ನಾನು ಮೆಚ್ಚಿದ ವಾಟ್ಸಪ್

Friday, November 27, 2020

ಇಂದಿನ ಇತಿಹಾಸ History Today ನವೆಂಬರ್ 28

 ಇಂದಿನ ಇತಿಹಾಸ  History Today ನವೆಂಬರ್  28 

2020:  ನವದೆಹಲಿ: ಕೊರೋನವೈರಸ್ ಕಾಯಿಲೆಯ (ಕೋವಿಡ್ -೧೯) ವಿರುದ್ಧದ ಲಸಿಕೆ ಬಿಡುಗಡೆಯ ಸನಿಹಕ್ಕೆ ಬರುತ್ತಿದ್ದಂತೆಯೇ ದೇಶಾದ್ಯಂತ ಹಳ್ಳಿಗಳಿಗೆ ಅದನ್ನು ತಲುಪಿಸುವ ಸಲುವಾಗಿ ಗುಜರಾತಿನಲ್ಲಿ ವಿಶೇಷ ಶೈತ್ಯೀಕೃತ ಲಸಿಕೆ ಸಾಗಣೆ ಘಟಕವನ್ನು ಸ್ಥಾಪಿಸಲು ಲಕ್ಸೆಂಬರ್ಗ್ ಪ್ರಧಾನಿ ಕ್ಸೇವಿಯರ್ ಬೆಟ್ಟೆಕ್ ಮುಂದಿಟ್ಟ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೆತ್ತಿಕೊಂಡಿದ್ದಾರೆ.  ದೆಹಲಿ ಮತ್ತು ಅಹಮದಾಬಾದ್ ಮೂಲದ ಅಧಿಕೃತ ಮೂಲಗಳ ಪ್ರಕಾರ, ಸೌರ ಲಸಿಕೆ ರೆಫ್ರಿಜರೇಟರ್‌ಗಳು, ಫ್ರೀಜರ್‌ಗಳು ಮತ್ತು ಶೈತ್ಯೀಕೃತ ಸಾರಿಗೆ ಪೆಟ್ಟಿಗೆಗಳು ಸೇರಿದಂತೆ ಲಸಿಕೆ ಶೈತ್ಯಾಗಾರ ಸರಪಳಿ (ಕೋಲ್ಡ್ ಚೈನ್) ಸ್ಥಾಪಿಸಲು ಲಕ್ಸೆಂಬರ್ಗ್ ಸಂಸ್ಥೆ ಬಿ ಮೆಡಿಕಲ್ ಸಿಸ್ಟಮ್ಸ್ ಮುಂದಿನ ವಾರ ಗುಜರಾತ್‌ಗೆ ಉನ್ನತ ಮಟ್ಟದ ತಂಡವನ್ನು ಕಳುಹಿಸುತ್ತಿದೆಪೂರ್ಣ ಪ್ರಮಾಣದ ಸ್ಥಾವರವನ್ನು ಸ್ಥಾಪಿಸಲು ಸುಮಾರು ಎರಡು ವರ್ಷಗಳು ಬೇಕಾಗುವುದರಿಂದ, ಕಂಪೆನಿಯು ಲಕ್ಸೆಂಬರ್ಗ್‌ನಿಂದ ಶೈತ್ಯೀಕರಣ ಪೆಟ್ಟಿಗೆಗಳನ್ನು ಮಾತ್ರ ಪಡೆಯುವ ಮೂಲಕ ಪ್ರಾರಂಭಿಸಲು ನಿರ್ಧರಿಸಿದೆ ಮತ್ತುಆತ್ಮನಿರ್ಭರ ಭಾರತಕಾರ್ಯಕ್ರಮದಡಿ ದೇಶೀಯ ಮಾರುಕಟ್ಟೆಯಿಂದ ಅದಕ್ಕೆ ಬೇಕಾದ ಉತ್ತಮ ಸಲಕರಣೆಗಳನ್ನು ಪಡೆಯಲಿದೆ. ಲಕ್ಸೆಂಬರ್ಗ್ ಮೂಲದ ಕಂಪೆನಿಯು ಲಸಿಕೆಯನ್ನು ಮೈನಸ್ ೮೦ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಸಾಗಿಸುವ ತಂತ್ರಜ್ಞಾನವನ್ನು ಹೊಂದಿದ್ದರೂ, ಶೈತ್ಯೀಕರಿಸಿದ ಸಾರಿಗೆ ಪೆಟ್ಟಿಗೆU ಮೂಲಕ ನಾಲ್ಕು ಡಿಗ್ರಿ ಸೆಲ್ಸಿಯಸ್ ಮತ್ತು -೨೦ ಡಿಗ್ರಿ ಸೆಲ್ಸಿಯಸ್ ನಡುವಣ ತಾಪಮಾನದಲ್ಲಿ ಲಸಿಕೆಯನ್ನು ಸಾಗಿಲು ಸಾಧ್ಯವಿದೆ.   ಲಕ್ಸೆಂಬರ್ಗ್ ಪ್ರಸ್ತಾಪವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಐರೋಪ್ಯ ಒಕ್ಕೂಟದ ಭಾರತೀಯ ರಾಯಭಾರಿ ಸಂತೋಷ್ ಝಾ ಅವರು ಗುಜರಾತಿನಲ್ಲಿ ಘಟಕ ಸ್ಥಾಪನೆ  ವ್ಯವಸ್ಥೆಗಳನ್ನು ಅಂತಿಮಗೊಳಿಸುವ ಸಲುವಾಗಿ ನವೆಂಬರ್ ೨೦ ರಂದು ಕಂಪೆನಿಯ ಸಿಇಒ ಮತ್ತು ಉಪ ಸಿಇಒ ಅವರನ್ನು ಭೇಟಿ ಮಾಡಿದರು. ಸೌರಶಕ್ತಿ, ಸೀಮೆಎಣ್ಣೆ, ಅನಿಲ ಮತ್ತು ವಿದ್ಯುಚ್ಛಕ್ತಿಯಿಂದ ಕಾರ್‍ಯನಿರ್ವಹಿಸುವ ಶೈತ್ಯೀಕರಿಸಿದ ಪೆಟ್ಟಿಗೆಗಳು ೨೦೨೧ರ ಮಾರ್ಚ್ ಒಳಗೆ ವಿತರಣೆಗೆ ಸಿದ್ಧವಾಗುವ ನಿರೀಕ್ಷೆಯಿದ್ದುಬಿ ಮೆಡಿಕಲ್ ಸಿಸ್ಟಮ್ಸ್ ಕಂಪೆನಿಯು ಗುಜರಾತಿನಲ್ಲಿ  ಎರಡನೇ ಹಂತದ ಪೂರ್ಣ ಪ್ರಮಾಣದ ಸ್ಥಾವರವನ್ನು ಭಾರತೀಯರಿಗೆ ಲಸಿಕೆ ಪೂರೈಸುವುದಕ್ಕಾಗಿ ಸ್ಥಾಪಿಸಲಿದೆ. ಅಗತ್ಯ ಬಿದ್ದಲ್ಲಿ ಉತ್ಪನ್ನಗಳನ್ನು ಘಟಕವು ಇತರ ಇತರ ದೇಶಗಳಿಗೂ ರಫ್ತು ಮಾಡಲಿದೆ.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಲಕ್ನೋ: ಬಲವಂತದ ಅಥವಾ "ಅಪ್ರಾಮಾಣಿಕ" ಧಾರ್ಮಿಕ ಮತಾಂತರ ನಿಗ್ರಹ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್  2020  ನವೆಂಬರ್ 28ರ ಶನಿವಾರ ಒಪ್ಪಿಗೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರದ ನಿಷೇಧ, ೨೦೨೦ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ಅಧಿಕಾರಿ ನುಡಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯ ರಾಜ್ಯ ಸಚಿವ ಸಂಪುಟವು ವಾರದ ಆರಂಭದಲ್ಲಿ ವಿವಾಹದ ಸಲುವಾಗಿ ಸೇರಿದಂತೆ ಬಲವಂತದ ಅಥವಾ "ಅಪ್ರಾಮಾಣಿಕ" ಧಾರ್ಮಿಕ ಮತಾಂತರಗಳನ್ನು ತಡೆಯುವ ಕರಡು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು ಸುಗ್ರೀವಾಜ್ಞೆಯ ಪ್ರಕಾರ ಇದನ್ನು ಉಲ್ಲಂಘಿಸುವವರನ್ನು ೧೦ ವರ್ಷಗಳವರೆಗೆ ಜೈಲಿನಲ್ಲಿ ಇರಿಸಬಹುದು., ಕೇವಲ ಮದುವೆಯ ಉದ್ದೇಶಕ್ಕಾಗಿ ಮಹಿಳೆಯ ಮತಾಂತರವಾಗಿದ್ದರೆ, ಅಂತಹ ಮದುವೆಯನ್ನು ನಿಷ್ಫಲ ಮತ್ತು ಅನೂರ್ಜಿತವೆಂದು ಘೋಷಿಸಲಾಗುತ್ತದೆ ಮತ್ತು ಮದುವೆಯ ನಂತರ ತಮ್ಮ ಧರ್ಮವನ್ನು ಬದಲಾಯಿಸಲು ಬಯಸುವವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಲಹಾಬಾದ್ ಹೈಕೋರ್ಟ್ ಪ್ರಮುಖ ತೀರ್ಪಿನಲ್ಲಿ ಇಬ್ಬರು ವಯಸ್ಕರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ ಎಂದು ಹೇಳಿದ ನಂತರ ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ವಯಸ್ಕರು ಒಂದೇ ಅಥವಾ ವಿರುದ್ಧ ಲಿಂಗದವರಾಗಿದ್ದರೂ ಒಟ್ಟಿಗೆ ವಾಸಿಸಲು ಕಾನೂನು ಅನುಮತಿ ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ಯಾವುದೇ ವ್ಯಕ್ತಿ ಅಥವಾ ಕುಟುಂಬ ಅವರ ಶಾಂತಿಯುತ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇಬ್ಬರು ವಯಸ್ಕರ ಸಂಬಂಧವನ್ನು ರಾಜ್ಯವು ಆಕ್ಷೇಪಿಸಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಇದಕ್ಕೆ ಮುನ್ನ ಉತ್ತರಪ್ರದೇಶ ಸರ್ಕಾರವು ವಿವಾಹದ ಸಲುವಾಗಿ ಧಾರ್ಮಿಕ ಮತಾಂತರವನ್ನು ನಿಭಾಯಿಸಲು ಕಠಿಣ ಕಾನೂನಿನ ಕರಡನ್ನು ಅಂಗೀಕರಿಸಿತ್ತು. ಮತಾಂತರಕ್ಕಾಗಿ ನಡೆಯುವ ಮದುವೆಗಳನ್ನು ಬಿಜೆಪಿ ನಾಯಕರು "ಲವ್ ಜಿಹಾದ್" ಎಂದು ಬಣ್ಣಿಸುತ್ತಾರೆ. ಇತ್ತೀಚಿನ ವಾರಗಳಲ್ಲಿ, ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶಗಳು ಕೂಡಾ ವಿವಾಹದ ಸೋಗಿನಲ್ಲಿ ಹಿಂದೂ ಮಹಿಳೆಯರನ್ನು ಇಸ್ಲಾಮಿಗೆ ಪರಿವರ್ತಿಸುವ ಆಪಾದಿತ ಪ್ರಯತ್ನಗಳೊಂದಿಗೆ ವ್ಯವಹರಿಸಲು ಕಾನೂನುಗಳನ್ನು ರೂಪಿಸುವ ಯೋಜನೆಗಳನ್ನು ಬಹಿರಂಗಪಡಿಸಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಕಠ್ಮಂಡು: ಗಡಿ ಬಿಕ್ಕಟ್ಟಿನಿಂದ ಪ್ರಭಾವಿತವಾದ ದ್ವಿಪಕ್ಷೀಯ ಬಾಂಧವ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರೀಂಗ್ಲಾ ಅವರು ಕಠ್ಮಂಡುವಿಗೆ ಪ್ರವಾಸ ಕೈಗೊಂಡ ಕೆಲವೇ ದಿನಗಳಲ್ಲಿ ಚೀನಾವು 2020 ನವೆಂಬರ್ 29ರ ಭಾನುವಾರ ಒಂದು ದಿನದ ಭೇಟಿಗಾಗಿ ರಕ್ಷಣಾ ಸಚಿವ ವೀ ಫೆಂಗ್ ಅವರನ್ನು ನೇಪಾಳಕ್ಕೆ ಕಳುಹಿಸುತ್ತಿದೆ. ಚೀನಾ ಸಚಿವ ಸಂಪುಟದಲ್ಲಿ ರಾಜ್ಯ ಕೌನ್ಸಿಲರ್ ಶ್ರೇಣಿಯನ್ನು ಹೊಂದಿರುವ ಪೀಪಲ್ಸ್ ಲಿಬರೇಶನ್ ಆರ್ಮಿ ಜನರಲ್ ವೀ ಅವರ ಭೇಟಿ ವಿಚಾರವನ್ನು ನೇಪಾಳದ ವಿದೇಶಾಂಗ ಸಚಿವಾಲಯ 2020 ನವೆಂಬರ್ 28ರ ಶನಿವಾರ ಪ್ರಕಟಿಸಿತು. ಕಠ್ಮಂಡುವಿನಲ್ಲಿ ವಿದೇಶಾಂಗ ಸಚಿವಾಲಯ ಹೊರಡಿಸಿರುವ ಸಂಕ್ಷಿಪ್ತ ಹೇಳಿಕೆಯಲ್ಲಿ ವೀ ಅವರು ನವೆಂಬರ್ ೨೯ರ ಭಾನುವಾರ ನೇಪಾಳಕ್ಕೆ ಒಂದು ದಿನದ ಕೆಲಸದ ಭೇಟಿ ನೀಡಲಿದ್ದಾರೆವೀ ಅವರು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ, ರಕ್ಷಣಾ ಖಾತೆಯನ್ನು ಹೊಂದಿರುವ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾ ಅವರನ್ನು ತಮ್ಮ ಇಡೀ ದಿನದ ಪ್ರವಾಸ ಕಾಲದಲ್ಲಿ ಭೇಟಿ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಭೇಟಿಯ ಬಗ್ಗೆ ಬೀಜಿಂಗ್‌ನಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕಠ್ಮಂಡುವಿಗೆ ಪ್ರವಾಸ ಕೈಗೊಂಡ ನಂತರ ನೇಪಾಳಕ್ಕೆ ಭೇಟಿ ನೀಡಿದ ಅತ್ಯಂತ ಹಿರಿಯ ಚೀನಾ ನಾಯಕನಾಗಿದ್ದಾರೆ ವೀಹರ್ಷ ಶ್ರೀಂಗ್ಲಾ ಅವರು ತಮ್ಮ ತನ್ನ ಎರಡು ದಿನಗಳ ನೇಪಾಳ ಪ್ರವಾಸವನ್ನು ಮುಗಿಸಿದ ಎರಡು ದಿನಗಳ ಬಳಿಕ ವೀ ಅವರು ನೇಪಾಳಕ್ಕೆ ಅಗಮಿಸುತ್ತಿದ್ದಾರೆ. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮುಖ್ಯಸ್ಥ ಸಮಂತ್ ಗೋಯೆಲ್ ಅವರ ನೇಪಾಳ ಪ್ರವಾಸದ ಬೆನ್ನಲ್ಲೇ ನೇಪಾಳಕ್ಕೆ ಪ್ರಯಾಣಿಸಿದ ಶ್ರಿಂಗ್ಲಾ, ದ್ವಿಪಕ್ಷೀಯ ಸಂಬಂಧವನ್ನು ವಿಶೇಷವಾಗಿ ಸಂಪರ್ಕ ಮತ್ತು ಗಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಮುಂದಕ್ಕೆ ಒಯ್ಯುವ ಮಾರ್ಗಗಳ ಬಗ್ಗೆ ತಮ್ಮ ಉನ್ನತ ಮಟ್ಟದ ಸಭೆಗಳಲ್ಲಿ ಗಮನಹರಿಸಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ರೈತರ ಗುಂಪುಗಳು ದೆಹಲಿಗೆ ಹೋಗದಿರಲು ಮತ್ತು ಸಿಂಗು ಗಡಿಯಲ್ಲಿಯೇ ಮೂರು ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರೆಸಲು  2020 ನವೆಂಬರ್ 28ರ ಶನಿವಾರ ನಿರ್ಧರಿಸಿದವು. "ನಾವು ಇಲ್ಲಿಯೇ ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಮತ್ತು ಬೇರೆಲ್ಲಿಗೂ ಹೋಗಬಾರದು ಎಂದು ನಿರ್ಧರಿಸಲಾಗಿದೆ. ನಮ್ಮ ಕಾರ್ಯತಂತ್ರವನ್ನು ಚರ್ಚಿಸಲು ನಾವು ಪ್ರತಿದಿನ ಬೆಳಿಗ್ಗೆ ೧೧ ಗಂಟೆಗೆ ಭೇಟಿಯಾಗುತ್ತೇವೆಎಂದು ಭಾರತೀಯ ಕಿಸಾನ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಿದ ಮೂರು ಕೃಷಿ ಮಸೂದೆಗಳನ್ನು ಕೇಂದ್ರ ರದ್ದುಪಡಿಸಬೇಕೆಂದು ಒತ್ತಾಯಿಸಿ ಪಂಜಾಬ್ ಮತ್ತು ಹರಿಯಾಣದ ರೈತರು ನವೆಂಬರ್ ೨೫ ರಂದು ದೆಹಲಿಯತ್ತ ಮೆರವಣಿಗೆ ಪ್ರಾರಂಭಿಸಿದ್ದರು. ಅವರು ಬ್ಯಾರಿಕೇಡ್‌ಗಳನ್ನು ಮುರಿದು ಶುಕ್ರವಾರ ಗಡಿಯಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿ ದೆಹಲಿ ಕಡೆಗೆ ಮೆರವಣಿಗೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು ಮಧ್ಯೆ, ದೆಹಲಿಯ ಬುರಾರಿಯ ಮೈದಾನದಲ್ಲಿ ಶಾಂತಿಯುತ ಪ್ರದರ್ಶನಗಳನ್ನು ನಡೆಸಲು ದೆಹಲಿ ಪೊಲೀಸರು ಶುಕ್ರವಾರ ಅನುಮತಿ ನೀಡಿದ್ದರು. ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಈಗಾಗಲೇ ನೀಡಲಾಗಿದೆ. ಪ್ರತಿಭಟನಾಕಾರರಿಗೆ ಬುರಾರಿ ಮೈದಾನಕ್ಕೆ ತೆರಳಲು ಅನುಕೂಲ ಒದಗಿಸಲು ದೆಹಲಿ ಪೊಲೀಸರು ಸಜ್ಜಾಗಿದ್ದಾರೆ. ಪ್ರತಿಭಟನಾಕಾರರು ಜವಾಬ್ದಾರಿಯುತವಾಗಿ ವರ್ತಿಸುವಂತೆ ನಾವು ವಿನಂತಿಸುತ್ತೇವೆಎಂದು ದೆಹಲಿ ಉತ್ತರ ಜಿಲ್ಲಾ ಪೊಲೀಸ್ ಡೆಪ್ಯೂಟಿ ಕಮೀಷನರ್ ಗೌರವ್ ಶರ್ಮಾ ಅವರನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಇದಕ್ಕೂ ಮುನ್ನ ಶನಿವಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರು ತಮ್ಮ ಆಂದೋಲನಗಳನ್ನು ನಿಲ್ಲಿಸಿ ಡಿಸೆಂಬರ್ ರಂದು ಕೇಂದ್ರದ ಜೊತೆಗೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವಂತೆ ವಿನಂತಿಸಿಕೊಂಡರು. ಈ ಮಧ್ಯೆ, ರೈತ ಚಳವಳಿಗೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್  2020 ನವೆಂಬರ್ 28ರ ಶನಿವಾರ  ವಾಗ್ಯುದ್ಧಕ್ಕೆ ಇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ಮೂರು ಸಂಸ್ಥೆಗಳಲ್ಲಿನ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಸ್ವತಃ ವೀಕ್ಷಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 28ರ ಶನಿವಾರ  ಮೂರು ನಗರಗಳ ಮುಂಚೂಣಿಯ ಲಸಿಕಾ ತಯಾರಿಕೆ ಸಂಸ್ಥೆಗಳಿಗೆ ಭೇಟಿ ನೀಡಿದರುಹೈದರಾಬಾದಿನಲ್ಲಿ ಭಾರತ ಬಯೋಟೆಕ್ ಪಾರ್ಕಿನ ಭೇಟಿಯ ಬಳಿಕ ಪ್ರಧಾನಿಯವರು ಲಸಿಕಾ ಅಭಿವೃದ್ಧಿ ತಂಡದ ಕಾರ್ಯವನ್ನು ಶ್ಲಾಘಿಸಿದರು.   ಭೇಟಿಯು "ತನ್ನ ನಾಗರಿಕರಿಗೆ ಲಸಿಕೆ ಹಾಕುವ ಭಾರತದ ಪ್ರಯತ್ನದಲ್ಲಿ ಸಿದ್ಧತೆಗಳು, ಸವಾಲುಗಳು ಮತ್ತು ಮಾರ್ಗಸೂಚಿಯ ಮೊದಲ ದೃಷ್ಟಿಕೋನವನ್ನು" ಪಡೆಯಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿಯವರ ಕಚೇರಿ ತಿಳಿಸಿದೆಗುಜರಾತ್‌ನಲ್ಲಿರುವ ಫಾರ್ಮಾ ಪ್ರಮುಖ ಝೈಡಸ್ ಕ್ಯಾಡಿಲಾ ಕಂಪೆನಿಯ ಸ್ಥಾವರಕ್ಕೆ ಭೇಟಿ ನೀಡುವ ಮೂಲಕ  ಪ್ರಧಾನಿ ಮೋದಿ ತಮ್ಮ ಮೂರು ನಗರ ಲಸಿಕೆ ಪ್ರವಾಸವನ್ನು ಪ್ರಾರಂಭಿಸಿದರು. ಪಿಪಿಇ ಕಿಟ್ ಧರಿಸಿದ ಪ್ರಧಾನಿ ಮೋದಿ ಅಹಮದಾಬಾದ್‌ನಿಂದ ೨೦ ಕಿ.ಮೀ ದೂರದಲ್ಲಿರುವ ಚಂಗೋಡರ್ ಕೈಗಾರಿಕಾ ಪ್ರದೇಶದ ಝೈಡಸ್ ಕ್ಯಾಡಿಲಾ ಸಂಶೋಧನಾ ಕೇಂದ್ರದಲ್ಲಿ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ಪರಿಶೀಲಿಸಿದರುಔಷಧ ತಯಾರಕ ಸಂಸ್ಥೆಯು ತನ್ನ ಕೋವಿಡ್ -೧೯ ಲಸಿಕೆಯಾಗಿರುವ ಝೈ-ಕೊವ್- ಡಿ ಮೊದಲ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದೆ ಮತ್ತು ಆಗಸ್ಟ್ ತಿಂಗಳಲ್ಲಿ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಝೈಡಸ್ ಕ್ಯಾಡಿಲಾ ಕಂಪೆನಿಯು ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ ಡಿಎನ್‌ಎ ಆಧಾರಿತ ಲಸಿಕೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಹಮದಾಬಾದಿನ ಝೈಡಸ್ ಬಯೋಟೆಕ್ ಪಾರ್ಕ್‌ಗೆ ಭೇಟಿ ನೀಡಿದ ಪ್ರಧಾನಿಅವರ ಕಾರ್ಯಕ್ಕಾಗಿ ಪ್ರಯತ್ನದ ಹಿಂದಿನ ತಂಡವನ್ನು ನಾನು ಅಭಿನಂದಿಸುತ್ತೇನೆ. ಪ್ರಯಾಣದಲ್ಲಿ ಅವರನ್ನು ಬೆಂಬಲಿಸಲು ಭಾರತ ಸರ್ಕಾರ ಅವರೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಟ್ವೀಟ್ ಮಾಡಿದರು. ವಿಜ್ಞಾನಿಗಳು ಮತ್ತು ಕಂಪೆನಿ ಅಧಿಕಾರಿಗಳೊಂದಿಗಿನ ಸಂವಾದದಲ್ಲಿ ಲಸಿಕೆ ಅಭಿವೃದ್ಧಿ ಕಾರ್ಯಗಳು ಮತ್ತು ಸ್ಥಾವರದಲ್ಲಿ ಲಸಿಕೆ ಉತ್ಪಾದನಾ ವಿಧಾನದ ಬಗ್ಗೆ ಪ್ರಧಾನಿಯವರಿಗೆ ವಿವರಿಸಲಾಯಿತು ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿತು. ಅಹಮದಾಬಾದಿನಿಂದ ಪ್ರಧಾನಿಯವರು ತೆಲಂಗಾಣದ ಹೈದರಾಬಾದ್‌ಗೆ ಹಾರಿದರು, ಅಲ್ಲಿ ಅವರು ಕೊವಾಕ್ಸಿನ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತ್ ಬಯೋಟೆಕ್‌ಗೆ ಭೇಟಿ ನೀಡಿದರು, ಇದು ಭಾರತದ ಮೊದಲ ಸ್ಥಳೀಯ ಲಸಿಕೆ ಅಭ್ಯರ್ಥಿಯಾಗಿ ಆಯ್ಕೆಯಾಗಿದೆ. ಸೌಲಭ್ಯವು ಹೈದರಾಬಾದ್‌ನಿಂದ ೫೦ ಕಿ.ಮೀ ದೂರದಲ್ಲಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಪಾಕಿಸ್ತಾನದ ನಾಗರಿಕರು ಸೇರಿದಂತೆ ಒಟ್ಟು ೧೩ ದೇಶಗಳ ನಾಗರಿಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹೊಸ ವೀಸಾಗಳನ್ನು ಅಮಾನತುಗೊಳಿಸಿದೆ. ಪಾಕಿಸ್ತಾನ, ಇರಾನ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಮುಸ್ಲಿಂ ಬಹುಸಂಖ್ಯಾತ ದೇಶಗಳ ನಾಗರಿಕರಿಗೆ ಹೊಸ ವೀಸಾ ನೀಡುವುದನ್ನು  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಲ್ಲಿಸಿದೆ ಎಂದು ವರದಿ 2020 ನವೆಂಬರ್ 28ರ ಶನಿವಾರ ತಿಳಿಸಿತು. ಭದ್ರತಾ ಕಾಳಜಿಗಳಿಗಾಗಿ ವೀಸಾಗಳ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸುದ್ದಿ ಮೂಲ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿಯೊಂದು ತಿಳಿಸಿದೆ. ಆದರೆ ಭದ್ರತಾ ಕಾಳಜಿU ವಿವರಗಳನ್ನು ಸುದ್ದಿ ಮೂಲ ನೀಡಿಲ್ಲ ಎಂದು ವರದಿ ಹೇಳಿದೆವೀಸಾ ನೀಡಿಕೆಯ ಅಮಾನತು ನವೆಂಬರ್ ೧೮ ರಿಂದ ಜಾರಿಗೆ ಬಂದಿದ್ದು, ಮುಂದಿನ ಸೂಚನೆ ಬರುವವರೆಗೂ ಮುಂದುವರೆಯಲಿದೆ ಎಂದು ದುಬೈ ವಿಮಾನ ನಿಲ್ದಾಣ ಮುಕ್ತ ವಲಯ ಹೇಳಿಕೆಯಲ್ಲಿ ತಿಳಿಸಿದೆ.  ಅಮಾನತು ಪ್ರಾಥಮಿಕವಾಗಿ ಹೊಸ ಉದ್ಯೋಗ ಮತ್ತು ಪ್ರವಾಸಿ ವೀಸಾವನ್ನು ಗುರಿಯಾಗಿಸಿದೆ. ನಿಷೇಧಕ್ಕೆ ಯಾವುದೇ ಅಪವಾದಗಳಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ಕಳೆದ ವಾರ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಯುಎಇ ತನ್ನ ನಾಗರಿಕರಿಗೆ ಹೊಸ ವೀಸಾಗಳ ಪ್ರಕ್ರಿಯೆಯನ್ನು ನಿಲ್ಲಿಸಿದೆ ಎಂದು ಹೇಳಿತ್ತು. ಆದಾಗ್ಯೂ, ಈಗಾಗಲೇ ಮಾನ್ಯ ವೀಸಾಗಳನ್ನು ಹೊಂದಿರುವ ಜನರ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯ ಹೇಳಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಎರಡು ದಿನಗಳ ಹಿಂದೆ ಮಿಗ್ -೨೯ ಕೆ ತರಬೇತುದಾರ ವಿಮಾನವು ಅರಬ್ಬಿ ಸಮುದ್ರಕ್ಕ್ಕೆ ಅಪ್ಪಳಿಸಿದ ನಂತರ ಕಣ್ಮರೆಯಾಗಿರುವ ಪೈಲಟ್‌ನನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಭಾರತೀಯ ನೌಕಾಪಡೆಯ ಶೋಧ ಮತ್ತು ರಕ್ಷಣಾ ತಂಡಗಳು  2020  ನವೆಂಬರ್ 28ರ ಶನಿವಾರ ಮುಂದುವರೆಸಿದವು. ಆದರೆ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ರಷ್ಯಾ ಮೂಲದ ಅವಳಿ ಆಸನಗಳ ತರಬೇತುದಾರ ಜೆಟ್ ಗುರುವಾರ ಭಾರತದ ಪಶ್ಚಿಮ ಕರಾವಳಿಯಿಂದ ಭಾರತದ ಏಕೈಕ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದ ಡೆಕ್‌ನಿಂದ ಹೊರಟ ನಂತರ ಸಮುದ್ರಕ್ಕೆ ಅಪ್ಪಳಿಸಿತ್ತು. ರಕ್ಷಣಾ ತಂಡಗಳು ಗುರುವಾರ ಪೈಲಟ್‌ಗಳಲ್ಲಿ ಒಬ್ಬರನ್ನು ರಕ್ಷಿಸಲು ಯಶಸ್ವಿಯಾದವು. ಆದರೆ ನೌಕಾಪಡೆಯು ಕಮಾಂಡರ್ ನಿಶಾಂತ್ ಸಿಂಗ್ ಎಂಬುದಾಗಿ ಗುರುತಿಸಿರುವ ಎರಡನೇ ಪೈಲಟ್ ಇನ್ನೂ ಪತ್ತೆಯಾಗಿಲ್ಲ. ಶೋಧವನ್ನು ತೀವ್ರಗೊಳಿಸಲು ಹೆಚ್ಚುವರಿ ಯುದ್ಧನೌಕೆಗಳು, ವಿಮಾನಗಳು ಮತ್ತು ಹೆಲಿಕಾಪ್ಟರುಗಳನ್ನು ಶನಿವಾರ ಬಳಸಲಾಯಿತು, ಆದರೆ ಇನ್ನೂ ಅದೃಷ್ಟವಿಲ್ಲಎಂದು ಅಧಿಕಾರಿಗಳು ಹೇಳಿದರು. ಗುರುವಾರದ ಅಪಘಾತವು ಮಿಗ್ -೨೯ ಕೆ ಕಡಲ ಯುದ್ಧ ನೌಕೆಗಳನ್ನು ಒಳಗೊಂಡ ನಾಲ್ಕನೇ ಅಪಘಾತವಾಗಿದೆ. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಭಾರತದ ಉನ್ನತ ಲೆಕ್ಕಪರಿಶೋಧಕರು ೨೦೧೬ ರಲ್ಲಿ ಡೆಕ್ ಆಧಾರಿತ ಫೈಟರ್‌ನಲ್ಲಿನ ನ್ಯೂನತೆಗಳನ್ನು ಪತ್ತೆ ಹಚ್ಚಿದ್ದರು. ಇವುಗಳಲ್ಲಿ ಎಂಜಿನ್ ತೊಂದರೆ, ಏರ್ ಫ್ರೇಮ್ ತೊಂದರೆಗಳು ಮತ್ತು ಅದರ ಫ್ಲೈ-ಬೈ-ವೈರ್ ವ್ಯವಸ್ಥೆಯಲ್ಲಿನ ನ್ಯೂನತೆಗಳು ಸೇರಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್  28  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment