ಇಂದಿನ ಇತಿಹಾಸ History Today ನವೆಂಬರ್ 23
2020: ತಿರುವನಂತಪುರಂ: ಪೊಲೀಸ್ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಿದ ಕೇರಳ ಸರ್ಕಾರದ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾದ ಬಳಿಕ ಹೆಜ್ಜೆ ಹಿಂದಿಟ್ಟಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆಗೆ ಮುನ್ನ ಅದನ್ನು ಜಾರಿಗೊಳಿಸಲಾಗುವುದಿಲ್ಲ ಎಂದು 2020 ನವೆಂಬರ 23ರ ಸೋಮವಾರ ಹೇಳಿದರು. ಕೇರಳ ಪೊಲೀಸ್ ಕಾಯ್ದೆಯ ತಿದ್ದುಪಡಿಯನ್ನು "ವಾಕ್ಚಾತುರ್ಯ ಅಥವಾ ನಿಷ್ಪಕ್ಷಪಾತ ಪತ್ರಿಕೋದ್ಯಮದ ವಿರುದ್ಧ ಯಾವುದೇ ರೀತಿಯಲ್ಲಿ ಬಳಸಲಾಗುವುದಿಲ್ಲ" ಎಂದು ಈ ಮುನ್ನ ಹೇಳಿದ್ದ ಮುಖ್ಯಮಂತ್ರಿಯವರು ’ಕೇರಳ ವಿಧಾನಸಭೆಯಲ್ಲಿ ವಿವರವಾದ ಚರ್ಚೆಗೆ ಮುನ್ನ ವಿವಾದಾತ್ಮಕ ಕಾನೂನನ್ನು ಜಾರಿಗೆ ತರುವುದಿಲ್ಲ ಎಂದು ಭರವಸೆ ನೀಡಿದರು. ಎಲ್ಲ ಕಡೆಯ ಅಭಿಪ್ರಾಯಗಳನ್ನು ಆಲಿಸಲಾಗುವುದು ಮತ್ತು ಆ ನಂತರ ಮಾತ್ರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯನ್ ಹೇಳಿದರು. ‘ಕೇರಳ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಘೋಷಣೆಯ ಬೆನ್ನಲ್ಲೇ, ವಿಭಿನ್ನ ಭಾಗಗಳಿಂದ ವಿಭಿನ್ನ ಅಭಿಪ್ರಾಯಗಳು ಮೂಡಿದವು. ಎಡ ಪ್ರಜಾತಾಂತ್ರಕ ರಂಗವನ್ನು ಬೆಂಬಲಿಸಿದ್ದವರು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಿಂತವರು ಕಳವಳ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ನಾವು ಕಾನೂನನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಹೊಂದಿಲ್ಲ. ಈ ಬಗ್ಗೆ ವಿವರವಾದ ಚರ್ಚೆಗಳು ವಿಧಾನಸಭೆಯಲ್ಲಿ ನಡೆಯಲಿದ್ದು, ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಿದ ನಂತರ ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಸಹಿ ಹಾಕಿದ ಈ ಸುಗ್ರೀವಾಜ್ಞೆಯ ವಿರುದ್ಧ ಎಲ್ಲ ಕಡೆಗಳಿಂದ ಟೀಕೆಗಳು ವ್ಯಕ್ತವಾಗಿವೆ. ತಿದ್ದುಪಡಿಯು ಯಾವುದೇ ರೀತಿಯಲ್ಲಿ ಅವಹೇಳನಕಾರಿ ಅಥವಾ ಮಾನಹಾನಿಕರ ಎಂದು ಕಂಡುಬಂದಲ್ಲಿ ವಿಷಯವನ್ನು ಹರಡಿದ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುತ್ತದೆ. ಶಿಕ್ಷೆಗಳಲ್ಲಿ ಮೂರು ವರ್ಷಗಳ ಸೆರೆವಾಸ, ೧೦,೦೦೦ ರೂಪಾಯಿಗಳ ದಂಡ ಅಥವಾ ಎರಡೂ ಸೇರಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿಯಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಗುಜರಾತಿನಲ್ಲೂ ಅದು ನಿಯಂತ್ರಣ ತಪ್ಪಿದೆ ಎಂಬುದಾಗಿ 2020 ನವೆಂಬರ 23ರ ಸೋಮವಾರ ಆತಂಕ ವ್ಯಕ್ತ ಪಡಿಸಿದ ಸುಪ್ರೀಂಕೋರ್ಟ್, ದೇಶಾದ್ಯಂತ ಕೋವಿಡ್-೧೯ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಎರಡು ದಿನಗಳ ಒಳಗೆ ವಿವರ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿತು. ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಕೋವಿಡ್ ಪರಿಸ್ಥಿತಿ ಇನ್ನಷ್ಟು ಆತಂಕಕಾರಿಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ದೆಹಲಿಯಲ್ಲಿ ವಿಶೇಷವಾಗಿ ನವೆಂಬರಿನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ನೀವು ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠವು ದೆಹಲಿ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರಿಗೆ ತಿಳಿಸಿತು. ಗುಜರಾತಿನಲ್ಲಿ ಕೂಡಾ ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆ ಎಂದು ನ್ಯಾಯಮೂರ್ತಿಗಳಾದ ಆರ್ ಎಸ್ ರೆಡ್ಡಿ ಮತ್ತು ಎಂ ಆರ್ ಷಾ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿತು. ಪ್ರಕರಣಗಳು ಹೆಚ್ಚುತ್ತಿವೆ. ಈಗಿನ್ನೂ ನವೆಂಬರ್ ಮಾತ್ರ. ಡಿಸೆಂಬರಿನ ಇನ್ನಷ್ಟು ಕೆಟ್ಟ ದಿನಗಳಿಗಾಗಿ ತಯಾರಿ ನಡೆಸಬೇಕು ಎಂದು ಪೀಠ ಮಹಾರಾಷ್ಟ್ರದ ವಕೀಲರಿಗೆ ತಿಳಿಸಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಹೆಚ್ಚುತ್ತಿರುವ ಕೋವಿಡ್-೧೯ ಪ್ರಕರಣಗಳನ್ನು ನಿಗ್ರಹಿಸಲು ಕೇಂದ್ರ ಮತ್ತು ರಾಜ್ಯಗಳು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ಕೋವಿಡ್-೧೯ ರೋಗಿಗಳಿಗೆ ಸರಿಯಾದ ಚಿಕಿತ್ಸೆಯ ಅಗತ್ಯತೆ ಮತ್ತು ಆಸ್ಪತ್ರೆಗಳಲ್ಲಿ ಮೃತ ದೇಹಗಳನ್ನು ಗೌರವಯುತವಾಗಿ ನಿರ್ವಹಿಸುವ ಬಗ್ಗೆ ಅರಿವು ಮೂಡಿಸುವುದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಪೀಠ ವಿಚಾರಣೆ ನಡೆಸಿತು. ಬಳಿಕ ವಿಚಾರಣೆಯನ್ನು ನವೆಂಬರ್ ೨೭ಕ್ಕೆ ಮುಂದೂಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾದ ಈ ನಾಲ್ಕು ರಾಜ್ಯಗಳಿಂದ ಮಹಾರಾಷ್ಟ್ರ ಪ್ರವೇಶಿಸಲು ಕೋವಿಡ್- ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಿ ಮಹಾರಾಷ್ಟ್ರ ಸರ್ಕಾರವು 2020 ನವೆಂಬರ 23ರ ಸೋಮವಾರ ಅಧಿಸೂಚನೆ ಹೊರಡಿಸಿತು. ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾ - ಈ ನಾಲ್ಕು ರಾಜ್ಯಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈ ಕ್ರಮ ಕೈಗೊಂಡಿತು. ವಾಸ್ತವವಾಗಿ, ರಾಷ್ಟ್ರ ರಾಜಧಾನಿ ದೆಹಲಿಯು ಕೋವಿಡ್ -೧೯ ರ ಮೂರನೇ ಅಲೆಗೆ ಸಾಕ್ಷಿಯಾಗಿದೆ ಮತ್ತು ಪ್ರಕರಣಗಳ ಸಂಖ್ಯೆಯು ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿವೆ. ದೆಹಲಿ, ರಾಜಸ್ಥಾನ, ಗೋವಾ ಮತ್ತು ಗುಜರಾತಿನಿಂದ ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರು ಮಹಾರಾಷ್ಟ್ರದ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ಮುನ್ನ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ನೀಡಬೇಕಾಗುತ್ತದೆ. ನಿಗದಿತ ಪ್ರಯಾಣಕ್ಕೆ ೭೨ ಗಂಟೆಗಳ ಮುನ್ನ ಪರೀಕ್ಷೆಯನ್ನು ಮಾಡಿಸಿರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಯಿತು. "ಈ ನಾಲ್ಕು ರಾಜ್ಯಗಳಿಂದ ರೈಲುಗಳಲ್ಲಿ ಆಗಮಿಸುವ ಪ್ರಯಾಣಿಕರು ಆಗಮನದ ಪ್ರಯಾಣಕ್ಕೆ ೯೬ ಗಂಟೆಗಳ ಮುನ್ನ ಪಡೆದ ಪಡೆದ ಕೋವಿಡ್ -ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಅಧಿಸೂಚನೆ ಹೇಳಿತು. ರಸ್ತೆಗಳ ಮೂಲಕ ಬರುವವರು ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ಒಳಗಾಗಬೇಕಾಗುತ್ತದೆ. ‘ರೋಗಲಕ್ಷಣಗಳನ್ನು ಹೊಂದಿರುವ ಜನರು ಪ್ರತಿಜನಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಸಕಾರಾತ್ಮಕ (ಪಾಸಿಟಿವ್) ಎಂದು ಕಂಡುಬಂದಲ್ಲಿ, ಪ್ರಯಾಣಿಕನು ಚಿಕಿತ್ಸೆಯ ವೆಚ್ಚವನ್ನು ಸ್ವತಃ ಭರಿಸಿ ಕೋವಿಡ್ ಕೇಂದ್ರಕ್ಕೆ ಪ್ರವೇಶ ಪಡೆಯಬೇಕು’ ಎಂದು ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಹೊರಡಿಸಿದ ಅಧಿಸೂಚನೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ ೨೪ರ ಮಂಗಳವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ 2020 ನವೆಂಬರ 23ರ ಸೋಮವಾರ ತಿಳಿಸಿತು. ಸಭೆಯಲ್ಲಿ, ದೆಹಲಿ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಸೇರಿದಂತೆ ಕೊರೋನಾವೈರಸ್ ಸಾಂಕ್ರಾಮಿಕದಿಂದ ಅತಿ ಹೆಚ್ಚು ಪೀಡಿತವಾಗಿರುವ ರಾಜ್ಯಗಳ ಪರಿಸ್ಥಿತಿಯನ್ನು ಪ್ರಧಾನಿ ಪರಿಶೀಲಿಸುವ ನಿರೀಕ್ಷೆಯಿದೆ. ದೆಹಲಿ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಈ ರಾಜ್ಯಗಳಲ್ಲಿ ಕೋವಿಡ್ -೧೯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು ಅವು ಸಾಂಕ್ರಾಮಿಕದ ಹೊಸ ಹಾಟ್ ಸ್ಪಾಟ್‌ಗಳಾಗಿ ಹೊರಹೊಮ್ಮಿವೆ. ಭಾರತದಲ್ಲಿ ನಾಲ್ಕು ಲಸಿಕೆ ತಯಾರಕ ಸಂಸ್ಥೆಗಳು ಎರಡನೇ ಅಥವಾ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿರುವುದರಿಂದ ಲಸಿಕೆ ವಿತರಣೆ ಮತ್ತು ತುರ್ತು ದೃಢೀಕರಣದ ಬಗ್ಗೆ ಕೂಡಾ ಪ್ರಧಾನಿಯವರು ರಾಜ್ಯಗಳ ಜೊತೆಗೆ ಚರ್ಚಿಸುವ ಸಾಧ್ಯತೆ ಇದೆ. ಫಿಜರ್ ಮತ್ತು ಮೊಡೆರ್ನಾ ತಮ್ಮ ಲಸಿಕೆಗಳ ವಿತರಣೆಗೆ ತುರ್ತು ಅಧಿಕಾರವನ್ನು ಪಡೆಯುವುದಾಗಿ ಹೇಳಿದ ನಂತರ ನಡೆದ ನೀತಿ ಆಯೋಗದ ಇತ್ತೀಚಿನ ಸಭೆಯಲ್ಲಿ, ತುರ್ತು ದೃಢೀಕರಣ, ಮುಂಗಡ ಸಂಗ್ರಹಣೆ, ಲಸಿಕೆಗಳ ಬೆಲೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಉಭಯ ಸಂಸ್ಥೆಗಳೂ ತಮ್ಮ ಲಸಿಕೆಗಳು ಅಂದಾಜು ಶೇಕಡಾ ೯೫ರಷ್ಟು ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿರುವುದಾಗಿ ಪ್ರಕಟಿಸಿದ್ದವು. ರಾಜ್ಯ ಮುಖ್ಯಮಂತ್ರಿಗಳ ಜೊತೆಗಿನ ಪ್ರಧಾನಿ ಮೋದಿಯವರ ಈ ಸಭೆಯು ಕೋವಿಡ್ ಸಾಂಕ್ರಾಮಿಕ ಹರಡುವಿಕೆ ತಡೆ ಹಾಗೂ ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯಗಳ ಮೇಲಿನ ಹೊರ ಕಡಿಮೆ ಮಾಡುವ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ರಾಜ್ಯಗಳ ಜೊತೆ ನಡೆಸಲಾದ ಹಲವಾರು ಸಭೆಗಳಲ್ಲಿ ಒಂದಾಗಿದೆ. ಕೋವಿಡ್ -೧೯ ವಿರುದ್ಧದ ಹೋರಾಟವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗ ಮತ್ತು ನಿಕಟ ಹೊಂದಾಣಿಕೆಯೊಂದಿಗೆ ಕೇಂದ್ರ ಸರ್ಕಾರವು ಮುನ್ನಡೆಸುತ್ತಿದೆ ಮತ್ತು ಆರೋಗ್ಯ ಹಾಗೂ ವೈದ್ಯಕೀಯ ಮೂಲ ಸೌಕರ್‍ಯಗಳನ್ನು ಹೆಚ್ಚಿಸಲು ಅದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಬೆಂಬಲ ನೀಡುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಗುವಾಹಟಿ/ ನವದೆಹಲಿ: ಕೋವಿಡ್ ನಂತರದ ತೊಡಕುಗಳಿಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರು ತಮ್ಮ ೮೬ ನೇ ವಯಸ್ಸಿನಲ್ಲಿ 2020 ನವೆಂಬರ್ 23ರ ಸೋಮವಾರ ನಿಧನರಾದರು. ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರ ಗೊಗೋಯ್ ನಿಧನದ ವಿಚಾರವನ್ನು ಪ್ರಕಟಿಸಿದರು. ಹಿರಿಯ ಕಾಂಗ್ರೆಸ್ ನಾಯಕನ ಆರೋಗ್ಯ ಸ್ಥಿತಿ ಮಂಗಳವಾರ ಬೆಳಗ್ಗೆ ಹದಗೆಟ್ಟಿತ್ತು. ವೆಂಟಿಲೇಷನ್‌ನಲ್ಲಿ ಇದ್ದ ಅವರು ಭಾನುವಾರ ಬಹುಅಂಗಾಂಗ ವೈಫಲ್ಯಕ್ಕೆ ಗುರಿಯಾಗಿದ್ದು, ಅವರಿಗೆ ಡಯಾಲಿಸಿಸ್ ಮಾಡಲಾಗಿತ್ತು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಅಸ್ಸಾಮಿನ ೮೪ ವರ್ಷದ ನಾಯಕನನ್ನು ನವೆಂಬರ್ ೨ ರಂದು ಜಿಎಂಸಿಎಚ್‌ಗೆ ದಾಖಲಿಸಲಾಗಿತ್ತು. ಶನಿವಾರ ರಾತ್ರಿ ಅವರ ಸ್ಥಿತಿ ಹದಗೆಟ್ಟಾಗ ಅವರನ್ನು ವೆಂಟಿಲೇಷನ್‌ಗೆ ಒಳಪಡಿಸಲಾಯಿತು. ಅಕ್ಟೋಬರ್ ೨೫ ರಂದು, ಕೋವಿಡ್-೧೯ ಮತ್ತು ಚೇತರಿಕೆಯ ನಂತರದ ಇತರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಗೊಗೊಯ್ ಅವರನ್ನು ಎರಡು ತಿಂಗಳ ನಂತರ ಜಿಎಂಸಿಎಚ್‌ನಿಂದ ಬಿಡುಗಡೆ ಮಾಡಲಾಗಿತ್ತು. ಅವರು ಆಗಸ್ಟ್ ೨೫ ರಂದು ಕೋವಿಡ್-೧೯ ಸೋಂಕಿಗೆ ಒಳಗಾಗಿದ್ದರು. ಮತ್ತು ಮರುದಿನ ಜಿಎಂಸಿಎಚ್‌ಗೆ ದಾಖಲಾಗಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ/ ಬೆಂಗಳೂರು: ’ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು ಕರಾವಳಿಗೆ ’ನಿವಾರ್’ ಚಂಡಮಾರುತ ಅಪ್ಪಳಿಸಲಿದ್ದು, ಇದರ ಪರಿಣಾಮ ಕರ್ನಾಟಕದಲ್ಲೂ ನವೆಂಬರ್ ೨೫ರಿಂದ ೨೭ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ’ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ 2020 ನವೆಂಬರ್ 23ರ ಸೋಮವಾರ ತಿಳಿಸಿದರು. ‘ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಂಡಮಾರುತ ಪ್ರಭಾವ ಬೀರುವ ಸಾಧ್ಯತೆ ಇದೆ. ನ.೨೫ರಂದು ಪುದುಚೇರಿ ಹಾಗೂ ಹಾಗೂ ತಮಿಳುನಾಡು ಕರಾವಳಿಗಳಿಗೆ ಚಂಡಮಾರುತ ಅಪ್ಪಳಿಸಲಿದೆ. ಇದರ ಪರಿಣಾಮ ರಾಜ್ಯದಲ್ಲೂ ಮಳೆಯಾಗಲಿದೆ’ ಎಂದು ಅವರು ನುಡಿದರು. ’ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಎರಡೂ ದಿನ ’ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ’ ಎಂದು ಅವರು ಹೇಳಿದರು. ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡು ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಮುಂದಿನ ವಾರದಲ್ಲಿ ಚಳಿ ತೀವ್ರಗೊಳ್ಳಲಿದೆ. ಕೆಲವು ಕಡೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಕಾರವಾರದಲ್ಲಿ ಗರಿಷ್ಠ ೩೫ ಡಿಗ್ರಿ ಸೆಲ್ಸಿಯಸ್ ಹಾಗೂ ದಾವಣಗೆರೆಯಲ್ಲಿ ೧೨.೮ ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment