿ ಅಯೋಧ್ಯೆಯನ್ನೇ ಮಂದಿರ ನಿರ್ಮಾಣದ ಸುಸಜ್ಜಿತ ಜಾಗವಾಗಿ ಪರಿವರ್ತಿಸುವ  ಉದ್ದೇಶ ಹೊಂದಲಾಗಿದೆ. ಅಯೋಧ್ಯೆಯ ಸುಮಾರು ೬೭ ಎಕರೆ ಪ್ರದೇಶದಲ್ಲಿ ಮಂದಿರ ನಿರ್ಮಾಣವಾದರೆ, ಇಡೀ ಅಯೋಧ್ಯೆಯನ್ನೇ ಯೋಜನಾಬದ್ಧವಾಗಿ ಮರುನಿರ್ಮಾಣ ಮಾಡುವ ಪ್ರಸ್ತಾಪವೂ ಇದೆ ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment