ಇಂದಿನ ಇತಿಹಾಸ History Today ನವೆಂಬರ್ 09
2020: ನವದೆಹಲಿ: ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್ ) ಹಾಗೂ ಅಧಿಕ ಮಾಲಿನ್ಯ ಇರುವ ಪ್ರದೇಶಗಳಲ್ಲಿ ನವೆಂಬರ್ ೯ರಿಂದ ೩೦ರವರೆಗೆ ಪಟಾಕಿ ಮಾರಾಟ ಮತ್ತು ಬಳಕೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಂಪೂರ್ಣವಾಗಿ ನಿಷೇಧಿಸಿ 2020 ನವೆಂಬರ್ 09ರ ಸೋಮವಾರ ಆದೇಶ ಹೊರಡಿಸಿತು. ಕಳೆದ ವರ್ಷದ ನವೆಂಬರಿನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಪ್ರಮಾಣದಲ್ಲಿ ಹಾಗೂ ವಾಯು ಮಾಲಿನ್ಯವು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವ ದೆಹಲಿ ಹಾಗೂ ದೇಶದ ಇತರ ನಗರ ಮತ್ತು ಪಟ್ಟಣಗಳಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಎನ್‌ಜಿಟಿ ಆದೇಶ ತಿಳಿಸಿತು. ಗಾಳಿಯ ಗುಣಮಟ್ಟವು ‘ಮಧ್ಯಮ’ ಅಥವಾ ‘ಸಾಮಾನ್ಯ’ವಾಗಿ ಇರುವ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು, ಬಳಸಲು ಅವಕಾಶ ನೀಡಬಹುದು. ಅಲ್ಲೆಲ್ಲ ದೀಪಾವಳಿ, ಕ್ರಿಸ್ಮಸ್, ಹೊಸ ವರ್ಷಾಚರಣೆ ಸಂದರ್ಭಗಳಲ್ಲಿ ಎರಡು ಗಂಟೆಗಳ ಕಾಲ ಪಟಾಕಿ ಸುಡುವುದಕ್ಕೆ ಅವಕಾಶ ನೀಡಿ ಸಂಬಂಧಿಸಿದ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬಹುದು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ. ಕೋವಿಡ್-೧೯ ನಿಯಂತ್ರಿಸುವ ನಿಟ್ಟಿನಲ್ಲಿ ವಾಯುಮಾಲಿನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದೂ ಆದೇಶದ ನಿರ್ದೇಶನ ನೀಡಿದೆ. ಪಟಾಕಿ ನಿಷೇಧ ಕೋರಿ ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿ ನವೆಂಬರ್ ೫ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠ ಸೋಮವಾರ ತೀರ್ಪನ್ನು ಪ್ರಕಟಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಪ್ಯಾರಿಸ್: ಫಿಜ್ಜರ್ ಮತ್ತು ಬಯೋಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಲಸಿಕೆಯು ಕೋವಿಡ್-೧೯ ಸೋಂಕುಗಳನ್ನು ತಡೆಗಟ್ಟುವಲ್ಲಿ ಶೇಕಡಾ ೯೦ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪೆನಿಗಳು 2020 ನವೆಂಬರ್ 09ರ ಸೋಮವಾರ ಪ್ರಕಟಿಸಿದವು. ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಎರಡು ಡೋಸ್‌ಗಳಲ್ಲಿ ಎರಡನೆಯ ಡೋಸ್ ಕೊಟ್ಟ ಬಳಿಕ ಏಳು ದಿನಗಳಲ್ಲಿ ಮತ್ತು ಮೊದಲನೆಯ ಡೋಸ್ ಕೊಟ್ಟ ೨೮ ದಿನಗಳ ನಂತರ ರೋಗಿಗಳ ರಕ್ಷಣೆಯನ್ನು ಮಾಡಲು ಸಾಧ್ಯವಾಯಿತು. "ನಮ್ಮ ಕೋವಿಡ್ -೧೯ ಲಸಿಕೆಯ ಹಂತ ೩ರ ಪ್ರಯೋಗದ ಮೊದಲ ಫಲಿತಾಂಶವು ಕೋವಿಡ್ -೧೯ನ್ನು ತಡೆಗಟ್ಟುವ ನಮ್ಮ ಲಸಿಕೆಯ ಸಾಮರ್ಥ್ಯದ ಆರಂಭಿಕ ಸಾಕ್ಷ್ಯವನ್ನು ಒದಗಿಸಿದೆ’ ಎಂದು ಫಿಜರ್ ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿಕೆಯಲ್ಲಿ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಕೊರೋನಾ -೧೯ ಪ್ರಕರಣಗಳಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ ೯೨.೫೬ಕ್ಕೆ ಏರಿದೆ, ಒಟ್ಟು ಚೇತರಿಸಿದವರ ಸಂಖ್ಯೆ ೭೯ ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ನವೆಂಬರ್ 09ರ ಸೋಮವಾರ ತಿಳಿಸಿತು. ಹೊಸದಾಗಿ ೪೫,೯೦೩ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ ೮೫,೫೩,೬೫೭ಕ್ಕೆ ಏರಿದೆ. ಹೊಸದಾಗಿ ೪೯೦ ಸಾವುಗಳು ದಾಖಲಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ ೧,೨೬,೬೧೧ ಕ್ಕೆ ಏರಿದೆ ಎಂದು ಬೆಳಿಗ್ಗೆ ೮ ಗಂಟೆಗೆ ನವೀಕರಿಸಿದ ಮಾಹಿತಿ ತಿಳಿಸಿತು. ಕಾಯಿಲೆಯಿಂದ ಚೇತರಿಸಿಕೊಂಡ ಒಟ್ಟು ಜನರ ಸಂಖ್ಯೆ ೭೯,೧೭,೩೭೩ ಕ್ಕೆ ಏರಿದ್ದು, ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇಕಡಾ ೯೨.೫೬ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇಕಡಾ ೧.೪೮ ರಷ್ಟಿದೆ. ಕೋವಿಡ್-೧೯ರ ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ ೧೧ ನೇ ದಿನಕ್ಕೆ ೬ ಲಕ್ಷಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕೊರೋನವೈರಸ್ ಸೋಂಕಿನ ೫,೦೯,೬೭೩ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ ೫.೯೬ ರಷ್ಟಿದೆ ಎಂದು ಮಾಹಿತಿ ತಿಳಿಸಿದೆ. ಭಾರತದ ಕೋವಿಡ್-೧೯ರ ಒಟ್ಟು ಪ್ರಕರಣಗಳು ಆಗಸ್ಟ್ ೭ ರಂದು ೨೦ ಲಕ್ಷ, ಆಗಸ್ಟ್ ೨೩ ರಂದು ೩೦ ಲಕ್ಷ ಮತ್ತು ಸೆಪ್ಟೆಂಬರ್ ೫ ರಂದು ೪೦ ಲಕ್ಷ ದಾಟಿತ್ತು. ಇದು ಸೆಪ್ಟೆಂಬರ್ ೧೬ ರಂದು ೫೦ ಲಕ್ಷ, ಸೆಪ್ಟೆಂಬರ್ ೨೮ ರಂದು ೬೦ ಲಕ್ಷ, ಅಕ್ಟೋಬರ್ ೧೧ ರಂದು ೭೦ ಲಕ್ಷ ಮತ್ತು ಅಕ್ಟೋಬರ್ ೨೯ ರಂದು ೮೦ ಲಕ್ಷ ದಾಟಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ವಾಷಿಂಗ್ಟನ್: ಆರೋಗ್ಯ ಕಾಳಜಿ (ಹೆಲ್ತ ಕೇರ್) ಕಾರ್‍ಯಕ್ರಮದ ವ್ಯಾಪ್ತಿ ವಿಸ್ತರಣೆ, ಹವಾಮಾನ ವೈಪರೀತ್ಯದ ವಿರುದ್ಧ ಹೋರಾಟ ಮತ್ತು ಕೊರೋನವೈರಸ್ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ನೆರವು ನೀಡುವಂತಹ ಪ್ರಮುಖ ಡೆಮಾಕ್ರಟಿಕ್ ಆದ್ಯತೆಗಳನ್ನು ಜಾರಿಗೆ ತರುವ ಅಧ್ಯಕ್ಷ-(ಚುನಾಯಿತ) ಜೋ ಬಿಡೆನ್ ಅವರ ಯೋಜನೆಗಳಿಗೆ ಜನವರಿಯಲ್ಲಿ ಜಾರ್ಜಿಯಾದಲ್ಲಿ ತಡೆ ಬೀಳುವ ಸಾಧ್ಯತೆಗಳಿವೆ ಎಂದು ವರದಿಗಳು 2020 ನವೆಂಬರ್ 09ರ ಸೋಮವಾರ ಹೇಳಿದವು. ಸೆನೆಟಿನಲ್ಲಿ ಬಹುಮತವನ್ನು ಸಾಧಿಸುವ ಕಾರ್ಯದಲ್ಲಿ ಡೆಮಾಕ್ರ್ರಟಿಕ್ ಪಕ್ಷ ಹಿಂದೆ ಬಿದ್ದಿದ್ದು, ಹೌಸ್ ಆಫ್ ರೆಪ್ರಸೆಂಟೇಟಿವ್‌ನಲ್ಲಿ ಮೊದಲಿದ್ದ ಸ್ಥಾನಗಳನ್ನೂ ಕಳೆದುಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷವು ಉತ್ತಮ ಫಲಿತಾಂಶದೊಂದಿಗೆ ಜೋ ಬಿಡೆನ್ ಅವರ ಶಾಸಕಾಂಗ ಉಪಕ್ರಮಗಳಿಗೆ ಅಂಕುಶ ಹಾಕುವ ಸಾಮರ್ಥ ಪಡೆದುಕೊಂಡಿದೆ. ಸಾಂಪ್ರದಾಯಿಕವಾಗಿ ರಿಪಬ್ಲಿಕನ್-ಒಲವು ಹೊಂದಿರುವ ರಾಜ್ಯದಲ್ಲಿ ಈಗಿರುವ ಇಬ್ಬರು ರಿಪಬ್ಲಿಕನ್ ಸೆನೆಟರ್‌ಗಳನ್ನು ಪದಚ್ಯುತಗೊಳಿಸುವ ಶತಪ್ರಯತ್ನವನ್ನು ಬಿಡೆನ್ ಅವರ ಪಕ್ಷವು ನಡೆಸುತ್ತಿದೆ. ಅಲ್ಲಿ ಮತ ಎಣಿಕೆ ಮುಂದುವರೆದಂತೆ ಬಿಡೆನ್ ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ ಅತ್ಯಂತ ಕಡಿಮೆ ಅಂತರದ ಮುನ್ನಡೆಯಲ್ಲಿದ್ದಾರೆ. "ನಾವು ಜಾರ್ಜಿಯಾವನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ, ನಂತರ ನಾವು ಜಗತ್ತನ್ನು ಬದಲಾಯಿಸುತ್ತೇವೆ’ ಎಂದು ಸೆನೆಟ್ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ನ್ಯೂಯಾರ್ಕಿನಲ್ಲಿ ಶನಿವಾರ ಘೋಷಿಸಿದರು. ಆದರೆ ಜಾರ್ಜಿಯಾದ ರಿಪಬ್ಲಿಕನ್ ಗವರ್ನರ್ ಬ್ರಿಯಾನ್ ಕೆಂಪ್ ಅವರು ಜನವರಿಯಲ್ಲಿ ಹೆಚ್ಚಿನ ಮತದಾನವನ್ನು ಪ್ರತಿಪಾದಿಸಿದರು. ರಿಪಬ್ಲಿಕನ್ನರಿಗೆ ಒಗ್ಗೂಡುವಂತೆ ಕರೆ ನೀಡಿದ ಅವರು "ಹೋರಾಟವು ಮುಗಿದಿಲ್ಲ’ ಎಂದು ಘೋಷಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಪಾಟ್ನಾ: ಬಿಹಾರ ವಿಧಾನಸಭೆಗಾಗಿ ನಡೆದ ಮೂರು ಹಂತಗಳ ಚುನಾವಣೆಯ ಮತಗಳ ಎಣಿಕೆ 2020 ನವೆಂಬರ್ 10ರ ಮಂಗಳವಾರ ಬೆಳಗ್ಗೆ ಆರಂಭವಾಗಲಿದೆ. ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಕಾಂಗ್ರೆಸ್ ಮತ್ತು ರಾಜ್ಯದ ಎಡ ಪಕ್ಷಗಳನ್ನು ಒಳಗೊಂಡ ತೇಜಸ್ವೀ ಯಾದವ್ ನೇತೃತ್ವದ ಗ್ರ್ಯಾಂಡ್ ಅಲೈಯನ್ಸ್ ಅಥವಾ ಮಹಾಘಟ ಬಂಧನ್ ದೊಡ್ಡ ಗೆಲುವು ಸಾಧಿಸುವುದಾಗಿ ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಮುನ್ಸೂಚನೆ ನೀಡಿದ್ದರೂ, ಹಾಲಿ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ರಾಜ್ಯದಲ್ಲಿ ಮತ್ತೊಂದು ಅವಧಿಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿ ಇದ್ದಾರೆ. ಮತದಾನೋತ್ತರ ಸಮೀಕ್ಷಾ ಮುನ್ಸೂಚನೆಗಳು ನಿಜವಾದಲ್ಲಿ ತೇಜಸ್ವೀ ಯಾದವ್ ಅವರು ದೇಶದಲ್ಲೇ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಲಿದ್ದಾರೆ. ಮಂಗಳವಾರದ ಮತಗಳ ಎಣಿಕೆಯು ನಂದ್ ಕಿಶೋರ ಯಾದವ್ (ಪಾಟ್ನಾ ಸಾಹಿಬ್), ಪ್ರಮೋದ ಕುಮಾರ್ (ಮೋತಿಹಾರಿ), ರಾಣಾ ರಣಧೀರ್ (ಮಧುಬನ್), ಸುರೇಶ ಶರ್ಮಾ (ಮುಜಾಫರಪುರ), ಶ್ರಣ ಕುಮಾರ್ (ನಳಂದ), ಜೈ ಕುಮಾರ್ ಸಿಂಗ್ (ದಿನಾರಾ) ಮತ್ತು ಕೃಷ್ಣಾನಂದನ ಪ್ರಸಾದ್ ವರ್ಮಾ (ಜೆಹಾನಾಬಾದ್) ಸೇರಿದಂತೆ ಹೆಚ್ಚಿನ ಸಂಖ್ಯೆಯ ಮಂತ್ರಿಗಳ ರಾಜಕೀಯ ಭವಿಷ್ಯವನ್ನು ಸಹ ನಿರ್ಧರಿಸುತ್ತದೆ. ಅಕ್ಟೋಬರ್ ೨೮, ನವೆಂಬರ್ ೩ ಮತ್ತು ನವೆಂಬರ್ ೭ ರಂದು ಬಿಹಾರದ ೨೪೩-ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ೨೦೧೮ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಹೈಕೋರ್ಟ್ 2020 ನವೆಂಬರ್ 09ರ ಸೋಮವಾರ ನಿರಾಕರಿಸಿತು. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೮ ರ ಅಪರಾಧ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಜಾಮೀನು ಕೋರಿರುವುದನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿತು. ಗೋಸ್ವಾಮಿ ಅವರ ಮನವಿಯ ಮೇರೆಗೆ ಹೈಕೋರ್ಟ್ ತನ್ನ ಆದೇಶವನ್ನು ಶನಿವಾರ ಕಾಯ್ದಿರಿಸಿತ್ತು. ವಾಸ್ತುಶಿಲ್ಪಿ-ಒಳಾಂಗಣ ವಿನ್ಯಾಸಕ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗೋಸ್ವಾಮಿ ಮತ್ತು ಫಿರೋಜ್ ಶೇಖ್ ಮತ್ತು ನಿತೀಶ್ ಸರ್ದಾ ಅವರನ್ನು ನವೆಂಬರ್ ೪ ರಂದು ಬಂಧಿಸಲಾಗಿತ್ತು. ಮುಂಬೈಯ ಲೋವರ್ ಪ್ಯಾರೆಲ್ ನಿವಾಸದಿಂದ ಬಂಧನಕ್ಕೊಳಗಾದ ನಂತರ, ಗೋಸ್ವಾಮಿ ಅವರನ್ನು ಅಲಿಬಾಗ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ರು ಗೋಸ್ವಾಮಿ ಮತ್ತು ಇನ್ನಿಬ್ಬರನ್ನು ನವೆಂಬರ್ ೧೮ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಗೋಸ್ವಾಮಿ ಅವರನ್ನು ಅಲಿಬಾಗ್ ಜೈಲಿಗೆ ಕೋವಿಡ್ -೧೯ ಕೇಂದ್ರವೆಂದು ಗೊತ್ತುಪಡಿಸಲಾಗಿದ್ದ ಸ್ಥಳೀಯ ಶಾಲೆಯಲ್ಲಿ ಇರಿಸಲಾಗಿತ್ತು. ಅವರನ್ನು ಭಾನುವಾರ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ತಾಲೋಜ ಜೈಲಿಗೆ ಸ್ಥಳಾಂತರಿಸಲಾಯಿತು. ನ್ಯಾಯಾಂಗ ಬಂಧನದಲ್ಲಿದ್ದಾಗ ಮೊಬೈಲ್ ಫೋನ್ ಬಳಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗೋಸ್ವಾಮಿಯನ್ನು ತಲೋಜ ಜೈಲಿಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment