ನಾನು ಮೆಚ್ಚಿದ ವಾಟ್ಸಪ್

Thursday, November 26, 2020

ಇಂದಿನ ಇತಿಹಾಸ History Today ನವೆಂಬರ್ 26

 ಇಂದಿನ ಇತಿಹಾಸ  History Today ನವೆಂಬರ್  26

2020: ನವದೆಹಲಿ: ಭಾರತವು ಕಳೆದ ವರ್ಷಗಳಲ್ಲಿ ತನ್ನ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಎರಡೂವರೆ ಪಟ್ಟು ಹೆಚ್ಚಿಸಿದೆ ಮತ್ತು ಇಂದು ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯ ಹೊಂದಿದ ವಿಶ್ವದ  ನಾಲ್ಕನೇ ದೊಡ್ಡ ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ 26ರ ಗುರುವಾರ ಇಲ್ಲಿ ಹೇಳಿದರು. ಆರ್-ಇನ್ವೆಸ್ಟ್ ೨೦೨೦ ರಲ್ಲಿ ಮಾಡಿದ ವಿಡಿಯೋ ಮೂಲಕ ಭಾಷಣ ಮಾಡಿದ ಪ್ರಧಾನಿ, "೨೦೧೭ರಿಂದ ನಮ್ಮ ವಾರ್ಷಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸೇರ್ಪಡೆ ಕಲ್ಲಿದ್ದಲು ಆಧಾರಿತ ಉಷ್ಣ ಶಕ್ತಿಯನ್ನು ಮೀರಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಕಳೆದ ವರ್ಷಗಳಲ್ಲಿ, ನಮ್ಮ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ನಾವು ಎರಡೂವರೆ ಪಟ್ಟು ಹೆಚ್ಚಿಸಿದ್ದೇವೆ" ಎಂದು ಹೇಳಿದರು . ಮುಂದಿನ ೧೦ ವರ್ಷಗಳ ಕಾಲ ಭಾರತವು ಬೃಹತ್ ನವೀಕರಿಸಬಹುದಾದ ಇಂಧನ ನಿಯೋಜನೆ ಯೋಜನೆಗಳನ್ನು ಹೊಂದಿದ್ದು, ಇದು ವರ್ಷಕ್ಕೆ ೨೦ ಬಿಲಿಯನ್ ಡಾಲರುಗಳಷ್ಟು ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು. ಇಂದು, ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ನೇ ದೊಡ್ಡ ದೇಶ ಭಾರತವಾಗಿದೆ. ಇದು ಎಲ್ಲಾ ಪ್ರಮುಖ ದೇಶಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಪ್ರಸ್ತುತ ೧೩೬ ಗಿಗಾ ವಾಟ್ಸ್ ಆಗಿದೆ, ಇದು ನಮ್ಮ ಒಟ್ಟು ಸಾಮರ್ಥ್ಯದ ಸುಮಾರು ಶೇಕಡಾ ೩೬ ಆಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮುಂಬೈ ಮೇಲಿನ ೨೬/೧೧ರ ಭೀಕರ ದಾಳಿಯ ಸಂಚುಕೋರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಘೋಷಿತ ಭಯೋತ್ಪಾದಕ ಲಷ್ಕರ್--ತೊಯ್ಬಾ ಸಂಸ್ಥಾಪಕ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿಲ್ಲ, ಬದಲಿಗೆ ಲಾಹೋರಿನ ತನ್ನ ಜೋಹರ್ ಟೌನ್ ಮನೆಯಲ್ಲಿ ಸುಖ ಜೀವನ ನಡೆಸುತ್ತಾ ಭಯೋತ್ಪಾದಕ ಗುಂಪಿಗೆ ಮಾಗದರ್ಶನ ಮಾಡುತ್ತಿದ್ದಾನೆ..! ನಂಬಲರ್ಹ ಮೂಲಗಳು ಪಾಕಿಸ್ತಾನ ಸರ್ಕಾರದ ದ್ವಂದ್ವ ನಡೆಯನ್ನು 2020 ನವೆಂಬರ 26ರ ಗುರುವಾರ ಬಹಿರಂಗ ಪಡಿಸಿವೆ. ಭಯೋತ್ಪಾzನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ನ್ಯಾಯಾಲಯದಿಂದ ಫೆಬ್ರುವರಿಯಲ್ಲಿ ೧೦ ವರ್ಷ ಮತ್ತು ಆರು ತಿಂಗಳ ಸೆರೆವಾದ ಶಿಕ್ಷೆಗೆ ಗುರಿಯಾಗುವುದಕ್ಕೆ ತಿಂಗಳುಗಳ ಮೊದಲು ೨೦೧೯ರ ಜುಲೈ ತಿಂಗಳಲ್ಲಿ ಸಯೀದನನ್ನು ಔಪಚಾರಿಕವಾಗಿ ಬಂಧಿಸಲಾಗಿತ್ತು. ಅಮೆರಿಕ ಇದನ್ನು ಪ್ರಮುಖ ಹೆಜ್ಜೆ ಎಂಬುದಾಗಿ ಬಣ್ಣಿಸಿತ್ತು. ಕಳೆದ ವಾರ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಇನ್ನೆರಡು ಪ್ರಕರಣಗಳಲ್ಲಿ ಸಯೀದನಿಗೆ ಮತ್ತೊಂದು ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು. ಪಾಕ್ ಸರ್ಕಾರಕ್ಕೆ ವ್ಯಾಪಕವಾದ ಆರ್ಥಿಕ ನಿರ್ಬಂಧಗಳನ್ನು ಉಂಟು ಮಾಡುವ, ಹಣಕಾಸು ಕಾರ್ಯಪಡೆಯ ಕಪ್ಪು ಪಟ್ಟಿಗೆ ಸೇರುವುದನ್ನು ತಪ್ಪಿಸಿಕೊಳ್ಳಲು ಪಾಕ್ ಸರ್ಕಾರವು ಹಫೀಜ್ ಸಯೀದನನ್ನು ಬಂಧಿಸಿ ವಿಚಾರಣೆಗೆ ಗುರಿ ಪಡಿಸಿತ್ತು. ಪಾಕಿಸ್ತಾನವು ಹಣಕಾಸು ಕಾರ್ಯಪಡೆಯ ಕಪ್ಪು ಪಟ್ಟಿಗೆ ಸೇರಿದರೆ ಪಾಕಿಸ್ತಾನದ ಆರ್ಥಿಕತೆ ನಾಶವಾಗುತ್ತದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಒಮ್ಮೆ ಹೇಳಿದ್ದರು. ಆದರೆ ಭಾರತೀಯ ಗುಪ್ತಚರ ಮಾಹಿತಿಗಳ ಪ್ರಕಾರ, ಹಫೀಜ್ ಸಯೀದ್ ಲಾಹೋರಿನ ಬಿಗಿ ಭದ್ರತೆಯ ಕೋಟ್ ಲಖ್ಪತ್ ಜೈಲಿನಲ್ಲಿಲ್ಲ. ಬದಲಿಗೆ ಆತ ತನ್ನ ಮನೆಯಲ್ಲಿ ರಕ್ಷಣಾತ್ಮಕ ಬಂಧನದಲ್ಲಿ ಇದ್ದಾನೆ. ಅತಿಥಿಗಳೊಂದಿಗೆ ಮಾತುಕತೆ ನಡೆಸಲೂ ಅವನಿಗೆ ಅವಕಾಶಗಳನ್ನು ಒದಗಿಸಲಾಗಿದೆ ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಪ್ತಚರ ಮಾಹಿತಿಯ ಪ್ರಕಾರ, ಕಳೆದ ತಿಂಗಳು, ತನ್ನ ಮನೆಯಲ್ಲಿ ಹಫೀಜ್ ಸಯೀದ್ ಭಯೋತ್ಪಾದಕ ಸಂಘಟನೆಯ ಮುಖ್ಯ ಕಾರ್ಯಾಚರಣಾ ಕಮಾಂಡರ್ ಹಾಗೂ ಎಲ್ಇಟಿಯ ಜಿಹಾದ್ ವಿಭಾಗದ ಮುಖ್ಯಸ್ಥ ಜಾಕಿ-ಉರ್-ರೆಹಮಾನ್ ಲಖ್ವಿ ಜೊತೆ ಸಭೆ ನಡೆಸಿದ್ದ. ಸಭೆಯು ಜಿಹಾದ್ ಸಲುವಾಗಿ ಹಣವನ್ನು ಸಂಗ್ರಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಕೇಂದ್ರೀಕರಿಸಿತ್ತು ಎಂದು ತಿಳಿದುಬಂದಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಕೇವಲ ೪೮ ಗಂಟೆಗಳು ಬಾಕಿ ಇರುವಾಗ, ಇಬ್ಬರು ಭಾರತೀಯ ಸೇನಾ ಸೈನಿಕರು ಕೇಂದ್ರಾಡಳಿತ ಪ್ರದೇಶದ ರಾಜಧಾನಿಯ ಹೊರಗಡೆ ಹಾಡು ಹಗಲೇ ನಡೆದ ಭಯೋತ್ಪಾದಕ ದಾಳಿಯಲ್ಲಿ 2020 ನವೆಂಬರ 26ರ ಗುರುವಾರ ಹುತಾತ್ಮರಾದರು. ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿರುವ ಶರೀಫಾಬಾದ್ನಲ್ಲಿ  ಗಸ್ತು ತಿರುಗುತ್ತಿದ್ದ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಮೂಲಗಳ ಪ್ರಕಾರ, ಉಗ್ರರು ಗಸ್ತು ತಿರುಗುತ್ತಿದ್ದ ತಂಡದ ಮೇಲೆ ಹೊಂಚುಹಾಕಿ ಅವರ ಮೇಲೆ ಗುಂಡು ಹಾರಿಸಿದರು ತೀವ್ರವಾಗಿ ಗಾಯಗೊಳಿಸಿದರು. ಗಾಯಾಳು ಯೋಧರು ಬಳಿಕ ಅಸು ನೀಗಿದರು. ಭಾರತೀಯ ಸೇನಾ ರಸ್ತೆ ತೆರೆಯುವ ತಂಡದ (ಆರ್ಒಪಿ) ಮೇಲಿನ ದಾಳಿಯು ಮುಂಬೈ ಮೇಲಿನ ೨೬/೧೧ ಭಯೋತ್ಪಾದಕ ದಾಳಿಯ ೧೨ ನೇ ವಾರ್ಷಿಕೋತ್ಸವದಂದೇ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಎಸ್ಒಜಿ ಮತ್ತು ಸಿಆರ್ಪಿಎಫ್ ವ್ಯಾಲಿ ಕ್ಯೂಎಟಿ ಪ್ರದೇಶವನ್ನು ಸುತ್ತುವರಿಯಲು ಸ್ಥಳಕ್ಕೆ ಧಾವಿಸಿವೆ. ದಾಳಿಕೋರರನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಚುನಾವಣೆಗೆ ಹೋಗುವ ಮುನ್ನ ಘಟನೆ ನಡೆದಿದೆ. ಡಿಡಿಸಿ ಚುನಾವಣೆಯನ್ನು ಅಡ್ಡಿಪಡಿಸಲು ಭಯೋತ್ಪಾದಕರು ದಾಳಿಗಳನ್ನು ಯೋಜಿಸುತ್ತಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ. ನವೆಂಬರ್ ೧೯ ರಂದು ಜಮ್ಮುವಿನ ನಾಗ್ರೋಟಾ ಬಳಿ ನಡೆದ ಗುಂಡಿನ ಘರ್ಷಣೆಯಲ್ಲಿ ಟ್ರಕ್ಕಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ನಾಲ್ಕು ಜೈಶ್ ಮೊಹಮ್ಮದ್ ಭಯೋತ್ಪಾದಕರು ಸಾಂಬಾದಲ್ಲಿನ ಅಂತರರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ನುಸುಳಿದ್ದರು. ಅವರು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ಕಿನಲ್ಲಿ ಪ್ರಯಾಣಿಸುತ್ತಿದ್ದರು, ಇದನ್ನು ನಾಗ್ರೋಟಾ ಬಳಿಯ ಟೋಲ್ ಪ್ಲಾಜಾದಲ್ಲಿ ಪೊಲೀಸರು ತಡೆದಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ:  ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಪ್ರತಿಭಟಿಸಲು 2020 ನವೆಂಬರ 26ರ ಗುರುವಾರ ಭಾರೀ ಸಂಖ್ಯೆಯಲ್ಲಿ ದೆಹಲಿ ಚಲೋ ಮೆರವಣಿಗೆ ಹೊರಟ ರೈತರು ಹರಿಯಾಣದಲ್ಲಿ ಪೊಲೀಸರ ಬ್ಯಾರಿಕೇಡ್, ಜಲ ಫಿರಂಗಿ ಮತ್ತು ಅಶ್ರುವಾಯುವನ್ನು ಎದುರಿಸಬೇಕಾಯಿತು. ಹರಿಯಾಣ ರೈತರು ಬ್ಯಾರಿಕೇಡ್ಗಳನ್ನು ಕಿತ್ತುಹಾಕಿ ಕರ್ನಾಲ್ ಪಟ್ಟಣದಿಂದ ಕಿ.ಮೀ ದೂರದಲ್ಲಿರುವ ಕರ್ಣ ಸರೋವರದ ಬಳಿ ಸೇತುವೆಯ ಮೇಲೆ ನಿಲ್ಲಿಸಿದ್ದ ಲಾರಿಗಳ ಮೂಲಕ ತಮ್ಮ ದೆಹಲಿ ಚಲೋ ಮೆರವಣಿಗೆಯನ್ನು ಪುನರಾರಂಭಿಸಲು ಹೊರಟಾಗ ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಸಿದರು. ಆದರೆ ರೈತರು ಇವೆಲ್ಲ ಅಡೆ ತಡೆ ಎದುರಿಸುತ್ತಲೇ ದೆಹಲಿ ಚಲೋ ಮುಂದುವರಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿವೆ. ಘರೌಂಡಾದಲ್ಲಿ ರೈತರನ್ನು ತಡೆಯುವ ಮತ್ತೊಂದು ಪ್ರಯತ್ನ ಮಾಡಲಾಗುವುದು ಎಂದು ಕರ್ನಾಲ್ ಪೊಲೀಸ್ ವರಿಷ್ಠಾಧಿಕಾರಿ ಗಂಗಾ ರಾಮ್ ಪುನಿಯಾ ಬಳಿಕ ತಿಳಿಸಿದ್ದಾರೆ. ಅಂಬಾಲಾದ ಸದೋಪುರ ಗಡಿಯಲ್ಲಿ ಬ್ಯಾರಿಕೇಡ್ಗಳನ್ನು ಭೇದಿಸಲು ಯತ್ನಿಸುತ್ತಿದ್ದ ದೆಹಲಿಗೆ ಹೊರಟಿದ್ದ ಪ್ರತಿಭಟನಾಕಾರ ರೈತರನ್ನು ಚದುರಿಸಲು ಪೊಲೀಸರು ಜಲ ಫಿರಂಗಿಗಳನ್ನು ಮತ್ತು ಅಶ್ರುವಾಯು ಶೆಲ್ಗಳನ್ನು ಬಳಸಿದರು. ರೈತರು ಪೊಲೀಸರನ್ನು ವಿರೋಧಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಪ್ರದರ್ಶನಕಾರರು ಸದೋಪುರದ ಬ್ಯಾರಿಕೇಡ್ಗಳನ್ನು ಮುರಿದು ಎಳೆಯಲು ಪ್ರಯತ್ನಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರದರ್ಶನಕಾರರನ್ನು ಅಡ್ಡಗಟ್ಟುವ ಕ್ರಮ ಕೈಗೊಳ್ಳಬೇಕಾಯಿತು ಎಂದು ವರದಿಗಳು ಹೇಳಿವೆ. ಮೆರವಣಿಗೆ ತಡೆ ಒಡ್ಡಿದ್ದರಿಂದ ಕೋಪಗೊಂಡ ರೈತರು ಶಂಭು ಗಡಿಯಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ಎಸೆದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ/ ಚೆನ್ನೈ: ಭಾರತದ ದಕ್ಷಿಣ ಕರಾವಳಿಯಲ್ಲಿ 2020 ನವೆಂಬರ 26ರ ಗುರುವಾರ ನಸುಕಿನಲ್ಲಿ ನೆಲಕ್ಕಪ್ಪಳಿಸಿದ ನಿವಾರ್  ಚಂಡಮಾರುತದ ತೀವ್ರ ಹೊಡೆತಕ್ಕೆ ಕನಿಷ್ಠ ಮಂದಿ ಅಸು ನೀಗಿದ್ದು, ತಮಿಳುನಾಡು, ಪುದುಚೇರಿಯಲ್ಲಿ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಭಾರತದ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಭಾರೀ ಮಳೆ ಸುರಿದಿದೆ. ಚಂಡಮಾರುತವು ದಕ್ಷಿಣ ರಾಜ್ಯವಾದ ತಮಿಳುನಾಡಿನ ಸಮೀಪದಲ್ಲಿರುವ ಪುದುಚೇರಿ ನಗರದ ಬಳಿ ನೆಲಕ್ಕೆ ಅಪ್ಪಳಿಸಿದೆ. ಇದರೊಂದಿಗೆ ಗಂಟೆಗೆ ೧೩೦ ಕಿ.ಮೀ ವೇಗದಲ್ಲಿ (ಗಂಟೆಗೆ ೮೧ ಮೈಲಿಗಳು) ಗಾಳಿ ಬೀಸುತ್ತಿದೆ ಎಂದು ಭಾgತೀಯ ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಭಾರಿ ಮಳೆಯಿಂದಾಗಿ ಅನೇಕ ದೊಡ್ಡ ವಾಹನ ತಯಾರಕರ ನೆಲೆಯಾಗಿರುವ ತಮಿಳುನಾಡಿ ಅತಿದೊಡ್ಡ ನಗರವಾದ ಚೆನ್ನೈ ನಗರದ ಹಲವು ಬೀದಿಗಳಲ್ಲಿ ಪ್ರವಾಹ ಉಂಟಾಗಿದೆ. ಚಂಡಮಾರುತದಿಂದಾಗಿ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಮರಗಳ ಉರುಳುವಿಕೆ, ನೀರಿನಲ್ಲಿ ಮುಳುಗುವಿಕೆ ಮತ್ತು ವಿದ್ಯುತ್ ಆಘಾತದಿಂದ ಕನಿಷ್ಠ ಮಂದಿ ಮೃತರಾಗಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ ಸಾವಿನ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಕಚೇರಿಯ ವಕ್ತಾರರು ನಿರಾಕರಿಸಿದರು. ಅತ್ಯಂತ ತೀವ್ರವಾದ ಚಂಡಮಾರುತ ನಿವಾರ್ ಗುರುವಾರ ಮುಂಜಾನೆ ಪುದುಚೇರಿ ಬಳಿ ನೆಲಕ್ಕೆ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ತಿರುವಣ್ಣಾಮಲೈ, ಕಡಲೂರು, ಕಲ್ಲಕುರಿಚಿ ಮತ್ತು ವಿಲ್ಲುಪುರಂನಲ್ಲಿ  ತೀವ್ರ ಗುಡುಗು ಸಹಿತವಾದ ಭಾರಿ ಮಳೆ ಸುರಿಯಲಿದೆ ಎಂದು  ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಡಿಎಂಎ) ಎಚ್ಚರಿಕೆ ನೀಡಿತು. ಚೆಂಗಲ್ಪಟ್ಟು ಸೇರಿದಂತೆ ೧೯ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿತು. ಏತನ್ಮಧ್ಯೆ, ತೀವ್ರವಾದ ಚಂಡಮಾರುತದ ಹೊಡೆತದಿಂದ ಉಂಟಾದ ಭಾರಿ ಮಳೆಯು ಪುದುಚೇರಿ ಮತ್ತು ಅದರ ಉಪನಗರಗಲ್ಲಿ ಅಲ್ಲೋಕ ಕಲ್ಲೋಲ ಉಂಟಾಗಿದೆ. ನೂರಾರು ಮರಗಳು ಉರುಳಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಯಿತು. ಜೊತೆಗೆ ಹಲವಾರು ಪ್ರದೇಶಗಳು ಪ್ರವಾಹದ ಅಡಿಯಲ್ಲಿ ಮುಳುಗಿದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೆಲವು ತಿಂಗಳುಗಳಿಗೊಮ್ಮೆ ನಡೆಯುವ ಚುನಾವಣೆಗಳ ಮಾದರಿ ನೀತಿ ಸಂಹಿತೆಯಿಂದಾಗಿ ಅಭಿವೃದ್ಧಿಗೆ ಆಗುವ ಪ್ರಭಾವಗಳನ್ನು ನಿವಾರಿಸಲು ಒಂದು ರಾಷ್ಟ್ರ- ಒಂದು ಚುನಾವಣೆ ಮತ್ತು ಎಲ್ಲ ಮತದಾನಕ್ಕೆ ಒಂದೇ ಮತದಾರರ ಪಟ್ಟಿ ಭಾರತದ ಅಗತ್ಯವಾಗಿದೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ರಾಷ್ಟ್ರ- ಒಂದು ಚುನಾವಣೆ ಪರವಾಗಿ 2020 ನವೆಂಬರ 26ರ ಗುರುವಾರ ಮತ್ತೊಮ್ಮೆ ಬ್ಯಾಟ್ ಬೀಸಿದರು. ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸಭಾಧ್ಯಕ್ಷರ ೮೦ ನೇ ಅಖಿಲ ಭಾರತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮಾತನಾಡಿದರು. ಎರಡು ವಿಷಯಗಳ ಹೊರತಾಗಿ, ಶಾಸನ ಪುಸ್ತಕಗಳ ಭಾಷೆಯನ್ನು ಸರಳೀಕರಿಸಲು ಮತ್ತು ಅನಗತ್ಯ ಕಾನೂನುಗಳನ್ನು ಕಿತ್ತುಹಾಕಲು ಸುಲಭವಾದ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುವತ್ತ ಚಿಂತಿಸುವಂತೆ ಪ್ರಧಾನಿ ಸಭಾಧ್ಯಕ್ಷರನ್ನು ಕೋರಿದರು. ಒಂದು ರಾಷ್ಟ್ರ, ಒಂದು ಚುನಾವಣೆ ಕೇವಲ ಚರ್ಚೆಯ ವಿಷಯವಲ್ಲ, ದೇಶದ ಅವಶ್ಯಕತೆಯಾಗಿದೆ. ಪ್ರತಿ ಕೆಲವು ತಿಂಗಳಿಗೊಮ್ಮೆ ವಿವಿಧ ಸ್ಥಳಗಳಲ್ಲಿ ಚುನಾವಣೆಗಳು ನಡೆಯುತ್ತವೆ ಮತ್ತು ಇದು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಮತ್ತು ಇದರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಆಳವಾದ ಅಧ್ಯಯನ ಮತ್ತು ಚರ್ಚೆಯನ್ನು ನಡೆಸುವುದು ಅತ್ಯಗತ್ಯ ಎಂದು ಮೋದಿ ಹೇಳಿದರು. ಲೋಕಸಭೆ, ವಿಧಾನಸಭೆ ಮತ್ತು ಇತರ ಚುನಾವಣೆಗಳಿಗೆ ಕೇವಲ ಒಂದು ಮತದಾರರ ಪಟ್ಟಿಯನ್ನು ಬಳಸಬೇಕು. ನಾವು ಸಮಯ ಮತ್ತು ಹಣವನ್ನು ಏಕೆ ವ್ಯರ್ಥ ಮಾಡುತ್ತಿದ್ದೇವೆ? ಎಂದು ಪ್ರಶ್ನಿಸಿದ ಪ್ರಧಾನಿ, ರಾಜ್ಯದ ಮೂರು ವಿಭಾಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸಮನ್ವಯದ ಅಗತ್ಯವನ್ನು ಒತ್ತಿಹೇಳಿದರು. ಅವರವರ ಪಾತ್ರದಿಂದ ಶಿಷ್ಟಾಚಾರದವರೆಗಿನ ಎಲ್ಲವನ್ನೂ ಸಂವಿಧಾನದಲ್ಲಿಯೇ ವಿವರಿಸಲಾಗಿದೆ ಎಂದು ಪ್ರಧಾನಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್  26 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment