ಇಂದಿನ ಇತಿಹಾಸ History Today ನವೆಂಬರ್ 27
2020: ಮುಂಬೈ: ಚಿತ್ರನಟಿ ಕಂಗನಾ ರಣಾವತ್ ಬಂಗಲೆಯ ಒಂದು ಭಾಗವನ್ನು ನೆಲಸಮಗೊಳಿಸುವ ಬೃಹನ್ಮಂಬಯಿ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ಕ್ರಮದ ಹಿಂದೆ ದುರುದ್ದೇಶದ ವಾಸನೆ ಬಡಿಯುತ್ತಿದೆ ಎಂದು 2020 ನವೆಂಬರ್ 27ರ ಶುಕ್ರವಾರ ಹೇಳಿದ ಬಾಂಬೆ ಹೈಕೋರ್ಟ್ ಕಟ್ಟಡ ಧ್ವಂಸಗೊಳುವ ಬಿಎಂಸಿ ಆದೇಶವನ್ನು ರದ್ದು ಪಡಿಸಿತು. ಬಂಗಲೆಯ ಒಂದು ಭಾಗವನ್ನು ನೆಲಸಮಗೊಳಿಸುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ನ (ಬಿಎಂಸಿ) ಕ್ರಮವು ಚಿತ್ರನಟಿಗೆ ಸಾಕಷ್ಟು ನಷ್ಟವನ್ನುಂಟುಮಾಡುತ್ತದೆ ಎಂದು ಹೇಳಿದ ನ್ಯಾಯಾಲಯ ಕಟ್ಟಡ ನೆಲಸಮ ಆದೇಶವನ್ನು ರದ್ದುಪಡಿಸಿತು. ಯಾವುದೇ ನಾಗರಿಕರ ವಿರುದ್ಧ ಅಧಿಕಾರಿಗಳು ತೋಳ್ಬಲ ಬಳಸುವುದನ್ನು ತಾನು ಅನುಮೋದಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ನ್ಯಾಯಮೂರ್ತಿಗಳಾದ ಎಸ್ ಜೆ ಕಥವಲ್ಲಾ ಮತ್ತು ಆರ್ ಐ ಚಾಗ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ’ಕಟ್ಟಡವು ಅನಧಿಕೃತವಾಗಿದೆ ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರವೂ ಅದರ ನಾಶಕ್ಕೆ ಕ್ರಮ ಕೈಗೊಂಡ ಬಿಎಂಸಿ ಬಳಿ ಇಲ್ಲ’ ಎಂದು ಹೇಳಿದೆ. ಸೆಪ್ಟೆಂಬರ್ ೯ ರಂದು ಉಪನಗರ ಬಾಂದ್ರಾದ ಪಾಲಿ ಹಿಲ್ ಬಂಗಲೆಯ ಒಂದು ಭಾಗವನ್ನು ನೆಲಸಮಗೊಳಿಸಿದ ಬಿಎಂಸಿ ಕ್ರಮವನ್ನು ಪ್ರಶ್ನಿಸಿ ಕಂಗನಾ ರಣಾವತ್ ಅವರು ಸಲ್ಲಿಸಿದ್ದ ಅರ್ಜಿಯ ವಿವಾರಣೆಯನ್ನು ಪೀಠ ನಡೆಸಿತು. ’ನಾಗರಿಕರ ಹಕ್ಕುಗಳ ವಿರುದ್ಧ ಪೌರ ಸಂಸ್ಥೆಯು ತಪ್ಪಾಗಿ ಮತ್ತು ಕಾನೂನುಬಾಹಿರವಾಗಿ ವರ್ತಿಸಲು ಮುಂದಾಗಿದೆ’ ಎಂದು ನ್ಯಾಯಪೀಠ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಉದ್ಯಮಿಯೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣಗಳು ಇಲ್ಲ ಎಂಬುದಾಗಿ 2020 ನವೆಂಬರ್ 27ರ ಶುಕ್ರವಾರ ಹೇಳಿರುವ ಸುಪ್ರೀಂಕೋರ್ಟ್, ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನು ಎಫ್ಐಆರ್ ರದ್ದು ಕೋರಿ ಸಲ್ಲಿಸಲಾಗಿರುವ ಮನವಿಯನ್ನು ಬಾಂಬೆ ಹೈಕೋರ್ಟ್ ಇತ್ಯರ್ಥ ಪಡಿಸಿದ ಬಳಿಕವೂ ೪ ವಾರಗಳವರೆಗೆ ಜಾರಿಯಲ್ಲಿ ಇರುತ್ತದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರ ನ್ಯಾಯಪೀಠವು ಈ ವಿಷಯವನ್ನು ತಿಳಿಸಿದ್ದು, ನವೆಂಬರ್ ೧೧ ರಂದು ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿದ್ದಕ್ಕೆ ಕಾರಣಗಳನ್ನು ತಿಳಿಸಿ ವಿವರವಾದ ತೀರ್ಪು ನೀಡಿದೆ. ಅರ್ನಬ್ ಅವರು ತಮ್ಮ ವಿರುದ್ಧದ ಎಫ್ ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತೀರ್ಮಾನಿಸುವವರೆಗೆ ಮಧ್ಯಂತರ ಜಾಮೀನು ಜಾರಿಯಲ್ಲಿರುತ್ತದೆ ಮತ್ತು ಗೋಸ್ವಾಮಿಗೆ ಈ ನ್ಯಾಯಾಲಯವನ್ನು ಸಂಪರ್ಕಿಸಲು ಅನುವು ಮಾಡಿಕೊಡುವ ಸಲುವಾಗಿ ಇನ್ನೂ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಬಾಂಬೆ ಹೈಕೋರ್ಟ್ ತನಗೆ ಜಾಮೀನು ನೀಡಲು ನಿರಾಕರಿಸಿದ ನಂತರ ಗೋಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಎಫ್ಐಆರ್ನ ಪ್ರಾಥಮಿಕ ಮೌಲ್ಯಮಾಪನವು ಆತ್ಮಹತ್ಯೆ ಆರೋಪಕ್ಕೆ ಯಾವುದೇ ಪ್ರಚೋದನೆಯನ್ನು ಸಾಬೀತುಪಡಿಲ್ಲ ಎಂದು ಸುಪ್ರೀಂಕೋರ್ಟ್ ಪೀಠವು ತನ್ನ ಪ್ರಾಥಮಿಕ ಅಭಿಪ್ರಾಯದಲ್ಲಿ ತಿಳಿಸಿತು. ಎಫ್ಐಆರ್ನಲ್ಲಿ ಮಾಡಲಾದ ಆರೋಪಗಳ ಸ್ವರೂಪದ ಬಗ್ಗೆ ಪ್ರಾಥಮಿಕ ದೃಷ್ಟಿಕೋನವನ್ನು ಹೈಕೋರ್ಟ್ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದ ಸುಪ್ರೀಂಕೋರ್ಟ್ ಜಾಮೀನು ನೀಡದೇ ಇರುವಲ್ಲಿ ತಪ್ಪಾಗಿದೆ ಎಂಬ ದೃಢ ಅಭಿಪ್ರಾಯವನ್ನು ವ್ಯಕ್ತ ಪಡಿಸಿತು. ರಾಜ್ಯವು ಗುರಿಯಿಟ್ಟುಕೊಂಡಿರುವ ನಾಗರಿಕರ ಸ್ವಾತಂತ್ರ್ಯವನ್ನು ಒಳಗೊಂಡ ಪ್ರಕರಣಗಳಲ್ಲಿ, ನ್ಯಾಯಾಲಯವು "ನಾಗರಿಕರ ಸ್ವಾತಂತ್ರ್ಯವನ್ನು ಕಿರುಕುಳ ಅಥವಾ ಅಪಾಯಕ್ಕೆ ತಳ್ಳುವ ಸಾಧನವಾಗಿ ಕ್ರಿಮಿನಲ್ ಕಾನೂನನ್ನು ಬಳಸುತ್ತಿಲ್ಲ ಎಂಬುದನ್ನು ನ್ಯಾಯಾಲಯಗಳು ಖಚಿತಪಡಿಸಿಕೊಳ್ಳಬೇಕು’ ಎಂದು ಸುಪ್ರೀಂಕೋರ್ಟ್ ಪೀಠ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್ -೨೯ ಕೆ ತರಬೇತುದಾರ ವಿಮಾನವು 2020 ನವೆಂಬರ್ 26ರ ಗುರುವಾರ ಸಂಜೆ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿ, ಕಣ್ಮರೆಯಾಗಿದೆ. ವಿಮಾನ ಮತ್ತು ಮೇಲ್ಮೈ ಘಟಕಗಳು ನಡೆಸಿದ ಶೋಧದ ವೇಳೆಯಲ್ಲಿ ಒಬ್ಬ ಪೈಲಟ್ ಪತ್ತೆಯಾಗಿದ್ದು, ಆತನನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ 2020 ನವೆಂಬರ್ 27ರ ಶುಕ್ರವಾರ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ಸಂಜೆ ೫ ಗಂಟೆ ಸುಮಾರಿಗೆ ಈ ದುರ್ಘಟನೆ ಘಟಿಸಿದೆ. ಘಟನೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಅದು ಹೇಳಿದೆ. "ಸಮುದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಿಗ್ -೨೯ ಕೆ ತರಬೇತುದಾರ ವಿಮಾನವು ನವೆಂಬರ್ ೨೬ ರಂದು ಸುಮಾರು ೧೭೦೦ ಗಂಟೆಗೆ (ಸಂಜೆ ೫ ಗಂಟೆ) ಅಪಘಾತಕ್ಕೀಡಾಯಿತು. ಇಬ್ಬರ ಪೈಕಿ ಪೈಲಟ್ನನ್ನು ಪತ್ತೆ ಹಚ್ಚಿ ರಕ್ಷಿಸಲಾಗಿದೆ. ಇನ್ನೊಬ್ಬನಿಗಾಗಿ ವಿಮಾನ ಮತ್ತು ಮೇಲ್ಮೈ ಘಟಕಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ’ ಎಂದು ಭಾರತೀಯ ನೌಕಾಪಡೆ ತಿಳಿಸಿತು. ಘಟನೆಯ ತನಿಖೆಗೆ ಆದೇಶ ನೀಡಲಗಿದೆ ಎಂದು ಅದು ಹೇಳಿತು. ಭಾರತೀಯ ನೌಕಾಪಡೆಯು ಗೋವಾ ಮೂಲದ ೪೦ ಮಿಗ್ -೨೯ ಕೆ ಯುದ್ಧ ವಿಮಾನಗಳನ್ನು ಹೊಂದಿದೆ ಮತ್ತು ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯಿಂದಲೂ ಕಾರ್ಯನಿರ್ವಹಿಸುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ೨೦೧೯ರ ಇದೇ ಅವಧಿಗೆ ಹೋಲಿಸಿದರೆ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಜುಲೈ-ಸೆಪ್ಟೆಂಬರ್ ನಡುವಣ ತ್ರೈಮಾಸಿಕದ ಅವಧಿಯಲ್ಲಿ ಶೇಕಡಾ ೭.೫ ರಷ್ಟು ಕುಗ್ಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ 2020 ನವೆಂಬರ್ 27ರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಏಪ್ರಿಲ್-ಜೂನ್ ಅವಧಿಯ ತ್ರೈಮಾಸಿಕದ ಅವಧಿಯಲ್ಲಿ ಜಿಡಿಪಿ ಕಂಡಿದ್ದ ಶೇಕಡಾ ೨೩.೯ ಕುಸಿತಕ್ಕೆ ಹೋಲಿಸಿದರೆ ಇದು ಆರ್ಥಿಕತೆ ಪುಟಿದೇಳುತ್ತಿರುವುದರ ಲಕ್ಷಣ ಇದಾಗಿದೆ, ಆದರೆ ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಸತತ ಎರಡು ತ್ರೈಮಾಸಿಕಗಳಲ್ಲಿ ದಾಖಲಾಗಿರುವ ಜಿಡಿಪಿ ಕುಸಿತದಿಂದಾಗಿ ಭಾರತವು ಪ್ರಮುಖ ಮುಂದುವರೆದ ಮತ್ತು ಉದಯೋನ್ಮುಖ ಆರ್ಥಿಕತೆಗಳಲ್ಲಿ ಅತ್ಯಂತ ಬಡ ಪ್ರದರ್ಶನ ನೀಡಿದಂತಾಗಿದೆ ಮತ್ತು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ತಾಂತ್ರಿಕ ಹಿಂಜರಿತವನ್ನು ಪ್ರವೇಶಿಸಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಸಾಂಕ್ರಾಮಿಕ-ಪ್ರೇರಿತ ದಿಗ್ಬಂಧನಗಳು (ಲಾಕ್ಡೌನ್) ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇಕಡಾ ೨೩.೯ರಷ್ಟು ಕಡಿದಾದ ಸಂಕೋಚನಕ್ಕೆ ಕಾರಣವಾಗಿತ್ತು. ದೇಶವು ಈಗ ೧೯೪೭ರ ನಂತರ ಇದೇ ಮೊದಲ ಬಾರಿಗೆ "ತಾಂತ್ರಿಕ ಹಿಂಜರಿತ" ಕ್ಕೆ ಪ್ರವೇಶಿಸಿದೆ ಎಂಬುದು ಎರಡು ತ್ರೈಮಾಸಿಕಗಳ ಸತತ ಸಂಕೋಚನದ ಅರ್ಥವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿನ ಪ್ರಕಾರ ಪೂರ್ಣ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇಕಡಾ ೯.೫ರಷ್ಟು ಕುಗ್ಗಲಿದೆ. ಡೈನಾಮಿಕ್ ಫ್ಯಾಕ್ಟರ್ ಮಾದರಿಯನ್ನು ಬಳಸಿಕೊಂಡು ೨೭ ಮಾಸಿಕ ಸೂಚಕಗಳಿಂದ ಸೂಚ್ಯಂಕವನ್ನು ರಚಿಸಲಾಗಿದೆ ಮತ್ತು ಆರ್ಥಿಕತೆಯ ಪುನರಾರಂಭದೊಂದಿಗೆ ಆರ್ಥಿಕತೆಯು ೨೦೨೦ರ ಮೇ / ಜೂನ್ ತಿಂಗಳುಗಳ ಬಳಿಕ ತ್ವರಿತವಾಗಿ ಚೇತರಿಸಿದೆ. ಅಂದರೆ ಸೇವಾ ಕ್ಷೇತ್ರಗಳಿಗಿಂತ ಬೇಗನೇ ಉದ್ಯಮ ಕ್ಷೇತ್ರವು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂಬುದನ್ನು ಇದು ಸೂಚಿಸಿದೆ ಎಂದು ಮಾದರಿಯು ಹೇಳಿದೆ. ಈ ವರ್ಷದ ಜುಲೈ-ಸೆಪ್ಟೆಂಬರ್ನಲ್ಲಿ ಚೀನಾದ ಆರ್ಥಿಕತೆಯು ಶೇಕಡಾ ೪.೯ರಷ್ಟು ಏರಿಕೆಯಾಗಿದ್ದು, ೨೦೨೦ ರ ಏಪ್ರಿಲ್-ಜೂನ್ ತಿಂಗಳುಗಳ ಶೇಕಡಾ ೩.೨ ಬೆಳವಣಿಗೆಗಿಂತ ವೇಗವಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ತೀವ್ರ ಅಡೆತಡೆ, ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆಗಳ ಹೊರತಾಗಿಯೂ ರಾಜಧಾನಿಯತ್ತ ’ದೆಹಲಿ ಚಲೋ’ ಹೊರಟಿರುವ ರೈತ ಪ್ರತಿಭಟನೆಕಾರರಿಗೆ ಕಡೆಗೂ ದೆಹಲಿ ಪ್ರವೇಶಕ್ಕೆ 2020 ನವೆಂಬರ್ 27ರ ಶುಕ್ರವಾರ ಅನುಮತಿ ನೀಡಲಾಗಿದ್ದು, ದೆಹಲಿ ತಲುಪುತ್ತಿದ್ದಂತೆಯೇ ಡಿಸೆಂಬರ್ ೩ರಂದು ಮಾತುಕತೆಗೆ ಬರುವಂತೆ ಕೇಂದ್ರ ಕೃಷಿ ಸಚಿವರು ರೈತರಿಗೆ ಆಹ್ವಾನ ನೀಡಿದ್ದಾರೆ. ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ಚಳವಳಿ ನಡೆಸುತ್ತಿರುವ ರೈತರಿಗೆ, ರಾಷ್ಟ್ರ ರಾಜಧಾನಿ ಪ್ರವೇಶಿಸಲು ದೆಹಲಿ ಪೊಲೀಸರು ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ಕೃಷಿ ಮತ್ತು ರೈತ ಕಲ್ಯಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಡಿಸೆಂಬರ್ ೩ ರಂದು ಮತ್ತೊಂದು ಸುತ್ತಿನ ಮಾತುಕತೆಗೆ ರೈತ ಸಂಸ್ಥೆಗಳನ್ನು ಕರೆದಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ರೈತರು ತಮ್ಮ ಪ್ರತಿಭಟನೆಯನ್ನು ತ್ಯಜಿಸಿ ನಮ್ಮೊಂದಿಗೆ ಬಂದು ಮಾತನಾಡಬೇಕು. ನಾವು ರೈತರ ಅನುಕೂಲಕ್ಕಾಗಿ ಕಾನೂನುಗಳನ್ನು ರೂಪಿಸಿದ್ದೇವೆ ಮತ್ತು ಈ ಸರ್ಕಾರವು ರೈತ ಪರವಾಗಿದೆ ಎಂದು ತೋಮರ್ ಹೇಳಿದರು. ಇದಕ್ಕೆ ಮುನ್ನ ದೆಹಲಿ ಪೊಲೀಸರು ಬಿಕಾರಿ ಪ್ರದೇಶದ ನಿರಂಕರಿ ಸಮಗಂ ಮೈದಾನದಲ್ಲಿ ತಮ್ಮ ಪ್ರದರ್ಶನಗಳನ್ನು ನಡೆಸಲು ರೈತರಿಗೆ ಟಿಕ್ರಿ ಗಡಿಯ ಮೂಲಕ ರಾಷ್ಟ್ರ ರಾಜಧಾನಿಗೆ ಪ್ರವೇಶಿಸಲು ಅವಕಾಶ ನೀಡಿದರು. ಸಿಂಗು ಗಡಿಯಲ್ಲಿ ರೈತರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆದುದರ ಮಧ್ಯೆ ಈ ಕ್ರಮ ಕೈಗೊಳ್ಳಲಾಯಿತು. ದೆಹಲಿ-ಗುರುಗಾಮ ಗಡಿಯಲ್ಲಿ ಪೊಲೀಸರು ವಾಹನಗಳ ಪರಿಶೀಲ ನಡೆಸಿದ್ದರಿಂದಾಗಿ ಭಾರೀ ದಟ್ಟಣೆ ಉಂಟಾಯಿತು. ದೆಹಲಿ ಸರ್ಕಾರಿ ಅಧಿಕಾರಿಗಳು ಬುರಾರಿಯ ನಿರಂಕರಿ ಸಮಗಂ ಮೈದಾನದಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿದರು, ಅಲ್ಲಿ ರೈತರು ಪ್ರತಿಭಟನೆಗಾಗಿ ಒಟ್ಟುಗೂಡಲಿದ್ದಾರೆ. ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರಿಗೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರು ಬೆಂಬಲ ನೀಡಿದ್ದು, ಈ "ಕರಾಳ ಕಾನೂನುಗಳನ್ನು" ಹಿಂತೆಗೆದುಕೊಳ್ಳಬೇಕು ಎಂದು ಹೇಳಿದರು. ರೈತರು, ಮುಖ್ಯವಾಗಿ ಪಂಜಾಬಿನಿಂದ "ತೀವ್ರ ಹೋರಾಟದ" ನಂತರ ದೆಹಲಿಯನ್ನು ತಲುಪಿದರು, ರಾಷ್ಟ್ರದ ರಾಜಧಾನಿಗೆ ಹೋಗುವ ದಾರಿಯಲ್ಲಿ ವಿವಿಧ ಗಡಿ ಬಿಂದುಗಳಲ್ಲಿ ಅಶ್ರುವಾಯು ಶೇಲ್, ಜಲಫಿರಂಗಿ, ಪೊಲೀಸ್ ಬೆತ್ತ ಪ್ರಹಾರವನ್ನು ಚಳವಳಿಕಾರರು ಎದುರಿಸಬೇಕಾಯಿತು. ಏತನ್ಮಧ್ಯೆ, ಉತ್ತರ ರೈಲ್ವೆ ಎರಡು ರೈಲುಗಳನ್ನು ರದ್ದುಪಡಿಸಿದೆ, ಐದು ರೈಲುಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಐದು ರೈಲುಗಳನ್ನು ಬೇರೆ ಮಾರ್ಗಗಳತ್ತ ತಿರುಗಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಹೈದರಾಬಾದ್: ‘ಕೋವಿಡ್ ೧೯‘ ಸಾಂಕ್ರಾಮಿಕದ ಚಿಕಿತ್ಸೆಗಾಗಿ ಲಸಿಕೆ ತಯಾರಿಸುತ್ತಿರುವ ಹೈದರಾಬಾದಿನ ಭಾರತ್ ಬಯೋಟೆಕ್ಸ್ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 2020ರ ನವೆಂಬರ್ 28ರ ಶನಿವಾರ ಭೇಟಿ ನೀಡಲಿದ್ದಾರೆ ಎಂದು ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ತಿಳಿಸಿದ್ದಾರೆ. ಪುಣೆಯಿಂದ ಭಾರತೀಯ ವಾಯುಪಡೆ ವಿಮಾನದ ಮೂಲಕ ಪ್ರಯಾಣಿಸುವ ಮೋದಿಯವರು ಮಧ್ಯಾಹ್ನದ ನಂತರ ಇಲ್ಲಿನ ಹಾಕಿಂಪೇಟೆ ವಾಯುಪಡೆ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ 2020 ನವೆಂಬರ್ 27ರ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದರು. ಮೋದಿಯವರು ವಾಯುಪಡೆ ನಿಲ್ದಾಣದಿಂದ ನೇರವಾಗಿ ಜಿನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್ಸ್ ಫೆಸಿಲಿಟಿ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಬಯೋಟೆಕ್ ಕೇಂದ್ರದಲ್ಲಿ ಒಂದು ಗಂಟೆ ಕಾಲ, ಲಸಿಕೆ ಉತ್ಪಾದನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿ, ಅದೇ ದಿನ ಸಂಜೆ ಹೊತ್ತಿಗೆ ನವದೆಹಲಿಗೆ ವಾಪಾಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತ್ ಬಯೋಟೆಕ್ ಕಂಪೆನಿ ಕೋವಿಡ್ ೧೯ ವಿರುದ್ಧದ ಕೋವಾಕ್ಸಿನ್ ಲಸಿಕೆ ತಯಾರಿಸುತ್ತಿದ್ದು, ಅದು ಸದ್ಯ ಮೂರನೇ ಹಂತದ ಕ್ಲಿನಿಕಲ್ ಟ್ರೈಯಲ್ನಲ್ಲಿ ಇದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment