ಇಂದಿನ ಇತಿಹಾಸ History Today ನವೆಂಬರ್ 05
2020: ನವದೆಹಲಿ: ಸರ್ಕಾರೀ ಬೆಂಬಲಿತ ಕೋವಿಡ್ -೧೯ ಲಸಿಕೆಯನ್ನು ನಿರೀಕ್ಷೆಗಿಂತ ತಿಂಗಳುಗಳಷ್ಟು ಮುಂಚಿತವಾಗಿ, ಫೆಬ್ರುವರಿಯಲ್ಲಿಯೇ ಬಿಡುಗಡೆ ಮಾಡಿ ಜನರಿಗೆ ನೀಡಲು ಆರಂಭಿಸಬಹುದು ಎಂದು ಸರ್ಕಾರದ ಹಿರಿಯ ವಿಜ್ಞಾನಿಯೊಬ್ಬರು 2020 ನವೆಂಬರ್ 05ರ ಗುರುವಾರ ಇಲ್ಲಿ ತಿಳಿಸಿದರು. ಲಸಿಕೆಯ ಕೊನೆಯ ಹಂತದ ಪ್ರಯೋಗಗಳು ಈ ತಿಂಗಳು ಪ್ರಾರಂಭವಾಗುವುದರಿಂದ ಮತ್ತು ಅಧ್ಯಯನಗಳು ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದಾಗಿ ಈಗಾಗಲೇ ತೋರಿಸಿರುವುದರಿಂದ ನಿರೀಕ್ಷೆಗಿಂತ ಮೊದಲೇ ಅದು ಬಳಕೆಗೆ ಲಭಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಭಾರತ ಸರ್ಕಾರಿ ಸ್ವಾಮ್ಯದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ -ಐಸಿಎಂಆರ್) ಜೊತೆಗೆ ಕೋವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಖಾಸಗಿ ಕಂಪನಿಯಾದ ಭಾರತ್ ಬಯೋಟೆಕ್, ಮುಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಇದನ್ನು ಬಿಡುಗಡೆ ಮಾಡಬಹುದು ಎಂದು ಈ ಮುನ್ನ ನಿರೀಕ್ಷಿಸಿತ್ತು. ಕೋವಿಡ್ -೧೯ ಕಾರ್ಯಪಡೆಯ ಸದಸ್ಯರೂ ಆಗಿರುವ ಹಿರಿಯ ಐಸಿಎಂಆರ್ ವಿಜ್ಞಾನಿ ರಜನಿ ಕಾಂತ್ ಅವರು "ಲಸಿಕೆ ಉತ್ತಮ ಪರಿಣಾಮಕಾರಿತ್ವವನ್ನು ತೋರಿಸಿದೆ" ಎಂದು ಸಂಶೋಧನಾ ಸಂಸ್ಥೆಯ ನವದೆಹಲಿ ಕೇಂದ್ರ ಕಚೇರಿಯಲ್ಲಿ ಹೇಳಿದರು. "ಮುಂದಿನ ವರ್ಷದ ಆರಂಭ, ಫೆಬ್ರ್ರುವರಿ ಅಥವಾ ಮಾರ್ಚ್ ವೇಳೆಗೆ ಲಸಿಕೆ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಅವರು ನುಡಿದರು. ಆದಾಗ್ಯೂ, ಭಾರತ್ ಬಯೋಟೆಕ್ ಸಂಸ್ಥೆಯನ್ನು ತತ್‌ಕ್ಷಣ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಫೆಬ್ರ್ರುವರಿಯಲ್ಲಿ ಬಿಡುಗಡೆಯಾಗಲಿರುವ ಕೋವಾಕ್ಸಿನ್ ಭಾರತ ತಯಾರಿಸುತ್ತಿರುವ ಮೊದಲ ಕೊರೋನಾವೈರಸ್ ವಿರೋಧಿ ಲಸಿಕೆಯಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ತುಲಸೇಂದ್ರಪುರಂ (ತಮಿಳುನಾಡು): ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೋಕ್ರಾಟ್ ಸ್ಪರ್ಧಾ ಸಂಗಾತಿ ಜೋ ಬಿಡೆನ್ ಶ್ವೇತಭವನಕ್ಕೆ ಹತ್ತಿರವಾಗುತ್ತಿದ್ದಂತೆಯೇ, ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಭಾರತೀಯ ಪೂರ್ವಜರ ಮನೆಯ ಗ್ರಾಮಸ್ಥರಲ್ಲಿ 2020 ನವೆಂಬರ್ 05ರ ಗುರುವಾರ ಹಬ್ಬದ ಸಡಗರ ಕಂಡು ಬಂತು. ಗ್ರಾಮಸ್ಥರು ಹ್ಯಾರಿಸ್ ವಿಜಯವನ್ನು ಬಯಸುವ ಘೋಷಣೆಗಳನ್ನು ರಸ್ತೆಗಳಲ್ಲಿ ಚಿತ್ರಿಸಿದರು. ಚೆನ್ನೈಯ ದಕ್ಷಿಣಕ್ಕೆ ಸುಮಾರು ೩೨೦ ಕಿ.ಮೀ (೨೦೦ ಮೈಲಿ) ದೂರದಲ್ಲಿರುವ ತುಲಸೇಂದ್ರಪುರಂ ಗ್ರಾಮದಲ್ಲಿ ಕಮಲಾ ಹ್ಯಾರಿಸ್ ಅವರ ಅಜ್ಜ ಒಂದು ಶತಮಾನಕ್ಕೂ ಹೆಚ್ಚು ಹಿಂದೆ ಜನಿಸಿದ್ದರು. ’ಅಂತಿಮ ಫಲಿತಾಂಶದ ಬಗ್ಗೆ ನಾವು ಬುಧವಾರದಿಂದ ಉತ್ಸುಕರಾಗಿ ಕಾಯುತ್ತಿದ್ದೇವೆ’ ಎಂದು ಗ್ರಾಮದ ನಿವಾಸಿ ಅಬಿರಾಮಿ ಹೇಳಿದರು. ‘ಈಗ, ನಾವು ಧನಾತ್ಮಕ ಸುದ್ದಿಗಳನ್ನು ಕೇಳುತ್ತಿದ್ದೇವೆ. ಆಕೆಯ ವಿಜಯವನ್ನು ಆಚರಿಸಲು ನಾವು ಕಾಯುತ್ತಿದ್ದೇವೆ’ ಎಂದು ಅವರು ನುಡಿದರು. ಕಮಲಾ ಹ್ಯಾರಿಸ್ ಪೂರ್ವಜರ ಕುಟುಂಬದ ನೆರೆಹೊರೆಯವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮತಗಳ ಎಣಿಕೆಯ ನವೀಕರಣಗಳನ್ನು ವೀಕ್ಷಿಸಿದರು. ದೇಶದ ದಕ್ಷಿಣದಲ್ಲಿರುವ ಹಚ್ಚ ಹಸಿರಿನ ಹಳ್ಳಿಯನ್ನು ಹ್ಯಾರಿಸ್ ಪೋಸ್ಟರ್‌ಗಳಿಂದ ಅಲಂಕರಿಸಲಾಗಿದೆ, ಸ್ಥಳೀಯ ಹಿಂದೂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಗುರುವಾರ ಸೌದಿ ಅರೇಬಿಯಾದ ಸಾರ್ವಭೌಮ ಸಂಪತ್ತು ನಿಧಿ, ಸಾರ್ವಜನಿಕ ಹೂಡಿಕೆ ನಿಧಿ (ಪಿಐಎಫ್) ರಿಲಯನ್ಸ್ ರಿಟೇಲ್ಸ್ ನ ಶೇಕಡಾ ೨.೦೪ ಪಾಲನ್ನು (ಷೇರು) ಖರೀದಿಸಲು ೯,೫೫೫ ಕೋಟಿ ರೂ. ಅಥವಾ ೩ ೧.೩ ಬಿಲಿಯನ್ ಹೂಡಿಕೆ ಮಾಡುವುದಾಗಿ 2020 ನವೆಂಬರ್ 05ರ ಗುರುವಾರ ಪ್ರಕಟಿಸಿತು. ಈ ಹೂಡಿಕೆಯು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ನ (ಆರ್‌ಆರ್‌ವಿಎಲ್) ಹೂಡಿಕೆ ಮೌಲ್ಯವನ್ನು ೪.೫೮೭ ಲಕ್ಷ ಕೋಟಿ ರೂ.ಗಳಿಗೆ ಏರಿಸುತ್ತದೆ. ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿಯು ಆರ್‌ಆರ್‌ವಿಎಲ್‌ನಲ್ಲಿನ ಹಿಂದಿನ ಆರ್‌ಐಎಲ್‌ನ ಡಿಜಿಟಲ್ ಸೇವೆಗಳ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇಕಾ ೨.೩೨ ಪಾಲನ್ನು ಈಗಾಗಲೇ ಖರೀದಿಸಿದೆ. . ಇದು ಭಾರತದ ಕ್ರಿಯಾತ್ಮಕ ಆರ್ಥಿಕತೆಯಲ್ಲಿ ಪಿಐಎಫ್ ಇರುವಿಕೆಯನ್ನು ಮತ್ತಷ್ಟು ಬಲಪಡಿಸಿದೆ ಮತ್ತು ಚಿಲ್ಲರೆ ಮಾರುಕಟ್ಟೆ ವಿಭಾಗದ ಭರವಸೆಯನ್ನು ನೀಡುತ್ತದೆ. ಆರ್‌ಐಎಲ್ ಇದುವರೆಗೆ ಆರ್‌ಆರ್‌ವಿಎಲ್‌ನಲ್ಲಿ ಶೇಕಡಾ ೧೦.೦೯ ರಷ್ಟು ಒಟ್ಟು ೪೭,೨೬೫ ಕೋಟಿ ರೂ.ಗೆ ಮಾರಾಟ ಮಾಡಿದೆ. ಸಿಂಗಾಪುರದ ಸಾರ್ವಭೌಮ ಸಂಪತ್ತು ನಿಧಿ ಜಿಐಸಿ, ಜಾಗತಿಕ ಪರ್ಯಾಯ ಆಸ್ತಿ ಸಂಸ್ಥೆ ಟಿಪಿಜಿ ಅಬುಧಾಬಿ ಹೂಡಿಕೆ ಪ್ರಾಧಿಕಾರ, ಮುಬಡಾಲಾ ಇನ್ವೆಸ್ಟ್‌ಮೆಂಟ್ ಕೋ, ಜನರಲ್ ಅಟ್ಲಾಂಟಿಕ್, ಕೆಕೆಆರ್ ಮತ್ತು ಸಿಲ್ವರ್ ಲೇಕ್ (ಎರಡು ಬಾರಿ) ಇವು ಕಂಪೆನಿಯಲ್ಲಿ ಷೇರುಗಳನ್ನು ಖರೀದಿಸಿವೆ. "ನಾನು ಪಿಐಎಫ್ ಅನ್ನು ರಿಲಯನ್ಸ್ ರಿಟೇಲ್ಸ್ ವ್ಯಾಪಾರದಲ್ಲಿ ಮೌಲ್ಯಯುತ ಪಾಲುದಾರನಾಗಿ ಸ್ವಾಗತಿಸುತ್ತೇನೆ ಮತ್ತು ೧.೩ ಬಿಲಿಯನ್ ಭಾರತೀಯರು ಮತ್ತು ಲಕ್ಷಾಂತರ ಸಣ್ಣ ವ್ಯಾಪಾರಿಗಳ ಜೀವನವನ್ನು ಶ್ರೀಮಂತಗೊಳಿಸಲು ಭಾರತದ ಚಿಲ್ಲರೆ ಕ್ಷೇತ್ರವನ್ನು ಪರಿವರ್ತಿಸುವ ನಮ್ಮ ಮಹತ್ವಾಕಾಂಕ್ಷೆಯ ಪಯಣವನ್ನು ನಾವು ಮುಂದುವರಿಸುತ್ತಿರುವಾಗ ಅವರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ವಾಷಿಂಗ್ಟನ್: ಶ್ವೇತಭವನದ ಅಧಿಕಾರ ಹಿಡಿಯುವ ಓಟದಲ್ಲಿ ಪಡೆಯಬೇಕಾದ ಎಲೆಕ್ಟೋರಲ್ ಕಾಲೇಜಿನ ೨೭೦ ಮತಗಳಿಗೆ ಹತ್ತಿರವಾಗುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಾ ಸಾಗಿರುವ ಡೆಮಾಕ್ರಾಟ್ ಅಭ್ಯರ್ಥಿ ಜೋ ಬಿಡೆನ್ ಅವರು ರಿಪಬ್ಲಿಕನ್ ಅಭ್ಯರ್ಥಿ, ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರ ಗೆಲುವಿನ ಹಾದಿಯನ್ನು 2020 ನವೆಂಬರ್ 05ರ ಗುರುವಾರ ಕಿರಿದುಗೊಳಿಸಿದ್ದಾರೆ. ವಿಸ್ಕಾನ್ಸಿನ್ ಮತ್ತು ಮಿಚಿಗನ್‌ನ ‘ನೀಲಿ ಗೋಡೆ’ ರಣಭೂಮಿಯಲ್ಲಿ ಜೋ ಬಿಡೆನ್ ವಿಜಯ ಸಾಧಿಸಿದ್ದಾರೆ. ತಮ್ಮ ವಶಕ್ಕೆ ಪಡೆಯಲು ಇನ್ನು ಬೆರಳೆಣಿಕೆಯಷ್ಟು ರಾಜ್ಯಗಳಷ್ಟೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ರಾಜ್ಯಗಳಲ್ಲಿ ಮತಗಳ ಎಣಿಕೆಯನ್ನು ಸ್ಥಗಿತಗೊಳಿಸುವಂತೆ ಟ್ರಂಪ್ ಆಗ್ರಹಿಸಿದ್ದಾರೆ. ಆದರೆ ಮತದಾನ ಹಾಗೂ ಮತಗಳ ಎಣಿಕೆಗೆ ಸಂಬಂಧಿಸಿದ ಅವರ ಯಾವುದೇ ಅಭಿಯಾನದ ಕಾನೂನು ಕುಶಲತೆಯು, ಸ್ಪರ್ಧೆಯನ್ನು ಅವರ ಪರವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚುನಾಣೆ ನಡೆದ ಎರಡು ದಿನಗಳ ನಂತರ, ಯಾವ ಅಭ್ಯರ್ಥಿಯೂ ಶ್ವೇತಭವನವನ್ನು ಗೆಲ್ಲಲು ಬೇಕಾದ ಮತಗಳನ್ನು ಸಂಗ್ರಹಿಸಿಲ್ಲ. ಆದರೆ ಗ್ರೇಟ್ ಲೇಕ್ಸ್ ರಾಜ್ಯಗಳಲ್ಲಿ ಬಿಡೆನ್ ಸಾಧಿಸಿದ ವಿಜಯಗಳು ಅವರಿಗೆ ೨೬೪ ಸ್ಥಾನಗಳವರೆಗೆ ತಂದು ನಿಲ್ಲಿಸಿವೆ. ಅರಿಝೋನಾ, ನೆವಾಡಾ, ಪೆನ್ಸಿಲ್ವೇನಿಯಾ, ಜಾರ್ಜಿಯಾ, ನಾರ್ತ್ ಕೆರೋಲಿನಾ ಮತ್ತು ಅಲಾಸ್ಕ ಈ ರಾಜ್ಯಗಳ ಮತಗಳ ಎಣಿಕೆ ಇನ್ನೂ ಆರಂಭವಾಗಿಲ್ಲ. ೨೧೪ ಎಲೆಕ್ಟೋರಲ್ ಮತಗಳನ್ನು ಪಡೆದಿರುವ ಟ್ರಂಪ್ ಇನ್ನೂ ಹೆಚ್ಚಿನ ಹೆಚ್ಚಿನ ಅಡಚಣೆಯನ್ನು ಎದುರಿಸುತ್ತಿದ್ದಾರೆ. ೨೭೦ ಎಲೆಕ್ಟೋರಲ್ ಕಾಲೇಜು ಮತಗಳಗೆ ತಲುಪಲು ಉಳಿದಿರುವ ನಾಲ್ಕು ರಾಜ್ಯಗಳಾದ ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ಜಾರ್ಜಿಯಾ ಮತ್ತು ನೆವಾಡಾ ರಣರಂಗಗಳಲ್ಲಿ ಅವರು ಹೆಚ್ಚಿನ ಮತಗಳನ್ನು ಪಡೆಯಬೇಕಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment