ಇಂದಿನ ಇತಿಹಾಸ History Today ನವೆಂಬರ್ 21
2020: ನವದೆಹಲಿ: ದೇಶವು ತನ್ನ ಇಂಗಾಲದ ಹೊರಸೂಸುವಿಕೆಯನ್ನು (ಇಂಗಾಲದ ಹೆಜ್ಜೆ ಗುರುತು) ಶೇಕಡಾ ೩೦-೩೫ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ನವೆಂಬರ್ 21ರ ಶನಿವಾರ ಹೇಳಿದರು. ಪ್ರಸ್ತುತ ದಶಕದಲ್ಲಿ ನೈಸರ್ಗಿಕ ಅನಿಲ ಸಾಮರ್ಥ್ಯದ ಬಳಕೆಯನ್ನು ನಾಲ್ಕು ಪಟ್ಟು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ಮುಂದಿನ ಐದು ವರ್ಷಗಳಲ್ಲಿ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಕೆಲಸವೂ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ‘ಸಾಂಕ್ರಾಮಿಕ ರೋಗದಿಂದಾಗಿ ಇಡೀ ವಿಶ್ವದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳು ನಡೆಯುತ್ತಿರುವ ಹೊತ್ತಿನಲ್ಲಿ ನೀವು ಉದ್ಯಮವನ್ನು ಪ್ರವೇಶಿಸುತ್ತಿದ್ದೀರಿ. ಈ ಹೊತ್ತಿನಲ್ಲಿ ಭಾರತದ ಇಂಧನ ಕ್ಷೇತ್ರದಲ್ಲಿ ಮತ್ತು ಉದ್ಯಮಶೀಲತೆಯಲ್ಲೂ ಬೆಳವಣಿಗೆಯಾಗುವ ಸಾಧ್ಯತೆಯಿದೆ’ ಎಂದು ಪಂಡಿತ್ ದೀನದಯಾಳು ಪೆಟ್ರೋಲಿಯಂ ವಿಶ್ವವಿದ್ಯಾಲಯದ (ಪಿಡಿಪಿಯು) ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಪ್ರಧಾನಿ ನುಡಿದರು. ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳಿಗೆ ತಮ್ಮ ಉದ್ದೇ, ಗುರಿಯ ಬಗ್ಗೆ ನಂಬಿಕೆ ಇಡುವಂತೆ ಪ್ರೋತ್ಸಾಹಿಸಿದರು ಮತ್ತು ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸುವಂತೆ ಕಿವಿಮಾತು ಹೇಳಿದರು. ‘ಯಶಸ್ವೀ ವ್ಯಕ್ತಿಗಳಿಗೆ ಸಮಸ್ಯೆಗಳಿಲ್ಲ ಎಂದಲ್ಲ. ಆದರೆ ಸವಾಲುಗಳನ್ನು ಸ್ವೀಕರಿಸುವವನು, ಅವುಗಳನ್ನು ಎದುರಿಸುವವನು ಮತ್ತು ಅವುಗಳನ್ನು ಸೋಲಿಸುವವನು, ಸಮಸ್ಯೆಗಳನ್ನು ಪರಿಹರಿಸುತ್ತಾನೆ ಮತ್ತು ಯಶಸ್ವಿಯಾಗುತ್ತಾನೆ’ ಎಂದು ಪ್ರಧಾನಿ ಹೇಳಿದರು. ‘ಜವಾಬ್ದಾರಿಯ ಪ್ರಜ್ಞೆ ಇರುವವರು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಹೊರೆಯ ಭಾವನೆ ಇರುವವರು ಯಾವಾಗಲೂ ವಿಫಲರಾಗುತ್ತಾರೆ’ ಎಂದು ಅವರು ನುಡಿದರು. ಇಂಧನ ಕ್ಷೇತ್ರದಲ್ಲಿ ನವೋದ್ಯಮಗಳನ್ನು (ಸ್ಟಾರ್ಟ್ ಅಪ್) ಬಲಪಡಿಸುವ ಕೆಲಸ ನಡೆಯುತ್ತಿದೆ, ಮತ್ತು ಈ ಉದ್ದೇಶಕ್ಕಾಗಿ ವಿಶೇಷ ನಿಧಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಜಮ್ಮು-ಕಾಶ್ಮೀರದ ನಾಗ್ರೋಟಾದಲ್ಲಿ ಭಯೋತ್ಪಾದಕರ ಜೊತೆಗೆ ನಡೆದ ಭೀಕರ ಗುಂಡಿನ ಘರ್ಷಣೆಯ ಬಳಿಕ ಭಾರತದಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆಸಲು ನಡೆದಿದ್ದ ಪಿತೂರಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭಾರತವು 2020 ನವೆಂಬರ್ 21ರ ಶನಿವಾರ ಪಾಕಿಸ್ತಾನ ಹೈಕಮೀಷನ್ ಅಧಿಕಾರಿಯನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ಸಲ್ಲಿಸಿತು. ಗುಂಡಿನ ಘರ್ಷಣೆಯಲ್ಲಿ ಹತರಾದ ನಾಲ್ವರು ಭಯೋತ್ಪಾದಕರ ಬಳಿ ಪತ್ತೆಯಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ವೈರ್‌ಲೆಸ್ ಸೆಟ್‌ಗಳು, ಬಟ್ಟೆ ಮತ್ತು ಔಷಧ ಸಂಗ್ರಹಗಳು ಪಾಕಿಸ್ತಾನದ ಲಾಹೋರ್ ಮತ್ತು ಖೈಬರ್ ಫಕ್ತೂನ್ ಕ್ವಾ ಪ್ರಾಂತ್ಯದ ಗುರುತುಗಳನ್ನು ತೋರಿಸುತ್ತವೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನ ಹೈಕಮಿಷನ್‌ನ ಚಾರ್ಜ್ ಡಿ ಅಫೈರ್‌ಗಳಾದ ಅಫ್ತಾಬ್ ಹಸನ್ ಖಾನ್ ಅವರನ್ನು ಕರೆಸಿ, "ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ನೀತಿಯಿಂದ ದೂರವಿರಬೇಕು ಮತ್ತು ಭಯೋತ್ಪಾದಕರಿಗೆ ಒದಗಿಸಲಾಗುತ್ತಿರುವ ಎಲ್ಲ ಮೂಲ ಸೌಕರ್ಯಗಳನ್ನು ಸ್ಥಗಿತಗೊಳಿಸಬೇಕು’ ಎಂದು ಆಗ್ರಹಿಸಿತು. "ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತನ್ನ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಸರ್ಕಾರ ಕಟಿಬದ್ಧವಾಗಿದೆ" ಎಂದು ಖಾನ್ ಅವರಿಗೆ ತಿಳಿಸಲಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಶ್-ಇ-ಮೊಹಮ್ಮದ್ (ಜೆಇಎಂ) ನಡೆಸಲು ಯೋಜಿಸಿದ್ದ ಭಯೋತ್ಪಾದಕ ದಾಳಿಯ ಸಂಚು ಈ ಘಟನೆಯಿಂದ ಬೆಳಕಿಗೆ ಬಂದಿದ್ದು, ಈ ಬಗ್ಗೆ ಭಾರತವು ಪಾಕಿಸ್ತಾನಕ್ಕೆ ತನ್ನ ತೀವ್ರ ಕಳವಳವನ್ನೂ ವ್ಯಕ್ತ ಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ೩೭೦ ನೇ ವಿಧಿ ರದ್ದು ಮತ್ತು ’ಅಡೆತಡೆಯಿಲ್ಲದ’ ಭದ್ರತಾ ಕಾರ್ಯಾಚರಣೆUಳ ಮೂಲಕ ಜಮ್ಮು ಮತ್ತು ಕಾಶ್ಮೀರದಿಂದ ಉಗ್ರಗಾಮಿತ್ವವನ್ನು ಹೊರಹಾಕಲಾಗಿದೆ ಮತ್ತು ಯುವಕರನ್ನು ಉಗ್ರವಾದದ ಕಡೆಗೆ ಸೆಳೆಯುವುದನ್ನು ತಪ್ಪಿಸಲಾಗಿದೆ ಎಂಬ ಸರ್ಕಾರದ ಪ್ರತಿಪಾದನೆಯ ಮಧ್ಯೆ, ೨೦೨೦ರಲ್ಲಿ ಭಾರೀ ಸಂಖ್ಯೆಯಲ್ಲಿ ಉಗ್ರಗಾಮಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದರ ವರದಿ 2020 ನವೆಂಬರ್ 21ರ ಶನಿವಾರ ಬಹಿರಂಗ ಪಡಿಸಿತು. ತನಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ೨೦೨೦ರಲ್ಲಿ ಕಳೆದ ೧೦ ವರ್ಷಗಳಲ್ಲಿ ಎರಡನೇ ಅತಿ ಹೆಚ್ಚು ಉಗ್ರಗಾಮಿ ಏರಿಕೆಯನ್ನು ಕಾಶ್ಮೀರ ಕಂಡಿದೆ ಎಂದು ವರದಿ ತಿಳಿಸಿದೆ. ಹತರಾದ ಉಗ್ರಗಾಮಿಗಳ ಸಂಖ್ಯೆ ಮತ್ತು ಉಗ್ರಗಾಮಿಗಳಾಗಿ ಪರಿವರ್ತನೆಯಾದ ಯುವಕರ ಸಂಖ್ಯೆಯಲ್ಲಿ ಹೆಚ್ಚಿನ ಅಂತರವಿಲ್ಲ ಎಂದು ವರದಿ ಹೇಳಿತು. ಜನವರಿಯಿಂದ ನವೆಂಬರ್ ಮೊದಲ ವಾರದವರೆಗೆ ೨೦ ವಿದೇಶಿಯರು ಸೇರಿದಂತೆ ೧೯೧ ಉಗ್ರರು ಭದ್ರತಾ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಅದೇ ಸಮಯದಲ್ಲಿ, ೧೪೫ ಯುವಕರು ಉಗ್ರಗಾಮಿಗಳಾಗಲು ಸಹಿ ಹಾಕಿದ್ದಾರೆ ಎಂದು ವರದಿ ಹೇಳಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವವನ್ನು ’ಶೂನ್ಯ ಮೊತ್ತದ ಆಟ’ ಎಂಬುದಾಗಿ ವಿವರಿಸಿದ ಉನ್ನತ ದಂಗೆ ದಮನ ಅಧಿಕಾರಿಯೊಬ್ಬರು ’ಇದು ನೆಲದ ಮೇಲಿನ ಉಗ್ರಗಾಮಿ ಕಾರ್ಯಕರ್ತರ ಸಂಖ್ಯೆಯಲ್ಲಿ ಅಲ್ಪ ಕುಸಿತ’ ಎಂದು ಒಪ್ಪಿಕೊಂಡರು. "ಮುಖ್ಯವಾದುದು ತಲೆ ಲೆಕ್ಕವಲ್ಲ, ತರಬೇತಿಯ ಗುಣಮಟ್ಟ, ನೀವು ಸಾಗಿಸುವ ಶಸ್ತ್ರಾಸ್ತ್ರಗಳು, ಸಂವಹನ ಗ್ಯಾಜೆಟ್‌ಗಳು ಮತ್ತು ಬ್ಯಾಕ್-ಎಂಡ್ ಲಾಜಿಸ್ಟಿಕ್ಸ್" ಎಂದು ಅವರು ಹೇಳಿದರು. ೨೦೦೮ರಲ್ಲಿ ೧೦೭ ಗುಂಡಿನ ಘರ್ಷಣೆಗಳಲ್ಲಿ ೨೫೪ ಉಗ್ರರ ಸಾವು ದಾಖಲಾಗಿದ್ದರೆ, ೨೧೦ ನೇಮಕಾತಿಗಳು ನಡೆದಿದ್ದವು. ಇದಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷ ೮೬ ಗುಂಡಿನ ಘರ್ಷಣೆಗಳಲ್ಲಿ ೧೯೧ ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಇದೇ ವೇಳೆಗೆ ಈ ವರ್ಷ ೧೪೫ ಯುವಕರು ಉಗ್ರಗಾಮಿತ್ವಕ್ಕೆ ಸೇರಿದ್ದಾರೆ. ಜೊತೆಗೆ ಕಣ್ಮರೆಯಾಗಿರುವ ಐದರಿಂದ ಎಂಟು ಯುವಕರು ಉಗ್ರಗಾಮಿತ್ವಕ್ಕೆ ಸೇರಿಕೊಂಡಿರಬಹುದು, ಬಂಧಿತರಾದ ೫೦ ಕ್ಕೂ ಹೆಚ್ಚು ಮಂದಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಚೆನಾಬ್ ಮತ್ತು ಪಿರ್ ಪಂಜಾಲ್ ಕಣಿವೆಗಳಿಂದ ಕನಿಷ್ಠ ನೇಮಕಾತಿಗಳ ವರದಿಗಳಿವೆ ಎಂದು ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಚೆನ್ನೈ: ೨೦೨೧ ರ ವಿಧಾನಸಭಾ ಚುನಾವಣೆಯಲ್ಲೂ ತಮ್ಮ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮತ್ತು ಭಾರತಿಯ ಜನತಾ ಪಕ್ಷದ (ಬಿಜೆಪಿ) ಮೈತ್ರಿ ಮುಂದುವರೆಯಲಿದೆ ಎಂದು ಎಂದು ತಮಿಳುನಾಡು ಉಪಮುಖ್ಯಮಂತ್ರಿ ಒ ಪನ್ನೀರಸೆಲ್ವ 2020 ನವೆಂಬರ್ 21ರ ಶನಿವಾರ ಸಂಜೆ ಹೇಳಿದರು. "ಎಐಎಡಿಎಂಕೆ-ಬಿಜೆಪಿ ಮೈತ್ರಿ ೨೦೨೧ ವಿಧಾನಸಭಾ ಚುನಾವಣೆಯಲ್ಲೂ ಮುಂದುವರೆಯಲಿದೆ" ಎಂದು ಪನ್ನೀರ ಸೆಲ್ವಂ ಅವರು ಚೆನ್ನೈಯಲ್ಲಿ ಅಮಿತ್ ಶಾ ಸಲುವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಹೇಳಿದರು. ಕೇಂದ್ರ ಗೃಹ ಸಚಿವರು ಈ ಸಮಾರಂಭದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಶಾ ಅವರು ಚೆನ್ನೈಗೆ ಎರಡು ದಿನಗಳ ಭೇಟಿ ನೀಡಿದ್ದು, ಅಲ್ಲಿ ಅವರು ಬಿಜೆಪಿ ಪದಾಧಿಕಾರಿಗಳು ಮತ್ತು ಪಕ್ಷದ ಜಿಲ್ಲಾ ಮಟ್ಟದ ಅಧ್ಯಕ್ಷರೊಂದಿಗೆ ನಿರ್ಣಾಯಕ ಸಭೆ ನಡೆಸಲಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಬಿಜೆಪಿಯ ವಿಜಯಯಾತ್ರೆಯ ಬಳಿಕ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಬಿಗಡಾಯಿಸಿತ್ತು. ಕೋವಿಡ್ -೧೯ ಸಾಂಕ್ರಾಮಿಕ ನಿರ್ಬಂಧಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿತ್ತು ಮತ್ತು ಎಐಎಡಿಎಂಕೆ ಮುಖವಾಣಿಯು ಯಾತ್ರೆಗಳನ್ನು ‘ವಿಭಜಕ’ ಎಂದು ಕರೆದಿತ್ತು. ಆದರೆ, ಬಿಜೆಪಿ ಸದಸ್ಯರು ನವೆಂಬರ್ ೬ ರಿಂದ ತಮಿಳುನಾಡಿನಾದ್ಯಂತ ಯಾತ್ರೆಯನ್ನು ಮುಂದುವರೆಸಿ ಬಂಧನಗಳಿಗೆ ಒಳಗಾಗಿದ್ದಾರೆ ಮತ್ತು ಬಿಡುಗಡೆಗೊಂಡಿದ್ದಾರೆ. ಶಾ ಭೇಟಿಗೆ ಒಂದು ದಿನ ಮುಂಚಿತವಾಗಿ ಶುಕ್ರವಾರ ನಡೆದ ನಿರ್ಣಾಯಕ ಸಮಾಲೋಚನಾ ಸಭೆಯಲ್ಲಿ ೨೦೨೧ ರ ವಿಧಾನಸಭಾ ಚುನಾವಣೆಯಲ್ಲಿ ಉನ್ನತ ಹುದ್ದೆಗೆ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರನ್ನು ಸ್ವೀಕರಿಸಲು ಬಿಜೆಪಿ ಹಿಂದೇಟು ಹಾಕಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಕಾಬೂಲ್: ಕಾಬೂಲ್ ನಗರದಲ್ಲಿ ಉಗ್ರಗಾಮಿಗಳು 2020 ನವೆಂಬರ್ 21ರ ಶನಿವಾರ ಬೆಳಗ್ಗೆ ನಡೆಸಿದ ರಾಕೆಟ್ ದಾಳಿಯಲ್ಲಿ ಎಂಟು ಮಂದಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ‘ಉಗ್ರಗಾಮಿಗಳು ಒಟ್ಟು ೨೩ ರಾಕೆಟ್‌ಗಳನ್ನು ಉಡಾಯಿಸಿದ್ದರು. ಈ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದರು. ೩೧ ಮಂದಿ ಗಾಯಗೊಂಡರು’ ಎಂದು ಆಂತರಿಕಾ ಭದ್ರತಾ ಸಚಿವಾಲಯದ ವಕ್ತಾರ ತಾರಿಕ್ ಅರಿಯಾನ್ ಹೇಳಿದರು. ‘ತಾಲಿಬಾನ್ ಉಗ್ರರು ಈ ಕೃತ್ಯವನ್ನು ಎಸಗಿದ್ದಾರೆ’ ಎಂದು ಅವರು ಆಪಾದಿಸಿದರು. ‘ರಾಯಭಾರ ಕಚೇರಿಗಳು ಹಾಗೂ ಅಂತಾರಾಷ್ಟ್ರೀಯ ಕಂಪೆನಿಗಳಿರುವ ಹಸಿರು ವಲಯವನ್ನೇ ಗುರಿಯಾಗಿಸಿಕೊಂಡು ಉಗ್ರಗಾಮಿಗಳು ಶನಿವಾರ ಬೆಳಗ್ಗೆ ೯ ಗಂಟೆ ಸುಮಾರಿಗೆ ರಾಕೆಟ್ ದಾಳಿ ನಡೆಸಿದ್ದರು. ಆದರೆ ದುರದೃಷ್ಟವಶಾತ್ ಈ ರಾಕೆಟ್‌ಗಳು ಜನವಸತಿ ಪ್ರದೇಶಗಳಲ್ಲಿ ಬಿದ್ದವು’ ಎಂದು ಅವರು ಮಾಹಿತಿ ನೀಡಿದರು. ರಾಕೆಟ್ ದಾಳಿಯಿಂದಾಗಿ ಬೃಹತ್ ಕಟ್ಟಡಗಳ ಗೋಡೆಗಳಿಗೆ ಹಾಗೂ ಕಿಟಕಿಗಳಿಗೆ ಹಾನಿಯಾಗಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ತಾಲಿಬಾನ್ ಸೇರಿದಂತೆ ಯಾವ ಉಗ್ರ ಸಂಘಟನೆಯೂ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಕಾಬೂಲ್ ನಗರದಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಹಾಗೂ ಇತರೆಡೆ ಇತ್ತೀಚೆಗೆ ನಡೆದಿದ್ದ ಉಗ್ರಗಾಮಿ ದಾಳಿಯಲ್ಲಿ ಸುಮಾರು ೫೦ ಮಂದಿ ಅಸು ನೀಗಿದ್ದರು. ‘ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿ ನಡೆದಿರುವ ರಾಕೆಟ್ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ. ನಾವು ಸಾರ್ವಜನಿಕ ಸ್ಥಳಗಳ ಮೇಲೆ ಕಣ್ಣುಮುಚ್ಚಿಕೊಂಡು ದಾಳಿ ನಡೆಸುವವರಲ್ಲ’ ಎಂದು ತಾಲಿಬಾನಿನ ವಕ್ತಾರ ಜಬಿವುಲ್ಲಾ ಮುಜಾಹಿದ್ ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment