ನಾನು ಮೆಚ್ಚಿದ ವಾಟ್ಸಪ್

Friday, November 6, 2020

ಇಂದಿನ ಇತಿಹಾಸ History Today ನವೆಂಬರ್ 06

 ಇಂದಿನ ಇತಿಹಾಸ  History Today ನವೆಂಬರ್ 06

2020: ವಾಷಿಂಗ್ಟನ್: ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಅವರು ೧೯೯೨ರಿಂದ ರಿಪಬ್ಲಿಕನ್ ಭದ್ರಕೋಟೆಯಾಗಿದ್ದ ಜಾರ್ಜಿಯಾ ರಾಜ್ಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದೆ ಹಾಕಿ ಮುಂದಕ್ಕೆ ಸಾಗುವುದರ ಜೊತೆಗೆ ಪೆನ್ಸಿಲ್ವೇನಿಯಾದಲ್ಲೂ ೨೦ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದಿದ್ದಾರೆ. ಇದರೊಂದಿಗೆ ೨೭೩ ಮತಗಳನ್ನು ಗೆದ್ದಿರುವ ಜೋ ಬಿಡೆನ್ ಅವರು ಅಮೆರಿಕದ ೪೬ನೇ ಅಧ್ಯಕ್ಷರಾಗಲಿದ್ದಾರೆ ಎಂದು ಡಿಸಿಷನ್ ಡೆಸ್ಕ್ ಎಚ್ ಕ್ಯೂ (ಡಿಡಿಎಚ್ ಕ್ಯೂ) 2020 ನವೆಂಬರ್ 06ರ ಶುಕ್ರವಾರ ಹೇಳಿತು. ಆದರೆ, ಚುನಾವಣೆ ಮುಗಿದಿಲ್ಲ ಎಂದು ಹೇಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರ್ಜಿಯಾದಲ್ಲಿ ಮತಗಳ ಮರುಎಣಿಕೆಗೆ ಆಗ್ರಹಿಸಿದ್ದು, ಮತಗಳ ಮರುಎಣಕೆ ನಡೆಸುವುದಾಗಿ ಜಾರ್ಜಿಯಾ ರಾಜ್ಯ ಪ್ರಕಟಿಸಿದೆ. ಮಧ್ಯೆ, ಬಿಡೆನ್ ಪಡೆದ ಮತಗಳ ಶಾಸನಬದ್ಧತೆಯನ್ನು ಪ್ರಶ್ನಿಸಲು ಟ್ರಂಪ್ ಪ್ರಚಾರಕರು ಸಿದ್ಧತೆಗಳನ್ನು ಆರಂಭಿಸಿದರು. ಶ್ವೇತಭವನದ ಅಧಿಕಾರವನ್ನು ಪಡೆದುಕೊಳ್ಳಲು ಬೇಕಾಗಿರುವ ೨೭೦ ಎಲೆಕ್ಟೋರಲ್ ಕಾಲೇಜು ಮತಗಳನ್ನು ಗಳಿಸಲು ಬಿಡೆನ್ ಅವರಿಗೆ ಜಾರ್ಜಿಯಾ, ಪೆನ್ಸಿಲ್ವೇನಿಯಾ, ನೆವಾಡಾ ಅಥವಾ ನಾತ್ ಕರೋಲಿನಾ ನಾಲ್ಕು ರಾಜ್ಯಗಳ ಪೈಕಿ ಯಾವುದಾದರೂ ಒಂದು ರಾಜ್ಯದ ಬೆಂಬಲ ಲಭಿಸಿದರೆ ಸಾಕಾಗುತ್ತದೆ. ಜಾರ್ಜಿಯಾ ರಾಜ್ಯದಿಂದ ಬಂದ ಇತ್ತೀಚಿನ ಫಲಿತಾಂಶದ ಪ್ರಕಾರ ಬಿಡೆನ್ ಅವರು ಶುಕ್ರವಾರ ಬೆಳಗ್ಗೆ ೯೧೭ ಮತಗಳಿಂದ ಟ್ರಂಪ್ ಅವರನ್ನು ಹಿಂದಕ್ಕೆ ತಳ್ಳಿದ್ದಾರೆ. ಮಾಜಿ ಉಪಾಧ್ಯಕ್ಷ ಬಿಡೆನ್ ಅವರು ಚುನಾವಣಾ ರಾತ್ರಿಯಿಂದ ಈವರೆಗೂ ಜಾರ್ಜಿಯಾದಲ್ಲಿ ಟ್ರಂಪ್ ಅವರಿಗಿಂತ ಹಿಂದಿದ್ದರು. ಹಲವು ನೂರು ಸಾವಿರ ಮತಗಳ ಅಂತರದೊಂದಿಗೆ ಪ್ರಾಥಮಿಕ ಮುನ್ನಡೆ ಗಳಿಸಿದ್ದ ಟ್ರಂಪ್ ಅವರ ಬಲ ಮೇಲ್ ಮೂಲಕ ಬಂದ ಮತಪತ್ರಗಳ ಲೆಕ್ಕ ಆರಂಭಿಸಿದ ಬಳಿಕ ಕುಸಿಯಲಾರಂಭಿಸಿತು. ಬಹುತೇಕ ಮೇಲ್ ಮತಗಳು ಡೆಮಾಕ್ರಟಿಕ್ ಅಭ್ಯರ್ಥಿಯ ಕೈ ಹಿಡಿದವು. ಪೆನ್ಸಿಲ್ವೇನಿಯಾದಿಂದ ರಾತ್ರಿ ಬಂದ ವರದಿಗಳ ಪ್ರಕಾರ ಅಲ್ಲೂ ಬಿಡೆನ್ ಟ್ರಂಪ್ ಅವರನ್ನು ಹಿಂದೆ ಹಾಕಿ ಮುಂದಕ್ಕೆ ಸಾಗಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ).

2020: ಕಠ್ಮಂಡು: ನೇಪಾಳ ಮತ್ತು ಭಾರತ ದೀರ್ಘಕಾಲದ ವಿಶೇಷ ಸಂಬಂಧವನ್ನು ಹೊಂದಿವೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ಅವರು 2020 ನವೆಂಬರ್ 06ರ ಶುಕ್ರವಾರ ಭಾರತದ ಸೇನಾ ಮುಖ್ಯಸ್ಥ ಮನೋಜ ಮುಕುಂದ ನರವಾಣೆ ಅವರೊಂದಿಗೆ ಸೌಜನ್ಯದ ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿದರು. ಉಭಯ ದೇಶಗಳ ನಡುವಣ ಪ್ರಸ್ತುತ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸಲಾಗುವುದು ಎಂದು ಒಲಿ ವಿಶ್ವಾಸ ವ್ಯಕ್ತ ಪಡಿಸಿದರು. ಉಭಯ ದೇಶಗಳ ಸೇನಾ ಮುಖ್ಯಸ್ಥರಿಗೆ ಗೌರವಾನ್ವಿತ ಮಹಾರಥಿ ಸ್ಥಾನಮಾನವನ್ನು ನೀಡುವ ಸಂಪ್ರದಾಯವಿದೆ ಎಂದು ಪ್ರಧಾನಿ ಹೇಳಿದರು. ಸಭೆಯಲ್ಲಿ ಉಭಯ ದೇಶಗಳ ನಡುವಣ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಲಾಗುವುದು ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಕೆಪಿ ಶರ್ಮ ಒಲಿ ಅವರ ವಿದೇಶಾಂಗ ನೀತಿ ಸಲಹೆಗಾರ ರಾಜನ್ ಭಟ್ಟಾರಾಯ್ ಟ್ವೀಟ್ ಮಾಡಿದರು. ಕಠ್ಮಂಡುವಿಗೆ ಮೂರು ದಿನಗಳ ಪ್ರವಾಸದಲ್ಲಿರುವ ಜನರಲ್ ನರವಾಣೆ ಅವರಿಗೆ ನೇಪಾಳಿ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು 2020 ನವೆಂಬರ್ 05ರ ಗುರುವಾರ ನೇಪಾಳಿ ಸೇನೆಯ  ಗೌರವ ಜನರಲ್ ಹುದ್ದೆಯನ್ನು ಪ್ರದಾನ ಮಾಡಿದರು. ನೇಪಾಳದ ಅಧ್ಯಕ್ಷರ ಅಧಿಕೃತ ಶೀತಲ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ನರವಾಣೆ ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಜನರಲ್ ನರವಾಣೆ ಅವರಿಗೆ ಕತ್ತಿ ಮತ್ತು ಓಲೆಸುರುಳಿಯನ್ನು ನೀಡಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಹಕ್ಕುಚ್ಯುತಿ ನೋಟಿಸ್ ವಿರುದ್ಧ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ಸದನದ ಗೌಪ್ಯತೆಯ ಉಲ್ಲಂಘನೆ ಮಾಡಿದ್ದಕ್ಕಾಗಿ ಅಕ್ಟೋಬರ್ ೧೨ರಂದು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಪತ್ರ ಬರೆದುದಕ್ಕಾಗಿ ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ 2020 ನವೆಂಬರ್ 06ರ ಶುಕ್ರವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತು. ಎರಡು ವಾರಗಳ ಬಳಿಕ ಪತ್ರಕ್ಕೆ ಸಂಬಂಧಿಸಿದಂತೆ ನಡೆಯಲಿರುವ ವಿಚಾರಣೆಯ ಕಾಲದಲ್ಲಿ ಖುದ್ದು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಮಹಾರಾಷ್ಟ್ರ ವಿಧಾನಸಭೆಯ ಕಾರ್‍ಯದರ್ಶಿಗೆ ಆಜ್ಞಾಪಿಸಿತು. ಅಲ್ಲಿಯವರೆಗೆ ಹಕ್ಕುಚ್ಯುತಿ ವಿಷಯಕ್ಕೆ ಸಂಬಂಧಿಸಿದಂತೆ ಗೋಸ್ವಾಮಿ ಅವರನ್ನು ಬಂಧಿಸುವಂತಿಲ್ಲ ಎಂದೂ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.. ಬೋಬ್ಡೆ ನೇತೃತ್ವದ ಪೀಠ ಆದೇಶ ನೀಡಿತು. ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನೆರವಾಗಲು ಹಿರಿಯ ವಕೀಲ ಅರವಿಂದ ದಾತಾರ್ ಅವರನ್ನು ಕೋರ್ಟ್ ಸಹಾಯಕರಾಗಿ (ಅಮಿಕಸ್ ಕ್ಯೂರಿ) ಪೀಠ ನೇಮಿಸಿತು. ಮಹಾರಾಷ್ಟ್ರ ವಿಧಾನಸಭೆಯ ಕಾರ್‍ಯದರ್ಶಿ ಅವರು ಬರೆದಿರುವ ಪತ್ರವು ನ್ಯಾಯಾಲಯವನ್ನು ಸಂಪರ್ಕಿಸಿರುವುದಕ್ಕಾಗಿ ಗೋಸ್ವಾಮಿ ಅವರನ್ನು ಬೆದರಿಸಿರುವುದರಿಂದ ಅದು ನ್ಯಾಯದಾನದಲ್ಲಿ ಗಂಭೀರ ಹಸ್ತಕ್ಷೇಪ ಮಾಡಿದೆ ಎಂದು ಸುಪ್ರೀಂಕೋರ್ಟ್ ಹೇಳಿತು. ನ್ಯಾಯಮೂರ್ತಿಗಳಾದ .ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡಿರುವ ಪೀಠವು ವಿಧಾನಸಭೆ ಕಾರ್ಯದರ್ಶಿಯ ಪತ್ರವನ್ನು ಅಭೂತಪೂರ್ವ ಮತ್ತು ಆಘಾತಕಾರಿ ಎಂದು ಬಣ್ಣಿಸಿತು. ನ್ಯಾಯಾಲಯವನ್ನು ಸಂಪರ್ಕಿಸಿರುವುದಕ್ಕಾಗಿ ಅರ್ಜಿದಾರರನ್ನು ಬೆದರಿಸುವುದು ಪತ್ರ ಬರೆದಿರುವವರ ಸ್ಪಷ್ಟ ಉದ್ದೇಶವಾಗಿರುವಂತೆ ಕಾಣುತ್ತದೆ. ನ್ಯಾಯಾಲಯಕ್ಕೆ ಹೋಗಿರುವುದಕ್ಕಾಗಿ ದಂಡ ವಿಧಿಸಲಾಗುವುದು ಎಂಬ ಬೆದರಿಕೆಯನ್ನು ಪತ್ರವು ಅರ್ಜಿದಾರರಿಗೆ ಒಡ್ಡಿದೆ ಎಂದು ಪೀಠ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ವಿಶೇಷವಾಗಿ ಮಿಲಿಟರಿ ಉಪಕರಣಗಳ ತರಬೇತಿ ಮತ್ತು ಸಂಗ್ರಹಣೆಯಲ್ಲಿ ದ್ವಿಪಕ್ಷೀಯ ರಕ್ಷಣಾ ತೊಡಗಿಸಿಕೊಳ್ಳುವಿಕೆ ಮತ್ತು ಕಡಲ ಸಹಕಾರವನ್ನು ಹೆಚ್ಚಿಸಲು ಹಾಗೂ ಭಯೋತ್ಪಾದನೆಯನ್ನು ಎದುರಿಸುವ ಸಲುವಾಗಿ ಮಾಹಿತಿ ಹಂಚಿಕೆಯನ್ನು ಹೆಚ್ಚಿಸಲು ಭಾರತ ಮತ್ತು ಫಿಲಿಪೈನ್ಸ್ 2020 ನವೆಂಬರ್ 06ರ ಶುಕ್ರವಾರ ಒಪ್ಪಿಕೊಂಡವು. ದ್ವಿಪಕ್ಷೀಯ ಸಹಕಾರ ಕುರಿತ ಜಂಟಿ ವರ್ಚುಯಲ್ ಸಭೆಯ ಸಂದರ್ಭದಲ್ಲಿ ಕುರಿತ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಫಿಲಿಪ್ಪೈನ್ಸಿನ ವಿದೇಶಾಂಗ ವ್ಯವಹಾರಗಲ ಇಲಾಖೆಯ ಕಿರಿಯ ಕಾರ್‍ಯದರ್ಶಿ ತಿಯೊಡೊರೊ ಲೋಕ್ಸಿನ್ ಅವರು ಸಭೆಯ ನೇತೃತ್ವ ವಹಿಸಿದ್ದರು. ಉಭಯ ರಾಷ್ಟ್ರಗಳ ಮಧ್ಯೆ ಗಣನೀಯ ಗಣನೀಯ ರಕ್ಷಣಾ ಸಹಕಾರ ಇದೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ  ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಪಡೆಯುವಲ್ಲಿ ಫಿಲಿಪ್ಪೈನ್ಸ ಕೂಡಾ ಮುಂಚೂಣಿಯಲ್ಲಿದೆ. ಕ್ಷಿಪಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ವ್ಯವಹಾರವನ್ನು ವರ್ಷ ಅಂತಿಮಗೊಳಿಸಬೇಕಾಗಿತ್ತು. ಆದರೆ ಕೋವಿಡ್-೧೯ ಬಿಕ್ಕಟ್ಟು ಯತ್ನಕ್ಕೆ ಅಡ್ಡಿ ಉಂಟು ಮಾಡಿತು ಎಂದು ಸುದ್ದಿ ಮೂಲಗಳು ತಿಳಿಸಿವೆ. ರಕ್ಷಣಾ ತೊಡಗಿಸಿಕೊಳ್ಳುವಿಕೆಯನ್ನು ಇನ್ನಷ್ಟು ಬಲ ಪಡಿಸಲು ಮತ್ತು ನೌಕಾ ಸಹಕಾರವನ್ನು ವಿಶೇಷವಾಗಿ ಸೇನಾ ತರಬೇತಿ ಮತ್ತು ಶಿಕ್ಷಣ, ನಿರ್ಮಾಣ ಸಾಮರ್ಥ್ಯ, ನಿಯಮಿತ ಸದ್ಭಾವನಾ ಭೇಟಿಗಳು ಮತ್ತು ರಕ್ಷಣಾ ಉಪಕರಣಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಹೆಚ್ಚಿಸಿಕೊಳ್ಳಲು ಉಭಯ ಕಡೆಗಳೂ ಒಪ್ಪಿದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರ ಮಾಜಿ ಮುಖ್ಯ ಸಮರ ತಂತ್ರಜ್ಞ ಸ್ಟೀವ್ ಬ್ಯಾನೋನ್ ಅವರನ್ನು ಅಮೆರಿಕ ಸರ್ಕಾರದ ಮುಖ್ಯ ಸಾಂಕ್ರಾಮಿಕ ತಜ್ಞ ಡಾ. ಆಂಥೋಣಿ ಫೌಸಿ ಮತ್ತು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ರೇ ಅವರ ತಲೆ ಕಡಿಯುವಂತೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಟ್ವಿಟ್ಟರಿನಿಂದ 2020 ನವೆಂಬರ್ 06ರ ಶುಕ್ರವಾರ ಕಾಯಂ ಆಗಿ ಅಮಾನತುಗೊಳಿಸಲಾಯಿತು. ಅಮೆರಿಕದ ಪ್ರಜೆಗಳು ನವೆಂಬರ್ ೩ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕಾಗಿ ಇನ್ನೂ ಕಾಯುತ್ತಿರುವಾಗಲೇ ಕ್ರಮ ಕೈಗೊಳ್ಳಲಾಗಿದೆ. ಬ್ಯಾನೋನ್ ಅವರು ತಮ್ಮ ವಿವಾದಾತ್ಮಕ ಸ್ಟೀವ್ ಬ್ಯಾನೋನ್ಸ್ ವಾರ್ ರೂಮ್ ಯುಟ್ಯೂಬ್ ವಿಡಿಯೋದಲ್ಲಿ ತಮ್ಮ ಹೇಳಿಕೆ ನೀಡಿದ್ದರು. ಬಲಪಂಥೀಯ ನಾಯಕ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ಗೆದ್ದರೆ ಏನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತಾಗಿ ವಿಡಿಯೋದಲ್ಲಿ ಮಾತನಾಡಿದ್ದರು. ಸಹಚರ ಜ್ಯಾಕ್ ಮ್ಯಾಕ್ಸೀ ಜೊತೆಗೆ ಮಾತನಾಡುತ್ತಿದ್ದ ಬ್ಯಾನೋನ್, ಟ್ರಂಪ್ ಅವರು ಪುನರಾಯ್ಕೆಯಾದ ತತ್ ಕ್ಷಣವೇ ಮೊದಲು ಮಾಡಬೇಕಾದ ಕೆಲಸ ರೇ ಮತ್ತು ಫೌಸಿ ಅವರನ್ನು ತರಾಟೆಗೆ ತೆಗೆದುಕೊಳ್ಳುವುದು ಎಂದು ಹೇಳಿದರು. ಅಷ್ಟಕ್ಕೆ ನಿಲ್ಲದ ಬ್ಯಾನೋನ್ ನಾನು ವಾಸ್ತವವಾಗಿ ಟ್ಯೂಡೋರ್ ಇಂಗ್ಲೆಂಡ್ ಕಾಲಕ್ಕೆ ಹೋಗಬಯಸುತ್ತೇನೆ. ಅವರ ತಲೆಗಳನ್ನು ಭರ್ಜಿಗೆ ಹಾಕುತ್ತೇನೆ. ಹೌದು, ಫೆಡರಲ್ ಅಧಿಕಾರಿಗಳಿಗೆ ಎಚ್ಚರಿಕೆಯಾಗಿ, ನಾನು ಅವುಗಳನ್ನು ಶ್ವೇತಭವನದ ಎರಡು ಮೂಲೆಗಳಲ್ಲಿ ತೂಗಾಡಿಸುತ್ತೇನೆ ಎಂದು ಹೇಳಿದ್ದರು. ಬ್ಯಾನೋನ್ ಮತ್ತು ಮ್ಯಾಕ್ಸೀ ಅವರು ನಂತರ ಫಿಲಡೆಲ್ಫಿಯಾದ ಇಬ್ಬರು ಟೋರಿಗಳನ್ನು ಗಲ್ಲಿಗೇರಿಸಿದ್ದರ ವಾರ್ಷಿಕೋತ್ಸವ ಬಗ್ಗೆ ಮಾತನಾಡಿದ್ದರು. ದೇಶದ್ರೋಹಿಗಳಿಗೆ ನಾವು ಮಾಡುತ್ತಿದ್ದುದು ಹೀಗೆ ಎಂದು ಅವರು ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


ಇಂದಿನ ಇತಿಹಾಸ  History Today ನವೆಂಬರ್ 06 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment