ನಾನು ಮೆಚ್ಚಿದ ವಾಟ್ಸಪ್

Wednesday, November 18, 2020

ಇಂದಿನ ಇತಿಹಾಸ History Today ನವೆಂಬರ್ 18

 ಇಂದಿನ ಇತಿಹಾಸ  History Today ನವೆಂಬರ್ 18

2020: ನವದೆಹಲಿ: ನೈಜ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆಗೆ ಮುಖಾಮುಖಿಯಾಗಿರುವ ತನ್ನ ಸೇನೆಯನ್ನು ಚೀನಾವು ತತ್ ಕ್ಷಣ ಹಿಂತೆಗೆದುಕೊಳ್ಳುವ ಯಾವುದೇ ಲಕ್ಷಣಗಳು ಇಲ್ಲದೇ ಇರುವುದರ ಮಧ್ಯೆಯೇ, ಪೂರ್ವ ಲಡಾಖ್ನಲ್ಲಿ ಚಳಿಗಾಲದ ಕಠಿಣ ಪರಿಸ್ಥಿತಿಗಳಲ್ಲಿ ಸಹಸ್ರಾರು ಸೈನಿಕರ ವಾಸಕ್ಕೆ ಬೇಕಾದ ಅಗತ್ಯ ವಸತಿ  ಸವಲತ್ತುಗಳ ಸ್ಥಾಪನೆಯನ್ನು ಸೇನೆಯು ಪೂರ್ಣಗೊಳಿಸಿದೆ.  ಸೇನೆಯು ಬಿಡುಗಡೆ ಮಾಡಿರುವ ವೀಡಿಯೋ ಹಾಸಿಗೆಗಳು, ಬೀರುಗಳು ಮತ್ತು ಶಾಖೋತ್ಪಾದಕಗಳು ಸೇರಿದಂತೆ ಮೂಲಸವಲತ್ತುಗಳನ್ನು ಹೊಂದಿರುವ ಸೈನಿಕರ ವಸತಿಗಳನ್ನು ತೋರಿಸುತ್ತದೆ. ಕೆಲವು ಕೋಣೆಗಳು ಒಂದೇ ಹಾಸಿಗೆಗಳನ್ನು ಹೊಂದಿದ್ದರೆ, ಕೆಲವು ಕೋಣೆಗಳಲ್ಲಿ ಒರಗು ಹಲಗೆ (ಬಂಕ್) ಹಾಸಿಗೆಗಳಿವೆ.  ವರ್ಷಗಳಲ್ಲಿ ನಿರ್ಮಿಸಲಾಗಿರುವ ಸಮಗ್ರ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಕ್ಯಾಂಪ್ಗಳ ಹೊರತಾಗಿ, ಸೈನಿಕರಿಗೆ ಸ್ಥಳಾವಕಾಶ ಕಲ್ಪಿಸಲು ವಿದ್ಯುತ್, ನೀರು, ಶಾಖ ಸೌಲಭ್ಯಗಳು, ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ ಸಮಗ್ರ ವ್ಯವಸ್ಥೆಗಳೊಂದಿಗೆ ಹೆಚ್ಚುವರಿ ಅತ್ಯಾಧುನಿಕ ಆವಾಸಸ್ಥಾನಗಳನ್ನು ಇತ್ತೀಚೆಗೆ ರಚಿಸಲಾಗಿದೆ ಎಂದು ಸೇನೆಯು  2020 ನವೆಂಬರ್  18ರ ಬುಧವಾರ ಹೇಳಿತು. "ಮುಂಚೂಣಿಯಲ್ಲಿರುವ ಸೈನಿಕರಿಗೆ ತಮ್ಮ ನಿಯೋಜನೆಯ ಯುದ್ಧತಂತ್ರದ ಪರಿಗಣನೆಗಳ ಪ್ರಕಾರ ಬಿಸಿಯಾದ ಗುಡಾರಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಯಾವುದೇ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ನಾಗರಿಕ ಮೂಲಸೌಕರ್ಯಗಳನ್ನು ಸಹ ಗುರುತಿಸಲಾಗಿದೆ" ಎಂದು ಸೇನೆ ಹೇಳಿದೆ. ಪ್ರದೇಶದ ತಾಪಮಾನ ಮೈನಸ್ ೩೦-೪೦ ಡಿಗ್ರಿ ಸೆಲ್ಸಿಯಸ್ಗೆ ಕೂಡಾ ಇಳಿಯುತ್ತದೆ. ಅಲ್ಲದೆ ನವೆಂಬರ್ ತಿಂಗಳ ನಂತರ ೪೦ ಅಡಿಗಳಷ್ಟು ಹಿಮಪಾತ ಉಂಟಾಗುತ್ತದೆ. ಇದರಿಂದಾಗಿ ಪ್ರದೇಶಕ್ಕೆ ರಸ್ತೆ ಪ್ರವೇಶಕ್ಕೂ ಸ್ವಲ್ಪ ಸಮಯದವರೆಗೆ ಅಡ್ಡಿ ಉಂಟಾಗುತ್ತದೆ ಎಂದು ಅದು ಹೇಳಿತು. "ಚಳಿಗಾಲದಲ್ಲಿ ನಿಯೋಜಿತ ಸೈನಿಕರ ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಸೇನೆಯು ವಲಯದಲ್ಲಿ ನಿಯೋಜಿಸಲಾಗಿರುವ ಎಲ್ಲಾ ಸೈನಿಕರಿಗೆ ಆವಾಸಸ್ಥಾನ ಸೌಲಭ್ಯಗಳ ಸ್ಥಾಪನೆಯನ್ನು ಪೂರ್ಣಗೊಳಿಸಿದೆ" ಎಂದು ಸೇನೆ ತಿಳಿಸಿದೆ. ಪೂರ್ವ ಲಡಾಖ್ನಲ್ಲಿ ಮೇ ಆರಂಭದಿಂದ ಭಾರತ ಮತ್ತು ಚೀನಾ ಸೇನೆ ಮುಖಾಮುಖಿಯಾಗಿವೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರಆತ್ಮಾವಲೋಕನ ಹೇಳಿಕೆಯ ಮೇಲೆ ಲೋಕಸಭೆಯ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ 2020 ನವೆಂಬರ್  18ರ ಬುಧವಾರ ವಾಗ್ದಾಳಿ ನಡೆಸುವುದರೊಂದಿಗೆ ಹಳೆಯ ಮಹಾನ್ ಪಕ್ಷದ ಬಿರುಕುಗಳು ಇನ್ನಷ್ಟು ವ್ಯಾಪಕವಾಗತೊಡಗಿದವು.  ಮಾಜಿ ಕೇಂದ್ರ ಸಚಿವರು ಕಾಂಗ್ರೆಸ್ ವಿರುದ್ಧ ಇಂತಹ ಮುಜುಗರದ ಹೇಳಿಕೆಗಳನ್ನು ನೀಡುವ ಬದಲು ಹೊಸ ಪಕ್ಷಕ್ಕೆ ಸೇರಲು ಅಥವಾ ಹೊಸ ಪಕ್ಷ ಒಂದನ್ನು ರಚಿಸಲು ಮುಕ್ತರಾಗಿದ್ದಾರೆ ಎಂದು ಚೌಧರಿ ಹೇಳಿದರು. "ಅವರು (ಸಿಬಲ್) ಹಿರಿಯ ಕಾಂಗ್ರೆಸ್ ನಾಯಕರಾಗಿದ್ದಾರೆ ಮತ್ತು ಪಕ್ಷದ ಉನ್ನತ ನಾಯಕರ ಜೊತೆ ಸಂಪರ್ಕ  ಮತ್ತು ಸಾಮೀಪ್ಯವನ್ನು ಹೊಂದಿದ್ದಾರೆ. ಅವರು ಸಾರ್ವಜನಿಕವಾಗಿ ಇಂತಹ ಮುಜುಗರದ ಹೇಳಿಕೆಗಳನ್ನು ನೀಡುವ ಬದಲು ಅವರೊಂದಿಗೆ ಸಮಸ್ಯೆಗಳನ್ನು ಎತ್ತಬಹುದು. ಕಾಂಗ್ರೆಸ್ ಸರಿಯಾದ ಸ್ಥಳವಲ್ಲ ಎಂದು ಅವರು ಭಾವಿಸಿದರೆ ಹೊಸ ಪಕ್ಷವನ್ನು ರಚಿಸಲು ಅಥವಾ ಬೇರೆ ಪಕ್ಷವೊಂದನ್ನು ಸೇರಲು ಅವರು ಸ್ವತಂತ್ರರಾಗಿದ್ದಾರೆ ಎಂದು ಚೌಧರಿ ನುಡಿದರು.  ಕಪಿಲ್ ಸಿಬಲ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಪಕ್ಷದಲ್ಲಿ ಆತ್ಮಾವಲೋಕನದ ಅಗತ್ಯವನ್ನು ಒತ್ತಿಹೇಳಿದ್ದರು. ’ಪಕ್ಷವು ಕ್ಷೀಣಿಸುತ್ತಿದೆ ಎಂದು ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಪ್ರದರ್ಶಿಇಸಿದ ಬಳಿಕ ನಂತರ ಕೇಂದ್ರದ ಮಾಜಿ ಸಚಿವರು ಹೇಳಿದ್ದರು. "ಇದಕ್ಕೆ ಮುನ್ನವೂ ಸಿಬಲ್ ಬಗ್ಗೆ ಮಾತನಾಡಿದ್ದಾರೆ. ಅವರು ಕಾಂಗ್ರೆಸ್ ಬಗ್ಗೆ ಮತ್ತು ಅದರ ಆತ್ಮಾವಲೋಕನದ ಅಗತ್ಯತೆಯ ಬಗ್ಗೆ ಬಹಳ ಕಾಳಜಿ ತೋರುತ್ತಿದ್ದಾರೆ. ಆದರೆ ಇತ್ತೀಚೆಗೆ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಅಥವಾ ಗುಜರಾತಿನಲ್ಲಿ ನಡೆದ ಚುನಾವಣೆಯಲ್ಲಿ ಅವರು ಪಕ್ಷದ ಪರವಾಗಿ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ಚೌಧರಿ ಹೇಳಿದರು.  ಕೇವಲ ಮಾತನಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಏನನ್ನೂ ಮಾಡದೆ ಮಾತನಾಡುವುದು ಆತ್ಮಾವಲೋಕನ ಅಲ್ಲ ಎಂದು ಚೌಧರಿ ಚುಚ್ಚಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಬೀಜಿಂಗ್: ಭಾರತದಿಂದ ದಕ್ಷಿಣ ಚೀನಾಕ್ಕೆ ರಫ್ತು ಮಾಡಲಾದ ಶೈಥ್ಯೀಕರಿಸಿದ ಪೊಮ್ಫ್ರೆಟ್ ಪೊಟ್ಟಣಗಳಲ್ಲಿ ಕೊರೋನಾವೈರಸ್ ಮಾದರಿಗಳನ್ನು ಪತ್ತೆ ಮಾಡಲಾಗಿದೆ ಎಂದು ಚೀನಾದ ಕಸ್ಟಮ್ಸ್ ಇಲಾಖೆ 2020 ನವೆಂಬರ್  18ರ ಬುಧವಾರ ತಿಳಿಸಿದೆ. ಹೀಗಾಗಿ ಬಂದರಿನ ಸ್ಥಳೀಯ ಸಿಬ್ಬಂದಿ ಮತ್ತು ಕೋಲ್ಡ್ ಸ್ಟೋರೇಜ್ ಪ್ರದೇಶಗಳ ಮೊಹರನ್ನು ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಚೀನಾ ತಿಳಿಸಿದೆ.  ಮೂರು ಕಟಲ್ಫಿಶ್ ಪ್ಯಾಕೇಜ್ಗಳಲ್ಲಿ ವೈರಸ್ ಪತ್ತೆಯಾದ ನಂತರ ಭಾರತೀಯ ಕಂಪೆನಿಯೊಂದರ ಆಮದನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ ಒಂದು ವಾರದ ನಂತರ ಘಟನೆ ಘಟಿಸಿದೆ.  ಹೆಪ್ಪುಗಟ್ಟಿದ ಪ್ಯಾಕೇಜ್ಗಳು ಸೋಂಕಿತ ವ್ಯಕ್ತಿಯಿಂದ ನಿರ್ವಹಿಸಲ್ಪಟ್ಟರೆ ಸಾರ್ಸ್-ಕೋವ್ - ಕುರುಹುಗಳನ್ನು ಹೊಂದಿರುವುದು ಅಸಾಮಾನ್ಯವೇನಲ್ಲ ಎಂದು ತಜ್ಞರು ಹೇಳುತ್ತಾರೆ, ಆದರೂ ಇದರಿಂದ ಹೆಚ್ಚಿನ ಜನರಿಗೆ ಸೋಂಕು ತಗಲುವ ಸಾಧ್ಯತೆಯಿಲ್ಲ, ಇದು ಘಟನೆಗಳ ಸಂಕೀರ್ಣ ಸರಣಿಯನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ನವೆಂಬರಿನಲ್ಲಿ ಬೀಜಿಂಗ್ ಬಳಿಯ ಟಿಯಾಂಜಿನ್ ನಗರದ ಶೈಥ್ಯೀಕರಿಸಿದ ಗೋದಾಮು ಒಂದರಲ್ಲಿ ಕೆಲಸಗಾರನಿಗೆ ಜರ್ಮನಿಯಿಂದ ಆಮದು ಮಾಡಿಕೊಂಡ ಹಂದಿಮಾಂಸವನ್ನು ನಿರ್ವಹಿಸಿದ ನಂತರ ಕೋವಿಡ್ -೧೯ ಸೋಂಕು ತಗುಲಿತು ಎಂದು ಚೀನಾ ಹೇಳಿದೆ. ಪ್ಯಾಕೇಜಿಂಗ್ನ್ನು ಆರಂಭದಲ್ಲಿ ಜರ್ಮನಿಯ ಬ್ರೆಮೆನ್ನಿಂದ ಟಿಯಾಂಜಿನ್ಗೆ ಮತ್ತು ಅಲ್ಲಿಂದ ಶಾಂಡೊಂಗ್ ಪ್ರಾಂತ್ಯದ ಡೆಜ್ ಹೌವು ನಗರಕ್ಕೆ ಆಮದು ಮಾಡಿಕೊಳ್ಳಲಾಗಿತ್ತು.  ಅಕ್ಟೋಬರ್ ೧೭ ರಂದು, ಚೀನೀ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಆಮದು ಮಾಡಿಕೊಂಡ ಮೀನುಗಳ ಪೊಟ್ಟಣಗಳ ಮೇಲಿದ್ದ ಸಕ್ರಿಯ ಸಾರ್ಸ್-ಕೋವ್ - ವೈರಾಣನ್ನು ಪ್ರತ್ಯೇಕಿಸಿರುವುದಾಗಿ ಘೋಷಿಸಿತ್ತು, ಕಿಂಗ್ಡಾವೊ ನಗರದಲ್ಲಿ ಇತ್ತೀಚೆಗೆ ಸಾಂಕ್ರಾಮಿಕ ಹರಡಿದ್ದಕ್ಕೂ ಘಟನೆಯನ್ನು ಜೋಡಿಸಲಾಗಿತ್ತು. ಕೊಂಡಿಗಳು ಅಸ್ಪಷ್ಟವಾಗಿದ್ದರೂ, ಚೀನಾ ಸರ್ಕಾರವು ಹೆಪ್ಪುಗಟ್ಟಿದ ಮಾಂಸ ಮತ್ತು ಸಮುದ್ರಾಹಾರ ಆಮದಿನ ತಪಾಸಣೆಯನ್ನು ಚುರುಕುಗೊಳಿಸಿದೆ, ವೈರಸ್ಸಿಗಾಗಿ ಲಕ್ಷಾಂತರ ಶೈಥ್ಯೀಕರಿಸಿದ  ಪ್ಯಾಕೇಜ್ಗಳನ್ನು ಈಗ ಪರೀಕ್ಷೆಗೆ ಒಳಪಡಿಸಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್:  ಬಯೋಟೆಕ್ ಕಂಪೆನಿ ಫಿಜರ್ ತನ್ನ ಪ್ರಾಯೋಗಿಕ ಕೋವಿಡ್ -೧೯ ಲಸಿಕೆಯ ಸಂಪೂರ್ಣ ಅಧ್ಯಯನದಿಂದ ಲಸಿಕೆಯು ೯೫ರಷ್ಟು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ, ಲಸಿಕೆ ಯಾವುದೇ ಗಂಭೀರ ಅಡ್ಡಪರಿಣಾಮಗಳನ್ನು ತೋರಿಸಿಲ್ಲ ಎಂದು 2020 ನವೆಂಬರ್  18ರ ಬುಧವಾರ ಪ್ರಕಟಿಸಿತು. ಮುಂದಿನ ಕೆಲವೇ ದಿನಗಳಲ್ಲಿ ಅಮೆರಿಕದ ಔಷಧ ನಿಯಂತ್ರಕರಿಂದ ತುರ್ತು ಬಳಕೆಯ ದೃಢೀಕರಣಕ್ಕಾಗಿ ಕಂಪೆನಿಯು ಅರ್ಜಿ ಸಲ್ಲಿಸಲಿದೆ ಎಂದು ಫಿಜರ್ ತಿಳಿಸಿತು. " ವಿನಾಶಕಾರಿ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಲಸಿಕೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನ ಐತಿಹಾಸಿಕ ಎಂಟು ತಿಂಗಳ ಪಯಣದಲ್ಲಿ ಪ್ರಯೋಗದ ಫಲಿತಾಂಶಗಳು ಒಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಫಿಜರ್ ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿದರು. ಕಳೆದ ವಾರ ಕಂಪೆನಿಯು ತನ್ನ ಲಸಿಕೆಯನ್ನು ಬಯೋಟೆಕ್ ಜೊತೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದ್ದು,  ಹಾಲಿ ನೇ ಹಂತದ ಪ್ರಯೋಗಗಳಲ್ಲಿ ಕೋವಿಡ್ -೧೯ ಸೋಂಕುಗಳನ್ನು ತಡೆಗಟ್ಟುವಲ್ಲಿ ಶೇಕಡಾ ೯೦ರಷ್ಟು ಪರಿಣಾಮಕಾರಿ ಎಂದು ಘೋಷಿಸಿತ್ತುಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಎರಡು ಡೋಸ್ಗಳಲ್ಲಿ ಎರಡನೆಯ ಡೋಸ್ ನೀಡಿಕೆಯ ದಿನಗಳ ಬಳಿಕ ಮತ್ತು ಮೊದಲನೆಯ ಡೋಸ್ ನೀಡಿದ ೨೮ ದಿನಗಳ ನಂತರ ರೋಗಿಗಳಿಗೆ ರಕ್ಷಣೆಯನ್ನು ಸಾಧಿಸಲಾಗಿತ್ತು. "ನಮ್ಮ ಹಂತ ಕೋವಿಡ್ -೧೯ ಲಸಿಕೆ ಪ್ರಯೋಗದ ಮೊದಲ ಫಲಿತಾಂಶವು ಕೋವಿಡ್-೧೯ ಅನ್ನು ತಡೆಗಟ್ಟುವ ನಮ್ಮ ಲಸಿಕೆಯ ಸಾಮರ್ಥ್ಯದ ಆರಂಭಿಕ ಸಾಕ್ಷ್ಯವನ್ನು ಒದಗಿಸುತ್ತದೆ ಎಂದು ಬೌರ್ಲಾ ಕಳೆದ ವಾರ ಹೇಳಿದ್ದರು. " ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನೆರವಾಗಲು ವಿಶ್ವಾದ್ಯಂತದ ಜನರಿಗೆ ಹೆಚ್ಚು ಅಗತ್ಯವಿರುವ ಔಷಧ ಒದಗಿಸಲು ನಾವು ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಜಗತ್ತಿಗೆ ಹೆಚ್ಚು ಅಗತ್ಯವಿರುವ ಸಮಯದಲ್ಲಿ ನಮ್ಮ ಲಸಿಕೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಾವು ನಿರ್ಣಾಯಕ ಮೈಲಿಗಲ್ಲನ್ನು ತಲುಪುತ್ತಿದ್ದೇವೆ ಎಂದು ಅವರು ಹೇಳಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020:  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆ (೨೦೨೦) ಫಲಿತಾಂಶಗಳು ಘೋಷಣೆಯಾದ ಬಳಿಕ ಅಧ್ಯಕ್ಷರಾಗಿ (ಚುನಾಯಿತ) ಆಯ್ಕೆಯಾಗಿರುವ ಜೋ ಬಿಡೆನ್ ಅವರ ಜೊತೆ ಇದೇ ಮೊದಲ ಬಾರಿಗೆ  ದೂರವಾಣಿ ಮೂಲಕ ಮಾತನಾಡಿದ್ದಾರೆ. ದೂರವಾಣಿ ಕರೆಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಅವರ ವಿಜಯವನ್ನು ಅಭಿನಂದಿಸಿದರು ಮತ್ತು ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನವದೆಹಲಿಯ ಬದ್ಧತೆಯನ್ನು ಪುನರುಚ್ಚರಿಸಿದರು. ಜೊತೆಗೇ ಪರಸ್ಪರ ಹಂಚಿಕೊಳ್ಳಬೇಕಾದ ಆದ್ಯತೆಗಳು ಮತ್ತು ಕಾಳಜಿಗಳ ಬಗ್ಗೆ ಚರ್ಚಿಸಿದರು. ಅಮೆರಿಕದ ಅಧ್ಯಕ್ಷ- ಚುನಾಯಿತ ಜೋ ಬಿಡೆನ್ ಅವರನ್ನು ಅಭಿನಂದಿಸಲು ದೂರವಾಣಿಯಲ್ಲಿ ಮಾತನಾಡಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ಭಾರತ-ಅಮೆರಿಕದ ನಡುವಣ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸಿದ್ದೇವೆ. ಮತ್ತು ಕೋವಿಡ್-೧೯ ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಹಿಂದೂ ಮಹಾಸಾಗರ-ಶಾಂತ ಸಾಗರ (ಇಂಡೋ-ಪೆಸಿಫಿಕ್) ಪ್ರದೇಶದಲ್ಲಿನ ಸಹಕಾರ ಸೇರಿದಂತೆ ಪರಸ್ಪರ ಹಂಚಿಕೊಳ್ಳುವ ನಮ್ಮ ಆದ್ಯತೆಗಳು ಮತ್ತು ಕಾಳಜಿಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಪ್ರಧಾನಿ ಮೈಕ್ರೋ ಬ್ಲಾಗಿಂಗ್ ಟ್ವಿಟ್ಟರಿನಲ್ಲಿ ಬರೆದರು. "ನಾನು ಉಪಾಧ್ಯಕ್ಷ-ಚುನಾಯಿತ ಕಮಲಾ ಹ್ಯಾರಿಸ್ ಅವರಿಗೆ ಆತ್ಮೀಯ ಅಭಿನಂದನೆಗಳನ್ನು ತಿಳಿಸಿದೆ. ಅವರ ಯಶಸ್ಸು ಭಾರತ-ಅಮೆರಿಕ ಸಂಬಂಧಗಳಿಗೆ ಅಪಾರ ಶಕ್ತಿಯ ಮೂಲವಾಗಿರುವ ಭಾರತೀಯ-ಅಮೇರಿಕನ್ ಸಮುದಾಯದ ಸದಸ್ಯರಿಗೆ ಬಹಳ ಹೆಮ್ಮೆ, ರೋಮಾಂಚಕ ಮತ್ತು ಸ್ಫೂರ್ತಿಯಾಗಿದೆ" ಎಂದು ಪ್ರಧಾನಿ ಮೋದಿ ಬರೆದರು.  ಬಿಡೆನ್  ಪರಿವರ್ತನಾ ತಂಡದ ಪ್ರಕಾರ, ಡೆಮೋಕ್ರಾಟ್ ನಾಯಕರು ಕೋವಿಡ್-೧೯ ಮತ್ತು ಜಾಗತಿಕ ಆರ್ಥಿಕತೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಭಾರತದೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿದ್ದಾರೆ. ಕೋವಿಡ್-೧೯ನ್ನು ಒಳಗೊಂಡಿರುವುದು ಮತ್ತು ಭವಿಷ್ಯದ ಆರೋಗ್ಯ ಬಿಕ್ಕಟ್ಟುಗಳ ವಿರುದ್ಧ ರಕ್ಷಿಸುವುದು, ಹವಾಮಾನ ಬದಲಾವಣೆಯ ಬೆದರಿಕೆಯನ್ನು ನಿಭಾಯಿಸುವುದು, ಜಾಗತಿಕ ಆರ್ಥಿಕ ಚೇತರಿಕೆ ಪ್ರಾರಂಭಿಸುವುದು, ಪ್ರಜಾಪ್ರಭುತ್ವವನ್ನು ಬಲಪಡಿಸುವುದು, ದೇಶ ಮತ್ತು ವಿದೇಶಗಳಲ್ಲಿ, ಮತ್ತು ಸುರಕ್ಷಿತ ಮತ್ತು ಸಮೃದ್ಧವಾದ ಇಂಡೋ-ಪೆಸಿಫಿಕ್ ಪ್ರದೇಶವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಹಂಚಿಕೆಯ ಜಾಗತಿಕ ಸವಾಲುಗಳ ಕುರಿತು ಪ್ರಧಾನಮಂತ್ರಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು ತಾವು ಎದುರು ನೋಡುತ್ತಿರುವುದಾಗಿ  ಅಧ್ಯಕ್ಷ-ಚುನಾಯಿತರು ಬೊಟ್ಟು ಮಾಡಿದರು ಎಂದು ಬಿಡೆನ್ ಪರಿವರ್ತನಾ ತಂಡದ ಹೇಳಿಕೆ ತಿಳಿಸಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಲಸಿಕೆಗಳಿಗೆ ಪೇಟೆಂಟ್ ರಕ್ಷಣೆಯನ್ನು ಮನ್ನಾ ಮಾಡುವ ಪ್ರಸ್ತಾಪವನ್ನು ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ (ಡಬ್ಲ್ಯೂಟಿಒ) ಭಾರತ ಮತ್ತು ದಕ್ಷಿಣ ಆಫ್ರಿಕಾ ಕೈಗೆತ್ತಿಕೊಳ್ಳುವುದಕ್ಕೆ ಮುಂಚಿತವಾಗಿಯೇ, ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಗುಂಪುನ್ಯಾಯಯುತ, ಸಮಾನ ಮತ್ತು ಕೈಗೆಟುಕುವ ರೀತಿಯಲ್ಲಿ ಲಸಿಕೆಗಳ ವಿತರಣೆಗಾಗಿ ಶ್ರಮಿಸುವುದಾಗಿ 2020 ನವೆಂಬರ್  18ರ ಬುಧವಾರ ಘೋಷಿಸಿತು. ಮಂಗಳವಾರ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ, ಲಸಿಕೆಗಳಿಗೆ ಬೌದ್ಧಿಕ ಆಸ್ತಿ ಒಪ್ಪಂದಗಳಿಂದ ವಿನಾಯಿತಿ ಪಡೆಯಲು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡೆಸಿದ ಯತ್ನವನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆಗ್ರಹಿಸಿದ್ದರು. ಲಸಿಕೆಗಳನ್ನು ಬೌದ್ಧಿಕ ಆಸ್ತಿ ಒಪ್ಪಂದಗಳಿಂದ ಮತ್ತು ಪೇಟೆಂಟ್ ರಕ್ಷಣೆಯಿಂದ ಹೊರಗಿಡಬೇಕು ಎಂಬ ಪ್ರಸ್ತಾಕ್ಕೆ ಈಗಾಗಲೇ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ (ಇಯು) ಸದಸ್ಯ ರಾಷ್ಟ್ರಗಳು ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳಿಂದ ವಿರೋಧ ವ್ಯಕ್ತವಾಗಿದೆ. ವಿಶ್ವ ವಾಣಿಜ್ಯ ಸಂಸ್ಥೆಯ (ಡಬ್ಲ್ಯುಟಿಒ) ಬೌದ್ಧಿಕ ಆಸ್ತಿ ಹಕ್ಕುಗಳ (ಟಿಆರ್ಪಿಎಸ್) ವ್ಯಾಪಾರ-ಸಂಬಂಧಿತ ಅಂಶಗಳು ಶುಕ್ರವಾರ ಪೇಟೆಂಟ್ ರಕ್ಷಣೆ ಮನ್ನಾ ಮಾಡುವ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ ಎಂದು ಸುದ್ದಿ ಮೂಲಗಳು ಬುಧವಾರ ತಿಳಿಸಿವೆ.  ಬ್ರಿಕ್ಸ್ ಶೃಂಗಸಭೆಯ ಮುಕ್ತಾಯದಲ್ಲಿ ಅಂಗೀಕರಿಸಿದ ಮಾಸ್ಕೋ ಘೋಷಣೆಯು ಗುಂಪಿನ ಸದಸ್ಯರು "[ಲಸಿಕೆ] ಲಭ್ಯವಾದಾಗ ಅದನ್ನು ಸಮಾನವಾಗಿ, ನ್ಯಾಯಸಮ್ಮತ ಮತ್ತು ಕೈಗೆಟುಕುವ ಆಧಾರದ ಮೇಲೆ ವಿತರಣೆ ಮಾಡುವ ಬಗ್ಗೆ ಖಚಿತಪಡಿಸಿಕೊಳ್ಳಲು ಶ್ರಮಿಸುತ್ತದೆ" ಎಂದು ಹೇಳಿದೆ. ಮಾಸ್ಕೋ ಘೋಷಣೆಯು ಭಾರತ ಮತ್ತು ದಕ್ಷಿಣ ಆಫ್ರಿಕಾದ ಪ್ರಸ್ತಾಪದ ಬಗ್ಗೆ ಯಾವುದೇ ನೇರ ಉಲ್ಲೇಖವನ್ನು ಮಾಡಿಲ್ಲ. ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ನಿಗ್ರಹಿಸುವಲ್ಲಿವ್ಯಾಪಕವಾದ ರೋಗನಿರೋಧಕ ಮಹತ್ವವನ್ನು ಘೋಷಣೆಯು ಗುರುತಿಸಿತು ಮತ್ತು ಲಸಿಕೆ ಮತ್ತು ಚಿಕಿತ್ಸಕಗಳ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ತ್ವರಿತಗೊಳಿಸಲು ಸಹಕಾರಿ ವಿಧಾನಗಳನ್ನು ಬೆಂಬಲಿಸಿತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020:  ಶ್ರಿನಗರ:  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 2020 ನವೆಂಬರ್  18ರ ಬುಧವಾರ ಭದ್ರತಾ ಪಡೆ ಸಿಬ್ಬಂದಿ ತಂಡದ ಮೇಲೆ ಉಗ್ರರು ನಡೆಸಿದ ಗ್ರೆನೇಡ್ ದಾಳಿಯ ಸಂದರ್ಭದಲ್ಲಿ  ೧೨ ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಲ್ವಾಮಾದ ಕಾಕಪೋರಾ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಗ್ರೆನೇಡ್ ಉದ್ದೇಶಿತ ಗುರಿಯನ್ನು ತಪ್ಪಿಸಿಕೊಂಡು ರಸ್ತೆಯಲ್ಲಿ ಸ್ಫೋಟಗೊಂಡಿದೆ ಎಂದು ಅವರು ಹೇಳಿದರು. ಸ್ಫೋಟದಲ್ಲಿ ಹನ್ನೆರಡು ನಾಗರಿಕರಿಗೆ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದರು. ಈ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ದಾಳಿಕೋರರನ್ನು ಬಂಧಿಸಲು  ಶೋಧ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್ 18 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment