ನಾನು ಮೆಚ್ಚಿದ ವಾಟ್ಸಪ್

Friday, November 20, 2020

ಇಂದಿನ ಇತಿಹಾಸ History Today ನವೆಂಬರ್ 20

 ಇಂದಿನ ಇತಿಹಾಸ  History Today ನವೆಂಬರ್  20

2020: ನವದೆಹಲಿ: ನಾಲ್ಕು ಮಂದಿ ಉಗ್ರಗಾಮಿಗಳನ್ನು ಸದೆ ಬಡಿದ ನಾಗ್ರೋಟಾ ಗುಂಡಿನ ಘರ್ಷಣೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್) ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಮತ್ತು ಉನ್ನತ ಗುಪ್ತಚರ ಸಂಸ್ಥೆಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು  2020 ನವೆಂಬರ್ 20ರ ಶುಕ್ರವಾರ ಸಮಾಲೋಚನಾ ಸಭೆ ನಡೆಸಿದರು. ಮುಂಬೈ ಮೇಲಿನ ೨೬/೧೧ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಭಯೋತ್ಪಾದಕರು "ಪ್ರಮುಖ ದಾಳಿಯನ್ನು" ಯೋಜಿಸುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.  ೨೦೦೮ರ ನವೆಂಬರ್ ೨೬ರಂದು ಲಷ್ಕರ್--ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಗೆ ಸೇರಿದ ೧೦ ಮಂದಿ ಭಯೋತ್ಪಾದಕರು ಮುಂಬೈ ನಗರವನ್ನು ಗುರಿಯಾಗಿಸಿಕೊಂಡು ಸಂಘಟಿತ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳ ಮೂಲಕ ೧೬೬ ಜನರನ್ನು ಬಲಿ ಪಡೆದಿದ್ದರು. ಭಾರತದ ಆರ್ಥಿಕ ರಾಜಧಾನಿ ಮೇಲಿನ ದಾಳಿಯಲ್ಲಿ ೩೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಜಮ್ಮು ಜಿಲ್ಲೆಯ ನಾಗ್ರೋಟಾ ಪ್ರದೇಶದ ಬಾನ್ ಟೋಲ್ ಪ್ಲಾಜಾ ಬಳಿ ಗುರುವಾರ ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮುಖಾಮುಖಿ ಘರ್ಷಣೆ ನಡೆದಿತ್ತು. ಮೂರು ಗಂಟೆಗಳ ಕಾಲ ನಡೆದ ಗುಂಡಿನ ಘರ್ಷಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಸದೆ ಬಡಿಯಲಾಗಿತ್ತು. ಮೂಲಗಳ ಪ್ರಕಾರ, ನಾಲ್ವರು ಭಯೋತ್ಪಾದಕರು ವಿಶ್ವಸಂಸ್ಥೆಯ ಭಯೋತ್ಪಾದಕ ಗುಂಪು ಎಂಬುದಾಗಿ ಘೋಷಿಸಿರುವ ಜೈಶ್--ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದವರಾಗಿದ್ದಾರೆ. " ಭಯೋತ್ಪಾದಕರು ಹಳೆಯ ಕಾರ್ಯಾಚರಣೆ ವಿಧಾನ ಬಳಸಿದರು ಮತ್ತು ಇತ್ತೀಚೆಗೆ ಭಾರತದ ಒಳಕ್ಕೆ ನುಸುಳಿದ್ದರು ಎಂದು ಮೂಲಗಳು ಹೇಳಿವೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಮೊಹಮ್ಮದ್ ಪೈಗಂಬರರ ವ್ಯಂಗ್ಯಚಿತ್ರ ಪ್ರದರ್ಶಿಸಿದ್ದ ಫ್ರೆಂಚ್ ಶಾಲಾ ಶಿಕ್ಷಕನ ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಫ್ರಾನ್ಸ್ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆ ಇದೀಗ ಪಾಕಿಸ್ತಾನಕ್ಕೆ ಮುಳುವಾಗಿದ್ದು, ಮಿರಾಜ್ ಫೈಟರ್ ಜೆಟ್, ವಾಯು ರಕ್ಷಣಾ ವ್ಯವಸ್ಥೆ ಮತ್ತು ಅಗೋಸ್ಟಾ ೯೦ ಬಿ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ನವೀಕರಣಕ್ಕೆ ನೆರವಾಗಲು ಫ್ರಾನ್ಸ್ ನಿರಾಕರಿಸಿದೆ ಎಂದು ಸುದ್ದಿ ಮೂಲಗಳು 2020 ನವೆಂಬರ್ 20ರ ಶುಕ್ರವಾರ ತಿಳಿಸಿವೆ. ಫ್ರಾನ್ಸ್ ಶಿಕ್ಷಕನ ಹತ್ಯೆಯ ಬಳಿಕ ಧರ್ಮವನ್ನು ಅಪಹಾಸ್ಯ ಮಾಡುವ ಹಕ್ಕನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಸಮರ್ಥಿಸಿಕೊಂಡಿದ್ದಾರೆ ಎಂದು ಇಮ್ರಾನ್ ಖಾನ್ ಟೀಕಿಸಿದ್ದರು.  ಓಮ್ನಿ-ರೋಲ್ ಜೆಟ್ ಭಾರತದ ಮುಂಚೂಣಿಯ ಸಮರ ವಿಮಾನವಾಗಿರುವ ಕಾರಣ, ರಫೇಲ್ ಯುದ್ಧ ವಿಮಾನದ ಮಾಹಿತಿ ಸಂರಕ್ಷಣೆಯ ಸಲುವಾಗಿ ಪಾಕಿಸ್ತಾನ ಮೂಲಕ ತಂತ್ರಜ್ಞರಿಗೆ ವಿಮಾನದ ಜೊತೆಗೆ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ರಫೇಲ್ ಜೆಟ್ ಖರೀದಿಸಿದ ದೇಶಗಳಲ್ಲಿ ಒಂದಾಗ ಕತಾರ್ಗೆ ಫ್ರಾನ್ಸ್ ಸೂಚಿಸಿದೆ.  ಪಾಕಿಸ್ತಾನವು ಪ್ರಮುಖ ರಕ್ಷಣಾ ಮಾಹಿತಿಯನ್ನು ಹಿಂದೆ ಚೀನಾದ ಜೊತೆಗೆ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಮುನ್ನೆಚ್ಚರಿಕೆ ವಹಿಸಿದೆ.  ವಿವಾದಾತ್ಮಕ ಚಾರ್ಲಿ ಹೆಬ್ಡೊ ನಿಯತಕಾಲಿಕದ ಹಿಂದಿನ ಪ್ಯಾರಿಸ್ ಕಚೇರಿಯಲ್ಲಿ ಸಂಭವಿಸಿದ ಇರಿತದ ಘಟನೆಯ ಹಿನ್ನೆಲೆಯಲ್ಲಿ ಉಭಯ ದೇಶಗಳ ಬಾಂಧವ್ಯ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ, ಪ್ಯಾರಿಸ್ ಈಗಾಗಲೇ ಪಾಕಿಸ್ತಾನಿಗಳು ಸಲ್ಲಿಸಿರುವ ಆಶ್ರಯ ಕೋರಿಕೆಗಳನ್ನು ವಿವರವಾದ ಪರಿಶೀಲನೆಗೆ ಒಳಪಡಿಸಿದೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020:  ಜೈಪುರ: ‘ಲವ್ ಜಿಹಾದ್ ಎಂಬುದು ದೇಶವನ್ನು ಒಡೆಯಲು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಬಿಜೆಪಿ ಸೃಷ್ಟಿಸಿದ ಪದ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 2020 ನವೆಂಬರ್ 20ರ ಶುಕ್ರವಾರ ಇಲ್ಲಿ ಟೀಕಿಸಿದರು.  ಮದುವೆಯೆಂಬುದು ವೈಯಕ್ತಿಕ ನಿರ್ಧಾರವಾಗಿದ್ದು ಬಿಜೆಪಿಯು ಅದಕ್ಕೂ ನಿರ್ಬಂಧ ವಿಧಿಸುತ್ತಿದೆ ಎಂದು ಅವರು ಆಪಾದಿಸಿದರು. ದೇಶವನ್ನು ಒಡೆಯಲು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಬಿಜೆಪಿ ಸೃಷ್ಟಿಸಿರುವ ಪದವೇಲವ್ ಜಿಹಾದ್. ಮದುವೆಯೆಂಬುದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಅದಕ್ಕೆ ನಿರ್ಬಂಧ ವಿಧಿಸಲು ಕಾನೂನು ರೂಪಿಸುವುದು ಅಸಾಂವಿಧಾನಿಕ. ಇದು ಯಾವ ನ್ಯಾಯಾಲಯದಲ್ಲೂ ನಿಲ್ಲುವುದಿಲ್ಲ. ಪ್ರೀತಿಯಲ್ಲಿ ಜಿಹಾದ್ಗೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದರು. ವಯಸ್ಕರ ನಡುವಣ ಸಮ್ಮತಿಗೆ ಸರ್ಕಾರದ ಅನುಮತಿ ಅಗತ್ಯ ಎನ್ನುವಂಥ ವಾತಾವರಣವನ್ನು ಅವರು (ಬಿಜೆಪಿ) ಸೃಷ್ಟಿಸುತ್ತಿದ್ದಾರೆ. ವೈಯಕ್ತಿಕ ನಿರ್ಧಾರವಾದ ಮದುವೆಯ ಮೇಲೆ ಅವರು ನಿರ್ಬಂಧ ವಿಧಿಸುತ್ತಿದ್ದಾರೆ. ಇದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂದು ಮತ್ತೊಂದು ಟ್ವೀಟಿನಲ್ಲಿ ಗೆಹ್ಲೋಟ್ ಬರೆದರು. ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ರೂಪಿಸುವುದಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ಹೇಳಿದ್ದರು. ಲವ್ ಜಿಹಾದ್ ತಡೆ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಮಧ್ಯಪ್ರದೇಶ ಗೃಹಸಚಿವರೂ ಇತ್ತೀಚೆಗೆ ಹೇಳಿದ್ದರು. ಲವ್ ಜಿಹಾದ್ನ್ನು ಕಾನೂನುಬಾಹಿರಗೊಳಿಸಲು ಬಿಜೆಪಿ ಆಡಳಿತದಲ್ಲಿರುವ ನಾಲ್ಕು ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದ ಯೋಜನೆಗಳ ಮಧ್ಯೆ ಗೆಹ್ಲೋಟ್ ಅವರ ಅಭಿಪ್ರಾಯಗಳು ಬಂದಿರುವುದು ಮಹತ್ವವಾಗಿದೆ. ಗೆಹ್ಲೋಟ್ ಟ್ವೀಟಿಗೆ ಉತ್ತರಿಸಿರುವ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಗಜೇಂದ್ರ ಸಿಂಗ್ ಶೆಖಾವತ್ ಅವರು "ಲವ್ ಜಿಹಾದ್"  ಒಂದು "ಬಲೆ ಎಂದು ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ

: ’ದೊಡ್ಡ ಹಾನಿ, ವಿನಾಶವನ್ನು ಮತ್ತೊಮ್ಮೆ ತಡೆಯಲಾಯಿತು ಎಂದು ನಾಗ್ರೋಟಾ ಮುಖಾಮುಖಿಯ ಒಂದು ದಿನದ ಬಳಿಕ 2020 ನವೆಂಬರ್ 20ರ ಶುಕ್ರವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಪಡೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಜಮ್ಮು ಜಿಲ್ಲೆಯ ನಾಗ್ರೋಟಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಾಲ್ಕು ಭಯೋತ್ಪಾದಕರನ್ನು ಬಗ್ಗು ಬಡಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರುದೊಡ್ಡ ಹಾನಿ ಮತ್ತು ವಿನಾಶವನ್ನು ತಡೆದುದಕ್ಕಾಗಿ ಯೋಧರನ್ನು ಅಭಿನಂದಿಸಿದರು. "ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್--ಮೊಹಮ್ಮದ್ಗೆ ಸೇರಿದ ನಾಲ್ಕು ಭಯೋತ್ಪಾದಕರನ್ನು ಮಟ್ಟಹಾಕಿದ್ದು ಮತ್ತು ಅವರ ಬಳಿಯಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದು, ದೊಡ್ಡ ಹಾನಿ ಮತ್ತು ವಿನಾಶವನ್ನು ಉಂಟು ಮಾಡುವ ಉಗ್ರರ  ಪ್ರಯತ್ನಗಳನ್ನು ಮತ್ತೊಮ್ಮೆ ವಿಫಲಗೊಳಿಸಿದ್ದನ್ನು ಸೂಚಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ಹತ ಭಯೋತ್ಪಾದಕರಿಂದ ೧೧ ಎಕೆ -೪೭ ರೈಫಲ್ಗಳು, ಮೂರು ಪಿಸ್ತೂಲ್ಗಳು ಮತ್ತು ೨೯ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್) ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಮತ್ತು ಉನ್ನತ ಗುಪ್ತಚರ ಸಂಸ್ಥೆಗಳೊಂದಿಗೆ ನಾಗ್ರೋಟಾ ಎನ್ಕೌಂಟರ್ ಮತ್ತು ನಾಲ್ವರು ಭಯೋತ್ಪಾದಕರನ್ನು ಮಟ್ಟ ಹಾಕಿದ ಬಗ್ಗೆ ಈದಿನ ಸಮಾಲೋಚಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ೧೦ ಮತ್ತು ೧೨ನೇ ತರಗತಿಯ ಸಿಬಿಎಸ್ ಪರೀಕ್ಷೆಗಳು ಖಚಿತವಾಗಿ ನಡೆಯಲಿದ್ದು, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಸಿಬಿಎಸ್ ಮಂಡಳಿ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ 2020 ನವೆಂಬರ್ 20ರ ಶುಕ್ರವಾರ ತಿಳಿಸಿದರು. ಹೆಚ್ಚುತ್ತಿರುವ ಕೋವಿಡ್ -೧೯ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವ ಅಥವಾ ಮುಂದೂಡುವಂತೆ ವಿವಿಧ ಭಾಗಗಳಿಂದ ಬರುತ್ತಿರುವ ಬೇಡಿಕೆಗಳ ಮಧ್ಯೆ ತ್ರಿಪಾಠಿ ಅವರ ಅಭಿಪ್ರಾಯಗಳು ಬಂದಿವೆ.  "ಬೋರ್ಡ್ ಪರೀಕ್ಷೆಗಳು ಖಚಿತವಾಗಿ ನಡೆಯುತ್ತವೆ ಮತ್ತು ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಸಿಬಿಎಸ್ ಯೋಜನೆಗಳನ್ನು ರೂಪಿಸುತ್ತಿದೆ ಮತ್ತು ಅದು ಪರೀಕ್ಷಾ ಮೌಲ್ಯಮಾಪನಗಳನ್ನು ಹೇಗೆ ಮಾಡುತ್ತದೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತದೆ ಎಂದು ಅಸ್ಸೋಚಾಮ್ ಆಯೋಜಿಸಿದೆಹೊಸ ಶಿಕ್ಷಣ ನೀತಿ (ಎನ್ಇಪಿ): ಶಾಲಾ ಶಿಕ್ಷಣದ ಉಜ್ವಲ ಭವಿಷ್ಯಕುರಿತ ವೆಬಿನಾರ್ನಲ್ಲಿ ಅವರು ಹೇಳಿದರು. ಆದಾಗ್ಯೂ, ಪರೀಕ್ಷೆಗಳನ್ನು ಅದೇ ಸ್ವರೂಪದಲ್ಲಿ ನಡೆಸಲಾಗುತ್ತದೆಯೇ ಮತ್ತು ವೇಳಾಪಟ್ಟಿಯ ಪ್ರಕಾರ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿಯೇ ಪರೀಕ್ಷೆಗಳು ನಡೆಯುತ್ತವೆಯೇ ಅಥವಾ ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. "ಮಾರ್ಚ್-ಏಪ್ರಿಲ್ ಅವಧಿಯಲ್ಲಿ ನಾವು ಹೇಗೆ ಮುಂದುವರೆಯಬೇಕೆಂಬುದರ ಬಗ್ಗೆ  ಗೊಂದಲಕ್ಕೆ ಈಡಾಗಿದ್ದೆವು. ಆದರೆ ನಮ್ಮ ಶಾಲೆಗಳು ಮತ್ತು ಶಿಕ್ಷಕರು ಸಂದರ್ಭಕ್ಕೆ ಅನುಗುಣವಾಗಿ ರೂಪಾಂತರಗೊಂಡರು. ಬೋಧನೆ ಉದ್ದೇಶಗಳಿಗಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ತಮ್ಮನ್ನು ತಾವು ತರಬೇತಿಗೊಳಿಸಿಕೊಂಡರು ಮತ್ತು ಕೆಲವೇ ತಿಂಗಳುಗಳಲ್ಲಿ ವಿಭಿನ್ನ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಆನ್ಲೈನ್ ತರಗತಿಗಳನ್ನು ನಡೆಸುವುದು ಸಾಮಾನ್ಯವಾಯಿತು" ತ್ರಿಪಾಠಿ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇಂದ್ರ ಸರ್ಕಾರವು ಇತ್ತೀಚೆಗೆ ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧದ ಅನಿರ್ದಿಷ್ಟ ಪ್ರತಿಭಟನೆಯ ಭಾಗವಾಗಿ ವಿವಿಧ ರಾಜ್ಯಗಳ ಸಹಸ್ರಾರು ರೈತರು ಮತ್ತು ಕಾರ್ಮಿಕ ಸಂಘಗಳ ಸದಸ್ಯರು ರಾಷ್ಟ್ರ ರಾಜಧಾನಿಗೆ ಮೆರವಣಿಗೆ ನಡೆಸಲು ನವೆಂಬರ್ ೨೬ ರಂದು ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮಾಯಿಸುವ ನಿರೀಕ್ಷೆ ಇದ್ದು, ದೆಹಲಿಯಲ್ಲಿ ಜನ ಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಗಳಿವೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಆಡಳಿತವು ಅನುಮತಿ ನಿರಾಕರಿಸಿದೆ, ಆದರೆ ರೈತ ಪ್ರದರ್ಶಕರು  ಒಂದು ವಾರ ಕಾಲ ಉಳಿಯಲು ಸಂಪೂರ್ಣವಾಗಿ ಸಜ್ಜಾಗಿರುತ್ತಾರೆ ಅಥವಾ ತಮ್ಮನ್ನು ಎಲ್ಲಿ ತಡೆಯಲಾಗುತ್ತದೋ ಅಲ್ಲೇ ಧರಣಿ ನಡೆಸಲು ಸಜ್ಜಾಗಿರುತ್ತಾರೆ ಎಂದು ವಿವಿಧ ರೈತ ಸಂಘ ಮುಖಂಡರು 2020 ನವೆಂಬರ್ 20ರ ಶುಕ್ರವಾರ ತಿಳಿಸಿದರು. ರೈತ ಚಳವಳಿಯ ಪರಿಣಾಮವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಹಲವಾರು ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳಬಹುದು ಎಂದು ಅವರು ನುಡಿದರು. "ರಾಮಲೀಲಾ ಮೈದಾನ ಅಥವಾ ಜಂತರ್ ಮಂತರಿನಲ್ಲಿ ಪ್ರತಿಭಟನೆ ನಡೆಸಲು ನಾವು ಅಧಿಕಾರಿಗಳಿಂದ ಅನುಮತಿ ಕೇಳಿದ್ದೆವು. ಆದರೆ ಅವರು ಕೊರೋನವೈರಸ್ ಸಾಂಕ್ರಾಮಿಕವನ್ನು ಉಲ್ಲೇಖಿಸಿ ತಿರಸ್ಕರಿಸಿದ್ದಾರೆ. ಅವರು ನಮಗೆ ಪರ್ಯಾಯವನ್ನು ನೀಡದ ಕಾರಣ, ನಾವು ಎಲ್ಲಾ ಐದು ಪ್ರಮುಖ ಹೆದ್ದಾರಿಗಳ ಮೂಲಕ ದೆಹಲಿಗೆ ಮೆರವಣಿಗೆ ಮಾಡಲು ನಿರ್ಧರಿಸಿದ್ದೇವೆ. ನಾವು ಪೊಲೀಸರೊಂದಿಗೆ ಮುಖಾಮುಖಿಯಾಗುವುದನ್ನು ತಪ್ಪಿಸುತ್ತೇವೆ. ನಮ್ಮನ್ನು ಎಲ್ಲಿ ನಿಲ್ಲಿಸಿದರೂ, ಸರ್ಕಾರವು ನಮ್ಮ ಧ್ವನಿಯನ್ನು ಆಲಿಸುವವರೆಗೆ ನಾವು ಅಲ್ಲಿ ಧರಣಿ  ಮಾಡುತ್ತೇವೆ ಎಂದು ಹರಿಯಾಣ ಮೂಲದ ರೈತ ಸಂಘಟನೆಯಾದ ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್ ಸಂಘಟನ್ ಅಧ್ಯಕ್ಷ ಸತ್ಯವಾನ್ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್  20 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment